ಭಾರತದ ಕೃಷಿ ಮತ್ತು ವ್ಯವಸಾಯದ ಜತೆ ಬೆಸೆದುಕೊಂಡಿದ್ದ ಕುಶಲಕರ್ಮಿಗಳನ್ನೂ, ಅರಣ್ಯವಾಸಿ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳನ್ನು ನಿಯಂತ್ರಿಸಲು ಬ್ರಿಟಿಷ್ ಆಡಳಿತ ರೂಪಿಸಿದ ಕಾಯ್ದೆ ‘ಕ್ರಿಮಿನಲ್ ಟ್ರೈಬ್ಸ್ ಆಕ್ಟ್’. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕವೂ ಇದು ಮುಂದುವರೆಯಿತು. ಇದರಿಂದಾಗಿ ಅಲೆಮಾರಿ ಸಮುದಾಯಕ್ಕೆ ಸೇರಿದ ಗಂಟಿಚೋರರು ಹಾಗೂ ಅಂತಹುದೇ ಇತರ ಸಮುದಾಯದ ಜನರು ಪಡಿಪಾಟಲು ಅನುಭವಿಸಬೇಕಾಯಿತು. ಇಂತಹ ಸಮುದಾಯಗಳ ಬಗ್ಗೆ ಅಧ್ಯಯನ ಮಾಡಿರುವ ಡಾ. ಅರುಣ್ ಜೋಳದ ಕೂಡ್ಲಿಗಿ ಅವರು ಅಧ್ಯಯನ ಸಂದರ್ಭದಲ್ಲಿ ತಾವು ಕಂಡ ವಿಚಾರಗಳನ್ನು ಪ್ರತೀ ಬುಧವಾರ ಪ್ರಸ್ತುತಪಡಿಸಲಿದ್ದಾರೆ. 

 

ಕ್ರಿಮಿನಲ್ ಟ್ರೈಬ್ಸ್ ಎಂದರೆ ಯಾರು?

ಈಚೆಗೆ ಹೆಚ್ಚು ಚರ್ಚೆ ಹುಟ್ಟುಹಾಕಿದ ಸಿನೆಮಾ ಜೈಭೀಮ್. ಮುಖ್ಯವಾಗಿ ಕ್ರಿಮಿನಲ್ ಟ್ರೈಬ್ ಎಂದು ಹಣೆಪಟ್ಟಿಕಟ್ಟಿಕೊಂಡು ನರಳುವ ಈ ದೇಶದ ಕೋಟ್ಯಂತರ ಅಪರಾಧಿ ಬುಡಕಟ್ಟುಗಳ ಪ್ರತಿನಿಧಿಯಾಗಿ ಕೊರಚ ಮತ್ತು ಇರುಳಿಗ ಬುಡಕಟ್ಟು ಸಮುದಾಯಗಳನ್ನು ಈ ಸಿನಿಮಾ ಕೇಂದ್ರೀಕರಿಸಿದೆ. ಈ ಸಿನೆಮಾ ನೋಡುತ್ತಿದ್ದಂತೆ ಅಪರಾಧಿ ಬುಡಕಟ್ಟು ಗಂಟಿಚೋರರ ಬಗ್ಗೆ ಸಂಶೋಧನೆ ಮಾಡುವಾಗ ಲಕ್ಷ್ಮೀಶ್ವರದ ಪಕ್ಕದ ಬಾಲೆಹೊಸೂರ್ ಗಂಟಿಚೋರ ಸಮುದಾಯದ ಹಿರಿಯರು ಹೇಳುತ್ತಿದ್ದ ಕತೆಗಳು ಕಣ್ಮುಂದೆ ಹಾದು ಹೋಗುತ್ತಿದ್ದವು. ಗಂಟಿಚೋರ್ ಎನ್ನುವ ಹೆಸರಿನ ಕಾರಣಕ್ಕೆ ಮಾಡದ ತಪ್ಪಿಗೆ ಜೈಲಿಗೆ ಹಾಕುತ್ತಾರೆಂದು ಬೇರೆಡೆ ವಲಸೆ ಹೋಗಿ, ತಮ್ಮ ಸಮುದಾಯದ ಹೆಸರು ಗುರುತನ್ನು ಬದಲಿಸಿಕೊಂಡು ಬದುಕುತ್ತಿದ್ದ ಕತೆ ಹೇಳುತ್ತಿದ್ದರು. ಇಂತಹದ್ದೇ ಬದುಕಿನ ಒಂದು ಸೂಕ್ಷ್ಮ ಎಳೆಯನ್ನು ಆಧರಿಸಿ ಜೈಭೀಮ್ ಸಿನೆಮಾ ಮಾಡಲಾಗಿದೆ.

ನಾನು 2016 ರಲ್ಲಿ ಒಂದು ವರ್ಷ ಕ್ಷೇತ್ರಕಾರ್ಯ ಮಾಡಿ ಗಂಟಿಚೋರ ಸಮುದಾಯ ಬಗ್ಗೆ ಅಧ್ಯಯನ ಮಾಡಿದೆ. ಈ ಸಂಶೋಧನೆಯನ್ನು ಬೆಂಗಳೂರಿನ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನ ಸಂಸ್ಥೆ ಪ್ರಕಟಿಸಿದೆ. ಆದರೆ ಈ ಸಂಶೋಧನೆಗೆ ಸೇರ್ಪಡೆ ಆಗದ ಸಮುದಾಯದ ಜತೆ ಮಾತನಾಡಿದ ಮಾತುಕತೆ ಮತ್ತು ತಿರುಗಾಟದ ಅನುಭವಗಳನ್ನು ಹಂಚಿಕೊಳ್ಳಬೇಕಿನಿಸಿತು. ಹೀಗೆ ಸಂಶೋಧನೆಯಲ್ಲಿ ಬಳಸಲಾಗದ ಅನುಭವಗಳನ್ನು ಕೆಂಡಸಂಪಿಗೆಯ `ಗಂಟಿಚೋರರ ಕಥನಗಳು’ ಕಾಲಂ ನಲ್ಲಿ ಬರೆಯುವೆ. ಸಹೃದಯರು ಓದಿ ಪ್ರತಿಕ್ರಿಯಿಸುವಿರೆಂದು ಭಾವಿಸುವೆ.

(18 ನೇ ಶತಮಾನದ ತಗ್ಗರ ಒಂದು ಚಿತ್ರ.)

ನಿವೃತ್ತ ಐಪಿಎಸ್ ಅಧಿಕಾರಿ  ಕಿರಣ್ ಬೇಡಿಯವರು 2016 ರಲ್ಲಿ ಬುಡಕಟ್ಟು ಸಮುದಾಯಗಳ ಕುರಿತು  ಟ್ವೀಟ್ (ಆಗಸ್ಟ್ 2, 2016) ಮಾಡಿದ್ದು ಸುದ್ದಿಯಾಗಿತ್ತು. ಅದರಲ್ಲಿ ‘ಮಾಜಿ ಕ್ರಿಮಿನಲ್ ಟ್ರೈಬ್‌ಗಳು ಅತ್ಯಂತ ಕ್ರೂರಿಗಳೆಂದೇ ಹೆಸರಾಗಿದ್ದಾರೆ. ಅಪರಾಧಗಳನ್ನು ನಡೆಸುವುದರಲ್ಲಿ ಅವರು ನಿಷ್ಣಾತರಾಗಿದ್ದಾರೆ. ಅವರನ್ನು ಹಿಡಿಯುವುದಾಗಲೀ, ಶಿಕ್ಷೆ ನೀಡುವುದಾಗಲೀ ಆಗುತ್ತಿಲ್ಲ’ ಎಂದಿದ್ದು, ಬಹಳಷ್ಟು ಜನರ ಹುಬ್ಬೇರುವಂತೆ ಮಾಡಿತ್ತು. ಈ ಹೇಳಿಕೆಯನ್ನು ವಿರೋಧಿಸಿ ಅಲ್ಲಲ್ಲಿ ಖಂಡನೆಗಳು ನಡೆದವು. ಆದರೆ ಇದು ಅಷ್ಟೇನು ಆಕರ್ಷಕವಲ್ಲದ `ಲಾಭ’ದಾಯಕ ಸುದ್ದಿಯಾಗದ ಕಾರಣ ಬಹುಪಾಲು ಮಾಧ್ಯಮಗಳು ಈ ಘಟನೆಯನ್ನು ಕಡೆಗಣಿಸಿದವು. ನಿರೀಕ್ಷಿಸಿದಷ್ಟು ಖಂಡನೆಯ ಧ್ವನಿ ದೊಡ್ಡದಾಗದೆ ಸಣ್ಣ ಕೂಗಾಯಿತಷ್ಟೆ.

ವಸಾಹತುಶಾಹಿ ಆಡಳಿತವು `ಕ್ರಿಮಿನಲ್ ಟ್ರೈಬ್ಸ್’ ಎಂದು ಅಮಾನವೀಯವಾಗಿ ನಡೆಸಿಕೊಂಡಿದ್ದ ಸಮುದಾಯಗಳು ಈಗಲೂ ಅಪಮಾನಕ್ಕೆ ಒಳಗಾಗುತ್ತಿವೆ ಎಂಬುದನ್ನು ಸೂಚಿಸುವ ಸಂಕೇತವಾಗಿದೆ. ಭಾರತದ ಸಂವಿಧಾನವು ಜಾತಿ, ಧರ್ಮ, ಲಿಂಗ ಮತ್ತು ಭಾಷೆಗಳ ಆಧಾರದ ತರತಮವನ್ನು ನಿಷೇಧಿಸಿದೆ. ಅಂತೆಯೇ ಈ ತರತಮಗಳನ್ನು ಅಳಿಸುವುದೇ ಸಂವಿಧಾನದ ಧ್ಯೇಯವಾಗಿದೆ. ಹೀಗಿರುವಾಗ ಅಧಿಕಾರಶಾಹಿಯಲ್ಲಿ ಇರುವವರು  ಬುಡಕಟ್ಟುಗಳನ್ನು, ಅಲೆಮಾರಿಗಳನ್ನು ಕ್ರಿಮಿನಲ್‌ಗಳೆಂದು ಅಸಾಂವಿಧಾನಿಕ ತಪ್ಪೆಸಗುತ್ತಲೇ ಇದ್ದಾರೆ. ಕರ್ನಾಟಕದ ಸಂದರ್ಭದಲ್ಲಿ ಜೀವಪರ ಸಮಾನಾಸಕ್ತ ವಾಟ್ಸಪ್ ಗುಂಪಾಗಿದ್ದ `ತಳಸ್ತರ ವೇದಿಕೆ’ಯು ಕಿರಣ್ ಬೇಡಿ ಅವರ ಮಾತನ್ನು ಖಂಡಿಸಿತು. ಈ ವೇದಿಕೆಯ ಹಕ್ಕೊತ್ತಾಯದ ಪತ್ರ ಅಂತರಾಷ್ಟ್ರೀಯ ಪತ್ರಿಕೆಗಳಾದ ಇಪಿಡಬ್ಲು, ಕೌಂಟರ್ ಕರೆಂಟ್, ರೌಂಡಟೇಬಲ್ ಇಂಡಿಯಾ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ರಾಷ್ಟ್ರಮಟ್ಟದ ಗಮನಸೆಳೆಯಿತು. ಅಂತೆಯೇ ಎಸ್‍ಸಿ, ಎಸ್‍ಟಿ ದೌರ್ಜನ್ಯ ತಡೆ ಕಾಯ್ದೆಯ ಸೆಕ್ಷನ್ 3 (1) ಮತ್ತು ಸೆಕ್ಷನ್ 4(2)ಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಇದಕ್ಕೆ ಐದು ವರ್ಷಗಳವರೆಗೆ ಕಾರಾಗೃಹ ಶಿಕ್ಷೆ ವಿಧಿಸಬೇಕೆಂಬ ಹಕ್ಕೊತ್ತಾಯವನ್ನು ಮಂಡಿಸಿತ್ತು.

ಕಿರಣ್ ಬೇಡಿಯವರ ಈ ಮಾತಿಗೆ ಹಿನ್ನೆಲೆಯಾಗಿದ್ದ ಘಟನೆಯೇನು ಎಂಬುದನ್ನು  ನೋಡೋಣ. ಅದು ಉತ್ತರಪ್ರದೇಶದ ಬುಲಂದ್ ಶಹರ್‌ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ. ಈ ಘಟನೆಯಲ್ಲಿ `ಬವಾರಿಯಾ ಬುಡಕಟ್ಟಿನ ಪಾತ್ರವಿದೆ’ ಎಂದು ಬಿಂಬಿಸಲಾಯಿತು. ಅಂತೆಯೇ  ಪೋಲೀಸ್ ಇಲಾಖೆಯು ಇದೇ ವಾದವನ್ನು ಸಮರ್ಥಿಸಿತು. ಮಾಧ್ಯಮಗಳೂ ಪೂರಕವಾಗಿ ಬವಾರಿಯಾಗಳನ್ನು ಟೀಕಿಸಿ ವರದಿಗಳನ್ನು ಪ್ರಕಟಿಸಿದವು. ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಯ ಶೋಧ ನಡೆಯದೆಯೂ ಒಂದು ಬುಡಕಟ್ಟನ್ನು ಅಪರಾಧಿ ಎಂದು ಘೋಷಿಸುವ ತೀರ್ಮಾನಕ್ಕೆ ಬರಲಾಯಿತು. ಅಧಿಕಾರಶಾಹಿ ಹೀಗೆ ವರ್ತಿಸಲು ಇರುವ ಹಿನ್ನೆಲೆಯೆಂದರೆ, ಈ ಸಮುದಾಯಕ್ಕೆ ಬ್ರಿಟಿಷರು ನೀಡಿದ ಹಣೆಪಟ್ಟಿಯೇ ಆಗಿದೆ.

ಹಣೆಪಟ್ಟಿಯ ಹಿಂದಿರುವ ಕಾರಣಗಳು

‘ಕ್ರಿಮಿನಲ್ ಟ್ರೈಬ್ಸ್’ ರೂಪುಗೊಂಡದ್ದಕ್ಕೂ ಒಂದು ಕರಾಳ ಚರಿತ್ರೆಯಿದೆ. ಭಾರತವನ್ನು ವಶಪಡಿಸಿಕೊಳ್ಳಲು ತೊಡಕಾಗಿರುವ ಪ್ರಭಲ ಶಕ್ತಿಗಳನ್ನು ಬ್ರಿಟಿಷರು ನಿಯಂತ್ರಿಸಬೇಕಿತ್ತು. ಅಂತಹ ಪ್ರಭಾವಿ ಶಕ್ತಿಯೆಂದರೆ ಬುಡಕಟ್ಟು, ಆದಿವಾಸಿ, ಅಲೆಮಾರಿ ಸಮುದಾಯಗಳು ಮತ್ತು ಸ್ಥಳೀಯ ರಾಜರುಗಳ ಸೈನ್ಯದಲ್ಲಿದ್ದ ಕೆಳಜಾತಿಯ ಸಮುದಾಯಗಳಾಗಿದ್ದವು. ಇಂತಹ ಸಂದರ್ಭದಲ್ಲಿ ಬ್ರಿಟೀಷ್ ಅಧಿಕಾರಿ ಗಮರ್ನರ್ ಜನರಲ್ ವಿಲಿಯಂ ಬೆಂಟಿಕ್ ಇವರುಗಳನ್ನೆಲ್ಲಾ `ಕ್ರಿಮಿನಲ್ಸ್’ `ಥಗ್ಸ್’ ಎಂದು ಬಿಂಬಿಸಿ ಇವರನ್ನು ನಿಯಂತ್ರಿಸಲೆಂದು `ಥಗ್ಗೀ ಅಂಡ್ ಡಕಾಯಿತ್ ಡಿಪಾರ್ಟಮೆಂಟ್’ ಒಂದನ್ನು 1830 ರಲ್ಲಿ ಸ್ಥಾಪಿಸಿದನು. ಇದಕ್ಕೆ ಮೊದಲ ಅಧಿಕಾರಿಯಾಗಿ ವಿಲಿಯಂ ಸ್ಲೀಮನ್ ಅವರನ್ನು ನೇಮಿಸಿದನು. ಈ ಬೆಳವಣಿಗೆಯೇ ಮುಂದೆ 1871 ರಲ್ಲಿ `ಕ್ರಿಮಿನಲ್ ಟ್ರೈಬ್ಸ್ ಆಕ್ಟ್’ ಆಗಿ ಜಾರಿಗೆ ಬಂದಿತು. ಇದೊಂದು ಅಮಾನವೀಯ ಮತ್ತು ಸಾಮ್ರಾಜ್ಯಶಾಹಿ ದರ್ಪದ ಆಚರಣೆಯ ಕಾಯ್ದೆ ಎಂಬುದಾಗಿ ಬಹಳ ಟೀಕೆಗೆ ಒಳಗಾಗಿತ್ತು. ಮುಖ್ಯವಾಗಿ ಭಾರತದ ಕೃಷಿ ಮತ್ತು ವ್ಯವಸಾಯದ ಜತೆ ಬೆಸೆದುಕೊಂಡಿದ್ದ ಕುಶಲಕರ್ಮಿಗಳನ್ನೂ, ಅರಣ್ಯವಾಸಿ ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳನ್ನು ನಿಯಂತ್ರಿಸಲು ಈ ಕಾಯ್ದೆಯನ್ನು  ಬೇಟೆಯ ಅಸ್ತ್ರದಂತೆ ಬಳಕೆಯಾಯಿತು.

(1858 ರಲ್ಲಿ ಬ್ರಿಟೀಷ್ ಅಧಿಕಾರಿ ಹರ್ಪರ್ಸ್ ಸ್ಕೆಚ್ ಮಾಡಿದ ಠಕ್ಕರು ಕಾಳಿ ಆರಾಧನೆ ಮಾಡುತ್ತಿರುವ ಚಿತ್ರ)

ಗಂಟಿಚೋರ್ ಎನ್ನುವ ಹೆಸರಿನ ಕಾರಣಕ್ಕೆ ಮಾಡದ ತಪ್ಪಿಗೆ ಜೈಲಿಗೆ ಹಾಕುತ್ತಾರೆಂದು ಬೇರೆಡೆ ವಲಸೆ ಹೋಗಿ, ತಮ್ಮ ಸಮುದಾಯದ ಹೆಸರು ಗುರುತನ್ನು ಬದಲಿಸಿಕೊಂಡು ಬದುಕುತ್ತಿದ್ದ ಕತೆ ಹೇಳುತ್ತಿದ್ದರು.

ಈ ಸಂದರ್ಭದ ಭಾರತದ ಚರಿತ್ರೆಯೂ ಇದಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸಿತ್ತು. 1774 ಮತ್ತು 1871ರ ನಡುವಿನ ಭಾರತದ ಇತಿಹಾಸ ರಕ್ತದಲ್ಲಿ ಅದ್ದಿತೆಗೆದಂತಿದೆ.  ಭಾರತದ ಸ್ಥಳೀಯ ರಾಜ್ಯಗಳ ವಿರುದ್ಧ ಈ ಅವಧಿಯಲ್ಲಿ ಕಂಪನಿ ಮತ್ತು ವಸಾಹತು ಆಡಳಿತವು ಸರಣಿ ಯುದ್ಧಗಳನ್ನು ಮಾಡಿತು. ಆಂಗ್ಲೋ ಮರಾಠ ಯುದ್ಧ, ಮೈಸೂರು ಯುದ್ಧ, ಹೋಳ್ಕರ ಶರಣಾಗತಿ, ಪೇಶ್ವೇಗಳ ಸೋಲು, ವೆಲ್ಲೂರಿನ ಸಿಪಾಯಿದಂಗೆ, ಮೈಸೂರು ಮತ್ತು ಕೂರ್ಗ್‌ಗಳನ್ನು ಆಕ್ರಮಿಸಿದ್ದು, ಸಿಂಧ್, ಸಿಖ್, ಔಧ್ ಪ್ರದೇಶಗಳನ್ನು ವಶಕ್ಕೆ ಪಡೆದದ್ದು ಹೀಗೆ ಸರಣಿ ಯುದ್ಧ ಮತ್ತು ಆಕ್ರಮಣಗಳನ್ನು ಪಟ್ಟಿಮಾಡಬಹುದು. ಇದೆಲ್ಲದರ ತುದಿಯೆಂಬಂತೆ 1857ರಲ್ಲಿ ನಡೆದ ಸಿಪಾಯಿ ದಂಗೆಯ ಪರಿಣಾಮ ಹಲವು ಸ್ಥಳೀಯ ಸಮುದಾಯಗಳು ನೆಲೆ ಕಳೆದುಕೊಂಡವು. ಈ ಸಮುದಾಯಗಳು ಮುಂದೆ ಅಲೆಮಾರಿಗಳಾಗಿ ಬದಲಾದವು.

ಈ ಬಗೆಯ ಚಾರಿತ್ರಿಕ ಪಲ್ಲಟದಲ್ಲಿ ಭಾರತದ ಅನೇಕ ಸ್ಥಳೀಯ ಪಾಳೆಪಟ್ಟುಗಳು ಮತ್ತು ರಾಜರು ಕಂಪನಿ ಆಡಳಿತದ ಜೊತೆ ರಾಜಿ ಇಲ್ಲವೆ ಯುದ್ಧವೆಂಬ ಇಕ್ಕಟ್ಟಿಗೆ ಸಿಲುಕಿದವು. ಈ ಸಂಘರ್ಷದಲ್ಲಿ ಬಳಲಿ ದುರ್ಬಲರಾದದ್ದು ಮಾತ್ರ ಈ ದೇಶದ ದುಡಿಯುವ ವರ್ಗದ ಶ್ರಮಜೀವಿಗಳು. ಇಂತಹ ಇಕ್ಕಟ್ಟಿನ ಸಂದರ್ಭವನ್ನು ಕಂಪನಿ ಸರಕಾರವು ಬಹು ಕುತಂತ್ರದಿಂದ ಬಳಸಿಕೊಂಡಿತು. ಕೆಲವು ಸಂಸ್ಥಾನಗಳು ತಾವಾಗಿಯೇ ರಾಜಿಗೆ ಮುಂದಾಗುವ ಬಿಕ್ಕಟ್ಟಿನಲ್ಲಿ ಸಿಲುಕಿಸಿತು. ಇದರ ಪರಿಣಾಮವಾಗಿ ಕ್ರಮೇಣ ಎಲ್ಲ ಸಂಸ್ಥಾನಗಳನ್ನು ಬ್ರಿಟೀಷ್ ಆಡಳಿತ ತನ್ನ ಪರಿಧಿಯೊಳಕ್ಕೆ ಸಿಕ್ಕಿಸಿಕೊಂಡಿತು. ಇಷ್ಟಾಗಿಯೂ ಪ್ರತಿರೋಧಿಸಿದ, ಎದುರಾಡಿ ದಿಟ್ಟತನ ತೋರಿದ ಸಮುದಾಯಗಳನ್ನು ಕಾನೂನಿನಡಿ ಕಟ್ಟಿಹಾಕಲು ಕೆಲವು ನಿಯಮಗಳನ್ನು ರೂಪಿಸಿತು. ಇಂತಹ ಒಂದು ಚಾರಿತ್ರಿಕ ತಿರುವಿನಲ್ಲಿ ಜನ್ಮ ಪಡೆದದ್ದು ಕ್ರಿಮಿನಲ್ ಟ್ರೈಬ್ಸ್ ಆಕ್ಟ್ (Criminal Tribes Act)

ಹೀಗೆ `ಕ್ರಿಮಿನಲ್ ಟ್ರೈಬ್ಸ್ ಆಕ್ಟ್’ 1871ರಲ್ಲಿ ಜಾರಿಯಾದರೂ ಕಂಪನಿ ಸರಕಾರವು 1793ರಲ್ಲಿಯೇ ಕೆಲವು ಉತ್ತರ ಭಾರತದ ಸಮುದಾಯಗಳನ್ನು ಪಟ್ಟಿ ಮಾಡಿತ್ತು. ಈ ಪಟ್ಟಿ ಅಲಭ್ಯವಾಗಿದೆ. ಈ ಪಟ್ಟಿಯ ರಾಜಕೀಯ ಕಾರಣವೂ ಸ್ಪಷ್ಟ : ಈ ಸಮುದಾಯಗಳು ಮುಂದೆ ತಮ್ಮ ಆಡಳಿತಕ್ಕೆ ಅಪಾಯಕಾರಿಗಳು, ಇವರನ್ನು ನಿಯಂತ್ರಿಸದೆ ಭಾರತವನ್ನು ವಶಕ್ಕೆ ಪಡೆಯುವುದು ಅಸಾಧ್ಯ ಎನ್ನುವ ಸೂಚನೆಯನ್ನೂ ಕೊಟ್ಟಿತ್ತು. ಹೀಗೆ `ಕ್ರಿಮಿನಲ್ ಟ್ರೈಬ್ಸ್’ ಕಾಯ್ದೆಯನ್ನು ಒಂದು ಅಸ್ತ್ರದಂತೆ ಬಳಸಿ ಈ ದೇಶದ ಮೂಲನಿವಾಸಿಗಳನ್ನು, ಅಲೆಮಾರಿ ಪಶುಪಾಲಕರನ್ನೂ, ವೃತ್ತಿ ಸಂಗೀತಗಾರರು, ಆದಿವಾಸಿಗಳು,  ಜಿಪ್ಸಿಗಳು, ಹಾವಾಡಿಸುವವರು, ಅಲೆಮಾರಿ ವೈದ್ಯರು ಮುಂತಾದ  ಸಮುದಾಯಗಳನ್ನು ಬ್ರಿಟಿಷರು ಸದಾ ಅನುಮಾನಿಸುತ್ತಲೇ ಇವರೆಲ್ಲರನ್ನೂ ‘ಅಪರಾಧಿ ಸಮುದಾಯಗಳ ಪಟ್ಟಿಗೆ ಸೇರಿದರು. ಅಂತೆಯೇ ಈ ಪಟ್ಟಿಯಲ್ಲಿದ್ದ ಸಮುದಾಯಗಳನ್ನು ಕಂಪನಿ ಸರಕಾರವು ಜನ್ಮತಃ ಅಪರಾಧಿಗಳು (Born criminals) ಎಂದು ಪರಿಗಣಿಸಿಬಿಟ್ಟಿತ್ತು. ಪೊಲೀಸರಿಗೆ ತರಬೇತಿ ಕೊಡುತ್ತಿದ್ದ ಸಂದರ್ಭದಲ್ಲಿ, ಅಲ್ಲಿನ ಪಠ್ಯಕ್ರಮದಲ್ಲಿ, ‘ಅಪರಾಧಿ ಬುಡಕಟ್ಟುಗಳನ್ನು’ ಗುರುತಿಸುವುದು ಮತ್ತು ಕಾನೂನಿನ ಮೂಲಕ ಅವರನ್ನು ಹೇಗೆ ನಿಯಂತ್ರಿಸುವುದು ಎಂಬ ಕುರಿತು ಪಾಠಗಳನ್ನು ಸೇರಿಸಿತು.

ಇಂತಹ ಅಪರಾಧಿ ಸಮುದಾಯಗಳನ್ನು ಸರಿದಾರಿಗೆ ತರುವ ನೆಪವೊಡ್ಡಿ  ಅಧಿಕಾರಿಯೊಬ್ಬನನ್ನು ನೇಮಿಸಿ `ಸೆಟ್ಲ್ ಮೆಂಟು’ಗಳಲ್ಲಿಟ್ಟು ಅವರನ್ನು ನಿಯಂತ್ರಿಸಲಾಯಿತು. ಹೀಗೆ ಸೆಟ್ಲ್ ಮೆಂಟುಗಳಲ್ಲಿದ್ದ ಬುಡಕಟ್ಟುಗಳನ್ನು ಬ್ರಿಟೀಷ್ ಸರಕಾರ ತಮ್ಮ ಅನುಕೂಲಕ್ಕೆ ತಕ್ಕ ಹಾಗೆ ಮಾನವ ಸಂಪನ್ಮೂಲವಾಗಿ ಬಳಸಿಕೊಳ್ಳತೊಡಗಿತು. ಕರ್ನಾಟಕದಲ್ಲಿ ಹುಬ್ಬಳ್ಳಿ, ಗದಗ, ಗೋಕಾಕ ಫಾಲ್ಸ್, ದಾಂಡೇಲಿ, ಬಿಜಾಪುರ, ಬೆಳಗಾವಿ, ಬಾಗಲಕೋಟೆ ಸೆಟ್ಲ್ ಮೆಂಟುಗಳಲ್ಲಿ ಕೊರಮ, ಗಂಟಿಚೋರ್, ಭೋವಿ, ಪಾರ್ಧಿ, ಕಂಜರಭಾಟ, ಚಪ್ಪರಬಂದ್, ಹರಣಶಿಕಾರಿ, ಮಾಂಗ್ ಗಾರುಡಿಗ ಬುಡಕಟ್ಟುಗಳು ನೆಲೆಸಿದ್ದವು.

ಅಧಿಕೃತವಾಗಿ 1947 ರಲ್ಲಿ ಭಾರತ ಸ್ವಾತಂತ್ರ್ಯ ಪಡೆದಾಗಲೂ ಇಂತಹ ಸೆಟ್ಲ್ಮೆಂಟ್ ವಾಸಿಗಳಿಗೆ ಸ್ವತಂತ್ರ ಸಿಕ್ಕದ್ದು 1952ರಲ್ಲಿ. ಈ ಕಾನೂನನ್ನು ರದ್ದು ಮಾಡಿ ಸೆಟ್ಲ್ಮೆಂಟ್ ಗಳಲ್ಲಿ ನೆಲೆಸಿದ್ದ ಬುಡಕಟ್ಟುಗಳನ್ನು ಬಿಡುಗಡೆಗೊಳಿಸಲಾಯಿತು. ಬ್ರಿಟಿಷರ `ಕ್ರಿಮಿನಲ್ ಟ್ರೈಬ್ಸ್ ಕಾಯ್ದೆ’ ಭಾರತದಲ್ಲಿ ರದ್ದಾದರೂ ಸಹ ಪೊಲೀಸ್ ತರಬೇತಿಯ ಪಠ್ಯಕ್ರಮದಿಂದ `ಅಪರಾಧಿ ಬುಡಕಟ್ಟು ಕಾಯ್ದೆ’ಯ ಪಾಠಗಳು ಹಾಗೆಯೇ ಉಳಿದವು. ನಂತರದಲ್ಲಿ ಈ ಬುಡಕಟ್ಟುಗಳನ್ನು ಸ್ವತಂತ್ರ ಭಾರತದ ಸರಕಾರವು `ಪಾರಂಪರಿಕ ಅಪರಾಧಿ ಕಾಯ್ದೆ’ಯ (Habitual offender Act) ಅಡಿಯಲ್ಲಿ ಗುರುತಿಸಬೇಕೆಂದು  ಪೊಲೀಸರಿಗೆ ನಿರ್ದೇಶಿಸಿತು.

1990 ರ ಸುಮಾರಿಗೆ ವಿಮುಕ್ತ ಬುಡಕಟ್ಟುಗಳ ಪಾಲಿಗೆ ಒಂದು ಮಹತ್ವದ ಕೋರ್ಟ ತೀರ್ಪು ಬಂದಿತು. ವೆಸ್ಟ್ ಬೆಂಗಾಲದ ಬುಧಾನ ಸಾಬರ್ ಮತ್ತು ಮಹರಾಷ್ಟ್ರದ ಪಿನ್ಯಹರಿಕಾಳೆ ಎಂಬ ಇಬ್ಬರು ವಿಮುಕ್ತ ಬುಡಕಟ್ಟುಗಳ ಸದಸ್ಯರನ್ನು ಬಂಧಿಸಿ ಚಿತ್ರಹಿಂಸೆಕೊಟ್ಟ ಕಾರಣ ಲಾಕಪ್ ಡೆತ್‌ಗೆ ಒಳಗಾಗಿದ್ದರು. ಈ ಕೇಸುಗಳನ್ನು ಪರಿಶೀಲಿಸಿದರೆ `ಅಪರಾಧಿ ಬುಡಕಟ್ಟು’ಗಳೆಂಬ ಪೂರ್ವಗ್ರಹದಿಂದಲೇ ಈ ಸಾವುಗಳು ಸಂಭವಿಸಿವೆ, ಇದೇ ಕಾರಣಕ್ಕೆ ದೇಶದಲ್ಲಿ ಇನ್ನೆಷ್ಟು ಸಾವುಗಳು ಸಂಭವಿಸುತ್ತಿವೆಯೋ’ ಎಂದು ಪ್ರಶ್ನಿಸಿದ ಕೋರ್ಟ್, ಸಂಬಂಧಿಸಿದ ಪೋಲೀಸ್ ಅಧಿಕಾರಿಗಳನ್ನು ವಜಾ ಮಾಡುವಂತೆ ತೀರ್ಪು ನೀಡಿತ್ತು. ಈ ತೀರ್ಪಿನಲ್ಲಿ `ಪಾರಂಪರಿಕ ಅಪರಾಧಿ ಕಾಯ್ದೆ’ಯ (Habitual offender Act) ನ್ನು ರದ್ದುಪಡಿಸಬೇಕು ಎಂದು ಕೋರ್ಟ ಸರಕಾರಕ್ಕೆ ಆದೇಶಿಸಿತ್ತು. ಹೀಗೆ ಭಾರತದ ಅರಣ್ಯವಾಸಿ, ಆದಿವಾಸಿ, ಅಲೆಮಾರಿ ಬುಡಕಟ್ಟುಗಳು ಅಪರಾಧಿಗಳಾಗಿ ಗುರುತಿಸಲ್ಪಟ್ಟು ನಿರಂತರವಾಗಿ ಅದರ ಪೆಟ್ಟುತಿಂದು ನೋವುಗಳ ಗುರುತುಗಳಲ್ಲೇ ಬದುಕುವಂತಾಗಿದೆ. ಇಂದಿಗೂ ಈ ಪೆಟ್ಟುಗಳು ಹೊಸ ಹೊಸ ರೂಪಗಳಲ್ಲಿ ಈ ಸಮುದಾಯಗಳಿಗೆ ಬೀಳುತ್ತಲೇ ಇದೆ.

( 1850 ರಲ್ಲಿ ಠಕ್ಕರು ದಾರಿಹೋಕನನ್ನು ಕೈವಸ್ತ್ರದಿಂದ ಕೊಲೆ ಮಾಡುವ ಚಿತ್ರ.)

ಇಂತಹ ಚಾರಿತ್ರಿಕ ತಿರುವುಗಳಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿ ಕಾಲದ ಪ್ರವಾಹಕ್ಕೆ ಎದುರಾಗುತ್ತಲೇ ಬದುಕುತ್ತಾ, ಅಪರಾಧಿ ಬುಡಕಟ್ಟೆಂದು ಹಣೆಪಟ್ಟಿ ಕಟ್ಟಿಕೊಂಡಿದ್ದ ಸಮುದಾಯವೇ `ಗಂಟಿಚೋರ’ ಸಮುದಾಯ. ಉತ್ತರ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿರುವ ಗಂಟಿಚೋರ್ಸ್ ಸಮುದಾಯ ದೇಶವ್ಯಾಪಿ ಹರಡಿಕೊಂಡಿದೆ. ಉಚಲ್ಯಾ, ಭಾಮ್ಟಾ, ಠಕಾರಿ ಭಾಮ್ಟಾ, ಠಕಾರಿ, ಗುನ್ಹೆಗಾರ, ವಡ್ಡರ್, ಗಿರಣಿ ವಡ್ಡರ್, ಕಿಸೆ ಕತ್ರಾಸ್, ಕಳ್ಳವಡ್ಡರ್, ತುಡುಗುವಡ್ಡರ್, ಪಾತ್ರೂಟ್ ಹೀಗೆ ಬಹುರೂಪದಲ್ಲಿ ಸಮಾನಾಂತರ ಹೆಸರುಗಳೊಂದಿಗೆ ಈ ಸಮುದಾಯ ನೆಲೆಸಿದೆ.

ಈ ಎಲ್ಲಾ ಹೆಸರುಗಳ ಒಳಗೆ ಇರಬಹುದಾದ ಒಂದು ಎಳೆಯೆಂದರೆ `ತುಡುಗು’ ಅಥವಾ `ಕಳ್ಳತನ’ `ಲೂಟಿ’ ಯೇ ಆಗಿದೆ. ಇದು ಸಂಪತ್ತಿನ ಅಸಮಾನ ಹಂಚಿಕೆಯ ಕೊರತೆಯ ಬಿಂದುವಿನಲ್ಲಿ ಸಮುದಾಯಗಳ ಒಳಗಿಂದ ಹುಟ್ಟಿದ `ಪ್ರತಿರೋಧ’ದ ಒಂದು ಮಾದರಿ. ಈ ಮೊದಲು ಚರ್ಚಿಸಿದಂತೆ ಬ್ರಿಟಿಷ್ ಆಡಳಿತದಿಂದಾಗಿ ಸ್ಥಳೀಯ ಸಂಸ್ಥಾನಿಕ ರಾಜರುಗಳ ಸೈನ್ಯದಿಂದ ವಿಸರ್ಜಿತಗೊಂಡ ಸೈನಿಕ ಸಮುದಾಯಗಳು ಬದುಕಲು ಹಲವು ಮಾರ್ಗಗಳನ್ನು ಅನುಸರಿಸಿದವು. ಹಾಗಾಗಿ ಸೈನ್ಯದಲ್ಲಿ ಸಂಪತ್ತನ್ನು ಲೂಟಿ ಮಾಡುತ್ತಿದ್ದ ಸೈನಿಕರು ಈ ಲೂಟಿಯನ್ನು ಹೊಟ್ಟೆಪಾಡಿಗಾಗಿ ತಮ್ಮೆದುರಿಗಿದ್ದ ಶ್ರೀಮಂತ ಜಮೀನ್ದಾರರ ಮೇಲೆ ಪ್ರಯೋಗಿಸಿದರು. ಇದು ಕಾಲಾನಂತರ `ತುಡುಗು’ `ಕಳ್ಳತನ’ `ಲೂಟಿ’ಯಾಗಿ ಬದಲಾಯಿತು. ಇವರು ಉತ್ತರಭಾರತದಲ್ಲಿ ಹಲವು ಹೆಸರುಗಳುಳ್ಳ ಠಕ್ಕರಾದರೆ, ದಕ್ಷಿಣ ಭಾರತದಲ್ಲಿ ಭಾಮ್ಟಾ, ಠಕಾರಿ ಭಾಮ್ಟಾ, ಉಚಲ್ಯಾ, ಗಂಟಿಚೋರ್ ಆಗಿ ಗುರುತಿಸಿಕೊಂಡರು. ಈ ಎಲ್ಲರನ್ನೂ ದೇಶವ್ಯಾಪಿ ಬೆಸೆಯುವ ಎಳೆಯೆಂದರೆ ಇವರೆಲ್ಲಾ `ಶಾಕ್ತಪಂಥ’ದ ಆರಾಧಕರಾಗಿದ್ದು `ಶಾಕ್ತೇಯ’ ಸಮುದಾಯವಾಗಿರುವುದು.

ಗಂಟಿಚೋರ್ ಇದು ಕರ್ನಾಟಕದಲ್ಲಿ ಮಾತ್ರ ವಿಶೇಷವಾಗಿ ಕಂಡುಬರುವ ಹೆಸರು. ಈ ಹೆಸರಿನಿಂದ ಗುರುತಿಸಲ್ಪಟ್ಟ ಸಮುದಾಯವೊಂದು (ಮುಂಬೈಕರ್ನಾಟಕ ಪ್ರದೇಶದಲ್ಲಿ) ಉತ್ತರಕರ್ನಾಟಕದ ಭೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿದೆ. ಅಂತೆಯೇ ಈ ಸಮುದಾಯದಲ್ಲಿನ `ಪಾಪನೋರು’ ಎನ್ನುವ ಕುಲದ ಹಿನ್ನೆಲೆಯ ಬೆನ್ನತ್ತಿದರೆ, ಈ ಭೌಗೋಳಿಕ ಪರಿಸರದಲ್ಲಿ ಕನಿಷ್ಠ 9-10 ನೇ ಶತಮಾನದಿಂದಲೂ ಈ ಸಮುದಾಯದ `ಪಾಪನೋರು’ ಕುಲದವರು ನೆಲೆಸಿರಬೇಕು ಎನ್ನುವ ಅನುಮಾನಾಸ್ಪದ ಎಳೆಯೊಂದು ಸಿಗುತ್ತದೆ. ಅಂತೆಯೇ ಈ ಗಂಟಿಚೋರ್ ಸಮುದಾಯ ತನ್ನದೇ ಆದ ಸಾಮುದಾಯಿಕ ಗುರುತುಗಳನ್ನು ಸ್ಮೃತಿಲೋಕದಲ್ಲಿ ಅಡಗಿಸಿಟ್ಟುಕೊಂಡಿದೆ. ಈ ಸಮುದಾಯದ ಶೇ 85 ರಷ್ಟು ಮನೆಗಣತಿ ಮಾಡಿ ಖಚಿತ ಅಂಕಿಸಂಖ್ಯೆಗಳನ್ನು ಈ ಕೃತಿಯಲ್ಲಿ ದಾಖಲಿಸಲಾಗಿದೆ. ಸದ್ಯಕ್ಕೆ ಕರ್ನಾಟಕದ 7 ಜಿಲ್ಲೆಯ 19 ತಾಲೂಕಿನ 36 ನೆಲೆಗಳಲ್ಲಿ ನೆಲೆಸಿದ ಗಂಟಿಚೋರ್ಸ್ ಸಮುದಾಯದ ಒಟ್ಟು ಜನಸಂಖ್ಯೆ 5826 (ಗಂ-2892, ಹೆ-2934) ರಷ್ಟಿದೆ. ಗಂಟಿಚೋರರಲ್ಲಿ ಗಂಡಸರಿಗಿಂತ 42 ಮಹಿಳೆಯರು ಹೆಚ್ಚಿರುವುದು ವಿಶೇಷವಾಗಿದೆ.

ಒಟ್ಟಾರೆಯಾಗಿ ಗಂಟಿಚೋರ್ಸ್ ಸಮುದಾಯವು ಅಪರಾಧಿ ಬುಡಕಟ್ಟೆಂಬ ಹಣೆಪಟ್ಟಿಯನ್ನು ಕಳಚಿಕೊಳ್ಳುತ್ತಾ ಹೊಟ್ಟೆಪಾಡಿಗೆ ನೆಚ್ಚಿಕೊಂಡಿದ್ದ ತುಡುಗುತನ ಕಳ್ಳತನದಂತಹ ಪ್ರವೃತ್ತಿಯಿಂದ ದೂರ ಸರಿಯುತ್ತಾ, ಹೊಸ ವೃತ್ತಿ ಮತ್ತು ಹೊಸ ಬದುಕನ್ನು ಕಟ್ಟಿಕೊಳ್ಳಲು ತುಡಿಯುತ್ತಿದೆ. ಹೀಗೆ ಹೊಸಬದುಕಿಗೆ ಹೊಂದಿಕೊಳ್ಳಲು ಬದಲಾದ ಕಾಲದಲ್ಲಿ ಇತರೆ ಸಮುದಾಯಗಳ ಜತೆ ಸಂಘರ್ಷ ಮತ್ತು ಕೊಡುಕೊಳೆ ಮಾಡುತ್ತಲೇ ನೆಲೆಗೊಳ್ಳುವ ಲಕ್ಷಣಗಳನ್ನು ತೋರುತ್ತಿದೆ. ಈ ಪಯಣಕ್ಕೆ ಸರಕಾರವೂ ನೆರವಾದರೆ, ತನ್ನ ಯೋಜನೆಗಳಲ್ಲಿ ಈ ಸಮುದಾಯವನ್ನು ಒಳಗುಮಾಡಿಕೊಂಡರೆ ಇದರ ನೆಲೆಗೊಳ್ಳುವಿಕೆ ಇನ್ನಷ್ಟು ಗಟ್ಟಿಗೊಳ್ಳುವ ಸಾಧ್ಯತೆ ಇದೆ. ಅಂತೆಯೇ ಸಮುದಾಯದ ಹೊಸ ಗುರುತಿನ ಆತ್ಮವಿಶ್ವಾಸವೂ ಹೆಚ್ಚಲಿದೆ.

(ಚಿತ್ರಗಳು: ಅಂತರ್ಜಾಲದಿಂದ)