ಶಾಲೆಯೆಂಬುದು ಕಲಿಕೆಯ ತಾಣ. ಆದರೆ ಅದು ಕೇವಲ ಮಕ್ಕಳಿಗಷ್ಟೇ ಕಲಿಕೆಯ ತಾಣವಲ್ಲ. ದೊಡ್ಡವರೂ ಕಲಿಯುವ  ಎಷ್ಟೊ ಪಾಠಗಳು ಅಲ್ಲಿವೆ. ಆ ಪಾಠಗಳೋ, ತರಗತಿಯೊಳಗೆ, ಕರಿ ಬೋರ್ಡುಗಳಲ್ಲಿ ಬರೆದ ಅಕ್ಷರಗಳಲ್ಲಷ್ಟೇ ಅಡಗಿಲ್ಲ.  ಕುತೂಹಲ ಮತ್ತು ನಿಷ್ಕಲ್ಮಶ ನೋಟದಲ್ಲಿ ಜಗತ್ತನ್ನು ನೋಡುವ ಮಕ್ಕಳ ಕಣ್ಣುಗಳಲ್ಲಿಯೂ ಅಡಗಿದೆ ಎಂದು ನಂಬಿದವರು ಗಣಿತ ಅಧ್ಯಾಪಕ ಅರವಿಂದ ಕುಡ್ಲ. ತಾನು ನಿಸ‍ರ್ಗದ ನಿರಂತರ ವಿದ್ಯಾರ್ಥಿ ಎಂದು ನಂಬಿದ ಅವರು,  ತಮ್ಮ ಅನುಭವಗಳ ಡೈರಿಯಿಂದ ಕೆಲವು ವಿಚಾರಗಳನ್ನು ಹೆಕ್ಕಿ ಕೆಂಡಸಂಪಿಗೆಯಲ್ಲಿ ಬರೆಯಲಿದ್ದಾರೆ. ‘ಗಣಿತ ಮೇಷ್ಟರ ಶಾಲಾ ಡೈರಿ’ ಇನ್ನು ಮುಂದೆ ಪ್ರತೀ ಹದಿನೈದು ದಿನಗಳಿಗೊಮ್ಮೆ ಪ್ರಕಟವಾಗಲಿದೆ. 

 

ನಾನು ಮೈಸೂರಿನ ಪ್ರಾದೇಶಿಕ ಶಿಕ್ಷಣ ಸಂಸ್ಥೆಯಲ್ಲಿ ಎಂ.ಎಡ್‌. ಪದವಿ ಮಾಡುತ್ತಿದ್ದ ದಿನಗಳಲ್ಲಿ ನಮಗೆ ಮನಃಶಾಸ್ತ್ರ ಬೋಧಿಸುತ್ತಿದ್ದ ಗುರುಗಳಾದ ಶಿಂಧೆ ಸರ್‌ ಯಾವಾಗಲೂ ಒಂದು ಮಾತು ಹೇಳುತ್ತಿದ್ದರು. ಸ್ನಾತಕೋತ್ತರ ಪದವಿ ಮುಗಿಸಿ ಸಂಶೋಧನೆ, ಅದು ಮುಗಿಸಿ ಯಾವುದಾದರೂ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗುವ ಕನಸನ್ನು ಹೆಚ್ಚಿನವರು ಕಾಣುತ್ತಿರಬಹುದು. ಆದರೆ ನಿಜವಾಗಿ ನಿಮ್ಮ ಅಗತ್ಯ ಇರುವುದು ಹಳ್ಳಿಯ ಶಾಲೆಗಳಿಗೆ. ಸಾಧ್ಯವಾದರೆ ಹಳ್ಳಿ ಶಾಲೆಯ ಮಾಸ್ತರಿಕೆ ಮಾಡಿ ನೋಡಿ. ಆಗ ಶಿಕ್ಷಣ ಅಂದರೇನು? ಶಿಕ್ಷಕನ ಕೆಲಸ ನಿಜವಾಗಿಯೂ ಏನು ಎನ್ನುವುದು ನಿಮ್ಮ ಅರಿವಿಗೆ ಬರುತ್ತದೆ. ಇಲ್ಲಿ ನೀವು ಚಂದದ ಉತ್ತರ ಬರೆದು ಅಂಕ ಪಡೆಯಬಹುದು, ಆದರೆ ನೀವು ನಿಜವಾದ ಮಾಸ್ತರನಾಗುವುದು ನಿಮ್ಮ ಮಕ್ಕಳ ಜೊತೆಗೆ. ಈ ಮಾತು ನನ್ನನ್ನು ಸದಾ ಕಾಡುತ್ತಿರುತ್ತಿತ್ತು.

ಒಂದು ವರ್ಷ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡಿದ ನನಗೆ ಮರು ವರ್ಷವೇ ಸರಕಾರಿ ಶಾಲಾ ಶಿಕ್ಷಕನಾಗಿ ಕೆಲಸ ಸಿಕ್ಕಿತು. ಸರಕಾರಿ ಶಾಲಾ ಶಿಕ್ಷಕರಿಗೆ ಮೊದಲು ಗ್ರಾಮೀಣ ಸೇವೆ ಕಡ್ಡಾಯ ಎಂದು ತಿಳಿದಿತ್ತು. ಸಿಕ್ಕಿದರೆ ತೀರಾ ಗ್ರಾಮೀಣ ಪ್ರದೇಶದ ಹಳ್ಳಿ ಶಾಲೆ ಸಿಗಬೇಕು ಎಂದು ಮನಸ್ಸಿನಲ್ಲೊಂದು ಹುಚ್ಚು ಹಂಬಲವೂ ಇತ್ತು. ಅದಕ್ಕೆ ಸರಿಯಾಗಿ ಸಿಕ್ಕ ಶಾಲೆಯೂ ಹಾಗೇಯೇ ಇತ್ತು.

ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಪಕ್ಕದ ಪುಟ್ಟ ಹಳ್ಳಿ ಸಂಸೆ. ಬೆಟ್ಟಗುಡ್ಡಗಳಿಂದ ಆವೃತವಾದ ಈ ಪುಟ್ಟ ಹಳ್ಳಿಯ ನಡುವೆ ಸೋಮಾವತೀ ಎಂಬ ನದಿಯೊಂದು ಹರಿಯುತ್ತಿತ್ತು. ಮುಂದೆ ಹರಿದು ಆ ನದಿ ಭದ್ರಾ ನದಿಯನ್ನು ಸೇರುತ್ತಿತ್ತು. ಮಳೆಗಾಲದ ಮೂರು ತಿಂಗಳು ಸದಾ ಮೋಡ ಕವಿದ ವಾತಾವರಣ. ಸೂರ್ಯದರ್ಶನ ಅಪರೂಪವೇ ಸರಿ. ಗುಡ್ಡದ ಮೇಲಿದ್ದ ನಮ್ಮ ಶಾಲೆಗೆ ಪಾಠ ಕೇಳಲು ಮೋಡಗಳು ತರಗತಿಯ ಒಳಗೇ ಬಂದು ಬಿಡುತ್ತಿದ್ದವು. ಕಿಟಕಿ ಬಾಗಿಲುಗಳನ್ನು ಹಾಕಿ ಮೋಡಗಳು ಒಳಗೆ ನುಸುಳದಂತೆ ತಡೆದು ತರಗತಿಯಲ್ಲಿ ಪಾಠಮಾಡಬೇಕಾದ ಪರಿಸ್ಥಿತಿ ನಮ್ಮದು. ಮಳೆಗಾಲದಲ್ಲಿ ಭಾರೀ ಮಳೆ, ಚಳಿಗಾಲದಲ್ಲಿ ಕೊರೆಯುವ ಛಳಿ ಸಿನೆಮಾದಲ್ಲಷ್ಟೇ ನೋಡಿದ್ದ ದೃಷ್ಯಗಳನ್ನು ನಿಜದಲ್ಲಿ ಬದುಕುವ ಅವಕಾಶ ನನ್ನದಾಗಿತ್ತು.

ಮಂಗಳೂರು, ಮೈಸೂರಿನಂಥ ಮಹಾನಗರ ವಾಸಿಯಾಗಿದ್ದ ನನಗೆ ಈ ಪುಟ್ಟ ಹಳ್ಳಿಯಲ್ಲಿ ಪರಿಸರದ ಜೊತೆ ಸಮಯವೂ ನಿಧಾನಗತಿಯಲ್ಲಿ ಚಲಿಸುವ ಅನುಭವ. ಅಲ್ಲಿನ ಶಾಲೆಯ ಮಕ್ಕಳೂ ಹಾಗೆಯೇ, ಬಾಯಿತುಂಬಾ ಮಾತು, ಪ್ರೀತಿ ವಿಶ್ವಾಸಗಳಿಗೆ ಎಳ್ಳಷ್ಟೂ ಕೊರತೆ ಇಲ್ಲ. ಅಲ್ಲಿನ ಒಂದೊಂದು ಮಕ್ಕಳ ಬದುಕೂ ಒಂದೊಂದು ಕಥೆ ಹೇಳುತ್ತಿತ್ತು. ನಗರವಾಸಿಯಾಗಿದ್ದ ನನಗೆ ಕೇವಲ ಝೂನಲ್ಲಿ ನೋಡಿ ಗೊತ್ತಿದ್ದ ಪ್ರಾಣಿಗಳನ್ನು ಅವರು ನಿತ್ಯ ನೋಡುತ್ತಿದ್ದರು. ಕಾಟಿ, ಕಡವೆ, ಮಂಗ, ಮೊಲ, ಹಾವು, ಚಿರತೆಗಳು ಅವರ ನಿತ್ಯದ ಒಡನಾಡಿಗಳಾಗಿದ್ದರು.

ಮನೆಯ ಬಾಗಿಲಿಗೇ ಬರುವ ವಾಹನ ಹತ್ತಿ ಶಾಲೆಯ ಗೇಟಿನ ಮುಂದೆ ಇಳಿಯುವ ನಗರವಾಸಿ ಮಕ್ಕಳು ಒಂದೆಡೆಯಾದರೆ, ಪ್ರತಿದಿನ ಸುಮಾರು ಆರು ಕಿಲೋಮೀಟರ್‌ ಒಂಟಿಯಾಗಿ ನಡೆದೇ ಬರುತ್ತಿದ್ದ ಇಲ್ಲಿನ ಮಕ್ಕಳು ಇನ್ನೊಂದು ಕಡೆ. ಮಳೆಗಾಲದ ಮಳೆ, ಚಳಿಗಾಲದ ಚಳಿಯನ್ನೂ ಲೆಕ್ಕಿಸದೆ ಶಾಲೆಗೆ ಅವರು ಪ್ರತಿದಿನ ಬರುತ್ತಿದ್ದುದೇ ನನಗೆ ದೊಡ್ಡ ವಿಶೇಷವಾಗಿ ಕಾಣುತ್ತಿತ್ತು. ಇನ್ನು ಅವರಿಗೆ ಹೋಂವರ್ಕ್‌ ಕೊಟ್ಟು ಅದನ್ನು ಮಕ್ಕಳು ಮಾಡದೇ ಇದ್ದಾಗ ಯಾವ ಬಾಯಿಯಲ್ಲಿ ಅವರನ್ನು ಬೈಯುವುದೋ ತಿಳಿಯುತ್ತಿರಲಿಲ್ಲ.

ಹೊಸದಾಗಿ ಕೆಲಸಕ್ಕೆ ಸೇರಿದ ನನಗೆ ಆ ವರ್ಷ ರಕ್ಷಾ ಬಂಧನ ಹಬ್ಬದಂದು ಹತ್ತನೆಯ ತರಗತಿಯ ಹೆಣ್ಣುಮಕ್ಕಳೆಲ್ಲ ರಾಖೀ ಕಟ್ಟಲು ಬಂದರು. ರಕ್ಷಾಬಂಧನ ಅಣ್ಣ ತಂಗಿಯರ ಹಬ್ಬ, ನನ್ನನ್ನೂ ಸೋದರ ಭಾವದಿಂದ ರಾಖಿ ಕಟ್ಟಲು ಬಂದದ್ದೋ ಹೇಗೆ ಎಂದು ಕೇಳಿದೆ. ಎಲ್ಲ ಟೀಚರ್ಸ್‌ ಕಟ್ಟಿಸಿಕೊಂಡಿದ್ದಾರೆ ನೀವೂ ರಾಖಿ ಕಟ್ಟಿಸಿಕೊಂಡು ಗಿಫ್ಟ್‌ ಕೊಡಬೇಕು ಎಂಬ ಉತ್ತರ ಮಕ್ಕಳಿಂದ ಬಂತು. ಹೋ ಇದಾ ವಿಷ್ಯ ಅಂದುಕೊಂಡು ನಾನೂ ಒಂದು ಸವಾಲು ಹಾಕಿದೆ. ನಮ್ಮ ಸಂಸ್ಕೃತಿಯಲ್ಲಿ ತಂದೆತಾಯಿಗಳ ನಂತರ ಕಲಿಸಿದ ಗುರುಗಳಿಗೆ ಅದೇ ಸ್ಥಾನ ನೀಡುತ್ತಾರೆ. ಹಾಗಾಗಿ ನಾನು ನಿಮಗೆಲ್ಲ ತಂದೆ ಸಮಾನನಾದವನು. ಅಪ್ಪನಿಗೆ ರಾಖಿ ಕಟ್ಟುವವರು ಯಾರಾದರೂ ಇದ್ದರೆ ಮುಂದೆ ಬನ್ನಿ ಎಂದೆ. ಎಲ್ಲರೂ ಒಮ್ಮೆ ಮುಖ ಮುಖ ನೋಡಿಕೊಂಡರು. ಹಾಗಾದರೆ ನಾವು ನಿಮ್ಮನ್ನು ಅಪ್ಪಾಜಿ ಎಂದು ಕರೆಯಬಹುದೇ ಎಂದು ಪಾಟೀ ಸವಾಲು ಬಂತು. ಖಂಡಿತಾ ಹಾಗೆ ಕರೆಯಬಹುದು ಮಗಳೇ ಎಂದು ಅದೇ ರಾಗದಲ್ಲಿ ಉತ್ತರಿಸಿದೆ. ಅವತ್ತಿನಿಂದ ಕೆಲವು ಮಕ್ಕಳು ಪ್ರೀತಿಯಿಂದ ಅಪ್ಪಾಜಿ ಎಂದೇ ಕರೆಯುತ್ತಿದ್ದರು
ಹತ್ತನೇ ತರಗತಿಯಲ್ಲಿ ಒಬ್ಬ ವಿದ್ಯಾರ್ಥಿನಿ ಇದ್ದಳು. ಅವಳ ಹೆಸರು ಅನು. ಸುಮಾರು ಆರೂವರೆ ಕಿಲೋಮೀಟರ್‌ ದೂರದ ಗುಡ್ಡದ ಮೇಲಿನ ಹಳ್ಳಿಯಿಂದ ಒಂಟಿಯಾಗಿ ಈಕೆ ಶಾಲೆಗೆ ನಡೆದೇ ಬರುತ್ತಿದ್ದಳು. ಆರೋಗ್ಯ ಕೆಟ್ಟರೆ ಮಾತ್ರ ರಜೆ ಇಲ್ಲವೆಂದಾದರೆ ಯಾವತ್ತೂ ಶಾಲೆಗೆ ರಜೆ ಮಾಡಿದವಳಲ್ಲ. ಹಾಗಾದರೆ ಕಲಿಯುವುದರಲ್ಲಿ ಬಹಳ ಜಾಣೆ ಇರಬೇಕು ಎಂದು ನೀವು ಅಂದುಕೊಂಡರೆ ಅದು ಸುಳ್ಳು. ಆಕೆ ಅಂಕಗಳಿಕೆಯಲ್ಲಿ ತೀರಾ ಹಿಂದೆ ಇದ್ದ ಹುಡುಗಿ ಆದರೆ ಶಾಲೆಗೆ ಎಂದೂ ರಜೆ ಮಾಡಿದವಳಲ್ಲ.

ಕಿಟಕಿ ಬಾಗಿಲುಗಳನ್ನು ಹಾಕಿ ಮೋಡಗಳು ಒಳಗೆ ನುಸುಳದಂತೆ ತಡೆದು ತರಗತಿಯಲ್ಲಿ ಪಾಠಮಾಡಬೇಕಾದ ಪರಿಸ್ಥಿತಿ ನಮ್ಮದು. ಮಳೆಗಾಲದಲ್ಲಿ ಭಾರೀ ಮಳೆ, ಚಳಿಗಾಲದಲ್ಲಿ ಕೊರೆಯುವ ಛಳಿ ಸಿನೆಮಾದಲ್ಲಷ್ಟೇ ನೋಡಿದ್ದ ದೃಷ್ಯಗಳನ್ನು ನಿಜದಲ್ಲಿ ಬದುಕುವ ಅವಕಾಶ ನನ್ನದಾಗಿತ್ತು.

ಪಾಠಗಳೆಲ್ಲ ಮುಗಿದು ಹತ್ತನೇ ತರಗತಿಗೆ ಒಂದು ಸುತ್ತು ಪ್ರಿಪರೇಟರೀ ಪರೀಕ್ಷೆಗಳು ಮುಗಿದಿದ್ದವು. ಒಬ್ಬರೂ ನನ್ನ ವಿಷಯವಾದ ಗಣಿತದಲ್ಲಿ ಪಾಸಾಗಿರಲಿಲ್ಲ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತರಗತಿಯಲ್ಲಿ ವಿತರಿಸಿದ ನಂತರ ಎಲ್ಲರನ್ನೂ ಕೇಳಿದೆ. ಯಾಕೆ ಯಾರಿಗೂ ಸರಿಯಾಗಿ ಅಂಕ ಬಂದಿಲ್ಲ. ಎಲ್ಲ ಪಾಠಗಳನ್ನೂ ವಿವರವಾಗಿ ಮಾಡಿದ್ದೇನೆ. ಅದರಿಂದಲೇ ಪ್ರಶ್ನೆಗಳು ಬಂದಿವೆ. ನೀವು ಮುಂದಿನ ಪರೀಕ್ಷೆಯಲ್ಲಿ ಇದಕ್ಕಿಂತ ಉತ್ತಮ ಅಂಕ ಗಳಿಸಬೇಕು ಎಂಬುದು ನನ್ನ ಆಸೆ. ನಾನು ನಿಮಗೆ ಹೇಗೆ ಸಹಾಯ ಮಾಡಲಿ ಹೇಳಿ ಎಂದೆ. ಮಕ್ಕಳೆಲ್ಲ ನೀವು ಸರಿಯಾಗಿ ರಿವಿಜನ್‌ ಮಾಡಿಲ್ಲ ರಿವಿಜನ್‌ ಮಾಡಿದರೆ ನಾವು ಪಾಸಾಗುತ್ತಿದ್ದವು ಎಂದು ನನ್ನ ಮೇಲೆಯೇ ಗೂಬೆ ಕೂರಿಸಿದರು. ಆಗಲಿ ಎಂದು ಪೂರ್ತಿ ಪಾಠಗಳನ್ನು ರಿವಿಜನ್‌ ಮಾಡಿದೆ.

ಎರಡನೇ ಪ್ರಿಪರೇಟರಿಯಲ್ಲೂ ಯಾರೂ ಪಾಸಾಗಲಿಲ್ಲ. ಈ ಬಾರಿ ಮತ್ತೊಮ್ಮೆ ಅದೇ ಪ್ರಶ್ನೆ ಕೇಳಿದೆ. ನಾನು ನಿಮಗೀಗ ಏನು ಸಹಾಯ ಮಾಡಲಿ? ಈ ಬಾರಿ ಯಾರೂ ರಿವಿಜನ್‌ ಮಾಡಿಲ್ಲ ಎಂಬ ತಗಾದೆ ತೆಗೆಯಲಿಲ್ಲ. ಒಬ್ಬ ಹುಡುಗ ಎದ್ದು ನಿಂತು ಹೇಳಿದ, ನಮಗೆ ಪ್ರಶ್ನೆಗಳು ಅರ್ಥ ಆಗುವುದಿಲ್ಲ ಸರ್‌ ಅದಕ್ಕೇ ರಿವಜನ್‌ ಚೆನ್ನಾಗಿ ಮಾಡಿದ್ದರೂ ಉತ್ತರ ಬರೆಯಲು ಸಾಧ್ಯವಾಗಲಿಲ್ಲ ಎಂದ. ಸರಿ ಹಾಗಾದರೆ ನಾನು ಇನ್ನುಮುಂದೆ ತರಗತಿಯ ಕೊನೆಯ ಖಾಲಿ ಬೆಂಚಿನಲ್ಲಿ ಕುಳಿತಿರುತ್ತೇನೆ. ಯಾರಿಗೆ ಯಾವ ಪ್ರಶ್ನೆ ಅರ್ಥವಾಗಿಲ್ಲವೋ ಅವರು ಬಂದು ಕೇಳಿ ಎಂದು ಕೊನೆಯ ಸಾಲಿನ ಖಾಲಿ ಬೆಂಚಿನಲ್ಲಿ ಹೋಗಿ ಕುಳಿತೆ. ಅವತ್ತು ಇಡೀ ಅವಧಿಯಲ್ಲಿ ಯಾರೂ ಎದ್ದು ಬಂದು ತಮಗೆ ಅರ್ಥವಾಗದ ಪ್ರಶ್ನೆಯನ್ನು ಕೇಳಲಿಲ್ಲ. ಅವತ್ತಿನ ತರಗತಿ ಮುಗಿಸಿ ಹೊರಟೆ. ಮರುದಿನ ಮತ್ತೆ ನಿಮಗೆ ಅರ್ಥವಾಗದ ಪ್ರಶ್ನೆ ಯಾವುದು ಎಂದು ನೀವೇ ಕೇಳಿ. ನಾನು ತರಗತಿಯ ಕೊನೆಯ ಖಾಲಿ ಬೆಂಚಿನಲ್ಲಿದ್ದೇನೆ ಎಂದು ಹೇಳಿ ಪಾಠಪುಸ್ತಕ ತಿರುವಿಹಾಕುತ್ತಾ ಕುಳಿತುಕೊಂಡೆ.

ಸ್ವಲ್ಪ ಹೊತ್ತಿನ ನಂತರ ಪವಿತ್ರ ಎಂಬ ಮಗು ಎದ್ದು ಬಂದಳು. ಸರ್‌ ನನಗೆ ಈ ಪ್ರಶ್ನೆ ಬಿಡಿಸುವುದು ಹೇಗೆ ಗೊತ್ತಾಗಲಿಲ್ಲ, ಹೇಳಿಕೊಡಿ ಅಂದಳು. ಆಕೆಯನ್ನು ಪಕ್ಕದಲ್ಲಿ ಕುಳಿತುಕೊಳ್ಳಲು ಹೇಳಿ ಆ ಲೆಕ್ಕ ಬಿಡಿಸುವ ಕ್ರಮವನ್ನು ಅವಳ ಪುಸ್ತಕದಲ್ಲೇ ಬರೆದು ವಿವರಿಸಿದೆ. ಅವಳ ಮುಖ ಅರಳಿತು. ಸರ್‌ ಈಗ ಅರ್ಥ ಆಯ್ತು. ಇಂತಹುದೇ ಇನ್ನೊಂದು ಪ್ರಶ್ನೆ ಕೊಡಿ ಎಂದು ಕೇಳಿದಳು. ಪ್ರಶ್ನೆ ಹಾಕಿಕೊಟ್ಟೆ, ಅಲ್ಲೇ ಕುಳಿತು ಬಿಡಿಸಲು ಹೇಳಿದೆ. ಲೆಕ್ಕವನ್ನು ಬಿಡಿಸಿದ ಅವಳಿಗೆ, ಮಗಳೇ ಜಾಣೆ ಎಂದು ಹೇಳಿದಾಗ ಆ ಮಗುವಿನ ಮುಖದಲ್ಲಿ ಕಂಡ ತೃಪ್ತಿ ಮತ್ತು ಸಂತೋಷ ಈಗಲೂ ನೆನಪಿದೆ.

ನಂತರ ನಿಧಾನವಾಗಿ ಒಂದೊಂದೇ ಮಕ್ಕಳು ಬಂದು ತಮಗೆ ಅರ್ಥವಾಗದ ಲೆಕ್ಕವನ್ನು ಕೇಳಿ ಕಲಿಯಲಾರಂಭಿಸಿದರು. ನಾವೇ ನಮ್ಮ ಡೌಟ್‌ ಕೇಳಿ ಪರಿಹರಿಸಿ ಕೊಂಡಾಗ ಗಣಿತ ಬಹಳ ಸುಲಭ ಅನಿಸುತ್ತಿದೆ ಎಂದು ಹೇಳುತ್ತಿದ್ದರು. ಆಮೇಲೆ ಮಕ್ಕಳು ಸಮಯಸಿಕ್ಕಾಗಲೆಲ್ಲ ಶಿಕ್ಷಕರ ಕೊಠಡಿಗೂ ಬಂದು ಕೇಳಿ ಕಲಿಯುತ್ತಿದ್ದರು. ಅವರಿಗೆ ಗಣಿತ ವಿಷಯದ ಮೇಲೆ ಆತ್ಮವಿಶ್ವಾಸ ಹೆಚ್ಚಲಾರಂಭಿಸಿತು.

ನನ್ನನ್ನು ಪ್ರತಿದಿನ ಶಾಲೆಗೆ ಬಂದಾಗ ಅಪ್ಪಾಜಿ ಆರಾಮಿದ್ದೀರಾ ಎಂದು ಆತ್ಮೀಯವಾಗಿ ಮಾತನಾಡಿಸುತ್ತಿದ್ದ ಅನು ಮಾತ್ರ ಹಲವು ದಿನ ಕಳೆದರೂ ತನ್ನ ಸಂಶಯ ಕೇಳಲು ಬಂದೇ ಇರಲಿಲ್ಲ. ಒಂದು ದಿನ ಕರೆದು ಕೇಳಿದೆ. ಅನೂ ನಿನಗೆ ಯಾವ ಲೆಕ್ಕ ಅರ್ಥ ಆಗಿಲ್ಲ, ಅದನ್ನು ನನ್ನ ಹತ್ತಿರ ಕೇಳುವುದಿಲ್ಲವೇ ಎಂದು. ಅಪ್ಪಾಜಿ ನಾನೇನು ಗಣಿತದಲ್ಲಿ ಪಾಸಾಗೋದಿಲ್ಲ ಬಿಡಿ ಎಂದು ದೃಢವಾಗಿ ಹೇಳಿ ಹೊರಟೇ ಬಿಟ್ಟಳು. ಇತರ ವಿಷಯದ ಅಧ್ಯಾಪಕರನ್ನೂ ಕೇಳಿದೆ. ಆಕೆ ಬೇರೆ ವಿಷಯಗಳಲ್ಲಿ ಹೇಗಿದ್ದಾಳೆ ಎಂದು. ಎಲ್ಲರೂ ಆಕೆ ಪಾಸಾಗುವುದು ಖಂಡಿತಾ ಸಾಧ್ಯವಿಲ್ಲ ಎಂದು ಹೇಳಿಬಿಟ್ಟರು.

ಪರೀಕ್ಷೆ ಆದ ನಂತರ ಪೋಷಕರನ್ನು ಕರೆದು ಮಾತನಾಡಿಸುವುದು ರೂಢಿ. ಈ ಬಾರಿ ಪೋಷಕರ ಸಭೆಗೆ ಅನೂವಿನ ತಂದೆಯೂ ಬಂದಿದ್ದರು. ತುಂಬ ಮುಗ್ಧ ಜೀವ. ನಮಗ್ಯಾರಿಗೂ ವಿದ್ಯೆ ಇಲ್ಲ ಮೇಷ್ಟ್ರೇ, ಇವಳನ್ನು ಹತ್ತನೇ ವರೆಗೂ ಕಳ್ಸೋದು. ಪಾಸಾದ್ರೆ ಕಾಲೇಜಿಗೆ ಕಳ್ಸೋದು, ಇಲ್ಲಾಂದೆ ಆಮೇಲೆ ಮದ್ವೆ ಮಾಡಿಕೊಡೋದು ಅಂದ್ರು. ಮಗಳು ಕಲೀಬೇಕು ಅಂತ ನಿಮಗೆ ಆಸೆ ಇಲ್ವಾ ಅಂತ ಕೇಳಿದೆ. ಮನೆಯ ಎಲ್ಲ ಕೆಲಸ ಚೆನ್ನಾಗೇ ಮಾಡ್ತಾಳೆ. ಆದರೆ ಮನೇಲಿ ಯಾರ ಮಾತೂ ಕೇಳಲ್ಲ, ನೀವೇ ಸ್ವಲ್ಪ ಬುದ್ಧಿ ಹೇಳಿ ಮಾಷ್ಟ್ರೇ. ನಿಮ್ಮ ಬಗ್ಗೆ ಬಹಳ ಅಭಿಮಾನ ಅವಳಿಗೆ. ನಿಮ್ಮ ಮಾತಾದ್ರೂ ಕೇಳಬಹುದು ಅಂತ ಮುಗ್ಧವಾಗಿ ಹೇಳಿದರು. ಆಯ್ತು ಗೌಡ್ರೇ ನಾನು ಪ್ರಯತ್ನ ಮಾಡಿ ನೋಡ್ತೀನಿ ಅಂದೆ.

ಸುಳ್ಳನ್ನು ನೂರು ಬಾರಿ ಹೇಳಿದರೆ ಆ ಸುಳ್ಳು ಸತ್ಯವಾಗುತ್ತದೆ ಎಂಬ ಮಾತು ನೆನಪಾಯ್ತು. ಅದನ್ನೇ ಪ್ರಯೋಗಿಸುವ ಯೋಚನೆ ಮಾಡಿದೆ. ಮರುದಿನ ಬೆಳಗ್ಗೆ ಎಂದಿನಂತೆ ಅನೂ ಬೆಳಗ್ಗೆ ಬಂದು ಅಪ್ಪಾಜಿ ತಿಂಡಿ ಮಾಡಿದ್ರಾ ಎಂದು ಕೇಳಿದ್ಲು. ಹೂ ಆಯ್ತು. ನಿನ್ನೆ ಕೊಟ್ಟ ಲೆಕ್ಕ ಮಾಡ್ಕೊಂಡು ಬಂದಿದ್ದೀಯಾ ಅಂತ ಕೇಳಿದೆ. ನಾನೇನು ಲೆಕ್ಕದಲ್ಲಿ ಪಾಸಾಗೋದಿಲ್ಲ. ಅದಕ್ಕೇ ಮಾಡ್ಲಿಲ್ಲ ಅಂತ ತೀರ್ಮಾನ ಮಾಡಿದವಳಂತೆ ಹೇಳಿದ್ಲು. ನಾನೂ ತೀರ್ಮಾನ ಮಾಡಿದ ಧ್ವನಿಯಲ್ಲಿ ಹೇಳಿದೆ ನನ್ನ ಮಗಳು ಅನೂ ಖಂಡಿತ ಗಣಿತದಲ್ಲಿ ಪಾಸಾಗ್ತಾಳೆ. ಈ ಅಪ್ಪಾಜಿಗೆ ನಂಬಿಕೆ ಇದೆ ಅಂದೆ. ನನ್ನನ್ನೇ ಒಮ್ಮೆ ದಿಟ್ಟಿಸಿ ನೋಡಿ ಹೊರಟು ಹೋದಳು. ಅಲ್ಲಿಂದ ಮುಂದೆ ‘ಮಗಳೇ ಅನೂ ನೀನು ಖಂಡಿತಾ ಪಾಸಾಗ್ತೀಯಾ ಅಂತ ನನಗೆ ನಂಬಿಕೆ ಇದೆʼ ಪ್ರತಿದಿನ ನಾನು ಇದೇ ಮಾತು ಹೇಳುತ್ತಿದ್ದೆ. ಹೋಗಿ ಅಪ್ಪಾಜಿ ಎಂದು ಓಡಿ ಹೋಗುತ್ತಿದ್ದ ಅನೂ ನಿಧಾನಕ್ಕೆ ಬಂದು ಲೆಕ್ಕಗಳನ್ನು ಕೇಳಿ ಕಲಿಯಲು ಪ್ರಾರಂಭ ಮಾಡಿದ್ದಳು.

ಕೊನೆಯ ಸುತ್ತಿನ ಪೂರ್ವಸಿದ್ಧತಾ ಪರೀಕ್ಷೆ ಮುಗಿದು ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭ ನಡೆಯಿತು. ಅವತ್ತು ಹೊರಡುವಾಗ ಅನೂವಿಗೆ ಮತ್ತೆ ಅದೇ ಮಾತು ಹೇಳಿದೆ. ಮಗಳೇ ನೀನು ಖಂಡಿತಾ ಪಾಸಾಗ್ತೀಯಾ ಅಂತ ನನಗೆ ನಂಬಿಕೆ ಇದೆ. ಅಲ್ಲಿವರೆಗೂ ಹೋಗಿ ಅಪ್ಪಾಜಿ ನಾನು ಪಾಸಾಗೋದಿಲ್ಲ ಎಂದು ಹಠ ಹಿಡಿದಿದ್ದ ಅನೂ ಒಂದು ಮಾತು ಹೇಳಿಬಿಟ್ಟಳು. ನಾನು ನಿಮಗೋಸ್ಕರ ಗಣಿತದಲ್ಲಿ ಪಾಸಾಗ್ತೇನೆ ಅಪ್ಪಾಜಿ. ಅಷ್ಟು ಹೇಳಿದ್ದು ಮಾತ್ರವಲ್ಲ ಅನೂ ಆ ವರ್ಷ ಹತ್ತನೆಯ ತರಗತಿಯಲ್ಲಿ ಪಾಸಾಗಿದ್ದಳು ಮತ್ತು ಮುಂದಿನ ವರ್ಷ ಕಾಲೇಜು ಸೇರಿದ್ದಳು.

ಈ ಘಟನೆಯ ನಂತರ ನಾನೂ ಒಂದು ವಿಚಾರವನ್ನು ಮತ್ತೆ ಕಲಿತೆ. ನಾನು ತರಗತಿಯಲ್ಲಿ ನನ್ನ ವಿಷಯಕ್ಕೆ ಮಾತ್ರ ಶಿಕ್ಷಕ ಅಲ್ಲ. ಶಿಕ್ಷಕನಿಗೆ ಮಗುವಿನ ಜೊತೆ ಒಂದು ಭಾವನಾತ್ಮಕ ಸಂಬಂಧ ಇರಬೇಕು. ಆಗ ಮಾತ್ರ ಮಕ್ಕಳು ನಮ್ಮಿಂದ ಏನನ್ನಾದರೂ ಕಲಿಯಲು ಸಾಧ್ಯ. ಇದರ ಜೊತೆಗೆ ನಾನು ಕಲಿಸುವವನು ನೀನು ಕಲಿಯುವವನು ಎಂಬ ಧೋರಣೆಯಿಂದ, ಕಲಿಸಬಹುದು, ಆದರೆ ಕಲಿಕೆ ನಡೆಯಲು ಸಾಧ್ಯವಿಲ್ಲ. ಕಲಿಕೆ ನಡೆಯಬೇಕಾದರೆ ಕಲಿಯುವವನು ಮತ್ತು ವಿಷಯಜ್ಞಾನ ಹೊಂದಿದವನ ನಡುವೆ ಒಂದು ನೇರ ಸಂವಾದ ಮತ್ತು ಸಂಬಂಧ ಏರ್ಪಡುವುದು ಅಗತ್ಯ. ಎಷ್ಟೋಬಾರಿ ವ್ಯಕ್ತಿಯ ಕಾರಣಕ್ಕಾಗಿ ನಾವು ವಿಷಯವನ್ನು ಇಷ್ಟಪಡುತ್ತೇವೆ. ಗಣಿತ ವಿಷಯದಲ್ಲಂತೂ ಇದು ಹಲವು ಬಾರಿ ನನಗೆ ಸತ್ಯ ಅನಿಸಿದೆ. ನನ್ನ ಮಕ್ಕಳಿಂದ ಇಂತಹ ಹಲವಾರು ವಿಷಯಗಳನ್ನು ನಾನು ಕಲಿತಿದ್ದೇನೆ. ಮಕ್ಕಳೂ ನನಗೆ ಕಲಿಸುತ್ತಿದ್ದಾರೆ.