ಈಗಲೂ ನಾ ಏಳಬಲ್ಲೆ (Still I rise)

ತಿರುಚಿದ ಕಹಿಸುಳ್ಳುಗಳಿಂದ
ಹೆಣೆಯಬಹುದು ನೀನು ಗತವ ನನ್ನ ತುಚ್ಛೀಕರಿಸಿ
ನಡೆಸಬಹುದು ನೀನು ಕೊಳಚೆಯಲಿ ಸಲೀಸಾಗಿ
ಆದರೂ ಏಳಬಲ್ಲೆ ಧೂಳಕಣಗಳಂತೆ ಈಗಲೂ

ನನ್ನ ಜೀವಚೈತನ್ಯದಿಂದ ನೀ ವಿಚಲಿತಗೊಂಡು
ಮಬ್ಬಲಿ ಶರಣಾಗಿರಲು ವೈಯ್ಯಾರದಿ ನಡೆಯುವೆ
ನನ್ನ ಕೋಣೆಯಲಿ ಚಿಮ್ಮುವ ಕೊಳವೆಬಾವಿಯೆ ದೊರೆತಂತೆ

ನಿಶ್ಚಿತ ಅಲೆಗಳಲು ಮೂಡುವ ರವಿ-ಚಂದ್ರರಂತೆ
ಆಕಾಂಕ್ಷೆಗಳು ಉನ್ನತಿಗೇರುವಂತೆ ಈಗಲೂ ನಾ ಏಳಬಲ್ಲೆ

ಬಾಗಿದ ತಲೆ, ನೆಲಕ್ಕೆ ಬೇರೂರಿರುವ ನೋಟ
ಕಣ್ಣಹನಿ ಜಾರುವ ಹಾಗೆ ಜೋತಭುಜ
ಅಂತರಾಳದ ಆಕ್ರಂದನದಿಂದ ಘಾಸಿಗೊಂಡ ನನ್ನ
ಛಿದ್ರವಾಗಿಯೇ ನೀ ನೋಡಬಯಸುವೆ ಅಲ್ಲವೆ

ನನ್ನ ಹಿರಿಮೆಯಿಂದಾದ ಮುಜುಗರವ ನೀ ಅರಗಿಸಿಕೊಳ್ಳದಿರಲು
ನಗಾಡುವೆ ಹಿತ್ತಲಲಿ ಅಗೆದ ಚಿನ್ನದಗಣಿಯೆ ದೊರೆತಿರುವಂತೆ

ಮಾತುಗಳಿಂದಲೆ ನನಗೆ ಗುರಿಹಿಡಬಲ್ಲೆ
ತೀಕ್ಷ್ಣನೋಟದಲೆ ತುಣುಕಾಗಿಸಬಲ್ಲೆ
ಹಗೆಯಲೆ ಕೊಲ್ಲಬಲ್ಲೆ ನನ್ನ
ಆದರೆ ಗಾಳಿಯಂತೆ ಪಾರಾಗಿ ಮೇಲೇಳುವೆ ನಾನು

ನನ್ನ ಶೃಂಗಾರವು ನಿನ್ನ ಅಚ್ಚರಿಯಲಿ ಬುಡಮೇಲುಮಾಡಿರಲು
ಕುಣಿದಾಡುವೆ ತೊಡೆಸಂದುವಿನಲಿ ವಜ್ರಗಳೆ ದೊರೆತಂತೆ

ಐತಿಹ್ಯದ ಲಜ್ಜೆಗುಡಿಸಲುಗಳಿಂದ ಮೇಲೇಳುವೆ
ನೋವಿನಲೆ ಅದ್ದಿದ ಗತದಿಂದ ಮೇಲೇಳುವೆ

ಉಬ್ಬರವಿಳಿತದಿ ಜೊತೆಯಾಗೆ ಉಳಿದು
ಕುಪ್ಪಳಿಸುವ ವಿಶಾಲವಾದ ಕಪ್ಪುಸಮುದ್ರ ನಾನು
ಭಯಂಕರ ರಾತ್ರಿಗಳ ಹಿಂದೆತಳ್ಳಿ
ಸೋಜುಗದ ನಡುದಿನದಲಿ ಮೇಲೇಳುವೆ
ನನ್ನ ಪೂರ್ವಿಕರಿತ್ತ ಉಡುಗೊರೆಗಳ ತಂದು
ದಾಸ್ಯತ್ವದ ನಂಬುಗೆಯಾಗಿ ಮೇಲೇಳುವೆ
ಮೇಲೇಳುವೆ

ಆನಂದ ಆರ್ಯ ಮೂಲತಃ ಕೊಪ್ಪಳದವರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುತ್ತಿದ್ದಾರೆ.
ಓದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ.