ನನ್ನ ಹೃದಯದ ಮಿಡಿತವಾಗಿ !

ನನಗೆ ಬಲು ಇಷ್ಟ ನೀನು
ನಾ ಪ್ರೀತಿಸುವ ಶತ್ರುಗಳಂತೆ
ಈ ದ್ವಂದ್ವಗಳು
ಈ ಅನುಮಾನಗಳ ಹುತ್ತ
ನನ್ನ ಸುತ್ತ ಸದಾ ಇರಬೇಕು
ಲಕ್ವಾ ಹೊಡೆದ ಬದುಕಿನ
ಕಾಲಬೆರಳುಗಳಲಿ ಒಂದಿಷ್ಟು
ಬಿಸಿ ರಕ್ತ ಸಂಚರಿಸಲು
ನಿಷ್ಕ್ರಿಯಗೊಂಡ ಮಿದುಳು
ಕಣಗಳು ಚೇತರಿಸಿಕೊಳ್ಳಲು
ಒಂದಿಷ್ಟು ನೋವು ಹಿಂಸೆ
ಹತಾಶೆ ವಿಷಾದ ಮತ್ತು
ನಿನ್ನ ಕಹಿಯಾದ ಹರಿತ
ಮಾತುಗಳು ಬಿದ್ದುಹೋದ
ನಾಲಿಗೆಗೆ ಚಲನಶಕ್ತಿ ನೀಡಲು
ನೀರಿಗೆಗಟ್ಟಿದ ಚರ್ಮ
ಹೂವಿನಂತೆ ಅರಳಲು
ಒಂದಿಷ್ಟು ಚಿತೆ
ತನ್ನನ್ನು ತಾ ಸುಟ್ಟಕೊಳ್ಳಲು
ಸದಾ ನೀನು
ನನ್ನೊಂದಿಗೆ ಇರಬೇಕು
ನನ್ನ ಹೃದಯದ ಮಿಡಿತವಾಗಿ
ಪ್ರತಿಕ್ಷಣ ಇರಿದಿರಿದು ಕೊಲ್ಲಲು !

ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರಾಗಿದ್ದು ಸದ್ಯ, ಧಾರವಾಡದಲ್ಲಿ ನೆಲೆಸಿದ್ದಾರೆ.
ವೃತ್ತಿಯಿಂದ ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು.  ಪ್ರವೃತ್ತಿಯಿಂದ ಲೇಖಕರು.
ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ ನೀನು (ಕವನ ಸಂಕಲನಗಳು) ಇವರ ಪ್ರಕಟಿತ ಕೃತಿಗಳು.