ಎರಡನೆಯ ಮಹಾಯುದ್ಧಾನಂತರದ ಬ್ರಿಟನ್ನಿನ ಅತಿ ದುಬಾರಿ ಸೌಕರ್ಯ ನಿರ್ಮಾಣ ಯೋಜನೆ ಎಂದು ಕರೆಯಲ್ಪಡುವ ಈ ಸಾಹಸ ಸಹಜವಾಗಿಯೇ ತೀವ್ರ ಅಸಮಾಧಾನವನ್ನೂ ವಿರೋಧವನ್ನೂ ಪಡೆದಿದೆ. ಅತಿಯಾದ ವೆಚ್ಚ, ಈ ಮಾರ್ಗಗಳಲ್ಲಿ ಈಗಾಗಲೇ ಇರುವ ರೈಲು ಪ್ರಯಾಣಗಳಿಗಿಂತ ಬಹಳವೇನೂ ಕಡಿಮೆಯಲ್ಲದ ಸಮಯದಲ್ಲಷ್ಟೇ ಗುರಿ ಮುಟ್ಟುವ ಸಾಧ್ಯತೆ, ಸಾವಿರಾರು ಹೆಕ್ಟರ್ ಹಸಿರು ಪ್ರದೇಶಗಳು ಜೀವ ವೈವಿಧ್ಯಗಳು ರೈಲು ಹಳಿಗಳಿಗೆ ನಿಲ್ದಾಣಗಳಿಗಾಗಿ ನೆಲಸಮವಾಗಬೇಕಾಗುವುದು, ಮನೆಗಳನ್ನು ಸ್ಥಳಾಂತರಿಸಬೇಕಾಗುವುದು ವಿರೋಧದ ಹಿಂದಿನ ಮುಖ್ಯ ಕಾರಣಗಳು. ಯೋಜನೆ ಯಾವುದೇ ಇರಲಿ ಜಾಗ ತೆರವುಗೊಳಿಸುವ, ಅರಣ್ಯ ಕಡಿಯುವ ಮತ್ತೆ ಆ ಮೂಲಕ ಭೂಕಬಳಿಕೆ ಮಾಡುವ ಲಾಬಿಕೋರ ವ್ಯಾಪಾರಿಗಳು ಇಲ್ಲಿಯೂ ಹಿನ್ನೆಲೆಯಲ್ಲಿ ಇದ್ದಾರೆ ಎಂದು ಆರೋಪಿಸಲಾಗುತ್ತದೆ.
ಯೋಗೀಂದ್ರ ಮರವಂತೆ ಬರೆಯುವ “ಇಂಗ್ಲೆಂಡ್ ಲೆಟರ್”

 

ಒಂದು ವೇಳೆ ಈ ಕಾಲ, ಈ ಕಾಲ ಅಲ್ಲದೇ ಇನ್ಯಾವುದೋ ಕಾಲ ಆಗಿದ್ದಿದ್ದರೆ… ಎಂದು ನಾವು ಯೋಚಿಸುವುದಿದೆ ಅಥವಾ ಮಾತಿನಲ್ಲಿ ಹಾಗೆಂದು ಹೇಳುವುದಿದೆ. ಈ ಕಾಲವನ್ನು ತಿಳಿಯಲು ಅಳೆಯಲು ಯಾವುದೋ ಕಾಲದ ಎರವಲು ಉಲ್ಲೇಖ ಕೆಲವೊಮ್ಮೆ ಅಗತ್ಯವೂ ಅನುಕೂಲವೂ ಹೌದು. ಎಂದೋ ನಡೆದುದನ್ನು ಹುಡುಕಿ ತಂದು ಹಳೆಯ ಕನ್ನಡಿಯಂತೆ ಎದುರು ಹಿಡಿಯುವುದು ಮುಖ ನೋಡಿಕೊಳ್ಳುವುದು ನಾವೆಲ್ಲರೂ ಮಾಡುವಂತಹದ್ದೇ. ಇನ್ನು ಮಾತು ಮಾತಿಗೆ ಕಾಲದ ಆಳದ ಮಂಪರಿನಲ್ಲಿ ತೂಕಡಿಸುತ್ತ ಕುಳಿತಿರುವ ಇತಿಹಾಸ ದಂತಕಥೆಗಳನ್ನು ಬಡಿದು ಎಬ್ಬಿಸಿ ತಂದು ಜೀವಂತವಾಗಿಸಿ ಎದುರು ಇಡುವುದು ಆಂಗ್ಲರ ಊರಿನಲ್ಲಂತೂ ತೀರ ಸಾಮಾನ್ಯ. ಇಂದಿನ ಬಿಸಿಲು ಮಳೆ ಚಳಿ ಗಾಳಿ ಅಥವಾ ಇನ್ಯಾವುದೋ ಆಗುಹೋಗುಗಳನ್ನು ಹಿಂದಿನ ಇಂತಹದೇ ದಿನಕ್ಕೆ ಘಟನೆಗೆ ತುಲನೆ ಮಾಡಲಾಗುತ್ತದೆ. ಮತ್ತೆ ಈಗೊಂದು ಹೊಸ ದಾಖಲೆ ಸೃಷ್ಟಿ ಆಗಿದ್ದರೆ ಅದನ್ನು ಚರಿತ್ರೆಯ ಹೊಸ ಪುಟಗಳಲ್ಲಿಯೂ ಜೋಡಿಸಲಾಗುತ್ತದೆ.

ಇದೀಗ ಪ್ರಸ್ತುತವೆನಿಸಿದ ಒಂದು ವಿಚಾರದ ಬಗೆಗೆ ಹೇಳುವಾಗ ಮೂರ್ನಾಲ್ಕು ಶತಮಾನಗಳಷ್ಟು ಹಿಂದೆ ನಮ್ಮನ್ನು ಕರೆದೊಯ್ದು ನಿಲ್ಲಿಸಿ, ಈ ಕಾಲದ ಕನ್ನಡಕ ಹಾಕಿಕೊಂಡು ಆ ಕಾಲದೊಳಗೆ ಅಲ್ಲೆಲ್ಲಿಂದಲೋ ನಡಿಗೆ ಆರಂಭಿಸಿ ಮುಂದುವರಿದು ಈಗಿನ ಕಾಲಕ್ಕೆ ಬಂದು ಸೇರಿಕೊಳ್ಳುವುದೂ ಇರುತ್ತದೆ.

ಒಂದು ವೇಳೆ ಇದು ಹದಿನೇಳು ಹದಿನೆಂಟನೆಯ ಶತಮಾನ ಆಗಿದ್ದಿದ್ದರೆ ಬೇರೆ ಏನೇನು ಆಗುತ್ತಿತ್ತೋ ಹೇಗೇಗೆ ಇರುತ್ತಿತ್ತೋ, ಗೊತ್ತಿಲ್ಲ ಆದರೆ ಊರುಗಳ ನಗರಗಳ ನಡುವಿನ ಪ್ರಯಾಣವಂತೂ ಈ ಕಾಲಕ್ಕೆ ನಾವು ಊಹಿಸಲು ಸಾಧ್ಯವಾಗದ ಕುದುರೆ ಗಾಡಿಗಳ ಮೂಲಕ ನಡೆದಿರುತ್ತಿತ್ತು. ಮತ್ತೆ ನೀವು ಬ್ರಿಟನ್ನಿನ ಮಧ್ಯಭಾಗದಲ್ಲಿರುವ ಬರ್ಮಿಂಗ್ಹ್ಯಾಮ್ ನಿಂದ ತುಸು ಕೆಳಗೆ ಆಗ್ನೇಯ ದಿಕ್ಕಿಗಿರುವ ಲಂಡನ್ ಗೆ ಹೋಗುವವರಾದರೆ ಸುಮಾರು ಇನ್ನೂರು ಕಿಲೋಮೀಟರುಗಳ ಪಯಣವನ್ನು ಸಾರೋಟಿನಲ್ಲಿ ಮಾಡಬೇಕಿತ್ತು. ಮೊದಮೊದಲಿಗೆ, ಕುದುರೆಬಂಡಿ ಪ್ರಯಾಣ ಆರಂಭವಾದ ಕಾಲದಲ್ಲಿ ಈ ಪ್ರಯಾಣಕ್ಕೆ ನಾಲ್ಕು ದಿನಗಳು ಬೇಕಾಗುತ್ತಿದ್ದವು. ಗಂಟೆಗೆ ಎರಡು ಮೂರು ಮೈಲಿ ವೇಗದಲ್ಲಿ ಸಾಗುತ್ತಿದ್ದ ಬಂಡಿಗಳು ಮುಂದೆ ಕಾಲಾನುಕ್ರಮದಲ್ಲಿ ಹತ್ತು ಹನ್ನೆರಡು ಮೈಲಿ ವೇಗದಲ್ಲಿ ಸಾಗುವುದು ಸಾಧ್ಯವಾಯಿತು. ಪ್ರಯಾಣದ ಪ್ರಯಾಸವನ್ನು ತಗ್ಗಿಸಲು ಬಂಡಿಗಳಲ್ಲಿ “ಶಾಕ್ ಅಬ್ಸೊರ್ಬರ್” ಗಳ ಅಳವಡಿಕೆಯೂ ಬಂತು. ಸುಧಾರಿತ ರಸ್ತೆ, ನಾವೀನ್ಯತೆಯ ಕುದುರೆ ಗಾಡಿಗಳ ಸಹಯೋಗದಲ್ಲಿ ಅದೇ ನಾಲ್ಕು ದಿವಸಗಳ ಪ್ರಯಾಣ ಎರಡು ದಿನಗಳಿಗೂ ಇಳಿಯಿತು. ಈ ಕಾಲದಲ್ಲಿ ನಿಂತು ಆ ದಿನಗಳನ್ನು ಅವಲೋಕಿಸುವಾಗ, ರಸ್ತೆಯಲ್ಲಿ ಸಣ್ಣ ಮಟ್ಟಿನ ವಾಹನ ದಟ್ಟಣೆಯ ಅಡಚಣೆ ನಮ್ಮ ಸಹನೆ ವ್ಯವಧಾನಗಳ ಮಿತಿ ತಪ್ಪಿಸುವಾಗ, ಇಷ್ಟು ನಿಧಾನವಾದ ಸಾರಿಗೆ ವ್ಯವಸ್ಥೆಯಲ್ಲಿ ಜನ ಹೇಗೆ ಬದುಕಿದ್ದಿರಬಹುದು ಎನ್ನುವ ಪ್ರಶ್ನೆ ಗೊಂದಲ ಮೂಡಬಹುದು. ನಮ್ಮ ಸ್ಪಷ್ಟ ಅನುಭವಕ್ಕೆ ಈ ಕುದುರೆ ಗಾಡಿ ಆಧಾರಿತ ಸಾರಿಗೆ ವ್ಯವಸ್ಥೆ ನಿಲುಕದಿದ್ದರೂ ಎರಡು ಊರುಗಳ ನಡುವಿನ ಸಂಚಾರದ ಸಮಯ ಅರ್ಧದಷ್ಟಾಗುವುದು ಆ ಕಾಲಕ್ಕೂ ಅಥವಾ ಯಾವ ಕಾಲಕ್ಕೂ ಸಣ್ಣ ವಿಷಯ ಅಲ್ಲ ಬಿಡಿ.

ಇನ್ನು ಇಂಗ್ಲೆಂಡ್ ನ ದಕ್ಷಿಣಕ್ಕಿರುವ ಎಕ್ಸೆಟರ್ ಪಟ್ಟಣದಿಂದ ರಾಜಧಾನಿ ಲಂಡನ್ ನ ತನಕದ ಅಂದಾಜು ಮುನ್ನೂರು ಕಿಲೋಮೀಟರುಗಳ ಪ್ರಯಾಣ ಸುಮಾರು ಒಂದು ವಾರ ತೆಗೆದುಕೊಳ್ಳುತ್ತಿತ್ತು. ಕುದುರೆ ಬಂಡಿಯಲ್ಲಿ ಓಡಾಡುವ ದಾಖಲೆ ಇಲ್ಲಿ ಹದಿಮೂರನೆಯ ಶತಮಾನದಿಂದಲೇ ದೊರಕಿದರೂ ಅದು ದೂರದ ಎರಡು ನಗರಗಳ ನಡುವಿನ ಖಾಯಂ ಸಾರಿಗೆ ವ್ಯವಸ್ಥೆಯಾಗಿ ಜಾರಿಗೆ ಬಂದದ್ದು ಮತ್ತೆ ಜನಪ್ರಿಯವಾದದ್ದು ಹದಿನೇಳು ಹದಿನೆಂಟನೆಯ ಶತಮಾನಗಳಲ್ಲಿಯೇ. ಪ್ರತಿ ಹದಿನೈದೋ ಇಪ್ಪತ್ತೋ ಮೈಲುಗಳ ಪ್ರಯಾಣಕ್ಕೆ ಸಣ್ಣ ವಿಶ್ರಾಮ ಪಡೆದು ನಂತರ ಮುಂದುವರಿಯುತ್ತಿದ್ದ ಆ ಬಂಡಿಗಳನ್ನು “ಸ್ಟೇಜ್ ಕೋಚ್” ಎಂದು ಕರೆಯುತ್ತಿದ್ದರು, ಹಂತ ಹಂತವಾಗಿ ಮುನ್ನಡೆಯು ವ ಸಾಗಾಟದ ವ್ಯವಸ್ಥೆ ಎನ್ನುವ ಅರ್ಥದಲ್ಲಿ. ದಣಿದು ಬರುವ ಕುದುರೆಗಳನ್ನು ಉಪಚರಿಸಲು, ಬಂಡಿ ಏರಿ ಬರುವ ಯಾತ್ರಿಗಳನ್ನು ಸತ್ಕರಿಸಲು ಮಾರ್ಗ ಮಧ್ಯದಲ್ಲಿ ಅಲ್ಲಲ್ಲಿ ವಿಶ್ರಾಂತಿಧಾಮಗಳು ವಸತಿಗೃಹಗಳು ಇದ್ದವು. ಊರಿಂದೂರಿಗೆ ತಲುಪುವ ಅಂಚೆ ವ್ಯವಸ್ಥೆಗೂ ಈ ಜಟಕಾ ಸಾರಿಗೆ ಸಹಕಾರಿಯಾಗಿತ್ತು . ಮತ್ತೆ ದುರ್ಗಮ ಹಾದಿಯಲ್ಲಿ ಒಂಟಿಯಾಗಿ ಯಾವುದೇ ರಕ್ಷಣೆ ಇಲ್ಲದೇ ನಡೆಯುತ್ತಿದ್ದ ಪ್ರಯಾಣಗಳು ಬಹಳ ಸಲ ದರೋಡೆಕೋರರ ದಾಳಿಗೂ ಒಳಗಾಗುತ್ತಿದ್ದವು.

ಇಂತಹ ಸುಲಿಗೆಗಳಲ್ಲಿ ಸಿಕ್ಕಿಬಿದ್ದು ನೇಣುಗಂಬವೇರಿದ ಪುರಾತನ ಲೂಟಿಕೋರರ ದೊಡ್ಡ ಪಟ್ಟಿಯೇ ಇಲ್ಲಿದೆ. ಲಂಡನ್ ಹಾಗು ಬರ್ಮಿಂಗ್ಹ್ಯಾಮ್ ಗಳ ನಡುವೆ ಪ್ರತಿವಾರ ನಿರಂತರ ಕುದುರೆಬಂಡಿ ಸಾರಿಗೆ ವ್ಯವಸ್ಥೆ 1731ರಲ್ಲಿ ಶುರು ಆಯಿತು ಎಂದು ಇತಿಹಾಸ ಹೇಳುತ್ತದೆ. ಅದಾಗಿ ನೂರು ವರ್ಷಗಳು ಕಳೆಯುವಾಗ, 1830ರಲ್ಲಿ ಬ್ರಿಟನ್ನಿನ ಇನ್ನೆರಡು ನಗರಗಳಾದ ಮ್ಯಾಂಚೆಸ್ಟರ್ ಹಾಗು ಲಿವರ್ಪೂಲ್ ಗಳ ನಡುವೆ ರೈಲುಯಾನ ಆರಂಭಗೊಂಡಿತ್ತು. ಹತ್ತೊಂಭತ್ತನೆಯ ಶತಮಾನದ ಮಧ್ಯಭಾಗದಲ್ಲಿ ಕುದುರೆ ಬಂಡಿಗಳ ಪ್ರಯಾಣ ಕಡಿಮೆಯಾಯಿತು ಹಾಗು ರೈಲುಯಾನ ಹೆಚ್ಚು ಪ್ರಚಲಿತವಾಯಿತು. ಸಾಮಾನುಗಳನ್ನು ಸಾಗಿಸುವ ಗೂಡ್ಸ್ ರೈಲು ವ್ಯವಸ್ಥೆ ಮೊದಲೇ ಚಾಲ್ತಿಯಲ್ಲಿದ್ದರೂ ಎರಡು ನಗರಗಳ ನಡುವೆ ರೈಲಿನಲ್ಲಿ ನಿರಂತರವಾಗಿ ಜನರು ಪ್ರಯಾಣಿಸಲು ಆರಂಭಿಸಿದ ಮೊದಮೊದಲ ದಾಖಲೆ 1830ರಲ್ಲಿಯೇ.

ರೈಲುಗಳ ಮಟ್ಟಿಗೆ ಹಲವು ಮೊದಲುಗಳನ್ನು ವೈಶಿಷ್ಟ್ಯಗಳನ್ನು ಸಂಶೋಧನೆಗಳನ್ನು ಸುಧಾರಣೆಗಳನ್ನು ದಾಖಲಿಸಿಕೊಂಡ ಈ ದೇಶದಲ್ಲಿ ರೈಲುಗಳ ಬಗೆಗೆ ಅತ್ಯಂತ ಭಾವಪರವಶರಾಗಿ ಮುಖ ಕೆಂಪು ಮಾಡಿಕೊಂಡು ಮಾತನಾಡುವ ವೃದ್ಧರು ಇತಿಹಾಸಪ್ರಿಯರು ಈಗಲೂ ಸಿಗುತ್ತಾರೆ. ಮತ್ತೆ ಜಗತ್ತಿನ ಅತಿ ಹಳೆಯ ರೈಲು ವ್ಯವಸ್ಥೆ ತಮ್ಮದೇ ಎನ್ನುವ ಹೆಮ್ಮೆ ಬ್ರಿಟಿಷರನ್ನು ಎಂದಿಗೂ ಬಿಟ್ಟುಹೋಗಲಿಕ್ಕಿಲ್ಲ. ಈಗಲೂ ಇಲ್ಲಿ ಪುರಾತನ ಉಗಿಬಂಡಿಗಳು ಪ್ರದರ್ಶನಕ್ಕಾಗಿ ಪ್ರವಾಸಿ ಅನುಭವ ನೀಡುವ ಸಲುವಾಗಿ ತಿರುಗಾಡುತ್ತವೆ ಹಾಗು ಇನ್ನೆಷ್ಟೋ ಎಂಜಿನ್ ಗಳು ಬೋಗಿಗಳು ಉಪಕರಣಗಳು ಸಂಗ್ರಹಾಲಯಗಳಲ್ಲಿಯೂ ವಿರಮಿಸಿ ವಿರಾಜಿಸುತ್ತವೆ.

ಮತ್ತೆ ಎಂದೆಂದಿನ ಇನ್ಯಾವುದೋ ಕಾಲವಲ್ಲದ ಈ ಕಾಲದಲ್ಲಿ , ಇಂದಿಗಿಂತ ಹಿಂದಿನ ಹಲವು ಶತಮಾನಗಳ ಸಾಗಾಟ ಪ್ರಯಾಣ ತಿರುಗಾಟಗಳ ನೆಪದಲ್ಲಿ ರಸ್ತೆಯಲ್ಲಿ ದುಡಿದ ದಣಿದ ಹಳಿಗಳ ಮೇಲೆ ಬೆವರು ಸುರಿಸಿದ ಕುದುರೆ ಗಾಡಿ, ಉಗಿಬಂಡಿಗಳು ನೇಪಥ್ಯಕ್ಕೆ ಸರಿದು ಈ ಕಾಲಕ್ಕೊಪ್ಪುವ ನವನವೀನ ಸಂಚಾರ ಮಾಧ್ಯಮಗಳು ಮುಂಚೂಣಿಗೆ ಬಂದಿವೆ. ಇದ್ದ ಒಂದೋ ಎರಡೋ ಸಂಚಾರದ ಆಯ್ಕೆಗಳಲ್ಲಿ, ಸುದೀರ್ಘ ಸಮಯವನ್ನು ವ್ಯಯಿಸಿ ಹೇಗಾದರೂ ಇನ್ನೊಂದು ಊರನ್ನು ಮುಟ್ಟಬೇಕು ಎನ್ನುವ ಅಂದಿನ ಗುರಿಗಳು ಈಗ ವಿಪರೀತ ವೇಗ ಯಥೇಚ್ಛ ಅನುಕೂಲತೆ ಅಪರಿಮಿತ ಆಯ್ಕೆಗಳಲ್ಲಿ ಬದಲಾಗಿವೆ.

ನೀವು ಬ್ರಿಟನ್ನಿನ ಮಧ್ಯಭಾಗದಲ್ಲಿರುವ ಬರ್ಮಿಂಗ್ಹ್ಯಾಮ್ ನಿಂದ ತುಸು ಕೆಳಗೆ ಆಗ್ನೇಯ ದಿಕ್ಕಿಗಿರುವ ಲಂಡನ್ ಗೆ ಹೋಗುವವರಾದರೆ ಸುಮಾರು ಇನ್ನೂರು ಕಿಲೋಮೀಟರುಗಳ ಪಯಣವನ್ನು ಸಾರೋಟಿನಲ್ಲಿ ಮಾಡಬೇಕಿತ್ತು. ಮೊದಮೊದಲಿಗೆ, ಕುದುರೆಬಂಡಿ ಪ್ರಯಾಣ ಆರಂಭವಾದ ಕಾಲದಲ್ಲಿ ಈ ಪ್ರಯಾಣಕ್ಕೆ ನಾಲ್ಕು ದಿನಗಳು ಬೇಕಾಗುತ್ತಿದ್ದವು. ಗಂಟೆಗೆ ಎರಡು ಮೂರು ಮೈಲಿ ವೇಗದಲ್ಲಿ ಸಾಗುತ್ತಿದ್ದ ಬಂಡಿಗಳು ಮುಂದೆ ಕಾಲಾನುಕ್ರಮದಲ್ಲಿ ಹತ್ತು ಹನ್ನೆರಡು ಮೈಲಿ ವೇಗದಲ್ಲಿ ಸಾಗುವುದು ಸಾಧ್ಯವಾಯಿತು.

ಹದಿನೆಂಟನೆಯ ಶತಮಾನದಲ್ಲಿ ಎರಡೂವರೆ ದಿನಗಳು ಬೇಕಾಗುತ್ತಿದ್ದ ಲಂಡನ್ ಹಾಗು ಬರ್ಮಿಂಗ್ಹ್ಯಾಮ್ ನಗರಗಳ ನಡುವಿನ ಕಚ್ಚಾ ರಸ್ತೆಯ ಜಟಕಾ ಗಾಡಿಯ ಸಂಚಾರ, ಮೆತ್ತನೆಯ ಆಸನದ ಹವಾನಿಯಂತ್ರಿತ ರೈಲು ಮಾಧ್ಯಮದ ಮೂಲಕ ಇದೀಗ ಒಂದು ಗಂಟೆ ಇಪ್ಪತ್ತು ನಿಮಿಷಗಳಲ್ಲಿ ಸುಲಲಿತವಾಗಿ ಕಳೆಯುತ್ತದೆ. ನಾಲ್ಕು ಶತಮಾನಗಳಲ್ಲಿ ಇಂಗ್ಲೆಂಡ್, ಕೆಲವರ ಕಣ್ಣಿಗೆ ಅತಿ ಆಲಸ್ಯದಲ್ಲಿ ಬದಲಾವಣೆಯನ್ನು ತಡವಾಗಿ ಸ್ವೀಕರಿಸಿದ ನಾಡಾಗಿ ಕಂಡರೆ ಮತ್ತೆ ಕೆಲವರ ಅಭಿಪ್ರಾಯದಲ್ಲಿ ನಿಧಾನವಾದರೂ ಅಸಾಧಾರಣ ಎನ್ನುವ ಬೆಳವಣಿಗೆ ಕಂಡ ದೇಶವಾಗಿ ಗೋಚರಿಸುತ್ತದೆ. ಇನ್ನು ಇಲ್ಲಿನ ಎರಡು ಪ್ರಮುಖ ನಗರಗಳ ನಡುವಿನ ಹಿಂದಿನ ಇಂದಿನ ಸಂಚಾರದ ಅವಧಿ, ಅಂತಹ ಎಲ್ಲ ಬಗೆಯ ವಿಭಿನ್ನ ನೋಟ ವೈರುಧ್ಯದ ಅಭಿಮತಗಳಿಗೆ ಅಳತೆಕೋಲಾಗಿ ನಿಲ್ಲುತ್ತದೆ.

ದೇಶದ ಮೂಲೆಮೂಲೆಯನ್ನು ಮುಟ್ಟಿರುವ ರಸ್ತೆ ಸಂಪರ್ಕ, ಸಣ್ಣ ಸಣ್ಣ ಊರುಗಳ ಮೂಲಕ ಹಾದುಹೋಗುತ್ತ ಬಹುತೇಕ ನಗರಗಳನ್ನು ಜೋಡಿಸುವ ರೈಲು ಹಳಿಗಳು ಬ್ರಿಟನ್ನಿನಲ್ಲಿ ಇವೆ. ದೇಶದಾದ್ಯಂತ ಇರುವ ರೈಲು ಹಳಿಗಳ ಒಟ್ಟು ಉದ್ದ ಸುಮಾರು ಹದಿನಾರು ಸಾವಿರ ಕಿಲೋಮೀಟರುಗಳು, ಅವುಗಳ ನಡುವೆ ಎರಡೂವರೆ ಸಾವಿರ ನಿಲ್ದಾಣಗಳು. ಮತ್ತೆ ಇವಿಷ್ಟೂ ರೈಲ್ವೇ ವ್ಯವಸ್ಥೆ ಸೌಕರ್ಯಗಳ ಹಿಂದೆ ಶತಮಾನಗಳ ಹಿಂದಿನ ವಿಕ್ಟೋರಿಯನ್ ಕಾಲದ ಶ್ರಮ ಕೊಡುಗೆ ಕಾಣಿಸುತ್ತದೆ.

ರಸ್ತೆ ಹಾಗು ರೈಲು ಸಂಪರ್ಕಗಳ ವಿಸ್ತೃತ ಜಾಲ, ಅವುಗಳು ತುಂಬಿಸಿ ಸಾಗಿಸಬಹುದಾದ ಜನದಟ್ಟಣೆ, ಗುರಿಯನ್ನು ತಲುಪುವ ವೇಗ ಇತ್ಯಾದಿಗಳು ಒಂದು ದೇಶದ ಅಭಿವೃದ್ಧಿಯ ಹಾಗು ತಂತ್ರಜ್ಞಾನದ ಬೆಳವಣಿಗೆಯ ಸಂಕೇತ ಎಂದು ತಿಳಿಯುವವರು ಇಲ್ಲಿಯೂ ಇದ್ದಾರೆ. ಸೌಕರ್ಯಗಳು ಮತ್ತೆ ಆ ಸೌಕರ್ಯಗಳನ್ನು ಪಡೆಯಲು ಬೇಕಾಗುವ ಕಾಮಗಾರಿಗಳೇ ದೇಶದ ಅರ್ಥ ವ್ಯವಸ್ಥೆಯ ಚಲನೆಗೆ ಆಧಾರ ಎಂದು ವಾದಿಸುವವರೂ ಇದ್ದಾರೆ. ಪ್ರಯಾಣವೊಂದು ವೇಗವಾಗಿ ಸಾಗುವುದು, ತಲುಪಬೇಕಾದ ಸ್ಥಳವನ್ನು ಆದಷ್ಟು ಬೇಗ ತಲುಪುವುದು ಅಗತ್ಯ ಅನಿವಾರ್ಯ ಎಂದು ಅವರು ಹೇಳುತ್ತಾರೆ. ಇಂತಹ ಯೋಚನೆ ಸಿದ್ಧಾಂತ ಜೀವನಕ್ರಮ ಇತ್ಯಾದಿಗಳ ಮುಂದುವರಿದ ಭಾಗವಾಗಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಬ್ರಿಟನ್ನಿನಲ್ಲೊಂದು “ಅತಿ ವೇಗದ ರೈಲು” ಕಾಮಗಾರಿ ಶುರು ಆಗಿದೆ.

ರೈಲಿನ ವೇಗದ ವಿಚಾರ ಬಂದಾಗ ಜಪಾನ್, ಚೈನಾ, ಯುರೋಪ್ ಗಳಲ್ಲಿ ಈಗಾಗಲೇ ಇರುವ “ಹೈ ಸ್ಪೀಡ್” ರೈಲುಗಳ ಹೋಲಿಕೆ ಬಂದುಹೋಗುತ್ತದೆ. ಗಂಟೆಗೆ ಇನ್ನೂರು ಇನ್ನೂರೈವತ್ತು ಕಿಲೋಮೀಟರು (ನೂರಿಪ್ಪತ್ತರಿಂದ ನೂರಾಅರವತ್ತು ಮೈಲಿ) ವೇಗದಲ್ಲಿ ಚಲಿಸುವ ರೈಲುಗಳನ್ನು “ಅತಿ ವೇಗದ ರೈಲು” ಎಂದು ಕರೆಯುತ್ತಾರೆ. ಇಂತಹ ಮಾನದಂಡಗಳನ್ನು ಮೀರಿ ಗಂಟೆಗೆ ನಾಲ್ಕು ನೂರರಿಂದ ಐದು ನೂರು ಕಿಲೋಮೀಟರು ವೇಗದಲ್ಲಿ ಸಾಗುವ ರೈಲುಗಳು ಚೈನಾದಲ್ಲೂ ಮತ್ತು ಯುರೋಪಿನಲ್ಲೂ ಇವೆ. ಮತ್ತೆ ಜಪಾನಿನಲ್ಲಿ ಇನ್ನೊಂದು ಹತ್ತು ವರ್ಷಗಳಲ್ಲಿ ಐದುನೂರು ಕಿಲೋಮೀಟರ್ ವೇಗದಲ್ಲಿ ಪಯಣಿಸುವ ರೈಲೂ ಬರಲಿದೆ! ಬ್ರಿಟನ್ನಿನ ಕೆಲವು ಮಾರ್ಗಗಳಲ್ಲಿ ರೈಲು ಗಂಟೆಗೆ ೧೨೫ ಮೈಲುಗಳನ್ನು ಕ್ರಮಿಸಬಲ್ಲುದು (ಇನ್ನೂರು ಕಿಲೋಮೀಟರು). ಇದೀಗ ಕಾಮಗಾರಿ ಆರಂಭವಾಗಿರುವ “ಹೈ ಸ್ಪೀಡ್ ರೈಲು” ಗಂಟೆಗೆ ಇನ್ನೂರೈವತ್ತು ಮೈಲಿ (ನಾಲ್ಕು ನೂರು ಕಿಲೋಮೀಟರು) ವೇಗದಲ್ಲಿ ಚಲಿಸಬಲ್ಲದು.

ಈ ಕಾಮಗಾರಿಯ ಪ್ರಾಥಮಿಕ ಹಂತವಾಗಿ, ಬರ್ಮಿಂಗ್ಹ್ಯಾಮ್ ಹಾಗು ಲಂಡನ್ ಗಳನ್ನು ಜೋಡಿಸಿ ಮುಂದಿನ ಹಂತದಲ್ಲಿ ಉತ್ತರದ ಮಾಂಚೆಸ್ಟರ್ ಹಾಗು ಲೀಡ್ಸ್ ನಗರಗಳನ್ನು ಬರ್ಮಿಂಗ್ಹ್ಯಾಮ್ ಗೆ ಸೇರಿಸಲಾಗುತ್ತದೆ. ಬ್ರಿಟನ್ನಿನ ಉತ್ತರ ಹಾಗು ದಕ್ಷಿಣದ ಸೇತುವೆ ಇದಾಗುತ್ತದೆ ಎಂದು ಬಣ್ಣಿಸಲಾಗುವ ಈ ವೇಗದ ರೈಲು ಕಾಮಗಾರಿಯ ವೆಚ್ಚ ನೂರು ಬಿಲಿಯನ್ ಪೌಂಡಗಳನ್ನು ಮೀರಬಹುದು. ಹೆಚ್ಚು ಬೋಗಿಗಳನ್ನು ಸೇರಿಸುವುದು, ವೇಗ ಹೆಚ್ಚಿಸುವುದು ಶತಮಾನಗಳ ಹಿಂದಿನ ರೈಲು ವ್ಯವಸ್ಥೆಗೆ ಕಾಯಕಲ್ಪ ಒದಗಿಸುವುದು ನೆರೆಯ ಜರ್ಮನಿ ಫ್ರಾನ್ಸ್ ಇಟೆಲಿಗಳಲ್ಲಿ ಇರುವ ಇತ್ತೀಚಿನ ಮಾದರಿಯ ರೈಲು ವ್ಯವಸ್ಥೆಯನ್ನು ತಮ್ಮಲ್ಲೂ ಹೊಂದುವುದು ಇದರ ಮೂಲ ಉದ್ದೇಶ ಎಂದು ಈ ಕಾಮಗಾರಿಯನ್ನು ಉತ್ಸಾಹದಲ್ಲಿ ಬೆಂಬಲಿಸುವವರು ವಾದಿಸುತ್ತಾರೆ. ಇಪ್ಪತ್ತು ಸಾವಿರಕ್ಕಿಂತ ಹೆಚ್ಚು ಹೊಸ ಉದ್ಯೋಗಗಳೂ ಹುಟ್ಟುತ್ತವೆ ಎಂದೂ ಸಮಜಾಯಿಷಿ ನೀಡುತ್ತಾರೆ. ಕಳೆದ ಹತ್ತು ವರ್ಷಗಳಿಂದ ಬರೀ ಯೋಜನೆ, ತಯಾರಿಯಲ್ಲೇ ಕುಂಟುತ್ತಾ ಸಾಗಿದ ಈ ಕಾಮಗಾರಿಗೆ ಈಗಾಗಲೇ ಹತ್ತು ಬಿಲಿಯನ್ ಪೌಂಡಗಳು ವ್ಯಯ ಆಗಿವೆ.

ಎರಡನೆಯ ಮಹಾಯುದ್ಧಾನಂತರದ ಬ್ರಿಟನ್ನಿನ ಅತಿ ದುಬಾರಿ ಸೌಕರ್ಯ ನಿರ್ಮಾಣ ಯೋಜನೆ ಎಂದು ಕರೆಯಲ್ಪಡುವ ಈ ಸಾಹಸ ಸಹಜವಾಗಿಯೇ ತೀವ್ರ ಅಸಮಾಧಾನವನ್ನೂ ವಿರೋಧವನ್ನೂ ಪಡೆದಿದೆ. ಅತಿಯಾದ ವೆಚ್ಚ, ಈ ಮಾರ್ಗಗಳಲ್ಲಿ ಈಗಾಗಲೇ ಇರುವ ರೈಲು ಪ್ರಯಾಣಗಳಿಗಿಂತ ಬಹಳವೇನೂ ಕಡಿಮೆಯಲ್ಲದ ಸಮಯದಲ್ಲಷ್ಟೇ ಗುರಿ ಮುಟ್ಟುವ ಸಾಧ್ಯತೆ, ಸಾವಿರಾರು ಹೆಕ್ಟರ್ ಹಸಿರು ಪ್ರದೇಶಗಳು ಜೀವ ವೈವಿಧ್ಯಗಳು ರೈಲು ಹಳಿಗಳಿಗೆ ನಿಲ್ದಾಣಗಳಿಗಾಗಿ ನೆಲಸಮವಾಗಬೇಕಾಗುವುದು, ಮನೆಗಳನ್ನು ಸ್ಥಳಾಂತರಿಸಬೇಕಾಗುವುದು ವಿರೋಧದ ಹಿಂದಿನ ಮುಖ್ಯ ಕಾರಣಗಳು. ಯೋಜನೆ ಯಾವುದೇ ಇರಲಿ ಜಾಗ ತೆರವುಗೊಳಿಸುವ, ಅರಣ್ಯ ಕಡಿಯುವ ಮತ್ತೆ ಆ ಮೂಲಕ ಭೂಕಬಳಿಕೆ ಮಾಡುವ ಲಾಬಿಕೋರ ವ್ಯಾಪಾರಿಗಳು ಇಲ್ಲಿಯೂ ಹಿನ್ನೆಲೆಯಲ್ಲಿ ಇದ್ದಾರೆ ಎಂದು ಆರೋಪಿಸಲಾಗುತ್ತದೆ.

ಯಾವುದೇ ದೇಶದಲ್ಲಿ ಹೊಸ ಆಣೆಕಟ್ಟು ರಸ್ತೆ ರೈಲು ಮಾರ್ಗ ವಿಮಾನ ನಿಲ್ದಾಣ ಇತ್ಯಾದಿಗಳನ್ನು ನಿರ್ಮಿಸುವಾಗ ಎದುರಾಗುವ ಪ್ರತಿಭಟನೆ ಟೀಕೆಗಳು ಇಲ್ಲೂ ಇವೆ ಮತ್ತೆ ಎಂತಹ ವಿರೋಧವೇ ಇದ್ದರೂ ಅಭಿವೃದ್ಧಿಯ ನೆಪದಲ್ಲಿ ಕಾಮಗಾರಿಗಳನ್ನು ಅನುಷ್ಠಾನಕ್ಕೆ ತರುವ ಶಕ್ತಿಗಳು ಇಲ್ಲೂ ಕೆಲಸ ಮಾಡುತ್ತವೆ. ಎಲ್ಲವೂ ಇಂದಿನ ಯೋಜನೆಯಂತೆಯೇ ನಡೆದರೆ, ಎರಡು ಹಂತಗಳಲ್ಲಿ ಪೂರ್ಣಗೊಳ್ಳುವ ಮುನ್ನೂರು ಮೂವತ್ತು ಮೈಲು ಉದ್ದದ (ಐದುನೂರ ಮೂವತ್ತು ಕಿಲೋಮೀಟರು) ಹೈ ಸ್ಪೀಡ್ ರೈಲು ಹಾದಿ 2040ಕ್ಕೆ ಸಿದ್ಧವಾಗಬಹುದು. ಮೊದಲ ಹಂತದಲ್ಲಿ ತಯಾರಾಗುವ ಬರ್ಮಿಂಗ್ಹ್ಯಾಮ್ ಹಾಗು ಲಂಡನ್ ನಡುವಣ ಪ್ರಯಾಣ 2030ಕ್ಕೆ ಸಜ್ಜುಗೊಳ್ಳಬಹುದು. ಮತ್ತೆ ಆ ಪ್ರಯಾಣ ಮುಗಿಸಲು ಅತಿ ವೇಗದ ರೈಲಿಗೆ ಐವತ್ತು ನಿಮಿಷಗಳೇ ಸಾಕಾಗಬಹುದು.

ಒಂದಾನೊಂದು ಕಾಲದಲ್ಲಿ ವಾರ ದಿನಗಳು ಗಂಟೆಗಳು ಬೇಕಾಗುತ್ತಿದ್ದ ನಿಧಾನ ಪ್ರಯಾಣವೊಂದು ಈ ಕಾಲದಲ್ಲಿ ಬಹಳ ಚುರುಕಿನಲ್ಲಿ ಉದ್ವೇಗದಲ್ಲಿ ಮುಗಿಯಬಹುದು. ಮತ್ತೆ ಆಗ, ಅತಿ ವೇಗದಲ್ಲಿ ಸಂಚರಿಸುವ ಕಾರಣಕ್ಕೆ ಉಳಿತಾಯವಾದ ಸಮಯ, ಬೋಗಿಗಳ ಅಧಿಕ ಜೋಡಣೆಗಳು ಸಾಗಿಸಿದ ಹೆಚ್ಚುವರಿ ಯಾತ್ರಿಗಳು ಇತ್ಯಾದಿ ಮೇಲ್ಮೆ ಹಿರಿಮೆಗಳು ಹಾಗು ಇವೆಲ್ಲವೂ ಸಾಧ್ಯ ಆಗುವುದಕ್ಕೆ ತೆತ್ತ ಬೆಲೆ ಕಳೆದ ಸಮಯ ವ್ಯಯಿಸಿದ ಶ್ರಮ ಮುಂತಾದವುಗಳು ಎದುರುಬದರಾಗಿ ಇನ್ನೊಂದು ಪರ ವಿರೋಧದ ಚರ್ಚೆಯಲ್ಲಿ ತೊಡಗಬಹುದು.