ದಾರಿ ಸಾಗುತ್ತಾ ನಾವು ಪೊಲೀಸ್ ಸ್ಟೇಷನ್‌ ಬಳಿ ಬಂದಾಗ “ಅದೋ ಅಲ್ಲಿ ಮುಂದೆ ಬಲಕ್ಕೆ ತಿರುಗಿ ಅಲ್ಲೇ ಮನೆ” ಅಂದೆ. ಡ್ರೈವರ್ “ಒಹ್ ಸಾರ್ ಆ ಜ್ಯೂಸು ಮಾಡ್ತಾರಲ್ಲ ಅವರ ಮನೆಹತ್ರನಾ?” ಅಂತ ಕೇಳಿದ್ದನ್ನು ಕಂಡು ನಾನು ಅವಾಕ್ಕಾದೆ! “ಹೌದು ಅವರೇ ಇವರು, ನಮ್ಮಪ್ಪ!” ಅಂದೆ. ಅವನು ಕೊಂಚ ಸುಮ್ಮನಾದಂತೆ ಕಂಡು ನಂತರ “ಹೌದು ಸಾರ್, ಅದೇ ಅನ್ಕೊಂಡೆ ಈಗ ಒಂದು ೨-೩ ವರ್ಷಗಳಿಂದ ಅಂಗಡಿ ತಗಿತಾ ಇಲ್ವಲ್ಲ ಅಂತ, ಪಾಪ ಸಾರ್” ಅಂದ.
ದರ್ಶನ್‌ ಜಯಣ್ಣ ಬರೆದ ಪ್ರಬಂಧಗಳ ಸಂಕಲನ “ಅಪ್ಪನ ರ್ಯಾಲೀಸ್‌ ಸೈಕಲ್‌” ನಿಂದ ಒಂದು ಪ್ರಬಂಧ ನಿಮ್ಮ ಓದಿಗೆ

ಅಪ್ಪ ಇಲ್ಲವಾಗಿ ಐದು ನಿಮಿಷಗಳಾಗಿತ್ತು. ಆಸ್ಪತ್ರೆಯಲ್ಲಿ ಬಿಲ್ಲು ಕಟ್ಟಲು ಕರೆದರು. ವಾಸ್ತವತೆ ಅಪ್ಪಳಿಸುವುದೇ ಹೀಗೆ. ಅಲ್ಲಿ ಎಲ್ಲವೂ ಸರಿ ಮತ್ತು ಸಕಾಲಿಕ. ಬಿಲ್ಲು ಕಟ್ಟಿ ಅಲ್ಲೇ ಮೆಟ್ಟಿಲಿನ ಮೇಲೆ ಕುಂತೆ, ಅಮ್ಮನನ್ನು ಮಾವ ಸಂತೈಸುತ್ತಿದ್ದರು. ಅಪ್ಪ ಹೋದದ್ದು ಧಿಡೀರನೆ ಅಲ್ಲವಾದರೂ ೬೨ ಸಾಯುವ ವಯಸ್ಸಾಗಿರಲಿಲ್ಲ. ೫೭ ಕ್ಕೆ ಅವರಿಗೆ ಬಡಿದ ಸ್ಟ್ರೋಕ್ ಮುಂದೆ Parkinson’s ಮತ್ತು Dementia ಎಂದು ತಿಳಿದಾಗ, ಇವೆರಡೂ ಸಂಕೀರ್ಣ ಸ್ಥಿತಿಗಳು ಅವರಿಗೆ ಏಕೆ ಬಂದವು ಎಂದು ಮರುಗಿದೆವು? ಅತ್ಯಂತ ಲವಲವಿಕೆಯಿಂದಿದ್ದ ಅವರನ್ನು ಹೀಗೆ ಮೂಲೆಗುಂಪು ಮಾಡಿದ ಖಾಯಿಲೆಗಳ ಬಗ್ಗೆ ನನಗೂ, ಅಮ್ಮನಿಗೂ ಮತ್ತು ಅಪ್ಪನನ್ನು ನೋಡಿದೆಲ್ಲರಿಗೂ ಬೇಸರವಿತ್ತು. ಮೆಟ್ಟಿಲುಗಳಮೇಲೆ ಕುಂತು ಖಾಲಿ ಖಾಲಿ ಅನ್ನಿಸತೊಡಗಿರುವಾಗಲೇ, ಇಂದು ನಾನು ಕಟ್ಟಿದ್ದು ಅಪ್ಪನ ಕಡೆಯ ಬಿಲ್ಲು ಎಂದು ಹೊಳೆದು ಅಳು ಒತ್ತರಿಸಿ ಬಂತು. ಅಪ್ಪನ ಐದು ವರ್ಷದ ಡಿಪೆಂಡೆಂಟ್ ಸ್ಥಿತಿ ಅವರಿಗೂ, ಅಮ್ಮನಿಗೂ ಮತ್ತು ನಮಗೂ ಸುಖಕರವಾಗಿ ಖಂಡಿತವಾಗಿಯೂ ಇರಲಿಲ್ಲ. ಆದರೆ ನಾವು ಅವರ ಇಲಾಜಿಗಾಗಿ ನಮ್ಮ ಕೈಲಾದ ಎಲ್ಲ ಪ್ರಯತ್ನವೆಲ್ಲ ಮಾಡಿದೆವು. ಯಾರೋ “ಮೇಲೆ ಬರಬೇಕಂತೆ” ಅಂತ ಕರೆದರು, ಹೋದೆ. “ನಿಮ್ಮಲ್ಲಿ ಕಾಲುಕೈ ಮಡಿಸಬೇಕಾ?” ಎಂದು ಕೇಳಿದರು. “ಹೌದು” ಎಂದೆ. ಮಡಿಸಿದವರು, ತಲೆಯನ್ನು ಬಾಯಿ ಜಾರದ ಹಾಗೆ ಕಟ್ಟಿದರು. ಅರ್ಧ ಗಂಟೆಯ ಮುಂಚೆ ಕಡೆಯ ಬಾರಿ ಅಪ್ಪ ಪೈಪ್‌ನ ಮೂಲಕ ‘ರವೆ’ಗಂಜಿ ಕುಡಿದಿದ್ದರು. ಎರಡೇ ನಿಮಿಷದಲ್ಲಿ ICU ಖಾಲಿ ಮಾಡಿಸಿ ಮತ್ತೊಬ್ಬರಿಗೆ ಬೆಡ್ಡು ಅಣಿಮಾಡಲಾಯಿತು. ಅಪ್ಪನನ್ನು ಸ್ಟ್ರೆಚರ್ ಮೇಲೆ ಮಲಗಿಸಿ ಆಸ್ಪತ್ರೆ ಮುಂದೆ ಕರೆತರಲಾಯಿತು. ಆಂಬುಲೆನ್ಸ್ ರೆಡಿ ಇತ್ತು, ಶಿಫ್ಟ್ ಮಾಡಿದೆವು. ಅಮ್ಮ ಮತ್ತು ಇನ್ನೊಬ್ಬರು ಹತ್ತಿದರು.

(ದರ್ಶನ್‌ ಜಯಣ್ಣ)

ಆಸ್ಪತ್ರೆಯ ಮಾಲಕರೂ ಆಗಿದ್ದ ಮತ್ತು ಅಪ್ಪನನ್ನು ನೋಡಿದ ವೈದ್ಯರು “ನಿಮ್ಮ ಕೈಲಾದಷ್ಟು ನೋಡಿಕೊಂಡಿದ್ದೀರ, ಈ ಸ್ಥಿತಿಯೇ ಹೀಗೆ ಏನೂ ಮಾಡಲಿಕ್ಕಾಗುವುದಿಲ್ಲ, ಇಟ್ಸ್ ಆ ಡಿಜೆನೆರೆಟಿವ್ ಡಿಸ್ಆರ್ಡರ್” ಅಂದರು. ಜೊತೆಗೆ “ನಾವೆಲ್ಲಾ ಚಿಕ್ಕವರಿರುವಾಗ ನಿಮ್ಮ ಅಂಗಡಿಗೆ ಬಂದು ಜ್ಯೂಸು ಕುಡಿಯುತ್ತಿದ್ದೆವು. ಒಳ್ಳೆಯ ಮನುಷ್ಯ” ಅಂದರು. ಆಂಬುಲೆನ್ಸ್‌ನ ಮುಂದಿನ ಸೀಟಿನಲ್ಲಿ ನಾನು ಕುಳಿತುಕೊಂಡೆ, ಡ್ರೈವರ್‌ಗೆ ಮನೆಯದಾರಿ ತೋರಿಸಬೇಕಿತ್ತು.

ಅಮ್ಮ ಅಳು ನಿಲ್ಲಿಸಿದ್ದಂತಿತ್ತು. ನಾನು ಹಿಂದಿರುಗಿ ನೋಡಲು ಹೆದರಿದೆ. ನನ್ನೊಳಗೆ ಏನಾಗುತ್ತಿತ್ತೋ ಹೇಳುವುದು ಕಷ್ಟ. ಡ್ರೈವರ್ ದಾರಿ ಕೇಳಿದ. “ದ್ವಾರಕಾ ಹೋಟೆಲ್ಲಿನ ಹತ್ತಿರ ಮನೆ” ಅಂದೆ. B H ರಸ್ತೆಯ ರಾಂಗ್ ಸೈಡ್‌ನಲ್ಲಿ ಹೊರಟ. “ಬೇಡಪ್ಪ ಸರಿಯಾದ ಕಡೆ ಹೋಗೋಣ, ಜನ ಬೈಕೋತಾರೆ” ಅಂದೆ. “ಇಲ್ಲ ಬಿಡಿ ಸಾರ್ ಆಂಬುಲೆನ್ಸ್‌ಗೆ ಯಾರೂ ಬೈಕಳಲ್ಲ” ಅಂದ, ನಾನು ಸುಮ್ಮನಾದೆ. ದಾರಿ ಸಾಗುತ್ತಾ ನಾವು ಪೊಲೀಸ್ ಸ್ಟೇಷನ್‌ ಬಳಿ ಬಂದಾಗ “ಅದೋ ಅಲ್ಲಿ ಮುಂದೆ ಬಲಕ್ಕೆ ತಿರುಗಿ ಅಲ್ಲೇ ಮನೆ” ಅಂದೆ. ಡ್ರೈವರ್ “ಒಹ್ ಸಾರ್ ಆ ಜ್ಯೂಸು ಮಾಡ್ತಾರಲ್ಲ ಅವರ ಮನೆಹತ್ರನಾ?” ಅಂತ ಕೇಳಿದ್ದನ್ನು ಕಂಡು ನಾನು ಅವಾಕ್ಕಾದೆ! “ಹೌದು ಅವರೇ ಇವರು, ನಮ್ಮಪ್ಪ!” ಅಂದೆ. ಅವನು ಕೊಂಚ ಸುಮ್ಮನಾದಂತೆ ಕಂಡು ನಂತರ “ಹೌದು ಸಾರ್, ಅದೇ ಅನ್ಕೊಂಡೆ ಈಗ ಒಂದು ೨-೩ ವರ್ಷಗಳಿಂದ ಅಂಗಡಿ ತಗಿತಾ ಇಲ್ವಲ್ಲ ಅಂತ, ಪಾಪ ಸಾರ್” ಅಂದ. ಅಮ್ಮ “ಐದು ವರ್ಷ ಆಯ್ತಪ್ಪ” ಅಂದಳು, ಅವನು ತಲೆಯಾಡಿಸಿದ.


ಮನೆಯಹತ್ತಿರ ಬಂದಾಗ ಅಕ್ಕಪಕ್ಕದವರೆಲ್ಲಾ ಸೇರಿದ್ದರು. ಚಿಕ್ಕಪ್ಪ ಅಪ್ಪನನ್ನು ಒಳಗಡೆ ಮಲಗಿಸಲು ಎಲ್ಲ ವ್ಯವಸ್ಥೆ ಮಾಡಿದ್ದರು. ಅವರನ್ನು ಒಳಗೆ ಮಲಗಿಸಿದ ನಂತರ ಆಂಬುಲೆನ್ಸ್ ನವನೂ ಅವರನ್ನೊಮ್ಮೆ ನೋಡಿ ಹೊರಟ. ನಾನು ಹೊರಬಂದು “ದುಡ್ಡು ಎಷ್ಟು ಕೊಡಬೇಕು?” ಕೇಳಿದೆ. “ಸಾರ್ ಅಲ್ಲಿ ಇದ್ದಾರಲ್ಲ ಆಗ್ಲೇ ಕೊಟ್ಟಿದ್ದಾರೆ” ಅಂತ ನನ್ನ ಸ್ನೇಹಿತನ ಕಡೆ ಕೈ ಮಾಡಿದ. ಅವನು ಅದಕ್ಕೆ ಸಮ್ಮತಿಸಿದ. ಅಪ್ಪನನ್ನು ಆಸ್ಪತ್ರೆಯಲ್ಲಿ, ಮನೆಯಲ್ಲಿ ಕಡೆಗೆ ಸಮಾಧಿಯ ಬಳಿ ತುಂಬಾ ಜನ ನೋಡಲು ಬಂದರು. ಊಹಿಸಲಾರದವರೆಲ್ಲ ಬಂದು ಅಮ್ಮನಿಗೆ ಸಾಂತ್ವನ ಹೇಳಿದರು. ಆದರೆ ನನ್ನನ್ನು ಕಾಡಿದ್ದು ಅವರನ್ನು ಟ್ರೀಟ್ ಮಾಡಿದ ವೈದ್ಯರಿಂದ ಹಿಡಿದೂ ಕಡೆಗೆ ಬಿಟ್ಟು ಹೋದ ಆಂಬುಲೆನ್ಸ್ ನ ಡ್ರೈವರ್‌ನವರೆಗೂ ಅಪ್ಪ ಮುಟ್ಟಿದ್ದರು! ಹುಟ್ಟಿದ್ದು, ಆಡಿ ಬೆಳೆದದ್ದು, ವ್ಯಾಪಾರ ಸಂಸಾರ ಮಾಡಿದ್ದು ಅದೇ ಪೇಟೆ ಅದೇ ಬೀದಿ, ಕಡೆಗೆ ತೀರಿದ್ದೂ ಅಲ್ಲಿಯೇ. ಅಪ್ಪ ಯಾವತ್ತೂ ಬದುಕು ಏಕತಾನ ಅನ್ನಲಿಲ್ಲ. ಅಪ್ಪ ಓದಿದ್ದು S S L C (ಸೆಕೆಂಡ್ ಕ್ಲಾಸ್). ಮುಂದೆ ಓದಲಿಕ್ಕಾಗದೆ ಮಾಡಿದ್ದು ನಾನಾ ಉದ್ಯೋಗ.. ಸೌದೆ ಕಂಟ್ರಾಕ್ಟರ್, ಗ್ರಂಥಿಗೆ ಅಂಗಡಿ, ಗುಲ್ಕನ್ ಫ್ಯಾಕ್ಟರಿ, ಸ್ಪಿರಿಟ್ ಮತ್ತು ಪಟಾಕಿ ವ್ಯಾಪಾರ, ಪೂಜಾ ಸಾಮಗ್ರಿ ಮತ್ತು ಸಮಿತ್ತು, ಪಂಚಲೋಹದ ವಿಗ್ರಹಗಳ ವ್ಯಾಪಾರ, ಡ್ರೈ fruits, ಜ್ಯೂಸು ಅಂಗಡಿ, ಪಾರ್ಟಿ ಹಾಲ್, ಆಯುರ್ವೇದ ಪಂಡಿತ ಹೀಗೆ ಭುಜಂಗಯ್ಯನದ್ದು ದಶಾವತಾರವಾದರೆ ಅಪ್ಪನದ್ದು ಶತಾವತಾರ!

ಯಾರ ಮಾತೂ ಕೇಳದ, ಯಾವುದಕ್ಕೂ ಅಂಟಿಕೊಳ್ಳದ, ಯಾರ ಮರ್ಜಿಗೂ ಸಿಗದ, ಅವರಿವರೆನ್ನದೆ ಎಲ್ಲರನ್ನೂ ನಮ್ಮವರೆಂದುಕೊಂಡ, ಸದಾ ಕಾಯಕ ಮತ್ತು ಶ್ರಮವನ್ನು ಮಾತ್ರ ನಂಬಿದ ಅಪ್ಪ ನನ್ನ ಪಾಲಿಗಂತೂ ಅಚ್ಚರಿಯ ದಾರಿ ದೀಪ. ಅವರ ಬಗ್ಗೆ ಬರೆದು ನೀಗಿಸಿಕೊಳ್ಳುವುದು ಸಾಕಷ್ಟಿದೆ ಅನಿಸತೊಡಗಿತು.

(ಕೃತಿ: ಅಪ್ಪನ ರ್ಯಾಲೀಸ್‌ ಸೈಕಲ್‌ (ಪ್ರಬಂಧಗಳು), ಲೇಖಕರು: ದರ್ಶನ್‌ ಜಯಣ್ಣ, ಪ್ರಕಾಶಕರು:  ಛಂದ ಪ್ರಕಾಶನ)