ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….! ಎಂದು ಸುಳ್ಳುಗಳಿಂದಲೇ ತನ್ನನ್ನು ರಕ್ಷಿಸಿಕೊಳ್ಳಲು ಹವಣಿಸುವುದು ಮನುಷ್ಯನ ಸಹಜ ಗುಣಕ್ಕೆ ಹಿಡಿದಿರುವ ಕನ್ನಡಿಯಾಗಿದೆ.
ಕೆ.ವಿ. ತಿರುಮಲೇಶರ “ಅನೇಕ” ಕಾದಂಬರಿಯ ಕುರಿತು ಸುಮಾವೀಣಾ ಬರಹ

ಕೆ ವಿ. ತಿರುಮಲೇಶರ ಇನ್ನೊಂದು ಮಹತ್ವದ ಮನುಕುಲದ ವೈರುಧ್ಯಗಳನ್ನು ಧ್ವನಿಸುವ ಕಾದಂಬರಿ ಎಂದರೆ ಅನೇಕ. ಕಾದಂಬರಿಯ ನಾಯಕನ ಹೆಸರೇ ಅನೇಕ. ಈತ ದ್ವೀಪವಾಸಿ. ದ್ವೀಪದಲ್ಲಿ ಏಕಾಂಗಿಯಾಗಿ ಇದ್ದು ಅವನ ಮನಸ್ಸು ಹಾಗು ಬುದ್ಧಿ ಎರಡೂ ಬಂಧಿಯಾಗಿದ್ದುವೇ? ಏಕೆ ಹೀಗೆ? ಎಂಬ ಪ್ರಶ್ನೆಗಳು ಕಾಡುತ್ತವೆ. ಏಕವ್ಯಕ್ತಿಯಾದರೂ ಬದುಕಿನ ಅನೇಕ ಪರಿಪ್ರೇಕ್ಷಗಳನ್ನು ಒಟ್ಟಿಗೆ ಕ್ರಿಯೆಯಲ್ಲಿ ಹೇಳುವ ಪಾತ್ರ ‘ಅನೇಕ’; ಕಾದಂಬರಿಯ ಪುಟ ಸಂ. 2-3 ರಲ್ಲಿ ಬರುವ “ನಂತರ ಅವನು ಮತ್ತೆ ಅದೇ ತಾಣಕ್ಕೆ ಹೋಗಿ ನೋಡಿದಾಗ ಅಣಬೆಗಳೆಲ್ಲಾ ಬಿಸಿಲಲ್ಲಿ ಒಣಗಿ ಬೂದು ಬಣ್ಣಕ್ಕೆ ತಿರುಗಿದ್ದವು. ಯಾವ ಪ್ರಾಣಿಗಳು ತನ್ನು ಗೊಡವೆಗೆ ಹೋಗದಿರುವಾಗ ತಾನೇಕೆ ತಿನ್ನುವ ಚಪಲ ತೋರಿಸಿದೆ” ಎಂದು ತನಗೇ ಕೇಳಿಕೊಳ್ಳುವ ವಾಕ್ಯ “ಪ್ರಾಣಿಗಳೆ ಮನುಷ್ಯನಿಗೆ ಗುರು” ಎಂಬುದನ್ನು ಸಾಬೀತು ಮಾಡುತ್ತವೆ. ಕ್ರೌರ್ಯ ಅಪರಾಧವಲ್ಲ ನಮ್ಮನ್ನು ರಕ್ಷಣೆ ಮಾಡಿಕೊಳ್ಳುವ ಪರಿ ಎಂಬುದನ್ನು ಅನೇಕ ಹಾವು ಮುಂಗುಸಿಯ ಹೋರಾಟದಲ್ಲಿ ಕಲಿತಿರುತ್ತಾನೆ. ಇಲ್ಲಿ ಲಾಭದ ಹೋರಾಟ ಅಲ್ಲವೇ ಅಲ್ಲ, ಅಸ್ತಿತ್ವದ ಹೋರಾಟ ಎಂಬುದು ಸತ್ಯ. ಕೆಲವೊಮ್ಮೆ ಬೇಟೆಯಾಡುವುದನ್ನೂ ಕಲಿತ ಎಂಬುದು ಬದುಕಿಗೆ ಇರಬೇಕಾದ ಕಟ್ಟುಜಾಣ್ಮೆಯನ್ನು ಕುರಿತು ಹೇಳುವಂಥದ್ದಾಗಿದೆ.

ಮಾತನಾಡಬೇಕು ಅನ್ನಿಸುತ್ತದೆ ಏನನ್ನೋ ಹೇಳಬೇಕು ಅನ್ನಿಸುತ್ತದೆ. ಬಂಡೆಯನ್ನೇರಿ ಆದರೆ ಯಾರಿಗೆ? ಎಂಬುದು ಒಂಟಿತನ ಕ್ರೂರ, ಮತ್ತು ವಿಚಿತ್ರ ಎಂಬ ಸತ್ಯದ ಅರಿವು ಮೂಡಿಸುತ್ತದೆ. ಇಲ್ಲಿ ಆಮೆಯನ್ನು ಹಿಡಿದ ಎನ್ನುವುದೂ ಪ್ರತಿಮೆಯೇ! ದೀರ್ಘಕಾಲ ಬದುಕಬಲ್ಲ ಆಮೆಯನ್ನು ಹಿಡಿದ “ಅನೇಕ” ಅದೇಕೆ ಮನುಷ್ಯಾಕೃತಿಯನ್ನು ಕಂಡಾಗ ಬದುಕಿಸಬೇಕೆನ್ನಿಸಿತು? ಬೆಂಕಿ ಮಾಡಿ ಅವನ ಚಳಿಯನ್ನು ಹೋಗಲಾಡಿಸಬೇಕೆನ್ನಿಸಿತು… ಅವನ ಎದೆ ಸೇರಿದ್ದ ನೀರನ್ನು ಹೊರತೆಗೆಯಬೇಕಾಗಿತ್ತು ಎಂಬ ಪ್ರಶ್ನೆಗಳು ಮನುಷ್ಯ ಕರುಣಾಮಯಿಯೂ ಹೌದು ಅನ್ನಿಸುತ್ತದೆ. ಆದರೆ ನಿರ್ಜೀವಿಯಂತೆ ಬಿದ್ದಿದ್ದ ವಿಶಾಲ ಎಂಬ ಅನೇಕ ಕಾದಂಬರಿಯ ಪಾತ್ರ ಅದನ್ನು ಅರ್ಥ ಮಾಡಿಕೊಳ್ಳಲಿಲ್ಲ. ಮನುಷ್ಯ ನರಭಕ್ಷಕ, ರಾಕ್ಷಸ… ಕ್ರೂರಿ ಎಂಬ ಪೂರ್ವಾಗ್ರಹ ಪೀಡಿತ ಮನಸ್ಸನ್ನಿರಿಸಿಕೊಂಡು ಈ ಕ್ಷಣ ಅಲ್ಲದೇ ಇದ್ದರೆ ಮರುಕ್ಷಣ ಈತ ನನ್ನ ಮೇಲೆ ಹಲ್ಲೆ ಮಾಡುತ್ತಾನೆ ಎಂದು ಮನಸ್ಸಿನಲ್ಲೇ ಹೋರಾಟಕ್ಕೆ ಸಿದ್ಧನಾಗಿರುತ್ತಿದ್ದುದು ಅದೇ ಮನುಷ್ಯನ ಸಂಕುಚಿತತೆಯನ್ನು ಹೇಳುತ್ತದೆ. ಇಲ್ಲಿ ಕಾದಂಬರಿಕಾರರು ಏಕಕಾಲಕ್ಕೆ ಮನುಷ್ಯನ ವ್ಯಕ್ತಿತ್ವದ ಅಗಾಧತೆಯನ್ನೂ ಸಂಕುಚಿತತೆಯನ್ನು ಒಂದೇ ಚೌಕಟ್ಟಿನಲ್ಲಿ ಒದಗಿಸಿಕೊಡುತ್ತಿರುವುದು ವಿಶೇಷವೆ!

ವಿಶಾಲ ಹೆಸರಿನ ಪಾತ್ರ ಅಸೌಖ್ಯದ ಪರಿಸ್ಥಿತಿಯಲ್ಲು ಬೆಲ್ಟ್‌ನಲ್ಲಿ ಇರಿಸಿಕೊಂಡಿದ್ದ ಚೂರಿಯನ್ನು ನೆನಪು ಮಾಡಿಕೊಳ್ಳುವುದು “ಹೆಣ ಶೃಂಗಾರವರಿಯದು” ಎಂಬ ಮಾತನನ್ನು ನೆನಪಿಸುತ್ತದೆ. ಆತ ಅದ್ಯಾವುದೋ ವ್ಯಾಪಾರಿಗಳ, ಏಜೆಂಟರುಗಳ ವ್ಯೂಹಕ್ಕೆ ಸಿಲುಕಿ ಕಡೆಗೆ ತಪ್ಪಿಸಿಕೊಂಡು ಅನೇಕ ಇದ್ದ ದ್ವೀಪದ ಬುಡಕ್ಕೆ ಬಂದು ಬೀಳುತ್ತಾನೆ.. ಕಾಮಾಲೆ ಕಣ್ಣಿಗೆ ಕಾಣುವುದು ಹಳದಿಯೇ ಎಂಬ ಮಾತು ನೆನಪಿಗೆ ಬರುತ್ತದೆ. ನೀರನ್ನು ಕೊಟ್ಟಾಗ ಕುಡಿದವನು ಆಹಾರವನ್ನು ಆತ ಕೊಟ್ಟಾಗ ಅದನ್ನು ಅಪನಂಬಿಕೆಯಿಂದಲೇ ನೋಡುತ್ತಾನೆ.

ಇಲ್ಲಿ ತಿರುಮಲೇಶರು ನೆಪೋಲಿಯನ್ನನ ಯುದ್ಧ ರೀತಿಯನ್ನು ಕುರಿತು ಮಾಹಿತಿ ನೀಡುತ್ತಾರೆ. ಅದೇನೆಂದರೆ ವೈರಿಯನ್ನು ನಾನೇ ಮೊದಲು ಆಕ್ರಮಿಸಬೇಕು ವೈರಿಯೇ ಮೊದಲು ಆಕ್ರಮಿಸುವವರೆಗೂ ಕಾಯಬಾರದು ಎಂಬುದಾಗಿ. ವಿಶಾಲ ತನ್ನಲ್ಲಿದ್ದ ಚೂರಿಯನ್ನು ಅನೇಕನ ಮೇಲೆ ಬಲಪ್ರಯೋಗ ಮಾಡಿ ಬಿಡುತ್ತಾನೆ. ಆಯುಧಗಳು ಕೊಲ್ಲುವುದಕ್ಕೆ ಅಲ್ಲ ಆತ್ಮ ರಕ್ಷಣೆಗೆ ಎಂಬ ಮಾತು ಇಲ್ಲಿ ಸಹಜವಾಗಿ ಬಂದಿವೆ. ತನ್ನಲ್ಲಿ ಚಾಕು ಇದೆ ಎಂದು ಹೇಳದ ವಿಶಾಲ ಆ ಚಾಕು ಮೊಲವನ್ನು ಭೇಟೆಯಾಡಲು ವಿಫಲವಾಗಿ ಕಳೆದುಹೋದಾಗ ಅದರ ಬಗ್ಗೆ ಪ್ರಸ್ತಾಪಿಸಲು ಪ್ರಯತ್ನ ಮಾಡುತ್ತಾನೆ, ಅನೇಕನ ಬಳಿಯೂ ಕಲ್ಲಿನಿಂದ ಮಾಡಿದ ಚೂಪಾದ ಆಯುಧವಿರುತ್ತದೆ. ಇಲ್ಲಿ ಆಯುಧಗಳು ಹರಿತವಾಗಿವೆ ಆದರೆ ಮನುಷ್ಯನ ನಡವಳಿಕೆಯೂ ಹಾಗೆಯೇ ಅಲ್ಲವೆ! ಕೆಲವೊಮ್ಮೆ ಧನಾತ್ಮಕ, ಕೆಲವೊಮ್ಮೆ ಋಣಾತ್ಮಕ ಎಂಬುದನ್ನು ಓದುಗರು ಅಧ್ಯಾಹಾರ ಮಾಡಿಕೊಳ್ಳಬಹುದು.

ಕಾದಂಬರಿಯ ಪ್ರಮುಖಘಟ್ಟ ಅನೇಕ ಹಾಗು ವಿಶಾಲನ ನಡುವೆ ನಡೆಯುವ ಸಂಭಾಷಣೆ. ಅವರಿಬ್ಬರೂ ಪರಸ್ಪರ ಮಾತನಾಡುವಾಗ “ನಾಗರಿಕ ಸಮಾಜದಿಂದ ಎಷ್ಟು ವರ್ಷ ಹೀಗೆ ಇದ್ದೆ ಎನ್ನುವುದಕ್ಕಿಂತ ಇನ್ನೂ ಎಷ್ಟು ವರ್ಷ ಹೀಗೆ?” ಎಂಬ ಮೌಲ್ಯಯುತವಾದ ಪ್ರಶ್ನೆಗೆ ಬಂದು ಆಲೋಚನಾ ಬಂಧಿಯಾಗುತ್ತದೆ ಪರಿವರ್ತನೆ, ಸುಧಾರಣೆ ಬದಲಾವಣೆ ಬೇಕಿಲ್ಲವೇ ನಿರಂತರ ನಿಂತ ನೀರಿನಂತೆಯೇ ಹಾಗಿದ್ದರೆ ಎಂಬ ಜಿಜ್ಞಾಸೆಯನ್ನು ಹೊರಹಾಕುತ್ತದೆ. “ಉಪಯೋಗಿಸಿದ ಮೇಲೆ ನಂದಿಸಬೇಕು ಎಂಬ ಮಾತು ಇಲ್ಲಿ ಬೆಂಕಿಯನ್ನು ಕುರಿತು ಹೇಳಿರುವುದಾದರೂ ಬಳಸಿದ ವಸ್ತುಗಳನ್ನು ಎಸೆಯುವಂತೆ ಮನುಷ್ಯ ಅವಶ್ಯಕತೆ ತೀರಿದ ಬಳಿಕ ಎಂಥವರನ್ನೂ ವರ್ಜಿಸುತ್ತಾನೆ ಎಂಬ ಸತ್ಯವನ್ನು ಪರಾಮರ್ಶಿಸುವಂತೆ ಮಾಡುತ್ತದೆ.

ಯಾರೂ ಇಲ್ಲದೇ ಇರುವ ಸ್ಥಳದಲ್ಲಿ ತನ್ನದೇ ಹೆಜ್ಜೆಯನ್ನು ಇನ್ಯಾರದೋ ಎಂದು ನೋಡುವುದು ಒಂಟಿತನ ಸ್ಥಿರವಲ್ಲ ಕಷ್ಟ ಎಂಬುದನ್ನು ಅರ್ಥೈಸುತ್ತದೆ. ವಿಶಾಲ ಬದುಕಿನಲ್ಲಿ ಆಸೆ ಇರಿಸಿಕೊಂಡವನು ಇರುವ ಚಾಕುವಿನಲ್ಲಿಯೇ ಬೇಟೆಯಾಡುವ ಅಭ್ಯಾಸ ಪ್ರಾರಂಭಿಸುತ್ತಾನೆ ಪ್ರಯೋಗಕ್ಕೂ ಅಭ್ಯಾಸಬಲವಿರಬೇಕು ಎಂಬುದು ಇಲ್ಲಿ ಸಾಬೀತಾಗುತ್ತದೆ. ಅಂತರಾಷ್ಟ್ರೀಯ ಗುಪ್ತಚರ ಬಳಗದವನು ನಾನು ಹಾಗೆ….! ನಾನು ಹೀಗೆ….! ಎಂದು ಸುಳ್ಳುಗಳಿಂದಲೇ ತನ್ನನ್ನು ರಕ್ಷಿಸಿಕೊಳ್ಳಲು ಹವಣಿಸುವುದು ಮನುಷ್ಯನ ಸಹಜ ಗುಣಕ್ಕೆ ಹಿಡಿದಿರುವ ಕನ್ನಡಿಯಾಗಿದೆ.

ಹೆಸರನ್ನು ಬದಲಾಯಿಸುವುದು ಅಸಾಧ್ಯ ಎಂಬುದು ನಂಬಿಕೆ ಆದರೆ ಇಟ್ಟುಕೊಂಡ ಹೆಸರನ್ನೂ ಸಮಯಾನುಸಾರ ಬದಲಾವಣೆ ಮಾಡಿಕೊಳ್ಳುವ ವೇಶ್ಯೆಯರ ಅಸಹಾಯಕತೆಯ ಪ್ರಸಂಗವೂ ಇಲ್ಲಿ ಬರುತ್ತದೆ. ಇದು ಮನರಂಜನೆಯಲ್ಲ ಬದಲಾಗಿ ನಮ್ಮನ್ನು ನಾವು ಅರ್ಥಮಾಡಿಕೊಳ್ಳಲು ಇರಬೇಕಾದ ಸೂಕ್ಷ್ಮ. ನಂತರ ಬರುವುದು ಯಾರ ಮೇಲೆ ಯಾರಿಗೆ ನಂಬಿಕೆ ಇರುವುದು ಗಂಡ -ಹೆಂಡಿರ, ಗಂಡ-ಹೆಂಡಿರ ಅಂದರೆ ಇಬ್ಬರು ಮಹಿಳೆಯರು ಇಬ್ಬರು ಪುರುಷರು ನಂಬಿಕೆಯ ಹೆಸರಿನಲ್ಲಿ ನಡೆಸುವ ಕೊಲೆ ಸಂಚು ಇಲ್ಲಿ ಕುತೂಹಲವಾಗಿ ಬರುತ್ತದೆ. ಶವದ ಪೆಟ್ಟಿಗೆಯಲ್ಲಿ ಒಬ್ಬರನ್ನೊಬ್ಬರು ಮಲಗಿಸುವುದು ಮರಳು ಮುಚ್ಚುವುದು, ಎದ್ದು ಬರುವುದು ಜೀವಂತವಾಗಿರುವುದು ಇದೇ ಪ್ರತ್ಯಯ ಎಂದು ವ್ಯಕ್ತಿಯೊಬ್ಬನನ್ನು ಬೇಕಂತಲೇ ಮರಳಲ್ಲಿ ಹೂತು ಅವನನ್ನು ಅಲ್ಲೇ ಬಿಟ್ಟು ಬಂದು ಮತ್ತೆ ಅವನ್ನು ತಿರುಗಿ ಎದ್ದು ಬಂದಾಗ ಏನೂ ಆಗದಂತೆ ವರ್ತಿಸುವುದು ವ್ಯಕ್ತಿ ವ್ಯಕ್ತಿಗಳ ನಡುವಿನ ತಿರಸ್ಕಾರದ ಪ್ರಾತ್ಯಕ್ಷಿಕೆ ಅನ್ನಿಸುತ್ತದೆ.

ಅನೇಕ ಕಾದಂಬರಿ ಬಂಧಿತವಾಗಿರುವುದೇ ಕಾದಂಬರಿಯ ಪುಟ ಸಂ 41 ರಲ್ಲಿ ಉಲ್ಲೇಖವಾಗಿರುವ ಪರಾಕ್ರಮ ಶಕ್ತಿ ಎಂಬ ಕತೆಯ ಮೇಲೆ ನಾವು ಯಾರನ್ನು ಕೊಲ್ಲುತ್ತೇವೆಯೋ ಅವರ ಶಕ್ತಿ ತಮಗೆ ಬರುತ್ತದೆ ಎಂಬ ಹುಚ್ಚು ನಂಬಿಕೆಯಿಂದಲೆ. ಅದನ್ನು ಹೇಳಿಕೊಟ್ಟ ದೇವರನ್ನೇ ಕಡೆಗೆ ಶಕ್ತಿಗೋಸ್ಕರ ಕೊಲ್ಲಲು ಹಿಂಬಾಲಿಸುವುದು ಅಸಂಗತತೆಯ ಛಾಯೆಯನ್ನು ದರ್ಶಿಸುತ್ತದೆ. ಮುಂದಿನ ಜನ್ಮದಲ್ಲಿ ರಾಜನಾಗುತ್ತೇನೆ ಎಂಬ ನಂಬಿಕೆಯಿಂದ ಕಳ್ಳನ ಸಾವಿಗೆ ಪರಿಹಾರ್ಯ ಸಾವು ಕಂಡುಕೊಳ್ಳುವ ಬೇಂದ್ರೆಯವರ ‘ಸಾಯೋ ಆಟ’ ನಾಟಕದ ಪಾತ್ರಗಳು ಇಲ್ಲಿ ನೆನಪಾಗುತ್ತವೆ.

ಅನೇಕನ ಜೊತೆ ವಿಶಾಲನಿಗೆ ಇರಲು ಸಾಧ್ಯವಾಗುವುದಿಲ್ಲ ಅವನೊಡನೆ ಹೊಂದಿಕೆ ಆಗುವ ಮನಸ್ಸು ಇರುವುದಿಲ್ಲ. ಅನೇಕ ಹಾಗಲ್ಲ ಅವನು ವಿಷಯುಕ್ತ ಕಾಯಿಗಳನ್ನು ತಿನ್ನಲು ಮನಸ್ಸು ಮಾಡಿದಾಗ ಅವನನ್ನು ತಡೆಯುತ್ತಾನೆ. ಆದರೆ ವಿಶಾಲ ಅವನ ವಿರುದ್ಧ ಆಕ್ರಮಣಕ್ಕೆ ಸಮಯ ಸಾಧಿಸುತ್ತಾನೆ. ಇನ್ನು ಹೆಚ್ಚು ಸಮಯ ಇಲ್ಲಿರಲು ಅಸಾಧ್ಯಎಂದು ತೀರ್ಮಾನಿಸಿ ಬೆಂಕಿಯನ್ನು ಮಾಡುತ್ತಾನೆ ಅದನ್ನು ಹೆಚ್ಚಿಸಿ ಹೆಚ್ಚಿಸಿ ಉರಿಯುವಂತೆ ಮಾಡುತ್ತಾನೆ ಕಡಲ ತುದಿಯಲ್ಲಿ ಇದ್ದ ಮರದ ಕೊರಡನ್ನು ಆಶ್ರಯ ಎಂದು ತಿಳಿದು ಅದನ್ನೇ ನಂಬುತ್ತಾನೆ. ಒಂದು ನಿರ್ಜೀವ ವಸ್ತುವನ್ನು ನಂಬುವಂತೆ ಮನುಷ್ಯ ಸಜೀವಿಗಳನ್ನು ಅರ್ಥಾತ್ ಸಹಜೀವಿಗಳನ್ನು ನಂಬದಿರಲು ಕಾರಣವೇನು? ಎಂಬುದು ಎಂದಿಗೂ ಪ್ರಶ್ನಾರ್ಥಕವೇ.

ಅನೇಕ ತಾನು ಹೊಡೆದ ಹಕ್ಕಿಯ ಮಾಂಸವನ್ನು ವಿಶಾಲನೊಂದಿಗೆ ಹಂಚಿಕೊಳ್ಳಲು ತೆರಳಿದಾಗಲೆ ಅವನು ನಾಪತ್ತೆಯಾಗಿರುವ ವಿಚಾರವೂ ತಿಳಿಯುತ್ತದೆ. ಕಡೆಗೆ ಅವನು ದ್ವೀಪದಲ್ಲಿ ಕಂಡ ಬೆಂಕಿಯನ್ನು ಗಮನಿಸಿದಾಗ ಬೆಂಕಿ ಹೊತ್ತಿಸುವ ತಯಾರಿಯಲ್ಲಿದ್ದ ವಿಶಾಲನ್ನು ನೆನಪಿಸಿಕೊಳ್ಳುತ್ತಾನೆ. ದ್ವೀಪದ ತುಂಬೆಲ್ಲಾ ಬೆಂಕಿ ಆವರಿಸುತ್ತದೆ. ಅಂದರೆ ಬೆಳಕು ಸಮುದ್ರದ ನೀರಿನಲ್ಲಿ ಬಣ್ಣದೋಕುಳಿಯನ್ನಾಡುವಂತೆ ಕಾಣುತ್ತದೆ. ಅದನ್ನೂ ಸಂಭ್ರಮಿಸುತ್ತಾನೆ. ಆದರೆ ಅವನಿಗೆ ಕಳೆದುಕೊಂಡ ಅನನ್ಯ ಜೀವರಾಶಿಗಳ ಬಗ್ಗೆ ಬೇಸರವಾಗುತ್ತದೆ. ಇನ್ನೆರಡು ದಿನ ಕಳೆದ ಬಳಿಕ ವಿಶಾಲ ದಡ ದಾಟದೆ ಅದೇ ದ್ವೀಪದ ಬುಡದಲ್ಲಿ ಹೆಣವಾಗಿ ಮೀನುಗಳ ಆಹಾರವಾಗಿ ಗೋಚರಿಸಿದಾಗ ಅನೇಕ ಅವನನ್ನು ಹಿಂದೆ ಜೀವ ಇದೆಯಾ ಎಂದು ನೋಡಿದಂತೆ ಇನ್ನೊಮ್ಮೆ ಪರೀಕ್ಷೆ ಮಾಡಲು ಹೋಗುವುದಿಲ್ಲ ಬದಲಾಗಿ ಆ ಶವವವನ್ನು ಹೊತ್ತುಕೊಂಡು ಇಡೀ ದ್ವೀಪಕ್ಕೆ ಕೊಡಬಹುದಾದ ಬಲಿಯಂತೆ ಬಯಲಿನಲ್ಲಿಯೇ ಇಡುತ್ತಾನೆ. ನಂಬಿಕೆ ಮೈಮರೆತರೆ ದುಸ್ಸಾಹಸ ಮಾಡಿದರೆ ಏನಾಗುತ್ತದೆ ಎಂಬುದನ್ನು ತಿರುಮಲೇಶರು ಎತ್ತುಗೆಗಳ ಮೂಲಕ ಇಲ್ಲಿ ಮಾರ್ಮಿಕವಾಗಿ ವಿವರಿಸಿದ್ದಾರೆ.

ಅನೇಕ ಕಾದಂಬರಿಯಲ್ಲಿ ಏಕ ಅನೇಕ ಪಾತ್ರಗಳು ಅನ್ನುವ ಹಾಗೆ ಇಲ್ಲ. ಬರುವುದೇ ಎರಡು ಪಾತ್ರಗಳು ಮನುಷ್ಯನ ಮನಸ್ಥಿತಿಯನ್ನು ಚುಟುಕಾಗಿ ನೇರವಾಗಿ ಹೇಳುವುದಕ್ಕೆ ಅಗತ್ಯದಷ್ಟೇ ಪಾತ್ರಗಳನ್ನು ಸೃಷ್ಟಿಮಾಡಿರುವುದು ತಿರುಮಲೇಶರ ನಿರಾಡಂಬರ ಹಾಗು ಸ್ಪಷ್ಟಗುಣಕ್ಕೆ ಉದಾಹರಣೆಯಾಗಿದೆ. ಒಂದು ಜಾಗರೂಕ ಇನ್ನೊಂದು ಅಜಾಗರೂಕ ಪಾತ್ರ ಸ್ವಾರ್ಥಕ್ಕೆ ಇಡೀ ದ್ವೀಪಕ್ಕೆ ಬೆಂಕಿ ಇಟ್ಟು ವ್ಯಕ್ತಿತ್ವ ದಹಿಸಿಕೊಂಡು ನೀರಲ್ಲಿ ಸತ್ತ ಪಾತ್ರ. ಅಸ್ತಿತ್ವ ಕಂಡುಕೊಳ್ಳಹೋಗಿ ಜೀವ ಕಳೆದುಕೊಂಡವನು. ತಾರ್ಕಿಕ ಚಿಂತನೆಯನ್ನು ಓದುಗರಿಗೆ ಬಿಡುವ ಈ ಕಾದಂಬರಿ ಸಾರ್ವಕಾಲಿಕವಾದದ್ದು.