ಅಸಹಿಷ್ಣುತೆಯ ಕುರಿತು ಮಾತನಾಡುವಾಗ ಸುಮಾರು ಹದಿನಾರು ಹದಿನೆಂಟು ವರ್ಷಗಳ ಹಿಂದಿನ ಸಂಗತಿಯೊಂದು ನೆನಪಾಗುತ್ತದೆ. ಆಗ ನಾನು ‘ಲಂಕೇಶ್ ಪತ್ರಿಕೆ‘ ಗೆ ಷಿಲ್ಲಾಂಗಿನಿಂದ ಅಂಕಣ ಬರೆಯುತ್ತಿದ್ದೆ. ಲಂಕೇಶರು ಇಷ್ಟಪಟ್ಟು ಬರೆಸುತ್ತಿದ್ದ ಅಂಕಣ ಅದು. ಯಾಕೋ ಏನೋ ನನ್ನ ಕಂಡರೆ ವಿಪರೀತ ಮಮತೆ ಅವರಿಗೆ. ಆ ಮಮತೆಯನ್ನು ತಮ್ಮೊಳಗೆ ಇಟ್ಟುಕೊಳ್ಳಲಾಗದೆ ತಮ್ಮ ಪತ್ರಿಕಾ ಖಚೇರಿಗೆ ಬಂದವರೊಡನೆಯೂ ಹಂಚಿಕೊಳ್ಳುತ್ತಿದ್ದರು. ‘ ಈ ಸಾಬಿ ಎಷ್ಟು ಚೆನ್ನಾಗಿ ಬರೀತಾನೆ ನೋಡಿ‘ ಎಂದು ನನ್ನ ಅಂಕಣವನ್ನು ಅವರೆದುರಿಗೆ ಹಿಡಿಯುತ್ತಿದ್ದರು.

ಈ ಸಂಗತಿ ದೂರದ ಷಿಲ್ಲಾಂಗಿನಲ್ಲಿದ್ದ ನನಗೆ ಗೊತ್ತಾಗಿ ಒಂಥರಾ ಸಂಕಟವಾಗಿತ್ತು. ಏಕೆಂದರೆ ನಾನು ಕೂಡಾ ಉರ್ದು ಮಾತನಾಡುವ ಮುಸಲ್ಮಾನರನ್ನು ಸಾಬರು ಎಂದೇ ಕರೆಯುತ್ತಿದ್ದೆ. ನಮ್ಮ ಊರಿನ ಮುಸಲ್ಮಾನರಲ್ಲಿ ಅರ್ದದಷ್ಟು ಜನರು ಸಾಬರು.ಟೀಪೂ ಸುಲ್ತಾನನ ಕಾಲದಲ್ಲೋ ಅದಕ್ಕೂ ಹಿಂದೋ ಮೂಡಲ ಸೀಮೆಯ ಕಡೆಯಿಂದ ಬಂದು ಕೊಡಗಿನಲ್ಲಿ ನೆಲೆಸಿದವರು. ಉಳಿದ ಅರ್ದ ಕೇರಳದ ಕಡೆಯಿಂದ ಬಂದ ಮಾಪಿಳ್ಳೆ ಜನರು, ಕರಾವಳಿಯ ಕಡೆಯಿಂದ ಬಂದ ಬ್ಯಾರಿ ಜನರು, ಕಾಸರಗೋಡಿನ ಕಡೆಯಿಂದ ಬಂದ ಇಚ್ಚಾಗಳು, ಕಾಕಾಗಳು ಇತ್ಯಾದಿ.

ಸಾಬರ ಹುಡುಗರು ಹನಫಿ ಮದರಸಕ್ಕೆ ಹೋಗುತ್ತಿದ್ದರೆ ನಾವು ಶಾಫಿ ಮದರಸಕ್ಕೆ ಹೋಗುತ್ತಿದ್ದೆವು. ನಮ್ಮ ಆಹಾರದಲ್ಲಿ ಕುಸುಬಲಕ್ಕಿಯ ಅನ್ನ, ಸಮುದ್ರದ ಮೀನು ಹೇರಳವಾಗಿದ್ದರೆ ಸಾಬರಲ್ಲಿ ಬಿರಿಯಾನಿ, ಕುರಿಮಾಂಸ ಧಾರಾಳವಾಗಿರುತ್ತಿದ್ದವು. ಮಲಯಾಳ, ತುಳು, ಕನ್ನಡ ಮಿಶ್ರಿತವಾದ ಭಾಷೆಯನ್ನು ನಾವು ಆಡುತ್ತಿದ್ದರೆ ಮೂಡುಸೀಮೆಯ ಇಕಾರಾಂತ್ಯದ ದಖನಿಯನ್ನು ಅವರು ನುಡಿಯುತ್ತಿದ್ದರು. ಅವರನ್ನು ನಮ್ಮ ಹಾಗೆಯೇ ಇರುವ ಮುಸಲ್ಮಾನರು ಎಂದು ಒಪ್ಪಿಕೊಳ್ಳಲು ಹುಡುಗರಾದ ನಮಗೆ ಎಷ್ಟು ಕಷ್ಟವಾಗುತ್ತಿತ್ತೋ ಅದಕ್ಕಿಂತಲೂ ಕಷ್ಟ ನಮ್ಮನ್ನು ಒಪ್ಪಿಕೊಳ್ಳಲು ಸಾಬರ ಹುಡುಗರಿಗೆ ಆಗುತ್ತಿತ್ತೇನೋ!

ಈ ಬಾಲ್ಯವೂ ಕಳೆದು, ಹುಡುಗಾಟವೂ ಮುಗಿದು, ಉರಿಯುವ ಯೌವನವನ್ನೂ ದಾಟಿ ಅಸ್ಸಾಂ ಬಾಂಗ್ಲಾದೇಶಗಳ ನಡುವಿನ ಕಡಿದಾದ ಪ್ರಪಾತದೊಳಗಿರುವ ಷಿಲ್ಲಾಂಗಿನ ಬೆಚ್ಚನೆಯ ಬಿಸಿಲಲ್ಲಿ ಚಳಿ ಕಾಯಿಸುತ್ತಾ ಅಲ್ಲಿನ ಉಗ್ರಗಾಮಿ ಸಂಘಟನೆಗಳ ಯುವಕರಿಂದ ಇಂಡಿಯನ್ ಎಂದು ಬೈಸಿಕೊಳ್ಳುತ್ತಾ ಕನ್ನಡದ ಒಂದೊಂದೇ ಅಕ್ಷರಗಳನ್ನು ಪ್ರೀತಿಯಿಂದ ನೇವರಿಸುತ್ತಾ ಬರೆದು ಕಳಿಸುತ್ತಿದ್ದರೆ ಪ್ರೀತಿಯ ಲಂಕೇಶರು ಒಂದೇ ಪದದಲ್ಲಿ `ಸಾಬಿ’ ಎಂದು ಬಿಡುವುದೇ!!

ಸಿಟ್ಟು ಬಂದಿತ್ತು. ಅದೊಂಥರಾ ಅದು ಆ ಕಾಲದ ಅಸಹಿಷ್ಣುತೆಯ ವಿರುದ್ದದ ಸಿಟ್ಟು.ಕುವೆಂಪು ಬರೆದ ಕರಿಮೀನು ಸಾಬರು, ತೇಜಸ್ವಿಯವರ ಪ್ಯಾರ, ಲಂಕೇಶರ ಇಕ್ಬಾಲ್, ನಿಸಾರರ ರಂಗೋಲಿಯ ಮುಂದೆ ನಿಂತ ಮಗ, ಬೊಳುವಾರ ಇಟ್ಟಿಗೆ. ಸಾರಾ ಅವರ ತಲಾಖ್ ಇವರೆಲ್ಲರೂ ಒಂದು ರೀತಿಯ ಪಡಿಯಚ್ಚುಗಳಾಗಿ ತಲೆಯೊಳಗೆ ಸುತ್ತುತ್ತಾ. ಆ ಪಡಿಯಚ್ಚಿನೊಳಗೆ ನಾನೂ ಎರಕಗೊಂಡಂತೆ ಇರಿಟೇಟ್ ಗೊಳ್ಳುತ್ತಾ ಲಂಕೇಶರಿಗೆ, ‘ನನ್ನನ್ನು ಸಾಬಿ ಎಂದು ಕರೆಯಬೇಡಿ‘ ಎಂಬ ಹೆಸರಿನಲ್ಲಿ ಅಂಕಣ ಬರೆದು ಕಳಿಸಿದ್ದೆ. ಅದನ್ನು ಅವರು ಹಾಗೇ ಪ್ರಕಟಿಸಿ ಮೆಚ್ಚುಗೆ ಸೂಚಿಸಿದ್ದರು.

ಜೊತೆಗೆ ಒಂದು ಪತ್ರವನ್ನೂ ಬರೆದಿದ್ದರು. ಕೀರಂ ಜೊತೆಗೆ ಷಿಲ್ಲಾಂಗಿಗೆ ಬರಬೇಕು ಮತ್ತು ನನ್ನ ಜೊತೆ ಬಿರಿಯಾನಿ ತಿನ್ನಬೇಕು ಅನ್ನುವುದು ಅವರ ಆಶೆ! ನಾನಾದರೋ ಅಲ್ಲಿ ಹೇರಳವಾಗಿ ಸಿಗುವ ಎಲ್ಲ ಪಶುಪ್ರಾಣಿಗಳ ಕರುಳನ್ನೂ ಲಿವರನ್ನೂ ಸವಿಯುತ್ತಾ, ಹಾವನ್ನೂ ಶುನಕವನ್ನೂ ಪ್ರೀತಿಯಿಂದ ಸೇವಿಸುವ ಗೆಳೆಯ ಗೆಳತಿಯರ ಮನೆಗಳಿಗೆ ಭೇಟಿ ಕೊಟ್ಟು ಅಲ್ಲಿನ ಅನೂಹ್ಯ ಪರಿಮಳಗಳಿಗೆ ಮಾರು ಹೋಗುತ್ತಿರಬೇಕಾದರೆ ಈ ಲಂಕೇಶರ ಬಿರಿಯಾನಿಯ ಆಶೆಯ ಮುಗ್ದತೆಗೆ ನಗು ಬಂದಿತ್ತು.

ಅಸಹಿಷ್ಣುತೆಯ ಕುರಿತು ಬರೆಯುವ ಹೊತ್ತಲ್ಲಿ ಇದನ್ನೆಲ್ಲ ಯಾಕೆ ಹೇಳುತ್ತಿರುವೆನೆಂದರೆ ಅಸಹಿಷ್ಣುತೆ ಎಂಬುದು ಎಷ್ಟು ಕ್ರೂರವೋ ಅಷ್ಟೇ ಅದು ಮುಗ್ದ ಅಜ್ಜಾನವೂ ಆಗಬಲ್ಲುದು ಎಂಬುದನ್ನು ಹೇಳುವುದಕ್ಕಾಗಿ. ಇನ್ನೊಂದು ಜೀವನ ವಿಧಾನದ ಕುರಿತಾದ ಅಸಹನೆಯಷ್ಟೇ ಅಪಾಯಕಾರಿ ಅದರ ಕುರಿತಾದ ಸ್ಟೀರಿಯೋಟೈಪ್ ಪ್ರೀತಿ ಕೂಡಾ. ಗೋರಿಯಲ್ಲಿ ಮಲಗಿರುವ ಟೀಪೂ ಸುಲ್ತಾನನ್ನು ಎಬ್ಬಿಸಿ ಕೊಡಗಿನ ಕಣಿವೆಯಲ್ಲಿ ಕೊಲೆಗಳಿಗೆ ಕಾರಣವಾಗುವುದು ಇನ್ನೊಂದು ರೀತಿಯ ಪ್ರಗತಿಪರ ಅಜ್ಞಾನದಿಂದುಂಟಾದ ಅಸಹಿಷ್ಣುತೆ.

ನಾನು ಕೊಡಗಿನಲ್ಲಿ ಓಡಾಡುತ್ತಿರುವಾಗ ಕಲವು ಹಳ್ಳಿಗಳ ಒಳಹೊಕ್ಕು ಕಥೆಗಳನ್ನು ಕೇಳುತ್ತಿದ್ದೆ. ಅಂತಹದೊಂದು ಹಳ್ಳಿಯ ಹೆಸರನ್ನು ಮಲೆ ಕೇರಿ ಅಂತ ಇಟ್ಟುಕೊಳ್ಳಿ. ಬಹಳ ಹಿಂದೆ ಮಲೆಯೊಂದರ ಕೆಳಗೆ ಹಬ್ಬಿಕೊಂಡಿದ್ದ ಹಳ್ಳಿಯಾಗಿತ್ತು ಅದು. ಈಗ ಆ ಹಳ್ಳಿ ಈಸ್ಟ್ ಮಲೆ ಕೇರಿ ಮತ್ತು ವೆಸ್ಟ್ ಮಲೆಕೇರಿ ಎಂದು ಇಬ್ಭಾಗವಾಗಿದೆ. ಟೀಪೂ ಸುಲ್ತಾನನ ಕಾಲದಲ್ಲಿ ಮತಾಂತರಗೊಂಡು ಶ್ರೀರಂಗಪಟ್ಟಣದ ಕಡೆ ಹೋಗಿದ್ದ ತಮ್ಮದೇ ಊರಿನವರು ಟೀಪುವಿನ ಮರಣಾನಂತರ ಮುಸಲ್ಮಾನರಾಗಿ ಮರಳಿ ಬಂದಾಗ ಈ ಊರವರು ಅವರನ್ನು ಧ್ವೇಷಿಸಿ ಹಿಂದಕ್ಕೆ ಅಟ್ಟುವ ಮನಸ್ಥಿತಿಯಲ್ಲಿರಲಿಲ್ಲ.ಏಕೆಂದರೆ ಅವರೆಲ್ಲರೂ ಅಣ್ಣ ತಮ್ಮಂದಿರೂ, ದಾಯಾದಿಗಳೂ ಆಗಿದ್ದರು.

ಹಾಗಾಗಿ ಅವರಿಗೆ ಮಲೆಯ ಪೂರ್ವ ಕಡೆಗಿದ್ದ ಗದ್ದೆ ಬಯಲುಗಳನ್ನು ನೀಡಿ ಅಲ್ಲೇ ವಾಸಿಸಲು ಹೇಳಿದರು. ಅವರಾದರೋ ಅತ್ತ ಕಡೆ ಪೂರ್ತ ಮುಸಲ್ಮಾನರೂ ಆಗದೆ ಇತ್ತ ಕಡೆ ಕೊಡವರೂ ಆಗಲಾರದೆ ಬದುಕಲು ತೊಡಗಿದರು. ಅದೇ ಮಲೆ , ಅದೇ ಆಕಾಶ,ಅದೇ ಗದ್ದೆ ಬಯಲು ಆದರೆ ಅತಂತ್ರ ಬದುಕು.

ಈ ಹಳ್ಳಿಯ ಹಳೆಯ ಮಸೀದಿಯೊಂದರಲ್ಲಿ ಪುರಾತನವಾಗಿದ್ದ ಧರ್ಮ ಗ್ರಂಥವನ್ನು ಓದುತ್ತಾ ಕುಳಿತಿದ್ದ ಮುದುಕನೊಬ್ಬನನ್ನು ನಾನು ಮಾತನಾಡಿಸಿದ್ದೆ. ತಲೆತಲಾಂತರಗಳ ಹಿಂದೆ ಮಧ್ಯಪ್ರಾಚ್ಯದಿಂದ ಧಾರ್ಮಿಕ ಅಸಹಿಷ್ಣುತೆಯಿಂದ ತಪ್ಪಿಸಿಕೊಂಡು ಹಾಯಿ ಹಡಗಿನಲ್ಲಿ ಅರಬೀಕಡಲನ್ನು ದಾಟಿ ಇಂಡಿಯಾದ ಕರಾವಳಿಯಲ್ಲಿ ಇಳಿದು ಪಶ್ಚಿಮಘಟ್ಟವನ್ನು ಹತ್ತಿ ಕೊಡಗಿನ ಕಾಡಲ್ಲಿ ನೆಲೆ ಕಂಡುಕೊಂಡವರು ಈತನ ಪೂರ್ವಜರು. ಅಲ್ಲಿಂದ ಅದನ್ನು ತಪ್ಪಿಸಿಕೊಂಡು ಇಲ್ಲಿಗೆ ಬಂದರೆ ಇಲ್ಲಿ ಅದು ಟಿಪ್ಪುವಿನ ರೂಪದಲ್ಲಿ ನನ್ನ ಹಿರಿಯರನ್ನು ಹಿಡಕೊಂಡಿತು ಎಂದು ಆ ಮುದುಕ ಕುರಾನು ಓದುತ್ತಾ ನಕ್ಕಿತ್ತು.
ಆತನ ನಗುವಲ್ಲಿ ಸಿಟ್ಟೇನೂ ಇರಲಿಲ್ಲ.ಬದಲಾಗಿ ಕಾಲದ ಕೀಟಲೆಗಳ ಕುರಿತ ಒಂದು ತುಂಟ ನಗು!

ಇಂತಹ ನೆಲದಲ್ಲಿ ಟೀಪೂ ಸುಲ್ತಾನನು ಸ್ವಾತಂತ್ರ್ಯ ಸೇನಾನಿಯೂ ಅಲ್ಲ, ಸ್ವಾಭಿಮಾನದ ಸಂಕೇತವೂ ಅಲ್ಲ.ಆತ ಒಬ್ಬ ಸುಲ್ತಾನ.ಎಲ್ಲ ಅರಸರ ಹಾಗಿರುವ ಒಬ್ಬ ಅರಸ. ಆತನ ಜನ್ಮ ದಿನವನ್ನು ಸರಕಾರೀ ಉತ್ಸವವನ್ನಾಗಿ ಆಚರಿಸುವ ಪ್ರಗತಿಪರವಾದ ಅಜ್ಞಾನದಿಂದಾಗಿ ಕೊಲೆಗಳು ನಡೆದವು.
ದಾಯಾದಿಗಳ ನಡುವೆ ಮೊದಲೇ ಇದ್ದ ಕಂದಕ ಇನ್ನಷ್ಟು ಗಡಬಡಾಯಿಸಿತು.
ಈ ಸೂಕ್ಷ್ಮಗಳನ್ನರಿಯದ ಆಚಾರವಾದಿಗಳೂ ವಿಚಾರವಾದಿಗಳೂ ಪರಸ್ಪರ ಬೈದಾಡಿಕೊಂಡು ಕೊಡಗಿನ ಹವೆಯಲ್ಲಿ ಚಳಿ ಕಾಯಿಸಿಕೊಂಡರು.
ನನ್ನ ಊರಿನ ಕಣಿವೆಗಳಲ್ಲಿ ಚಲಿಸುವಾಗ ಇದು ನನ್ನ ಊರೇನಾ ಅನಿಸುವ ಹಾಗಿರುವ ಬಿಗಿದುಕೊಂಡ ಮುಖಗಳು. `ಈ ಗಲಾಟೆ ಇರುವಾಗ ನೀನು ಬರಬೇಕಾಗಿತ್ತಾ?? ಗಲಾಟೆ ನಿಂತ ಮೇಲೆ ಬಂದಿದ್ದರೆ ಸಾಕಿತ್ತಲ್ಲವಾ’ ಎಂದು ಬೈಯ್ಯುವ ಉಮ್ಮಾ. ನಾನು ಯಾರನ್ನು ಬೈಯ್ಯುವುದು?

*************

ಸಿರಿಯಾ ಮತ್ತು ಇಸ್ರೇಲಿನ ನಡುವೆ ಗೋಲಾನ್ ಬೆಟ್ಟವಿದೆ. ಒಂದಾನೊಂದು ಕಾಲದಲ್ಲಿ ಅಂದರೆ ಕಂಚಿನ ಯುಗದ ಕೊನೆಗಾಲದಲ್ಲಿ ಅರಮಾಯಿಕ್ ಜನರು ಇಲ್ಲಿ ವಾಸವಿದ್ದರು. ಪ್ರಪಂಚದಲ್ಲಿ ಮೊದಲ ಬಾರಿಗೆ ಅಕ್ಷರಗಳನ್ನು ಬಳಸಲು ಶುರುಮಾಡಿದ ಜನರು ಇವರು.ಆನಂತರ ಸೊಲೊಮನ್ ರಾಜ ಆಳಿದ್ದ ನಾಡಿದು.ಅಲೆಕ್ಸಾಂಡರ್ ಚಕ್ರವರ್ತಿಯೂ ಇಲ್ಲಿ ಕಾರುಬಾರು ನಡೆಸಿದ್ದ.
ಹಾಗೇ ಕ್ಯಾಲಿಗುಲಾನೂ.ಹರ್ಕ್ಯುಲಸ್ ನೂ ಆಳಿದ್ದರು. ಮಧ್ಯಕಾಲೀನ ಯುಗದಲ್ಲಿ ಇದು ಪ್ರವಾಧಿ ಮುಹಮ್ಮದರ ಕುರೈಷಿ ಬುಡಕಟ್ಟಿನ ಪಾಲಾಗಿತ್ತು.
ಕ್ರಿಸ್ತಿಯಾನರಿಗೂ ಮುಸಲ್ಮಾನರಿಗೂ ನಡುವೆ ಸುಮಾರು ನಾನೂರು ವರ್ಷಗಳ ಕಾಲ ನಡೆದ ಧರ್ಮ ಯುದ್ದಗಳು ಈ ಬೆಟ್ಟಸಾಲುಗಳ ಆಸುಪಾಸಿನಲ್ಲೇ ಜರುಗಿದವು. ಆನಂತರ ಅರಬರಿಗೂ ಯಹೂದಿಗಳಿಗೂ ಈ ಬೆಟ್ಟಸಾಲುಗಳಿಗಾಗಿ ಬಹಳಷ್ಟು ಕದನಗಳು ನಡೆದವು. ಹಲವು ಕದನಗಳ ನಂತರ ಇಸ್ರೇಲ್ ಈ ಬೆಟ್ಟಗಳ ಮೇಲೆ ತನ್ನ ಅಧಿಪತ್ಯವನ್ನು ಸ್ಥಾಪಿಸಿ ಹನ್ನೆರೆಡು ವರ್ಷಗಳ ಹಿಂದೆ ನಾವು ಅಲ್ಲಿಗೆ ಹೋಗಿದ್ದಾಗ ಇಸ್ರೇಲಿನ ಮಿಲಿಟರಿ ರಾಡಾರುಗಳು ಗೋಲಾನ್ ಬೆಟ್ಟಗಳ ತುದಿಯಿಂದ ನಮ್ಮತ್ತ ಕಣ್ಣು ನೆಟ್ಟು ನೋಡುತ್ತಿದ್ದವು .

ನಾವು ಇದ್ದದ್ದು ಕ್ವಿನೇತ್ರಾ ಎಂಬ ಊರಿನಲ್ಲಿ. ಆ ಊರಿಗೆ ಊರೇ ಉರಿದು ಬೂದಿಯಾಗಿ ಆ ಇಡೀ ಊರನ್ನು ಸಿರಿಯನ್ ಸರಕಾರ ಜೀವಂತ ಯುದ್ಧ ಸ್ಮಾರಕವನ್ನಾಗಿಸಿ ನಮ್ಮಂತಹ ಪ್ರವಾಸಿಗರನ್ನು ಅಲ್ಲಿಗೆ ಕರೆದೊಯ್ದು ಇಸ್ರೇಲೀ ಪಡೆಗಳ ಅಮಾನುಷತೆಯನ್ನು ನಾನಾ ವಿಧವಾಗಿ ತೋರಿಸುತ್ತಿತ್ತು. ನಾವು ಅಲ್ಲಿಗೆ ಹೋಗಿದ್ದುದು ಸಿರಿಯನ್ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿದ್ದ ಸಂಸ್ಕೃತಿ ಇಲಾಖೆಯ ಅಂಗವಾಗಿದ್ದ ಸಿರಿಯನ್ ಬರಹಗಾರರ ಒಕ್ಕೂಟದ ಆಹ್ವಾನದ ಮೇರೆಗೆ. ಅಲ್ಲಿನ ಬಹುತೇಕ ಬರಹಗಾರರು ಪಾಲೇಸ್ಟೀನ್ ಹೋರಾಟದ ಪರವಾಗಿದ್ದುದರಿಂದ ಅವರೆಲ್ಲರೂ ಪಾಲೆಸ್ಟೀನ್ ಹೋರಾಟದ ಕುರಿತೇ ಹೆಚ್ಚುಕಮ್ಮಿ ಬರೆಯುತ್ತಿದ್ದರು. ಆಧುನಿಕ ಕನ್ನಡ ಸಾಹಿತ್ಯದ ಬಂಡಾಯದವರಿಗೆ ವರ್ಗ ಶತ್ರು ಇದ್ದಂತೆ ಅವರಿಗೆಲ್ಲ ಒಟ್ಟಾರೆಯಾಗಿ ಇಸ್ರೇಲ್ ವರ್ಗ ಶತ್ರು. ಹಾಗಾಗಿ ಅವರೆಲ್ಲರೂ ಬಹುತೇಕ ನಟಿಗೆ ಮುರಿಯುತ್ತಾ ಇಸ್ರೇಲನ್ನು ಶಪಿಸುತ್ತಿದ್ದರು. ಇದು ನಮಗೆ ಸೇರಿದ್ದ ಬೆಟ್ಟ ಯಹೂದಿಗಳ ಪಾಲಾಗಿದೆಯಲ್ಲಾ ಎಂದು ಅಳಲೂ ಶುರು ಮಾಡಿದ್ದರು.

ಅಂತಹ ಕಣ್ಣೀರಿನ ಸನ್ನಿವೇಶವನ್ನು ಮುಗಿಸಿ ನಾವು ಸಿರಿಯಾದ ರಾಜದಾನಿ ಡಮಾಸ್ಕಸ್ ಕಡೆಗೆ ಸಾಗುತ್ತಿದ್ದಾಗ ದಾರಿಯಲ್ಲಿ ಟೊಮೇಟೋ ಬೆಳೆಯುತ್ತಿದ್ದ ಹೊಲಗಳು. ಹೊಲಗಳ ನಡುವೆ ಟೆಂಟಿನಂತಹ ಗುಡಿಲುಗಳನ್ನು ಕಟ್ಟಿಕೊಂಡು ಬದುಕುತ್ತಿದ್ದ ಅಲ್ಲಿನ ರೈತಾಪಿಗಳು. ಇಲ್ಲಿನ ಟೊಮೇಟೋ ಎಷ್ಟು ಕೆಂಪಗಿವೆಯಲ್ಲಾ ಎಂದು ನಾನು ಅಚ್ಚರಿ ಸೂಚಿಸಿದ್ದೇ ತಡ ನಮ್ಮ ಜೊತೆಗಿದ್ದ ದುಬಾಷಿ ನಾವು ತೆರಳುತ್ತಿದ್ದ ವಾಹನವನ್ನು ನಿಲ್ಲಿಸಲು ಹೇಳಿದ. ನಮ್ಮ ಬೆಂಗಾವಲಾಗಿ ಬರುತ್ತಿದ್ದ ಸಿರಿಯನ್ ಮಿಲಿಟರಿ ಪಡೆಯ ವಾಹನವೂ ನಿಂತಿತು.
ನಮ್ಮ ದುಬಾಷಿ ಆ ವಾಹನದ ಸೈನಿಕರ ಕಿವಿಯಲ್ಲಿ ಏನೋ ಉಸುರಿದ.
ಅವರೆಲ್ಲರೂ ಟೊಮೇಟೋ ಹೊಲದೊಳಕ್ಕೆ ನುಗ್ಗಿದರು. ರೈತರು ಹೆದರಿಕೊಂಡು ತಮ್ಮ ಗುಡಿಸಲುಗಳೊಳಗೆ ಕ್ರೇಟಿನಲ್ಲಿ ತುಂಬಿಟ್ಟಿದ್ದ ಟೊಮೇಟೋಗಳನ್ನು ರಾಶಿರಾಶಿಯಾಗಿ ಸೈನಿಕರ ವಾಹನದೊಳಗೆ ತುಂಬಿಸತೊಡಗಿದರು.
ಸೈನಿಕರು ಖುಷಿಯಲ್ಲಿ ಕೇಕೆ ಹಾಕುತ್ತಿದ್ದರು.ಡಮಾಸ್ಕಸ್ ನ ಮಾರುಕಟ್ಟೆಯಲ್ಲಿ ದುಬಾರಿಯಾಗಿ ಹೋಗಿರುವ ಟೊಮೇಟೋ ಈಗ ಭಾರತೀಯ ಬರಹಗಾರರ ನಿಯೋಗದಿಂದಾಗಿ ತಮಗೆ ಮುಫ್ತಾಗಿ ಸಿಗುತ್ತಿರುವುದಕ್ಕೆ ಅವರಿಗೆಲ್ಲ ಸಹಜವಾಗಿಯೇ ಆನಂದವಾಗಿತ್ತು.

ಅವರೆಲ್ಲರೂ ತಮ್ಮ ತಮ್ಮ ಸೇನಾ ವಾಹನಗಳನ್ನು ಟೊಮೆಟೋದಿಂದ ತುಂಬಿಸಿಕೊಂಡ ಮೇಲೆ ಭಾರತೀಯ ಬರಹಗಾರರಾದ ನಮಗೂ ತಿನ್ನಲು ಒಂದೊಂದು ಟೊಮೆಟೋ ಕೊಟ್ಟರು. ನಾವು ಆ ಟೊಮೆಟೋ ಬೆಳೆದ ಬೆಳಗಾರರನ್ನು ಮಾತನಾಡಿಸಲು ಹೋದರೆ ಅವರು ಹೆದರಿ ನಡುಗುತ್ತಿದ್ದರು.

ಎದುರುಗಡೆ ಅಷ್ಟು ಎತ್ತರಕ್ಕೆ ನಿಂತುಗೊಂಡಿರುವ ಗೊಲಾನ್ ಬೆಟ್ಟಗಳು ಅವುಗಳ ಮೇಲೆ ತಿರುಗುತ್ತಿರುವ ರಾಕ್ಷಸರಂತಹ ಮಿಲಿಟರಿ ರೇಡಾರ್ ಗಳು ಅದರ ಎದುರಲ್ಲಿ ಸಂಜೆಯ ಬೆಳಕಲ್ಲಿ ಟೊಮೆಟೋ ಹೊಲದಲ್ಲಿ ಸಿರಿಯನ್ ಬೆಂಗಾವಲು ಪಡೆಯ ಜೊತೆ ಭಾರತೀಯ ಬರಹಗಾರರು. ಹೆದರಿಕೊಂಡು ಬಿಳಿಚಿಕೊಂಡಿರುವ ರೈತರು.

‘ಇವರು ಹೀಗೆಯೇ ತಮಗೆ ಬೇಕಾದಾಗಲೆಲ್ಲಈ ಪಾಪದ ರೈತರ ಮೇಲೆ ಎರಗುತ್ತಾರೆ.ಅವರಿಗೊಂದು ನೆಪ ಬೇಕು ಅಷ್ಟೇ.ಈ ರೈತಾಪಿ ಜನರು ಈಗ ಸಿರಿಯಾವನ್ನು ಆಳುತ್ತಿರುವ ಬಷಾರನ ಎದುರು ಪಾರ್ಟಿಗೆ ಸೇರಿದವರು.ಹಾಗಾಗಿ ಬಷಾರನ ಸೈನಿಕರು ಇವರನ್ನು ಹುರಿದು ಮುಕ್ಕುತ್ತಲೇ ಇರುತ್ತಾರೆ.ಆದರೆ ನಾವು ಇದನ್ನು ಬರೆದರೆ ಬದುಕುವ ಹಾಗಿಲ್ಲ.ಹಾಗಾಗಿ ನಾವು ಪಾಲೆಸ್ಟೇಯ್ನ್ ಹೋರಾಟದ ಬಗ್ಗೆಯೇ ಬಹುತೇಕ ಕೇಂದ್ರೀ ಕರಿಸಿ ಬರೆಯುತ್ತಿರುತ್ತೇವೆ. ಹಾಗಾಗಿ ಪರವಾಗಿಲ್ಲ‘ ಎಂದು ವಾಪಾಸು ಬರುವ ದಾರಿಯಲ್ಲಿ ಅಲ್ಲಿನ ಅಲ್ಪಸಂಖ್ಯಾತ ಕ್ರಿಷ್ಟಿಯನ್ ಜನಾಂಗಕ್ಕೆ ಸೇರಿದ ಬರಹಗಾರರೊಬ್ಬರು ಕಿವಿಯಲ್ಲಿ ಉಸುರಿದರು.

ಹಾಗೆ ನೋಡಿದರೆ ಅವರಿಗೂ ಬಷಾರನ ಆಡಳಿತವೇ ಇಷ್ಟ.ಯಾಕೆಂದರೆ ಎಷ್ಟು ಕ್ರೂರಿಯಾದರೂ ಬಷಾರ ಮತಾಂಧನಲ್ಲ.ಆತ ಸಿರಿಯಾದ ಅಲ್ಪಸಂಖ್ಯಾತ ಸಮುದಾಯವಾದ ಕ್ರಿಸ್ತಿಯನ್ನರನ್ನು ಅಪಾಯದಿಂದ ಕಾಪಾಡುತ್ತಾನೆ.ಆದರೆ ಆತನ ಎದುರಾಳಿಗಳಾದ ಇಸ್ಲಾಮಿಸ್ಟ್ ಪಂಗಡವೇನಾದರೂ ಗೆದ್ದು ಬಿಟ್ಟರೆ ಈ ದೇಶದ ಅಲ್ಪಸಂಖ್ಯಾತರ ಮಾರಣಹೋಮವಾಗಿ ಬಿಡುತ್ತದೆ ಎಂದು ಅವರು ವಿವರಿಸಿದರು.

ಕೊನೆಯಲ್ಲಿ `ನೋಡಿ ನೀವು ಭಾರತದಿಂದ ಬಂದವರು.ಪ್ಯಾಲೇಸ್ಟೀನಿಗಾಗಿ ನಡೆಯುತ್ತಿರುವ ಹೋರಾಟದಲ್ಲಿ ನೀವು ಮೊದಲಿನಿಂದಲೂ ನಮಗೆ ಬೆಂಬಲ ಇತ್ತವರು.ನೀವು ನಿಮ್ಮ ದೇಶಕ್ಕೆ ತೆರಳಿದ ನಂತರ ನೀವು ಪ್ಯಾಲೇಸ್ಟೀನ್ ಹೋರಾಟದ ಕುರಿತು ಬರೆಯಿರಿ,ಉಳಿದದ್ದೆಲ್ಲವೂ ನಮಗೂ ನಿಮಗೂ ಗೌಣ’ ಅಂದಿದ್ದರು
ಈಗ ಸಿರಿಯಾ ಸುಟ್ಟು ಕರಕಲಾಗಿರುವಾಗ, ಸಿರಿಯಾದ ನಿರಾಶ್ರಿತರು ಪ್ರೇತಾತ್ಮಗಳಂತೆ ಯುರೋಪಿನ ತುಂಬ ಓಡಾಡುತ್ತಿರುವಾಗ ಯಾವ ಅಸಹಿಷ್ಣುತೆಯ ಬಗ್ಗೆ ಬರೆಯುವುದು?