ಶೂನ್ಯದ ಬಾಗಿಲು

ಎಳೆದು ತಾ ಹೃದಯದ ಎಳೆ ಎಳೆಯನ್ನು
ಉಸಿರುಗಟ್ಟಲಿ
ಈ ಕಿಡಕಿಯ ಬೆಳಕಿಗೊ ಮೊಗವೊಡ್ಡಲಾರೆ
ಗೋಡೆಗಳ ಮಾತುಗಳೊ ಅಸ್ಪಷ್ಟ
ಅಪರಿಚಿತ

ಎಳೆದು ತಾ ಹೃದಯದ ಎಳೆ ಎಳೆಯನ್ನು
ಮಾಂಸ ಮಜ್ಜೆ ಉತ್ತರಿಸಲಿ
ನೊಂದ ಪದಗಳ ಯಾತನೆಯಂಚಿನಲಿ

ಎಳೆದು ತಾ ಹೃದಯದ ಎಳೆ ಎಳೆಯನ್ನು
ಕಡು ನೇತ್ರಗಳು ಸಾಕ್ಷಿಯಾಗಲಿ
ಬೆಕ್ಕಿನ ಬೆಳಕಿನ ಹೆಜ್ಜೆಗಳಲಿ
ಬಂಧಿಯಾದ ಆತ್ಮದ ಇರುವಿನಲಿ

ಎಳೆದು ತಾ ಹೃದಯದ ಎಳೆ ಎಳೆಯನ್ನು
ಸೂರ್ಯನ ಕಣ್ಗುಡ್ಡೆ ಕೀಳದಿರಲಿ
ಹಗಲಿಗೊಂದು ಇರುಳಿಗೊಂದು ರೂಪವಿರಲಿ
ತಾಪ ಪರಿತಾಪ ಯಾರಿಗೂ ತಾಕದಿರಲಿ

ಎಳೆದು ತಾ ಹೃದಯದ ಎಳೆ ಎಳೆಯನ್ನು
ಹಾದಿ ತಪ್ಪಿದ ಮಗುವಿಗೂ
ಬಾಳ ದೋಣಿಯ ಉಬ್ಬು ತಗ್ಗುಗಳಿಗೂ
ಶೂನ್ಯದ ಬಾಗಿಲಿಗೂ
ಬೇಸರವಾಗದಂತೆ

 

ಅಶೋಕ ಹೊಸಮನಿ ಅವರು ಗದಗ ಜಿಲ್ಲೆಯ ರೋಣ ತಾಲೂಕು ಗಜೇಂದ್ರಗಡದವರು.
ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಂಗ್ಲಿಷ್‌ ಭಾಷೆಯ ಬೋಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಸೂಫಿ ಸಾಹಿತ್ಯ ಇವರಿಗೆ ಅಚ್ಚುಮೆಚ್ಚು.
‘ಒಂಟಿ ಹೊಸ್ತಿಲು’, ‘ಅನಾಮಧೇಯ ಹೂ’, “ಹರವಿದಷ್ಟು ರೆಕ್ಕೆಗಳು” ಪ್ರಕಟಿತ ಕವನ ಸಂಕಲನಗಳು