ಕತ್ತಲಾಗುತ್ತಿತ್ತು. ಬೀಡಿ ಬ್ರಾಂಚಿನವರು ಇನ್ನೇನು ಮುಚ್ಚುವುದರಲ್ಲೇ ನಾನೂ ಕೊನೆಯವನಾಗಿ ಬಂದು ತಲುಪಿದೆ. “ಇಷ್ಟೊತ್ತು ಎಲ್ಲಿ ಸತ್ತಿರ್ತೀರಿ, ಈಗ ಬರಲಾ ಸಮಯ ಸಿಗುವುದು” ಅಂತ ಬೈಸಿಕೊಂಡದ್ದೂ ಆಯಿತು. ಎಲ್ಲಾ ಮುಗಿದು “ಎಷ್ಟು ಎಲೆ- ತಂಬಾಕು?” ಅಂತ ಕೇಳಿದ್ದೇ ತಡ. ತಡವರಿಸತೊಡಗಿದೆ. “೨೦೦ ಎಲೆ ಅರ್ಧ ತಂಬಾಕು” ಅಂದೆ. ಅಷ್ಟರವರೆಗೂ ಕೆಂಡವಾಗಿದ್ದ ಬ್ರಾಂಚಿನವರು ಜೋರಾಗಿ ಬಿದ್ದು ಬಿದ್ದು ನಗತೊಡಗಿದರು. ನನ್ನ ಪರಿಸ್ಥಿತಿ ಅರ್ಥವಾಗಿ, ಸರಿ ಪ್ರಮಾಣದಲ್ಲೇ ಎಲೆ ತಂಬಾಕು ಕೊಟ್ಟರೆನ್ನಿಸುತ್ತೆ. ಯಾಕೆಂದರೆ ಮತ್ತೆ ಆನೆ ನೋಡಿ ಮನೆಗೆ ಬಂದಾಗಲೂ ಅಮ್ಮ ಎಲೆ ತಂಬಾಕಿನ ಪ್ರಮಾಣಕ್ಕೆ ತಕರಾರು ತೆಗೆದದ್ದು‌ ನೆನಪಿಲ್ಲ.
ಮುನವ್ವರ್ ಜೋಗಿಬೆಟ್ಟು ಬರೆವ ಪರಿಸರ ಕಥನ

 

ಓದಲು ಆಯ್ಕೆ ಮಾಡಿಕೊಂಡ ಯಾವುದೇ ಪುಸ್ತಕ ನನ್ನ ಸುತ್ತಲೂ ಅದರದೇ ಕಾಲ್ಪನಿಕ ಪ್ರಪಂಚವನ್ನು ಸೃಷ್ಟಿಸಿ ಬಿಡುತ್ತದೆ.‌ ರಹಮತ್ ತರೀಕೆರೆಯವರ “ಅಂಡಮಾನ್ ಕನಸುಗಳು” ಪುಸ್ತಕ ಓದುತ್ತ ಅಂಡಮಾನ್ ದ್ವೀಪದ ಬಗ್ಗೆ ಅತ್ಯಂತ ಕುತೂಹಲಿಗನಾಗಿದ್ದೆ. ಅಲ್ಲಿನ ಕಾಡುಜನರು, ಅರಣ್ಯ ಸಂಪತ್ತು ಎಲ್ಲವೂ ಢಾಳಾಗಿ ಸದಾ ಕಾಡುತ್ತಲೇ ಇತ್ತು, ಈಗಲೂ ಇದೆ. ಆ ರಾತ್ರಿ ನಾನು ಕೆಲಸ ಮಾಡುವ ಸಂಸ್ಥೆಯ ಯಾವುದೋ ತುರ್ತು ಕಾರಣಕ್ಕೆ ಕೋಝಿಕ್ಕೋಡ್ ಗೆ ಹೋಗಬೇಕಾಗಿ ಬಂತು. ಆಗಷ್ಟೇ ಎಟಿಎಂ ನಿಂದ ಉದುರಿಸಿಕೊಂಡ ಗರಿಗರಿ ನೋಟುಗಳನ್ನು ಎಣಿಸುತ್ತಾ ದೂರದ ದಾರಿಗಾಗಿ ಒಂದು ಬಾಟಲ್ ನೀರು ಕೊಳ್ಳೋಣವೆಂದು ಅಂಗಡಿಗೆ ಬಂದೆ. ೧೦  ರೂಪಾಯಿಯ ನೀರಿನ ಬಾಟಲಿಗೆ ೫೦೦ ನೋಟು ಕೊಟ್ಟೆ. ಅಷ್ಟು ಹೊತ್ತು ಸೌಮ್ಯವಾಗಿ ನೀರಿನ ಬಾಟಲ್ ಕೊಟ್ಟ ಅಂಗಡಿಯಾಕೆ  ೫೦೦ ರ ನೋಟು ಕಂಡವಳೇ ಕೆರಳಿ ಕೆಂಡವಾದಳು.

“ಅಲ್ಲ ರೀ, ೧೦ ರೂಪಾಯಿ ನೀರಿನ ಬಾಟಲ್ ಗೆ ೫೦೦ ರುಪಾಯಿ ಕೊಡ್ತಿರಲ್ವಾ? ಚಿಲ್ಲರೆಗೆ ನಾವೆಲ್ಲಿ ಹೋಗ್ಬೇಕು” ಅಂತ ರೇಗಿದಳು. ನನಗೆ ಗ್ರಾಹಕರೊಂದಿಗೆ ಅವಳು ಮಾತನಾಡುವ ಮರ್ಜಿ ಹಿಡಿಸಲಿಲ್ಲ. ಮೊದಲೇ ನಾನು ಬಸ್ಸು ತಪ್ಪಿಸಿಕೊಳ್ಳುವ ತರಾತುರಿಯಲ್ಲಿದ್ದೆ. ಜಗಳವಾಡುವುದಕ್ಕೆ ನಯಾ ಪೈಸೆಯ ಆಸಕ್ತಿ ಇರಲಿಲ್ಲ. “ಹೋಗಲಿ ಬಿಡಿ” ಎನ್ನುತ್ತಾ ಇನ್ನೊಂದಿಷ್ಟು ಅಗತ್ಯ ವಸ್ತುಗಳನ್ನು ಕೊಂಡು ಬಿಲ್ಲನ್ನು ೧೦೦ ಕ್ಕೆ ದಾಟಿಸಿದೆ. ಆಗಲೂ ಅವಳು ಜಪ್ಪಯ್ಯ ಅನ್ನಲಿಲ್ಲ. “ಥತ್, ನಿಮ್ಮ ಮನೆ ಹಾಳಾಗ, ಚಿಲ್ಲರೆ ಇಲ್ಲದೆ ಯಾವ ಪರುಷಾರ್ಥಕ್ಕೆ ಅಂಗಡಿ ಇಡುತ್ತೀರಿ” ಅಂತ ದಬಾಯಿಸಿದೆ. ಆ ಧಡೂತಿ ಮಹಿಳೆ ಖರೀದಿ ಮಾಡಲಿಟ್ಟದ್ದೆಲ್ಲವುಗಳನ್ನು ಬಾಚಿ ಹೂಂಕರಿಸುತ್ತಾ “ನೀವು ಬೇಡ, ನಿಮ್ಮ ವ್ಯಾಪರಾನೂ ಬೇಡ” ಎನ್ನುವಂತೆ ಎತ್ತಿಕೊಂಡು ಬಿರಬಿರನೆ ಹೊರಟೇ ಹೋದಳು. ಆ ರೌದ್ರಾವತಾರ ಠೀವಿ ನೋಡಿ ನಾನೂ ಸಣ್ಣಗೆ ಹೆದರಿದೆ. ತಿರುಗಿಯೂ ನೋಡದೆ ಕೋಪ ನಟಿಸುತ್ತಾ ಒಂದು ಬಾಟಲೂ ನೀರು ಸಿಗದೆ ಚಿಲ್ಲರೆಯಾಗದ ನೋಟಿನೊಂದಿಗೆ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಹೋಗುವ ಬಸ್ಸು ಹಿಡಿದೆ.

ಕೋಝಿಕ್ಕೋಡ್ ಗೆ ಹೋಗುವ ಬಸ್ಸು ಬಂತು. ಬಸ್ಸು ಹೇಗೂ ವಯನಾಡ್ ಘಾಟಿಯಾಗಿ ಹೋಗುವುದೆಂದು ತಿಳಿದಾಗಲೇ ರೋಮಾಂಚನಗೊಂಡಿದ್ದೆ. ಅಂಡಮಾನಿನ “ಜರವಾ” ಕಾಡು ಮನುಷ್ಯರು ಕಣ್ಣಿಗೆ ಬೀಳಲೆಂಬ ಅಭೀಪ್ಸೆಯಿಂದ ಲೇಖಕ ಕಾಯುವಂತೆ ನನಗೂ ಯಾವುದಾದರೂ ಕಾಡುಪ್ರಾಣಿ ಕಣ್ಣಿಗೆ ಬೀಳಲೆಂದು ಮನಸ್ಸಲ್ಲೇ ಪ್ರಾರ್ಥಿಸುತ್ತಿದ್ದೆ. ಅದಾಗಲೇ ಮೈಸೂರು ದಾರಿಯಾಗಿ ಬಸ್ಸು ಸುಮಾರು ದೂರ ಕ್ರಮಿಸಿತ್ತು. ಮಧ್ಯ ರಾತ್ರಿ‌ಯಾಗಿರಬಹುದು. ವೇಗವಾಗಿ ಹೋಗುತ್ತಿದ್ದ ಬಸ್ಸು ಒಮ್ಮೆಲೆ ನಿಂತಿತು. ಸತತವಾಗಿ ಹಾರ್ನಿನ ಶಬ್ಧ! ಹೆಡ್ ಲೈಟ್ ಡಿಮ್ ಡಿಪ್ಪರ್ ಮಾಡುತ್ತಿರುವುದು ದಟ್ಟ ಕಾಡಿನ ಮಧ್ಯೆ ಸ್ಪಷ್ಟವಾಗಿತ್ತು. ಯಾರೋ ಹಿಂದೆ ಕುಳಿತಿರುವವರು “ಆನ ಆನ” ಅಂತ ಮಲಯಾಳಂನಲ್ಲಿ ಕೂಗಿಕೊಂಡರು. ನಮ್ಮ ಹತ್ತಿರದಲ್ಲೇ ಕರಿ ಬಂಡೆಯಾಕೃತಿಯೊಂದು ಬೆದರಿಸುವಂತೆ ಬಸ್ಸನ್ನೇ ನೋಡುತ್ತಿತ್ತು. ತಿರುಗಿ ಬಸ್ಸಿನ ಕಡೆಗೆ ಧಾವಿಸಲು ಇನ್ನೊಂದು ಹೆಜ್ಜೆ ಮುಂದಿಟ್ಟಿತ್ತು. ಅಬ್ಬಾ! ಅಕ್ಷರಶಃ ಹೆದರಿ ಬಿಟ್ಟೆ. ಇನ್ನೇನು ಆನೆ ನಮ್ಮ ಬಸ್ಸನ್ನೇ ಬುಡಮೇಲು ಮಾಡಬಹುದೆಂಬ ಭಯ ನನಗೆ. ಅಷ್ಟರಲ್ಲೇ ಚಾಲಕ ಹಾರ್ನನ್ನು ಒತ್ತಿ ಹಿಡಿದ. ಎದುರಿನಿಂದ ಬಂದ ಇನ್ನೊಂದು ಲಾರಿಯವನೂ ಅದನ್ನೇ ಅನುಸರಿಸಿದ. ಹಾರ್ನಿನ ಶಬ್ಧಕ್ಕೆ ಹೆದರಿದ ಆನೆ ಕರ್ಕಶವಾಗಿ ಘೀಳಿಡುತ್ತಾ ಅಲ್ಲಿಂದ ಓಟ ಕಿತ್ತಿತು.

ಒಂದೇ ನೋಟಕ್ಕೆ ಚಿಲ್ಲರೆ ಕೊಡದ ಕೋಪಕ್ಕೆ ಹೊರಟು ಹೋದ  ಅಂಗಡಿಯ ಧಡೂತಿ ಮಹಿಳೆಯ ನೆನಪಾಯಿತು ನನಗೆ. “ಬದುಕಿದೆಯಾ ಬಡ ಜೀವವೇ” ಎನ್ನುತ್ತಿದ್ದಂತೆ ವಿಪರೀತ ಹೊಡೆದುಕೊಳ್ಳುತ್ತಿದ್ದ ಹೃದಯ ಕೊಂಚ ಹತೋಟಿಗೆ ಬಂತು. ಮತ್ತೆ ಮತ್ತೆ ಆ ಆನೆಗೆ ಅಂಗಡಿಯವಳನ್ನೇ ಹೋಲಿಸಿ ನಗುತ್ತಾ ಸೇಡು ತೀರಿಸಿಕೊಂಡೆ.

ಒಮ್ಮೆ ಏನಾಯಿತೆಂದರೆ, ಊಟಿಗೆ ಹೋಗಿ ಬರುವ ದಾರಿಯಲ್ಲಿ, ತಮಿಳುನಾಡು ಮೂಲಕ ಕೇರಳ ದಾಟಿ ಮಂಗಳೂರಿಗೆ ಬರುವವರಿದ್ದೆವು. ಗೂಡಲ್ಲೂರು ದಾರಿಯಿಂದ ನಾವು ಕೇರಳ ಪ್ರವೇಶಿಸುವುದಾಗಿ ತೀರ್ಮಾನಿಸಿದೆವು. ಕೇರಳವೆಂದರೆ ಅರಣ್ಯ ಸಂಪತ್ತಿನಲ್ಲಿ ಶ್ರೀಮಂತ ಊರು. ವಯನಾಡು ಘಾಟಿಗಳನ್ನೆಲ್ಲಾ ನೋಡಿದರೆ ಅಲ್ಲಿನ ಜನಸಂಖ್ಯೆಗೂ ಹೆಚ್ಚಿನ ಮರಗಳು, ದಪ್ಪ ಕಾಂಡ ನೋಡಿದರೆ ನೂರಾರು ವರ್ಷಗಳ ಹಳೆಯದೆಂದು ಕಣ್ಣುಮುಚ್ಚಿ ಹೇಳಬಹುದು. ಆಹಾ! ಅದೆಷ್ಟು ನದಿಗಳ ಹುಟ್ಟೂರು. ನಮ್ಮ ಕರ್ನಾಟಕವೂ ಅದಕ್ಕೇನು ಕಡಿಮೆ ಇಲ್ಲದಿದ್ದರೂ ವಿಸ್ತೀರ್ಣದ ಮಟ್ಟಿಗೆ ಇಲ್ಲಿನ ಅರಣ್ಯ ಸಂಪತ್ತಿನ ವಿಸ್ತಾರ ಏನೇನೂ ಲೆಕ್ಕಕ್ಕೆ ಬಾರದು.  ನಮ್ಮ ಅದೃಷ್ಟ ಚೆನ್ನಾಗಿದ್ದರಿಂದ ಪೇಟೆಯಲ್ಲಿ ಏನಾದರೂ ತಿಂದೇ ಹೊರಡೋಣವೆಂದು ಹೋಟೇಲೊಂದಕ್ಕೆ ಹೊಕ್ಕೆವು. ಅಲ್ಲಿ ಕುಶಲೋಪರಿ ನಡೆದ ಬಳಿಕ ನಾವು ಹೋಗುವ ದಾರಿಯ ಬಗ್ಗೆ ಕೇಳಿದಾಗ, “ಅಯ್ಯೋ ಆ ದಾರಿಯಿಂದಾಗಿ ಹೋಗಬೇಡಿ, ನಿನ್ನೆ ತಾನೇ ಇಬ್ಬರು ಬೈಕ್ ಸವಾರರನ್ನು ಕಾಡಿನ ಮಧ್ಯೆ ಆನೆಯೊಂದು ತಿವಿದು ಹಾಕಿತಂತೆ” ಎಂದು ಎಚ್ಚರಿಕೆ ರವಾನಿಸಿ ನಮಗೆ ಬದಲಿ ದಾರಿಯನ್ನು ತೋರಿಸಿದ್ದರು. ಬಹುಶಃ ಆ ಮಾಹಿತಿ ಸಿಗದಿದ್ದರೆ ನಾವೂ ಆನೆ ದಾಳಿಗೆ ಒಳಗಾಗುತ್ತಿದ್ದೆವೋ ಏನೋ. ಆನೆಗಳು ಹಾಗೆಯೇ, ಗುಂಪಿನಲ್ಲಿರುವ ಕಾಡಾನೆಗಳು ಕೃಷಿ ಭೂಮಿಗಳನ್ನು ಆಕ್ರಮಿಸುವುದಿದೆ. ಒಂಟಿಯಾಗಿ ಸುತ್ತಾಡುವ ಆನೆಗಳು ಅತ್ಯಂತ ಅಪಾಯಕಾರಿಗಳು. ಅವುಗಳು ಮನುಷ್ಯನನ್ನು ಕೊಲ್ಲುವುದಕ್ಕೂ ಹೇಸುವುದಿಲ್ಲ.

ನಾನು ಮೊದಲ ಬಾರಿಗೆ ಆನೆ ನೋಡಿದ್ದು ನಮ್ಮೂರಲ್ಲೇ.  ಯಾವುದೇ ಪ್ರಾಣಿಯನ್ನು ಪ್ರಥಮ ಬಾರಿಗೆ ಬರಿಗಣ್ಣಿನಿಂದ ನೋಡುವುದಿದ್ದರೂ ಅದು ಪರಿಸರ ಪ್ರೇಮಿಯೊಬ್ಬನಿಗೆ ಮರೆಯಲಾಗದ ವಿಶೇಷ ಘಳಿಗೆ. ನಮ್ಮೂರಿಗೆ ಯಾವುದೋ ಮರ ಎಳೆಯಲು ಆನೆಯೊಂದನ್ನು ಕರೆಸಲಾಗಿತ್ತು. ಅಷ್ಟರವರೆಗೂ ಬಾಲಮಂಗಳದ ಡಿಂಗನ ಜೊತೆ ಗಲಭೆಗೆ ನಿಲ್ಲುತ್ತಿದ್ದ ಒಂಟಿ ಸಲಗ, ದೈತ್ಯ ಆನೆಗಳನ್ನು ಮಾತ್ರ ನೋಡಿ ಪರಿಚಯವಿದ್ದ ನನಗೆ ನೈಜ ಆನೆಯನ್ನು ನೋಡುವುದಕ್ಕೆ ಮೊದಲ ಅವಕಾಶ.

ನಮ್ಮ ಹತ್ತಿರದಲ್ಲೇ ಕರಿ ಬಂಡೆಯಾಕೃತಿಯೊಂದು ಬೆದರಿಸುವಂತೆ ಬಸ್ಸನ್ನೇ ನೋಡುತ್ತಿತ್ತು. ತಿರುಗಿ ಬಸ್ಸಿನ ಕಡೆಗೆ ಧಾವಿಸಲು ಇನ್ನೊಂದು ಹೆಜ್ಜೆ ಮುಂದಿಟ್ಟಿತ್ತು. ಅಬ್ಬಾ! ಅಕ್ಷರಶಃ ಹೆದರಿ ಬಿಟ್ಟೆ. ಇನ್ನೇನು ಆನೆ ನಮ್ಮ ಬಸ್ಸನ್ನೇ ಬುಡಮೇಲು ಮಾಡಬಹುದೆಂಬ ಭಯ ನನಗೆ. ಅಷ್ಟರಲ್ಲೇ ಚಾಲಕ ಹಾರ್ನನ್ನು ಒತ್ತಿ ಹಿಡಿದ.

ಆಗ ಉಮ್ಮ ಬೀಡಿ ಸುರುಟುತಿದ್ದ ಕಾಲ. ವಾರಕ್ಕೊಮ್ಮೆ ಮಜೂರಿ ಸಿಗುವುದರಲ್ಲಿ ಮನೆಯ ಖರ್ಚು ಸಾಗಬೇಕು. ನಾನು ಬೀಡಿ ಕೊಂಡು ಹೋಗುವ ಕೈಯಾಳು. ಶಾಲೆ ಬಿಟ್ಟು ಅರೆ ನಿಮಿಷದಲ್ಲೇ ಬೀಡಿ ಕೊಂಡು ಹೋಗಲು ಬುಲಾವ್ ಬರುತ್ತಿದ್ದರಿಂದ ಆ  ಕೆಲಸವೆಂದರೆ ಅಸಹನೆ. “೨೦೦ ತಂಬಾಕು, ಅರ್ಧ ಕೆಜಿ ಎಲೆ” ಇಷ್ಟನ್ನೂ ಜ್ಞಾಪಕವಿಟ್ಟುಕೊಂಡೇ ಹೋಗಬೇಕು. ಇಲ್ಲದಿದ್ದರೆ ಬೀಡಿ ಕೊಟ್ಟು ಎಷ್ಟು ತಂಬಾಕು, ಎಷ್ಟು ಎಲೆ ಕೊಳ್ಳಬೇಕು ಎಂಬುವುದೇ ಮರೆತು ಹೋಗಿ ತಡವರಿಸುವಾಗ ಬ್ರಾಂಚಿನವನಿಂದ ಬೈಸಿಕೊಳ್ಳಬೇಕಾಗಿತ್ತು. “೨೦೦ ತಂಬಾಕು ಅರ್ಧ ಕೆಜಿ ಎಲೆ” ಅಷ್ಟನ್ನೇ ದಾರಿಗುಂಟ ಉರು ಹೊಡೆಯುತ್ತಾ ಹೋಗಬೇಕು. ದುರದೃಷ್ಟವಶಾತ್ ದಾರಿ ಮಧ್ಯೆ ಯಾರಾದ್ರೂ ಮಾತನಾಡಲು ಸಿಕ್ಕರೆ ಫಜೀತಿ! ಅವರೊಂದಿಗೆ ಮಾತಿನಲ್ಲಿ ನನಗೆ “ಹೊಗೆ ಸೊಪ್ಪು, ಎಲೆಯ ಪ್ರಮಾಣ” ಅದಲು ಬದಲಾಗಿ ಗೊಂದಲವಾಗಿ ಬಿಡುತ್ತಿತ್ತು.

“ಅಬ್ಬಾಸಾಕನ ಮನೆಗೆ ಕರ್ಣುವಿನ ಆನೆ ಬಂದಿದೆಯಂತೆ” ಅಂತ ಯಾರೋ ಅಂದಕೂಡಲೇ ನಾನು ಎಂದೂ ಬೀಡಿ ಕೊಂಡು ಹೋಗಲು ಸ್ವಲ್ಪವೂ ಇಷ್ಟ ಪಡದವನು ಚಂಗನೆ ಹಾರಿ ಮನೆಯವರಿಗೆ ಅಚ್ಚರಿ ಹುಟ್ಟಿಸಿ ಹೊರಟು ಬಂದಿದ್ದೆ. ಬೀಡಿ ಬ್ರಾಂಚಿನ ಸ್ವಲ್ಪ ಹಿಂದೆ ಅಬ್ಬಾಸಕನ ಮನೆ. ಹತ್ತಿರದ ಕಾಡಿನಲ್ಲಿ ದೊಡ್ಡ ಮರವೇನೋ ಎಳೆಯಬೇಕಾದ್ದರಿಂದ ಕರ್ಣುವಿನ ಆನೆ ಅಲ್ಲಿಗೆ ಬಂದಿತ್ತು. ಆನೆ ಅಂದರೆ ರಾಜ ಗಾಂಭೀರ್ಯ. ಆನೆ ಇರುವವನು ಆ ಕಾಲಕ್ಕೆ ಶ್ರೀಮಂತನೆಂದೇ‌ ಲೆಕ್ಕ. ಕರ್ಣು ಅಂದರೆ ನಮ್ಮ ಪಕ್ಕದ ಊರಿನವರು. ಆ ದಿನಗಳಲ್ಲಿ ಅವರ ಬಳಿ ಕೆಲವು ಸಾಕಾನೆಗಳಿದ್ದವು. ಹತ್ತಿರದ ಪರಿಸರದಲ್ಲಿ ಯಾವುದೇ ಮರ ಎಳೆಯುವುದಿದ್ದರೆ ಕರ್ಣು ಅವರಲ್ಲಿ ಕೇಳಿ ಕರೆಸಿಕೊಳ್ಳುವುದುಂಟು. ಅವರಿಗೆ ನಮ್ಮೂರಿನವರಾದ “ಪೊಡಿಮೋನಾಕ” ಎನ್ನುವ ಮಾವುತರೂ ಇದ್ದರು. ಅವರು ಮಾವುತರಾಗಿದ್ದ ಕಾರಣಕ್ಕಾಗಿಯೇ ತೀರಿ ಹೋಗುವವರೆಗೂ “ಆನೆ ಪೊಡಿಮೋನಾಕ” ಎನ್ನುವ ಹೆಸರು ಅಂಟಿಸಿಕೊಂಡೇ ಇದ್ದರು.

ಬೀಡಿ ಕೊಳ್ಳುವಲ್ಲಿ ಸರತಿ ಸಾಲು ಪಾಲಿಸಬೇಕಾದ್ದರಿಂದ ಸುಮಾರು ಹೊತ್ತು‌ ಅಲ್ಲಿಯೇ ಕಾಯವ ಕಿರುಕುಳ. ಹೇಗೂ ಬೀಡಿ ಕೊಟ್ಟೇ ಹೋಗೋಣವೆಂದರೂ ಮನಸ್ಸು ಕೇಳಲಿಲ್ಲ. ಹಾಗೆಯೇ ಆನೆ ಇರುವಲ್ಲಿಗೆ ಬಂದೆ. ಅದಾಗಲೇ ಸಾಕಷ್ಟು ಜನ ನೆರೆದಾಗಿತ್ತು. ಮೊದಲ ಬಾರಿಗೆ ಆನೆಯನ್ನು ನೋಡುತ್ತಿದ್ದೆ. ಧಡೂತಿ ದೇಹ, ಕಪ್ಪಗಿನ ಮೈ ಬಣ್ಣ ಎಲ್ಲವೂ ಒಂದು ನಿಮಿಷಕ್ಕೆ ಮೈ ಮರೆಯುವಂತೆ ಮಾಡಿತ್ತು. ಅದು ಜಂಗಮ ಬಂಡೆಯಂತೆಯೇ ತೋರುತ್ತಿತ್ತು. ಆನೆಯ ಸೊಂಡಿಲಿಗೆ ಸರಪಳಿ ಹಾಕಿ ಬೃಹತ್ ಮರದ ದಿಮ್ಮಿಗಳನ್ನು ಸಿಕ್ಕಿಸಿ ಎಳೆಯಿಸುತ್ತಿದ್ದರು. ಅವು ಎಳೆಯಲು ಪಡುವ ಶ್ರಮ ನೋಡಿದರೆ ಎಂಥಹ ಕಲ್ಲುಹೃದಯಿಯ ಕರುಳು ಕಿತ್ತು ಬರಬೇಕು. ಮಾವುತನ ಹೊಡೆತ ತಿನ್ನುತ್ತಲೇ ಸಂಯಮ ಕಳೆದುಕೊಳ್ಳದೆ ಆನೆ ಶತಾಯುಗತಾಯ ಎಳೆಯುತ್ತಲೇ ಇತ್ತು.  ಭಯಂಕರವಾಗಿ ಘೀಳಿಟ್ಟಿತು. ಆ ಶಬ್ಧಕ್ಕೆ ನಡುಗಿ ಬಿಟ್ಟೆ. ಬಹುಶಃ ನಾನು ಅದೇ ಮೊದಲು ಅಂಥಹ ಶಬ್ಧ ಕೇಳಿಸಿಕೊಂಡಿದ್ದರಿಂದಲೇ ಇರಬೇಕು. ಆನೆಗೆ ಮಾವುತ ಹೊಡೆಯುತ್ತಲೇ ಇದ್ದ. ಕೊನೆಗೂ ಶಕ್ತಿ ಮೀರಿ ಯತ್ನಿಸಿ ಮರ ಎಳೆಯುವಲ್ಲಿ ಸಫಲವಾಯಿತು.

ಕತ್ತಲಾಗುತ್ತಿತ್ತು. ಬೀಡಿ ಬ್ರಾಂಚಿನವರು ಇನ್ನೇನು ಮುಚ್ಚುವುದರಲ್ಲೇ ನಾನೂ ಕೊನೆಯವನಾಗಿ ಬಂದು ತಲುಪಿದೆ. “ಇಷ್ಟೊತ್ತು ಎಲ್ಲಿ ಸತ್ತಿರ್ತೀರಿ, ಈಗ ಬರಲಾ ಸಮಯ ಸಿಗುವುದು” ಅಂತ ಬೈಸಿಕೊಂಡದ್ದೂ ಆಯಿತು. ಎಲ್ಲಾ ಮುಗಿದು “ಎಷ್ಟು ಎಲೆ- ತಂಬಾಕು?” ಅಂತ ಕೇಳಿದ್ದೇ ತಡ. ತಡವರಿಸತೊಡಗಿದೆ. “೨೦೦ ಎಲೆ ಅರ್ಧ ತಂಬಾಕು” ಅಂದೆ. ಅಷ್ಟರವರೆಗೂ ಕೆಂಡವಾಗಿದ್ದ ಬ್ರಾಂಚಿನವರು ಜೋರಾಗಿ ಬಿದ್ದು ಬಿದ್ದು ನಗತೊಡಗಿದರು. ನನ್ನ ಪರಿಸ್ಥಿತಿ ಅರ್ಥವಾಗಿ, ಸರಿ ಪ್ರಮಾಣದಲ್ಲೇ ಎಲೆ ತಂಬಾಕು ಕೊಟ್ಟರೆನ್ನಿಸುತ್ತೆ. ಯಾಕೆಂದರೆ ಮತ್ತೆ ಆನೆ ನೋಡಿ ಮನೆಗೆ ಬಂದಾಗಲೂ ಅಮ್ಮ ಎಲೆ ತಂಬಾಕಿನ ಪ್ರಮಾಣಕ್ಕೆ ತಕರಾರು ತೆಗೆದದ್ದು‌ ನೆನಪಿಲ್ಲ.


ಸ್ವಲ್ಪ ದಿನಗಳ ತರುವಾಯ ಯಾರೋ “ಕರ್ಣುವಿನ ಆನೆಗೆ ಮದ ಬಂದಿದ್ದಂತೆ, ಮಾವುತನನ್ನು ಕೊಂದು ಹಾಕಿತಂತೆ” ಎಂಬ ಸುದ್ದಿ ತಂದಿದ್ದರು. ಆದಾಗಿ ಇನ್ನಷ್ಟು ದಿನಗಳಲ್ಲಿ ಇನ್ನೊಂದು ಕೆಟ್ಟ ಸುದ್ದಿಯೂ ಬಂತು. ಅಂತೂ ಆನೆಗಳ ಅಪಾಯದಿಂದ ಸಾಕಷ್ಟು ಬಾರಿ ಜೈಲಿಗೆ ಹೋಗಿ ಬಂದು ಸಾಕಾಗಿದ್ದ ಕರ್ಣು ಕೂಡಾ ಆನೆ ವ್ಯಾಪಾರಕ್ಕೆ ತಿಲಾಂಜಲಿಯಿಟ್ಟರು. ಅಷ್ಟು ದಿನವೂ ಮಕ್ಕಳಂತೆ ಸಾಕಿ ಸಲಹಿದ್ದ ಆನೆಗಳು ಹೊರಟು ನಿಂತಾಗ ಅವರೆಷ್ಟು ಅತ್ತರೋ, ಆನೆಗಳೆಷ್ಟು ಮರುಗಿದವೋ ಯಾರು ಬಲ್ಲವರು?

ಈ ಎಲ್ಲ ನೆನಪುಗಳ ಹೊರತಾಗಿ ಮೈಸೂರಿಗೆ ಬಂದಾಗ ಮೃಗಾಲಯದಲ್ಲಿ ಆನೆ ನೋಡಿದ್ದೆ. ಅಲ್ಲಿ ಆಫ್ರಿಕನ್ ಆನೆಗಳು ಇದ್ದವು. ಅವು ಇಲ್ಲಿನ ಆನೆಗಳಂತಲ್ಲ, ಸ್ವಲ್ಪ ಬೂದು ಬಣ್ಣ ಮತ್ತು ಇಲ್ಲಿನ ಆನೆಗಿಂತ ಸ್ವಲ್ಪ ಎತ್ತರ ಮತ್ತು ಅಜಾನುಬಾಹು. ಇಷ್ಟು ನೋಡಿದರೂ ಅವುಗಳನ್ನೊಮ್ಮೆ ಮುಟ್ಟಬೇಕೆಂಬ ಮಹಾದಾಸೆ ಇದ್ದೇ ಇತ್ತು, ಕೈಗೂಡಿರಲಿಲ್ಲ. ಮೃಗಾಲಯದಿಂದ ಹೊರ ಬಂದು ಮೈಸೂರು ಅರಮನೆಗೆ ಬಂದಿದ್ದೆವು. ಕಾಕತಾಳೀಯವೆಂಬಂತೆ ಅಲ್ಲೊಂದು ಆನೆಯಿತ್ತು. ಬಹುಶಃ ಅರಮನೆಯಲ್ಲಿ ನೆಲೆಸಿರುವ ಆನೆ. ಎಲ್ಲರೂ ಬಾಳೆಹಣ್ಣು, ತಿಂಡಿಕೊಟ್ಟು ಸೊಂಡಿಲಿನಿಂದ ಆಶಿರ್ವಾದ ಪಡೆದುಕೊಳ್ಳುತ್ತಲೇ ಇದ್ದರು. ಅರೆ ಧೈರ್ಯ ಮಾಡಿಕೊಂಡು ನಾನು ಎದುರಿಗೆ ಹೋಗಿ ನಿಂತೆ, ‌ಸೊಂಡಿಲು ಬಗ್ಗಿಸಿ ತಲೆಯ ಮೇಲೊಮ್ಮೆ ಇರಿಸಿತು. ನನಗೂ ಸ್ವಲ್ಪ ಭಾರವಾದಂತನಿಸಿತು. ಮೆಲ್ಲಗೆ ಕೈಯಿಂದ ಸೊಂಡಿಲನ್ನೊಮ್ಮೆ ಮುಟ್ಟಿದೆ. ದಪ್ಪ ಚರ್ಮದ ಆನೆಯ ಮೈಲ್ಮೈ ನಯವಾಗಿರುವಂತೆ ತೋರಿತು. ಸಣ್ಣ ಕಣ್ಣುಗಳು ನಮ್ಮನ್ನೇ ನೋಡುತ್ತಿರಲು ಇನ್ನಷ್ಟು ಸೌಮ್ಯವಾಗಿ ತೋರಿದವು.

ಬಾಲಮಂಗಳದ ಡಿಂಗನ ಗೆಳೆಯ ಆನೆ ಮರಿಯಷ್ಟೇ ಮುದ್ದು ಮುದ್ದಾಗಿಯೂ ಕಂಡಿತು.  ಸೊಂಡಿಲು ಬೀಸುತ್ತಾ ನಮ್ಮನ್ನೇ ನೋಡುತ್ತಾ ದೂರ ಸಾಗಿ ಹೋಯಿತು. ನಾನೂ ಪರವಶನಾಗಿ ಟಾಟಾ ಮಾಡುವಂತೆ ಗಾಳಿಯಲ್ಲಿ ಕೈ ಬೀಸಿದೆ. ಅದು ಹೊರಟು ಅರಮನೆಯ ಗೋಡೆ ದಾಟಿ ಹೋಗುವವರೆಗೂ ಅಲ್ಲೇ ಕಲ್ಲಾಗಿ ನಿಂತೆ‌.