“ಗುಂಪು ಕೂಡಿದಾಗ ಆ ಗುಂಪು ಮನೋಸ್ಥಿತಿಗನುಗುಣವಾಗಿ ವಿಪರೀತವಾಗಿ ವರ್ತಿಸುವ ಜನ ಸಹ ಒಬ್ಬೊಬ್ಬರೆ ಇರುವಾಗ ಅಂತಃಕರಣಿಗಳಾಗಿಯೇ ನಡೆದುಕೊಳ್ಳುವುದನ್ನು ಕಂಡಾಗ ನಾಳೆಗಳ ಬಗ್ಗೆ ಭರವಸೆ ಮೂಡುತ್ತದೆ. ಇಲ್ಲಿ ಟೋನಿ ಮತ್ತು ಯಾಸೆರ್ ಇಬ್ಬರಲ್ಲೂ ಮಾನವೀಯತೆ ಇದೆ, ಘನತೆ ಇದೆ. ಇಬ್ಬರಿಗೂ ಅವರ ವೈಯಕ್ತಿಕ ಜಗಳ ಸಮುದಾಯಗಳ ನಡುವಿನ ತಿಕ್ಕಾಟವಾಗುವುದು ಇಷ್ಟವಿಲ್ಲ, ಆದರೆ ಅದನ್ನು ಅವಮಾನವಾಗದ ರೀತಿಯಲ್ಲಿ ಹೇಗೆ ನಿಲ್ಲಿಸುವುದು ಎನ್ನುವುದು ಅರ್ಥವಾಗುವುದಿಲ್ಲ. ಅವರ ಮೂಲಭೂತವಾದ ಒಳ್ಳೆಯತನ ಕಾಲಾಂತರದಲ್ಲಿ ಮಾಗುತ್ತದೆ. ಕ್ಷಮೆ ಕೇಳುವುದೆಂದರೆ ಅದು ಸೋಲಲ್ಲ, ಎದುರಿನವನ್ನು ಗೌರವಿಸುವುದು ಎಂದು ಇಬ್ಬರಿಗೂ ಅರ್ಥವಾಗುತ್ತದೆ”
ಲೇಖಕಿ ಸಂಧ್ಯಾರಾಣಿ ಬರೆಯುವ ಲೋಕ ಸಿನೆಮಾ ಟಾಕೀಸಿನಲ್ಲಿ ಲೆಬನಾನ್ ದೇಶದ ಸಿನೆಮಾ ದಿ ಇನ್ಸಲ್ಟ್.’

 

‘ಇನ್ಸಲ್ಟ್’ ಅಪಮಾನದ ಆರಂಭ ಎಲ್ಲಿಂದ, ಎಲ್ಲಿಯವರೆಗೆ? ಯಾವ ಅಪಮಾನ ದೊಡ್ಡದು? ವೈಯಕ್ತಿಕ, ಸಾಮಾಜಿಕ ಅಥವಾ ರಾಜಕೀಯ? ಅಂಗೈಲಿ ಫಳಫಳ ಹೊಳೆಯುತ್ತಿದ್ದ ವಜ್ರದ ಓಲೆ ಹಿಡಿದಿದ್ದ ಅವಳ ಕಣ್ಣುಗಳು ವಜ್ರಕ್ಕಿಂತ ಮಿಗಿಲಾಗಿ ಮಿಂಚುತ್ತಿದ್ದವು, ‘ನಮ್ಮ ಮನೆಗೆ ಹಾಲು ಹಾಕಲು ಬರುತ್ತಿದ್ದ ಹುಡುಗಿ ಹೇಗಿದ್ದಾಳೆ ಎಂದು ಕೇಳಿದವರ ಮುಂದೆ ಒಮ್ಮೆ ಇದನ್ನು ಹಾಕಿಕೊಂಡು ಹೋಗಬೇಕು..’ – ಆ ಹಾಲು ಹಾಕುತ್ತಿದ್ದ ಕಾಲಕ್ಕೆ ೩೫ ವರ್ಷಗಳಾಗಿದೆ, ಇಂದು ಇವಳು ಸಿರಿಯೊಡತಿ. ಆದರೂ ಅವಳ ಮನದಲ್ಲಿ ಇಂದಿನ ವಜ್ರಕ್ಕಿಂತ ಗಟ್ಟಿಯಾಗಿ ಕೂತಿರುವುದು ಆ ಮಾತುಗಳು. ಅದು ವೈಯಕ್ತಿಕ ಅಪಮಾನ. ಆದರೆ ಇನ್ನೊಂದು ಅಪಮಾನವಿದೆ, ಚರ್ಮಕ್ಕಂಟಿ ಬರುವಂತಹದ್ದು, ನೂರಾರು ವರ್ಷಗಳ ಹೊರೆ ಹೊತ್ತಿರುವಂತಹದ್ದು. ನಮಗೆ ಸರ್ವೇ ಸಾಧಾರಣ ಅನ್ನಿಸುವ ಮಾತುಗಳು ಇನ್ನೊಬ್ಬರ ಜನ್ಮಾಂತರದ ಅಪಮಾನಕ್ಕೆ ಚಾಟಿ ಬೀಸುತ್ತದಲ್ಲಾ ಆ ಅಪಮಾನ. ಒಂದು ವೈಯಕ್ತಿಕ ಅಪಮಾನದಿಂದ ಶುರುವಾಗುವ ಚಿತ್ರ ಅದರ ಸಾಮಾಜಿಕ, ರಾಜಕೀಯ ನೆಲೆಗಳನ್ನು ನೋಡುತ್ತಾ ಅದನ್ನು ಸಾರ್ವತ್ರಿಕ ನೆಲೆಗೆ ತಂದು ನಿಲ್ಲಿಸಿಬಿಡುತ್ತದೆ. ಆ ಘಳಿಗೆಯಲ್ಲೇ ಸಾಮೂಹಿಕ ’ಕೆಡುಕಿ’ನ ನಡುವಲ್ಲೇ ಇದ್ದಕ್ಕಿದ್ದಂತೆ ಪ್ರಕಟವಾಗಿಬಿಡುವ ವೈಯಕ್ತಿಕ ’ಒಳಿತು’ ಬದುಕನ್ನು, ನಾಳೆಗಳನ್ನು ಸಹನೀಯಗೊಳಿಸಿಬಿಡುತ್ತದೆ.

ಜಾತಿ, ಧರ್ಮವನ್ನು ಮುಂದಿಟ್ಟುಕೊಂಡು ಜನಗಳನ್ನು ವಿಭಜಿಸುತ್ತಿರುವ ಈ ಕಾಲಘಟ್ಟದಲ್ಲಿ ಈ ಚಿತ್ರಕ್ಕೆ ನಾನಾ ಧ್ವನಿಗಳು ದಕ್ಕುತ್ತವೆ. ಚಿತ್ರ ಶುರುವಾಗುವುದು ಒಂದು ಪ್ರಚೋದನಾಕಾರಿ ಭಾಷಣದಿಂದ. ಇಂತಹ ಎಷ್ಟು ಭಾಷಣಗಳು ಮನಸ್ಸುಗಳನ್ನು ಮುರಿದಿದೆ… ಬೈರೂತ್ ನಲ್ಲಿ ನಡೆಯುವ ಕಥೆ ಇದು : ಬೈರೂತ್ ಕ್ರಿಶ್ಚಿಯನ್ ಮತ್ತು ಪ್ಯಾಲಿಸ್ತೀನಿಯನ್ನರ ನಡುವಿನ ಹದಿನೈದು ವರ್ಷಗಳ ಅಂತರ್ಯುದ್ಧದಿಂದ ಇನ್ನೂ ಸುಧಾರಿಸಿಕೊಂಡಿರುವುದಿಲ್ಲ. ಯುದ್ಧ ಮುಗಿದಿದೆ, ಆದರೆ ಯುದ್ಧದ ಗಾಯಗಳಿಗೆ ಮುಗಿತಾಯ ಸಿಕ್ಕಿಲ್ಲ, ಅವು ಇನ್ನೂ ಉರಿಯುತ್ತಿವೆ, ಟೋನಿ ಎನ್ನುವ ಗ್ಯಾರೇಜ್ ಮಾಲಿಕನಲ್ಲಿ ಅದು ಧಗಧಗ ಎಂದು ಉರಿದರೆ, ಯಾಸೆರ್ ಎನ್ನುವ ಕಟ್ಟಡ ನಿರ್ಮಾಣ ಮೇಸ್ತ್ರಿಯಲ್ಲಿ ಅದು ಜ್ವಾಲಾಮುಖಿಯಂತೆ ಹೊಗೆಯಾಡುತ್ತಿದೆ, ಯಾವಾಗಲಾದರೂ ಸಿಡಿಯುವಂತೆ. ಟೋನಿ ಕ್ರಿಶ್ಚಿಯನ್, ಯಾಸೆರ್ ಪ್ಯಾಲಿಸ್ತೀನಿ. ಇಲ್ಲಿನ ಜನರಲ್ಲಿ ಸುಮಾರು ೪೦% ಕ್ರಿಶ್ಚಿಯನ್ನರು, ೧೦% ಭಾಗ ಪ್ಯಾಲಿಸ್ತೈನಿ ನಿರಾಶ್ರಿತರು. ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಪ್ಯಾಲಿಸ್ತೀನಿಯರಿಗೆ ಅನೇಕ ಸವಲತ್ತುಗಳ ಜೊತೆಗೆ ಇಡೀ ಜಗತ್ತಿನ ಅನುಕಂಪ ಸಿಗುತ್ತಿದೆ ಎನ್ನುವುದು ಕ್ರಿಶ್ಚಿಯನ್ನರ ಸಿಟ್ಟು. ಇಲ್ಲಿ ಬಂದು ನೆಲೆಸಿ ದಶಕ ಕಳೆದರೂ ಇಂದಿಗೂ ತಮ್ಮನ್ನು ‘ನಿರಾಶ್ರಿತ’ರನ್ನಾಗಿಯೇ ನೋಡಲಾಗುತ್ತದೆ ಎನ್ನುವುದು ಪ್ಯಾಲಿಸ್ತೈನಿಯರ ಸಂಕಟ. ಇಲ್ಲಿ ಒಂದು ಸ್ವಾರಸ್ಯದ ವಿಷಯ ಎಂದರೆ ಕಥೆ ಬರೆದ ಡುವೇರಿ ಕ್ರಿಶ್ಚಿಯನ್ ಆದರೆ, ಕತೆ ಬರೆಯುವುದರಲ್ಲಿ ಜೊತೆಯಾಗಿರುವ ಆತನ ಪತ್ನಿ ಜೋಯೆಲ್ ಮುಸ್ಲಿಂ.

ಟೋನಿಯ ಮನೆಯ ಡ್ರೈನ್ ಪೈಪ್ ರಸ್ತೆಗೆ ನೀರು ಚೆಲ್ಲುತ್ತಿದೆ, ಅಲ್ಲೇ ಕಟ್ಟಡ ಕಾಮಗಾರಿ ಕೆಲಸ ಮಾಡಿಸುತ್ತಿರುವ ಯಾಸೆರ್ ಅದನ್ನು ಹೇಳುತ್ತಾನೆ. ಇವನು ಯಾರು ಎನ್ನುವುದನ್ನು ಅವನ ಮಾತಿನ ರೀತಿಯಿಂದಲೇ ಅರಿತ ಟೋನಿ ಅವನ ಮುಖಕ್ಕೆ ಬಾಗಿಲು ಬಡಿಯುತ್ತಾನೆ. ಯಾಸೆರ್ ಹೊರಗಿನಿಂದ ಆ ಪೈಪ್ ಮುಗಿದು ರಿಪೇರಿ ಮಾಡಲು ಹೋಗುತ್ತಾನೆ. ಟೋನಿ ಆ ರಿಪೇರಿಯಾದ ಪೈಪ್ ಅನ್ನು ಹೊಡೆದು ಹಾಕುತ್ತಾನೆ. ಯಾಸೆರ್ ಟೋನಿಯನ್ನು ಬೈಯುತ್ತಾನೆ. ಸಮಸ್ಯೆ ಅಲ್ಲಿಂದ ಶುರುವಾಗುತ್ತದೆ. ಟೋನಿ ಆ ಒಂದು ಮಾತನ್ನು ಯಾಕೆ ಬಿಡುತ್ತಿಲ್ಲ ಎನ್ನುವುದು ಅವನ ಸುತ್ತಲಿನವರಿಗೆ, ಅಷ್ಟೇ ಏಕೆ, ಅವನ ಹೆಂಡತಿಗೂ ಅರ್ಥವಾಗುವುದಿಲ್ಲ. ಯಾಸೆರ್ ಯಾಕೆ ಕ್ಷಮೆ ಕೇಳುತ್ತಿಲ್ಲ ಎನ್ನುವುದು ಸಹ ಯಾರಿಗೂ ಅರ್ಥವಾಗುತ್ತಿಲ್ಲ. ಟೋನಿಯ ಅಪಮಾನದ ಬೇರು ಇರುವುದು ಅವನ ಬಾಲ್ಯದಲ್ಲಾದ ಒಂದು ಮಾರಣ ಹೋಮದ ನೆನಪಿನಲ್ಲಿ. ಯಾಸೆರ್ ನ ಅಪಮಾನದ ನೆಲೆ ಬೈರೂತ್ ಗೆ ಬಂದು ಹತ್ತು ವರ್ಷಗಳಾಗಿದ್ದರೂ ಇನ್ನೂ ನಿರಾಶ್ರಿತರ ಕಾಲನಿಯಲ್ಲಿ ಬದುಕಬೇಕಾಗಿರುವ ತನ್ನ ಜನಾಂಗದ ಸಂಕಟದಲ್ಲಿ, ಇಂಜಿನಿಯರ್ ಆಗಿದ್ದರೂ ಮೇಸ್ತ್ರಿಯಾಗೆ ಮಾತ್ರವೇ ಕೆಲಸ ಮಾಡಬೇಕಾದ ತನ್ನ ದುರವಸ್ಥೆಯಲ್ಲಿ. ಟೋನಿಗೆ ಯಾಸೆರ್ ಎಲ್ಲಾ ಪ್ಯಾಲಿಸ್ಟೈನಿಯರ ಪ್ರತಿನಿಧಿಯಾಗಿ ಕಾಣುತ್ತಿದ್ದಾನೆ, ಅವನನ್ನು ಲೆಬನಾನ್ ಬಿಟ್ಟು ಓಡಿಸಬೇಕು ಎನ್ನುವುದು ಅವನ ನಂಬಿಕೆ.

ಬೈರೂತ್ ಕ್ರಿಶ್ಚಿಯನ್ ಮತ್ತು ಪ್ಯಾಲಿಸ್ತೀನಿಯನ್ನರ ನಡುವಿನ ಹದಿನೈದು ವರ್ಷಗಳ ಅಂತರ್ಯುದ್ಧದಿಂದ ಇನ್ನೂ ಸುಧಾರಿಸಿಕೊಂಡಿರುವುದಿಲ್ಲ. ಯುದ್ಧ ಮುಗಿದಿದೆ, ಆದರೆ ಯುದ್ಧದ ಗಾಯಗಳಿಗೆ ಮುಗಿತಾಯ ಸಿಕ್ಕಿಲ್ಲ, ಅವು ಇನ್ನೂ ಉರಿಯುತ್ತಿವೆ, ಟೋನಿ ಎನ್ನುವ ಗ್ಯಾರೇಜ್ ಮಾಲಿಕನಲ್ಲಿ ಅದು ಧಗಧಗ ಎಂದು ಉರಿದರೆ, ಯಾಸೆರ್ ಎನ್ನುವ ಕಟ್ಟಡ ನಿರ್ಮಾಣ ಮೇಸ್ತ್ರಿಯಲ್ಲಿ ಅದು ಜ್ವಾಲಾಮುಖಿಯಂತೆ ಹೊಗೆಯಾಡುತ್ತಿದೆ, ಯಾವಾಗಲಾದರೂ ಸಿಡಿಯುವಂತೆ. ಟೋನಿ ಕ್ರಿಶ್ಚಿಯನ್, ಯಾಸೆರ್ ಪ್ಯಾಲಿಸ್ತೀನಿ. ಇಲ್ಲಿನ ಜನರಲ್ಲಿ ಸುಮಾರು ೪೦% ಕ್ರಿಶ್ಚಿಯನ್ನರು, ೧೦% ಭಾಗ ಪ್ಯಾಲಿಸ್ತೈನಿ ನಿರಾಶ್ರಿತರು. ಅಲ್ಪಸಂಖ್ಯಾತರು ಎನ್ನುವ ಕಾರಣಕ್ಕೆ ಪ್ಯಾಲಿಸ್ತೀನಿಯರಿಗೆ ಅನೇಕ ಸವಲತ್ತುಗಳ ಜೊತೆಗೆ ಇಡೀ ಜಗತ್ತಿನ ಅನುಕಂಪ ಸಿಗುತ್ತಿದೆ ಎನ್ನುವುದು ಕ್ರಿಶ್ಚಿಯನ್ನರ ಸಿಟ್ಟು.

ಕ್ಷಮೆ ಕೇಳಬೇಕು ಎಂದು ಯಾಸೆರ್ ಮೇಲೆ ಅವನು ಕೆಲಸ ಮಾಡುವ ಕಂಪನಿಯಿಂದ ಒತ್ತಡ ಬರುತ್ತದೆ, ‘we are targeted!’ – ಯಾಸೆರ್ ಸಿಡಿಯುತ್ತಾನೆ. ಕಡೆಗೂ ಅವನು ಕ್ಷಮೆ ಕೇಳಲು ಹೋಗುತ್ತಾನೆ. ಟೋನಿ ಟಿವಿ ಯಲ್ಲಿ ಅದೇ ಬಡಿದೆಬ್ಬಿಸುವ ಭಾಷಣ ಕೇಳುತ್ತಿರುತ್ತಾನೆ. ಅದು ನಿಧಾನವಾಗಿ ಯಾಸೆರ್ ನನ್ನು ಪ್ರಕ್ಷೋಭಿಸುತ್ತಾ ಹೋಗುತ್ತದೆ. ಇಡೀ ಚಿತ್ರದ ಆತ್ಮ ಇರುವುದು ಇಲ್ಲಿ – ಒಬ್ಬರೇ ಇರುವಾಗ ಸರಳವಾಗಿ, ಘನತೆಯಿಂದ ಇರುವ ವ್ಯಕ್ತಿಗಳು ಇಂತಹ ಭಾಷಣಗಳಿಂದ, ಹೊರಗಿನ ಶಕ್ತಿಗಳಿಂದ ಪ್ರೇರಿತರಾದಾಗ ಬರುವ ಕೆಡುಕಿನಲ್ಲಿ.

ಯಾಸೆರ್ ಕ್ಷಮೆ ಕೇಳಲು ಹಿಂಜರಿಯುತ್ತಿರುತ್ತಾನೆ, ಟೋನಿ ಬೈಯಲು ಪ್ರಾರಂಭಿಸುತ್ತಾನೆ. ಯಾವುದೋ ಒಂದು ಘಳಿಗೆಯಲ್ಲಿ ಯಾಸೆರ್ ನ ಒಳಗಿನ ಜ್ವಾಲಾಮುಖಿ ಸಿಡಿಯುತ್ತದೆ, ಅವನು ಟೋನಿಯ ಮೇಲೆ ಕೈ ಮಾಡುತ್ತಾನೆ,
ಟೋನಿಯ ಎದೆಕಟ್ಟಿನ ಮೂಳೆ ಮುರಿಯುತ್ತದೆ. ಅವನು ಕೋರ್ಟಿಗೆ ಹೋಗುತ್ತಾನೆ. ಟೋನಿಯ ತಂದೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾನೆ, ಇವನು ಕೇಳುವುದಿಲ್ಲ, ಎಲ್ಲ ಜಗಳಗಳ ಹಾಗೆಯೇ ಇಲ್ಲಿಯೂ ಸಹ ಜಗಳದ ಕಾರಣ ಕ್ಷುಲ್ಲಕವಾಗಿ ಜಗಳವೇ ಪ್ರಧಾನವಾಗುತ್ತಿದೆ. ಕೋರ್ಟಿನಲ್ಲಿ ಯಾಸೆರ್ ನ ಖುಲಾಸೆ ಆಗುತ್ತದೆ. ಅವನು ಅಲ್ಪಸಂಖ್ಯಾತನಾಗಿದ್ದರಿಂದಲೇ ಖುಲಾಸೆಗೊಂಡ ಎನ್ನುವುದು ಟೋನಿಯ ಸಿಟ್ಟು. ಅಂದು ಮಲಗಿದ ಟೋನಿಗೆ ನಿದ್ದೆ ಬರುವುದಿಲ್ಲ, ಬಾಲ್ಯದ ಆಘಾತನ ನೆನಪುಗಳು ಅವನನ್ನು ಮಲಗಲು ಬಿಡುವುದಿಲ್ಲ. ಅದೇ ಸಿಟ್ಟಿನಲ್ಲಿ ಗ್ಯಾರೇಜಿಗೆ ಹೋಗುತ್ತಾನೆ. ತೂಕ ಎತ್ತಬಾರದು ಎಂದು ಡಾಕ್ಟರ್ ಹೇಳಿದ್ದರೂ ಅಲಕ್ಷಿಸುತ್ತಾನೆ. ಪ್ರಜ್ಞೆ ತಪ್ಪಿ ಬೀಳುತ್ತಾನೆ. ಆ ಆಘಾತದಲ್ಲಿ ಅವನ ಹೆಂಡತಿಗೆ ಅವಧಿಗೆ ಮೊದಲೇ ಹೆರಿಗೆ ಆಗುತ್ತದೆ, ಮಗುವನ್ನು ಇನ್ ಕ್ಯುಬೇಟರಿನಲ್ಲಿ ಇಡುತ್ತಾರೆ.

ಟೋನಿ ಮತ್ತೆ ಕೋರ್ಟಿಗೆ ಹೋಗುತ್ತಾನೆ. ಪಾಲಿಸ್ತೀನಿಯರ ಬಗ್ಗೆ ಜನರಲ್ಲಿ ಇರುವ ಪೂರ್ವಾಗ್ರಹಗಳು ಕೋರ್ಟಿನಲ್ಲಿ ಎಲ್ಲರ ಮುಂದೆ ಅನಾವರಣಗೊಳ್ಳುತ್ತವೆ. ಕೋರ್ಟ್ ವರದಿ ಮಾಡಲು ಬರುವ ಒಬ್ಬ ಪತ್ರಕರ್ತ ಅವರಿಬ್ಬರ ಜಗಳವನ್ನು ಕೋರ್ಟಿನಿಂದ ಹೊರಗೂ ಹರಡುತ್ತಾನೆ. ಬೈರೂತ್ ಈಗ ಎರಡು ಭಾಗವಾಗಿದೆ, ಮಾಧ್ಯಮಗಳಲ್ಲಿ ಅದು ‘ಕ್ರಿಶ್ಚಿಯನ್ ಪಾರ್ಟಿ ಮತ್ತು ಪ್ಯಾಲಿಸ್ತೈನ್ ರೆಫ್ಯೂಜಿಗಳ ನಡುವಿನ ಕಾದಾಟ’ ಎಂದು ರಿಪೋರ್ಟ್ ಆಗುತ್ತದೆ. ಕೋರ್ಟಿನಲ್ಲಿ ಇನ್ನೊಂದು ನಾಟಕೀಯ ಸಂಭವ ನಡೆಯುತ್ತಿದೆ, ಯಾಸೆರ್ ನ ವಕೀಲೆ ಟೋನಿಯ ವಕೀಲನ ಮಗಳು! ಅಲ್ಲಿ ಇನ್ಯಾವ ಬಾಕಿ ಉಳಿದ ಮಾತುಗಳು ಚುಕ್ತಾ ಅಗುತ್ತಿವೆಯೋ…

ಯಾಸೆರ್ ಕೆಲಸ ಹೋಗುತ್ತದೆ, ಕೋರ್ಟ್ ರಣರಂಗವಾಗುತ್ತಿದೆ. ತನಗೇ ಗೊತ್ತಿಲ್ಲದಂತೆ ಟೋನಿ ಇಸ್ರೇಲಿಗಳ ಪರ ಆಗಿದ್ದಾನೆ, ಪ್ಯಾಲಿಸ್ತೀನಿ ಸಂಘಟನೆಗಳು ಯಾಸೆರ್ ನ ಪರ ಒಗ್ಗೂಡುತ್ತಿವೆ. ಟೊನಿಗೆ ಬೆದರಿಕೆ ಕರೆಗಳು ಬರುತ್ತಿವೆ, ಅವನ ಮನೆ ರಸ್ತೆಯಲ್ಲಿ ಪಿಜ್ಜಾ ಕೊಡಲು ಬಂದಿದ್ದವನನ್ನು ಅನುಮಾನದಿಂದ ಜನ ಅಟ್ಟಿಸಿಕೊಂಡು ಹೋಗಿ, ಅವನಿಗೆ ಅಪಘಾತವಾಗಿದೆ. ಇಡೀ ದೇಶ ಉರಿಯುತ್ತಿದೆ. ಕಡೆಗೆ ದೇಶದ ಅಧ್ಯಕ್ಷ ಅವರಿಬ್ಬರನ್ನೂ ಕರೆದು ಮಾತನಾಡುತ್ತಾನೆ, ಕೇಸು ವಾಪಸು ತೆಗೆದುಕೊಳ್ಳಲು ಹೇಳುತ್ತಾನೆ, ಉಹೂ, ಟೋನಿ ಒಪ್ಪುವುದಿಲ್ಲ. ಅಲ್ಲಿಂದ ಹೊರಟಾಗ ಯಾಸೆರ್ ನ ಕಾರ್ ಸ್ಟಾರ್ಟ್ ಆಗುವುದಿಲ್ಲ. ಟೋನಿ ಬಂದು ರಿಪೇರಿ ಮಾಡಿಕೊಡುತ್ತಾನೆ. ಅವರಿಗೇ ಗೊತ್ತಿಲ್ಲದಂತೆ ಅವರಿಬ್ಬರ ನಡುವೆ ಒಂದು ಸಂವಹನ ಸಾಧ್ಯವಾಗಿದೆ.

ಯುದ್ಧದಲ್ಲಿ ಸೋಲುವುದು, ನೋವಿಗೀಡಾಗುವುದು ಸರ್ಕಾರವಲ್ಲ, ಸೋ ಕಾಲ್ಡ್ ‘ರಾಷ್ಟಪ್ರೇಮ’ವಲ್ಲ, ಪಕ್ಷಗಳಲ್ಲ, ಧರ್ಮವಲ್ಲ, ಕೇವಲ ಮನುಷ್ಯರು. ಕೋರ್ಟ್ ನಲ್ಲಿ ಟೋನಿ ಬಾಲ್ಯದಲ್ಲಿ ಅನುಭವಿಸಿದ ಮಾರಣಹೋಮದ ಪ್ರಸ್ತಾಪವಾಗುತ್ತದೆ. ಟೋನಿಯಲ್ಲೂ ತನ್ನಲ್ಲಿರುವಂತಹುದೇ ಬಡಬಾನಲ ಇದೆ ಎನ್ನುವುದು ಯಾಸೆರ್ ನಿಗೆ ಅರ್ಥವಾಗುತ್ತದೆ. ಆ ದಿನ ನಡುರಾತ್ರಿಯಲ್ಲಿ ಯಾಸಿರ್ ಗ್ಯಾರೇಜಿಗೆ ಬರುತ್ತಾನೆ. ಬೇಕೆಂದೇ ಟೋನಿಯನ್ನು ಜಗಳಕ್ಕೆ ಎಳೆಯುತ್ತಾನೆ. ಟೋನಿ ಅವನ ಮೇಲೆ ಹಲ್ಲೆ ಮಾಡುತ್ತಾನೆ, ಯಾಸೆರ್ ಸಾರಿ ಕೇಳುತ್ತಾನೆ! ಅವಹೇಳನ ಮಾಡಿ ಸಿಟ್ಟಿಗೆಬ್ಬಿಸಿದರೆ ಏನಾಗುತ್ತದೆ ಎಂದು ಯಾಸೆರ್ ಟೋನಿಗೆ ನಿರೂಪಿಸುತ್ತಾನೆ!

ಯಾಸೆರ್ ಕ್ಷಮೆ ಕೇಳಲು ಹಿಂಜರಿಯುತ್ತಿರುತ್ತಾನೆ, ಟೋನಿ ಬೈಯಲು ಪ್ರಾರಂಭಿಸುತ್ತಾನೆ. ಯಾವುದೋ ಒಂದು ಘಳಿಗೆಯಲ್ಲಿ ಯಾಸೆರ್ ನ ಒಳಗಿನ ಜ್ವಾಲಾಮುಖಿ ಸಿಡಿಯುತ್ತದೆ, ಅವನು ಟೋನಿಯ ಮೇಲೆ ಕೈ ಮಾಡುತ್ತಾನೆ, ಟೋನಿಯ ಎದೆಕಟ್ಟಿನ ಮೂಳೆ ಮುರಿಯುತ್ತದೆ. ಅವನು ಕೋರ್ಟಿಗೆ ಹೋಗುತ್ತಾನೆ. ಟೋನಿಯ ತಂದೆ ಬುದ್ಧಿ ಹೇಳಲು ಪ್ರಯತ್ನಿಸುತ್ತಾನೆ, ಇವನು ಕೇಳುವುದಿಲ್ಲ, ಎಲ್ಲ ಜಗಳಗಳ ಹಾಗೆಯೇ ಇಲ್ಲಿಯೂ ಸಹ ಜಗಳದ ಕಾರಣ ಕ್ಷುಲ್ಲಕವಾಗಿ ಜಗಳವೇ ಪ್ರಧಾನವಾಗುತ್ತಿದೆ. ಕೋರ್ಟಿನಲ್ಲಿ ಯಾಸೆರ್ ನ ಖುಲಾಸೆ ಆಗುತ್ತದೆ. ಅವನು ಅಲ್ಪಸಂಖ್ಯಾತನಾಗಿದ್ದರಿಂದಲೇ ಖುಲಾಸೆಗೊಂಡ ಎನ್ನುವುದು ಟೋನಿಯ ಸಿಟ್ಟು. ಅಂದು ಮಲಗಿದ ಟೋನಿಗೆ ನಿದ್ದೆ ಬರುವುದಿಲ್ಲ, ಬಾಲ್ಯದ ಆಘಾತನ ನೆನಪುಗಳು ಅವನನ್ನು ಮಲಗಲು ಬಿಡುವುದಿಲ್ಲ.

ಟೋನಿ ತನ್ನ ಗತಕಾಲದ ಭಯಂಕರ ನೆನಪುಗಳನ್ನು ಉಚ್ಛಾಟಿಸಲು ಮೊದಲಬಾರಿ ತನ್ನ ಊರಿಗೆ ಹಿಂದಿರುಗುತ್ತಾನೆ. ಅವನ ಮಗು ಬದುಕುತ್ತದೆ, ಇದ್ದಕ್ಕಿದ್ದಂತೆ ಒಂದು ದಿನ ಅವನ ಡ್ರೈನೇಜ್ ರಿಪೇರಿಯಾಗಿದೆ… ಕೋರ್ಟಿನಲ್ಲಿ ಕೇಸು ಖುಲಾಸೆ ಆಗುತ್ತದೆ, ಈಗ ಟೋನಿಯಲ್ಲಿ ಯಾವುದೇ ಕಹಿ ಉಳಿದಿಲ್ಲ. ನಿರ್ದೇಶಕ ಜಿಯಾದ್ ಡುವೇರಿ ಕುಶಲತೆ ಇರುವುದು ಈ ಬದಲಾವಣೆಯನ್ನು ಅತ್ಯಂತ ಸಹಜವಾಗಿ, ಸಾವಧಾನವಾಗಿ ತಂದಿರುವುದರಲ್ಲಿ. ಚಿತ್ರ ಮುಗಿದಾಗ ನಮ್ಮ ಅನುಕಂಪ ಯಾಸೆರ್ ನಷ್ಟೇ ಟೋನಿಗೂ ಬೇಕು ಎನ್ನುವುದು ನಮಗೆ ಅರ್ಥವಾಗುತ್ತದೆ, ಪ್ರತಿಯೊಬ್ಬರೂ ಒಂದಲ್ಲ ಒಂದು ಅಪಮಾನದ ಹೊರೆಯನ್ನು ಇಳಿಸಿಕೊಳ್ಳಲು ಒದ್ದಾಡುತ್ತಿರುವವರೆ ಎನ್ನುವುದು ನಮ್ಮನ್ನು ತಾಕುತ್ತದೆ, ಟೋನಿ, ಯಾಸೆರ್ ಇಬ್ಬರೂ ಇನ್ನೊಂದಿಷ್ಟು ಒಳ್ಳೆಯವರಾಗಿರುತ್ತಾರೆ. ಗುಂಪು ಕೂಡಿದಾಗ ಆ ಗುಂಪು ಮನೋಸ್ಥಿತಿಗನುಗುಣವಾಗಿ ವಿಪರೀತವಾಗಿ ವರ್ತಿಸುವ ಜನ ಸಹ ಒಬ್ಬೊಬ್ಬರೆ ಇರುವಾಗ ಅಂತಃಕರಣಿಗಳಾಗಿಯೇ ನಡೆದುಕೊಳ್ಳುವುದನ್ನು ಕಂಡಾಗ ನಾಳೆಗಳ ಬಗ್ಗೆ ಭರವಸೆ ಮೂಡುತ್ತದೆ. ಇಲ್ಲಿ ಟೋನಿ ಮತ್ತು ಯಾಸೆರ್ ಇಬ್ಬರಲ್ಲೂ ಮಾನವೀಯತೆ ಇದೆ, ಘನತೆ ಇದೆ. ಇಬ್ಬರಿಗೂ ಅವರ ವೈಯಕ್ತಿಕ ಜಗಳ ಸಮುದಾಯಗಳ ನಡುವಿನ ತಿಕ್ಕಾಟವಾಗುವುದು ಇಷ್ಟವಿಲ್ಲ, ಆದರೆ ಅದನ್ನು ಅವಮಾನವಾಗದ ರೀತಿಯಲ್ಲಿ ಹೇಗೆ ನಿಲ್ಲಿಸುವುದು ಎನ್ನುವುದು ಅರ್ಥವಾಗುವುದಿಲ್ಲ. ಅವರ ಮೂಲಭೂತವಾದ ಒಳ್ಳೆಯತನ ಕಾಲಾಂತರದಲ್ಲಿ ಮಾಗುತ್ತದೆ. ಕ್ಷಮೆ ಕೇಳುವುದೆಂದರೆ ಅದು ಸೋಲಲ್ಲ, ಎದುರಿನವನ್ನು ಗೌರವಿಸುವುದು ಎಂದು ಇಬ್ಬರಿಗೂ ಅರ್ಥವಾಗುತ್ತದೆ. ಟೋನಿಯ ಪಾತ್ರ ಸಿಟ್ಟನ್ನು ತನ್ನ ಪ್ರತಿ ಕದಲಿಕೆಯಲ್ಲೂ ವ್ಯಕ್ತ ಪಡಿಸಿದರೆ, ಯಾಸೆರ್ ನ ಪಾತ್ರ ಮಾತೇ ಆಡದೆ ತನ್ನೊಳಗಿನ ತಲ್ಲಣವನ್ನು ಕಟ್ಟಿಕೊಡಬೇಕು. ಆ ಪಾತ್ರಧಾರಿಯನ್ನು ನೋಡಿದ ತಕ್ಷಣ ಇದೊಂದು ಕೊಳವಲ್ಲ, ಸಮುದ್ರ ಎನ್ನುವುದು ಅರಿವಾಗಿ ಬಿಡುತ್ತದೆ. ಅಷ್ಟೇ ಪ್ರಬಲವಾಗಿ ಮೂಡಿಬಂದಿರುವುದು ಟೋನಿಯ ಹೆಂಡತಿಯ ಪಾತ್ರ.

ಇಬ್ಬರು ವ್ಯಕ್ತಿಗಳ ನಡುವಿನ ಸಣ್ಣ ಅಪಮಾನದ ಮೂಲಕ ನಿರ್ದೇಶಕ ಎಲ್ಲವೂ ಹೇಗೆ ಸಮುದಾಯದ ರಾಜಕೀಯದೊಂದಿಗೆ ಹೆಣೆದುಕೊಂಡಿದೆ ಎನ್ನುವುದನ್ನು ತೋರಿಸುತ್ತಾರೆ. ಇವ್ಯಾವುದಕ್ಕೂ ಸರಳವಾದ ಪರಿಹಾರಗಳಿಲ್ಲ, ಭಾವೋದ್ವೇಗದ ಮಾತುಗಳು, ಚರ್ಯೆಗಳು ಇವನ್ನು ನಂದಿಸುವುದಿಲ್ಲ, ಅದು ಸಿನಿಮೀಯವಾಗುತ್ತದೆ. ಗಾಯಗಳು ಮಾಯಲು ಕಾಲ ಬೇಕು, ಅದಕ್ಕೆ ಸಮಯ ಕೊಡಬೇಕು, ಆ ಸಮಯಕ್ಕೆ ಒಂದು ತಾಳ್ಮೆ ಬೇಕು. ನೋಡಲು ಇದು ಲೆಬನಾನಿನ ಕಥೆಯಂತೆ ತೋರುತ್ತದೆ, ಆದರೆ ಆಳದಲ್ಲಿ ಇದು ಎರಡು ಸಮುದಾಯಗಳ ನಡುವಿನ ತಿಕ್ಕಾಟ ಇರುವ ಯಾವುದೇ ಊರಿನ, ಯಾವುದೇ ದೇಶದ ಕಥೆಯಾಗಬಹುದು. ಆ ಕಾರಣಕ್ಕೆ ಈ ಚಿತ್ರ ಮಹತ್ವದ್ದಾಗಿದೆ.