ಬದುಕಿನ ಸಂಕಷ್ಟದಲ್ಲಿ ಹೆಬ್ಬಂಡೆಯಾಗಿ ಕಷ್ಟಕಾರ್ಪಣ್ಯಗಳನ್ನು ಹಿಮ್ಮೆಟ್ಟಿಸುವ ಶಕ್ತಿಯೇ ಭರವಸೆ. ಭರವಸೆ ಎಂತಹ ಹೋರಾಡುವ ಶಕ್ತಿ ತುಂಬುತ್ತದೆಯಂದರೆ ಫೇಸ್ಬುಕ್ಕಿನ ಒಂದು ಸಂದೇಶದಂತೆ ಎಷ್ಟೇ ಸೋತರೂ ಕುಸಿಯುವುದಿಲ್ಲ. ಹೆದರಿ ಓಡುವುದಿಲ್ಲ ಏಕೆಂದರೆ ನಾನು ನೂರು ಬಾರಿ ಗೆದ್ದವನಲ್ಲ, ಸಾವಿರ ಬಾರಿ ಸೋತವನು ಈ ರೀತಿಯಾಗಿ ಸಕಾರಾತ್ಮಕ ಚಿಂತನೆಯ ಓಂಕಾರದ ದ್ಯೋತಕವಾಗಿರುವ ಕಾರಣದಿಂದ ಇನ್ನೇನು ಬದುಕು ಮುಗಿಯಿತು ಎಂದು. ಸುಳಿಗಾಳಿಗೆ ಸಿಕ್ಕು ತರೆಗೆಲೆಯಂತೆ ಕಷ್ಟದ ಕುಲುಮೆಯಲ್ಲಿ ಬೆಂದು ಬಸವಳಿದವರಿಗೆ ಫಿನಿಕ್ಸ್‌ನಂತೆ. ಆಕಾಶದೆತ್ತರಕೆ ಮೇಲೆರುವ ತಾಕತ್ತೆ ಭರವಸೆ.
ಶಿವನಗೌಡ ಪೊಲೀಸ್ ಪಾಟೀಲ್ ಅವರ ಕವನ ಸಂಕಲನಕ್ಕೆ ಶರಣಬಸಪ್ಪ ಬಿಳೆಯಲಿ ಬರೆದ ಮುನ್ನುಡಿ

ಲೇಖಕರಾದ ಶ್ರೀ ಶಿವನಗೌಡರು ಒಂದಡೆ ಉಪನ್ಯಾಸ, ಇನ್ನೊಂದೆಡೆ ಲೇಖನ ಹಾಗೂ ಸಮಾಜ ಸೇವಾ ಚಟುವಟಿಕೆಗಳಾದ ರಕ್ತದಾನ, ಪರಿಸರ ಕಾಳಜಿ, ವಿಕಲಚೇತನರ ಸೇವೆ, ವೈಚಾರಿಕ ಲೇಖನ ಬರೆಯುವುದು, ಉಪನ್ಯಾಸ, ಪ್ರವಾಸಗಳಂತಹ ಚಟುವಟಿಕೆಗಳಲ್ಲಿ ನಿರತರಾಗಿ ಜೀವನದ ವೈವಿಧ್ಯತೆ ಹಾಗೂ ಸೌಂದರ್ಯತೆಯನ್ನು ಸವಿಯುತ್ತಿದ್ದಾರೆ.

(ಶಿವನಗೌಡ ಪೊಲೀಸ್ ಪಾಟೀಲ್)

ಕವಿಗಳಾದ ಶಿವನಗೌಡರು ಮೂಲತಃ ಕುಷ್ಟಗಿ ತಾಲೂಕಿನ ನವಲಹಳ್ಳಿ ಗ್ರಾಮದವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ನವಲಹಳ್ಳಿಯಲ್ಲಿ ಮುಗಿಸಿದ ನಂತರ ಶ್ರೀಗವಿಮಠದ ಶೈಕ್ಷಣಿಕ ಸಂಸ್ಥೆಗಳಾದ ಶ್ರೀ ಗವಿಸಿದ್ದೇಶ್ವರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಾಗೂ ಪದವಿ ಮಹಾವಿದ್ಯಾಲಯದಲ್ಲಿ ಶಿಕ್ಷಣ ಪಡೆದುಕೊಂಡರು. ತದನಂತರ ಸಮಾಜಕಾರ್ಯ ವಿಭಾಗದಲ್ಲಿ ಸ್ನಾತಕೋತ್ತರ ಪದವಿಯನ್ನು ಗುಳಗಣ್ಣವರ ಶಿಕ್ಷಣ ಸಂಸ್ಥೆಯಿಂದ ಪದವಿಯನ್ನು ಪಡೆದುಕೊಂಡರು, ಹತ್ತು ವರ್ಷಗಳ ಕಾಲ ಉಪನ್ಯಾಸಕರಾಗಿ, ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ತಮಗೆ ಅನ್ನ, ಅರಿವು, ಆಶ್ರಯ ಆಧಾರ ನೀಡಿದ ಶ್ರೀಗವಿಮಠದ ಸಂಸ್ಥೆಯ ಶ್ರೇಯೋಭಿವೃದ್ಧಿಗಾಗಿ ಅಳಿಲು ಸೇವೆಯ ಹಂಬಲದೊಂದಿಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶಿ, ಸ್ನೇಹಜೀವಿ, ಸ್ಫೂರ್ತಿ ಪ್ರೇರಣೆ, ಸಲಹೆಗಾರನಾಗುತ್ತಲೇ ಕಲ್ಯಾಣ ಕರ್ನಾಟಕದಲ್ಲಿಯೇ ಸುಮಾರು 450ಕ್ಕೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ ಪ್ರಮುಖ ಬರಹಗಾರರಾಗಿದ್ದಾರೆ.

ಆಂತರ್ಯದ ಬೆಳಗು ಕೃತಿಯಲ್ಲಿ ಜೀವ ಬಂದ ಕ್ಷಣದಿಂದ ಜೀವ ಹಾರಿ ಹೋಗುವ ಕ್ಷಣದವರೆಗೆ ನಮ್ಮೊಂದಿಗಿರುವ ಜೀವನ ಒಬ್ಬೊಬ್ಬರದು ಒಂದೊಂದು ಅನುಭವ. ಇಂತಹ ಅನುಭವ ಮತ್ತೊಂದಿಲ್ಲ. ಎಲ್ಲರಿಗೂ ವಿಭಿನ್ನ ಅನುಭವ..
ಜೀವನದ ಅನುಭವಗಳೆಲ್ಲವನ್ನು ಒಂದೇ ಹಿಡಿಯಲ್ಲಿ ಅನುಭವಿಸುವ ಸಂದರ್ಭದಲ್ಲಿ ಅವರವರ ಆಂತರ್ಯದಲ್ಲಿ ಬೆಳಗಿನ ಕಿರಣಗಳು ಹೊರಹೊಮ್ಮಿದಾಗ, ಜೀವನದ ದೃಷ್ಟಿ ಕೋನದೊಂದಿಗೆ ಅನುಭವ ಮೇಳೈಸಿದರೆ ಜೀವನ ಸಾರ್ಥಕ.

“ಜೀವನವೆಂದರೆ ಬೊಗಸೆಯಲ್ಲಿನ ನೀರೆಂದ” ಸಾಕ್ರಟಿಸ್. ಬೊಗಸೆಯಲ್ಲಿನ ನೀರು ತೊಟ್ಟಿಕ್ಕಿ ಖಾಲಿಯಾಗುವ ಮುನ್ನ ಜೀವನವನ್ನು ಸವಿಯಬೇಕೆನ್ನುವದು ಕೆಲವರ ಅಭಿಲಾಷೆ. ಇಂಥಹ ಅಭಿಲಾಷೆಯಿರುವವರು ಜೀವನದ ಹಲವಾರು ಆಯಾಮಗಳಿಗೆ ತಮ್ಮ ಮಿತಿಯೊಳಗೆ ಸ್ಪರ್ಶಿಸಿ, ಅನುಭವಿಸಿ ಕ್ರಿಯಾಶೀಲರಾಗಿ ತಮ್ಮ ಕೊಡುಗೆಗಳನ್ನು ನೀಡಿ, ಜೀವನವನ್ನು ವೈವಿಧ್ಯಮಯವಾಗಿ ಸವಿಯುತ್ತಾರೆ. ಇಂತಹದೇ ಪ್ರಯತ್ನದಲ್ಲಿ ನಮ್ಮ ಶಿವನಗೌಡ ಪೊಲೀಸ ಪಾಟೀಲರಿದ್ದಾರೆ.

ಜೀವನದ ಅಗಾಧತೆ, ವಿಸ್ತಾರತೆ, ವೈವಿಧ್ಯತೆಗಳ ಹತ್ತು ಹಲವಾರು ವಿಭಿನ್ನ ಅನುಭವಗಳನ್ನು ತಮ್ಮ ವಿವಿಧ ಸಾಹಿತ್ಯದ ಪ್ರಕಾರಗಳಲ್ಲಿ ವ್ಯಕ್ತಪಡಿಸಲು ಪ್ರತಿಯೊಬ್ಬ ಸಾಹಿತಿಯು ಪ್ರಯತ್ನಿಸುತ್ತಲೇ ಇರುತ್ತಾರೆ. ಇಂತಹದೇ ಪ್ರಯತ್ನವನ್ನು ಪಾಟೀಲ ಜೀವನದಲ್ಲಾದ ವೈವಿಧ್ಯಮಯ ಅನುಭವಗಳನ್ನು ಒಂದೆಡೆ ಸೇರಿಸಿ ಅರ್ಥಪೂರ್ಣವಾದ “ಆಂತರ್ಯದ ಬೆಳಗು” ಶೀರ್ಷಿಕೆಯಡಿ ಕವನ ಸಂಕಲನವನ್ನು ಪ್ರಕಟಿಸುತ್ತಿದ್ದಾರೆ.
ಕವನ ಸಂಕಲನದಲ್ಲಿನ ಕವನಗಳು ಜೀವನದ ಆಯಾಮಗಳಾದ, ಸೇವೆ ಸಾಧನೆ, ಹೋರಾಟ, ಪರದಾಟಗಳಲ್ಲದೆ, ತಾಯಿ, ಸಿದ್ಧಗಂಗಾಶ್ರೀ, ಶ್ರೀಮತಿ ಸಾವಿತ್ರಿಬಾಯಿ ಪುಲೆ, ಭಗತ್ ಸಿಂಗ್ ರವರಂತಹ ವ್ಯಕ್ತಿಗಳ ಹಾಗೂ ಸಹಬಾಳ್ವೆ, ಸಮಾನತೆ, ಸಮನ್ವಯತೆಯನ್ನು ಚಿತ್ರಿಸುತ್ತಲೇ, ರಕ್ತದಾನ, ದೇಹದಾನ, ನೇತ್ರದಾನಗಳ ಮಹತ್ವ ತಿಳಿಸುವ ಕವನಗಳಿವೆ. ಒಟ್ಟಾರೆ ಕವನಗಳು ಸಂಕ್ಷಿಪ್ತ ಹಾಗೂ ಸರಳವಾಗಿದ್ದು. ವೈವಿಧ್ಯಮಯ ವಿಷಯಗಳ ಆಯ್ಕೆಯೊಂದಿಗೆ ಸಮರ್ಥವಾಗಿ ಅಭಿವ್ಯಕ್ತಿಸಲು ಪ್ರಯತ್ನಿಸಿದ್ದಾರೆ.

ಬದುಕಿನಲ್ಲಿ ಹಿಗ್ಗದೆ-ಜಗ್ಗದೆ ಮುನ್ನಡೆಸುವ ಶಕ್ತಿಯೆಂದರೆ ನಮ್ಮೊಳಗಿನ ಆಂತರ್ಯದ ಬೆಳಗನ್ನು ಪ್ರಜ್ವಲಿಸಿಕೊಂಡಾಗ ಅದುವೇ ಆತ್ಮವಿಶ್ವಾಸ ಹಾಗೂ ಪ್ರಯತ್ನಗಳಾಗಿ ಮಾರ್ಪಟ್ಟು ಜೀವನವೊಂದು ಸಾಧನೆಯೊಂದಿಗೆ ಸಾರ್ಥಕವಾಗುತ್ತದೆ.

ಕವನ ಸಂಕಲನದಲ್ಲಿ ಪ್ರತಿಧ್ವನಿಸುವ ಧ್ವನಿ “ನಿಮಗೆ ನೀವೇ ದಾರಿದೀಪವೆಂದ” ಬುದ್ಧನ ಸಂದೇಶದಂತೆ. “ಅರಿವೇ ಗುರುವೆಂದ” ಬಸವೇಶ್ವರರವರ ವಚನದಂತೆ. ನಮ್ಮೊಳಗಿನ ಆಂತರ್ಯದ ಬೆಳಗೆ ನಮ್ಮೆಲ್ಲರ ದಾರಿದೀಪವಾಗಿದೆ. “ನೂರು ಗ್ರಂಥಗಳ ಪಠಣಗಿಂತ ಆಂತರ್ಯದ ಬೆಳಗಿನ ಅರಿವು, ಸಾಧನೆಗೆ ದಾರಿ ದೀಪವೆಂದ” ವಿವೇಕ ವಾಣಿಯಂತೆ. ಬಾಹ್ಯ ಬೆಳಗು ಸಿರಿವಂತಿಕೆಯಾದರೆ. ಆಂತರ್ಯದ ಬೆಳಗು ಸಾರ್ಥಕತೆಯಂತಹ ಬೆಳಗಿನ ಮಾರ್ಗದಲ್ಲಿ ಪ್ರೇರೇಪಿಸಿ. ಸಮಾಜಕ್ಕೆ ದಾರಿ ದೀಪವಾಗಿಸುತ್ತದೆ.

ಆಂತರ್ಯದ ಬೆಳಗಿನ ಕವನ ಸಂಕಲನಕ್ಕೆ ಅರ್ಥಪೂರ್ಣವಾದ ಶೀರ್ಷಿಕೆ ವಾಕ್ಯವಾಗಿರುವ ಭರವಸೆಯೇ ಬದುಕು ನಿಜಕ್ಕೂ ಸಾಂದರ್ಭಿಕವಾಗಿದೆ. ಜಗವೆಲ್ಲ ಬೆಳಗಿದ ಸೂರ್ಯ ಸಂಜೆ ಕತ್ತಲಾವರಿಸಿದಾಗ ನನ್ನ ನಂತರ ಮುಂದೇನು ಎಂದು ಹುಡುಕುತ್ತಿರುವಾಗಲೆ ಮೂಲೆಯಲ್ಲಿದ್ದ ಮಿಣುಕು ದೀಪವೊಂದು ನಾನಿದ್ದೇನೆ ಎಂದು ಜಗಕೆ ಕೊಡುವ ಭರವಸೆ ಸೂರ್ಯನಷ್ಟು ಪ್ರಕಾಶಮಾನವಾಗಿ ಇರಲಿಕ್ಕಿಲ್ಲ. ಆದರೆ ದೀಪ ಹಚ್ಚುವವರಿಗೆ ಮಾತ್ರ ಬೆಳಕು ನೀಡುವಷ್ಟು ಬೆಳಕು ದೀಪದಲ್ಲಿರುತ್ತದೆ ಅದೇ ಭರವಸೆ.

(ಶರಣಬಸಪ್ಪ ಬಿಳೆಯಲಿ)

ಬದುಕಿನ ಸಂಕಷ್ಟದಲ್ಲಿ ಹೆಬ್ಬಂಡೆಯಾಗಿ ಕಷ್ಟಕಾರ್ಪಣ್ಯಗಳನ್ನು ಹಿಮ್ಮೆಟ್ಟಿಸುವ ಶಕ್ತಿಯೇ ಭರವಸೆ. ಭರವಸೆ ಎಂತಹ ಹೋರಾಡುವ ಶಕ್ತಿ ತುಂಬುತ್ತದೆಯಂದರೆ ಫೇಸ್ಬುಕ್ಕಿನ ಒಂದು ಸಂದೇಶದಂತೆ ಎಷ್ಟೇ ಸೋತರೂ ಕುಸಿಯುವುದಿಲ್ಲ. ಹೆದರಿ ಓಡುವುದಿಲ್ಲ ಏಕೆಂದರೆ ನಾನು ನೂರು ಬಾರಿ ಗೆದ್ದವನಲ್ಲ, ಸಾವಿರ ಬಾರಿ ಸೋತವನು ಈ ರೀತಿಯಾಗಿ ಸಕಾರಾತ್ಮಕ ಚಿಂತನೆಯ ಓಂಕಾರದ ದ್ಯೋತಕವಾಗಿರುವ ಕಾರಣದಿಂದ ಇನ್ನೇನು ಬದುಕು ಮುಗಿಯಿತು ಎಂದು. ಸುಳಿಗಾಳಿಗೆ ಸಿಕ್ಕು ತರೆಗೆಲೆಯಂತೆ ಕಷ್ಟದ ಕುಲುಮೆಯಲ್ಲಿ ಬೆಂದು ಬಸವಳಿದವರಿಗೆ ಫಿನಿಕ್ಸ್‌ನಂತೆ. ಆಕಾಶದೆತ್ತರಕೆ ಮೇಲೆರುವ ತಾಕತ್ತೆ ಭರವಸೆ.

ಬದುಕು ಇತರರಿಗೆ ಬೆಳಕಾಗುವುದು ನಿಜವಾದ ಬದುಕಾಗಿದೆ. ಅಂತರ್ಯದಲ್ಲಿನ ಬೆಳಗನ್ನು ಬೆಳಗಿಸಿಕೊಂಡವರು ಇತರರ ಮನದಲ್ಲಿ ಭರವಸೆಯ ದೀಪ ಹೊತ್ತಿಸುತ್ತಾರೆ.

ತಮ್ಮ ಆಂತರ್ಯದ ಬೆಳಗಿನಿಂದ ಹೊರಹೊಮ್ಮಿದ ಭಾವ ಕಿರಣಗಳನ್ನು ಪ್ರಥಮ ಕೃತಿಯಲ್ಲಿ, ಕವನದ ರೂಪದಲ್ಲಿ ಚಿತ್ರಿಸಲು ಪ್ರಯತ್ನಿಸಿರುವುದು ಸ್ತುತ್ಯಾರ್ಹವಾಗಿದೆ.

(ಕೃತಿ: ಆಂತರ್ಯದ ಬೆಳಗು (ಕವನ ಸಂಕಲನ), ಲೇಖಕರು: ಶಿವನಗೌಡ ಪೊಲೀಸ್ ಪಾಟೀಲ್ ನವಲಹಳ್ಳಿ, ಪ್ರಕಾಶಕರು: ಅಭಿನವ ಪ್ರಕಾಶನ (ಸಂಪರ್ಕ ಸಂಖ್ಯೆ-9845646370), ನವಲಹಳ್ಳಿ, ಪುಸ್ತಕದ ದರ- 100/-)