ಬಹಳಷ್ಟು ಸಮಕಾಲೀನರು ಅಮೃತಾರನ್ನು ಕೇವಲ ಛಾಯಾವಾದದ ಪ್ರೇಮ ಕವಿ, ಬರೆಯುವುದೆಲ್ಲ ಜೊಳ್ಳು, ಹೆಚ್ಚು ಸಾಹಿತ್ಯವನ್ನು ಓದಿದ್ದಿಲ್ಲ ಇತ್ಯಾದಿಯಾಗಿ ಅವರ ವೈಯಕ್ತಿಕ ಬದುಕನ್ನು ಆಡಿಕೊಂಡು ಅವರನ್ನು ಅವಮಾನಿಸಿ ನೋಯಿಸುತ್ತಾರೆ. ಅಳುಕದ ಅಮೃತಾ ತಮ್ಮತನದ ತಳಪಾಯವನ್ನು ಬಿಟ್ಟುಕೊಡುವುದಿಲ್ಲ. ಕಟ್ಟರ್ ವಾದಿ ಅಲೆಗಳ ವಿರುದ್ಧ ಈಜಿದರೇ ಹೊರತು ಸೋತು ಕೈ ಚೆಲ್ಲಲಿಲ್ಲ. ಅವರಿಗೆ ಹೆಗಲಾಗಿ, ನೆರಳಾಗಿ ಧೃಡವಾಗಿ ನಿಂತವರು ಇಮ್ರೋಜ್. ಸಾಹಿರ್ ಬದುಕಿಗೆ ಬೆಳಕಾಗಲಿಲ್ಲ. ಇಮ್ರೋಜ್ ಅಮೃತಾರ ಕಣ್ಣಾದರು.
ರೇಣುಕಾ ನಿಡಗುಂದಿ ಅನುವಾದಿಸಿದ ಅಮೃತಾ ಪ್ರೀತಮ್ ಕವಿತೆಗಳ ‘ಬಾ ಇಂದಾದರೂ ಮಾತಾಡೋಣ’ ಕೃತಿಗೆ ಅವರೇ ಬರೆದ ಮಾತುಗಳು…

 

ಅಮೃತಾ ಪ್ರೀತಮ್ ಇಪ್ಪತ್ತನೇ ಶತಮಾನದ ಸಂವೇದನಶೀಲ ಕವಿ. ಸಮಕಾಲೀನ ಪಂಜಾಬಿ- ಹಿಂದೀ ಸಾಹಿತ್ಯಲೋಕದ ಅಗ್ರಗಣ್ಯರು ಮತ್ತು ಬಹು ಚರ್ಚಿತರು. ದೇಶದ ಬಹುಸಮ್ಮಾನಿತ ಖ್ಯಾತ ಕವಿ – ಸಾಹಿತ್ಯಕಾರರಲ್ಲಿ ಒಬ್ಬರು. ಅವರ ಸಾಹಿತ್ಯ ಭಾರತೀಯ ಭಾಷೆಗಳಲ್ಲದೇ ವಿಶ್ವದ 34 ಭಾಷೆಗಳಿಗೆ ಅನುವಾದಗೊಂಡಿವೆ. ಅವರ ಕಾದಂಬರಿ, ಕಥೆಯನ್ನಾಧರಿಸಿದ ಅನೇಕ ಚಲನಚಿತ್ರಗಳು, ಟಿವಿ ಸೀರಿಯಲ್ ಗಳು ವಿಶಿಷ್ಟವಾಗಿವೆ. ಅಮೃತಾ ಏಕಕಾಲಕ್ಕೆ ಕವಿ, ಕತೆಗಾರ್ತಿ, ಕಾದಂಬರಿಕಾರ್ತಿ, ಅನುವಾದಕಿ, ಸಂಪಾದಕಿ ಮತ್ತು ಚಿಂತಕಿಯಾಗಿದ್ದರು. ಅವರ ಮನೆ ಸದಾಕಾಲ ಸಾಹಿತ್ಯ ಮತ್ತು ಸಾಮಾಜಿಕ ಚಿಂತನೆಗಳ ಕೇಂದ್ರವಾಗಿತ್ತು ಎಂದು ಪಂಜಾಬಿ ಲೇಖಕ ಸುತಿಂದರ್ ಸಿಂಗ್ ನೂರ್ ಉಲ್ಲೇಖಿಸುತ್ತಾರೆ.

ಆಗಸ್ಟ್ 31, 1919ರಲ್ಲಿ ಪಂಜಾಬಿನ ಗುಜರನ್ವಾಲಾದಲ್ಲಿ ಜನಿಸಿದ್ದ ಅಮೃತಾ ಹುಟ್ಟಾ ಬಂಡಾಯಗಾರ್ತಿ. ಆಕೆ ಹನ್ನೊಂದು ವರ್ಷವಿದ್ದಾಗಲೇ ತಾಯಿ ತೀರಿಕೊಳ್ಳುತ್ತಾರೆ. ಆಕೆಯ ತಂದೆ ಕರ್ತಾರ್ ಸಿಂಗ್ ಹಿತಕಾರಿ ಸ್ವತಃ ಕವಿ. ಗುರುದ್ವಾರದಲ್ಲಿ ಧಾರ್ಮಿಕ ಗುರು. ಕಟ್ಟಾ ಸಾಂಪ್ರದಾಯಿಕ ವಾತಾವರಣದಲ್ಲಿ ಅಮೃತಾ ಬೆಳೆದರೂ ಹಿಂದೂ- ಮುಸ್ಲಿಂ ಭೇದಭಾವದ ವಿರುದ್ಧ ಪ್ರತಿಭಟನೆಯನ್ನು ತಮ್ಮ ಮನೆಯಿಂದಲೇ ಆರಂಭಿಸುತ್ತಾರೆ. ಮನೆಗೆ ಬಂದವರಿಗೆ ಲಸ್ಸಿ ಕೊಡಲು ಹಿಂದೂ – ಮುಸ್ಲಿಮರಿಗೆ ಪ್ರತ್ಯೇಕವಾಗಿ ಇಡುತ್ತಿದ್ದ ಲೋಟಗಳನ್ನು ಒಟ್ಟಿಗೆ ಇಡುವಂತೆ ಹಠಹಿಡಿದು ಅಜ್ಜಿಯನ್ನೇ ಮಣಿಸಿ ಗೆದ್ದ ಛಲಗಾತಿ ಆಕೆ. ಅದೂ ಎಳೆಯ ವಯಸ್ಸಿನಲ್ಲಿ.

(ಅಮೃತಾ ಪ್ರೀತಮ್)

ತಂದೆ ಕರ್ತಾರ್ ಸಿಂಗ್ ಮಗಳಿಗೆ ಲಯ- ಛಂದಸ್ಸು- ನಿಯಮ ಮುಂತಾದ ಕಾವ್ಯರಚನೆಯ ಸೂಕ್ಷ್ಮಗಳನ್ನು ಹೇಳಿಕೊಟ್ಟು ಪದ್ಯ ಬರೆಯಲು ಪ್ರೊತ್ಸಾಹಿಸಿದರು. ಮೊದಮೊದಲು ಕೇವಲ ಪಂಜಾಬಿ ಮತ್ತು ಉರ್ದುವಿನಲ್ಲಿ ಧಾರ್ಮಿಕ ಕವಿತೆಗಳನ್ನಷ್ಟೇ ಬರೆಯುತ್ತಿದ್ದ ಅಮೃತಾ, ವಿಭಜನೆಯ ನಂತರ ದೆಹಲಿಯಲ್ಲಿ ನೆಲೆಸಿ ಹಿಂದಿಯಲ್ಲೂ ಬರೆಯಲು ತೊಡಗುತ್ತಾರೆ.

ಕವಿತೆಗಳೇ ಅವರ ಬದುಕಿನ ಹಲವು ಘಟ್ಟಗಳನ್ನು ಬಿಂಬಿಸುವ ಅದ್ಭುತ ಕಾವ್ಯ ಕಥನಗಳೆನಿಸುತ್ತವೆ. ಲಾಹೋರಿನ ದಿನಗಳಿಂದಲೇ ಸಾಹಿರ್ ಲೂಧಿಯಾನ್ವಿ ಜೊತೆ ಮೊಳೆತಿದ್ದ ಪ್ರೇಮ ಕೈಗೂಡಲಿಲ್ಲ. ಆದರೆ ಆಕೆಯ ಜೀವಿತಕಾಲದುದ್ದಕ್ಕೂ ಎದೆಯಲ್ಲುಳಿದುಹೋಯ್ತು. ವಿರಹ, ವಿಷಾದದ ಛಾಯೆಯನ್ನು ಅವರ ಕವಿತೆಗಳಲ್ಲಿ ಕಾಣುತ್ತೇವೆ.

“ಆಯುಷ್ಯದ ಸಿಗರೇಟು ಉರಿಯಿತು / ನನ್ನ ಪ್ರೇಮದ ಗಂಧ / ತುಸು ನಿನ್ನುಸಿರಿನಲಿ / ತುಸು ಗಾಳಿಯಲಿ ಬೆರೆಯಿತು.!”

“ನಿನ್ನ ಪ್ರೇಮದ ಒಂದು ಹನಿ, ನನ್ನೊಳಗೆ ಬೆರೆತುಹೋಗಿತ್ತು, ಅದಕ್ಕೇ ನಾನು ಆಯುಷ್ಯದ ಎಲ್ಲ ಕಹಿಯನ್ನೂ ನುಂಗಿಕೊಂಡೆ……”

“ನಾ ನಿನಗೆ ಮತ್ತೆ ಸಿಗುವೆ
ಎಲ್ಲಿ ? ಹೇಗೆ ? ಗೊತ್ತಿಲ್ಲ
ಬಹುಶಃ ನಿನ್ನ ಕಲ್ಪನೆಯ ಕಿಡಿಯಾಗಿ,
ನಿನ್ನ ಕ್ಯಾನವಾಸಿಗೆ ಇಳಿಯುವೆ
ಅಥವಾ ಬಹುಶಃ ನಿನ್ನ ಕ್ಯಾನವಾಸಿನ ಮೇಲೆ
ಒಂದು ರಹಸ್ಯಮಯ ಗೆರೆಯಾಗಿ,
ಮೌನವಾಗಿ ನಿನ್ನನ್ನು ನೋಡುತ್ತಾ ಇರುವೆ…”

ಇವು ನನ್ನಿಷ್ಟದ, ನನ್ನನ್ನು ಗಾಢವಾಗಿ ಪ್ರಭಾವಿಸಿದ ಕವಿತೆಗಳು. ತಮ್ಮ ಜೀವಿತದ ಕೊನೆಗಾಲದಲ್ಲಿ ಸಂಗಾತಿ ಇಮ್ರೋಜ್ ಅವರಿಗೆ “ನಾ ನಿನಗೆ ಮತ್ತೆ ಸಿಗುವೆ” ಎಂದು ವಚನವಿತ್ತು ಲೋಕದಿಂದ ತೆರಳಿದ ಅಮೃತಾರ ಈ ಪದ್ಯ ವಿಚಲಿತಗೊಳಿಸುತ್ತದೆ. ಇದು ಇಡೀ ಬದುಕಿನ ನಿರ್ಣಾಯಕ ಅಭಿವ್ಯಕ್ತಿ ಕವಿತೆ. ಅವರ ಎಲ್ಲಾ ಕವಿತೆಗಳೂ ದೇಶಕಾಲಾತೀತ ಮೌಲ್ಯಗಳಿಂದ ಮಹತ್ವಪೂರ್ಣವೆನಿಸುತ್ತವೆ.

(ರೇಣುಕಾ ನಿಡಗುಂದಿ)

ಹೃದಯವನ್ನು ವಿಹ್ವಲಗೊಳಿಸುವ ಅನುಕ್ತ ವ್ಯಥೆಯಲ್ಲಿ ಮೀಯುತ್ತಲೇ ಪ್ರೇಮ ಮತ್ತು ಸೌಂದರ್ಯದ ಬಿಸಿಲು ನೆರಳಿನ ಬೀದಿಯಲ್ಲಿ ವಿಹರಿಸಿದಂತಹ ಮಧುರಾನುಭವ. ಈ ಕವಿತೆಗಳಿಂದ ಹಿಂದಿ ಕಾವ್ಯ ಶ್ರೀಮಂತವೂ ಶಿಲ್ಪ ಸಮೃದ್ಧವೂ ಆಗುವುದು! ಎಂದು ಅಮೃತಾ ಪ್ರೀತಮ್ ಅವರ ಕವಿತೆಗಳ ಕುರಿತು ಹಿಂದಿ ಪ್ರಖ್ಯಾತ ಕವಿ ಸುಮಿತ್ರಾನಂದನ್ ಪಂತ್ ಭವಿಷ್ಯ ನುಡಿದಿದ್ದರು.

ಪಂಜಾಬಿ ಸಾಹಿತ್ಯದ ಸಂದರ್ಭವನ್ನು ಸ್ವಾತಂತ್ರ್ಯಪೂರ್ವ ಸಾಹಿತ್ಯ ಮತ್ತು ಸ್ವಾತಂತ್ರ್ಯೋತ್ತರ ಸಾಹಿತ್ಯವೆಂದು ನೋಡಬಹುದು. 1947 ಸ್ವಾತಂತ್ರ್ಯ ಪ್ರಾಪ್ತಿಯ ಕಾಲ ವಿಭಜನೆಯ ಹಿಂಸಾಚಾರ, ದಂಗೆ, ನರಮೇಧದ ಕರಾಳಕಾಲವೂ ಹೌದು. ಈ ವಿಭಜನೆ ಪಂಜಾಬನ್ನು ಎರಡು ಹೋಳಾಗಿಸಿತು. ಪಂಜಾಬಿನ ಸಾಮಾಜಿಕ ಜನಜೀವನ, ಸಂಸ್ಕೃತಿಯನ್ನು ಗಾಢವಾಗಿ ಪ್ರಭಾವಿಸಿತು. ವಿಭಜನೆಯ ಭೀಕರತೆ, ಗಾಯ- ಯಾತನೆ ಸೂಸಿದ ಸಂವೇದನಶೀಲ ಸಾಹಿತ್ಯ ಆ ಕಾಲದಲ್ಲಿ ವಿಪುಲವಾಗಿ ನಿರ್ಮಿತವಾಯ್ತು.

ಭಾಯೀ ವೀರ್ ಸಿಂಗ್, ಪ್ರೊ.ಮೋಹನ್ ಸಿಂಗ್ , ಅಮೃತಾ ಪ್ರೀತಂ, ಗೋಪಾಲ ಸಿಂಗ್ ‘ದರ್ದಿ’, ಹರಿಂದರ್ ಸಿಂಗ್ ನೂರ್ “ಕಂವರ್”; ಮುಂತಾದ ಕವಿಗಳು ಭಾರತ ವಿಭಜನೆಯ ದುರಂತದ ದುರ್ದಿನಗಳಿಗೆ ಸಾಕ್ಷಿಯಾದವರು ಮತ್ತು ಆ ಎಲ್ಲ ಸಂಕಟಗಳನ್ನು ಸ್ವತಃ ಅನುಭವಿಸಿದವರು. ಅಂಥ ಸಂದರ್ಭದಲ್ಲಿ ಅಮೃತಾ ಪ್ರೀತಂ ‘ಆಜ್ ಅಖ್ಕಾಂ ವಾರಿಸ್ ಶಾಹ್ ನೂ’ ಬರೆದು ಉಭಯ ದೇಶಗಳ ಹೃದಯಗಳಲ್ಲಿ ಶಾಶ್ವತವಾಗಿ ನೆಲೆಸಿಹೋದರು. “ಶವಗಳ ರಾಶಿಯನ್ನಷ್ಟೇ ಅಲ್ಲ, ಶವಗಳಂಥ ಜನರನ್ನೂ ಕಂಡಿದ್ದೇನೆ” ಎಂದು ತಮ್ಮ ಆತ್ಮಕತೆ – ‘ರಶೀದಿ ಟಿಕೆಟ್’ ನಲ್ಲಿ ಬರೆದಿದ್ದಾರೆ. ವಿಭಜನೆಯ ನರಕ ಯಾತನೆಯೇ ಆ ಕಾಲದ ಪಂಜಾಬಿ ಸಾಹಿತ್ಯದ ಕೇಂದ್ರಬಿಂದು ಆಗಿತ್ತು.

ಹಿಂದೂ – ಮುಸ್ಲಿಂ ದ್ವಿಸಂಸ್ಕೃತಿಯ ಫಲವಾಗಿ ಅರಬ್ಬಿ ಮತ್ತು ಫಾರ್ಸಿಭಾಷೆಗಳ ಪ್ರಭಾವಕ್ಕೊಳಗಾಗಿದ್ದ ಪಂಜಾಬಿ ಸಾಹಿತ್ಯ, ವಿಭಜನೆಯ ನಂತರ ಆ ಪ್ರಭಾವದಿಂದ ಮುಕ್ತವಾಗಿ ಭಾರತೀಯ ಸಂಸ್ಕೃತಿ, ಭಾರತೀಯ ಭಾಷೆಗಳಿಗೆ ಹೆಚ್ಚು ಹತ್ತಿರವಾಯಿತು ಎನ್ನುತ್ತಾರೆ ಚಿಂತಕರು. ಹೊಸದಾಗಿ ಕಟ್ಟಿಕೊಂಡ ಬದುಕು, ಹೊಸದಾಗಿ ಕಟ್ಟಿಕೊಂಡ ನಗರಗಳು ಜನಜೀವನವನ್ನು ಬದಲಿಸಿದವು. ವಿಕಾಸದ ಹೊಸ ಆಯಾಮಗಳು ಪಂಜಾಬಿ ಸಾಹಿತ್ಯ ಮತ್ತು ಭಾಷೆ ಎರಡಕ್ಕೂ ತೆರೆದುಕೊಂಡವು. ಹೊಸ ಉತ್ಸಾಹ, ಹೊಸ ಚೈತನ್ಯದಿಂದ ಸಾಹಿತ್ಯ ರಚನೆಯಾಗತೊಡಗಿತು. ಅಮೃತಾ ಪ್ರೀತಂ, ದೇವೇಂದ್ರ ಸತ್ಯಾರ್ಥಿ, ಬಾಬಾ ಬಲವಂತರ ಕಾವ್ಯರಚನೆಯಲ್ಲಿ ಈ ಹೊಸ ಪ್ರವೃತ್ತಿ ಎದ್ದು ಕಾಣುತ್ತದೆ ಎನ್ನುತ್ತಾರೆ ವಿಮರ್ಶಕರು.

ಅಮೃತಾರ ಕವಿತೆಗಳನ್ನು ಆ ಕಾಲ ಪ್ರವಾಹದ ವಿಪ್ಲವದ ನೆಲೆಯಲ್ಲಿ ವಿಕಸನಗೊಂಡ ಕಾವ್ಯಭಾಷೆಯ ದೃಷ್ಟಿಯಿಂದಲೇ ಓದಬೇಕು. ಅಮೃತಾರ ಭಾಷೆ ಪ್ರೇಮಭಾಷೆ! ಪ್ರೇಮವೇ ಅವರ ಗುಣ! ಭಾಷೆ ಪ್ರತಿಮೆ ರೂಪಕಗಳಿಂದ ಅಲಂಕೃತವಾದುದು, ಅಲ್ಲಿ ಹೃದಯವನ್ನು ಸೂರೆಗೊಳ್ಳುವಂಥ ಸಮ್ಮೋಹಕ ಪದಲಾಲಿತ್ಯದ ಲಯವಿದೆ. ಸೊಬಗಿದೆ, ಗಾಢವಾದ ಬದುಕಿನ ಅನುಭವವಿದೆ.

ಕಟು ವಾಸ್ತವತೆ, ಸಂಘರ್ಷಮಯ ಬದುಕು ಕಲಿಸಿದ ಪಾಠಗಳು ಅವರನ್ನು ಗಟ್ಟಿಗೊಳಿಸಿವೆ ಎನ್ನಬಹುದು. ಇವತ್ತೇನಾದರೂ ಅವರು ಗಂಗಾಜಲದಿಂದ ವೊಡ್ಕಾವರೆಗಿನ ಕವಿತೆ ಬರೆದಿದ್ದರೆ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುತ್ತಿದ್ದರೋ ಏನೋ. ಬದಲಾವಣೆಯೇ ಕಾಲದ ನಿಯಮವೆಂದಾದರೆ ಬದಲಾವಣೆಯನ್ನು ಕೇಡುಗಾಲವೆಂದು ಗ್ರಹಿಸಿ ಸದಾ ನಿಕಷಕ್ಕೊಡ್ಡುವ ಸಮಾಜ. ಮುಳ್ಳುಗಳಂತೆ ಚುಚ್ಚುವ ಸಮಾಜ – ಸಂಸ್ಕಾರದ ರೀತಿ ರಿವಾಜುಗಳನ್ನು, ಧಾರ್ಮಿಕ ಪರಂಪರೆಗಳನ್ನು ಧಿಕ್ಕರಿಸಿದ ಅಮೃತಾ ಎಲ್ಲ ಕಟ್ಟಳೆಗಳನ್ನು ಮುರಿದು ತಮ್ಮದೇ ಆದ ಲೋಕವೊಂದನ್ನು ಕಟ್ಟಿಕೊಳ್ಳುತ್ತಾರೆ… ಹೀಗೆ ಕಾಲಾಂತರದಲ್ಲಿ ಅವರ ಉತ್ಕಟ ಪ್ರೇಮ ಮಾನವೀಯ ಪ್ರೇಮವಾಗಿ, ಮನುಷ್ಯಕಾರುಣ್ಯದ ಸಂವೇದನೆಯಾಗಿ ಲೋಕೊತ್ತರವಾಗುತ್ತದೆ.

ಕವಿತೆಗಳೇ ಅವರ ಬದುಕಿನ ಹಲವು ಘಟ್ಟಗಳನ್ನು ಬಿಂಬಿಸುವ ಅದ್ಭುತ ಕಾವ್ಯ ಕಥನಗಳೆನಿಸುತ್ತವೆ. ಲಾಹೋರಿನ ದಿನಗಳಿಂದಲೇ ಸಾಹಿರ್ ಲೂಧಿಯಾನ್ವಿ ಜೊತೆ ಮೊಳೆತಿದ್ದ ಪ್ರೇಮ ಕೈಗೂಡಲಿಲ್ಲ. ಆದರೆ ಆಕೆಯ ಜೀವಿತಕಾಲದುದ್ದಕ್ಕೂ ಎದೆಯಲ್ಲುಳಿದುಹೋಯ್ತು. ವಿರಹ, ವಿಷಾದದ ಛಾಯೆಯನ್ನು ಅವರ ಕವಿತೆಗಳಲ್ಲಿ ಕಾಣುತ್ತೇವೆ.

1947 ರ ಜುಲೈ 3 ರಂದು ಗಂಡುಮಗುವಿಗೆ ಜನ್ಮ ನೀಡುತ್ತಾರೆ ಅಮೃತಾ. ಮುಂದೆ 14 ಅಗಸ್ಟ್ ವಿಭಜನೆಯ ದಂಗೆ ಶುರುವಾಗುತ್ತದೆ. ತಿಂಗಳ ಹಸುಳೆಯನ್ನು ಉಡಿಯಲ್ಲಿಟ್ಟುಕೊಂಡು ಜೀವವುಳಿಸಿಕೊಂಡು ದೆಹರಾಡೂನಿಗೆ ಗಡಿಪಾರಾಗುವ ದೃಶ್ಯವನ್ನು ನಾವಿಂದು ಕಲ್ಪಿಸಿಕೊಳ್ಳಲೂ ಭಯವಾಗುತ್ತದೆ. ವಿಭಜನೆ ಮತ್ತು ಕೋಮುವಾದದ ಕರಾಳ ಕಷ್ಟಗಳ ಝಳವನ್ನು ಉಂಡ ಜೀವ –ಘಾಸಿಗೊಂಡ ಹೃದಯ ಯಾತನೆಯನ್ನೇ ಕಾವ್ಯವಾಗಿಸುತ್ತದೆ. ಕಣ್ಣಿಗೆ ರಾಚುವ ಜಾತಿ- ಮತ- ಧರ್ಮದ ಸೋಗಲಾಡಿತನ.. ಸಮಾಜದ ಓರೆ ಕೋರೆಗಳನ್ನು, ಉಳ್ಳವರ ದರ್ಪ, ಬಡವ, ಶೋಷಿತರ ಅಸಹಾಯತೆಯನ್ನು, ವಿಭಜನೆಯ ದ್ವೇಷ ಅತ್ಯಾಚಾರ ಅನಾಚರಗಳಿಗೆ ಬಲಿಯಾದ ನೊಂದ ಹೆಣ್ಣುಮಕ್ಕಳ ದನಿಯಾಗಿ ಅವರ ಕಾವ್ಯ ಸಶಕ್ತ ಅಭಿವ್ಯಕ್ತಿಯಾಗಿದೆ. ವೈಯಕ್ತಿಕವೂ ರಾಜಕೀಯವಾಗಿ ಲೇಖನಿ ಹರಿತವಾದ ಅಸ್ತ್ರವಾಗುತ್ತದೆ, ಶಸ್ತ್ರವಾಗುತ್ತದೆ.

ಬಹಳಷ್ಟು ಸಮಕಾಲೀನರು ಅಮೃತಾರನ್ನು ಕೇವಲ ಛಾಯಾವಾದದ ಪ್ರೇಮ ಕವಿ, ಬರೆಯುವುದೆಲ್ಲ ಜೊಳ್ಳು, ಹೆಚ್ಚು ಸಾಹಿತ್ಯವನ್ನು ಓದಿದ್ದಿಲ್ಲ ಇತ್ಯಾದಿಯಾಗಿ ಅವರ ವೈಯಕ್ತಿಕ ಬದುಕನ್ನು ಆಡಿಕೊಂಡು ಅವರನ್ನು ಅವಮಾನಿಸಿ ನೋಯಿಸುತ್ತಾರೆ. ಅಳುಕದ ಅಮೃತಾ ತಮ್ಮತನದ ತಳಪಾಯವನ್ನು ಬಿಟ್ಟುಕೊಡುವುದಿಲ್ಲ. ಕಟ್ಟರ್ ವಾದಿ ಅಲೆಗಳ ವಿರುದ್ಧ ಈಜಿದರೇ ಹೊರತು ಸೋತು ಕೈ ಚೆಲ್ಲಲಿಲ್ಲ. ಅವರಿಗೆ ಹೆಗಲಾಗಿ, ನೆರಳಾಗಿ ಧೃಡವಾಗಿ ನಿಂತವರು ಇಮ್ರೋಜ್. ಸಾಹಿರ್ ಬದುಕಿಗೆ ಬೆಳಕಾಗಲಿಲ್ಲ. ಇಮರೋಜ್ ಅಮೃತಾರ ಕಣ್ಣಾದರು. ಸಾಹಿರ್- ಅಮೃತಾ- ಇಮರೋಜ್ ಪ್ರೇಮ ಇತಿಹಾಸದ ಅದ್ವಿತೀಯ ಪ್ರೇಮಗಾಥೆ. ಅಚ್ಚಳಿಯದೇ ಎಲ್ಲ ಕಾಲದ ಪ್ರೇಮಿಗಳನ್ನು ಕಾಡುತ್ತಲೇ ಇರುತ್ತದೆ.

ವಿಫಲ ವಿವಾಹದಿಂದ ಅಮೃತಾ ವಿಚ್ಚೇದನ ಪಡೆದು ಹೊರಬಂದಾಗ ಸಾಹಿರ್ ಮತ್ತೊಬ್ಬಳ ಪ್ರೇಮದಲ್ಲಿದ್ದಾನೆಂಬ ವದಂತಿಗೆ ಕುಸಿದು ಖಿನ್ನತೆಗೆ ಜಾರುತ್ತಾರೆ. ಅದಕ್ಕಾಗಿ ಅವರು ಚಿಕಿತ್ಸೆಯನ್ನೂ ಪಡೆಯಬೇಕಾಗುತ್ತದೆ. ಆ ಖಿನ್ನತೆಯ ಸೋಲಿನ ಕಾಲದಲ್ಲಿ ಅವರ ಸಾಹಿತ್ಯ ಕೃಷಿ ಪ್ರವಾಹದಂತೆ ಉಕ್ಕೇರುತ್ತದೆ. ಅದೇ ಸಮಯದಲ್ಲಿ ಅವರಿಗೆ ಆಸರೆಯಾದದ್ದು ಇಮರೋಜ್. ವಯಸ್ಸಿನಲ್ಲಿ ಅಮೃತಾರಿಗಿಂತ ಕಿರಿಯ. ಮದುವೆಯಾಗಿ ಇಬ್ಬರು ಮಕ್ಕಳಿದ್ದವಳೊಂದಿಗೆ ಬದುಕನ್ನು ಹಂಚಿಕೊಳ್ಳುವುದೇನು ಸರಳವಾಗಿದ್ದಿಲ್ಲ. ಕೊಂಕುನುಡಿಗಳು ನಂಜು ಮಾತಿನ ಬಾಣಗಳನ್ನು ಇಬ್ಬರೂ ಎದುರಿಸಬೇಕಾಗಿತ್ತು. ಸಖ್ಯವನ್ನು ಸಾಂಗತ್ಯವನ್ನು ಗಳಿಸುವುದಕ್ಕಿಂತ ಉಳಿಸಿಕೊಳ್ಳುವುದಿದೆಯಲ್ಲ ಅದು ಸುಲಭದ್ದಲ್ಲ. ಅದಕ್ಕೆ ಇಬ್ಬರ ಸಮರ್ಪಣೆಯೂ ಬೇಕು.

ಅಮೃತಾ ಮತ್ತು ಇಮರೋಜ್ ದಕ್ಷಿಣ ದೆಹಲಿಯ ಗ್ರೀನ್ ಪಾರ್ಕಿನ ಬ್ಯಾಂಕಿನ ಕೆಲಸಕ್ಕೆಂದು ಹೋದರೆ ಸಾಕು, ಎಲ್ಲರ ನೋಟಗಳೂ ಅವರನ್ನೇ ಇರಿಯುತ್ತಿದ್ದವಂತೆ. ಬ್ಯಾಂಕ್ ಉದ್ಯೋಗಿಯಾಗಿದ್ದ ನನ್ನ ಗೆಳತಿ ನಂದಿನಿ ಮಲ್ಯ ಆ ದಿನಗಳಲ್ಲಿ ಈ ಘಟನೆಯನ್ನು ಹೇಳಿದ್ದಳು. ನಾನೇ ನೊಂದಷ್ಟು ಘಾಸಿಗೊಂಡಿದ್ದೆ… ಈಗಲೂ ಅದು ನನ್ನೆದೆಯಲ್ಲಿ ನೋವಿನ ತುಂಡು. ಅನಂತ ನೋವಿನ ಸಾಂಗತ್ಯ ಅಮೃತಾರನ್ನು ಕೊನೆತನಕವೂ ಕೈಬಿಡಲಿಲ್ಲ. ಈಗ ಸುಲಭ ಸಾಧ್ಯವಾಗಿರುವ ಲಿವ್- ಇನ್ ಸಂಬಂಧವನ್ನು ಅಮೃತಾ- ಇಮರೋಜ್ ಅರವತ್ತರ ದಶಕದಲ್ಲಿಯೇ ಬದುಕಿ ತೋರಿಸಿದ್ದಾರೆ. ಇಮರೋಜರ ಮಾತಿನಲ್ಲಿ ಹೇಳುವುದಾದರೆ – ‘ನೀನು ನನ್ನ ಸಮಾಜ, ನಾನು ನಿನ್ನ ಸಮಾಜ, ಇದೇ ಸತ್ಯ. ಬಾಕಿ ಎಲ್ಲ ಮಿಥ್ಯ’. ಇಮರೋಜ್ ಇಲ್ಲಿ ಸಮಾಜದ ಪರಿಭಾಷೆಯನ್ನೇ ಬದಲಿಸಿಬಿಡುತ್ತಾರೆ. ತುಂಬು ಪ್ರೇಮದ ಈ ಅನುಭಾವವೇ ಅವರ ನಾಕು ದಶಕಗಳ ಸಾಂಗತ್ಯವನ್ನು ಗಟ್ಟಿಗೊಳಿಸಿ ಬಾಳಿಸುತ್ತದೆ. 1966 ರಿಂದ 2002ರವರೆಗಿನ ಮೂರುದಶಕಗಳ ಕಾಲ “ನಾಗಮಣಿ” ಎಂಬ ಪಂಜಾಬಿ ಸಾಹಿತ್ಯಿಕ ಪತ್ರಿಕೆಯನ್ನು ಈ ಜೋಡಿ ನಡೆಸುತ್ತದೆ. ಅನೇಕ ಯುವಕವಿಗಳನ್ನು ಬರಹಗಾರರನ್ನು ಪೋಷಿಸಿ ಬೆಳೆಸಿದ ಪತ್ರಿಕೆಯೆಂಬ ಹೆಗ್ಗಳಿಕೆ ನಾಗಮಣಿಯದು.

ಭಾರತವಲ್ಲದೆ ಪಾಕಿಸ್ತಾನದ ಜನರ ಪ್ರೀತಿ ಅಭಿಮಾನವೂ ಅಮೃತಾ ಅವರಿಗೆ ಅಪಾರವಾಗಿ ದಕ್ಕಿದೆ. ಲಾಹೋರಿನ ಜನ ಅಮೃತಾರನ್ನು ಈಗಲೂ ಪ್ರೀತಿಯಿಂದ ನೆನೆಯುತ್ತಾರೆ. ಲಾಹೋರ್ ಆಕಾಶವಾಣಿಯಲ್ಲಿನ ಅವರ ಜನಪ್ರಿಯ ಬಾನುಲಿ ಕಾರ್ಯಕ್ರಮವನ್ನು ಮರೆತಿಲ್ಲ. ಅಮೃತಾರ ಮನೆಯೆದುರಿನ ಪಾನ್ ಅಂಗಡಿಯಲ್ಲಿ ಸಾಹಿರ್ ಸಿಗರೇಟ್ ಸೇದುತ್ತ ತಾಸುಗಟ್ಟಲೆ ನಿಂತಿರುತ್ತಿದ್ದರಂತೆ. ಅಮೃತಾ ಕಿಟಕಿ ತೆರೆಯುವವರೆಗೂ ಕದಲುತ್ತಿರಲಿಲ್ಲವಂತೆ. ಕಿಟಕಿ ತೆರೆದ ಅವಳನ್ನು ಕ್ಷಣಕಾಲ ಕಣ್ಣಲ್ಲಿ ತುಂಬಿಕೊಂಡ ನಂತರವೇ ಅಲ್ಲಿಂದ ಹೋಗುತ್ತಿದ್ದ ಹುಚ್ಚುಪ್ರೇಮ ಸ್ಥಳೀಯ ಜನಮಾನಸದಲ್ಲಿ ಈಗಲೂ ಹಚ್ಚಹಸಿರು. ಆ ಪಾನ್ ಅಂಗಡಿಯ ಜಾಗದಲ್ಲಿ ದೊಡ್ದ ಶಾಪಿಂಗ್ ಕಾಂಪ್ಲೆಕ್ಸ್ ತಲೆ ಎತ್ತಿರುವ ಸಂಗತಿಯನ್ನು ಇಮರೋಜ್ ನನ್ನೊಂದಿಗೂ ಹಂಚಿಕೊಂಡಿದ್ದರು.

ಅಮೃತಾರ ಕವಿತೆಗಳು ಬಿಂಬವಾದ (ಕನ್ನಡದ ನವೋದಯ ಕಾವ್ಯದಂತೆ ಛಾಯಾವಾದ, ಬಿಂಬವಾದಗಳು ಹಿಂದಿ ಸಾಹಿತ್ಯ ಪ್ರಾಕಾರಗಳು) ವಿಧಾನದಲ್ಲಿ ಹೊಸ ಭಾಷೆ, ಹೊಸ ರೂಪಕ, ನವನವೀನ ಪರಿಕರಗಳನ್ನು ಅಮೃತಾ ಬಳಸುತ್ತಾರೆ. ಭಾಷೆಯ ಲಾಲಿತ್ಯವಿದೆ, ಚೆಲುವಿದೆ, ದರ್ಶನವಿದೆ, ಆಧ್ಯಾತ್ಮವಿದೆ, ಸತ್ಯದ ಶೋಧನವೂ ಇದೆ. ಆಕೆ ಬಳಸುವ ಅನೇಕ ರೂಪಕಗಳು ಪ್ರತಿಮೆಗಳನ್ನು ಕನ್ನಡದ ಸಾಹಿತ್ಯದ ಸಂದರ್ಭದಲ್ಲಿಟ್ಟು ನೋಡಿದರೆ ಹೊಸ ಹೊಳಹುಗಳನ್ನು ಮೂಡಿಸುತ್ತವೆ. ವಾರಿಸ್ ಷಾ, ಬುಲ್ಲೇ ಷಾ ಸೂಫಿ ಸಂತರ ಪ್ರಭಾವವನ್ನೂ ಅವರ ಕೃತಿಗಳಲ್ಲಿ ಕಾಣುತ್ತೇವೆ. ಕವಿತೆ ಹುಟ್ಟಲು ಕವಿಯ ದೇಹದ ಅಗತ್ಯವಿದೆಯೆನ್ನುವ ಅಮೃತಾ, ಸ್ವಯಂ ದೇಹವಾಗಿ ಕವಿತೆಗಳಿಗೆ ಜನ್ಮ ನೀಡಿದ್ದಾರೆ. ಅಪ್ಪಟ ಸ್ತ್ರೀ ಸಂವೇದನೆಗಳನ್ನು ಕಾದಂಬರಿಗಳಲ್ಲಿ ಮಾರ್ಮಿಕವಾಗಿ ಚಿತ್ರಿಸಿದ್ದಾರೆ. ತಮ್ಮ ಸಮಕಾಲೀನರಲ್ಲಿ ಭಿನ್ನರಾಗಿ ಗುರುತಿಸಲ್ಪಡುತ್ತಾರೆ. ವಿಭಜನೆ ದೇಶದ್ದಾಯಿತು ಆದರೆ ಬಲಿಯಾಗಿದ್ದು, ಉಲ್ಲಂಘನೆಯಾಗಿದ್ದು ಹೆಣ್ಣುದೇಹಗಳು. ಎಲ್ಲ ಯುದ್ಧ, ಎಲ್ಲ ಸಾಮ್ರಾಜ್ಯಗಳ ವಿಜಯೋತ್ಸವಕ್ಕೂ ಬಲಿಯಾಗಿದ್ದು ಹೆಣ್ಣುದೇಹಗಳೇ. ಈ ಮಾತಿಗೆ ಅವರ ‘ಪಿಂಜರ್’ ಕಾದಂಬರಿ ಸುಡು ಸುಡುವ ಉದಾಹರಣೆ.

(ಅಮೃತಾ ಮತ್ತು ಸಾಹಿರ್ ಲೂಧಿಯಾನ್ವಿ)

ಅಮೃತಾ ಜೀವ ಸಂಗಾತಿ ಇಮರೋಜ್ ಅವರೊಂದಿಗಿನ ನನ್ನ ಒಡನಾಟದಲ್ಲಿ ಅನೇಕ ಬಾರಿ ಅವರ ಮನೆಗೆ ಹೋಗಿದ್ದೇನೆ. ಅವರ ಕುರಿತು ಗಂಟೆಗಟ್ಟಲೆ ಮಾತಾಡಿದ್ದೇನೆ. ಹೆಚ್ಚಾಗಿ ಭಾನುವಾರದ ರಜೆಯ ನಡುಮಧ್ಯಾಹ್ನಗಳಲ್ಲಿ ಇಮರೋಜರೊಂದಿಗೆ ಹರಟೆ ಹೊಡೆದು ಅವರೇ ತಯಾರಿಸಿದ ಚಹ ಕುಡಿದ ಕ್ಷಣಗಳು ನನ್ನ ಬದುಕಿನ ಅತ್ಯಮೂಲ್ಯ ಕ್ಷಣಗಳು. ಪಡಸಾಲೆ ತುಂಬ ಅಮೃತಾರ ಫೋಟೋಗಳಿವೆ. ಮುದ್ದಾದ ಅಕ್ಷರಗಳಲ್ಲಿ ಬರೆದು ಫೋಟೋ ಫ್ರೇಮ್ ಹಾಕಿಟ್ಟ ಕೆಲ ಕವಿತೆಗಳಿದ್ದವು. ಬದುಕು ಏಕಾಂಗಿ ಕವಿತೆಯಂತೆ ಅಲ್ಲಿ ಹರಡಿಕೊಂಡಿತ್ತು. ಆ ಸಮಯದಲ್ಲಿಯೇ ಅಮೃತಾರ ಕವಿತೆಗಳನ್ನು ಯಾಕೆ ಕನ್ನಡಕ್ಕೆ ಅನುವಾದಿಸಬಾರದು ಎಂಬ ಆಲೋಚನೆ ಬಂದಿತ್ತು. ನಾನು ಅಯ್ದುಕೊಂಡಿದ್ದು ಭಾರತೀಯ ಜ್ಞಾನಪೀಠ ಸಂಸ್ಥೆ ಪ್ರಕಾಶಿಸಿದ ‘ಚುನಿ ಹುಯೀ ಕವಿತಾಯೇಂ’ ಎಂಬ ಅವರ ಅತ್ಯುತ್ತಮ ಆಯ್ದ ಕವಿತೆಗಳ ಸಂಗ್ರಹವನ್ನು. ಅಮೃತಾ ಈ ಹಿಂದೆ ಕನ್ನಡಕ್ಕೆ ತರ್ಜುಮೆ ಆಗಿದ್ದಾರೆಯೇ? 1984 ರಲ್ಲಿ ಡಾ. ಹಾ.ಮಾ ನಾಯಕ ಅನುವಾದಿಸಿದ್ದ ‘ಸುನೇರಿ’ ಎಂಬ ಕವಿತಾ ಸಂಕಲನದ ವಿನಾ ಇನ್ನೊಂದಿಲ್ಲ ಎನ್ನಲಾಗಿದೆ. ಈ ಸಂಕಲನ ಹೆಚ್ಚು ಚರ್ಚೆಗೆ ಬಂದಿಲ್ಲವೆನಿಸುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಸಾಹಿತ್ಯ ಲೋಕದಲ್ಲಿ ಅಮೃತಾ ಪ್ರೀತಮ್ ಹೆಸರು ಚಿರಪರಿಚಿತ.

ಅವರನ್ನು ಪ್ರತ್ಯಕ್ಷವಾಗಿ ಕಾಣಲಿಲ್ಲವೆಂಬ ವಿಷಾದ ನನ್ನನ್ನು ಕಡೆಯ ತನಕ ಕಾಡಲಿದೆ. ಆದರೆ ಇಮರೋಜರನ್ನಾದರೂ ಕಂಡ ಸಂತಸವಿದೆ. ನಾನು ದೆಹಲಿಗೆ ಬಂದಾಗಿನ ಎಂಭತ್ತರ ದಶಕದಲ್ಲೇ ಅಮೃತಾರನ್ನು ಓದುವ ಅವಕಾಶ ಸಿಕ್ಕಿದ್ದು ನನ್ನ ಪುಣ್ಯ. ಅವರ ಕಾದಂಬರಿ ಕತೆಗಳನ್ನು ಓದಿದ್ದೆ. ಕಾಡಿನ ಬೇರಿನ ‘ಅಂಗೂರಿ’ ಪಾತ್ರವೇ ನಾನಾಗಿ ಬದುಕಿದ್ದೇನೆಂದು ಈಗಲೂ ಅನಿಸುತ್ತದೆ. ಒಂದು ಬಹುದೀರ್ಘ ಮೂಕ ಸಂವಾದದಂತೆ ಅಮೃತಾರೊಂದಿಗೆ ಬಹುಕಾಲ ಬಾಳಿದ್ದೇನೆ ಅನ್ನುವ ಭಾವನೆಯೇ ಈ ದೆಹಲಿಯನ್ನು ದೆಹಲಿಯೊಂದಿಗಿನ ನನ್ನನ್ನು ಪರಸ್ಪರ ಬೆಸೆದಿದೆ ಅನಿಸುತ್ತದೆ. ಅವರನ್ನು ಕನ್ನಡ ಸಾಹಿತ್ಯ ವಲಯಕ್ಕೆ ಕಾಣಿಸಬೇಕೆಂಬ ನನ್ನ ಬಹುಕಾಲದ ಕನಸೊಂದು ನನಸಾಗುವಂತಿದ್ದರೆ ಅದು ‘ಪಲ್ಲವ ಪ್ರಕಾಶನ’ ದ ವೆಂಕಟೇಶ್ ಅವರು ಈ ಪುಸ್ತಕವನ್ನು ಪ್ರಕಟಿಸುವ ಭರವಸೆಯನ್ನು ನೀಡಿದ್ದರಿಂದ. ಅವರಿಗೆ ನನ್ನ ಮನಃಪೂರ್ವಕ ಕೃತಜ್ಞತೆಗಳು.