“ಮುಂದೆ ಹೊಸ ಜಾಗ, ಹೊಸ ಮನೆ, ಹೊಸ ಕುತೂಹಲಗಳು ರತ್ನಕ್ಕಳ ನೆನಪುಗಳನ್ನು ಇಂಚಿಂಚಾಗಿ ಕಬಳಿಸಿದ್ದರೂ ಅವಳಿನ್ನೂ ನನ್ನ ಮನದಿಂದ ಪೂರ್ತಿಯಾಗಿ ಮಾಯವಾಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಅವಳು ಕಾಡಿದಾಗೆಲ್ಲಾ ಝಲ್ಲೆಂದು ಸದ್ದು ಮಾಡುತ್ತಿದ್ದ ಕಾಲ್ಗೆಜ್ಜೆ ನಿಶಬ್ದವಾಗಿಬಿಡುತ್ತಿತ್ತು. ಸ್ವಲ್ಪ ದೊಡ್ಡವಳಾದಂತೆ ರತ್ನಕ್ಕ, ಅವಳ ಬದುಕು ನನಗೆ ಒಂದು ದೊಡ್ಡ ಮಿಸ್ಟರಿ ಅಂತ ಅನಿಸುತ್ತಿತ್ತು. ಈ ಬಗ್ಗೆ ಅಮ್ಮನ ಹತ್ರ ಕೇಳಿದರೆ ಹೆಚ್ಚಿನ ಮಾಹಿತಿಯೇನೂ ಸಿಗುತ್ತಿರಲಿಲ್ಲ”
ಫಾತಿಮಾ ರಲಿಯಾ ಬರೆಯುವ ಪಾಕ್ಷಿಕ ಅಂಕಣ.

ಹಾಗಂತ ಆಕೆಯನ್ನು ಯಾರು ಮೊದಲು ಕರೆದಿದ್ದರೋ ಗೊತ್ತಿಲ್ಲ. ಆಕೆಯಂತೂ ಅಪ್ಪಟ ರತ್ನ; ಅಕ್ಕರೆಯ ಅಕ್ಕ. ತಿಳಿ ಹಸಿರು ಬಣ್ಣದ ಸೀರೆ, ಅದಕ್ಕೊಪ್ಪುವ ಅರ್ಧ ತೋಳಿನ ರವಿಕೆ, ಮಧ್ಯಕ್ಕೆ ತೆಗೆದ ಬೈತಲೆ, ಹುಬ್ಬುಗಳ ಮಧ್ಯೆ ಒಂದು ಸಣ್ಣ ಬೊಟ್ಟು…. ಇಷ್ಟಾದರೆ ಅವಳ ಅಲಂಕಾರ ಮುಗಿಯುತ್ತಿತ್ತು. ಅವಳ ನಿಜವಾದ ಹೆಸರೇನು? ಎಲ್ಲಿಯವಳು? ಸಂಸಾರ-ಮಕ್ಕಳಿವೆಯಾ? ವಿವರಗಳು ಯಾರಿಗೂ ಲಭ್ಯವಿರಲಿಲ್ಲ.

ವಾರಕ್ಕೆ ಮೂರು ದಿನವಷ್ಟೇ ಕಾಣಬರುತ್ತಿದ್ದ ಆಕೆ ಹಿತ್ತಲಲ್ಲಿ ನಿಂತು “ಅಕ್ಕಾ ಕಾಫಿ…” ಅನ್ನುತ್ತಿದ್ದರೆ ಅರಿಯದ ಸಂಭ್ರಮವೊಂದು ಅವಳೊಂದಿಗೆ ಮನೆಯೊಳಗೆ ಪ್ರವೇಶಿಸುತ್ತಿತ್ತು. ಕುಳಿತೇ ಅಡುಗೆ ಮಾಡಬೇಕಿದ್ದ ಒಲೆ, ಅದರ ಹತ್ತಿರವೇ ಇರುತ್ತಿದ್ದ ಸಣ್ಣ ಮಣೆಯಲ್ಲಿ ಕೂತು ಅಮ್ಮ ಅಡುಗೆ ಮಾಡುತ್ತಿದ್ದರೆ ಪಕ್ಕದಲ್ಲಿ ಮತ್ತೊಂದು ಮಣೆಯೆಳೆದು ಮಾತಿಗೆ ಕೂರುತ್ತಿದ್ದ ರತ್ನಕ್ಕಳೆಂದರೆ ನನಗೆ ಬಾಲಮಂಗಳದ ‘ಲಂಬೋದರ’ ಕಥೆಯ ವೈದ್ಯರಿಗಿತಲೂ ಒಂದು ತೂಕ ಜಾಸ್ತಿಯೇ ಕುತೂಹಲ.

ಸದಾ ತುರುಬು ಕಟ್ಟಿಯೇ ಇರುವ ರತ್ನಕ್ಕನ ಕೂದಲು ಎಷ್ಟುದ್ದ ಇರ್ಬಹುದು ಅನ್ನುವುದು ಮೊದಲ ಕುತೂಹಲವಾಗಿದ್ದರೆ, ನನಗೆ ಮಲ್ಲಿಗೆ ಹೆಣೆದು ತರುವ ಈಕೆ ಯಾಕೆ ಹೂವು ಮುಡಿಯುವುದೇ ಇಲ್ಲ ಅನ್ನುವುದು ಎರಡನೆಯ ಪ್ರಶ್ನೆ. ದಿನಕ್ಕೆ ಎರಡು ಮೂರಾದರೂ ಕಥೆ ಹೇಳುತ್ತಿದ್ದ ಆಕೆಗೆ ಅಷ್ಟೊಂದು ಕಥೆಗಳು ಹೇಗೆ ಗೊತ್ತು ಅನ್ನುವುದು ನನಗೆ ಆಗ ಒಂದು ದೊಡ್ಡ ಬೆರಗು. ‘ನಿನ್ನ ಮಗು ಎಲ್ಲಿ? ಆಟ ಆಡೋಕೆ ಕರ್ಕೊಂಡು ಬಾ’ ಅಂದ್ರೆ ‘ನೀನೇ ನನ್ನ ಮಗು’ ಅಂತ ಬರಸೆಳೆದು ತಾಂಬೂಲ ಜಗಿದ ಬಾಯಲ್ಲೇ ನನ್ನ ಕೆನ್ನೆಗೊಂದು ಮುತ್ತಿಟ್ಟಾಗ ಮಾತ್ರ ಈ ರತ್ನಕ್ಕ ಕೊಳಕು ಅಂತ ನನಗೆ ಅನಿಸುತ್ತಿತ್ತು. ಅದನ್ನೇ ಒಂದೆರಡು ಬಾರಿ ಅಮ್ಮನಿಗೂ ಹೇಳಿ ಅವರಿಂದ ಬೈಸಿಕೊಂಡಿದ್ದೆ.

ಮಾತಿಗೆ ಕೂತರೆ ರತ್ನಕ್ಕ ಮಹಾ ವಾಚಾಳಿ. ನನ್ನನ್ನು ಹೊರತುಪಡಿಸಿ ಮತ್ತೊಂದು ಹೆಣ್ಣು ಜೀವವಿಲ್ಲದ ಮನೆಯಲ್ಲಿ ಅಮ್ಮನಿಗೆ ಆಕೆಯೇ ಅಂತರಂಗದ ಸಖಿ. ಅಬ್ಬುಕಾಕ ಕೊಟ್ಟ ಕೊಳೆತ ಮೀನಿನ ಕಥೆ, ರಾತ್ರಿ ಊಟ ಮಾಡದೆ ಬಿಸ್ಕೆಟ್ ತಿಂದು ಮಲಗಿದ ನನ್ನ ಹಠ, ಅಪ್ಪ ಮನೆಗೆ ರಾತ್ರಿ ಲೇಟಾಗಿ ಬಂದದ್ದು, ಮುಂದಿನ ವಾರ ಊರಿಗೆ ಬರಲಿರುವ ಮಾವನಿಗೆ ಮಾಡಿಟ್ಟರಬೇಕಾದ ತಿಂಡಿಯ ಪಟ್ಟಿ, ಅಜ್ಜನ ಮಾತ್ರೆ, ಯಾರೋ ಕದ್ದುಕೊಂಡು ಹೋಗಿರುವ ಅಮ್ಮನ ಪ್ರೀತಿಯ ಹೇಂಟೆ, ತೋಟದ ಕೆಲಸಕ್ಕೆ ಹೇಳದೇ ಕೇಳದೇ ರಜೆ ಮಾಡಿದ ತಿಮ್ಮಣ್ಣ, ಕಾಲಿಗೆ ಮುಳ್ಳು ಚುಚ್ಚಿಸಿಕೊಂಡು ಬಂದು ಪಡಬಾರದ ಪಾಡು ಪಟ್ಟ ಮನೆಯ ದನ… ಹೀಗೆ ವಾರದ ಕಥೆಯನ್ನು ಅವಳ ಮುಂದೆ ಹೇಳಿಕೊಂಡರೆ ಅಮ್ಮನಿಗೆ ನಿರಾಳ.

ಅವಳಾದರೂ ಅಷ್ಟೆ, ಅಮ್ಮ ಮಾತಾಡುತ್ತಿದ್ದರೆ ಬರಿಯ ಹೂಂಗಟ್ಟದೆ, ಅಬ್ಬುಕಾಕ ತನಗೂ ಕೊಳೆತ ಮೀನು ಕೊಟ್ಟ ಬಗ್ಗೇನೋ, ಕೋಳಿ ಕಳ್ಳರ ಬಗ್ಗೆಯೋ, ಮುಳ್ಳು ಚುಚ್ಚಿಸಿಕೊಂಡ ದನಕ್ಕೆ ಮಾಡಬಹುದಾದ ಹಳ್ಳಿ ಮದ್ದು… ಹೀಗೆ ಅಮ್ಮನ ಮಾತಿಗೆ ಜೊತೆಯಾಗುತ್ತಿದ್ದಳು. ನಡು-ನಡುವೆ ನಾನು ಅದು-ಇದು ಅಂತ ಹೋದ್ರೆ ನನ್ನನ್ನು ಮಡಿಲಲ್ಲಿ ಕೂರಿಸಿ ಮುದ್ದುಗರೆಯುತ್ತಿದ್ದಳು.

ಸದಾ ನಗುವ ಆಕೆ ಒಮ್ಮೊಮ್ಮೆ ಮಾತ್ರ ಮುಖ ಗಂಟಿಕ್ಕಿಕೊಂಡೇ ಮನೆಯೊಳಗೆ ಬರುತ್ತಿದ್ದಳು. ಆಗೆಲ್ಲಾ ಅಮ್ಮನಿಗೆ ಅವಳ ನೋವು ಮೊದಲೇ ಗೊತ್ತಿತ್ತೇನೋ ಎಂಬಂತೆ ತಾನೇ ಮಣೆ ಎಳೆದು ಅವಳನ್ನು ಕೂರಿಸಿ ಕಾಫಿ, ನೀರು ದೋಸೆ, ಮೀನಿನ ಸಾರು ಕೊಟ್ಟು ತಿನ್ನು ಎಂದು ಅಕ್ಕರೆಯಿಂದ ಬೆನ್ನು ನೀವುತ್ತಿದ್ದಳು. ಮಾತಿನ ಮಲ್ಲಿ ರತ್ನಕ್ಕ ಮೌನವಾದರೆ ಅಮ್ಮನ ಕರುಳೂ ಚುರುಕ್ಕನ್ನುತ್ತಿತ್ತೇನೋ? ಅವಳೇ ಮಾತು ಶುರು ಹಚ್ಚಿಕೊಳ್ಳಲಿ ಎಂದು ಸುಮ್ಮನಾಗಿಬಿಡುತ್ತಿದ್ದರು.

ಸದಾ ತುರುಬು ಕಟ್ಟಿಯೇ ಇರುವ ರತ್ನಕ್ಕನ ಕೂದಲು ಎಷ್ಟುದ್ದ ಇರ್ಬಹುದು ಅನ್ನುವುದು ಮೊದಲ ಕುತೂಹಲವಾಗಿದ್ದರೆ, ನನಗೆ ಮಲ್ಲಿಗೆ ಹೆಣೆದು ತರುವ ಈಕೆ ಯಾಕೆ ಹೂವು ಮುಡಿಯುವುದೇ ಇಲ್ಲ ಅನ್ನುವುದು ಎರಡನೆಯ ಪ್ರಶ್ನೆ. ದಿನಕ್ಕೆ ಎರಡು ಮೂರಾದರೂ ಕಥೆ ಹೇಳುತ್ತಿದ್ದ ಆಕೆಗೆ ಅಷ್ಟೊಂದು ಕಥೆಗಳು ಹೇಗೆ ಗೊತ್ತು ಅನ್ನುವುದು ನನಗೆ ಆಗ ಒಂದು ದೊಡ್ಡ ಬೆರಗು.

ಹಾಗೆ ಅವಳು ನಾಸ್ಟಾ ಮಾಡಿ ಬಟ್ಟಲು ತೊಳೆದಿಟ್ಟು ಬರುವಷ್ಟರಲ್ಲಿ ಅಮ್ಮನ ಮಧ್ಯಾಹ್ನದ ಅಡುಗೆ ತಯಾರಿ ಶುರುವಾಗಿಬಿಡುತ್ತಿತ್ತು. ಒಮ್ಮೆ ಅತ್ತಿತ್ತ ನೋಡಿ, ಯಾರೂ ಇಲ್ಲ ಅನ್ನುವುದನ್ನು ಖಾತ್ರಿ ಪಡಿಸಿ, ನನ್ನನ್ನು ಆಟ ಆಡಿಕೋ ಎಂದು ದೂರ ಕಳುಹಿಸಿ ಇಬ್ಬರೂ ಮಾತಿಗೆ ಕೂರುತ್ತಿದ್ದರು. ನಡು ನಡುವೆ ರತ್ನಕ್ಕ ಬಿಕ್ಕುತ್ತಿದ್ದರೆ ಅಮ್ಮನ ಕಣ್ಣಲ್ಲೂ ತೆಳು ನೀರು. ಅಲ್ಲವಳ ಖಾಸಗಿ ಬದುಕಿನ ಖಾಸ್ ಬಾತ್ ಬಿಚ್ಚಿಕೊಳ್ಳುತ್ತಿದ್ದರೆ ಅಮ್ಮನ ಮನದಲ್ಲೂ ಕಡಲೊಂದು ಸುಮ್ಮನೆ ಹೊಯ್ದಾಡುತ್ತಿತ್ತೇನೋ? ಆಗ ಇವೆಲ್ಲಾ ನನಗೆ ಅರ್ಥ ಆಗುತ್ತಿರಲಿಲ್ಲ. ಒಲೆಯಲ್ಲಿ ಆರಿಹೋಗಿರುವ ಬೆಂಕಿಯನ್ನು ಮತ್ತೆ ಹೊತ್ತಿಸಲೆಂದು ಊದುಗೊಳವೆಯಲ್ಲಿ ಗಾಳಿ ಹಾಕಿದ್ದಕ್ಕೇ ಅಮ್ಮನ ಕಣ್ಣುಗಳು ಕೆಂಪುಂಡೆಗಳಾಗಿವೆ ಅಂತ ಅಂದುಕೊಳ್ಳುತ್ತಿದ್ದೆ. ”ನಾನು ಊದ್ಲಾ ಅಮ್ಮಾ” ಅಂತ ಕೇಳಿದ್ರೆ, ಅವರಿಗಿಂತ ಮೊದಲು ರತ್ನಕ್ಕನೇ “ನಿನಗಿವೆಲ್ಲಾ ಬೇಡ” ಎಂದು ದೂರ ಕಳುಹಿಸಿಬಿಡುತ್ತಿದ್ದಳು. ಈಗ ಒಮ್ಮೊಮ್ಮೆ “ಏನಿತ್ತು ಅಂತಹಾ ಗುಟ್ಟು?” ಅಂತ ಅಮ್ಮನನ್ನು ಕೇಳಬೇಕು ಅನಿಸಿದರೂ ಕೇಳಲಾಗದೆ ಸುಮ್ಮನಾಗುತ್ತೇನೆ.

ಹೀಗಿರುವಾಗಲೇ ಒಂದು ದಿನ ರತ್ನಕ್ಕ ಎಂದಿಗಿಂತ ಬೇಗ ಮನೆಯ ದಾರಿ ಹಿಡಿದಿದ್ದಳು. ನಾನು ಅಜ್ಜನ ಕೈ ಹಿಡಿದುಕೊಂಡು ಅಂಗಳದಲ್ಲಿ ಅಡ್ಡಾಡುತ್ತಿರಬೇಕಾದರೆ ಆಕೆ ಓಡೋಡಿ ಬರುತ್ತಿದ್ದುದು ಕಾಣಿಸುತ್ತಿತ್ತು. ನನಗೋ ಅವಳಿಂದ ಕಥೆ ಹೇಳಿಸುವ ಉಮೇದು. ಅವಳು ನನ್ನ ಇರುವಿಕೆಯನ್ನು ಗಮನಿಸಲೇ ಇಲ್ಲವೇನೋ ಎಂಬಂತೆ ಅಮ್ಮನ ಹತ್ತಿರ ಹೋಗಿ ಪಿಸಪಿಸ ಮಾತಾಡತೊಡಗಿದಳು. ಹಣೆಯಲ್ಲಿ ಎಂದೂ ಕಾಣದ ಕುಂಕುಮ ಆವತ್ತು ಕಾಣಿಸಿತ್ತು. ಅಮ್ಮ ಏನೂ ಮಾತಾಡುತ್ತಲೇ ಇರಲಿಲ್ಲ. ನನಗೋ ಎಲ್ಲವೂ ಅಯೋಮಯ. ಸ್ವಲ್ಪ ಹೊತ್ತಾದ ಮೇಲೆ ಪೇಟೆಗೆ ಹೋದ ಅಪ್ಪ ವಾಪಾಸ್ ಬಂದ್ರು. ಅಜ್ಜನೂ ಈಸಿಛೇರಿನಲ್ಲಿ ಕೂತು ಏನನ್ನೋ ಓದುತ್ತಿದ್ದರು. ಅಮ್ಮ ಯಾವ ಪೀಠಿಕೆಯೂ ಇಲ್ಲದೆ ಒಂದು ನಿರ್ಧಾರದ ಧ್ವನಿಯಲ್ಲಿ “ರತ್ನಕ್ಕ ಇನ್ಮುಂದೆ ಇಲ್ಲೇ ಇರುತ್ತಾಳೆ. ತೋಟದಲ್ಲಿರುವ ಹಳೆ ಮನೆಯಲ್ಲಿ ಬದುಕು ಕಟ್ಟಿಕೊಳ್ಳಲಿ” ಅಂದರು. ಅಪ್ಪ “ಒಂಟಿ ಹೆಂಗಸನ್ನು ಹೇಗೆ ತೋಟದಲ್ಲಿ ಇರಿಸುವುದು, ಇವೆಲ್ಲಾ ಆಗದ ಮಾತು” ಅಂದರು. ಅಮ್ಮ ಮತ್ತೆ “ಆಕೆ ಒಂಟಿಯಲ್ಲ, ಅವಳ ಗಂಡನೂ ಜೊತೆಗಿರುತ್ತಾನೆ” ಅಂದರು. ಒಂದೆರಡು ಕ್ಷಣ ಯೋಚಿಸಿ, ಅಮ್ಮ ಯಾವ ಮಾತಿಗೂ ಜಗ್ಗಲಾರರು ಎಂದು ಅರ್ಥ ಮಾಡಿಕೊಂಡ ಅಪ್ಪ, ಅಜ್ಜ ರತ್ನಕ್ಕ ನಮ್ಮ ತೋಟದಲ್ಲಿ ಇರಲು ಒಪ್ಪಿಗೆ ಕೊಟ್ಟರು.

ನನಗೆ ರತ್ನಕ್ಕ ಪ್ರತಿ ದಿನ ನಮ್ಮ ಜೊತೆ ಇರುತ್ತಾಳೆ ಅನ್ನುವುದೇ ದೊಡ್ಡ ಸಂಭ್ರಮ. ಅಷ್ಟು ದಿನ ಇಲ್ಲದ ಗಂಡ ಈಗ ಧುತ್ತೆಂದು ಹೇಗೆ ಬಂದ? ಇಷ್ಟು ದಿನ ಎಲ್ಲಿದ್ದ? ಅವರ ನಡುವೆ ಏನಾದ್ರೂ ಜಗಳ ಆಗಿತ್ತಾ? ಅವೆಲ್ಲಾ ನನಗೆ ಆ ಹೊತ್ತಿಗೆ ಕಾಡುವ ಪ್ರಶ್ನೆಗಳು ಆಗಿರಲಿಲ್ಲ, ಆಗಿದ್ದರೂ ಅವೇನು ತುಂಬಾ ಮಹತ್ವದ ಸಂಗತಿಗಳು ಅನ್ನಿಸುತ್ತಿರಲಿಲ್ಲ. ಆದರೆ ಊರ ತುಂಬಾ ರತ್ನಕ್ಕಳ ಬಗ್ಗೆ, ಅವಳ ಗಂಡನ‌ ಬಗ್ಗೆ ಅತಿರಂಜಿತ ಸುದ್ದಿಗಳು ಓಡಾಡುತ್ತಿದ್ದವು. ಒಂದಿಬ್ಬರು ಅಮ್ಮನ ಹತ್ತಿರವೂ ಅವಳ ಬಗ್ಗೆ ಚಾಡಿ ಹೇಳಿದ್ದರು. ಅಮ್ಮನದು ಎಂದಿನ ನಿರ್ಲಿಪ್ತತೆ. ತನ್ನ ಅಂತರಂಗದ ಗೆಳತಿಯ ಬಗ್ಗೆ ಇದ್ದ ನಂಬಿಕೆಯ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿದ್ದಿರಬೇಕು ಅಥವಾ ಕೆಲವು ತೀರಾ ಖಾಸಗಿ ಸಂಗತಿಗಳಲ್ಲಿ ಅತಿಕ್ರಮ ಪ್ರವೇಶ ಮಾಡಬಾರದು ಅಂತ ಅನ್ನಿಸಿರಬೇಕು.

ರತ್ನಕ್ಕ ತೋಟದ ಮನೆಗೆ ಬಂದ ನಂತರ ಅಮ್ಮನ ದಿನಚರಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿದ್ದವು. ತೋಟದ ಕೆಲಸಗಾರರಿಗೆ ಬುತ್ತಿ ಒಯ್ಯುವುದು, ಕೊಟ್ಟಿಗೆಯ ಮೇಲೊಂದು ನಿಗಾ ಇಡುವುದು, ದನಗಳಿಗೆ ಸೊಪ್ಪು, ಹುಲ್ಲು ತರುವುದು ಮುಂತಾದ ಕೆಲಸಗಳನ್ನೆಲ್ಲಾ ತಾನೇ ವಹಿಸಿಕೊಂಡು ಬಿಟ್ಟಿದ್ದಳು. ನನ್ನನ್ನು ಶಾಲೆಗೆ ಕರೆದೊಯ್ಯುವುದು ಮತ್ತು ಅಲ್ಲಿಂದ ಕರೆತರುವುದನ್ನೂ ಆಕೆಯೇ ಮಾಡುತ್ತಿದ್ದಳು. ಕಾಲುದಾರಿಯಲ್ಲಿ ಅವಳೊಂದಿಗೆ ಹೆಜ್ಜೆ ಹಾಕುತ್ತಿದ್ದರೆ ನನಗೆ ಅಮ್ಮನೇ ಕಿರುಬೆರಳಿಡಿದು ನಡೆಸುತ್ತಿದ್ದಾಳೇನೋ ಅನ್ನುವ ಭಾವ.
ಸಂಜೆ ನಾಲ್ಕಾಗುತ್ತಿದ್ದಂತೆ ಎಲ್ಲಾ ಕೆಲಸ ಬದಿಗಿಟ್ಟು ಆಕೆ ಒಂದು ಹಿಡಿ ನೆಲಗಡಲೆಯೊಂದಿಗೆ ನಮ್ಮ‌ ಮನೆಗೆ ಬರುತ್ತಿದ್ದಳು. ಕೊಟ್ಟಿಗೆಯಲ್ಲಿನ ದನಗಳನ್ನೊಮ್ಮೆ ನೋಡಿ, ಮೈದಡವಿ ಹಿತ್ತಲು ಮನೆಯ ಮೆಟ್ಟಿಲ ಮೇಲೆ ಕೂತು ನನ್ನ ಕೂದಲು ಬಿಚ್ಚಿ, ಸಣ್ಣ ಕತ್ತರಿಯಲ್ಲಿ ಹೇನು ಹುಡುಕುತ್ತಾ ಕಥೆ ಹೇಳುತ್ತಿದ್ದಳು. ಒಮ್ಮೊಮ್ಮೆ ಅಮ್ಮನೂ ಪಕ್ಕ ಕೂತು ಅವಳ ಕಥೆಗೆ ಕಿವಿಯಾಗುತ್ತಿದ್ದರು. ಮತ್ತೂ ಕೆಲವೊಮ್ಮೆ ಕಥೆ ಹೇಳುತ್ತಾ ಹೇಳುತ್ತಾ ಅವಳೇ ಕಥೆಯ ಪಾತ್ರವಾಗಿಬಿಡುತ್ತಿದ್ದಳು. ಬಿಳಿ ಬಣ್ಣದ ಕುದುರೆ ಏರಿ ಏಳು ಸಮುದ್ರ ದಾಟಿ ಬಂದ ರಾಜಕುಮಾರ ಪಾಪದ ರಾಜಕುಮಾರಿಯನ್ನು ಹೊತ್ತೊಯ್ದ ಕಥೆ ಹೇಳಿದ ಮೇಲೆ ಪ್ರತಿ ಬಾರಿಯೂ ಆಕೆ ಹನಿಗಣ್ಣಾಗುತ್ತಿದ್ದಳು. ಆಗೆಲ್ಲಾ ಅಮ್ಮನೂ ಮಾತು ಬೇಡವೆಂದು ಸುಮ್ಮನಾಗುತ್ತಿದ್ದಳು. ಯಾರಿಗೆ ಗೊತ್ತು ರತ್ನಕ್ಕಳ ಬಾಲ್ಯವೂ ಫೇರಿಟೇಲ್ ಗಳ ರಾಜಕುಮಾರಿಯ ಬದುಕಿನಷ್ಟೇ ಸಂಭ್ರಮದಿಂದ ಕೂಡಿತ್ತೇನೋ?

ಈ ಮಧ್ಯೆ ಅವಳ ನಡವಳಿಕೆಯಲ್ಲಿ ಸೂಕ್ಷ್ಮ ಬದಲಾವಣೆ ಗೋಚರಿಸಿತ್ತು. ಅರ್ಧ ತೋಳಿನ ರವಕೆಯ ಜಾಗದಲ್ಲಿ ಕೈ ಪೂರ್ತಿ ಮುಚ್ಚುವ, ಬೆನ್ನು ಮುಚ್ಚುವ ರವಕೆ ತೊಡಲಾರಂಭಿಸಿದ್ದಳು. ನನ್ನ ಶಾಲೆಗೆ ಕರೆದೊಯ್ಯವಲ್ಲೂ ಹಿಂದಿನ ಲವಲವಿಕೆ ಇರಲಿಲ್ಲ. ಅವಳ ಮನೆಯಲ್ಲಿ ಅರ್ಧರಾತ್ರಿಯವರೆಗೂ ಉರಿಯುತ್ತಿದ್ದ ದೀಪ, ಸದಾ ಬಾತುಕೊಂಡಿರುವ ಕಣ್ಣುಗಳು ನನಗೆ ಗೊತ್ತಿಲ್ಲದ ಕಥೆಯೊಂದಕ್ಕೆ ಮುನ್ನುಡಿ ಬರೆದಿತ್ತೇನೋ? ಯಾವ ನೋವನ್ನು ಮರೆಮಾಚಲೋ ಏನೋ ಸಹಜ ಸುಂದರಿ ರತ್ನಕ್ಕ ಕಣ್ಣಿಗೆ ಕಾಡಿಗೆ ಹಚ್ಚಲು ಶುರು ಮಾಡಿದ್ದಳು.‌ ಇವೆಲ್ಲದರ ಪರಿಣಾಮ ಅವಳ ಆರೋಗ್ಯದ ಮೇಲೂ ಬೀರಿತ್ತು. ಸದಾ ಲವಲವಿಕೆಯಿಂದಿರುತ್ತಿದ್ದವಳು ಮಂಕಾಗಿಬಿಟ್ಟಿದ್ದಳು. ಅಮ್ಮ ಅವಳ ಅಳಲಿಗೆ ಕಿವಿಯಾಗುವುದನ್ನು ಬಿಟ್ಟರೆ ಮತ್ತೇನೂ ಮಾಡಲು ಸಾಧ್ಯವಿರಲಿಲ್ಲ. ಒಮ್ಮೆ “ಇವೆಲ್ಲಾ ಯಾಕೆ ಬೇಕಿತ್ತು ರತ್ನಕ್ಕಾ” ಅಂತ ಅಮ್ಮ ಕೇಳಿದ್ದು ನನ್ನ ಕಿವಿಗೂ ಬಿದ್ದಿತ್ತು. ರತ್ನಕ್ಕ ಅಷ್ಟೇ ನೋವಿನಿಂದ “ನನ್ನ ಹಣೆಬರಹ ಅಕ್ಕಾ, ಬಿಡಿ” ಎಂದಿದ್ದಳು.

ಒಮ್ಮೆ ಗಂಟೆ ನಾಲ್ಕೂವರೆಯಾದರೂ ರತ್ನಕ್ಕ ಮನೆಗೆ ಬರದಿದ್ದುದನ್ನು ಕಂಡು ಅವಳನ್ನು ಹುಡುಕುತ್ತಾ ನಾನೇ ಅವಳ ಮನೆಗೆ ಹೋಗಿದ್ದೆ. ಶಾಲೆಯಲ್ಲಿ ಟೀಚರ್ ಕಲಿಸಿದ್ದ ‘ಒಂದು ಎರಡು ಬಾಳೆಲೆ ಹರಡು…’ ಹಾಡನ್ನು ಅವಳಿಗೆ ಹಾಡಿ ತೋರಿಸಬೇಕು, ಅವಳಿಂದ ಶಹಬ್ಬಾಸ್ ಗಿಟ್ಟಿಸಿಕೊಳ್ಳಬೇಕು ಅನ್ನುವ ಹಿಡನ್ ಅಜೆಂಡಾವೂ ಇತ್ತು‌. ಆದರೆ ಅಲ್ಲಿನ ದೃಶ್ಯ ನೋಡಿದ ಮೇಲೆ ನನ್ನ ಉತ್ಸಾಹವೆಲ್ಲಾ ಜರ್ರನೆ ಇಳಿದುಹೋಯಿತು.

ನಾನು ಹೋಗುವ ಮುಂಚೆ ಅವಳ ಮನೆಯಲ್ಲಿ ಏನು ನಡೆದಿತ್ತೋ ಗೊತ್ತಿಲ್ಲ. ಗಟ್ಟಿಗಿತ್ತಿ ರತ್ನಕ್ಕ ಗೋಡೆಗೆ ಹಣೆ ಚಚ್ಚಿಕೊಡು ಅಳುತ್ತಿದ್ದಳು. ಅವಳ ಗಂಡ ತನಗೂ ಅದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಬೀಡಿ ಎಳೆಯುತ್ತಾ ಎತ್ತಲೋ ನೋಡುತ್ತಿದ್ದ. ನಾನು ಸ್ವಲ್ಪ ಹೊತ್ತು ಅಲ್ಲೇ ನಿಂತೆ. ಮುಂದೇನು ಮಾಡಬೇಕು ಎನ್ನುವುದು ಅರ್ಥವಾಗದೆ ತಿರುಗಿ ಮನೆಗೆ ಬಂದೆ. ನನ್ನ ಅನ್ಯಮನಸ್ಕತೆಯನ್ನು ನೋಡಿ ಅಮ್ಮ “ಏನಾಯ್ತು? ರತ್ನಕ್ಕ ಎಲ್ಲಿ?” ಅಂತ ಕೇಳಿದ್ರು. ನಾನು ನಡೆದ ವೃತ್ತಾಂತವನ್ನೆಲ್ಲಾ ವಿವರಿಸಿದೆ. ಅಮ್ಮ ಏನೂ ಪ್ರತಿಕ್ರಿಯಿಸದೆ ನನ್ನ ಕರೆದುಕೊಂಡು ನಡುಮನೆಗೆ ಬಂದು ರೆಡಿಯೋ ಹಚ್ಚಿ ಕೂತರು.

ಮರುದಿನ ರತ್ನಕ್ಕ ಬಂದಾಗ ನಿನ್ನೆ ಯಾಕೆ ಅಳ್ತಿದ್ರಿ ಅಂತ ಕೇಳಬೇಕು ಅನ್ನಿಸುತ್ತಿತ್ತು. ಆದರೆ ಯಾಕೋ ಯಾವುದೋ ಅಂಜಿಕೆಯೊಂದು ನನ್ನನ್ನು ತಡೆಯುತ್ತಿತ್ತು. ಅಮ್ಮನ ಬಳಿ ಒಂದೆರಡು ಸಾರಿ ಕೇಳಿದೆನಾದರೂ ಅವರಿಂದಲೂ ಸ್ಪಷ್ಟ ಕಾರಣ ತಿಳಿಯಲಿಲ್ಲ. ಆದರೆ ಆ ಘಟನೆ ನಡೆದ ನಂತರ ಅವಳ ಮನೆಗೆ ನಾನು ಹೋಗುವುದಕ್ಕೆ ಅಮ್ಮ ಸಂಪೂರ್ಣ ನಿಷೇಧ ಹೇರಿದರು. ಇಷ್ಟಾಗಿಯೂ ನಮ್ಮ ಮತ್ತು ರತ್ನಕ್ಕಳ ಸಂಬಂಧ ಹಾಗೇ ಉಳಿದಿತ್ತು.

ಆದರೆ ಕಾರಣಾಂತರಗಳಿಂದ ಕೆಲವು ತಿಂಗಳುಗಳ ಬಳಿಕ ಆ ಊರನ್ನೂ, ತೋಟವನ್ನೂ, ಮನೆಯನ್ನೂ ಮಾರಬೇಕಾಗಿ ಬಂತು. ತೋಟಕ್ಕೆ ಹಿಡಿದ ಹುಳು ಭಾದೆ, ನಮ್ಮಿಬ್ಬರನ್ನೇ ಅಲ್ಲಿ ಉಳಿಸಲಾಗದ ಅನಿವಾರ್ಯತೆ ಎಲ್ಲವನ್ನೂ ತೊರೆದು ಬರುವಂತೆ ಮಾಡಿತು. ಅಜ್ಜ, ಅಪ್ಪ, ಅಮ್ಮ ಮನೆ ಖಾಲಿ ಮಾಡುತ್ತಿದ್ದರೆ ನನಗೆ ರತ್ನಕ್ಕಳನ್ನು ಬಿಟ್ಟು ಹೇಗೆ ಹೋಗಲಿ ಎನ್ನುವುದೇ ದೊಡ್ಡ ಚಿಂತೆಯಾಗಿತ್ತು. ಸಾಮಾನು ಪ್ಯಾಕ್ ಮಾಡುವುದರಲ್ಲಿ ರತ್ನಕ್ಕ ಅಮ್ಮನಿಗೆ ಸಹಾಯ ಮಾಡುತ್ತಿದ್ದಳಾದರೂ ಆಗಾಗ ದುಃಖ ತಡೆಯಲಾರದೆ ಧುಮುಗುಡುತ್ತಿದ್ದಳು. ಅಮ್ಮನಾದರೂ ಅಷ್ಟೇ, ಎಲ್ಲಾ ಭಾವಗಳಿಗೆ ಕಟ್ಟೆ ಕಟ್ಟಿರುವಂತೆ ಮುಗುಮ್ಮಾಗಿದ್ದರು. ಎಲ್ಲಾ ಮುಗಿಸಿ, ಆ ತೋಟಕ್ಕೆ, ಮನೆಗೆ, ಊರಿಗೆ ವಿದಾಯ ಹೇಳಿ ವ್ಯಾನ್ ಹತ್ತಬೇಕು ಅನ್ನುವಷ್ಟರಲ್ಲಿ ತನ್ನ ಮನೆಯಿಂದ ಓಡಿ ಬಂದ ರತ್ನಕ್ಕ ಒಂದು ಬೆಳ್ಳಿ ಕಾಲ್ಗೆಜ್ಜೆ ತಂದು ನನಗೆ ತೊಡಿಸಿ ನಕ್ಕಳು. ಅವಳ ಕಣ್ಣ ಕಾಡಿಗೆ ಕದಡಿತ್ತು, ಅವಳು ಹೇಳುತ್ತಿದ್ದ ಕಥೆಗಳಲ್ಲಿನ ಎಲ್ಲಾ ಕಷ್ಟ ಪರಿಹರಿಸುವ ದೇವತೆಯಂತೆಯೇ ನನಗವಳು ಕಾಣುತ್ತಿದ್ದಳು.

ಊರ ತುಂಬಾ ರತ್ನಕ್ಕಳ ಬಗ್ಗೆ, ಅವಳ ಗಂಡನ‌ ಬಗ್ಗೆ ಅತಿರಂಜಿತ ಸುದ್ದಿಗಳು ಓಡಾಡುತ್ತಿದ್ದವು. ಒಂದಿಬ್ಬರು ಅಮ್ಮನ ಹತ್ತಿರವೂ ಅವಳ ಬಗ್ಗೆ ಚಾಡಿ ಹೇಳಿದ್ದರು. ಅಮ್ಮನದು ಎಂದಿನ ನಿರ್ಲಿಪ್ತತೆ. ತನ್ನ ಅಂತರಂಗದ ಗೆಳತಿಯ ಬಗ್ಗೆ ಇದ್ದ ನಂಬಿಕೆಯ ಮುಂದೆ ಉಳಿದೆಲ್ಲಾ ಸಂಗತಿಗಳು ಗೌಣವಾಗಿದ್ದಿರಬೇಕು ಅಥವಾ ಕೆಲವು ತೀರಾ ಖಾಸಗಿ ಸಂಗತಿಗಳಲ್ಲಿ ಅತಿಕ್ರಮ ಪ್ರವೇಶ ಮಾಡಬಾರದು ಅಂತ ಅನ್ನಿಸಿರಬೇಕು.

ಮುಂದೆ ಹೊಸ ಜಾಗ, ಹೊಸ ಮನೆ, ಹೊಸ ಕುತೂಹಲಗಳು ರತ್ನಕ್ಕಳ ನೆನಪುಗಳನ್ನು ಇಂಚಿಂಚಾಗಿ ಕಬಳಿಸಿದ್ದರೂ ಅವಳಿನ್ನೂ ನನ್ನ ಮನದಿಂದ ಪೂರ್ತಿಯಾಗಿ ಮಾಯವಾಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಅವಳು ಕಾಡಿದಾಗೆಲ್ಲಾ ಝಲ್ಲೆಂದು ಸದ್ದು ಮಾಡುತ್ತಿದ್ದ ಕಾಲ್ಗೆಜ್ಜೆ ನಿಶಬ್ದವಾಗಿಬಿಡುತ್ತಿತ್ತು. ಸ್ವಲ್ಪ ದೊಡ್ಡವಳಾದಂತೆ ರತ್ನಕ್ಕ, ಅವಳ ಬದುಕು ನನಗೆ ಒಂದು ದೊಡ್ಡ ಮಿಸ್ಟರಿ ಅಂತ ಅನಿಸುತ್ತಿತ್ತು. ಈ ಬಗ್ಗೆ ಅಮ್ಮನ ಹತ್ರ ಕೇಳಿದರೆ ಹೆಚ್ಚಿನ ಮಾಹಿತಿಯೇನೂ ಸಿಗುತ್ತಿರಲಿಲ್ಲ.

ಈಗ್ಗೆ ಮೂರು ವರ್ಷಗಳ ಹಿಂದೆ ಒಂದು ಮುಂಜಾನೆ ಮನೆಯ ಬಾಲ್ಕನಿಯಲ್ಲಿ ಕೂತಿದ್ದಾಗ ಮನೆಗೆ ಬೆನ್ನು ಹಾಕಿ ತಿಳಿ ಹಸಿರು ಸೀರೆ ಉಟ್ಟ ಹೆಂಗಸೊಬ್ಬಳು ನಡೆಯುತ್ತಿದ್ದಳು. ನನ್ನ ಬಾಯಿಯಿಂದ ಅನಾಯಾಸವಾಗಿ “ರತ್ನಕ್ಕ” ಎನ್ನುವ ಪದ ಹೊರಬಿತ್ತು. ಅಲ್ಲೇ ಇದ್ದ ಅಮ್ಮ ತಿರುಗಿ ನೋಡಿದರು. ಓಡಿ ಹೋಗಿ ಆ ಹೆಂಗಸನ್ನು ನಿಲ್ಲಿಸಿ ನೋಡಿದರೆ ಆಕೆ ನನ್ನ ರತ್ನಕ್ಕ ಆಗಿರಲಿಲ್ಲ. ನಿರಾಸೆಯೊಂದು ಮೆದುಳನ್ನು ದಾಟಿ ಹೃದಯದಲ್ಲಿ ಸ್ಥಾಪಿತವಾಯಿತು.

ಅಲ್ಲಿಂದ ನಂತರ, ಒಮ್ಮೆ ರತ್ನಕ್ಕನನ್ನು ನೋಡಬೇಕು, ಮಾತಾಡಬೇಕು ಅಂತ ಬಲವಾಗಿ ಅನಿಸತೊಡಗಿತು. ಹೇಗೂ ಅಪ್ಪನನ್ನು ಒಪ್ಪಿಸಿ ಒಂದು ಶುಭ ಶುಕ್ರವಾರ ಅವಳನ್ನು ಹುಡುಕಿಕೊಂಡು ಹೊರಟೆವು. ತೊರೆದು ಬಂದ ಊರು, ಜನ, ತೋಟ ಮನದಂಗಳದಲ್ಲಿ ಹಾದುಹೋಗುತ್ತಿತ್ತು. ದಾರಿಗುಂಟ ರತ್ನಕ್ಕ ಸಿಗಲಿ ಅಂತ ಎಷ್ಟು ಬಾರಿ ದೇವರನ್ನು ಕೇಳಿಕೊಂಡಿದ್ದೇನೋ ಗೊತ್ತಿಲ್ಲ.

ನಾವಿದ್ದ ಮನೆ ತಲುಪಿದಾಗ ಅಲ್ಲಿ ನಮ್ಮಿಂದ ಆ ಜಾಗ ಕೊಂಡವರು ಅಲ್ಲಿರಲಿಲ್ಲ. ಅದನ್ನು ಮತ್ಯಾರಿಗೋ ಮಾರಿ ಅವರೂ ಊರು ತೊರೆದಿದ್ದರು. ಪಕ್ಕದ ಮನೆಯವರಲ್ಲಿ ರತ್ನಕ್ಕಳ ಬಗ್ಗೆ ವಿಚಾರಿಸಿದಾಗ ಆಕೆ ಊರ ಹೊರವಲಯದಲ್ಲಿ ವಾಸಿಸುತ್ತಿದ್ದಾಳೆ ಅಂದರು. ಅಲ್ಲಿ ಹೋದಾಗ ಅವಳ ಗಂಡ ಇರಲಿಲ್ಲ. ಹರೆಯದ ಹುಡುಗನೊಬ್ಬ ಮಲಗಿದ್ದ ರತ್ನಕ್ಕನಿಗೆ ಊಟ ಮಾಡಿಸುತ್ತಿದ್ದ. ನಾವು ಹೋದದ್ದು ನೋಡಿ ಎದ್ದು ನಿಂತ, ಅಪ್ಪ ಅವನಿಗೆ ನಮ್ಮ ಪರಿಚಯ ಹೇಳಿ ಒಮ್ಮೆ ರತ್ನಕನನ್ನು ಮಾತಾಡಿಸಬೇಕಿತ್ತು ಅಂದರು. ಅವನು “ಅಮ್ಮ ನಿಮ್ಮ ಬಗ್ಗೆ ತುಂಬಾ ಹೇಳುತ್ತಿದ್ದಳು, ಆಕೆಯೀಗ ಮಾತಾಡುವ ಪರಿಸ್ಥಿತಿಯಲ್ಲಿಲ್ಲ, ಪಾರ್ಶ್ವವಾಯು ಅವಳ ಮಾತನ್ನು ಕಸಿದುಬಿಟ್ಟಿದೆ” ಅಂದ. ನಾನು ಅಷ್ಟು ಹೊತ್ತಿಗಾಗುವಾಗ ರತ್ನಕ್ಕ ಮಲಗಿದ್ದ ಹಾಸಿಗೆ ಬಳಿ ಕೂತಿದ್ದೆ. ನಡುಗುತ್ತಲೇ ಅವಳ ಕೈ ನನ್ನ ಕೈಯೊಳಗೆ ಇರಿಸಿಕೊಂಡು, ಮಾತಿನ ಮಲ್ಲಿ ರತ್ನಕ್ಕ ಈಗ ಮಾತಾಡಲಾರಳು ಅನ್ನುವ ಸತ್ಯವನ್ನು ಅರಗಿಸಿಕೊಳ್ಳಲಾಗದೆ ಮುಖ ತಿರುವಿದೆ. ಅಮ್ಮ ಅವಳ ಹೆಗಲು ಬಳಸಿ ಕೂರಿಸಿ “ರತ್ನಕ್ಕಾ” ಎಂದು ಆರ್ದ್ರವಾಗಿ ಕರೆದಳು. ಎಷ್ಟು ವರುಷಗಳಿಂದ ಇದೊಂದು ಕರೆಗಾಗಿ ಕಾಯುತ್ತಿದ್ದಳೇನೋ ಎಂಬಂತೆ ರತ್ನಕ್ಕ ಇಷ್ಟಗಲ ಬಾಯಿ ಬಿಟ್ಟು ನಕ್ಕಳು. ಅವಳ ನಗು ನೋಡಿ ನನಗೆ ಒಳಗೊಳಗೇ ಅಳು. ಅಪ್ಪ ನಮ್ಮ ಮೂವರನ್ನು ಬಿಟ್ಟು ಅವಳ ಮಗನನ್ನು ಕರೆದುಕೊಂಡು ಊರು ನೋಡಲು, ಹಳೆಯ ಗೆಳೆಯರನ್ನು ಭೇಟಿಯಾಗಲು ಹೋದ. ಅದೆಷ್ಟು ಹೊತ್ತು ನಾವು ಅವಳ ಬಳಿ ಕುಳಿತಿದ್ದೆವೋ ಗೊತ್ತಿಲ್ಲ, ಅಪ್ಪ ಬಂದು ಹೊರಡೋಣವೇ ಎಂದು ಕೇಳಿದಾಗಷ್ಟೇ ಸಮಯದ ಅರಿವಾದ್ದು. ಊರು ತೊರೆಯುವಾಗ ಅವಳು ಕೊಟ್ಟಿದ್ದ ಪುಟ್ಟ ಗೆಜ್ಜೆಯನ್ನು ಮತ್ತೆ ಅವಳೆದುರು ಹಿಡಿದೆ. ಮಗುವಂತೆ ನಕ್ಕು ಬಿಟ್ಟಳು. ಅವಳ ನಗುವನ್ನು ತುಂಬಿಕೊಂಡು ನಾವಲ್ಲಿಂದ ತಿರುಗಿ ನೋಡದೆ ಹೊರಟು ಬಂದೆವು. ನೋಡಿದರೆಲ್ಲಿ ಅವಳ ಕಣ್ಣ ಹನಿ ನನ್ನನ್ನು ಕಟ್ಟಿ ಹಾಕುತ್ತದೋ ಅನ್ನುವ ಭಯವದು.


ಮತ್ತೆ ಅವಳನ್ನು ಭೇಟಿಯಾಗಲು ಆಗಲೇ ಇಲ್ಲ. ಭೇಟಿಯಾಗಬೇಕು ಅಂದುಕೊಳ್ಳುತ್ತಲೇ ತಿಂಗಳುಗಳು ಉರುಳಿದವು. ಒಂದು ಸಂಜೆ ನಾನು ಎಕ್ಸಾಂ ಮುಗಿಸಿ ಮನೆಗೆ ಬಂದಾಗ ಅಮ್ಮ “ರತ್ನಕ್ಕ ಹೋಗ್ಬಿಟ್ಳು, ಅಪ್ಪ ಅವಳ ಅಂತಿಮ ದರ್ಶನಕ್ಕೆ ಹೋಗಿದ್ದಾರೆ” ಅಂದಳು. ನನಗೆ ಕರುಳು ಬಳ್ಳಿ ಕಳಚಿದ ಭಾವ. ಅಳಲೂ ಆಗದೆ, ಅಳದಿರಲೂ ಆಗದ ವಿಚಿತ್ರ ಭಾವದಲ್ಲಿ ಬಿದ್ದು ಬಿಟ್ಟಿದ್ದೆ. ಅವಳೊಂದಿಗೆ ಕಳೆದ ಬಾಲ್ಯ, ಅವಳ ನೆನಪುಗಳೊಂದಿಗೆ ಕಳೆದ ಕೌಮಾರ್ಯ, ಅನಿರೀಕ್ಷಿತ ಭೇಟಿ ಇವೆಲ್ಲಾ ನನ್ನ ಬದುಕಿನ ಬುತ್ತಿಯ ಬೆಚ್ಚನೆಯ ಕೈ ತುತ್ತುಗಳು. ಫೇರಿಟೇಲ್ ಗಳ ರಾಜಕುಮಾರಿಯಾಗಿ, ಕಣ್ಣ ಕೊನೆಯ ಹನಿಯ ತೊಡೆವ ತೋರುಬೆರಳಾಗಿ, ಪ್ರಣತಿಯಾಗಿ, ನೂರು ಬಣ್ಣಗಳುಳ್ಳ ಚಿಟ್ಟೆಯ ರೆಕ್ಕೆಯಾಗಿ ರತ್ನಕ್ಕ ಸದಾ ತಾಕುತ್ತಿರುತ್ತಾಳೆ, ಥೇಟ್ ಅವಳು ಕೊಟ್ಟ ಕಾಲ್ಗೆಜ್ಜೆಯ ಘಲುವಂತೆ.