ಏನು ಬರೆಯಲಿ? ಏನು ಬರೆಯಬಹುದು? ದೂರದ ಊರಲ್ಲಿ ನಮ್ಮ ಚಿಂತೆ ಚಿಂತನೆಗಳು ನಿಮಗಲ್ಲಿ ಹಾಸ್ಯಾಸ್ಪದವೋ ಅಥವಾ ಮಹಾ ಗಂಭೀರವೋ ಆಗಿ ಕಾಣುವ ಅಪಾಯವಿದೆ. ಅದಕ್ಕೆಲ್ಲಾ ತಲೆಗೊಡಬಾರದು ಅಂತ ಹತ್ತಾರು ಸಲ ಹೇಳಿಕೊಂಡಿದ್ದೇನೆ. ಮಹಾ ಗಂಭೀರವೆಂದು ನಕ್ಕರೂ, ಹಾಸ್ಯಾಸ್ಪದವೆಂದು ಅಸಡ್ಡೆ ಮಾಡಿದರೂ ಪರವಾಗಿಲ್ಲ. ಹಾಗನ್ನುವಾಗಲೇ ಹಾಗನ್ನಿಸಿಕೊಳ್ಳುವಾಗಲೇ ಏನೋ ಆಗುತ್ತಿದೆ ಅಂತ ಸಮಾಧಾನ ಮತ್ತು ಉತ್ಸಾಹ.

ಅಲ್ಲಿಯಂತೆ ಇಲ್ಲಿ-
ದೂರದಲ್ಲಿ ಅಲ್ಲಾ ಕೂಗಿ ಎಚ್ಚರವಾಗುವುದಿಲ್ಲ. ಯಾವುದೋ ಕೋಳಿ ಕೂಗಿ ಬೆಳಗಾಗುವುದಿಲ್ಲ. ಹಾಲಿನವನ ಸೈಕಲ್ ಬೆಲ್ಲು ಕಚಗುಳಿಯಿಡುವುದಿಲ್ಲ. ಪಕ್ಕದ ವಠಾರದ ಬಾವಿಯ ರಾಟೆಯ ಜೀಕಾಟವಿಲ್ಲ. ಇವೆಲ್ಲಾ ಯಾವುದೋ ಮಾಯಾಲೋಕದ ಸಂಗತಿಗಳಂತೆ ಇಲ್ಲಿ ಅನಿಸುತ್ತದೆ. ಅಥವಾ ಇಲ್ಲೂ ನಡೆಯುತ್ತಿದೆ ಆದರೆ ನಮಗೆ ಕಾಣುತ್ತಿಲ್ಲ ಕೇಳುತ್ತಿಲ್ಲ ಯಾಕೆ ಅಂತ ಹಲವಾರು ಸಲ ಅನಿಸಿದೆ. ಈ ಎಲ್ಲ ಇಲ್ಲಗಳ ನಡುವೆ ಇಲ್ಲಿ ಮುಂಜಾನೆಯೆಂದರೇನು? ಅದಕ್ಕೆಂತ ತಾಜಾತನವಿರಲು ಸಾಧ್ಯ? ಪ್ರಶ್ನೆಗಳೇಳುವುದು ಸಹಜವೇ ಅಲ್ಲವೆ?

ಆದರೂ ಇಲ್ಲಿನ ಬೆಳಗಿಗೆ ತಾಜಾತನವಿಲ್ಲ ಎಂದರೆ ಸುಳ್ಳಾಡಿದಂತೆ ನೋಡಿ.

ಬೆಳಗಾಗ ಕಣ್ಣುಬಿಡುವಾಗ ಸುತ್ತಲಿನ ಮರಗಳಿಂದ ಯಾವುಯಾವುದೋ ಹಕ್ಕಿಗಳ ಪರಿಚಯವಿರದ ಕರೆಯುವಾಟವಿದೆ. ದೂರದ ಮೋಟರ್‌ವೇನಲ್ಲಿ ಕಾರುಗಳ ಗುಂಯ್‌ಗುಡುವ ಮಂದ್ರನಾದವಿದೆ. ಮನೆ ಬಾಗಿಲಿಗೆ ಪೇಪರು ಧಪ್ಪನೆ ಬೀಳುವ ಸದ್ದಿನ ಗುದ್ದಿದೆ. ಕಸ ಒಯ್ಯುವ ಲಾರಿಯ ಗುಡುಗುಡು ಸೋಮವಾರ ಎಂದು ನೆನಪಿಸುತ್ತದೆ. ರಸ್ತೆಗೆ ನೀರು ಸಿಂಪಡಿಸಿ ಗುಡಿಸುವ ಲಾರಿಯ ಗಿರಿಗಿರಿ ಗುರುವಾರ ಎಂದು ಅರಿವಿಗೆ ತರುತ್ತದೆ. ಇದಕ್ಕೆಲ್ಲಾ ಮೆಲುಗಾಳಿಗೂ ಕುಣುಕುಣುಗುಟ್ಟುವ ಹಿತ್ತಲಿನ ವಿಂಡ್‌ಚೈಮಿನ ಕಿಣಿಕಿಣಿ ಅಲಂಕಾರವಿದೆ. ಅದಕ್ಕೆ ದೂರದ ದೇವಾಲಯದ ಗಂಟೆಯ ಕಳೆಯಿದೆ.

ಇವೆಲ್ಲಾ ಚಂದ ಅಂದರೆ ಚಂದ, ಅಲ್ಲ ಅಂದರೆ ಅಲ್ಲ. ಆದರೆ ಆವರಿಸುವ ಸಂಗತಿಗಳೆನ್ನುವುದು ಮಾತ್ರ ತಪ್ಪಿಸಿಕೊಳ್ಳಲಾಗದ ದಿಟ.

ಜೇನ್ನೊಣದ ಝೇಂಕಾರದಂತೆ ದೂರದ ಮೋಟರ್‌ವೇನಲ್ಲಿ ಯಾವು ಯಾವುದೋ ಮನೆಗಳಿಂದ ಗಡಿಬಿಡಿಯಲ್ಲಿ ಕೆಲಸಕ್ಕೆ ಹೊರಟವರ ಕಾರುಗಳು ಅಂದೆನಲ್ಲ. ಅದರಲ್ಲಿ ಕಣ್ಣುಜ್ಜಿಕೊಂಡು, ಬಿಸಿ ಕಾಫಿ ಕುಡಕೊಂಡು, ಪಕ್ಕದ ಕಾರವರನ್ನು ದಿಟ್ಟಿಸಿಕೊಂಡು ಹೊರಟ ನೂರಾರು, ಸಾವಿರಾರು ಮಂದಿ ಕಾರ್ಮಿಕರು. ಅಂಗಳದ ಹುಲ್ಲಿನ ಇಬ್ಬನಿಗೆ ಸುದ್ದಿ ಒದ್ದೆಯಾಗದಂತೆ ಪ್ಲಾಸ್ಟಿಕ್ ಸುತ್ತಿಕೊಂಡು ಬಿದ್ದಿರುವ ಕೊಳವೆಯಂಥ ಪೇಪರಿನ ಕಟ್ಟು. ಅದನ್ನು ಬೆಳಕು ಹರಿಯುವ ಮೊದಲೇ ಎಸೆದು ಹೋದವನು ಯಾರಿರಬಹುದು? ಆ ವ್ಯಕ್ತಿಯನ್ನು ನಾನು ನೋಡಿಯೇ ಇಲ್ಲವಲ್ಲ ಎಂಬ ಚಡಪಡಿಕೆ. ಸೋಮವಾರವೋ ಗುರುವಾರವೋ ಆದರೆ ಕಸ ಎತ್ತೊಯ್ಯುವ, ಅಥವಾ ಬೀದಿ ಗುಡಿಸುವ ಲಾರಿ ಅಂದೆನಲ್ಲ. ಅದರ ಡ್ರೈವರ್‍ ಕತ್ತಲಿರುವಾಗಲೇ ನಿದ್ದೆಯಲ್ಲಿರುವ ತನ್ನ ಮಕ್ಕಳನ್ನು ಮುತ್ತಿಟ್ಟು ಬೀಳ್ಕೊಟ್ಟು ಕೆಲಸಕ್ಕೆ ಬಂದಿರುವ ಒಬ್ಬ ತಂದೆ. ಹೀಗೆ ನಮ್ಮನ್ನು ಎಬ್ಬಿಸಲೋ ಅನ್ನುವಂತೆ ನಮ್ಮ ಸುತ್ತಲೂ ಹಬ್ಬಿ ಆವರಿಸುವ ಸದ್ದಿನ ಕಾಯಕಗಳು ಮತ್ತು ಅದರ ಹಿಂದಿನ ಮನಸ್ಸು-ದೇಹಗಳು.

ಇದ್ದಕ್ಕಿದ್ದ ಹಾಗೆ ಇಲ್ಲೂ ಒಂದು ದಿನ ಮುಂಜಾನೆ ದೂರದಲ್ಲಿ ಕೋಳಿ ಕೂಗಿತು. ಕಣ್ಣುಜ್ಜಿಕೊಂಡೆ. ಕೂಗು ಕೇಳಿದ್ದು ಎಲ್ಲಿ? ಸವಿಗನಸಿನೊಳಗ ಅಥವ ನಿಜದಲ್ಲ ಎಂದು ಇತ್ಯರ್ಥಮಾಡಿಕೊಳ್ಳಲು ಹೆಣಗಿದೆ. ಎಲ್ಲೋ ಮಲಗಿ ಎಲ್ಲೋ ಏಳುತ್ತಿದ್ದೇನೆಯೆ ಎಂಬ ಅನುಮಾನವನ್ನು ನೀಗಿಕೊಳ್ಳಲು ಹೆಣಗಿದೆ. ಕೊಯ್ದಿಟ್ಟಂತಿದ್ದ ಎರಡು ಜಗತ್ತು ಡಿಕ್ಕಿ ಹೊಡೆದಂತನಿಸತು. ಹೀಗನಿಸುವುತ್ತಿರುವದೇ ಕೊಯ್ದಿಡಲಾಗದ್ದು ಎಂದು ಸೂಚಿಸುತ್ತದೆ ಅಂತಲೂ ಅನಿಸಿತು.

ಅಂಥ ಯೋಚನೆಯಲ್ಲೇ ಮೆಲ್ಲನೆ ಪೂರ್ತಿ ಎಚ್ಚರವಾಗುತ್ತದೆ.

ಯಾವುದೋ ಪಕ್ಕದ ಬೀದಿಯ ಮನೆಯಲ್ಲಿ ಮಕ್ಕಳು ತಂದಿಟ್ಟುಕೊಂಡ ಕೋಳಿ ಇರಬೇಕು ಎಂದು ನಿದ್ದೆ ತಿಳಿದೆದ್ದಾಗ ಅರಿವಿಗೆ ಬರುತ್ತದೆ. ‘ಇದು ಬರಿ ಬೆಳಗಲ್ಲೋ ಅಣ್ಣ’ ತಲೆಯಲ್ಲಿ ಆಡುತ್ತದೆ. ಅಲ್ಲಿಯಾದರೂ ಅಷ್ಟೆ, ಇಲ್ಲಿಯಾದರೂ ಅಷ್ಟೆ.