ಅಭಿಯಂತರನ ಸ್ವಗತ

ಅದೇ ಕಪ್ಪು ಪೆಟ್ಟಿಗೆಯ
ಮುಂದೆ ಕೂತು ಕೂತು
ಗುಂಡಗುಬ್ಬಿದ ಕೆಂಪು ಕಣ್ಣುಗಳಿಗೆ..
ಇವಳು ರಾತ್ರಿಯಿಡುವ
ಸೌತೆಯ ಬಿಲ್ಲೆಗಳದೇ ಧ್ಯಾನ..!

ಸಿಲ್ಕ್ ಬೋರ್ಡಿನ ಜಾಮೊಳಗೆ
ಕಳೆದೆಷ್ಟೋ ನಿರರ್ಥಕ ಗಳಿಗೆಗಳ
ಅಂದಾಜು ಸಿಗದೆ,
ಕುಯ್ಗುಟ್ಟುವ ಹಾರನ್ನುಗಳಲೇ
ನೆಮ್ಮದಿಯ ನಿದ್ರೆಯ ಅಹವಾಲು..

ಯೌವ್ವನದ ಅರ್ಧ ಭಾಗವನ್ನೆಲ್ಲಾ
ಆಪೋಶಿಸಿದ ನೈಟ್ ಶಿಫ್ಟುಗಳು..!
ಒಳಗಿನ ಏಸಿ ಚಳಿಗೆ ನಡುಗಿದ್ದು ಪ್ರಾಯ!
ವಾರವಾದರೂ ನೋಡದ ಮಗಳ ಮುಖ
ಮೊಬೈಲ್ ಸ್ಕ್ರೀನ್ನಲ್ಲಷ್ಟೇ…! ಮರೆತ ಸುಖ..!!

ಮನೆಯ ಟೀವಿಗೆ ಪುನರಾವೇಶಿಸೆಂಬ
ಇವಳ ವಾಟ್ಸಾಪಿನ ಸಂದೇಶಗಳು
ಕಿರಿಕಿರಿ ಮಾಡದಿದ್ದೀತೇ!?
ಸಾಲದ್ದಕ್ಕೆ ದಿನಸಿ ಸಾಮಾನು
ಹಾಲು ಮೊಸರು
ಅರ್ಜೆಂಟ್ ಎಂಬ ಹಣೆಪಟ್ಟಿ ಬೇರೆ…!!
ಕಿಟಕಿಯಾಚೆ ಝಡಿಮಳೆಗೆ ಕೊಚ್ಚಿ ಹೋದ
ಕೋಟಿ ಕನಸುಗಳು ಜ್ಞಾಪಕಾರ್ಥವಾಗಿ..!!

ಮನೆಯ ಸೋರುವ ಕೊಳಾಯಿ,
ಫ್ರಿಡ್ಜ್ನಲ್ಲಿ ಖಾಲಿಯಾದ ತರಕಾರಿ ಹಣ್ಣುಗಳು,
ಬಜಾರಿನ ಕಪಾಟಿನಲ್ಲಿ ಜೋಡಿಸಿಟ್ಟ ದಿನಸಿ,
ಡಿಸ್ಕೌಂಟ್ ದರದಲ್ಲಿ ನೇತಾಡುವ ಮಾಲಿನ ಬಟ್ಟೆ,
ಲಾಂಡ್ರಿಗೆ ಹೊರಟಿದ್ದ ಅಂಗಿಗಳು
ಹೆಂಡತಿಯ ಡಿನ್ನರ್ ಸಿನೆಮಾ ಪ್ಲಾನುಗಳಿಗೂ
ನನ್ನ ವೀಕೆಂಡಿನದೇ ಚಿಂತೆ..!!

ನೆಮ್ಮದಿಯ ನಿದ್ರೆ
ವಿಶ್ರಾಂತಿಯ ಇಂಗಿತವಷ್ಟೇ.!!
ಓ ಭ್ರಮೆ! ರೇಡಿಯೊ ಜಾಕಿಗಳ
ಪಟಗುಡುವ ಮಾತುಗಳು..
ವಾಸ್ತವಕ್ಕೆ ಎಳೆದು ಬಿಸಾಕಿದ್ದಷ್ಟೇ!!
ಬಾಸಿನ ಟ್ರಿಂಗಣ ಕರೆಗೆ
ಇಣುಕಬೇಕಿತ್ತು ಮತ್ತೆ ಲ್ಯಾಪ್‌ಟಾಪಿನ ಪರದೆಯೊಳಗೆ…!!

ಅರ್ಚನಾ ಎಚ್ ಬೆಂಗಳೂರಿನವರು
ಕತೆ ಮತ್ತು ಕವನ ರಚನೆಯಲ್ಲಿ ಆಸಕ್ತಿ ಹೊಂದಿದ್ದಾರೆ
ದಸರಾ ಕಾವ್ಯ ಪುರಸ್ಕಾರ ಸೇರಿದಂತೆ ಹಲವು ಪುರಸ್ಕಾರಗಳು ಇವರ ರಚನೆಗಳಿಗೆ ಲಭಿಸಿವೆ