ಹ. ನಾ. ರಾ. ಅವರ ಅನುವಾದದ ಮಹತ್ವವನ್ನು ಆ ಕಾಲದಲ್ಲಿ ಅಷ್ಟಾಗಿ ಗುರುತಿಸಲಿಲ್ಲವೆಂದೇ ಅನಿಸುತ್ತದೆ. ಅದಕ್ಕೆ ಕಾರಣ ಮುಖ್ಯವಾಗಿ ಬೆಂಗಳೂರು- ಮೈಸೂರು ಕೇಂದ್ರದ ಸಾಹಿತಿಗಳಿಗೆ ಅವರ ಅನುವಾದಗಳು ಅಲಭ್ಯವಾಗಿದ್ದವು ಎಂದು ಊಹಿಸಬಹುದು. ದಕ್ಷಿಣ ಕನ್ನಡದವರು ಅವರನ್ನು ಮುಖ್ಯ ಕವಿ-ಚಿಂತಕ ಎಂದು ಪರಿಗಣಿಸಿದ್ದರು. ಪಂಜೆಯವರು ‘ವಾಗ್ಭೂಷಣ’ದ ಸಂಚಿಕೆಯಲ್ಲಿ ಬಂದ ‘ಶೇಕ್ಸ್‌ಪಿಯರಿನ ಸುಭಾಷಿತ ಕಲಾಪಗಳ’ ಚೌಪದಿಗಳನ್ನು ಪಠ್ಯ ಪುಸ್ತಕಗಳಲ್ಲಿ ಬಳಸಿಕೊಂಡಿದ್ದರು. ಪಂಜೆಯವರಿಗೆ ಹ.ನಾ.ರಾ. ಅವರ ‘ಆಂಗ್ಲ ಕವಿತಾವಳಿ’ಯ ಪ್ರತಿ ಸಿಕ್ಕಿರಲಿಲ್ಲ.
‘ಕರಾವಳಿಯ ಕವಿರಾಜಮಾರ್ಗ’ ಸರಣಿಯಲ್ಲಿ ಹಟ್ಟಿಯಂಗಡಿ ನಾರಾಯಣ ರಾವ್ ಕುರಿತು ಬರೆದಿದ್ದಾರೆ ಡಾ.ಬಿ. ಜನಾರ್ದನ ಭಟ್.

 

2019 ರಲ್ಲಿ ಶತಮಾನೋತ್ಸವ ಆಚರಿಸಿಕೊಂಡ ಕನ್ನಡದ ಒಂದು ಮುಖ್ಯ ಪುಸ್ತಕ ‘ಆಂಗ್ಲ ಕವಿತಾವಳಿ’ಯ ಕರ್ತೃ ಹಟ್ಟಿಯಂಗಡಿ ನಾರಾಯಣರಾವ್. (ಇದನ್ನು ಆಚರಿಸಿದ್ದು ಡಾ. ಜಿ. ಎನ್. ಉಪಾಧ್ಯಾಯರ ನೇತೃತ್ವದ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಮತ್ತು ಡಾ. ನಾ. ಮೊಗಸಾಲೆಯವರ ನೇತೃತ್ವದ ಕಾಂತಾವರ ಕನ್ನಡ ಸಂಘ – ಎರಡೇ. ಆ ಸಂದರ್ಭದಲ್ಲಿ ಈ ಲೇಖಕ ಸಂಪಾದಿಸಿದ ಹಟ್ಟಿಯಂಗಡಿ ನಾರಾಯಣ ರಾಯರ ‘ಆಂಗ್ಲ ಕವಿತಾವಳಿ’ಯ ಮರುಮುದ್ರಣ ಮತ್ತು ಅವರ ಜೀವನ ಚರಿತ್ರೆಗಳನ್ನು ಕಾಂತಾವರ ಕನ್ನಡ ಸಂಘ ಪ್ರಕಟಿಸಿತು). 1919 ರಲ್ಲಿ ಪ್ರಕಟವಾದ ‘ಆಂಗ್ಲ ಕವಿತಾವಳಿ’ ಕನ್ನಡದ ಮೊದಲನೆಯ ಇಂಗ್ಲಿಷ್ ಕವಿತೆಗಳ ಅನುವಾದ ಸಂಕಲನ ಎಂಬ ಕೀರ್ತಿಗೆ ಭಾಜನವಾಗಿದೆ. ಬಿ.ಎಂ. ಶ್ರೀ.ಯವರ ‘ಇಂಗ್ಲಿಷ್ ಗೀತಗಳು’ ಮೊದಲು ಕೆಲವೇ ಅನುವಾದಗಳ ಕಿರುಹೊತ್ತಗೆಯಾಗಿ ಪ್ರಕಟವಾದದ್ದು 1921 ರಲ್ಲಿ, ಈಗಿರುವಂತೆ ಸಮಗ್ರ ರೂಪದಲ್ಲಿ ಪ್ರಕಟವಾದದ್ದು 1926 ರಲ್ಲಿ.

ಕನ್ನಡ ಕಾವ್ಯಕ್ಕೆ ಆಂಗ್ಲ ಕವಿತೆಗಳಂತೆ ಆಧುನಿಕತೆಯ ಸ್ಪರ್ಶವಾಗಬೇಕೆಂಬ ದೊಡ್ಡ ಧ್ಯೇಯವನ್ನಿಟ್ಟುಕೊಂಡು ಈ ಬಗ್ಗೆ ಕಾರ್ಯಪ್ರವೃತ್ತರಾದ ಹಟ್ಟಿಯಂಗಡಿ ನಾರಾಯಣ ರಾಯರು (ಎಚ್. ನಾರಾಯಣ ರಾವ್, ಬಿ.ಎ., ಬಿ.ಎಲ್. 1863 – 1921) ನವೋದಯದ ಮಂಗಳೂರು ಕೇಂದ್ರಕ್ಕೆ ಸೇರಿದವರು. ಅವರು ಕನ್ನಡಕ್ಕಾಗಿ ಈ ಕಾರ್ಯವನ್ನು ಮಾಡುತ್ತಿದ್ದಾಗ ಅವರು ಇದ್ದದ್ದು ಮುಂಬಯಿಯಲ್ಲಿ. ಅಲ್ಲಿಯೂ ಅವರು ಇಂಗ್ಲಿಷ್ ಪತ್ರಕರ್ತರಾಗಿದ್ದವರು ಎನ್ನುವುದನ್ನು ನೆನೆದರೆ ಅವರ ಕನ್ನಡ ಪ್ರೇಮಕ್ಕೆ ತಲೆಬಾಗದೆ ಇರಲಾಗದು.

ಸ್ವತಂತ್ರ ಕವನ ಸಂಗ್ರಹಗಳನ್ನು ಪ್ರಕಟಿಸುವುದೇ ಅಪೂರ್ವವಾಗಿದ್ದ ಆ ಕಾಲದಲ್ಲಿ ಅನುವಾದಿತ ಕವಿತೆಗಳ ಸಂಕಲನವನ್ನು ಪ್ರಕಟಿಸಿದ್ದು ಸಣ್ಣ ಸಾಹಸವೇನೂ ಅಲ್ಲ. ಈ ಕವಿತೆಗಳು ಪುಸ್ತಕವಾಗಿ ಬರುವುದಕ್ಕಿಂತ ಮೊದಲು ಬಿಡಿಬಿಡಿಯಾಗಿ ಧಾರವಾಡದ ‘ವಾಗ್ಭೂಷಣ’ ಪತ್ರಿಕೆಯಲ್ಲಿ, ಮತ್ತು ಕನ್ನಡ ಸಾಹಿತ್ಯ ಪರಿಷತ್‌ ಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಮುಂಬಯಿಯಲ್ಲಿ ಆಗ ಕನ್ನಡ ಮುದ್ರಣಕ್ಕೆ ವ್ಯವಸ್ಥೆ ಇಲ್ಲದ ಕಾರಣ, ಪುಸ್ತಕವನ್ನು ಪುತ್ತೂರಿನ ಮುದ್ರಣಾಲಯ ಒಂದರಲ್ಲಿ ಮುದ್ರಣ ಮಾಡಿಸಿಕೊಂಡ ನಾರಾಯಣರಾಯರು ಮುಂಬಯಿಯಲ್ಲಿ ಕುಳಿತು ಅದರ ಪ್ರತಿಗಳನ್ನು ಮಾರಾಟ ಮಾಡಲು ಸಾಧ್ಯವಿರಲಿಲ್ಲ. ಅವರು ತಮ್ಮ ಪುಸ್ತಕದ ಪ್ರತಿಗಳನ್ನು ಎಲ್ಲ ಪತ್ರಿಕೆಗಳಿಗೂ ಕಳುಹಿಸಿದ್ದರು. (ಈಗ ನಮಗೆ ಲಭ್ಯವಾಗಿರುವ ಅದರ ಪ್ರತಿಯನ್ನು ಮೈಸೂರಿನ ಡಾ. ಹಾ. ತಿ. ಕೃಷ್ಣೇಗೌಡರು ಕಂಡುಹುಡುಕಿದ್ದು ಅವರು ಉಡುಪಿಯ ಕೆರೋಡಿ ಸುಬ್ಬರಾಯರ ಬಗ್ಗೆ ಡಾಕ್ಟರೇಟ್ ಅಧ್ಯಯನ ಮಾಡುತ್ತಿದ್ದಾಗ. ಉಡುಪಿಯ ‘ಶ್ರೀಕೃಷ್ಣಸೂಕ್ತಿ’ ಪತ್ರಿಕೆಗೆ ಪುಸ್ತಕ ವಿಮರ್ಶೆಗಾಗಿ ಬಂದಿದ್ದ ಪ್ರತಿ ಅದು).

ಪಂಜೆ ಮಂಗೇಶರಾಯರು ಮತ್ತು ಇತರರು ಅದರ ಒಂದೆರಡು ಪ್ರತಿಗಳನ್ನು ಒಬ್ಬರಿಂದ ಇನ್ನೊಬ್ಬರು ಎರವಲು ಪಡೆದುಕೊಂಡು ಓದುತ್ತಿದ್ದದ್ದನ್ನು ಅವರೇ ದಾಖಲಿಸಿದ್ದಾರೆ. ಅಲ್ಲದೆ ನಾರಾಯಣರಾಯರ ಅನುವಾದಗಳು ಮೊದಲು ಬಿಡಿಬಿಡಿಯಾಗಿ ಆ ಕಾಲದ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದು ಎಲ್ಲರ ಗಮನಕ್ಕೂ ಬಂದಿದ್ದವು.

ಅವು ಬಿಡಿಬಿಡಿಯಾಗಿ ಪ್ರಕಟವಾದ ಪತ್ರಿಕೆಗಳ ಹೆಸರು ಮತ್ತು ಸಂಚಿಕೆಗಳು ಹೀಗಿವೆ:
1. ಸುಭಾಷಿತ ಕಲಾಪ : ‘ಆಂಗ್ಲ ಕವಿತಾಸಾರ’, ವಾಗ್ಭೂಷಣ, ಸಂ. 22, ಸಂ. 1. ಏಪ್ರಿಲ್ 1918,
ಪು. 3-6.
(ಪದ್ಯಗಳ ಕ್ರಮ 1, 2, 3, 4, 5; 14, 15, 16,; 11, 12, 13; 7, 8, 9, 10; 21, 22, 23, 24; 17, 18, 19, 20, 25, 6)
2. ನಂದನ : ?
3. ಚಿಂತನ : ‘ಕನ್ನಡ ಕವಿತೆಯ ಭವಿತವ್ಯ’, ಕ.ಸಾ.ಪ.ಪ., ಏಪ್ರಿಲ್-ಜುಲೈ 1918 ಪು. 65-67.
4. ನಿತ್ಯಸುಖಿ : ‘ಆಂಗ್ಲಕವಿತಾಸಾರ’ ವಾಗ್ಭೂಷಣ, ಮಾರ್ಚ್ 1918, ಪು. 175-76.
5. ಆಳು ಬೀರತನೇ : ವಾಗ್ಭೂಷಣ, ಸಂ. 23-ಸಂ. 1. 1. ಜನವರಿ, 1919, ಪು. 392.
6. ಭಾವಗಣ : ‘ಕವಿತಾವರ್ಧನ’, ಕ.ಸಾ.ಪ.ಪ., ಜನವರಿ, 1919, ಪು. 24-26.
7. ಸಮಾಧಿಗತ ಗ್ರಾಮಸ್ಥರು : ವಾಗ್ಭೂಷಣ, ಸಂ. 22. ಸಂ. 8. ನವೆಂಬರ್ 1918, ಪು. 242-44.
8. ಗರ್ವನಿರ್ಣಯ : ‘ಆಂಗ್ಲ ಕವಿತಾಸಾರ’, ವಾಗ್ಭೂಷಣ, ಮಾರ್ಚ್, 1918, ಪು. 176.
9. ಮುಗಿಲು : ‘ಕನ್ನಡ ಕವಿತೆಯ ಭವಿತವ್ಯ’, ಕ.ಸಾ.ಪ.ಪ. ಏಪ್ರಿಲ್-ಜುಲೈ 1918, ಪು. 67-68.
10. ನಭ : ‘ಆಂಗ್ಲ ಕವಿತಾಸಾರ’, ವಾಗ್ಭೂಷಣ, ಮಾರ್ಚ್, 1918, ಪು. 174-35.
11. ಭಾವನೆ : ‘ಆಂಗ್ಲ ಕವಿತಾಸಾರ’, ವಾಗ್ಭೂಷಣ, ಮಾರ್ಚ್, 1918, ಪು. 174.
‘ಕವಿತಾವರ್ಧನ’, ಕ.ಸಾ.ಪ.ಪ. ಜನವರಿ, 1919, ಪು. 27-28. (ಮೊದಲ ಹತ್ತು ಸಾಲು ಮಾತ್ರ)
12. ಧನ್ಯವೀರ : ವಾಗ್ಭೂಷಣ, ನವೆಂಬರ್, 1918, ಪು. 240-42.
13. ಜೀವನಗೀತ : ‘ಆಂಗ್ಲ ಕವಿತಾಸಾರ’, ವಾಗ್ಭೂಷಣ, ಮಾರ್ಚ್, 1918, ಪು. 173.
14. ವಿತ್ತಹೀನವರದ : ‘ಕವಿತಾವರ್ಧನ’, ಕ.ಸಾ.ಪ.ಪ., ಜನವರಿ, 1919, ಪು. 26-27.
15. ಕವಿರಾಜ : ‘ಆಂಗ್ಲಕವಿತಾಸಾರ’, ವಾಗ್ಭೂಷಣ, ಮಾರ್ಚ್, 1918, ಪು. 171-32.
16. ಮಂಗಲಪದ್ಯ : ‘ಸೀಸಪದ್ಯ’, ಕ.ಸಾ.ಪ.ಪ. ಆಗಸ್ಟ್ 1918, ಪು. 107.

ಹಟ್ಟಿಯಂಗಡಿಯವರ ಪ್ರಭಾವ

ಕನ್ನಡ ನವೋದಯದ ಕವಿಗಳ ಮೇಲೆ, ಮುಖ್ಯವಾಗಿ ಕರಾವಳಿಯ ಕವಿಗಳ ಮೇಲೆ ಹಟ್ಟಿಯಂಗಡಿಯವರ ಪ್ರಭಾವ ಯಾವ ಬಗೆಯದ್ದು?

ಹಟ್ಟಿಯಂಗಡಿಯವರು ಆಧುನಿಕ ಕನ್ನಡದಲ್ಲಿ ಕಿರು ಗಾತ್ರದ ಕವಿತೆಗಳನ್ನು ಬರೆಯಲು ಕವಿಗಳು ಆಗಷ್ಟೇ ಪ್ರಾರಂಭಿಸಿದ್ದ ಕಾಲದಲ್ಲಿ ಕಿರುಗವನಗಳು ಯಾವ ಬಗೆಯಲ್ಲಿ ಇರಬಹುದು, ಅವುಗಳು ಯಾವ ಬಗೆಯ ವಸ್ತುಗಳನ್ನು ಅಳವಡಿಸಿಕೊಳ್ಳಬಹುದು ಎಂದು ದಾರಿ ತೋರಿಸಲು ಈ ಅನುವಾದಗಳನ್ನು ಮಾಡಿದ್ದುದು ಸ್ಪಷ್ಟವಾಗಿದೆ.

ಹಟ್ಟಿಯಂಗಡಿಯವರ ಅನುವಾದಗಳು ಯಾವ ಬಗೆಯವು, ಅವು ಯಾಕೆ ಹಾಗಿವೆ ಎನ್ನುವುದನ್ನು ಆಮೇಲೆ ವಿವೇಚಿಸೋಣ. ಇಲ್ಲಿ ಉಲ್ಲೇಖಿಸಬೇಕಾದ ಅವರ ಮೂರು ಚಿಂತನೆಗಳು – ಅವರು ಕನ್ನಡ ಕಾವ್ಯ ಮುಂದೆ ನಡೆಯಬೇಕಾದ ದಾರಿ ಯಾವುದು ಎನ್ನುವುದರ ಕುರಿತು ಬಹಳ ಅಧ್ಯಯನ ಮತ್ತು ಚಿಂತನೆಗಳನ್ನು ನಡೆಸಿರುವುದಕ್ಕೆ ಸಾಕ್ಷಿಯಾಗಿವೆ. ಅವರ ಅನುವಾದಗಳು ಈ ಚಿಂತನೆಗಳಿಗೆ ಪೂರಕವಾಗಿ ಅವರು ನೀಡಿರುವ ಮಾದರಿ ಪಾಠಗಳಾಗಿವೆ.

ಆ ಮೂರು ಉದಾಹರಣೆಗಳು ಇವು:
1. ಉದಾಹರಣೆಗೆ ಅವರು 1918 ರ ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಮಂಡಿಸಲಿಕ್ಕೆಂದು ಒಂದು ಪ್ರಬಂಧವನ್ನು ರಚಿಸಿದ್ದರು. ಅದರ ಪ್ರತಿಯನ್ನು ಪರಿಷತ್‌ಪತ್ರಿಕೆಗೆ ಕಳುಹಿಸಿದ್ದರು. ಈಗ ಅದರ ಮುದ್ರಿತ ರೂಪವಾಗಲಿ ಹಸ್ತಪ್ರತಿಯಾಗಲಿ ಲಭ್ಯವಿಲ್ಲ. ಅದರ ಸಾರಾಂಶವನ್ನು ಮಾತ್ರ ಅವರು ಪ್ರಕಟಿಸಿದ್ದರು. ಅದರಲ್ಲಿ ಈ ಕೆಳಗಿನ ವಿಚಾರಗಳಿದ್ದವು:

* ‘ಇಂಗ್ಲಿಷ್ ಮಾರ್ಗಗಳ ಅನುಸರಣದಿಂದ ಇನ್ನು ಮುಂದೆ ಕನ್ನಡ ಕಾವ್ಯಗಳ ಪ್ರಸಂಗ, ರಚನೆ, ಅಲಂಕಾರ – ಇವು ಬದಲಾಗುವವು.

* ಕವಿಗಳು ಪಾರಮಾರ್ಥಿಕ ವಿಷಯಗಳಿಗಿಂತ ರಾಷ್ಟ್ರಿಕ, ಸಾಮಾಜಿಕ ಚಾರಿತ್ರಿಕ ಮುಂತಾದ ಲೌಕಿಕ ಪ್ರಮೇಯಗಳಿಗೆ ಹೆಚ್ಚು ಗಮನಕೊಡುವರು.

* ದೀರ್ಘ ಪುರಾಣಗಳ ಬದಲಾಗಿ ಲಘು ಕೃತಿಗಳನ್ನು ರಚಿಸುವರು.

* ಛಂದಸ್ಸಿನಲ್ಲಿ ಹೊಸ ಮಾದರಿಗಳನ್ನು ಕಲ್ಪಿಸುವರು.

* ಅಲಂಕಾರದಲ್ಲಿ ಅಚೇತನ ಪದಾರ್ಥಗಳಿಗೆ ವಾಕ್‌ಶಕ್ತಿಯನ್ನೂ ಮಾನಸಿಕ ಭಾವಗಳಿಗೆ ಮೂರ್ತಿತ್ವವನ್ನೂ ಆರೋಪಿಸುವ ಉತ್ಪ್ರೇಕ್ಷೆ ರೂಢಿಯಾಗಬಹುದು.

“ಈ ಅಂಶಗಳಿಗೆ ಉದಾಹಣೆಯಾಗಿ ಮಿಲ್ಟನ್ ಮತ್ತು ಶೆಲ್ಲಿ ಇವರ ಕಾವ್ಯಗಳಿಂದ ಕೆಲವು ಭಾಗಗಳನ್ನು ಅನುವಾದಿಸಿ ಕೊಟ್ಟಿದ್ದರು. ನವೋದಯ ಕಾವ್ಯ ಯಾವ ರೀತಿಯಲ್ಲಿ ಇರಬೇಕು ಎಂಬುದಾಗಿ ಚಿಂತಿಸಿ ಅದಕ್ಕೆ ಮಾದರಿಯನ್ನು ಕೊಟ್ಟು ಹೊಸಗನ್ನಡ ಕವಿತೆಗೆ ಅಸ್ತಿವಾರವನ್ನು ಹಾಕುವಲ್ಲಿ ಮೊದಲಿಗರಲ್ಲಿ ಒಬ್ಬರಾದದ್ದಕ್ಕೆ ಈ ಲೇಖನದಲ್ಲಿ ಸ್ಪಷ್ಟ ನಿದರ್ಶನವಿದ್ದಿತು” ಎಂದು ಶ್ರೀನಿವಾಸ ಹಾವನೂರರು ಹೇಳಿದ್ದಾರೆ. ಇದನ್ನು ನೋಡಿದಾಗ, ಈ ಲೇಖನ ಲಭ್ಯವಾಗುತ್ತಿದ್ದರೆ ಕನ್ನಡದ ಮುಖ್ಯ ಸಾಹಿತ್ಯ ಚಿಂತನೆಯ ಬರಹಗಳಲ್ಲಿ ಒಂದೆಂದು ಪರಿಗಣಿತವಾಗುತ್ತಿತ್ತೆಂದು ಅನಿಸುತ್ತದೆ.

2. ಕಾವ್ಯಗಳನ್ನು ಹಳಗನ್ನಡದಲ್ಲಿಯೇ ಬರೆಯಬೇಕೆಂದು ಕೆಲವರ ಅಭಿಪ್ರಾಯವಿದೆ. ಇದು ಪಂಡಿತರ ಪರಂಪರೀಣ ಮತವಾಗಿರಬಹುದು….. ಆದರೆ ಹಳಗನ್ನಡ ಗ್ರಂಥಗಳನ್ನು ಹೆಚ್ಚಿಸುವುದರಿಂದ ಸಂಸ್ಕೃತ ಗ್ರಂಥಗಳನ್ನು ಬರೆಯುವಷ್ಟೇ ಅಥವಾ ಒಂದಿಷ್ಟು ಹೆಚ್ಚು ಉಪಯೋಗವಿರಬಹುದಲ್ಲದೆ ನಾವು ಆಶಿಸುವಷ್ಟು ಲಾಭವಿಲ್ಲ….

ರವೀಂದ್ರನಾಥ ಠಾಕೂರ ಶ್ರೀಮತಿ ಸರೋಜಿನಿ ನಾಯುಡು ಮುಂತಾದವರ ಕವಿತೆಗಳು ಸಂಕ್ಷಿಪ್ತವಾಗಿಯೇ ಇದೆ…..
ಕವಿಗಳಿಗೆ ಸ್ವತಂತ್ರತೆಯಿರಬೇಕು. ಪುರಾಣದ ಕಥೆಗಳನ್ನು ಅನುವಾದಿಸಿ ಹೇಳುವುದು ಈಗ ಅವಶ್ಯಕವಲ್ಲ….. ಕೆಳಗೆ ಅನುವಾದಿಸಿ ಬರೆದ ಕೊಲ್ಲಿನ್ಸ್ ಕವಿಯ ಕೃತಿಯನ್ನು ‘ಭಾವಗಣ’ ಓದಿದರೆ ವರ್ಣನೆಗೆ ಎಷ್ಟು ವಿಷಯಗಳು ದೊರೆಯಬಹುದು ಅವುಗಳನ್ನು ಎಷ್ಟು ವಿಧವಾಗಿ ವರ್ಣಿಸಬಹುದು ಎಂಬುದು ವಿಶದವಾದೀತು” ‘ಕವಿತಾವರ್ಧನ’ ಎಂಬ ಲೇಖನದಲ್ಲಿ ಹ. ನಾ. ರಾ. ಅವರು ನೀಡಿರುವ ಸಲಹೆಗಳು. (ಕ.ಸಾ. ಪರಿಷತ್ಪತ್ರಿಕೆ. ಜನವರಿ 1919 22-28)

3. “ಉತ್ತರ ಕರ್ನಾಟಕದಲ್ಲಿಯೂ ತುಳುವ ದೇಶದಲ್ಲಿಯೂ ಹೊಸಗನ್ನಡ ಕಾವ್ಯಗಳಲ್ಲಿ ಬರೆಯುವುದರಲ್ಲಿ ಉತ್ಸಾಹವು ಈಚೆಗೆ ಸುಪ್ರಕಾಶವಾಗಿ ಹೆಚ್ಚುತ್ತಾ ಬಂದಿದೆ. ಹಳಗನ್ನಡ ಪಕ್ಷಪಾತಿಗಳು ಈ ಕೃತಿಗಳಿಗೆ ಮೂರು ಆಕ್ಷೇಪಗಳನ್ನೆತ್ತಿದ್ದಾರೆಂದು ಮಂಗಳೂರಿನ ಸ್ನೇಹಿತರು ನನಗೆ ತಿಳಿಸಿರುವುದರಿಂದ ಕೆಲವು ವಿಷಯಗಳನ್ನು ಸ್ಪಷ್ಟೀಕರಿಸಲು ಅಪೇಕ್ಷಿಸುತ್ತೇನೆ.

ಹೊಸಗನ್ನಡದಲ್ಲಿ ಗ್ರಂಥಗಳನ್ನು ರಚಿಸುವ ಪದ್ಧತಿ ಹುಟ್ಟಿ ಈಗ 800 ವರ್ಷಗಳು ಕಳೆದುಹೋದವು. ಗಡಿಯಾರದ ಮುಳ್ಳುಗಳು ಹಿಂದಕ್ಕೆ ತಿರುಗಲಾರವೆಂದು ಆಂಗ್ಲರು ಹೇಳುವುದುಂಟು. ಹೊಸಗನ್ನಡವನ್ನು ಕಾವ್ಯಗಳಲ್ಲಿ ಉಪಯೋಗಿಸಬಾರದೆಂಬ ವಾದವು ಮಹಾರಾಷ್ಟ್ರೀಯರು ಸಂಸ್ಕೃತವನ್ನೇ ಬರೆಯಬೇಕೆನ್ನುವಷ್ಟೇ ಅಸಂಗತವಾಗಿದೆ. ಆಂಗ್ಲ ಕವಿತೆಗಳನ್ನು ದೇಶಭಾಷೆಗಳಲ್ಲಿ ಅನುವಾದಿಸಬಾರದೆಂದು ಎರಡನೆಯ ಆಕ್ಷೇಪವಂತೆ. ಮೈಸೂರಿನಲ್ಲಿ ಶೇಕ್ಸ್‌ಪಿಯರನ ಮುಖ್ಯ ನಾಟಕಗಳನ್ನು ವಿದ್ವಾಂಸರು ಕನ್ನಡಿಸಿದ್ದಾರೆ. ಆಸ್ಥಾನ ಕವಿಗಳಾಗಿದ್ದ ಬಸವಪ್ಪ ಶಾಸ್ತ್ರಿಗಳು ಇವರೊಳಗೊಬ್ಬರು. ಗ್ರೀಕರ ಒಂದು ಕಥೆಯನ್ನು ಆಧಾರವಾಗಿಟ್ಟುಕೊಂಡು ಶ್ರೀ ಗೋವಿಂದಾಚಾರ್ಯರು 500 ಷಟ್ಪದಿಗಳನ್ನು ರಚಿಸಿದ್ದಾರೆ. ಇಂತಹ ಪಾಖಂಡ ಕರ್ಮಗಳನ್ನು ನಿಲ್ಲಿಸಿಬಿಡಿರೆಂದು ಪಂಪನೇ ಹಂಪನಕಟ್ಟೆಯಲ್ಲಿ ಅವತರಿಸಿ ಗರ್ಜಿಸಿದರೂ ಕೇಳುವರೆಲ್ಲಿ?

ಛಂದಸ್ಸಿನಲ್ಲಿ ಹೊಸ ರೀತಿಗಳನ್ನು ಕಲ್ಪಿಸಬಾರದೆಂಬುದು ಮೂರನೆಯ ಆಕ್ಷೇಪವಂತೆ….. ಛಂದಸ್ಸುಗಳಲ್ಲಿ ಉಪಯುಕ್ತವಾದ ಕೆಲವು ಜಾತಿಗಳನ್ನು ರಕ್ಷಿಸಿ ಕೆಲಸಕ್ಕೆ ಬಾರದ ನಿಯಮಗಳನ್ನು ಕಿತ್ತುಹಾಕಿದರೆ ಬರೆಯುವವರಿಗೂ ಓದುವವರಿಗೂ ಸೌಖ್ಯವೇ ಅಲ್ಲದೆ ಸಂಕಷ್ಟವಾಗಲಾರದು. ಕೃಪಣರಿಂದ ಯಾವ ಕಾರ್ಯವೂ ಸಾಗದು. ಅವಿವೇಕಿಗಳು ಯಾವ ಕಾರ್ಯವನ್ನೂ ಕೆಡಿಸಬಹುದು.” – ‘ಹೊಸಗನ್ನಡ ಕಾವ್ಯಗಳು’ ಲೇಖನದಲ್ಲಿ ಹೇಳಿರುವ ವಿಚಾರಗಳು. (ಸ್ವದೇಶಾಭಿಮಾನಿ, 11.7.1919)

ಹೀಗೆ ಹಟ್ಟಿಯಂಗಡಿ ನಾರಾಯಣ ರಾಯರು ಬಹಳ ಪ್ರಜ್ಞಾಪೂರ್ವಕವಾಗಿ ತಮ್ಮ ಅನುವಾದಕಾರ್ಯವನ್ನೂ, ಆಧುನಿಕ ಸಾಹಿತ್ಯದ ಕುರಿತಾದ ಚಿಂತನೆಗಳನ್ನೂ ಮಾಡಿದ್ದಾರೆ. ಹಾಗಾಗಿ ಕರಾವಳಿಯ ಕವಿರಾಜ ಮಾರ್ಗದಲ್ಲಿ ನಡೆಯಲು ಹೊರಟ ಕವಿಗಳಿಗೆ ಅವರು ನೀಡಿದ ಮಾರ್ಗದರ್ಶನವು ಬಹಳ ಮುಖ್ಯವಾಗಿದೆ.

ಹಟ್ಟಿಯಂಗಡಿ ನಾರಾಯಣ ರಾಯರ ಅನುವಾದಗಳು ಆ ಕಾಲದ ಕವಿಗಳ ಮೇಲೆ ಪ್ರಭಾವ ಬೀರಿರುವುದಕ್ಕೆ ಒಂದು ಉದಾಹರಣೆಯೆಂದರೆ ನಾರಾಯಣರಾಯರು ಅನುವಾದಿಸಿರುವ ಥಾಮಸ್ ಗ್ರೇ ಕವಿಯ ‘ಎಲಿಜಿ ರಿಟನ್ ಇನ್ ಅ ಕಂಟ್ರೀ ಚರ್ಚ್‌ಯಾರ್ಡ್’ ನೀಳ್ಗವನ. ಹ.ನಾ.ರಾ. ಅದನ್ನು ‘ಸಮಾಧಿಗತ ಗ್ರಾಮಸ್ಥರು’ ಎಂದು ಅನುವಾದಿಸಿದ್ದಾರೆ. ಮುಂದೆ ಅದು ಕಡೆಂಗೋಡ್ಲು ಶಂಕರ ಭಟ್ಟರ ‘ಮಸಣ’ ನೀಳ್ಗವನದ ವಸ್ತುವಿನ ಆಯ್ಕೆಯಲ್ಲಿ ಪ್ರಭಾವ ಬೀರಿದೆಯೆ ಎಂಬ ಯೋಚನೆಗೆ ಎಡೆಯಿದೆ.

ಡಾ. ಬಿದರಹಳ್ಳಿ ನರಸಿಂಹಮೂರ್ತಿಯವರು ‘ಮಸಣ’ ಕವಿತೆಯು ಗ್ರೇಯ ಕವಿತೆಯಿಂದ ಪ್ರೇರಿತವಾಗಿದೆ ಎಂದು ಗುರುತಿಸಿದ್ದಾರೆ. ಕನ್ನಡದಲ್ಲೇ ಓದಲು ಸಿಕ್ಕ ‘ಸಮಾಧಿಗತ ಗ್ರಾಮಸ್ಥರು’ ಕವಿತೆಯನ್ನೇ ಕಡೆಂಗೋಡ್ಲು ಅವರು ಗಮನಿಸಿರುವ ಸಾಧ್ಯತೆ ಹೆಚ್ಚಿದೆ. ‘ಮಸಣ’ ಕವಿತೆಯ ವಿವರಗಳೆಲ್ಲ ಗ್ರೇಯ ಕವಿತೆಗಿಂತ ಭಿನ್ನವಾಗಿವೆ; ಆಶಯವೂ ಭಿನ್ನವಾಗಿದೆ. ಆದರೆ ವಸ್ತುವಿನಲ್ಲಿ ಸಾಮ್ಯವನ್ನು ಸ್ಪಷ್ಟವಾಗಿ ಗುರುತಿಸಬಹುದು. ಕನ್ನಡ ಕವಿಗಳು ಹೊಸ ಹೊಸ ವಸ್ತುಗಳನ್ನು ತಂದುಕೊಳ್ಳಬೇಕು ಎನ್ನುವ ಹ.ನಾ.ರಾ. ಅವರ ಆಶಯ ನಿಜವಾದುದು ಸಾರ್ಥಕ್ಯ ಭಾವವನ್ನು ಹುಟ್ಟಿಸುವಂಥದ್ದು.

ಈಗ ಮೂಲ ಇಂಗ್ಲಿಷ್ ಕವಿತೆಯನ್ನೂ ಹಟ್ಟಿಯಂಗಡಿಯವರ ಅನುವಾದವನ್ನೂ ಓದೋಣ:

Elegy Written in a Country Churchyard
BY THOMAS GRAY

The curfew tolls the knell of parting day,
The lowing herd wind slowly o’er the lea,
The plowman homeward plods his weary way,
And leaves the world to darkness and to me.

Now fades the glimm’ring landscape on the sight,
And all the air a solemn stillness holds,
Save where the beetle wheels his droning flight,
And drowsy tinklings lull the distant folds;

Save that from yonder ivy-mantled tow’r
The moping owl does to the moon complain
Of such, as wand’ring near her secret bow’r,
Molest her ancient solitary reign.

Beneath those rugged elms, that yew-tree’s shade,
Where heaves the turf in many a mould’ring heap,
Each in his narrow cell for ever laid,
The rude forefathers of the hamlet sleep.

The breezy call of incense-breathing Morn,
The swallow twitt’ring from the straw-built shed,
The cock’s shrill clarion, or the echoing horn,
No more shall rouse them from their lowly bed.

For them no more the blazing hearth shall burn,
Or busy housewife ply her evening care:
No children run to lisp their sire’s return,
Or climb his knees the envied kiss to share.

Oft did the harvest to their sickle yield,
Their furrow oft the stubborn glebe has broke;
How jocund did they drive their team afield!
How bow’d the woods beneath their sturdy stroke!

Let not Ambition mock their useful toil,
Their homely joys, and destiny obscure;
Nor Grandeur hear with a disdainful smile
The short and simple annals of the poor.

The boast of heraldry, the pomp of pow’r,
And all that beauty, all that wealth e’er gave,
Awaits alike th’ inevitable hour.
The paths of glory lead but to the grave.

Nor you, ye proud, impute to these the fault,
If Mem’ry o’er their tomb no trophies raise,
Where thro’ the long-drawn aisle and fretted vault
The pealing anthem swells the note of praise.

Can storied urn or animated bust
Back to its mansion call the fleeting breath?
Can Honour’s voice provoke the silent dust,
Or Flatt’ry soothe the dull cold ear of Death?

Perhaps in this neglected spot is laid
Some heart once pregnant with celestial fire;
Hands, that the rod of empire might have sway’d,
Or wak’d to ecstasy the living lyre.

But Knowledge to their eyes her ample page
Rich with the spoils of time did ne’er unroll;
Chill Penury repress’d their noble rage,
And froze the genial current of the soul.

Full many a gem of purest ray serene,
The dark unfathom’d caves of ocean bear:
Full many a flow’r is born to blush unseen,
And waste its sweetness on the desert air.

Some village-Hampden, that with dauntless breast
The little tyrant of his fields withstood;
Some mute inglorious Milton here may rest,
Some Cromwell guiltless of his country’s blood.

Th’ applause of list’ning senates to command,
The threats of pain and ruin to despise,
To scatter plenty o’er a smiling land,
And read their hist’ry in a nation’s eyes,

Their lot forbade: nor circumscrib’d alone
Their growing virtues, but their crimes confin’d;
Forbade to wade through slaughter to a throne,
And shut the gates of mercy on mankind,

The struggling pangs of conscious truth to hide,
To quench the blushes of ingenuous shame,
Or heap the shrine of Luxury and Pride
With incense kindled at the Muse’s flame.

Far from the madding crowd’s ignoble strife,
Their sober wishes never learn’d to stray;
Along the cool sequester’d vale of life
They kept the noiseless tenor of their way.

Yet ev’n these bones from insult to protect,
Some frail memorial still erected nigh,
With uncouth rhymes and shapeless sculpture deck’d,
Implores the passing tribute of a sigh.

Their name, their years, spelt by th’ unletter’d muse,
The place of fame and elegy supply:
And many a holy text around she strews,
That teach the rustic moralist to die.

For who to dumb Forgetfulness a prey,
This pleasing anxious being e’er resign’d,
Left the warm precincts of the cheerful day,
Nor cast one longing, ling’ring look behind?

On some fond breast the parting soul relies,
Some pious drops the closing eye requires;
Ev’n from the tomb the voice of Nature cries,
Ev’n in our ashes live their wonted fires.

For thee, who mindful of th’ unhonour’d Dead
Dost in these lines their artless tale relate;
If chance, by lonely contemplation led,
Some kindred spirit shall inquire thy fate,

Haply some hoary-headed swain may say,
“Oft have we seen him at the peep of dawn
Brushing with hasty steps the dews away
To meet the sun upon the upland lawn.

“There at the foot of yonder nodding beech
That wreathes its old fantastic roots so high,
His listless length at noontide would he stretch,
And pore upon the brook that babbles by.

“Hard by yon wood, now smiling as in scorn,
Mutt’ring his wayward fancies he would rove,
Now drooping, woeful wan, like one forlorn,
Or craz’d with care, or cross’d in hopeless love.

“One morn I miss’d him on the custom’d hill,
Along the heath and near his fav’rite tree;
Another came; nor yet beside the rill,
Nor up the lawn, nor at the wood was he;

“The next with dirges due in sad array
Slow thro’ the church-way path we saw him borne.
Approach and read (for thou canst read) the lay,
Grav’d on the stone beneath yon aged thorn.”

THE EPITAPH
Here rests his head upon the lap of Earth
A youth to Fortune and to Fame unknown.
Fair Science frown’d not on his humble birth,
And Melancholy mark’d him for her own.

Large was his bounty, and his soul sincere,
Heav’n did a recompense as largely send:
He gave to Mis’ry all he had, a tear,
He gain’d from Heav’n (’twas all he wish’d) a friend.

No farther seek his merits to disclose,
Or draw his frailties from their dread abode,
(There they alike in trembling hope repose)
The bosom of his Father and his God.

ಸಮಾಧಿಗತ ಗ್ರಾಮಸ್ಥರು
(ಥಾಮಸ್ ಗ್ರೇ-ನಿಂದ)

ಗ್ರಾಮದ ಗುಡಿಯಲಿ ಘಂಟಾಸ್ವನ ರವಿ ಉಗಮವ ಸಾರುವುದು
ಗೂರ್ಮಿಸುವಾಕಳ ಹಿಂಡು ಬಯಲಿನಲಿ ಮೆಲ್ಲನೆ ಸುಳಿಯುವುದು
ದಣಿದೊಕ್ಕಲುಮಗ ಮನೆಯನೆ ಲಕ್ಷಿಸಿ ಜಗ್ಗುತ ನಡೆಯುವನು
ಗಣಿಸದೆ ಲೋಗರ ನನ್ನನು ಕತ್ತಲೆ ಮುಸುಕಲು ಬಿಟ್ಟಿಹನು ||1||

ಅದೊ ಮಿಣುಗುಟ್ಟುತ ಭೂಮಿಯ ರೂಪವು ನೋಟಕೆ ಮಸಳುವುದು |
ಅದಿರದೆ ವಾತಾವರಣವು ಗಂಭೀರ ಶಾಂತತೆ ತಳೆದಿಹುದು
ಇಲ್ಲೆನಲಾ ಝೇಂಕರಿಸುವ ಚೀರಿಕೆ ಸುತ್ತುತ ಹಾರುವುದು
ಎಲ್ಲಿಯೊ ಕುರಿಮಂದೆಗೆ ಕಿಂಕಿಣಿ ರವ ನಿದ್ದೆಯ ಬರಿಸುವುದು ||2||

ಅಂತಲ್ಲದೆಯೂ ತರುರಹಗುಂಠಿತ ಮಸ್ತಕದಟ್ಟದಲಿ
ಮಂತಣವಿಲ್ಲದೆ ತಾನೇ ಆಳುವ ಪೂರ್ವದ ತಾಣದಲಿ
ಗೋಪ್ಯ ಕುಟಿಯ ಬಳಿ ಹೆರವರು ಸುಳಿದರೆ ಕಾಡಿದ ತಪ್ಪಿತಕೆ |
ಸಪ್ಪನೆ ಕುಳಿತಿಹ ಗೂಗೆ ಹಿಮಾಂಶುಗೆ ದೂರುವುದಾಕ್ಷಣಕೆ ||3||

ಆ ಮುರಿದೊಡಲಿನ ತಪನೀಮರದಾ ಕರಿಬೇವಿನ ಕೆಳಗೆ
ಭೂಮಿಯ ಕವಿದಿಹ ಕುಸಿಗುಪ್ಪೆಗಳಲಿ ಹಸುರು ಹೊದಿಕೆಯೊಳಗೆ
ಕಿರಿನೆಲ ಮನೆಗಳಲವರವರನಂತ ಕಾಲಕೆ ಮಲಗಿರುತ
ಬರಿಗಾವಿಲರೆನಿಸಿದ ಬಹು ಪೂರ್ವಜರಿರುವರು ನಿದ್ರಿಸುತ ||4||

ನರಸುಯ್ ಸೂಸುವ ಬೆಳಗಿನ ಜಾವದ ಗಾಳಿ ಕರೆಯುತಿರಲಿ
ಕಿರಿಕಲ್ಲಂಚಿಯ ತೃಣಗೃಹದಲ್ಲಿಯ ಚಿವು ಚಿವು ಕೇಳಿಸಲಿ
ಕೋಳಿಯ ತುತೂರಿ ಬೇಟೆಯ ಕೊಂಬಿನ ಮರುದನಿ ಘೋಷಿಸಲಿ
ಏಳರು ಹಾಸಿಗೆಯಿಂದಾ ಬಡವರು ಬರುವ ದಿವಸಗಳಲಿ ||5||

ಇನ್ನಿಲ್ಲವರಿಗೆ ಚಳಿಯಲಿ ಹಸನಿಯ ಬೆಂಕಿಯನುರಿಸುವುದು
ಇನ್ನಿಲ್ಲುದ್ಯಮಿಗೇಹಿನಿ ಸಾಯಂಸೇವೆಯ ಮಾಡುವುದು
ಸಂಜೆಯಲಪ್ಪನು ಬರುತಲೆ ಮಕ್ಕಳು ತೊದಲಾಡುವುದಿಲ್ಲ
ಅಂಜದೆ ಕೂಗುತ ಮಂಡಿಯ ಹತ್ತುತ ಮುದ್ದುಗೊಳುವುದಿಲ್ಲ ||6||

ಮರಳಿ ಮರಳಿ ಕುಡುಗೋಲಿನ ಕಡಿತಕೆ ಬೆಳೆಯನು ಪಡೆದವರು
ತಿರುಗಿ ತಿರುಗಿ ಬಿರುನೆಲವನು ನೇಗಿಲ ಸಾಲಿನಲೊಡೆದಿಹರು
ಹೊಲದೊಳಗೇರ್ಗಳ ಹೊಡೆಯುವ ಸಮಯದಲವರ ಹರುಷವೆನಿತು
ಮಲೆಯಲಿ ಮರಗಳ ಕಡಿಯುವ ಹೋರೆಯಲವರ ಬಲುಮೆಯೆನಿತು||7||

ಸಿರಿಗಾಟಿಸುವರು ಲೋಕಹಿತಕೆ ದುಡಿದರನೇಡಿಸದಿರಲಿ
ನಿರಸ ಹರುಷಗಳ ನವಿಶದ ಭಾಗ್ಯವನವ ಹೇಳಿಸದಿರಲಿ
ಬಡವರ ಬಾಳಿನ ಬರಿಯ ಕಿರಿಯ ಕಥೆಗಳನಾಕರ್ಣಿಸಲು
ಕಡು ವಿಭವದ ದೊರೆ ನಗದಿರಲವರಲಿ ಪರಿಭವ ತೋರಿಸಲು ||8||

ವಂದಿಗಳುಸುರುವ ಕೈಯ್ವಾರವು ವಿಭುಪದದಾಡಂಬರವು
ಸುಂದರ ರೂಪವು ಧನಸಮೃದ್ಧಿಯ ನೀಡಿದಖಿಲಫಲವು
ಆರಿಗು ತಪ್ಪದ ಕಡೆಯ ಮುಹೂರ್ತವನೆದುರಲಿ ಕಾಣುವುವು
ಭೂರಿಮಹಿಮೆಗಳ ದಾರಿಗಳೆಲ್ಲವು ಮಸಣಕೆ ಸಾಗುವುವು ||9||

ಚರಿತವ ಕೆತ್ತಿಸಿ ಜೀವಿತಸನ್ನಿಭ ಮೂರ್ತಿಯ ನಿಲ್ಲಿಸಲು
ಸರಿದಸು ಮುಂಚಿನ ಗೇಹಕೆ ಬರುವುದೆ ಪುನರಪಿ ತಿಷ್ಠಿಸಲು
ನುಡಿಯದ ಮೃತ್ತಿಕೆ ಮಾನವನರ್ಪಿಸಿದರೆ ಚೇತರಿಸುವುದೆ
ಜಡಶೀತಲ ಶವ ಚಾಟುವಚನಗಳ ಕೇಳಿ ಸುಖಿಸಲಹುದೆ ||10||

ಗಮನಿಸದೀಸ್ಥಳದೊಳಗೆ ಮಹಾತ್ಮರು ನಿದ್ರಿಸುತಿರಬಹುದು
ಸುಮನರ ತೇಜವೆ ತುಂಬಿದ ಹೃದಯದ ತಾಪಸರಿರಬಹುದು
ಕೆಲವರಿಗಧಿರಾಷ್ಟ್ರಗಳಾಳುವ ಕೈ ಬಲವಿದ್ದಿರಬಹುದು
ಹಲವರು ಕವಿತೆಯಲಾನಂದದ ಭರವೆಬ್ಬಿಸಿರಲು ಬಹುದು ||11||

ಆದರೆ ಬಹುಕಾಲಾರ್ಜಿತ ವಿದ್ಯೆಯ ವಿಪುಲ ಗ್ರಂಥವನು
ಓದಲು ತೋರಿಸಲಿಲ್ಲವರೆದುರಿಗೆ ಸರಸತಿ ತೆರೆದದನು
ಬಡತನವವರಲಿ ಧೀರೋತ್ಸಾಹದ ವೃದ್ಧಿಯನಡಗಿಸಿತು
ಕಡುಚಳಿಗಡ್ಡೆಯ ಕಟ್ಟಿಸುವಂತದರೋಘವ ನಿಲ್ಲಿಸಿತು ||12||

ಅತಿ ನಿರ್ಮಲ ಭಾಸುರಕರ ಶೋಭಿತ ರತ್ನಗಳಲಿ ಹಲವು
ಅತಲ ಸ್ಪರ್ಶ ತಮೋವೃತ ಸಾಗರ ಗರ್ಭದಲಡಗಿಹವು
ಮಾನವ ದೃಷ್ಟಿಗೆ ಕಾಣದೆ ಕುಸುಮಗಳೆಷ್ಟೋ ಬೆಳೆಯುವುವು
ಕಾನನದಲಿ ರಂಜಿಸಿ ಪರಿಮಳವನು ಬರಿದೇ ಬೀರುವುವು ||13||

ಎದೆ ಅದಿರದೆ ಬಡವರ ಸತ್ಯದ ಪರಿಪಾಲಿಸಲಮ್ಮುವರು
ಎದುರಿಸಿ ಹಳ್ಳಿಯ ಪೀಡಕರನು ಸ್ವತಂತ್ರಕೆ ಕಾದುವರು
ಬರೆಯದೆ ಕೀರ್ತಿಯ ಪಡೆಯದೆ ಜನರಧಿಕಾರವ ಕಾಯುವರು
ಇರಬಹುದಿವರೊಳು ರಕ್ತವ ಸುರಿಯದೆ ರಾಷ್ಟ್ರವ ಭಜಿಸುವರು ||14||

ಪರಿಣತ ಸಂವಾದಗಳೊಲುಮೆಯ ಕರತಾಲನ ಕೇಳುವುದು
ಪರಿಪೀಡನ ಧನಮಾನ ವಿನಾಶನ ಭಯವನು ಮರೆಯುವುದು
ನಗೆಮೊಗೆದವನಿಯ ಮೇಲೆ ಸಮೃದ್ಧಿಯ ಪಸರಣವೆಸಗುವುದು
ಸೊಗದ ಚರಿತವನು ಜನತೆಯ ಮೊಗದಲಿ ದಿಟ್ಟಿಸಿ ಹಿಗ್ಗುವುದು ||15||

ಇಂತಹ ಭಾಗ್ಯದ ಕಾಣದವರ ಗತಿ ಕುತ್ಸಿತವಿರಲಿಲ್ಲ
ಚಿಂತಿಸಲವರಪಕರ್ಮನಿಚಯ ಸಂವರ್ಧಿಸುತಿರಲಿಲ್ಲ.
ರಕುತದ ಹೊನಲಲಿ ರಾಜಪದದ ಕಡೆಗವರು ನಡೆಯಲಿಲ್ಲ.
ಸಕಲ ಮನುಜನು ಕೃಪೆಯಧಿವಾಸದ ಹೊರಗೆ ಕಳುಹಲಿಲ್ಲ ||16||

ಅರಿದಿಹ ಸತ್ಯವ ಮಾಜಿಸಿ ಹೃದಯದ ವೇದೆಯ ಪಡಲಿಲ್ಲ
ದುರಿತದಲುದಿಸಿದ ನಿಜ ಲಜ್ಜೆಯ ನಡುಗಿಸಯತ್ನಿಸಲಿಲ್ಲ.
ದರ್ಪದ ಸುಖಜೀವಿಗಳಾಲಯದಲಿ ಸೇವೆಯನಾಚರಿಸಿ
ಅರ್ಪಿಸಲಿಲ್ಲ ಸುಕವಿತಾ ಸೃಷ್ಟಿಯ ಸರ್ಜರಸವನುರಿಸಿ ||17||

ಮರುಳಾಟದ ಕಿರಿ ಕಚ್ಚಾಟದ ಜನಸಂಕುಲದೊಳಗಿರದೆ
ಸ್ಥಿರವಿರಿಸಿದರವರೆದೆಯಲಿ ಬಗೆಗಳನಡ್ಡಾಡಲುಗೊಡದೆ
ಭವದೊಳಗೊಂದು ವಿವಿಕ್ತದರಿಯ ತಣ್ಣ್ಣೆಳಲಲಿ ಬಾಳಿದರ
ವ್ಯವಹಾರದಲುಪಶಾಂತ ಚರಿತ ಸರಣಿಯ ಕಾಪಾಡಿದರು ||18||

ಮೂಲ ಶೀರ್ಷಿಕೆ : Elegy written in a country church yard

ಕಡೆಂಗೋಡ್ಲು ಅವರ ‘ಮಸಣ’ ನೀಳ್ಗವಿತೆ ಪ್ರಾರಂಭವಾಗುವುದು ಹೀಗೆ:

ಇಲ್ಲಿ ಮಲಗಿದ ಜನರ ಹೆಸರೆತ್ತಿ ಕರೆಯದಿರು
ಸೊಲ್ಲನಾಲಿಸಲವರು, ಬರಿದೆ ಹಂಬಲಿಸದಿರು.
ಜೀವನದ ಸಮರದಲಿ ಬಳಲಿ ಬೆಂಡಾದವರು
ತಾವಳಲನಾರಿಸಲು ದೀರ್ಘ ನಿದ್ರೆಯೊಳಿಹರು ||1||

ಗ್ರೇಯ ಸಾಲುಗಳ, ಹ.ನಾ.ರಾ. ಅವರ ಅನುವಾದದ ಪ್ರತಿಧ್ವನಿ ದೂರದಿಂದ ಕೇಳಿಸಿದಂತಾಗುತ್ತದೆ ಅಷ್ಟೆ! ನೋಡಿ –

ಆ ಮುರಿದೊಡಲಿನ ತಪನೀಮರದಾ ಕರಿಬೇವಿನ ಕೆಳಗೆ
ಭೂಮಿಯ ಕವಿದಿಹ ಕುಸಿಗುಪ್ಪೆಗಳಲಿ ಹಸುರು ಹೊದಿಕೆಯೊಳಗೆ
ಕಿರಿನೆಲ ಮನೆಗಳಲವರವರನಂತ ಕಾಲಕೆ ಮಲಗಿರುತ
ಬರಿಗಾವಿಲರೆನಿಸಿದ ಬಹು ಪೂರ್ವಜರಿರುವರು ನಿದ್ರಿಸುತ ||4||

ಹೀಗೆ ಆಧುನಿಕ ಕನ್ನಡ ಕಾವ್ಯ ತನ್ನ ಬಾಲ ಹೆಜ್ಜೆಗಳನ್ನು ಸ್ಥಿರವಾಗಿ ಊರುವುದಕ್ಕೆ ಪ್ರಯತ್ನಿಸುತ್ತಿದ್ದ ನವೋದಯದ ಪ್ರಾರಂಭದ ಘಟ್ಟದಲ್ಲಿ – ಮುಂದಿನ ಕಾವ್ಯಮಾರ್ಗ ಕಿರುಗವನಗಳದ್ದು; ದೊಡ್ಡ ಕಾವ್ಯಗಳದ್ದಲ್ಲ; ಮುಂದೆ ಹಳೆಗನ್ನಡದಲ್ಲಿ ಬರೆಯುವುದರಿಂದ ಪ್ರಯೋಜನವಿಲ್ಲ; ಹೊಸ ಹೊಸ ವಸ್ತುಗಳನ್ನು ಕನ್ನಡ ಕವಿತೆಗಳು ತಂದುಕೊಳ್ಳಬೇಕು ಎಂಬ ದೂರದೃಷ್ಟಿಯ ಮಾರ್ಗದರ್ಶನವನ್ನು ನೀಡಿದ ಹಟ್ಟಿಯಂಗಡಿ ನಾರಾಯಣ ರಾಯರ ಕೊಡುಗೆ ಮಹತ್ವದ್ದು.

ಅಲ್ಲದೆ ಹಟ್ಟಿಯಂಗಡಿ ನಾರಾಯಣ ರಾಯರು ಪರಿಚಯಿಸಿದ ‘ಶಿಥಿಲ ರಗಳೆ’ ಎನ್ನುವ ಮಟ್ಟು ಮುಂದಿನ ಕವಿಗಳ ಮೇಲೆ ಪ್ರಭಾವ ಬೀರಿದೆ.

ಹಟ್ಟಿಯಂಗಡಿಯವರ ಜೀವನ

ಹಟ್ಟಿಯಂಗಡಿ ನಾರಾಯಣ ರಾಯರ ಪೂರ್ವಜರ ಊರಾದ ಹಟ್ಟಿಯಂಗಡಿ ಕುಂದಾಪುರ ತಾಲೂಕಿನ ಹಟ್ಟಿಯಂಗಡಿ. ಅವರು ಬೆಳೆದುದು, ಪ್ರಾಥಮಿಕ ವಿದ್ಯಾಭ್ಯಾಸ ಪಡೆದುದು ಕಾರ್ಕಳದಲ್ಲಿ ಎಂದು ಹೇಳಲಾಗಿದೆ. ಬಹುಶಃ ಅವರ ತಂದೆ ಸರಕಾರಿ ಸೇವೆಯ ನಿಮಿತ್ತ ಕಾರ್ಕಳದಲ್ಲಿ ಇದ್ದಿರಬಹುದು.

ಅವರ ತಂದೆ ಪರಮೇಶ್ವರಯ್ಯ ಮತ್ತು ತಾಯಿ ಸರಸ್ವತಿ. ಸಾರಸ್ವತ ಬ್ರಾಹ್ಮಣ ಸಮುದಾಯದವರಾದ ಪರಮೇಶ್ವರಯ್ಯನವರ ಸಹೋದರ, ‘ಭಜನೆ ಗೋಪಾಲಯ್ಯ’ ಎನ್ನುವವರು ಉಡುಪಿ ಸೀಮೆಯಲ್ಲಿ ಪ್ರಸಿದ್ಧರಾಗಿದ್ದರಂತೆ. ನಾರಾಯಣ ರಾಯರು ಹುಟ್ಟಿದ್ದು 11.2.1863 ರಂದು. ಅವರು ತಂದೆಯ ಬಡತನದ ಕಾರಣ ಶಿಕ್ಷಣ ಪಡೆಯಲು ಕಷ್ಟ ಪಡಬೇಕಾಯಿತು. ಅವರ ಪ್ರಾಥಮಿಕ ವಿದ್ಯಾಭ್ಯಾಸ ಕಾರ್ಕಳದಲ್ಲಿ ಆಯಿತು ಎಂದು ಶ್ರೀನಿವಾಸ ಹಾವನೂರರು ದಾಖಲಿಸಿದ್ದಾರೆ. ಅವರು ಮುಂದೆ ಮೆಟ್ರಿಕ್ ವಿದ್ಯಾಭ್ಯಾಸಕ್ಕೆ ಮದರಾಸಿಗೆ ಹೋದರು. ಬಿ.ಎ. ಪದವಿಯವರೆಗೂ ಅಲ್ಲಿ ವಿದ್ಯಾಭ್ಯಾಸ ಮಾಡಿ, ಅಲ್ಲಿಯೇ ಶಿಕ್ಷಕ ವೃತ್ತಿಯನ್ನು ಪ್ರಾರಂಭಿಸಿದರು. ನಂತರ ಮಡಿಕೇರಿಯಲ್ಲಿ ಶಿಕ್ಷಕರಾಗಿದ್ದರು. ಬಡ್ತಿ ಹೊಂದಿ ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು.

ಬಹುಶಃ ವಕೀಲರಾಗಿ ಸ್ವತಂತ್ರ ಜೀವನ ನಡೆಸಬೇಕೆಂಬ ಉದ್ದೇಶದಿಂದ, 1891 ರಲ್ಲಿ ರಾಜೀನಾಮೆ ಕೊಟ್ಟು ಮದರಾಸಿಗೆ ಹೋಗಿ ಕಾನೂನು ಪದವಿಗಾಗಿ ಅಭ್ಯಾಸ ಮಾಡಿದರು. ಶ್ರೀನಿವಾಸ ಹಾವನೂರರು ಮಂಗಳೂರು ತೊರೆಯಲು ಇದ್ದ ಇನ್ನೊಂದು ಕಾರಣವನ್ನೂ ಊಹಿಸಿದ್ದಾರೆ: ಅದೇನೆಂದರೆ – ನಾರಾಯಣ ರಾಯರಿಗೆ ಅಷ್ಟರಲ್ಲಿ ಮದುವೆಯಾಗಿ ಮೂವರು ಮಕ್ಕಳು ಹುಟ್ಟಿದ್ದರಂತೆ. ಆದರೆ ಹೆಂಡತಿ ಮತ್ತು ಮೂವರೂ ಮಕ್ಕಳು ತೀರಿಕೊಂಡು, ನಾರಾಯಣ ರಾಯರು ಏಕಾಂಗಿಯಾದರು. ಆ ಕಾಲದಲ್ಲಿ ಜಿಲ್ಲೆಯನ್ನು ತಲ್ಲಣಗೊಳಿಸಿದ್ದ (ಈ ಕಾಲದ ಕೊರೋನಾದಂತೆ) ಪ್ಲೇಗ್ ರೋಗಕ್ಕೆ ಮನೆಮಂದಿ ಬಲಿಯಾದರೆಂದು ಊಹಿಸಲಾಗಿದೆ. ಆ ದುಃಖವನ್ನು ಮರೆಯಲು ಮಂಗಳೂರನ್ನೂ, ಅಲ್ಲಿನ ಕೆಲಸವನ್ನೂ ಬಿಟ್ಟು ಅವರು ಮದ್ರಾಸಿಗೆ ಹೋದರು.

ಹ. ನಾ. ರಾ. ಅವರು ಆಮೇಲೆ ಮದ್ರಾಸಿನಲ್ಲಿ, ಕ್ರಿಶ್ಚಿಯನ್ ಕಾಲೇಜಿನಲ್ಲಿ ಉಪಾಧ್ಯಾಯರಾಗಿ ದುಡಿಯುತ್ತಾ ಕಾನೂನು ಕಲಿತರು. ಬಿ.ಎಲ್. (ಬ್ಯಾಚಿಲರ್ ಆಫ್ ಲಾ) ಪದವಿಯನ್ನು ಪಡೆದ ನಂತರ ಅವರು ಮದರಾಸಿನಲ್ಲಿಯೇ ಸ್ವಲ್ಪ ಕಾಲ ವಕೀಲರೊಬ್ಬರ ಸಹಾಯಕರಾಗಿ ಕೆಲಸ ಮಾಡಿದರು. ವಕೀಲಿ ಕೆಲಸ ಒಗ್ಗದೆ ಮತ್ತೆ ಶಿಕ್ಷಕರಾಗಿ ಮದ್ರಾಸಿನ ಟ್ರಿಪ್ಲಿಕೇನ್‌ನಲ್ಲಿ ಕೆಲಸ ಮಾಡಲಾರಂಭಿಸಿದರು. ಅಲ್ಲಿನ ಪ್ರಸಿದ್ಧ ಹಿಂದೂ ಹೈಸ್ಕೂಲಿನ ಹೆಡ್ ಮಾಸ್ಟರ್ ಆಗಿ ಕೆಲಸ ಮಾಡಿ ಯಶಸ್ವಿಯೆನಿಸಿದರು. ಇದು ಸುಮಾರು 1900 – 1903 ರ ಅವಧಿಯ ಘಟನೆ. ಅವರ ನಂತರ ಆ ಸಂಸ್ಥೆಯ ಹೆಡ್ ಮಾಸ್ಟರ್ ಆದವರು ರೈಟ್ ಆನರಬಲ್‌ ಶ್ರೀನಿವಾಸ ಶಾಸ್ತ್ರಿಗಳು ಎಂದರೆ ಹಿಂದೂ ಹೈಸ್ಕೂಲಿನ ಸ್ಥಾನಮಾನವನ್ನು ಊಹಿಸಿಕೊಳ್ಳಬಹುದು.

1903 ರ ನಂತರ ನಾರಾಯಣ ರಾಯರು ಮುಂಬಯಿಗೆ ತೆರಳಿ ಪತ್ರಕರ್ತರಾದರು. ಅಲ್ಲಿ ಪ್ರಾರಂಭದಲ್ಲಿ ತಾರದೇವದಲ್ಲಿಯೂ, ನಂತರ ಬಾಂದ್ರದಲ್ಲಿಯೂ ವಾಸಿಸುತ್ತಿದ್ದರು. ಹ. ನಾ. ರಾ. ಅವರು ‘ಇಂಡಿಯನ್ ಸ್ಪೆಕ್ಟೇಟರ್’ ಮಾಸಪತ್ರಿಕೆಗಾಗಿ ಅವರು ಕೆಲಸ ಮಾಡುತ್ತಿದ್ದರು. ಕೆಲಕಾಲ ಅದರ ಸಂಪಾದಕರೂ ಆಗಿದ್ದರು. ಜತೆಗೆ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ‘Behind the Indian Veil’ ಎಂಬ ಅಂಕಣವನ್ನು ಬರೆಯುತ್ತಿದ್ದರು. ‘ಈಸ್ಟ್ ಅಂಡ್ ವೆಸ್ಟ್’ ಎಂಬ ಮಾಸಿಕಕ್ಕೂ ಅವರು ಬರೆಯುತ್ತಿದ್ದರು.

ಹಟ್ಟಿಯಂಗಡಿ ನಾರಾಯಣ ರಾಯರು ನಿರಂತರ ಅಧ್ಯಯನದಲ್ಲಿ ತೊಡಗಿರುತ್ತಿದ್ದರು. ಅವರು ಮಿತಭಾಷಿಗಳಾಗಿದ್ದರು, ಪರೋಪಕಾರಿಗಳಾಗಿದ್ದರು. ತಮ್ಮ ಹೆಚ್ಚಿನ ಸಮಯವನ್ನು ರಾಯಲ್ ಏಶಿಯಾಟಿಕ್ ಸೊಸೈಟಿಯ ಲೈಬ್ರೆರಿಯಲ್ಲಿ ಕಳೆಯುತ್ತಿದ್ದರು. ಅವರಿಗೆ ಮಾತೃಭಾಷೆ ಕೊಂಕಣಿ, ಹೃದಯದ ಭಾಷೆ ಕನ್ನಡ, ಸ್ಥಳೀಯ ಭಾಷೆ ತುಳು, ವಿದ್ಯೆ ಹಾಗೂ ಜೀವನೋಪಾಯಕ್ಕಾಗಿ ಪ್ರಾರಂಭದಲ್ಲಿ ನೆಲೆಸಿದ್ದ ಮದರಾಸಿನ ತಮಿಳು ಭಾಷೆಗಳಲ್ಲದೆ ಇಂಗ್ಲಿಷ್, ಸಂಸ್ಕೃತ, ಪ್ರಾಕೃತ, ಪಾಲಿ, ಮರಾಠಿ, ಗುಜರಾತಿ ಭಾಷೆಗಳಲ್ಲಿ ಪ್ರಭುತ್ವ ಇತ್ತು. ಸಂಗೀತವನ್ನು ಚೆನ್ನಾಗಿ ಬಲ್ಲವರಾಗಿದ್ದರು, ಚೆನ್ನಾಗಿ ಹಾಡುತ್ತಿದ್ದರು.

ಹ.ನಾ.ರಾ. ಅವರ ಭಾಷಾ ಪ್ರಭುತ್ವ ಮತ್ತು ವ್ಯುತ್ಪತ್ತಿ ಜ್ಞಾನ ಆ ಕಾಲದಲ್ಲಿ ಬಹಳ ಪ್ರಸಿದ್ಧವಾಗಿತ್ತೆಂದು ಕಾಣುತ್ತದೆ. ಮುದ್ದಣ ಕವಿ (ನಂದಳಿಕೆ ಲಕ್ಷ್ಮೀನಾರಣಪ್ಪ) ಭಾಷಾ ವಿಚಾರದಲ್ಲಿ ಹ.ನಾ.ರಾ. ಅವರಿಂದ ಮಾಹಿತಿಯನ್ನು ಪಡೆದುಕೊಳ್ಳುತ್ತಿದ್ದರೆಂದು ಬೆನಗಲ್ ರಾಮರಾಯರು ದಾಖಲಿಸಿದ್ದಾರೆ. ಹ.ನಾ.ರಾ. ಅವರ ಬಗ್ಗೆ ಬೆನಗಲ್ ಬರೆದಿರುವ ಒಂದು ಮಾತು ಹೀಗಿದೆ: “(ಮುದ್ದಣ ಕವಿಗೆ) …. ಈ ಭಾಷೆಗಳಲ್ಲಿ ಪರಿಶ್ರಮವು ಹೆಚ್ಚುತ್ತ ಹೋದಂತೆ ನೂತನವಾದ ರೀತಿಯಿಂದ ಒಂದು ವ್ಯಾಕರಣವನ್ನು ಬರೆಯಬೇಕೆಂಬ ಕುತೂಹಲವೂ ಈತನಲ್ಲಿ ಉಂಟಾಯಿತು. ಆಗ ಶ್ರೀ ಎಚ್. ನಾರಾಯಣ ರಾವ್, ಬಿ.ಎ., ಬಿ.ಎಲ್. ಅವರು ಮದ್ರಾಸಿನಲ್ಲಿ ಹೈಕೋರ್ಟ್ ವಕೀಲರಾಗಿದ್ದು ಕನ್ನಡದ ವಿಷಯದಲ್ಲಿ ಅಭಿಮಾನವುಳ್ಳವರಾಗಿಯೂ ಇದ್ದುದರಿಂದ ಶ್ರೀ ಲಕ್ಷ್ಮೀನಾರಣಪ್ಪನವರು ಅವರ ಸ್ನೇಹವನ್ನು ಸಂಪಾದಿಸಿ ಅವರ ಪರಿಮುಖವಾಗಿಯೂ, ನನ್ನ ಮೂಲಕವಾಗಿಯೂ ದ್ರಾವಿಡ ವರ್ಗದ ಬೇರೆಬೇರೆ ಭಾಷೆಗಳ ಶಬ್ದಗಳು, ಶಬ್ದರೂಪಗಳು, ಸಾಹಿತ್ಯ, ವ್ಯಾಕರಣ, ನಿಘಂಟು ಮುಂತಾದ ವಿಷಯಗಳನ್ನು ಕುರಿತು ಎಷ್ಟೋ ಸಮಾಚಾರಗಳನ್ನು ತರಿಸಿಕೊಳ್ಳುತ್ತಿದ್ದರು.” ಇಲ್ಲಿಯೇ ಕೆಳಗೆ ಎಚ್. ನಾರಾಯಣ ರಾಯರು ಯಾರು ಎಂಬ ಅಡಿಟಿಪ್ಪಣಿ ಹೀಗಿದೆ:

“ಈ ದೊಡ್ಡಮನುಷ್ಯರು ಮಂಗಳೂರು ಜಿಲ್ಲೆಗೆ ಸೇರಿದವರು. ಮೊದಲು ಮಡಿಕೇರಿಯಲ್ಲಿಯೂ ತರುವಾಯ ಮಂಗಳೂರು ಗೌ. ಕಾಲೇಜಿನಲ್ಲಿಯೂ, ಆ ಬಳಿಕ ಮದ್ರಾಸು ಕ್ರಿಶ್ಚಿಯನ್ ಕಾಲೇಜಿನಲ್ಲಿಯೂ ಉಪಾಧ್ಯಾಯರಾಗಿದ್ದು, ಬಿ.ಎಲ್. ಪಾಸು ಮಾಡಿ ಕೆಲವು ಕಾಲ ಮದ್ರಾಸಿನಲ್ಲಿ ವಕೀಲರಾಗಿದ್ದು, ಅದು ಸರಿಬೀಳದೆ, ಬೊಂಬಾಯಿಯಲ್ಲಿ ಅನೇಕ ವರ್ಷ ಕಾಲ ಪತ್ರಿಕಾ ಸಂಪಾದಕರಾಗಿದ್ದರು. ಇವರಿಗೆ ಕನ್ನಡದಲ್ಲಿ ಪಾಂಡಿತ್ಯವೂ, ಕವಿತಾ ಶಕ್ತಿಯೂ ಇದ್ದಿತು. ಪುರಾತನ ವಸ್ತುಶೋಧನದಲ್ಲಿಯೂ ನಿಪುಣರಾಗಿದ್ದರು. ಈಗ 2 – 3 ವರ್ಷಕ್ಕೆ ಹಿಂದೆ ಇವರು ಬೊಂಬಾಯಿಯಲ್ಲಿ ತೀರಿಕೊಂಡರು.” (ಪ್ರಬುದ್ಧ ಕರ್ನಾಟಕ:7-2, 1926)

ಹ. ನಾ. ರಾ. ಅವರು ಮಂಗಳೂರಿನಲ್ಲಿದ್ದಾಗ ಉಂಟಾದ ಮೊದಲನೆಯ ಪತ್ನಿಯ ಮತ್ತು ಮಕ್ಕಳ ವಿಯೋಗದ ನಂತರ ಸಂನ್ಯಾಸಿಯಂತೆ ಒಂದೆರಡು ದಶಕಗಳ ಕಾಲ ಒಂಟಿಯಾಗಿ ಬದುಕಿದರು. ಮರುಮದುವೆಯಾದರೆ ವಿಧವೆಯನ್ನೇ ಆಗಬೇಕು ಎಂಬ ಅವರ ಸಂಕಲ್ಪದಂತೆ ಸುಮಾರು ಐವತ್ತನೆಯ ವಯಸ್ಸಿಗೆ ಹತ್ತಿರ ಇರುವಾಗ ಅಂಬಾಬಾಯಿ ಎಂಬ ವಿಧವೆಯನ್ನು ಅವರು ಮದುವೆಯಾದರು.

ಹ. ನಾ. ರಾ. ಅವರು ಕಾರ್ನಾಡ್ ಸದಾಶಿವರಾವ್ ಮತ್ತು ಕುದ್ಮುಲ್ ರಂಗರಾವ್ ಅವರ ಸಮಾಜ ಸುಧಾರಣೆಯ ಕಾರ್ಯಗಳಿಗೆ ಬೆಂಬಲವಾಗಿದ್ದರು. ಅವರು 17.6.1921 ರಂದು, ಮುಂಬಯಿಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ತೀರಿಕೊಂಡರು.
ಅವರು ಜೀವನದ ಬಹುಭಾಗವನ್ನು ಮುಂಬಯಿಯಲ್ಲಿ ಪತ್ರಕರ್ತರಾಗಿ ಕಳೆದಿದ್ದರು. ಆದರೆ ಕನ್ನಡ ನಾಡಿನ ಜತೆಗೆ ಸಂಪರ್ಕವನ್ನು ಯಾವಾಗಲೂ ಉಳಿಸಿಕೊಂಡಿದ್ದುದು ಅವರ ಉಜ್ವಲ ಕನ್ನಡ ಪ್ರೇಮಕ್ಕೆ ಸಾಕ್ಷಿಯಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಜತೆಗೆ ಅವರಿಗೆ ಸಂಪರ್ಕ ಇತ್ತು. ಅವರು ಪರಿಷತ್‌ಪತ್ರಿಕೆಗೆ ನಿರಂತರವಾಗಿ ಲೇಖನಗಳನ್ನು ಬರೆಯುತ್ತಿದ್ದರು.

ನಾರಾಯಣ ರಾಯರು ತೀರಿಕೊಂಡಮೇಲೆ ಅವರ ಹೆಂಡತಿ ಅಂಬಾಬಾಯಿ ಗಂಡನ ನೆನಪಿಗೆಂದು ಒಟ್ಟು ಹತ್ತು ಸಾವಿರ ರೂಪಾಯಿಗಳನ್ನು (ಆ ಕಾಲದ ಹಣ, ಬಹಳ ದೊಡ್ಡ ಮೊತ್ತ ಇದು) ನಾಲ್ಕು ಸಂಸ್ಥೆಗಳಿಗೆ ದಾನವಾಗಿ ಕೊಟ್ಟರು. ಅವುಗಳಲ್ಲಿ ಎರಡು ಮಂಗಳೂರಿನ ಸಂಸ್ಥೆಗಳು: ಬಡ ಸಾರಸ್ವತ ವಿದ್ಯಾರ್ಥಿಗಳ ಫಂಡ್, ಡಿಪ್ರೆಸ್ಟ್ ಕ್ಲಾಸಸ್ ಮಿಷನ್ (ಕುದ್ಮುಲ್ ರಂಗರಾಯರಿಂದ ಸ್ಥಾಪಿತವಾದ ದಲಿತೋದ್ಧಾರ ಸಂಸ್ಥೆ). ಇನ್ನೆರಡು – ಪುಣೆಯ ಮಹಿಳಾ ವಿದ್ಯಾಲಯ ಮತ್ತು ಮುಂಬಯಿಯ ಸೇವಾಸದನ.
ಹ. ನಾ. ರಾ. ಅವರ ಬರವಣಿಗೆ

ಹ.ನಾ.ರಾ. ಅವರು ಕನ್ನಡದಲ್ಲಿ ಬರೆಯಲಾರಂಭಿಸಿದ್ದು 1916 ರಲ್ಲಿ. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿ, ಅದು ಪರಿಷತ್‌ಪತ್ರಿಕೆಯನ್ನು ಪ್ರಕಟಿಸಲು ಆರಂಭಿಸಿದಾಗ ಹ. ನಾ. ರಾ. ಅವರು ಕನ್ನಡದಲ್ಲಿ ಬರೆಯುವುದಕ್ಕೆ ಉತ್ಸಾಹ ತಾಳಿದರು. ಪರಿಷತ್‌ಪತ್ರಿಕೆಯ ಮೊದಲ ಸಂಪುಟದಿಂದಲೇ ಅವರ ಲೇಖನಗಳು ಅದರಲ್ಲಿ ಪ್ರಕಟವಾಗಲಾರಂಭಿಸಿದವು. ಧಾರವಾಡದ ‘ವಾಗ್ಭೂಷಣ’ ಪತ್ರಿಕೆಯಲ್ಲಿ ‘ಆಂಗ್ಲ ಕವಿತಾ ಸಾರ’ ಎಂಬ ಮಾಲೆಯಡಿಯಲ್ಲಿ ಅವರು ತಮ್ಮ ಕಾವ್ಯಾನುವಾದಗಳನ್ನು ಪ್ರಕಟಿಸತೊಡಗಿದರು. ಈ ಅನುವಾದಗಳನ್ನೇ ಸಂಕಲಿಸಿ ‘ಆಂಗ್ಲ ಕವಿತಾವಳಿ’ ಎಂಬ ಪುಸ್ತಕವನ್ನಾಗಿ ಪ್ರಕಟಿಸಲಾಗಿದೆ. ಹ.ನಾ.ರಾ. ಅವರು ಬರೆಯುತ್ತಿದ್ದ ಮೂರನೆಯ ಪತ್ರಿಕೆ ಮಂಗಳೂರಿನ ‘ಸ್ವದೇಶಾಭಿಮಾನಿ’. ಹ. ನಾ. ರಾ. ಅವರ ಲೇಖನ ಮತ್ತು ಪ್ರಬಂಧಗಳಲ್ಲಿ ಎಲ್ಲವೂ ಲಭ್ಯವಿಲ್ಲ.

ಲೇಖನಗಳ ಹೊರತಾಗಿ ಅವರು ಪ್ರಕಟಿಸಿದ ಪುಸ್ತಕಗಳ ಪಟ್ಟಿ ಹೀಗಿದೆ:

ಕನ್ನಡ
1. ಆಂಗ್ಲ ಕವಿತಾವಳಿ: ಮಾರ್ಚ್, 1919.
2. ಕನ್ನಡ ಕಥಾನಕ: ಮೇ, 1919 – ಕನ್ನಡ ಭಾಷೆ ಮತ್ತು ಅದರ ಶಬ್ದ ವ್ಯುತ್ಪತ್ತಿಯನ್ನು ಕುರಿತ ಕಿರುಹೊತ್ತಗೆ. ಇದಕ್ಕೆ (A short story of Kanarese) ಎಂಬ ವಿವರಣಾತ್ಮಕ ಇಂಗ್ಲಿಷ್ ಶೀರ್ಷಿಕೆ ಇದೆ. ಮೂರು ಪರಿಚ್ಛೇದಗಳಲ್ಲಿ ವಿಷಯವನ್ನು ಮಂಡಿಸಿದ್ದಾರೆ. ಅವರ ಹಲವು ಚಿಂತನೆಗಳು ತುಂಬಾ ಚೆನ್ನಾಗಿವೆ, ಕನ್ನಡದ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡಿವೆ. ಪರಿಚ್ಛೇದ ಎರಡರಲ್ಲಿ ಕನ್ನಡ ಗ್ರಾಮ್ಯಗಳನ್ನು ತಿರಸ್ಕರಿಸಿ, ಸಂಸ್ಕೃತ ಗ್ರಾಮ್ಯಗಳಿಗೆ ವ್ಯಾಕರಣ ಸೂತ್ರ ಬರೆಯುವ ವೈಯಾಕರಣಿಗಳ ಇಬ್ಬಂದಿತನವನ್ನು ಅವರು ಖಂಡಿಸುತ್ತಾರೆ. ವೈಯಾಕರಣಿಗಳು ವ್ಯಾಕರಣ ಬರೆಯುತ್ತಿದ್ದದ್ದು ಸಮಾನಕಾಲಿಕ ಭಾಷೆಗಲ್ಲ ಎಂಬ ಕುತೂಹಲಕರ ವಿಚಾರವನ್ನು ಹ.ನಾ.ರಾ. ಹೇಳಿದ್ದಾರೆ. ಕಾವ್ಯ, ಶಾಸನ, ವ್ಯಾಕರಣ ಇವೆಲ್ಲವೂ ತಮಗಿಂತ ಹಿಂದೆ ಇದ್ದ ಭಾಷೆಯನ್ನು ಉಪಯೋಗಿಸುತ್ತಿದ್ದವೆನ್ನುವ ಕುತೂಹಲಕರ ಸತ್ಯವನ್ನು ಅವರು ಹೇಳಿದ್ದಾರೆ. ಇದು ಗೊತ್ತಾಗುವುದು ವಚನಗಳಿಂದ ಎನ್ನುವ ಅವರ ಮಾತು ಅವರ ಚಿಂತನೆಯ ವಿಸ್ತಾರವನ್ನು ತೋರಿಸುತ್ತದೆ. “ಶಾಸನದಲ್ಲಿರುವ ಭಾಷೆಯಂತೆ ಜನರು ಮಾತಾಡುತ್ತಿರಲಿಲ್ಲವೆಂದು ಲಿಂಗಾಯತರ ಗ್ರಂಥಗಳಿಂದ ಸ್ಪಷ್ಟವಾಗುತ್ತದೆ,” ಎನ್ನುತ್ತಾರೆ ಹ.ನಾ.ರಾ. ಈ ಪುಸ್ತಕದ ಕೊನೆಯಲ್ಲಿ ಸಣ್ಣದೊಂದು ಕೀಟಲೆಯ ಮಾತು ಇದೆ: “ಗದ್ಯದಲ್ಲಿ ಆಂಗ್ಲಭಾಷೆಯ ಅಪಭ್ರಂಶಗಳು ಎಷ್ಟು ಪ್ರವೇಶಿಸುತ್ತವೊ – ಗುಡ್ನೆಸೇ ಬಲ್ಲುದು.”
3. ಗಾಯತ್ರಿ : ಗಾಯತ್ರಿ ಮಂತ್ರದ ಮೂಲ ಸಂಸ್ಕೃತ, ಕನ್ನಡ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಅರ್ಥವಿವರಣೆಯ ಕಿರುಹೊತ್ತಗೆ.
4. ಕನ್ನಡ ಕೃತಿಗಳು: ಹ. ನಾ. ರಾ. ಅವರೇ ಬರೆದಿರುವ ಅಥವಾ ರೂಪಾಂತರಿಸಿರುವ 43 ಭಜನೆಯ ಹಾಡುಗಳು ಈ ಪುಸ್ತಕದಲ್ಲಿವೆ.
5. ಬ್ರಹ್ಮ ಗೀತ: ಬ್ರಹ್ಮಸಮಾಜದ ಅನುಯಾಯಿಗಳಿಗೆ ಹಾಡಲು ಅನುಕೂಲವಾಗುವಂತೆ ರಚಿಸಿದ ಗೀತೆಗಳು.
6. Tracts for Thinkers ಮಾಲೆಯ ಪುಸ್ತಿಕೆಗಳ ಕನ್ನಡ ಅವತರಣಿಕೆಗಳು.
ಹ. ನಾ. ರಾ. ಅವರು ತಮ್ಮ ಪುಸ್ತಕಗಳನ್ನು ತಾವೇ ಅಚ್ಚುಹಾಕಿಸಿದ್ದಾರೆ. ಅವರ ಪುಸ್ತಕಗಳಲ್ಲಿ ಮೊದಲ ಎರಡು ಮುಖ್ಯವಾದವುಗಳು. ಅವರ ಒಟ್ಟು ಬರವಣಿಗೆ ಸುಮಾರು 150 ಪುಟಗಳಷ್ಟು ಮಾತ್ರ.

ಕೊಂಕಣಿಯಲ್ಲಿ ಎರಡು ಮತ್ತು ಇಂಗ್ಲಿಷಿನಲ್ಲಿಯೂ ಅವರು ಕೃತಿಗಳನ್ನು ಪ್ರಕಟಿಸಿದ್ದು ಎಲ್ಲವೂ ಲಭ್ಯವಿಲ್ಲ.
‘ಆಂಗ್ಲ ಕವಿತಾವಳಿ’ಯ ಮಹತ್ವ

ಆಗಲೇ, ಅಂದರೆ ಅವರಿಗಿಂತ ಮುಂಚೆಯೇ ಇಂಗ್ಲಿಷ್ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸುತ್ತಿದ್ದ ಪಂಜೆಯವರಿಗೆ ಮತ್ತು ಎಸ್. ಜಿ. ನರಸಿಂಹಾಚಾರ್ಯರಿಗೆ ಹೋಲಿಸಿದರೆ ಹ. ನಾ. ರಾ. ಅವರ ಅನುವಾದಗಳು ಮುಖ್ಯವೆಂದು ಅನಿಸಲು ಕಾರಣ, ಅವರು ಕವಿತೆಯ ವಸ್ತುವಿನ ಪಲ್ಲಟಕ್ಕೆ ಮತ್ತು ಔನ್ನತ್ಯಕ್ಕೆ ಗಮನ ಕೊಟ್ಟು ತಮ್ಮ ಅನುವಾದಗಳನ್ನು ಮಾಡಿದರು. ಅದು ಕಾರಣವೇ ಅವರಿಗೆ ಮೂಲಕ್ಕೆ ನಿಷ್ಠವಾಗಿ ಅನುವಾದಿಸುವುದರಲ್ಲಿ ಆಸಕ್ತಿ ಇರಲಿಲ್ಲ. ಹಟ್ಟಿಯಂಗಡಿಯವರಿಗೆ ಪ್ರಾಸವನ್ನು ಬಿಡುವ ಬಗ್ಗೆ ಕೂಡ ಆಸಕ್ತಿ ಇರಲಿಲ್ಲ.

ಹ. ನಾ. ರಾ. ಅವರ ಅನುವಾದದ ಮಹತ್ವವನ್ನು ಆ ಕಾಲದಲ್ಲಿ ಅಷ್ಟಾಗಿ ಗುರುತಿಸಲಿಲ್ಲವೆಂದೇ ಅನಿಸುತ್ತದೆ. ಅದಕ್ಕೆ ಕಾರಣ ಮುಖ್ಯವಾಗಿ ಬೆಂಗಳೂರು- ಮೈಸೂರು ಕೇಂದ್ರದ ಸಾಹಿತಿಗಳಿಗೆ ಅವರ ಅನುವಾದಗಳು ಅಲಭ್ಯವಾಗಿದ್ದವು ಎಂದು ಊಹಿಸಬಹುದು.
ದಕ್ಷಿಣ ಕನ್ನಡದವರು ಅವರನ್ನು ಮುಖ್ಯ ಕವಿ-ಚಿಂತಕ ಎಂದು ಪರಿಗಣಿಸಿದ್ದರು. ಪಂಜೆಯವರು ‘ವಾಗ್ಭೂಷಣ’ದ ಸಂಚಿಕೆಯಲ್ಲಿ ಬಂದ ‘ಶೇಕ್ಸ್‌ಪಿಯರಿನ ಸುಭಾಷಿತ ಕಲಾಪಗಳ’ ಚೌಪದಿಗಳನ್ನು ಪಠ್ಯ ಪುಸ್ತಕಗಳಲ್ಲಿ ಬಳಸಿಕೊಂಡಿದ್ದರು. ಪಂಜೆಯವರಿಗೆ ಹ.ನಾ.ರಾ. ಅವರ ‘ಆಂಗ್ಲ ಕವಿತಾವಳಿ’ಯ ಪ್ರತಿ ಸಿಕ್ಕಿರಲಿಲ್ಲ. ಕೊನೆಗೆ ರಟ್ಟು ಹರಿದ ಕೊನೆಯ ಪ್ರತಿಯೊಂದು ಸಿಕ್ಕಿ, ಅದನ್ನೇ ಆಸಕ್ತ ವಿದ್ವಾಂಸರು ಪ್ರತಿ ಮಾಡಿಕೊಂಡರಂತೆ. ಈ ರಟ್ಟು ಹರಿದ ‘ಆಂಗ್ಲ ಕವಿತಾವಳಿ’ ಎಂಬ ಹೆಸರಿನ ಪುಸ್ತಕದ ಪ್ರತಿಯನ್ನು ಪಂಜೆಯವರು ಅಥವಾ ಬೇರೆ ಯಾರೋ, ‘ಆಂಗ್ಲ ಕವಿತಾಸಾರ’ ದ ಪ್ರತಿ ಎಂದು ಭಾವಿಸಿದ ಕಾರಣ ಮುಂದೆ ಹಲವು ವರ್ಷಗಳ ಕಾಲ ‘ಆಂಗ್ಲ ಕವಿತಾಸಾರ’ ಮತ್ತು ‘ಆಂಗ್ಲ ಕವಿತಾವಳಿ’ಗಳು ಎರಡು ಬೇರೆಬೇರೆ ಪುಸ್ತಕಗಳೆಂಬ ತಪ್ಪು ಅಭಿಪ್ರಾಯ ಚಾಲ್ತಿಯಲ್ಲಿದ್ದು, ಎಸ್. ಅನಂತನಾರಾಯಣ ಅವರ ‘ಇಂಗ್ಲಿಷ್ ಕಾವ್ಯದ ಪ್ರಭಾವ’ ಗ್ರಂಥದಲ್ಲಿ ಹಾಗೆಯೇ ಹೇಳಲ್ಪಟ್ಟಿದೆ. ಈ ಪುಸ್ತಕ ಪುತ್ತೂರಿನಲ್ಲಿ ಮುದ್ರಿತವಾಗಿದ್ದರೂ, ಮುಂಬಯಿಯಲ್ಲಿ ಪ್ರಕಾಶಿಸಲ್ಪಟ್ಟದ್ದರಿಂದ, ಪಂಜೆಯವರ ಮಾತಿನಂತೆ, ಕರ್ನಾಟಕದವರಿಗೆ ‘ಪರಮ ದುರ್ಲಭ’ವಾಗಿದ್ದವು!

ಆದರೆ ಆಗಿನ ಪ್ರಸಿದ್ಧ ಪತ್ರಿಕೆಗಳಲ್ಲಿ ಅವರ ಅನುವಾದಗಳು ಪ್ರಕಟವಾಗುತ್ತಿದ್ದ ಕಾರಣ ಬಹುಜನರ ಗಮನಕ್ಕೆ ಬಂದಿರುವುದು ಸಹಜ. ಹಾಗಾಗಿ ಹ.ನಾ.ರಾ. ಅವರ ಪುಸ್ತಕವನ್ನು ಗಮನಿಸದೆ ಇರಬಹುದು, ಆದರೆ ಅನುವಾದಗಳನ್ನು ಗಮನಿಸದೆ ಇರಲು ಸಾಧ್ಯವಿಲ್ಲ.

ಎಸ್. ಅನಂತನಾರಾಯಣ ಅವರು ಹಟ್ಟಿಯಂಗಡಿಯವರ ಪ್ರಭಾವವನ್ನು ಹೀಗೆ ಗುರುತಿಸಿದ್ದಾರೆ: “ಪಂಜೆಯವರೂ, ಹಟ್ಟಿಯಂಗಡಿ ನಾರಾಯಣರಾಯರೂ ನಡೆಸಿದ ಕಾರ್ಯ …… ಮಂಗಳೂರಿನ ಕಡೆಯಲ್ಲಿ ಹೊಸಹಾದಿಯನ್ನು ಕಡಿದು ಸಿದ್ಧಮಾಡಿಕೊಟ್ಟಿತೆಂದು ನಿರ್ವಿವಾದವಾಗಿ ಹೇಳಬಹುದು.” (ಎಸ್. ಅನಂತನಾರಾಯಣ:1976)
ಹಟ್ಟಿಯಂಗಡಿಯವರ ಅನುವಾದಗಳ ಬಗ್ಗೆ

ಹ.ನಾ.ರಾ. ಅವರ ಅನುವಾದಗಳು ಸರಳ ಸುಂದರವಾದ ಕಾವ್ಯಾನುವಾದಗಳು. ಈ ಕಾಲಕ್ಕೂ ಹೊಸತೆನಿಸುವ, ಖುಷಿ ಕೊಡುವ ಶಬ್ದ ಮಾಧುರ್ಯ, ಲಯ ಅವರ ಅನುವಾದಗಳಲ್ಲಿದೆ. ಮೂಲ ಕಾವ್ಯವನ್ನು ಸರಿಮಿಗಿಲೆನಿಸುವಂತೆ ಅನುವಾದಿಸುವಲ್ಲಿ ತಮ್ಮ ವಿದ್ವತ್ತು ಮತ್ತು ರಸಿಕತೆ ಎರಡನ್ನೂ ಮೇಳೈಸಿ ಅವರು ತಮ್ಮ ರೂಪಾಂತರದಂತಹ ಅನುವಾದ ಕವಿತೆಗಳನ್ನು ರಚಿಸಿದ್ದಾರೆ. ಅವರ ಅನುವಾದಗಳಲ್ಲಿ ಪಾಶ್ಚಾತ್ಯ ಪುರಾಣ, ಜೀವನಧರ್ಮ ಇತ್ಯಾದಿ ಪರಿಕಲ್ಪನೆಗಳಿಗೆ ಸಂವಾದಿಯಾಗಿ ಭಾರತೀಯ ಪುರಾಣ ಮತ್ತು ಜೀವನಧರ್ಮಗಳ ಶಬ್ದಗಳನ್ನು ಬಳಸಿರುವುದು ಅನುವಾದಗಳಿಗೆ ಹೊಸ ಮೆರುಗನ್ನು ನೀಡಿದೆ. ಉದಾಹರಣೆಗೆ Jove ಶಬ್ದಕ್ಕೆ ‘ಸುರಪತಿ’ – ಹೀಗೆ.

ಅವರು ಸೃಷ್ಟಿಸಿದ ಕೆಲವು ಶಬ್ದಗಳು ವಿಶೇಷವಾಗಿವೆ. ‘Happy Warrior’ ಎನ್ನುವ ಹೆಸರಿಗೆ ಸಂವಾದಿಯಾಗಿ ‘ಧನ್ಯವೀರ’ ಎನ್ನುವ ಶಬ್ದವನ್ನು ಹ.ನಾ.ರಾ. ಸೃಷ್ಟಿಸಿದ್ದಾರೆ. ಇನ್ನು ಮೂಲದ ಮಾತುಗಳನ್ನು ಹ.ನಾ.ರಾ. ಅವರು ಕನ್ನಡಕ್ಕೆ ತರುವಾಗ ಅದರ ಅರ್ಥ ವಿಶೇಷಗಳನ್ನೆಲ್ಲ ಸಮಗ್ರವಾಗಿ ಹಿಡಿದಿಡುವಷ್ಟು ಸಮಗ್ರವಾಗಿ, ಅಷ್ಟೇ ಸಂಗ್ರಹವಾಗಿ ರೂಪಾಂತರಿಸಿಬಿಡುತ್ತಾರೆ. “The quality of mercy is not strain’d” ಎನ್ನುವ ಷೇಕ್ಸ್‌ಪಿಯರ್ ಮಹಾಕವಿಯ ಪ್ರಸಿದ್ಧ ವಾಕ್ಯವನ್ನು ಹ.ನಾ.ರಾ. ಅವರು ಅನುವಾದಿಸಿರುವುದು ಹೀಗೆ: “ಕರುಣರಸ ಹಿಂಡಿ ತೆಗೆಯುವುದಲ್ಲ”. ಈ ಮಾತಿನ ರೂಪಕಶಕ್ತಿ, ಅಭಿನಯಗುಣ ಮುಂದಿನ ಮಾತಿಗೆ ಪೂರಕವಗಿ ಬರುತ್ತದೆ. ಇದಕ್ಕಿಂತ ಚೆನ್ನಾಗಿ ಈ ವಾಕ್ಯವನ್ನು ಅನುವಾದಿಸಲು ಸಾಧ್ಯವಿಲ್ಲ. ಒಟ್ಟಿನಲ್ಲಿ ಹ.ನಾ.ರಾ. ಅವರ ಅನುವಾದ ಕವಿತೆಗಳನ್ನು ಓದುವುದೇ ಒಂದು ಆನಂದ.

ಹ.ನಾ.ರಾ. ಅವರು ಹಲವು ಶಬ್ದಗಳನ್ನು ತಾವೇ ಸೃಷ್ಟಿಮಾಡಿಕೊಂಡದ್ದಿದೆ. ಅಚ್ಚಗನ್ನಡದ ಶಬ್ದಗಳನ್ನು ಸೃಷ್ಟಿಸಿಕೊಂಡು ಕನ್ನಡವನ್ನು ಬೆಳೆಸಬೇಕೆಂಬ ಅವರ ಚಿಂತನೆಯನ್ನು ಮೇಲೆ ಉಲ್ಲೇಖಿಸಿದೆ. ಅದರಂತೆ ಅವರು ಹೊಸ ಶಬ್ದಗಳ ಸೃಷ್ಟಿಗೆ ಪ್ರಯತ್ನಿಸಿದ್ದಾರೆ. ಉದಾಹರಣೆಗೆ ‘ವರದ’ ಎನ್ನುವ ಶಬ್ದ ‘ಮತದಾರ’ ಎಂದು ಈಗ ನಾವು ಹೇಳುವ ‘ವೋಟರ್’ ಶಬ್ದದ ಹ.ನಾ.ರಾ. ಅನುವಾದ. ‘ವರ’ ಅಂದರೆ ವೋಟು, ವರದ ಅಂದರೆ ಮತದಾರ ಎಂದು ಇದನ್ನು ಅರ್ಥಮಾಡಿಕೊಳ್ಳಬೇಕು. ಇಂತಹ ಶಬ್ದಸೃಷ್ಟಿಗಳು ಜನಪ್ರಿಯವಾಗಲಿಲ್ಲವಾದರೂ ಅವರ ಪ್ರಯತ್ನ ಶ್ಲಾಘನೀಯವಾಗಿದೆ.

‘ನಡುವಿಗ’ (ನಡುವಿನವ), ‘ನುಡಿವೆಣ್ಣು’, ‘ಧೂಮಜ’, ‘ಶುಚಿತೆ’ ಹೀಗೆ ಅಚ್ಚಗನ್ನಡ ಶಬ್ದಗಳನ್ನು ಅವರು ಧಾರಾಳವಾಗಿ ಬಳಸಿದ್ದಾರೆ. ಆ ಕಾಲದಲ್ಲಿ ಅವರ ಅನುವಾದ ತನ್ನ ಶಿಥಿಲ ಬಂಧದಿಂದ ಮತ್ತು ಹೊಸತನದಿಂದ ಗಮನ ಸೆಳೆದಿತ್ತೆಂದೂ (ಅಂದರೆ ಸಾಂಪ್ರದಾಯಿಕರ ಹುಬ್ಬನ್ನು ಸ್ವಲ್ಪ ಮೇಲೇರಿಸಿತ್ತೆಂದೂ), ಅದರ ಹೊಸತನವನ್ನು ಸಾಂಪ್ರದಾಯಿಕರು ಸಂಶಯದಿಂದ ನೋಡಿದ್ದರೆಂದೂ ಆ ಕಾಲದ ಸಮೀಕ್ಷೆಗಳು ಸಾಕ್ಷಿ ನುಡಿಯುತ್ತವೆ.
ಸಂಕ್ಷೇಪಾನುವಾದ

ಕಾವ್ಯಾನುವಾದದಲ್ಲಿ ಅಪೂರ್ವವಾದ ಸಂಕ್ಷೇಪಾನುವಾದದ ಮಾದರಿಯನ್ನು ಹ.ನಾ.ರಾ. ಅವರು ಅನುಸರಿಸಿರುವರು ಎಂದು ಈಗಾಗಲೇ ಹೇಳಲಾಗಿದೆ. ಅದಕ್ಕೆ ಎರಡು ಉದಾಹರಣೆಗಳನ್ನು ನೋಡಿರಿ – (ಕವಿತೆ – ಮುಗಿಲು. ಕವಿ – ಷೆಲ್ಲಿ) :

ಬೆಂಗದಿರನ ಬಿತ್ತರಿಗೆಗೆ ಮಿಸುನಿಯ
ಇಂಗದಿರಗೆ ಮುತ್ತಿನ ಗುಡಿ ಕಟ್ಟುವೆ||
ಮರುತನು ಹಾರಿಸಲೆನ್ನ ಪತಾಕೆಯ
ಗಿರಿಗಳನಡಗಿಸಿ ಭಗಣವನಟ್ಟುವೆ ||8||

ನಗಗಳ ಮೇಲಕೆ ಚಪ್ಪರವಡರಿಸಿ
ಖಗಕರಗಳನೊತ್ತರಿಸೀಡಾಡುವೆ
ಸುರಧನು ವರ್ಣದ ತೋರಣವೇರಿಸಿ
ಮೆರೆಯುತ ವಿಜಯೋತ್ಸವವನು ಮಾಡುವೆ ||9||

ಈ ಎಂಟು ಸಾಲುಗಳ ಮೂಲ ಹದಿನಾಲ್ಕು ಸಾಲುಗಳಲ್ಲಿದೆ:

I bind the Sun’s throne with a burning zone,
And the Moon’s with a girdle of pearl;
The volcanoes are dim, and the stars reel and swim,
When the whirlwinds my banner unfurl.
From cape to cape, with a bridge-like shape,
Over a torrent sea,
Sunbeam-proof, I hang like a roof,
The mountains its columns be.
The triumphal arch through which I march
With hurricane, fire, and snow,
When the Powers of the air are chained to my chair,
Is the million-coloured bow;
The sphere-fire above its soft colours wove,
While the moist Earth was laughing below.

ಮಿಲ್ಟನಿನ ‘ಲಾಲೆಗ್ರೋ’ ಕವಿತೆಯ ಸಾಲುಗಳಂತೂ ತುಂಬಾ ಸಂಕ್ಷೇಪಕ್ಕೆ ಒಳಗಾಗಿವೆ. ಹ.ನಾ.ರಾ. ಅವರು ಕೆಲವು ಕವಿತೆಗಳನ್ನು ಎಷ್ಟರಮಟ್ಟಿಗೆ ಸಂಗ್ರಹರೂಪದಲ್ಲಿ ಹೇಳಿರುವರೆಂದರೆ, ಅಧ್ಯಯನಕಾರರು ಮೂಲಪದ್ಯವನ್ನು ಅರ್ಧದಷ್ಟೇ ಅನುವಾದಿಸಿದರೋ ಎಂದು ಸಂಶಯಬರುವಷ್ಟು! ಉದಾಹರಣೆಗೆ, ಕೀಟ್ಸ್ ಕವಿಯ ‘ಭಾವನೆ’ ಕವಿತೆಯ ಮೂಲ, The Realm of Fancy ಕವಿತೆಯು 92 ಸಾಲುಗಳಷ್ಟು ದೀರ್ಘ ಕವಿತೆ. ಹ.ನಾ.ರಾ. ಅನುವಾದದಲ್ಲಿ 18 ಸಾಲುಗಳು ಮಾತ್ರ ಇವೆ!

ಮುಂದೆ ಹಳೆಗನ್ನಡದಲ್ಲಿ ಬರೆಯುವುದರಿಂದ ಪ್ರಯೋಜನವಿಲ್ಲ; ಹೊಸ ಹೊಸ ವಸ್ತುಗಳನ್ನು ಕನ್ನಡ ಕವಿತೆಗಳು ತಂದುಕೊಳ್ಳಬೇಕು ಎಂಬ ದೂರದೃಷ್ಟಿಯ ಮಾರ್ಗದರ್ಶನವನ್ನು ನೀಡಿದ ಹಟ್ಟಿಯಂಗಡಿ ನಾರಾಯಣ ರಾಯರ ಕೊಡುಗೆ ಮಹತ್ವದ್ದು.

ಹಟ್ಟಿಯಂಗಡಿ ನಾರಾಯಣ ರಾಯರ ಅನುವಾದದ ಈ ಸಂಗ್ರಹ ಗುಣದಿಂದ ನಾವು ಊಹಿಸಬಹುದಾದಂತೆ ಅವರಿಗೆ ಆಧುನಿಕ ಆಂಗ್ಲ ಕಾವ್ಯದ ವಸ್ತುಗಳನ್ನು ಕನ್ನಡಿಗರಿಗೆ ಪರಿಚಯಿಸಿ, ಆ ದಿಕ್ಕಿನಲ್ಲಿ ಹೊಸ ಕಾವ್ಯದ ಬೆಳವಣಿಗೆ ಇರಬೇಕೆಂದು ಸೂಚಿಸುವ ಉದ್ದೇಶ ಇತ್ತು. ಅನುವಾದಗಳ ಮಹತ್ವಕ್ಕೆ ಈಗ ಬೆಲೆಕಟ್ಟುವಾಗ ಅದನ್ನೇ ಮುಖ್ಯವಾಗಿ ಪರಿಗಣಿಸದೆ ಅವರು ಅನುವಾದಗಳ ಮೂಲಕ ಕನ್ನಡ ಸಣ್ಣ ಕವಿತೆಗಳಿಗೆ ತಾತ್ವಿಕ ಗಹನತೆಯ ಅಗತ್ಯವನ್ನು, ವಸ್ತು ವೈವಿಧ್ಯವನ್ನು ತಂದುಕೊಟ್ಟದ್ದನ್ನು ಮುಖ್ಯವಾಗಿ ಪರಿಗಣಿಸಬೇಕು.

ಪ್ರಾರಂಭದಲ್ಲಿ ಹ.ನಾ.ರಾ. ಅವರು ಕೊಟ್ಟಿರುವ ಟಿಪ್ಪಣಿ ಹೀಗಿದೆ: “ಈ ಪದ್ಯದಲ್ಲಿ ಆಂಗ್ಲರ ಕೆಲವು ಪ್ರಸಿದ್ಧ ಕೃತಿಗಳನ್ನು ಅನುವಾದಿಸಿ ಹಾಕಿದೆ. ಯುಕ್ತವಾಗಿ ಕಂಡಂತೆ ಅಲ್ಲಲ್ಲಿ ಕೆಲವು ಅಂಶಗಳನ್ನು ಲೋಪಿಸಿ, ಇನ್ನು ಕೆಲವನ್ನು ಬದಲಿಸಿದೆ. ಕನ್ನಡದ ಛಂದಸ್ಸಿನಲ್ಲಿ ಪೂರ್ವಿಕರು ಆಗಾಗ್ಗೆ ನೂತನ ರೀತಿಗಳನ್ನು ಹುಟ್ಟಿಸಿದರು. ಈಗಲೂ ಹೊಸ ಮಾರ್ಗಗಳನ್ನೇಕೆ ತೆರೆಯಬಾರದೆಂದು ಸರಳ ಕಾವ್ಯಪ್ರಿಯರು ಕೇಳುತ್ತಾರೆ. ಈ ಪದ್ಯಗಳಲ್ಲಿ ಪ್ರಾಸವನ್ನು ತೊರೆಯದಿದ್ದರೂ ಪೂರ್ವಕವಿಗಳ ನಿಯಮಗಳನ್ನು ಸೂಕ್ಷ್ಮವಾಗಿ ಅನುಸರಿಸಿಲ್ಲ. ಆದಕಾರಣ ವೃತ್ತಗಳಿಗೆ ಹೆಸರು ಹಾಕಿಲ್ಲ. ಬೇಕಾದರೆ ಶಿಥಿಲಕಂದ, ಶಿಥಿಲರಗಳೆ ಎಂಬಂತೆ ಹೆಸರುಗಳನ್ನು ನಿರ್ಮಿಸಬಹುದು.”

ಹಟ್ಟಿಯಂಗಡಿಯವರ ಆಯ್ದ ಅನುವಾದಗಳು

ಸುಭಾಷಿತ ಕಲಾಪ
(ಶೇಕ್ಸ್‌ಪಿಯರನ ನಾಟಕಗಳಿಂದ)

1. ಜೀವನ ಸಪ್ತಾಂಕ

ನರಲೋಕವೆಲ್ಲ ನಾಟಕ ಶಾಲೆಯಂತಿರುತ
ಪುರುಷ ವನಿತೆಯರು ಬರಿಯಾಟದವರು;
ಮೆರೆದವರು ನಿಷ್ಕ್ರಮಿಸಿ ಹೆರರು ಪ್ರವೇಶಿಸುತ
ಪರಿಪರಿಯ ವೇಷಗಳ ನಟಿಸುತಿಹರು.

ಆರಬ್ಧಿಯಲ್ಲಿ ಕೂಸು, ತಾಯ ಕೈಯಲಿ ಮಲಗಿ
ಚೀರುತ್ತ ಕಾರುತ್ತ ಹೊರವಡುವುದು
ತೋರುವನು ಹುಡುಗನಾಮೇಲೆ ನಡೆ ಮಠಕೆನಲು
ಮೋರೆ ತೊಳಕೊಂಡಳುತ ಚೀಲ ಹಿಡಿದು

ತರುವಾಯ ಯುವಕನಂಗಜನ ತಾಪವ ಸಹಿಸಿ
ತರುಣಿಯರ ಕೃಪೆಗೆ ಹಂಬಲಿಸುತಿಹನು
ಬಿರು ನುಡಿಯ ಬಲ್ಬಂಟ ಯಶದ ಬುದ್ಬುದವೆಳಸಿ
ಧುರದಲುರಿಗುಂಡುಗಳನೆದುರಿಸುವನು.

ಮರುಜೋಹ ಸೂಕ್ತಿ ಸಾಮಾನ್ಯ ಪ್ರಮಾಣಗಳ
ನೆರೆಯರಿತ ಖರದೃಶಿ ನ್ಯಾಯಮೂರ್ತಿ
ಸ್ವರಗುಂದಿ, ಮೈಸುರ್ಕಿ, ಮೂಗಿನಲಿ ಕನ್ನಡಿಯ
ಧರಿಸುವನು ಭರತನಾರನೆಯ ಸರ್ತಿ.

ಎರಡನೆಯ ಕೂಸುತನ ಚರಮ ಪ್ರವೇಶದಲಿ,
ಬರಿ ಮರವೆ ಕವಿದೆಲ್ಲ ನಷ್ಟವಹುದು;
ಇರದು ಹಲ್ಲಿರದು ಕಣ್ಣಿರದು ರುಚಿ ಜಠರದಲಿ
ನರದಶಾ ಸಪ್ತಕ ಸಮಾಪ್ತವಹುದು.
– As you likme it VII

ಮೂಲ: The Seven Ages of Man

All the world’s a stage,
And all the men and women merely players:
They have their exits and their entrances;
And one man in his time plays many parts,
His acts being seven ages. At first the infant,
Mewling and puking in the nurse’s arms.
And then the whining schoolboy, with his satchel,
And shining morning face, creeping like snail
Unwillingly to school. And then the lover,
Sighing like furnace, with a woeful ballad
Made to his mistress’ eyebrow. Then a soldier,
Full of strange oaths, and bearded like the pard,
Jealous in honor, sudden and quick in quarrel,
Seeking the bubble reputation
Even in the cannon’s mouth. And then the justice,
In fair round belly with good capon lined,
With eyes severe and beard of formal cut,
Full of wise saws and modern instances;
And so he plays his part. The sixth age shifts
Into the lean and slippered pantaloon,
With spectacles on nose and pouch on side,
His youthful hose well saved, a world too wide
For his shrunk shank; and his big manly voice,
Turning again toward childish treble, pipes
And whistles in his sound. Last scene of all,
That ends this strange eventful history,
Is second childishness, and mere oblivion,
Sans teeth, sans eyes, sans taste, sans everything.

–William Shakespeare (from As You Like It)

2. ಕರುಣರಸ ಹಿಂಡಿ ತೆಗೆಯುವುದಲ್ಲ

ಕರುಣರಸ ಹಿಂಡಿ ತೆಗೆಯುವುದಲ್ಲ, ದಿವದಿಂದ
ಸುರಿವ ಶೀಕರದ ಸ್ವಭಾವಿಯಹುದು,
ಹರಸಿ ಹದುಳಿನಲಿರಿಸಿ ನೀಡುವನ ಪಡೆಯುವನ
ಎರಡು ಗುಣದಿಂದ ಸುಕೃತಾರ್ಥವಹುದು.

ಹಿರಿಯರಲಿ ಹಿರಿದು, ಗದ್ದುಗೆ ಮಕುಟಗಳಿಗಿಂತ
ಅರಸರಲಿ ಮಿಗಿಲೆನಿಸಿಯೊಪ್ಪುತಿಹುದು
ನರಪತಿಯ ದಂಡ ಲೌಕಿಕ ವಿಭವ ಲಾಂಛನವು
ಗರಿಯ ಸಾಧ್ವಸಗಳಿಗೆ ಪೀಠವಹುದು.

ಕರುಣವೀ ದಂಡಾಂಕಿತ ಪ್ರಭುತ್ವಕ್ಕೆ ಮೇಲು
ಧರಣಿಪರ ಹೃದಯದಲಿ ಪಟ್ಟವದಕೆ,
ಕರುಣದಿಂದವರು ಕಟು ಧಮ್ರ್ಯತೆಯನೊಗ್ಗಿಸಲು
ಪರಮೇಶನೀಶತೆಯ ಸಾಮ್ಯವದಕೆ

ಮೂಲ: 2. The quality of mercy is not strained

The quality of mercy is not strained.
It droppeth as the gentle rain from heaven
Upon the place beneath. It is twice blest:
It blesseth him that gives and him that takes.

‘Tis mightiest in the mightiest; it becomes
The thronèd monarch better than his crown.
His scepter shows the force of temporal power,
The attribute to awe and majesty

Wherein doth sit the dread and fear of kings;
But mercy is above this sceptered sway.
It is enthronèd in the hearts of kings;
It is an attribute to God Himself.
(The Mercahn of Venice – ನಾಟಕದಿಂದ).

3. ಭಾವನೆ
(ಕೀಟ್ಸ್ ಕೃತ)

ಭಾವನೆಯ ಬಿಚ್ಚಿಬಿಡು ಹೊರಗಣ್ಣು ನೋಡಿದರೆ
ಆವ ರಮಣೀಯತೆಗೆ ತಪ್ಪುವುದು ನಿಯತ ಜರೆ
ಮಧುಮಾಸದಾನಂದ ಹೂಗಳೊಡನಳಿಯುವುದು
ವಿಧುಕರಣಗಳ ಸೊಬಗು ಮುಗಿಲುಗಳಲಡಗುವುದು
ನೋಡಿದುದ ನೋಡಿದರೆ ಮೋಹಿಸುವ ಕಣ್ಣೆಲ್ಲಿ
ಬಾಡದಂತಹ ಕದಪು ದಂತ ಮೌಕ್ತಿಕವೆಲ್ಲಿ
ಕೇಳಿದುದ ಕೇಳಿದರೆ ಸವಿಮಾತಿಗಿಂಪೆಲ್ಲಿ
ಹೇಳಿದುದ ಹೇಳಿದರೆ ಕಥೆಯ ರಂಜನವೆಲ್ಲಿ
ಆವ ಸುಖ ವೃಷ್ಟಿಯಲಿ ಬುದ್ಬುದದ ಪರಿಯಲ್ಲ
ಭಾವನೆಯ ಹಾರಗೊಡು ವಿರತಿಯಲಿ ಸುಖವಿಲ್ಲ
ಅದರ ಮಾಹಾತ್ಮ್ಯವೆನಿತೆಂದು ಬಣ್ಣಿಸಬಹುದು
ಒದಗಿದ ಶಿಶಿರದೊಳಗೆ ಚೈತ್ರವನು ಬರಿಸುವುದು
ಕವಿದ ಕಾರ್ಮುಗಿಲನೋಡಿಸಿ ನೀಲನಭದೊಳಗೆ
ರವಿಯ ಮೂಡಿಸಿ ಮುದವ ನೀಡುವುದು ತಾವರೆಗೆ
ಬೇಸಿಗೆಯಲೋಘಗಳ ತೊರೆಯಲಿ ತುಂಬುವುದು
ಆಸುರದ ತಿಮಿರದಲಿ ಕೌಮುದಿಯು ಬೀರುವುದು
ಪಡಸಾಲೆಯಲಿ ಹಂಸಗಣದ ದರ್ಶನವದಕೆ
ನಡುಹಗಲ ಬೆಳಕಿನಲಿ ಶಲಭಗಳ ತಳತಳಿಕೆ
ಸೇವಂತಿಗೆಯ ಸೊಬಗು ಮಲ್ಲಿಗೆಯ ನರುಗಂಪು
ಆವಾಗಲೂ ತಪ್ಪದದಕೆ ಮಾವಿನ ಸೊಂಪು
ಅನುಭವಕೆ ವಿಧಿಬದ್ಧ ಹರ್ಷಗಳು ದೊರೆಯದಿರೆ
ಅನಿರುದ್ಧ ಭಾವನೆಗೆ ಮನದ ಪಂಜರವ ತೆರೆ.
ಮೂಲ ಶೀರ್ಷಿಕೆ : The Realm of Fancy

ಮೂಲ ಕವಿತೆ: The Realm of Fancy
BY JOHN KEATS

EVER let the Fancy roam;
Pleasure never is at home.
At a touch sweet Pleasure melteth,
Like to bubbles when rain pelteth;
Then let wingèd Fancy wander
Through the thought still spread beyond her:
Open wide the mind’s cage-door,
She’ll dart forth, and cloudward soar.
O sweet Fancy! let her loose;
Summer’s joys are spoilt by use,
And the enjoying of the Spring
Fades as does its blossoming;
Autumn’s red-lipp’d fruitage too,
Blushing through the mist and dew,
Cloys with tasting: what do then?
Sit thee by the ingle, when
The sear fagot blazes bright,
Spirit of a winter’s night;
When the soundless earth is muffled,
And the cak’d snow is shuffled
From the ploughboy’s heavy shoon;
When the Night doth meet the Noon
In a dark conspiracy
To banish Even from her sky.
Sit thee there, and send abroad,
With a mind self-overaw’d,
Fancy, high-commission’d: send her!
She has vassals to attend her:
She will bring, in spite of frost,
Beauties that the earth hath lost;
She will bring thee, all together,
All delights of summer weather;
All the buds and bells of May,
From dewy sward or thorny spray;
All the heapèd Autumn’s wealth,
With a still, mysterious stealth:
She will mix these pleasures up
Like three fit wines in a cup,
And thou shalt quaff it:—thou shalt hear
Distant harvest-carols clear;
Rustle of the reapèd corn;
Sweet birds antheming the morn:
And in the same moment—hark!
’Tis the early April lark,
Or the rooks, with busy caw,
Foraging for sticks and straw.
Thou shalt, at one glance, behold
The daisy and the marigold;
White-plum’d lilies, and the first
Hedge-grown primrose that hath burst;
Shaded hyacinth, alway
Sapphire queen of the mid-May;
And every leaf, and every flower
Pearlèd with the selfsame shower.
Thou shalt see the field-mouse peep
Meagre from its cellèd sleep;
And the snake all winter-thin
Cast on sunny bank its skin;
Freckled nest-eggs thou shalt see
Hatching in the hawthorn tree,
When the hen-bird’s wing doth rest
Quiet on her mossy nest;
Then the hurry and alarm
When the beehive casts its swarm;
Acorns ripe down-pattering,
While the autumn breezes sing.
O sweet Fancy! let her loose;
Everything is spoilt by use:—
Where’s the cheek that doth not fade,
Too much gazed at? Where’s the maid
Whose lips mature is ever new?
Where’s the eye, however blue,
Doth not weary? Where’s the face
One would meet in every place?
Where’s the voice, however soft,
One would hear so very oft?
At a touch sweet Pleasure melteth
Like to bubbles when rain pelteth.
Let then wingèd Fancy find
Thee a mistress to thy mind:
Dulcet-eyed as Ceres’ daughter,
Ere the God of Torment taught her
How to frown and how to chide;
With a waist and with a side
White as Hebe’s, when her zone
Slipt its golden clasp, and down
Fell her kirtle to her feet,
While she held the goblet sweet,
And Jove grew languid.—Break the mesh
Of the Fancy’s silken leash;
Quickly break her prison-string,
And such joys as these she’ll bring.
—Let the wingèd Fancy roam;
Pleasure never is at home.

4. ಮುಗಿಲು
(ಶೆಲ್ಲಿ ಕೃತ)

ವಾರಿಧಿ ನದಿಗಳಲೆದ್ದು ಕುಸುಮಗಳ
ಆರಿದ ಬಾಯಿಗೆ ಹೊಸಮಳೆಗರೆಯುವೆ
ನಡುಹಗಲಲಿ ತೂಕಡಿಸುವ ಕುಡಿಗಳ
ಒಡಲಿನ ಹೊದಕೆಗೆ ನೆಳಲನು ಕವಿಸುವೆ ||1||

ತರುಗಳ ಕರಕಾಹತಿಯಲಿ ಮೊರೆಯಿಸಿ
ಮರುತನ ಮೇಲೇರಾಟವ ಮಾಡುವೆ
ಗೂಡುಗಳಲಿ ಹಕ್ಕಿಗಳನು ತೋಯಿಸಿ
ಓಡಿ ಗದರಿ ಕದಕದಸಿ ನಗಾಡುವೆ ||2||

ಕುಂಚದೆ ಗಿರಿಪುರಸರಗಳ ತುಳಿಯುತ
ಮಿಂಚನು ದಾರಿ ಬೆಳಗಿಸಲು ಹೂಡುವೆ
ಕಡಲಲಿ ವರುಣನ ಕುಣಿತಕೆ ನಲಿಯುತ
ಉಡುಗಳ ನಗೆಯನು ಪವಡಿಸಿ ನೋಡುವೆ ||3||

ಹೊಂಗರಿಗಳನುದ್ಗಮದಲಿ ಮೆರೆಯಿಸಿ
ಕೆಂಗದಿರನು ನನ್ನಂಗಕೆ ನೆಸೆವನು
ಉರಿಬೆಟ್ಟದಲೆರಕೆಗಳನು ಪಸರಿಸಿ
ಗರುಡನೆರಗಿದಂತೆಸಕವಿರಿಸುವನು ||4||

ಕಂತುವ ರವಿ ವಿಶ್ರಾಂತಿಯ ರಾಗದಿ
ಅಂತರವಾಸದ ಯವನಿಕೆ ಬಿಡುತಲೆ
ಇಕ್ಕೆಯ ಸೇರಿದ ಕಲರವದಂದದಿ
ರೆಕ್ಕೆ ಮಡಿಚಿ ನಿಲ್ಲುವೆನಾಗಸದಲೆ ||5||

ಇರುಳಿನಲೆನ್ನಯ ಶಿಬಿಕೆಯ ಪಟುವನು
ಸುರರೇ ಕೇಳುವಪರಿ ಶಶಿ ಮೆಟ್ಟುತ
ಇರಿಯಲು ತುಪ್ಪಟದಾ ನೆಲವನು
ಕಿರುನಗೆಯುಡುಗಳು ನೋಡುವುವಿಣಿಕುತ ||9||

ಹೊನ್ನಿನ ತುಂಬಿಗಳಂತವು ಸುಳಿಯಲು
ನನ್ನಲಿ ಹಾಸ್ಯವ ತುಳುಕಿಸುತಿರುವುವು
ಅಂಬುಧಿ ನದಿಗಳ ಕಡೆಯಲಿ ನೋಡಲು
ಅಂಬರದೊಡನವು ಬಿದ್ದಂತಿರುವುವು ||7||

ಬೆಂಗದಿರನ ಬಿತ್ತರಿಗೆಗೆ ಮಿಸುನಿಯ
ಇಂಗದಿರಗೆ ಮುತ್ತಿನ ಗುಡಿ ಕಟ್ಟುವೆ
ಮರುತನ ಹಾರಿಸಲೆನ್ನ ಪತಾಕೆಯ
ಗಿರಿಗಳನಡಗಿಸಿ ಭಗಣವ ನಟ್ಟುವೆ ||8||

ನಗಗಳ ಮೇಲಕೆ ಚಪ್ಪರವಡರಿಸಿ
ಖಗಕರಗಳನೊತ್ತರಿಸೀಡಾಡುವೆ
ಸುರಧನು ವರ್ಣದ ತೋರಣವೇರಿಸಿ
ಮೆರೆಯುತ ವಿಜಯೋತ್ಸವವನು ಮಾಡುವೆ ||9||

ಧರೆ ಹುಟ್ಟಿಸುವುದು ದಿವ ಪೋಷಿಸುವುದು
ತಿರೆ ಶಿರಧಿಗಳ ಸಮಾಧಿಯ ಸೇರುವೆ
ಅತಿ ಮಾಯಿಕ ಜೀವನ ಶಾಶ್ವತವಿದು
ಕ್ಷಿತಿಯೊಳಗಿಂಗುತನಂತದಲೇರುವೆ ||10||
ಮೂಲ ಶೀರ್ಷಿಕೆ : The Cloud

ಮೂಲ ಕವಿತೆ: The Cloud
BY PERCY BYSSHE SHELLEY

I bring fresh showers for the thirsting flowers,
From the seas and the streams;
I bear light shade for the leaves when laid
In their noonday dreams.
From my wings are shaken the dews that waken
The sweet buds every one,
When rocked to rest on their mother’s breast,
As she dances about the sun.
I wield the flail of the lashing hail,
And whiten the green plains under,
And then again I dissolve it in rain,
And laugh as I pass in thunder.

I sift the snow on the mountains below,
And their great pines groan aghast;
And all the night ’tis my pillow white,
While I sleep in the arms of the blast.
Sublime on the towers of my skiey bowers,
Lightning my pilot sits;
In a cavern under is fettered the thunder,
It struggles and howls at fits;
Over earth and ocean, with gentle motion,
This pilot is guiding me,
Lured by the love of the genii that move
In the depths of the purple sea;
Over the rills, and the crags, and the hills,
Over the lakes and the plains,
Wherever he dream, under mountain or stream,
The Spirit he loves remains;
And I all the while bask in Heaven’s blue smile,
Whilst he is dissolving in rains.

The sanguine Sunrise, with his meteor eyes,
And his burning plumes outspread,
Leaps on the back of my sailing rack,
When the morning star shines dead;
As on the jag of a mountain crag,
Which an earthquake rocks and swings,
An eagle alit one moment may sit
In the light of its golden wings.
And when Sunset may breathe, from the lit sea beneath,
Its ardours of rest and of love,
And the crimson pall of eve may fall
From the depth of Heaven above,
With wings folded I rest, on mine aëry nest,
As still as a brooding dove.

That orbèd maiden with white fire laden,
Whom mortals call the Moon,
Glides glimmering o’er my fleece-like floor,
By the midnight breezes strewn;
And wherever the beat of her unseen feet,
Which only the angels hear,
May have broken the woof of my tent’s thin roof,
The stars peep behind her and peer;
And I laugh to see them whirl and flee,
Like a swarm of golden bees,
When I widen the rent in my wind-built tent,
Till calm the rivers, lakes, and seas,
Like strips of the sky fallen through me on high,
Are each paved with the moon and these.

I bind the Sun’s throne with a burning zone,
And the Moon’s with a girdle of pearl;
The volcanoes are dim, and the stars reel and swim,
When the whirlwinds my banner unfurl.
From cape to cape, with a bridge-like shape,
Over a torrent sea,
Sunbeam-proof, I hang like a roof,
The mountains its columns be.
The triumphal arch through which I march
With hurricane, fire, and snow,
When the Powers of the air are chained to my chair,
Is the million-coloured bow;
The sphere-fire above its soft colours wove,
While the moist Earth was laughing below.

I am the daughter of Earth and Water,
And the nursling of the Sky;
I pass through the pores of the ocean and shores;
I change, but I cannot die.
For after the rain when with never a stain
The pavilion of Heaven is bare,
And the winds and sunbeams with their convex gleams
Build up the blue dome of air,
I silently laugh at my own cenotaph,
And out of the caverns of rain,
Like a child from the womb, like a ghost from the tomb,
I arise and unbuild it again.

5. ನಿತ್ಯಸುಖ
(ಹೆನ್ರಿ ವೊಟನ್‍ನಿಂದ)

ಪರರ ತುಷ್ಟಿಗೆ ಮಣಿಯದವನ ಸುಖಕೆಣೆಯೆಲ್ಲಿ
ಸರಲ ಭಾವದ ಕವಚದಂತೆ ರಕ್ಷಣವಲ್ಲಿ
ಸತ್ಯಶೀಲತೆ ನಿತ್ಯ ಸುಖಿಗೆ ಬಲು ಜಾಣತನ
ಭೃತ್ಯರಂತರ್ಪಿಸುವುವಿಂದ್ರಿಯಗಳಾಳುತನ

ನರರ ಭಣಿತದ ಭೀತಿಯೆಂಬ ಸಂಕಟವಿಲ್ಲ
ಮರಣಕಂಜದೆ ಸಿದ್ಧನಾಗಿರದ ದಿನವಿಲ್ಲ
ಭಾಗ್ಯದಭ್ಯುದಯದಭಿಲಾಷೆಯವನೊಳಗಿಲ್ಲ.
ಯೋಗ್ಯತೆಯನಗಲಿದೈಸಿರಿಗೆ ಮತ್ಸರವಿಲ್ಲ

ಸುತ್ತಿಕೇಳಿ ದುಮ್ಮಾನದಿರಿತ ತಾಳುವುದಿಲ್ಲ
ಹಿತವನಲ್ಲದೆ ರಾಜನೀತಿ ಬಲ್ಲವನಲ್ಲ
ಜನವಾದದಾಳಿಕೆಗೆ ಸೆರೆಯಿರದ ಹೃದಯದವ
ಮನದ ನಿಜ ವಿಶ್ರಂಭವಾಶ್ರಯಿಸಿ ನಿಲ್ಲುವವ

ವಂದಿಮಾಗಧರವನ ಗೌರವವ ಹೆಚ್ಚಿಸರು
ನಿಂದಕರು ಮನೆಯ ಮುಣುಗಿಸಿ ಧನವ ಕೂಡಿಸರು
ವಿಶ್ವ ಚಿಂತನ ಪಠನ ಸದಯೋಕ್ತಿಗಳಿಗೊಲಿದು
ಈಶ್ವರಾರ್ಪಿತ ಸುಕೃತಗಳಲಿ ಮನ ನಲಿಯುವುದು
ಮೂಲ ಶೀರ್ಷಿಕೆ : Character of a Happy Life
ಮೂಲ ಕವಿತೆ:

The Character of a Happy Life
by Sir Henry Wotton

How happy is he born or taught,
That serveth not another’s will;
Whose armour is his honest thought,
And simple truth his utmost skill;

Whose passions not his masters are;
Whose soul is still prepar’d for death,
Untied unto the world by care
Of public fame or private breath;

Who envies none that chance doth raise,
Nor vice; who never understood
How deepest wounds are given by praise;
Nor rules of state, but rules of good;

Who hath his life from rumours freed;
Whose conscience is his strong retreat;
Whose state can neither flatterers feed,
Nor ruin make oppressors great;

Who God doth late and early pray
More of His grace than gifts to lend;
And entertains the harmless day
With a religious book or friend;

—This man is freed from servile bands
Of hope to rise or fear to fall:
Lord of himself, though not of lands,
And having nothing, yet hath all.

6. ಧನ್ಯವೀರ
(ವರ್ಡ್ಸ್‌ವರ್ತ್‌ ವಿರಚಿತ)

ಧನ್ಯವೀರನ ಗುಣಗಳೆಂತೆಂಬ ಮರ್ಮವನು
ಅನ್ಯ ಭಟರವನಂತೆ ಮೆರೆಯಲೆಂದೊರೆಯುವೆನು

ಎಳೆತನದಲೆಣಿಸಿದಾಕಾಂಕ್ಷೆಗಳನನುಸರಿಸಿ
ಬೆಳೆದ ಮೇಲುತ್ಕೃಷ್ಟ ಕರ್ಮಗಳನಳವಡಿಸಿ

ಅಂತರ್ಯದಲಿ ಮಹಾಯತ್ನಗಳ ಚಿಂತಿಸುತ
ಮುಂತಿರುವ ಪಥವನಾ ಚಿಂತನದಿ ಬೆಳಗಿಸುತ

ಭಯ ದುಃಖಘಾತಗಳ ಸಂಸರ್ಗದೊದವಿನಲಿ
ನಯನೀತಿ ಹಿತಗಳನು ಕಾಯುವನೆ ಧನ್ಯ ಕಲಿ

ವಿಪದಗಳ ಮುರಿದವಕೆ ವಿಕಟರೂಪವನಳಿಸಿ
ಅಪಗುಣಗಳನು ತೆಗೆಯುತುಪಯೋಗಗಳನುಳಿಸಿ

ಹೃತ್ತಲದಲನುಕಂಪ ಕೆಡುವ ಪ್ರಸಂಗದಲಿ
ಮತ್ತು ಕರುಣಾಶಾಲಿಯಾಗುವನು ಕುಶಲಕಲಿ

ಎಡರಿನಲಿ ತಾಳ್ಮೆಯನು ಮೋಹನದಲಮಲತೆಯ
ಪಡೆವನವಸರಗಳಲಿ ವರಸಾಂತ್ವನೀಯತೆಯ

ಅಪಕಾರಕಪ್ರಕೃತಿ ಪ್ರತಿಬಂಧವಲ್ಲೆಂದು
ಉಪಕಾರವೇ ರಾಷ್ಟ್ರಹಿತದ ನಿಜಬುಡವೆಂದು

ನ್ಯಾಯವವನಿಗೆ ನೇಮ ನೀತಿನಂಬಿಕೆಯಾಪ್ತ
ಆಯುತ್ತ ಸರ್ವಜಯ ಧರ್ಮದಿಂದಪ್ರಾಪ್ತ

ಸರಲಗತಿವಿಡಿದುಚ್ಚ ಪದವಿಗಳ ಹತ್ತುವನು
ಇರಲಿಲ್ಲ ಪೂಜ್ಯಭಾವವ ಹಿಡಿದು ನಿಲ್ಲುವನು.

ಏಕಚಿತ್ತನು ರಕ್ಷ್ಯಧರ್ಮ ಬಿಡುವವನಲ್ಲ.
ಲೋಕವಿಶ್ರುತಿ ವಿತ್ತಗಳಿಗೆ ನಿಲುಕುವನಲ್ಲ

ವಿಭವ ಮಾನಗಳವನ ಬೆನ್ನು ಹಿಡಿಯಲು ಬೇಕು
ನಭದಿಂದ ಸುರಿವ ಸುಮವೃಷ್ಟಿಯಂತಿರಬೇಕು

ಲೌಕಿಕದ ಧುರಗಳಲಿ ಸಾಮದಾಚಾರದಲಿ
ಹಾಕುತೆಲ್ಲರ ತನ್ನ ಗುಣ ಸಿರಿಯ ಜಾಲದಲಿ

ಗುರುಸಂಧಿ ಬರಲು ನವವರನಂತೆ ಸುಖವಡೆದು
ಹುರಿಯ ದೈವವೆ ತುಂಬಿದಂತೆ ತೇಜವ ತಳೆದು

ಧುರದ ಸಂರಂಭದಲಿ ನಿಶ್ಚಲ ನಿಯಮಗಳನು
ವರಿಸಿ ಬಹುವಿಘ್ನಗಳಿಗೀಡಾಗಿ ನಿಲ್ಲುವನು

ತುಮುಲದಲಿ ನಿಜಗುಣದಿ ಘಟಕನಾಗೊಪ್ಪುವನು
ಕಮನೀಯ ಸೌಮ್ಯಭಾವಗಳಲ್ಲಿ ನಲಿಯುವನು

ಮೆರೆದಿರಲಿ ಮರೆಯಿರಲಿ ವಿಪದ ಸಂಪದ ಬರಲಿ
ಪರಮಸಿರಿಗಾಡುವನು ಜೀವನದ ಜೂಜಿನಲಿ

ಭಯಕೆ ಬೆದರುವನಲ್ಲ ಸುಖಕೆ ಸಿಲುಕುವನಲ್ಲ
ಜಯಕೆ ಮರುಳಾಗಿ ಪ್ರಯತ್ನ ಬಿಡುವವನಲ್ಲ

ಇಳೆಯತುಂಬಲಿ ಕೀರ್ತಿ ಹೋದರೆಯು ಚಿಂತಿಸನು
ಉಳಿದು ಮೆರೆಯಲಿ ಕಾರ್ಯವಳಿದರೆಯು ಲೆಕ್ಕಿಸನು

ಆಶ್ವಾಸ ಲಕ್ಷ್ಯದಲಿ ವಿಶ್ವಾಸ ಕಾರ್ಯದಲಿ
ಈಶ್ವರ ಕಟಾಕ್ಷವನೆ ಬಯಸುವನು ಧನ್ಯಕಲಿ.

ಮೂಲ ಶೀರ್ಷಿಕೆ : : Character of the Happy warrior

ಮೂಲ ಕವಿತೆ:
Character of the Happy Warrior
BY WILLIAM WORDSWORTH

Who is the happy Warrior? Who is he
That every man in arms should wish to be?
—It is the generous Spirit, who, when brought
Among the tasks of real life, hath wrought
Upon the plan that pleased his boyish thought:
Whose high endeavours are an inward light
That makes the path before him always bright;
Who, with a natural instinct to discern
What knowledge can perform, is diligent to learn;
Abides by this resolve, and stops not there,
But makes his moral being his prime care;
Who, doomed to go in company with Pain,
And Fear, and Bloodshed, miserable train!
Turns his necessity to glorious gain;
In face of these doth exercise a power
Which is our human nature’s highest dower:
Controls them and subdues, transmutes, bereaves
Of their bad influence, and their good receives:
By objects, which might force the soul to abate
Her feeling, rendered more compassionate;
Is placable—because occasions rise
So often that demand such sacrifice;
More skilful in self-knowledge, even more pure,
As tempted more; more able to endure,
As more exposed to suffering and distress;
Thence, also, more alive to tenderness.
—’Tis he whose law is reason; who depends
Upon that law as on the best of friends;
Whence, in a state where men are tempted still
To evil for a guard against worse ill,
And what in quality or act is best
Doth seldom on a right foundation rest,
He labours good on good to fix, and owes
To virtue every triumph that he knows:
—Who, if he rise to station of command,
Rises by open means; and there will stand
On honourable terms, or else retire,
And in himself possess his own desire;
Who comprehends his trust, and to the same
Keeps faithful with a singleness of aim;
And therefore does not stoop, nor lie in wait
For wealth, or honours, or for worldly state;
Whom they must follow; on whose head must fall,
Like showers of manna, if they come at all:
Whose powers shed round him in the common strife,
Or mild concerns of ordinary life,
A constant influence, a peculiar grace;
But who, if he be called upon to face
Some awful moment to which Heaven has joined
Great issues, good or bad for human kind,
Is happy as a Lover; and attired
With sudden brightness, like a Man inspired;
And, through the heat of conflict, keeps the law
In calmness made, and sees what he foresaw;
Or if an unexpected call succeed,
Come when it will, is equal to the need:
—He who, though thus endued as with a sense
And faculty for storm and turbulence,
Is yet a Soul whose master-bias leans
To homefelt pleasures and to gentle scenes;
Sweet images! which, wheresoe’er he be,
Are at his heart; and such fidelity
It is his darling passion to approve;
More brave for this, that he hath much to love:—
‘Tis, finally, the Man, who, lifted high,
Conspicuous object in a Nation’s eye,
Or left unthought-of in obscurity,—
Who, with a toward or untoward lot,
Prosperous or adverse, to his wish or not—
Plays, in the many games of life, that one
Where what he most doth value must be won:
Whom neither shape or danger can dismay,
Nor thought of tender happiness betray;
Who, not content that former worth stand fast,
Looks forward, persevering to the last,
From well to better, daily self-surpast:
Who, whether praise of him must walk the earth
For ever, and to noble deeds give birth,
Or he must fall, to sleep without his fame,
And leave a dead unprofitable name—
Finds comfort in himself and in his cause;
And, while the mortal mist is gathering, draws
His breath in confidence of Heaven’s applause:
This is the happy Warrior; this is he
That every man in arms should wish to be.

*****

ಹಟ್ಟಿಯಂಗಡಿಯವರ ಈ ಮಂಗಲ ಪದ್ಯ ಕನ್ನಡ ನಾಡಿನ ಕುರಿತಾದ ದೇಶಭಕ್ತಿ ಗೀತೆಯಾಗಿರುವುದರಿಂದ ಆಸಕ್ತರ ಗಮನಕ್ಕೆ ಇಲ್ಲಿ ಕೊಡಲಾಗಿದೆ.

ಮಂಗಲ ಪದ್ಯ

ಧನ್ಯವಾಗಲಿ ಹಿರಿಯ ಸಿರಿವಡೆದ ಕರುನಾಡು
ಧಾನ್ಯ ಧನ ವಿಜ್ಞಾನ ಕೋಶವೆನಿಸಿ
ಕನ್ನೆಯರೆ ಯುವರೆ ಮಾಹಾತ್ಮ್ಯವನು ಬಯಸುತ
ಮಾನ್ಯರಾಗುವ ಜನರ ದೇಶವೆನಿಸಿ ||1||

ತಳಕಾಡಿನಿಂದ ಕಲ್ಯಾಣ ನಗರದವರೆಗೆ
ಹಳೆಯ ರಾಜ್ಯಗಳಿಲ್ಲಿ ಶೋಭಿಸಿದುವು
ಅಳಿದ ಬನವಾಸೆ ಮನ್ನೆಯ ಖೇಟ ಹಳಬೀಡು
ಉಳಿದ ಮೈಸೂರಿದನು ಭೂಷಿಸಿದುವು ||2||

ಅಕ್ಕದೇವಿಯ ಪರಿಯಲಬಲೆಯರೆ ಪುರುಷರಿಗೆ
ತಕ್ಕ ಸಾಮಥ್ರ್ಯವನು ತೋರಿಸಿದರು
ರಕ್ಕಸರ ಕಲ್ಪನೆಯ ಚಿಪ್ಪಿಗರು ಕಲ್ಲಿನಲಿ
ಅಕ್ಕಸಾಲಿಗರಂತೆ ಚಿತ್ರಿಸಿದರು ||3||

ಸುಕವಿ ಪಂಡಿತರ ವಿಜ್ಞಾನಕೆಲ್ಲರು ಮೆಚ್ಚಿ
ಶುಕಕೆ ನಾಡಿನ ಹೆಸರನೊಪ್ಪಿಸಿದರು
ಪ್ರಕಟರಾಗಕ್ಕದನು ಸಕಲ ಗಾಯಕರಿಗಿತ್ತು
ಸುಕಲಾವಿದರ ಯಶವ ಮಾನಿಸಿದರು ||4||

ವರಧರ್ಮಶಾಸ್ತ್ರಗಳ ಟೀಕಿಸಿದ ಪಂಡಿತರು
ಹರಿಹರೋಪಾಸಕರು ಮೆರೆದ ನಾಡು
ಪರಮಾತ್ಮನಾಳುಗಳೆ ವರವರ್ಣದವರೆಂಬ
ಗುರುಭಾವವನು ಸಾರಿದವರ ಬೀಡು ||5||

ಭರತವರ್ಷದ ಹತ್ತುಕೋಟಿ ಜನರಿಲ್ಲೊಂದೆ
ಪರಿಪಕ್ವ ಭಾಷೆಯನು ಭಜಿಸುತಿಹರು
ತರತರದ ನವಜಾತ ಬೋಧಾಶಯಗಳಿಂದ
ಭರಿತರಾಗೀನಾಡ ಹರಸುತಿಹರು ||6|| – ಹ. ನಾ. ರಾ.

ಕೃತಜ್ಞತೆಗಳು:
1. ಮಾಹಿತಿಗಳನ್ನು ನೀಡಿದ ಡಾ. ಜಿ.ಎನ್. ಉಪಾಧ್ಯ. 2 ಅಲಭ್ಯವಾಗಿದ್ದ ಹಟ್ಟಿಯಂಗಡಿಯವರ ಚಿತ್ರವನ್ನು ಅಪರೂಪವಾದ ಮೂಲವೊಂದನ್ನು ಗಮನಿಸಿ ಬರೆದುಕೊಟ್ಟ ಶ್ರೀ ಹರಿಣಿ (ಹರಿಶ್ಚಂದ್ರ ಶೆಟ್ಟಿ) – ಇವರಿಗೆ.
ಗ್ರಂಥ ಋಣ:
1. ಹಟ್ಟಿಯಂಗಡಿ ನಾರಾಯಣರಾಯ ಸಾಹಿತ್ಯ ವಾಚಿಕೆ: ಸಂ.: ಡಾ. ಶ್ರೀನಿವಾಸ ಹಾವನೂರ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು. 1994
2. ಹಟ್ಟಿಯಂಗಡಿ ನಾರಾಯಣರಾಯರ ಆಂಗ್ಲ ಕವಿತಾವಳಿ. ಸಂ.: ಎಂ.ಎನ್.ವಿ. ಪಂಡಿತಾರಾಧ್ಯ. ಪ್ರಬೋಧ ಪುಸ್ತಕಮಾಲೆ, ಮೈಸೂರು. 1985.
3. ಶತಮಾನದ ಸಾಹಿತಿ ಹಟ್ಟಿಯಂಗಡಿ ನಾರಾಯಣ ರಾವ್. ಡಾ. ಬಿ. ಜನಾರ್ದನ ಭಟ್. ಕಾಂತಾವರ ಕನ್ನಡ ಸಂಘ. 2019