ಆಸ್ಪತ್ರೆಗೆ ಬಂದ ಕೆಲವು ರೋಗಿಗಳ ಸಂಬಂಧಿಕರು ಮಾತ್ರ ಇಲ್ಲಿ ನಿಂತು ತಮ್ಮ ಕಡೆಯವರು ಬೇಗ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದರಾದರೂ ಶಿವ ಮಾತ್ರ ಕಿವುಡನಂತೆ ನಿಮೀಲನೇತ್ರನಾಗಿ ನಿಂತಿರುತ್ತಿದ್ದ. ಶಿವನನ್ನು ಸುತ್ತುವರಿದು ಬೆಳೆದಿದ್ದ ಹಸಿರ ಬಳ್ಳಿಗಳು ಆಗ ಶಿವನ ಹಿನ್ನಲೆಯ ಸೊಬಗನ್ನು ಇಮ್ಮಡಿಸಿದ್ದವು. ಈಗ ಅಲ್ಲಿ ಬಳ್ಳಿಯ ಬದಲು ಗೋಡೆಯ ದೇವಸ್ಥಾನ ತಲೆಯೆತ್ತಿದೆ. ಆಗಿನ ಹಸಿರ ವೈಭವವಿಲ್ಲದ ಶಿವ ಮತ್ತು ಅವನ ತಲೆಯ ಮೇಲಿನ ಗಂಗೆಯರು ಬಳಲಿದವರಂತೆ ಕಾಣುತ್ತಾರೆ. ಯಾರೋ ಕಲಾವಿದ ಶಿವನಿಗೆ ಪೊಲೀಸ್ ಮೀಸೆ ಮಾಡಿದ್ದು ಮಾತ್ರ ಆಗಿನಂತೆ ಈಗಲೂ ತಮಾಷೆಯಾಗಿ ಕಾಣುತ್ತದೆ.
ಡಾ. ಎಚ್.ಎಸ್. ಸತ್ಯನಾರಾಯಣ ಅವರ ಹೊಸ ಪ್ರಬಂಧ ಸಂಕಲನ “ಪನ್ನೇರಳೆ” ಯಿಂದ ಒಂದು ಬರಹ ನಿಮ್ಮ ಓದಿಗೆ

ನಮ್ಮ ಕುಟುಂಬಕ್ಕೆ ಅಪ್ಪನ ಕಾರಣಕ್ಕೆ ಪೋಸ್ಟಾಫೋಸಿನ ನಂಟಿದ್ದಿತಾದರೆ ಅಮ್ಮನ ಕಾರಣಕ್ಕೆ ಆಸ್ಪತ್ರೆಯ ಜೊತೆ ನಂಟಿತ್ತು. ಚಿಕ್ಕಮಗಳೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ನಮ್ಮಮ್ಮ ಆಯಾ ಆಗಿದ್ದರು. ನಮ್ಮ ಅಜ್ಜಿ ಕೂಡ ಇದೇ ಕೆಲಸದಲ್ಲಿದ್ದರು. ನಿವೃತ್ತರಾಗುವಾಗ ನಮ್ಮ ಅಜ್ಜಿಯ ಸಂಬಳ ನೂರೆಂಬತ್ತು ರೂಪಾಯಿ. ಸಾಯುವಾಗ ಅವರಿಗೆ ಬರುತ್ತಿದ್ದ ಪೆನ್ಷನ್ ಏಳೂವರೆ ಸಾವಿರ! ಐವತ್ತೈದಕ್ಕೆ ನಿವೃತ್ತಿಯಾದ ಅಜ್ಜಿ ಆಮೇಲೆ ನಲವತ್ತೇಳು ವರ್ಷ ಬದುಕಿದ್ದರು. “ಈ ಅಜ್ಜಿ ಆಸ್ಪತ್ರೆಯಲ್ಲಿ ದುಡಿದು ಸಂಬಳ ತಿಂದಿದ್ದಕ್ಕಿಂತ ಪೆನ್ಷನ್ ತಿಂದಿದ್ದೇ ಹೆಚ್ಚು” ಅಂತ ಮೊಮ್ಮಕ್ಕಳು ತಮಾಷೆ ಮಾಡಿದರೆ “ನಾನು ಬದುಕಿದ್ರೆ ನಿನ್ ಕಣ್ಣು ಕುಕ್ಕತ್ತಾ?” ಎಂದು ಅಜ್ಜಿ ಬಾಯಿ ಮುಚ್ಚಿಸೋರು.

(ಡಾ. ಎಚ್.ಎಸ್. ಸತ್ಯನಾರಾಯಣ)

ಅಜ್ಜಿ ಕೆಲಸಕ್ಕೆ ಹೋದ ನೆನಪು ನನ್ನಲ್ಲಿರುವುದು ಅಲ್ಪ ಮಾತ್ರ. ಅಮ್ಮನಿಗೆ ಬಹಳ ವರ್ಷಕಾಲ ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ತಿಂಡಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಹಾಗಾಗಿ ಪ್ರತಿನಿತ್ಯ ಆಸ್ಪತ್ರೆಯ ದರ್ಶನವಾಗುತ್ತಿತ್ತು. ಔಷಧಿಯ ವಾಸನೆ ನಮ್ಮ ಮೂಗಿಗೆ ಒಗ್ಗಿಹೋಗಿತ್ತು. ನಮಗೆಲ್ಲ ಅಮ್ಮ ಅಂದರೆ ಆಸ್ಪತ್ರೆಯ ವಾಸನೆಯ ಜೊತೆಗೇ ಆಕೆಯ ಮೈಯ ಪರಿಮಳ ಬೆರೆತು ಸೂಸುತ್ತಿತ್ತಾಗಿ ಆಸ್ಪತ್ರೆ ಮನೆಯ ವಿಸ್ತರಣೆಯಾಗಿ ಕಾಣುತ್ತಿತ್ತು. ಅಮ್ಮನ ದುಡಿಮೆ ಎಂದರೆ ಅದು ನಾಲ್ಕು ಮಕ್ಕಳ ಅನ್ನ ಮತ್ತು ವಿದ್ಯಾಭ್ಯಾಸದ ಶಕ್ತಿ. ನಾನು ಮೊದಲ ವರ್ಷದ ಎಂ.ಎ.ಗೆ ಸೇರುವ ತನಕ ಅಮ್ಮ ಕೆಲಸ ಮಾಡಿದರು. ಅಷ್ಟರಲ್ಲಿ ಅಣ್ಣನಿಗೆ, ಇಬ್ಬರು ಅಕ್ಕಂದಿರಿಗೆ ಸರ್ಕಾರಿ ಕೆಲಸ ದೊರೆತುದರಿಂದ ಮಕ್ಕಳ ಒತ್ತಾಸೆಯಂತೆ ಐದು ವರ್ಷ ಮೊದಲೇ ಸ್ವಯಂ ನಿವೃತ್ತಿ ಪಡೆದರು.

ಬೆಳಿಗ್ಗೆ ಏಳಕ್ಕೆ ಮನೆಯಿಂದ ಹೊರಟರೆ, ರಾತ್ರಿ ಏಳರವರೆಗೆ ಮೈಮುರಿಯುವ ದುಡಿತ. ಆಫ್ ಡ್ಯೂಟಿ, ಆನ್ ಡ್ಯೂಟಿ ಎಂಬ ಎರಡು ಬಗೆಯಿತ್ತು. ಮಧ್ಯಾಹ್ನ ಹನ್ನೊಂದಕ್ಕೆ ಮನೆಗೆ ಹೊರಟು ಒಂದುಗಂಟೆಗೆ ಮತ್ತೆ ಆಸ್ಪತ್ರೆ ಹೋಗಿ ಸಂಜೆ ಐದರ ತನಕ ಕೆಲಸ ಮಾಡುವುದು ಆಫ್ ಡ್ಯೂಟಿಯಾದರೆ, ಮಧ್ಯಾಹ್ನ ಒಂದಕ್ಕೆ ಮನೆಗೆ ಬಂದು ಮೂರಕ್ಕೆ ಹಿಂದಿರುಗಿ ರಾತ್ರಿ ಏಳುವರೆಗೆ ಮನೆಗೆ ಹೊರಡುವುದು ಆನ್ ಡ್ಯೂಟಿ. ಒಂದು ದಿನ ಆಫ್ ಡ್ಯೂಟಿ, ಅದರ ಮರುದಿನ ಆನ್ ಡ್ಯೂಟಿ ಇರುತ್ತಿತ್ತು. ನಾವೆಲ್ಲ ತುಂಬ ಚಿಕ್ಕವರಿದ್ದಾಗ ಅಮ್ಮ ಬೆಳಿಗ್ಗೆ ಎದ್ದು ಏನೋ ಒಂದು ತಿಂಡಿ ಮಾಡಿಟ್ಟು, ಬುತ್ತಿ ಕಟ್ಟಿಕೊಂಡು ಏಳಕ್ಕೆ ಮನೆ ಬಿಡುತ್ತಿದ್ದರು. ತಡವಾದರೆ ಹಾಜರಿ ತೆಗೆದುಕೊಳ್ಳುತ್ತಿದ್ದ ಮೇಟ್ರನ್ ಎಂಬ ಹೆಸರಿನ ಹೆಡ್ ನರ್ಸ್ ಅವರಿಂದ ಬೈಗುಳದ ಸುರಿಮಳೆ. ಹಾಜರಾತಿಗೆ ಸೇರಿದವರೆಲ್ಲ ಎದುರಲ್ಲೇ ಕಿರುಚಾಡಿ ಅವಮಾನಿಸುತ್ತಾರೆಂಬ ಕಾರಣಕ್ಕೆ ಅಮ್ಮ ತಿಂಡಿಯ ಕಡೆ ಅಷ್ಟಾಗಿ ಗಮನ ಕೊಡುತ್ತಿರಲಿಲ್ಲ. ಅಕಸ್ಮಾತ್ ಐದು ನಿಮಿಷ ತಡವಾದ ಕಾರಣಕ್ಕೆ ಬೈಸಿಕೊಂಡರೆ ಆ ದಿನವೆಲ್ಲ ಅಮ್ಮನ ಮುಖ ಸಪ್ಪಗಿರುತ್ತಿತ್ತು. ಮೇಲಿನವರಿಗೆ ತಿರುಗಿ ಬೈದರೆ ಬದುಕುವುದುಂಟೆ? ಬಡವನ ಕೋಪ ದವಡೆಗೆ ಮೂಲ ಎಂಬಂತೆ ಬೈದವರನ್ನು ತೀರಾ ಕಷ್ಟದ ಕೆಲಸವಿರುವ ವಾರ್ಡ್‌ಗಳಿಗೆ ಹಾಕಿ ಮೇಟ್ರನ್ ಗೋಳು ಹೊಯ್ದುಕೊಳ್ಳುತ್ತಿದ್ದರು. ಆಕೆ ಆಯಾಗಳನ್ನು ವಾರ್ಡ್ ಬಾಯ್ಗಳನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡು ಕೆಲಸ ಮಾಡಿಸಲು ಕೋಪ ಮತ್ತು ಕಾಠಿಣ್ಯತೆಯನ್ನು ತೋರಿಸಲೇಬೇಕಾಗಿತ್ತು. ಆದರೆ ಚಿಕ್ಕವನಾದ ನನಗೆ ಅದು ಅರ್ಥವಾಗದೆ, ‘ನಮ್ಮಮ್ಮನ್ನೇ ಬೈತಾಳೆ ದೆವ್ವ’ ಅಂತ ಶಾಪ ಹಾಕುತ್ತಿದ್ದೆ. ಬೈಸಿಕೊಂಡಾಗ ಅಮ್ಮ ಆ ದುಃಖ-ಸಿಟ್ಟನ್ನು ಊಟ ತಿಂಡಿ ಬಿಡುವ ಮೂಲಕ ಹೊರಹಾಕುತ್ತಿದ್ದರು. ಇದು ಮನೆಯಲ್ಲಿ ಎಲ್ಲರಿಗೂ ಸಂಕಟ ತರುತ್ತಿತ್ತು.

ಯಾವಾಗಲಾದರೂ ಜ್ವರ ಬಂದೋ, ಹೊಟ್ಟೆ ನೋವು ಬಂದೋ ಅಮ್ಮನಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದಿದ್ದಾಗ ರಜೆ ಹೇಳಿ ಬಾ ಅಂತ ನನ್ನನ್ನು ಕಳಿಸುತ್ತಿದ್ದರು. ನನಗೋ ಆ ಮೇಟ್ರನ್ ಮುಖ ನೋಡಿದರೆ ಭಯ. ಒಂದೆರಡು ಸಲ ಆಕೆ ಹಾಜರಿ ತೆಗೆದುಕೊಳ್ಳುತ್ತಿದ್ದಲ್ಲಿಗೆ ಹೋಗಿ “ಅಮ್ಮನಿಗೆ ಹುಷಾರಿಲ್ಲ, ಅದಕ್ಕೆ….” ಅಂತ ವಾಕ್ಯ ಪೂರ್ತಿ ಮಾಡುವುದರೊಳಗೆ ಕಿರುಚಾಡಿಬಿಟ್ಟಿದ್ದರು. ನಾನು ಆಕೆ ಒಪ್ಪುವ ತನಕ ಸುಮ್ಮನೆ ಒಂದು ಮೂಲೆಯಲ್ಲಿ ನಿಂತಿರುತ್ತಿದ್ದೆ. ಆಕೆ ಅರ್ಧಗಂಟೆ ಕಾಯಿಸಿ, ಆಮೇಲೆ “ಆಯ್ತು ಹೋಗು” ಎನ್ನುತ್ತಿದ್ದರು. ಆಗೆಲ್ಲ ನನಗೆ ನಮ್ಮ ತಾಯಿ ಮೈಮುರಿದು ಚಾಕರಿ ಮಾಡುವುದರ ಜೊತೆಗೆ ಎಷ್ಟು ಅವಮಾನ ಸಹಿಸಿಕೊಂಡಿರುತ್ತಾರಪ್ಪಾ ಎಂದು ಸಂಕಟವಾಗುತ್ತಿತ್ತು. ಆಮೇಲೆ ನಾನು ರಜೆ ಹೇಳಬೇಕಾದ ಸಂದರ್ಭ ಬಂದರೆ ಆಕೆಯ ಮನೆ ಹತ್ತಿರ ಹೋಗಿ ಹೇಳಿಬರುವ ಉಪಾಯ ಕಂಡುಕೊಂಡೆ. ಬೆಳಿಗ್ಗೆ ಆಕೆ ಆಸ್ಪತ್ರೆಗೆ ಹೊರಡುವ ಮುನ್ನ ಅವರ ಮನೆ ಬಾಗಿಲು ಬಡಿಯುವುದು, ಆಕೆ ಅವಸರದಲ್ಲಿರುತ್ತಿದ್ದರಾಗಿ, ಅಲ್ಲಿ ಅಷ್ಟಾಗಿ ಎಗರಾಡುತ್ತಿರಲಿಲ್ಲ. ಆದರೂ ಒಂದು ಸಲ ನನ್ನ ಮುಖ ನೋಡುತ್ತಲೇ “ಏನಂತೆ ನಿಮ್ಮಮ್ಮಂಗೆ ದೊಡ್ ರೋಗ?” ಎಂದು ಒರಟಾಗಿ ಕೇಳಿದರು. ಮೊದಲೇ ಅಮ್ಮನಿಗೆ ತುಂಬ ಖಾಯಿಲೆಯಾಗಿ ಮನೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಗಾಯದ ಮೇಲೆ ಬರೆ ಎಳೆದಂತೆ ಆಕೆ ಒರಟಾಗಿ ಮಾತಾಡಿದ್ದೇ ತಡ ನಾನು ಜೋರಾಗಿ ಅತ್ತುಬಿಟ್ಟೆ. ಆಮೇಲೆ ಅದೇನೆನ್ನಿಸಿತೋ “ಆಯ್ತು ಹೋಗು” ಎಂದರು. ಆ ದಿನವೇ ನಮ್ಮ ತಾಯಿಗೆ ಅಂಪೆಂಡಿಸೈಟಿಸ್ ಆಪರೇಷನ್ ಆಯ್ತು. ಸಂಜೆ ಅಲ್ಲಿಗೆ ಬಂದ ಮೇಟ್ರನ್ ಅಮ್ಮನಿಗೆ ಸಾಂತ್ವನ ಹೇಳಿ, ಸಮಾಧಾನದಿಂದ ಮಾತಾಡಿಸಿ ಹೋದರು. ಬೆಳಿಗ್ಗೆ ಹೊತ್ತು ಈಯಮ್ಮ ಅದ್ಯಾಕ್ ಹಂಗೆ ನರ ಹರ್ಕೊತಾಳೋ ಅಂತ ಅಚ್ಚರಿ ನನಗೆ. ನಮ್ಮ ತಾಯಿಯ ತರದ ನೂರಾರು ಜನರ ಕೈಲಿ ಕೆಲಸ ಮಾಡಿಸಿ, ಮೇಲ್ವಿಚಾರಣೆ ಮಾಡುವ ಆಕೆಯ ಕಷ್ಟಗಳು, ಸವಾಲುಗಳ ಕಾರಣಕ್ಕೆ ಹಾಗಾಡುತ್ತಿದ್ದರೇನೋ. ಆಗ ಅದೆಲ್ಲ ಅರ್ಥವಾಗುವ ವಯಸ್ಸು ನನ್ನದಾಗಿರಲಿಲ್ಲ.

ಯಾರಿಂದಲೂ ಒಂದು ಮಾತು ಅನ್ನಿಸಿಕೊಳ್ಳಬಾರದೆಂಬ ಛಲಗಾತಿ ನಮ್ಮಮ್ಮ ಅನಾರೋಗ್ಯ ಸಂದರ್ಭ ಬಿಟ್ಟರೆ ಬಾಕಿ ಉಳಿದ ದಿನಗಳಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದರು. ಅಮ್ಮನ ಕೆಲಸ ಮೆಚ್ಚಿದ ಅನೇಕ ಡಾಕ್ಟರುಗಳು ಇವರನ್ನು ಒ. ಟಿ.ಗೆ ಹಾಕಿ ಎಂದು ಕೇಳಿ ಹಾಕಿಸಿಕೊಳ್ಳುತ್ತಿದ್ದರು. ಒ.ಟಿ. ಎಂದರೆ ಆಪರೇಷನ್ ಥಿಯೇಟರ್. ಅದ್ಯಾಕೆ ಅದನ್ನು ಥಿಯೇಟರ್ ಎಂದು ಕರೆಯುತ್ತಿದ್ದರೋ ಕಾಣೆ. ನಮಗೆಲ್ಲ ಥಿಯೇಟರ್ ಅಂದರೆ ಚಿತ್ರಮಂದಿರ ಮಾತ್ರ! ಸಾಮಾನ್ಯವಾಗಿ ಆಪರೇಷನ್ ಥಿಯೇಟರಿನಲ್ಲಿ ಕೆಲಸ ಮಾಡುವ ಆಯಾಗಳು ಕ್ಲೀನಾಗಿರಬೇಕು ಮತ್ತು ಚುರುಕಾಗಿರಬೇಕು. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರು ಕೇಳಿದ್ದನ್ನು ಎತ್ತಿ ಕೈಲಿಡಬೇಕು. ರೋಗಿಗಳ ಪ್ರಾಣಕ್ಕೆ ಸಂಬಂಧಿಸಿದ ಸೂಕ್ಷ್ಮ ವಾತಾವರಣದಲ್ಲಿ ಎಚ್ಚರಿಕೆಯಿಂದ ಕೆಲಸ ಮಾಡುವುದು ಸುಲಭದ ಮಾತಲ್ಲ. ಅಮ್ಮ ಉಳಿದ ಆಯಾಗಳಂತೆ ಎಲೆಯಡಿಕೆ ಮೆಲ್ಲುತ್ತಿರಲಿಲ್ಲ ಮತ್ತು ತುಂಬ ಚುರುಕಾಗಿ ಕೆಲಸ ಮಾಡುತ್ತಿದ್ದರೆಂದು ಹೆಚ್ಚಾಗಿ ಒ.ಟಿ.ಯಲ್ಲೇ ಇರುತ್ತಿದ್ದರು. ಆಪರೇಷನ್ ಮುಗಿದಾಕ್ಷಣ ಹೊರಬಂದ ಕೆಲವು ಡಾಕ್ಟರುಗಳು ಹೊಟೇಲಿನಿಂದ ಕಾಫಿ, ತಿಂಡಿ ತರಿಸಿ, ನರ್ಸ್‌ಗಳಿಗೆ, ಆಯಾಗಳಿಗೆ ಕೊಟ್ಟು, ಅವರ ಜೊತೆ ತಾವೂ ತಿನ್ನುತ್ತಿದ್ದರು. ಕೆಲವೊಮ್ಮೆ ಅಮ್ಮ ಹಾಗೆ ತರಿಸಿದ ವಡೆಯನ್ನೋ ದೋಸೆಯನ್ನೋ ಎತ್ತಿಟ್ಟುಕೊಂಡು ನನಗೆ ತಂದು ತಿನ್ನಿಸುತ್ತಿದ್ದರು.

ಅಮ್ಮನಿಗೆ ಬಹಳ ವರ್ಷಕಾಲ ಬೆಳಗ್ಗೆ ಶಾಲೆಗೆ ಹೋಗುವ ಮುನ್ನ ತಿಂಡಿ ತೆಗೆದುಕೊಂಡು ಹೋಗಿ ಕೊಡುತ್ತಿದ್ದೆ. ಹಾಗಾಗಿ ಪ್ರತಿನಿತ್ಯ ಆಸ್ಪತ್ರೆಯ ದರ್ಶನವಾಗುತ್ತಿತ್ತು. ಔಷಧಿಯ ವಾಸನೆ ನಮ್ಮ ಮೂಗಿಗೆ ಒಗ್ಗಿಹೋಗಿತ್ತು. ನಮಗೆಲ್ಲ ಅಮ್ಮ ಅಂದರೆ ಆಸ್ಪತ್ರೆಯ ವಾಸನೆಯ ಜೊತೆಗೇ ಆಕೆಯ ಮೈಯ ಪರಿಮಳ ಬೆರೆತು ಸೂಸುತ್ತಿತ್ತಾಗಿ ಆಸ್ಪತ್ರೆ ಮನೆಯ ವಿಸ್ತರಣೆಯಾಗಿ ಕಾಣುತ್ತಿತ್ತು.

ಆಯುಧ ಪೂಜೆ ಬಂದರೆ ಒ.ಟಿ.ಗೆ ಬಿಡುವು. ಹಿಂದಿನ ದಿನವೇ ಆಪರೇಷನ್ ಮಾಡುವ ಕತ್ತರಿಯಿಂದ ಶುರುವಾಗಿ ನಾನಾ ನಮೂನೆಯ ಆಯುಧಗಳನ್ನು ಜೋಡಿಸಿ, ಮಧ್ಯದಲ್ಲಿ ದೇವರ ಫೋಟೋಗಳನ್ನಿಟ್ಟು ಅಲಂಕಾರ ಮಾಡುತ್ತಿದ್ದರು. ಎಲ್ಲ ವಾರ್ಡುಗಳಲ್ಲೂ ಅಲ್ಲಲ್ಲಿ ಕೆಲಸ ಮಾಡುವವರು ಹಣ ಒಟ್ಟುಮಾಡಿ ಬಣ್ಣ ಬಣ್ಣದ ಪೇಪರ್ ತಂದು ಅಂಟಿಸಿ, ಪೂಜೆಗೆ ಅಣಿ ಮಾಡುತ್ತಿದ್ದರು. ನಾನು ಅನೇಕ ಸಲ ಅಮ್ಮನ ಜೊತೆ ಒ.ಟಿ.ಯ ಅಲಂಕಾರಕ್ಕೆ ಕೈ ಜೋಡಿಸುತ್ತಿದ್ದೆ. ಒ.ಟಿ.ಯೊಳಗೆ ಹೋದರೆ ಅವತ್ತು ಮಾತ್ರ ಯಾರೂ ಬೈಯುತ್ತಿರಲಿಲ್ಲ. ಆಪರೇಷನ್ ಥಿಯೇಟರ್ ಎಂಬುದೇ ಒಂದು ಲೋಕ. ಎಷ್ಟು ಶುಚಿ, ಎಂಥೆಂಥ ಸಲಕರಣೆಗಳು! ಅಲ್ಲಿಯೂ ನನ್ನ ಚೇಷ್ಟೆಗೆ ಕೊನೆಯಿರುತ್ತಿರಲಿಲ್ಲ. ಆಕ್ಸಿಜನ್ ಕೊಡುವ ಪೈಪನ್ನು ಬಾಯಿಗಿಟ್ಟುಕೊಂಡು ಉಫ್ ಉಫ್ ಎಂದು ಊದುವುದು, ಎಷ್ಟು ಊದಿದರೂ ಅದರ ಕಪ್ಪು ಚೆಂಡು ದುಂಡಾಗುತ್ತಿರಲಿಲ್ಲ. ಊದಿದೊಡನೆ ದಪ್ಪಗಾಗುತ್ತಿದ್ದ ಅದು ಬಾಯಿ ತೆಗೆದೊಡನೆ ಟುಸ್ ಎನ್ನುತ್ತಿತ್ತು. ಆಮೇಲೆ ದ್ರವರೂಪದ ಲೋಕಲ್ ಅನಸ್ತೇಸಿಯ ಬಾಟಲಿ ತಗೊಂಡು ಕೈಮೇಲೆ ಸುರಿದುಕೊಳ್ಳುವುದು. ಕ್ಷಣ ಮಾತ್ರದಲ್ಲಿ ಇಂಗಿ ಹೋಗುತ್ತಿದ್ದ ಅದು ಒಂಥರಾ ಮಜಾ ಕೊಡುತ್ತಿತ್ತು. ಆಪರೇಷನ್ ಬ್ಲೇಡುಗಳನ್ನು ಕದ್ದು ಜೇಬಿಗಿಳಿಸಿಕೊಳ್ಳುವುದು ಒಂದೆರಡಲ್ಲ ನನ್ನ ಮಂಗಾಟಗಳು. ಇವೆಲ್ಲ ಅಮ್ಮನ ಕಣ್ಣಿಗೆ ಬೀಳದಂತೆ ಮಾಡುತ್ತಿದ್ದ ಕೆಲಸಗಳು. ಪೂಜೆಯ ದಿನ ಎಲ್ಲ ವಾರ್ಡುಗಳಿಗೂ ಹೋಗಿ ಅವರು ಕೊಡುವ ಸ್ವೀಟ್ ಮತ್ತು ಕಡಲೆಪುರಿಯನ್ನು ಸಂಗ್ರಹಿಸಿ ತರುವುದು ಖುಷಿಯ ಕೆಲಸ.

ಆ ಆಸ್ಪತ್ರೆಯ ಮುಖ್ಯ ಕಟ್ಟಡದ ಎದಿರಿನ ಪುಟ್ಟ ತೋಟದಲ್ಲಿ ಶಿವನ ವಿಗ್ರಹವೊಂದಿತ್ತು. ವ್ಯೋಮಕೇಶನಾದ ಶಿವನ ಶಿರದಲ್ಲಿ ನಿಂತ ಗಂಗೆಯಿಂದ ನೀರು ಸುರಿಯುತ್ತಿರುವಂತೆ ಏರ್ಪಾಟು ಮಾಡಿದ್ದರು. ಆ ನೀರು ಶಿವ ನಿಂತಿದ್ದ ಕೊಳಕ್ಕೆ ಬೀಳುತ್ತಿತ್ತು. ಶಿವನ ಕುತ್ತಿಗೆಯನ್ನಾವರಿಸಿದ್ದ ಹಳದಿ ಬಣ್ಣದ ನಾಗರಹಾವು ನಿಜವಾದ ಹಾವಿನಂತೆ ಕಾಣುತ್ತಿತ್ತು. ಶಿವರಾತ್ರಿಗಳಲ್ಲಿ ಈ ಶಿವನಿಗೆ ಪೂಜೆ ಮಾಡಿದ್ದು ಬಿಟ್ಟರೆ ಉಳಿದ ದಿನಗಳಲ್ಲಿ ಯಾರೂ ಶಿವನ ಸುದ್ದಿಗೆ ಬರುತ್ತಿರಲಿಲ್ಲ. ಆಸ್ಪತ್ರೆಗೆ ಬಂದ ಕೆಲವು ರೋಗಿಗಳ ಸಂಬಂಧಿಕರು ಮಾತ್ರ ಇಲ್ಲಿ ನಿಂತು ತಮ್ಮ ಕಡೆಯವರು ಬೇಗ ಗುಣಮುಖರಾಗಲೆಂದು ಪ್ರಾರ್ಥನೆ ಸಲ್ಲಿಸುತ್ತಿದ್ದರಾದರೂ ಶಿವ ಮಾತ್ರ ಕಿವುಡನಂತೆ ನಿಮೀಲನೇತ್ರನಾಗಿ ನಿಂತಿರುತ್ತಿದ್ದ. ಶಿವನನ್ನು ಸುತ್ತುವರಿದು ಬೆಳೆದಿದ್ದ ಹಸಿರ ಬಳ್ಳಿಗಳು ಆಗ ಶಿವನ ಹಿನ್ನಲೆಯ ಸೊಬಗನ್ನು ಇಮ್ಮಡಿಸಿದ್ದವು. ಈಗ ಅಲ್ಲಿ ಬಳ್ಳಿಯ ಬದಲು ಗೋಡೆಯ ದೇವಸ್ಥಾನ ತಲೆಯೆತ್ತಿದೆ. ಆಗಿನ ಹಸಿರ ವೈಭವವಿಲ್ಲದ ಶಿವ ಮತ್ತು ಅವನ ತಲೆಯ ಮೇಲಿನ ಗಂಗೆಯರು ಬಳಲಿದವರಂತೆ ಕಾಣುತ್ತಾರೆ. ಯಾರೋ ಕಲಾವಿದ ಶಿವನಿಗೆ ಪೊಲೀಸ್ ಮೀಸೆ ಮಾಡಿದ್ದು ಮಾತ್ರ ಆಗಿನಂತೆ ಈಗಲೂ ತಮಾಷೆಯಾಗಿ ಕಾಣುತ್ತದೆ.

ಕೆಲವು ದಿನ ಅಮ್ಮ ಮನೆಗೆ ಬರುವುದು ತಡವಾದರೆ, ನಾನು ಓದುವುದನ್ನು ತಪ್ಪಿಸಿಕೊಳ್ಳಲು “ಅಮ್ಮ ಒಂದೇ ಬರುತ್ತೆ. ಜೊತೆಗೆ ಬರಲು ಹೋಗ್ತೀನಿ” ಅಂತ ಆಸ್ಪತ್ರೆಗೆ ಓಡಿಬಿಡುತ್ತಿದ್ದೆ. ಸಾಮಾನ್ಯವಾಗಿ ಆಪರೇಷನ್ ಮುಗಿಯುವುದು ತಡವಾದಾಗ ಇಂಥ ಸಂದರ್ಭ ಬರುತ್ತಿತ್ತು. ಆಪರೇಷನ್ ಥಿಯೇಟರ್ ಒಳಗಡೆ ಒಂದು ಗಂಭೀರ ವಾತಾವರಣ ಸೃಷ್ಟಿಯಾಗಿದ್ದರೆ ಹೊರಗಡೆ ಅಂತದ್ದೇ ಮತ್ತೊಂದು ವಾತಾವರಣ ನಿರ್ಮಾಣವಾಗಿರುತ್ತಿತ್ತು. ಶಸ್ತ್ರಚಿಕಿತ್ಸೆಗೊಳಪಟ್ಟವರ ಕುಟುಂಬದವರು ಚಿಂತಾಕ್ರಾಂತರಾಗಿ ಉಸಿರು ಕೈಲಿ ಹಿಡಿದು ನಿಂತಿರುತ್ತಿದ್ದರು. ಕೆಲವರು ಚಡಪಡಿಸುತ್ತಿದ್ದರಾದರೆ, ಇನ್ನು ಕೆಲವರು ಅಳುತ್ತಾ, ದೇವರ ಮೇಲೆ ಭಾರಹಾಕಿ ನಿಂತಿರುತ್ತಿದ್ದರು. ಒಂದು ಮೂಲೆಯಲ್ಲಿ ನಿಂತ ನಾನು ಅವರೆಲ್ಲರ ಮುಖಭಾವವನ್ನು ಅವಲೋಕಿಸುತ್ತಿದ್ದೆ. ಕೆಲವರು ಅಳುತ್ತಿರುವುದನ್ನು ನೋಡಿ ತುಂಬ ಸಂಕಟವಾಗುತ್ತಿತ್ತು. ಅವರ ದುಃಖ ಕಡಿಮೆಯಾಗಲೆಂದು ನಾನೂ ದೇವರಲ್ಲಿ ಬೇಡಿಕೊಳ್ಳುತ್ತಿದ್ದೆ. ಅಮ್ಮ ಮೊದಲು ಬಾಗಿಲು ತೆಗೆದು ಹೊರ ಬಂದವರೆ, “ಆಪರೇಷನ್ ಮುಗೀತು, ಇನ್ನೇನು ತೊಂದ್ರೆಯಿಲ್ಲ. ಇನ್ನು ಸ್ವಲ್ಪ ಹೊತ್ತಿಗೆ ವಾರ್ಡಿಗೆ ಶಿಫ್ಟ್ ಮಾಡ್ತೀವಿ” ಎಂದು ಕಾಯುತ್ತಿದ್ದವರಿಗೆ ಹೇಳಿ ಹೋದೊಡನೆ ಅವರ ಮುಖ ಅರಳುತ್ತಿತ್ತು. ಆಗೆಲ್ಲ ನರ್ಸಿಂಗ್ ಹೋಂಗಳಂಥ ಖಾಸಗಿ ಆಸ್ಪತ್ರೆಗಳ ಹಾವಳಿ ಅಷ್ಟಾಗಿರದ ಕಾರಣ ಎಲ್ಲ ವರ್ಗದವರೂ ಸರ್ಕಾರಿ ಆಸ್ಪತ್ರೆಗಳಿಗೆ ಬರುತ್ತಿದ್ದರು. ಶ್ರೀಮಂತರಾದರೆ ಆಪರೇಷನ್ ಮುಗಿದೊಡನೇ ಅವರೇ ಎಲ್ಲರಿಗೂ ಕಾಫಿ, ತಿಂಡಿ ತರಿಸುತ್ತಿದ್ದರು. ಇಲ್ಲವೇ ಡಾಕ್ಟರುಗಳೇ ತರಿಸುತ್ತಿದ್ದರು. ಅಮ್ಮನ ಕೆಲಸ ಮುಗಿದ ಮೇಲೆ ಅವರೆಲ್ಲ ತರಿಸಿಕೊಟ್ಟ ತಿಂಡಿಯನ್ನು ರಸ್ತೆಯಲ್ಲಿ ತಿನ್ನುತ್ತ ಮನೆಗೆ ಬರುತ್ತಿದ್ದೆ.

ಒಮ್ಮ ಅಮ್ಮ ಲೇಬರ್ ವಾರ್ಡಿನಲ್ಲಿ ಕೆಲಸ ಮಾಡುತ್ತಿದ್ದಾಗಲೂ ಕರೆದುಕೊಂಡು ಬರಲು ಹೋಗಿದ್ದೆ. ಗರ್ಭಿಣಿಯೊಬ್ಬರಿಗೆ ಅರೆಬರೆ ಹೊಟ್ಟೆ ನೋವು ಬಂದು ಒದ್ದಾಡುತ್ತಿದ್ದರು. ದೊಡ್ಡ ನೋವು ಬರದೆ ಹೆರಿಗೆಯಾಗುವಂತಿರಲಿಲ್ಲ. ವಿನಾ ಕಾರಣ ಸಿಸೇರಿಯನ್ ಮಾಡುವ ಕಾಲ ಅದಲ್ಲ. ಸಹಜ ಹೆರಿಗೆಗಾಗಿ ಕಾಯುತ್ತಿದ್ದರು. ತುಂಬ ಕಷ್ಟಕರವೆನಿಸಿದರೆ ಮಾತ್ರ ಆಪರೇಷನ್ ಮಾಡಲು ನಿರ್ಧರಿಸುತ್ತಿದ್ದರು. ಆ ಹೆಂಗಸಿಗೂ ಸಹಜ ಹೆರಿಗೆನೋವು ಬರಲೆಂದು ಕಾಯುತ್ತಿದ್ದಾಗ ಆಕೆ ನಮ್ಮ ತಾಯಿಯ ಕಿವಿಯಲ್ಲಿ “ನಂಗೆ ಕಬ್ಬಿನಹಾಲು ಕುಡಿಬೇಕು ಅಂತ ಆಸೆಯಾಗ್ತಿದೆ” ಎಂದು ತಮ್ಮ ಗರ್ಭಿಣಿ ಬಯಕೆಯನ್ನು ನಿವೇದಿಸಿಕೊಂಡರಂತೆ. ಹೆರಿಗೆ ವಾರ್ಡಿನಿಂದ ಹೊರಬಂದ ಅಮ್ಮ ಆಕೆಯ ಕಡೆಯವರಿಗೆ ಆ ಬಯಕೆಯ ವಿಚಾರ ತಿಳಿಸಿದರು. ಆದರೆ ಅಲ್ಲಿದುದು ವಯಸ್ಸಾದ ಅಜ್ಜ ಅಜ್ಜಿ ಮಾತ್ರ. ತಕ್ಷಣ ನಮ್ಮ ತಾಯಿ ನನ್ನನ್ನು “ಬಸ್ ಸ್ಟಾಂಡಿನ ಹತ್ರ ಹೋಗಿ ಕಬ್ಬಿನಹಾಲು ಇರುತ್ತೆ, ತಗಂಡು ಬಾ” ಎಂದು ಓಡಿಸಿದರು. ರಾತ್ರಿ ಎಂಟುಗಟೆಯ ಸಮಯವಾದ್ದರಿಂದ ಎಲ್ಲೂ ಕಬ್ಬಿನಹಾಲು ಸಿಗಲಿಲ್ಲ. ಅರ್ಧಗಂಟೆ ಕಳೆದು ನಾನು ಹಿಂದಿರುಗಿ ಬರುವಷ್ಟರಲ್ಲಿ ಹೆರಿಗೆಯಾಗಿ ಹೋಗಿತ್ತು! ಆ ದಿನ ಮನೆಗೆ ಹಿಂದಿರುಗುವಾಗ ಅಮ್ಮ ಹೇಳಿದರು; “ನೀನು ಕಬ್ಬಿನಹಾಲು ಹುಡುಕ್ಕಂಡ್ ಹೋದೋನು ಎಷ್ಟೋತ್ತಾದ್ರೂ ಬರ್ಲೇ ಇಲ್ಲ ಅದುಕ್ಕೆ ನಾನು ತಣ್ಣಗಾದ ಕಾಫಿಗೆ ನೀರುಹೊಯ್ದು, ಕವ್ಬಿನಹಾಲು ಕುಡಿ ಅಂತ ಕುಡುಸ್ದೆ, ಸುಲಭವಾಗಿ, ಸುಖವಾಗಿ ಹೆರಿಗೆಯಾಯ್ತು.” “ಪಾಪ ಅವರಿಗೆ ಸುಳ್ಳು ಹೇಳಿದೆಯಾ?” ಅಂದರೆ, “ಒಳ್ಳೆಯದಾಗಬೇಕಾದಾಗ ಸುಳ್ಳಾಡುವುದು ಪಾಪವಲ್ಲ” ಅಂತ ಬಾಯಿ ಮುಚ್ಚಿಸಿದರು. ಯಾರೋ ಏನೋ ಗೊತ್ತಿಲ್ಲ, ಎಲ್ಲ ರೋಗಿಗಳೂ ನಮಗೆ ಒಂದೇ ಎಂಬ ಅಮ್ಮನ ನಡುವಳಿಕೆ ಬಗ್ಗೆ ತುಂಬ ಗೌರವ ಮೂಡಿತು.

ಆಸ್ಪತ್ರೆಯಲ್ಲಿ ರಾತ್ರಿ ಪಾಖಿಯ ಕೆಲಸವೆಂದರೆ ರಾತ್ರಿ ಏಳೂವರೆಯಿಂದ ಬೆಳಿಗ್ಗೆ ಏಳೂವರೆಯವರೆಗೆ. ರಾತ್ರಿಯೆಲ್ಲ ಕೆಲಸ ಮಾಡಿ, ಹಗಲು ಮನೆಗೆಲಸಗಳ ಉಸ್ತುವಾರಿ ನೋಡಿ, ಮಧ್ಯಾಹ್ನದ ಮೇಲೆ ಸ್ವಲ್ಪ ಹೊತ್ತು ನಿದ್ದೆ ಮಾಡುತ್ತಿದ್ದರು. ಕೆಲವೊಂದು ವಾರ್ಡುಗಳ ರಾತ್ರಿಪಾಳಿಯಲ್ಲಿ ರಾತ್ರಿ ಹನ್ನೊಂದರ ನಂತರ ಮಲಗಲು ಅವಕಾಶ ದೊರೆಯುತ್ತಿತ್ತು. ಆದರೆ ಎಮರ್ಜೆನ್ಸಿ ವಾರ್ಡುಗಳಲ್ಲಿ ರಾತ್ರಿ ಪೂರ ಕೆಲಸವಿರುತ್ತಿತ್ತು. ರಾತ್ರಿಹೊತ್ತು ಬರುತ್ತಿದ್ದ ಕೇಸುಗಳು ಹೊಡೆದಾಟ, ಆಕ್ಸಿಡೆಂಟ್, ಆತ್ಮಹತ್ಯೆ, ಬೆಂಕಿ ಆಕಸ್ಮಿಕ ಇಂಥವೇ. ಹಾಗಾಗಿ ನಿದ್ರಿಸಲು ಸಮಯ ಸಿಗುತ್ತಿರಲಿಲ್ಲ. ಮನೆಗೆ ಬರುವಷ್ಟರಲ್ಲಿ ಮುಖ ಕಂಗೆಟ್ಟಿರುತ್ತಿತ್ತು. ಒಂದು ರಾತ್ರಿ ಜಗಳಾಡಿಕೊಳ್ಳಬೇಡಿ, ಓದಿಕೊಳ್ಳಿ ಎಂದು ಹೇಳಿ ಎಮರ್ಜೆನ್ಸಿ ವಾರ್ಡ್ ಡ್ಯೂಟಿಗೆ ಹೋದವರು, ಬೆಳಿಗ್ಗೆ ಮನೆಗೆ ಬಂದಾಗ ಮುಖ, ಕಣ್ಣು ಊದಿಹೋಗಿತ್ತು. ಯಾಕಮ್ಮ ಮುಖ ಹೀಗಿದೆ ಅಂತ ನಮ್ಮ ಅಕ್ಕ ಕೇಳಿದ್ದೇ ತಡ ಜೋರಾಗಿ ಅತ್ತುಬಿಟ್ಟರು. ಅಮ್ಮ ಅಳುವುದನ್ನು ನೋಡಿ ವಿಚಾರ ತಿಳಿಯದಿದ್ದರೂ ಅಕ್ಕನಿಗೂ ಅಳು ಬಂದು ಅವಳೂ ಅಳತೊಡಗಿದಳು. ನಾವೆಲ್ಲ ಇನ್ನೂ ಹಾಸಿಗೆ ಬಿಟ್ಟು ಎದ್ದಿರಲಿಲ್ಲ. ಅವರ ಅಳು ಕೇಳಿ ಗಾಬರಿಯಿಂದ ಎದ್ದು ಕುಳಿತೆವು. ಅಳು ನಿಲ್ಲಿಸಿದ ಮೇಲೆ ತಿಳಿದ ಕಾರಣವೆಂದರೆ ರಾತ್ರಿ ಬೆಂಕಿ ಆಕಸ್ಮಿಕದಲ್ಲಿ ಮೈಯೆಲ್ಲ ಸುಟ್ಟುಕೊಂಡ ಗಂಡ ಹೆಂಡತಿಯರನ್ನು ಆಸ್ಪತ್ರೆಗೆ ಕರೆ ತಂದಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ತಾಯಿ ಅಸು ನೀಗಿದ ಐದು ನಿಮಿಷಗಳಲ್ಲೇ ತಂದೆ ಕೈ ಮುಗಿದು “ಹೋಗಿ ಬರುತ್ತೇನೆ, ನನ್ನ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳಿ” ಎಂದು ಜೋರಾಗಿ ಹೇಳುತ್ತಾ ಪ್ರಾಣ ಬಿಟ್ಟ. ಅವರ ಎರಡು ಚಿಕ್ಕಮಕ್ಕಳ ಗೋಳು, ಬಂಧುಬಳಗದವರ ಗೋಳಿನಿಂದ ಇಡೀ ಆಸ್ಪತ್ರೆಯಲ್ಲಿ ಶೋಕ ಮಡುಗಟ್ಟಿತ್ತು. ಅಮ್ಮ ಮನೆಗೆ ಬಂದ ಮೇಲೂ ತಂದೆ ತಾಯಿಯರನ್ನು ಒಟ್ಟಿಗೆ ಕಳೆದುಕೊಂಡ ಆ ಅನಾಥ ಮಕ್ಕಳನ್ನು ನೆನೆದು ಅಳುತ್ತಿದ್ದರು. ನಾಲ್ಕುಮಕ್ಕಳನ್ನು ಸಾಕಲು ಬವಣೆ ಪಡುತ್ತಿದ್ದ ಆಕೆಗೆ ಆ ಮಕ್ಕಳ ಅಳು ಮತ್ತು ಆ ಇಬ್ಬರ ಸಾಲು ಎದೆಗೆಡಿಸಿರಬಹುದು.” ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲಸ ಮಾಡೋವಾಗ ಸ್ವಲ್ಪ ಗಟ್ಟಿಮನಸ್ಸಿರಬೇಕು, ಇಷ್ಟು ಸೂಕ್ಷ್ಮವಾದರೆ ಹೇಗೆ?” ಎಂದು ಅಕ್ಕಪಕ್ಕದವರು ಬಂದು ಅಮ್ಮನನ್ನು ಸಮಾಧಾನ ಪಡಿಸಿದರು.

ಅಮ್ಮನ ಆಸ್ಪತ್ರೆಯ ಡಾಕ್ಟರುಗಳು, ನರ್ಸುಗಳು, ಅಮ್ಮನಂತೆ ಇದ್ದ ಆಯಾಗಳು ಎಷ್ಟು ಪ್ರೀತಿ ತೋರುತ್ತಿದ್ದರು. ನಮಗೆ ಅಥವಾ ನಮ್ಮ ನೆಂಟರಲ್ಲಿ ಯಾರಿಗಾದರೂ ಹುಷಾರಿಲ್ಲದಿದ್ದರೆ ಅಮ್ಮನ ಹೆಸರು ಹೇಳಿ ಬೇಗ ತೋರಿಸಿಕೊಂಡು ಬಂದುಬಿಡುತ್ತಿದ್ದೆವು. ನಮ್ಮ ಮನೆಯಲ್ಲೂ ಟಿಂಚರು, ಹತ್ತಿ, ಜ್ವರದ ಮಾತ್ರೆಗಳು ಸದಾ ತುಂಬಿರುತ್ತಿದ್ದವು. ಆಸ್ಪತ್ರೆಯ ಹತ್ತಿಯ ಜೊತೆ, ನಮ್ಮ ಮನೆಯ ಹಿತ್ತಲಲ್ಲೂ ಹತ್ತಿಯ ಗಿಡವಿತ್ತಾಗಿ ಬೀದಿಯಲ್ಲಿ ಯಾರಿಗೆ ಹತ್ತಿ ಬೇಕಿದ್ದರೂ ನಾನು ಸರಬರಾಜು ಮಾಡುತ್ತಿದ್ದೆ. ಅಮ್ಮನಿಗೆ ಆಪರೇಷನ್ ಆಗಿ ಆಸ್ಪತ್ರೆಯಲ್ಲಿ ಮಲಗಿರುವಾಗ ರಾತ್ರಿಹೊತ್ತು ನಾನೂ ಅಲ್ಲೇ ಮಲಗುತ್ತಿದ್ದೆ. ಅದೆಷ್ಟುಬಾರಿ ಆಸ್ಪತ್ರೆಯಲ್ಲಿ ಮಲಗಿರುವೆನೋ ಲೆಕ್ಕವೇ ಇಲ್ಲ. ನೆಂಟರಿರಲಿ, ಮನೆಯವರಿರಲಿ ಯಾರೂ ಆಸ್ಪತ್ರೆಯ ಒಳರೋಗಿಗಳಾದರೂ ರಾತ್ರಿ ಕಾಯುವ ಕೆಲಸ ನನ್ನದು. ಬೆಳಗಿನ ಜಾವ ಆರರಿಂದ ಏಳರೊಳಗೆ ಬಿಸಿಬಿಸಿಯಾದ ಕಾಫಿ ಮತ್ತು ಬ್ರೆಡ್ ಕೊಡುತ್ತಿದ್ದರು. ಆಹಾ! ಅದೆಷ್ಟು ರುಚಿಯಾಗಿರುತ್ತಿತ್ತು. ಆಗೆಲ್ಲ ರೋಗಿಗಳಿಗೆ ಊಟ ಬೇಡವೆಂದರೆ ಗುಣಮಟ್ಟದ ಬ್ರೆಡ್ ಮತ್ತು ಹಾಲು ಕೊಡುತ್ತಿದ್ದರು. ಸರದಿ ಪ್ರಕಾರ ನಿಂತು ತಳ್ಳುಗಾಡಿಯಲ್ಲಿ ವಿತರಿಸುತ್ತಿದ್ದ ಹಾಲು-ಬ್ರೆಡ್ ಪಡೆಯುವುದು, ಅದನ್ನು ರೋಗಿಗೆ ತಿನ್ನಿಸುವುದು, ಅವರು ತಿನ್ನದಿದ್ದರೆ ನಾವೇ ತಿನ್ನುವುದು ಎಷ್ಟು ಚೆನ್ನಾಗಿತ್ತು ಆ ದಿನಗಳು. ಅವರು ಕೊಡುತ್ತಿದ್ದ ಊಟ ಕೂಡ ಬಲುರುಚಿಯಾಗಿರುತ್ತಿತ್ತು. ಹಲಸಂಡೆ ಕಾಳಿನ ಸಾರಿನ ರುಚಿ ಈಗ ತಿಂದಂತಿದೆ. ಆಸ್ಪತ್ರೆಯ ಅಡುಗೆಮನೆಯಲ್ಲಿ ಕೆಲಸ ಮಾಡುವವರು ಅಮ್ಮನ ಜೊತೆಗಾರರಾದ್ದರಿಂದ ಕೆಲವೊಮ್ಮೆ ಅಲ್ಲಿಗೇ ಹೋಗಿ ಉಂಡುಬರುತ್ತಿದ್ದೆ. ಗಟ್ಟಿ ಕೆನೆಮೊಸರಿನ ಊಟ ಮರೆಯುವಂತಿಲ್ಲ. ಈಗಲೂ ಒಮ್ಮೆ ಹೋಗಿ ಊಟ ಮಾಡಿ ಬರಬೇಕೆಂಬ ಬಯಕೆ ಕಾಡುತ್ತಿರುತ್ತದೆ. ಒಂದಿಬ್ಬರ ಬಳಿ ಈ ಆಸೆಯ ಬಗ್ಗೆ ಹೇಳಿದಾಗ ನಕ್ಕುಬಿಟ್ಟರು. ಆ ಊಟವನ್ನು ತಿಂದಿದ್ದರೆ ಹೀಗಾಡುತ್ತಿರಲಿಲ್ಲವೆಂಬ ಅಭಿಪ್ರಾಯ ನನ್ನದು.

ಕಳೆದ ವರ್ಷ ಕೊರೊನಾ ಬಂದಾಗ ಎಂಟು ದಿನ ಅದೇ ಆಸ್ಪತ್ರೆಯಲ್ಲಿ ಮಲಗಿದ್ದೆ. ಆಗಲೂ ನೀಟಾಗಿ ಪ್ಯಾಕ್ ಮಾಡಿದ್ದ ಡಬ್ಬಿಗಳಲ್ಲಿ ಊಟ ವಿತರಿಸಿದರಾದರೂ ಕಾಯಿಲೆಯ ಬಾಯಿಗೆ ಅದೊಂದೂ ರುಚಿಸಲೇ ಇಲ್ಲ. ರಾಗಿ ಅಂಬಲಿ ಕುಡಿದು ಕಾಲ ಹಾಕಿದೆ. ಅಲ್ಲಿ ಕೆಲಸ ಮಾಡುವವರು ಮಾತ್ರ ಬಹಳ ಕಾಳಜಿ ಮಾಡಿದರು. ಖಾಸಗಿ ಆಸ್ಪತ್ರೆಗೆ ಹೋಗಿದ್ದರೆ ಲಕ್ಷಾಂತರ ರೂಪಾಯಿಗಳನ್ನು ಕಳೆಯಬೇಕಿತ್ತು. ನಾನಿದ್ದ ಎಂಟು ದಿನಗಳಲ್ಲಿ ನೂರು ರೂಪಾಯಿ ಕೂಡ ಖರ್ಚಾಗಲಿಲ್ಲ! ಮನೆಗೆ ಹಿಂದಿರುಗುವಾಗ ಮಾತ್ರ ಡಾಕ್ಟರ್ ಬರೆದು ಕೊಟ್ಟ ವಿಟಮಿನ್ ಮತ್ತಿತರ ಮಾತ್ರೆಗಳಿಗಾಗಿ ಒಟ್ಟು ಆರುನೂರು ಖರ್ಚಾಯಿತು ಅಷ್ಟೇ. ಡಾಕ್ಟರರಿಂದ ಹಿಡಿದು ನರ್ಸ್, ಆಯಾಗಳವರೆಗೂ ಬಹಳ ಪ್ರೀತಿಯಿಂದ ಕಂಡರು. ಎಲ್ಲರಿಗೂ ಕೈಮುಗಿದು ಬಂದೆ. ನಮ್ಮ ಅಜ್ಜಿ, ಅಮ್ಮ ಕೆಲಸ ಮಾಡಿದ ಆಸ್ಪತ್ರೆ ಎಂಬ ಮಮಕಾರವನ್ನು ಬದಿಗಿಟ್ಟು ನೋಡಿದರೂ ಸರ್ಕಾರಿ ಆಸ್ಪತ್ರೆಗಳಲ್ಲಿ ಚೆನ್ನಾಗಿಯೇ ನೋಡಿಕೊಳ್ಳುತ್ತಾರೆ. ಶೌಚಾಲಯದ ಕೊಳಕು ಮುಂತಾದ ಕೆಲವು ತೊಂದರೆಗಳನ್ನು ಸಹಿಸಿಕೊಂಡೆವಾದರೆ ಖಂಡಿತ ಕಡಿಮೆ ಖರ್ಚಿನಲ್ಲಿ ಒಳ್ಳೆಯ ಚಿಕಿತ್ಸೆಯನ್ನು ಪಡೆಯಬಹುದು. ಕೊರೊನಾ ಬಂದಾಗ ನನಗೆ ಎರಡು ಸಲ ಎಕ್ಸರೆ ಮಾಡಿದ್ದರು. ಲಂಗ್ಸ್ ಇನ್ಫೆಕ್ಷನ್ ಆಗಿದೆಯೆಂದು ಎರಡು ಬಾರಿ ಸ್ಕ್ಯಾನಿಂಗ್ ಕೂಡ ಮಾಡಿದ್ದರು. ಯಾವುದಕ್ಕೂ ಒಂದು ರೂಪಾಯಿ ಕಟ್ಟಿಸಿಕೊಳ್ಳಲಿಲ್ಲ. ಹೋಗಿ ಪರಿಶೀಲಿಸದೆ ಸರ್ಕಾರಿ ಆಸ್ಪತ್ರೆಯನ್ನು ಬೈದುಕೊಂಡರೆ ನಮಗೇ ನಷ್ಟ!

(ಕೃತಿ: ಪನ್ನೇರಳೆ (ಪ್ರಬಂಧಗಳ ಸಂಕಲನ), ಲೇಖಕರು: ಡಾ. ಎಚ್.ಎಸ್.‌ ಸತ್ಯನಾರಾಯಣ, ಪ್ರಕಾಶಕರು:, ಬೆಲೆ: )