ಮತ್ತೆ ಮಳೆಗಾಲ ಶುರುವಾಯಿತೇನೋ ಎಂಬ ಹಾಗೆ ಬಿಟ್ಟೂಬಿಡದೆ ಗುಡುಗು ಮಳೆ ಸುರಿಯುತ್ತಿರಲು, ಜನರೆಲ್ಲ ತಂತಮ್ಮ ಕೃಷಿ, ವ್ಯಾಪಾರ, ವಹಿವಾಟಿನ ಬಗೆಗೇ ಚಿಂತಿಸುತ್ತಿರುವಾಗ ಒಂದು ರಾತ್ರಿಯ ಸಿಡಿಲಿನ ಅಬ್ಬರಕ್ಕೆ ಏಳೆಂಟು ಕರೆಂಟು ಕಂಬಗಳು ನೆಲಹಿಡಿದು ಮಲಗಿದವು. ಅದರ ರಿಪೇರಿಗೆ ೨-೩ ದಿನ ಹಿಡಿದು ಜನರೆಲ್ಲ ಕರೆಂಟಿಲ್ಲದೆ, ವಾರ್ತೆಯಿಲ್ಲದೇ, ಧಾರಾವಾಹಿಯಿಲ್ಲದೇ, ಕೊನೆಗೆ ಫೋನೂ ದಿನಪೂರ್ತಿ ಕೆಲಸ ಮಾಡದೇ ಅಹಹಾ ಎನ್ನುತ್ತಿರುವಾಗ ಬಂದೇ ಬಿಟ್ಟಿತು ಬಾಬರಿ ಮಸೀದಿ-ರಾಮಮಂದಿರ ವಿವಾದಕ್ಕೆ ಕೋರ್ಟು ನಿಗದಿಪಡಿಸಿದ ತೀರ್ಪಿನ ದಿನ! ಎಲ್ಲವೂ ಎಲ್ಲೆಡೆಯೂ ಬಂದ್ ಆಗಿರುವುದಂತೆ ಎಂಬ ಸುದ್ದಿಗೇ ಜನರೆಲ್ಲ ಸ್ವಘೋಷಿತ ಕರ್ಫ್ಯೂ ವಿಧಿಸಿಕೊಂಡ ಹಾಗೆ ಮನೆಯಲ್ಲೇ ಕುಳಿತಿದ್ದರು. ನಡುಮಧ್ಯಾಹ್ನದ ಸೂರ್ಯ ಮೋಡದೊಳಗಿದ್ದೇ ಎಲ್ಲರೂ ಬೆವರು ಸುರಿಸುವಂತೆ ಮಾಡುತ್ತಿದ್ದರೆ, ಗಾಳಿ ಕೂಡಾ ಸ್ತಬ್ಧವಾಗಿ ಅಯೋಧ್ಯೆಯ ತೀರ್ಪು ಆಲಿಸಲು ಉತ್ಸುಕವಾದಂತೆ ಬೀಸದೇ ಇತ್ತು. ವಾಹನ ಸಂಚಾರವೂ ಕಮ್ಮಿಯಾಗಿ ಸಣ್ಣ ಪುಟ್ಟ ಊರುಗಳೂ ಬಿಕೋ ಎನ್ನತೊಡಗಿದ್ದವು.

‘ಎಂತಕ್ಕೆ ಅಮಾ ಈ ಸ್ಟ್ರೈಕು? ನೀವು ಇರ‍್ತೀರೋ ಇಲ್ವೋ?’ ಎಂದು ಕೇಳಿದವರೇ ಬಹಳ ಜನ. ಅಂತೂ ಇರುವೆನೆಂದು ಗಟ್ಟಿಮಾಡಿಕೊಂಡು ಒಬ್ಬೊಬ್ಬರೇ ಜಮಾಯಿಸಿದ ಪೇಶೆಂಟುಗಳೂ, ನಾನೂ ಒಮ್ಮೆಲೇ ಬೆಚ್ಚಿ ಬೀಳುವಂತೆ ಮಾಡಿದ್ದು ಧಡಾಕಿಯ ಸದ್ದು. ಗಂಟೆ ಸಂಜೆಯ ೪.೩೦. ಒಮ್ಮೆ ಸಿಡಿದ ಹತ್ತಾರು ಪಟಾಕಿಗಳು ತೀರ್ಪು ಹೇಗಿರಬಹುದೆಂಬ ಸೂಚನೆಯನ್ನು ನೀಡಿದವು.

ನಂತರ ಬಾಯಿಪಟಾಕಿಯದ್ದೇ ಚಟಪಟ..

‘ರಾಮನ ಮೂರ್ತಿ ತೆಗೀಬಾರ್ದು ಅಂದಿದಾರಂತೆ.’
‘ಅದು ಪೂರ್ತಿ ಸಾಯೇಬರಿಗೆ ಸೇರಿದ್ದಲ್ಲ ಅಂತಲೂ ಹೇಳಿದೆಯಂತೆ.’
‘ಇಡೀ ಜಾಗನ ಮೂರು ಪಾಲು ಮಾಡಿ ಕೊಟ್ಟಿದಾರಂತೆ. ಸಾಯೇಬರಿಗೂ ಅದರಲ್ಲಿ ಒಂದು ಪಾಲಂತೆ. ಅಂತೂ ಕೋರ್ಟು ಚಲೋ ಪಾಲು ಪಂಚಾತ್ಗೆ ಮಾಡಿದೆ ಅಂದಂಗಾಯ್ತು.’
‘ಅದು ಎಲ್ಲದೆ ಅಮಾ ಅದು ಅಯೋದ್ಯೆ ಅಂದ್ರೆ? ನಾವು ತಿರ್ಪತಿಗೆ, ಧರ್ಮಸ್ಥಳಕೆ, ಕಾಶಿಗೆ, ರಾಮೇಶ್ವರಕೆ ಹೋಗಿದ್ನ ಕೇಳಿದ್ವಿ. ಆದ್ರೆ ಅಯೋದ್ಯೆಗೆ ಹೋಬಂದೆ ಅಂತ ಯಾರ್ ಹೇಳಿದ್ದೂ ಕೇಳ್ಳಿಲ್ಲಪಾ..’
ಹೀಗೆ ವಿವಿಧ ವಿಶ್ಲೇಷಣೆ ಕಾಮೆಂಟುಗಳು ಪೇಶೆಂಟುಗಳ ಬಾಯಿಂದ ಹರಿದುಬರತೊಡಗಿದ ಸಮಯದಲ್ಲಿ ಅಧಿಕೃತ ಮಾಹಿತಿಗಾಗಿ ದೂರದೂರಿನ ಅಣ್ಣನ ಮಾತನ್ನೇ ನಂಬಬೇಕಾಯಿತು.

**

ನ್ಯಾಯಕ್ಕೆ ಕಣ್ಣಿಲ್ಲ, ನ್ಯಾಯದೇವತೆ ಕುರುಡಿ ಎನ್ನಲಾಗುತ್ತದೆ. ಆದರೆ ನ್ಯಾಯಾಧೀಶರಿಗೆ ಕಣ್ಣು, ಕಿವಿ, ಜೀವ, ಮನಸ್ಸು ಎಲ್ಲ ಇದೆ ಎಂದು ನಿನ್ನೆಯ ಬಾಬರಿ ಮಸೀದಿ ತೀರ್ಪು ಸಾಬೀತುಪಡಿಸಿದೆ.

ಮನುಷ್ಯನ ಮನಸ್ಸು ಮತ್ತು ಧರ್ಮಕ್ಕೆ ಸಂಬಂಧಿಸಿದ ವ್ಯವಹಾರಗಳ ಬಗೆಗೆ ನಿರ್ಧರಿಸುವುದು ೨+೨=೪ ಎಂಬಷ್ಟು ಗಣಿತ ಸರಳವಲ್ಲ. ಈ ವಿಷಯವನ್ನು ಗಮನದಲ್ಲಿಟ್ಟುಕೊಂಡರೆ ನ್ಯಾಯಾಲಯದ ತೀರ್ಪು ಸಮಾಧಾನಕರ ಎನ್ನಬಹುದು. ಬಹುಪಾಲು ಜನರು ಮತ್ತೆಲ್ಲಿ ಇನ್ನೊಂದು ಹಿಂಸಾಕಾಂಡ ಶುರುವಾಗಿ ದೇಶವೇ ಹೊತ್ತುರಿಯುವಂತಾಗಿ ಸುರಕ್ಷಿತ ಭಾರತ ಎಂಬ ನಮ್ಮ ಹೆಮ್ಮೆ ಕರಗಿಹೋಗುವುದೇನೋ ಎಂಬ ಭೀತಿಯಲ್ಲಿದ್ದಾಗ ಕೋರ್ಟು ಅಂತಹದಕ್ಕೆ ಅವಕಾಶ ಸಿಗದಂತಹ ತೀರ್ಪನ್ನು ನೀಡಿದೆ. ಇದು ಯಾರಿಗೂ ಸಂಪೂರ್ಣ ವಿಜಯವನ್ನೂ ನೀಡಿಲ್ಲ, ಹಾಗೇ ಪೂರ್ತಿ ಯಾರ ಸೋಲೂ ಅಲ್ಲ. ಎರಡೂ ಕಡೆಯವರಿಗೆ ಭಾಗಶಃ ಗೆಲುವು ಮತ್ತು ಸೋಲು ದೊರಕಿರುವುದರಿಂದ ವಿಜಯೋತ್ಸವಕ್ಕಾಗಲೀ, ಹಿಂಸಾತ್ಮಕ ಪ್ರತಿಭಟನೆಗಾಗಲೀ ಅವಕಾಶವಿಲ್ಲ. ಎಲ್ಲರೂ ವಾಸ್ತವವನ್ನು ಅರಿತು ಹೊಂದಿಕೊಂಡು ಬಾಳಲು ಕೋರ್ಟು ನೀಡಿರುವ ತೀರ್ಪು ಇದು ಎಂದೇ ಭಾವಿಸಬಹುದು.

ಆ ಜಾಗವು ಸರ್ಕಾರದ ಸುಪರ್ದಿಯಲ್ಲಿರಲಿ ಎಂದು ಕೋರ್ಟು ಸೂಚನೆ ನೀಡಬಹುದೇನೋ ಎಂಬುದು ಕೆಲ ಪ್ರಜ್ಞಾವಂತರ ಊಹೆಯಾಗಿತ್ತು. ಆದರೆ ಅಣ್ಣ ತಮ್ಮಂದಿರು ಯಾವುದನ್ನೋ ತನ್ನದೆಂದು ಹಕ್ಕಿಗಾಗಿ ಪ್ರಶ್ನಿಸುತ್ತಿರುವಾಗ ‘ಅದು ನಿಮ್ಮಿಬ್ಬರದೂ ಅಲ್ಲ, ನನ್ನ ಆಸ್ತಿ’ ಎಂದು ಕೋರ್ಟು ಹೇಳಲು ಬರುವುದೇ? ಕಾನೂನು ಪ್ರಕಾರ ಇದು ಸರಿಯಾದ ತೀರ್ಪು ಹೌದೋ ಅಲ್ಲವೋ ಗೊತ್ತಿಲ್ಲ. ಆದರೆ ಭವಿಷ್ಯದ ಭಾರತವನ್ನು ದೃಷ್ಟಿಯಲ್ಲಿಟ್ಟುಕೊಂಡರೆ ಎರಡು ಕೋಮಿನವರಿಗೂ ಒಳ್ಳೆಯ ತೀರ್ಪೇ ಆಗಿದೆ ಎನ್ನಬಹುದು. ವಾದಿ ಪ್ರತಿವಾದಿಗಳ ನಡುವಿನ ದ್ವೇಷ ದುಪ್ಪಟ್ಟಾಗದಂತೆ, ತೀರ್ಪಿನ ನೆವದಲ್ಲಿ ರೊಚ್ಚು ಕಿಚ್ಚಾಗಿ ದೇಶ ಹೊತ್ತುರಿಯದಂತೆ ತುಂಬ ಯೋಚಿಸಿಯೇ ಕೋರ್ಟು ತೀರ್ಪು ನೀಡಿದೆ ಎಂದು ಹೇಳಬಹುದು. ಬುದ್ಧ ಹೇಳಿದ ಮಾತು ನೆನಪಾಗುತ್ತಿದೆ: ‘ಪ್ರೀತಿಯೊಂದೇ ಸಾಲದು. ನಮಗೆ ಬೇಕಾದದ್ದು ಮೈತ್ರಿ. ಮೈತ್ರಿ ಪ್ರೀತಿಗಿಂತ ಹೆಚ್ಚು ವಿಸ್ತಾರವಾದದ್ದು. ಅದು ಮನುಷ್ಯನೊಂದಿಗಷ್ಟೇ ಅಲ್ಲ, ಸಕಲ ಜೀವರಾಶಿಗಳ ದುಃಖಕ್ಕೂ ಸ್ಪಂದಿಸುವಂಥಾದ್ದು.’

ಚರಿತ್ರೆಯನ್ನು ಅರಿಯುವುದು ಅತಿ ಅಗತ್ಯ- ಆದರೆ ಅದು ಚಾರಿತ್ರಿಕ ತಪ್ಪುಗಳನ್ನು ಹುಡುಕಿ ತಪ್ಪಿತಸ್ಥರನ್ನು ಶಿಕ್ಷಿಸುವ ಸಲುವಾಗಿ ಅಲ್ಲ, ಬದಲಾಗಿ ಮತ್ತವೇ ತಪ್ಪುಗಳು ಪುನರಾವರ್ತನೆಯಾಗದಿರಲಿ ಎಂದು. ಇದು ಈಗ ಸಾಮಾನ್ಯ ಮನುಷ್ಯನಿಗೂ ಅರಿವಾಗಿದೆ ಎಂಬುದಕ್ಕೆ ಈ ತೀರ್ಪಿಗೆ ನಮ್ಮ ಜನ ನಡೆದುಕೊಂಡಿದ್ದೇ ಸಾಕ್ಷಿ. ಕರಾವಳಿ ಎಂದರೆ ಕೋಮುವಾದಿಗಳ ನೆಲೆ, ಕೋಮುಗಲಭೆ ನಡೆಯುವ ಸ್ಥಳ ಎಂದು ಮಾಧ್ಯಮಗಳು ಬಿಂಬಿಸಿಬಿಟ್ಟಿವೆ. ಅದಕ್ಕೆ ವ್ಯತಿರಿಕ್ತವಾಗಿ ಕರಾವಳಿಯ ಪಟ್ಟಣಗಳು ಶಾಂತವಾಗಿ ಈ ಸನ್ನಿವೇಶ ನಿಭಾಯಿಸಿದವು. ದಶಕಗಳ ಕೆಳಗೆ ತಿಂಗಳುಗಟ್ಟಲೇ ಕೋಮುಗಲಭೆ, ತದನಂತರದ ಕರ್ಫ್ಯೂನಿಂದ ನಲುಗಿದ್ದ ಭಟ್ಕಳ ಪಟ್ಟಣವು ತುಂಬ ಸೂಕ್ಷ್ಮ ಪ್ರದೇಶವೆಂದು ಜಿಲ್ಲೆಯ ಆಡಳಿತ ಹಾಗೂ ಪೋಲೀಸ್ ಸೇವೆಯ ವರಿಷ್ಠರೆಲ್ಲ ಅಲ್ಲೇ ಠಿಕಾಣಿ ಹೂಡಿದ್ದರು. ಅಂದು ಬೆಳಗಿನಿಂದ ಸಂಜೆಯವರೆಗೆ ಎರಡೂ ಕೋಮಿನ ಮುಖಂಡರು ಒಟ್ಟಿಗೇ ಹಲವು ತಂಡಗಳಲ್ಲಿ ಭಟ್ಕಳದ ಹಾದಿಬೀದಿಗಳನ್ನು ಕಾಲ್ನಡಿಗೆಯಲ್ಲೇ ಸುತ್ತಿ ಸುಮ್ಮನೇ ಭಯಬೀಳಬಾರದೆಂದೂ, ತೀರ್ಪಿನ ಬಗ್ಗೆ ಗೌರವ, ವಿಶ್ವಾಸ ಹೊಂದಬೇಕೆಂದೂ ಜನರ ಜೊತೆ ಮಾತಾಡುತ್ತಾ ಸಾಗಿದ್ದು ನಮ್ಮ ನಡುವೆ ಗಾಂಧಿ ಮತ್ತೆ ಹುಟ್ಟಿಬರುತ್ತಿದ್ದಾರೆಂಬುದನ್ನು ಸಾಬೀತುಪಡಿಸುವಂತಿತ್ತು. ಈಗ ಕೋಮುಗಲಭೆಗಳು ಹುಟ್ಟಿಸುವ ಅನಿಶ್ಚಿತತೆ, ಪ್ರಾಣಹಾನಿ, ಅಪನಂಬಿಕೆ ಯಾರಿಗೂ ಬೇಕಾಗಿಲ್ಲ. ಇದು ತಿಳಿದ ಜನತೆ ಸೌಹಾರ್ದಕ್ಕಾಗಿ ಪ್ರಯತ್ನಿಸಿದ್ದು ಮಾತ್ರ ಮನದುಂಬುವಂತೆ ಮಾಡಿತು.

‘ವಸ್ತುಗಳಿಗೆ ಮಿತಿಮೀರಿ ಬೆಲೆ ಕಟ್ಟಿದರೆ ಜನ ಕದಿಯತೊಡಗುತ್ತಾರೆ’ ಎನ್ನುತ್ತದೆ ತಾವೋ. ಧಾರ್ಮಿಕ ಸ್ಥಳಗಳಿಗೆ, ಅದರ ಪ್ರತೀಕಗಳಿಗೆ ಧರ್ಮಕ್ಕಿಂತ ಹೆಚ್ಚಿನ ಬೆಲೆ ಕೊಡುತ್ತಿದ್ದೇವೆಯೇ ನಾವು? ನಮ್ಮ ವಿವಾದಗಳ ಒಂದು ಮೂಲ ಅದೂ ಇರಬಹುದೇ ಎಂದೆಲ್ಲ ಅನಿಸುತ್ತಿರುವಾಗಲೇ, ಸದ್ಯದಲ್ಲೇ ಶುರುವಾಗುವ ಕಾಮನ್ ವೆಲ್ತ್ ಕ್ರೀಡಾಕೂಟ, ಉರಿಯುತ್ತಿರುವ ಕಾಶ್ಮೀರ, ಮಧ್ಯಮವರ್ಗದ ಮನಸ್ಸುಗಳೂ ಮೂಲಭೂತವಾದದತ್ತ ಒಲವು ತೋರತೊಡಗಿರುವ ಪ್ರಸ್ತುತ ಸನ್ನಿವೇಶದಲ್ಲಿ ನ್ಯಾಯಾಲಯದ ತೀರ್ಪು ದೇಶದ ನ್ಯಾಯವ್ಯವಸ್ಥೆಯ ಮೇಲೆ ಗೌರವ ಇಮ್ಮಡಿಸುವಂತೆ ಮಾಡಿದೆ ಎನ್ನಬಹುದು.