ರಾಜ ಕುವರ ಪಂತನ ದೆಸೆಯಿಂದ ತಮ್ಮ ಸನ್ಯಾಸಿ ದಿರಿಸಿನ ಬದಲು ಪ್ಯಾಂಟ್ ತೊಡಬೇಕಾಗಿ ಬಂದಿದ್ದರಿಂದ ಮಾರಿಸರಿಗೆ ಕಿರಿಕಿರಿಯಾಗಿ ಅವನೊಂದಿಗೆ ಸ್ವಲ್ಪ ನಿಷ್ಠುರವಾಗೇ ನಡೆದುಕೊಳ್ಳುತ್ತಾರೆ. ಆದರೆ ಅವರ ನೇರ, ದಿಟ್ಟ, ಕಪಟರಹಿತ ನಡೆ ನುಡಿಗಳು ಅಪ ಪಂತನ ಮನ ಸೂರೆಗೊಳಿಸುತ್ತದೆ. ಇಂತಹ “ಜಾಕ್ ಆಫ್ ಆಲ್” ತನಗೆ ಸಲಹಾರ್ಥಿಯಾಗಿ ದೊರಕಿದರೆ ಬರ ಪೀಡಿತ ಔಂಧ್ ರಾಜ್ಯದ ಹಳ್ಳಿಗಳನ್ನು ಸುಭಿಕ್ಷಗೊಳಿಸಬಹುದೆಂಬ ಕನಸು ಗರಿಗೆದರುತ್ತದೆ. ಭರತಾನಂದರಿಗೂ ಸಹ ಆದರ್ಶವಾದಿಯಾದ ಈ ಯುವಕನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ.
ವಲಸೆ ಹಕ್ಕಿ ಬರೆದ ಲೇಖನ

 

ನೀವು ತೊಂಬತ್ತರ ದಶಕದ ಆಸ್ಕರ್ ಪುರಸ್ಕೃತ ಚಿತ್ರ ಫಾರೆಸ್ಟ್ ಗಂಪ್ ನೋಡಿರುವಿರಾದರೆ, ಕೃತ್ರಿಮವನರಿಯದ ಮೊಗ್ಗಿನ ಮನಸಿನ ನಾಯಕನ ಪಾತ್ರದ ಕೌಶಲ್ಯಪೂರ್ಣ ಚಿತ್ರಣ ನಿಮ್ಮ ಮನಸ್ಸಿಗೆ ನಾಟಿರುತ್ತದೆ. ಗಾಂಪರ ಗುಂಪಿಕೆ ಸೇರಿದವನೆನ್ನುವ ನಾಯಕ ತನ್ನ ಎದುರಿನ ವಸ್ತುಸ್ಥಿತಿಯನ್ನು ಯಥಾವತ್ತಾಗಿ ಸ್ವೀಕರಿಸುತ್ತ, ಅಪ್ರಯತ್ನಪೂರ್ವಕವಾಗಿ ಅದ್ಭುತವಾದ
ಸಾಧನೆಗಳಲ್ಲಿ ಭಾಗಿಯಾಗುತ್ತಾನೆ. ಸಾಮಾನ್ಯರ ಕೈಗೆಟುಕದ ಗಣ್ಯಾತಿಗಣ್ಯರ ಕೈ ಕುಲುಕುತ್ತಾನೆ. ಇಗೊಟಿಸಂನ ಉನ್ಮೇಷ ಉನ್ಮಾದಗಳಿಗೆ ಬಲಿಯಾಗದ ಪಾತ್ರದ ಚಿತ್ರಣ ಮಂತ್ರ ಮುಗ್ಧವೆನಿಸುತ್ತದೆ.

ಹೀಗೆ ನನಗೆ ಫಾರೆಸ್ಟ್ ಗಂಪನ ನೆನಪಾದದ್ದು, ಅವನಂತೆಯೇ ಅಪ್ರತಿಮ ಕೈಂಕರ್ಯಗಳಲ್ಲಿ ಕಾಕತಾಳಿಯವೋ ಎಂಬಂತೆ ಭಾಗಿಯಾಗಿ, ಇಪ್ಪತ್ತನೆಯ ಶತಮಾನದ ಭಾರತದ ಆಧ್ಯಾತ್ಮಿಕ ಕ್ಷೇತ್ರದ ಗಣ್ಯಾತಿಗಣ್ಯರ ಒಡನಾಟ ಇಟ್ಟುಕೊಂಡಿದ್ದ ಕರ್ಮಯೋಗಿ ಮಾರಿಸ್ ಫ್ರೀಡ್ಮನ್ ಅಲಿಯಾಸ್ ಭರತಾನಂದರ ಬಗೆಗಿನ ಉಪನ್ಯಾಸವನ್ನು ಕೇಳಿದಾಗ.

ಸೆರೆಂಡಿಪಿಟಿಗಳ ಸರಣಿ

ಆಂಗ್ಲ ಭಾಷೆಯಲ್ಲಿ ಸೆರೆಂಡಿಪಿಟಿ ಎನ್ನುವ ಸುಂದರ ಪದವೊಂದಿದೆ. ಅನಿರೀಕ್ಷಿತವಾಗಿ ಒದಗಿ ಬಂದ ಅವಕಾಶಗಳು ಕೊನೆಗೆ ಫಲಪ್ರದವಾಗಿ ಪರಿಣಮಿಸಿದರೆ, ಆ ಸಂದರ್ಭವನ್ನು ಸೆರೆಂಡಿಪಿಟಿ ಎನ್ನಬಹುದು. ಮಾರಿಸ್ ಜೀವನದಲ್ಲೂ ನಡೆದ ಸೆರೆಂಡಿಪಿಟಿಗಳ ಸರಣಿಯು ಆತ ಭಾರತದ ಬಡವರ ಭಾಗ್ಯೋದಯಕ್ಕಾಗಿ ದಣಿವಿಲ್ಲದೆ ದುಡಿದ ಭರತಾನಂದನಾಗಲು ಕಾರಣವಾಗಿರಬಹುದು.

(ಸರ್ ಮಿರ್ಜಾ ಇಸ್ಮಾಯಿಲ್)

ಪೋಲೆಂಡ್ ನಲ್ಲಿ ಹುಟ್ಟಿ ಬೆಳೆದ ಮಾರಿಸ್ ವೃತ್ತಿಯಿಂದ ಎಲೆಕ್ಟ್ರಿಕಲ್ ಇಂಜಿನಿಯರ್. ಒಳ್ಳೆಯ ಚುರುಕು ಬುದ್ಧಿಯ ಜಿಜ್ಞಾಸು. ಓದು ಮುಗಿವ ಹೊತ್ತಿಗೆ ತಾನೇ ಆವಿಷ್ಕರಿಸಿದ ನೂರಾರು ಯಂತ್ರೋಪಕರಣಗಳ ಪೇಟೆಂಟ್‌ಗಳ ಒಡೆಯ. ಹಲವಾರು ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡಬಲ್ಲ ವಾಗ್ಮಿ. ಆಕಸ್ಮಿಕವಾಗಿ ಒಮ್ಮೆ ದೊರಕಿದ, ವಿಶ್ವ ವಿಖ್ಯಾತ ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕವೊಂದರಿಂದ, ಗುಪ್ತಗಾಮಿನಿಯಂತಿದ್ದ ಆಧ್ಯಾತ್ಮಿಕ ತುಡಿತ ನಿರ್ದಿಷ್ಟವಾದ ರೂಪುರೇಷೆಗಳನ್ನು ಪಡೆಯುತ್ತದೆ. ಪುಸ್ತಕದಿಂದ ಶುರುವಾದ ಕೃಷ್ಣಮೂರ್ತಿಯವರ ಪರಿಚಯ ನಿಕಟ ಒಡನಾಟ, ಗೆಳೆತನದಲ್ಲಿ ಪರ್ಯಾವಸಾನಗೊಳ್ಳುತ್ತದೆ.

ಸೆರೆಂಡಿಪಿಟಿಗಳ ಸರಣಿಯ ಮುಂದಿನ ಕಂತು ಪ್ಯಾರಿಸಿನ ರೈಲು ನಿಲ್ದಾಣದಲ್ಲಿ ಸಿಗುತ್ತದೆ. ಲಂಡನ್ ಅಧಿವೇಶನಕ್ಕೆಂದು ಬಂದಿದ್ದ ಗಾಂಧೀಜಿ ಪ್ಯಾರಿಸಿನ ಮಾರ್ಗವಾಗಿ ಭಾರತಕ್ಕೆ ಹಿಂದಿರುಗುತ್ತಿದ್ದರು. ಆಗಿನ ಕಾಲದಲ್ಲಿ ಲಂಡನ್ ನಿಂದ ಭಾರತಕ್ಕೆ ಪಯಣಿಸಲು ಪ್ಯಾರಿಸಿನ ಮುಖಾಂತರ ಗ್ರೀಸ್ ವರಗೆ ರೈಲಿನಲ್ಲಿ ಪಯಣಿಸಿ ಅಲ್ಲಿಂದ ಹಡಗು ಹಿಡಿದು ಮುಂದೆ ಸಾಗಬೇಕಿತ್ತು. ಅಲ್ಲೇ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾರಿಸ್ ಗಾಂಧೀಜಿ ಟ್ರೈನ್ ಬದಲಿಸುವ ಕೆಲವೇ ನಿಮಿಷಗಳ ಅವಧಿಯಲ್ಲಿ ಹೇಳಿ ಮಾಡಿಸಿದಂತೆ ರೈಲು ನಿಲ್ದಾಣಕ್ಕೆ ಆಗಮಿಸಿದರು. ಗುಂಪಲ್ಲಿ ಗೋವಿಂದನಾಗಿ ನೋಡಿದ ಕೇಳಿದ ಗಾಂಧಿಯ ಮಾತು ಕತೆ, ವ್ಯಕ್ತಿತ್ವ, ಆದರ್ಶ ಇವೆಲ್ಲ ಮಾರಿಸ್ಸಿನ ಮನದಲ್ಲಿ ಭಾರತದ ಬಗ್ಗೆ ಅನೂಹ್ಯವಾದ ಸೆಳೆತ ಉಂಟಾಗುವಂತೆ ಮಾಡಿತು.

ಸರಿ ಸುಮಾರು ಅದೇ ಸಮಯದಲ್ಲಿ, ಮೈಸೂರು ಸಂಸ್ಥಾನದ ದಿವಾನರಾದ ಸರ್ ಮಿರ್ಜಾ ಇಸ್ಮಾಯಿಲ್ ರವರು ಬೆಂಗಳೂರಿನ ವಿದ್ಯುತ್ ಕಾರ್ಖಾನೆಯನ್ನು ಆಧುನೀಕರಣಗೊಳಿಸುವ ಸಲುವಾಗಿ ಐರೋಪ್ಯ ದೇಶಗಳಲ್ಲಿ ಸಮರ್ಥ ಕಾರ್ಯ ನಿರ್ವಾಹಕನೊಬ್ಬನ ಹುಡುಕಾಟದಲ್ಲಿದ್ದರು. ವಜ್ರದ ವ್ಯಾಪಾರಿಯು ತನ್ನ ಮುಂದಿರುವ ಕಲ್ಲಿನ ಕಲೆ ಬೆಲೆಗಳನ್ನು ಸುಲಭವಾಗಿ ಗುರುತಿಸುವಂತೆ, ಮಿರ್ಜಾ ಸಾಹೇಬರು ಮಾರಿಸಿನ ಅಸಾಧಾರಣ ಪ್ರತಿಭೆಯನ್ನು ಗುರುತಿಸಿದರು. “ಮಿಸ್ಟರ್ ಫ್ರೀಡ್ಮನ್, ತಾವು ಮೈಸೂರು ಸಂಸ್ಥಾನಕ್ಕೆ ಬಂದು ನಮ್ಮ ಕಾರ್ಖಾನೆಗಳ ಅಭಿವೃದ್ಧಿಗಾಗಿ ಸಲಹೆಗಳನ್ನೂ ಕೊಡಬಹುದಾಗಿದ್ದಲ್ಲಿ ಎಷ್ಟು ಚೆನ್ನಿತ್ತು” ಎಂದು ನಾಜೂಕಾಗಿ ತಮ್ಮ ಅಭಿಲಾಷೆಯನ್ನು ವ್ಯಕ್ತಪಡಿಸಿದರು. ತತ್ ಕ್ಷಣವೇ ಅವರ ಸಲಹೆಗೆ ಒಡಂಬಡಿಕೆ ಕೊಟ್ಟ ಮಾರಿಸ್ ಕೆಲಸಕ್ಕೆ ರಾಜೀನಾಮೆ ನೀಡಿ ನಿಂತ ಕಾಲಲ್ಲೇ ಅವರ ಜೊತೆ ಬೆಂಗಳೂರಿಗೆ ಹೊರಟರಂತೆ.

ಬೆಂಗಳೂರಿನಲ್ಲಿ ಭರತಾನಂದ

ಬೆಂಗಳೂರಿನ ವಿದ್ಯುತ್ ಕಾರ್ಖಾನೆಯ ಕೆಲಸದೊಂದಿಗೆ ಮಾರಿಸರ ಆಧ್ಯಾತ್ಮಿಕ ಕಿಚ್ಚು ಸಹ ಜೊತೆ ಜೊತೆಯಾಗಿಯೇ ಬೆಳೆದು ಸಂನ್ಯಾಸ ಧಾರಣೆ ಮಾಡಿ ಭರತಾನಂದ ಎಂದು ನಾಮಾಂಕಿತರಾದರು. ತಲೆ ಬೋಳಿಸಿಕೊಂಡು, ಕಾವಿ ಧರಿಸಿ ಕೆಲಸಕ್ಕೆ ಹಾಜರಾಗುವ ಭರತಾನಂದರ ನಡೆ ನುಡಿಗಳು ಸಹಜವಾಗಿಯೇ ಮೇಲಧಿಕಾರಿಗಳಿಗೆ ಇರಿಸು ಮುರಿಸು. ದುಡಿದದ್ದೆಲ್ಲ ದಾನ ಮಾಡಿ, ದಿನವಿಡೀ ಮೇಲ್ವಿಚಾರಣೆ ಮಾಡುವ ನೌಕರರ ಮನೆಗಳಲ್ಲೇ ಭಿಕ್ಷಾನ್ನ ಬೇಡುವುದು ಕಾರ್ಖಾನೆಯ ಶಿಸ್ತು ಬದ್ಧತೆಗಳಿಗೆ ಒಪ್ಪವಾದುದಲ್ಲ ಎಂಬ ವಿವಾದವೆದ್ದಿತು. ಮಾರಿಸರೇನೋ ತಟ್ಟನೆ ರಾಜೀನಾಮೆ ಕೊಡಲು ತಯ್ಯಾರು, ಆದರೆ ಮತ್ತೆ ಅವರಂತಹ ದಕ್ಷ ನಿರ್ವಾಹಕ ಸುಲಭವಾಗಿ ದೊರೆಯುವರೇ? ಕಡೆಗೆ ಮ್ಯಾನೇಜ್ಮೆಂಟ್ ಹಾಗು ಮಾರಿಸರ ನಡುವೆ ಒಂದು ಒಪ್ಪಂದವಾಯಿತು. ಐರೋಪ್ಯರು ಅಥವಾ ಇತರ ಗಣ್ಯ ವ್ಯಕ್ತಿಗಳು ಕಾರ್ಖಾನೆಗೆ ಬಂದಾಗ ಮಾರಿಸ್ ಬಿಸಿನೆಸ್ ಸೂಟ್ ನಲ್ಲಿ ಕಡ್ಡಾಯವಾಗಿ ಇರಬೇಕು. ಬಾಕಿಯಂತೆ ಅವರ ಸನ್ಯಾಸಿ ದಿರಿಸಲಿರಬಹುದೆಂದು.

ಅಪ ಪಂತ್

(ಅಪ ಪಂತ್)

ಭಾರತದ ಒಕ್ಕೂಟದೊಂದಿಗೆ ವಿಲೀನವಾಗುವ ಮೊದಲು ಮಹಾರಾಷ್ಟ್ರದ ಔಂಧ್ ರಾಜ್ಯ ಮೈಸೂರು ಸಂಸ್ಥಾನದಂತೆಯೇ ಬ್ರಿಟೀಷರ ಆಳ್ವಿಕೆಯಲ್ಲಿತ್ತು. ಬ್ರಿಟಿಷ್ ಪ್ರಭುಗಳಿಂದ ಮಾದರಿ ಸಂಸ್ಥಾನವೆಂದು ಹೊಗಳಿಸಿಕೊಳ್ಳುತ್ತಿದ್ದ ಮೈಸೂರಿನ ಮುಂದೆ ಔಂಧ್ ಯಾವುದೇ ರೀತಿಯ ಗರಿಮೆ ಹಿರಿಮೆಗಳಿಲ್ಲದ ಅತ್ಯಂತ ಸಾಧಾರಣವಾದ ಪುಟ್ಟ ’ಪ್ರಿನ್ಸ್ಲೀ ಸ್ಟೇಟ್’! ಔಂಧ್ ರಾಜ್ಯದ ಸರಳ ಸಂಭಾವಿತ ರಾಜನಾದ ಭಾವನ ರಾಯರ ಸುಪುತ್ರ ಅಪ ಪಂತ್. ತನ್ನ ರಾಜ್ಯದ ಜನತೆಯ ಕಲ್ಯಾಣಕ್ಕಾಗಿ ದುಡಿಯುವ ಛಲವಿರುವ ಹೊಳಪು ಕಂಗಳ ನವ ತರುಣ, ಆದರ್ಶವಾದಿ.

ವಿದೇಶದಲ್ಲಿ ಬ್ಯಾರಿಸ್ಟರ್ಗಿರಿ ಪಡೆದು ಹಿಂದಿರುಗಿದ ಅಪ ಪಂತನನ್ನು, ಭಾವನ ರಾಯರು ಆಡಳಿತದ ರೀತಿ ನೀತಿಗಳನ್ನು ಸರಿಯಾದ ರೀತಿಯಲ್ಲಿ ಕಲಿಯಲೆಂದು ಮೈಸೂರು ಸಂಸ್ಥಾನಕ್ಕೆ ಅಪ್ರೆಂಟಿಸ್ ನಂತೆ ಕಳಿಸುತ್ತಾರೆ. ಹೀಗೆ ರಾಜ್ಯದ ವಿವಿಧ ಸಂಸ್ಥೆಗಳು ಹಾಗು ಕಾರ್ಖಾನೆಗಳ ಕಾರ್ಯ ವೈಖರಿಗಳ ಅವಲೋಕನ ಮಾಡುತ್ತಾ ಅಪ ಪಂತನ ಮುಲಾಕಾತ್ ಮಾರಿಸರ ಜೊತೆ ಬೆಂಗಳೂರಿನ ಕಾರ್ಖಾನೆಯಲ್ಲಾಗುತ್ತದೆ.

ರಾಜ ಕುವರ ಪಂತನ ದೆಸೆಯಿಂದ ತಮ್ಮ ಸನ್ಯಾಸಿ ದಿರಿಸಿನ ಬದಲು ಪ್ಯಾಂಟ್ ತೊಡಬೇಕಾಗಿ ಬಂದಿದ್ದರಿಂದ ಮಾರಿಸರಿಗೆ ಕಿರಿಕಿರಿಯಾಗಿ ಅವನೊಂದಿಗೆ ಸ್ವಲ್ಪ ನಿಷ್ಠುರವಾಗೇ ನಡೆದುಕೊಳ್ಳುತ್ತಾರೆ. ಆದರೆ ಅವರ ನೇರ, ದಿಟ್ಟ, ಕಪಟರಹಿತ ನಡೆ ನುಡಿಗಳು ಅಪ ಪಂತನ ಮನ ಸೂರೆಗೊಳಿಸುತ್ತದೆ. ಇಂತಹ “ಜಾಕ್ ಆಫ್ ಆಲ್” ತನಗೆ ಸಲಹಾರ್ಥಿಯಾಗಿ ದೊರಕಿದರೆ ಬರ ಪೀಡಿತ ಔಂಧ್ ರಾಜ್ಯದ ಹಳ್ಳಿಗಳನ್ನು ಸುಭಿಕ್ಷಗೊಳಿಸಬಹುದೆಂಬ ಕನಸು ಗರಿಗೆದರುತ್ತದೆ. ಭರತಾನಂದರಿಗೂ ಸಹ ಆದರ್ಶವಾದಿಯಾದ ಈ ಯುವಕನ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತದೆ.

ಆ ದಿನಗಳ ಮಟ್ಟಿಗೆ ಕ್ರಾಂತಿಕಾರಿ ಅನಿಸಿಕೊಂಡ ಆವಿಷ್ಕಾರಗಳನ್ನು ಬಡ ರೈತರಿಗೆ ಸರಳ ರೀತಿಯಲ್ಲಿ ತಲುಪಿಸುವ ತರಾವರಿ ಯೋಜನೆಗಳ ಚರ್ಚೆ, ವಿಷಯ ವಿನಿಮಯಗಳೊಂದಿಗೆ ಇಬ್ಬರಲ್ಲೂ ಗಾಢವಾದ ಗೆಳೆತನವಾಗುತ್ತದೆ. ಬೆಂದಕಾಳೂರಿನ ನೆಲದ ಋಣವು ಮುಗಿದು ಭರತಾನಂದರು ಅಪ ಪಂತನೊಡನೆ ಮಹಾರಾಷ್ಟ್ರದೆಡೆ ತೆರಳುತ್ತಾರೆ.

ಔಂಧ್ ಪ್ರಯೋಗ

ಸಾವಿರದ ಒಂಬೈನೂರ ಮೂವತ್ತರ ದಶಕದಲ್ಲಿ ಶೋಲಾಪುರ್, ಸತರ, ಮತ್ತು ಬಿಜಾಪುರ ಜಿಲ್ಲೆಗಳನ್ನೊಳಗೊಂಡ ಔಂಧ್ ಯಾವುದೇ ರೀತಿಯ ಸಂಪನ್ಮೂಲಗಳಿಲ್ಲದ ಬರಪೀಡಿತ ರಾಜ್ಯವಾಗಿತ್ತು. ಭಾವನ ರಾಯರು ನೂರಾರು ರೀತಿಯ ರಾಜಕೀಯ, ಸಾಮಾಜಿಕ, ಧಾರ್ಮಿಕ ಯೋಜನೆಗಳನ್ನು ಹಮ್ಮಿಕೊಂಡು ಔಂಧಿನ ಏಳ್ಗೆಗಾಗಿ ಶ್ರಮಿಸುತ್ತಿದ್ದರೂ ಯಾವುದೇ ರೀತಿಯ ರಾಜ್ಯಾದಾಯ ಇಲ್ಲದೆ ಇರುವುದು ರಾಜನ ಕೈ ಕಟ್ಟಿ ಹಾಕಿತ್ತು. ಕಡು ಬಡತನದ ಬೇಗೆಯಲ್ಲಿ ಬೇಯುವ ತನ್ನ ಜನತೆಯ ಹಾಹಾಕಾರದ ಬಿಸಿ ರಾಜನನ್ನು ಸುಡುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಔಂಧಿಗೆ ಕಾಲಿಟ್ಟ ಮಾರಿಸರ ಆತ್ಮಸ್ಥೈರ್ಯ ಧೈರ್ಯ ಸಲಹೆಗಳ ಒತ್ತಾಸೆಯು ರಾಜ ತನ್ನ ಮನಃಸಾಕ್ಷಿಗೆ ಹೊಂದಾಣಿಕೆಯಾಗುವಂತಹ ದಿಟ್ಟ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಪ್ರೇರೇಪಿಸಿತು.

೧೯೩೯ ರ ನವೆಂಬರ್ ತಿಂಗಳ ಒಂದು ಶುಭ ಮುಹೂರ್ತದಲ್ಲಿ ಭಾವನ ರಾಯರು ಗದ್ದುಗೆಯಿಂದ ಕೆಳಗಿಳಿದು, ಗಾಂಧೀಜಿಯ ’ಪಂಚಾಯತ್ ರಾಜ್’ ಮಾದರಿಯನ್ನುಸರಿಸಿ ತನ್ನ ರಾಜ್ಯದ ಜನತಾ ಜನಾರ್ಧರಿಗೆ ಆಡಳಿತದ ಉತ್ತರದಾಯಿತ್ವವನ್ನು ಕೊಡಲು ನಿರ್ಧರಿಸಿದರು. ಭಾರತದ ಚರಿತ್ರೆಯ ಪುಟಗಳಲ್ಲೆಲ್ಲೂ ಹೀಗೆ ರಾಜ ತನ್ನ ಪ್ರಜೆಗಳಿಗಾಗಿ ರಾಜ್ಯ ಬಿಟ್ಟುಕೊಟ್ಟ ನಿದರ್ಶನ ಕಂಡುಬರುವುದಿಲ್ಲ.

ಗಾಂಧೀಜಿಯ ನೆರವಿನಿಂದ ಹೊಸ ಸಂವಿಧಾನವೇನೋ ಬಹು ಬೇಗನೆ ಜಾರಿಗೆ ಬಂದಿತು, ಆದರೆ ತಲೆ ತಲಾಂತರಗಳಿಂದಲೂ ಆಡಳಿತಶಾಹಿ ವರ್ಗದ ಕಟ್ಟಲೆಗಳಿಗೆ ಬಾಗಿ ಬೆಂಡಾದ ಜನರಿಗೆ ತಮ್ಮ ಒಳಿತಿಗಾಗಿ ತಾವೇ ಯೋಜನೆಗಳನ್ನು ಹಮ್ಮಿಕೊಳ್ಳುವ ಸೃಜನಶೀಲತೆ ಹಾಗು ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸುವುದೇ ದೊಡ್ಡ ಸವಾಲಾಯಿತು. ಭರತಾನಂದ ಹಾಗು ಅಪ ಪಂತರ ಮುಂದಾಳತ್ವದಲ್ಲಿ ಹಲವಾರು ಸ್ವಯಂ ಸೇವಕರು ಆದರ್ಶದ ಕಿಚ್ಚು ಹೊತ್ತಿಸಿಕೊಂಡು ಕಷ್ಟ ನಷ್ಟಗಳನ್ನು ಲೆಕ್ಕಿಸದೆ ಹಳ್ಳಿಗಳಲ್ಲಿ ಅವಿರತವಾಗಿ ದುಡಿದರು ಹಾಗು ಸಾಕಷ್ಟು ಸಾಮಾಜಿಕ, ಶೈಕ್ಷಣಿಕ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರಲು ಸಫಲರೂ ಆದರು.

ಒಂಭತ್ತು ವರುಷಗಳ ಕಾಲ ನಡೆದ ಔಂಧ್ ಪ್ರಯೋಗ ಫಲಪ್ರಧವಾಯಿತೋ ಇಲ್ಲವೋ ಅನ್ನುವುದು ತುಂಬಾ ಸಂಕೀರ್ಣವಾದ ಪ್ರಶ್ನೆ. ಹೌದು ಅಥವಾ ಇಲ್ಲ ಎಂದು ಉತ್ತರಿಸಲು ಆಗದು. ಬಹುಷಃ ಬೇರು ಬಿಡಲು ಹೆಚ್ಚಿನ ಸಮಯ ಸಿಕ್ಕಿದ್ದಲ್ಲಿ ಈ ಪ್ರಶ್ನೆಗೆ ನಿಖರವಾದ ಉತ್ತರ ದೊರಕುತ್ತಿತ್ತೋ ಏನೋ. ೧೯೪೭ರಲ್ಲಿ ಔಂಧ್ ರಾಜ್ಯ ಭಾರತದ ಒಕ್ಕೂಟದಲ್ಲಿ ವಿಲೀನವಾಯಿತು.

ಆಕಸ್ಮಿಕವಾಗಿ ಒಮ್ಮೆ ದೊರಕಿದ, ವಿಶ್ವ ವಿಖ್ಯಾತ ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿಯವರ ಪುಸ್ತಕವೊಂದರಿಂದ, ಗುಪ್ತಗಾಮಿನಿಯಂತಿದ್ದ ಆಧ್ಯಾತ್ಮಿಕ ತುಡಿತ ನಿರ್ದಿಷ್ಟವಾದ ರೂಪುರೇಷೆಗಳನ್ನು ಪಡೆಯುತ್ತದೆ. ಪುಸ್ತಕದಿಂದ ಶುರುವಾದ ಕೃಷ್ಣಮೂರ್ತಿಯವರ ಪರಿಚಯ ನಿಕಟ ಒಡನಾಟ, ಗೆಳೆತನದಲ್ಲಿ ಪರ್ಯಾವಸಾನಗೊಳ್ಳುತ್ತದೆ.

ದೋ ಆಂಖೇ ಬಾರಹ್ ಹಾಥ್

೧೯೫೭ ರಲ್ಲಿ ತೆರೆ ಕಂಡ, ಹಿಂದಿ ಸಿನೆಮಾದ ದಿಗ್ಗಜ ನಿರ್ದೇಶಕ ವಿ ಶಾಂತಾರಾಮ್ ಅವರ ಮ್ಯಾಗ್ನಂ ಓಪಸ್ ಸಿನಿಮಾ ಎಂದು ಖ್ಯಾತಿಗಳಿಸಿದ “ದೋ ಆಂಖೇ ಬಾರಹ್ ಹಾಥ್” ಸಿನಿಮಾದ ಪ್ರೊಟಾಗನಿಸ್ಟ್ ಬೇರಾರು ಅಲ್ಲ, ಅದು ಸ್ವಾಮಿ ಭರತಾನಂದರೇ! ಮಹಾರಾಷ್ಟ್ರದ ಸಾಂಗ್ಲಿ ತಾಲ್ಲೂಕಿನಲ್ಲಿ ಭರತಾನಂದರ ಕೋರಿಕೆಯ ಮೇರೆಗೆ ರಾಜ ಭಾವನ ರಾಯರು ಸ್ವತಂತ್ರಪುರ ಎಂಬ ಖೈದಿಗಳ ಕಾಲೋನಿಯನ್ನು ತೆರೆದರು. ಗುರುತರವಾದ ಅಪರಾಧಗಳೆಸಗಿ ಸಲಾಕೆಗಳ ಒಳಗೆ ಸೇರಿದ ’ಹೋಪ್ಲೆಸ್ ಕೇಸ್’ ಗಳನ್ನು ಮತ್ತೆ ಸಮಾಜದಲ್ಲಿ ಪುನಃಸ್ಥಾಪನೆ ಮಾಡಲು ತೆರೆದಂತಹ ಮುಕ್ತ ವಾತಾವರಣದ ಕಾರಾಗೃಹ ಅದು. ಕೃಷಿ ಮತ್ತು ಬದುಕು ನಡೆಸಿಕೊಂಡು ಹೋಗಲು ನೆರವಾಗುವಂತಹ ಅನೇಕ ರೀತಿಯ ಕಾಮಗಾರಿಗಳನ್ನು ಭರತಾನಂದರೆ ಖುದ್ದಾಗಿ ಕೈದಿಗಳಿಗೆ ಅವರ ಜೊತೆಯಲ್ಲಿಯೇ ವರ್ಷಾನುಗಟ್ಟಲೆ ಇದ್ದು ಹೇಳಿಕೊಟ್ಟರು.

ಭರತಾನಂದರ ನಿಷ್ಕಾಮ್ಯ ಕೈಂಕರ್ಯದಿಂದ ಪ್ರೇರಿತರಾಗಿ ಸಾಹಿತಿ ಮಾಡ್ಗುಲ್ಕರ್ ಅವರು ಬರೆದ ಕತೆಯೇ “ದೋ ಆಂಖೇ ಬಾರಹ್ ಹಾಥ್”. ಸ್ವತಃ ಭರತಾನಂದರೆ ಈ ಸಿನಿಮಾದಲ್ಲಿ ಟೆಕ್ನಿಕಲ್ ಕನ್ಸಲ್ಟೆಂಟ್ ಆಗಿ ಕೂಡ ಕೆಲಸ ಮಾಡಿ ನಿರ್ದೇಶಕರಿಗೆ ಸಲಹೆ ಸಹಕಾರಗಳನ್ನು ನೀಡಿದ್ದರು. ಪ್ರಚಾರವನ್ನು ಬಯಸದ ಭರತಾನಂದರು ತಮ್ಮ ಹೆಸರನ್ನು ಮಾತ್ರ ಸಿನೆಮಾ ಕ್ರೆಡಿಟ್ಟಿನಲ್ಲಿ ಹಾಕಲು ಒಪ್ಪಿಗೆ ಕೊಡಲಿಲ್ಲ.

ದಲೈ ಲಾಮಾ

(ದಲೈ ಲಾಮಾ)

ಐವತ್ತರ ದಶಕದಂಚಿನಲ್ಲಿ ಚೀನಾ ದಬ್ಬಾಳಿಕೆಯ ವಿರುದ್ಧವಾಗಿ ಟಿಬೆಟ್ಟಿನಲ್ಲಿ ದಂಗೆಗಳಾಗುತ್ತಿದ್ದವು. ಎಲ್ಲೆಡೆ ಉದ್ರಿಕ್ತ ವಾತಾವರಣದ ಮೋಡ ಕವಿದಿತ್ತು. ಮಾವೋನ ಪ್ರಬಲವಾದ ಸೇನೆಯ ಮುಂದೆ ಸಾಧು ಸಂತರ ನೆಲೆ ಬೀಡು ಯಾವುದೇ ರೀತಿಯಲ್ಲೂ ಸರಿಸಾಟಿಯಾಗಲಿಲ್ಲ. ಚೀನಾದ ದಬ್ಬಾಳಿಕೆಗೆ ತಲೆಬಾಗದವರು ದೇಶಭ್ರಷ್ಟರಾಗದೆ ವಿಧಿಯಿರಲಿಲ್ಲ. ಸಹಸ್ರಾರು ಜನರು ೧೯೫೯ರಲ್ಲಿ ಟಿಬೆಟ್ ತೊರೆದು ನಾನಾ ಖಂಡಗಳಿಗೆ ವಲಸೆ ಹೊರಟರು. ಆಗಿನ್ನೂ ಹದಿಹರೆಯದ ಹೊಸ್ತಿಲನ್ನು ದಾಟಿರದ ಹದಿನಾಲ್ಕನೆಯ ಧರ್ಮಗುರು ದಲೈ ಲಾಮಾ ತನ್ನ ಹಿಂಬಾಲಕರೊಂದಿಗೆ ಭಾರತದ ಆಶ್ರಯ ಪಡೆಯಲು ನಿರ್ಧರಿಸಿದರು. ಆದರೆ ಅದು ಅಷ್ಟು ಸುಲಭ ಸಾಧ್ಯವಾದ ವಿಷಯವಾಗಿರಲಿಲ್ಲ. ನವ ಭಾರತದ ಆಡಳಿತದ ನೂರೆಂಟು ತರಲೆ ತಾಪತ್ರಯದಲ್ಲಿ ವ್ಯಸ್ತರಾಗಿದ್ದ ಪ್ರಧಾನ ಮಂತ್ರಿ ನೆಹರೂಗೆ ಚೀನಾ ಕೆಣಕುವಂತಹ ಕೆಲಸ ಮಾಡಲು ಇಷ್ಟವಿರಲಿಲ್ಲ. ಭರತಾನಂದರ ಸಲಹೆಯಂತೆ ನೆಹರೂ ದಲೈ ಲಾಮಾರ ಮುಂದೆ ಶರತ್ತೊಂದನ್ನಿಟ್ಟರು. ಅದರಂತೆ ದಲೈ ಲಾಮಾ ಒಬ್ಬ ಧಾರ್ಮಿಕ ಗುರುವಾಗಿ ಭಾರತಕ್ಕೆ ಬರಬಹುದೇ ವಿನಹ ಟಿಬೆಟ್ಟಿನ ರಾಜಕೀಯ ಸಮಸ್ಯೆಗಳ ’ಪೋಸ್ಟರ್ ಬಾಯ್’ ಆಗಿ ಬರುವಂತಿಲ್ಲ ಎಂದು. ಈ ಷರತ್ತಿಗೆ ದಲೈ ಲಾಮಾ ಒಪ್ಪಿಗೆ ಕೊಟ್ಟರು.

ಭರತಾನಂದರ ಆಪ್ತ ಸ್ನೇಹಿತ ಅಪ ಪಂತ ಆಗ ಸಿಕ್ಕಿಂ ರಾಜ್ಯದಲ್ಲಿ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಇಲಾಖೆಯಲ್ಲಿ ಅಧಿಕಾರ ವಹಿಸಿದ್ದರು. ಭರತಾನಂದರ ಸಲಹೆಯ ಮೇರೆಗೆ ಆತ ದಲೈ ಲಾಮಾ ಮತ್ತು ಸಂಗಡಿಗರು ಭಾರತಕ್ಕೆ ಓಡಿ ಬಂದ ವಿಷಯ ಗುಲ್ಲಾಗುವುದನ್ನು ತಪ್ಪಿಸಲು, ಧಾರ್ಮಿಕ ಗುರುವಿಗೆ ಸಲ್ಲಬೇಕಾದ ವಿಧಿ ವಿಧಾನಗಳಿಂದ ಅವರನ್ನು ಬರಮಾಡಿಕೊಂಡು ಸ್ಥಳೀಯ ಮೊನೆಸ್ಟರಿಯೊಂದರಲ್ಲಿ ಉಳಿಯುವ ವ್ಯವಸ್ಥೆ ಮಾಡಿದರು.

ಭರತಾನಂದರು ದೇಶಾದ್ಯಂತ ಹರಡಿದ್ದ ತನ್ನ ಸಿರಿವಂತ ಮಿತ್ರರಿಂದ ಹಣ ಹಾಗು ನೆಲ ಪಡೆದು ದೇಶದ ವಿವಿಧ ಭಾಗಗಳಲ್ಲಿ ಟಿಬೆಟಿಯನ್ ಕಾಲೊನಿಗಳು ತಲೆ ಎತ್ತುವಂತೆ ಮಾಡಿದರು. ’ಧರ್ಮಶಾಲಾ’ದ ನಂತರ ಅತಿ ದೊಡ್ಡ ಟಿಬೆಟಿಯನ್ ಕಾಲೋನಿಯನ್ನು ಹೊಂದಿರುವ ಕರ್ನಾಟಕದ ಬೈಲಕುಪ್ಪೆಯನ್ನು ಇಲ್ಲಿ ನೆನೆಯಬಹುದು.

ಹಲವು ವರುಷಗಳ ನಂತರ ದಲೈ ಲಾಮಾ ಪೋಲ್ಯಾಂಡಿನಲ್ಲಿ‌ಒಮ್ಮೆ ಭಾಷಣ ಮಾಡುತ್ತ ಮಾರಿಸರ ಪ್ರಸ್ತಾವನೆ ಮಾಡಿ ಅವರನ್ನು ಕೊಂಡಾಡಿದರೆ ಸಭಿಕರ ಮುಖಗಳ ತುಂಬಾ ಪ್ರಶ್ನಾರ್ಥ ಚಿಹ್ನೆ. ಪೋಲಿಷ್ ಜನತೆಗೆ ತಮ್ಮವನೇ ಆದ ಮಾರಿಸ್ ಫ್ರೀಡ್ಮನ್ ಮಾಡಿದ ಅಮಾನುಷ ಕೆಲಸಗಳ ಅರಿವೇ ಇಲ್ಲ! ಮನ್ನಣೆಯ ದಾಹ ಸ್ವಲ್ಪವೂ ಹತ್ತಿರ ಬರದಂತೆ ಎಚ್ಚರ ವಹಿಸುತ್ತಿದ್ದ ಭರತಾನಂದರ ಅನುಪಮ ಕೈಂಕರ್ಯಗಳ ಸುಳಿವೆಲ್ಲ ಮೀನಿನ ಹೆಜ್ಜೆಗಳಂತೆ ಮಂಗಮಾಯ.

ಟು ನೇಮ್ ಆ ಫ್ಯು(ಮೋರ್)!

ಅದ್ವೈತ ವೇದಾಂತ ವಲಯಗಳಲ್ಲಿ ಚಿರಪರಿಚಿತರಾಗಿರುವ ನಿಸರ್ಗದತ್ತ ಮಹಾರಾಜ್, ರಮಣ ಮಹರ್ಷಿ, ಸ್ವಾಮಿ ರಾಮ್ ದಾಸರಂತಹ ಘಟಾನುಘಟಿಗಳ ನಿಕಟವರ್ತಿ. ಗಾಂಧಿಯ ಜೊತೆ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದು ‌ಅಲ್ಲದೆ ಸೇವಾಗ್ರಾಮ್ ಹಮ್ಮಿಕೊಳ್ಳುತ್ತಿದ್ದ ವಿವಿಧ ಯೋಜನೆಗಳ ಮುಂಚೂಣಿಯಲ್ಲಿ ಮಾರಿಸ್ ಇದ್ದೇ ಇರುತ್ತಿದ್ದರು. ನಿರರ್ಗಳವಾಗಿ ರಷಿಯನ್ ಭಾಷೆ ಮಾತನಾಡುತ್ತಿದ್ದರಿಂದ ಭಾರತ ಸರ್ಕಾರದ ’ಎಕನಾಮಿಕ್ ಡೆಲಿಗೇಷನ್’ ತಂಡದೊಂದಿಗೆ ಮಾಸ್ಕೊಗೆ ಪಯಣ. ಪಟ್ಟಿ ಮಾಡುತ್ತಾ ಹೋದಂತೆ ಹತ್ತು ಹಲವಾರು ಕ್ಷೇತ್ರಗಳಲ್ಲಿ ಅಮೋಘ ಸಾಧನೆಗಳನ್ನು ಮಾಡಿದ ಭಾರತಾನಂದರ ಕಾರ್ಯತತ್ಪರತೆಯ ಬಗ್ಗೆ ಅಚ್ಚರಿಯಾಗುತ್ತದೆ.

ʼಯೋಗಹ ಕರ್ಮಸು ಕೌಶಲಂʼ ಎಂದು ತಮ್ಮ ನೆಚ್ಚಿನ ಸೂಕ್ತಿಯನ್ನು ಒಡನಾಡಿಗಳಿಗೆ ಬೋಧಿಸಿದ್ದು ಮಾತ್ರವಲ್ಲ ಅದನ್ನೇ ಶತಾಯ ಗತಾಯ ಅನುಸರಿಸಿ ಸಾರ್ಥಕ ಬದುಕು ನಡೆಸಿದ ಮಾರಿಸ್ ಫ್ರಿಡ್ಮನ್ ಯಾವುದೇ ಸದ್ದು ಗದ್ದಲವಿಲ್ಲದೆ ತಮ್ಮ ೭೫ನೆಯ ವಯಸ್ಸಿನಲ್ಲಿ ಇಹಲೋಕದ ಪಯಣ ಮುಗಿಸಿದರು.

ದೋ ಆಂಖೇ ಬಾರಹ್ ಹಾಥ್ ಸಿನಿಮಾದ “ಎ ಮಾಲಿಕ್ ತೇರೇ ಬಂದೆ ಹಮ್” ಹಾಡಿನ ಸಾಲುಗಳು ಭರತಾನಂದರ ದಿಟ್ಟ ಹಾಗು ನಿಸ್ಪೃಹ ವ್ಯಕ್ತಿತ್ವಕ್ಕೆ ಕವಿ ನೀಡಿರುವ ಶ್ರದ್ಧಾಂಜಲಿಯಂತೆ ಅನಿಸುತ್ತದೆ.