ಆಶ್ ಬಾರ್ಟಿ  ಮೆಲ್ಬೋರ್ನ್ ನಗರದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು ಗೆದ್ದಾಗ ಅಪ್ಪಅಮ್ಮಂದಿರು, ಆಪ್ತ ಗೆಳತಿಯರು ಅಲ್ಲದೆ ಇವೊನ್ ಗೂಲಗೊಂಗ್ ಕಾಲಿ ಕೂಡ ಹಾಜರಿದ್ದರು. ಜೊತೆಗೆ ಹೆಸರಾಂತ ಆಸ್ಟ್ರೇಲಿಯನ್ ಅಬೊರಿಜಿನಲ್ ಅಥ್ಲೀಟ್ ಕ್ಯಾಥಿ ಫ್ರೀಮನ್ ಪ್ರೇಕ್ಷಕ ವೃಂದದಲ್ಲಿ ಕೂತು ಪಂದ್ಯವನ್ನು ವೀಕ್ಷಿಸಿದ್ದರು. ತಾನು ಆಟವಾಡಿದ ಸ್ಥಳದಲ್ಲೇ ಇವರೆಲ್ಲರನ್ನು ಕಂಡು ಅವರೆಲ್ಲನ್ನು ಅಪ್ಪಿಕೊಂಡದ್ದೇ ಒಂದು ಮಹಾನ್ ಸಂತೋಷದ ಕ್ಷಣವೆಂದು ಆಶ್ ಹೇಳಿದಳು. ಅಬೊರಿಜಿನಲ್ ಮನೆಮನೆಗಳಲ್ಲಿ ಎದ್ದ ಹರ್ಷೋದ್ಗಾರ ಇನ್ನೂ ಕೇಳುತ್ತಿದೆ.
ಡಾ. ವಿನತೆ ಶರ್ಮ ಬರೆದ ಆಸ್ಟ್ರೇಲಿಯ ಪತ್ರ

“ಟೆನಿಸ್ ಎಂಬ ಆಟದ ಬೃಹತ್ ಪ್ರಪಂಚಕ್ಕೆ ಸಲ್ಲುವ ನನ್ನ ಬಹು ಕಿರಿದಾದ ಕೊಡುಗೆ ಇದು”
– ಈ ಮಾತನ್ನು ಹೇಳಿ ಆ ಹುಡುಗಿ ನಮ್ಮೆಲ್ಲರನ್ನು ಮೂಕವಿಸ್ಮಿತರನ್ನಾಗಿಸಿದಳು. ಕಳೆದ ವರ್ಷ ವಿಂಬಲ್ಡನ್ ಟೆನಿಸ್ ಮಹಿಳಾ ಸಿಂಗಲ್ಸ್ ಪಂದ್ಯವನ್ನು ಗೆದ್ದಾಗ ಆಶ್ ಬಾರ್ಟಿಯ ಸಂತೋಷವನ್ನು ಹಂಚಿಕೊಳ್ಳಲು ಅವಳ ಕುಟುಂಬದವರಾಗಲಿ ಅಥವಾ ಅವಳ ನೆಚ್ಚಿನ ಮಾರ್ಗದರ್ಶಕಿಯಾದ, ಟೆನಿಸ್ ತಾರೆಯೆಂದು ಗುರುತಿಸಲ್ಪಡುವ ಮತ್ತೊಬ್ಬಆಸ್ಟ್ರೇಲಿಯನ್ ಅಬೊರಿಜಿನಲ್ ಹಿರಿಯ ಆಟಗಾರ್ತಿ ಇವೊನ್ ಗೂಲಗೊಂಗ್ ಕಾಲಿ ಇರಲಿಲ್ಲ. ಕೋವಿಡ್-೧೯ ರ ಕಾರಣ. ಆಸ್ಟ್ರೇಲಿಯಾದಲ್ಲಿ ಕೋವಿಡ್-೧೯ ರ ಪಿಡುಗು ಇಂಡಿಜಿನಸ್ (ಮೂಲನಿವಾಸಿಗಳು) ಜನರನ್ನು ಬಹಳ ಆತಂಕದಲ್ಲಿಟ್ಟಿದೆ. ಹಾಗಾಗಿ ಅವರು ನಮ್ಮೆಲ್ಲರಿಗಿಂತ ಹೆಚ್ಚಿನ ಕಾಳಜಿ ವಹಿಸಬೇಕು.

ಕಳೆದ ವಾರ ಮೆಲ್ಬೋರ್ನ್ ನಗರದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು ಗೆದ್ದಾಗ ಅಪ್ಪಅಮ್ಮಂದಿರು, ಆಪ್ತ ಗೆಳತಿಯರು ಅಲ್ಲದೆ ಇವೊನ್ ಗೂಲಗೊಂಗ್ ಕಾಲಿ ಕೂಡ ಹಾಜರಿದ್ದರು. ಜೊತೆಗೆ ಹೆಸರಾಂತ ಆಸ್ಟ್ರೇಲಿಯನ್ ಅಬೊರಿಜಿನಲ್ ಅಥ್ಲೀಟ್ ಕ್ಯಾಥಿ ಫ್ರೀಮನ್ ಪ್ರೇಕ್ಷಕ ವೃಂದದಲ್ಲಿ ಕೂತು ಪಂದ್ಯವನ್ನು ವೀಕ್ಷಿಸಿದ್ದರು. ತಾನು ಆಟವಾಡಿದ ಸ್ಥಳದಲ್ಲೇ ಇವರೆಲ್ಲರನ್ನು ಕಂಡು ಅವರೆಲ್ಲನ್ನು ಅಪ್ಪಿಕೊಂಡದ್ದೇ ಒಂದು ಮಹಾನ್ ಸಂತೋಷದ ಕ್ಷಣವೆಂದು ಆಶ್ ಹೇಳಿದಳು. ಅಬೊರಿಜಿನಲ್ ಮನೆಮನೆಗಳಲ್ಲಿ ಎದ್ದ ಹರ್ಷೋದ್ಗಾರ ಇನ್ನೂ ಕೇಳುತ್ತಿದೆ.

ನಲವತ್ತನಾಲ್ಕು ವರ್ಷಗಳ ನಂತರ ಆಸ್ಟ್ರೇಲಿಯನ್ ಆಟಗಾರ್ತಿ ಮಹಿಳಾ ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು ಗೆದ್ದಿರುವುದು ಈ ವರ್ಷದ ವಿಶೇಷ. ೧೯೭೮ರಲ್ಲಿ ಕ್ರೈಸ್ ಓನೀಲ್ ಟ್ರೋಫಿ ಹಿಡಿದಿದ್ದರು. ಅಲ್ಲಿಂದ ಮುಂದೆ  ಟ್ರೋಫಿಗಾಗಿ ಕಾದದ್ದೇ ಆಗಿತ್ತು. ಈ ವರ್ಷ ಆಶ್ ಗೆದ್ದು ದಶಕಗಳ ಕಾಯುವಿಕೆಯನ್ನು ಕೊನೆಗೊಳಿಸಿದಳು. ಅಲ್ಲದೆ, ಇವೊನ್ ಗೂಲಗೊಂಗ್ ಬಳಿಕ ಟ್ರೋಫಿ ಗೆದ್ದ ಎರಡನೆ ಅಬೊರಿಜಿನಲ್ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾಳೆ. ತನ್ನೆದುರಾಳಿ ಅಮೆರಿಕನ್ ಆಟಗಾರ್ತಿ ಡ್ಯಾನಿಎಲ್ ಕೋಲಿನ್ಸ್ ವಿರುದ್ಧ ಸೆಣೆಸಿದ ಆಶ್ ಹಲವಾರು ಬಾರಿ ಸೋತೆ ಬಿಡಬಹುದು ಎಂಬ ಆತಂಕವನ್ನು ಉಂಟುಮಾಡಿದ್ದು ಸುಳ್ಳಲ್ಲ.

ಮೆಲ್ಬೋರ್ನ್ ನಗರದಲ್ಲಿ ನಡೆದ ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು ಗೆದ್ದಾಗ ಅಪ್ಪಅಮ್ಮಂದಿರು, ಆಪ್ತ ಗೆಳತಿಯರು ಅಲ್ಲದೆ ಇವೊನ್ ಗೂಲಗೊಂಗ್ ಕಾಲಿ ಕೂಡ ಹಾಜರಿದ್ದರು. ಜೊತೆಗೆ ಹೆಸರಾಂತ ಆಸ್ಟ್ರೇಲಿಯನ್ ಅಬೊರಿಜಿನಲ್ ಅಥ್ಲೀಟ್ ಕ್ಯಾಥಿ ಫ್ರೀಮನ್ ಪ್ರೇಕ್ಷಕ ವೃಂದದಲ್ಲಿ ಕೂತು ಪಂದ್ಯವನ್ನು ವೀಕ್ಷಿಸಿದ್ದರು.

ಅದಕ್ಕೆ ಇಂಬು ಕೊಡುವಂತೆ ಆಟದ ಮೊದಮೊದಲು ಡ್ಯಾನಿಎಲ್ ಸಿಂಹಿಣಿಯಂತೆ ಗರ್ಜಿಸುತ್ತಿದ್ದಳು. ಆಶ್ ಮಾತ್ರ ಸ್ವಲ್ಪವೂ ಶಬ್ದ ಮಾಡದೆ ಆಸ್ಟ್ರೇಲಿಯನ್ ಕಾಂಗರೂಗಳ ರೀತಿ ಸುಮ್ಮನೆ ಇದ್ದಳು. ಕೊನೆಗೆ ಪಂದ್ಯವನ್ನು ಗೆದ್ದಾಗ ಒಂದೆರಡು ಬಾರಿ ಕಾಕಟೂಗಳ ಸ್ಟೈಲಿನಲ್ಲಿ ಕಿರಿಚಿದ್ದಳು ಅಷ್ಟೇ. ನಂತರ ಸ್ಟೇಡಿಯಂ ನಲ್ಲಿ ತನ್ನ ಮಾರ್ಗದರ್ಶಿ ಮತ್ತು ಹಿತೈಷಿ ಇವೊನ್ ಗೂಲಗೊಂಗ್ ಇದ್ದಾರೆ ಎಂದು ತಿಳಿದಾಗ ವಿನಯ, ವಿಧೇಯತೆಯ ಮೂಟೆಯಾಗಿ ಹೋದಳು. ಕ್ಯಾಥಿ ಫ್ರೀಮನ್ ಕೂಡ ಇದ್ದಾರೆ ಎಂದಾಗ ಮುಖವರಳಿಸಿಕೊಂಡು ಬೀಗಿದಳು.

ನಮ್ಮ ರಾಣಿರಾಜ್ಯದ ಬ್ರಿಸ್ಬನ್ ನಗರದಿಂದ ಪಶ್ಚಿಮಕ್ಕಿರುವ ಇಪ್ಸ್ವಿಚ್ ಪಟ್ಟಣದ ಈ ಅಪ್ಪಟ ಯುವ ಪ್ರತಿಭೆ ಪೂರ್ತಿಯಾಗುವ ಅರಳುವ ಮೊದಲೇ ಕಮರಿಹೋಗುವ ಭಯದ ದಿನಗಳಿದ್ದವು. ಬಾಲ್ಯದ ಪ್ರತಿಭೆಯಾಗಿ ಅಬೊರಿಜಿನಲ್ ಹುಡುಗಿ ಆಶ್ ಟೆನಿಸ್ ಪ್ರಪಂಚದಲ್ಲಿ ಮಿಂಚಿದಾಗ ಹಲವರಲ್ಲಿ ಹೊಸ ಕನಸು ಹುಟ್ಟಿತ್ತು. ಈ ಬಾಲಕಿ ಮತ್ತೊಬ್ಬ ಇವೊನ್ ಗೂಲಗೊಂಗ್ ಆಗಬಲ್ಲಳೇ ಎಂಬ ಪ್ರಶ್ನೆಯ ಜೊತೆ ಮಿತಿಯಿಲ್ಲದ ನಿರೀಕ್ಷೆಗಳು ಬೆಳೆಯಲಾರಂಭಿಸಿದ್ದವು. ಅದಾಗಲೇ ಜನರು ಎಳೆಬಾಲಕಿಯ ಮೇಲೆ ಒತ್ತಡ ಹೇರಲು ಆರಂಭಿಸಿದ್ದರು. ಈ ಒತ್ತಡ ಮೇರೆ ಮೀರಿದಾಗ ಆಶ್ ಇನ್ನೂ ಹದಿನಾರರ ಟೀನೇಜರ್.

ನಂತರದ ದಿನಗಳಲ್ಲಿ ಟೆನಿಸ್ ರಾಕೆಟ್, ಊರೂರು ಸುತ್ತಾಟ, ಕಠಿಣ ತರಬೇತಿ, ಅಭ್ಯಾಸ, ತನ್ನ ಮೇಲೆ ಅನಾಯಾಸವಾಗಿ ಬಂದೆರಗುವ ಟೀಕೆ – ಈ ಎಲ್ಲವನ್ನೂ ಪಕ್ಕಕ್ಕಿಟ್ಟು ತಂಡ-ಪಂದ್ಯವಾದ ಕ್ರಿಕೆಟ್ ಕಡೆ ಮನಸ್ಸು ಕೊಟ್ಟು ಹಲವಾರು ವರ್ಷಗಳು ಕ್ರಿಕೆಟ್ಟಿನಲ್ಲಿ ಸೈ ಎನಿಸಿಕೊಂಡಳು. ಅದೇ ಕಾಲದಲ್ಲಿ ಜೀವನೋಪಾಯಕ್ಕಾಗಿ ಬ್ರಿಸ್ಬನ್ ನಗರದಲ್ಲಿ ಶಾಲಾ ಮಕ್ಕಳಿಗೆ ಶಾಲಾ ನಂತರದ ಟೆನಿಸ್ ತರಬೇತಿ ಕ್ಲಾಸ್ ನಡೆಸುತ್ತಿದ್ದಳಂತೆ. ಅವಳನ್ನು ಟೆನಿಸ್ ತಾರೆಯಾಗಿ ನೋಡಲು ಆಶಿಸಿದ್ದ ಜನರಿಗೆ ಅವಳ ಟೆನಿಸ್ ಜೀವನ ಮುಗಿದೇಹೋಯ್ತು ಎನ್ನಿಸಿರಬೇಕು. ಇದ್ಯಾವುದನ್ನೂ ತಲೆಗೆ ಹಚ್ಚಿಕೊಳ್ಳದೆ ಕ್ರಿಕೆಟ್ಟಿನಲ್ಲಿ ತಲೆ ಹುದುಗಿಸಿದ್ದ ಹುಡುಗಿಯನ್ನು ಟೆನಿಸ್ ರಾಕೆಟ್ ಮತ್ತೆ ಕರೆಯಿತು. ಟೆನಿಸ್ ಪಂದ್ಯಗಳ ಕೋರ್ಟಿಗೆ ಕಾಲಿಟ್ಟವಳು ಹಿಂದುರಿಗಿ ನೋಡಲಿಲ್ಲ. ಅದ್ಯಾವ ಮಾಯೆ ಅವಳನ್ನು ಪ್ರೇರೇಪಿಸಿತೊ ಆ ರಹಸ್ಯ ಬಯಲಾಗಿಲ್ಲ.

ಬಾಲ್ಯದ ಪ್ರತಿಭೆಯಾಗಿ ಅಬೊರಿಜಿನಲ್ ಹುಡುಗಿ ಆಶ್ ಟೆನಿಸ್ ಪ್ರಪಂಚದಲ್ಲಿ ಮಿಂಚಿದಾಗ ಹೊಸ ಕನಸು ಹುಟ್ಟಿತ್ತು. ಈ ಬಾಲಕಿ ಮತ್ತೊಬ್ಬ ಇವೊನ್ ಗೂಲಗೊಂಗ್ ಆಗಬಲ್ಲಳೇ ಎಂಬ  ನಿರೀಕ್ಷೆಗಳು ಬೆಳೆಯಲಾರಂಭಿಸಿದ್ದವು.

ಒಮ್ಮೆ ಊಹಿಸಿಕೊಳ್ಳೋಣ. ಅಂತಾರಾಷ್ಟ್ರೀಯ ಪಂದ್ಯ ನಡೆಯುವ ಟೆನಿಸ್ ಕೋರ್ಟಿನಲ್ಲಿ ನಾಲ್ಕೂ ಕಡೆ ಪ್ರೇಕ್ಷಕರು ಕೂತಿರುತ್ತಾರೆ. ಕೋರ್ಟಿನ ಎರಡು ಬದಿಗಳಲ್ಲಿ ಪತ್ರಿಕಾವರದಿಗಾರರ ಫೋಟೋಗ್ರಾಫರ್, ವಿಡಿಯೋಗ್ರಾಫರ್ ಗಳ ತಂಡವಿರುತ್ತದೆ. ಆಟಗಾರರ ಮೇಲೆ ಅಡಿಗಳಷ್ಟು ಉದ್ದದ ಕ್ಯಾಮೆರಾಗಳು ಸಂಪೂರ್ಣವಾಗಿ ಕೇಂದ್ರಿತವಾಗಿರುತ್ತವೆ. ಅವುಗಳು ಅಲ್ಲಿ ಇಲ್ಲವೇ ಇಲ್ಲ ಎಂಬಂತೆ ನಟಿಸುತ್ತಾ, ಕ್ಯಾಮೆರಾಗಳನ್ನು ಮತ್ತು ಪತ್ರಕರ್ತರನ್ನು ಸಂಪೂರ್ಣವಾಗಿ ಮರೆತು ಆಟ ನಡೆಯಬೇಕು. ಇದನ್ನು ಸಾಧಿಸುವುದು ಸುಲಭವೇನಲ್ಲ.

ಅದರಲ್ಲೂ ಆಶ್ ಮತ್ತು ಡ್ಯಾನಿಎಲ್ ನಡುವೆ ನಡೆದ ಪಂದ್ಯವು ಇತಿಹಾಸದಲ್ಲಿ ಮೈಲಿಗಲ್ಲಾಗಿ ಉಳಿಯುವಂಥದ್ದು. ಆಶ್ ಗೆದ್ದರೆ… ಆಸ್ಟ್ರೇಲಿಯನ್ ಇಂಡಿಜಿನಸ್ ಅಸ್ಮಿತೆಗೆ ಹೊಸ ಆತ್ಮವಿಶ್ವಾಸ. ಸೋತರೆ ನೂರಾರು ಪುಟಾಣಿ ಅಬೊರಿಜಿನಲ್ ಹುಡುಗಿಯರು ಅವರ ಟೆನಿಸ್ ರಾಕೆಟ್ ಕೆಳಗಿಟ್ಟು ನಡೆಯಬಹುದು. ಇದರ ಸಂಪೂರ್ಣ ಅರಿವು ಇದ್ದ ಆಶ್ ತನ್ನ ಕನಸಿನ ಜೊತೆ ನೂರಾರು, ಸಾವಿರಾರು ಜನರ ಕನಸನ್ನು ನನಸಾಗಿಸುವ ಕ್ಷಣಕ್ಕಾಗಿ ಕಾದಿದ್ದಳೇನೊ. ಪಂದ್ಯದಲ್ಲಿ ತನ್ನ ಸರ್ವ್ ಕಳೆದುಕೊಂಡು ಎದುರಾಳಿಗೆ ಗೆಲ್ಲುವ ಅವಕಾಶವನ್ನು ಕೊಟ್ಟಾಗ ಪ್ರೇಕ್ಷಕರ ಮೌನ ಅವಳ ಮನಸ್ಸಿಗೆ ತಾಕಿತ್ತೇನೋ. ಅಲ್ಲಿಂದ ಮುಂದೆ ಪುಟಿದೆದ್ದು ಆಟವನ್ನು ತನ್ನದಾಗಿಸಿಕೊಂಡಾಗ ಟೆನಿಸ್ ಗೆದ್ದಿತೋ, ಆಶ್ ಗೆದ್ದಳೋ, ಅವಳ ಅಬೊರಿಜಿನಲ್ ಆಸ್ಟ್ರೇಲಿಯಾ ಗೆದ್ದಿತೋ ಹೇಗೆ ಹೇಳುವುದು?

ಪಂದ್ಯ ಮುಗಿದ ಮೇಲೆ ಸಾಮಾಜಿಕ ತಾಣಗಳಲ್ಲಿ ಹರಿದಾಡಿದ ಒಂದು ಟ್ವಿಟರ್ ಕ್ರಿಸ್ ಎವೆರ್ಟ್ ಅವರಿಂದ ಬಂದಿತ್ತು – “ಐದೂವರೆ ಅಡಿ ಉದ್ದವಿದ್ದರೂ ಒಬ್ಬ ಟೆನಿಸ್ ಆಟಗಾರ್ತಿ ಒಳ್ಳೆಯ ಲಾಂಗ್ ಸರ್ವ್ ಮಾಡಬಲ್ಲಳು ಎನ್ನುವುದಕ್ಕೆ ನಾನು ಮತ್ತು ಆಶ್ ಸಾಕ್ಷಿ.” ತನ್ನ ದೇಹದುದ್ದವನ್ನು ಕುರಿತು ಒಮ್ಮೆ ಮಾತ್ರ ಆಶ್ ಮಾತನಾಡಿದ್ದಾಳೆ. ಹೌದು ತಾನು ಬೇರೆ ಆಸ್ಟ್ರೇಲಿಯನ್ ಆಟಗಾರ್ತಿಯರಂತೆ ಉದ್ದವಿಲ್ಲ, ಆದರೆ ತನ್ನದೇ ಕಿರು ಹೆಜ್ಜೆಗಳನ್ನು ಹಾಕಿಕೊಂಡು ತನ್ನ ಪಯಣವನ್ನು ಮುಂದುವರೆಸುತ್ತಿರುವುದು ತೃಪ್ತಿಯಾಗಿದೆ.


ಆಸ್ಟ್ರೇಲಿಯನ್ ಓಪನ್ ಪಂದ್ಯವನ್ನು ಗೆದ್ದಾಗ ಆಶ್ ಹೇಳಿದ್ದು ಇಷ್ಟೆಲ್ಲಾ ಜಯವಿಜಯದಲ್ಲಿ ತನ್ನೊಡನೆ ಇರುವ ಅನೇಕರು ಭಾಗೀದಾರರು. ತನ್ನ ಪಯಣದ ಕಿರು ಮೈಲಿಗಲ್ಲುಗಳಿಗೆ ತಾನು ಅಭಾರಿ. ಟೆನಿಸ್ ಆಟವೆಂಬ ಸಮುದ್ರದಲ್ಲಿ ತಾನೊಂದು ಕಿರು ಹನಿ ಮಾತ್ರ. ಕೇವಲ ಇಪ್ಪತೈದು ವರ್ಷ ವಯಸ್ಸಿನ ಯುವತಿಯಿಂದ ಬಂದ ಈ ಮಾತಿಗೆ ಭೂಮಿತೂಕವಿದೆ.