ಅಕಾರಣದಿಂದಾಗಿಯೇ ಅವರ ಕಣ್ಣನ್ನು ಹೊಡೆದು ಕೀಳಿಸುವ ಪ್ರಯತ್ನವೂ ನಡೆದಿತ್ತು. ಬಹುಶಃ ಕಥೆಗಾರನ ಕಥಾಶಕ್ತಿಯ ದೈತ್ಯತೆ ಅರಿವಾಗುವುದೇ ಈ ಹಂತದಲ್ಲಿ. ಉಪಕಾರ ಪಡೆದುಕೊಂಡು ರೈತನಾದವನ ಮಕ್ಕಳನ್ನೆ ಕರೆದುಕೊಂಡು ಬಂದಿದ್ದ ಪಟೇಲ ಬುಜಂಗ, ಭಟ್ಟರು ಅತ್ತ ಕಂಪ್ಲೇಂಟನ್ನೂ ಕೊಡಲಾಗದ, ಇತ್ತ ನೋವನ್ನು ಒಡಲಲ್ಲೂ ಇಟ್ಟುಕೊಳ್ಳಲಾಗದ ಸಂಕಟವನ್ನು ತಂದೊಡ್ಡಿದ್ದ. ಆದರೆ ಅವರ ಮಗ ವಸುದೇವ ಅಪ್ಪ ಪೋಲಿಸ್ ಕಂಪ್ಲೆಂಟ್ ಕೊಡದಿರುವುದಕ್ಕೆ ಕಾರಣ ಹುಡುಕುತ್ತಿದ್ದವನು ಸತ್ಯ ತಿಳಿದ ನಂತರ ತನ್ನ ಯುನಿವರ್ಸಿಟಿಯ ಕೈ ತುಂಬ ಸಂಬಳ ತರುವ ಕೆಲಸ ತ್ಯಜಿಸಿ ನಕ್ಸಲ್ ಆಗುವ ಕಥೆಯ ತಿರುವು ಓದುಗರಲ್ಲೊಂದು ವೇದನೆಯ ನಿಟ್ಟುಸಿರನ್ನು ಹೊಮ್ಮಿಸದೇ ಇರಲಾರದು.
ಶ್ರೀದೇವಿ ಕೆರೆಮನೆ ಬರೆಯುವ “ತೆರೆದಿಟ್ಟ ಪುಸ್ತಕ” ಅಂಕಣದಲ್ಲಿ ಮಂಜುನಾಥ ಚಾಂದ್ ಬರೆದ ‘ಕದ ತೆರೆದ ಆಕಾಶ’ ಪುಸ್ತಕ ಪರಿಚಯ

 

ಒಂದು ಕ್ಷಣ ನನ್ನ ಕರಾವಳಿಯ ಸುತ್ತಲಿನ ಎಲ್ಲ ಹಳ್ಳಿಗಳನ್ನು ಕಣ್ಣೆದುರಿಗೆ ನಿಲ್ಲಿಸುವ ಮಂಜುನಾಥ ಚಾಂದ್ ರ ‘ಕದ ತೆರೆದ ಆಕಾಶ’ ಹಳ್ಳಿಯ ಸೊಗಡನ್ನು ಮೈ ತುಂಬ ಹೊದ್ದುಕೊಂಡಂತೆ ಕಾಣುತ್ತದೆಯಾದರೂ ಆಧುನಿಕತೆಯ ತಲ್ಲಣಗಳನ್ನು ನಮ್ಮೆದುರು ತೆರೆದಿಡಲು ಹಿಂದೆಮುಂದೆ ನೋಡುವುದಿಲ್ಲ. ಗ್ರಾಮೀಣ ಮತ್ತು ಪಟ್ಟಣ ಎರಡೂ ಕಡೆಯ ಕಥೆಗಳನ್ನು ಲೀಲಾಜಾಲವಾಗಿ ಕಟ್ಟಿಕೊಡುತ್ತಲೇ ಕಥೆಯೊಳಗೊಂದು ತಾರ್ಕಿಕತೆಯನ್ನು ನಮ್ಮೆದುರು ತೆರೆದಿಡುವ ಕಸಬುದಾರಿಕೆಯಿಂದಲೇ ಈ ಸಂಕಲನ ಆಪ್ತವಾಗುತ್ತದೆ.

ಒಟ್ಟೂ ಒಂಬತ್ತು ಕಥೆಗಳಿರುವ ಈ ಪುಸ್ತಕದ ಸತ್ವ ಅಡಗಿರುವುದು ಅದರ ಭಾಷೆಯಲ್ಲಿ. ಅಚ್ಚ ಕುಂದಾಪುರದ ಕನ್ನಡವು ಇದೇನು ಇದೇನು ಎನ್ನುತ್ತಲೇ ಓದುಗರನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತದೆ. ಮೊದಲ ಕಥೆ ‘ತಿಮಿರ’ ಹೀಗೆ ಗ್ರಾಮೀಣ ಮತ್ತು ಕುಂದಗನ್ನಡದ ಮಿಶ್ರಣವಾಗಿ ನಮ್ಮನ್ನು ಪ್ರಾರಂಭದಲ್ಲಿಯೇ ಕಥೆಯ ಓದಿಗೆ ಪಕ್ಕಾಗುವಂತೆ ಮಾಡುತ್ತದೆ. ತಿಮ್ರ ಎಂದು ಕರೆಯಿಸಿಕೊಳ್ಳುವ ತಿಮ್ಮರಾಯ ಎಂಬ ಪುಟ್ಟ ಹುಡುಗನ ಸುತ್ತ ಇರುವ ಈ ಕಥೆಯಲ್ಲಿ ಕಥೆಗಾರ ಭೂತ ವರ್ತಮಾನವನ್ನೆಲ್ಲ ಎರಕ ಹೊಯ್ದಿದ್ದಾರೆ. ಧೋ ಎಂದು ಸುರಿಯುವ ಮಳೆಯಲ್ಲಿ ಕಾಲು ಸಂದಿಯಿಂದ ನುಗ್ಗಿ ಆತನನ್ನು ಎರಡು ಸಲ ಬೀಳಿಸಿದ ಹೆಗ್ಗಣ ಮತ್ತು ಆ ಹೆಗ್ಗಣದ ದೆಸೆಯಿಂದ ಮನೆಮಂದಿಯಿಂದೆಲ್ಲ ಬಾಯಿಗೆ ಬಂದಂತೆ ತಮಾಷೆ ಮಾಡಿಸಿಕೊಂಡ ತಿಮಿರ, ಮಳೆಗೂ ಹೆಗ್ಗಣಕ್ಕೂ ಸಂಬಂಧ ಕಲ್ಪಿಸಿ ಮಾರಮ್ಮನ ಶಾಪದಿಂದಾಗಿ ಏನೋ ಕೆಟ್ಟದಾಗುತ್ತೆ ಎಂದು ಭಯಭೀತರಾದ ಮನೆಮಂದಿಯಷ್ಟೇ ಅಲ್ಲ, ಊರಜನ. ಮತ್ತು ಶಾಪವನ್ನು ನಿರಾಕರಿಸುತ್ತಲೇ ಕೆಟ್ಟದಾಗುತ್ತೆ ಎಂದು ನಂಬಿರುವ ತಿಮಿರನ ಅಕ್ಕ ಶರವಂತಿಯ ಹೆದರಿಕೆಗೆ ತಕ್ಕಂತೆ ಊರನ್ನು ಆವರಿಸಿದ ಪ್ಲೇಗ್, ಹೀಗೆ ಹಂತಹಂತವಾಗಿ ಸಾಗುವ ಕಥೆ ಎಲ್ಲೂ ಅಡೆತಡೆಯಿಲ್ಲದೇ ಓದಿಸಿಕೊಳ್ಳುತ್ತದೆ.

(ಮಂಜುನಾಥ ಚಾಂದ್)

ಎರಡನೆಯ ಕಥೆ ಸವೆದ ಹಾದಿಯ ಉಸಿರು ಕೂಡ ಹಳ್ಳಿ ಸೊಗಡು ತುಂಬಿಕೊಂಡಿರುವ ಕಥೆ. ಹಳ್ಳಿಯ ಹಿರಿಯರಾದ ಅನಂತಪದ್ಮನಾಭ ಭಟ್ಟರು ಉಳುವವನೇ ರೈತ ಎನ್ನುವ ಸಿದ್ಧಾಂತಕ್ಕೆ ಬದ್ಧರಾಗಿ ಸುತ್ತಲಿನ ರೈತರಿಗೆ ಭೂಮಿ ಕೊಡಿಸಿದ್ದರು. ಈ ಅಕಾರಣದಿಂದಾಗಿಯೇ ಅವರ ಕಣ್ಣನ್ನು ಹೊಡೆದು ಕೀಳಿಸುವ ಪ್ರಯತ್ನವೂ ನಡೆದಿತ್ತು. ಬಹುಶಃ ಕಥೆಗಾರನ ಕಥಾಶಕ್ತಿಯ ದೈತ್ಯತೆ ಅರಿವಾಗುವುದೇ ಈ ಹಂತದಲ್ಲಿ. ಉಪಕಾರ ಪಡೆದುಕೊಂಡು ರೈತನಾದವನ ಮಕ್ಕಳನ್ನೆ ಕರೆದುಕೊಂಡು ಬಂದಿದ್ದ ಪಟೇಲ ಬುಜಂಗ, ಭಟ್ಟರು ಅತ್ತ ಕಂಪ್ಲೇಂಟನ್ನೂ ಕೊಡಲಾಗದ, ಇತ್ತ ನೋವನ್ನು ಒಡಲಲ್ಲೂ ಇಟ್ಟುಕೊಳ್ಳಲಾಗದ ಸಂಕಟವನ್ನು ತಂದೊಡ್ಡಿದ್ದ. ಆದರೆ ಅವರ ಮಗ ವಸುದೇವ ಅಪ್ಪ ಪೋಲಿಸ್ ಕಂಪ್ಲೆಂಟ್ ಕೊಡದಿರುವುದಕ್ಕೆ ಕಾರಣ ಹುಡುಕುತ್ತಿದ್ದವನು ಸತ್ಯ ತಿಳಿದ ನಂತರ ತನ್ನ ಯುನಿವರ್ಸಿಟಿಯ ಕೈ ತುಂಬ ಸಂಬಳ ತರುವ ಕೆಲಸ ತ್ಯಜಿಸಿ ನಕ್ಸಲ್ ಆಗುವ ಕಥೆಯ ತಿರುವು ಓದುಗರಲ್ಲೊಂದು ವೇದನೆಯ ನಿಟ್ಟುಸಿರನ್ನು ಹೊಮ್ಮಿಸದೇ ಇರಲಾರದು.

ಮೂರನೆ ಕಥೆ ಸಂತೆಯಿಂದ ಬಂದವನು ಕೂಡ ನಮ್ಮ ಸುತ್ತಲಿನಲ್ಲಿ ಆಗುವ ಘಟನೆಗಳನ್ನೆ ಎಳೆಎಳೆಯಾಗಿ ನಮ್ಮೆದುರು ತೆರೆದಿಡುತ್ತ ಹೋಗುತ್ತದೆ. ಬಸ್ಲಿಂಗ ಎಂಬ ಹುಡುಗ ತನ್ನ ಕೋಳಿಯೊಂದನ್ನು ಹಿಡಿದುಕೊಂಡು ಸಂತೆಗೆ ಹೋಗಿ ಮಾರುವ ಸಮಯದಲ್ಲಿ ಅಜಾನಕ್ ಆಗಿ ಹಿಡಿತ ಸಡಿಲಿಕೆಯಾಗಿ ಹಾರಿಹೋದ ಹುಂಜ ಕಾರಿಗೆ ಬಡಿದು, ಬಸ್ಲಿಂಗನ ಅಜ್ಜಿ ತನ್ನೆಲ್ಲ ಪ್ರತಿಭೆಯನ್ನು ಎರೆದು ಕಾರಿನವನಿಂದ ಸಾವಿರಗಟ್ಟಲೆ ಹಣವನ್ನು ವಸೂಲಿ ಮಾಡುವ ನಾಟಕದಲ್ಲಿ ನಡೆದ ಅವಾಂತರ ಈ ಕಥೆ ಎಂದು ಮೊದಲಿಗೆ ಅನ್ನಿಸುತ್ತದೆಯಾದರೂ ಅದೇ ಕಾರೊಳಗೆ ಹತ್ತಿ ಕುಳಿತ ಬಸ್ಲಿಂಗ, ತನ್ನ ಅಜ್ಜಿ ಪ್ರತಿ ಸಂತೆಯಲ್ಲೂ ಅದೇ ರಿತಿ ಕೋಳಿ ಸಾಯಿಸಿ ಹಣ ಮಾಡುವ ಹಕೀಕತ್ತನ್ನು ಹೇಳುತ್ತ, ತನ್ನ ಹಾಗೆ ತನ್ನ ಅಣ್ಣನೂ ಇದರಿಂದ ಬೇಸತ್ತು ಓಡಿ ಬಂದು ಬೆಂಗಳೂರು ಸೇರಿದ್ದನ್ನು ಹೇಳುತ್ತಾನೆ. ಹಾಗೆ ಹುಡುಕಿಕೊಂಡು ಹೊರಟ ಫ್ಯಾಕ್ಟರಿಯಿಂದ ಕಪ್ಪನೆಯ ಬೂಟು, ಗ್ಲೌಸು ಹಾಕಿಕೊಂಡು ಬಂದ ಚಂದ್ರಣ್ಣನ ಕೈ ಕಾಲುಗಳ ಮೇಲೂ ಇರುವ ರಕ್ತದ ಕಲೆ ಕಂಡು ಹೌಹಾರುವ ಬಸ್ಲಿಂಗ ಇಡೀ ಹಳ್ಳಿ ಜಗತ್ತಿನ ಪ್ರತಿರೂಪವಾಗಿ ನಮ್ಮೆದುರಿಗೆ ನಿಲ್ಲುತ್ತಾನೆ. ತಣ್ಣಗಿರುವ ಊರನ್ನು ಬಿಟ್ಟು ಸುಡುಬಿಸಿಲನ್ನು ಆಯ್ದುಕೊಂಡು ಬೆಂಗಳೂರಿಗೆ ಬರುವ ಬಡ ಮಕ್ಕಳ ವ್ಯಥೆಯನ್ನು ಈ ಕಥೆ ಹೇಳುತ್ತದೆ.

ಒಟ್ಟೂ ಒಂಬತ್ತು ಕಥೆಗಳಿರುವ ಈ ಪುಸ್ತಕದ ಸತ್ವ ಅಡಗಿರುವುದು ಅದರ ಭಾಷೆಯಲ್ಲಿ. ಅಚ್ಚ ಕುಂದಾಪುರದ ಕನ್ನಡವು ಇದೇನು ಇದೇನು ಎನ್ನುತ್ತಲೇ ಓದುಗರನ್ನು ತನ್ನ ತೆಕ್ಕೆಯೊಳಗೆ ಸೆಳೆದುಕೊಳ್ಳುತ್ತದೆ. ಮೊದಲ ಕಥೆ ‘ತಿಮಿರ’ ಹೀಗೆ ಗ್ರಾಮೀಣ ಮತ್ತು ಕುಂದಗನ್ನಡದ ಮಿಶ್ರಣವಾಗಿ ನಮ್ಮನ್ನು ಪ್ರಾರಂಭದಲ್ಲಿಯೇ ಕಥೆಯ ಓದಿಗೆ ಪಕ್ಕಾಗುವಂತೆ ಮಾಡುತ್ತದೆ.

‘ಹೊಳೆದಂಡೆಯ ಆಚೆ’ ಎನ್ನುವ ನಾಲ್ಕನೆಯ ಕಥೆ ಹಳ್ಳಿ ಪಟ್ಟಣವಾಗುವ ಹೊತ್ತಿನಲ್ಲಿ ತೆಗೆದುಕೊಳ್ಳುವ ವಿಚಿತ್ರ ತಿರುವುಗಳ ಬಗ್ಗೆ ಹೇಳುತ್ತಲೇ ಭಾಗವತಿಕೆ ಮಾಡುತ್ತ ಲಾಟರಿ ಟಿಕೆಟ್ ಮಾರುವ ಗಜರಾಜ ಎಂಬ ಹುಡುಗನ ಕಥೆಯನ್ನೂ ತಿಳಿಸುತ್ತದೆ. ಭಾಗವತಿಕೆ ಮಾಡುತ್ತ, ಲಾಟರಿ ಟಿಕೇಟು, ಜ್ಯೋತಿ ಬೀಡಿಯನ್ನು ಪ್ರಚಾರ ಮಾಡಿ ಸುತ್ತಲಿನವರಿಗೆ ತೊಂದರೆ ಕೊಟ್ಟಿದ್ದಕ್ಕಾಗಿ ಕೋರ್ಟ್ ದಂಡ ವಿಧಿಸುತ್ತದೆಯಾದರೂ ಆತನಿಗೆ ಆ ಕೆಲಸ ಮಾಡಲು ಹೇಳಿದ ಮಾವ ಪ್ರಭಾಕರ ರೈಗಳು ಏನೊಂದೂ ಮಾತನಾಡದೇ ಹೊಳೆದಂಡೆಯ ಆಚೆ ಕರೆದೊಯ್ದು ಭಾಗವತಿಕೆ ಶಿಕ್ಷಣ ಕೊಡಿಸುವಲ್ಲಿ ಕಥೆ ಮುಗಿಯುತ್ತದಾದರೂ ಓದುಗರನ್ನು ಅಲ್ಲಿಯೇ ವಿರಮಿಸಲು ಸುತಾರಾಂ ಬಿಡುವುದಿಲ್ಲ.

‘ಗೋಡೆಗಳನು ದಾಟಿ’ ಎನ್ನುವ ಕತೆ ಆಧುನಿಕ ಜಗತ್ತಿನ ತಣ್ಣಗಿನ ಕ್ರೌರ್ಯವನ್ನು ಮತ್ತು ಅದನ್ನು ಎದುರಿಸುವ ಪಡಿಪಾಟಲನ್ನು ಜಿಜ್ಞಾಸೆಗೆ ಒಳಪಡಿಸುತ್ತದೆ. ಅಪ್ಪ ಮದುವೆ ಮಾಡಿ ತನ್ನ ಮುಂದೆ ಓದುವ ಆಸೆಗೆ ಕಲ್ಲು ಹಾಕುತ್ತಾನೆಂದು ಚಿದಾನಂದ ತಾನು ಇಷ್ಟಪಟ್ಟವಳನ್ನು ಎದುರಿಗೆ ನಿಲ್ಲಿದಾಗಲೂ ಲಕ್ಷಿಸದೇ ಹೇಳದೆ ಕೇಳದೆ ಮನೆ ಬಿಟ್ಟಿದ್ದ. ಆದರೆ ಸೆಕ್ಯುರಿಟಿ ಕೆಲಸಕ್ಕೆ ಸೇರಿಕೊಂಡ ನಂತರ ಅಲ್ಲಿಯ ಮ್ಯಾನೆಜರ್ ಅರವಿಂದ ಅಟವಡೆಯ ತೊಂದರೆಗಳ ವಿರಾಟ್ ದರ್ಶನವಾಗಿತ್ತು. ಸಂಬಳ್ ಕಟ್ ಮಾಡಿ ತನ್ನ ಎಂ.ಎ. ಓದುವ ಕನಸಿಗೆ ಕೊಳ್ಳಿ ಇಡುವ ಅರವಿಂದ ಅಟವಾಳೆಯನ್ನೇ ಮುಗಿಸಲು ಹೊರಡುವ ಮತ್ತು ಅದೇ ಸಮಯಕ್ಕೆ ಎಂ.ಎ.ಗೆ ಸೀಟು ಸಿಗುವುದರೊಂದಿಗೆ ಸಾವಿಗಿಂತ ಜೀವನ ದೊಡ್ಡದು ಎನ್ನುವ ಮಾತು ಓದುಗರಿಗೆ ಅವರವರ ಬದುಕನ್ನು ಎದುರಿಗೆ ತಂದು ನಿಲ್ಲಿಸುತ್ತದೆ.

ಕುಬೇರ ಶಿಕಾರಿ ಎನ್ನುವ ಕಥೆಯಲ್ಲಿ ಪತ್ರಕರ್ತರ ಪಡಿಪಾಟಲಿದೆ. ತಿಂಗಳ ಕೊನೆಯಲ್ಲಿ ಜೇಬಿನಲ್ಲಿ ಚಿಕ್ಕಾಸೂ ಇರದಿದ್ದಾಗ ಮೋಹನದಾಸ ಎಂಬ ಸ್ನೇಹಿತನೊಬ್ಬನಿಗೆ ಸಿಗುತ್ತಿದ್ದ ಹಣ ಅಥವಾ ವಸ್ತುಗಳು, ಕೊನೆಗೊಂದು ದಿನ ಒಳ್ಳೆಯ ಕಡೆ ಕೆಲಸಕ್ಕೆ ಸೇರಿದ ನಂತರ ಹಾಗೆ ಸಿಗುವ ಕುಬೇರನ ಹಣ ನಿಂತು ಹೋಗುವುದು ಒಂದು ರೀತಿ ಫ್ಯಾಂಟಿಸಿ ಅನ್ನಿಸಿದರೂ ಇಡಿ ಜಗತ್ತನ್ನು ಗಿರಕಿ ಹೊಡೆಯುವಂತೆ ಭಾಸವಾಗುತ್ತದೆ. ಊರಿಗೆ ಬಂದ ದೇವರು ಕಥೆಯಲ್ಲಿ ಹೊಳೆದಂಡೆಯಲ್ಲಿ ಕಾಣಿಸಿದ ದೇವಿಯ ಮೂರ್ತಿಯೊಂದು ಕಾಣಿಸಿಕೊಂಡಿದೆ. ಆ ದೇವಿಗೊಂದು ಗುಡಿ ಕಟ್ಟಿ ಪೂಜಿಸುವ ಸಮಯದಲ್ಲಿ ಅಲಂಕಾರಕ್ಕೆಂದು ತಂದಿದ್ದ ಮೂರ್ತಿಯೊಂದನ್ನು ಕಳೆದುಕೊಂಡಿದ್ದ ರಮಾನಂದ ಕಾಮತರು ಅದು ತಾನು ತರಿಸಿದ ಮೂರ್ತಿ ಎಂದು ಹೇಳಲಾಗದೇ ತಾವು ಅಕ್ಷತೆ ಎಸೆದು ಸಾಷ್ಟಾಂಗ ನಮಸ್ಕಾರ ಮಾಡಿ ಪುನೀತರಾಗುತ್ತಾರೆ ಎಂಬುದನ್ನು ಕಥೆ ಹೇಳುತ್ತದೆ. ಊರಿನ ಹೊಳೆ ದಂಡೆಗೆ ಬಂದು ಬಿದ್ದ ಮೂರ್ತಿಯೊಂದು ಎಷ್ಟೆಲ್ಲ ಭ್ರಮೆಗಳನ್ನು ಸೃಷ್ಟಿಸಿ, ಧಾರ್ಮಿಕ ಭಾವನೆಗಳನ್ನು ಬಡಿದೆಬ್ಬಿಸಿ ತಾವೇ ಕೊಂಡು ತಂದ ಮೂರ್ತಿಯೆದುರು ಉದ್ದಂಡ ನಮಸ್ಕಾರ ಹಾಕುವ ಕಾಮತರ ಅಸಹಾಯಕತೆಯನ್ನು ತೋರಿಸುತ್ತದೆ.

‘ಕದ ತೆರೆದ ಆಕಾಶ’ ವಿಶಿಷ್ಟ ಉನ್ಮಾದಗಳನ್ನು ಹೊತ್ತುಕೊಂಡಂತಹ ಕಥೆ. ಬಾಂಬ್ ಬ್ಲಾಸ್ಟ್ ಆಗಿ, ಮಳೆ ನೀರು ಕಾರಿನಲ್ಲಿ ತುಂಬಿ ಅದು ಹೇಗೋ ಬಚಾವಾದ ಜಾಹ್ನವಿ, ತ್ಯಾಗರಾಜ್, ಜನಾರ್ಧನ, ಪ್ರಸನ್ನಮೂರ್ತಿಯರ ಬದುಕಿನ ಕಥೆಗಳನ್ನು ಹೇಳುತ್ತಲೇ ಬದುಕಿನ ವೈರುಧ್ಯಗಳನ್ನೂ ತೋರಿಸುತ್ತದೆ. ಬಿಟ್ಟು ಬಂದ ಪ್ರೀತಿಯನ್ನು ಎದುರು ನಿಲ್ಲಿಸಿ ಕೊರಳಪಟ್ಟಿ ಹಿಡಿದಂತೆ ಜಗ್ಗಿಸಿ ಕೇಳುವ ಬದುಕಿನ ಧಾರ್ಷ್ಟ್ಯ ಇಲ್ಲಿದೆ. ಓದುತ್ತಲೇ ಎದೆ ಭಾರವಾಗಿ ವಿಷಾದದ ಮನಸ್ಥಿತಿಯನ್ನು ಮತ್ತು ಸಂಬಂಧದ ಚಿತ್ರಣವನ್ನು ಯಥಾವತ್ತಾಗಿ ತೋರಿಸುವ ಈ ಕಥೆ ಸಂಕಲನದ ಹೈಲೈಟ್.

ಕೊನೆಯ ಕಥೆ ಕಂಚಿಮಳ್ಳು ಸಂಬಂಧಗಳ ತಾಕಲಾಟವನ್ನು ಉಣಬಡಿಸುತ್ತದೆ. ತಾನು ಮದುವೆ ಆಗಬೇಕಾಗಿದ್ದ ಹುಡುಗಿ ಸತ್ತು ಹೋದಳು ಎಂದು ತಾನೇ ಹೇಳುತ್ತ ಮಾನಸಿಕ ರೋಗಿಯಂತಾಗಿದ್ದ ದೇವ್ರು ಭಟ್ಟ, ದೇವರನ್ನೆಲ್ಲ ತಿರಸ್ಕರಿಸುತ್ತಾನೆ. ಆತನ ಹುಚ್ಚು ವರ್ತನೆಗೆ ಊರೆಲ್ಲ ಕಂಚಿಮಳ್ಳು ಎಂದು ಕರೆದರೂ ಬೇಸರಿಸದ ಆತನನ್ನು ಮದುವೆ ಆಗಬೇಕಿದ್ದ ಇಂದ್ರಾಣಿಯನ್ನು ಕರೆತರುವ ಮಾತನಾಡಿದಾಗ ಒಪ್ಪಿಕೊಳ್ಳದಿದ್ದರೂ ನಾಲ್ಕಾರು ಊರುಗಳ ನಡುವಿರುವ ಶಾಲೆಯ ಮೇಲೆ ಅವಳ ಚಿತ್ರ ಬರೆದು ತನ್ನೆದೆಯೊಳಗೆ ಇರುವ ಅವಳ ಚಿತ್ರವನ್ನು ತೋರಿಸಿಕೊಳ್ಳುತ್ತಾನೆ. ಪ್ರವಾಹದಿಂದ ಉಕ್ಕೇರಿದ ಅಘನಾಶಿನಿ ನದಿಯ ತೂಗುಸೇತುವೆ ತುಂಡಾಗಿ ಬಿದ್ದಾಗ ಅದರಾಚೆ ದೇವ್ರೂ ಭಟ್ಟ ಮತ್ತು ಇಂದ್ರಾಣಿ ಗೋವಿಂದಪ್ಪನ ಮನೆಯ ಬಚ್ಚಲಲ್ಲಿ ಉರಿವ ಒಲೆಯ ಮುಂದೆ ಕುಳಿತಿರುವ ಚಿತ್ರಣ ಬರುತ್ತದೆ. ‘ಎಲ್ಲ ಸಂಬಜಕ್ಕೂ ಮನ್ಸು ಹೇಳಿ ಇರ್ತಿಲ್ಲೆ. ಮತ್ತೆ ಮತ್ತೆ ನೀರ್ ಹಾಕಿ ಜೀಂವಾ ತರಾ ಕೆಲ್ಸ ಫಲ ಕೊಡ್ತಿಲ್ಲೆ’ ಎನ್ನುತ್ತಾನಾದರೂ ಆತನ ಮಾತಿನ ನಿಗೂಢತೆ ಕಥೆಯ ಕೊನೆಯಲ್ಲಿ ಆತನೇ ಇಂದ್ರಾಣಿ ಮುಂದೆ ಓದಲೆಂದು ನದಿ ದಾಟಿಸಿದ್ದ ವಿಷಯ ತಿಳಿದಾಗ ನಿಚ್ಚಳವಾಗುತ್ತದೆ.

ಗ್ರಾಮೀಣ ಬದುಕನ್ನು ಇದ್ದದ್ದು ಇದ್ದ ಹಾಗೆ ಕಟ್ಟಿಕೊಡುತ್ತಲೇ ಆಕಾಶಕ್ಕೆ ಮುಖ ಮಾಡಿದಂತೆ ಆಧುನಿಕ ಬದುಕನ್ನೂ ವಿವರಿಸುವ ಇಲ್ಲಿನ ಕಥೆಗಳು ಗೆಲ್ಲುವುದೇ ಇಲ್ಲಿನ ಭಾಷೆಯ ಕಾರಣಕ್ಕೆ. ಒಬ್ಬ ಕಥೆಗಾರನಿಗೆ ಇರಬೇಕಾದ ಭಾಷೆಯ ಮೇಲಿನ ಹಿಡಿತವನ್ನು ಇಲ್ಲಿನ ಕಥೆಗಳಲ್ಲಿ ಕಾಣಬಹುದು. ಕುಂದಗನ್ನಡದ ಸೊಗಸಿನ ಜೊತೆಯಲ್ಲಿ, ಹವ್ಯಕ ಕನ್ನಡವೂ ಅಷ್ಟೇ ಸುಲಲಿತವಾಗಿ ಬಳಕೆಯಾಗಿದೆ. ಪ್ರಾದೇಶಿಕತೆಯ ನೆಲಗಟ್ಟಿನಲ್ಲಿಯೇ ಹೇಳುತ್ತಿರುವ ಕಥೆ ಒಮ್ಮೆಲೆ ಅದರಾಚೆಗೂ ಚಿಮ್ಮಿನಿಂತು ವಿಸ್ಮಯ ಮೂಡಿಸುತ್ತದೆ. ಕಥೆಕಟ್ಟುವ ಕಾಯಕದಲ್ಲಿ ಕುತೂಹಲವಿರುವ ಪ್ರತಿಯೊಬ್ಬರೂ ಓದಬೇಕಾದ ಕಥೆಗಳು ಇಲ್ಲಿವೆ. ತನ್ನ ವೈವಿಧ್ಯತೆಯಿಂದಲೇ ಓದುಗರನ್ನು ಹಿಡಿದಿಟ್ಟುಕೊಳ್ಳುವ ಈ ಕಥೆಗಳ ಮುಂದುವರಿದ ಭಾಗದ ಬಗ್ಗೆ ಕುತೂಹಲಿಯಾಗಿದ್ದೇನೆ. ಕಥೆಗಳು ಹೇಗಿರಬೇಕು ಎಂದು ಯಾರಾದರೂ ನನ್ನನ್ನು ಕೇಳಿದರೆ ಖಂಡಿತವಾಗಿಯೂ ನಾನು ಓದಲು ಸೂಚಿಸುವ ಹತ್ತು ಪುಸ್ತಕಗಳಲ್ಲಿ ಮಂಜುನಾಥ ಚಾಂದ್ ರ ‘ಕದ ತೆರೆದ ಆಕಾಶ’ ಕೂಡ ಒಂದಾಗಿರುತ್ತದೆ.

(ಪುಸ್ತಕ: ಕದ ತೆರೆದ ಆಕಾಶ (ಕಥಾ ಸಂಕಲನ), ಲೇಖಕರು: ಮಂಜುನಾಥ ಚಾಂದ್, ಬೆಲೆ: 120)