ಲೇಖಕ ವೈಯಕ್ತಿಕವಾಗಿ ಏನೇ ಆಗಿದ್ದರೂ ಸಾಮಾಜಿಕವಾಗಿ ಆತನಿಗಿರುವ; ಸಮಾಜ ಸ್ವೀಕರಿಸುವ ಆತನ ‘ಸ್ಥಿತಿ’ಯು ಆತನ ಕೃತಿಯನ್ನು ಸಮಾಜವು ಬರಮಾಡಿಕೊಳ್ಳುವುದರಲ್ಲಿ ನಿರ್ಧಾರಕ ಅಂಶವಾಗಿರುತ್ತದೆ ಎಂಬ ನೆಲೆಯಲ್ಲಿ ಈ ಕೃತಿಯ ಇನ್ನೊಂದು ಮಗ್ಗುಲನ್ನು ನಾನು ಕಾಣಿಸಬೇಕಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಕುಕ್ಕಿಲ ಅವರು ತಾನು ಮುಸ್ಲಿಂ ಅಲ್ಲ; ಜಾತ್ಯತೀತ ಎಂದು ಘೋಷಿಸಿಕೊಂಡವರಲ್ಲ.
ಏ.ಕೆ. ಕುಕ್ಕಿಲ ಬರೆದ ‘ಅಮ್ಮನ ಕೋಣೆಗೆ ಏಸಿ’ ಕಥಾ ಸಂಕಲನದ ಕುರಿತು ಅರವಿಂದ ಚೊಕ್ಕಾಡಿ ಬರೆದ ಮುನ್ನುಡಿ

ಗೆಳೆಯ ಏ.ಕೆ. ಕುಕ್ಕಿಲ ಅವರ ಈ ಕಥಾ ಸಂಕಲನದಲ್ಲಿರುವ ಕಥೆಗಳೆಲ್ಲವೂ ಹೃಸ್ವವಾದವುಗಳು. ಓದುಗರಿಗೆ ದೀರ್ಘ ಓದಿನ ಆಯಾಸವಿಲ್ಲ ಎನ್ನುವುದು ಕಥೆಗಳ ಗುಣಾತ್ಮಕ ಸಂಗತಿಯಾಗಿದೆ. ಇಲ್ಲಿನ ಕಥೆಗಳು ಸಣ್ಣ ಕಥೆಗಳ ಸಹಜ ಲಕ್ಷಣವಾದ ನಿರ್ದಿಷ್ಠ ಹೊಳಹನ್ನು ಹೇಳುತ್ತವೆ. ಆದರೆ ನಿರ್ದಿಷ್ಠ ಹೊಳಹನ್ನು ಕಲಾತ್ಮಕಗೊಳಿಸಿ ಹೆಚ್ಚು ವಿಸ್ತರಿಸಲು ಕುಕ್ಕಿಲ ಅವರು ಹೋಗಿಲ್ಲದಿರುವುದರಿಂದ ಕಥೆಗಳು ಹೃಸ್ವವಾಗಿವೆ.

ಇಲ್ಲಿನ ಕಥೆಗಳು ತಮ್ಮ ಕಲಾತ್ಮಕತೆಗಿಂತ ಹೆಚ್ಚಾಗಿ ಕಾಳಜಿಗಳಿಂದ ಓದುಗರನ್ನು ಸೆಳೆಯುತ್ತವೆ. ಕುಕ್ಕಿಲ ಅವರ ಕಾಳಜಿಗಳು ಕಥೆಗಾರನ ಬದುಕಿನ ಸುತ್ತಲಿನ ಪರಿಸರದಿಂದ ಪ್ರಭಾವಿಸಲ್ಪಟ್ಟಿವೆ. ಆದ್ದರಿಂದ ಈ ಕಥೆಗಳು ಅಧ್ಯಯನದ ಶಕ್ತಿಗಿಂತ ಅನುಭವದ ಶಕ್ತಿಯನ್ನು ನೆಚ್ಚಿಕೊಂಡಿವೆ. ಹಾಗಾಗಿ ಓದುಗರ ಅನುಭವಗಳೊಂದಿಗೆ ಒಂದಾಗಿ ಸೇರಿಕೊಂಡು ಓದುಗರ ಮೂಲಕ ಬೆಳೆಯುವ ಗುಣವನ್ನು ಹೊಂದಿವೆ.

(ಏ.ಕೆ. ಕುಕ್ಕಿಲ)

ವೈರುಧ್ಯಗಳ ಮುಖಾಮುಖಿಯಲ್ಲಿರುವ ವಿಡಂಬನೆಯು ಸೃಷ್ಟಿಸುವ ವಿಷಾದ ಕುಕ್ಕಿಲ ಅವರ ಕಥೆಗಳಲ್ಲಿ ಪದೇ ಪದೇ ಕಾಣಿಸುವ ಮತ್ತು ಕಾಡುವ ತಾತ್ವಿಕತೆಯಾಗಿದೆ. ಉದಾಹರಣೆಗೆ, ‘ವಾಸ್ತವ’ ಕಥೆಯಲ್ಲಿ ಮಗನ ನಡೆವಳಿಕೆಯೇ ತಂದೆಯ ಸಾವಿಗೆ ಕಾರಣವಾಗುವುದು; ಆದರೆ ಆತನೇ ಶ್ರೇಷ್ಠ ಪುತ್ರ ಎನಿಸಿಕೊಳ್ಳುವುದು; ಪುತ್ರನನ್ನು ಮಾತ್ರ ತನ್ನ ತಪ್ಪು ಕಾಡುತ್ತಾ ಹೋಗುವುದು, ‘ಅರಮನೆ’ ಕಥೆಯಲ್ಲಿ ಶ್ರೀಮಂತನೊಬ್ಬ ಬಡವನ ಮೇಲೆ ಪ್ರೀತಿಯಿಂದ ಮನೆ ಬದಲಾಯಿಸುವುದು ಮತ್ತು ಅರಮನೆಯಲ್ಲಿ ಬಡವನಿಗೆ ನಿದ್ದೆ ಬಾರದಿರುವುದು, ‘ಆತ ಮತ್ತು ಆಕೆ’ ಯಲ್ಲಿ ನಿದ್ದೆ ಇಲ್ಲದೆ ಆತ ರಾತ್ರಿ ಕಳೆಯುವುದು, ನಿದ್ರಿಸಿದವನನ್ನು ಎಚ್ಚರಿಸುವುದು ಬೇಡವೆಂದು ಫೋನ್ ಮಾಡಬೇಕೆನಿಸಿದರೂ ಆಕೆ ಫೋನ್ ಮಾಡದೆ ಇರುವುದು-ಇಂತಹ ಅನೇಕ ವೈರುಧ್ಯಗಳ ಮುಖಾಮುಖಿಗಳನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಈ ಮುಖಾಮುಖಿಗಳು ವ್ಯಂಗ್ಯವಾಗಿ ಚುಚ್ಚುತ್ತವೆ. ವಿಡಂಬನೆಯಾಗಿ ನಗಿಸುತ್ತವೆ. ಆದರೆ ವಿಷಾದವಾಗಿ ಉಳಿದುಕೊಳ್ಳುತ್ತವೆ. ‘ಆತ ಪ್ರಾರ್ಥಿಸಿದ ಊರು ಆಡಿಕೊಂಡಿತು’ನಂತಹ ಧ್ವನಿಪೂರ್ಣವಾಗಿ ಬಹಳ ತೀಕ್ಷ್ಣವಾಗಿ ಸ್ಥಾಪಿತ ನಡವಳಿಕೆಗಳ ಯಾಂತ್ರಿಕತೆಯನ್ನು ತರಾಟೆಗೆ ತೆಗೆದುಕೊಳ್ಳುತ್ತವೆ. ಈ ವಿನ್ಯಾಸವೇ ಕುಕ್ಕಿಲ ಅವರ ಸಕ್ಸಸ್‍ ನ ಕೇಂದ್ರವೂ ಆಗಿದೆ.

ಕುಕ್ಕಿಲ ಅವರು ತಮ್ಮ ಕಣ್ಣಿಗೆ ಸಿದ್ಧಾಂತದ ಪಟ್ಟಿ ಕಟ್ಟಿಕೊಳ್ಳದೆ ಬದುಕನ್ನು ಮುಕ್ತ ಮನಸಿನಿಂದ ನೋಡಬಲ್ಲರು ಎನ್ನುವುದಕ್ಕೆ ‘ಪಾಯಸ ನಕ್ಕಿತು’ ನಂತಹ ಕಥೆಗಳು ಹೇಳುತ್ತವೆ. ‘ಕಿಬ್ಬೊಟ್ಟೆ ಗಹಗಹಿಸಿ ನಕ್ಕಿತು’ ಕಥೆಯು ಸ್ತ್ರೀ ಮನಸನ್ನು ಅರ್ಥ ಮಾಡಿಕೊಳ್ಳದ ಪುರುಷನ ನಡೆವಳಿಕೆಯ ದೋಷವನ್ನು ಹೇಳಿದರೆ, ‘ಪಾಯಸ ನಕ್ಕಿತು’ ಕಥೆಯು ಪುರುಷನ ಮನಸನ್ನು ಅರ್ಥ ಮಾಡಿಕೊಳ್ಳದಿರುವ ಸ್ತ್ರೀ ನಡೆವಳಿಕೆಯ ದೋಷವನ್ನು ಹೇಳುತ್ತದೆ. ಈ ಮೂಲಕ ತಾನು ಅರ್ಥ ಮಾಡಿಕೊಳ್ಳುವುದರ ಪರವೆ ಹೊರತು ಸ್ತ್ರೀ ಅಥವಾ ಪುರುಷ ಎನ್ನುವುದು ತನಗೆ ಮುಖ್ಯವಲ್ಲ ಎಂಬುದನ್ನು ಕುಕ್ಕಿಲ ಅವರು ಹೇಳಿದ್ದಾರೆ.

‘ಪ್ರತಿಕ್ರಿಯೆ’ ಕಥೆಯಲ್ಲಿ ಅತ್ತೆಯಿಂದಾಗುವ ಹಾನಿಯನ್ನು ನಿರ್ಲಕ್ಷಿಸಿ ಅತ್ತೆಯನ್ನು ಪ್ರೀತಿಸುವ ಸೊಸೆಯ ಕಥೆಯಲ್ಲಿಯೂ ಸ್ಥಾಪಿತ ಧೋರಣೆಗಳನ್ನು ತಿರಸ್ಕರಿಸಿ ಮುನ್ನಡೆಬಲ್ಲ ದಿಟ್ಟತನ ಕಾಣುತ್ತದೆ. ಕುಕ್ಕಿಲ ಅವರ ಈ ನ್ಯಾಯ ಪಕ್ಷಪಾತಿ ಧೋರಣೆಯು ಸಮುದಾಯಗಳ ನಡುವಿನ ಸಂಬಂಧಗಳ ನಿರೂಪಣೆಯಲ್ಲಿಯೂ ಬಂದಿದೆ.

ಕುಕ್ಕಿಲ ಅವರು ಗಂಡು-ಹೆಣ್ಣು, ವೃದ್ಧರು-ಯುವಕರು, ಧರ್ಮ ಮತ್ತು ಸಂಪ್ರದಾಯಗಳ ನಿಯಂತ್ರಕರು ಮತ್ತು ಅನುಸರಿಸುವವರು-ಇವರೆಲ್ಲರ ಒಳತೋಟಿಗಳನ್ನು ಕಾಣಬಲ್ಲರು; ಮಾತ್ರವಲ್ಲ ಮಕ್ಕಳ ಮನಸಿನ ಸೂಕ್ಷ್ಮತೆಗಳನ್ನೂ ಗುರುತಿಸಬಲ್ಲರು. ‘ಬೆಕ್ಕು ಮತ್ತು ಮೆಣಸು’, ಮಗುವಿನ ಮನಸನ್ನು ದಮನಿಸುವ ಹಿರಿಯರ ಆಲೋಚನಾ ಕ್ರಮದ ಸಮಸ್ಯೆಯನ್ನು ಹೇಳಿದರೆ, ‘ಇದ್ದತ್’ ಮಗುವಿನ ಮುಗ್ಧತೆಗೆ ಸ್ಪಂದಿಸಲಾಗದ ಅಸಹಾಯಕತೆಯನ್ನು ಧಾರ್ಮಿಕ ಸಂಪ್ರದಾಯಗಳು ರೂಪಿಸಿರುವುದನ್ನು, ‘ಮಗುವಿನ ದೂರು’ ಎಲ್ಲವೂ ಸಹಜವೇ ಆಗಿರುವ ಪ್ರಕೃತಿ ಧರ್ಮದ ಮುಂದೆ ತೆರೆದುಕೊಳ್ಳುವ ಮಗುವಿನ ಮುಗ್ಧತೆಯನ್ನು ಹೇಳುತ್ತದೆ. ‘ಪತಿ-ಪತ್ನಿ’ಯಂತಹ ಕಥೆಗಳು ವೃದ್ಧಾಪ್ಯದಲ್ಲಿ ಪುರುಷನನ್ನು ಅಸಹಾಯಕತೆಗೆ ತಳ್ಳುವ ಪತ್ನಿಯ ಅಸ್ತಿತ್ವವಿಲ್ಲದ ಸ್ಥಿತಿಯನ್ನು ಹೇಳುತ್ತದೆ.

ಓದುಗರಿಗೆ ದೀರ್ಘ ಓದಿನ ಆಯಾಸವಿಲ್ಲ ಎನ್ನುವುದು ಕಥೆಗಳ ಗುಣಾತ್ಮಕ ಸಂಗತಿಯಾಗಿದೆ. ಇಲ್ಲಿನ ಕಥೆಗಳು ಸಣ್ಣ ಕಥೆಗಳ ಸಹಜ ಲಕ್ಷಣವಾದ ನಿರ್ದಿಷ್ಠ ಹೊಳಹನ್ನು ಹೇಳುತ್ತವೆ. 

ಲೇಖಕ ವೈಯಕ್ತಿಕವಾಗಿ ಏನೇ ಆಗಿದ್ದರೂ ಸಾಮಾಜಿಕವಾಗಿ ಆತನಿಗಿರುವ; ಸಮಾಜ ಸ್ವೀಕರಿಸುವ ಆತನ ‘ಸ್ಥಿತಿ’ಯು ಆತನ ಕೃತಿಯನ್ನು ಸಮಾಜವು ಬರಮಾಡಿಕೊಳ್ಳುವುದರಲ್ಲಿ ನಿರ್ಧಾರಕ ಅಂಶವಾಗಿರುತ್ತದೆ ಎಂಬ ನೆಲೆಯಲ್ಲಿ ಈ ಕೃತಿಯ ಇನ್ನೊಂದು ಮಗ್ಗುಲನ್ನು ನಾನು ಕಾಣಿಸಬೇಕಾಗುತ್ತದೆ. ನನಗೆ ತಿಳಿದ ಮಟ್ಟಿಗೆ ಕುಕ್ಕಿಲ ಅವರು ತಾನು ಮುಸ್ಲಿಂ ಅಲ್ಲ; ಜಾತ್ಯತೀತ ಎಂದು ಘೋಷಿಸಿಕೊಂಡವರಲ್ಲ. ಆದ್ದರಿಂದ ಅವರನ್ನು ಮುಸ್ಲಿಂ ಎಂದು ನಾನು ಪರಿಗಣಿಸಿದರೆ ತಪ್ಪಾಗುವುದಿಲ್ಲ. ಈ ಅಂಶ ಬಹು ಮಹತ್ವದ್ದು. ಯಾಕೆಂದರೆ ಹಿಂದೂ-ಮುಸ್ಲಿಮರ ಸಾವಿರಾರು ವರ್ಷಗಳ ದೀರ್ಘ ಸಾಂಗತ್ಯದ ಯಾನದಲ್ಲಿ ಜ್ಞಾನದ ರಚನೆಯಲ್ಲಿ ಮುಸ್ಲಿಂ ಸಂರಚನೆಗೂ, ಹಿಂದೂ ಸಂರಚನೆಗೂ ಯಾವುದೆ ಸಂಘರ್ಷವಿಲ್ಲ. ಬದಲು ಸಹವರ್ತಿತ್ವವೇ ಇದೆ. ಹಿಂದೂ ಜ್ಞಾನ ಸಂರಚನೆಯೊಂದಿಗೆ ಸಂಘರ್ಷ ಇರುವುದು ಎಡ ಪಂಥಕ್ಕೆ. ಮತ್ತು ಆ ಸಂಘರ್ಷದಿಂದಾಗಿಯೇ ಅದು ತನಗಿದ್ದ ಅನೇಕ ಸಾಧ್ಯತೆಗಳನ್ನು ಕಳೆದುಕೊಂಡಿದೆ.

(ಅರವಿಂದ ಚೊಕ್ಕಾಡಿ)

ಮಹಾತ್ಮಾ ಗಾಂಧಿ ಭೌತಿಕವಾಗಿ ಇಲ್ಲವಾಗುವ ತನಕ ಹಿಂದೂ ಜ್ಞಾನ ಸಂರಚನೆಗಳ ಮೇಲಿನ ಎಡಪಂಥೀಯ ದಾಳಿಯನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಸಮರ್ಥವಾಗಿ ತಡೆದು ನಿಲ್ಲಿಸಿತ್ತು. ಎಡಪಂಥೀಯ ಜಾತ್ಯತೀತ ತತ್ವವನ್ನು ಒಪ್ಪಿದ್ದರೂ ಆ ತತ್ವವು ಮುಸ್ಲಿಮರನ್ನೂ ವಿಮರ್ಶೆಗೆ ಒಳಪಡಿಸಿಕೊಂಡೇ ಎಲ್ಲರನ್ನೂ ಒಳಗೊಂಡ ಬೃಹತ್ ರಾಷ್ಟ್ರೀಯ ವ್ಯವಸ್ಥೆಯೊಂದರ ಪರಿಕಲ್ಪನೆ ಇದ್ದ ಪಂಡಿತ್ ಜವಾಹರ ಲಾಲ್ ನೆಹರೂ ಸ್ವರ್ಗಸ್ಥರಾಗುವ ತನಕ ಇದ್ದ ಧೋರಣೆಗಳು ನಂತರ ಉಳಿಯಲಿಲ್ಲ. ಜ್ಞಾನ ರಚನೆ ಮತ್ತು ನಿರೂಪಣೆಯನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಡಪಂಥಕ್ಕೆ ಬಿಟ್ಟು ಬಿಟ್ಟಿತು. ನಂತರ ಹಿಂದುತ್ವ ವಾದ ಎಮರ್ಜ್ ಆಗುವ ತನಕ ಹಿಂದೂ ಜ್ಞಾನ ರಚನೆಗಳ ಮೇಲಿನ ಎಡಪಂಥೀಯ ಅಸಹನೆಯನ್ನು ತಡೆಯುವ ಶಕ್ತಿ ಇರಲಿಲ್ಲ. ಇದರ ಅಪಾಯದ ಬಗ್ಗೆ ಅಂದೇ ಹಮೀದ್ ದಲವಾಯಿಯವರಂತಹ ಸಮಾಜವಾದಿ ಚಿಂತಕರು ಮುಸ್ಲಿಮರನ್ನು ಎಚ್ಚರಿಸಿದ್ದರು. ಎಸ್.ಕೆ. ಖರೀಮ್ ಖಾನ್ ಅವರಂತಹ ಹಿರಿಯರು ಜೀವನದ ಕೊನೆಯವರೆಗೂ ಎಡಪಂಥದೊಂದಿಗೆ ಗುರುತಿಸಲ್ಪಡದೆ ಗಾಂಧಿ ಅನುಯಾಯಿಯಾಗಿಯೇ ಉಳಿದರು.

ಏ.ಕೆ. ಕುಕ್ಕಿಲ ಅವರು ಖರೀಮ್ ಖಾನ್ ಅವರ ಕಾಲದವರಲ್ಲ. ಭೌತಿಕ ಗಾಂಧಿಯೊಂದಿಗೆ ಅವರಿಗೆ ಯಾವ ಒಡನಾಟವೂ ಇಲ್ಲ. ಆದರೂ ಎಡಪಂಥದೊಂದಿಗೆ ಗುರುತಿಸಿಕೊಳ್ಳುವ ಮುಸ್ಲಿಮರ ಸಾಮಾನ್ಯ ನಡೆಗಿಂತ ಭಿನ್ನವಾದ ಹೊರಳು ದಾರಿಯ ನಡಿಗೆಯನ್ನು ಈ ಕೃತಿಯ ಮುಖಾಂತರ ಇರಿಸಿದ್ದಾರೆ ಎನ್ನಲು, ‘ಇವತ್ತು ಬಾಂಗ್ ಕೊಡಲಿಲ್ಲ’ದಂತಹ ಕಥೆಗಳು ಇಲ್ಲಿ ಸಾಕ್ಷಿ ಒದಗಿಸಿವೆ. ಈ ಕೃತಿಯಲ್ಲಿ ಬರುವ ‘ಅತ್ಯುತ್ತಮ’ದಲ್ಲಿ ದೇವರನ್ನು ಕಾಣುವ ನಿಲುವುಗಳು ಇದಕ್ಕೆ ಸಾಕ್ಷಿಯಾಗಿವೆ. ‘ದೇವರ ನ್ಯಾಯ’ದಂತಹ ಕಥೆಗಳು ಮುಸ್ಲಿಮರನ್ನೂ ವಿಮರ್ಶಿಸಲು ತೊಡಗುತ್ತದೆ.

ಆದರೆ ‘ದೇವರ ನ್ಯಾಯ’ದಂತಹ ಕಥೆಗಳು ವಿಮರ್ಶೆಯ ಪರಿಭಾಷೆಯನ್ನೂ ಬದಲಿಸುತ್ತವೆ. ಸ್ಥಾಪಿತ ವಿಮರ್ಶಾ ಪದ್ಧತಿ ಟೀಕೆ ಮತ್ತು ಆಕ್ಷೇಪದ ವಿನ್ಯಾಸದ್ದು. ಕುಕ್ಕಿಲ ಅವರ ಕಥೆಗಳಲ್ಲಿ ಕಂಡು ಬರುವ ವಿಮರ್ಶೆ ಈ ಮಾದರಿಯದ್ದಲ್ಲ. ಅದು ‘ಮಿತ್ರ ಸಂಹಿತೆ’ಯ ಮಾದರಿಯದು. ವಿಮರ್ಶೆಯು ಬಹಳ ಕನ್ವಿನ್ಸಿಂಗ್ ಆಗಿ ಇರುವ ರೂಪದ್ದು.‌

ವರ್ತಮಾನದಲ್ಲಿ ಒಬ್ಬ ಮುಸ್ಲಿಂ ಲೇಖಕ ಈ ಮಾದರಿಯನ್ನು ಅನುಸರಿಸಬೇಕಾದರೆ ಆತನಲ್ಲಿ ಅಪಾರವಾದ ಸಂಯಮ, ಭಾಷೆಯ ಮೇಲೆ ಹಿಡಿತ, ಸಮುದಾಯಗಳ ಮನೋಭಾವನೆಗಳನ್ನು ಗ್ರಹಿಸುವ ಸೂಕ್ಷ್ಮತೆಗಳು ಇರಬೇಕಾಗುತ್ತವೆ. ಇವೆಲ್ಲವೂ ಕುಕ್ಕಿಲ ಅವರಿಗೆ ಇವೆ. ಆದ್ದರಿಂದಲೇ ಇಲ್ಲಿನ ಕಥೆಗಳು ಮಧುರ ಭಾವಗಳು, ಕೋಮಲ ಸ್ವಭಾವ ಮತ್ತು ಸ್ನಿಗ್ಧ ಸೌಂದರ್ಯದಿಂದ ಬಲು ಆಪ್ತವಾಗಿ ಬಂದಿವೆ. ಕಥೆಗಳ ಈ ಗುಣವು ‘ಮುಸ್ಲಿಂ ಲೇಖಕ’ ಎನ್ನುವಲ್ಲಿ ಇರುವ ‘ಮುಸ್ಲಿಂ’ ಅನ್ನು ತೆಗೆದು ‘ಲೇಖಕ’ ನಾಗಿ ಬೆಳೆದು ಸಾರ್ವತ್ರಿಕವಾಗಿ ವಿಸ್ತರಿಸಿಕೊಳ್ಳುವ ಸಾಧ್ಯತೆಗಳನ್ನು ಹೇಳುತ್ತವೆ.