ಭೈರವ

ಬೆಟ್ಟದ ತಪ್ಪಲಲಿ ಬಿರಬಿರ ನಡೆಯುತ್ತಿದ್ದೆ
ಅವನ
ದನಿ ಕೇಳುವ ಮೊದಲೇ ದಾಟಿಬಿಡುವೆನೆಂದು
ಹಾಡಿದರೆ ಭೈರವಾ
ನೀರಾಗದೆ ಸೈರಿಸಲಾರೆ ನಾ
“ಕಂಡೆ ಕಂಡೆ ಚಿತ್ತದೊಳಗೆ ಚಿತ್ರ”
ಆಹ್!
ಎದೆಗಿಳಿದು ಅಟ್ಟಾಡಿಸಿತು ಸೊಲ್ಲು
ಹಿಡಿದು ನಿಲ್ಲಿಸಿತು
ಜೀವಧನಿ
ಚೂಪುಗಣ್ಣಿನ ವಜ್ರ ನೋಟ
ಕಡೆದ ಮುಖದಲಿ ಜೀವರಸ
ಚಿತ್ತದೊಳಗೆ ಚಿತ್ರ
ಯೋಗವಲ್ಲ ವ್ಯಾಯಾಮವಲ್ಲ
ಜಿಮ್-ನಡಿಗೆಯಲ್ಲ
ಕನ್ನೆ ನೆಲದಲಿ ಧಿಮಿಧಿಮಿ ಕುಣಿವ
ಮಣ್ಣು ಮಿದ್ದುತ ಕಾಯ ಕಡೆಯುತ
ನೆಲದೊಳಗೆ ಬೇರಿಳಿಸಿ ಬಾನಿಗೆ ಹೆದೆ ಏರಿಸಿ
ಠೇಂಕರಿಸುವ ಬೆನ್ನುಹುರಿ
ಚಿತ್ತದೊಳಗೆ ಚಿತ್ರ
ನೀರು ಕೊರೆದ ಕಾರ್ಗಲ್ಲಿನ ಹೊಳೆಹೊಳೆವ
ಫಳಗುಡುವ ಕಟುದೇಹ
ಮಾಗಿಯ ಶೀತಕೆ ಸಡ್ಡು ಹೊಡೆವ ತೆರೆದೆದೆ
ನೆತ್ತಿ ಮೇಲಿಳಿದ ಸುಡು ಶಾಖ ಅಂಗಾಲಿಗಿಳಿದರೂ
ಕಾರ್ಗಾಲದ ಮಳೆ ಕೋಲಿನ ಹೊಡೆತಕೆ ಹುರಿಗಟ್ಟಿದ ಜೀವ
ಕಂಡೆ ಕಂಡೆ ಚಿತ್ತದೊಳಗೆ ಚಿತ್ರ
ತೆರೆದೆದೆಯ ಭೈರವ ತೋಳು ತೆರೆದು ನಸು ನಕ್ಕ
ಸೇರಿಕೊಳ್ಳುವ ಕಾತರ ನಾನೇರುತ್ತಿದ್ದೆ
ಸೇರಿಸಿಕೊಳ್ಳುವ ಆತುರ ಅವನಿಳಿಯುತ್ತಿದ್ದ..

 

ಅನುಪಮಾ ಪ್ರಸಾದ್ ಹೆಸರಾಂತ ಕಥೆಗಾರ್ತಿ ಮತ್ತು ಕವಯಿತ್ರಿ.
ಮೂಲತಃ ಉತ್ತರ ಕನ್ನಡದ ಶಿರಸಿಯವರು.ಈಗ ಕಾಸರಗೋಡಿನ ನೀರ್ಚಾಲಿನಲ್ಲಿ ವಾಸ.
ಜೋಗತಿ ಜೋಳಿಗೆ ಇವರ ಇತ್ತೀಚಿನ ಕಥಾ ಸಂಕಲನ.