ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. ಪಕ್ಕದಲ್ಲೇ ಅವಳ ಗಂಡನೂ, ಪಶುವೈದ್ಯರೂ ಆದ ಶೀಷೆ ಶೇಷಪ್ಪನವರು ತಮ್ಮ ಮುಖವನ್ನು ಅಷ್ಟು ಅಗಲ ಮಾಡಿಕೊಂಡು ನಿಂತಿದ್ದರು.
ಅಬ್ದುಲ್ ರಶೀದ್ ಬರೆದ ನೀಳ್ಗತೆ ‘ರಕ್ತಚಂದನ ‘ ಈ ಭಾನುವಾರದ ನಿಮ್ಮ ಆರಾಮದ ಓದಿಗಾಗಿ

 

ಕೊಡಗಿನ ಹಿರಿಯ ಸಾಹಿತಿಗಳೂ, ಸಮರ ಸೇನಾನಿಯೂ, ಕಾಫಿ ಬೆಳೆಗಾರರೂ ಹಾಗೂ ಮಹಾ ರಸಿಕರೂ ಆಗಿದ್ದ ದಿವಂಗತ ಚಾರುದತ್ತರ ಘನತೆಯನ್ನು ಉಳಿಸಲು ಬೇಕಾಗಿ ಕಥೆಗಾರ ಮಾಡಬೇಕಾಗಿ ಬಂದಿರುವ ಒಂದು ಕಿರುಪ್ರಯತ್ನವೇ ನಿಮ್ಮ ಮುಂದಿರುವ ಈ ಉದ್ದವಾದ ಕಥೆ. ಈ ಕಥೆಯನ್ನು ನಾನೇದರೂ ಬರೆದು ಮುಗಿಸದಿದ್ದರೆ ಕೊಡಗಿನ ಉದಯೋನ್ಮುಖ ಲೇಖಕಿಯೂ, ಅತೀವ ಸುಂದರಿಯೂ, ಮಹಾ ಜಾಣೆಯೂ ಮತ್ತು ಇತ್ತೀಚೆಗೆ ಮೆಲ್ಲಗೆ ಮಹಾ ಸ್ತ್ರೀವಾದಿಯೂ ಆಗುತ್ತಿರುವ ವಿಲಾಸಿನಿಯು ಬರೆದ ಚಾರುದತ್ತರ ಜೀವನ ಚರಿತ್ರೆಯೇ ಅಂತಿಮವಾಗಿಬಿಡುತ್ತದೆ. ಹಾಗೆ ಆದರೆ ಅದು ವಿಲಾಸಿನಿ ಎಂಬ ಸ್ತ್ರೀಯ ವಿಜಯ ಮತ್ತು ಇಬ್ಬರು ಪುರುಷ ಮಣಿಗಳ ಸೋಲು. ಒಂದು ಪುರುಷಮಣಿಯಾದ ಚಾರುದತ್ತರು ತಮ್ಮ ಎಂಬತ್ತೆರಡು ವಸಂತಗಳನ್ನು ಪೊಗದಸ್ತಾಗಿ ಮುಗಿಸಿ ಕಳೆದ ವರ್ಷದ ಇಂತಹದೇ ಆಷಾಢಮಾಸದಲ್ಲಿ ಮೇಲಕ್ಕೆ ಹೋಗಿದ್ದಾರೆ. ಉಳಿದಿರುವ ಇನ್ನೊಂದು ಪುರುಷಮಣಿ ಈ ಕಥೆಯ ನಿರೂಪಕನಾದ ನಾನು. ಇತ್ತೀಚೆಗೆ ಸ್ವಲ್ಪ ಖಿನ್ನತೆಯಿಂದ ಬಳಲುತ್ತಿರುವವನು.

‘ನಿನಗೆ ಯಾವ ಖಿನ್ನತೆಯೂ ಇಲ್ಲ. ಯಾವ ಕಟ್ರೆಯೂ ಇಲ್ಲ. ನೀನು ವಿಲಾಸಿನಿಯನ್ನು ಹಾಗೆ ಬಿಡಕೂಡದು’ ಎಂದು ನನ್ನ ಕನಸಿನಲ್ಲಿ ಪ್ರತಕ್ಷ್ಯರಾಗುವ ಚಾರುದತ್ತರ ಆಜ್ಞೆ.

‘ವಿಲಾಸಿನಿಯ ಚದುರಂಗದ ನಡೆಗಳನ್ನು ಅವಳದೇ ಪಗಡೆಗಳನ್ನು ಬಳಸಿ ನೀನು ಸೋಲಿಸಬೇಕು’ ಇದು ಅವರು ಕನಸಿನಲ್ಲಿ ನನಗೆ ಹೇಳಿಕೊಡುವ ತಂತ್ರ.

‘ಆ ಮಾಂಕಾಳಿಯಂತಹ ಅವಳಿಗೆ ಹೊಗೆ ಹಾಕಲು ನೀನೇ ಸರಿ’ ಅವರು ಖಿನ್ನವಾಗಿರುವ ನನ್ನ ಆತ್ಮವನ್ನು ಬಲೂನಿನಂತೆ ಉಬ್ಬಿಸಲು ನೋಡುತ್ತಾರೆ.
ಮಾಂಕಾಳಿ ಎಂದರೆ ಕೊಡಗಿನ ಒಬ್ಬಳು ಉಗ್ರ ದೇವತೆ.

ನನಗೆ ಅವರು ಮಾತುಗಳು ಒಳಗೊಳಗೇ ನಗು ತರಿಸುತ್ತದೆ

ಅವರಾಡುವ ಮಾತುಗಳು ಆಜ್ಞೆಯಂತಿದ್ದರೂ ಕನಸಿನಲ್ಲಿ ಅವರು ಅದನ್ನು ಹೇಳುವ ರೀತಿ ಮರುಕ ತರಿಸುತ್ತದೆ.

ಆ ಕನಸು ಮುಗಿದು ಇನ್ನೇನು ನಿದ್ದೆ ಬರಬೇಕು

ಅಷ್ಟು ಹೊತ್ತಿಗೆ ವಿಲಾಸಿನಿ ಕನಸಿನಲ್ಲಿ ಪ್ರತ್ಯಕ್ಷವಾಗುತ್ತಾಳೆ

‘ಎಲ್ಲಿಯವರೆಗೆ ಬಂತು ಮಾನ್ಯ ಕಥೆಗಾರರ ಚಿತಾವಣೆಗಳು’ ಎಂದು ಮೂದಲಿಸುತ್ತಾಳೆ

‘ಆ ಮುದುಕ ಮೇಲಕ್ಕೆ ಹೋದರೂ ನೀನು ಅವರ ಅಂಡು ನೆಕ್ಕುವುದನ್ನು ಬಿಟ್ಟಿಲ್ಲವಲ್ಲಾ’ ಅವಳು ಇನ್ನೂ ಮೂದಲಿಸುತ್ತಾಳೆ.

‘ಇಬ್ಬರೂ ಒಬ್ಬರಿಗೊಬ್ಬರು ಸರೀ ಇದೀರಾ ಪುರುಷ ಹಂದಿಗಳು’ ಅವಳು ಬಯ್ಯುತ್ತಾ ಹೋಗುವುದು ಕೇಳಿಸುತ್ತದೆ.

ನನಗೆ ಎಚ್ಚರಾಗಿ ನಗು ಬರುತ್ತದೆ.

ಬಹಳ ದೊಡ್ಡ ಸುಂದರಿ, ಮಹಾ ದೊಡ್ಡ ಜಾಣೆ ಮತ್ತು ನಾಜೂಕಿನ ಕಳ್ಳಿ. ಅಂತಹ ಪರಮ ಪ್ರಚಂಡ ಚಾರುದತ್ತರು ಬರೆದಿಟ್ಟಿದ್ದ ರಕ್ತಚಂದನ ಎಂಬ ಜೀವಿತ ಚರಿತ್ರೆಯ ಹಸ್ತಪ್ರತಿ ಅಪಹರಿಸಿ ಈಗ ತನ್ನದೇ ಎಂಬಂತೆ ಹೊರತರಲು ಹೊರಟಿದ್ದಾಳೆ. ಪಾತಕಿ. ಆ ಪಾತಕದಲ್ಲಿ ನನಗೂ ಒಂದು ಪಾಲಿದ್ದರೂ ಅದರ ಯಾವ ಲಾಭವನ್ನೂ ನನಗೆ ಕೊಡುವ ಯೋಚನೆಯಲ್ಲೂ ಇಲ್ಲ ಅವಳು. ಎಲ್ಲ ಖ್ಯಾತಿಯನ್ನೂ ತಾನೇ ಗೋರಿಕೊಳ್ಳಲು ಹೊರಟಿದ್ದಾಳೆ.

ಅವಳು ಕನಸಲ್ಲಿ ಬಂದಿರುವುದು ಗೊತ್ತಾಗಿಯೋ ಏನೋ, ಚಾರುದತ್ತರು ಮತ್ತೆ ಪ್ರವೇಶಿಸುತ್ತಾರೆ. ಅವರ ಮುಖ ಮಂಕಾಗಿರುತ್ತದೆ

‘ದಮ್ಮಯ್ಯ ಮಾರಾಯ ಅವಳು ಬರೆದ ಪುಸ್ತಕದಿಂದ ನನ್ನ ಮರ್ಯಾದೆ ಉಳಿಸು, ನಿನ್ನ ಕಾಲು ಬೇಕಾದರೂ ಹಿಡಿಯುತ್ತೇನೆ’

‘ಗುರುಗಳೇ ನಿಮ್ಮ ಮರ್ಯಾದೆ ಉಳಿಸುವುದು ನನ್ನ ರಾಜಧರ್ಮ’ ಎಂದು ನಿದ್ದೆಯಿಂದ ಎದ್ದು ಒಂದು ಖಾಲಿ ಟೀ ಮಾಡಿ ಕುಡಿದು ಬರೆಯಲು ಕೂರುತ್ತೇನೆ. ಎಷ್ಟು ಜೋರಾಗಿ ಹೂಂಕರಿಸಿದರೂ ಎಷ್ಟು ಮೆತ್ತಗೆ ರಮಿಸಿದರೂ ಕಥೆ ಮುಂದೆ ಹೋಗುತ್ತಿಲ್ಲ.

ತೀರಿಹೋದ ಮೇಲೆ ದೈನೇಶಿಯಾಗಿರುವ ಚಾರುದತ್ತರ ಮುಖ ನನ್ನನ್ನೂ ಮಂಕುಮಾಡುತ್ತಿದೆ.

ಬಹುಶಃ ಸಾಯುವ ಕೆಲವು ತಿಂಗಳುಗಳ ಮೊದಲು ಇರಬೇಕು. ಚಾರುದತ್ತರಿಗೆ ತಾನು ಇನ್ನು ಕೆಲವೇ ಕಾಲದಲ್ಲಿ ಸಾಯಬಹುದು ಅನಿಸಿತ್ತು ಕಾಣುತ್ತದೆ. ಅದಕ್ಕೇ ಇರಬೇಕು, ತಮ್ಮ ಕಾಫಿ ತೋಟದ ಏಲಕ್ಕಿ ಗೂಡಿನ ಒಂದು ಮೂಲೆಯಲ್ಲಿ ಶೇಖರಿಸಿದ್ದ ರಕ್ತಚಂದನ ಮರದ ಪುರಾತನ ಗೆಲ್ಲುಗಳನ್ನು ಆಳುಗಳಿಂದ ಬಂಗಲೆಯ ಎದುರಿನ ಬತ್ತದ ಬಯಲಿಗೆ ಸಾಗಿಸಿದ್ದರು. ಅಲ್ಲಿ ಉದ್ದಕ್ಕೆ ಸ್ವರ್ಗಕ್ಕೆ ತಾಗುವ ಹಾಗೆ ಬೆಳೆದು ನಿಂತಿದ್ದ ಹೆಬ್ಬಲಸಿನ ಮರದಡಿಯಲ್ಲಿ ಸೌದೆಯಂತೆ ಪೇರಿಸಲು ಹೇಳಿ, ಮಳೆ ತಾಗದ ಹಾಗೆ ಅದರ ಮೇಲೆ ಟಾರ್ಪಾಲಿನಿಂದ ಮುಚ್ಚಿಸಿದ್ದರು. ಆ ಹೆಬ್ಬಲಸಿನ ಅಡಿಯಲ್ಲಿ ಈಗಾಗಲೇ ಎರಡು ಸಮಾಧಿಗಳಿವೆ. ಒಂದು ಚಾರುದತ್ತರ ಅಪ್ಪಯ್ಯ ಗಣಪಯ್ಯ ಜೋಯಿಸರದು. ಇನ್ನೊಂದು ಗಣಪಯ್ಯ ಜೋಯಿಸರ ತಂದೆಯದು, ಬ್ರಿಟಿಷರ ಕಾಲದ್ದು. ಆ ಎರಡು ಐತಿಹಾಸಿಕ ಸಮಾಧಿಗಳ ಬದಿಯಲ್ಲಿ ತಾವೂ ಅಜರಾಮರರಾಗಬೇಕು ಅನ್ನುವುದು ಅವರ ಕೊನೆಗಾಲದ ಆಸೆ.

‘ಈ ಹಾಳಾದ ಆಳುಮಕ್ಕಳಿಗೇನಾದರೂ ಅದು ರಕ್ತಚಂದನ ಅಂತ ಗೊತ್ತಾದರೆ ಪುಸ್ಕ. ಒಂದು ಕಡ್ಡಿಯ ಪುಡಿಯೂ ಅಲ್ಲಿ ಉಳಿಯಲಿಕ್ಕಿಲ್ಲ. ಅವರಿಗೆ ಗೊತ್ತಾಗದ ಹಾಗೆ ನೋಡಿಕೋ’ ಅಂತ ಸೊಸೆ ಸೌಭಾಗ್ಯಳಿಗೆ ಹೇಳಿದ್ದರು.

ಸೊಸೆಗೆ ಹಾಗೆ ಹೇಳಿದ್ದನ್ನು ಆಮೇಲೆ ನನಗೂ ಫೋನಲ್ಲಿ ಹೇಳಿದ್ದರು.

ಸೊಸೆಯ ಸೌಭಾಗ್ಯಳ ಮೇಲೆ ಅವರಿಗೆ ಒಂದು ತರಹದ ಭಯ, ಇನ್ನೊಂದು ತರಹದ ಭಕ್ತಿ. ಆದರೆ ಎಲ್ಲಕ್ಕಿಂತ ದೊಡ್ಡದಾಗಿ ದೊಡ್ಡ ಅಸಹನೆ. ತಾನು ಸತ್ತು ಹೋದ ಮೇಲೆ ಅವಳೇ ದೊಡ್ಡ ಮಹಾರಾಣಿಯ ಹಾಗೆ ಅಷ್ಟೂ ಆಸ್ತಿಯ ಮೇಲೆ ಸವಾರಿ ಮಾಡುತ್ತಾಳಲ್ಲಾ ಅಂತ ಉರಿ. ಆ ಉರಿಯ ಶಮನಕ್ಕಾಗಿ ಅವರು ವಿಲಾಸಿನಿಯನ್ನು ಬಳಸಿಕೊಂಡಿದ್ದರು. ವಿಲಾಸಿನಿಯನ್ನು ಅಂತರಂಗದ ಅಂತಃಪುರಕ್ಕೆ ಬಿಟ್ಟುಕೊಂಡು ಸೊಸೆಯ ಪೊಟ್ಟು ಗಾಂಭೀರ್ಯವನ್ನು ಠುಸ್ಸು ಮಾಡಬಹುದು ಎಂಬುದು ಅವರ ಅಂದಾಜು. ಆದರೆ ಆ ಸೊಸೆಯೋ ಏನೂ ಆಗಿಯೇ ಇಲ್ಲವೇನೋ ಎನ್ನುವ ಹಾಗೆ ದೊಡ್ಡ ಗಾಂಭೀರ್ಯದ ಮುಖ ಮಾಡಿಕೊಂಡು ಮನೆಯ ತುಂಬ ನಡೆಯುತ್ತಿದ್ದಳು.

‘ನನ್ನ ಮಗ ಊರು ಬಿಟ್ಟು ದೇಶಾಂತರ ಹೋಗಿರುವುದು ನನ್ನ ಮೇಲೆ ಜಿಗುಪ್ಸೆ ಮಾಡಿಕೊಂಡು ಅಲ್ಲ ಮಾರಾಯ, ಇವಳ ಅಬೇದ್ಯ ಗೊಂಡಾರಣ್ಯದೊಳಗೆ ಹೇಗೆ ಹೊಕ್ಕುವುದು ಎಂದು ಗೊತ್ತಾಗದೆ’ ಎಂದು ಚಾರುದತ್ತರು ನಕ್ಕಿದ್ದರು.

ಅವರು ಹೇಳುವುದು ನಿಜವಿರಲೂಬಹುದು ಎಂದು ನನಗೂ ಅನಿಸಿತ್ತು. ಕೆಲಸಕ್ಕೆ ಬಾರದ ಯಾವುದರಲ್ಲೂ ಆಸಕ್ತಿ ತೋರಿಸದೆ ಏನು ಬೇಕೋ ಅಷ್ಟು ಮಾತ್ರ ಮಾಡಿ, ಎಷ್ಟು ಬೇಕೋ ಅಷ್ಟು ಮಾತ್ರ ಮಾತಾಡಿ, ಯಾವಾಗಲೂ ಒಂದು ದೃಢವಾದ ಮುಖಮಾಡಿಕೊಂಡು ಒಂದು ಗಂಡು ಎತ್ತಿನ ಹಾಗೆ ಭುಜ ಸೆಟೆಸಿ ನಡೆಯುವ ಸೊಸೆ ಸೌಭಾಗ್ಯ ನನಗೂ ಒಂದು ದೊಡ್ಡ ಸ್ತ್ರೀರತ್ನದಂತೆ ಕಾಣಿಸುತ್ತಿದ್ದಳು.

ಆಕೆಗಾದರೋ ನನ್ನ ಮೇಲೆ ಅಸಹನೆ.

ಇಂದ್ರಜಾಲದ ಮಾಯಾವಿಯ ಹಾಗೆ ವಿಲಾಸಿನಿಯನ್ನು ಬುಟ್ಟಿಯಿಂದ ಹೊರತೆಗೆದು ತನ್ನ ಮಾವ ಚಾರುದತ್ತರನ್ನು ಮರಳು ಮಾಡಲು ಬಿಟ್ಟಿರುವವನು ಇವನು ಎನ್ನುವುದು ಆಕೆಯ ಅನುಮಾನ.

ಆ ಅನುಮಾನ ಸುಳ್ಳಲ್ಲದಿದ್ದರೂ ಆಕೆ ಅಂದುಕೊಂಡಷ್ಟು ಗಂಭೀರವಾಗಿರಲಿಲ್ಲ.

‘ತುಂಬ ಸರಳವಾಗಿ ಹೇಳುವುದಾದರೆ ಇಷ್ಟೇ ಮಾರಾಯಾ. ಚಾರುದತ್ತನಾದ ನನಗೆ ಈ ಸಾಯುವ ವಯಸಿನಲ್ಲೂ ನನ್ನ ಯೌವನವನ್ನು ಹರಿತ ಮಾಡಿಕೊಳ್ಳುವ ಉಮೇದು. ಅದಕ್ಕೆ ನನಗೆ ವಿಲಾಸಿನಿ ಬೇಕು. ಅವಳಿಗೆ ಯೌವನ ಇರುವಾಗಲೇ ಲೋಕೋತ್ತರವಾಗಿ ಪ್ರಸಿದ್ಧಿ ಬೇಕು. ಅದಕ್ಕೆ ಅವಳಿಗೆ ನಾನು ಮತ್ತು ನೀನು ಬೇಕು. ಇನ್ನು ನಿನಗಾದರೋ ಇಡೀ ಲೋಕವೇ ಒಂದು ದೊಡ್ಡ ಇಣುಕು ಕಾಮದ ಹಾಗೆ. ಎಲ್ಲದರಲ್ಲೂ ಇಣುಕಬೇಕು. ಅದಕ್ಕಿಂತ ದೊಡ್ಡ ಕುಂಬಳಕಾಯಿ ಏನೂ ಇಲ್ಲ. ಬರೆಯುವುದಾದರೆ ಇದನ್ನು ಬರಿ. ಚಾರುದತ್ತರು ತಮ್ಮ ಬದುಕಿನಿಂದ ಯಾವ ಸಂದೇಶವನ್ನು ಬಿಟ್ಟು ಹೋದರು ಎಂದು ಕೇಳಿದರೆ ಒಂದು ದೊಡ್ಡ ಪರಿಮಳಯುಕ್ತ ಅಪಾನವಾಯುವನ್ನ ಬಿಟ್ಟು ಹೋದರು, ಸ್ವಲ್ಪ ಹೊತ್ತಲ್ಲೇ ಅದೂ ಅಂತರಿಕ್ಷದಲ್ಲಿ ಅವರನ್ನು ಹುಡುಕುತ್ತಾ ಹೋಯಿತು. ಹಾಗಾಗಿ ಈ ಲೋಕದಿಂದ ಆ ದಿವ್ಯ ಪರಿಮಳವೂ ಮಾಯವಾಯಿತು ಅಂತ ಎಂದು ಬರಿ’ ಅಂದಿದ್ದರು.

‘ಆ ವಿಲಾಸಿನಿ ಏನೇನೋ ಬರೆದು ಬೀದಿಯಲ್ಲೇ ನನ್ನ ಚಡ್ಡಿ ಬಿಚ್ಚುವುದು ಬೇಡ. ತಮಾಷೆಯಾಗಿ ಬರೆದರೂ ಪರವಾಗಿಲ್ಲ ನೀನೇ ಬರಿ’ ಅಂದಿದ್ದರು

ಇದು ಅವರು ಹೇಳಿದ್ದು ಕನಸಿನಲ್ಲಿ ಅಲ್ಲ. ಫೋನಿನಲ್ಲಿ. ಏಕೆಂದರೆ ಅವರು ಆಗ ಬದುಕಿದ್ದರು.

‘ನಿನಗೆ ಗೊತ್ತಲ್ಲ. ಸೊಸೆ ಸೌಭಾಗ್ಯ ಕಡಿಮೆ ಸಾಮಾನೇನೂ ಅಲ್ಲ. ನಾನು ಸತ್ತರೆ ಈ ಅಯೋಗ್ಯ ಮಾವನನ್ನು ಸುಡುವಾಗ ರಕ್ತ ಚಂದನ ಯಾಕೆ ಅಂತ ಅದನ್ನು ಬದಿಗೆ ಸರಿಸಿ ಸಾಧಾರಣ ಸಿಲ್ವರ್ ಮರದಲ್ಲಿ ನನ್ನನ್ನು ಸುಡಿಸಿದರೂ ಸುಡಿಸಿದಳೇ ಮಹಾರಾಣಿ’ ಎಂದು ಸೊಸೆಯನ್ನೂ ಬೈದಿದ್ದರು.

ಅವರಿಗೆ ಆಳುಗಳ ಮೇಲೂ ಅನುಮಾನ, ಸೊಸೆಯ ಮೇಲೂ ಅನುಮಾನ.

ಇವನಿಗೂ ವಿಲಾಸಿನಿಗೂ ಇನ್ನೂ ಏನಾದರೂ ಉಳಿದಿದೆಯಾ ಅಂತ ನನ್ನ ಮೇಲೂ ಅನುಮಾನ. ತನ್ನ ಸೊಸೆಯ ಮೇಲೂ ಇವನು ಕಣ್ಣಿಟ್ಟಿದ್ದಾನಾ ಎಂಬ ಸಣ್ಣ ಸಂದೇಹ!

ಅದನ್ನು ನೋಡಿ ನನಗೆ ನಗು.

ವಿಲಾಸಿನಿ ಚಾರುದತ್ತರ ‘ರಕ್ತಚಂದನ’ವನ್ನು ಅಪಹರಿಸಲು ಮಾಡಿದ ಪ್ರಯತ್ನದಲ್ಲಿ ನನ್ನ ಅಳಿಲು ಸೇವೆಯೇನೋ ಇತ್ತು. ಆದರೆ ನನಗೆ ಗೊತ್ತಿಲ್ಲದೇ ಅವಳು ಅದನ್ನು ಅಪಹರಿಸುವಳು ಎಂಬ ಅಂದಾಜೇನೂ ಇರಲಿಲ್ಲ.

ಯಾಕೆಂದರೆ ಅವರ ಅಟ್ಟದಲ್ಲಿ ‘ರಕ್ತಚಂದನ’ ದ ಹಸ್ತಪ್ರತಿ ಇರುವ ರಹಸ್ಯವನ್ನು ಅವಳಿಗೆ ಅರುಹಿದ್ದವನು ನಾನೇ. ಲೋಕದಲ್ಲಿ ಯಾರಿಗೂ ಗೊತ್ತಿಲ್ಲದ ಪರಮ ಸತ್ಯವೊಂದು ನನಗೆ ಮಾತ್ರ ಗೊತ್ತಿರುವುದು ಯಾಕೆ ಅವಳಿಗೂ ಗೊತ್ತಾಗಲಿ ಅಂತ ಹೇಳಿಬಿಟ್ಟಿದ್ದೆ.

ಗೊತ್ತು ಗುರಿಯಿಲ್ಲದೆ ಓಡುವ ಜೀವನ ಕಥಾ ಚಕ್ರಗಳಿಗೆ ಅಲ್ಲಲ್ಲಿ ಒಂದೊಂದು ಒತ್ತು, ಒಂದೊಂದು ವೇಗ, ಒಂದೊಂದು ಒತ್ತಾಸೆ, ಸಣ್ಣಪುಟ್ಟ ತಿರುವುಗಳನ್ನು ಕೊಟ್ಟರೇನೇ ಅವುಗಳು ಕಥೆಯಾಗುವುದಲ್ಲವೇ. ಹಾಗೆ ಕೊಡದಿದ್ದರೆ ಕಥೆಗಾರನಾಗಿ ನಾನು ಬದುಕಿದ್ದು ಏನು ಪ್ರಯೋಜನ? ಹಾಗಾಗಿ ನಾನೂ ಒಂದು ಕಥಾ ಪಾತ್ರವಾಗಿ ವಿಲಾಸಿನಿಯ ಸಾಹಿತ್ಯಿಕ ಮಹತ್ವಾಕಾಂಕ್ಷೆಗಳಿಗೆ ಒಂದು ಚೂರು ತಿದಿ ಒತ್ತಿದ್ದೆ. ಆದರೆ ಅವಳು ತನ್ನ ಕನಸನ್ನು ಸಾಕಾರಗೊಳಿಸಲು ಚಾರುದತ್ತರ ರಕ್ತಚಂದನದ ಹಸ್ತಪ್ರತಿಯನ್ನೇ ಅಪಹರಿಸಲು ಪ್ರಯತ್ನಿಸುತ್ತಾಳೆ ಎಂಬ ಸಣ್ಣ ಸುಳಿವೂ ಇರಲಿಲ್ಲ.

ವಿಲಾಸಿನಿಯು ಹೇಳಿದ ಪ್ರಕಾರ ಅವಳು ರಕ್ತಚಂದನವನ್ನು ಅಪಹರಿಸುವ ಉದ್ದೇಶದಿಂದ ನೆಲದ ಮೇಲೆ ಸ್ಟೂಲು ಇಟ್ಟು ಅದರ ಮೇಲೆ ಹತ್ತಿ ಅಟ್ಟದೊಳಕ್ಕೆ ಇಣುಕಿದ್ದು ಹೌದು.

ಆದರೆ ಸ್ಟೂಲಿನಿಂದ ಕೆಳಗೆ ಬಿದ್ದಿದ್ದಳು. ಬೆನ್ನಿನ ನರಕ್ಕೆ ಚೂರು ಏಟು ಮಾಡಿಕೊಂಡು ಕೆಲವು ಕಾಲ ಹಾಸಿಗೆ ಹಿಡಿದಿದ್ದಳು.

ಇದನ್ನು ವಿಲಾಸಿನಿಯೇ ನನಗೆ ಹೇಳಿದ್ದಳು.

ಅವಳ ಪ್ರಕಾರ ಅವಳ ಸರ್ವನಾಶಕ್ಕೆ ನಾನೇ ಕಾರಣವಂತೆ. ಸಾಧಾರಣ ಗೃಹಿಣಿಯಾಗಿದ್ದ ಅವಳನ್ನು ಉದ್ದೀಪನಗೊಳಿಸಿ, ಅವಳ ಮಸ್ತಕದೊಳಗೆ ನಾನಾ ಯೋಚನೆಗಳನ್ನು ಎಬ್ಬಿಸಿ, ಚಾರುದತ್ತರ ‘ರಕ್ತಚಂದನ’ವನ್ನು ಅಪಹರಿಸಿ ಅದನ್ನು ಸ್ತ್ರೀವಾದೀ ದೃಷ್ಟಿಕೋನದಿಂದ ಮರುಪೂರಣಗೊಳಿಸುವಂತೆ ಅವಳ ತಲೆ ಕೆಡಿಸಿದ್ದು ನಾನೇ ಅಂತೆ.

‘ಬೆನ್ನೂ ಮುರಿದು ಹೋಯಿತು ರಕ್ತಚಂದನ’ವೂ ಸಿಗಲಿಲ್ಲ. ದುಷ್ಟ ಎಲ್ಲ ನಿನ್ನಿಂದಾಗಿ ಆದ ಅನಾಹುತ.’ ಎಂದು ಶಾಪ ಹಾಕಿದ್ದಳು.

******

ಕಳೆದ ವರ್ಷ ಇದೇ ಆಷಾಢದ ಮಹಾಮಳೆ, ಪ್ರಳಯದಂತಹ ಭೂಕುಸಿತ, ಕರಾಳವಾದ ಕೊರೋನಾ ಈ ಎಲ್ಲದರ ನಡುವೆ ಕತ್ತಲ ಹೊತ್ತಲ್ಲಿ ಕಾಫಿ ತೋಟಕ್ಕೊಂದು ಸುತ್ತು ಹೋಗಿಬಂದು ಊಟಮಾಡಿ ಮಲಗಿದ್ದ ಚಾರುದತ್ತರು ಎದ್ದಿರಲಿಲ್ಲ. ಮಾವನ ಬೆಳಗಿನ ಯೋಗಾಭ್ಯಾಸ ಮುಗಿದಿರಬಹುದು ಎಂದುಕೊಂಡು ಎಂದಿನ ಹಾಗೆ ಖಡಕ್ ಚಾ ಹಿಡಕೊಂಡು ಹೋದ ಸೊಸೆ ಸೌಭಾಗ್ಯ ಅವರ ತಣ್ಣಗಿನ ದೇಹವನ್ನು ಮುಟ್ಟಿ ನೋಡಿ ನನ್ನನ್ನು ಬಿಟ್ಟು ಬೇರೆ ಎಲ್ಲರಿಗೂ ಫೋನ್ ಮಾಡಿದ್ದರು. ಅವರಿಗೆ ನನ್ನ ಮೇಲೆ ಎಷ್ಟು ಸಿಟ್ಟು ಅಂದರೆ ಚಾರುದತ್ತರು ತೀರಿಹೋದಾಗಲೂ ವಿಷಯ ತಿಳಿಸದಷ್ಟು.

ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. ಪಕ್ಕದಲ್ಲೇ ಅವಳ ಗಂಡನೂ, ಪಶುವೈದ್ಯರೂ ಆದ ಶೀಷೆ ಶೇಷಪ್ಪನವರು ಮಡದಿಯ ಮುಖವನ್ನೊಮ್ಮೆ ಮತ್ತು ಮೊಬೈಲಿನಲ್ಲಿ ಕೇಳಿಸುತ್ತಿದ್ದ ಅವಳ ಅಳುವನ್ನೊಮ್ಮೆ ನೋಡುತ್ತ ನಡುನಡುವೆ ಜಾರಿಹೋಗುತ್ತಿದ್ದ ದಿಂಬನ್ನು ಅವಳ ಬೆನ್ನ ಹಿಂದಕ್ಕೆ ಸೇರಿಸುತ್ತ ತಮ್ಮ ಮುಖವನ್ನು ಅಷ್ಟು ಅಗಲ ಮಾಡಿಕೊಂಡು ನಿಂತಿದ್ದರು.

ನನಗೆ ಚಾರುದತ್ತರು ತೀರಿಹೋದ ಆ ಸಂಕಟದ ನಡುವೆಯೂ ನಗು ಬರುತ್ತಿತ್ತು. ಫೇಸ್ ಬುಕ್ಕು ಲೈವು ನಡೆಯುತ್ತಿದ್ದ ವಿಲಾಸಿನಿಯ ಮಲಗುವ ಕೋಣೆಯ ತುಂಬ ಬಣ್ಣ ಬಣ್ಣದ ಹೂವುಗಳನ್ನು ಬಿಡಿಸಿಟ್ಟಿದ್ದ ಹಳೆಯ ವಿದೇಶೀ ಮದ್ಯದ ಶೀಷೆಗಳು. ನಾಯಿಯ ಆಕಾರದಲ್ಲಿ, ಕುದುರೆಯ ಆಕಾರದಲ್ಲಿ, ಆನೆಯ ಆಕಾರದಲ್ಲಿ ಜೋಡಿಸಿಟ್ಟಿದ್ದ ಶೀಷೆಗಳೆಲ್ಲವೂ ಚಾರುದತ್ತರ ಒಡೆತನದ ‘ಹಿಮದರ್ಶನ’ ಬಾರಿನಿಂದ ಶೇಷಪ್ಪನವರು ಸಂಗ್ರಹಿಸಿದವುಗಳು. ಅವುಗಳನ್ನು ಸಂಗ್ರಹಿಸಲೆಂದೇ ಅವರು ಮಡದಿ ವಿಲಾಸಿನಿಯನ್ನು ಕರೆದುಕೊಂಡು ಚಾರುದತ್ತರ ಆ ಬಾರಿನಲ್ಲಿ ನಡೆಯುತ್ತಿದ್ದ ನಮ್ಮ ಸಾಹಿತ್ಯ ಸಲ್ಲಾಪಕ್ಕೆ ಬರುತ್ತಿದ್ದರು. ಅದಕ್ಕಾಗಿಯೇ ಚಾರುದತ್ತರು ಅವರಿಗೆ ಶೀಷೆ ಶೇಷಪ್ಪ ಎಂಬ ಅಡ್ಡ ಹೆಸರಿಟ್ಟಿದ್ದರು. ಆದರೆ ಶೇಷಪ್ಪನವರು ಆ ಶೀಷೆಗಳನ್ನು ತಮ್ಮ ಮಲಗುವ ಕೋಣೆಯಲ್ಲಿ ಇಷ್ಟು ವರ್ಣರಂಜಿತವಾಗಿ ಜೋಡಿಸಿರುವುದು ಅತಿಶಯವಾಗಿ ಕಾಣಿಸುತ್ತಿತ್ತು. ಆ ಕತ್ತಲು ತುಂಬಿದ ಕೋಣೆಯ ಮಂದ ಬೆಳಕು, ಒಂದು ಮೂಲೆಯಲ್ಲಿ ಉರಿಯುತ್ತಿದ್ದ ತಿಳಿನೀಲ ಬಣ್ಣದ ಟ್ಯೂಬು ಲೈಟು, ವಾರೆಯಾಗಿ ಬೆಳಕಿನ ಕಡೆ ತೆರೆದಿದ್ದ ಸಣ್ಣಕಿಟಕಿ, ಕೋಣೆಯ ತುಂಬ ಅಸ್ತವ್ಯಸ್ತವಾಗಿ ಹರಡಿದ್ದ ಅವರಿಬ್ಬರ ಉಡುಪುಗಳು, ಮುಳುಮುಳು ಅಳುತ್ತಿದ್ದ ಲೇಖಕಿ ವಿಲಾಸಿನಿ.

ಚಾರುದತ್ತರು ಬದುಕಿದ್ದರೆ ಇದಕ್ಕೊಂದು ಅದ್ಭುತ ವ್ಯಾಖ್ಯಾನವನ್ನೂ ತಮಾಷೆಯ ಉಪಸಂಹಾರವನ್ನೂ ಕೊಡುತ್ತಿದ್ದರು.

‘ಬದುಕಲ್ಲಿ ಕೊನೆಗೂ ಸದ್ದುಮಾಡುವುದು ತಲೆಗೆ ಏರಿಸಿಕೊಂಡ ಕಿರೀಟದ ಬೇಗಡೆ ಮಾತ್ರ ಮಾರಾಯಾ’ ಅನ್ನುತ್ತ ನಗುತ್ತಿದ್ದರು.

‘ಚಾರುದತ್ತರ ಕೊನೆಯ ಕಾಲದಲ್ಲಿ ಅವರ ಆತ್ಮೀಯ ಒಡನಾಟದ ಸೌಭಾಗ್ಯ ದೊರೆತದ್ದು ನನ್ನ ಸುಕೃತಫಲ ಎಂದು ನೀವೆಲ್ಲರೂ ತಿಳಿದಿರಬಹುದು. ಹೌದು ನಿಜ. ಅದು ಒಂದು ರೀತಿಯಲ್ಲಿ ಸುಕೃತಫಲವೇ” ವಿಲಾಸಿನಿ ಫೇಸ್‌ಬುಕ್ಕಿನ ಮಾತಿನ ನಡುವೆ ಸಣ್ಣಗೊಂದು ವಿರಾಮ ಕೊಟ್ಟು ವಿಷಣ್ಣಳಾಗಿ ನಕ್ಕಿದ್ದಳು.

“ಅದಕ್ಕಿಂತಲೂ ಮಿಗಿಲಾದದ್ದನ್ನು ನಾನು ಹೇಳಲಿಕ್ಕಿದೆ. ಆದರೆ ಅದು ಈಗ ಬೇಡ. ಅವರ ಆತ್ಮಚರಿತ್ರೆಯನ್ನು ಅವರ ಬಾಯಿಯಿಂದಲೇ ಕೇಳಿ ಬರೆಯುತ್ತಾ ಬರೆಯುತ್ತಾ ನನಗೆ ಒಂದು ದೊಡ್ಡ ಚಕ್ರವ್ಯೂಹದೊಳಗೆ ಹೊಕ್ಕಹಾಗೆ ಆಗಿದೆ. ಅದೂ ಈ ಹೊತ್ತಲ್ಲಿ ಬೇಡ. ಅವರ ಆತ್ಮಕ್ಕೆ ಶಾಂತಿ ಇರಲಿ. ನನ್ನ ಪುಸ್ತಕವೇ ಎಲ್ಲವನ್ನೂ ಹೇಳಲಿದೆ” ಅವಳು ಅಳು ತಡೆಯಲಾರದೇ ಪುನಃ ಮೂಗು ಒರೆಸಿಕೊಳ್ಳುತ್ತಿದ್ದಳು.

‘ಎಂತ ಚಕ್ರವ್ಯೂಹ ಇವಳ ಮುಸುಂಡಿ’ ಚಾರುದತ್ತರು ಬದುಕಿದ್ದರೆ ಹೀಗೇ ಅನ್ನುತ್ತಿದ್ದರು.

‘ಚಾರುದತ್ತರ “ರಕ್ತಚಂದನ’ ಬರವಣಿಗೆಯ ಸಂದರ್ಭದಲ್ಲಿ ನಾನು ಏನೇನೋ ತ್ಯಾಗಗಳನ್ನು ಮಾಡಬೇಕಾಯಿತು. ವೈಯುಕ್ತಿಕವಾಗಿಯೂ,ಮಾನಸಿಕವಾಗಿಯೂ ಶಾರೀರಿಕವಾಗಿಯೂ ತುಂಬ ಬೇಯಬೇಕಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರು ಅರ್ಧ ಬರೆದಿಟ್ಟಿದ್ದ ‘ರಕ್ತಚಂದನ’ದ ಹಸ್ತಪ್ರತಿಯನ್ನು ಹುಡುಕುವ ಸಂದರ್ಭದಲ್ಲಿ ಬೆನ್ನಿಗೆ ಪೆಟ್ಟು ಬಿದ್ದು ಹಾಸಿಗೆ ಹಿಡಿಯಬೇಕಾಗಿಯೂ ಬಂತು. ಆಗ ನನ್ನನ್ನು ಮಗುವಂತೆ ನೋಡಿದವರು ನನ್ನ ಪತಿ ದೇವರು’ ಎಂದು ಗಂಡ ಶೇಷಪ್ಪನ ತೋಳುಗಳನ್ನು ಹಿಡಕೊಂಡು ಅತ್ತಳು.

‘ಅವಳು ಬಂದದ್ದು ರಕ್ತಚಂದನವನ್ನು ಕದಿಯಲು. ಅವನು ಬಂದದ್ದು ಖಾಲಿ ಶೀಷೆ ಒಯ್ಯಲು. ಈಗ ಇಬ್ಬರೂ ರಾಷ್ಟ್ರಮಟ್ಟದ ಕಲಾವಿದರು’.

ಚಾರುದತ್ತರು ಬದುಕಿದ್ದಿದ್ದರೆ ಗೊಣಗುತ್ತಿದ್ದರು.

‘ರಕ್ತಚಂದನದ ಹಸ್ತಪ್ರತಿ ಸಿಗದಿರುವುದು ದೊಡ್ಡ ನಷ್ಟವೇನೂ ಇಲ್ಲ. ಯಾಕೆಂದರೆ ಚಾರುದತ್ತರು ಅದಾಗಲೇ ಎಲ್ಲವನ್ನೂ ನನಗೆ ವಿವರಿಸಿ ದಾಖಲು ಮಾಡಿದ್ದರು. ರಕ್ತಚಂದನ ಎಂಬುದು ಚಾರುದತ್ತರಿಗೆ ನಾನು ಅರ್ಪಿಸುವ ಶ್ರದ್ಧಾಂಜಲಿ. ಅದು ಅವರ ಜೀವನ ಚರಿತ್ರೆಯಾದರೂ ಬರೆದವಳು ನಾನು ಎಂಬ ಹೆಮ್ಮೆ ನನ್ನದು’ ಎಂದು ಮತ್ತೆ ಅಳಲು ಶುರುಮಾಡಿದ್ದಳು.

ನನಗೂ ಇವಳು ಸುಳ್ಳು ಬುರುಕಿ ಏನೋ ನಾಟಕ ಮಾಡುತ್ತಿದ್ದಾಳೆ ಅನಿಸಿತು. ಅಟ್ಟದಲ್ಲಿ ರಕ್ತಚಂದನದ ಹಸ್ತಪ್ರತಿ ಸಿಗದಿದ್ದರೆ ಇವಳು ಸ್ವಂತ ಬರೆಯುವುದುಂಟಾ? ಇವಳು ಕದ್ದಿರುವುದು ನಿಜ. ಆದರೆ ಸುಳ್ಳು ಹೇಳುತ್ತಿದ್ದಾಳೆ. ಚಾರುದತ್ತರ ಸಾವೂ, ಇವಳ ಅಳುವೂ ಎಲ್ಲ ಕಲಸುಮೇಲೋಗರವಾಗಿ ಮಟಮಟ ಮಧ್ಯಾಹ್ನ ನಿದ್ದೆ ಮಾಡಲು ನೋಡಿದ್ದೆ.

ಕನಸಿನಲ್ಲಿ ತೀರಿಹೋದ ಚಾರುದತ್ತರೇ ಬಂದಿದ್ದರು.

ಅವರ ಪ್ರಕಾರ ಸ್ಟೂಲಿನಿಂದ ಅವಳೇ ಬಿದ್ದಿದ್ದಲ್ಲ. ಇವರು ಬೀಳಿಸಿದ್ದು.

ನಿದ್ದೆ ಹೋಗಿದ್ದ ಚಾರುದತ್ತರಿಗೆ ವಿಲಾಸಿನಿ ಅಟ್ಟ ಹತ್ತಲು ಸ್ಟೂಲು ಎಳೆದ ಸದ್ದಿಗೆ ಎಚ್ಚರಾಗಿತ್ತು. ಕಣ್ಣು ಬಿಟ್ಟು ನೋಡಿದರೆ ಅವಳು ಸ್ಟೂಲು ಹತ್ತಿ ಅಟ್ಟದೊಳಕ್ಕೆ ತಲೆ ಹಾಕಿದ್ದಳು. ಅವರು ಮಲಗಿದ್ದಲ್ಲಿಂದಲೇ ಸ್ಟೂಲಿಗೆ ಮೆಲ್ಲಗೆ ಕಾಲಿನಿಂದ ಒದ್ದಿದ್ದರು ಅಷ್ಟೇ.

ವಿಲಾಸಿನಿ ಜೋರಾಗಿ ಕಿರುಚಿಕೊಂಡು ಕೆಳಕ್ಕೆ ಬಿದ್ದಿದ್ದಳು.

‘ನನಗೆ ಅರಿವಿಲ್ಲದೆ ನನ್ನ ರಕ್ತಚಂದನವನ್ನು ಅಪಹರಿಸಲು ಹೋದರೆ ನಾನು ಬಿಡುತ್ತೇನಾ. ಅದಕ್ಕೇ ಅವಳ ಮೂಳೆ ಮುರಿದೆ’ ಅಂದಿದ್ದರು.

‘ಅದರಲ್ಲಿ ಬಾಂಬು ಇದೆ ಮಾರಾಯಾ. ಅದೇನಾದರೂ ತಿದ್ದುಪಡಿಯಿಲ್ಲದೆ ಹೊರಗೆ ಬಂದರೆ ನನ್ನ ಬದುಕು ಮೂರು ಕಾಸಾಗುತ್ತದೆ’ ಅಂದಿದ್ದರು.

ತಿದ್ದುಪಡಿಯಿಲ್ಲದ ಅದನ್ನು ಒಂದು ಸಲ ಓದಿಬಿಡಬೇಕು ಎನ್ನುವುದು ನನ್ನ ಬಯಕೆಯಾಗಿತ್ತು.

ಅದಕ್ಕೆ ವಿಲಾಸಿನಿಯ ಸಹಾಯ ಬೇಕಿತ್ತು, ಅವಳಲ್ಲದೆ ಇನ್ನು ಯಾರು ಚಾರುದತ್ತರನ್ನು ಮರಳು ಮಾಡಬಲ್ಲರು? ಹಾಗಾಗಿ ಆ ಗುಟ್ಟನ್ನು ಅವಳಿಗೆ ಅರುಹಿಬಿಟ್ಟಿದ್ದೆ.

ಅವಳು ನಮ್ಮ ಯೋಜನೆಯನ್ನು ಕಾರ್ಯಗತಗೊಳಿಸಲು ಹೋಗಿದ್ದಳು. ಹೋದವಳು ಬೆನ್ನು ಮುರಿಸಿಕೊಂಡು ಹಾಸಿಗೆ ಹಿಡಿದು ಮಲಗಿದ್ದಳು.

ಅದಾಗಿ ಮೂರು ತಿಂಗಳಿಗೆ ಚಾರುದತ್ತರೇ ತೀರಿ ಹೋಗಿದ್ದರು.

‘ಕದಿಯಲು ಇವಳನ್ನು ನಾನು ಬಿಟ್ಟಿಲ್ಲ. ಹಾಗಾದರೆ ಇವಳು ಪ್ರಕಟಿಸುತ್ತಿರುವ ರಕ್ತಚಂದನದ ಕತೆ ಎಂತದು?’

ಇದು ತೀರಿಹೋದ ಮೇಲೂ ಅವರ ಚಿದಂಬರ ಪ್ರಶ್ನೆ.

‘ಹಾಳಾದ ಇವಳು ಅದರಲ್ಲಿ ಏನೇನು ಬರೆದಿರಬಹುದು?’

‘ಮಾರಾಯಾ ಅವಳು ಹಿಡಿದಿರುವ ಇಕ್ಕುಳದಿಂದಲೇ ನೀನು ಅವಳನ್ನು ಹಿಡಿಯಬೇಕು’

ಚಾರುದತ್ತರದು ಬದುಕಿರುವಾಗಲೂ ಇಂತಹದೇ ಉಪಮೆಗಳು.

ಅವರೇ ಹೇಳಿದ್ದು ಈ ಕಥೆ.

ಒಬ್ಬ ದಾರಿಯಲ್ಲಿ ಕುಳಿತು ಜೋರಾಗಿ ಹೂಂಕರಿಸುತ್ತಿದ್ದನಂತೆ. ಹತ್ತಿರ ಹೋಗಿ ನೋಡಿದರೆ ಆತ ತನ್ನ ಗುಹ್ಯಸ್ಥಾನದ ಕೂದಲನ್ನು ಒಂದು ಬೆಟ್ಟದ ತುದಿಯ ಕೋಡಿಗೆ ಕಟ್ಟಿ ಜೋರಾಗಿ ಎಳೆಯುತ್ತಿದ್ದನಂತೆ.

‘ಇದೇನು ಮಾರಾಯಾ ನಿನಗೆ ಹುಚ್ಚಾ?’ ಅಂತ ಒಬ್ಬರು ಕೇಳಿದರಂತೆ.

ಅದಕ್ಕೆ ಆತ ನಿರ್ಲಿಪ್ತನಾಗಿ ಹೇಳಿದನಂತೆ.

‘ಬಂದರೆ ಒಂದು ದೊಡ್ಡ ಬೆಟ್ಟ. ಹೋದರೆ ಕೆಲಸಕ್ಕೆ ಬಾರದ ಕೂದಲು’

‘ಇದೇ ಅಲ್ಲವಾ ಜೀವನ’ ಅಂದಿದ್ದರು.

‘ನೀನು ಕಥೆ ಬರಿ. ಉಳಿದದ್ದು ಬೆಟ್ಟ ಎಳೆಯುವವನ ಕಥೆಯ ಹಾಗೆ. ಅವಳು ನನ್ನನ್ನು ಹಿಸುಕುವ ಮೊದಲು ನೀನೇ ಅವಳನ್ನು ಹಿಸುಕಿಬಿಡು ಅಷ್ಟು ಸಾಕು.’

*****

‘ಆದರೆ ನನ್ನ ಮನಸೆಲ್ಲ ಚಾರುದತ್ತರ ಅಟ್ಟದ ಸಂದೂಕದೊಳಗಿರುವ ರಕ್ತಚಂದನದ ಕಡೆಗೇ ಇರುತ್ತಿತ್ತು’

ವಿಲಾಸಿನಿಯೂ ಸಂಭ್ರಮದಿಂದ ನನ್ನ ಜೊತೆ ವಿವರಿಸುತ್ತಿದ್ದಳು. ಆಕೆಗೆ ಚಾರುದತ್ತರ ತುಂಟಾಟಗಳನ್ನೂ ತನ್ನ ಜಾಣತನವನ್ನೂ ನನ್ನ ಜೊತೆ ಹಂಚಿಕೊಳ್ಳುವ ಸುಖ.

‘ನಿನ್ನ ಜೊತೆ ಎಲ್ಲವನ್ನೂ ಹಂಚಿಕೊಳ್ಳುತ್ತಿರುವುದರಿಂದ ನಿನ್ನನ್ನು ನಾನು ಎಷ್ಟು ಹಚ್ಚಿಕೊಂಡಿದ್ದೇನೆ ಮತ್ತು ನಿನಗೆ ಎಷ್ಟು ಪ್ರಾಮಾಣಿಕಳಾಗಿದ್ದೇನೆ ಎಂಬುದನ್ನು ನೀನು ಅರ್ಥ ಮಾಡಿಕೊಂಡು ಖುಷಿಪಡಬೇಕು’ ಎಂದು ಪದೇ ಪದೇ ಆಕೆ ಹೇಳುತ್ತಿದ್ದಳು. ಹಾಗಾಗಿಯೇ ನಾನು ಅವಳನ್ನು ನಂಬುತ್ತಿರಲಿಲ್ಲ.

‘ಹಚ್ಚಿಕೊಳ್ಳುವುದು ಮತ್ತು ಪ್ರಾಮಾಣಿಕವಾಗಿರುವುದಕ್ಕಿಂತ ಹೆಚ್ಚು ಸುಖ ಈ ಎಲ್ಲದರಲ್ಲಿರುವ ಒಂದೊಂದು ತಮಾಷೆಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿದೆ’ ಎಂದು ನಾನು ಆಕೆಯ ಅಪ್ಪಟ ಪ್ರಾಮಾಣಿಕತೆಯನ್ನು ದೂರದಿಂದಲೇ ತಳ್ಳಿ ಹಾಕುತ್ತಿದ್ದೆ.

‘ನೀನು ಯಾಕೆ ಜೀವನದಲ್ಲಿ ಯಾವುದನ್ನೂ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ ಗಂಡಾಡೇ’ ಎಂದು ವಿಲಾಸಿನಿ ಕೇಳಿದ್ದಳು.

ಅವಳು ನನ್ನನ್ನು ಕರೆಯುವುದು ‘ಗಂಡಾಡು’ ಎಂದು.

ಅವಳ ಗಂಡ ಭಾಗಮಂಡಲದಲ್ಲಿ ಪಶುವೈದ್ಯರಾಗಿದ್ದಾಗ ಅವರ ವಸತಿ ಗೃಹದಲ್ಲಿ ಒಂದು ಗಂಡಾಡು ಇತ್ತಂತೆ. ಸಾಹೇಬರ ಹಾಗೆ ಉದ್ದಕ್ಕೆ ಗಡ್ಡ ಬಿಟ್ಟುಕೊಂಡಿದ್ದ ಚೂಪು ಕೊಂಬುಗಳ ಕೊಬ್ಬಿದ ಗಂಡಾಡು. ಯಾವುದೋ ಸರಕಾರೀ ಯೋಜನೆಯ ಅಂಗವಾಗಿ ಸ್ಥಳೀಯ ಆಡುಗಳಿಗೆ ತಳಿ ಕಸಿ ಮಾಡಲು ತಂದಿದ್ದ ಉತ್ತರ ದೇಶದ ಗಂಡಾಡು. ಅದು ಏನು ಹಣೆಯ ಬರಹವೋ ಏನೋ ಆ ಗಂಡಾಡಿನಿಂದಾಗಿ ಒಂದು ಹೆಣ್ಣಾಡೂ ಗರ್ಭ ಧರಿಸಲಿಲ್ಲವಂತೆ. ಏನಾದರೂ ಸಾಂಕೇತಿಕ ತಕರಾರು ಇರಬಹುದು ಎಂದು ಅದನ್ನು ತಂದಲ್ಲಿಗೇ ವಾಪಾಸು ಕೊಂಡು ಹೋದರಂತೆ.

‘ನಿನ್ನ ಗುಣವೂ, ರೂಪವೂ, ಪೆಡಸು ಪರಿಮಳವೂ ಅದರ ಹಾಗೇ ಇದೆ’ ಅಂದಿದ್ದಳು. ಪತ್ರ ಬರೆಯುವಾಗಲೂ, ಯಾರೂ ಇಲ್ಲದಾಗಲೂ ಅವಳು ನನ್ನನ್ನು ಗಂಡಾಡು ಅಂತಲೇ ಕರೆಯುತ್ತಿದ್ದಳು.

ಅವಳು ಹಾಗೆ ಕರೆದಿದ್ದರಿಂದ ನಾನು ಒಂದು ‘ಗಂಡಾಡು’ ಎಂದೇ  ಅಂದುಕೊಂಡಿದ್ದೆ.

ಆಮೇಲೆ ನೋಡಿದರೆ ಅವಳು ಚಾರುದತ್ತರಿಗೂ ಒಂದು ಪ್ರೇಮ ಪತ್ರ ಬರೆದಿದ್ದಳು. ಅಲ್ಲಿ ಅವರನ್ನು ಆಕೆ ‘ಪುರುಷ ಸಿಂಹ’ ಎಂದೇ ಕರೆದಿದ್ದಳು.

`ನನ್ನ ಪುರುಷ ಸಿಂಹವೇ, ನಿನ್ನ ಕರುಳೊಳಗೆ ಒಂದು ಮಿಕವಾಗಿ ಕರಗಿ ಹೋಗುವ ಆಸೆ. ನಿನ್ನ ಬಲಿ ಪಶುವಾಗಿ ನಿನ್ನೊಳಗೆ ಲೀನವಾಗುವ ಬಯಕೆ. ನಿನಗೆ ವಯಸ್ಸಾಗಿದೆ ಎಂದವರು ಯಾರು? ನೀನು ನನ್ನ ಕೊರಳಿಗೆ ತುಟಿಯಿಡುವಾಗ ತರುಣ ಸಿಂಹವೊಂದು ನನ್ನ ಪುಪ್ಪುಸದೊಳಕ್ಕೆ ನಖಗಳನ್ನು ಇಳಿಬಿಟ್ಟಂತಾಗುತ್ತದೆ ಕಣೋ’ ಎಂದೆಲ್ಲಾ ಬರೆದಿದ್ದಳು.

‘ಹೀಗೆ ಇವಳು ಬರೆದದ್ದು ಎಂತಕ್ಕೆ ಗೊತ್ತುಂಟಾ’ ಆ ಪತ್ರದ ಸಾಲುಗಳನ್ನು ಓದಿ ಹೇಳಿದ ಚಾರುದತ್ತರು ಕನಸಲ್ಲಿ ಗಹಗಹಿಸಿ ನಕ್ಕಿದ್ದರು.

‘ಅವಳಿಗೆ ರಕ್ತಚಂದನ ಪಡೆಯುವ ಬಯಕೆ. ಸುಮ್ಮನೆ ಕೇಳಿದರೆ ಸಿಗುವುದಿಲ್ಲ ಅಂತ ಗೊತ್ತು. ಅದಕ್ಕೆ ಇದೆಲ್ಲ ಆಟ ಅವಳದು. ನಾನು ಎಂತಹ ಮುದುಕ ಅಂತ ಅವಳಿಗೆ ಎಲ್ಲಿ ಗೊತ್ತು. ನಾನು ಕೊಡಲಿಲ್ಲ. ಅದಕ್ಕೆ ಅಪಹರಿಸಲು ಸ್ಟೂಲು ಹತ್ತಿದಳು. ನಾನು ಬಿಡುತ್ತೇನಾ. ಬೀಳಿಸಿದೆ’ ಅವರು ಹೇಳಿದ್ದರು.

ನಾನು ಅವರಿಗೆ ಹೇಗೆ ಹೇಳುವುದು. ಒಂದು ಕಾಲದಲ್ಲಿ ಅವಳು ನನಗೂ ಇದೇ ಪತ್ರವನ್ನು ಬರೆದಿದ್ದಳು ಎಂದು. ಕೆಲವು ಪದಗಳು ಬೇರೆ ಅಷ್ಟೆ. ಪುರುಷ ಸಿಂಹ' ಇರುವಲ್ಲಿ `ಗಂಡಾಡು’. ಮಿಕವಾಗಿ' ಎಂದು ಇರುವಲ್ಲಿ `ಹಸಿರಾಗಿ’ ಇತ್ಯಾದಿ.

ಆಗಿದ್ದು ಮುಗಿಯಿತು ಬಿಡಿ ಇಕಾ ನಾನು ಬರೆಯಲು ಕೂರುತ್ತೇನೆ ಎಂದು ನಾನು ನಿದ್ದೆಯಿಂದ ದಿಗ್ಗನೆ ಎದ್ದು ಕುಳಿತಿದ್ದೆ.

******

ಈ ವಿಲಾಸಿನಿ ಎಂಬ ಚೆಲುವೆ ನಮ್ಮ ಕೊಡಗಿನ ಪಶ್ಚಿಮ ಮೂಲೆಯ ಕುಗ್ರಾಮವೊಂದರ ಪಶುವೈದ್ಯರಾದ ಶೀಷೆ ಶೇಷಪ್ಪನವರ ಮಡದಿ. ಅವಳ ಮಡಿಲಿಗೊಂದು ಮಗು ಕೊಡಬೇಕೆಂದು ಶೇಷಪ್ಪನವರು ಕಳೆದ ಹಲವು ವರ್ಷಗಳಿಂದ ಪ್ರಯತ್ನಿಸುತ್ತಲೇ ಇರುವರು. ವಿಲಾಸಿನಿಯ ಒಂದು ಕಣ್ಣು ಕೊಂಚ ಓರೆಯಾಗಿದೆ ಎಂಬುದೊಂದು ಬಿಟ್ಟರೆ ಆಕೆ ಅಪ್ರತಿಮ ಸುಂದರಿ. ಅವಳ ಕಣ್ಣು ವಾರೆಯಾಗಿರುವುದು ಗೊತ್ತಾಗಬಾರದು ಎಂದು ಶೀಷೆ ಶೇಷಪ್ಪನವರು ಕಪ್ಪು ಕನ್ನಡಕಗಳನ್ನು ಖರೀದಿಸುತ್ತಲೇ ಇರುತ್ತಾರೆ. ವಿಲಾಸಿನಿಯಾದರೋ ತನ್ನ ಕಪ್ಪು ಕನ್ನಡಕವನ್ನು ಕಳೆದುಕೊಳ್ಳುತ್ತಲೇ ಇರುತ್ತಾಳೆ. ಈ ಶೀಷೆ ಶೇಷಪ್ಪನವರ ಎದುರಿಗೇ ನಾವು ಸಾಹಿತ್ಯಿಕ ಭಾಷೆಯಲ್ಲಿ ಲಲ್ಲೆಗರೆಯುತ್ತಿದ್ದುದು. ಶೀಷೆ ಶೇಷಪ್ಪನವರು ಇದೆಲ್ಲವನ್ನೂ ಸಾಹಿತ್ಯಕ ಚರ್ಚೆ ಎಂದು ತಿಳಿದುಕೊಂಡು ಹೆಮ್ಮೆ ಪಡುತ್ತಿದ್ದರು. ಅವರಿಗೆ ಸಾಹಿತ್ಯ, ಸಂಕೇತ, ಪ್ರತಿಮೆ ಇತ್ಯಾದಿಗಳಿಗಿಂತ ಕುಡಿದು ಖಾಲಿಯಾದ ಮದ್ಯದ ಶೀಷೆಗಳನ್ನು ಸಂಗ್ರಹಿಸುವುದು ಮತ್ತು ಅವುಗಳ ಮೇಲೆ ಬಣ್ಣಬಣ್ಣದ ಹೂವುಗಳ ಚಿತ್ರ ಬಿಡಿಸಿ ಸಾಲಾಗಿ ಜೋಡಿಸಿಡುವುದರಲ್ಲೇ ಹೆಚ್ಚಿನ ಆಸಕ್ತಿ. ಅವರು ಕುಡಿಯುವುದಿಲ್ಲ. ಆದರೆ ವಿಸ್ಕಿಯ ಗ್ಲಾಸಿಗೆ ಸೋಡಾ ಬೆರೆಸುವುದು, ಸೋಡಾಕ್ಕೆ ನಿಂಬೆ ಹೋಳು ಹಿಂಡುವುದು, ಹುರಿದ ಕೋಳಿಯ ತುಂಡು ಸರಿ ಬೆಂದಿದೆಯೇ ಎಂದು ನೋಡುವುದು ಇತ್ಯಾದಿಗಳಲ್ಲಿ ಹೆಚ್ಚು ಆಸಕ್ತಿ. ಅವರು ತಮ್ಮ ಮಡದಿ ವಿಲಾಸಿನಿಯನ್ನೂ ಕುಡಿಯಲು ಬಿಡುತ್ತಿರಲಿಲ್ಲ. ಹಾಗಾಗಿ ಲಿಂಬೆ ಶರಬತ್ತಿನ ಗ್ಲಾಸಿಗೆ ಒಂದು ಉದ್ದದ ಸ್ಟ್ರಾ ಮುಳುಗಿಸಿ ಅದನ್ನು ತನ್ನ ಚೂಪಾದ ತುಟಿಗೆ ತಾಗಿಸಿ ಚಾರುದತ್ತರನ್ನೂ, ನನ್ನನ್ನೂ ತನ್ನ ಕಣ್ಣಕೊನೆಯಿಂದಲೇ ಮರಳುಗೊಳಿಸುತ್ತಾ ಕೂರುವುದು ವಿಲಾಸಿನಿಯ ಹುಚ್ಚು ಅಭ್ಯಾಸ. ಇದನ್ನೇ ಅವಳ ಬದುಕಿನ ಉತ್ಕಟತೆ ಎಂದು ಚಾರುದತ್ತರು ಬಣ್ಣಿಸುತ್ತಿದ್ದರು. ಅವರು ಓದಿದ ಆಂಗ್ಲ ಸಾಹಿತ್ಯದಲ್ಲಿ ಹೀಗೆ ಉತ್ಕಟವಾಗಿದ್ದ ಹಲವು ಕಥಾಪಾತ್ರಗಳಿದ್ದವಂತೆ. ಬೇರೆ ಏನೂ ಜಾಸ್ತಿ ಉತ್ಕಟತೆಗಳು ಕಾಣಿಸದ ಈ ವಯಸಲ್ಲಿ ವಿಲಾಸಿನಿಯೇ ಆವರಿಗೆ ಉತ್ಕಟವಾಗಿ ಕಾಣಿಸುತ್ತಿದ್ದಳು.

ವಿಲಾಸಿನಿ ಆಂಗ್ಲ ಸಾಹಿತ್ಯವನ್ನು ಏನೂ ಓಡಿಕೊಂಡಿರಲಿಲ್ಲ. ಚಾರುದತ್ತರು ಹೇಳುವುದೇ ಅವಳಿಗೆ ಆಂಗ್ಲಸಾಹಿತ್ಯ. ಅವಳು ಎಷ್ಟು ಚುರುಕು ಅಂದರೆ ಅವರು ಹೇಳಿದ್ದನ್ನು ಒಂದು ಕ್ಷಣದಲ್ಲಿ ಹಿಡಿದುಬಿಡುತ್ತಿದ್ದಳು ಮತ್ತು ತಾನೇ ಅದಾಗಿಬಿಡುತ್ತಿದ್ದಳು.

‘ಈಗ ನೋಡು ಎಷ್ಟು ಚಂದ. ನೀನು ಆ ಉದ್ದದ ಹೀರುಕೊಳವೆಯನ್ನು ತುಟಿಯಲಿಟ್ಟುಕೊಂಡು ನೋಡುವುದನ್ನು ನೋಡಿದರೆ ಗೋಪಿಕೆ ಮತ್ತು ಗೋಪಾಲನ ಕೊಳಲಿನ ಪ್ರತಿಮೆ ನೆನಪಾಗುತ್ತದೆ. ಬಹಳ ಚಂದ ಬಹಳ ಚಂದ’ ಎಂದು ಚಾರುದತ್ತರು ಹೇಳಿದ್ದರು.

‘ಚಾರುದತ್ತರೇ ನೀವು ಹೇಳಿದ ಪ್ರತಿಮೆಯನ್ನು ನವ್ಯ ಕವಿಗಳೊಬ್ಬರು ಈಗಾಗಲೇ, ‘ಗೀಸಿ ಅಗಲಿಸಿದ ತುಟಿ’ ಎಂದು ಬರೆದಿರುವರಲ್ಲವೇ’ ಎಂದು ನಾನೂ ಒಂದು ಸಾಲು ಬಿಟ್ಟೆ.

ಅದು ವಿಲಾಸಿನಿಯ ಆತ್ಮವನ್ನು ತಾಕಬೇಕು ಅನ್ನುವುದು ನನ್ನಗುರಿ. ಅದು ಅಲ್ಲಿಗೆ ತಾಗಿದ ಹಾಗೆ ಅನಿಸಿತು. ಆಕೆ ತುಟಿಯಿಂದ ಆ ಕೊಳವೆಯನ್ನು ಇನ್ನಷ್ಟು ಬಿಗಿಯಾಗಿ ಕಚ್ಚಿಕೊಂಡು ಕಣ್ಮುಚ್ಚಿಕೊಂಡಳು.

ಅಷ್ಟರಲ್ಲಿ ಶೀಷೆ ಶೇಷಪ್ಪನವರು ಯಾರದೋ ಫೋನು ಬಂತು ಎಂದು ಎದ್ದು ಹೋದರು.

‘ಇಕಾ ಬೇಗ ಒಂದು ಗುಟುಕು ತಕೋ’ ಎಂದು ಚಾರುದತ್ತರು ಅವಳ ಮುಂದೆ ತಮ್ಮ ವಿಸ್ಕಿಯ ಗ್ಲಾಸು ಇಟ್ಟರು. ಆಕೆ ಬೆಕ್ಕಿನಂತೆ ಒಂದು ದೊಡ್ಡ ಗುಟುಕು ಹೀರಿ ಕಣ್ಮುಚ್ಚಿಕೊಂಡಳು. ವಿಸ್ಕಿ ಹೀರಿದ ಆಕೆಯ ಬೆಚ್ಚಗಿನ ಪರಿಮಳ, ಆಕೆಯ ಸಣ್ಣದೊಂದು ತೇಗು, ತುಟಿಯಲ್ಲೇ ಕಂಡ ಒಂದು ಚೂಪು ನಗು. ನನಗೆ ತಲೆ ತಿರುಗಲು ಇನ್ನೇನು ಬೇಕು?

ನಾವು ಕೂತಿದ್ದುದು ಮಡಿಕೇರಿಯ ಮೇಲಿರುವ ಬೆಟ್ಟದ ತುದಿಯಲ್ಲಿರುವ ಹಿಮದರ್ಶನ ಬಾರಿನ ಒಂದು ಮೂಲೆಯಲ್ಲಿ. ನಿಮ್ಮಲ್ಲಿ ಯಾರಾದರೂ ಮಡಿಕೇರಿಗೆ ಭೇಟಿ ಕೊಟ್ಟಿದ್ದರೆ ಈ ಹಿಮದರ್ಶನ ಬಾರನ್ನೂ ಅದು ಇರುವ ಬೆಟ್ಟದ ತುದಿಯ ಕುಳಿರು ಆಹ್ಲಾದವನ್ನೂ ಮತ್ತು ಆ ಬೆಟ್ಟದ ತುದಿಯಿಂದ ಕೆಳಗೆ ಕಾಣಿಸುವ ಕೊಡಗಿನ ಪ್ರಕೃತಿ ರಮಣೀಯತೆಯ ವಿಹಂಗಮ ನೋಟವನ್ನೂ ನೋಡಿರುತ್ತೀರಿ. ಎಷ್ಟು ಬಗ್ಗಿ ನೋಡಿದರೂ ತಳ ಕಾಣದ ಭಯಂಕರ ಪ್ರಪಾತದ ಮೇಲೆ ಅಲುಗಾಡದೆ ನಿಂತಿರುವ ಹಿಮದರ್ಶನ ಬಾರು. ಒಂದು ಕಾಲದಲ್ಲಿ ಕೊಡಗಿನ ರಾಜರು ವೈರಿಗಳಿಗೆ ಮರಣ ಶಿಕ್ಷೆ ನೀಡುತ್ತಿದ್ದ ಪ್ರಪಾತ ಇಲ್ಲಿಂದಲೇ ಕಾಣಿಸುತ್ತದೆ.

(ಇಲ್ಲಸ್ಟ್ರೇಷನ್ ಕಲೆ: ಚಂದ್ರನಾಥ ಆಚಾರ್ಯ)

ಆ ಹೆಬ್ಬಲಸಿನ ಅಡಿಯಲ್ಲಿ ಈಗಾಗಲೇ ಎರಡು ಸಮಾಧಿಗಳಿವೆ. ಒಂದು ಚಾರುದತ್ತರ ಅಪ್ಪಯ್ಯ ಗಣಪಯ್ಯ ಜೋಯಿಸರದು. ಇನ್ನೊಂದು ಗಣಪಯ್ಯ ಜೋಯಿಸರ ತಂದೆಯದು, ಬ್ರಿಟಿಷರ ಕಾಲದ್ದು.

ಈ ‘ಹಿಮದರ್ಶನ’ ಬಾರೂ ಅದು ಇರುವ ಬೆಟ್ಟದ ತುದಿಯೂ ಅದರ ಸುತ್ತಲಿನ ಒಂದಿಷ್ಟು ಜಾಗವೂ ಚಾರುದತ್ತರಿಗೆ ಸೇರಿದ ಆಸ್ತಿ. ಅವರ ಪೂರ್ವಿಕರಿಗೆ ಕೊಡಗಿನ ರಾಜರು ಉಂಬಳಿಯಾಗಿ ನೀಡಿರುವ ಭೂಮಿ ಇದು. ಈ ಜಾಗದಲ್ಲಿ ಒಂದು ಪ್ರಕೃತಿ ಆಧ್ಯಾತ್ಮ ಕೇಂದ್ರವನ್ನು ಸ್ಥಾಪಿಸಬೇಕು ಎಂಬುದು ಚಾರುದತ್ತರ ಯೌವನದ ಕನಸಾಗಿತ್ತು. ಆದರೆ ಅವರ ತಂದೆ ಗಣಪಯ್ಯನವರಿಗೆ ಇಲ್ಲೊಂದು ಹೋಟೆಲ್ಲು ಬೇಕಾಗಿತ್ತು.

ಈ ಹಿಮದರ್ಶನ ಎಂಬುದು ಒಂದು ಕಾಲದಲ್ಲಿ ಕೊಡಗಿನ ಪ್ರಖ್ಯಾತವಾದ ಸಸ್ಯಾಹಾರೀ ಹೋಟೆಲ್ಲಾಗಿತ್ತು. ಸ್ವತಃ ಗಣಪಯ್ಯನವರೇ ಅದರ ಗಲ್ಲಾದಲ್ಲಿ ಕೂರುತ್ತಿದ್ದರು. ಗಣಪಯ್ಯನವರ ಕಾಲ ಮುಗಿದ ಮೇಲೆ ಚಾರುದತ್ತರು ಹಿಮದರ್ಶನದ ಒಂದು ಭಾಗವನ್ನು ಬಾರನ್ನಾಗಿ ಮಾಡಿದ್ದರು. ಇನ್ನೊಂದು ಭಾಗದಲ್ಲಿ ಸಸ್ಯಾಹಾರವೂ ಮುಂದುವರಿದಿತ್ತು.

‘ಅಪ್ಪಯ್ಯನಿಗೆ ಸರಳ ಜ್ಞಾನ ಇಲ್ಲ. ಈ ಹಸಿರು ಬೆಟ್ಟ, ಈ ಚಳಿಯ ಗಾಳಿ, ಈ ಮಾಯದಂತಹ ಮಳೆ. ಈ ಮನೋಹರ ಮಂಜು. ಇಲ್ಲಿ ಯಾರಾದರೂ ದನಗಳ ಹಾಗೆ ಸಸ್ಯಾಹಾರ ತಿನ್ನುತ್ತಾರಾ? ಇಲ್ಲಿ ಬೇಕಾಗಿರುವುದು ಒಂದು ಬಾರು ಎಂದು ಹಿಮದರ್ಶನವನ್ನು ಬಾರು ಮಾಡಿದ್ದರು. ಇಂಗ್ಲಿಷರ ಕಾಲದ ದಪ್ಪ ಇಟ್ಟಿಗೆಯ ಗೋಡೆ, ಮರದ ಹಾಸಿನ ನೆಲ, ದಪ್ಪ ಗಾಜಿನ ಕಿಟಕಿ ಬಾಗಿಲುಗಳು, ಮಾಡಿನಿಂದ ತೂಗುವ ಸಣ್ಣ ಸಣ್ಣ ಬೆಳಕಿನ ದೀಪಗಳು, ಅದರ ಕೆಳಗೆ ಬೀಟೆಮರದ ಕರ್ರಗೆ ಹೊಳೆಯುವ ಪೀಠೋಪಕರಣಗಳು. ಗೋಡೆಗೆ ಅಂಟಿಕೊಂಡ ಗಾಜಿನ ಕಪಾಟುಗಳಲ್ಲಿ ಜೋಡಣೆಗೊಂಡ ಮದ್ಯದ ಬಾಟಲುಗಳು ಮತ್ತು ಬೆಳ್ಳಗೆ ಹೊಳೆಯುವ ಲೋಟಗಳು. ‘ಇಲ್ಲಿ ಒಂದಿಷ್ಟು ಆಂಗ್ಲ ಸುಂದರಿಯರು ಬ್ಯಾಲೆ ನರ್ತಿಸುತ್ತಿದ್ದರೆ ಈ ಸೌಂದರ್ಯ ಪರಿಪೂರ್ಣವಾಗಿರುತ್ತಿತ್ತು’ ಎಂದು ಚಾರುದತ್ತರು ವಿಷಾದದಿಂದ ಗೊಣಗುತ್ತಿದ್ದರು.

‘ರಾತ್ರಿ ಮಲಗುವ ಮೊದಲು ಒಂದು ಸುಖವಾದ ಸಂಭೋಗ ಇಲ್ಲದಿದ್ದರೆ ಎಂತ ಜೀವನವಯ್ಯಾ. ಬೆಳಗ್ಗೆ ಎದ್ದು ಒಂದು ಖಡಕ್ ಚಾ ಕುಡಿಯದಿದ್ದರೆ ಎಂತ ಬೆಳಗು ಅದು. ಮಧ್ಯಾಹ್ನ ಊಟಕ್ಕೆ ಮುಗಿಸಿ ಸ್ವಲ್ಪ ಹೊತ್ತು ಶವದ ಹಾಗೆ ಮಲಗಿ ಸಂಜೆ ಎದ್ದು ತೋಟಕ್ಕೊಂದು ಸುತ್ತು ಹೋಗಿ ಬಂದು, ಹಜಾರದಲ್ಲಿ ಸಂಗೀತ ಕೇಳುತ್ತ ಕುಳಿತುಕೊಳ್ಳದಿದ್ದರೆ ಅದೆಂತ ಜನ್ಮವಯ್ಯಾ? ಬರೆಯುವುದು ಗಿರೆಯುವುದು ಅದೆಲ್ಲಾ ಅನಿಸಿದರೆ ಮಾತ್ರ. ಅಥವಾ ನಿದ್ದೆ ಬಾರದಿದ್ದರೆ. ನಾನು ಬರೆಯಲು ಶುರುಮಾಡಿದ್ದೇ ನನ್ನ ಹೆಂಡತಿಯ ಲೈಂಗಿಕ ನಿರಾಸಕ್ತಿಯ ಕಾರಣದಿಂದಾಗಿ’ ಚಾರುದತ್ತರು ತಮ್ಮ ಸಣ್ಣದರಲ್ಲೇ ತೀರಿ ಹೋದ ಹೆಂಡತಿಗಿದ್ದ ಕಾಯಿಲೆಗಳನ್ನೂ ಆಕೆಯ ನಿರಾಸಕ್ತಿಯನ್ನೂ ಒತ್ತಿ ಒತ್ತಿ ವರ್ಣಿಸುತ್ತಿದ್ದರು.

ಅವರ ಹೆಂಡತಿಯನ್ನು ನಾನೂ ನೋಡಿದ್ದೆ. ಉದ್ದಕ್ಕೆ ಮಕ್ಕಳಿಗೆ ಹೊಡೆಯುವ ಒಂದು ನಾಗರಬೆತ್ತದಂತೆ ಕಾಣಿಸುತ್ತಿದ್ದ ಅವರು ಯಾವುದರ ಬಗ್ಗೆಯೂ ತಲೆ ಕೆಡಿಸಿಕೊಂಡಿರಲಿಲ್ಲ. ತಾವಾಯಿತು ತಮ್ಮ ಶಾಲೆಯಾಯಿತು ಎಂದು ತಮ್ಮ ಉರೂಟು ತಲೆಯ ಮೇಲಿದ್ದ ಉದ್ದದ ಜಡೆಯನ್ನು ಅಲ್ಲಾಡಿಸುತ್ತಾ ಶಾಲೆಗೆ ಹೋಗಿ ಬರುತ್ತಿದ್ದರು, ಹೋಗಿ ಬಂದವರು ಕಾಡುದಾರಿಯಲ್ಲಿ ನಡೆದು ಹೋಗಿ ಬಂದ ಸುಸ್ತಿಗೆ ಮಲಗಿ ನಿದ್ದೆ ಮಾಡಿ ಬಿಡುತ್ತಿದ್ದರು. ಬೆಳಿಗ್ಗೆ ಎದ್ದು ಮತ್ತೆ ಶಾಲೆಗೆ.

ಆದರೆ ನಾನು ಅವರನ್ನು ನೋಡಿದಾಗ ಅವರು ಪಾರ್ಶ್ವವಾಯು ಬಡಿದು ಉದ್ದಕ್ಕೆ ಮಲಗಿಕೊಂಡಿದ್ದರು. ಅವರು ಮಲಗುತ್ತಿದ್ದುದು ಚಾರುದತ್ತರು ಬರೆಯುತ್ತಿದ್ದ ಕೋಣೆಗೆ ಕಾಣಿಸುವ ಹಾಗೆ ಇತ್ತು. ಅಲ್ಲಿ ಕುಳಿತೇ ಅವರು ಅವರ ಬದುಕಿನ ಹಲವು ಸಂಗತಿಗಳನ್ನು ಹೇಳಿದ್ದರು.

ಈಗ ಮತ್ತೆ ಅದೇ ಲೈಂಗಿಕ ನಿರಾಸಕ್ತಿಯ ವಿಷಯವನ್ನು ಅವರು ವಿಲಾಸಿನಿಯ ಮುಂದೆ ಮತ್ತೆ ಎತ್ತಿದ್ದರು, ಬಹುಶಃ ಆಕೆಯನ್ನು ಕೊಂಚ ಉದ್ದೀಪನಗೊಳಿಸುವ ಉಮೇದಿನಿಂದ ಇರಬೇಕು. ಆಕೆ ಇನ್ನೇನು ಉದ್ದೀಪನಗೊಳ್ಳಬೇಕು ಅಷ್ಟರಲ್ಲಿ ಗಂಡ ಶೇಷಪ್ಪನವರು ಫೋನು ಮುಗಿಸಿ ಬರುತ್ತಿರುವುದನ್ನು ಗಾಜಿನ ಗೋಡೆಯಿಂದಲೇ ಕಂಡಳು. ಕಂಡವಳು ಟಕ್ಕೆಂದು ಇನ್ನೊಂದು ಗುಟುಕು ವಿಸ್ಕಿ ಹೀರಿ ಗಂಡ ಬಂದ ತಕ್ಷಣ ಇನ್ನೊಂದು ಸಾಹಿತ್ಯಿಕ ಪ್ರಶ್ನೆ ಒಗೆದಿದ್ದಳು.

‘ಚಾರುದತ್ತರೇ. ನಿಮ್ಮ ಅನುಭವಗಳಿಗೆ ಹೋಲಿಸಿದರೆ ನೀವು ಬರೆದದ್ದು ಕಮ್ಮಿ. ಯಾಕೆ ಹಾಗೆ?’

ಆ ಪ್ರಶ್ನೆಗೆ ಏನೂ ಉತ್ತರಿಸದ ಚಾರುದತ್ತರು ರಸಭಂಗವಾದವರಂತೆ ‘ಥೂ ಬೋಳಿಮಕ್ಕಳು’ ಎಂದು ಕುಳಿತಲ್ಲಿಂದ ಎದ್ದು ಜಾರುತ್ತಿದ್ದ ತಮ್ಮ ಪ್ಯಾಂಟನ್ನು ಮೇಲಕ್ಕೇರಿಸಿ ಮತ್ತೆ ಕುಳಿತುಕೊಂಡರು.

ಹಾಗೆ ಅವರು ಎದ್ದು ಕೂರುವುದು ಒಂದು ಸಂಕೇತ. ಅವರು ಹಾಗೆ ಎದ್ದು ಕೂತರೆ ಅವರ ವಿಸ್ಕಿಯ ಗ್ಲಾಸು ಖಾಲಿಯಾಗಿದೆ ಎಂದು ಅರ್ಥ. ಇದನ್ನು ಈಗಾಗಲೇ ಗಮನಿಸಿರುವ ಹಿಮದರ್ಶನದ ಮ್ಯಾನೇಜರು ವಿನ್ಸೆಂಟ್ ಇನ್ನೊಂದು ಗ್ಲಾಸಲ್ಲಿ ಸುರಿದುಕೊಂಡು ಬರಬೇಕು. ಇದು ಅವರು ಮಾಡಿರುವ ವ್ಯವಸ್ಥೆ.

ಬಾರದಿದ್ದರೆ ‘ಏ ಇವನೇ. ಥೂ ಇವನ ಹೆಸರೇ ಮರೆತು ಹೋಗಿದೆ. ಚಾಸರ್ ’ ಎಂದು ಜೋರಾಗಿ ಕೂಗುತ್ತಾರೆ. ಅದು ವಿನ್ಸೆಂಟರಿಗೆ ಇವರು ಇಟ್ಟಿರುವ ನೂರಾರು ಹೆಸರುಗಳಲ್ಲಿ ಒಂದು. ಯೇಟ್ಸ ಕೀಟ್ಸ ಜಾನ್ಸನ್ ಎಲಿಯಟ್ ಹೀಗೆ ಇನ್ನೂ ಹತ್ತಾರು ಹೆಸರುಗಳೂ ವಿನ್ಸೆಂಟರಿಗೆ ಇದೆ. ವಯಸ್ಸಾದ ವಿನ್ಸೆಂಟರು ಪ್ರಾಚೀನ ಆಂಗ್ಲ ಕವಿ ಚಾಸರನ ಹಾಗೆ ಬಂದು ಇವರ ಎದುರು ವಿನೀತನಾಗಿ ನಿಂತುಕೊಳ್ಳುತ್ತಾರೆ.

‘ಓ ಚಾಸರಾ. ನನಗೆ ಇನ್ನೊಂದು ಇದನ್ನೇ ಮರುಕಳಿಸು’ ಎಂದು ಇನ್ನೊಂದು ಪೆಗ್ ವಿಸ್ಕಿ ತರಲು ಹೇಳುತ್ತಾರೆ.

‘ಈ ಅಮ್ಮನಿಗೆ ಮತ್ತು ಗಂಡನಿಗೆ ಇನ್ನೊಂದು ತಾಜಾ ಹಣ್ಣಿನ ರಸ’.

ವಿಲಾಸಿನಿಯೂ ಗಂಡನೂ ಹೊರಡಲು ಅಪ್ಪಣೆ ಪಡೆದು ಹೊರಡುತ್ತಾರೆ. ಊರಲ್ಲಿ ಹಸುವೊಂದು ಗಬ್ಬಕ್ಕೆ ಬಂದಿದೆಯಂತೆ. ಕೃತಕ ವೀರ್ಯದಾರಣೆ ಮಾಡಬೇಕಂತೆ.

‘ಕೃತಕ ಎಂತಕ್ಕೆ? ಈ ಸಾಹೇಬರನ್ನು ಬಳಸಿಕೊಳ್ಳಬಹುದಲ್ಲಾ’ ಚಾರುದತ್ತರು ನನ್ನನ್ನೊಮ್ಮೆ ವಿಲಾಸಿನಿಯನ್ನೊಮ್ಮೆ ನೋಡಿ ಗಹಗಹಿಸಿ ಮತ್ತೆ ಎದ್ದು ನಿಲ್ಲುತ್ತಾರೆ.

ಇದನ್ನು ನೋಡಿದ ಹಿಮದರ್ಶನದ ಮ್ಯಾನೇಜರ್ ವಿನ್ಸೆಂಟರು ಆ ವಾರದಲ್ಲಿ ಖಾಲಿಯಾದ ಎರಡು ಮೂರು ಕಲಾತ್ಮಕ ಮದ್ಯದ ಶೀಷೆಗಳನ್ನು ಪುಟ್ಟ ಚೀಲದ ಸಮೇತ ಶೇಷಪ್ಪನವರಿಗೆ ಒಪ್ಪಿಸುತ್ತಾನೆ.

ಟೇಬಲ್ಲಿನ ಮೇಲಿರುವ ನಿಂಬೆಯ ಹೋಳಿಗೆ ಒಂದಿಷ್ಟು ಉಪ್ಪು ಉದುರಿಸಿ ಅದನ್ನು ನೆಕ್ಕಿ ಮುಖ ಹುಳಿಹುಳಿ ಮಾಡಿಕೊಂಡ ವಿಲಾಸಿನಿ ಕಣ್ಣಂಚಲ್ಲೇ ನಕ್ಕು ಗಂಡ ಶೇಷಪ್ಪನವರ ತೋಳೊಳಗೆ ಕೈಕೋಸಿ ಇಬ್ಬರೂ ಮಧ್ಯಾಹ್ನದ ಎಳೆಬಿಸಿಲಲ್ಲಿ ಮಾಯವಾಗುತ್ತಾರೆ.

‘ಇಕಾ ನೋಡು ಇವಳು ಕಪ್ಪು ಕನ್ನಡಕ ಮತ್ತೆ ಮರೆತಳು’ ಚಾರುದತ್ತರು ವಿನ್ಸೆಂಟರಿಗೆ ಅದನ್ನು ತೆಗೆದಿರಿಸಲು ಹೇಳುತ್ತಾರೆ.

‘ಬನ್ನಿ ಚಾರುದತ್ತರೇ ಒಂದು ಚೂರು ಕೈಲಾಸ ದರ್ಶನ ಮಾಡಿಕೊಂಡು ಬರೋಣಾ..’ ತೂರಾಡತೊಡಗಿರುವ ಅವರನ್ನು ಎಬ್ಬಿಸಿ ನಾನೂ ಒಂಚೂರು ವಾಲಾಡುತ್ತಾ ಇಬ್ಬರೂ ಹೋಟೆಲಿನ ಹಿಂಭಾಗದ ಬೆಟ್ಟ ಸಾಲಿನ ತುದಿಯಲ್ಲಿ ನಿಂತುಕೊಳ್ಳುತ್ತೇವೆ.

ಭಾನುವಾರದ ಆಲಸ್ಯಕರ ಮಧ್ಯಾಹ್ನ. ಕಣ್ಣಿಗೆ ರಾಚುವ ಹಸಿರು ಮತ್ತು ಹಿತವಾದ ಬಿಸಿಲು. ಎಲ್ಲೆಲ್ಲಿಂದಲೋ ಪ್ರವಾಸಿಗಳಾಗಿ ಬಂದ ಯುವಜೋಡಿಗಳು ಕೈಗೆ ಕೈಕೋಸಿಕೊಂಡು, ತಲೆ ತಗ್ಗಿಸಿಕೊಂಡು, ಇನ್ನೇನು ಶುರುಮಾಡಿಯೇ ಬಿಡುತ್ತಾರೆ ಎನ್ನುವ ಹಾಗೆ ಯರ್ರಾಬಿರ್ರಿ ಒಬ್ಬರ ಒಳಗೆ ಇನ್ನೊಬ್ಬರು ಹರಡಿಕೊಂಡು ಕುಳಿತಿದ್ದಾರೆ.

‘ಛೇ ಎಂಥ ಸಾವು ಮಾರಾಯ. ಈ ವಯಸಿನಲ್ಲೂ ಇಂದ್ರಿಯ ನಿಗ್ರಹ ಎಷ್ಟು ಕಷ್ಟ!’ ಎಂದು ವಿಷಣ್ಣರಾಗಿ ನಕ್ಕು ಸ್ವೆಟರು ಧರಿಸಿದ ತಮ್ಮ ಖಾದಿ ಕುರ್ತಾದ ಪ್ಯಾಂಟಿನ ಜೇಬಿನೊಳಕ್ಕೆ ಕೈಹಾಕಿ ನಿಟ್ಟುಸಿರು ಬಿಡುತ್ತಾರೆ.

‘ವಿಲಾಸಿನಿ ತುಂಬಾ ಜೋರಿದ್ದಾಳಲ್ಲವಾ’ ಅವರ ಬಾಯಿಂದ ಅವಳ ಹೆಸರೂ ಬರುತ್ತದೆ.

‘ಜೋರು ಮಾತ್ರ ಅಲ್ಲ ಚಂದವೂ ಇದ್ದಾಳೆ’ ನಾನು ಸೇರಿಸುತ್ತೇನೆ.

‘ಅವಳ ಸಂಗ ತುಂಬ ಚಂದವಿರಬಹುದಲ್ಲವಾ? ಆದರೆ ಏನು ಮಾಡುವುದು ಕಂಪೌಂಡರನ ಕೈಯಲ್ಲಿ ರತ್ನಪಕ್ಷಿ’ ಚಾರುದತ್ತರು ಕೊಡಗಿನ ಕೈಲಾಸದ ತುದಿಯಲ್ಲಿ ನಿಂತುಕೊಂಡು ನಿಟ್ಟುಸಿರು ಬಿಡುತ್ತಾರೆ.

ಅಷ್ಟರಲ್ಲಿ ಮಳೆಯ ಒಂದೆರೆಡು ಹನಿಗಳು ನೆತ್ತಿಯ ಮೇಲೆ ಬೀಳುತ್ತವೆ. ನೋಡು ನೋಡುತ್ತಿದ್ದಂತೆ ಘಟ್ಟದ ಕೆಳಗಿಂದ ಅರಬಿಕಡಲಿನ ಕಡೆಯಿಂದ ಕೊಡಗಿನ ಮಲೆಶಿಖರಗಳಿಗೆ ಡಿಕ್ಕಿ ಹೊಡೆಯುತ್ತಾ ಕಪ್ಪಗಿನ ಮೋಡಗಳು ಮೇಲೆ ಹತ್ತಿ ಬರುತ್ತಿರುವುದು ಅಲ್ಲಿಂದಲೇ ಕಾಣಿಸುತ್ತದೆ.

‘ಓ ಕಾಫಿಯ ಮಳೆ’ ಚಾರುದತ್ತವರ ಮುಖ ಅರಳುತ್ತದೆ.

‘ಏ ಸೌಭಾಗ್ಯಾ ಬೇಗ ಜೀಪು ತೆಗೆದುಕೊಂಡು ಹೊರಡು, ನಾನೂ ಬರುತ್ತೇನೆ’ ಚಾರುದತ್ತರು ಸೊಸೆ ಸೌಭಾಗ್ಯಳಿಗೆ ಫೋನಿನಲ್ಲೇ ಆದೇಶಗಳನ್ನು ನೀಡಲು ಶುರುಮಾಡುತ್ತಾರೆ.

‘ಆಳುಗಳಿಗೆ ನೀರಿನ ಮೋಟರ್ ಆಫ್ ಮಾಡಲು ಹೇಳು’.

‘ಸ್ಪ್ರಿಂಕ್ಲರಿನ ನೀರು ಬಂದು ಮಾಡಲು ಹೇಳು’.

‘ಒಣಗಿಸಲು ಹರಡಿದ ಕರಿಮೆಣಸು ಒಳಗೆ ಇಡಿಸು’.

‘ನೀನೂ ಬೇಗ ಹೊರಡು, ನಾನೂ ರೆಡಿ.’

ಚಾರುದತ್ತರು ಪ್ರಕೃತಿಯನ್ನೂ, ಕಾಮವನ್ನೂ, ಸೌಂದರ್ಯವನ್ನೂ ಎಲ್ಲವನ್ನೂ ಮರೆತು ಪಕ್ಕಾ ಕಾಫೀ ಬೆಳೆಗಾರರಂತೆ ಕಾಫಿಯ ಮಳೆಯ ಮಣ್ಣಿನ ಪರಿಮಳದಲ್ಲಿ ಕಳೆದುಹೋಗುತ್ತಾರೆ.

ಅದು ಚಾರುದತ್ತರನ್ನೂ, ವಿಲಾಸಿನಿಯನ್ನೂ ನಾನು ಕೊನೆಯ ಸಲ ನೋಡಿದ್ದ ದಿನ. ಕೊಡಗಿನಿಂದ ವರ್ಗಗೊಂಡು ದ್ವೀಪಕ್ಕೆ ಹೊರಟಿದ್ದ ನನಗೆ ಅವರಿಬ್ಬರು ನೀಡಿದ್ದ ಬೀಳ್ಕೊಡುಗೆಯ ದಿನ ಅದು. ಹಿಮ ದರ್ಶನದ ಗೇಟಿನವರೆಗೂ ನನ್ನ ತೋಳು ಹಿಡಿದು ನಡೆದ ಚಾರುದತ್ತರು ಸೊಸೆ ಓಡಿಸುತ್ತಿದ್ದ ಜೀಪಿನ ಮುಂದಿನ ಸೀಟಿನಲ್ಲಿ ಕುಳಿತರು. ಅಲ್ಲಿಂದಲೇ ನನಗೆ ಸಣ್ಣಗೆ ಕಣ್ಣುಹೊಡೆದು ‘ಸಾಹೇಬರೇ ಸಿಗುವಾ’ ಎಂದು ಟಾಟಾ ಹೇಳಿದ್ದರು.

*****

ಚಾರುದತ್ತರ ತಂದೆ ಗಣಪಯ್ಯ ಜೋಯಿಸರು ಆ ಕಾಲದಲ್ಲೇ ಅಂದರೆ ಕೊಡಗನ್ನು ಬ್ರಿಟಿಷರು ಆಳುತ್ತಿದ್ದ ಕಾಲದಲ್ಲೇ ಹುಲಿಮೀಸೆ ಬಿಟ್ಟವರು.

‘ಬ್ರಾಹ್ಮಣರಲ್ಲಿ ಹುಲಿಮೀಸೆ ಬಿಟ್ಟ ಮೊದಲ ಮಾಣಿ ನನ್ನ ಅಪ್ಪಯ್ಯ ಎಂದು ಚಾರುದತ್ತರು ಜಂಬಕೊಚ್ಚಿಕೊಳ್ಳುತ್ತಿದ್ದರು.

ಆದರೆ ಅಂತಹ ಹುಲಿ ಮೀಸೆ ಅಪ್ಪಯ್ಯ, ಸಾಯುವಾಗ ತನ್ನನ್ನು ಸುಡಲು ಅಂತ ಇಟ್ಟಿದ್ದ ರಕ್ತಚಂದನದ ಒಣಗಿದ ಗೆಲ್ಲುಗಳನ್ನು ಮಗ ಚಾರುದತ್ತರು ಆಳುಗಳಿಂದ ಸರಿಸಿ, ದೂರ ಇಡಿಸಿ ಮಾಮೂಲು ಮರದ ಸೌದೆಯಲ್ಲೇ ಅಪ್ಪಯ್ಯನನ್ನು ಅಗ್ನಿಗೆ ಅರ್ಪಿಸಿದ್ದರು.

‘ನನ್ನ ತಾಯಿಯನ್ನು ಹೊಡೆದು ಕೊಂದವನು ಇವನು. ಇವನನ್ನು ಸುಡಲು ರಕ್ತ ಚಂದನವೇಕೆ’ ಎಂಬುದು ಚಾರುದತ್ತರ ವಾದ.

ಅವರ ತಾಯಿ ರುಕ್ಮಿಣಿಯಮ್ಮ ಬಹಳ ಸುಂದರಿಯಾದ ಹೆಂಗಸಾಗಿತ್ತಂತೆ. ರುಕ್ಮಿಣಿಯಮ್ಮ ಮಲಯಾಳ ದೇಶದ ಕಡೆಯಿಂದ ಬಂದವರು. ಆಗಿನ ಕಾಲದಲ್ಲಿ ಮಲಯಾಳ ದೇಶದಲ್ಲಿ ಮದುವೆಯಾಗದ ನಂಬೂದರಿ ಕನ್ಯಾಸ್ತ್ರೀಯರನ್ನು ಕಣ್ಣಿಗೆ ಬಟ್ಟೆ ಕಟ್ಟಿ ಕಾಡಿಗೆ ಬಿಡುತ್ತಿದ್ದರಂತೆ. ಹಾಗೆ ಕೊಡಗಿನ ಕಾಡಿಗೆ ಬಿದ್ದ ಆ ಮಲಯಾಳಿ ಹೆಂಗಸು ಕೊಡಗಿನ ಕಾನನಗಳಲ್ಲಿ ಹುಲಿ ಕಾಡುಕೋಣ ಜಿಗಣೆಗಳ ನಡುವೆ ಹಲವು ಹಗಲು ರಾತ್ರಿಗಳನ್ನು ಕಳೆದು, ಭಾಗಮಂಡಲದ ಬಳಿಯ ಕೋಪಟ್ಟಿ ಮಲೆ ಇಳಿದು ಕೆಳಗೆ ಬಂದಾಗ ಬೇಟೆಗೆ ಹೋಗಿದ್ದ ಕೊಡಗಿನ ಜನ ಆ ಸ್ತ್ರೀ ಸೌಂದರ್ಯವನ್ನು ನೋಡಿದರಂತೆ.

ಬ್ರಾಹ್ಮಣ ಹೆಂಗಸಿಗೆ ಬ್ರಾಹ್ಮಣರೇ ಬೇಕು ಎಂದು ಆಕೆಯನ್ನು ಊರ ಅಂಬಲಕ್ಕೆ ತಂದು ಗಣಪಯ್ಯನಿಗೆ ಮದುವೆ ಮಾಡಿಸಿದರಂತೆ. ಆಗಲೇ ಹುಲಿಯನ್ನು ಕೊಂದು, ಹುಲಿಯ ಮೃತ ದೇಹದ ಜೊತೆ ಮದುವೆಯನ್ನೂ ಮಾಡಿಸಿಕೊಂಡಿದ್ದ ಗಣಪಯ್ಯನವರಿಗೆ ಇವಳು ಕಾಡಿಂದ ಸಿಕ್ಕಿದವಳು ಎಂಬ ತಾತ್ಸಾರ. ಅವಳ ಅನುಪಮ ಸೌಂದರ್ಯ ನೋಡಿ ಅನುಮಾನ. ಆಕೆಯ ವೇದಾಧ್ಯಯನ, ಸಂಸ್ಕೃತ ಜ್ಞಾನ ನೋಡಿ ಉರಿ.

‘ನಾನು ಬದುಕಿರುವಾಗ ನೀನು ಬೇರೆ ಯಾರಿಗೂ ಚಂದ ಕಾಣುವುದು ಬೇಡ’ ಎಂದು ಆಕೆಯ ತಲೆಯನ್ನು ಬೋಳಿಸಿ. ಕೋಣೆಯಲ್ಲಿ ಕೂಡಿ ಹಾಕಿ ಇಟ್ಟಿದ್ದರಂತೆ. ಚಾರುದತ್ತರನ್ನು ಹೆತ್ತು ಎರಡು ವರ್ಷದಲ್ಲೇ ತಾಯಿ ರುಕ್ಮಿಣಿಯಮ್ಮ ಕಾಣೆಯಾದರಂತೆ.

‘ಕಾಡಿಂದ ಬಂದವಳು ಕಾಡಿಗೆ ಹೋದಳು’ ಎಂದು ಗಣಪಯ್ಯನವರು ಎಂದಿನ ಹಾಗೆ ಇದ್ದರಂತೆ.

‘ಹಾಗೆ ಉಂಟಾದವನು ನಾನು. ಮಲಯಾಳ ದೇಶದ ರುಕ್ಮಿಣಿಯಮ್ಮ ಮತ್ತು ಸುಳ್ಯ ಸೀಮೆಯ ಗಣಪಯ್ಯನವರ ಸುಪುತ್ರ’ ಎಂದು ಚಾರುದತ್ತರು ಗಹಗಹಿಸಿ ನಕ್ಕಿದ್ದರು. ಚಾರುದತ್ತರ ನಿಜವಾದ ಹೆಸರು ವೆಂಕಟರಮಣ ಜೋಯಿಸ. ಅವರು ಅದನ್ನು ಚಾರುದತ್ತ ಎಂದು ಬದಲಾಯಿಸಿಕೊಂಡಿದ್ದರು.

ಕೊಡಗಿನ ಕೊನೆಯ ರಾಜ ತನ್ನ ಅಧಿಕಾರದ ಕೊನೆಯ ಕಾಲದಲ್ಲಿ ಬಹಳ ಹೆದರಿದ್ದ. ಆತನಿಗೆ ಒಂದು ಕಡೆ ಟೀಪುವಿನ ಕಾಟ. ಇನ್ನೊಂದು ಕಡೆ ಬ್ರಿಟಿಷರ ಉಪಟಳ.

‘ನಿನ್ನ ಕಷ್ಟಕ್ಕೆಲ್ಲ ಕಾರಣ ಮಡಿಕೇರಿ ಬೆಟ್ಟದ ತಪ್ಪಲಿನ ಕಾಡಲ್ಲಿರುವ ಶಿವ ಮಹಾದೇವ ದೇವಸ್ಥಾನ ನಿತ್ಯ ಪೂಜೆಯಿಲ್ಲದೆ ಶಿಥಿಲವಾಗಿರುವುದು’ ಎಂದು ಯಾರೋ ಪುರೋಹಿತರು ರಾಜನಿಗೆ ಕಣಿ ಹೇಳಿದ್ದರು. ಆ ರಾಜ ತನ್ನ ಆಪ್ತ ಭಟರ ಪಡೆಯನ್ನು ಕಡಮಕಲ್ಲಿನ ಕಾಡು ಮಾರ್ಗವಾಗಿ ಸುಬ್ರಹ್ಮಣ್ಯ ಸೀಮೆಗೆ ಕಳಿಸಿ ಅಲ್ಲಿಂದ ಬ್ರಾಹ್ಮಣ ದಂಪತಿಯೊಂದನ್ನು ಎತ್ತಿಕೊಂಡು ಬಾ ಎಂದು ಆಜ್ಞಾಪಿಸಿದನಂತೆ. ಅರ್ಚಕರನ್ನು ಹುಡುಕುತ್ತಾ ಘಟ್ಟ ಇಳಿದು ಹೋದ ಆ ಪಡೆಯ ಕಣ್ಣಿಗೆ ಬಿದ್ದದ್ದು ಅದಾಗ ತಾನೇ ಉತ್ತರದಿಂದ ವಲಸೆ ಬಂದು ಸುಳ್ಯ ಸೀಮೆಯ ಕಾಡುಗುಡ್ಡದ ಮೇಲೆ ಬದುಕಲು ಪಡಿಪಾಟಲು ಪಡುತ್ತಿದ್ದ ಚಾರುದತ್ತರ ಅಜ್ಜ ಮತ್ತು ಅಜ್ಜಿ. ಆ ಅಜ್ಜ ಬಹಳಷ್ಟು ವರ್ಷ ಶಿವನ ಪೂಜೆ ಮಾಡಿ ಕೊನೆಗೆ ತಾನೂ ಮತಿಭ್ರಮಣೆ ಬಂದು ಸತ್ತು ಹೋದನಂತೆ. ಅಜ್ಜಿ ಒಂದು ಮಗುವನ್ನು ಹೆತ್ತು ಗಡ್ಡೆ ಜ್ವರ ಬಂದು ಯಾವಾಗಲೋ ಮೊದಲೇ ಸತ್ತು ಹೋಗಿದ್ದರಂತೆ. ಆ ಅಜ್ಜನ ಸಮಾಧಿಯೂ ಅವರ ತೋಟದ ಬಂಗಲೆಯ ಎದುರಿನ ಭತ್ತದ ಗದ್ದೆಯ ಬದಿಯಲ್ಲಿರುವ ಹೆಬ್ಬಲಸಿನ ಮರದಡಿಯಲ್ಲಿ ಈಗಲೂ ಇದೆ.

‘ಎಂತಹ ತಮಾಷೆ ಅಲ್ಲವಾ’ ಎಂದು ಚಾರುದತ್ತರು ನಗುತ್ತಿದ್ದರು.

‘ನನ್ನ ಅಜ್ಜ ಅಪ್ಪಟ ವೈಷ್ಣವ. ಅಂದರೆ ಉಡುಪಿಯ ಕೃಷ್ಣನ ಭಕ್ತ. ಆದರೆ ಕೊಡಗಿನ ಕ್ರೂರ ರಾಜನಿಗೆ ಹೆದರಿ ಶಿವನನ್ನು ಪೂಜಿಸುತ್ತಾ ಜೀವನವನ್ನೆಲ್ಲ ಕಳೆದ. ಆದರೆ ಆ ದೇವಸ್ಥಾನ ಶಿವನದಾ. ಅದೂ ಅಲ್ಲ. ಮನುಷ್ಯ ರಕ್ತವನ್ನು ಕುಡಿದು ಬದುಕುತ್ತಿದ್ದ ರಾಕ್ಷಸನನ್ನು ಸಂಹರಿಸಿದ ದೇವಿಯೊಬ್ಬಳ ಅಂಬಲ ಅದು. ಕಾಡಿನಲ್ಲಿ ಬೇಟೆಯಾಡಲು ಬಂದ ಬೇಟೆಗಾರ ಅಯ್ಯಪ್ಪ ದೇವರು ಅವಳನ್ನು ಕಂಡು ಇಷ್ಟಪಟ್ಟು ತಾನೂ ಅಲ್ಲಿಯೇ ನೆಲೆಸಿದ. ಕೊಡಗಿನ ರಾಜನಿಗೆ ಅದು ಶಿವ ದೇಗುಲವಾಗಿ ಕಂಡಿತು.

ಅದು ಹೋಗಲಿ ಆ ರಾಜನಿಗೆ ಹಾಗೆ ಕಂಡರೆ ಪರವಾಗಿಲ್ಲ. ಅವನು ಕೊಡಗಿನ ಬಾಣಂತಿ ಹೆಂಗಸರ ಮೊಲೆಹಾಲು ತರಿಸಿ ಕುಡಿಸುತ್ತಿದ್ದ ಹುಚ್ಚುಪಾರ್ಟಿ. ಅವನು ಏನು ಬೇಕಾದರೂ ಮಾಡಲಿ. ಆದರೆ ನನ್ನ ಅಜ್ಜ ಜೀವಮಾನ ಪೂರ್ತಿ ತನ್ನ ಇಷ್ಟದೈವವನ್ನು ಪೂಜಿಸದೆ ಅನ್ಯದೇವರನ್ನು ಪೂಜಿಸಿ ಆ ಪಾಪ ಭಯದಲ್ಲಿ ಹುಚ್ಚನಾಗುವ ಹಾಗೆ ಮಾಡಿದ.

‘ಇನ್ನು ನನ್ನ ಅಪ್ಪ ಗಣಪಯ್ಯ ತುಂಬಾ ಜಾಣ. ಹುಲಿಯನ್ನು ಕೊಂದು ಕ್ಷತ್ರಿಯನಾದ. ಶಿವನ ದೇಗುಲವನ್ನು ನವೀಕರಿಸಿ ತಾನು ಅದರ ಮೊಕ್ತೇಸರನಾದ. ಪೂಜೆಗೆ ಅರ್ಚಕರನ್ನು ಸಂಬಳ ಕೊಟ್ಟು ತರಿಸಿಕೊಂಡ.

‘ಪಾಪವಾದರೂ ಪುಣ್ಯವಾದರೂ ಅದು ಪೂಜೆ ಮಾಡಿದವರಿಗೆ’ ಅಂತ ಅಪ್ಪಯ್ಯನ ವಾದ. ತಾನು ಮಾತ್ರ ದೇವಸ್ಥಾನಕ್ಕೆ ರಾಜ ಕೊಟ್ಟಿದ್ದ ಉಂಬಳಿಯ ಜಮ್ಮಾ ಭೂಮಿಯನ್ನು ಕಾಫಿ ತೋಟ ಮಾಡಿದ. ಕರಿಮೆಣಸು ಏಲಕ್ಕಿ ಬೆಳೆಸಿದ. ಹೆಂಡತಿಯನ್ನು ಕಾಣದ ಹಾಗೆ ಮಾಯ ಮಾಡಿದ ಅವನಿಗೆ ಯಾವ ಪಶ್ಚಾತಾಪವೂ ಇರಲಿಲ್ಲ. ಮಡಿಕೇರಿ ಪೇಟೆಯಲ್ಲಿ ಆಸ್ತಿ ಮಾಡಿದ. ರಾಜಾ ಸೀಟು ಗುಡ್ಡದ ಮೇಲೆ ಸಸ್ಯಾಹಾರಿ ಹೋಟೆಲು ಮಾಡಿದ.

“ಇನ್ನು ನಾನು ಆ ಅಪ್ಪನ ಮಗ. ನಾಮರ್ದ. ಅಪ್ಪನೊಡನೆ ಮೊದಲಿನಿಂದಲೂ ಕಾದಾಟವೇ ಅಮ್ಮನನ್ನು ಕಾಣೆಯಾಗಿಸಿದವನು ಅಂತ. ಅಪ್ಪನೂ ಬೇಡ, ದೇವರೂ ಬೇಡ, ತೋಟವೂ ಬೇಡ, ಹೋಟೆಲೂ ಬೇಡ, ಯಾವ ಕೊಂಡಾಟವೂ ಬೇಡ ಅಂತ ಕಾಲೇಜು ಕಲಿಯಲು ವಾರಣಾಸಿಗೆ ಹೋದೆ. ಸಾಹಿತ್ಯ ಓದಿದೆ. ಚಾರುದತ್ತ ಅಂತ ಹೆಸರು ಬದಲಿಸಿಕೊಂಡೆ ಅದಕ್ಕೆ ದೊಡ್ಡ ಕಾರಣವೇನಿಲ್ಲ. ಹೆಂಗಸಾಗಿದ್ದರೆ ವಸಂತಸೇನಾ ಅಂತ ಇಟ್ಟುಕೊಳ್ಳುತ್ತಿದ್ದೆ. ಗಂಡಸು ಅದಕ್ಕೆ ಚಾರುದತ್ತ. ಹೆಸರು ಬದಲಾದಾಗ ನಾನು ಬದಲಾಗಿದ್ದೆ. ಆದರೆ ಅಪ್ಪ ಹಾಗೇ ಇದ್ದ. ಅದೇ ದಿಮಾಕು, ಅದೇ ವಹಿವಾಟು.

‘ತೋಟದ ಸಹವಾಸ ನಿನಗೆ ಬೇಡ, ಹೋಟೆಲನ್ನು ನೋಡಿಕೋ. ಮದುವೆಯೂ ಮಾಡಿಕೋ’ ಅಂದ.

‘ನನಗೆ ಸಿಟ್ಟು ಬಂತು. ಹೋಟೆಲೂ ಬೇಡ ಸುಡುಗಾಡು ಸಾಹಿತ್ಯವೂ ಬೇಡ’ ಅಂತ ಮತ್ತೆ ಉತ್ತರಕ್ಕೆ ಹೋದೆ. ಸೈನಿಕರ ಶಾಲೆಯಲ್ಲಿ ಇಂಗ್ಲಿಷು ಕಲಿಸುವ ಕೆಲಸ.

‘ಬರೀ ಕಲಿಸುವುದು ಎಂತ ಮಣ್ಣಾಂಗಟ್ಟಿ. ಕೋವಿ ಹಿಡಿದು ಕಾದಾಡಬೇಕು. ನನ್ನ ಅಪ್ಪಯ್ಯ ಹುಲಿಯನ್ನೇ ಕೊಂದಿಲ್ಲವೇ’ ಎಂದು ಸೇನೆಗೆ ಸೇರಿಕೊಂಡೆ. ಉತ್ತರ ಪಶ್ಚಿಮ ಈಶಾನ್ಯ ಎಲ್ಲ ಕಡೆ ಓಡಾಡಿದೆ. ಬಂಗಾಲದಲ್ಲಿ ಪಾಕಿಸ್ತಾನಿಯರನ್ನು, ಈಶಾನ್ಯದಲ್ಲಿ ನಾಗಾಗಳನ್ನು, ಉತ್ತರದಲ್ಲಿ ಚೀನೀಯರನ್ನು ಒಂದಿಷ್ಟು ತಲೆ ಹಾರಿಸಿದೆ.

ಅದೂ ಸಾಕು ಅನಿಸಿತು. ವಾಪಾಸು ಬಂದೆ. ಅಪ್ಪಯ್ಯ ಸತ್ತ. ಅವನಿಗೆ ಬೆಂಕಿಕೊಟ್ಟೆ.

‘ಮಡಿಕೇರಿ ಕಾಲೇಜಿಗೆ ಪ್ರೊಫೆಸರನಾಗಿ ಸೇರಿಕೊಂಡೆ. ಹೋಟೆಲನ್ನೂ ನೋಡಿಕೊಂಡೆ. ತೋಟವನ್ನೂ ಬಿಡಲಿಲ್ಲ. ಮದುವೆಯೂ ಆದೆ. ಸೊಸೆಯೂ ಬಂದಳು.

“ಈಗ ನನ್ನ ಮಗನೇ ನನ್ನ ಪರಮ ವೈರಿ. ಅವನ ತಾಯಿ ಹಾಸಿಗೆ ಸೇರಿ ಸಾಯುವಂತಾಗಲು ನಾನೇ ಕಾರಣ ಅಂತ ಅವನ ಗುಮಾನಿ. ನಿಜ ಹೇಳುವುದಾದರೆ ಅವನು ದೊಡ್ಡ ಸೋಮಾರಿ. ಅವನಿಗೆ ಕಷ್ಟಪಡಲು ಕಷ್ಟಗಳೇ ಇರಲಿಲ್ಲ. ನಡೆದು ಸೇರಲು ಗುರಿಗಳೂ ಇರಲಿಲ್ಲ. ಪರಿಸರ ಅಂತೆ. ಶೂನ್ಯ ಕೃಷಿ ಅಂತೆ. ಅವನ ಪಿಂಡ. ಹೆಂಡತಿಯ ಜೊತೆ ಸುಖವಾಗಿರುವ ಹಣೆಯ ಬರಹವೂ ಅವನಿಗಿಲ್ಲ. ಮೂರ್ಖ ಜನ್ಮ ಅವನದ್ದು.

‘ನಾನಾದರೂ ಎಷ್ಟು ಅಂತ ಬುದ್ಧಿ ಹೇಳುವುದು. ಗೋಡೆಯಲ್ಲಿ ತೂಗು ಹಾಕಿದ್ದ ಜೋಡುನಳಿಕೆಯ ಕೋವಿಯನ್ನು ಒಂದು ದಿನ ಅವನ ಹಣೆಗೆ ಹಿಡಿದೆ.

‘ಒಂದೋ ನಾನು ಹೇಳಿದ ಹಾಗೆ ತೋಟ ನೋಡು. ಇಲ್ಲಾ ಹೆಂಡತಿಯ ಜೊತೆ ಜಾಗ ಖಾಲಿ ಮಾಡು’ ಅಂದೆ.

ಅವನಿಗೆ ಅದೇ ಬೇಕಾಗಿತ್ತು ಕಾಣುತ್ತದೆ.

‘ಹೆಂಡತಿಯೂ ಬೇಡ ತೋಟವೂ ಬೇಡ ಎಲ್ಲ ನೀನೇ ಇಟ್ಟುಕೋ’ ಅಂತ ಹೊರಟ.

‘ಅವನು ಪೆದ್ದು ಮೂರ್ಖ. ಅವನೇ ಮೊದಲು ಆ ಕೋವಿಯನ್ನು ನನ್ನ ಹಣೆಗೆ ಹಿಡಿದಿದ್ದರೆ ಪಾಪ ಸುಖವಾಗಿ ಬದುಕುತ್ತಿದ್ದ. ಅಪ್ಪಟ ಸಾತ್ವಿಕ ಅವನು ನನ್ನ ಅಜ್ಜನ ಹಾಗೆ’

“ಈಗ ನೋಡಿ ನನ್ನ ಚಿತೆಗೆ ಬೆಂಕಿ ಇಡಲೂ ಅವನಿಗೆ ಇಲ್ಲಿ ಬರಲಾಗುವುದಿಲ್ಲ ಸಾಹೇಬರೇ’ ಎಂದು ಗಹಗಹಿಸಿ ನಕ್ಕಿದ್ದರು.

ಅವರಿಗೆ ಸಿಟ್ಟು ಬಂದಾಗಲೂ ಗಹಗಹಿಸಿ ಬರುವ ನಗು. ಸಾಹಿತ್ಯ ಮಾತನಾಡುವಾಗಲೂ, ರಾಜಕೀಯ ಚರ್ಚಿಸುವಾಗಲೂ, ದೇವರು, ಧರ್ಮ, ಸ್ತ್ರೀ ಸೌಂದರ್ಯ, ಮೈಥುನ ಏನು ಹೇಳುವಾಗಲೂ ಕೊನೆಯಲ್ಲಿ ಬರುವುದು ನಗು.

ಅವರ ಜೊತೆಯಲ್ಲಿ ಇಂತಹದೇ ವಿಷಯಗಳನ್ನು ಹೇಳಿಕೊಂಡು ಗಹಗಹಿಸಿ ನಗಲು ನಾನು. ಹೇಳಿಕೊಳ್ಳಲು ನನ್ನ ಜೀವನದಲ್ಲೂ ಅಂತಹದೇ ಪುಂಕಾನುಪುಂಕ ಸಂಗತಿಗಳು.

ನನಗೂ ಒಬ್ಬ ಮುತ್ತಜ್ಜ ಇದ್ದ. ಅವರು ಬಹುಶಃ ನೂರು ವರ್ಷ ಬದುಕಿದ್ದರು. ಅವರ ಹೆಸರು ಈಸಾ ಮುಸಿಲಿಯಾರ್ ಎಂದೋ ಏನೋ ಇರಬೇಕು. ಅವರು ಸಾಯುವವರೆಗೂ ಅವರ ಬಳಿ ಹರಿತವಾದ ಒಂದು ಖಡ್ಗ ಇತ್ತು. ಆ ಖಡ್ಗ ಟೀಪೂ ಸುಲ್ತಾನನ ವಿರುದ್ಧ ಹೋರಾಡಲು ಕೊಡಗಿನ ರಾಜ ಅವರ ಹಿರಿಯರಿಗೆ ಕೊಟ್ಟಿದ್ದಂತೆ. ಆ ಮುತ್ತಜ್ಜನ ಹಿರಿಯರು ಓಮಾನು ದೇಶದ ಕಾಡು ಜನಾಂಗಕ್ಕೆ ಸೇರಿದವರಂತೆ. ಅವರು ನೂರಾರು ವರ್ಷಗಳ ಹಿಂದೆ ಅರಬಿ ಕಡಲಿನ ಮೂಲಕ ಹಾಯಿ ದೋಣಿ ಹತ್ತಿ ಪರಾರಿಯಾಗಿ ಬಂದು ಕೊಡಗಿನ ಕಾಡಲ್ಲಿ ಒಂದು ಗುಂಪಾಗಿ ಬದುಕುತ್ತಿದ್ದರಂತೆ. ಅವರು ಹಾಗೆ ಭಯದಲ್ಲಿ ಓಡಿ ಬರಲು ಕಾರಣ ಅರೇಬಿಯಾದ ಖಲೀಫರು ತಮ್ಮನ್ನು ಹಿಡಿದು ಮುಸಲ್ಮಾನರನ್ನಾಗಿ ಮಾಡಬಹುದು ಎಂಬ ಹೆದರಿಕೆ. ಆದರೆ ತಮಾಷೆ ನೋಡಿ. ಕಾಡಲ್ಲಿ ಹೆದರಿಕೊಂಡು ಬದುಕುತ್ತಿದ್ದ ಅವರನ್ನು ಕೊಡಗಿನ ರಾಜ ಸೈನ್ಯಕ್ಕೆ ಸೇರಿಸಿಕೊಂಡ. ಖಡ್ಗ ಕೊಟ್ಟು ಟೀಪೂ ಸುಲ್ತಾನನ ಪಡೆಯೊಡನೆ ಕಾದಾಡಲು ಕಳಿಸಿದ ಆ ರಾಜ ತಾನು ಮಾತ್ರ ಅರಮನೆಯ ನೆಲಮಾಳಿಗೆಯಲ್ಲಿ ಅಡಗಿಕೊಂಡ. ಯುದ್ಧಕ್ಕೆ ಹೊರಟಿದ್ದವರನ್ನು ಸೆರೆಹಿಡಿದ ಟೀಪೂವಿನ ಕಡೆಯವರು ಅವರನ್ನು ಶ್ರೀರಂಗಪಟ್ಟಣಕ್ಕೆ ಎಳೆದುಕೊಂಡು ಹೋಗಿ ಮುಸಲ್ಮಾನರನ್ನಾಗಿ ಮಾಡಿದ. ಬ್ರಿಟಿಷರು ಟೀಪುವನ್ನು ಮುಗಿಸಿದ ಮೇಲೆ ಅವರು ವಾಪಾಸು ಬಂದಾಗ ರಾಜ ಕೊಟ್ಟಿದ್ದ ಭೂಮಿ ಬೇರೆಯವರ ಪಾಲಾಗಿತ್ತು. ರಾಜ ಕೊಟ್ಟಿದ್ದ ಖಡ್ಗ ಮಾತ್ರ ಕೈಯಲ್ಲಿ ಉಳಿದಿತ್ತು. ಆ ಖಡ್ಗ ಮುತ್ತಜ್ಜನಿಂದ ಅಜ್ಜನಿಗೆ ಅಜ್ಜನಿಂದ ನನ್ನ ತಂದೆಗೆ ಬಂದಿತ್ತು. ನಾವು ಸಣ್ಣದಿರುವಾಗ ಅದು ಅಟ್ಟದಲ್ಲಿ ಒಣಗಿದ ತೆಂಗಿನ ಕಾಯಿಗಳ ನಡುವೆ ಮಲಗಿಕೊಂಡಿರುತ್ತಿತ್ತು. ಆಮೇಲೆ ನಮ್ಮ ತಂದೆಯವರು ಅದನ್ನು ತೂಕಕ್ಕೆ ಕಬ್ಬಿಣದವನಿಗೆ ಮಾರಿದ್ದರು. ಹಾಗೆ ಮಾರುತ್ತ ಮಾರುತ್ತ ನನ್ನನ್ನು ಓದಿಸಿದ್ದರು. ಅವರು ನನ್ನನ್ನು ಓದಲು ಕಳಿಸಿದ್ದರೆ ನಾನು ಬರೆಯಲು ಶುರುಮಾಡಿದ್ದೆ. ಕುಡಿತವೂ ಕ್ರಾಂತಿಯೂ ಪ್ರೇಮವೂ ಶುರುವಾಗಿತ್ತು. ಈಗ ಈ ವಯಸ್ಸುಗಾಲದಲ್ಲಿ ಖಿನ್ನತೆ.

‘ಒಂದು ವೇಳೆ ನನ್ನ ಮುತ್ತಜ್ಜನ ಮುತ್ತಜ್ಜ ಆದದ್ದು ಆಗಲಿ ಎಂದು ಅಲ್ಲೇ ಉಳಕೊಂಡಿದ್ದರೆ, ಇಲ್ಲಿ ಮುಸಲ್ಮಾನನಾಗುವ ಬದಲು ಅಲ್ಲೇ ಆಗುತ್ತಿದ್ದ. ಇಷ್ಟೆಲ್ಲಾ ಕಷ್ಟ ಬೇಕಿತ್ತಾ. ಎಂತಹ ತಮಾಷೆಯಲ್ಲವಾ ಮನುಷ್ಯನ ಪಡಿಪಾಟಲುಗಳು’ ಎಂದು ನಾನೂ ನಕ್ಕಿದ್ದೆ.

‘ಲೋಕ ಕೊನೆಗೊಳ್ಳುವುದು ಅಣ್ವಸ್ತ್ರ, ಪ್ರವಾಹ, ಪ್ರಳಯ ಯಾವುದರಿಂದಲೂ ಅಲ್ಲ. ಇದೇ ತರಹ ಒಂದು ಮಹಾದೊಡ್ಡ ಹೇಸಿಗೆಯ ತಮಾಷೆಯ ವಾಸನೆಯಿಂದ’ ಎಂದು ಅವರು ಅಂದಿದ್ದರು.

*****

ಈಗ ನೋಡಿದರೆ ಈ ಕಥೆಯೂ ಒಂದು ದೊಡ್ಡ ಹೇಸಿಗೆಯ ವಾಸನೆಯಿಂದ ಮುಕ್ತಾಯವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಚಾರುದತ್ತರು ತೀರಿ ಹೋಗಿ ನಾಳೆಗೆ ಸರಿಯಾಗಿ ಒಂದು ವರ್ಷವಾಗುತ್ತದೆ. ಅಂದರೆ ಅವರ ಮೊದಲ ಪುಣ್ಯತಿಥಿ. ಅದಕ್ಕೆ ಸರಿಯಾಗಿ ಅವರಿಗೊಂದು ಗತಿ ಕಾಣಿಸಲು ವಿಲಾಸಿನಿ ಸಿದ್ಧಳಾಗುತ್ತಿದ್ದಾಳೆ. ನಾಳೆ ಭಾನುವಾರ ಮಡಿಕೇರಿಯ ಹಿಮದರ್ಶನದಲ್ಲಿ ಪುಸ್ತಕ ಬಿಡುಗಡೆ. ಕೊರೋನಾದ ನಿಮಿತ್ತ ನಿಬಂಧನೆಗಳಿರುವುದರಿಂದ ಬೇರೆ ಯಾರೂ ಇರುವುದಿಲ್ಲ. ಲೇಖಕಿಯಾದ ವಿಲಾಸಿನಿ ಮತ್ತು ಪ್ರಕಾಶಕಿಯಾದ ಸೌಭಾಗ್ಯ. ಸೌಭಾಗ್ಯ ಅಂದರೆ ನಿಮಗೆ ನೆನಪಿರಬೇಕು. ಚಾರುದತ್ತರ ಸೊಸೆ.

ವಿಲಾಸಿನಿ ಫೋನು ಮಾಡಿದ್ದಳು. ಗಂಡಾಡು ಗಿಂಡಾಡು ಅಂತ ಏನೂ ಸಂಬೋದನೆ ಇಲ್ಲ. ನೇರವಾಗಿ ಬಹುವಚನದಲ್ಲೇ ವಿಷಯಕ್ಕೆ ಬಂದಳು.

‘ತಾವು ದಯವಿಟ್ಟು ಒಂದು ಸಹಾಯ ಮಾಡಬಹುದಾ?’

‘ಒಂದು ಸಹಾಯವೇನು ನಿನಗಾಗಿ ನನ್ನ ಜೀವವನ್ನೇ ಕೊಡಬಲ್ಲೆ. ಹೇಳು ನನ್ನ ಗುಂಡಿಗೆ ಬೇಕಾ? ಶಿರ ಬೇಕಾ? ಕರುಳು ಬೇಕಾ.’

‘ಇದೆಲ್ಲ ತಮಾಷೆಗಳು ಬೇಡ. ಚಾರುದತ್ತರ ಕುರಿತ ನಿಮ್ಮ ನೇರ ಅನಿಸಿಕೆಗಳನ್ನ ಫೇಸುಬುಕ್ಕಿನಲ್ಲಿ ಹಂಚಿಕೊಂಡರೆ ನನ್ನ ಪುಸ್ತಕಕ್ಕೆ ಪೂರಕವಾಗಬಹುದು’

‘ಯಾವ ಪುಸ್ತಕ? ಅಟ್ಟ ಹತ್ತಿ ಕದ್ದ ಪುಸ್ತಕವಾ?’

‘ಅದು ಕದ್ದದ್ದಲ್ಲ, ಪ್ರಕಾಶಕರೇ ಕೊಟ್ಟದ್ದು. ಸೌಭಾಗ್ಯನವರೇ ಕೊಟ್ಟದ್ದು ಹಸ್ತಪ್ರತಿ. ಅದು ಇಟ್ಟುಕೊಂಡು ನಾವು ಬರೆದದ್ದು. ಒಂದು ಮರು ವ್ಯಾಖ್ಯಾನ. ಬಹಳ ಬಹಳ ಸ್ಫೋಟಕ ವಿಷಯಗಳು ಇದೆ ಅದರಲ್ಲಿ. ಎಲ್ಲವೂ ಹೊರಗೆ ಬರಲಿದೆ’

ವಿಲಾಸಿನಿ ಗಂಭೀರವಾಗಿ ಮಾತನಾಡುತ್ತಿದ್ದಳು.

‘ಅದು ಸಂದುಹೋದ ಲೇಖಕರೊಬ್ಬರ ಕುರಿತ ಸ್ತ್ರೀವಾದೀ ವ್ಯಾಖ್ಯಾನ’ ಒಂದು ವರ್ಷದಲ್ಲೇ ವಿಲಾಸಿನಿಯ ಮಾತಿನ ಶೈಲಿಯಲ್ಲಿ ಬಹಳಷ್ಟು ಬದಲಾಗಿತ್ತು.

‘ಸ್ಪೋಟಕ ಎಂತದ್ದು ಅದರಲ್ಲಿ. ಚಾರುದತ್ತರು ಅಪಾನವಾಯು ಬಿಟ್ಟದ್ದಾ?’

ಅವಳನ್ನು ನಗಿಸಲು ನೋಡಿದ್ದೆ. ಅವಳು ಬದಲಾಗಿದ್ದಳು.

‘ನಿನಗೇನು ಗೊತ್ತು ಲೋಕದ ವಿಷಯ. ನೀನೊಬ್ಬ ವಿದೂಷಕ’ ಎನ್ನುವ ಹಾಗಿತ್ತು ಅವಳ ಮಾತಿನ ರೀತಿ.

‘ಚಾರುದತ್ತರ ತಾಯಿಯ ಅಕಾಲ ಮೃತ್ಯು, ಅವರ ಮಡದಿಯ ಸಾವಿನ ವಿಷಯ, ಅವರ ಸೊಸೆಯ ಸಂಕಟಗಳು, ಅವರ ಮಗನ ಕಾಣೆಯಾಗುವಿಕೆ ಎಲ್ಲವೂ ರಕ್ತಚಂದನಲ್ಲಿ ಸಾಕ್ಷ್ಯಚಿತ್ರದ ಹಾಗೆ ಅನಾವರಣಗೊಳ್ಳಲಿದೆ. ಇದು ಬರೀ ಚಾರುದತ್ತರ ಬದುಕಿನ ಅನಾವರಣ ಮಾತ್ರ ಅಲ್ಲ. ಮಲೆನಾಡಿನ ಸ್ತ್ರೀಬದುಕಿನ ಅಸಹಾಯಕತೆಯ ನಿರೂಪಣೆ.’

ವಿಲಾಸಿನಿ ಪುಸ್ತಕದ ಮುನ್ನುಡಿಯ ಹಾಗೆ ಮಾತನಾಡುತ್ತಿದ್ದಳು.

‘ಇದಕ್ಕೆಲ್ಲ ಒತ್ತಾಸೆಯಾಗಿ ನಿಂತವರು ಸೌಭಾಗ್ಯ. ಬರೆಯಲು ಹಿಂಜರಿಯುತ್ತಿದ್ದ ನನ್ನಲ್ಲಿ ಕೆಚ್ಚು ತುಂಬಿದವರು. ಸತ್ಯ ಹೊರಬರಬೇಕು ಎಂದು ಹಠತೊಟ್ಟವರು ಅವರು. ಜೊತೆಗೆ ನನ್ನ ಪತಿ ಶೇಷಪ್ಪ. ಎಲ್ಲ ಪುರುಷರೂ ಜೀವವಿರೋಧಿಗಳಾಗಿರುವುದಿಲ್ಲ ಅನ್ನುವುದಕ್ಕೆ ಉದಾಹರಣೆ ಅವರು’

ವಿಲಾಸಿನಿ ಪುಸ್ತಕದ ಕೃತಜ್ಞತೆ ಮಾತುಗಳ ಹಾಗೆ ನುಡಿಯುತ್ತಿದ್ದಳು.

‘ಅಯ್ಯೋ ಮಾರಾಯ್ತಿ ನಾನೂ ಒಂದು ಕಥೆ ಬರೆಯುತ್ತಿರುವೆ. ಅದರ ಕೊನೆಯ ಒಂದು ಚೂರು ಹೊಟ್ಟೆಯೊಳಗೆ ಸಿಕ್ಕಿಹಾಕಿಕೊಂಡಿದೆ. ಅದು ಹೊರಗೆ ಬರದೆ ನಾನು ಏನೂ ಮಾತನಾಡುವ ಪರಿಸ್ಥಿತಿಯಲ್ಲಿಲ್ಲ. ನಾನು ಮಾತನಾಡುವುದಿಲ್ಲ’ ತಪ್ಪಿಸಿಕೊಳ್ಳಲು ನೋಡಿದೆ.

‘ಹೌದಾ, ಸರಿ. ದಯವಿಟ್ಟು ನಾಳೆ ಬೆಳಗ್ಗೆ ಹತ್ತು ಗಂಟೆಗೆ ಫೇಸ್ ಬುಕ್ಕು ಲೈವ್ ನೋಡಿ. ಪುರುಷಲೋಕದ ಎಲ್ಲ ಮುಖಗಳೂ ಅಲ್ಲಿ ಅನಾವರಣಗೊಳ್ಳಲಿದೆ. ಸಾಧ್ಯವಾದರೆ ನೋಡಿ’

ವಿಲಾಸಿನಿ ರಪಕ್ಕಂತ ಮೊಬೈಲ್ ಕಟ್ ಮಾಡಿ ಹೋದಳು.

ನಾನು ಇನ್ನೆಂತ ಮಣ್ಣಾಂಗಟ್ಟಿ ಕಥೆ ಬರೆಯುವುದು. ಇನ್ನು ಎಲ್ಲ ಅವಳದೇ ವಿಜೃಂಭಿಸುವುದು,

ನಾನು ಒಂದು ಚೀಲ ಎತ್ತಿಕೊಂಡು ಮೀನು ತರಲು ಕಡಲಿನ ಕಡೆ ಹೊರಟೆ.