ಎಷ್ಟು ಸರಳವಾದ ಪದಗಳನ್ನು, ಪೋಣಿಸುತ್ತಾ ತನ್ನ ನುಡಿ ರೂಪಕವನ್ನು ಕಟ್ಟಿಕೊಡುತ್ತಿದ್ದಾಳೆ ಈ ಲಲ್ಲಾ. ಹಕ್ಕಿ ಬೆಳಗಾದಾಗ ಗೂಡು ಬಿಟ್ಟು ತನ್ನ ನಿತ್ಯದ ಬದುಕಿಗಾಗಿ ಹೇಗೆ ತನ್ನ ರೆಕ್ಕೆಯನ್ನು ಮಾತ್ರ ನಂಬಿ ಹೋಗುತ್ತದೆಯೋ ಹಾಗೆ ಅಂತರಂಗದ ಗೆಳೆಯನನ್ನು ನಿನಗೆ ಬೇಕಾದ ಮಿತ್ರನನ್ನು ಹುಡುಕಿಕೋ ಎಂಬ ಸಾಲು ಅವಳ ಮನಸ್ಸಿನ ಹುಡುಕಾಟದ ತೀವ್ರತೆಯನ್ನು ತಿಳಿಸುತ್ತವೆ.
ಡಾ. ವಿಜಯಾ ಗುತ್ತಲ ಅನುವಾದಿಸಿದ ಕಾಶ್ಮೀರಿ ಕವಯತ್ರಿ ಲಲ್ಲಾ ದೇಡ್‌ ಕವಿತೆಗಳ ಸಂಗ್ರಹ ‘ಎಲ್ಲ ಎಲ್ಲೆ ಮೀರಿ’ ಕುರಿತು ಪದ್ಮಶ್ರೀ ಎಂ. ಬರಹ

 

‘ಎಲ್ಲಾ ಎಲ್ಲೆ ಮೀರಿ’ ಇದು ಡಾ.ವಿಜಯಾ ಗುತ್ತಲ ಅವರ ಅನುವಾದಿತ ಕೃತಿ. ಈ ಕೃತಿಯಲ್ಲಿ ಕಾಶ್ಮೀರಿ ಸಾಹಿತ್ಯದ ಮೊದಲ ಕವಯಿತ್ರಿ ಲಲ್ಲಾ ದೇಡ್ ಳ ಅಂತರಂಗದ ಅಭಿವ್ಯಕ್ತಿಗಳಿವೆ. ಹಿರಿಯ ವಿಮರ್ಶಕರಾದ ಡಾ. ಓ.ಎಲ್.ನಾಗಭೂಷಣಸ್ವಾಮಿಯವರ ಮೌಲಿಕವಾದ ಮುನ್ನುಡಿಯಲ್ಲಿ ಲಲ್ಲಾಳ ವಾಕ್ಕುಗಳ ರಚನೆಯ ಹಿನ್ನೆಲೆ ಮತ್ತು ಅವುಗಳ ಅಂತರಂಗದ ಶೋಧದ ಹೊಸ ದಿಕ್ಕುಗಳನ್ನು ಕಟ್ಟಿಕೊಟ್ಟಿದ್ದಾರೆ.

ಅನುಭಾವ ಸಾಹಿತ್ಯದಲ್ಲಿ ಕನ್ನಡದ ನಮ್ಮ ಅಕ್ಕಮಹಾದೇವಿಯನ್ನೇ ಹೋಲುವ ಲಲ್ಲಾಳ ವಿಚಾರಧಾರೆಗಳು ಹೊಸ ಅಧ್ಯಯನಕ್ಕೆ ಮತ್ತು ಹೊಸ ಓದಿಗೆ ಪ್ರೇರೇಪಿಸುತ್ತವೆ. ಈ ಕೃತಿಯ ಮುನ್ನುಡಿ ಮತ್ತು ವಿಸ್ತಾರವಾದ ಪ್ರಸ್ತಾವನೆಯು ಈ ಕೃತಿಯ ಪ್ರವೇಶಕ್ಕೆ ಮತ್ತು ಲಲ್ಲಾಳನ್ನು ಅರಿಯಲು ದೊರಕುವ ಆಕರಗಳಾಗಿವೆ. ಯಾವ ಕಾಲದಲ್ಲೂ ಹೆಣ್ಣೊಬ್ಬಳು ಅನುಭವಿಸುವ ಬದುಕಿನ ಧಾವಂತ ಸಂದಿಗ್ಧತೆಯ ಎಲ್ಲ ಎಲ್ಲೆಗಳನ್ನು ಮೀರಿ ನಡೆವ ಮತ್ತು ಕ್ರಮಿಸುವ ಹಾದಿ ಸುಲಭದ್ದೇನಲ್ಲ. ಸಮಾಜವೊಂದು ರೂಪಿಸಿಕೊಂಡ ನೀತಿಯ ಮಿತಿಯನ್ನು ವೈಯುಕ್ತಿಕವಾಗಿ ಮೀರುತ್ತಲೇ ಅಲ್ಲಿಯ ಅನುಭವಗಳನ್ನು ಭಾಷಿಕ ಪರಿಕರಗಳ ಮೂಲಕ ಜೀವಂತವಾಗಿಡುವ ಕೆಲಸ ಇಂಥ ವಿಶಿಷ್ಟ ಚೇತನಗಳಿಗೆ ಮಾತ್ರ ಸಾಧ್ಯವಾಗುವುದು.

1320-1392ರವರೆಗೆ ಬದುಕಿದ್ದ ಲಲ್ಲಾ ಮುಂದೆ ಬರುವ ಅನುಭಾವ ಪರಂಪರೆಯ ಹಲವರಿಗೆ ಪ್ರಭಾವಿಸಿದ ಪರಿಯನ್ನು ಗಮನಿಸಿದರೆ ಅಚ್ಚರಿ ಮೂಡಿಸುತ್ತದೆ. ಲಲ್ಲಾಳ ಅಂತರಂಗದ ವಿವೇಕಪೂರ್ಣ ಉಕ್ತಿಗಳು ಸರಳ ಮತ್ತು ಸುಂದರವಾದ ಅಭಿವ್ಯಕ್ತಿಯ ರೂಪಗಳಾಗಿವೆ. ಅಂತರಂಗದ ಹಂಬಲವೊಂದು ಕ್ರಮೇಣ ಗಟ್ಟಿಗೊಳ್ಳುತ್ತ ಒಂದು ಚೇತನವನ್ನು ಹೇಗೆ ವಿಶಿಷ್ಟವಾಗಿಸುತ್ತದೆ ಎಂಬುದಕ್ಕೆ ಲಲ್ಲಾಳ ಬದುಕು ಮಾದರಿಯಾಗಿ ಕಾಣುತ್ತದೆ. ಲಲ್ಲಾ ತನ್ನ 12ನೇ ವಯಸ್ಸಿಗೆ ಮದುವೆಯ ಬಂಧನಕ್ಕೆ ಕಟ್ಟುಬಿದ್ದವಳು. ಕುಟುಂಬದ ಕ್ರೌರ್ಯಗಳು ಅವಳನ್ನು ದೈಹಿಕವಾಗಿ ಹಿಂಸಿಸಿದರೂ ಮಾನಸಿಕವಾಗಿ ಗಟ್ಟಿಗೊಳಿಸಿದವು. ಬಹುಶಃ ಈ ಕ್ರೌರ್ಯಗಳೇ ಅವಳ ಅಂತರಂಗದ ಹಂಬಲವನ್ನು ತೀವ್ರವಾಗಿಸಿ ಅವಳಲ್ಲಿರುವ ಒಬ್ಬ ಕವಿಸಂತಳನ್ನು ರೂಪಿಸಿದವು ಎಂದರೆ ತಪ್ಪಾಗಲಾರದು.

(ಲಲ್ಲಾ ದೇಡ್‌)

ಅಂದಿನ ಸಂಪ್ರದಾಯದಂತೆ ಲಲ್ಲಾಳಿಗೆ 12ನೇ ವಯಸ್ಸಿನಲ್ಲಿ ಪಾಂಪೋರ ಎಂಬ ಊರಿನ ಯುವಕನೊಂದಿಗೆ ವಿವಾಹವಾಗುತ್ತದೆ. ಗಂಡನ ಮನೆಯಲ್ಲಿ ಅವಳ ಅತ್ತೆ ಮತ್ತು ಗಂಡ ಕ್ರೂರವಾಗಿ ನಡೆಸಿಕೊಂಡಿದ್ದರು ಎಂಬುದಕ್ಕೆ ಅನುವಾದಕರಾದ ಡಾ.ವಿಜಯಾ ಗುತ್ತಲ ಅವರು ಅನೇಕ ಉಲ್ಲೇಖಗಳಿವೆ ಎಂದು ಹೇಳುತ್ತಾರೆ. ಅವಳ ಅತ್ತೆ ಅವಳನ್ನು ಉಪವಾಸವಿಟ್ಟರೆ ಅವಳ ಗಂಡ ಅವಳ ಅಂತರಂಗದ ಆಧ್ಯಾತ್ಮದ ಒಲವನ್ನು ಅರ್ಥಮಾಡಿಕೊಳ್ಳದೆ ಸಂಶಯದ ಕಾರಣದಿಂದ ಅವಳನ್ನು ಹಿಂಸಿಸುತ್ತಿದ್ದ ಎಂಬುದನ್ನು ಓದಿದಾಗ ಕರುಳು ಚುರುಕ್ ಎನ್ನುತ್ತದೆ. ಅವಳ ಅತ್ತೆ ಅವಳ ಊಟದ ತಟ್ಟೆಯಲ್ಲಿ ಒಂದು ಕಲ್ಲುಗುಂಡು ಇಟ್ಟು ಅದರ ಮೇಲೆ ಅನ್ನ ಬಡಿಸಿ ನೋಡುವವರಿಗೆ ತಟ್ಟೆ ತುಂಬಾ ಅನ್ನ ಕಾಣುವಂತೆ ಮಾಡುತ್ತಿದ್ದಳಂತೆ. ಕೌಟುಂಬಿಕ ನೆಲೆಯಲ್ಲಿ ಹೆಣ್ಣಿನ ಕಷ್ಟಗಳ ಸಂಕಥನದ ವ್ಯಾಖ್ಯಾನಗಳು ಬೇರೆಬೇರೆಯಾದರು ಅವಳು ಅನುಭವಿಸುವ ಯಾತನೆ ಮಾತ್ರ ಒಂದೇ.

ಲಲ್ಲಾಳಂತೆ ಕುಟುಂಬದ ಕ್ರೌರ್ಯಗಳನ್ನು ಬಿಕ್ಕುತ್ತಲೇ ತಡೆದುಕೊಂಡಿರುವ ಅದೆಷ್ಟೋ ಹೆಣ್ಣು ಮಕ್ಕಳ ನೋವಿನ ವಾಕ್ಕುಗಳು ದಾಖಲಾಗದೆ ವ್ಯವಸ್ಥೆಯ ಕಾವಿಗೆ ಆವಿಯಾಗಿ ಹೋಗಿವೆ. ಕ್ರೌರ್ಯಗಳನ್ನು, ಹಿಂಸೆಗಳನ್ನು ಹೆಣ್ಣೊಬ್ಬಳು ಸಹಿಸುವುದಾದರೂ ಏಕೆ? ಎಂಬ ಪ್ರಶ್ನೆಗೆ ಉತ್ತರ ಏಕರೂಪಿಯಾಗಿ ಸಿಗಲಾರದು. ಹಾಗಾಗಿಯೇ ಏನೋ ಲಲ್ಲಾ ತನ್ನ 26 ನೆಯ ವಯಸ್ಸಿಗೆ ಗಂಡನ ಮನೆಯನ್ನು ತೊರೆದು ನಡೆದಳು. ಹಾಗೆ ಅವಳು ನಡೆದ ದಾರಿ ಸುಲಭದ್ದೇನೂ ಆಗಿರಲಿಕ್ಕಿಲ್ಲ ಎಂಬುದು ಸುಸ್ಪಷ್ಟ. ಜನರ ನಿಂದನೆ ಹೀಯಾಳಿಕೆಗಳು ಮತ್ತು ರೂಢಿಗತ ಸಂಪ್ರದಾಯದ ನೀತಿಗಳು ಯಾವೆಲ್ಲವೂ ಕೂಡ ಲಲ್ಲಾಳನ್ನು ವಿಚಲಿತಗೊಳಿಸಲಿಲ್ಲ 26ನೇ ವಯಸ್ಸಿಗೆ ಗಂಡನ ಮನೆಯನ್ನು ತ್ಯಜಿಸಿ ಹೋದ ಲಲ್ಲಾಳಿಗೆ ಶೈವ ಸಂತರಾದ ಸಿದ್ಧ ಶ್ರೀಕಾಂತರಲ್ಲಿ ಶಿಷ್ಯತ್ವ ದೊರಕಿತು. ಅಲ್ಲಿಂದ ಲಲ್ಲಾ ತನ್ನ ಅನುಭಾವದ ಸಾಧನೆಯ ಮಾರ್ಗದಲ್ಲಿ ಬರುವ ಎಲ್ಲಾ ಎಲ್ಲೆಗಳನ್ನು ಮೀರಿ ಒಬ್ಬ ಸಾಧಕಿಯಾಗಿ, ಸಂತಳಾಗಿ, ಅನುಭಾವ ಲೋಕದ ಯೋಗಿನಿಯಾಗಿ, ಅನುಭಾವಿ ಕವಿಯಾಗಿ ರೂಪುಗೊಳ್ಳುತ್ತಾಳೆ. ಮುಂದೆ ಲಲ್ಲಾಳ ವಿಚಾರಗಳು ಕಾಶ್ಮೀರಿ ಧಾರ್ಮಿಕ ಪರಂಪರೆಯನ್ನು ಬಹುವಾಗಿ ಪ್ರಭಾವಿಸಿರುವುದು ಈ ಕೃತಿಯ ಮೂಲಕ ತಿಳಿದುಬರುತ್ತದೆ.

ಜಾತಿ ಮತ ಧರ್ಮ ಎಲ್ಲ ಎಲ್ಲೆಗಳನ್ನು ಮೀರಿ ನಿಲ್ಲುವ ಅವಳ ವಾಕ್ಕುಗಳ ತಾತ್ವಿಕತೆಯು ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಲಲ್ಲಾಳ ಬದುಕಿನಷ್ಟೇ ಸಂಕೀರ್ಣತೆಯನ್ನು ಪಡೆದುಕೊಂಡಿವೆ. ಈ ಕೃತಿಯಲ್ಲಿನ ಲಲ್ಲಾಳ ಕೆಲವು ವಾಕ್ಕುಗಳು ಓದುಗರಿಗೆ ಸದಾ ಕಾಡುತ್ತಲೇ ಇರುತ್ತವೆ. ಈ ಕೃತಿಯ ಒಟ್ಟು 135 ವಾಕ್ಕುಗಳು ಒಂದಕ್ಕೊಂದು ಅದ್ಭುತವಾಗಿವೆ, ವಿಶಿಷ್ಟ ರಚನೆಗಳಾಗಿವೆ. ಅವಳು ಸರಳವಾದ ರೂಪಕಗಳನ್ನು ಬಳಸಿ ವಿಶೇಷ ಅರ್ಥವನ್ನು ಧಾರೆ ಎಳೆಯುತ್ತಾಳೆ. ಇಲ್ಲಿಯ ಪ್ರತಿ ವಾಕ್ಕುಗಳು ಅವಳ ಬದುಕಿನ ಅನುಭವಗಳನ್ನು ತೆರೆದಿಡುತ್ತಲೇ ಲಲ್ಲಾ ಏರಿದ ಸಾಧನೆಯ ಮಾರ್ಗವನ್ನು ನಮಗೆ ಪರಿಚಯಿಸುತ್ತವೆ.

ನೇರ ಮತ್ತು ನಿರ್ಭಿಡೆಯ ಅವಳ ನುಡಿಗಳು ಅವಳು ಬದುಕಿದ ರೀತಿಗೆ ಕನ್ನಡಿ ಹಿಡಿದಿವೆ. ತನ್ನ 26ನೇ ವಯಸ್ಸಿಗೆ ಮನೆ ಬಿಟ್ಟು ಹೊರಟ ಲಲ್ಲಾ ತನ್ನ ಅಂತರಂಗದ ಮಿತ್ರನನ್ನು ಹುಡುಕುವ ಪರಿ, ಮನಸ್ಸಿಗೆ ಸದಾ ಎಚ್ಚರಿಸುವ ರೀತಿ ಹೀಗೆ ಅವಳ ಒಂದು ವಾಕ್ಕಿನಲ್ಲಿ ನಿರೂಪಿಸುತ್ತಾಳೆ.

“ಸೋಮಾರಿ ಎದ್ದೇಳು
ಹೊರಡು ಬೆಳಗಾಗಿದೆ
ಹುಡುಕು
ಅನನ್ಯ ಗೆಳೆಯನ
ನಿನ್ನ ರೆಕ್ಕೆಗಳ ಬಿಚ್ಚಿ
ಹಾರುತ್ತ ಹೋಗು ಬೇಗ ಬೆಳಗಾಗಿದೆ ಹುಡುಕು ಆ ಪರಮಮಿತ್ರನ “.

ಎಷ್ಟು ಸರಳವಾದ ಪದಗಳನ್ನು, ಪೋಣಿಸುತ್ತಾ ತನ್ನ ನುಡಿ ರೂಪಕವನ್ನು ಕಟ್ಟಿಕೊಡುತ್ತಿದ್ದಾಳೆ ಈ ಲಲ್ಲಾ. ಹಕ್ಕಿ ಬೆಳಗಾದಾಗ ಗೂಡು ಬಿಟ್ಟು ತನ್ನ ನಿತ್ಯದ ಬದುಕಿಗಾಗಿ ಹೇಗೆ ತನ್ನ ರೆಕ್ಕೆಯನ್ನು ಮಾತ್ರ ನಂಬಿ ಹೋಗುತ್ತದೆಯೋ ಹಾಗೆ ಅಂತರಂಗದ ಗೆಳೆಯನನ್ನು ನಿನಗೆ ಬೇಕಾದ ಮಿತ್ರನನ್ನು ಹುಡುಕಿಕೋ ಎಂಬ ಸಾಲು ಅವಳ ಮನಸ್ಸಿನ ಹುಡುಕಾಟದ ತೀವ್ರತೆಯನ್ನು ತಿಳಿಸುತ್ತವೆ. ಆರಂಭದಲ್ಲಿಯೇ ಬರುವ “ಸೋಮಾರಿ ಎದ್ದೇಳು ಹೊರಡು ಬೆಳಗಾಗಿದೆ”

ಲಲ್ಲಾಳ ಅಂತರಂಗದ ವಿವೇಕಪೂರ್ಣ ಉಕ್ತಿಗಳು ಸರಳ ಮತ್ತು ಸುಂದರವಾದ ಅಭಿವ್ಯಕ್ತಿಯ ರೂಪಗಳಾಗಿವೆ. ಅಂತರಂಗದ ಹಂಬಲವೊಂದು ಕ್ರಮೇಣ ಗಟ್ಟಿಗೊಳ್ಳುತ್ತ ಒಂದು ಚೇತನವನ್ನು ಹೇಗೆ ವಿಶಿಷ್ಟವಾಗಿಸುತ್ತದೆ ಎಂಬುದಕ್ಕೆ ಲಲ್ಲಾಳ ಬದುಕು ಮಾದರಿಯಾಗಿ ಕಾಣುತ್ತದೆ.

ಎನ್ನುವಲ್ಲಿ ಒಂದು ರೀತಿಯ ಆಜ್ಞಾ ಧೋರಣೆಯನ್ನು ಅಭಿವ್ಯಕ್ತಿಸುತ್ತವೆ. ಎದ್ದೇಳು, ಹೊರಡು, ಹುಡುಕು, ಹೋಗು ಬೇಗ ಎಂಬ ಕ್ರಿಯಾವಾಚಿಗಳು ಅಂತರಂಗದ ಗುರಿ ಸಾಧನೆಯ ಭಾವತೀವ್ರತೆಯನ್ನು ಸ್ಪಷ್ಟಪಡಿಸುತ್ತವೆ.

ಅನನ್ಯ ಮತ್ತು ಪರಮ ಎಂಬ ಎರಡು ವಿಶೇಷಣ ಪದಗಳು ಹುಡುಕಬೇಕಾದ ಆ ಮಿತ್ರನ ವಿಶಿಷ್ಟತೆಯನ್ನು ಉತ್ಕೃಷ್ಟ ಗುಣಸ್ವಭಾವಗಳ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸುತ್ತವೆ. ಈ ಜಗತ್ತಿನಲ್ಲಿ ಅನನ್ಯವಾದದ್ದು ಮತ್ತು ಪರಮವಾದದ್ದು ಬಹುಬೇಗ ಲಭ್ಯವಾಗುವುದಿಲ್ಲ. ಹಾಗಾಗಿ ರೆಕ್ಕೆ ಮೆಚ್ಚಿ ಮತ್ತೆ ಕತ್ತಲಾಗುವುದರೊಳಗೆ ಅಂದರೆ ಬದುಕು ಕೊನೆಯಾಗುವುದರೊಳಗೆ ನಿನ್ನ ಕೆಲಸವನ್ನು ನೀನೇ ಮಾಡಬೇಕು. ಹೇಗೆ ಹಕ್ಕಿ ತನ್ನ ಆಹಾರವನ್ನು ಹುಡುಕಲು ತನ್ನ ರೆಕ್ಕೆಗಳನ್ನು ಮಾತ್ರ ನಂಬಿದಂತೆ ನಿನಗೆ ಬೇಕಾದುದನ್ನು ಪಡೆಯಲು ಪ್ರಯತ್ನದ ರೆಕ್ಕೆಗಳನ್ನು ಸದಾ ಚಾಚಿಕೊಂಡು ಹೋಗಬೇಕಾಗಿದೆ. ಸೋಮಾರಿತನ ಸಲ್ಲದು. ಬದುಕಿನಲ್ಲಿ ಗುರಿ ಮುಟ್ಟಲು ನಿರಂತರ ಪ್ರಯತ್ನ ಪಡುತ್ತಲೇ ಇರಬೇಕು. ಅದು ಲೌಕಿಕವೋ ಆಧ್ಯಾತ್ಮಿಕವೋ ಯಾವುದಾದರೂ ಸರಿ. ಒಂದು ಜಾಗೃತಾವಸ್ಥೆಯನ್ನು ಮನಸ್ಸು ಸದಾ ಹೊಂದಿರಬೇಕಾದ ಅಗತ್ಯತೆಯನ್ನು ಈ ವಾಕ್ಕು ಧ್ವನಿಸುತ್ತದೆ. ಹಾಗಾಗಿ ಇಡೀ ಈ ವಾಕ್ಕು ಒಂದು ನುಡಿರೂಪಕವಾಗಿ ಕಾಣಿಸುತ್ತದೆ. ಅರ್ಥದ ಹಲವು ಮಗ್ಗುಲುಗಳನ್ನು ನಮ್ಮ ಕಣ್ಮುಂದೆ ಕಟ್ಟುತ್ತದೆ. ಹೀಗೆ ಈ ವಾಕ್ಕು ಹೆಣ್ಣೊಬ್ಬಳು ತನ್ನ ಸುತ್ತಲೂ ಇರುವ ಮಿತಿಗಳನ್ನು, ಎಲ್ಲೆಗಳನ್ನು ಮೀರಿ ಗುರಿಯತ್ತ ಸಾಗಿದ ಪ್ರೇರಿತ ಬದುಕಿನ ಚಿತ್ರಣವನ್ನು ನಮಗೆ ಕಾಣಿಸುತ್ತದೆ.

ಮತ್ತೊಂದು ವಾಕ್ಕು ಲಲ್ಲಾಳ ಬದುಕಿನ ಪ್ರಕ್ರಿಯೆಯನ್ನು ಈ ಕೆಳಗಿನಂತೆ ಕಾಣಿಸುತ್ತದೆ. ಅವಳು ಹೇಳುತ್ತಾಳೆ-

“ನಾನು ಲಲ್ಲ, ಹತ್ತಿ ಹೂವಂತೆ ಅರಳಲು ಹೊರಟೆ
ಹತ್ತಿ ಬಿಡಿಸುವವ ನನ್ನ ಕಿತ್ತ
ಹತ್ತಿ ಹೊಡೆಯುವವ ಬಿಲ್ಲ ಮೇಲೆ ಹಾಕಿ ನನ್ನ ಹೊಡೆದ, ಹಿಂಜಿದ ಹತ್ತಿಯಾದೆ
ನೂಲುವಾಕೆ ನೂತಾಗ
ಮಗ್ಗಕ್ಕೇರಿಸಿದರು ನನ್ನ”.

ಇಡೀ ಈ ವಾಕ್ಕು ಬಟ್ಟೆ ನೇಯುವ ಅಥವಾ ನೇಕಾರಿಕೆಯ ಪ್ರಕ್ರಿಯೆಯ ಕಡೆಗೆ ನಮ್ಮ ಗಮನವನ್ನು ಕೇಂದ್ರೀಕರಿಸುತ್ತದೆ. ಆದರೆ ಹತ್ತಿ ಹೂವಾಗಿ ಅರಳಿ ಬಿಲ್ಲ ಮೇಲೆ ಹೊಡೆಸಿಕೊಂಡು ಹಿಂಜಿದ ಹತ್ತಿಯಾಗಿ ನೂಲುವಾಕೆ ನೂತಾಗ ಮಗ್ಗಕ್ಕೇರಿ ಸುಂದರ ವಸ್ತ್ರವಾಗುವ ಪ್ರಕ್ರಿಯೆ ಅವಳ ಬದುಕಿನ ಹಾದಿಯ ರೂಪಕವೇ ಆಗಿದೆ.

ಮತ್ತೊಂದು ವಾಕ್ಕಿನಲ್ಲಿ “ಸಾವಿರ ನಿಂದನೆಗಳ ಮಾಡಿದರೂ ಅವರು
ನನಗದರಿಂದ ನೋವಿಲ್ಲ ಶಿವನಿಗೆ ಒಲಿದವಳು ನಾನು ಬೂದಿ ಬಿತ್ತೆಂದು
ಕನ್ನಡಿ ಕೆಡುವುದೇ? ಬೂದಿಯಿಂದಲೇ ಅಲ್ಲವೇ ಕನ್ನಡಿ ಬೆಳಗುವುದು?”.

(ಡಾ. ವಿಜಯಾ ಗುತ್ತಲ)

ಯಾವ ಕಾಲಘಟ್ಟಕ್ಕೂ ಯಾರಿಗೂ ತಪ್ಪದ ನಿಂದನೆಯ ಮಾತುಗಳಿಗೆ ಒಬ್ಬ ಹೆಣ್ಣಾಗಿ ಲಲ್ಲಾ ದೃಢಾತ್ಮಳಾಗಿ ದಿಟ್ಟ ಉತ್ತರವನ್ನು ಆತ್ಮವಿಶ್ವಾಸದಿಂದಲೇ ಕಂಡುಕೊಂಡವಳು. ಅಕ್ಕನ “ಬೆಟ್ಟದ ಮೇಲೊಂದು ಮನೆಯ ಮಾಡಿ” ವಚನವನ್ನು ಈ ಸಂದರ್ಭದಲ್ಲಿ ನೆನಪಿಸುತ್ತದೆ. ಲಲ್ಲಾಳಿಗೆ ಶಿವನೊಲುಮೆಯಾಯಿತೋ ಇಲ್ಲವೋ ಗೊತ್ತಿಲ್ಲ ಆದರೆ ಅವಳೇ ಶಿವನಿಗೊಲಿದು ಕನ್ನಡಿಯಂತೆ ಅಂತರಂಗದ ಒಳ-ಹೊರಗುಗಳಲ್ಲಿ ಶುದ್ಧವಾದಳು. ಎಲ್ಲರಂತೆ ಸಹಜವಾಗಿ ಬದುಕುವ ಅವಕಾಶವೊಂದನ್ನು ಸುತ್ತಲ ಲೋಕವೊಂದು ಕೊಡದಾದಾಗ ಅದಕ್ಕೆ ಪ್ರತಿಯಾಗಿ ಅಂತರಂಗದಲ್ಲಿ ತನ್ನದೇ ಆದ ಹೊಸದಾದ ಭಾವನಾ ಲೋಕವನ್ನು ಸೃಷ್ಟಿ ಮಾಡಿಕೊಂಡಳು ಲಲ್ಲಾ. ಈ ಲೋಕದ ಅಪರಿಮಿತವಾದ ಎಲ್ಲ ಎಲ್ಲೆಗಳನ್ನು ಮುರಿಯುತ್ತಾ ಅವುಗಳನ್ನು ತನ್ನ ಆಧ್ಯಾತ್ಮದ ಹಾದಿಯಲ್ಲಿ ಹಾಸುಗಲ್ಲಾಗಿಸಿಕೊಂಡು ಮೆಟ್ಟಿ ನಡೆದವಳು. ಅವಳು ನಡೆದ ಹಾದಿಯಲ್ಲಿ
“ಒಳಿತು ಬರಲಿ
ಕೆಡುಕು ಬರಲಿ
ಕಿವಿಯಿಂದ ಕೇಳೆನು
ಕಣ್ಣಿಂದ ಕಾಣೆನು ನನ್ನೊಳಗೊಂದು
ಧ್ವನಿ ನುಡಿದಿದೆ
ನನ್ನೆದೆಯ ದೀಪ ಬಿರುಗಾಳಿಯಲ್ಲೂ
ಕದಲದೆ ಬೆಳಗಿದೆ”.

ಎಂದು ಹೇಳುವಲ್ಲಿ ಬದುಕಿನ ಎಂಥ ಬಿರುಗಾಳಿಯಲ್ಲೂ ಕದಲದೇ ಬೆಳಗುವ ದೀಪವನ್ನು ತನ್ನಂತರಂಗದಲ್ಲೇ ಬೆಳಗಿಸಿ ಕೊಂಡ ಲಲ್ಲಾ ತನ್ನ ಮಾಕ್ಕುಗಳ ಮೂಲಕ ಮಹಾ ಬೆಳಕಾಗಿ ಕಂಗೊಳಿಸುತ್ತಾಳೆ.

“ಅಲ್ಲಿ ಮಾತಿಲ್ಲ
ಮಥನವಿಲ್ಲ
ಲೌಕಿಕವಿಲ್ಲ
ಅಲೌಕಿಕವಿಲ್ಲ
ಮೌನವೂ
ವ್ರತವೂ
ಅಲ್ಲಿಗೆ ತಲುಪಿಸಲಾಗದು
ಶಿವ-ಶಕ್ತಿಯರು ಉಳಿದರು ಹಿಂದೆ ಎಲ್ಲದರ ಆಚೆಯ ಅತೀತ ಎಲ್ಲಾ ಎಲ್ಲೆ ಮೀರಿ
ಎಲ್ಲಾ ತತ್ವಗಳ ಆಚೆ
ಅದು”.
ಎನ್ನುತ್ತಾ ಸಾಗಿದ ಲಾಲ್ ದೇಡ್ ಮತ್ತೆ ಮತ್ತೆ ಕಣ್ಣ ಮುಂದೆ ಅಕ್ಕ ನೊಟ್ಟಿಗೆ ಕೈಹಿಡಿದು ಹೆಜ್ಜೆ ಇಟ್ಟಂತೆ ಭಾಸವಾಗುತ್ತದೆ. ಎಲ್ಲಿಯ ಅಕ್ಕ ಎಲ್ಲಿಯ ಲಲ್ಲಾ! ಆದರೆ ಹೆಣ್ಣು ಬದುಕಿನ ಸಂಕೀರ್ಣತೆಯ ಚಹರೆಗಳನ್ನು ಮೀರುತ್ತಲೇ ಅದಕ್ಕೆ ಪ್ರತಿಯಾಗಿ ಹೊಸ ಹಾದಿಯನ್ನು ಕಟ್ಟಿಕೊಂಡು ಸಾಗಿ ಹೆಜ್ಜೆ ಇಟ್ಟಲ್ಲೆಲ್ಲ ಕಲ್ಲುಮುಳ್ಳುಗಳ ಸುಂದರ ಯಾತನೆಗಳನ್ನ ಅನುಭವಿಸಿದ ಇಂತಹ ಚೇತನಗಳು ಕಾಲದ ಯಾವುದೋ ಒಂದು ಬಿಂದುವಿನಲ್ಲಿ ಸಮೈಕ್ಯಗೊಳ್ಳುವುದು ನಮಗಿಲ್ಲಿ ಗೋಚರವಾಗುತ್ತದೆ.

ಒಟ್ಟಿನಲ್ಲಿ ಓದಿದಂತೆಲ್ಲ ಮತ್ತೆ ಮತ್ತೆ ಕಾಡುತ್ತಲೇ ಇರುವ ಅದ್ಭುತವಾದ ಅನುವಾದವನ್ನು (ಇದನ್ನು ಅನುವಾದವೆಂದು ಹೇಳಲಾಗದಷ್ಟು ಮಟ್ಟಿಗೆ ಸೋಪಜ್ಞತೆಯಿಂದ ಕೂಡಿದೆ) ನಮ್ಮ ಕನ್ನಡದ ಸಹೃದಯರಿಗೆ ನೀಡಿದ್ದಕ್ಕೆ ಡಾ.ವಿಜಯ ಗುತ್ತಲ ಅವರಿಗೆ ಅನಂತ ಧನ್ಯವಾದಗಳು..

(ಕೃತಿ: ಎಲ್ಲ ಎಲ್ಲೆ ಮೀರಿ, ಮೂಲ: ಲಲ್ಲಾ ದೇಡ್‌, ಅನುವಾದ: ಡಾ. ವಿಜಯಾ ಗುತ್ತಲ, ಪ್ರಕಾಶಕರು: ಸಂಗಾತ ಪುಸ್ತಕ, ಬೆಲೆ: 100/-)