ಶ್ರೀನಿಧಿಯ ಪಾಕ ಪ್ರಾವೀಣ್ಯತೆಯನ್ನು ಮೆಚ್ಚಿ ಹೊಗಳುವ, ಅವನು ಬಡಿಸಿದ್ದನ್ನೆಲ್ಲಾ ಅಪ್ಪಟ ಭಾರತೀಯರಂತೆ ಬರಿಗೈಯಲ್ಲಿ ಕಲಸಿ ತಿನ್ನುವ, ಬೆರಳುಗಳನ್ನು ಚೀಪಿ ಚೀಪಿ ಆಸ್ವಾದಿಸುವ ಕ್ಯಾಥರೀನ್ ಆಸ್ಟ್ರೇಲಿಯಾದ ಸಿಡ್ನಿಯಿಂದ ಬಂದವಳಾದರೂ ನೆರೆಯ ತೈವಾನ್ ಮೂಲದವಳು. ಅವಳ ತಾಯಿಯ ತವರಾದ ತೈವಾನ್ ಅವಳಿಗೆ ಮುಖ ಚಹರೆಯನ್ನು, ಅದರದೇ ಉಚ್ಛಾರದ ಮಾತುಗಾರಿಕೆಯನ್ನೂ ಕೊಟ್ಟಿತ್ತು. ಅಂತಹುದೇ ಉಚ್ಛಾರದಲ್ಲಿ ಡೇಟಿಂಗ್ ಗೆ ಕರೆದಾಗ ಶ್ರೀನಿಧಿ ಗಲಿಬಿಲಿಯಾಗಿದ್ದಷ್ಟೇ ಅಲ್ಲ, ಗೊಂದಲಕ್ಕೂ ಬಿದ್ದಿದ್ದ. ಅವನ ಗೊಂದಲ ತಿಳಿಗೊಳಿಸಿದ್ದು ಕ್ಯಾಥರೀನೇ!!
ಡಾ. ಆನಂದ್ ಋಗ್ವೇದಿ ಬರೆದ ಈ ವಾರದ ಕಥೆ “ಈ ಕಥೆಗೊಂದು ಶೀರ್ಷಿಕೆ ಬೇಕೆ”

 

“ಹೇಯ್ ನ್ಯಾಡಿ. ಈ ವೀಕೆಂಡ್ ಫ್ರೀ ಇದ್ದೀಯಾ? ನಾವಿಬ್ರೂ ಡೇಟಿಂಗ್ ಹೋಗೋಣ್ವಾ”
ಎಂದು ತನ್ನ ಟಿಪಿಕಲ್ ತೈವಾನಿ ಉಚ್ಛಾರದಲ್ಲಿ ಕ್ಯಾಟಿ ಯಾನೆ ಕ್ಯಾಥರೀನ್ ಕೇಳಿದಾಗ ನ್ಯಾಡಿ ಯಾನೆ ಶ್ರೀನಿಧಿ ಅಪ್ರತಿಭನಾಗಿದ್ದ! ಅವ ಕೆಮಿಸ್ಟ್ರಿ ಲ್ಯಾಬಿನಲ್ಲಿ ಟೈಟ್ರೇಷನ್ ಮಾಡುತ್ತಿದ್ದವ ಈ ಗಲಿಬಿಲಿಯಿಂದಾಗಿ ಬ್ಯೂರೆಟ್ಟಿನ ತಿರುಪನ್ನು ತುಸು ಜೋರಾಗಿ ತಿರುಗಿಸಿ, ಹನಿ ಹನಿ ಬೀಳುತ್ತಿದ್ದ ಕೆಮಿಕಲನ್ನು ಸರ್ರನೇ ಬೀಕರಿಗೆ ಹೊಯ್ದಂತಾಗಿ ಅದರಲ್ಲಿದ್ದ ದ್ರಾವಣ ತಕ್ಷಣ ಗುಲಾಬಿ ಬಣ್ಣಕ್ಕೆ ತಿರುಗಿತ್ತು. ಆ ಬಣ್ಣವೇ ನಿಧಿಯ ಮುಖದಲ್ಲಿ ಪ್ರತಿಫಲಿಸಿ ನಾಚಿಕೆಯಿಂದ ಕೆಂಪಾಗಿದ್ದ ಅವನ ಗಲ್ಲದ ಬಣ್ಣಕ್ಕೆ ಬೇರೆಯದೇ ಕಾರಣ ಕೊಟ್ಟು ಮುಚ್ಚಿತ್ತು.

“ಶೆಡ್ಯೂಲ್ ನೋಡಿ ಹೇಳ್ತೀನಿ” ಎಂದು ಕ್ಯಾಟಿಯನ್ನು ಸಾಗ ಹಾಕಿ ನಿಧಿ ಸಂಜೆ ರೂಮಿಗೆ ಬಂದಾಗಲೂ ಕಿವಿಯಲ್ಲಿ ಅದೇ ಮಾತು, ಮನದಲ್ಲಿ ಅಯೋಮಯ ಸ್ಥಿತಿ.

“ಡೇಟಿಂಗ್ ಅಂದ್ರೆ ಹನಿಮೂನ್ ತರಹಾನಾ!?” ನಿಧಿಯ ಪ್ರಶ್ನೆಗೆ ನಕ್ಕಿದ್ದ ರೂಂಮೇಟ್ ವಿಲಿಯಂ.

“ಇದೇನೋ, ಡೇಟಿಂಗ್ ಬಗ್ಗೆ ಕೇಳ್ತಿದ್ದೀಯ!?” ಎಂದು ನಸು ನಕ್ಕ ವಿಲಿಯಂ ಗೆ ‘ಹೀಗೇ ಸುಮ್ನೇ ಕೇಳಿದೆ’ ಎಂದೇನೋ ಸಬೂಬು ನೀಡಿದರೂ ಆ ಮಾತಿನಲ್ಲಿ ವಿಲಿಯಂ ಗೆ ಅಷ್ಟೇ ಅಲ್ಲ, ಸ್ವತಃ ನಿಧಿಗೂ ನಂಬಿಕೆ ಇರಲಿಲ್ಲ!

ಭಾರತ ಎಂಬೋ ದೇಶದ ಕರ್ನಾಟಕ ಎಂಬ ರಾಜ್ಯದ ಚಿತ್ರದುರ್ಗ ಜಿಲ್ಲೆಯ ಪುಟ್ಟ ಹಳ್ಳಿಯಿಂದ ಬಂದ ಶ್ರೀನಿಧಿ ಮತ್ತು ಇದೇ ಇಂಗ್ಲೆಂಡ್ ನಲ್ಲಿ ಹುಟ್ಟಿ ಬೆಳೆದ ವಿಲಿಯಂ ಓದಲೆಂದೇ ನಾಟ್ಟಿಗ್ಹ್ಯಾಂಮ್ ಗೆ ಬಂದು ಸೇರಿದ್ದವರು. ಗಣಿತ ಕಷ್ಟವೆಂದರೂ ಬಿಡದೇ ತಮ್ಮ ಒಬ್ಬನೇ ಮಗನಿಗೆ ಇಂಜಿನಿಯರಿಂಗ್ ಓದಿಸಬೇಕು ಎಂಬ ಅಪ್ಪನ ಹಠಕ್ಕೆ ಮಣಿದು ಗಣಿತ ಹೆಚ್ಚಿಲ್ಲದ ಕೆಮಿಕಲ್ ಇಂಜಿನಿಯರಿಂಗ್ ಮಾಡಿದ್ದವ ಶ್ರೀನಿಧಿ. ಬಿ.ಇ., ಪದವಿ ಪಡೆದರೂ ಕೆಲಸ ಸಿಗದೇ ಮನೆಯಲ್ಲೇ ಇದ್ದ ಮಗನನ್ನು ಸ್ವತಃ ತಂದೆಯೇ ಮಾತನಾಡಿಸುತ್ತಿರಲಿಲ್ಲ! ಮನೆಯವರಿಗಿಂತ ಹೆಚ್ಚು ದೇವರ ಬಳಿಯೇ ಮಾತನಾಡುತ್ತಿದ್ದ ಅಮ್ಮನ ಬಳಿ ನಿಧಿ ತನ್ನ ಅಳಲನ್ನು ತೋಡಿಕೊಂಡರೂ, ಇಹದ ಈ ತರತಮವನ್ನು ಸರಿಪಡಿಸಲು ಅಮರ್ತ್ಯೆಯಾದ ಆಕೆಗೂ ಸಾಧ್ಯವಾಗಿರಲಿಲ್ಲ. ಆಗ ನೆರವಿಗೆ ಬಂದಿದ್ದೇ ಈ ನಾಟ್ಟಿಗ್ಹ್ಯಾಂಮ್ ಯೂನಿವರ್ಸಿಟಿ. ಯಾವುದೇ ವಿಜ್ಞಾನದ ಸ್ನಾತಕ ಪದವಿ ಪಡೆದವರೂ ಇಲ್ಲಿ ತನ್ನ ಆಸಕ್ತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಓದಬಹುದೆಂಬ ಅವಕಾಶವನ್ನು ಗೆಳೆಯನೊಬ್ಬ ಹೇಳಿದ್ದೇ, ನಿಧಿ ನೆಟ್ಟಿನಲ್ಲಿ ಜಾಲಾಡಿ ಯೂನಿವರ್ಸಿಟಿಯ ವಿವರ ಪಡೆದು ಅರ್ಜಿ ಗುಜರಾಯಿಸಿದ್ದ.

ಯೂನಿವರ್ಸಿಟಿಯ ಎಲ್ಲಾ ಬೇಕು ಬೇಡಗಳಿಗೆ ಉತ್ತರಿಸಿ ಆಯ್ಕೆಯಾದಾಗ ಸ್ಪಂದಿಸುವ ಅನಿವಾರ್ಯತೆ ನಿಧಿಯ ಅಪ್ಪ ರಂಗಪ್ಪನವರದು. ತನ್ನ ಸಹೋದ್ಯೋಗಿ ಸ್ನೇಹಿತರ ಮಕ್ಕಳು ಇಂಜಿನಿಯರಿಂಗ್ ಓದಿ ಮುಗಿಸಿದ್ದೇ ಎಂ ಎನ್ ಸಿ ಗಳಲ್ಲಿ, ಬಿಪಿಓಗಳಲ್ಲಿ ಕೆಲಸ ಗಿಟ್ಟಿಸಿಕೊಂಡು, ಮೂವತ್ತು ವರ್ಷಗಳ ನಂತರ ಮುಟ್ಟಿರುವ ತಮ್ಮ ಸಂಬಳದ ಮೂರು ಪಟ್ಟು ಮೊತ್ತವನ್ನು ಮೊದಲ ತಿಂಗಳೇ ಪಡೆದು, ಆರು ತಿಂಗಳಲ್ಲೇ ಪ್ರಾಜೆಕ್ಟ್ ಅಂತ ವಿದೇಶಗಳಿಗೆ ಹೋಗಿ ಬಂದು ಕಂಪನಿಯನ್ನೆ ಬದಲಿಸುವ ಪ್ರಸ್ತಾಪ ಮಾಡುತ್ತಿದ್ದಾಗ ವಿಸ್ಮಿತರಾಗುತ್ತಿದ್ದರು. ಆದರೆ ತಮ್ಮ ಮುದ್ದಿನ ಮಗ ಇಂಜಿನಿಯರಿಂಗ್ ಮೊದಲ ದರ್ಜೆಯಲ್ಲಿ ಪಾಸಾದರೂ ಕ್ಯಾಂಪಸ್ ಸೆಲೆಕ್ಟ್ ಆಗದೇ ಮನೆಯಲ್ಲೇ ಉಳಿದು, ಕನ್ನಡ ಮೇಜರ್‌ ಬಿಎ ಓದಿದವರಂತೆ ಕತೆ ಕಾದಂಬರಿ ಹಿಡಿದು ಕೂರತೊಡಗಿದ್ದಾಗ ಕೊತಕೊತನೇ ಕುದ್ದಿದ್ದರು. ಅವರಿಗೆ ಮಗ ಕೆಲಸಕ್ಕೆ ಸೇರಿ ಡಾಲರ್‌ ಗಳನ್ನು ತಂದುಕೊಡಬೇಕಿತ್ತು. ಕೆಮಿಕಲ್ ಇಂಜಿನಿಯರಿಂಗ್ ನವರಿಗೆ ಕ್ಯಾಂಪಸ್ ಸೆಲೆಕ್ಷನ್ ಇರೋದಿಲ್ಲ ಎಂಬುದೇನೂ ಅವರಿಗೆ ಮುಖ್ಯವಲ್ಲ. ನನ್ನ ಮಗ ಇಂತಹ ದೇಶದಲ್ಲಿದ್ದಾನೆ ಎಂದು ಹೆಮ್ಮೆಪಡಲೂ ಆಗದ ದುಃಸ್ಥಿತಿ ಅವರದ್ದು!!

ಅವರ ಸ್ಥಿತಿಯನ್ನು ಸುಧಾರಿಸಲೆಂದೇ ನಾಟ್ಟಿಗ್ಹ್ಯಾಂಮ್ ಗೆ ಬಂದಿದ್ದ ಶ್ರೀನಿಧಿ. ಆಯ್ಕೆಯಾಗಿದ್ದು ಸ್ಕಾಲರ್ ಶಿಪ್ ನಲ್ಲಿ ಆದ್ದರಿಂದ ವಿದ್ಯಾಭ್ಯಾಸದ ಖರ್ಚಿರಲಿಲ್ಲ. ಹಾಸ್ಟೆಲ್ ಫ್ರೀ ಇದ್ದರೂ ಮೆಸ್ ಬಿಲ್ ಕಟ್ಟಲೇ ಬೇಕಿತ್ತು. ಅದು ಇಂಗ್ಲೆಂಡ್ ನ ಊಟ. ಹಿಡಿಸದೇ ಸ್ವತಃ ಅಡುಗೆ ಮಾಡಿಕೊಂಡರೂ ಅಕ್ಕಿ ಬೇಳೆ ಮೊದಲಾದ ಸಾಮಾನು ಸರಂಜಾಮಿಗಂತೂ ಅವ ದುಡ್ಡು ಹಾಕಲೇಬೇಕಿತ್ತು. ಇದಕ್ಕೆ ದುಡ್ಡು ಕೇಳಿದರೆ ಪೌಂಡ್ ಲೆಕ್ಕದಲ್ಲಿ ಪಾವತಿಸಲು ಅಗಾಧ ರೂಪಾಯಿ ಪರಿವರ್ತಿಸಬೇಕು ಎಂಬ ಲೆಕ್ಕಚಾರದ ಅಪ್ಪನಿಗೆ ವಿಭ್ರಾಂತಿ ಮೂಡಿಸದಿರಲೆಂದೇ ಶ್ರೀನಿಧಿ ಪಾರ್ಟ್ ಟೈಮ್ ಕೆಲಸಕ್ಕೂ ಸೇರಿಕೊಂಡ.

ಯೂನಿವರ್ಸಿಟಿಯ ಲೈಬ್ರರಿಯಲ್ಲಿ ಎಲ್ಲರೂ ಹೆಕ್ಕಿ ತಂದು ಓದಿ ಹಾಗೇ ಬಿಟ್ಟು ಹೋದ ಪುಸ್ತಕಗಳನ್ನು ಮತ್ತೆ ಅದರ ರ್ಯಾಕಿಗೆ ಜೋಡಿಸುವ ಕೆಲಸ ಅದು. ತನ್ನ ಓದಿನ ನಂತರ ತಾನು ತಂದ ಪುಸ್ತಕವನ್ನು ಮತ್ತೆ ಅದೇ ಜಾಗಕ್ಕೆ ಮರಳಿಸುವಂತೆ ಉಳಿದವರ ಪುಸ್ತಕವನ್ನೂ ಮರಳಿಸಿದರೆ ಸಿಗುವ ಸಂಬಳ ಶ್ರೀನಿಧಿಯ ವಾರದ ಖರ್ಚು ಕಳೆದೂ ಉಳಿಯುತ್ತಿತ್ತು! ವಾರಾಂತ್ಯದ ಯಾವುದೇ ಸ್ನೇಹಕೂಟ ಪಾರ್ಟಿಗಳಿಗೆ ಹೋಗದೆ ರೂಮಿನಲ್ಲೇ ರುಚಿಯಾದ ಅಡುಗೆ ಮಾಡಿಕೊಳ್ಳುತ್ತಿದ್ದ ಶ್ರೀನಿಧಿಯ ಖಾಯಂ ಸಹವರ್ತಿ ವಿಲಿಯಂನೇ. ಅವನಿಗಾಗಿ ಹೆಚ್ಚು ಖಾರ ಹಾಕದೇ, ಗರಂ ಮಸಾಲೆ ಉಪಯೋಗಿಸದೇ ಅಡುಗೆ ಮಾಡುತ್ತಿದ್ದ ಶ್ರೀನಿಧಿಯ ಪಾಕ ಸವಿಯಲೆಂದು ವಿಲಿಯಂನೇ ಕರೆತಂದ ಅತಿಥಿ ಈ ಕ್ಯಾಥರೀನ್.

ಶ್ರೀನಿಧಿಯ ಪಾಕ ಪ್ರಾವೀಣ್ಯತೆಯನ್ನು ಮೆಚ್ಚಿ ಹೊಗಳುವ, ಅವನು ಬಡಿಸಿದ್ದನ್ನೆಲ್ಲಾ ಅಪ್ಪಟ ಭಾರತೀಯರಂತೆ ಬರಿಗೈಯಲ್ಲಿ ಕಲಸಿ ತಿನ್ನುವ, ಬೆರಳುಗಳನ್ನು ಚೀಪಿ ಚೀಪಿ ಆಸ್ವಾದಿಸುವ ಕ್ಯಾಥರೀನ್ ಆಸ್ಟ್ರೇಲಿಯಾದ ಸಿಡ್ನಿಯಿಂದ ಬಂದವಳಾದರೂ ನೆರೆಯ ತೈವಾನ್ ಮೂಲದವಳು. ಅವಳ ತಾಯಿಯ ತವರಾದ ತೈವಾನ್ ಅವಳಿಗೆ ಮುಖ ಚಹರೆಯನ್ನು, ಅದರದೇ ಉಚ್ಛಾರದ ಮಾತುಗಾರಿಕೆಯನ್ನೂ ಕೊಟ್ಟಿತ್ತು. ಅಂತಹುದೇ ಉಚ್ಛಾರದಲ್ಲಿ ಡೇಟಿಂಗ್ ಗೆ ಕರೆದಾಗ ಶ್ರೀನಿಧಿ ಗಲಿಬಿಲಿಯಾಗಿದ್ದಷ್ಟೇ ಅಲ್ಲ, ಗೊಂದಲಕ್ಕೂ ಬಿದ್ದಿದ್ದ. ಅವನ ಗೊಂದಲ ತಿಳಿಗೊಳಿಸಿದ್ದು ಕ್ಯಾಥರೀನೇ!!

ಆದದ್ದಾಗಲಿ ಡೇಟಿಂಗ್ ಹೋಗುವುದೇ ಸರಿ ಎಂಬ ನಿಲುವು ಶ್ರೀನಿಧಿಯಲ್ಲಿ ಮೂಡಲು ಬಹಳಷ್ಟು ಸಲಹೆ ನೀಡಿ ಶ್ರಮಪಟ್ಟಿದ್ದು ವಿಲಿಯಂ. ಇವ ಬರಲು ಒಪ್ಪಿದ್ದೇ, ಎರಡು ದಿನದ ಆ ಪುಟ್ಟ ಪ್ರವಾಸಕ್ಕಾಗಿ ಅಗಾಧವಾದ ಸಿದ್ಧತೆಗಳು ಆರಂಭವಾಗಿದ್ದವು. ಇವರಿದ್ದ ನಾಟ್ಟಿಂಗ್ಹ್ಯಾಮಿನಿಂದ ಒಂದು ತಾಸಿನಷ್ಟು ಪ್ರಯಾಣದ ದೂರದಲ್ಲಿದ್ದ ‘ಬ್ರೆಕ್ ಹಿಲ್ ರೋಡ್’ ಎಂಬ ಪುಟ್ಟ ಪಟ್ಟಣವೇ ಪ್ರವಾಸದ ಸ್ಥಳ. ಇಂಗ್ಲೆಂಡ್ ನ ಪೂರ್ವ ಮಿಡ್ ಲ್ಯಾಂಡ್‌ ನಲ್ಲಿನ ಆ ಪ್ರದೇಶ ಕ್ಯಾಥರೀನ್ ಳ ಆಯ್ಕೆ. ಪ್ರವಾಸ, ವಸತಿಯ ಸಿದ್ಧತೆ ಆಕೆ ಮಾಡತೊಡಗಿದ್ದರೆ ವಿಲಿಯಂ ಇವನ ಲಗೇಜ್ ಸಿದ್ಧಪಡಿಸಿ ಕೊಟ್ಟಿದ್ದ! ಉದ್ದನೆಯ ಬೆಚ್ಚಗಿನ ಕೋಟ್, ಕೊರಳ ಸುತ್ತುವ ಉಣ್ಣೆಯ ಮಫ್ಲರ್, ಉಣ್ಣೆಯ ಸ್ವೆಟರ್, ಮಂಜು ಒಳಹೋಗದಂತೆ ಎತ್ತರದ ಬೂಟುಗಳು, ಮೇಲೊಂದು ಇಂಗ್ಲೀಷ್ ಮೆನ್ ಹ್ಯಾಟ್!! ಶ್ರೀನಿಧಿ ಡ್ರೆಸ್ ಮಾಡಿಕೊಂಡು ಲಗೇಜ್ ಹಿಡಿದು ನಿಂತಾಗ ಕರೆದೊಯ್ಯಲು ಬಂದ ಕ್ಯಾಥರೀನ್ ಗೇ ಗುರುತು ಸಿಕ್ಕಿರಲಿಲ್ಲ. ಒಂದು ತಾಸಿನ ಬಸ್ ಪ್ರಯಾಣದ ನಂತರ ಬ್ರೆಕ್ ಹಿಲ್ ತಲುಪಿ, ಮೊದಲೇ ನಿಗದಿಯಾಗಿದ್ದ ವಸತಿ ಹೊಕ್ಕಾಗ ಶ್ರೀನಿಧಿ ನವಿರಾಗಿ ಕಂಪಿಸತೊಡಗಿದ್ದ!

“ಜರ್ನಿ ಮಾಡಿದ ನಂತರ ಒಂದು ಸ್ನಾನ ಮಾಡಿಬಿಡಬೇಕು. ಆಗಲೇ ಫ್ರೀ” ಎಂದೆನ್ನುತ್ತಾ ಶ್ರೀನಿಧಿಯನ್ನ ಬಲವಂತದಿಂದ ಸ್ನಾನಕ್ಕೆ ಕಳಿಸಿದ ಕ್ಯಾಥರೀನ್ ಸ್ವಲ್ಪ ಹೊತ್ತಿನಲ್ಲೇ ತಾನೂ ಸ್ನಾನಕ್ಕೆ ತಯಾರಾಗಿ ಬಾತ್ರೂಂ ಹೊಕ್ಕು “ಲೆಟ್ ವಿ ಹ್ಯಾವ್ ಬಾತ್ ಟುಗೆದರ್” ಎಂದಾಗ ಮೈ ಒರೆಸಿಕೊಳ್ಳದೇ ಗಡಿಬಿಡಿಯಲ್ಲಿ ಟವೆಲ್ ಸುತ್ತಿಕೊಂಡ ಶೀನಿಧಿಯ ಕಂಪನ ನಡುಕವಾಗಿ ಪರಿವರ್ತಿತವಾಗಿತ್ತು. ಅದನ್ನು ತೋರಗೊಡದೇ ಅವ ಸ್ನಾನ ಮಾಡಲೆಂದು ಕೇವಲ ಟವೆಲ್ಲೊಂದನ್ನು ಸುತ್ತಿಕೊಂಡಿದ್ದ ಅವಳನ್ನು ಅಪಾದ ಮಸ್ತಕ ನೋಡಿದ. ಮಂಗೋಲಿಯನ್ ಮುಖ ಚಹರೆಯ ಸಣ್ಣ ಕಣ್ಣು, ದೊಡ್ಡ ಆಲೆಯ ಕಿವಿ, ಮೊಂಡ ಮೂಗು, ಉದ್ದದ ಕತ್ತು, ನೀಳ ಕಾಯ….. ಕೆಳಗೆ ತೊಡೆ ಮಾತ್ರ ತೋರ ಎನ್ನಿಸುವ ಉದ್ದದ ಕಾಲುಗಳು, ಎತ್ತರದ ದೊಡ್ಡ ದೇಹಕ್ಕೆ ಅನುಪಾತವಲ್ಲದ ಪುಟ್ಟ ಪಾದಗಳು…

ಅವಳ ಮುಖವನ್ನೇ ನೋಡುತ್ತಾ ‘ಅದೇನು!?’ ಎಂದ ಶ್ರೀನಿಧಿ. ಅವಳ ಗಲಿಬಿಲಿ ಕಂಡು ‘ನಿನ್ನ ಎದೆಯ ಮೇಲೆ ಅವೆಷ್ಟು ಕಲೆಗಳು!?’ ಎಂದು ಉದ್ಗರಿಸಿದ. ಕ್ಯಾಥರೀನ್ ನೋವಿನಲ್ಲೆಂಬಂತೆ ನಕ್ಕಳು. “ಅದೇನೋ ನಿನ್ನ ದೇಶದಲ್ಲಿ ನೆಲವನ್ನು ಆಳಿದ ರಾಜರೆಲ್ಲಾ ಶಾಸನ ಕೆತ್ತಿಸಿರ್ತಾರೆ ಅಂತಿದ್ದೆಯಲ್ಲ. ಇವೂ ಅಂತಹವರ ಹಲ್ಲುಗಳು ಮೂಡಿಸಿದ್ದ ಶಾಸನಗಳು!” ಎನ್ನುತ್ತಾ ನಕ್ಕಳು. ಶ್ರೀನಿಧಿ ನಗಲಿಲ್ಲ.

ಸ್ನಾನ ಮುಗಿಸಿ ಬಂದ ನಂತರವೂ ಶ್ರೀನಿಧಿ ಮುಖದಲ್ಲಿ ಅದೇ ಪ್ರಶ್ನೆ ಇದೆ ಅನ್ನಿಸಿ ಕ್ಯಾಥರೀನ್ ತಾನೇ ಹೇಳತೊಡಗಿದಳು “ಈ ಶಾಸನಗಳು ತುಂಬಾ ಹಳೆಯವು. ಅವರುಗಳು ತಮ್ಮ ಹಲ್ಲು ಊರಿದ್ದಾಗ ತೀರಾ ಎಳೆಯವಾಗಿದ್ದ ನನ್ನ ಎದೆಯಲ್ಲಿ ಗಾಯವಾಗಿ ಎಷ್ಟೋ ಬಾರಿ ರಕ್ತ ಜಿನುಗಿತ್ತು! ಅಂತಹ ಗಾಯಗಳು, ರಕ್ತ ಒಳಗೇ ಹೆಪ್ಪುಗಟ್ಟಿ ಕೆಂಪಾದ ಗುರುತುಗಳು ಕ್ರಮೇಣ ಹಸಿರಾಗಿ ಈಗ ಕಂದಾಗಿವೆ”
ಶ್ರೀನಿಧಿಗೆ ಏನೂ ಅರ್ಥವಾಗಲಿಲ್ಲ. ಕ್ಯಾಥರೀನಳೇ ಮುಂದುವರೆಸಿದಳು. “ನನ್ನಮ್ಮ ತೈವಾನ್ ನವಳು. ಅವಳ ಹೆಸರು ಆರ್ಪಾ ಅಂತ. ನಮ್ಮಪ್ಪ ಆಸ್ಟ್ರೇಲಿಯನ್. ಅವರು ಏಷ್ಯಾ ಖಂಡದ ಪ್ರವಾಸಕ್ಕೆ ಬಂದಿದ್ದಾಗ ಮಸಾಜ್ ಸೆಂಟರಿನಲ್ಲಿ ಪರಸ್ಪರ ಪರಿಚಯವಾಗಿತ್ತಂತೆ. ನನ್ನಮ್ಮ ಆಗಿನ್ನೂ ಹದಿಹರೆಯದ ಹುಡುಗಿ, ಸುಂದರಿ ಅಷ್ಟೇ ಅಲ್ಲ ಮಸಾಜ್ ಮಾಡುವುದರಲ್ಲಿ ತುಂಬಾ ಚಾಣಾಕ್ಷ ಪರಿಣಿತಿ. ನನ್ನ ಅಪ್ಪ ಮಾರುಹೋಗಿದ್ದು ಯಾವುದಕ್ಕೋ ಗೊತ್ತಿಲ್ಲ. ಅಂತೂ ಅಪ್ಪ ಸಿಡ್ನಿಯಲ್ಲಿ ಆರಂಭಿಸಿದ್ದ ಹೊಸ ಸ್ಪಾ ಒಂದಕ್ಕೆ ಅಮ್ಮ ಬಂದು ಮಸಾಜರ್ ಆಗಿ ಸೇರಿದ್ದಳು.

ಕೆಲ ಕಾಲದಲ್ಲೇ ಅಪ್ಪನ ಸ್ಪಾ ಹೆಸರುವಾಸಿಯಾಯ್ತಂತೆ. ಎಲ್ಲಾ ಅಮ್ಮನ ದೆಸೆ ಅಂತ ಹೇಳುತ್ತಿದ್ದ ಅಪ್ಪ ಅಮ್ಮನನ್ನು ಚರ್ಚಿನಲ್ಲಿ ಮದುವೆ ಆದರು. ನನ್ನಮ್ಮ ಬುದ್ದಿಸ್ಟ್. ಅಪ್ಪ ಕ್ರಿಶ್ಚಿಯನ್. ಇದು ಅವರ ನಡುವೆ ಸಮಸ್ಯೆಯೇ ಆಗಿರಲಿಲ್ಲ. ನಾನು ಹುಟ್ಟಿದ ಮೇಲೆ ಅಮ್ಮ ನನಗೆ ‘ಚರಿಯಾ’ ಎಂದು ಹೆಸರಿಟ್ಟು ಕರೆಯತೊಡಗಿದ್ದರೆ ಅಪ್ಪ ‘ಕ್ಯಾಥರೀನ್’ ಎಂಬ ಅವರಮ್ಮನ ಹೆಸರಿಟ್ಟು ಮುದ್ದಿಸುತ್ತಿದ್ದರು. ಸ್ಪಾ ನಡೆಸುವ ಪೂರ್ಣ ಜವಾಬ್ದಾರಿ ಹೊತ್ತ ಅಮ್ಮ ಬಿಡುವಿಲ್ಲದಂತಾದರೆ ಕ್ಯಾಸಿನೊ ಆರಂಭಿಸಿದ್ದ ಅಪ್ಪ ಮನೆಗೆ ಬರುವುದೂ ಅಪರೂಪವಾಗಿತ್ತು. ಮನೆಗೆ ಬಂದರೂ ಅಪ್ಪ ಅಮ್ಮನದು ನಿರಂತರ ಜಗಳ! ‘ನಾನು ಹೇಳಿದಂತೆ ಕೇಳು. ತುಂಬಾ ದುಡ್ಡು ಸಿಗ್ತದೆ’ ಎಂದು ಅಪ್ಪ ಹೇಳಿದರೆ ‘ನಾನು ಮಾಡೋದು ಮಸಾಜ್ ಮಾತ್ರ, ವೇಶ್ಯಾವಾಟಿಕೆ ಅಲ್ಲ’ ಅಂತ ಅಮ್ಮ ಖಡಕ್ಕಾಗಿ ಹೇಳಿ ಮೌನವಾಗುತ್ತಿದ್ದಳು. ಜಗಳದ ಆರ್ಭಟ, ಮಾತಿಲ್ಲದ ಮೌನಗಳೇ ಆ ಮನೆಯನ್ನು ಆಳುತ್ತಿದ್ದಾಗ ನಾನು ಇಲಿ ಮರಿಯಂತೆ ಗೂಡಿನಲ್ಲಿ ಅಡಗಿಯೇ ಬೆಳೆಯುತ್ತಿದ್ದೆ. ನಾನು ಅಡಗಬಹುದು, ಬೆಳೆಯುತ್ತಿರುವ ದೇಹ, ಕಿಶೋರತ್ವ ಉಡುಗೀತೇ!? ನನ್ನ ಎದೆಯ ಮೇಲೆ ಚಿಟಗುಬ್ಬಿ ಗೂಡು ಕಟ್ಟಿದಾಗ ಅಪ್ಪ ‘ಮಗಳಿಗೂ ಮಸಾಜ್ ಕಲಿಸಿಕೊಡು’ ಎಂದು ಅಮ್ಮನ ದುಂಬಾಲು ಬಿದ್ದಿದ್ದರು. ಅಮ್ಮ ನಿರಾಕರಿಸಿ, ಅಪ್ಪನ ಕಣ್ಣಿಗೆ ನಾನು ಬೀಳದಂತೆ ಮುಚ್ಚಿಡಲಾಗದೇ ಸೋತು ತಾನೇ ಅಪ್ಪ ಬಯಸಿದಂತೆ ಹೊಸರೀತಿಯ ಮಸಾಜ್ ಮಾಡುತ್ತಾ ಅಪ್ಪನಿಗೆ ತುಂಬಾ ದುಡ್ಡು ಕೊಡತೊಡಗಿದಳು.

ಅಮ್ಮನಿಗೆ ಸರ್ವೈಕಲ್ ಕ್ಯಾನ್ಸರ್ ಆಗಿ ತೀರಿಕೊಳ್ಳುವವರೆಗೆ ಎಲ್ಲವೂ ಹೀಗೇ ನಡೆಯುತ್ತಿತ್ತು. ಅಮ್ಮ ಸತ್ತಾಗ ನಾನು ಸೆಕೆಂಡರಿ ಸ್ಕೂಲ್ ನಲ್ಲಿದ್ದೆ. ಅಪ್ಪ ನನ್ನನ್ನು ತಮ್ಮ ಸ್ಪಾ ದಲ್ಲಿ ಮಸಾಜ್ ಮಾಡಲು ಬಳಸತೊಡಗಿದ್ದರು. ನಾನೋ ಅದರಲ್ಲೂ ಎಳಸು. ಅಮ್ಮನಿಂದ ಕಲಿತ ಮಸಾಜನ್ನು ಆವರೆಗೆ ನಾನು ಹೆಂಗಸರಿಗೆ ಮಾತ್ರ ಮಾಡುತ್ತಿದ್ದೆ. ಈಗ ಗಂಡಸರಿಗೂ ಮಾಡಬೇಕಾಯ್ತು. ನಾನು ಗಂಡಸಿನ ಪೂರ್ಣ ಬೆತ್ತಲೆ ದೇಹ ನೋಡಿದ್ದೇ ಆಗ. ಆ ದೇಹಗಳ ತುಂಬು ಮಾಂಸಖಂಡಗಳ ತೋಳ್ತೊಡೆಗಳ ಮಸಾಜ್ ಮಾಡುತ್ತಾ ಅವರ ಅಂಗಕ್ಕೆ ತೈವಾನಿ ತೈಲದಿಂದ ಮರಗಟ್ಟಿಸಬೇಕಿತ್ತು. ಅದು ಅರವಳಿಕೆ ಅವಧಿ ಮುಗಿದು ಮತ್ತೆ ಅರಿವಿಗೆ ಮರಳುವವರೆಗಿನ ಕದನಗಳಲ್ಲಿ ನನ್ನ ಪುಟ್ಟ ದೇಹವೂ ನುಜ್ಜುಗುಜ್ಜಾಗಿ ಈ ಶಾಸನಗಳು ಬರೆಸಿಕೊಂಡವು” ಕ್ಯಾಥರೀನ್ ಕಣ್ಣಲ್ಲಿ ನೀರಿರಲಿಲ್ಲ. ಶ್ರೀನಿಧಿ ತನ್ನ ಕಣ್ಣು ಮೂಗು ಒರೆಸಿಕೊಂಡ.

ಶ್ರೀನಿಧಿಯದು ಇಂತಹ ಖಂಡಾಂತರದ ಕತೆ ಇರಲಿಲ್ಲ. ಅವನದು ಬಂಡೆಗಳ ನಾಡಿನ ಬಿಸಿಲು, ಸೆಕೆ ಮತ್ತು ಬರಗಾಲಗಳಲ್ಲೇ ಅರಳಿದ್ದ ಬದುಕು. ರಂಗಪ್ಪ ಮತ್ತು ಸುಮಿತ್ರಮ್ಮ ದಂಪತಿಗಳಿಗೆ ಮೂರು ಹೆಣ್ಣು ಹುಟ್ಟಿ, ತಿರುಪತಿ ಮೊದಲಾದ ದೇವಾಲಯಗಳ ಸುತ್ತಿ ಹರಕೆ ಕಟ್ಟಿದ ನಂತರವೇ ಹುಟ್ಟಿದ್ದ ಕಡೆಯ ಕಟ್ಟಾಣಿ ಈ ಗಂಡು ಕೂಸು – ಶ್ರೀನಿಧಿ. ಇವನು ಹುಟ್ಟುವ ಹೊತ್ತಿಗೇ ವ್ರತ ನೇಮ ನಿಷ್ಟೆಗಳಿಂದ ಬಸವಳಿದಿದ್ದ ಸುಮಿತ್ರಮ್ಮ ಮಗನನ್ನು ಅವನ ಅಕ್ಕಂದಿರ ಸುಪರ್ದಿಗೆ ಒಪ್ಪಿಸಿ ತಾವು ದೇವರೊಂದಿಗೆ ಮಾತ್ರ ಮಾತನಾಡತೊಡಗಿದ್ದರು. ಹೆಂಡತಿಯೊಂದಿಗೆ ಆಡಬೇಕಾದ ಮಾತುಗಳನ್ನು ಅನಿವಾರ್ಯವಾಗಿ ಮನೆಗೆಲಸದ ನಿಂಗಿಯ ಜೊತೆ ಆಡತೊಡಗಿದ್ದರು ರಂಗಪ್ಪ!

ತಾಯಿಗೆ ಮೂವತ್ತೈದು ಆದ ಮೇಲೆ ಹುಟ್ಟಿದ್ದ ಈ ಮಗುವಿಗೆ ಎದೆ ಹಾಲು ಸಮರ್ಪಕವಾಗಿ ಸಿಗದೇ ಅಮುಲ್ ಡಬ್ಬದ ಹಾಲೇ ಸರ್ವಸ್ವವಾಗಿದ್ದಾಗ, ಮಗುವಿಗೆ ತಾಯಿಯ ಬಿಸುಪೆಂದರೆ ಅದು ಬಾಟಲಿಗೆ ಸಿಕ್ಕಿಸಿದ್ದ ರಬ್ಬರ್ ನಿಪ್ಪಲ್ ಮಾತ್ರ. ಶ್ರೀನಿಧಿಯನ್ನು ಮಧ್ಯೆ ಮಲಗಿಸಿಕೊಂಡು ತಮ್ಮ ಎಂದಿನ ಮಾತು ನಗು ನಾಚಿಕೆಗಳಲ್ಲಿ ಕಳೆದುಹೋಗುತ್ತಿದ್ದ ಅಕ್ಕಂದಿರಿಂದಾಗಿ ಹೆಣ್ತನವನ್ನೇ ಸಹಜ ಎಂದು ಭಾವಿಸಿದ್ದ ಶ್ರೀನಿಧಿಗೆ ಇದ್ದ ಒಂದೇ ಗೊಂದಲ – ‘ತನಗೆ ಮಾತ್ರ ಏಕೆ ಈ ನಿಕ್ಕರ್!? ಅಕ್ಕಂದಿರಿಗೆ ಮಾತ್ರ ಪರಕಾರ!!’ ಎಂಬುದು.

ಮಧ್ಯಾಹ್ನದ ಸಣ್ಣ ಜೊಂಪಿನ ನಂತರ ಇಬ್ಬರೂ ಸಂಜೆಯ ತಿರುಗಾಟಕ್ಕೆ ಸಿದ್ಧವಾಗಿದ್ದರು. ಶ್ರೀನಿಧಿ ಇಂಗ್ಲೆಂಡಿನ ಸಭ್ಯ ಗೃಹಸ್ಥರಂತೆ ಉದ್ದನೆಯ ಕೋಟನ್ನೇ ಧರಿಸಿದ್ದರೆ ಕ್ಯಾಥರೀನ್ ಜೀನ್ಸ್ ಮತ್ತು ಟಾಪ್ ಹಾಕಿದ್ದಳು. ಕೈ ಕೈ ಹಿಡಿದು ಪುಟ್ಟ ಮಕ್ಕಳಂತೆ ಬೀದಿ, ತಿರುವು, ದಿಬ್ಬಗಳನ್ನು ಹತ್ತಿಳಿದು ಮಾರುಕಟ್ಟೆಯ ಹೊಕ್ಕು ಬೇಕಾದ್ದು, ಬೇಡವಾದ್ದು ಖರೀದಿಸಿ ಮತ್ತೆ ರೂಂ ಹೊಗುವಾಗ ಆಗಲೇ ರಾತ್ರಿಯ ಎಂಟು ಗಂಟೆ. ಡಿನ್ನರಿಗಾಗಿ ಹೋಟೆಲ್ಲಿನ ಬಾಕ್ವೆಟ್ ಹಾಲ್ ಗೆ ಹೋಗಲೆಂದು ಲೇಡಿ ಕ್ಯಾಥರೀನ್ ಉದ್ದನೆಯ ಗೌನ್ ಧರಿಸಿ ಸಿದ್ಧವಾದರೆ ಶ್ರೀನಿಧಿ ಬೋ ಟೈ ಧರಿಸಿ ಟೈಟಾನಿಕ್ ಸಿನೆಮಾದ ಡಿ ಕ್ಯಾಪ್ರಿಯೋ ನಂತೆ ಅವಳ ಕೈಗೆ ತನ್ನ ತೋಳು ಕೊಟ್ಟಿದ್ದ. ಊಟಕ್ಕೆ ಮುನ್ನ ವೈನ್ ಬಂದಾಗ ‘ನಾನು ಟೀ ಟೋಟ್ಲರ್’ ಎಂದು ಕ್ಯಾಥರೀನ್ ಗೆ ದಂಗುಬಡಿಸಿದ್ದ.

ಒಳಗಿಳಿದ ವೈನ್ ಬಿಸಿಯೇರಿಸತೊಡಗಿತ್ತು. ಕ್ಯಾಥರೀನ್ ರೂಮಿಗೆ ಬಂದವಳೇ ಗೌನ್ ತೆಗೆದು ಒಳ ಉಡುಪೂ ಇಲ್ಲದ ಟಿ ಶರ್ಟ್ ಮತ್ತು ಶಾರ್ಟ್ಸ್ ಹಾಕಿದಾಗ ಆ ಛಳಿಯಲ್ಲೂ ಬೆವೆಯುತ್ತಿದ್ದ ಶ್ರೀನಿಧಿ. ಕ್ಯಾಥರೀನ್ ತನ್ನ ಬ್ಯಾಗಿನಿಂದ ಪುಟ್ಟ ಎಣ್ಣೆಯ ಬಾಟಲಿ ತೆಗೆದಾಗ ಮಾತ್ರ ಉಗುಳು ನುಂಗುತ್ತಾ ‘ಏನದು!? ಇದು ತೈವಾನಿ ತೈಲವಾ? ನಮ್ಮ ನಡುವೆ ಇದೆಲ್ಲಾ ಬೇಕಾ ಕ್ಯಾಟಿ!? ಇದಿಲ್ಲದೆಯೂ ಡೇಟಿಂಗ್ ಮಾಡಬಹುದಲ್ವಾ?’ ಎಂದಾಗ ಅಪ್ರತಿಭಳಾಗುವ ಸರದಿ ಕ್ಯಾಥರೀನಳದ್ದು. ಬೆಳಗ್ಗೆ ಬಾತ್ ರೂಂನಲ್ಲಿ ಇವನ ನಡುಕ ಕಂಡು ‘ಆರ್ ಯೂ ವರ್ಜಿನ್!?’ ಎಂದವಳು ಈಗ ಮಾತ್ರ ‘ಆರ್ ಯೂ ಸ್ಟ್ರೈಟ್!?’ ಎಂದಳು! ‘ಯಸ್ ಆಫ್ಕೋರ್ಸ್’ ಎಂದ ಶ್ರೀನಿಧಿ ಅವಳನ್ನು ಎತ್ತಿಕೊಂಡು ಮಂಚದ ಮೇಲೆ ಮಲಗಿಸಿ ಹಣೆಗೊಂದು ಹೂ ಮುತ್ತನಿಟ್ಟು ಗುಡ್ ನೈಟ್ ಹೇಳಿದ. ಆಗ ನಿಜಕ್ಕೂ ಕಂಪಿಸಿದ್ದು ಕ್ಯಾಥರೀನ್. ಅವನಿಗೂ ಗುಡ್ ನೈಟ್ ಹೇಳಿ ನಿಜದ ನಿಧಿ ಸಿಕ್ಕಂತೆ ಅವನ ಕೈ ಹಿಡಿದು ಮಲಗಿದ ಆಕೆಗೆ ಎಂದಿಲ್ಲದ ಸೊಗಸಾದ ನಿದ್ದೆ. ಹೊಸ ಜಾಗ, ಸ್ನೇಹಿತೆಯಾದರೂ ಅಪರಿಚಿತ ಹೆಣ್ಣ ಸ್ಪರ್ಶದಿಂದಾಗಿ ನಿದ್ರೆ ಬಾರದೇ ಹೊರಳಾಡಿದ್ದು ಶ್ರೀನಿಧಿ. ಹೊದಿಕೆ ಸರಿದಾಗ ಕಾಣುತ್ತಿದ್ದ ಅವಳ ಬೆತ್ತಲೆ ತೊಡೆ, ಇವನೆದೆಯಲ್ಲಿ ಹುದುಗುತ್ತಿದ್ದ ಅವಳ ಮುಖ, ಮೆತ್ತಗಿದ್ದರೂ ಚುಚ್ಚುತ್ತಿದ್ದ ಅವಳ ಚೂಪು ಸಂಗತಿ…. ಎಲ್ಲದರ ನಡುವೆ ಶ್ರೀನಿಧಿಗೂ ನಿದ್ದೆ ಹತ್ತಿದ್ದು ಯಾವ ಹೊತ್ತಿನಲ್ಲೋ!!?

ಹೊಸತೇ ಆದ ಬೆಳಗಿನ ಪ್ರಭೆ ಹೊತ್ತು ಇವರು ಮಾತುಗಳನ್ನೇ ಉಂಡು ಉಟ್ಟು ಮತ್ತೆ ನಾಟ್ಟಿಗ್ಹ್ಯಾಮ್ ಗೆ ಬಂದಾಗ ಇವರ ಮಾತುಗಳನ್ನು ಕಲ್ಪಿಸಿಕೊಳ್ಳಲಾಗದೇ ಕಕ್ಕಾಬಿಕ್ಕಿಯಾದವನು ವಿಲಿಯಂ. ಇದೆಲ್ಲಾ ಆಗಿ ನಾಲ್ಕಾರು ವರ್ಷಗಳೇ ಆಗಿವೆ. ಶ್ರೀನಿಧಿ ಈಗ ಬೆಂಗಳೂರಿನ ಕೆಮಿಕಲ್ ಫ್ಯಾಕ್ಟರಿ ಒಂದರಲ್ಲಿ ಸೈಂಟಿಸ್ಟ್ ಆಗಿದ್ದಾನೆ. ಅಪ್ಪನಿಂದ ದೂರವಿರಲೆಂದೇ ನಾಟ್ಟಿಂಗ್ಹ್ಯಾಮ್ ಗೆ ಬಂದಿದ್ದ ಕ್ಯಾಥರೀನ್ ಡ್ರಗ್ ಪೆಡ್ಲರ್ ಒಬ್ಬನ ಜೊತೆ ಜಗಳದಲ್ಲಿ ಕೊಲೆಯಾದ ತನ್ನಪ್ಪನ ಸಾವಿನಿಂದಾಗಿ ಕ್ಯಾಸಿನೊ, ಸ್ಪಾ ಮುಚ್ಚಿ ಸಿಡ್ನಿಯ ಯೂನಿವರ್ಸಿಟಿಯಲ್ಲಿ ಕಲಿಸುತ್ತಿದ್ದಾಳೆ. ಆಪ್ತ ರೂಮ್ ಮೇಟ್ ಆಗಿದ್ದ ವಿಲಿಯಂ ಜಾಗವನ್ನು ಶ್ರೀನಿಧಿಯೊಂದಿಗೇ ಇಂಜಿನಿಯರಿಂಗ್ ಓದಿ ಈಗ ಅದೇ ಕೆಮಿಕಲ್ ಫ್ಯಾಕ್ಟರಿಯಲ್ಲಿ ಸಹೋದ್ಯೋಗಿಯಾಗಿರುವ ಚಂದ್ರ ಮೋಹನ ತುಂಬಿದ್ದಾನೆ.

ಗಡಿನಾಡು ಬಾಗೇಪಲ್ಲಿಯ ಚಂದ್ರ ಮೋಹನನೂ ಶ್ರೀನಿಧಿಯಂತೇ ಗಣಿತ ಬೇಡದೇ ಕೆಮಿಕಲ್ ಇಂಜಿನಿಯರಿಂಗ್ ಓದಿದವನು. ತನ್ನ ಮನೆ ಮಾತು ತೆಲುಗು ತನ್ನಮ್ಮನ ತವರಿನ ಭಾಷೆ ತಮಿಳು ಎರಡೂ ಸರಾಗವಾಗಿ ಬರ್ತಿದ್ದರೂ ಕನ್ನಡವನ್ನು ಸುಸ್ಪಷ್ಟವಾಗಿ ಮಾತಾಡಬಲ್ಲ ಅವ ಕನ್ನಡದ ಸಾಹಿತ್ಯವನ್ನೂ ಓದಿಕೊಂಡಿದ್ದ. ಸಾಹಿತ್ಯದ ಮೂಲಕ ನವಿರು ಕನ್ನಡತನ, ತೆಲುಗು ತಮಿಳು ಸಿನೆಮಾಗಳ ಪ್ರಭಾವದಲ್ಲಿ ರೂಕ್ಷ ಯಜಮಾನಿಕೆಯ ಸ್ವಭಾವ ಹೊಂದಿದ್ದ ಚಂದ್ರ ಮೋಹನನಿಗೆ “ವಜ್ರಾದಪಿ ಕಠೋರಾಣಿ ಮೃದೂನಿ ಕುಸುಮಾದಪಿ” ಎಂದೇ ಕರೆಯುತ್ತಿದ್ದ.

ಆಸ್ಟ್ರೇಲಿಯಾ ಸೇರಿದ್ದರೂ ಕ್ಯಾಥರೀನಳಿಗೆ ಶ್ರೀನಿಧಿಯೇ ಅಂತರಂಗದ ಗೆಳೆಯ. ಅವಳ ಬದುಕು, ಬವಣೆ, ಉದ್ಯೋಗ… ಎಲ್ಲದರ ಸಣ್ಣ ವಿವರವನ್ನೂ ಇವನೊಂದಿಗೆ ಹಂಚಿಕೊಳ್ಳದೇ ಅವಳಿಗೆ ಸಮಾಧಾನ ಸಿಗುತ್ತಿರಲಿಲ್ಲ. ಫೋನಿನಲ್ಲಿ, ವೀಡಿಯೋ ಕಾಲ್ ನಲ್ಲಿ, ಸ್ಕೈಪ್ ಎಂಬ ಜಾಲತಾಣದಲ್ಲಿ ಹರಟುತ್ತಿದ್ದ ಇವರ ನಡುವಿನ ಸ್ನೇಹ ಬಾಂಧವ್ಯ ಬೇರೆಯವರಿಗೆ ಸುಲಭದಲ್ಲಿ ಅರ್ಥವೂ ಆಗುತ್ತಿರಲಿಲ್ಲ. ಆದರೆ ಅದನ್ನೂ ಅರ್ಥೈಸಿಕೊಂಡದ್ದು ಚಂದ್ರ ಮೋಹನ! ಅವನೆದುರಿಗೆ ತಮ್ಮ ಸ್ನೇಹ ಆರಂಭವಾದ ಬಗೆ, ಅವರಿಬ್ಬರ ಆತ್ಮೀಯ ಒಡನಾಟದ ಶಕೆ, ಪರಸ್ಪರರ ಇಷ್ಟ ಕಷ್ಟ ಗಳನ್ನು ಸವಿವರವಾಗಿ ಶ್ರೀನಿಧಿ ಹೇಳಿದ್ದ. ಆದರೆ ಅದರಲ್ಲಿ ಕ್ಯಾಥರೀನ್ ಳ ಬಾಲ್ಯ, ಬದುಕು, ಅವಳ ಸ್ಪಾ ಅನುಭವಗಳು ಮತ್ತು ಇವರಿಬ್ಬರ ಡೇಟಿಂಗ್ ನಂತಹ ಯಾವ ವಿವರಗಳನ್ನೂ ಬಾಯಿ ಬಿಟ್ಟಿರಲಿಲ್ಲ. ಹಾಗಾಗಿ ಚಂದ್ರ ಮೋಹನನಿಗೆ ಕ್ಯಾಥರೀನ್ ಈಗಷ್ಟೇ ಹುಟ್ಟಿದ ಮುಗ್ಧ ಹುಡುಗಿ. ಅವಳಿಗೂ ಚಂದ್ರ ಮೋಹನನೆಂದರೆ ಮೋಹಕವಾಗಿ ಮಾತನಾಡುವ ನಿರ್ಮಲ ಮನದ ‘ಮೂನ್’.

‘ನಿಧಿ, ನಾನು ಆಸ್ಟ್ರೇಲಿಯಾಗೆ ಹೋಗುತ್ತಿದ್ದೇನೆ’ ಎಂದ ಮಿತ್ರ ಚಂದ್ರ ಮೋಹನ ಮಾತು ಕೇಳಿ ಹಳೆಯ ನೆನಪುಗಳಲ್ಲಿ ಕಳೆದೇ ಹೋಗಿದ್ದ ಶ್ರೀನಿಧಿ ಮತ್ತೆ ಅದೇ ಮಾತನ್ನು ಚಂದ್ರ ಮೋಹನ ಪುನರುಚ್ಚರಿಸಿದಾಗಲೇ ವಾಸ್ತವಕ್ಕೆ ಬಂದಿದ್ದು.
“ಓಹ್ ಸೂಪರ್. ಮೋಹನಾ ಆಸ್ಟ್ರೇಲಿಯಾ ಗೆ ಕಂಪನಿ ವತಿಯಿಂದ ಹೋಗ್ತಾ ಇದ್ದೀ ಆದ್ದರಿಂದ ನಮ್ಮ ಕಂಪನಿಯ ಕ್ಲೈಂಟ್ಸ್ ಎಲ್ಲಾ ವ್ಯವಸ್ಥೆ ಮಾಡಿರ್ತಾರೆ. ಅಲ್ಲಿ ಆರು ತಿಂಗಳು ಇರ್ಬೇಕಲ್ವಾ ನೀನು? ಡೋಂಟ್ ವರಿ. ಅಲ್ಲಿರುವ ನಮ್ಮ ಫ್ರೆಂಡ್ ಕ್ಯಾಥರೀನ್ ನಿನಗೆ ಇಡೀ ಆಸ್ಟ್ರೇಲಿಯಾ ಪರಿಚಯಿಸ್ತಾಳೆ.”

ಪರಿಚಯವೊಂದು ಸ್ನೇಹವಾಗಲು ಈ ಒಡನಾಟ ಸಾಕಾದರೂ ಆ ಸ್ನೇಹವೇ ಆಪ್ತವೆನ್ನಿಸಿ ಸಲುಗೆಯಾಗಲು ಬೇಕಾದ ಸಂಪರ್ಕಕ್ಕೆ ಅವರ ನಡುವೆ ಬಿಡುವಾದಾಗಲೆಲ್ಲಾ ಮಾತು, ಆಗಾಗ ಅಕ್ಷರದಲ್ಲಿ ಒಡಮೂಡುವ ಸಂಭಾಷಣೆ, ಕಾಯುವಿಕೆ, ತಹತಹ, ಹುಸಿ ಮುನಿಸು, ತುಸು ಜಗಳಗಳೆಲ್ಲಾ ಅತ್ಯಂತ ಖಾಸಗಿ. ಇದನ್ನೆಲ್ಲಾ ಚಂದ್ರ ಮೋಹನನೂ ಶ್ರೀನಿಧಿಗೆ ಹೇಳಿರಲಿಲ್ಲ.

ಕಂಪನಿಯ ಪ್ರಾಜೆಕ್ಟ್ ಮೇಲೆ ಆಸ್ಟ್ರೇಲಿಯಾ ಗೆ ಬಂದಿದ್ದು ಕೇವಲ ಆರು ತಿಂಗಳ ಕಾಲಾವಧಿಗೆ ಆಗಿದ್ದರೂ ಕ್ಯಾಥರೀನ್ ಳನ್ನು ತುಂಬಾ ಹಚ್ಚಿಕೊಂಡಿದ್ದ ಚಂದ್ರ ಮೋಹನ ಮತ್ತೊಂದು ಆರು ತಿಂಗಳ ಅವಧಿಯನ್ನು ಕೋರಿ ವಿಸ್ತರಿಸಿಕೊಂಡಿದ್ದ. ಆಗೆಲ್ಲಾ ಕ್ಯಾಥರೀನ್ ಜೊತೆಗೆ ಆಸ್ಟ್ರೇಲಿಯಾ ದ ಮೂಲೆ ಮೂಲೆ ತಿರುಗಿ, ಡೇಟಿಂಗ್ ನೆಪದಲ್ಲಿ ಅವಳೊಂದಿಗೆ ಬೆರೆತು ಹೊಸ ಜಗತ್ತನ್ನೇ ಕಂಡಿದ್ದ ಅವನಿಗೆ ಕ್ಯಾಥರೀನ್ ಜೊತೆ ಮದುವೆಯಾಗಿ ಭಾರತಕ್ಕೇ ಕರೆತರುವ ಆಸೆ ಹುಟ್ಟಿತ್ತು.

ಆದರೆ ಇದನ್ನೆಲ್ಲಾ ಶ್ರೀನಿಧಿಯೊಂದಿಗೆ ಹಂಚಿಕೊಳ್ಳದೇ ಕ್ಯಾಥರೀನ್ ಗೆ ಸಮಾಧಾನ ಸಿಗುವಂತಿರಲಿಲ್ಲ. ಹಾಗಾಗಿಯೇ ತನ್ನ ಮೋಹನನ ಒಡನಾಟ, ಮಾತು ಕತೆ ಆಟ ಕೂಟ…. ಎಲ್ಲಾ ವಿವರಗಳನ್ನೂ ಆಗಾಗ ಕರೆ ಮಾಡಿ ಹೇಳುತ್ತಲೇ ಇದ್ದಳು. ಇವತ್ತು ಅವಳ ಬದುಕಿನ ಮಹತ್ವದ ದಿನ. ಅವಳೂ ಚಂದ್ರ ಮೋಹನನೂ ಸೇರಿ ಅಂತಿಮ ತೀರ್ಮಾನ ತಗೊಳ್ಳುವ ಸುಮುಹೂರ್ತ. ಚಂದ್ರ ಮೋಹನ ಅಂದು ತೀರಾ ಹೊಸದೇ ಆದ ಉನ್ಮಾದದಲ್ಲಿದ್ದ. ಆದರೆ ಅವತ್ತೇ ಕ್ಯಾಥರೀನ್ ಗೆ ಜ್ವರ, ಬಳಲಿಕೆ ಸುಸ್ತು. ಅದೇ ಬಳಲಿದ ದನಿಯಲ್ಲಿ ‘ಏಯ್ ನ್ಯಾಡಿ ನಿನ್ಜೊತೆ ತುಂಬಾ ಮಾಡ್ಬೇಕು ಕಣೋ’ ಅಂತ ಕರೆ ಮಾಡಿದ್ದು ಅವಳೇ. ಅವಳ ಮಾತ ಕೇಳಲು ಸಂಜೆ ಮನೆಗೆ ಬಂದವನೇ ವೀಡಿಯೋ ಕರೆ ಮಾಡಿದ ನಿಧಿಗೆ ತುಸು ದಣಿದಂತಿದ್ದ ಕ್ಯಾಥರೀನ್ ಕಂಡು ಕಳವಳವಾಯ್ತು. ಅವಳ ದೈಹಿಕ ದಣಿವ ಮರೆಸುವಷ್ಟು ಮನೋಹರವಾದ ಮಾತು, ತನ್ನ ಗೆಳೆಯ ಮೋಹನ ಮತ್ತು ಕ್ಯಾಟಿಯ ನಡುವೆ ಅರಳಿದ್ದ ಪ್ರೇಮದ ಸಂಗತಿಗಳನ್ನೆಲ್ಲಾ ಸವಿವರವಾಗಿ ಕೇಳಿಸಿಕೊಳ್ಳುತ್ತಾ ಮುದಗೊಂಡಿದ್ದ. ಅವನೊಂದಿಗೆ ಮಾತಾಡುತ್ತಲೇ ತನ್ನ ಉಡುಪ ಬದಲಾಯಿಸಿದ ಕ್ಯಾಥರೀನ್ ಆ ಹೊತ್ತಿನಲ್ಲಿ ಮನೆಯ ಕರೆಗಂಟೆ ದನಿ ಕೇಳಿ ಗಲಿಬಿಲಿಗೊಂಡಿದ್ದಳು. ನೈಟ್ ಗೌನಿನಲ್ಲಿ ಕೈ ತೂರಿಸುತ್ತಲೇ ಬಾಗಿಲು ತೆಗೆದಾಗ ಒಳ ಬಂದಿದ್ದು ಅವಳ ಮೂನ್ ಯಾನೇ ಚಂದ್ರ ಮೋಹನ! ತುಸು ಕುಡಿದೇ ರಂಗಾಗಿ ಕ್ಯಾಥರೀನ್ ಳ ಮನೆಗೆ ಬಂದಿದ್ದ ಮೋಹನನಲ್ಲಿ ಯಾವುದೋ ಆಮೋದ ಇತ್ತು. ಅವ ಒಳ ಬಂದವನೇ ವೀಡಿಯೋ ಸ್ಕ್ರೀನ್ ನಲ್ಲಿ ಶ್ರೀನಿಧಿಯ ಮುಖ ಕಂಡು ಕ್ಯಾಥರೀನ್ ಇವನ ಕಣ್ಣೆದುರು ತನ್ನ ಉಡುಪು ಬದಲಾಯಿಸಿದ್ದಾಳೆ ಎಂದೇ ಕನಲಿ ಕ್ರುದ್ಧನಾದ! “ಕಂಗ್ರಾಟ್ಸ್ ಕಣೋ ಮೋಹ್ನಾ. ಕಂಗ್ರಾಟ್ಸ್ ಟು ಬೋತ್ ಆಫ್ ಯೂ. ಈಗತಾನೇ ಕ್ಯಾಟಿ ‘ವಿ ಆರ್ ಇನ್ ಲವ್’ ಅಂದ್ಲು. ನನಗೆಷ್ಟು ಖುಷಿ ಆಗ್ತಿದೆ ಗೊತ್ತಾ? ಯಾಹೂ…”

“ಹೂಂ. ಅವಳು ನಿನ್ನೆದುರೇ ಬಟ್ಟೆ ಬದಲಾಯಿಸ್ತಿದ್ದರೆ ಖುಷಿಯಾಗದೇ ಇನ್ನೇನಾಗುತ್ತೆ!? ಬ್ಲಡೀ ಬಿಚ್. ಲವ್ ಅಂತೆ. ನೀವಿಬ್ರೂ ನನ್ನನ್ನೇನು ಗಾಂಡೂ ಅದ್ಕೊಂಡಿದ್ದೀರಾ???” ಎಂದವನೇ ತಿರುಗಿ ಕ್ಯಾಥರೀನ್ ಳನ್ನು ಗಟ್ಟಿಯಾಗಿ ತಬ್ಬಿಕೊಂಡ.

“ಮೋಹನಾ ದುಡುಕ ಬೇಡ. ನನ್ ಮಾತು ಕೇಳು” ಅಂತ ಶ್ರೀನಿಧಿ ಕಿರುಚುತ್ತಿದ್ದಾಗಲೇ ಕೊಸರಾಡಿದರೂ ಬಿಕ್ಕಿ ಬಿಕ್ಕಿ ಅಳುತ್ತಿದ್ದ ಕ್ಯಾಥರೀನ್ ತನ್ನ ದಣಿದ ದೇಹವನ್ನ ನೆಲಕ್ಕೆ ಚೆಲ್ಲಿದಳು. ಮೋಹನ ಮೃಗದಂತೆ ಮುಗಿಬಿದ್ದ.

ಶ್ರೀನಿಧಿ ಗದ್ಗದಿತನಾಗಿ ಲ್ಯಾಪ್‌ಟಾಪ್ ಮುಚ್ಚಿದ.