“ನಿಜ ಆ ಸಮಯ ನನ್ನದಾಗಲೇ ಇಲ್ಲ. ಆ ಘಟನೆ ನಡೆದು ಹತ್ತು ವರ್ಷಗಳಾಗಿ ಹೋಗಿವೆ. ಆದರೆ ಅಜ್ಜಿಯ ಮುಖ ನೋಡದೆ ಕಳೆದುಕೊಂಡ ಆ ದಿನ ಇಂದಿಗೂ ನನ್ನನ್ನು ಬಹಳ ಕಾಡುತ್ತಿದೆ. ನಿಜವಾಗಿಯೂ ಈ ನಾನು ಎಂಬ ಪಾತ್ರಕ್ಕೆ ಜೀವತುಂಬಿದ್ದವರಲ್ಲಿ ಆ ನನ್ನ ಅಜ್ಜಿಯು ಕೂಡ ಒಬ್ಬರು. ಯಾವಾಗಲೂ ಅಕ್ಸತೆ, ಅಕ್ಸತೆ ಎಂದು ಮುದ್ದು ಮುದ್ದಾಗಿ ಕೂಗಿ ಕಾಡುತಿದ್ದ ಅಜ್ಜಿಯನ್ನು ಕೊನೆಯ ಬಾರಿ ನೋಡಲಾಗಲಿಲ್ಲವಲ್ಲ ಎಂಬ ಕೊರಗು ಪಾಪ ಪ್ರಜ್ಞೆಯಾಗಿ ಇಂದಿಗೂ ಕಾಡುತ್ತಿದೆ. ಈಗ ನನ್ನವರಾಗಿ ಉಳಿದಿದ್ದು ಮಾತ್ರ ನನ್ನ ಅಜ್ಜಿ.  ಆದರೆ ರಂಗಭೂಮಿ, ಬದ್ಧತೆ, ಶಿಸ್ತು ಎಂಬ ಒಂದಿಷ್ಟು ವಿಚಾರಗಳು ನನ್ನೊಳಗಿನ ನಟಿಯನ್ನು ಆ ಕ್ಷಣ ಸಾಯಿಸಿ ಕೇವಲ ಕೆಲವೊಂದಿಷ್ಟು ತಂತ್ರಗಳೊಂದಿಗೆ ಅಂದಿನ ಪ್ರದರ್ಶನ ಮುಗಿಸುವಂತೆ ಮಾಡಿತ್ತು.” 
ನಟಿ ಅಕ್ಷತಾ ಪಾಂಡವಪುರ ಬರೆದ ದಿನಚರಿಯ ಮೂರನೇ ಕಂತು.

 

ನಾನು ನನ್ನನ್ನು ಹುಡುಕುವ ಮೊದಲು ನಮ್ಮವರನ್ನು ಹುಡುಕಬೇಕು… ಹಾಗಿದ್ದರೆ ಯಾರು ನಮ್ಮವರು! ದಿನದಿಂದ ದಿನಕ್ಕೆ ಈ ಪ್ರಶ್ನೆ ನನ್ನನ್ನು ಬೆನ್ನು ಬಿಡದೆ ಕಾಡಿಸುತ್ತ ಪೀಡಿಸಲು ಶುರುವಾದಾಗ ಒತ್ತಾಯಪೂರ್ವಕವಾಗಿಯಾದರು ಸರಿ… ನನ್ನವರು ಯಾರೆಂದು ಹುಡುಕಲೇಬೇಕೆಂದು ನಿಂತೇ ಬಿಟ್ಟೆ….. ಎಲ್ಲರನ್ನು ಬಿಟ್ಟು ಸಾಧಿವುದಕ್ಕಿಂತ, ನಮ್ಮವರೊಂದಿಗೆ ಸಾಗುವುದೇ ಒಳಿತು ಅನ್ನಿಸಿದ್ದು ನನ್ನೊಳಗಿನ ನಟಿಗೆ….

ನನ್ನ ಕ್ಷೇತ್ರ ರಂಗಭೂಮಿಯಾಗಿದ್ದು ನನಗೆ ಅರಿವಿಲ್ಲದ ಹಾಗೆ. ಅಲ್ಲಿ ಹೇಳಿಕೊಡುವ ಒಂದೊಂದು ಪಾಠವೂ ನಮ್ಮ ಜೀವನವನ್ನು ರೂಪಿಸುವಂತಹುದು, ಅಲ್ಲಿ ಕಾಣುವ ಒಂದೊಂದು ವಸ್ತುವು ನನ್ನದು. ಈ ವಸ್ತ್ರ ಆ ಪರಿಕರ ಕಲ್ಲು-ಮಣ್ಣು-ಪದ್ಯ-ಗದ್ಯ-ಅವನು-ಅವಳು-ಆ ಹಾಡು ಈ ಪಾಡು ಇವೆಲ್ಲವೂ ನನ್ನದು ಅನ್ನುವುದಕ್ಕಿಂತ ಹೆಚ್ಚಾಗಿ ನನ್ನದಾಗಲೇಬೇಕು. ಆಗಲೇ ಈ ಕ್ಷೇತ್ರ ನನಗೆ ಒಲಿಯೋದು ಎಂಬ ಕಲ್ಪನೆಗೆ ಜೋತುಬಿದ್ದವಳು ನಾನು. ಹಾಗಿದ್ದರೆ ಮಾತ್ರ ರಂಗಭೂಮಿಯಲ್ಲಿದ್ದು ಏನನ್ನಾದರೂ ಕಲಿಯಲು ಸಾಧ್ಯ. ಹಾಗೆ ನಟಿಯಾಗಿ! ಇವೆಲ್ಲವೂ ಅವರು ಹೇಳುತ್ತಿದ್ದ ಪಾಠಗಳಲ್ಲಿ ಒಂದಾಗಿತ್ತು. ಆದರೆ ಅವೆಲ್ಲವೂ ಆ ಕಾಲಕ್ಕೆ, ಆ ಪಾತ್ರಕ್ಕೆ, ಅಂದಿನ ನನ್ನ ಅಭಿನಯಕ್ಕೆ ಮತ್ತು ಹೇಳುವುದಕ್ಕಷ್ಟೇ ಸುಳ್ಳಿನ ರೂಪದಲ್ಲಿ ನನ್ನದಾಗುತ್ತಿತ್ತೇ ವಿನಃ ನನ್ನವರು ಕಾಣಲೇ ಇಲ್ಲ….!

ಕಾಲಕ್ರಮೇಣ ಇದರ ಹುಡುಕಾಟವನ್ನು ಬಿಟ್ಟು ನಾನು, ನಾನಾಗಿಯೇ ಇದ್ದ ಸಮಯದಲ್ಲಿ ಈ ಎಲ್ಲ ಸುಳ್ಳುಗಳ ನಡುವೆ ಸತ್ಯ ಹುಡುಕುವ ಸಮಯದಲ್ಲಿ ಒಂದು ದುರಂತ ಕಾದಿತ್ತು! ಅದೇ ನನ್ನ ಮುತ್ತಜ್ಜಿ (ನನ್ನ ತಾಯಿಯ ತಂದೆಯ ತಾಯಿ) ಸಾವು. ಆ ವಿಷಯ ನನಗೆ ತಿಳಿಯುವ ಮೊದಲೇ ಬೆಳ್ಳಂಬೆಳಗ್ಗೆ ನಾಟಕದ ಮಾಸ್ತರಿಗೆ ತಿಳಿದಿತ್ತು. ನಾನಂದು ರಂಗ ತಾಲೀಮಿನಲ್ಲಿದ್ದ ಕಾರಣ ವಿಷಯ ಮಧ್ಯಾಹ್ನದ ಹೊತ್ತಿಗೆ ತಿಳಿದು ಹೋಗಲನುಮತಿಯ ಕೇಳಿದೆ (ಇಪ್ಪತ್ತು ಕಿಮೀ ಅಷ್ಟೇ ತೆರಳಬೇಕಿದ್ದು). “ಇದು ರಂಗಭೂಮಿ, ಇಲ್ಲಿ ಬದ್ಧತೆ ಮುಖ್ಯ, ಪ್ರದರ್ಶನಕ್ಕೆ 4 ದಿನಗಳಷ್ಟೇ ಉಳಿದಿವೆ. ಸಂಜೆಗೆ ಒಂದು ಸಂಪೂರ್ಣ ರನ್ (run) ಇದೆ, ನೀ ಹೋದರೆ ಎಷ್ಟು ಜನರ ಶ್ರಮ ವ್ಯರ್ಥ. ಇದೆ ನಮ್ಮೆಲ್ಲರ ಕುಟುಂಬ. ಯಾರದೋ ತಂದೆ ಸತ್ತಾಗ, ಮತ್ಯಾರದೋ ತಾಯಿ ಹೋದಾಗ ಅಲ್ಲಿಗೆ ತೆರಳದೆ ಶೋ ಮುಗಿಸಿದ ಅವನು – ಅವಳು ಗ್ರೇಟ್ ಅಂತ ಒಂದಷ್ಟು ಉದಾಹರಣೆಯನ್ನು ಕೊಟ್ಟು ನನ್ನ ಮನಸ್ಸನ್ನು ಗಟ್ಟಿ ಮಾಡಿಯೇಬಿಟ್ಟರು. ವೃತ್ತಿ ಜೀವನದ ಬದ್ಧತೆಯ ಬಗ್ಗೆ ತಿಳಿಸಿಕೊಟ್ಟ ಅವರು ಅಂದು ನನ್ನವರಾಗಿಬಿಟ್ಟರು. ಆಗ ಅವರು ಹೇಳಿದ ಸೋ ಕಾಲ್ಡ್ ಬದ್ಧತೆಯನ್ನು ನಾನು ತೋರಿಸೇಬಿಟ್ಟೆ. ಆದರೆ ನಿಜವಾಗಿಯೂ ನನ್ನ ಮನಸು ಗಟ್ಟಿಯಾಯಿತೇ! ಊಹೂಂ ಇಲ್ಲವೆನಿಸುತ್ತೆ.

ನಿಜ ಆ ಸಮಯ ನನ್ನದಾಗಲೇ ಇಲ್ಲ. ಆ ಘಟನೆ ನಡೆದು ಹತ್ತು ವರ್ಷಗಳಾಗಿ ಹೋಗಿವೆ. ಆದರೆ ಅಜ್ಜಿಯ ಮುಖ ನೋಡದೆ ಕಳೆದುಕೊಂಡ ಆ ದಿನ ಇಂದಿಗೂ ನನ್ನನ್ನು ಬಹಳ ಕಾಡುತ್ತಿದೆ. ನಿಜವಾಗಿಯೂ ಈ ನಾನು ಎಂಬ ಪಾತ್ರಕ್ಕೆ ಜೀವತುಂಬಿದ್ದವರಲ್ಲಿ ಆ ನನ್ನ ಅಜ್ಜಿಯು ಕೂಡ ಒಬ್ಬರು. ಯಾವಾಗಲೂ ಅಕ್ಸತೆ, ಅಕ್ಸತೆ ಎಂದು ಮುದ್ದು ಮುದ್ದಾಗಿ ಕೂಗಿ ಕಾಡುತಿದ್ದ ಅಜ್ಜಿಯನ್ನು ಕೊನೆಯ ಬಾರಿ ನೋಡಲಾಗಲಿಲ್ಲವಲ್ಲ ಎಂಬ ಕೊರಗು ಪಾಪ ಪ್ರಜ್ಞೆಯಾಗಿ ಇಂದಿಗೂ ಕಾಡುತ್ತಿದೆ. ಈಗ ನನ್ನವರಾಗಿ ಉಳಿದಿದ್ದು ಮಾತ್ರ ನನ್ನ ಅಜ್ಜಿ.  ಆದರೆ ರಂಗಭೂಮಿ, ಬದ್ಧತೆ, ಶಿಸ್ತು ಎಂಬ ಒಂದಿಷ್ಟು ವಿಚಾರಗಳು ನನ್ನೊಳಗಿನ ನಟಿಯನ್ನು ಆ ಕ್ಷಣ ಸಾಯಿಸಿ ಕೇವಲ ಕೆಲವೊಂದಿಷ್ಟು ತಂತ್ರಗಳೊಂದಿಗೆ ಅಂದಿನ ಪ್ರದರ್ಶನ ಮುಗಿಸುವಂತೆ ಮಾಡಿತ್ತು.

ಯಾರದೋ ತಂದೆ ಸತ್ತಾಗ, ಮತ್ಯಾರದೋ ತಾಯಿ ಹೋದಾಗ ಅಲ್ಲಿಗೆ ತೆರಳದೆ ಶೋ ಮುಗಿಸಿದ ಅವನು – ಅವಳು ಗ್ರೇಟ್ ಅಂತ ಒಂದಷ್ಟು ಉದಾಹರಣೆಯನ್ನು ಕೊಟ್ಟು ನನ್ನ ಮನಸ್ಸನ್ನು ಗಟ್ಟಿ ಮಾಡಿಯೇಬಿಟ್ಟರು. ವೃತ್ತಿ ಜೀವನದ ಬದ್ಧತೆಯ ಬಗ್ಗೆ ತಿಳಿಸಿಕೊಟ್ಟ ಅವರು ಅಂದು ನನ್ನವರಾಗಿಬಿಟ್ಟರು. ಆಗ ಅವರು ಹೇಳಿದ ಸೋ ಕಾಲ್ಡ್ ಬದ್ಧತೆಯನ್ನು ನಾನು ತೋರಿಸೇಬಿಟ್ಟೆ. ಆದರೆ ನಿಜವಾಗಿಯೂ ನನ್ನ ಮನಸು ಗಟ್ಟಿಯಾಯಿತೇ! ಊಹೂಂ ಇಲ್ಲವೆನಿಸುತ್ತೆ.

ಹೌದು ನಾನೊಬ್ಬಳು ನಟಿ, ರಂಗಕರ್ಮಿಯಾಗಿ ಇವತ್ತಿಗೂ ನನಗೆ ತಿಳಿಯದೆ ಇರುವ ಕೆಲವೊಂದಿಷ್ಟು ವಿಷಯಗಳಲ್ಲಿ ಇದೂ ಒಂದು. ನಾವು ದಿನೇ ದಿನೇ ಬೆಳೆಯಬೇಕು, ಗಟ್ಟಿಗೊಳ್ಳಬೇಕು ನಿಜ; ಆದರೆ ಅದು ವಿಚಾರದಲ್ಲಿ ಮತ್ತು ಆತ್ಮವಿಶ್ವಾಸದಲ್ಲಿ. ಹೀಗಿರುವಾಗ ಕಮಿಟ್ಮೆಂಟ್ ವಿಷಯದಲ್ಲಿ ನಾವೊಂದಿಷ್ಟು ಬೌಂಡರಿ ಹಾಕಿಕೊಂಡು “ಇದು ರಂಗಭೂಮಿ, ಇವೆಲ್ಲವುಗಳೇ ಬದ್ಧತೆಯ ಲಕ್ಷಣಗಳು, ತನ್ನವರು ಸತ್ತಾಗಲೂ ತೆರಳದೆ ಶೋ ಮಾಡಿಕೊಡುವ ಅವರಂತವರಷ್ಟೇ ಇಲ್ಲಿರಲು ಯೋಗ್ಯ” ಎಂಬ ಒಂದಿಷ್ಟು ಸೋ ಕಾಲ್ಡ್ ಥಿಯರಿಯಲ್ಲಿ ನಮ್ಮನ್ನು ನಾವು ತುರುಕಿಕೊಂಡು ತೋರಿಸಿಕೊಳ್ಳುವುದರ ಬಗ್ಗೆ ನಾನು ಸೋತು ಬಿಟ್ಟೆ.

ಮತ್ತೆ ಹೀಗಾಗಿದ್ದು ಅಂದು. ಮೊನ್ನೆ ಮೊನ್ನೆಯಷ್ಟೇ ‘ಒಬ್ಬಳು’ ನಾಟಕ ಪ್ರದರ್ಶನಕ್ಕಾಗಿ ಸಕಲೇಶಪುರದ ರಕ್ಷಿದಿಗೆ ಹೋಗಿದ್ದ ಸಂದರ್ಭದಲ್ಲಿ. ವಾರದ ಹಿಂದೆ ಪ್ರಸಾದ್ ರಕ್ಷಿದಿ ಅಂಕಲ್ ಕರೆ ಮಾಡಿ ಶೋ ಬಗ್ಗೆ ಮಾತನಾಡಿದಾಗ ಖುಷಿ ಆಗಿದ್ದೇನೋ ನಿಜ, ಆದರೆ ಭಯ! ಅಂದು ನನ್ನಿಂದ ಪ್ರದರ್ಶನ ನೀಡಲು ಸಾಧ್ಯವಾಗದೆ ಹೋದರೆ? ಹೀಗೆ ಒಂದಿಷ್ಟು ನೆನಪುಗಳು. ಆ ನೆನಪುಗಳಿಗೆ ಪುಷ್ಟಿಕೊಡುವಂತೆ ಅಂತೂ ಆ ದಿನ ಬಂದೆ ಬಿಟ್ಟಿತು. ರಾತ್ರಿ 12.30ಕ್ಕೆ ಅವರ ಮನೆ ತಲುಪಿದೆ.

ಆರು ತಿಂಗಳ ಹಿಂದೆ ತೀರಿಕೊಂಡ ಅಮೃತಳ ಶವಸಂಸ್ಕಾರಕ್ಕೆ ನಾನಂದು ಇಲ್ಲಿಗೆ ಬರಬೇಕಿತ್ತು. ಆದರೆ ವಿಷಯ ತಿಳಿಯುವಷ್ಟರಲ್ಲಾಗಲೇ ಎಲ್ಲಾ ಮುಗಿದು ಹೋಗಿತ್ತು. ನೀನಾಸಂ ನ ಸಹಪಾಠಿ ಅಮೃತಾ ಇಂದು ನೆನಪು ಮಾತ್ರ! ಎಂಟು ತಿಂಗಳೇ ಆಗಿರಬೇಕು ಅವಳು ಈ ಲೋಕ ಬಿಟ್ಟು. ಹೌದು ಅಮೃತ ನನಗೆ ಯಾವತ್ತಿಗೂ ನೆನಪು. ಪದೇ ಪದೇ ಕಾಡುವ ಒಂದು ನೆನಪು. ಅವಳು, ಅವಳ ಮನೆ, ರೂಮ್, ಆ ಉಯ್ಯಾಲೆ, ಮಾವಿನ ಮರ, ಸುಜುಮೆಣಸಿನ ಗಿಡ, ಆ ಹುಳಿ ಹಣ್ಣು, ಅದರ ಚಿತ್ರಾನ್ನ, ಅವಳ ಡ್ರೆಸ್ಸಿಂಗ್ ಟೇಬಲ್, ಪೇಂಟಿಂಗ್, ಪದ್ಯ, ಬರಹಗಳು, ಆಲ್ಬಮ್… ಇವೆಲ್ಲವೂ ಇಂದು ಒಂದಾದ ಮೇಲೊಂದರಂತೆ ಅವಳೊಂದಿಗೆ ಕಾಣುತ್ತಿವೆಯಲ್ಲ! ಆದರೆ ವಾಸ್ತವದಲ್ಲಿ ಅವಳಿರಲಿಲ್ಲ!
ಆಗ ವರ್ಷದ ಹಿಂದೆ ಉಯ್ಯಾಲೆ ಮೇಲೆ ಕೂರಿಸಿ ತೂಗುತ್ತಾ, ಹುಳಿಹಣ್ಣನ್ನು ಪರಿಚಯಿಸಿ, ಚಿತ್ರಾನ್ನಕ್ಕೆ ಸಹಾಯಮಾಡಿ ರುಚಿನೋಡಿ ಬೆರಗಾದ ಹುಡುಗಿ ಇಂದು ಇರಲಿಲ್ಲ. ಅಯ್ಯೋ ದೇವರೇ ಕನಸು ಕಾಣುವವರನ್ನು ಎಂದಿಗೂ ಕರೆದುಕೊಳ್ಳಬೇಡ ಎಂದನ್ನಿಸಿದ್ದು ಅಂದೇ ಮೊದಲು. ಇವೆಲ್ಲವನ್ನೂ ಎಂದು ಹೇಳಿಕೊಳ್ಳಬಾರದು, ತೋರಿಸಿಕ್ಕೊಳ್ಳಬಾರದು ಎಂದು ಪ್ರಸನ್ನನಿಂದ ಆಜ್ಞೆಯೇನೋ ಆಗಿತ್ತು ನಿಜ. ಹಾಗೆ ಇದೆ ಆಜ್ಞೆ ಅಮೃತಾಳ ತಾಯಿ ರಾಧೇ ಆಂಟಿಗೂ ಪ್ರಸಾದ್ ಅಂಕಲ್ ಇಂದ ಬಂದದ್ದು ನಿಜ. ಆದರೆ ಇಬ್ಬರ ಉದ್ದೇಶ ಒಂದೇ ಆಗಿತ್ತು. ಹಾಗೆ ನಮ್ಮದೂ ಕೂಡ ‘ಇದರಿಂದ ಶೋ ಗೆ ತೊಂದರೆಯಾಗಬಾರದು’ ಎಂಬುದು. ಆದರೂ ಮಾತು ನಗುವಿನೊಂದಿಗೆ ದಿನ ಕಳೆಯುವ ಪ್ರಯತ್ನವಂತೂ ನಡೆದೇ ಹೋಯಿತು.

ನಿಜ ಆ ಸಮಯ ನನ್ನದಾಗಲೇ ಇಲ್ಲ. ಆ ಘಟನೆ ನಡೆದು ಹತ್ತು ವರ್ಷಗಳಾಗಿ ಹೋಗಿವೆ. ಆದರೆ ಅಜ್ಜಿಯ ಮುಖ ನೋಡದೆ ಕಳೆದುಕೊಂಡ ಆ ದಿನ ಇಂದಿಗೂ ನನ್ನನ್ನು ಬಹಳ ಕಾಡುತ್ತಿದೆ. ನಿಜವಾಗಿಯೂ ಈ ನಾನು ಎಂಬ ಪಾತ್ರಕ್ಕೆ ಜೀವತುಂಬಿದ್ದವರಲ್ಲಿ ಆ ನನ್ನ ಅಜ್ಜಿಯು ಕೂಡ ಒಬ್ಬರು. ಯಾವಾಗಲೂ ಅಕ್ಸತೆ, ಅಕ್ಸತೆ ಎಂದು ಮುದ್ದು ಮುದ್ದಾಗಿ ಕೂಗಿ ಕಾಡುತಿದ್ದ ಅಜ್ಜಿಯನ್ನು ಕೊನೆಯ ಬಾರಿ ನೋಡಲಾಗಲಿಲ್ಲವಲ್ಲ ಎಂಬ ಕೊರಗು ಪಾಪ ಪ್ರಜ್ಞೆಯಾಗಿ ಇಂದಿಗೂ ಕಾಡುತ್ತಿದೆ.

ನನಗೆ ಅಮೃತ ನನ್ನವಳೆಂದು ನೀನಾಸಂ ಸೆಲೆಕ್ಷನ್ ದಿನವೇ ಅನ್ನಿಸಿಬಿಟ್ಟಿತ್ತು. ವಯಸ್ಸಿನಲ್ಲಿ ನನಗಿಂತ ಸಣ್ಣವಳಿದ್ದ ಅವಳು ಎಷ್ಟು ಜಾಣೆ ಇದ್ದಾಳೆ ಅನ್ನಿಸಿದ್ದು ಅವಳು ಮಾಡಿ ತಂದಿದ್ದ ಒಂದು ನಾಟಕ ರಂಗವಿನ್ಯಾಸದ ಮಾಡೆಲ್ ಬೋರ್ಡ್ ನೋಡಿದಾಗ. ನಮ್ಮೆಲ್ಲರಿಗಿಂತ ವಿಭಿನ್ನವಾಗಿ ಯೋಚಿಸುವ ಧಾಟಿಯಲ್ಲಿ, ಅವಳು ಆಡುತ್ತಿದ್ದ ಪ್ರಬುದ್ಧ ಮಾತುಗಳಲ್ಲಿ, ಬಹಳ ವಿಶೇಷವಾಗಿ ಕಂಡವಳು ಅಮೃತ. ಅಂತೂ ಇಬ್ಬರೂ ರಂಗ ತರಬೇತಿಗೆ ಆಯ್ಕೆ ಆಗಿ ತರಬೇತಿ ಶುರುವಾದ ದಿನಗಳು ಅವು. ಅಲ್ಲಿ ಅವಳಿಗೇನೋ ಮಾನಸಿಕ ತೊಂದರೆ ಅಂತ ಹೇಳುತ್ತಿದ್ದರು. ಆದರೆ ಎಂದಿಗೂ ಅವಳು ನನಗೆ, ತೊಂದರೆ ಇದ್ದವಳ ಹಾಗೆ ಕಾಣಲೇ ಇಲ್ಲ. ಆಮೇಲೂ ಸಹ ಅವಳ ಕಾಯಿಲೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿರಲಿಲ್ಲ. ತರಬೇತಿ ಮಧ್ಯದಲ್ಲಿ ಹೋದ ಅಮೃತಳನ್ನು ಭೇಟಿ ಮಾಡಿದ್ದೂ ಐದು ವರ್ಷಗಳ ನಂತರ. ಅಷ್ಟೊತ್ತಿಗೆ ಅಮೃತ ಆರೋಗ್ಯದಲ್ಲಿ ಏಳು ಬೀಳು ಕಂಡಾಗಿತ್ತು… ಅವಳ ‘ಅಮೃತಯಾನ ‘ ಶುರುವಾಗಿತ್ತು. ಬೇಗ ಬೇಗ ಮುಗಿಸಬೇಕು ಅನ್ನುತ್ತಿದ್ದಳು. ಅಂತೂ 8 ತಿಂಗಳ ಹಿಂದೆ ತನ್ನ ಕೆಲಸ ಮುಗಿಸಿ ಹೊರಟೆಬಿಟ್ಟಿದ್ದಳು. ಜೀವನದುದ್ದಕ್ಕೂ ಆರೋಗ್ಯದ ಜೊತೆ ಸೆಣಸಾಟ ನಡೆಸುತ್ತಿದ್ದ ಹುಡುಗಿಯ ಜೀವನ ಕೊನೆಯಾದದ್ದು ಅವಳ ಜೊತೆ ಜೊತೆಯಲ್ಲೇ , ಅವಳದೇ ಊರಲ್ಲೇ , ಅದೇ ವೇದಿಕೆಯಲ್ಲೇ ಕಂಡಿದ್ದು ಅವರನ್ನು ಜೀವನದ ಅರ್ಧದಷ್ಟು ಸಮಯ ಸೆರೆಮನೆಯಲ್ಲಿ ಕಳೆದು ಆ ಮಧ್ಯೆ ನಾಟಕದ ಮತ್ತು ಶಿಬಿರದ ಹೆಸರಿನಲ್ಲಿ ತಮ್ಮ ಹೊಸ ಜೀವನವನ್ನು ಕಾಣುತ್ತ ಬಿಡುಗಡೆಗೊಂಡು ಹೊಸ ಹೊಸ ಕನಸುಗಳನ್ನು ಕಾಣುತ್ತಿದ್ದ ಆ ‘ನಮ್ಮವರು’. ಮಾನವಿಕ ಪುನಃಚೇತನ ರಂಗಶಿಬಿರಲ್ಲಿ ಕಂಡ “ನಮ್ಮವರು” ಮೈಸೂರು ರಂಗಾಯಣದ ಹುಲಿಗಪ್ಪ ಕಟ್ಟಿಮನಿ ಸರ್ ಅವರ ಮಕ್ಕಳೇ ಆಗಿಬಿಟ್ಟಿದ್ದರು. ಸತತ 20 ವರ್ಷಗಳ ಕಾಲ ಅವರನ್ನು ಆಡಿಸಿ, ಕುಣಿಸಿ,ನಗಿಸಿ ಬದಲಾವಣೆಯ ಹೊಣೆಗೆ ಮುಖ್ಯವೇನೆಂಬುವುದನ್ನು ತೋರಿಸಿ, ಹೊಸ ಜೀವನದ ದಾರಿ ತೋರಿಸಿಕೊಟ್ಟ ಮಹಾತ್ಮ ಕಟ್ಟಿಮನಿ ಸರ್ ಮತ್ತು ಅವರ ಮಕ್ಕಳು “ನಮ್ಮವರು” ಇವರನ್ನು ಕಂಡು ದಿಗ್ಬ್ರಾಂತಳಾಗಿದ್ದೆ.

ಆಹಾ! ಎಂತಹ ಜನ ಇವರು, ಅಯ್ಯೋ ಶಿವನೇ ಇವರು ಅದೆಷ್ಟು ಚಂದ ಹಾಡ್ತಾರೆ. ಎಷ್ಟು ರುಚಿ ಇದೆ ಇವರ ಅಡುಗೆ, ನನಗು ರೆಸಿಪಿ ಹೇಳಿ, ಓಹ್ ನೀವೆಲ್ಲ “ನಮ್ಮವರು”! ಇನ್ನೊಬ್ಬರ ನೋವಿನ ಮುಂದೆ ನಮ್ಮದೆಲ್ಲ ನೆಪ ಮಾತ್ರ ಅನ್ನಿಸಿದ್ದ ದಿನವೂ ಆ ದಿನವಾಗಿತ್ತು. ಮಾನಸಿಕ ತೊಂದರೆಗೆ ಒಳಗಾಗಿದ್ದ ವರ್ಷಾನುಗಟ್ಟಲೆಯ ಅಮೃತಾಳ ನೋವು ಒಂದೆಡೆಯಾದರೆ, ಅಪರಾಧ ಮಾಡಿಯೋ ಮಾಡದೆಯೋ ವರ್ಷಾನುಗಟ್ಟಲೆ ಸರೆಮನೆ ವಾಸ ಅನುಭವಿಸಿದ ಇವರುಗಳ ನೋವು ಮತ್ತೊಂದು ಕಡೆ! ಒಂದೊಂದು ದಿನವೂ ನಮಗೆ ಮುಖ್ಯ ಏನಾದರು ಮಾಡುತ್ತಿರಬೇಕೆಂದು ಯೋಚಿಸುವ ನಾವು ಒಂದು ಕ್ಷಣ ಇವರುಗಳು ಕಳೆದುಕೊಂಡ ವರ್ಷಗಳ ಬಗ್ಗೆ ಯೋಚಿಸಲೇಬೇಕು. ಅದರ ಜೊತೆ ಜೊತೆಗೆ 20 ವರ್ಷಗಳಿಂದ ಅವರ ಮಾನವಿಕ ಪುನಶ್ಚೇತನದ ( ಮರು ಹುಟ್ಟು) ಬಗ್ಗೆ ‘ಸಂಕಲ್ಪ’ ತೊಟ್ಟು ಮುನ್ನುಗ್ಗಿದ್ದ ಕಟ್ಟಿಮನಿ ಸರ್ ಕೂಡ ಇಲ್ಲಿ ಒಂದು ಕ್ಷಣ ಪಾಪವನ್ನಿಸಿಬಿಡುತ್ತಾರೆ. ಮತ್ತೊಂದು ಮುಖ್ಯ ವಿಷಯವೆಂದರೆ ಇಲ್ಲಿ ಅಮೃತಾಳನ್ನು ನೆನೆದಷ್ಟು ಜೊತೆ ಜೊತೆಗೆ ಸಂಚರಿಸುವುದು ಅವಳ ತಂದೆ-ತಾಯಿಯ ನೆನಪೂ ಕೂಡ! ತನ್ನ ಮಗಳ ಆರೋಗ್ಯಕ್ಕಾಗಿ ವರ್ಷಾನುಗಟ್ಟಲೇ ಒದ್ದಾಡುವುದರ ಜೊತೆ ಅವಳಿಗೆ ಮತ್ತು ತಮ್ಮೊಳಗೆ ಆತ್ಮಸ್ಥೈರ್ಯ ತಂದುಕೊಂಡವರು ಮತ್ತು ಟಿವಿ, ರೇಡಿಯೋಗಳಿಂದ ಸಂಪೂರ್ಣ ದೂರವಿದ್ದವರು, ಊಟ ತಿಂಡಿಯಲ್ಲೂ ಅವಳು ತಿನ್ನಬೇಕಿದ್ದನ್ನೇ ಅವಳ ಜೊತೆ ಕೂತು ಉಂಡವರು ಅವರು. ನಾನೆಂದು ಕಾಣದ ಪೋಷಕರು ಇವರು! ಇಲ್ಲಿ ಇವರೆಲ್ಲರೂ ನಿಜವಾಗಿಯೂ “ನನ್ನವರು” ಅನ್ನಿಸಿದಂತೂ ಸುಳ್ಳಲ್ಲ.

ಇವೆಲ್ಲದರ ಮಧ್ಯ ಇನ್ನೇನೋ ನಾಟಕ ಪ್ರದರ್ಶನ, ಅದಕ್ಕಾಗಿ ನನ್ನ ತಯ್ಯಾರಿ ನಡೆದಿತ್ತು. ಕಾರ್ಯಕ್ರಮಕ್ಕೆ ಚಾಲನೆ ಎಂಬಂತೆ “ನಮ್ಮವರು” ನಡೆಸಿಕೊಟ್ಟ ಕಾರ್ಯಕ್ರಮ. ಅಬ್ಬಾ! ಅದ್ಬುತವದು! ಈ ಮಧ್ಯೆ ಅಂತೂ ಇಂತೂ ನಾಟಕ ಪ್ರದರ್ಶನ ಮುಕ್ತವಾಗಿ ಶುರುವಾಗಿಯೇ ಬಿಟ್ಟಿತು. ರಾಧೆ ಆಂಟಿಯ ಜೊತೆ ಮಾತನಾಡುವಾಗೆಲ್ಲ ಅಮೃತಾಳ ನೆನಪುಗಳು ನನ್ನ ಮನಸ್ಸಿನಲ್ಲಿ ಹಾದುಹೋಗುತ್ತಿದ್ದವು. ಅಂತೂ ಪ್ರದರ್ಶನ ಮುಗಿದ ನಂತರ ಒಬ್ಬಳೇ ಒಂದು ಕಡೆ ನಿಂತು ನಿಟ್ಟುಸಿರು ಬಿಟ್ಟೆ. ಹೇಗೋ ಈ ಎಲ್ಲದರ ನಡುವೆ ನಿಂತು ಇಷ್ಟೆಲ್ಲ ಕಂಡ ನನಗೆ ನಾನೇ ಅರಗಿಸಿಕೊಳ್ಳಲಾಗುತ್ತಿಲ್ಲ, ಇನ್ನು ಪಾತ್ರ ಹೇಗೆ ದಕ್ಕೀತು! ಅಂತೂ ನನ್ನವರು ಸಿಕ್ಕ ಖುಷಿಯಲ್ಲಿ ನನ್ನೊಳಗೆ ಬೆಳೆಯುತ್ತಿರುವ ನಟಿಗೆ ಮಾದರಿ ಎಂಬಂತೆ ಸಿಕ್ಕಿದ್ದು ಈ “ನಮ್ಮವರು”. ಈಗ ನನ್ನನ್ನು ನಾನು ಹುಡುಕುವ ಪ್ರಯತ್ನಕ್ಕೆ ಅಲ್ಪ ವಿರಾಮವಿಟ್ಟಿದ್ದೇನೆ ಅಷ್ಟೇ.