ಸೋನ್ಯಾ ಆಸೆಗಳೆಲ್ಲ ಸತ್ತವಳ ಹಾಗೆ, ಚಿಂತೆ ಮಾಡುತ್ತ, ನೋವು ತಿನ್ನುತ್ತ, ಕೈ ಹಿಸುಕಿಕೊಳ್ಳುತ್ತ ಮಾತಾಡಿದಳು. ಬಿಳಿಚಿದ್ದ ಅವಳ ಕೆನ್ನೆ ಮತ್ತೆ ಕೆಂಪಾದವು. ಹಿಂಸೆಗೆ ಗುರಿಯಾದವಳ ನೋಟವಿತ್ತು ಅವಳ ಕಣ್ಣಿನಲ್ಲಿ. ವಿಚಲಿತಳಾಗಿದ್ದಳು, ಏನೋ ಹೇಳಲೇಬೇಕು ಅನ್ನುವ ಒದ್ದಾಟ ಅನುಭವಿಸುತ್ತಿದ್ದಳು, ಕ್ಯಾತರೀನಳನ್ನು ಸಮರ್ಥಿಸಬೇಕು ಅನ್ನುವ ಆಸೆ ಇತ್ತು ಅನಿಸುತ್ತಿತ್ತು.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮುಂದುವರಿದ ಪುಟಗಳು.

 

ಭಾಗ ನಾಲ್ಕು: ನಾಲ್ಕನೆಯ ಅಧ್ಯಾಯ

ರಾಸ್ಕೋಲ್ನಿಕೋವ್ ಸೀದಾ ಸೋನ್ಯ ವಾಸವಾಗಿದ್ದ, ಕಾಲುವೆ ದಡದ ಮನೆಗೆ ಹೋದ. ಅದು ಮೂರು ಮಹಡಿಯ, ಹಸಿರು ಬಣ್ಣ ಬಳಿದ ಹಳೆಯ ಕಟ್ಟಡ. ವಾಚ್‍ಮ್ಯಾನ್‍ ನನ್ನು ಹುಡುಕಿದ. ದರ್ಜಿ ಕಪೆರ್ನಮೋವ್ ಮನೆಗೆ ಯಾವುದು ಎಂದು ಕೇಳಿದ. ಅವನು ಅರ್ಥವಾಗದ ಹಾಗೆ ಏನೋ ಹೇಳಿದ. ಅಂಗಳದ ಮೂಲೆಯಲ್ಲಿದ್ದ ಕಿರಿದಾದ ಕತ್ತಲು ಮೆಟ್ಟಿಲನ್ನು ರಾಸ್ಕೋಲ್ನಿಕೋವ್ ಕೊನೆಗೂ ಹುಡುಕಿದ. ಎರಡನೆಯ ಮಹಡಿಗೆ ಹೋದ, ಅಲ್ಲಿ ಒಂದು ಪ್ಯಾಸೇಜು, ಪ್ಯಾಸೇಜಿನಲ್ಲಿ ಅಂಗಳಕ್ಕೆ ಮುಖ ಮಾಡಿದ್ದ ಮನೆಗಳ ಸಾಲಿತ್ತು. ಕಪೆರ್ನಮೋವ್‍ ಮನೆಯ ಬಾಗಿಲು ಎಲ್ಲಿದೆ ಎಂದು ಕತ್ತಲಲ್ಲಿ ತಡಕುತಿದ್ದಾಗ ಇದ್ದಕಿದ್ದ ಹಾಗೆ ಅವನಿಂದ ಮೂರೇ ಹೆಜ್ಜೆ ದೂರದಲ್ಲಿ ಬಾಗಿಲೊಂದು ತೆರೆದುಕೊಂಡಿತು, ಅವನು ಯಾಂತ್ರಿಕವಾಗಿ ಬಾಗಿಲನ್ನು ಹಿಡಿದುಕೊಂಡ.

‘ಯಾರದೂ?’ ಬೆದರಿದ ಹೆಣ್ಣು ದನಿಯೊಂದು ಒಳಗಿನಿಂದ ಕೇಳಿತು.

‘ನಾನು… ನಿನ್ನ ನೋಡಕ್ಕೆ ಬಂದೆ,’ ಎಂದ ರಾಸ್ಕೋಲ್ನಿಕೋವ್. ಕಿರಿದಾದ ವೆರಾಂಡಕ್ಕೆ ಕಾಲಿಟ್ಟ. ಅಲ್ಲೊಂದು ಮುರುಕಲು ಕುರ್ಚಿಯ ಮೇಲೆ, ಸೊಟ್ಟಗಾದ ಹಿತ್ತಾಳೆಯ ಕ್ಯಾಂಡಲ್ ಸ್ಟಿಕ್ಕಿನಲ್ಲಿ ಮೇಣದ ಬತ್ತಿ ಉರಿಯುತ್ತಿತ್ತು.

‘ನೀವು! ಅಯ್ಯೋ ದೇವರೇ!’ ಕ್ಷೀಣವಾದ ದನಿಯಲ್ಲಿ ಅನ್ನುತ್ತ ಸೋನ್ಯಾ ಎದ್ದು ನಿಂತಳು-ಆ ಜಾಗದಲ್ಲೇ ಬೇರು ಬಿಟ್ಟಿರುವವಳ ಹಾಗೆ.

‘ನಿನ್ನ ಕೋಣೆಯು ಯಾವುದು?’

ಅವಳನ್ನು ನೋಡದೆ ಇರಲು ಪ್ರಯತ್ನಪಡುತ್ತ ರಾಸ್ಕೋಲ್ನಿಕೋವ್ ಅವಳ ಕೋಣೆಯೊಳಕ್ಕೆ ಕಾಲಿಟ್ಟ. ಒಂದೆರಡು ಕ್ಷಣಗಳಲ್ಲೆ ಸೋನ್ಯ ಮೇಣದ ಬತ್ತಿ ಹಿದಿಡು ಬಂದಳು, ಮೇಣದ ಬತ್ತಿಯ ಸ್ಟಾಂಡನ್ನು ಕೆಳಗಿಟ್ಟು ಅವನೆದುರು ನಿಂತಳು. ಅವನ ಅನಿರೀಕ್ಷಿತ ಭೇಟಿಯಿಂದ ಭೀತಳಾಗಿ, ಹೇಳಲಾಗದ ತಳಮಳದಲ್ಲಿ ದಿಕ್ಕು ತೋಚದೆ, ಸುಮ್ಮನೆ ನಿಂತಳು. ಬಣ್ಣಗೆಟ್ಟಿದ್ದ ಅವಳ ಮುಖ ಇದ್ದಕಿದ್ದ ಹಾಗೆ ಕೆಂಪಾಯಿತು, ಕಣ್ಣಲ್ಲೂ ಕಂಬನಿ ಕಂಡಿತು. ಅವಳ ಹೊಟ್ಟೆ ತೊಳಸಿದ ಹಾಗೆ, ತೀರ ನಾಚಿಕೆಯಾದ ಹಾಗೆ. ಬಹಳ ಸಂತೋಷವೂ ಆದ ಹಾಗೆ ಅನಿಸುತಿತ್ತು ಅವಳಿಗೆ… ರಾಸ್ಕೋಲ್ನಿಕೋವ್ ತಟ್ಟನೆ ಮುಖ ತಿರುಗಿಸಿದ, ಟೇಬಲ್ಲಿನ ಪಕ್ಕದಲ್ಲಿದ್ದ ಕುರ್ಚಿಯ ಮೇಲೆ ಕೂತ. ಒಂದು ಸಾರಿ ಚುರುಕಾಗಿ ಕಣ್ಣಾಡಿಸಿ ಇಡೀ ರೂಮನ್ನು ಗಮನಿಸಿದ.

ರೂಮು ಬಹಳ ದೊಡ್ಡದಾಗಿತ್ತು, ಚಾವಣಿ ಮಾತ್ರ ತೀರ ತಗ್ಗಾಗಿತ್ತು. ಇದೊಂದು ರೂಮನ್ನು ಮಾತ್ರ ದರ್ಜಿ ಕಪೆರ್ಮನೋವ್ ಬಾಡಿಗೆಗೆ ಕೊಟ್ಟಿದ್ದ. ಎಡ ಗೋಡೆಯಲ್ಲಿದ್ದ ಬೀಗ ಹಾಕಿದ ಬಾಗಿಲು ಅವನ ಮನೆಯ ದಾರಿ. ಅದಕ್ಕೆದುರಾಗಿ ಬಲ ಗೋಡೆಯಲ್ಲಿ ಇನ್ನೊಂದು ಬಾಗಿಲಿತ್ತು, ಅದು ಸದಾ ಕಾಲ ಭದ್ರವಾಗಿ ಮುಚ್ಚಿರುತ್ತಿತ್ತು, ಈ ಬಾಗಿಲಿನಿಂದ ಹೋದರೆ ಪಕ್ಕದಲ್ಲಿ ಇನ್ನೊಂದು ಅಪಾರ್ಟ್‍ಮೆಂಟಿತ್ತು, ಅದಕ್ಕೇ ಬೇರೆ ನಂಬರು. ಸೋನ್ಯಾಳ ಕೋಣೆ ಕಣಜದ ಹಾಗೋ ಕೊಟ್ಟಿಗೆಯ ಹಾಗೋ ಕಾಣುತ್ತಿತ್ತು. ನಾಲ್ಕೂ ಬದಿಯ ಗೋಡೆಗಳು ಬೇರೆ ಬೇರೆ ಅಳತೆಯವಾಗಿದ್ದು, ವಿಕಾರವಾದ ಆಯತಾಕಾರದ ಕೋಣೆ ರೂಪುಗೊಂಡಿತ್ತು. ಹೊರಗಿನ ನಾಲೆಗೆ ಮುಖ ಮಾಡಿದ್ದ ಮೂರು ಕಿಟಕಿಗಳಿರುವ ದೊಡ್ಡ ಗೋಡೆ ಓರೆಯಾಗಿತ್ತು. ಅದರ ಒಂದು ಬದಿಯ ಮೂಲೆ ತೀರ ಕಿರಿದಾಗಿ ರೂಮಿನ ಆಳದಲ್ಲಿ ಅವಿತುಕೊಂಡಂತಿತ್ತು. ಬೆಳಕು ಕಡಮೆ ಇದ್ದಾಗ ಆ ಮೂಲೆಯಲ್ಲಿ ಏನಿದ್ದರೂ ಕಾಣುತ್ತಿರಲಿಲ್ಲ. ಇನ್ನೊಂದು ಮೂಲೆ ವಿಕಾರವೆನಿಸುವಷ್ಟು ವಿಶಾಲವಾಗಿತ್ತು. ಇಡೀ ರೂಮು ಖಾಲಿ ಖಾಲಿ ಅನಿಸುತ್ತಿತ್ತು. ಬಲ ಮೂಲೆಯಲ್ಲೊಂದು ಮಂಚವಿತ್ತು. ಅದರ ಪಕ್ಕದಲ್ಲೊಂದು ಕುರ್ಚಿ ಇತ್ತು, ಬಾಗಿಲಿಗೆ ಹತ್ತಿರವಾಗಿ. ಅದೇ ಗೋಡೆಗೆ ಹೊಂದಿಕೊಂಡ ಹಾಗೆ, ಇನ್ನೊಂದು ಅಪಾರ್ಟ್‍ಮೆಂಟಿನ ಬಾಗಿಲ ಹತ್ತಿರ ಮರದ ಸೀದಾ ಸಾದಾ ಮೇಜು ಇತ್ತು. ಅದಕ್ಕೆ ಕಡು ನೀಲಿಯ ಹೊದಿಕೆ ಇತ್ತು.

ಎದುರು ಗೋಡೆಯಲ್ಲಿ, ಕಿರಿದಾದ ಮೂಲೆಯ ಹತ್ತಿರ ಸಾದಾ ಮರದಲ್ಲಿ ಮಾಡಿದ ಬೀರು ಇತ್ತು—ಖಾಲಿತನದಲ್ಲಿ ಕಳೆದು ಹೋದ ಹಾಗೆ. ರೂಮಿನಲ್ಲಿದ್ದದ್ದು ಅಷ್ಟೇ. ಹಳದಿಗೆ ತಿರುಗಿದ, ಹರಿದ, ವಾಲ್ ಪೇಪರು ಮೂಲೆಗಳಲ್ಲಿ ಕಪ್ಪಾಗಿತ್ತು. ಚಳಿಗಾಲದಲ್ಲಿ ವದ್ದೆ ಹಿಡಿಯುವುದು ತಿಳಿಯುತ್ತಿತ್ತು. ಬಡತನ ಎದ್ದು ಕಾಣುತ್ತಿತ್ತು. ಮಂಚಕ್ಕೆ ಅಡ್ಡವಾಗಿ ಪರದೆ ಕೂಡ ಇರಲಿಲ್ಲ.

ತನ್ನ ಮನೆಗೆ ಬಂದವನನ್ನು ಮೌನವಾಗಿ ನೋಡುತ್ತ ನಿಂತಳು ಸೋನ್ಯಾ. ಅವನೋ ಆಕೆಯ ಕೋಣೆಯನ್ನು ಎಷ್ಟು ಗಮನವಿಟ್ಟು, ಸಂಕೋಚವಿಲ್ಲದೆ ಗಮನಿಸುತ್ತಿದ್ದನೆಂದರೆ ಅವಳಿಗೆ ನಡುಕ ಹುಟ್ಟಿತ್ತು, ತನ್ನ ವಿಧಿಯನ್ನು ನಿರ್ಣಯಿಸುವ ನ್ಯಾಯಧೀಶನ ಎದುರಿಗೋ ರಾಜನ ಎದುರಿಗೋ ನಿಂತಿರುವ ಹಾಗೆ ಅನಿಸುತ್ತಿತ್ತು ಅವಳಿಗೆ.

‘ತಡವಾಗಿದೆ… ಹನ್ನೊಂದಾಯಿತಾ?’ ಅವಳನ್ನು ಇನ್ನೂ ಕಣ್ಣೆತ್ತಿ ನೋಡದೆ ಕೇಳಿದ.

‘ಹ್ಞೂಂ’ ಸೋನ್ಯಾ ಗೊಣಗಿದಳು. ‘ಹ್ಙಾ, ಹೌದೌದು,’ ಹೊರದಾರಿ ಸಿಕ್ಕಿತು ಅನ್ನುವ ಹಾಗೆ ಬಡಬಡ ಮಾತಾಡಿದಳು, ‘ಓನರ್ ಮನೆ ಗಡಿಯಾರ ಈಗ ತಾನೇ ಹನ್ನೊಂದು ಹೊಡೆಯಿತು… ಕೇಳಿಸಿಕೊಂಡೆ… ಹನ್ನೊಂದಾಗಿದೆ,’ ಅಂದಳು.

‘ಕೊನೆಯ ಸಾರಿ ನಿನ್ನ ನೋಡಕ್ಕೆ ಬಂದಿದೀನಿ,’ ರಾಸ್ಕೋಲ್ನಿಕೋವ್ ಅವಳನ್ನು ಕಾಣಲೆಂದು ಬಂದದ್ದು ಇದೇ ಮೊದಲ ಬಾರಿಯಾದರೂ ಗಂಭೀರವಾಗಿ ಹೇಳಿದ, ‘ನಿನ್ನ ಮತ್ತೆ ಯಾವತ್ತೂ ನೋಡದೆ ಇರಬಹುದು.’

‘ನೀವು… ಹೊರಟು ಹೋಗತೀರಾ?’

‘ಗೊತ್ತಿಲ್ಲ… ನಾಳೆ… ತಿಳಿಯಬಹುದು…’

‘ಹಾಗಾದರೆ ನೀವು ಕ್ಯಾತರೀನ ಇವಾನೋವ್ನಾ ಮನೆಗೆ ಬರಲ್ಲ ನಾಳೆ?’ ಸೋನ್ಯಾ ದನಿ ನಡುಗುತಿತ್ತು.

‘ಗೊತ್ತಿಲ್ಲ. ನಾಳೆ ಬೆಳಿಗ್ಗೆ ಎಲ್ಲಾನೂ… ಅದು ಮುಖ್ಯ ಅಲ್ಲ. ನಾನು ಬಂದದ್ದು ನಿನಗೆ ಒಂದು ಮಾತು ಹೇಳಿ ಹೋಗಣ ಅಂತ….’
ತಲೆ ಎತ್ತಿ ನೋಡಿದ. ಕಣ್ಣಲ್ಲಿ ದುಃಖವಿತ್ತು. ಅವಳಿನ್ನೂ ನಿಂತಿದ್ದಾಳೆ, ತಾನು ಕೂತಿದ್ದೇನೆ, ಅವಳು ನಿಶ್ಚಲವಾಗಿದ್ದಾಳೆ ಅನ್ನುವುದು ತಟ್ಟನೆ ಗಮನಕ್ಕೆ ಬಂದಿತು.

‘ಯಾಕೆ ನಿಂತೇ ಇದೀಯ? ಕೂತುಕೋ,’ ತಟ್ಟನೆ ಅವನ ದನಿ ಬದಲಾಗಿತ್ತು, ಶಾಂತವಾಗಿತ್ತು, ಮೃದುವಾಗಿತ್ತು.
ಕೂತಳು. ಮರುಕಪಡುತ್ತ ಅವಳನ್ನು ನೋಡಿದ.

‘ಎಷ್ಟು ಬಡವಾಗಿದ್ದೀಯ! ನಿನ್ನ ಕೈ ನೋಡು ಕಡ್ಡಿ ಥರ ಇದೆ, ನಿನ್ನ ಬೆರಳು ಹೆಣದ ಬೆರಳಿನ ಹಾಗಿವೆ…’
ಅವಳ ಕೈ ಹಿಡಿದ. ಸೋನ್ಯಾ ಬಲಹೀನವಾಗಿ ನಕ್ಕಳು.

‘ಮೊದಲಿಂದ ನಾನು ಇರೋದೇ ಹಾಗೆ,’ ಅಂದಳು.

‘ನೀನು ಮನೇಲ್ಲಿದ್ದಾಗಲೂ?’

‘ಹ್ಞೂಂ.’

‘ಹ್ಞೂಂ! ಮತ್ತಿನ್ನು ಹೇಗೆ ಇರಕ್ಕೆ ಸಾಧ್ಯ!’ ತಟಕ್ಕನೆ ಅಂದ, ಮುಖದ ಭಾವ, ಮಾತಿನ ದನಿ ಬದಲಾಗಿದ್ದವು.

‘ಈ ರೂಮನ್ನು ದರ್ಜಿ ಕಪೆರ್ನುಮೋವ್‍ ಹತ್ತಿರ ಬಾಡಿಗೆಗೆ ತಗೊಂಡಿದೀಯಾ?’

‘ಹೌದು, ಸಾರ್…’

‘ಅದು ಅವರ ಮನೆಗೆ ಹೋಗುವ ಬಾಗಿಲು?’

‘ಹ್ಞೂಂ… ಅವರದೂ ಇಂಥಾದ್ದೇ ರೂಮು.’

‘ಎಲ್ಲಾನೂ ಒಂದೇ ರೂಮಿನಲ್ಲಿ?’

‘ಹ್ಞೂಂ. ಎಲ್ಲಾ ಒಂದೇ ರೂಮಿನಲ್ಲಿ, ಸಾರ್.’

‘ರಾತ್ರಿ ಹೊತ್ತು ನಿನ್ನ ರೂಮಿನಲ್ಲಿರಬೇಕು ಅಂದರೆ ನನಗೆ ಖಂಡಿತ ಭಯ ಆಗತಿತ್ತು,’ ಮಂಕಾಗಿ ಹೇಳಿದ.

‘ಓನರು ತುಂಬ ಒಳ್ಳೆ ಜನ. ಪ್ರೀತಿಯಿಂದ ನೋಡಿಕೊಳ್ಳತಾರೆ, ತುಂಬ ತುಂಬ ಒಳ್ಳೆ ಜನ,’ ಸೋನ್ಯಾ ಇನ್ನೂ ಪೂರ್ತಿ ಎಚ್ಚರವಾಗದವಳ ಹಾಗೆ ಮಾತಾಡುತಿದ್ದಳು. ‘ಇಲ್ಲಿರುವ ಕುರ್ಚಿ, ಟೇಬಲ್ಲು, ಮಂಚ ಎಲ್ಲ ಎಲ್ಲಾ ಅವರದೇ. ಅಯ್ಯೋ ಪಾಪ ಅನ್ನತಾರೆ, ಅವರ ಮಕ್ಕಳು ಆಗಾಗ ಇಲ್ಲಿ ಬಂದು ನನ್ನ ಜೊತೆ ಆಟ ಆಡತವೆ,’

‘ಅವರು ತೊದಲುತಾರೆ, ಅಲ್ಲವಾ?’

‘ಹೌದು ಸಾರ್… ಓನರು ತೊದಲತಾನೆ, ಜೊತೆಗೆ ಕುಂಟ. ಅವನ ಹೆಂಡತೀನೂ ಅಷ್ಟೆ… ತೊದಲತಾಳೆ ಅಂತಲ್ಲ… ಮಾತು ಸರಿಯಾಗಿ ಆಡಕ್ಕೆ ಕಷ್ಟ, ಅಷ್ಟೆ. ತುಂಬ ಒಳ್ಳೆಯವಳು, ಬಹಳ ಬಹಳ ಮರುಕ, ಓನರು ಮೊದಲು ಯಾರೋ ಸಾಹುಕಾರರ ಮನೇಲ್ಲಿ ಜೀತಕ್ಕಿದ್ದ. ಏಳು ಮಕ್ಕಳಿವೆ. ದೊಡ್ಡವನು ಮಾತ್ರ ತೊದಲತಾನೆ, ಮಿಕ್ಕವರಿಗೆ ಬರೀ ಕಾಯಿಲೆ, ಅಷ್ಟೆ, ಅವರು ಯಾರೂ ತೊದಲಲ್ಲ. ಅವರ ವಿಚಾರ ನಿಮಗೆ ಹೇಗೆ ಗೊತ್ತು?’ ಆಶ್ಚರ್ಯಪಡುತ್ತ ಕೇಳಿದಳು.

‘ನಿಮ್ಮಪ್ಪ ನನಗೆ ಎಲ್ಲಾ ಹೇಳಿದ್ದರು. ನಿನ್ನ ಬಗ್ಗೆನೂ ಎಲ್ಲಾನೂ ಹೇಳಿದ್ದರು… ದಿನಾ ಸಾಯಂಕಾಲ ಆರು ಗಂಟೆಗೆ ಹೊರಗೆ ಹೋಗಿ ಎಂಟು ಗಂಟೆಗೆ ವಾಪಸು ಬರತೀಯ, ಕ್ಯಾತರೀನ ಇವಾನೋವ್ನ ನಿನ್ನ ಹಾಸಿಗೆ ಪಕ್ಕ ಮೊಳಕಾಲೂರಿ ಕೂತುಕೊಳ್ಳತಾ ಇದ್ದಳು…’
ಸೋನ್ಯಾಗೆ ಮುಜುಗರವಾಯಿತು.

‘ಇವತ್ತು ನೋಡಿದೆ, ಕಂಡಹಾಗೆ ಆಯಿತು…’ ಪಿಸುದನಿಯಲ್ಲಿ ಹಿಂಜರಿಯುತ್ತ ಅಂದಳು.

‘ಯಾರನ್ನ?’

‘ನಮ್ಮಪ್ಪನ್ನ. ಇಲ್ಲೇ, ಹತ್ತಿರ. ರಸ್ತೆ ಮೇಲೆ ಬರತಾ ಇದ್ದೆ, ಮೂಲೇಲ್ಲಿ. ಹತ್ತು ಗಂಟೆ ಇರಬಹುದು. ನನ್ನ ಮುಂದೆ ಅಪ್ಪ ನಡಕೊಂಡು ಹೋಗತಾ ಇರೋ ಹಾಗೆ ಕಾಣಿಸಿತು. ಅಪ್ಪನ ಥರಾನೇ. ಕ್ಯಾತರೀನ ಇವಾನೋವ್ನ ಹತ್ತಿರ ಹೋಗತಾ ಇದ್ದೆ…’

‘ಹೊರಗೆ ಹೋಗಿದ್ದೆಯ?’

‘ಹ್ಞೂಂ.ʼ ಸೋನ್ಯ ತಟ್ಟನೆ ಅಂದಳು, ಮತ್ತೆ ಮುಜುಗರವಾಗಿತ್ತು, ನೆಲ ನೋಡುತ್ತಿದ್ದಳು.

‘ನೀನು ಅಪ್ಪನ ಮನೇಲ್ಲಿದ್ದಾಗ ಕ್ಯಾತರೀನ ಇವಾನೋವ್ನ ನಿನ್ನ ಹೊಡೆಯುತಿದ್ದಳಾ?’

‘ಉಹ್ಞೂಂ. ಇಲ್ಲ. ಎಂಥಾ ಮಾತು ಅಂದಿರಿ, ಇಲ್ಲ!’ ಸೋನ್ಯಾ ಒಂದು ಥರ ಭಯದಲ್ಲಿ ಅವನನ್ನು ನೋಡಿದಳು.

‘ನಿನಗೆ ಅವಳ ಮೇಲೆ ಪ್ರೀತಿ ಇದೆಯಾ?’

‘ಪ್ರೀತೀನಾ? ಇ-ಲ್ಲ-ದೇ…ಇ-ರ.ತ್ತಾ!’ ಸೋನ್ಯಾ ಮಾತು ಎಳೆದಳು, ದುಃಖದ ದನಿಯಲ್ಲಿ. ಇದ್ದಕ್ಕಿದ್ದ ಹಾಗೆ ನೋವು ತಿನ್ನುತ್ತಿರುವವಳ ಹಾಗೆ ಕೈಗಳನ್ನು ಬಲವಾಗಿ ಒತ್ತಿಕೊಂಡಳು. ‘ಅಯ್ಯೋ, ನಿಮಗೆ ಅವಳು ಸರಿಯಾಗಿ ಗೊತ್ತಿಲ್ಲ! ಮಗೂ ಥರಾ! ದುಃಖ ಅನುಭವಿಸಿ ತಲೆ ಕೆಟ್ಟ ಹಾಗೆ ಆಗಿದೆ ಅವಳಿಗೆ. ಎಷ್ಟು ಜಾಣೆ, ಒಂದು ಕಾಲದಲ್ಲಿ… ಬೇಡಿದವರಿಗೆ ಕೈ ಎತ್ತಿ ಕೊಡತಿದ್ದಳು… ಎಷ್ಟು ಮರುಕ ಪಡತಿದ್ದಳು! ನಿಮಗೆ ಏನೂ ಗೊತ್ತಿಲ್ಲ, ಏನೂ, ಏನೂ ಗೊತ್ತಿಲ್ಲ… ಆಹ್!’

ಸೋನ್ಯಾ ಆಸೆಗಳೆಲ್ಲ ಸತ್ತವಳ ಹಾಗೆ, ಚಿಂತೆ ಮಾಡುತ್ತ, ನೋವು ತಿನ್ನುತ್ತ, ಕೈ ಹಿಸುಕಿಕೊಳ್ಳುತ್ತ ಮಾತಾಡಿದಳು. ಬಿಳಿಚಿದ್ದ ಅವಳ ಕೆನ್ನೆ ಮತ್ತೆ ಕೆಂಪಾದವು. ಹಿಂಸೆಗೆ ಗುರಿಯಾದವಳ ನೋಟವಿತ್ತು ಅವಳ ಕಣ್ಣಿನಲ್ಲಿ. ವಿಚಲಿತಳಾಗಿದ್ದಳು, ಏನೋ ಹೇಳಲೇಬೇಕು ಅನ್ನುವ ಒದ್ದಾಟ ಅನುಭವಿಸುತ್ತಿದ್ದಳು, ಕ್ಯಾತರೀನಳನ್ನು ಸಮರ್ಥಿಸಬೇಕು ಅನ್ನುವ ಆಸೆ ಇತ್ತು ಅನಿಸುತ್ತಿತ್ತು. ಎಂದೂ ತಣಿಯದ ಮರುಕ (ಹಾಗೆಂದು ವಿವರಿಸಬಹುದೋ ಏನೋ) ಅವಳ ಮುಖದಲ್ಲೆಲ್ಲ ಕಾಣುತ್ತಿತ್ತು.

‘ನನ್ನ ಹೊಡೆಯುವುದಾ? ಸರಿ, ಹೊಡೆದರೆ ಏನಂತೆ? ನಿಮಗೆ ಏನೇನೂ ಗೊತ್ತಿಲ್ಲ… ಅವಳಿಗೆ ಸಂತೋಷ ಇರಲಿಲ್ಲ, ಅಯ್ಯೋ, ಎಷ್ಟು ನೋಯುತ್ತಿದ್ದಳು. ಎಷ್ಟು ಕಾಯಿಲೆ… ನ್ಯಾಯ ಬೇಕು ಅನ್ನುತಿದ್ದಳು… ಅವಳಿಗೆ ನಂಬಿಕೆ ಜಾಸ್ತಿ. ಎಲ್ಲದರಲ್ಲೂ ಎಲ್ಲಾರಲ್ಲೂ ನ್ಯಾಯ ಇರಬೇಕು ಅನ್ನುತಿದ್ದಳು. ಅವಳಿಗೆ ಎಷ್ಟೇ ಹಿಂಸೆ ಕೊಟ್ಟರೂ ಅನ್ಯಾಯದ ಕೆಲಸ ಮಾಡುವವಳಲ್ಲ. ಎಲ್ಲ ಜನರೂ ನ್ಯಾಯವಂತರಾಗಿರುವುದು ಸಾಧ್ಯವೇ ಇಲ್ಲ ಅನ್ನೋದು ಅವಳಿಗೆ ತಿಳಿಯುತಿರಲಿಲ್ಲ. ಹಾಗಾಗಿ ಇನ್ನೂ ನೊಂದುಕೊಳ್ಳತಿದ್ದಳು… ಮಗು ಥರ, ಮಗೂ ಹಾಗೇನೇ! ನ್ಯಾಯವಂತೆ ಅವಳು!’

‘ಮತ್ತೆ ನಿನ್ನ ಗತಿ ಏನು?’
ಸೋನ್ಯಾ ಪ್ರಶ್ನೆಯನ್ನು ಕೇಳುವವಳ ಹಾಗೆ ಅವನನ್ನು ನೋಡಿದಳು.

‘ಅವರೆಲ್ಲಾರ ಭಾರ ನಿನ್ನ ಮೇಲೇ ಇದೆ, ಗೊತ್ತಲ್ಲ. ನಿಜ, ಮೊದಲೂ ಮನೆ ಜವಾಬ್ದಾರಿ ನೀನೇ ಹೊತ್ತಿದ್ದೆ. ನಿಮ್ಮಪ್ಪ ಹೆಂಡ ಕುಡಿಯುವುದಕ್ಕೂ ಕಾಸು ಕೇಳಿಕೊಂಡು ನಿನ್ನ ಹತ್ತಿರ ಬರೋನು. ಈಗ ನಿನ್ನ ಗತಿ ಏನು?’

‘ಗೊತ್ತಿಲ್ಲಾ…’ ಸೋನ್ಯಾ ದುಃಖದಲ್ಲಿ ನಿಧಾನವಾಗಿ ಅಂದಳು.

‘ಅವರು ಅಲ್ಲೇ ಇರುತ್ತಾರಾ?’

‘ಗೊತ್ತಿಲ್ಲ. ಬಾಡಿಗೆ ಬಾಕಿ ಇದೆಯಂತೆ. ಇವತ್ತು ಬೆಳಗ್ಗೆ ಓನರಮ್ಮ ಹೇಳಿದ್ದು ಕೇಳಿದೆ. ಕ್ಯಾತೀರನ ಇವಾನೋವ್ನಾಳ ಒಂದೇ ಒಂದು ದಿನ ಕೂಡ ಇರಲ್ಲ, ಮನೆ ಖಾಲಿ ಮಾಡತೇನೆ ಅಂದಳು.’

‘ಅದೇನು ಅವಳಿಗೆ ಅಷ್ಟೊಂದು ಧೈರ್ಯ? ನೀನು ಅವರಿಗೆ ನೆರಳು ಕೊಡುತ್ತೀಯ ಅಂದುಕೊಂಡಿದ್ದಾಳಾ?’

‘ಅಯ್ಯೋ, ಇಲ್ಲ. ಹಾಗೆಲ್ಲ ಮಾತಾಡಬೇಡಿ!… ನಾವೆಲ್ಲ ಒಂದೇ.’ ಸೋನ್ಯಾ ಮತ್ತೆ ಉದ್ವೇಗಕ್ಕೆ ಗುರಿಯಾದಳು. ಸಿಟ್ಟುಗೊಂಡ ಪುಟ್ಟ ಹಕ್ಕಿಯ ಹಾಗೆ ಕೆರಳಿ ಮಾತಾಡಿದಳು. ‘ಮತ್ತೇನು ಮಾಡಬೇಕು ಅವಳು? ಇನ್ನೇನು ಮಾಡಬೇಕು?’ ಕೋಪ, ಉದ್ರೇಕದಲ್ಲಿ ಮತ್ತೆ ಮತ್ತೆ ಕೇಳಿದಳು. ಹೇಗೆ ಅತ್ತಳು ಗೊತ್ತಾ ಇವತ್ತು! ಅವಳ ಸ್ಥಿಮಿತ ಕೆಡತಿದೆ, ನೋಡಲಿಲ್ಲವಾ ನೀವು? ಅವಳ ತಲೆ ಪೂರಾ ಕೆಟ್ಟು ಹೋಗಿದೆ. ಏನು ನೋಡಿದರೂ, ಏನೇ ಆದರೂ ಪುಟ್ಟ ಹುಡುಗಿ ಹಾಗೆ ಕಳವಳ ಪಡತಾಳೆ, ನಾಳೆ ಎಲ್ಲ ಸರಿಯಾಗಿರಬೇಕು, ಪೂಜೆ, ಊಟ ಎಲ್ಲ ಅಂತ ಸುಮ್ಮನೆ ಚಿಂತೆ ಮಾಡತಾಳೆ, ಇಲ್ಲಾ ಅಂದರೆ ಕೈ ಹಿಂಡಿಕೊಳ್ಳತಾ ಕೆಮ್ಮತಾ, ರಕ್ತ ವಾಂತಿಮಾಡಿಕೊಂಡಿರತಾಳೆ. ಅಳತಾಳೆ, ಗೋಡೆಗೆ ತಲೆ ಚಚ್ಚಿಕೊಳ್ಳತಾಳೆ. ಮತ್ತೆ ಸಮಾಧಾನ ಮಾಡಿಕೊಂಡು ನೀವಿದೀರಲ್ಲ ನೀವು ಸಹಾಯ ಮಾಡತೀರಿ ಅಂತಾಳೆ. ಎಲ್ಲಿಂದಾದರೂ ದುಡ್ಡು ಬರತ್ತೆ, ತಗೊಂಡು ಊರಿಗೆ ವಾಪಸ್ಸು ಹೋಗಿ ದೊಡ್ಡವರ ಮನೆ ಮಕ್ಕಳಿಗೆ ಸ್ಕೂಲು ಶುರುಮಾಡತೇನೆ ನಿನ್ನನ್ನ ಸೂಪರ್ವೈಸರ್ ಮಾಡತೇನೆ ಅಂತ ನನಗೆ ಹೇಳತಾಳೆ, ಹೊಸ ಬದುಕು ಶುರುವಾಗತ್ತೆ ಅಂತಾಳೆ. ನನ್ನ ಅಪ್ಪಿ, ಮುತ್ತಿಟ್ಟು, ಸಮಾಧಾನ ಮಾಡತಾಳೆ. ತಾನು ಅಂದುಕೊಂಡಿದ್ದೆಲ್ಲ ನಿಜಾನೇ ಅಂತ ನಂಬತಾಳೆ! ಅವಳ ಮಾತನ್ನ ತೆಗೆದು ಹಾಕೋದು ಹ್ಯಾಗೆ? ಇವತ್ತು ಇಡೀ ದಿನ ಬಟ್ಟೆ ಒಗೀತಾ, ಮನೆ ಕ್ಲೀನು ಮಾಡತಾ, ಹರಿದ ಬಟ್ಟೆ ಹೊಲೀತಾ ಕಳೆದಳು. ದೊಡ್ಡ ಬೋಗುಣಿ ಅವಳೇ ರೂಮಿಗೆ ಹೊತ್ತುಕೊಂಡು ಬಂದಳು. ಮೈಯಲ್ಲಿ ಶಕ್ತಿ ಇಲ್ಲ, ಉಸಿರಾಡಕ್ಕೆ ಆಗದೆ ಕುಸಿದು ಬಿದ್ದಳು. ಅವಳ ಜೊತೆ ನಾನೂ ಮಾರ್ಕೆಟ್ಟಿಗೆ ಹೋಗಿದ್ದೆ, ಬೆಳಿಗ್ಗೆ. ಪೊಲೆಕ್ಚಾ ಲೆನ್ಯಾ ಇಬ್ಬರಿಗೂ ಶೂ ತರಬೇಕು ಅಂತ.. ಅವರ ಶೂ ಹರಿದಿವೆ, ತುಂಬ ಒಳ್ಳೆ ಶೂ ಆರಿಸಿದ್ದಳು. ಅವಳಿಗೆ ಒಳ್ಳೆಯ ಟೇಸ್ಟು ಇದೆ. ಅಲ್ಲೇ, ನಮ್ಮ ಹತ್ತಿರ ಅಷ್ಟು ದುಡ್ಡಿಲ್ಲ ಅಂತ ಅಂಗಡಿಯವರ ಎದುರಿಗೇ ಅತ್ತುಬಿಟ್ಟಳು, ನೋಡಿ ಅಯ್ಯೋ ಪಾಪ ಅನಿಸಿಬಿಡ್ತು!’

‘ಇದೆಲ್ಲ ಕೇಳಿದ ಮೇಲೆ ನೀನು ಯಾಕೆ ಹೀಗಿದ್ದೀಯ ಅಂತ ಅರ್ಥ ಆಗತ್ತೆ.’ ಅನ್ನುತ್ತ ರಾಸ್ಕೋಲ್ನಿಕೋವ್ ಕಹಿಯಾಗಿ ನಕ್ಕ.

‘ನಿಮಗೆ ಅವಳ ಮೇಲೆ ಕರುಣೆ ಇಲ್ಲವಾ? ಇಲ್ಲವಾ?’ ಸೋನ್ಯಾ ಮತ್ತೆ ಸಿಡುಕಿದಳು. ‘ನೀವು ನಿಮ್ಮ ಹತ್ತಿರ ಇದ್ದದ್ದೆಲ್ಲ ಅವಳಿಗೆ ಕೊಟ್ಟಿರಿ. ನಿಮಗೆ ಏನೇನೂ ಗೊತ್ತಿರಲಿಲ್ಲ. ಗೊತ್ತಿದ್ದಿದ್ದರೆ. ಅಯ್ಯೋ ದೇವರೇ! ಎಷ್ಟೊಂದು ಸಾರಿ ಅವಳು ಕಣ್ಣಲ್ಲಿ ನೀರು ತಂದುಕೊಳ್ಳೊ ಹಾಗೆ ಮಾಡಿದೀನಿ! ನಮ್ಮಪ್ಪ ಸಾಯಕೆ ಒಂದು ವಾರ ಮುಂಚೆ ಕೂಡ ಕ್ರೂರವಾಗಿ ನಡಕೊಂಡೆ! ಒಂದಲ್ಲ ಬೇಕಾದಷ್ಟು ಸಲ! ಕ್ರೂರಿ ನಾನು. ಎಷ್ಟು ನೋವು ತಿಂದಿದೀನಿ ಅದಕ್ಕೆ!’

ಮಾತಾಡುತ್ತಿರುವಾಗ ಸೋನ್ಯಾ ಕೈ ಹಿಸುಕಿಕೊಳ್ಳುತ್ತಿದ್ದಳು. ನೆನಪು ಅಷ್ಟು ನೋವು ಕೊಡುತ್ತಿತ್ತು.

‘ನೀನು? ಕ್ರೂರಿ!’

‘ಹ್ಞೂಂ. ನಾನೇ. ಆಗ ತಾನೇ ಮನೆಗೆ ಬಂದಿದ್ದೆ. ನಮ್ಮಪ್ಪ ಆಗ, ‘ಸೋನ್ಯಾ, ತಲೆ ನೋಯತ್ತಾ ಇದೆ, ಏನಾದರೂ ಓದಿ ಹೇಳು, ಅಗೋ ಅಲ್ಲೊಂದು ಪುಸ್ತಕ ಇದೆ,’ ಅಂದ—ಅಪ್ಪನ ಹತ್ತಿರ ಯಾವುದೋ ಪುಸ್ತಕ ಇದ್ದವು. ಅಂದ್ರೆ ಹತ್ತಿರ, ಲಿಬೆಝ್ಯತ್ನಿಕೋವ್‍ ಹತ್ತಿರ (ಇಲ್ಲೇ ಹತ್ತಿರ ಅವನ ಮನೆ) ತಮಾಷೆ ಪುಸ್ತಕ ತಗೊಂಡು ಬರತಿದ್ದ. ನಂಗೆ ಟೈಮಿಲ್ಲ, ಹೋಗಬೇಕು-ಅಂದೆ. ಪುಸ್ತಕ ಓದಕ್ಕೆ ಮನಸಿರಲಿಲ್ಲ. ಕ್ಯಾತರೀನ ಇವಾನೋವ್ನಾಗೆ ಕಾಲರುಗಳನ್ನ ತೋರಿಸಕ್ಕೆ ಬಂದಿದ್ದೆ. ಲಿಝವೆಟ ಅವನ್ನ ತಂದಿದ್ದಳು. ಕಡಮೆ ಬೆಲೆಯ ಕಾಲರು, ಕಫ್ ಗಳು. ಸುಮಾರಾಗಿ ಹೊಸವೇನೇ. ಡಿಸೈನ್ ಇದ್ದವು. ಕ್ಯಾತರೀನ ಇವಾನೋವ್ನಗೆ ಇಷ್ಟ ಆದವು. ಅವನ್ನ ಹಾಕ್ಕೊಂಡು ಕನ್ನಡಿಯಲ್ಲಿ ನೋಡಿಕೊಂಡಳು. ತುಂಬ, ತುಂಬ ಇಷ್ಟ ಆದವು. ಸೋನ್ಯಾ ಪ್ಲೀಸ್, ನನಗೆ ಕೊಡೇ ಇವನ್ನ-ಅಂದಳು.

‘ಕಾಲರ್ ಹಾಕ್ಕೊಂಡು ಎಲ್ಲಿಗೆ ತಾನೇ ಹೋಗತಾಳೆ? ಸುಖವಾಗಿದ್ದ ಕಾಲ ನೆನಪು ಮಾಡಿಕೊಂಡು ಸುಮ್ಮನೆ ಕೇಳಿದ್ದಳು. ಕನ್ನಡಿಯಲ್ಲಿ ನೋಡಿಕೊಂಡಳು, ತನ್ನನ್ನ ತಾನೇ ಮೆಚ್ಚಿಕೊಂಡಳು, ಅವಳ ಹತ್ತಿರ ಡ್ರೆಸ್ ಇರಲಿಲ್ಲ, ಏನೂ ಇರಲಿಲ್ಲ. ಬಟ್ಟೆ ತಗೊಂಡು ಎಷ್ಟೋ ವರ್ಷ ಆಗಿತ್ತು! ಯಾರನ್ನೂ ಏನೂ ಯಾವತ್ತೂ ಕೇಳಿದವಳಲ್ಲ. ಅವಳ ಹತ್ತಿರ ಇರೋದನ್ನೆಲ್ಲ ಕೊಟ್ಟು ಬಿಡುವವಳು. ಅವತ್ತು ನನಗೆ ಇದು ಬೇಕು ಅಂತ ಕೇಳಿದಳು—ತುಂಬ ಇಷ್ಟ ಆಗಿತ್ತು ಅವಳಿಗೆ. ನನಗೆ ಕೊಡುವ ಮನಸಿರಲಿಲ್ಲ, ನಿನಗೆ ಯಾಕೆ ಬೇಕು ಅವು?-ಅಂದುಬಿಟ್ಟೆ. ಹಾಗೆ ಅನ್ನಬಾರದಾಗಿತ್ತು.. ನನ್ನ ಸುಮ್ಮನೆ ನೋಡಿದಳು. ನಾನು ಕೊಡಲಿಲ್ಲ ಅಂತ ತುಂಬ ದುಃಖಪಟ್ಟಿದ್ದಳು. ಅವಳನ್ನ ನೋಡಿದರೆ ಅಯ್ಯೋ ಅನಿಸುತಿತ್ತು… ಕಾಲರ್ ಕಾರಣಕ್ಕಲ್ಲ ಅವಳಿಗೆ ಬೇಜಾರಾಗಿದ್ದು, ನಾನು ಇಲ್ಲ ಅಂದಿದ್ದಕ್ಕೆ ಬೇಜಾರಾಗಿತ್ತು. ಅದು ತಿಳಿಯಿತು. ಆ ದಿನ ಮತ್ತೆ ವಾಪಸ್ಸು ಬಂದು ನಾನು ಆಡಿದ ಮಾತನ್ನೆಲ್ಲ ಅಳಿಸಿ ಹಾಕುವ ಹಾಗಿದ್ದಿದ್ದರೆ… ಅಯ್ಯೋ… ಅದೆಲ್ಲಾ ಯಾಕೆ ಹೇಳತಾ ಇದೀನಿ… ನಿಮಗೇನಾಗಬೇಕು ಅದರಿಂದ!’

‘ಲಿಝವೆಟ, ನಿನಗೆ ಗೊತ್ತ?’

‘ಹ್ಞೂಂ… ಯಾಕೆ, ನಿಮಗೂ ಗೊತ್ತಾ?’ ಸೋನ್ಯಾ ಕೂಡ ಆಶ್ಚರ್ಯದಿಂದ ಕೇಳಿದಳು.
ರಾಸ್ಕೋಲ್ನಿಕೋವ್ ಆ ಮಾತಿಗೆ ಉತ್ತರ ಕೊಡದೆ ಸ್ವಲ್ಪ ಹೊತ್ತು ಸುಮ್ಮನಿದ್ದ. ‘ಕ್ಯಾತರೀನ ಇವಾನೋವ್ನಾಗೆ ಕ್ಷಯ. ಸ್ವಲ್ಪ ದಿವಸಕ್ಕೆ ಸತ್ತು ಹೋಗತಾಳೆ,’ ಅಂದ.

‘ಇಲ್ಲಾ, ಇಲ್ಲಾ!’ ಅನ್ನುತ್ತ ಸೋನ್ಯ ತನಗೇ ಗೊತ್ತಿಲ್ಲದ ಹಾಗೆ ಅವನ ಎರಡೂ ಕೈ ಹಿಡಿದುಕೊಂಡಳು—ಇದು ಸುಳ್ಳು ಅನ್ನು ಅನ್ನುವ ಹಾಗೆ.

‘ಅವಳಿಗೆ ಸಾವು ಬಂದರೇ ಒಳ್ಳೇದು.’ ಅಂದ

‘ಇಲ್ಲಾ, ಇಲ್ಲಾ. ಒಳ್ಳೇದಲ್ಲ, ಅಲ್ಲ, ಒಳ್ಳೇದಲ್ಲಾ! ಭಯದಲ್ಲಿ ಮತ್ತೆ ಮತ್ತೆ ಅದನ್ನೇ ಹೇಳಿದಳು.

‘ಮತ್ತೆ ಮಕ್ಕಳು? ನೀನು ಅವರನ್ನ ನೋಡಿಕೊಳ್ಳದಿದ್ದರೆ ಎಲ್ಲಿಗೆ ಹೋಗತಾರೆ ಅವರು?’

‘ನಿಜವಾಗಲೂ ನಂಗೊತ್ತಿಲ್ಲ!’ ಸೋನ್ಯಾ ಚೀರಿದಳು, ಎರಡೂ ಕೈಯಲ್ಲಿ ತಲೆ ಹಿಡಿದು ಒತ್ತಿಕೊಂಡಳು. ಆ ಯೋಚನೆ ಅವಳಿಗೆ ಆಗಲೇ ಎಷ್ಟೋ ಸಾರಿ ಬಂದಿತ್ತು, ಈಗ ಮತ್ತೆ ನೆನಪಿಗೆ ಬಂದಿದೆ ಅನ್ನುವುದು ತಿಳಿಯುತ್ತಿತ್ತು.

‘ಈಗ, ಕ್ಯಾತರೀನ ಬದುಕಿರೋವಾಗಲೇ ನಿನಗೇ ಕಾಯಿಲೆಯಾದರೆ? ನಿನ್ನ ಆಸ್ಪತ್ರೆಗೆ ಸೇರಿಸಿದರೆ?’ ಕರುಣೆ ಇಲ್ಲದವನ ಹಾಗೆ ಮತ್ತೆ ಕೇಳಿದ.

‘ಅಯ್ಯೋ, ಇಲ್ಲ, ಇಲ್ಲಾ, ಹಾಗಾಗಲ್ಲ!’ ಸೋನ್ಯಾಳ ಮುಖ ಭಯದಿಂದ ಆಕಾರ ಕೆಟ್ಟಿತ್ತು.

‘ಯಾಕಾಗಲ್ಲ?’ ಕ್ರೂರವಾಗಿ ನಗುತ್ತ ರಾಸ್ಕೋಲ್ನಿಕೋವ್ ಕೇಳಿದ, ‘ನೀನು ಇನ್ಶೂರೆನ್ಸ್ ಮಾಡಿಸಿಲ್ಲ, ಅಲ್ಲವಾ? ಅವರ ಗತಿ ಏನು? ಬೀದಿಗೆ ಬೀಳತಾರೆ, ಎಲ್ಲಾರೂ. ಅವಳು ಕೆಮ್ಮತಾ ಭಿಕ್ಷೆ ಬೇಡತಾ, ಇವತ್ತು ಮಾಡಿದ ಹಾಗೆ ಗೋಡೆಗೆ ತಲೆ ಚಚ್ಚಿಕೊಳ್ಳುತಾಳೆ. ಮಕ್ಕಳು ಅಳತಾವೆ ಆಮೇಲೆ ಪೋಲೀಸ್‍ ಸ್ಟೇಶನ್ನು, ಆಸ್ಪತ್ರೆ.. ಸಾಯತಾವೆ ಮಕ್ಕಳು…’

‘ಅಯ್ಯೋ! ಇಲ್ಲಾ, ಹಾಗಾಗಕ್ಕೆ ದೇವರು ಬಿಡಲ್ಲ, ಕಾಪಾಡತಾನೆ!’ ಇದ್ದಕಿದ್ದ ಹಾಗೆ ಸೋನ್ಯಾಳ ಎದೆಯಾಳದ ಮಾತು ಹೊರಬಂದಿತು. ಯಾಚಕಳ ಹಾಗೆ ಅವನನ್ನು ನೋಡುತ್ತ, ಮೂಕ ಯಾಚನೆಯಲ್ಲಿ ಕೈ ಹಿಡಿದು, ಎಲ್ಲವೂ ಅವನನ್ನೇ ಅಲಂಬಿಸಿವೆ ಅನ್ನುವ ಹಾಗೆ ಅವನ ಮಾತಿಗೆ ಕಾಯ್ದಳು.

ರಾಸ್ಕೋಲ್ನಿಕೋವ್ ಎದ್ದ. ರೂಮಿನಲ್ಲಿ ಅತ್ತ ಇತ್ತ ಹೆಜ್ಜೆ ಹಾಕಿದ. ಒಂದು ನಿಮಿಷ ಕಳೆಯಿತು. ಸೋನ್ಯಾ ಕೈ ಇಳಿಬಿಟ್ಟುಕೊಂಡು, ತಲೆ ಬಗ್ಗಿಸಿಕೊಂಡು ತೀರ ನೋಯುತ್ತ ಕಾಯುತ್ತಿದ್ದಳು.

‘ದುಡ್ಡು ಉಳಿಸಕ್ಕಾಗಲ್ಲವಾ? ಸ್ವಲ್ಪಾನೂ?’ ತಟ್ಟನೆ ಅವಳೆದುರು ನಿಂತು ಕೇಳಿದ.
ಪಿಸುದನಿಯಲ್ಲಿ ‘ಇಲ್ಲ,’ ಅಂದಳು.

‘ಉಳಿಸಿಲ್ಲ, ಗೊತ್ತಾಗತಿದೆ. ಹೋಗಲಿ, ಪ್ರಯತ್ನಪಟ್ಟೆಯಾ?’ ಅಣಕಿಸುವ ಹಾಗೆ ಕೇಳಿದ.

‘ಹ್ಞೂಂ.’

‘ಆದರೂ ಆಗಲಿಲ್ಲ, ಹೌದು ತಾನೇ? ಕೇಳೋದೇನಿದೆ ಅದರಲ್ಲಿ!’

ಮತ್ತೆ ಹೆಜ್ಜೆ ಹಾಕಿದ. ಇನ್ನೊಂದು ನಿಮಿಷ ಕಳೆಯಿತು.

‘ದುಡ್ಡು ನಿನಗೆ ದಿನಾ ಸಿಗಲ್ಲ?’
ಸೋನ್ಯ ಮತ್ತೆ ಮುಜುಗರಪಟ್ಟಳು. ಮುಖಕ್ಕೆ ರಕ್ತ ಮತ್ತೆ ನುಗ್ಗಿಬಂತು.

ನೊಂದುಕೊಂಡು ಹೆಣಗುತ್ತ ‘ಇಲ್ಲ’ ಅಂದಳು. ದನಿ ಪಿಸುದನಿಯಾಗಿತ್ತು.

‘ಪೊಲೆಚ್ಕಾ ಗತೀನೂ ಇಷ್ಟೇ, ತಪ್ಪಿದ್ದಲ್ಲ,’ ತಟ್ಟನೆ ಅಂದ.

‘ಇಲ್ಲ, ಇಲ್ಲ! ಹಾಗಾಗಬಾರದು, ಆಗಲ್ಲ! ಇಲ್ಲ!’ ಸೋನ್ಯಾ ಜೋರಾಗಿ ಅಂದಳು—ಯಾರೋ ಚಾಕುವಿನಲ್ಲಿ ಇರಿದ ಹಾಗೆ, ದಿಕ್ಕೆಟ್ಟವಳ ಹಾಗೆ.

‘ಹಾಗಾಗಕ್ಕೆ ದೇವರು ಬಿಡಲ್ಲ, ಕಾಪಾಡತಾನೆ!…’ ಅಂದಳು.

‘ಬೇರೆಯವರಿಗೆ ಹಾಗೆಲ್ಲ ಆಗೋ ಹಾಗೆ ಮಾಡಿದಾನೆ ದೇವರು.’

‘ಇಲ್ಲ, ಇಲ್ಲ! ದೇವರು ಅವಳನ್ನ ಕಾಪಾಡತಾನೆ! ದೇವರೇ…ʼ ಮೈಮೇಲೆ ಎಚ್ಚರ ಇಲ್ಲದವಳ ಹಾಗೆ ಅಂದಳು.

‘ದೇವರು ಇಲ್ಲ!’ ರಾಸ್ಕೋಲ್ನಿಕೋವ್ ಕೆಟ್ಟ ಸಂತೋಷ ಅನುಭವಿಸುತ್ತ ಹೇಳಿದ, ಅವಳನ್ನ ನೋಡುತ್ತ ನಕ್ಕ.

ಸೋನ್ಯಾಳ ಮುಖ ಭೀಕರವಾಗಿತ್ತು. ಮೈಯಲ್ಲೆಲ್ಲ ನೋವು ಹರಿದಾಡಿತು. ಬಾಯಿ ಬಿಟ್ಟು ಹೇಳಲಾಗದಂಥ ನಿಂದನೆಯನ್ನು ಕಣ್ಣಲ್ಲಿ ತುಂಬಿಕೊಂಡು ಅವನನ್ನು ನೋಡಿದಳು ಏನೋ ಹೇಳಬೇಕು ಅಂದುಕೊಂಡಳು. ಬಾಯಿಂದ ಮಾತು ಬರಲಿಲ್ಲ, ಕಣ್ಣಲ್ಲಿ ನೀರು ತುಂಬಿತ್ತು.
‘ಕ್ಯಾತರೀನ ಇವಾನೋವ್ನಳ ತಲೆ ಕೆಡತಾ ಇದೆ ಅನ್ನುತೀಯ, ನಿನ್ನ ತಲೇನೂ ಕೆಡತಾ ಇದೆ,’ ಸ್ವಲ್ಪ ಹೊತ್ತು ಸುಮ್ಮನಿದ್ದು ಹೇಳಿದ.
ಸುಮಾರು ಐದು ನಿಮಿಷ ಕಳೆದವು. ಅವಳತ್ತ ನೋಡದೆ, ತಲೆ ತಗ್ಗಿಸಿಕೊಂಡು ಅತ್ತ ಇತ್ತ ಹೆಜ್ಜೆ ಹಾಕುತ್ತಲೇ ಇದ್ದ. ಕೊನೆಗೆ ಅವಳೆದುರು ಹೋಗಿ ನಿಂತ. ಕಣ್ಣು ಉಜ್ವಲವಾಗಿದ್ದವು. ಅವಳ ಎರಡೂ ಭುಜವನ್ನು ಹಿಡಿದ. ಅಳುತಿದ್ದವಳ ಮುಖವನ್ನು ಉರಿಗಣ್ಣಿನಲ್ಲಿ ದಿಟ್ಟಿಸಿದ. ಇದ್ದಕಿದ್ದ ಹಾಗೆ ನೆಲಕ್ಕೆ ಬಗ್ಗಿ ಅವಳ ಪಾದಕ್ಕೆ ತಲೆಯೊತ್ತಿ ಮುತ್ತಿಟ್ಟ. ಹುಚ್ಚನನ್ನು ಕಂಡವಳ ಹಾಗೆ ಸೋನ್ಯಾ ಬೆಚ್ಚಿ ಹಿಮ್ಮೆಟ್ಟಿದಳು. ನಿಜವಾಗಿಯೂ ಹುಚ್ಚನ ಹಾಗೇ ಕಾಣುತ್ತಿದ್ದ. ‘ಏನಿದು? ಏನು ಮಾಡುತಿದ್ದೀರಿ? ಯಾಕೆ, ನನಗೆ ನಮಸ್ಕಾರ!’ ಮುಖ ಬಿಳಿಚಿ ಗೊಣಗಿದಳು. ಅವಳ ಎದೆ ಹಿಂಡಿದಂತೆ ಅನಿಸಿ ನೋವುಪಟ್ಟಳು.
ತಟ್ಟನೆ ಎದ್ದು ನಿಂತ.

‘ನಿನಗಲ್ಲ ನಮಸ್ಕಾರ ಮಾಡಿದ್ದು. ಎಲ್ಲ ಮನುಷ್ಯರ ನೋವಿಗೆ,’ ಅಂತ ಹೇಗೋ ಅಂದವನೇ ಕಿಟಕಿಯ ಹತ್ತಿರ ಹೋದ. ಒಂದು ನಿಮಿಷ ಬಿಟ್ಟು ಅವಳ ಹತ್ತಿರ ಬಂದು, ‘ಕೇಳು, ಒಬ್ಬ ಅಪರಾಧಿಗೆ ಸ್ವಲ್ಪ ಹೊತ್ತಿನ ಮೊದಲು ಅವನು ನಿನ್ನ ಕಾಲ ಕಿರುಬೆರಳಿಗೆ ಸಮ ಅಲ್ಲ, ನನ್ನ ತಂಗಿಯನ್ನು ನಿನ್ನ ಪಕ್ಕದಲ್ಲಿ ಕೂರಿಸಿ ತಂಗಿಗೆ ಗೌರವ ತೋರಿಸಿದೆ ಅಂತ ಹೇಳಿದೆ.’

‘ಎಂಥ ಮಾತು ಹೇಳಿದಿರಿ! ನೀವು ಹಾಗಂದಾಗ ನಿಮ್ಮ ತಂಗಿಯೂ ಇದ್ದಳಾ?’ ಸೋನ್ಯಾ ಭಯದಲ್ಲಿ ಕೇಳಿದಳು. ‘ನನ್ನ ಪಕ್ಕ ಕೂರುವುದು… ಗೌರವ! ನನಗೇ ಗೌರವ ಇಲ್ಲ, ಮರ್ಯಾದೆ ಇಲ್ಲ… ಮಹಾ ಪಾಪಿ ನಾನು! ಎಂಥಾ ಮಾತು, ಹಾಗೆಲ್ಲ ಹೇಳಬಾರದಾಗಿತ್ತು.’

‘ನೀನು ಮರ್ಯಾದೆ ಇಲ್ಲದವಳು ಅಂತಲ್ಲ, ಪಾಪಿ ಅಂತಲೂ ಅಲ್ಲ. ನೀನು ಪಡತಾ ಇರುವ ನೋವಿಗೆ, ಸಂಕಟಕ್ಕೆ ಹಾಗಂದೆ.’ ಉನ್ಮತ್ತನ ಹಾಗೆ ಮಾತಾಡುತ್ತಿದ್ದ. ‘ನೀನು ಪಾಪಿ, ನಿಜ. ನೀನು ಮಾಡಿರುವ ಮಹಾ ಪಾಪ ಏನು ಗೊತ್ತಾ? ವ್ಯರ್ಥವಾಗಿ ನಿನಗೆ ನೀನೇ ವಂಚನೆ ಮಾಡಿಕೊಂಡಿದ್ದೀಯ, ನಿನ್ನ ನೀನೇ ನಾಶಮಾಡಿಕೊಂಡಿದ್ದೀಯ. ಭಯಂಕರ! ನೀನೇ ಅಸಹ್ಯಪಡುವ ಕೊಳಕಿನಲ್ಲಿ ಬದುಕುತಾ ಇದೀಯ, ನಿನಗೂ ಗೊತ್ತು (ಸ್ವಲ್ಪ ಕಣ್ಣು ತೆರೆದು ನೋಡಿದರೆ ಸಾಕು ನೀನು) ನೀನು ಹೀಗೆ ಬದುಕುತ್ತಾ ಯಾರಿಗೂ ಸಹಾಯ ಮಾಡುತ್ತಿಲ್ಲ, ಯಾರನ್ನೂ ಕಾಪಾಡುತ್ತಿಲ್ಲ! ಹೇಳು ನನಗೆ,’ ಉನ್ಮತ್ತನ ಹಾಗೆ ಕೇಳಿದ, ‘ಅಷ್ಟೊಂದು ನಿಸ್ವಾರ್ಥ, ಪವಿತ್ರ ಭಾವನೆಗಳ ಜೊತೆ ನಿನ್ನೊಳಗೆ ಇಂಥ ನಾಚಿಕೆಗೇಡು, ಇಂಥ ಕೊಳಕು, ಅಸಹ್ಯ ಇವೆಲ್ಲ ಇರುವುದಾದರೂ ಹೇಗೆ? ಹೀಗೆ ಬದುಕುವುದಕ್ಕಿಂತ ತಲೆಕೆಳಗಾಗಿ ನೀರಿಗೆ ಧುಮುಕಿ ಒಂದೇ ಸಾರಿಗೆ ಕತೆ ಮುಗಿಸುವುದು ಸಾವಿರ ಪಾಲಿಗೆ ಮೇಲು ಅನಿಸತ್ತೆ!ʼ

‘ಹಾಗೆ ಮಾಡಿದರೆ ಅವರ ಗತಿ ಏನು?ʼ ಸೋನ್ಯಾ ಕ್ಷೀಣವಾದ ದನಿಯಲ್ಲಿ ಕೇಳಿದಳು. ದನಿಯಲ್ಲಿ ಸಂಕಟವಿತ್ತು, ನೋಟ ಅವನ ಮೇಲೇ ಇತ್ತು. ಅವನ ಮಾತಿನಿಂದ ಏನೇನೂ ಆಶ್ಚರ್ಯವಾಗಿರಲಿಲ್ಲ ಅವಳಿಗೆ. ಅವಳ ಆ ಒಂದು ನೋಟದಿಂದ ಅವನಿಗೆ ಎಲ್ಲವೂ ಅರ್ಥವಾಯಿತು. ಹಾಗಾದರೆ ನಿಜವಾಗಲೂ ಅವಳು ಆ ಯೋಚನೆ ಮಾಡಿದ್ದಾಳೆ. ಒಂದಲ್ಲ ಹಲವು ಬಾರಿ ಅಂಥ ಯೋಚನೆ ಬಂದಿದೆ, ಒಂದೇ ಏಟಿಗೆ ಎಲ್ಲವನ್ನೂ ಮುಗಿಸಿಕೊಂಡುಬಿಡುವ ಯೋಚನೆಯನ್ನು ನಿಜವಾಗಿಯೂ ಮಾಡಿದ್ದಾಳೆ. ಅದಕ್ಕೇ ಅವನ ಮಾತಿನಿಂದ ಅವಳಿಗೆ ಆಶ್ಚರ್ಯವಾಗಲಿಲ್ಲ. ಅವನ ಮಾತಿನಲ್ಲಿದ್ದ ಕ್ರೌರ್ಯವನ್ನೂ ಗಮನಿಸಿಲ್ಲ, ಅವನ ಬೈಗುಳ, ಅವಳ ಮರ್ಯಾದೆಗೆಟ್ಟ ನಾಚಿಕೆಗೇಡು ಬದುಕಿನ ಬಗ್ಗೆ ಅವನಾಡಿದ ಮಾತೂ ಅವಳ ಗಮನಕ್ಕೆ ಬಂದಿಲ್ಲ ಅನ್ನುವುದೂ ತಿಳಿಯಿತು. ಅವಳು ಅನುಭವಿಸುತ್ತಿರುವ ರಾಕ್ಷಸನೋವು ಅವನಿಗೆ ಅರ್ಥವಾಯಿತು. ಎಲ್ಲವನ್ನೂ ಒಂದೇಟಿಗೆ ಮುಗಿಸಿಬಿಡದ ಹಾಗೆ ಅವಳನ್ನು ತಡೆದಿರುವುದು ಏನು ಎಂದು ಆಶ್ಚರ್ಯಪಟ್ಟ. ಪುಟ್ಟ ಅನಾಥ ಮಕ್ಕಳಿಗೆ, ಗೋಡೆಗೆ ತಲೆ ಚಚ್ಚಿಕೊಳ್ಳುವ ಅರೆ ಹುಚ್ಚಿ ಚಿಕ್ಕಮ್ಮ ಕ್ಯಾತರೀನ ಇವಾನೋವ್ನಳಿಗೆ ಅವಳೆಷ್ಟು ಬೆಲೆ ಕೊಡುತ್ತಾಳೆಂಬುದು ಅವನಿಗೆ ಈಗ ತಿಳಿಯಿತು.

ಸೋನ್ಯಾಳ ಕೋಣೆ ಕಣಜದ ಹಾಗೋ ಕೊಟ್ಟಿಗೆಯ ಹಾಗೋ ಕಾಣುತ್ತಿತ್ತು. ನಾಲ್ಕೂ ಬದಿಯ ಗೋಡೆಗಳು ಬೇರೆ ಬೇರೆ ಅಳತೆಯವಾಗಿದ್ದು, ವಿಕಾರವಾದ ಆಯತಾಕಾರದ ಕೋಣೆ ರೂಪುಗೊಂಡಿತ್ತು.

ಸೋನ್ಯಾಳ ಸ್ವಭಾವ, ಅವಳಿಗೆ ಹೇಗೋ ದೊರೆತಿದ್ದ ಶಿಕ್ಷಣ ಇವುಗಳ ಕಾರಣದಿಂದ ಅವಳು ಬಹು ಕಾಲ ಹೀಗಿರುವಂತೆಯೇ ಇರಲಾಗದು ಅನ್ನುವುದೂ ಹೊಳೆಯಿತು. ಹೊಳೆಗೆ ಹಾರಿಕೊಳ್ಳುವುದು ಅವಳಂಥವಳಿಗೆ ಸಾಧ್ಯವಿಲ್ಲವಾಗಿದ್ದರೆ ಅದು ಹೇಗೆ ಹುಚ್ಚಿಯಾಗದೆ ಇಷ್ಟು ದೀರ್ಘಕಾಲ ಇಂಥ ಸ್ಥಿತಿಯಲ್ಲಿ ಬದುಕಿದ್ದಾಳೆ ಅವಳು ಅನ್ನುವ ಪ್ರಶ್ನೆ ಹುಟ್ಟಿತು. ಸೋನ್ಯಾಳ ಪರಿಸ್ಥಿತಿ ಸಾಮಾಜಿಕವಾದೊಂದು ಸಂಗತಿ ಅನ್ನುವುದೇನೋ ಅವನಿಗೆ ತಿಳಿದಿತ್ತು. ಆ ಸಂಗತಿ ಅಪರೂಪವೂ ಅಲ್ಲ, ಅಸಾಮಾನ್ಯವೂ ಅಲ್ಲ ಅನ್ನುವುದೂ ತಿಳಿದಿತ್ತು. ಆದರೂ ಅವಳಿಗೆ ದೊರೆತಿದ್ದ ಒಂದಿಷ್ಟು ಶಿಕ್ಷಣ, ಅವಳು ಬದುಕಿದ್ದ ರೀತಿ ಇವುಗಳ ಕಾರಣದಿಂದ ಅವಳು ಅಸಹ್ಯದ ಈ ದಾರಿಯಲ್ಲಿ ಮೊದಲ ಹೆಜ್ಜೆ ಇಡುತ್ತಿದ್ದ ಹಾಗೇ ಆತ್ಮಹತ್ಯೆ ಮಾಡಿಕೊಳ್ಳಬೇಕಾಗಿತ್ತಲ್ಲ, ಯಾಕೆ ಹಾಗಾಗಲಿಲ್ಲ? ಅವಳನ್ನು ಉಳಿಸಿದ್ದು, ಕಾಪಾಡಿದ್ದು ಏನು? ನೀಚತನದಲ್ಲಿ, ಕೊಳಕಿನಲ್ಲಿ ಸಂತೋಷಪಡುವ ಸ್ವಭಾವ ಅವಳದಲ್ಲವಷ್ಟೇ? ಅಪಮಾನವೆಂಬುದು ತೀರ ಯಾಂತ್ರಿಕವಾಗಿ ಹೊರಗಿನಿಂದ ಅವಳನ್ನು ಸೋಕಿತ್ತೇ ಹೊರತು ಅವಳ ಹೃದಯವನ್ನು ಮುಟ್ಟಿರಲಿಲ್ಲ. ಅವಳು ಭ್ರಷ್ಟಳಾಗಿರಲಿಲ್ಲ—ಅದು ಅವನಿಗೆ ಕಾಣುತ್ತಿತ್ತು. ನಿಜವಾಗಿ ಅವನ ಕಣ್ಣೆದುರಿಗಿದ್ದಳು ಸೋನ್ಯಾ.

‘ಅವಳ ಮುಂದೆ ಮೂರು ದಾರಿ ಇದೆ: ಹೊಳೆಗೆ ಹಾರಿಕೊಳ್ಳಬೇಕು, ಹುಚ್ಚಿಯಾಗಬೇಕು ಅಥವಾ… ಅಥವಾ ಈ ಲಜ್ಜೆಗೇಡಿತನ ಬುದ್ಧಿಯನ್ನು ಮಂಕು ಮಾಡಿ ಅವಳ ಹೃದಯವನ್ನು ಕಲ್ಲು ಮಾಡಬೇಕು,’ ಅನ್ನುವ ಯೋಚನೆ ಅವನಿಗೆ ಬಂದಿತು. ಇವುಗಳಲ್ಲಿ ಕೊನೆಯ ಸಾಧ್ಯತೆ ಅತಿ ಅಸಹ್ಯ ಹುಟ್ಟಿಸುತ್ತಿತ್ತು, ಆದರೂ ಅವನು ಯುವಕ, ವಿಚಾರವಾದಿ, ಅಮೂರ್ತ ಚಿಂತನೆಗಳ ವ್ಯಕ್ತಿ, ಹಾಗಾಗಿ ಕ್ರೂರಿ. ಅಂತೆಯೇ ಲಜ್ಜೆಗೆಟ್ಟ ನೀಚತನವೇ ಬಹಳ ಮಟ್ಟಿಗೆ ವಾಸ್ತವವಾದೀತು ಅನ್ನುವುದನ್ನು ಅವನ ಮನಸ್ಸು ಒಪ್ಪಲಿಲ್ಲ.

‘ಹೌದೇ? ತನ್ನ ಆತ್ಮವನ್ನು ಇನ್ನೂ ಶುದ್ಧವಾಗಿಟ್ಟುಕೊಂಡಿರುವ ಈಕೆ ಕೊನೆಗೊಮ್ಮೆ ಅಸಹ್ಯದ ಹೊಂಡಕ್ಕೆ ಬಿದ್ದುಹೋಗುತ್ತಾಳೇನು?’ ರಾಸ್ಕೋಲ್ನಿಕೋವ್ ತನ್ನಲ್ಲೇ ಕೇಳಿಕೊಂಡ. ‘ಅಥವಾ ಈಗಾಗಲೇ ಆ ಹೊಂಡಕ್ಕೆ ಜಾರುತ್ತಿರುವ ಕಾರಣದಿಂದ ಅಸಹ್ಯವು ಅಸಹ್ಯವೆಂಬಂತೆ ಕಾಣುತ್ತಿಲ್ಲವಾದ ಕಾರಣ ಸಹಿಸಿಕೊಂಡಿದ್ದಾಳೋ? ಇಲ್ಲ, ಇರಲಾರದು. ಆತ್ಮಹತ್ಯೆ ಪಾಪವೆಂಬ ಯೋಚನೆ, ಚಿಕ್ಕಮ್ಮ, ಮಕ್ಕಳ ಯೋಚನೆ ಅವಳನ್ನು ಆತ್ಮಹತ್ಯೆಯಿಂದ ತಡೆದಿರಬಹುದು… ಅವಳ ತಲೆ ಕೆಟ್ಟಿದಿಯೋ… ಅವಳ ತಲೆ ಕೆಟ್ಟಿಲ್ಲವೆಂದು ಯಾರುತಾನೇ ಹೇಳಬಲ್ಲರು? ಅವಳ ಬುದ್ಧಿ ಸ್ಥಿಮಿತದಲ್ಲಿದೆಯೋ? ಅವಳ ಹಾಗೆ ಮಾತಾಡುವುದಕ್ಕೆ ಸಾಧ್ಯವೋ? ಬುದ್ಧಿ ಸರಿ ಇರುವವರು ಅವಳ ಹಾಗೆ ವಿಚಾರ ಮಾಡುತ್ತಾರೋ? ಹೀಗೆ ಸರ್ವನಾಶದ ಪ್ರಪಾತದ ಅಂಚಿನಲ್ಲಿ ಕೂತಿದ್ದರೂ, ಸರ್ವನಾಶಕ್ಕೆ ಜಾರುತ್ತಿದ್ದರೂ, ಇಂಥ ಅಪಾಯ ಇಗೋ ನಿನ್ನ ಕಣ್ಣೆದುರಿಗಿದೆ ಎಂದು ತೋರಿಸಿದರೆ ಇವಳ ಹಾಗೆ ಕಣ್ಣು ಮುಚ್ಚಿ ಕೇಳಲಾರೆ ಎಂದು ಕೈ ಆಡಿಸುವುದಕ್ಕೆ ಸಾಧ್ಯವೋ? ಏನು ನಿರೀಕ್ಷೆ ಅವಳದ್ದು? ಪವಾಡವೋ? ಅನುಮಾನವೇ ಇಲ್ಲ. ಇದೆಲ್ಲ ಹುಚ್ಚಿನ ಲಕ್ಷಣ ಅಲ್ಲವೇ?’ ರಾಸ್ಕೋಲ್ನಿಕೋವ್ ಯೋಚನೆ ಮಾಡಿದ.

ಕೊನೆಗೆ ಬಂದ ಯೋಚನೆಯ ಮೇಲೆಯೇ ಮನಸ್ಸನ್ನು ಬಲವಂತವಾಗಿ ನಿಲ್ಲಿಸಿದ. ಮಿಕ್ಕೆಲ್ಲ ಸಾಧ್ಯತೆಗಳಿಗಿಂತ ಇದೇ ಹೆಚ್ಚು ಇಷ್ಟವಾಯಿತು ಅವನಿಗೆ. ಗಮನವಿಟ್ಟು ಅವಳನ್ನೇ ನೋಡಿದ.

‘ದೇವರ ಪ್ರಾರ್ಥನೆ ತುಂಬಾ ಮಾಡತೀಯಾ ಸೋನ್ಯಾ?’ ಕೇಳಿದ. ಸೋನ್ಯಾ ಮೌನವಾಗಿ ಪಕ್ಕದಲ್ಲೇ ನಿಂತಿದ್ದಳು. ಅವನು ಉತ್ತರಕ್ಕಾಗಿ ಕಾಯುತ್ತಿದ್ದ.

‘ದೇವರಲ್ಲದೆ ಇನ್ಯಾರು ಗತಿ ನನಗೆ?’ ತಟ್ಟನೆ ಪಿಸುನುಡಿದಳು, ದನಿಯಲ್ಲಿ ದೃಢವಿತ್ತು, ಕಣ್ಣಲ್ಲಿ ತಟ್ಟನೆ ಹೊಳಪು ಮೂಡಿತ್ತು, ತನ್ನ ಕೈ ತಾನೇ ಬಿಗಿಯಾಗಿ ಹಿಡಿದಳು.

‘ನನಗೆ ಗೊತ್ತಿತ್ತು,’ ಅಂದುಕೊಂಡ.

‘ನೀನು ಪ್ರಾರ್ಥನೆ ಮಾಡಿದ್ದಕ್ಕೆ ದೇವರು ನಿನಗೇನು ಕೊಡತಾನೆ?’ ಅವಳನ್ನು ಇನ್ನಷ್ಟು ಪರೀಕ್ಷೆ ಮಾಡುವವನ ಹಾಗೆ ಕೇಳಿದ.
ಉತ್ತರ ಕೊಡಲಾರೆ ಅನ್ನುವ ಹಾಗೆ ಸೋನ್ಯ ಬಹಳ ಹೊತ್ತು ಸುಮ್ಮನಿದ್ದಳು. ಅವಳ ಬಡಕಲು ಎದೆ ಜೋರಾಗಿ ಏರಿಳಿಯುತ್ತಿತ್ತು.

‘ಸುಮ್ಮನಿರಿ! ಹಾಗೆಲ್ಲ ಕೇಳಬೇಡಿ! ನಿಮಗೆ ಅಂಥ ಯೋಗ್ಯತೆ ಇಲ್ಲ!…’ ಸೋನ್ಯಾ ತಟ್ಟನೆ ಅವನನ್ನೇ ಕಠಿಣವಾಗಿ ನೋಡುತ್ತ ಸಿಟ್ಟಿನಲ್ಲಿ ಹೇಳಿದಳು.

‘ಗೊತ್ತಿತ್ತು! ನನಗೆ ಗೊತ್ತಿತ್ತು!’ ರಾಸ್ಕೋಲ್ನಿಕೋವ್ ಮನಸಿನಲ್ಲೇ ಅಂದುಕೊಂಡ. ‘ಇದೇ ಉತ್ತರ, ನನ್ನ ಮನಸಿನಲ್ಲಿದ್ದ ಪ್ರಶ್ನೆಗಳಿಗೆ ಇದೇ ಉತ್ತರ!’ ಎಂದು ತೀರ್ಮಾನ ಮಾಡಿಕೊಳ್ಳುತ್ತ ಅವಳನ್ನೇ ತುಂಬ ಕುತೂಹಲದಿಂದ ನೋಡಿದ.

ಅವಳ ಆ ಬಿಳಿಚಿದ ಬಡಕಲು ಮುಖ, ಸಾಧು ಸ್ವಭಾವ ತೋರುತ್ತಿದ್ದ ನೀಲಿ ಕಣ್ಣಿನಲ್ಲಿ ಈಗ ಕಂಡ ಉರಿ ಬೆಂಕಿ, ಸಿಟ್ಟಿನಲ್ಲಿ ಇನ್ನೂ ಕಂಪಿಸುತ್ತಿರುವ ಅವಳ ಪುಟ್ಟ ಮೈ ಇವನ್ನೆಲ್ಲ ನೋಡುತ್ತ ರಾಸ್ಕೋಲ್ನಿಕೋವ್ ಹೊಸತು ಅನಿಸುವಂಥ ನೋವನ್ನು ತಾನೂ ಅನುಭವಿಸಿದ. ಇದು ಅಸಾಧ್ಯ, ಅಸಂಭವ, ಹೀಗೂ ಇದ್ದೀತೇ ಅನ್ನುವ ಭಾವ ಮೂಡಿತು. ‘ಹುಚ್ಚು ಸಂನ್ಯಾಸಿನಿ! ಹುಚ್ಚು ಸಂನ್ಯಾಸಿನಿ!’ ಎಂದು ಮತ್ತೆ ಮತ್ತೆ ಅಂದುಕೊಂಡ.

ಬಟ್ಟೆಗಳನ್ನಿಡುವ ಪುಟ್ಟ ಬೀರುವಿನ ಮೇಲೊಂದು ಪುಸ್ತಕವಿತ್ತು. ಅವನು ಅಡ್ಡಾಡುತ್ತ ಆ ಮೂಲೆಗೆ ಹೋದಾಗಲೆಲ್ಲ ಅದನ್ನು ಗಮನಿಸಿದ್ದ. ಈಗ ಅದನ್ನು ಕೈಗೆತ್ತಿಕೊಂಡು ನೋಡಿದ. ಹೊಸ ಒಡಂಬಡಿಕೆಯ ಪುಸ್ತಕ. ರಶಿಯನ್ ಭಾಷೆಯಲ್ಲಿತ್ತು. ಅದಕ್ಕೆ ಚರ್ಮದ ಹೊದಿಕೆ ಇತ್ತು. ಬಳಸಿ ಬಳಸಿ ಸವೆದಿತ್ತು.

‘ಎಲ್ಲಿ ಸಿಕ್ಕಿತ ಇದೂ?’ ರೂಮಿನ ಆ ತುದಿಯಿಂದ ಕೂಗಿ ಕೇಳಿದ. ಅವಳು ಇನ್ನೂ ಮೇಜಿನ ಪಕ್ಕದಲ್ಲೇ ಮೊದಲಿದ್ದಲ್ಲೇ ನಿಂತಿದ್ದಳು.

‘ಯಾರೋ ತಂದುಕೊಟ್ಟರು,’ ಮನಸಿಲ್ಲದವಳ ಹಾಗೆ ಅಂದಳು. ಅವನತ್ತ ನೋಡಲೂ ಇಲ್ಲ.

‘ಯಾರು?’

‘ಲಿಝವೆಟ. ತಂದುಕೊಡು ಅಂತ ಕೇಳಿದ್ದೆ.’

‘ಲಿಝವೆಟ! ಎಂಥ ವಿಚಿತ್ರ!’ ಅಂದುಕೊಂಡ. ಸೋನ್ಯಾಗೆ ಸಂಬಂಧಪಟ್ಟ ಸಂಗತಿಗಳೆಲ್ಲ ಪ್ರತಿ ನಿಮಿಷವೂ ಅತಿ ವಿಚಿತ್ರ… ಅದ್ಭುತ ಅನಿಸುವುದಕ್ಕೆ ಶುರುವಾಗಿತ್ತು. ಪುಸ್ತಕವನ್ನು ಮೇಣದ ಬತ್ತಿಯ ಹತ್ತಿರಕ್ಕೆ ತೆಗೆದುಕೊಂಡು ಹೋಗಿ ಪುಟ ತಿರುಗಿಸಿದ.

‘ಇದರಲ್ಲಿ ಲಾಝರಸ್ ಕಥೆ ಬರತ್ತಲ್ಲ, ಎಲ್ಲಿ?’ ಇದ್ದಕ್ಕಿದ್ದ ಹಾಗೆ ಕೇಳಿದ.
ಸೋನ್ಯ ಹಟ ಹಿಡಿದವಳ ಹಾಗೆ ನೆಲ ನೋಡುತ್ತಿದ್ದಳು, ಉತ್ತರ ಕೊಡಲಿಲ್ಲ.

‘ಲಾಝರಸ್ ಸಾವಿನಿಂದ ಎದ್ದುಬಂದ ಕಥೆ ಇದೆಯಲ್ಲ, ಅದು ಎಲ್ಲಿದೆ, ತೋರಿಸು, ಸೋನ್ಯಾ.’

ಅವಳು ಅವನನ್ನು ಕಡೆಗಣ್ಣಿನಿಂದ ನೋಡುತ್ತಾ, ‘ನೀವು ಸರಿಯಾದ ಜಾಗದಲ್ಲಿ ಹುಡುಕುತಾ ಇಲ್ಲ. ಅದಿರೋದು ನಾಲ್ಕನೆಯ ಸುವಾರ್ತೆಯಲ್ಲಿ,’ ಪಿಸುಮಾತಿನಲ್ಲಿ ಕಠಿಣವಾಗಿ ಹೇಳಿದಳು. ಅವನತ್ತ ಹೋಗಲಿಲ್ಲ.

‘ಎಲ್ಲಿದೆ, ಹುಡುಕಿ ಓದು, ಪ್ಲೀಸ್,’ ಅಂದ. ಟೇಬಲ್ಲಿನ ಮೇಲೆ ಮೊಳಕೈ ಇಟ್ಟುಕೊಂಡು, ಎತ್ತಲೋ ದೃಷ್ಟಿ ನೆಟ್ಟು ಕೇಳಲು ಸಿದ್ಧನಾಗಿ ಕೂತ.

‘ಇನ್ನೊಂದೆರಡು ವಾರ, ತಗೊಂಡು ಹೋಗಿ ಇವಳನ್ನ ಹುಚ್ಚಾಸ್ಪತ್ರೆಗೆ ಸೇರಿಸತಾರೆ! ನನಗೆ ಇನ್ನೂ ಕೆಟ್ಟ ಗತಿ ಬರದಿದ್ದರೆ ನನ್ನನ್ನೂ ಅಲ್ಲಿಗೇ ಸೇರಿಸಬಹುದು,’ ತನ್ನಷ್ಟಕ್ಕೇ ಗೊಣಗಿದ.

ಸೋನ್ಯ ಹಿಂಜರಿಯುತ್ತ, ರಾಸ್ಕೋಲ್ನಿಕೋವ್ ನ ವಿಚಿತ್ರ ಕೋರಿಕೆಯ ಬಗ್ಗೆ ಸಂಶಯಪಡುತ್ತ ನಿಧಾನವಾಗಿ ಟೇಬಲ್ಲಿನ ಹತ್ತಿರ ಹೋದಳು. ಪುಸ್ತಕ ಎತ್ತಿಕೊಂಡಳು.

‘ಯಾವತ್ತೂ ಆ ಕಥೆ ಓದೇ ಇಲ್ಲವಾ?’ ಕುಳಿತಿದ್ದ ಅವನತ್ತ ದೃಷ್ಟಿ ಇಳಿಸಿ ತೀಕ್ಷ್ಣವಾದ ದನಿಯಲ್ಲಿ ಕೇಳಿದಳು.

‘ಬಹಳ ಹಿಂದೆ, ಸ್ಕೂಲಿನಲ್ಲಿ! ಓದು ಈಗ!’

‘ಚರ್ಚಿನಲ್ಲಿ ಯಾವತ್ತೂ ಕೇಳಿಲ್ಲವಾ?’

‘ನಾನು… ಚರ್ಚಿಗೆ ಹೋಗಲ್ಲ. ನೀನು ಯಾವಾಗಲೂ ಹೋಗತೀಯಾ?’

‘ಇ-ಲ್ಲ,’ ಮೆತ್ತಗೆ ಅಂದಳು.
ರಾಸ್ಕೋಲ್ನಿಕೋವ್ ಹಲ್ಲುಕಿರಿದ.

‘ಹೌದಾ… ಹಾಗಾದರೆ ನಾಳೆ ಅಪ್ಪನ ಸಂಸ್ಕಾರಕ್ಕೂ ಹೋಗಲ್ಲ?’

‘ನಾಳೆ ಹೋಗತೀನಿ. ಹೋದ ವಾರಾನೂ ಹೋಗಿದ್ದೆ, ಸದ್ಗತಿ ಪ್ರಾರ್ಥನೆಗೆ.’

‘ಯಾರು ತೀರಿಕೊಂಡಿದ್ದರು?’

‘ಲಿಝವೆಟ. ಅದೇ ಕೊಡಲಿಯಲ್ಲಿ ಹೊಡದು ಕೊಂದರಲ್ಲ…’
ಅವನ ಉದ್ವಿಗ್ನತೆ ಹೆಚ್ಚಿತ್ತು, ತಲೆ ತಿರುಗುತ್ತಿತ್ತು.

‘ನಿನಗೆ ತುಂಬ ಪರಿಚಯಾನಾ ಅವಳು?’

‘ಹೂಂ… ತುಂಬ ನ್ಯಾಯವಂತೆ… ಬರತಾ ಇದ್ದಳು… ಯಾವಾಗಲಾದರೂ ಒಂದೊಂದು ಸಾರಿ… ಸದಾ ಬರಕ್ಕೆ ಆಗತಿರಲಿಲ್ಲ. ನಾವಿಬ್ಬರೂ ಒಟ್ಟಿಗೆ ಕೂತು ಓದತಾ ಇದ್ದೆವು, ಮಾತಾಡತಾ ಇದ್ದೆವು. ಅವಳು ಖಂಡಿತವಾಗಿ ದೇವರನ್ನ ಕಣ್ಣಾರೆ ಕಾಣತಾಳೆ.’

ಪುಸ್ತಕದಲ್ಲಿ ಬರೆದ ಹಾಗಿದ್ದ ಮಾತು ಅವಳ ಬಾಯಲ್ಲಿ ವಿಚಿತ್ರವಾಗಿ ಕೇಳಿದವು ಅವನಿಗೆ. ಜೊತೆಗೆ ಇನ್ನೊಂದು ಸಂಗತಿ, ಲಿಝವೆಟಳ ಜೊತೆ ನಿಗೂಢವಾದ ರೀತಿಯಲ್ಲಿ ಆಪ್ತವಾಗಿದ್ದಳು- ಇಬ್ಬರು ಹುಚ್ಚ ಸಂನ್ಯಾಸಿಗಳು.

‘ಇಲ್ಲೇ ಇದ್ದರೆ ಯಾರು ಬೇಕಾದರೂ ಹುಚ್ಚುಸಂನ್ಯಾಸಿಗಳಾಗಬಹುದು. ನಾನೂ!’ ಅಂದುಕೊಂಡ. ಇದ್ದಕಿದ್ದ ಹಾಗೆ ರೇಗಿ, ಒತ್ತಾಯದ ದನಿಯಲ್ಲಿ ‘ಓದು!’ ಅಂದ.

ಸೋನ್ಯಾ ಇನ್ನೂ ಹಿಂಜರಿದಳು. ಅವಳ ಎದೆ ಬಡಿದುಕೊಳ್ಳುತ್ತಿತ್ತು. ಅವನು ಕೇಳಿದನೆಂದು ಓದುವ ಧೈರ್ಯ ಯಾಕೋ ಅವಳಿಗೆ ಬರಲಿಲ್ಲ.

‘‍ದುಃಖದಲ್ಲಿರುವ ಹುಚ್ಚಿ’ಯನ್ನು ನೋಡುತ್ತ ಅವನೂ ಅಪಾರ ನೋವು ತಿನ್ನುತಿದ್ದ.

‘ಇದನ್ನ ಕಟ್ಟಿಕೊಂಡು ನಿನಗೇನಾಗಬೇಕು? ನಿನಗೆ ನಂಬಿಕೆ ಇಲ್ಲವಲ್ಲ…?’ ಉಸಿರೇ ಇಲ್ಲದವಳ ಹಾಗೆ ಮೆಲ್ಲಗೆ ಕೇಳಿದಳು.

‘ಓದು! ನೀನು ಓದಲೇಬೇಕು!’ ಬಲವಂತ ಮಾಡಿದ. ‘ಲಿಝವೆಟಾ ನೆನಪಿಗಾಗಿ ಓದು.’

ಸೋನ್ಯಾ ಪುಸ್ತಕ ತೆರೆದಳು. ಅಧ್ಯಾಯ ಹುಡುಕಿದಳು. ಅವಳ ಕೈ ನಡುಗುತ್ತಿದ್ದವು. ದನಿ ಏಳಲಿಲ್ಲ. ಎರಡು ಬಾರಿ ಪ್ರಯತ್ನಪಟ್ಟಳು. ಮೊದಲ ಶಬ್ದಗಳನ್ನೇ ಓದುವುದಕ್ಕಾಗಲಿಲ್ಲ. ‘ಬೇಥಾನ್ಯದಲ್ಲಿ ಲಾಜರನೆಂಬ ಒಬ್ಬ ಮನುಷ್ಯನು ಅಸ್ವಸ್ಥನಾಗಿದ್ದನು’ ಎಂದು ಕಷ್ಟಪಟ್ಟು ಓದಿ ತಟ್ಟನೆ ಅವಳ ದನಿ ಮೇಲೇರಿ, ಬಿಗಿದ ತಂತಿ ಕತ್ತರಿಸಿದ ಹಾಗೆ ತಟ್ಟನೆ ನಿಂತು ಹೋಯಿತು. ಅವಳ ಉಸಿರು ಏರುಪೇರಾಯಿತು, ಎದೆ ನೋವಾಗುವಷ್ಟು ಕುಗ್ಗಿದಂತಾಯಿತು.

ಲಾಝರಸ್ ಕಥೆಯನ್ನು ತನಗೆ ಓದಿ ಹೇಳಲು ಯಾಕೆ ಹಿಂಜರಿಯುತ್ತಿದ್ದಾಳೆ ಅನ್ನುವುದು ರಾಸ್ಕೋಲ್ನಿಕೋವ್‍ ಗೆ ಸ್ವಲ್ಪ ಸ್ವಲ್ಪ ಅರ್ಥವಾಯಿತು. ಹಾಗೆ ಅರ್ಥವಾಗುತ್ತಿದ್ದ ಹಾಗೆ ಅವನು ಇನ್ನೂ ರೇಗಿ, ಅವಳು ಓದಲೇಬೇಕೆಂದು ಇನ್ನೂ ಒರಟಾಗಿ ಬಲವಂತ ಮಾಡಿದ. ತನ್ನ ಸ್ವಂತದ್ದಾಗಿರುವುದನ್ನು, ತನ್ನ ಅಂತರಂಗವನ್ನು ಬಯಲು ಮಾಡುವುದು ಅವಳಿಗೆಷ್ಟು ಕಷ್ಟವೆಂಬುದು ಅವನಿಗೆ ಅರ್ಥವಾಯಿತು. ಬಹಳ ದೀರ್ಘ ಕಾಲದಿಂದ ಅವಳ ಮನಸಿನೊಳಗಿರುವ ಭಾವನೆಗಳೇ ಅವಳು ಯಾರಿಗೂ ಹೇಳದ ಗುಟ್ಟು ಇರಬಹುದು; ಸುಖ ಕಾಣದ ಕುಡುಕ ಅಪ್ಪ, ದುಃಖದಿಂದ ಹುಚ್ಚಿಯಾದ ಚಿಕ್ಕಮ್ಮ, ಹಸಿದ ಮಕ್ಕಳು, ಸದಾ ಕಿವಿ ತುಂಬುವ ಕಿರುಚಾಟ, ಚೀರಾಟ, ಬೈಗುಳಗಳ ಮಧ್ಯೆ ಬೆಳೆದವಳು, ಮನಸ್ಸಿನ ಸ್ವಂತ ಭಾವನೆಗಳನ್ನು ಯಾರಿಗೂ ಹೇಳದೆ ಬಚ್ಚಿಟ್ಟುಕೊಂಡು ಬಂದಿದ್ದಾಳೆ ಅನ್ನಿಸಿತು. ಅವಳಿಗೆ ನೋವಾಗುತ್ತಿದೆ, ಓದುವುದಕ್ಕೆ ಶುರು ಮಾಡಿದರೆ ಏನೋ ಆದೀತು ಅನ್ನುವ ಭಯವಿದೆ, ನೋವು, ಭಯ ಏನೇ ಇದ್ದರೂ ಅವನಿಗಾಗಿ ಓದಬೇಕು, ಅವನು ಕೇಳಬೇಕು, ಆಮೇಲೆ ಏನು ಬೇಕಾದರೂ ಆಗಲಿ ಅನ್ನುವ ಅಸೆಯೂ ಅವಳಲ್ಲಿದೆ ಅನ್ನುವುದು ಅವನ ಮನಸ್ಸಿಗೆ ಬಂದಿತು.. ಅವಳ ಕಣ್ಣು ನೋಡುತ್ತ, ಅವಳ ಪರವಶತೆ ಉತ್ಸಾಹಗಳನ್ನು ಕಾಣುತ್ತ ಅವನಿಗೆ ಇದೆಲ್ಲ ತಿಳಿಯಿತು. ಮನಸು ಗಟ್ಟಿಮಾಡಿಕೊಂಡಳು. ಗಂಟಲು ಸರಿಮಾಡಿಕೊಂಡಳು. ಸಂತ ಯೊಹಾನನ ಸುವಾರ್ತೆಯ ಹನ್ನೊಂದನೆಯ ಅಧ್ಯಾಯದಲ್ಲಿ ಹತ್ತೊಂಬತ್ತನೆಯ ಭಾಗಕ್ಕೆ ಬಂದಳು:

ಆದುದರಿಂದ ಯೆಹೂದ್ಯರಲ್ಲಿ ಅನೇಕರು ಮಾರ್ಥ ಮತ್ತು ಮರಿಯಳ ಸಹೋದರನ ವಿಷಯದಲ್ಲಿ ಅವರನ್ನು ಸಂತೈಸಲಿಕ್ಕಾಗಿ ಅವರ ಬಳಿಗೆ ಬಂದಿದ್ದರು. ಯೇಸು ಬರುತ್ತಿದ್ದಾನೆ ಎಂಬುದನ್ನು ಕೇಳಿಸಿಕೊಂಡು ಮಾರ್ಥಳು ಹೋಗಿ ಅವನನ್ನು ಸಂಧಿಸಿದಳು; ಆದರೆ ಮರಿಯಳು ಮನೆಯಲ್ಲೇ ಕುಳಿತುಕೊಂಡಿದ್ದಳು. ಮಾರ್ಥಳು ಯೇಸುವಿಗೆ, “ಕರ್ತನೇ, ನೀನು ಇಲ್ಲಿ ಇರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ. ಆದರೆ ಈಗಲೂ ದೇವರಿಂದ ನೀನು ಏನೆಲ್ಲ ಬೇಡಿಕೊಳ್ಳುತ್ತೀಯೋ ಅದೆಲ್ಲವನ್ನು ಆತನು ನಿನಗೆ ಕೊಡುವನೆಂದು ಬಲ್ಲೆನು” ಅಂದಳು

ಇಲ್ಲಿ ಸ್ವಲ್ಪ ತಡೆದಳು. ದನಿ ನಡುಗುತ್ತಿದೆ, ದನಿ ಕುಸಿಯುತ್ತಿದೆ ಎಂದು ನಾಚಿದಳು…

ಯೇಸು ಅವಳಿಗೆ, “ನಿನ್ನ ಸಹೋದರನು ಎದ್ದುಬರುವನು” ಎಂದು ಹೇಳಿದನು. ಮಾರ್ಥಳು ಅವನಿಗೆ, “ಕಡೇ ದಿನದಲ್ಲಾಗುವ ಪುನರುತ್ಥಾನದಲ್ಲಿ ಅವನು ಎದ್ದುಬರುವನೆಂದು ನಾನು ಬಲ್ಲೆನು” ಎಂದಳು ಯೇಸು ಅವಳಿಗೆ, “ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆಯಿಡುವವನು ಸತ್ತರೂ ಜೀವಿತನಾಗುವನು; ಮತ್ತು ಬದುಕಿದ್ದು ನನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನು ಎಂದಿಗೂ ಸಾಯುವುದೇ ಇಲ್ಲ. ನೀನು ಇದನ್ನು ನಂಬುತ್ತೀಯೊ?” ಎಂದು ಕೇಳಿದನು.

(ನೋಯುತ್ತಿರುವವಳ ಹಾಗೆ ಉಸಿರು ಎಳೆದುಕೊಂಡಳು. ದೃಢವಾಗಿ, ಸ್ಪಷ್ಟವಾಗಿ, ತಾನೇ ನಿವೇದನೆ ಮಾಡಿಕೊಳ್ಳುತ್ತಿದ್ದೇನೆ, ಎಲ್ಲರೂ ಕೇಳಿ ಅನ್ನುವ ಹಾಗೆ ಓದಿದಳು.)

ಅವಳು ಅವನಿಗೆ, “ಹೌದು ಕರ್ತನೇ, ಲೋಕಕ್ಕೆ ಬರಲಿರುವ ದೇವರ ಮಗನಾದ ಕ್ರಿಸ್ತನು ನೀನೇ ಎಂದು ನಾನು ವಿಶ್ವಾಸವಿಟ್ಟಿದ್ದೇನೆ” ಎಂದು ಹೇಳಿದಳು.

ನಿಲ್ಲಿಸಿದಳು. ತಟ್ಟನೆ ಕಣ್ಣೆತ್ತಿ ಅವನನ್ನು ನೋಡಿದಳು. ಮತ್ತೆ ಧೈರ್ಯ ತಂದುಕೊಂಡು ಮುಂದೆ ಓದಿದಳು. ರಾಸ್ಕೋಲ್ನಿಕೋವ್ ನಿಶ್ಚಲವಾಗಿ ಕೂತಿದ್ದ, ಕೇಳಿಸಿಕೊಳ್ಳುತ್ತಿದ್ದ, ಅವನ ಮೊಳಕೈ ಮೇಜನ ಮೇಲಿದ್ದವು, ಕಣ್ಣು ಎಲ್ಲೋ ನೋಡುತ್ತಿತ್ತು.

ಅವಳು ಇದನ್ನು ಹೇಳಿದ ಬಳಿಕ ಅಲ್ಲಿಂದ ಹೋಗಿ ತನ್ನ ಸಹೋದರಿಯಾದ ಮರಿಯಳನ್ನು ಕರೆದು ಗುಟ್ಟಾಗಿ, “ಬೋಧಕನು ಬಂದಿದ್ದಾನೆ; ನಿನ್ನನ್ನು ಕರೆಯುತ್ತಿದ್ದಾನೆ” ಎಂದು ಹೇಳಿದಳು.

ಅವರು ಮೂವತ್ತೆರಡನೆಯ ಭಾಗಕ್ಕೆ ಬಂದಿದ್ದರು.

ಮರಿಯಳು ಯೇಸು ಇದ್ದಲ್ಲಿಗೆ ಬಂದು ಅವನನ್ನು ಕಂಡು ಅವನ ಪಾದಗಳಿಗೆ ಬಿದ್ದು ಅವನಿಗೆ, “ಕರ್ತನೇ, ನೀನು ಇಲ್ಲಿರುತ್ತಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ” ಎಂದಳು. ಯೇಸು ಅವಳೂ ಅವಳೊಂದಿಗೆ ಬಂದಿದ್ದ ಯೆಹೂದ್ಯರೂ ಅಳುತ್ತಿರುವುದನ್ನು ನೋಡಿ ತನ್ನ ಆಂತರ್ಯದಲ್ಲಿ ನೊಂದುಕೊಂಡು ಕಳವಳಪಟ್ಟನು; ಮತ್ತು “ಅವನನ್ನು ಎಲ್ಲಿ ಇಟ್ಟಿದ್ದೀರಿ?” ಎಂದು ಕೇಳಿದನು. ಅದಕ್ಕೆ ಅವರು, “ಕರ್ತನೇ ಬಂದು ನೋಡು” ಎಂದರು. ಯೇಸು ಕಣ್ಣೀರು ಸುರಿಸಿದನು. ಆದುದರಿಂದ ಯೆಹೂದ್ಯರು, “ನೋಡಿ, ಇವನಿಗೆ ಅವನ ಮೇಲೆ ಎಷ್ಟು ಮಮತೆ ಇತ್ತು!” ಎಂದು ಹೇಳಲಾರಂಭಿಸಿದರು. ಆದರೆ ಅವರಲ್ಲಿ ಕೆಲವರು, “ಆ ಕುರುಡನ ಕಣ್ಣುಗಳನ್ನು ತೆರೆದ ಈ ಮನುಷ್ಯನು ಇವನನ್ನು ಸಾಯದಂತೆ ತಡೆಯಲು ಶಕ್ತನಾಗಿರಲಿಲ್ಲವೆ?” ಎಂದರು.

ರಾಸ್ಕೋಲ್ನಿಕೋವ್ ಕಳವಳ ತುಂಬಿದ ಅವಳ ಕಣ್ಣು ನೋಡಿದ. ಅಷ್ಟೇ! ಅವಳು ನಿಜವಾದ ಜ್ವರದಲ್ಲಿ ಕಂಪಿಸುತ್ತಿದ್ದಳು. ಅದನ್ನವನು ನಿರೀಕ್ಷಿಸಿದ್ದ. ಮಹಾನ್ ಪವಾಡ ಸಂಭವಿಸುವ ಕ್ಷಣ ಬಂದಿತ್ತು. ಮಹಾನ್ ದಿಗ್ವಿಜಯ ಸಾಧಿಸಿದ ದನಿ ಅವಳಿಗೆ ಬಂದಿತ್ತು. ಅವಳಿಗೆ ಕಂಚಿನ ಕಂಠ ಬಂದಿತ್ತು. ಸಂತೋಷ, ಗೆಲುವು ದನಿಯಲ್ಲಿ ತುಂಬಿದ್ದವು. ಕಣ್ಣಲ್ಲಿ ಕಂಬನಿ ತುಂಬಿ ಹಾಳೆಯ ಮೇಲಿನ ಸಾಲು ಕಲೆಸಿಹೋಗುತ್ತಿದ್ದವು. ಇಡೀ ಕಥೆ ಅವಳಿಗೆ ಹೃದ್ಗತವಾಗಿದ್ದರಿಂದ ಸಲೀಸಾಗಿ ಓದಿದಳು. ಕಥೆಯ ಕೊನೆಯ ಭಾಗಕ್ಕೆ ಬಂದಳು. ‘ಕುರುಡನ ಕಣ್ಣುಗಳನ್ನು ತೆರೆದ ಈ ಮನುಷ್ಯನು…’ ಎಂಬ ಸಾಲಿಗೆ ಬಂದಾಗ ದನಿ ತಗ್ಗಿಸಿ ಆ ಮಾತಿನಲ್ಲಿದ್ದ ಸಂಶಯ, ಟೀಕೆ, ನಿಂದನೆಗಳನ್ನು ದನಿಯಲ್ಲೇ ಸೂಚಿಸಿದಳು. ಇನ್ನೊಂದು ಕ್ಷಣದಲ್ಲಿ ವಜ್ರಾಘಾತಕ್ಕೆ ಒಳಗಾದವರ ಹಾಗೆ ಏಸುವಿನ ಪಾದಗಳಿಗೆರಗಿ ಕಣ್ಣೀರಿಡುತ್ತ ಆಸ್ತಿಕರಾಗಲಿದ್ದ ಯಹೂದ್ಯರನ್ನು ಕುರಿತ ಅಣಕವೂ ಆ ದನಿಯಲ್ಲಿತ್ತು. ‘ಮತ್ತೆ ಇವನೂ ಕೂಡ, ನಾಸ್ತಿಕತೆಯಲ್ಲಿ ಕುರುಡಾಗಿರುವ ಇವನೂ ಕೂಡ ಕಥೆ ಕೇಳಿ ನಂಬಿಕೆ ಬೆಳೆಸಿಕೊಳ್ಳುತ್ತಾನೆ,-ನಿಜ, ನಿಜ,’ ಅಂದುಕೊಳ್ಳುತ್ತ ಕನಸುಕಾಣುತ್ತ ಸಂತೋಷದ ನಿರೀಕ್ಷೆಯಲ್ಲಿ ಕಂಪಿಸುತ್ತಿದ್ದ ದನಿಯಲ್ಲಿ ಓದಿದಳು.

ಯೇಸು ಪುನಃ ತನ್ನೊಳಗೆ ಬಹಳವಾಗಿ ನೊಂದುಕೊಂಡು ಸ್ಮರಣೆಯ ಸಮಾಧಿಯ ಬಳಿಗೆ ಬಂದನು. ವಾಸ್ತವದಲ್ಲಿ ಅದು ಒಂದು ಗವಿಯಾಗಿತ್ತು ಮತ್ತು ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು. ಯೇಸು, “ಆ ಕಲ್ಲನ್ನು ತೆಗೆದುಹಾಕಿರಿ” ಎಂದನು. ತೀರಿಕೊಂಡಿದ್ದವನ ಸಹೋದರಿಯಾದ ಮಾರ್ಥಳು ಅವನಿಗೆ, “ಕರ್ತನೇ, ಅವನು ಸತ್ತು ನಾಲ್ಕು ದಿನಗಳಾಗಿರುವುದರಿಂದ ಈಗ ಅವನು ನಾರುವುದು ಖಂಡಿತ” ಎಂದಳು.

ನಾಲ್ಕು ಎಂಬ ಶಬ್ದವನ್ನು ಒತ್ತಿ ಹೇಳಿದಳು.

ಯೇಸು ಅವಳಿಗೆ, “ನೀನು ನಂಬುವುದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೊ?” ಎಂದನು. ಆಗ ಅವರು ಆ ಕಲ್ಲನ್ನು ತೆಗೆದುಹಾಕಿದರು. ಯೇಸು ಕಣ್ಣುಗಳನ್ನು ಆಕಾಶದ ಕಡೆಗೆತ್ತಿ, “ತಂದೆಯೇ, ನೀನು ನನ್ನ ಪ್ರಾರ್ಥನೆಯನ್ನು ಕೇಳಿದ್ದಕ್ಕೆ ನಿನಗೆ ಕೃತಜ್ಞತೆ ಸಲ್ಲಿಸುತ್ತೇನೆ. ನೀನು ಯಾವಾಗಲೂ ನನಗೆ ಕಿವಿಗೊಡುತ್ತೀ ಎಂಬುದು ನನಗೆ ತಿಳಿದಿತ್ತು; ನನ್ನ ಸುತ್ತಲೂ ನಿಂತುಕೊಂಡಿರುವ ಜನರು ನೀನೇ ನನ್ನನ್ನು ಕಳುಹಿಸಿದಿ ಎಂಬುದನ್ನು ನಂಬುವಂತೆ ನಾನು ಹೀಗೆ ಮಾತಾಡಿದೆ” ಎಂದನು. ಅವನು ಇದನ್ನು ಹೇಳಿ ಮುಗಿಸಿದ ಬಳಿಕ “ಲಾಜರನೇ, ಹೊರಗೆ ಬಾ” ಎಂದು ಗಟ್ಟಿಯಾದ ಸ್ವರದಿಂದ ಕೂಗಿದನು.

(ಕಣ್ಣಾರೆ ಕಾಣುತ್ತಿರುವವಳ ಹಾಗೆ ಪರವಶಳಾಗಿ, ಕಂಪಿಸುತ್ತ, ಮೈ ತಣ್ಣಗಾಗುತ್ತ ಮುಂದಕ್ಕೆ ಓದಿದಳು)

ಸತ್ತಿದ್ದ ಆ ಮನುಷ್ಯನು ಹೊರಗೆ ಬಂದನು; ಅವನ ಕೈಕಾಲುಗಳನ್ನು ಹೊದಿಕೆಗಳಿಂದ ಕಟ್ಟಲಾಗಿತ್ತು ಮತ್ತು ಅವನ ಮುಖಕ್ಕೆ ಬಟ್ಟೆಯನ್ನು ಸುತ್ತಲಾಗಿತ್ತು. ಯೇಸು ಅವರಿಗೆ, “ಅವನನ್ನು ಬಿಚ್ಚಿರಿ, ಅವನು ಹೋಗಲಿ” ಎಂದನು. ಮರಿಯಳ ಬಳಿಗೆ ಬಂದಿದ್ದ ಯೆಹೂದ್ಯರಲ್ಲಿ ಅನೇಕರು ಅವನು ಮಾಡಿದ್ದನ್ನು ನೋಡಿ ಅವನಲ್ಲಿ ನಂಬಿಕೆಯಿಟ್ಟರು; ಅಲ್ಲಿಂದ ಮುಂದಕ್ಕೆ ಓದಲಿಲ್ಲ, ಅವಳಿಗೆ ಓದಲಾಗಲಿಲ್ಲ. ಪುಸ್ತಕ ಮುಚ್ಚಿ ತಟ್ಟನೆ ಎದ್ದಳು.

ಲಾಝರಸ್‍ ನ ಪುನರುತ್ಥಾನದ ಕಥೆ ಅಷ್ಟೇ,’’ ತಟ್ಟನೆ ಪಿಸುದನಿಯಲ್ಲಿ ಅಂದು, ಅವನನ್ನು ಕಣ್ಣೆತ್ತಿ ನೋಡಲು ನಾಚಿದವಳಂತೆ ಮುಖ ತಿರುಗಿಸಿ ನಿಶ್ಚಲವಾಗಿ ನಿಂತಳು. ಅವಳ ಮೈ ಇನ್ನೂ ಕಂಪಿಸುತ್ತಿತ್ತು. ಬಾಗಿ ವಕ್ರವಾಗಿದ್ದ ಕ್ಯಾಂಡಲ್ ಸ್ಟಾಂಡಿನಲ್ಲಿದ್ದ ಮೇಣದ ಬತ್ತಿ ಬಹಳ ಹೊತ್ತಿನಿಂದ ಉರಿದು ಹೋಗುತ್ತಿತ್ತು. ಬೋಳು ಬೋಳು ಕೋಣೆಯೊಳಗೆ ಮಂಕು ಬೆಳಕನ್ನು ಬೀರುತ್ತಿತ್ತು. ಚಿರಂತನವಾದ ಹೊತ್ತಗೆಯನ್ನು ಓದುತ್ತ ಕೊಲೆಗಾರ ಮತ್ತು ಸೂಳೆ ವಿಚಿತ್ರವಾಗಿ ಒಂದಾಗಿದ್ದರು. ಐದಾರು ನಿಮಿಷ ಕಳೆದವು.

‘ವ್ಯವಹಾರ ಮಾತಾಡುವುದಕ್ಕೆ ಬಂದಿದ್ದೆ,’ ರಾಸ್ಕೋಲ್ನಿಕೋವ್ ತಟ್ಟನೆ ಜೋರಾಗಿ ಹೇಳುತ್ತ ಹುಬ್ಬು ಗಂಟಿಕ್ಕಿಕೊಂಡು ಎದ್ದು ಸೋನ್ಯಾಳ ಹತ್ತಿರ ಹೋದ. ಅವಳು ತಲೆ ಎತ್ತಿ ನೋಡಿ ಮಾತಿಲ್ಲದೆ ಎದ್ದು ನಿಂತಳು. ಯಾವುದೋ ನಿರ್ಧಾರವನ್ನು ತೋರ್ಪಡಿಸುವ ಹಾಗೆ ಅವನ ಮುಖ ಕಠಿಣವಾಗಿತ್ತು. ‘ಇವತ್ತು ಮನೆ ಬಿಟ್ಟು ಬಂದೆ. ಅಮ್ಮ, ತಂಗಿಯ ಹತ್ತಿರ ಇನ್ನು ಹೋಗಲ್ಲ ನಾನು. ಅವರ ಸಂಬಂಧ ಪೂರ್ತಿ ಕಡಿದುಕೊಂಡೆ.’

‘ಯಾಕೇ?’ ಸೋನ್ಯಾ ದಿಗ್ಭ್ರಮೆಯಲ್ಲಿ ಕೇಳಿದಳು. ಅವನ ತಾಯಿ, ತಂಗಿಯನ್ನು ನೋಡಿದ ಸನ್ನಿವೇಶ ಅವಳ ಮನಸಿನ ಮೇಲೆ ಗಾಢವಾದ ಪರಿಣಾಮವನ್ನು ಬೀರಿತ್ತು. ಅದೇನೆಂದು ಅವಳಿಗಿನ್ನೂ ಪೂರ್ತಿ ಅರ್ಥವಾಗಿರಲಿಲ್ಲ., ಅವನು ಮನೆ ಬಿಟ್ಟು ಬಂದ ಸಂಗತಿ ತಿಳಿದು ಭಯಪಟ್ಟಳು.

‘ಈಗ ನನಗೆ ಇರುವುದು ನೀನು ಮಾತ್ರ. ನಿನ್ನ ಹತ್ತಿರ ಬಂದಿದ್ದೇನೆ. ನಾವಿಬ್ಬರೂ ಶಾಪಗ್ರಸ್ತರು. ಒಟ್ಟಿಗೆ ಮುಂದೆ ಸಾಗೋಣ.!’
ಅವನ ಕಣ್ಣು ಹೊಳೆಯುತ್ತಿದ್ದವು. ‘ಹುಚ್ಚ’ ಅಂದುಕೊಂಡಳು ಸೋನ್ಯಾ.

‘ಸಾಗುವುದು ಎಲ್ಲಿಗೆ?’ ತನಗೇ ಗೊತ್ತಿಲ್ಲದೆ ಒಂದು ಹೆಜ್ಜೆ ಹಿಂದೆ ಸರಿದು ಅಂಜುತ್ತ ಕೇಳಿದಳು.

‘ನನಗೇನು ಗೊತ್ತು? ನಮ್ಮಿಬ್ಬರ ದಾರಿ ಒಂದೇ ಅಂತ ಮಾತ್ರ ಗೊತ್ತು. ಖಚಿತವಾಗಿ ಗೊತ್ತು. ನಮ್ಮ ಗುರಿ ಒಂದೇ!’
ಏನೂ ಅರ್ಥವಾಗದೆ ಅವನನ್ನೇ ನೋಡುತ್ತಿದ್ದಳು. ಅವನೊಳಗೆ ಕೊನೆಯಿರದ ದುಃಖವಿದೆ, ಭಯಂಕರ ದುಃಖವಿದೆ ಎಂದು ಮಾತ್ರ ತಿಳಿಯಿತು ಅವಳಿಗೆ.

‘ಅವರು ಇದ್ದಾರಲ್ಲ ಅವರು ಯಾರಿಗೂ ಏನೂ ಅರ್ಥ ಆಗಲ್ಲ. ಬಾಯಿ ಬಿಟ್ಟು ಹೇಳಿದರೂ ತಿಳಿಯಲ್ಲ. ನಿನಗೆ ಅರ್ಥ ಆಗತ್ತೆ ನನಗೆ ನೀನು ಬೇಕು. ಅದಕ್ಕೇ ನಿನ್ನ ಹತ್ತಿರ ಬಂದಿದೇನೆ.’

‘ನನಗೆ ತಿಳಿಯಲಿಲ್ಲ,’ ಸೋನ್ಯಾ ಮೆಲುದನಿಯಲ್ಲಿ ಅಂದಳು.

‘ಮುಂದೆ ತಿಳಿಯತ್ತೆ… ನೀನೂ ನನ್ನ ಹಾಗೇ, ನೀನೂ ಮೀರಿ ನಡೆದಿದ್ದೀಯ. ಮೀರಿ ನಡೆಯುವುದಕ್ಕೆ ಆಗಿದೆ ನಿನಗೆ. ನಿನ್ನ ಮೇಲೆ ನೀನೇ ಕೈ ಮಾಡಿಕೊಂಡು ನಿನ್ನ ಬದುಕನ್ನೇ ನಾಶಮಾಡಿಕೊಂಡಿದ್ದೀಯ (ಬೇರೆಯವರ ಬದುಕು ನಾಶಮಾಡುವುದೂ ಒಂದೇ ನಮ್ಮ ಬದುಕು ನಾಶಮಾಡಿಕೊಳ್ಳುವುದೂ ಒಂದೇ). ನೀನು ಬುದ್ಧಿಯನ್ನು ನಂಬಿ, ವಿಚಾರವನ್ನು ನಂಬಿ ಬದುಕಬಹುದಾಗಿತ್ತು. ನಿನ್ನ ಬದುಕು ಹೇಮಾರ್ಕೆಟ್ಟಿನಲ್ಲಿ ಮುಗಿಯತ್ತೆ… ನಿನ್ನ ಕೈಯಲ್ಲಿ ಸಹಿಸಕ್ಕಾಗಲ್ಲ. ನೀನು ಒಬ್ಬಳೇ ಇದ್ದರೆ ಹುಚ್ಚಿ ಆಗತೀಯ, ನನ್ನ ಹಾಗೆ. ಈಗಲೇ ಹುಚ್ಚಿಯ ಥರ ಇದೀಯ. ಅದಕ್ಕೇ ನಾವು ಒಟ್ಟಿಗೆ ಸಾಗಬೇಕು. ಒಂದೇ ದಾರಿಯಲ್ಲಿ ಹೋಗಬೇಕು. ಹೋಗಣ!’

‘ಯಾಕೆ? ಯಾಕೆ? ಯಾಕೆ ಹಾಗನ್ನುತ್ತೀರಿ?’ ಸೋನ್ಯಾ ವಿಚಿತ್ರವಾಗಿ ವಿಚಲಿತಳಾಗಿದ್ದಳು, ಅವನ ಮಾತಿನ ವಿರುದ್ಧ ದಂಗೆ ಏಳುವ ಹಾಗೆ ಕೇಳಿದಳು.

‘ಯಾಕೆ? ಯಾಕೆ ಅಂದರೆ ಹೀಗೆ ಹೀಗೇ ಇರುವುದಕ್ಕೆ ಆಗಲ್ಲ, ಬದಲಾಗಬೇಕು… ಅದಕ್ಕೆ! ಕೊನೆಗೂ ಗಂಭೀರವಾಗಿ ನೇರವಾಗಿ ವಿಚಾರ ಮಾಡುವುದು ಮುಖ್ಯವೇ ಹೊರತು ಮಗುವಿನ ಹಾಗೆ ಅಳುತ್ತ ಕೂರುವುದಲ್ಲ. ಅದನ್ನ ದೇವರು ಒಪ್ಪಲ್ಲ! ನಾಳೇನೇ ನೀನು ಆಸ್ಪತ್ರೆ ಸೇರಬೇಕಾಗಿ ಬಂದರೆ ಏನು ಗತಿ? ಆ ಹೆಂಗಸು, ನಿನ್ನ ಚಿಕ್ಕಮ್ಮನಿಗೆ ಬುದ್ಧಿ ಸರಿ ಇಲ್ಲ, ಜೊತೆಗೆ ಕ್ಷಯ. ಸದ್ಯದಲ್ಲೆ ಸಾಯತಾಳೆ. ಮಕ್ಕಳು? ಪೋಲೆಚ್ಕಾ ಕೂಡ ಹಾಳಾಗಲ್ಲವಾ? ಬೀದಿಯ ಮೂಲೆಗಳಲ್ಲಿ ಭಿಕ್ಷಕ್ಕೆ ಕಾಯುತ್ತ ನಿಂತಿರುವ ಅಮ್ಮಂದಿರೇ ಕಳಿಸಿರುವ ಮಕ್ಕಳನ್ನ ನೋಡಿಲ್ಲವಾ? ಈ ಅಮ್ಮಂದಿರು ಎಲ್ಲಿ ಎಂಥ ಬದುಕು ನಡೆಸತಾರೆ ನನಗೆ ಗೊತ್ತು. ಅಲ್ಲಿದ್ದರೆ ಮಕ್ಕಳು ಮಕ್ಕಳಾಗಿ ಇರುವುದಕ್ಕಾಗಲ್ಲ. ಏಳು ವರ್ಷದ ಮಗುವೂ ವಿಕೃತವಾಗಿ, ಕಳ್ಳರ ಥರ ಬದುಕಬೇಕು. ಮಕ್ಕಳು ಕ್ರಿಸ್ತನ ಪ್ರತಿಬಿಂಬ. ಅವರಲ್ಲಿ ‘ದೇವರ ಸಾಮ್ರಾಜ್ಯವೇ ಇರುತ್ತದೆ ಅಂದ ಕ್ರಿಸ್ತ. ಮಕ್ಕಳನ್ನ ಗೌರವಿಸುವುದು ಹೇಳಿಕೊಟ್ಟ, ಪ್ರೀತಿ ಮಾಡುವುದು ಹೇಳಿಕೊಟ್ಟ. ಮಕ್ಕಳು ಮನುಷ್ಯ ಕುಲದ ಭವಿಷ್ಯ…’

‘ಹಾಗಾದರೆ, ಏನು ಮಾಡಬೇಕು? ನಾವೇನು ಮಾಡಬೇಕು?’ ಸೋನ್ಯಾ ಸನ್ನಿ ಬಂದವಳ ಹಾಗೆ ಅಳುತ್ತ, ಕೈ ಹಿಸುಕಿಕೊಳ್ಳುತ್ತ ಕೇಳಿದಳು.

‘ನಾವೇನು ಮಾಡಬೇಕು? ನಾಶವಾಗಬೇಕಾದ್ದನ್ನೆಲ್ಲ ಶಾಶ್ವತವಾಗಿ ನಾಶಮಾಡಬೇಕು. ಅಷ್ಟೇ. ಹಾಗೆ ಮಾಡಿ ನಾವೇ ನೋವು ತಿನ್ನಬೇಕು, ವೇದನೆ ಅನುಭವಿಸಬೇಕು, ಸಂಕಟಪಡಬೇಕು! ತಿಳಿಯಲಿಲ್ಲವಾ? ನಿನಗೇ ಮುಂದೆ ತಿಳಿಯತ್ತೆ… ಸ್ವಾತಂತ್ರ್ಯ, ಜೊತೆಗೆ ಅಧಿಕಾರ. ಅಧಿಕಾರ ಮುಖ್ಯ ಎಲ್ಲಕ್ಕಿಂತ. ಗಡಗಡ ನಡುಗುವ ಕ್ರಿಮಿಗಳ ಮೇಲೆ, ಗೆಜ್ಜಲು ಗೂಡಿನ ಹುಳುಗಳ ಮೇಲೆ ಅಧಿಕಾರ! ಅದು ಗುರಿ! ನೆನಪಿಟ್ಟುಕೋ! ಇದು ನಿನಗೆ ಕೊಡುತ್ತಿರುವ ವಾಗ್ದಾನ, ನಿನ್ನ ಜೊತೆ ಆಡುತ್ತಿರುವ ಕೊನೆಯ ಮಾತು ಇದೇ ಆಗಿರಬಹುದು. ನಾನು ನಾಳೆ ಬರದಿದ್ದರೆ ಎಲ್ಲವೂ ತಾನಾಗೇ ನಿನಗೆ ತಿಳಿಯತ್ತೆ. ಆಗ ಈ ಮಾತೆಲ್ಲ ನೆನಪು ಮಾಡಿಕೋ. ಕಾಲ ಕಳೆದ ಹಾಗೆ, ಬದುಕು ಸಾಗಿದ ಹಾಗೆ ನಿನಗೆ ಅರ್ಥ ಆಗತ್ತೆ. ಅಕಸ್ಮಾತ್ ನಾನು ನಾಳೆ ಬಂದರೆ ಲಿಝವೆಟಾಳನ್ನ ಯಾರು ಕೊಂದರು ಅನ್ನುವುದನ್ನು ನಿನಗೆ ಹೇಳತೇನೆ. ಗುಡ್‍ ಬೈ!’
ಭಯದಲ್ಲಿ ಸೋನ್ಯಾಳ ಇಡೀ ಮೈ ಕಂಪಿಸಿತು.

‘ಅಂದರೆ, ಅವಳನ್ನ ಕೊಂದಿದ್ದು ಯಾರು? ನಿಮಗೆ ಗೊತ್ತಾ?’ ಭಯದಲ್ಲಿ ಹಿಮಗಟ್ಟಿದ ಹಾಗಾಗಿದ್ದಳು. ಅಂಜಿದ ಮೃಗದ ಹಾಗೆ ಅವನನ್ನು ನೋಡುತ್ತ ಕೇಳಿದಳು.
‘ಗೊತ್ತು. ಹೇಳತೇನೆ… ನಿನಗೆ, ನಿನಗೆ ಮಾತ್ರ! ನಿನಗೇ ಹೇಳಬೇಕು ಅಂದುಕೊಂಡೆ. ನಿನ್ನ ಹತ್ತಿರ ಕ್ಷಮೆ ಗಿಮೆ ಕೇಳಲ್ಲ, ಸುಮ್ಮನೆ ಹೇಳಿ ಹೊರಟು ಹೋಗತೇನೆ. ನಿನಗೇ ಹೇಳಬೇಕು ಅಂತ ಬಹಳ ಹಿಂದೇನೇ ಅಂದುಕೊಂಡೆ. ನಿಮ್ಮಪ್ಪ ನಿನ್ನ ಬಗ್ಗೆ, ಲಿಝವೆಟ ಬಗ್ಗೆ ಹೇಳಿದ್ದರು. ಅವಳು ಆಗಿನ್ನೂ ಬದುಕಿದ್ದಳು. ಆಗಲೇ ನಿನಗೆ ಹೇಳುವ ಯೋಚನೆ ಬಂದಿತ್ತು. ಕೈ ಕುಲಕ ಬೇಡ, ಬೈ ಹೇಳಬೇಡ, ನಾಳೆ ಬರತೇನೆ.’

ಹೊರಟು ಹೋದ. ಹುಚ್ಚನನ್ನು ನೋಡುವ ಹಾಗೆ ಸೋನ್ಯಾ ಅವನನ್ನು ನೋಡಿದಳು. ಸ್ವತಃ ಅವಳೇ ಹುಚ್ಚಿಯ ಹಾಗಿದ್ದಳು. ಅವಳಿಗೇ ಹಾಗನ್ನಿಸಿತು. ಅವಳ ತಲೆ ತಿರುಗುತ್ತಿತ್ತು. ದೇವರೇ! ಲಿಝಾವೆಟನ ಕೊಂದದ್ದು ಯಾರು ಅಂತ ಅವನಿಗೆ ಹೇಗೆ ಗೊತ್ತು? ಅವನ ಮಾತಿನ ಅರ್ಥ ಏನು? ಭಯ ಆಗತ್ತೆ!’ ಅಂದುಕೊಂಡಳು.

ಆದರೆ ಆ ಯೋಚನೆ ಅವಳ ಮನಸಿಗೆ ಬಂದಿರಲಿಲ್ಲ. ‘ಖಂಡಿತ ಇಲ್ಲ, ಇಲ್ಲ! ಅವನಿಗೆ ಬಹಳ ದುಃಖ ಇದೆ. ಅಮ್ಮನನ್ನೂ ತಂಗಿಯನ್ನೂ ಬಿಟ್ಟು ಬಂದಿದಾನೆ. ಯಾಕೆ? ಏನು ನಡೆಯಿತು? ಅವನ ಉದ್ದೇಶ ಏನು? ಅದೇನದು ಅವನು ಹೇಳಿದ್ದು? ಕಾಲಿಗೆ ಮುತ್ತಿಟ್ಟಿದ್ದ, ಮತ್ತೆ ಹೇಳಿದ್ದ, ಹೇಳಿದ್ದ, (ಹೌದು, ಸ್ಪಷ್ಟವಾಗಿ ಹೇಳಿದ್ದ) ಅವಳಿಲ್ಲದೆ ಬದುಕಲ್ಲ ಅಂದಿದ್ದ… ಅಯ್ಯೋ, ದೇವರೆ!ʼ ಸೋನ್ಯಾ ಇಡೀ ರಾತ್ರಿಯನ್ನು ಜ್ವರದಲ್ಲಿ ಕಳೆದಳು. ಆಗಾಗ ತಟ್ಟನೆ ಎದ್ದು ಕೂರುತ್ತಿದ್ದಳು, ಅಳುತ್ತಿದ್ದಳು. ಕೈ ಹಿಸುಕಿಕೊಳ್ಳುತ್ತಿದ್ದಳು. ಆಮೇಲೆ ಜ್ವರನಿದ್ರೆಗೆ ಮತ್ತೆ ಜಾರುತ್ತಿದ್ದಳು.

ಕನಸಿನಲ್ಲಿ ಪೋಲೆಚ್ಕಾ, ಕ್ಯಾತರೀನ ಇವಾನೊವ್ನ, ಲಿಝವೆಟ ಕಂಡರು. ಸುವಾರ್ತೆ ಓದುತ್ತಿದ್ದಳು. ಅವನು ಕಂಡ… ಹ್ಞಂ, ಅವನ ಬಿಳಿಚಿದ ಮುಖ, ಸುಡುವ ಕಣ್ಣು… ಅವಳ ಕಾಲಿಗೆ ಮುತ್ತಿಡುತ್ತ ಅಳುತ್ತಿದ್ದ… ಅಯ್ಯೋ, ದೇವರೇ! ಬಲಗಡೆಯ ಬಾಗಿಲಾಚೆಗೆ, ಸೋನ್ಯಾಳ ರೂಮಿಗೂ ಗರ್ಟೂಡ್ ರೆಸ್ಸ್ಲಿಚ್ ಇದ್ದ ರೂಮಿಗೂ ನಡುವೆ ಬಹಳ ಕಾಲದಿಂದ ಖಾಲಿ ಇದ್ದ ಇನ್ನೊಂದು ರೂಮು ಇತ್ತು. ಅದು ರೆಸ್ಸ್ಲಿಚ್‍ ಳ ಅಪಾರ್ಟ್‍ಮೆಂಟಿಗೆ ಸೇರಿದ್ದು. ಆ ರೂಮು ಬಾಡಿಗೆಗೆ ಇದೆ ಎಂದು ಗೇಟಿನ ಪಕ್ಕದಲ್ಲಿ, ಕಾಲುವೆಗೆ ಮುಖ ಮಾಡಿದ್ದ ಕಿಟಕಿಗಳ ಮೇಲೆ ಬರೆದಿದ್ದರು. ಈ ರೂಮು ಖಾಲಿ ಅನ್ನುವ ನಂಬಿಕೆಗೆ ಸೋನ್ಯ ಹೊಂದಿಕೊಂಡುಬಿಟ್ಟಿದ್ದಳು. ಆದರೆ ಇಷ್ಟೂ ಹೊತ್ತು ಶ್ರೀಯುತ ಸ್ವಿಡ್ರಿಗೈಲೊವ್ ಆ ಖಾಲಿ ರೂಮಿನ ಬಾಗಿಲಿಗೆ ಕಿವಿ ಇಟ್ಟು ಮಾತನ್ನೆಲ್ಲ ಕದ್ದು ಕೇಳುತ್ತಿದ್ದ. ರಾಸ್ಕೋಲ್ನಿಕೋವ್ ಹೊರಟಾಗ ಸ್ವಿಡ್ರಿಗೈಲೋವ್ ಸ್ವಲ್ಪ ಹೊತ್ತು ಅಲ್ಲೇ ನಿಂತು, ಯೋಚನೆ ಮಾಡಿ, ಖಾಲಿ ರೂಮಿನ ಪಕ್ಕದಲ್ಲಿದ್ದ ತನ್ನ ರೂಮಿಗೆ ತುದಿಗಾಲಲ್ಲಿ ಹೋಗಿ, ಕುರ್ಚಿಯೊಂದನ್ನು ಸದ್ದು ಮಾಡದೆ ತಂದು ಖಾಲಿ ಕೋಣೆಯಲ್ಲಿದ್ದ, ಸೋನ್ಯಾ ಕೋಣೆಗೆ ದಾರಿ ಮಾಡಿಕೊಡುವ ಮುಚ್ಚಿದ ಬಾಗಿಲ ಪಕ್ಕದಲ್ಲಿಟ್ಟ.


ಸೋನ್ಯಾ-ರಾಸ್ಕೋಲ್ನಿಕೋವ್‍ ರ ಸಂಭಾಷಣೆ ಬಹಳ ತಮಾಷೆಯಾಗಿ ಕಂಡಿತ್ತು. ನಾಳೆ ಅವರ ಮಾತನ್ನು ಕೇಳುವುದಕ್ಕೆ ಕಷ್ಟವಾಗಬಾರದು ನಿಂತು ಕಾಲು ನೋಯಿಸಿಕೊಂಡು ಅವರ ಮಾತು ಕೇಳುವ ಕಷ್ಟ ಇರಬಾರದು, ಆರಾಮವಾಗಿ ಕೂತು ಅವರ ಮಾತನ್ನೆಲ್ಲ ಕೇಳಿಸಿಕೊಳ್ಳಬೇಕು ಎಂದು ಕುರ್ಚಿಯನ್ನು ತಂದಿಟ್ಟ.