ಒಂದೊಮ್ಮೆ ಬಂದು ಮುಖ ತೋರಿಸು ಕನ್ನಡಿ ನಕ್ಕು ಬಿಡುತ್ತದೆ
ಜೊತೆಯಿರು ಸದಾ ಬದುಕು ತಾನೇ ಮುನ್ನುಡಿ ಬರೆದುಕೊಳ್ಳುತ್ತದೆ

ರಾತ್ರಿಯಲಿ ಕನಸಿಗೆ ಬಾರದಿದ್ದರೆ ಮುಂಜಾವು ಸತ್ತು ಹೋಗುತ್ತದೆ
ವಿಸ್ತಾರ ಬದಲಿಸದಿರು ವಿರಹ ಒಂಟಿಯಾಗಿ ಬಿಕ್ಕುತ್ತದೆ

ಆಗಾಗ್ಗೆ ಎದುರು ಬರುತಿರು ಹೃದಯ ಹಿಗ್ಗಿ ಕುಣಿಯುತ್ತದೆ
ಮಾತು ಮಾತಿಗೆ ಬಿಂಕ ತೋರದಿರು ಮೌನ ಹೆಪ್ಪುಗಟ್ಟುತ್ತದೆ

ಬಣ್ಣ ಬಣ್ಣದ ನೋಟ ಬದುಕಿನ ಸುತ್ತ ಸದಾ ಸುಳಿಯುತ್ತದೆ
ನೋಟ ನೋಟಕ್ಕು ರೆಪ್ಪೆ ತಾಕಿಸು ಮನದ ಏಕತಾರಿ ಮೀಟುತ್ತದೆ

ಎದೆಯಾಳಕ್ಕೆ ಇಳಿ ಅಭಿಯ ಹೃದಯದ ನೋವು ಅರಿವಾಗುತ್ತದೆ
ನೋವುಂಡ ಹೃದಯದಲ್ಲಿ ಅಲ್ಲವೆ ಸದಾ ಪ್ರೀತಿ ಹುಟ್ಟುತ್ತದೆ

ಅಭಿಷೇಕ್ ಬಳೆ ರಾಯಚೂರು ಜಿಲ್ಲೆಯ ಮಸರಕಲ್ ಊರಿನವರು.
ಬಿ.ಎಸ್ಸಿ, ಬಿ.ಎಡ್ ವ್ಯಾಸಂಗ ಮಾಡಿದ್ದಾರೆ
ಓದು ಮತ್ತು ಕವಿತೆ ರಚನೆ ಇವರ ಹವ್ಯಾಸಗಳು