ಸಮಾನ ಮನಸ್ಕರ ನಡುವೆ ಸಂವಹನ ಸಾವಧಾನವಾಗಿ ಆದಾಗ ಒಳ್ಳೆಯದೆ ಆಗುತ್ತದೆ. ಅಲ್ಲಿಯೇ ಆರೋಗ್ಯಕರ ಚರ್ಚೆಗಳು ಪ್ರಾಂಭವಾಗುತ್ತವೆ. ಗುಂಪಿನಲ್ಲಿ ನಡೆಯುವ ಚರ್ಚೆಗಳು ಅನ್ಯ ಗುಂಪಿಗೂ ಹರಿಯಬಹುದು. ಪರಸ್ಪರ ಅಭಿನಂದನೆಗಳಿಗೆ ಧನ್ಯವಾದಗಳು ಒಂದು ಹಂತಕ್ಕೆ ಇದ್ದರೆ ಚಂದ ಅತಿಯಾದರೆ ಅಸಹ್ಯ! ಕ್ಷಮಿಸಿ ‘ಅಸಹ್ಯ’ ಎಂದರೆ ‘ಹೊಲಸು’ ಎಂದಲ್ಲ ಇತ್ತೀಚೆಗೆ ಹೀನಾರ್ಥ ಪಡೆದುಕೊಂಡಿರುವುದು ಅ-ಸಹ್ಯ ಎಂದರೆ ಸಹಿಸಲು ಸಾಧ್ಯವಾಗದೆ ಇರುವುದೆಂದು. ಸಂದೇಶಗಳು, ಸುತ್ತೋಲೆ, ಜ್ಞಾಪಕ ಇದ್ದಂತೆ, ಏಕ ಕಾಲಕ್ಕೆ ಅನೇಕರಿಗೆ ಸಂದೇಶ ರವಾನೆಯಾಗುತ್ತದೆ ಉದಾಹರಣೆಗೆ, ಸರಕಾರದ ಆದೇಶ ಮದುವೆ ದಿನಾಂಕ, ಕೆಲಸಗಾರರಿಗೆ ಏಕ ಕಾಲದಲ್ಲಿ ಸಂದೇಶ ತಲುಪಿಸಲು ಬಹಳ ಅನುಕೂಲವಾಗಿದೆ ಇತ್ಯಾದಿ.
ಸಾಮಾಜಿಕ  ಜಾಲತಾಣಗಳ ಗುಂಪುಗಾರಿಕೆಯ ಕುರಿತು ಸುಮಾವೀಣಾ ಬರಹ ನಿಮ್ಮ ಓದಿಗೆ.

ಗೊಂಬೆಯಾಟವಯ್ಯಾ ಅಲ್ವ! ಅಂದರೆ ಅಲ್ಲ ಇದು ಗುಂಪಿನಾಟ… ವಾಟ್ಸಾಪ್ ಗುಂಪಿನಾಟ. ಗುಂಪು ಮೊದಲಿಗೆ ‘ಸಮೂಹ’ ಅನ್ನುವ ಅರ್ಥದಲ್ಲಿ ಇತ್ತು. ಗುಂಪಿಗೆ ಗಾರ/ಗಾರಿಕೆ ಸೇರಿದ ನಂತರ ಗುಂಪುಗಾರಿಕೆ ಆಯಿತು. ಹುನ್ನಾರ ನಡೆಸುವ ವ್ಯಕ್ತಿಗಳ ಗುಂಪಿಗೆ ಅಥವಾ ವಿರೋಧಿಗಳ ಒಂದು ಬಣಕ್ಕೆ ಗುಂಪು ಎಂದಾಯಿತು. ನೆಗೆಟಿವ್ ಶೇಡ್‌ನಲ್ಲಿಯೇ ‘ಗುಂಪು’, ‘ಗುಂಪುಗಾರಿಕೆ’ ಪದ ಬಳಕೆಯಾಗುತ್ತಿತ್ತು. ಇತ್ತೀಚೆಗೆ ನಾವು ಸಾಮಾಜಿಕರು ಸಾಮಾಜಿಕ ಜಾಲತಾಣಗಳಲ್ಲಿಯೇ ಇರುತ್ತೇವೆ. ವಾಟ್ಸಾಪ್, ಫೇಸ್ಬುಕ್ ಅಲ್ಲಿಯೂ ಗುಂಪು ಸೇರುವುದು ಗುಂಪಿನಿಂದ ನಿರ್ಗಮನ ಇತ್ಯಾದಿಗಳ ಆಯ್ಕೆ ಎಲ್ಲರಿಗೂ ಗೊತ್ತಿರುವ ವಿಚಾರವೇ!

ಗುಂಪಿಗೆ ಸೇರದ ಪದ ಗೊತ್ತೇ ಇದೆ. ಯಾವುದಾದರೂ ಮೂರು ಪದಗಳು ಒಂದೇ ಆಗಿರುತ್ತವೆ. ಒಂದು ಪದ ಆಡ್ ಔಟ್ ಆಗಿರುತ್ತದೆ. ಹಾಗೆ ಗುಂಪಲ್ಲು ಎಲ್ಲರೂ ಒಂದೇ ರೀತಿ ಇರುವರು ಎನ್ನುವ ಹಾಗಿಲ್ಲ. ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಅನ್ನುವ ಹಾಗೆ ಇರಬಹುದು. ಕೋವಿಡ್ ಅಜ್ಞಾತವಾಸ ಕಳೆಯಲು ಗುಂಪುಗಳ ವಿಪರೀತ ರಚನೆ ಆದದ್ದು ತಿಳಿದೇ ಇದೆ. ಸತ್ಯವಾಗಿಯೂ ಇದರ ಉಪಯೋಗ ಆಗಿದ್ದಿದೆ.

ಈಗಂತೂ ಚುನಾವಣೆ ಭರಾಟೆ? ಈ ಸಂದರ್ಭದಲ್ಲಿ ಗುಂಪುಗಳು ಸಹಜವಾಗಿ ಆಗುತ್ತವೆ. ಗುಂಪು ಯಾವುದೋ ಉದ್ದೇಶಕ್ಕೆ ಪ್ರಾರಂಭವಾಗಿ ಗುಂಪು ರಚನೆಯಾದ ಮೂಲ ಉದ್ದೇಶವನ್ನೇ ಮರೆತು ಅನ್ಯ ಮಾಹಿತಿಗಳು ಸಂದೇಶಗಳೇ ಇರುತ್ತವೆ. ಪೋಲಿಸರು ಬೀಟ್ ರಾತ್ರಿ ವೇಳೆ ಗಸ್ತು ತಿರುಗುವಾಗ ಅವರು ಎಲ್ಲಿದ್ದಾರೆ ಎಂದು ತಿಳಿಯಲು ಲೈವ್ ಲೊಕೇಶನ್ ಶೇರ್ ಮಾಡಲು ಗುಂಪುಗಳು ಇವೆ. ಇಲ್ಲಿ ಅಡ್ಮಿನ್ ಇರುತ್ತಾರೆ. ಅವರೆ ಸೂತ್ರಧಾರರು, ಅನಗತ್ಯ ಸಂದೇಶಗಳು ಹೋದಲ್ಲಿ ಅವರನ್ನು ಆ ಗುಂಪಿನಿಂದ ತೆಗೆಯತ್ತಾರೆ. ಆ ಕಾರಣಕ್ಕೆ ಕೊಲೆ ಮಾಡಿದ ಉದಾಹರಣೆಯಿದೆ… ಎಂಥಾ ಕಾಲ ಇದೂ…!

ಕೆಲವು ಗುಂಪುಗಳು ವೈಯುಕ್ತಿಕವಾಗಿರುತ್ತವೆ. ಸಾಮೂಹಿಕವಾಗಿ ರಚನೆಯಾದ ಗುಂಪುಗಳಲ್ಲಿ ಸರ್ವಾಧಿಕಾರಿ ಧೋರಣೆ ಇದೆ. ಕೆಲವೊಮ್ಮೆ ಸದಸ್ಯರು ನಾವು ಹೇಳಿದ್ದನ್ನು ಮಾತ್ರ ಕೇಳಬೇಕು ಎನ್ನುವ ದುಂಡಾವರ್ತನೆಯೂ ಇರುತ್ತದೆ. ಅವರಿಗೆ ಇಷ್ಟವಾಗದ ಮಾಹಿತಿ ಬಂದರೆ ಅದನ್ನು ಅಲ್ಲಿಯೇ ಕಟ್ ಮಾಡಿಬಿಡುತ್ತಾರೆ. ಗ್ರೂಪ್‌ನಿಂದ ರಿಮೂವ್ ಮಾಡುತ್ತಾರೆ. ಹೀಗಾಯ್ತಲ್ಲ ಎಂದು ಗುಂಪಿನಿಂದ ಹೊರಹೋದವರು ಇನ್ನೊಂದು ಗುಂಪಿಗೆ ಸೇರಿಸಿ ಅವರನ್ನು ರಿಮೂವ್ ಮಾಡುತ್ತಾರೆ. ಇನ್ನು ಕೆಲವು ಗುಂಪಿನಲ್ಲಿ ಮುಂತಳ್ಳುಗಳೆ ಇರುತ್ತವೆ. ಎಲ್ಲಾ ಗುಂಪಿನಲ್ಲೂ ಅದೇ ಇದ್ದರೆ ಹೇಗೆ? ಗುಂಪಿನಲ್ಲಿ ತಮ್ಮ ಹೇಳಿಕೆಗಳೇ ಸರಿ ಎಂಬ ಮೊಂಡು ವಾದಗಳು ಇರುತ್ತವೆ. ಸಾರ್ವಜನಿಕ ಗುಂಪು ಅಂದಮೇಲೆ ಪದೇ ಪದೇ ಫೋಟೊಗಳನ್ನು ಹಾಕುವುದು ಸರಿ ಅಲ್ಲ. ಕೆಲವರಿಗೆ ಖಾಸಗಿ ಗುಂಪಿನಲ್ಲಿ ತಮ್ಮ ವೃತ್ತಿ ಕುರಿತಂತೆ ವೃತ್ತಿಪರ ಗುಂಪುಗಳಲ್ಲಿ ಖಾಸಗಿ ಫೋಟೊಗಳನ್ನು ಹಾಕುವುದು ಕಡೆಗೆ ಬೈ ಮಿಸ್ಟೇಕ್ ಅನ್ನುವುದು ಸಾಮಾನ್ಯವಾಗಿರುತ್ತದೆ. ಚುನಾವಣೆ ಇಲಾಖೆಗೆ ಸೇರಿದ ವಿಷಯಗಳು ಇಲ್ಲಿ ಸೋರುವಂತಾಗಬಾರದಷ್ಟೆ. ಇದರ ನಡುವೆ ತಮ್ಮ ಬ್ಯುಸಿನೆಸ್ ಪ್ರಮೋಟ್ ಮಾಡುವ ಸಂದೇಶಗಳು ಇರುತ್ತವೆ.

ನಾವೇ ಮೊದಲು ಸಂದೇಶ ಕಳುಹಿಸಬೇಕು ಅನ್ನುವ ಭರಾಟೆಯಲ್ಲಿ ಆಗಲಿ ಎನ್ನುವ ಬದಲು ಅಗಲಿ ಎಂದೂ. ತಮ್ಮನ ಮನೆಗೆ ಬರುತ್ತೇನೆ ಎಂದು ಟೈಪ್ ಮಾಡಹೋಗಿ ತಮ್ಮ ಮನೆಗೆ ಬರುತ್ತೇನೆ ಎಂದಾದಾಗ ಗಾಬರಿಯಾಗುವುದು. ತಮ್ಮ ಲೇಖನದಲ್ಲಿ ಸತ್ಯ ಸಂಗತಿ ಇದೆ ಎನ್ನುವ ಬದಲು ಸತ್ತ ಸಂಗತಿ ಇದೆ ಎಂದರೆ….. ಗತಿ? ಮೆಲು ಮಾತಿನ ವ್ಯಕ್ತಿತ್ವದವರು ಅವರಿಗೆ ಶ್ರದ್ಧಾಂಜಲಿ ಅನ್ನುವ ಬದಲು ಮೇಲು ಮಾತಿನವರು ಎಂದೋ ಬರೆದರೆ ಆಭಾಸವೇ ಸರಿ! ಗುಂಪಿನಲ್ಲಿ ಏನೆನೋ ವಿವೇಚನಾರಹಿತವಾಗಿ ಟೈಪಿಸಬಾರದು, ಅದು ದಾಖಲೆಯಾಗುತ್ತಿರುತ್ತದೆ. ಎಷ್ಟೋ ಹೊತ್ತು ಕಳೆದ ನಂತರ ಅಯ್ಯೋ ಹೀಗ್ ಟೈಪ್ ಮಾಡಿದೆ ಅಳಿಸೋಣ ಅಂದರೆ ನಮ್ಮ ಮೋಬೈಲ್ನಲ್ಲಿ ಅಳಿಸಬಹುದು. ಆದರದು ಬೇರೆಯವರ ಅಕೌಂಟಿನಲ್ಲಿ ದಾಖಲೆಯಾಗಿಬಿಟ್ಟಿರುತ್ತದೆ. ‘ಮುತ್ತು ಒಡೆದರೆ ಹೋಯಿತು ಮಾತು ಆಡಿದರೆ ಹೋಯಿತು’ ಅನ್ನುವ ಬದಲು ‘ಮೊಬೈಲ್ ಒಡೆದರೆ ಹೋಯಿತು ಸಂದೇಶ ಕಳುಹಿಸಿದರೆ ಹೋಯಿತು’ ಎಂದು ತಿದ್ದಬಹುದೇನೋ? ಕೆಲವರು ಎಮೋಶನಲ್ ಆಗಿ ಬ್ಲಾಕ್‌ಮೇಲಿಂಗ್ ಅಂದರೆ ದೇವರ ಹೆಸರಿನಲ್ಲಿ ಸಂದೇಶ ಕಳಿಸುವುದು. ಯಾವಾಗೋ ಕೇಳಿದ ರಕ್ತದ ಅವಶ್ಯಕತೆಯುಳ್ಳ ಸಂದೇಶವನ್ನು ವರ್ಷಗಳ ಬಳಿಕ ಕಳುಹಿಸುವುದು ಹೀಗೆ….. ನಾಟ್ ಫೇರ್ ಅಲ್ವ!

ಇನ್ನು ಕೆಲವೊಮ್ಮೆ ಆಫರ್‌ಗಳು ಇಷ್ಟು ಜನರಿಗೆ ಕಳುಹಿಸಿದರೆ ಹೀಗಾಗಿತ್ತದೆ ಎನ್ನುವಂತಿದ್ದರೆ ಸೀರೆ ಪಂಚೆ ಕೊಡುತ್ತೇವೆ ಎಂದು ಆಸೆ ಹುಟ್ಟಿಸಿ ಅದನ್ನು ಇಷ್ಟು ಜನರಿಗೆ ಮೆಸೆಜ್ ಕಳಿಸಿದರೆ ಲಾಭ ಎಂದಾಗ ಅದನ್ನು ಎಂದು ನಂಬಿ ಕಾಂಟಾಕ್ಟ್ ನಂಬರ್ ಇದ್ದು ಭಾವನಾತ್ಮಕವಾಗಿ ಕನೆಕ್ಷನ್ ಹೊಂದಿಲ್ಲದವರಿಗೆ ಕಳುಹಿಸುವುದು ಇದೆ. ಇದರಲ್ಲೆ ತಿಳಿಯುತ್ತದೆ ಅವರ ಸ್ವಭಾವ. ಇನ್ನು ಕೆಲವರು ತಮ್ಮನ್ನ ಮೆಚ್ಚುವ ಸಂದೇಶಗಳನ್ನು ಕಳುಹಿಸುತ್ತಿರುತ್ತಾರೆ. ಅಡ್ಮಿನ್ ಇಂತಹ ಮಾತುಗಳನ್ನು ಅದುಮಿಟ್ಟುಕೊಳ್ಳದೆ ಗ್ರೂಪಿನಿಂದ ತೆಗೆದುಹಾಕಬಹುದು. ಅದು ಇನ್ನೊಂದು ಹೊಗಳು ಕೂಟದ ಗುಂಪಿಗೆ ನಾಂದಿಯಾಗುತ್ತದೆ.

ಗುಂಪು ಯಾವುದೋ ಉದ್ದೇಶಕ್ಕೆ ಪ್ರಾರಂಭವಾಗಿ ಗುಂಪು ರಚನೆಯಾದ ಮೂಲ ಉದ್ದೇಶವನ್ನೇ ಮರೆತು ಅನ್ಯ ಮಾಹಿತಿಗಳು ಸಂದೇಶಗಳೇ ಇರುತ್ತವೆ. ಪೋಲಿಸರು ಬೀಟ್ ರಾತ್ರಿ ವೇಳೆ ಗಸ್ತು ತಿರುಗುವಾಗ ಅವರು ಎಲ್ಲಿದ್ದಾರೆ ಎಂದು ತಿಳಿಯಲು ಲೈವ್ ಲೊಕೇಶನ್ ಶೇರ್ ಮಾಡಲು ಗುಂಪುಗಳು ಇವೆ. ಇಲ್ಲಿ ಅಡ್ಮಿನ್ ಇರುತ್ತಾರೆ. ಅವರೆ ಸೂತ್ರಧಾರರು, ಅನಗತ್ಯ ಸಂದೇಶಗಳು ಹೋದಲ್ಲಿ ಅವರನ್ನು ಆ ಗುಂಪಿನಿಂದ ತೆಗೆಯತ್ತಾರೆ.

ಸಮಾನ ಮನಸ್ಕರ ನಡುವೆ ಸಂವಹನ ಸಾವಧಾನವಾಗಿ ಆದಾಗ ಒಳ್ಳೆಯದೆ ಆಗುತ್ತದೆ. ಅಲ್ಲಿಯೇ ಆರೋಗ್ಯಕರ ಚರ್ಚೆಗಳು ಪ್ರಾಂಭವಾಗುತ್ತವೆ. ಗುಂಪಿನಲ್ಲಿ ನಡೆಯುವ ಚರ್ಚೆಗಳು ಅನ್ಯ ಗುಂಪಿಗೂ ಹರಿಯಬಹುದು. ಪರಸ್ಪರ ಅಭಿನಂದನೆಗಳಿಗೆ ಧನ್ಯವಾದಗಳು ಒಂದು ಹಂತಕ್ಕೆ ಇದ್ದರೆ ಚಂದ ಅತಿಯಾದರೆ ಅಸಹ್ಯ! ಕ್ಷಮಿಸಿ ‘ಅಸಹ್ಯ’ ಎಂದರೆ ‘ಹೊಲಸು’ ಎಂದಲ್ಲ ಇತ್ತೀಚೆಗೆ ಹೀನಾರ್ಥ ಪಡೆದುಕೊಂಡಿರುವುದು ಅ-ಸಹ್ಯ ಎಂದರೆ ಸಹಿಸಲು ಸಾಧ್ಯವಾಗದೆ ಇರುವುದೆಂದು. ಸಂದೇಶಗಳು, ಸುತ್ತೋಲೆ, ಜ್ಞಾಪಕ ಇದ್ದಂತೆ, ಏಕ ಕಾಲಕ್ಕೆ ಅನೇಕರಿಗೆ ಸಂದೇಶ ರವಾನೆಯಾಗುತ್ತದೆ ಉದಾಹರಣೆಗೆ, ಸರಕಾರದ ಆದೇಶ ಮದುವೆ ದಿನಾಂಕ, ಕೆಲಸಗಾರರಿಗೆ ಏಕ ಕಾಲದಲ್ಲಿ ಸಂದೇಶ ತಲುಪಿಸಲು ಬಹಳ ಅನುಕೂಲವಾಗಿದೆ ಇತ್ಯಾದಿ. ಈ ಸಂದೇಶಗಳು ಸಣ್ಣ ದೇಶವಲ್ಲ, ಏಕ ಕಾಲಕ್ಕೆ ಬ್ರಹ್ಮಾಂಡವನ್ನು ಸುತ್ತುತ್ತವೆ. ಇದಕ್ಕೂ ಮುಖ್ಯವಾದದದು ಎಂದರೆ ಇಂಥ ಗುಂಪುಗಳು ಕುಟುಂಬಗಳ ಸಾಮರಸ್ಯಕ್ಕೆ ಸಹಾಯವಾಗಿರುವುದು, ಶೈಕ್ಷಣಿಕ ಗುಂಪುಗಳು ಶಾಲಾ ದಿನಚರಿಗಳ ಬಗ್ಗೆ ಗಮನ ಹರಿಸಲು ಉಪಯೋಗವಾಗಿರುವುದು. ಬರೇ ಶುಭೋದಯ ಶುಭಮಧ್ಯಾಹ್ನ, ಶುಭರಾತ್ರಿಗಳ ಮೆಸೆಜ್ ಹೊರತಾಗಿ ಒಳ್ಳೆಯ ವಿಚಾರಗಳನ್ನು ಹಂಚಿಕೊಳ್ಳುವ ಸಂದೇಶಗಳಿದ್ದರೆ ಅನುಕೂಲ.

ಈ ಗುಂಪುಗಳು ಹೆಚ್ಚಾದಷ್ಟು ತಲೆಬಿಸಿಯೂ ಹೆಚ್ಚು… ಪ್ರತಿಕ್ರಿಯಿಸಲು ಶುರುವಿಟ್ಟುಕೊಂಡರೆ ಎಲ್ಲದಕ್ಕೂ ನಮ್ಮ ಪ್ರತಿಕ್ರಿಯೆ ನೀಡಬೇಕು. ಗುಂಪಿನೊಳಗೊಂದು ಗುಂಪು ಅವರಿಗೆ ಬೇಕಾದವರಿಗೆ ಮಾತ್ರ ಅಭಿನಂದನೆಗಳನ್ನು ಹೇಳುವುದು ಇತ್ಯಾದಿ ಮಾಡುತ್ತಾರೆ. ಇದಕ್ಕೆ ಗುಂಪಿನೊಳಗೊಂದು ಗುಂಪಿನ ರಾಜಕೀಯ ಎನ್ನಬಹುದೆ! ಸಂದೇಶಗಳಿಗೆ ಬೇಗ ಸ್ಪಂದಿಸಬೇಕು ಇಲ್ಲವಾದರೆ ನೀನು ನೋಡೇ ಇಲ್ಲ ಸಿಂಗಲ್ ಟಿಕ್ ಬಂದಿದೆ ನೀನು ನೋಡಿದ್ದೀಯ ಬ್ಲೂ ಟಿಕ್ ಬಂದಿದೆ ಇತ್ಯಾದಿ ಪಂಚಾಯತಿ ಬೇರೆ! ಗುಂಪಿನಲ್ಲಿ ಎಲ್ಲಾ ಕಡೆ ಇನ್ವಾಲ್ವ್ ಆಗುವುದಿಲ್ಲ ಎಂದು ದೂರುವ ಹಾಗಿಲ್ಲ. ಅದು ಅವರವರ ಆಯ್ಕೆಯಾಗಿರುತ್ತದೆ. ಇರಲಿ ಇನ್ನೊಂದು ಮುಂತಳ್ಳುವಿಕೆಯ ಸಂದೇಶಗಳು ಸತ್ಯಾಸತ್ಯತೆಯನ್ನು ಗಮನಿಸದೆ ಬಂದು ಕಿರಿಕಿರಿ ಮಾಡುವುದು ಇದೆ. ಅದನ್ನು ಅನುಭವಿಸಿದವರಿಗೇ ಗೊತ್ತಿರುತ್ತದೆ.

ಕೆಲವೊಮ್ಮೆ ಇಕ್ಕಟ್ಟಿಗೆ ಸಿಲುಕಿಸುವ ಸಂದೇಶಗಳೂ ಇರುತ್ತವೆ. ಇಲ್ಲಿ ಬರವಣಿಗೆ ಇರುವುದೆ ಇಲ್ಲ. ಬರೀ ಇಮೋಜಿಗಳ ಸದ್ದು. ಅದೆ ಇಮೊಜಿಗಳ ಗೊಂಬೆಯಾಟವಯ್ಯಾ…! ಶ್ರದ್ಧಾಂಜಲಿ ಹೇಳುವ ಬದಲು ನಗುವ ಇಲ್ಲವೆ ಚಪ್ಪಾಳೆಯ ಇಮೋಜಿಯನ್ನು, ಅಭಿನಂದನೆ ಹೇಳುವಾಗ ಅಳುವ ಇಮೋಜಿ ಕಳುಹಿಸಿದರೆ ಹೇಗೆ? ಇದು ಬಹಳ ಸಂಕಟ. ಕಡೆ ಪಕ್ಷ ಅಲ್ಲಿಯಾದರೂ ಅಕ್ಷರಗಳನ್ನು ಒರೆಸಬಹುದು. ಆದರೆ ಅದೂ ಆಗಲ್ಲ. ಸಂಪೂರ್ಣ ಬರವಣಿಗೆ ಒರೆಸಿಹೋಗಿದೆ. ಒರೆಸು ಫೋನ್‌ಗಳಿಂದ ಇಮೋಜಿಗಳನ್ನು ತಪ್ಪಾಗಿ ಸೇರಿಸಿಬಿಟ್ಟರೆ ಅಪಾರ್ಥಗಳಾಗುತ್ತವೆ. ಆ ಡ್ಯಾಮೇಜ್ ಕಂಟ್ರೋಲ್ ಕಷ್ಟ ಏನಂತೀರಿ!
ಇವೆಲ್ಲಾ ಒತ್ತಟ್ಟಿಗಿರಲಿ ಗುಂಪಿನಲ್ಲಿ ಇನ್ನೊಂದು ಗುಂಪು ಆಗುತ್ತಿದೆ. ಅದೆ ನಮ್ಮನ್ನು ಬಿಟ್ಟು ಹೋದವರ ಗುಂಪು. ಮನಸ್ಸನ್ನು ಹಿಂಡುವ ನಂಬರ್‌ಗಳ ಗುಂಪು. ಆತ್ಮೀಯರಿಗಾಗಿ ಬೇರೆ ರಿಂಗ್ ಟೋನ್ ಇಟ್ಟಿರುತ್ತೇವೆ. ಆ ಟೋನ್ ಇನ್ನೆಲ್ಲೋ ಕೇಳಿದಾಗ ಕುಸಿದು ಹೋಗುತ್ತೇವೆ. ಆತ್ಮೀಯರಾದವರು ಬಿಟ್ಟು ಹೊರಟಾಗ ಅವರಿಲ್ಲ ಕಡೆ ಪಕ್ಷ ಅವರ ನಂಬರ್ ಆದರೂ ಇರಬೇಕು ಅನ್ನಿಸುತ್ತದೆ. ಆ ನಂಬರನ್ನು ಅಳಿಸಹೋಗುವುದಿಲ್ಲ. ಏನೋ ನೋಡಹೋದಾಗ ಅವರ ನಂಬರ್ ಕಾಣಿಸಿದರೆ ಡಿಸ್ಟರ್ಬ್ ಆಗಿಬಿಡುತ್ತೇವೆ. ಮತ್ತೆ ಮತ್ತೆ ಕಾಡುವ ನಂಬರಗಳದ್ದೆ ಗುಂಪು ಮಾಡಬೇಕೆ ಅನ್ನಿಸುತ್ತದೆ. ನಮಗೆ ತೀರ ಹತ್ತಿರದವರಾಗಿದ್ದರೆ ಏನೇ ಚಿಕ್ಕ ವಿಷಯವಾದರೂ ಅವರಿಗೆ ಹೇಳಬೇಕು ಅನ್ನಿಸುತ್ತದೆ, ಮತ್ತೆ ಮತ್ತೆ ಬೆರಳುಗಳು ಅವರ ನಂಬರನ್ನು ತಡಕುವಂತಾಗುತ್ತದೆ.

ಸ್ವಂತ ವಿಚಾರಗಳನ್ನು ಅಂತರ್ಜಾಲ ತಾಣಗಳಲ್ಲಿ, ವಾಟ್ಸ್ಯಾಪುಗಳಲ್ಲಿ ಹಾಕಬಾರದು. ಎಲ್ಲವನ್ನೂ ಪರ್ಸನಲ್‌ ಆಗಿ ತೆಗೆದುಕೊಳ್ಳಬಾರದು. ನಮಗೆ ಅವರನ್ನು ಕಂಡರೆ ಆಗದು ಎಂದರೆ ಅವರಿಗೆ ವಿಷಯ ಮುಟ್ಟುವವರೆಗೆ ಸಂದೇಶಗಳನ್ನು ಸಾಮಾಜಿಕವಾಗಿ ಹರಿಯಬಿಡುವುದು ತಪ್ಪು. ಚುನಾವಣೆ ಘೋಷಣೆ ಆಗಿರುವ ಈ ಸಂದರ್ಭದಲ್ಲಿ ಗುಂಪುಗಾರಿಕೆ ಸಾಫ್ಟ್ ಮತ್ತು ಹಾರ್ಡ್ ಮೋಡಲ್ಲಿ ಇದ್ದೇ ಇದೆ ಅನ್ನಿಸುತ್ತದೆ.

ಊರು, ಹಬ್ಬ, ಸ್ನೇಹಿತರು, ಕಾಲೇಜು, ಆಫೀಸ್, ವಾಕಿಂಗ್, ಈಟಿಂಗ್, ಗಾಸಿಪಿಂಗ್, ಟೀಸಿಂಗ್, ಡಾನ್ಸಿಂಗ್, ಸಿಂಗಿಂಗ್, ಟಾಕಿಂಗ್, ಗುಂಪುಗಳು ಇರುತ್ತವೆ. ಪರಸ್ಪರಿಗಾಗಿ ಪರಸ್ಪರರಿಗೋಸ್ಕರ ಇರುವ ಈ ಗುಂಪುಗಳಿಂದ ಮನಸ್ಸು ಹೊಸ ಕ್ರಿಯಾಶೀಲತೆ ಕಡೆಗೆ ಚಲಿಸುವಂತಾಗಬೇಕು. ಇಂಥ ಗುಂಪುಗಳು ಸಾಮರಸ್ಯವನ್ನು ಕಾಪಾಡಬೇಕೇ ವಿನಃ ವಿಘಟಿಸಬಾರದು. ಒರೆಸು ಫೋನ್‌ಗಳ ಈ ಗುಂಪುಗಳು ಕೆಲವೊಮ್ಮೆ ಆಹ್ಲಾದವನ್ನು, ಕೆಲವೊಮ್ಮೆ ತಿಳಿವಳಿಕೆಯನ್ನು, ಸ್ನೇಹವನ್ನು, ಮೆಚ್ಚುಗೆಯನ್ನು ಕೆಲವೊಮ್ಮೆ ವ್ಯಸನವನ್ನು, ವಿಷಾದವನ್ನು ತರಿಸುತ್ತವೆ. ಎಲ್ಲಾ ಗುಂಪಿನಾಟವೆ. ಅದೆ ವಾಟ್ಸಪ್ ಗುಂಪಿನಾಟವಯ್ಯಾ.. ಅಡ್ಮಿನ್ ಸೂತ್ರಧಾರ