ಅಲ್ಲಾಸಾಬರು ಹಾಗೂ ಶಿವಣ್ಣನವರು ಇಬ್ಬರೂ ವಿಭಿನ್ನ ನೆಲೆ, ಪರಿಸರದಿಂದ ಬಂದವರು. ಇಬ್ಬರ ಜಾತಿ ಧರ್ಮಗಳು ಬೇರೆ. ಶಿಕ್ಷಣ, ಆರ್ಥಿಕ ಸ್ಥಿತಿ ವಿಭಿನ್ನ. ಒಬ್ಬರು ದೇವರ ಜಪತಪ ಮಾಡುತ್ತಾ ಸ್ವರ್ಗ ನರಕಗಳ ಬಗ್ಗೆ ಹೇಳುತ್ತಾ ಸತ್ತ ನಂತರದ ಜೀವನ ವಿವರಿಸುತ್ತಾ ಸಂಪೂರ್ಣವಾಗಿ ಧಾರ್ಮಿಕ ವಿಚಾರಗಳನ್ನು ನಂಬುತ್ತಾ ಜಗತ್ತಿನ ಪ್ರತಿಯೊಂದರ ಸೃಷ್ಟಿಯೂ ಆ ದೇವನಿಂದಾದ್ದು ಎಂದು ನಂಬಿ ಸಂಪ್ರದಾಯಬದ್ಧವಾಗಿ ಬದುಕುತ್ತಿರುವ ವ್ಯಕ್ತಿ. ಇನ್ನೊಬ್ಬರು ಈ ಜಗತ್ತು ಸೃಷ್ಟಿಯಾದದ್ದು ಬಿಗ್ ಬ್ಯಾಂಗ್ ಥಿಯರಿಯಿಂದ, ಪರಿಸರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಘಟನೆಗಳಿಗೆ ಕಾರ್ಯಗಳಿಗೆ ವಿಜ್ಞಾನವೇ ಕಾರಣವೆಂದು ಹೇಳುತ್ತಾ ಬಂದಿರುವ ವ್ಯಕ್ತಿ. ಇಬ್ಬರಿಗೂ ಬಹಳಷ್ಟು ವಿಚಾರಗಳಲ್ಲಿ ಸಾಮ್ಯತೆಗಳಿಲ್ಲ.
ಇಸ್ಮಾಯಿಲ್‌ ತಳಕಲ್‌ ಬರೆಯುವ “ತಳಕಲ್‌ ಡೈರಿ” ನಿಮ್ಮ ಓದಿಗೆ

ಇಲ್ಲಿ ಇಬ್ಬರು ವ್ಯಕ್ತಿಗಳು ಹಾಗೂ ಅವರು ಹಂಚಿಕೊಂಡಿದ್ದ ಒಂದು ವಿಷಯದ ಕುರಿತು ಹೇಳಲು ಹೊರಟಿದ್ದೇನೆ. ಒಬ್ಬರು ಕೊಪ್ಪಳ ಜಿಲ್ಲೆಯ ನನ್ನೂರಿನವರಾದ ಅಲ್ಲಾಸಾಬ. ಇನ್ನೊಬ್ಬರು ತುಮಕೂರಿನ ಶಿವಣ್ಣ. ನಮ್ಮ ಮನೆಯ ಪಕ್ಕದವರೇ ಆದ ಅಲ್ಲಾಸಾಬರು ನಾವು ಸಣ್ಣವರಾಗಿದ್ದಾಗಿನಿಂದಲೂ ಮಸೀದಿಯಲ್ಲಿ ನಮಾಜು ಮಾಡಿಸುತ್ತಾ ಪ್ರತಿದಿನ ನಮಾಜಿನ ನಂತರ ಹಾಗೂ ಶುಕ್ರವಾರದಂದು ವೀಶೇಷವಾದ ಬಯಾನ್(ಪ್ರವಚನ)ಗಳನ್ನು ಮಾಡುತ್ತಾ ಬರುತ್ತಿದ್ದ ಧಾರ್ಮಿಕ ಸಂಪ್ರದಾಯಸ್ಥರಾಗಿದ್ದವರು. ಅವರ ಬಯಾನ್‌ಗಳನ್ನು ಕೇಳಲು ನಮಗೆಲ್ಲಾ ಆಗ ಕುತೂಹಲವಿರುತ್ತಿತ್ತು. ಯಾವುದೇ ವಿಷಯವಿರಲಿ ತುಂಬಾ ಆಸಕ್ತಿಗೊಳ್ಳುವಂತೆ ನಮ್ಮ ಚಿತ್ತ ಅತ್ತ ಇತ್ತ ಹರಿದಾಡದಂತೆ ತುಂಬಾ ಸೊಗಸಾಗಿ ಬಯಾನ್ ಮಾಡುತ್ತಿದ್ದರು. ಹೆಚ್ಚು ಓದಿದವರಲ್ಲದಿದ್ದರೂ ಸ್ಪಷ್ಟವಾಗಿ ಪುಸ್ತಕಗಳನ್ನು ಓದುವಷ್ಟು ಏನಾದರೂ ಬರೆಯುವಷ್ಟಂತೂ ಬರುತ್ತಿತ್ತು. ಮೃದು ವ್ಯಕ್ತಿತ್ವ. ಯಾರೊಂದಿಗೂ ತಂಟೆ ಮಾಡಿಕೊಳ್ಳದ ವ್ಯಕ್ತಿ.

ಇನ್ನು ಶಿವಣ್ಣನವರು ಶಿಕ್ಷಕರಾಗಿದ್ದುಕೊಂಡು ಉಪನ್ಯಾಸಕರಾದವರು. ಶಾಲಾ ಕಾಲೇಜುಗಳಲ್ಲಿ ವಿಜ್ಞಾನ ವಿಷಯಗಳನ್ನು ಬೋಧಿಸುತ್ತಾ ಹಲವಾರು ವಿಜ್ಞಾನ ಮೇಳಗಳಲ್ಲಿ ಭಾಗವಹಿಸಿ ತಾವೇ ತಯಾರಿಸಿದ ವಿಜ್ಞಾನದ ಮಾದರಿಗಳನ್ನು ಪ್ರಾತ್ಯಕ್ಷಿಕವಾಗಿ ತೋರಿಸುತ್ತಿದ್ದವರು. ವಿಜ್ಞಾನದ ಸಣ್ಣ ಸಣ್ಣ ವಿಷಯಗಳನ್ನೂ ಸಹ ಪ್ರಯೋಗ ಮಾಡಿಯೇ ಅದನ್ನು ಅರ್ಥ ಮಾಡಿಸುವುದು ನೀರು ಕುಡಿದಷ್ಟೆ ಅವರಿಗೆ ಸಲಿಸು. ವಿದೇಶಗಳಿಗೂ ಹೋಗಿ ಅಲ್ಲಿಯ ಹಲವಾರು ವಿಜ್ಞಾನದ ಮೇಳಗಳಲ್ಲಿ ಭಾಗವಹಿಸಿ ಪ್ರಶಸ್ತಿ ಬಹುಮಾನಗಳನ್ನು ಪಡೆದುಕೊಂಡಿರುವವರು. ಇದಿಷ್ಟೆ ಆಗಿದ್ದರೆ ಅದರಲ್ಲೇನು ವಿಶೇಷ ಎಂದು ಕೇಳಬಹುದು. ಆದರೆ ಅವರಿಬ್ಬರೂ ನನ್ನೊಂದಿಗೆ ಹಂಚಿಕೊಂಡ ಒಂದು ವಿಷಯ ನನ್ನನ್ನು ಚಕಿತಗೊಳ್ಳುವಂತೆ ಮಾಡಿ ಈಗಲೂ ಯೋಚಿಸುತ್ತಿರುವಂತೆ ಮಾಡಿದೆ.

ನಾನಿನ್ನೂ ಆಗ ಪ್ರಾಥಮಿಕ ಶಾಲೆಗೆ ಹೋಗುತ್ತಿದ್ದವ. ಐದೋ ಆರನೆಯೋ ಕ್ಲಾಸಿನಲ್ಲಿದ್ದೆ. ಅಲ್ಲಾಸಾಬರಿಗೆ ಯಾವುದೋ ಒಂದು ಖಾಯಿಲೆ ಗಂಟು ಬಿದ್ದು ಅದು ಬೇಗನೆ ವಾಸಿಯಾಗದೇ ಅವರು ತುಂಬಾ ದಿನಗಳವರೆಗೆ ಹಾಸಿಗೆಯಲ್ಲೆ ನರಳುವಂತೆ ಮಾಡಿತ್ತು. ಇನ್ನೇನು ಈ ಭೂಮಿಯ ಋಣ ತೀರಿಸಿ ಹೊಂಟರು ಎನ್ನುವ ಸ್ಥಿತಿಯಿತ್ತು. ನನಗೂ ನೆನಪಿರುವಂತೆ ಅವರನ್ನು ಅವರ ಮನೆಯ ಅಂಗಳದಲ್ಲಿ ಮಲಗಿಸಿ ಸುತ್ತಲೂ ಸಂಬಂಧಿಕರು, ಓಣಿಯವರು ಕುಳಿತು ಅಳಲುತೊಡಗಿದ್ದರು. ಬಹಳ ದಿನಗಳವರೆಗೆ ಕಣ್ಣಸನ್ನೆಯಲ್ಲೆ ಮಾತನಾಡುತ್ತಿದ್ದರಾದರೂ ಬರುಬರುತ್ತಾ ಅದೂ ಕಡಿಮೆಯಾಗತೊಡಗಿತ್ತು. ಆದರೆ ಅದೇನು ಪವಾಡವಾಯಿತೋ ತಿಳಿಯದು, ಬೆನ್ನುಬಿದ್ದಿದ್ದ ಖಾಯಿಲೆ ವಾಸಿಯಾಗಿ ಮೊದಲಿನಂತೆ ಲವಲವಿಕೆಯುಳ್ಳವರಾಗಿಬಿಟ್ಟರು. ಮೊದಲಿನಂತೆ ನಮಾಜು ಮಾಡುತ್ತಾ ಬಯಾನ್‌ಗಳನ್ನು ಕೊಡುತ್ತಾ ಇರತೊಡಗಿರು. ಹೆಚ್ಚಿನ ಸಮಯವನ್ನು ಮಸೀದಿಯಲ್ಲಿಯೇ ಕಳೆದು ಅಲ್ಲಿ ಏನಾದರೊಂದು ಕೆಲಸ ಮಾಡುತ್ತಿದ್ದರು.

ನಾನೂ ಆಗಾಗ ನಮಾಜಿಗೆ ಹೋಗುತ್ತಿದ್ದರಿಂದ ನಮಾಜಿನ ನಂತರ ಅವರು ಕೊಡುತ್ತಿದ್ದ ಬಯಾನ್‌ಗಳನ್ನು ಕೇಳಲು ಅವಕಾಶ ಸಿಗುತಿತ್ತು. ಒಮ್ಮೆ ಒಂದು ಸಯಂಕಾಲ ಅಸರ್ ನಮಾಜಿನ ನಂತರ ನಾನೂ ನನ್ನ ಗೆಳೆಯನೊಬ್ಬ ಕುಳಿತು ಅವರೊಂದಿಗೆ ಹರಟುತ್ತಿದ್ದಾಗ ತಾವು ಖಾಯಿಲೆ ಬಿದ್ದಾಗ ನಡೆದ ಒಂದು ಘಟನೆಯನ್ನು ಹೇಳಿದ್ದರು. ಇನ್ನೇನು ಅವರು ಈ ಭೂಮಿಯನ್ನು ಬಿಟ್ಟು ಹೊಂಟೇಬಿಟ್ಟರು ಎನ್ನುವ ಸ್ಥಿತಿಯಲ್ಲಿದ್ದಾಗ ಅವರಿಗೆ ಒಂದು ಅನುಭವವಾಯಿತಂತೆ. ಇವರ ಕತೆಯಂತೂ ಮುಗಿಯುತ್ತಿದೆ, ಇನ್ನು ಕೊನೆಯ ಉಸಿರುಗಳನ್ನು ಎಣಿಸುತ್ತಿದ್ದಾರೆಂದು ಅನಿಸಿ ಅವರ ಸುತ್ತಮುತ್ತಲೂ ಅವರ ಹೆಂಡತಿ ಮಕ್ಕಳು ಸಂಬಂಧಿಕರು ಅಳುತ್ತಿರುವಾಗ ತಾವು ತಮ್ಮ ದೇಹವನ್ನು ಬಿಟ್ಟು ಮೇಲಕ್ಕೆ ಹೊರಟ ಅನುಭವವಾಗತೊಡಗಿತಂತೆ. ಮೇಲಕ್ಕೆ ಹೋದಂತೆಲ್ಲ ತಮ್ಮ ದೇಹ ಹಾಗೂ ತಮ್ಮ ಸುತ್ತ ಕುಳಿತು ಅಳುವವರೆಲ್ಲರೂ ಅವರಿಗೆ ಕಾಣಿಸತೊಡಗಿ ಅವರಿಗೇನೆ ಆಶ್ಚರ್ಯವಾಯಿತಂತೆ. ನಂತರ ಅದೇನಾಯ್ತೋ ಮತ್ತೆ ಕೆಳಕ್ಕೆ ಬಂದು ತಮ್ಮ ದೇಹವನ್ನು ಸೇರಿಕೊಂಡರಂತೆ. ಈ ಘಟನೆಯನ್ನು ಒಂದು ರೋಚಕ ಕತೆಯಂತೆಯೇ ಆಗ ಕೇಳಿಸಿಕೊಂಡಿದ್ದೆ. ಅದರ ಕುರಿತು ಆಗ ಜಾಸ್ತಿ ಅರ್ಥವಾಗದಿದ್ದರೂ ಶಾಲೆಯಲ್ಲಿ ಮಾಸ್ತರವರು ಕತೆಯೊಂದನ್ನು ಹೇಳಿದಂತಿತ್ತು.

ಇವರ ಕತೆಯಂತೂ ಮುಗಿಯುತ್ತಿದೆ, ಇನ್ನು ಕೊನೆಯ ಉಸಿರುಗಳನ್ನು ಎಣಿಸುತ್ತಿದ್ದಾರೆಂದು ಅನಿಸಿ ಅವರ ಸುತ್ತಮುತ್ತಲೂ ಅವರ ಹೆಂಡತಿ ಮಕ್ಕಳು ಸಂಬಂಧಿಕರು ಅಳುತ್ತಿರುವಾಗ ತಾವು ತಮ್ಮ ದೇಹವನ್ನು ಬಿಟ್ಟು ಮೇಲಕ್ಕೆ ಹೊರಟ ಅನುಭವವಾಗತೊಡಗಿತಂತೆ. ಮೇಲಕ್ಕೆ ಹೋದಂತೆಲ್ಲ ತಮ್ಮ ದೇಹ ಹಾಗೂ ತಮ್ಮ ಸುತ್ತ ಕುಳಿತು ಅಳುವವರೆಲ್ಲರೂ ಅವರಿಗೆ ಕಾಣಿಸತೊಡಗಿ ಅವರಿಗೇನೆ ಆಶ್ಚರ್ಯವಾಯಿತಂತೆ. ನಂತರ ಅದೇನಾಯ್ತೋ ಮತ್ತೆ ಕೆಳಕ್ಕೆ ಬಂದು ತಮ್ಮ ದೇಹವನ್ನು ಸೇರಿಕೊಂಡರಂತೆ.

ಅದಾಗಿ ಹತ್ತನ್ನೆರೆಡು ವರ್ಷಗಳ ನಂತರ ನನ್ನ ಓದು ಮುಗಿದು ಎನ್‌ಜಿಓ ಒಂದರಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಆಗ ತಾನೆ ಕೆಲಸಕ್ಕೆ ಸೇರಿದ್ದೆ. ಪ್ರತಿ ಸರಕಾರಿ ಶಾಲೆಗಳಿಗೆ ಭೇಟಿ ನೀಡಿ ವಿಜ್ಞಾನದ ಪ್ರಯೋಗಗಳನ್ನು ಮಕ್ಕಳಿಗೆ ಮಾಡಿ ತೋರಿಸುವ ಕಾಯಕ ನನ್ನದಾಗಿತ್ತು. ಒಮ್ಮೆ ಕೊಪ್ಪಳದ ಶಿಕ್ಷಕರಿಗೆ ನಮ್ಮ ಸಂಸ್ಥೆಯ ವತಿಯಿಂದ ವಿಜ್ಞಾನ ಕಾರ್ಯಾಗಾರವನ್ನು ಹಮ್ಮಿಕೊಂಡಾಗ ತುಮಕೂರಿನಿಂದ ಶಿವಣ್ಣನವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಎರಡು ದಿನ ತಾವೇ ತಯಾರಿಸಿದ ಮಾದರಿಗಳನ್ನು ಬಳಸಿಕೊಂಡು ತರಬೇತಿಯನ್ನು ನೀಡಿದ್ದರು. ಶಿವಣ್ಣನವರು ವಿಜ್ಞಾನ ವಿಷಯದಲ್ಲಿ ಅಗಾಧ ಪಾಂಡಿತ್ಯವನ್ನು ಹೊಂದಿದ್ದರೂ ದೇಶ ವಿದೇಶಗಳಲ್ಲೆಲ್ಲಾ ಸುತ್ತಾಡಿ ಬಂದಿದ್ದರೂ ತುಂಬಾ ಸರಳವಾಗಿ ಬದುಕುತ್ತಿದ್ದವರೆಂಬುದು ಆ ಎರಡು ದಿನಗಳಲ್ಲಿ ಗೊತ್ತಾಗಿತ್ತು. ಯಾವಾಗಲೂ ಬಿಳಿ ಬಟ್ಟೆಗಳನ್ನು ಉಟ್ಟುಕೊಳ್ಳುತ್ತಿದ್ದ ಅವರು ನೋಡಲು ತೀರಾ ಸಾಮಾನ್ಯರಂತೆ ಕಾಣುತ್ತಿದ್ದರು. ಬ್ರಹ್ಮಚಾರಿಯಾಗಿಯೇ ಇದ್ದ ಅವರು ತಮ್ಮ ಬಟ್ಟೆಗಳನ್ನು ತಾವೇ ತೊಳೆದುಕೊಳ್ಳುವುದು ತಮ್ಮ ಅಡುಗೆಯನ್ನು ತಾವೇ ಮಾಡಿಕೊಳ್ಳುವುದು ಮಾಡುತ್ತಿದ್ದರು. ಒಂದು ಬಾರಿ ಯಾವುದೋ ಪ್ರಯೋಗವನ್ನು ಮಾಡುವಾಗ ಗಾಜಿನ ವಸ್ತುವೊಂದು ಸ್ಫೋಟಗೊಂಡು ಅದರ ಚೂರೊಂದು ಅವರ ಕಣ್ಣೊಳಗೆ ಸೇರಿಕೊಂಡಿತಂತೆ. ಎಷ್ಟೆ ಪ್ರಯತ್ನ ಮಾಡಿದರೂ ವೈದ್ಯರಿಂದ ಆ ಚೂರನ್ನು ಹೊರ ತೆಗೆಯಲು ಸಾಧ್ಯವಾಗಲಿಲ್ಲ. ಹೀಗಾಗಿ ಅಂದಿನಿಂದ ಅವರ ಒಂದು ಕಣ್ಣು ಕಾಣುವುದಿಲ್ಲವೆಂದು ಹೇಳಿದಾಗ ನಮಗೂ ಬೇಸರವಾತ್ತು.

ಮತ್ತೊಮ್ಮೆ ಹೊಟ್ಟೆಯಲ್ಲಿ ಏನೋ ಸಮಸ್ಯೆಯಾಗಿ ಶಸ್ತ್ರಚಿಕಿತ್ಸೆಯೇ ಮಾಡಬೇಕಾಯಿತಂತೆ. ಅಂದಿನಿಂದ ಅಂದರೆ ನಲವತ್ತು ವರ್ಷದಿಂದ ಅವರು ಮಲಗುವುದು ಒಂದೇ ಮಗ್ಗಲಿನಲ್ಲಿ. ಇಷ್ಟೆಲ್ಲ ನೋವುಗಳಿದ್ದರೂ ಅವರು ಯುವಕರಿಗಿಂತಲೂ ತುಂಬಾ ಲವಲವಿಕೆಯಿಂದ ಇರುತ್ತಿದ್ದವರು. ದೂರದೂರುಗಳವರೆಗೆ ಸುತ್ತಾಡುತ್ತಲೆ ವಿಜ್ಞಾನದ ಅರಿವು ಮೂಡಿಸುತ್ತಾ ಬಂದಿದ್ದರು. ವಿಷಯ ಇಷ್ಟೆ ಆಗಿದ್ದರೆ ಅದಲ್ಲೇನು ಅಷ್ಟೊಂದು ವಿಶೇಷವಿರಲಿಲ್ಲ. ಕೊಪ್ಪಳಕ್ಕೆ ತರಬೇತಿ ಕೊಡಲು ಬಂದಾಗ ಎರಡು ದಿನ ಅಲ್ಲಿಯೆ ತಂಗಿದ್ದರು. ಅವರೊಂದಿಗೆ ಸಾಯಂಕಾಲ ವಿಜ್ಞಾನದ ಕೆಲವೊಂದು ಸಂದೇಹಗಳನ್ನು ಬಗೆಹರಿಸಿಕೊಳ್ಳುತ್ತಿರುವಾಗ ಮಾತಿಗೆ ಮಾತು ಬಂದು ಒಂದು ವಿಷಯವನ್ನು ಹಂಚಿಕೊಂಡರು. ಶಿವಣ್ಣನವರೂ ಯಾವುದೋ ಒಂದು ಖಾಯಿಲೆಗೆ ತುತ್ತಾಗಿದ್ದರು. ಬೇಗ ವಾಸಿಯಾಗಲಿಲ್ಲವಾದ್ದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರು. ಆಸ್ಪತ್ರೆಯ ಬೆಡ್ಡಿನ ಮೇಲೆ ಮಲಗಿದ್ದ ಅವರಿಗೆ ಯಾವ ಪ್ರಜ್ಞೆಯೂ ಇರಲಿಲ್ಲ. ಬದುಕುತ್ತಾರೋ ಇಲ್ಲವೋ ಎಂದು ಎಲ್ಲರೂ ತಿಳಿದುಕೊಂಡಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿಕೊಂಡಾಗ ಅವರಿಗಾದ ಅನುಭವವೆಂದರೆ ತಾವು ಮಲಗಿದ ಹಾಸಿಗೆಯಿಂದ ಮೇಲಕ್ಕೆ ಹೋದಂತಹ ಅನುಭವವಾಗತೊಡಗಿತ್ತು. ಆದರೆ ತಮ್ಮ ದೇಹ ಮಾತ್ರ ಬೆಡ್ಡಿನ ಮೇಲೆಯೇ ಇದೆ. ಅಲ್ಲಿರುವ ವಸ್ತುಗಳು, ಅಡ್ಡಾಡುತ್ತಿರುವ ವೈದ್ಯರು ನರ್ಸುಗಳೆಲ್ಲರೂ ಅವರಿಗೆ ಕಾಣುತ್ತಿದ್ದರು. ಮೇಲಕ್ಕೆ ಹೊರಟ ತಮಗೆ ಮತ್ತೇನಾಯಿತೋ ಗೊತ್ತಿಲ್ಲ ಮತ್ತೆ ಕೆಳಕ್ಕೆ ಬಂದು ತಮ್ಮ ದೇಹ ಸೇರಿಕೊಂಡರಂತೆ.

ಇದೇನಿದು ಅಲ್ಲಾಸಾಬರ ಕತೆಯಂತೆಯೇ ಇದೆಯಲ್ಲವೆಂದು ಆಶ್ಚರ್ಯವಾಗಬಹುದು. ಆದರೆ ಅವರೂ ಕೂಡ ಅಂತಹದ್ದೆ ಅನುಭವವನ್ನು ನಮ್ಮೆಲ್ಲರ ಮುಂದೆ ಹಂಚಿಕೊಂಡಿದ್ದರು. ಅಲ್ಲಾಸಾಬರಿಗೆ ಆದ ಅನುಭವವೇ ಅವರಿಗೂ ಆಗಿತ್ತು. ಒಬ್ಬರಿಗಾದ ಅನುಭವ ಇನ್ನೊಬ್ಬರಿಗಾಗಬಾರದು ಅಂತಲ್ಲ. ಆದರೆ ನನ್ನನ್ನು ಯೋಚನೆಗೀಡು ಮಾಡಿದ್ದು ಒಂದು ಸೂಕ್ಷ್ಮ, ಗಂಭೀರ ವಿಷಯ, ಆಸ್ತಿಕರು ಒಪ್ಪುವ ನಾಸ್ತಿಕರು ಒಪ್ಪದ ವಿಚಾರದ ಅನುಭವವೊಂದು ಇಬ್ಬರಿಗೂ ಆದದ್ದು. ಇದು ಆತ್ಮಗಳ ವಿಚಾರ ಅಂತ ಅನಿಸಿದರೂ ಇದರಲ್ಲಿ ಯಾವುದು ಸರಿ ಯಾವುದ ತಪ್ಪು ಎಂದು ಚರ್ಚಿಸಲು ಹೋಗುವುದಿಲ್ಲ. ಆತ್ಮಗಳ ಇರುವಿಕೆಯ ಬಗ್ಗೆ ಕೆಲವುರ ಒಪ್ಪುತ್ತಾರೆ ಮತ್ತೆ ಕೆಲವರು ಸುತಾರಾಂ ಒಪ್ಪುವುದಿಲ್ಲ. ಅದು ಅವರವರ ಅಭಿಪ್ರಾಯಕ್ಕೆ ಬಿಟ್ಟ ವಿಚಾರ. ಆದರೆ ನನ್ನನ್ನು ಬಹುವಾಗಿ ಕಾಡಿದ್ದು ಏನೆಂದರೆ ಅಲ್ಲಾಸಾಬರು ಹಾಗೂ ಶಿವಣ್ಣನವರು ಇಬ್ಬರೂ ವಿಭಿನ್ನ ನೆಲೆ, ಪರಿಸರದಿಂದ ಬಂದವರು. ಇಬ್ಬರ ಜಾತಿ ಧರ್ಮಗಳು ಬೇರೆ. ಶಿಕ್ಷಣ, ಆರ್ಥಿಕ ಸ್ಥಿತಿ ವಿಭಿನ್ನ. ಒಬ್ಬರು ದೇವರ ಜಪತಪ ಮಾಡುತ್ತಾ ಸ್ವರ್ಗ ನರಕಗಳ ಬಗ್ಗೆ ಹೇಳುತ್ತಾ ಸತ್ತ ನಂತರದ ಜೀವನ ವಿವರಿಸುತ್ತಾ ಸಂಪೂರ್ಣವಾಗಿ ಧಾರ್ಮಿಕ ವಿಚಾರಗಳನ್ನು ನಂಬುತ್ತಾ ಜಗತ್ತಿನ ಪ್ರತಿಯೊಂದರ ಸೃಷ್ಟಿಯೂ ಆ ದೇವನಿಂದಾದ್ದು ಎಂದು ನಂಬಿ ಸಂಪ್ರದಾಯಬದ್ಧವಾಗಿ ಬದುಕುತ್ತಿರುವ ವ್ಯಕ್ತಿ. ಇನ್ನೊಬ್ಬರು ಈ ಜಗತ್ತು ಸೃಷ್ಟಿಯಾದದ್ದು ಬಿಗ್ ಬ್ಯಾಂಗ್ ಥಿಯರಿಯಿಂದ, ಪರಿಸರದಲ್ಲಿ ನಡೆಯುತ್ತಿರುವ ಪ್ರತಿಯೊಂದು ಘಟನೆಗಳಿಗೆ ಕಾರ್ಯಗಳಿಗೆ ವಿಜ್ಞಾನವೇ ಕಾರಣವೆಂದು ಹೇಳುತ್ತಾ ಬಂದಿರುವ ವ್ಯಕ್ತಿ. ಇಬ್ಬರಿಗೂ ಬಹಳಷ್ಟು ವಿಚಾರಗಳಲ್ಲಿ ಸಾಮ್ಯತೆಗಳಿಲ್ಲ. ಹೋಲಿಕೆ ಇದ್ದದ್ದು ಎರಡೇ ವಿಷಯಗಳಲ್ಲಿ. ಒಂದು ಅವರಿಬ್ಬರ ವಯಸ್ಸು ಅಂದಾಜು ಒಂದೇ ಆಗಿರುವುದು, ಇನ್ನೊಂದು ತಮಗೆ ಖಾಯಿಲೆಯಿದ್ದಾಗ ಆದ ಅನುಭವ. ಹೀಗಿರುವಾಗ ಯಾವ ನಿರ್ಧಾರಕ್ಕೆ ಬರುವುದು? ಇಬ್ಬರಿಗೂ ಈ ವಿಷಯ ಅನುಭವಕ್ಕೆ ಬನಂದಿರುವುದು ತಾವಿಬ್ಬರೂ ಖಾಯಿಲೆ ಬಿದ್ದಾಗ. ಇಬ್ಬರೂ ಈ ಭೂಮಿಯ ಪಯಣ ಇನ್ನೇನು ಮುಗಿಯಿತು ಎನ್ನುವ ಹಂತದಲ್ಲಿದ್ದಾಗ. ಅಲ್ಲಿ ಯಾವ ಶಕ್ತಿ ಕೆಲಸ ಮಾಡಿರಬಹುದು? ಆರನೇ ಇಂದ್ರಿಯ(Sixth Sense) ಅಂತಾರಲ್ಲ ಅದು ಇರಬಹುದೆ? ಗೊತ್ತಿಲ್ಲ. ತುಂಬಾ ದಿನಗಳಿಂದ ಈ ವಿಚಾರ ಕೊರೆಯುತ್ತಲೇ ಇದೆ.

ಬಹಳಷ್ಟು ಜನರಿಗೆ ಇಂತಹದ್ದೆ ಅನುಭವವಾಗಿರಬಹುದು. ಇವರಿಬ್ಬರಿಗೆ ಆಗಿದೆ ಎಂದರೆ ಇತರರಿಗೂ ಆಗಿರಲು ಸಾಧ್ಯವಿದೆ. ಹಾಗಿದ್ದರೆ ನಾವದನ್ನು ಯಾವ ಸ್ಥಿತಿ ಎನ್ನಬಹುದು? ನಾನು ಗ್ರಹಿಸಿಕೊಂಡಂತೆ ನಮ್ಮನ್ನು ಸಕಾರಾತ್ಮಕ ಶಕ್ತಿ(Positive energy) ಹಾಗೂ ನಕಾರಾತ್ಮಕ ಶಕ್ತಿ(Negetive energy)ಗಳೆರೆಡೂ ನಿಯಂತ್ರಿಸುತ್ತಿರುತ್ತವೆ. ಈ ಜಗತ್ತು ನಿಂತಿರುವುದೇ ಈ ಎರಡು ಶಕ್ತಿಗಳ ಮೇಲೆಯೇ ಎಂದೂ ನಂಬುತ್ತೇನೆ. ಇಬ್ಬರು ವ್ಯಕ್ತಿಗಳ ಕಾಲ, ದೇಶ, ರಾಜಯಕೀಯ ಹಿನ್ನಲೆ, ಆರ್ಥಿಕ ಪರಿಸ್ಥಿತಿ, ಬೆಳೆದ ಪರಿಸರ, ಕೌಟುಂಬಿಕ ಹಿನ್ನಲೆ, ವೃತ್ತಿ, ಶಿಕ್ಷಣ ಮಟ್ಟ, ನಂಬುವ ನಂಬಿಕೆ, ಆಚರಿಸುವ ಆಚರಣೆ, ಸಂಪ್ರದಾಯಗಳು ವಿಭಿನ್ನವಾಗಿದ್ದರೂ ಇಂತಹ ವಿಷಯಗಳಲ್ಲಿ ಮಾತ್ರ ಒಂದೇ ಅಭಿಪ್ರಾಯ ಹೊಂದಲು ಕಾರಣವೇನು? ಜಗತ್ತಿನ ಶ್ರೇಷ್ಟ ವಿಜ್ಞಾನಿಯಾದ ಐನ್‌ಸ್ಟಿನ್, ಡಚ್ಚಿನ ತತ್ವಜ್ಞಾನಿಯಾದ ಸ್ಪಿನೋಜಾರವರ ಕ್ಷೇತ್ರಗಳು ಬೇರೆಯಾದರೂ ಅವರಿಬ್ಬರೂ ನಂಬುತ್ತಿದ್ದ ದೇವರು, ಜಗತ್ತಿನ ಶಕ್ತಿಗಳ ಬಗೆಗಿನ ಅಭಿಪ್ರಾಯ ಒಂದೇ ಆಗಿತ್ತು. ಅಲ್ಲಾಸಾಬರು ಹಾಗೂ ಶಿವಣ್ಣನವರಿಗೆ ಅಥವಾ ಬೇರೆ ಯಾರಾದರೂ ಆ ಸ್ಥಿತಿಯನ್ನು ತಲುಪಿದವರಿಗೆ ಅದೊಂದು ವಿಶಿಷ್ಟ ಕನಸೂ ಆಗಿರಲೂಬಹುದೇನೋ? ಆದರೆ ನಮ್ಮ ಸುತ್ತಮುತ್ತ ಯಾವುದೋ ಅಗೋಚರ ಶಕ್ತಿಯೊಂದು ಗಿರಕಿ ಹೊಡೆಯುತ್ತಿರುತ್ತದೆ ಎನ್ನುವುದನ್ನು ನಾನು ನಂಬುತ್ತೇನೆ. ಅದೆ ಎಲ್ಲ ಆಗು ಹೋಗುಗಳಿಗೂ ಕಾರಣವೆಂದೂ ನಂಬಿದ್ದೇನೆ. ಇಲ್ಲಿ ಜಿ ಎಸ್ ಶಿವರುದ್ರಪ್ಪನವರ ಕಾವ್ಯ ‘ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ? ಹನಿಯೊಡೆದು ಕೆಳಗಿಳಿದು ನೆಲಕ್ಕೆ ಹಸಿರು ಮೂಡೀತು ಹೇಗೆ?’ ಎನ್ನುವುದನ್ನು ಇದಕ್ಕೂ ಹೋಲಿಸಿಕೊಳ್ಳಬಹುದೇನೋ.