ಆನೆಗಳಿಗೆ ಕೈಗಳಿಲ್ಲದಿರಬಹುದು. ಆದರೆ, ಸೊಂಡಿಲು ಇದೆ. ನಾವು ಕೈಗಳಿಂದ ಮಾಡುವ ಎಷ್ಟೋ ಕಾರ್ಯಗಳನ್ನು ಆನೆಗಳು ತಮ್ಮ ಸೊಂಡಿಲ ಮೂಲಕ ಮಾಡುತ್ತವೆ. ಅವುಗಳಲ್ಲಿ ಚಿತ್ರರಚನೆಯೂ ಒಂದು. ಸರ್ಕಸ್‌ಗಳಲ್ಲಿ, ಯೂಟ್ಯೂಬ್ ವಿಡಿಯೋಗಳಲ್ಲಿ ಆನೆಗಳು ಪೇಂಟ್ ಬ್ರಶ್ ಹಿಡಿದು ಚಿತ್ರ ಬರೆಯುವುದನ್ನು ನಾವು ನೋಡಬಹುದು. ಆದರೆ, ಇದನ್ನು, ಬಹು ಮಟ್ಟಿಗೆ ಕಲಾ ಸೃಷ್ಟಿ ಎನ್ನಲಾಗದು. ಅದರಲ್ಲಿರುವುದು, ನಿರಂತರ ತರಬೇತಿನಿಂದ ನಿರ್ಮಿತವಾಗಿರುವ ಯಾಂತ್ರೀಕತೆ ಮಾತ್ರ. ‘ಇಂತಹ ಗೆರೆಗಳನ್ನೆಳೆದರೆ ಬಾಳೆಯ ಗೊನೆ ಸಿಗುತ್ತದೆ; ಇಲ್ಲದಿದ್ದರೆ, ಅಂಕುಶದಿಂದ ತಿವಿತ ಸಿಗುತ್ತದೆ’ ಎಂಬ ಪ್ರೋತ್ಸಾಹ-ಶಿಕ್ಷೆಗಳ ಪರಿಣಾಮವಷ್ಟೇ ಅದು.
ಶೇಷಾದ್ರಿ ಗಂಜೂರು ಬರೆಯುವ ‘ಆನೆಗೆ ಬಂದ ಮಾನ’ ಸರಣಿಯಲ್ಲಿ ಚಿತ್ರಬಿಡಿಸುವ ಆನೆಗಳ ಕುರಿತ ಬರಹ

 

ಸೆಪ್ಟೆಂಬರ್ ೧೨, ೧೯೪೦. ಪೂರ್ವ ಫ್ರಾನ್ಸಿನ ಮಾಂಟಿನ್ಯಾಕ್-ಲಾಸ್ಕೋ ಎಂಬ ಹಳ್ಳಿಯಲ್ಲಿ, ಆ ದಿನ ಶಾಲೆಗೆ ರಜೆಯಿತ್ತು. ಆ ಹಳ್ಳಿಯಲ್ಲಿದ್ದ ಮಾರ್ಸೆಲ್ ಎಂಬ ಹದಿಹರೆಯದ ಹುಡುಗನೊಬ್ಬ ರೋಬೋ ಎಂಬ ತನ್ನ ನಾಯಿಯೊಂದಿಗೆ ಹಳ್ಳಿಯ ಸುತ್ತಲಿದ್ದ ಕುರುಚಲು ಅರಣ್ಯ ಪ್ರದೇಶದಲ್ಲಿ ತಿರುಗಾಡುತ್ತಿದ್ದ. ಆ ಪ್ರದೇಶವೇನೂ ಅವನಿಗೆ ಹೊಸದಾಗಿರಲಿಲ್ಲ. ಮಾರ್ಸೆಲ್ ಮತ್ತು ಅವನ ಮಿತ್ರರು, ಹಿಂದೆಯೂ ಎಷ್ಟೋ ಬಾರಿ ಅಲ್ಲಿ ಸುತ್ತಾಡಿದ್ದರು. ಆದರೆ, ಆ ದಿನ, ರೋಬೋ, ಮಾರ್ಸೆಲ್‌ನಿಂದ ಸ್ವಲ್ಪದೂರ ಓಡಿ ಮಾಯವಾಯಿತು. ಕೊಂಚ ಹುಡುಕಾಟದ ನಂತರ, ಮಾರ್ಸೆಲ್‌ಗೆ, ರೋಬೋ ಗಿಡ-ಗಂಟೆಗಳು ತುಂಬಿದ್ದ ಹಳ್ಳವೊಂದರಲ್ಲಿ ಬಿದ್ದಿರುವುದು ಕಂಡಿತು. ತನ್ನ ನಾಯಿಯನ್ನು, ಆ ಹಳ್ಳದಿಂದ ತೆಗೆಯಲು ಮಾರ್ಸೆಲ್ ಯೋಚಿಸಿದನಾದರೂ, ಅದು ಒಬ್ಬನ ಪ್ರಯತ್ನದಿಂದ ಸಾಧ್ಯವಿಲ್ಲವೆಂದು ಅರಿವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ.

ಮಾರ್ಸೆಲ್, ತನ್ನ ಹಳ್ಳಿಗೆ ಓಡಿ ಹೋಗಿ, ಆಗಿರುವ ವಿಷಯವನ್ನು ತನ್ನ ಮಿತ್ರರಿಗೆ ತಿಳಿಸಿದ. ಮಾರ್ಸೆಲ್ ಒಂದಿಗೆ ಅವನ ಮೂವರು ಮಿತ್ರರು, ರೋಬೋವನ್ನು ರಕ್ಷಿಸಲು ಆ ಹಳ್ಳದ ಬದಿಗೆ ಬಂದರು. ಆ ಹಳ್ಳದ ಆಳ ಸುಮಾರು ಐವತ್ತು ಅಡಿ ಇತ್ತು. “ಹಳ್ಳ” ಎನ್ನುವುದಕ್ಕಿಂತ ಒಂದು ಸುರಂಗದಂತೆಯೇ ಇತ್ತು. ಅವರ ಹಳ್ಳಿಯಿಂದ ಅನತಿ ದೂರದಲ್ಲಿಯೇ, ಕೊತ್ತಳವೊಂದು ಇತ್ತು. ಹಲವು ಶತಮಾನಗಳ ಹಿಂದೆ ನಿರ್ಮಿಸಿದ್ದ ಕೊತ್ತಳವದು. ಆ ಕೊತ್ತಳದಿಂದ ಹೋಗಿ ಬರಲು, ಒಂದು ಗುಪ್ತ ಸುರಂಗ ಮಾರ್ಗವೂ ಇದೆಯೆಂಬ ಪ್ರತೀತಿಯೂ ಸುತ್ತಲ ಪ್ರದೇಶಗಳಲ್ಲಿ ಇದ್ದಿತು.

ರೋಬೋ, ಅಡ್ಡಾಡುತ್ತಾ, ಈ ಗುಪ್ತ ಸುರಂಗ ಮಾರ್ಗವನ್ನು ಕಂಡು ಹಿಡಿದು ಬಿಟ್ಟಿತೇ?! ಮಾರ್ಸೆಲ್ ಮತ್ತು ಅವನ ಮಿತ್ರರು, ಹಾಗೆಂದೇ ಯೋಚಿಸಿದರು. ಆ ನಾಲ್ವರೂ, ಆ ಹಳ್ಳದಲ್ಲಿ ಬೆಳೆದಿದ್ದ ಗಿಡ-ಗಂಟೆಗಳನ್ನು ಸರಿಸುತ್ತಾ ಒಳಕ್ಕಿಳಿದರು. ಹಳ್ಳದ ಆಳದಲ್ಲಿ, ಅವರಿಗೊಂದು ಸಣ್ಣದೊಂದು ಗುಹೆಯೂ ಕಂಡಿತು. ಆ ಗುಹೆಯೊಳಗಿನ ಕತ್ತಲಿನಲ್ಲಿ, ಅದರ ಗೋಡೆಗಳ ಮೇಲೆ ಹಲವಾರು ಚಿತ್ರಗಳು ಮಸಕು-ಮಸುಕಾಗಿ ಕಂಡವು. ಅಷ್ಟರಲ್ಲಿ, ಸಂಜೆಯೂ ಆಗಿತ್ತು. ಮಾರ್ಸೆಲ್ ಮತ್ತು ಅವನ ಮಿತ್ರರು, ರೋಬೋವನ್ನು ರಕ್ಷಿಸಿ, ಆ ಹಳ್ಳದಿಂದ ಹೊರಬಂದರು.

ತಮ್ಮ ಸಾಕುನಾಯಿ ಅಕಸ್ಮಾತ್ತಾಗಿ ಕಂಡು ಹಿಡಿದಿದ್ದ ಈ “ಗುಪ್ತ ಸುರಂಗ ಮಾರ್ಗ”ವನ್ನು ಮತ್ತಷ್ಟು ಅನ್ವೇಷಿಸುವ ಆಲೋಚನೆ ಆ ನಾಲ್ವರು ಮಿತ್ರರಿಗೂ ಬಂದಿತು. ಮಾರನೆಯ ದಿನ, ಕ್ಯಾಂಡಲ್-ಲಾಟೀನುಗಳನ್ನು ತಂದು, ಗುಹೆಯ ಮೇಲಿದ್ದ ಚಿತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸುವ ಯೋಜನೆಯನ್ನು ಅವರು ಹಾಕಿಕೊಂಡರು. ತಾವು ಅದನ್ನು ಮತ್ತಷ್ಟು ಪರಿಶೀಲಿಸುವವರೆಗೂ, ಮತ್ತಾರಿಗೂ ಅದರ ವಿಷಯವನ್ನು ತಿಳಿಸುವಂತಿಲ್ಲವೆಂದು ಒಬ್ಬರಿಗೊಬ್ಬರು ಆಣೆ ಮಾಡಿಕೊಂಡರು.

ತಮ್ಮ ಯೋಜನೆಯಂತೆಯೇ, ಈ ನಾಲ್ವರು ಹದಿಹರೆಯದ ಹುಡುಗರು, ಮಾರನೆಯ ದಿನ ಆ ಗುಹೆಯ ಆಳಕ್ಕೆ ಇಳಿದರು. ಈ ಬಾರಿ, ಅವರು ಸೂಕ್ತ ದೀಪಗಳೊಂದಿಗೆ ಸನ್ನದ್ಧರಾಗಿದ್ದರು. ಆ ಗುಹೆಯೊಳಗಿನ ಗೋಡೆಗಳ ಮೇಲಿದ್ದ ಚಿತ್ರಗಳು ಕಂಡವು. ಗೋಡೆಗಳ ಮೇಲಷ್ಟೇ ಅಲ್ಲ, ಚಾವಣಿಯ ಒಳಮೈ ಮೇಲೂ ಚಿತ್ರಗಳು ಇದ್ದವು. ಒಂದೇ ಒಂದು ಮಾನವಾಕೃತಿಯ ಚಿತ್ರವನ್ನು ಬಿಟ್ಟರೆ, ಉಳಿದೆಲ್ಲವೂ ವಿವಿಧ ಪ್ರಾಣಿಗಳ ಚಿತ್ರಗಳು.

ಶಾಲೆಯಲ್ಲಿ, ಇತಿಹಾಸವನ್ನು ಕೊಂಚ ಮಟ್ಟಿಗೆ ಓದಿದ್ದ ಈ ಹುಡುಗರಿಗೆ, ತಾವು ನೋಡುತ್ತಿದ್ದ ಚಿತ್ರಗಳು ಹಳೆಯವೆಂದು ತಿಳಿದಿತ್ತು. ಆದರೆ, ಎಷ್ಟು ಹಳೆಯವೆಂಬುದರ ಬಗೆಗೆ ಅವರಿಗೆ ಯಾವುದೇ ಅರಿವಿರಲಿಲ್ಲ. ಪುರಾತನ ಚಿತ್ರಗಳಿಂದ ತುಂಬಿರುವ ಈ ಗುಹೆಯನ್ನು, ಇತರರಿಗೆ ಎಂಟ್ರಿ ಟಿಕೆಟ್ ಇಟ್ಟು ತೋರಿಸಿ ಹಣ ಮಾಡುವ ಆಲೋಚನೆ ಸಹ ಅವರಿಗೆ ಬಂದಿತು. ಇಷ್ಟೆಲ್ಲಾ ಯೋಚನೆ ಬಂದ ಮೇಲೆ, ತಮ್ಮ ಈ ಅನ್ವೇಷಣೆಯನ್ನು ಗುಟ್ಟಾಗಿ ಇಟ್ಟುಕೊಳ್ಳಲು ಸಾಧ್ಯವಿರಲಿಲ್ಲ. ಆ ಚಿತ್ರಗಳ ಪುರಾತನತೆಯ ಬಗೆಗೆ ಮತ್ತಷ್ಟು ತಿಳಿದುಕೊಳ್ಳಲು, ತಮ್ಮ ಹೈಸ್ಕೂಲಿನ ಇತಿಹಾಸ-ಶಿಕ್ಷಕ ಲಿಯಾನ್ ಲವಾಲ್‌ನನ್ನು ಸಂಪರ್ಕಿಸಿದರು.

ತನ್ನ ಶಿಷ್ಯರ ಸಾಹಸದ ಫಲವನ್ನು ಸ್ವತಃ ಕಾಣಲು, ಲವಾಲ್ ಆ ಗುಹೆಗೆ ಬಂದ. ಆ ಗುಹೆಯಲ್ಲಿದ್ದ ಚಿತ್ರಕಲೆಯ ಮಹತ್ವ ಅವನಿಗೆ ಒಮ್ಮೆಲೆ ಅರಿವಾಯಿತು. ತಾನು ಹೇಳುವವರೆಗೆ, ಗುಹೆಯೊಳಗೆ ಇನ್ನಾರನ್ನೂ ಬಿಡಬಾರದೆಂದು ಅವನು ತನ್ನ ಶಿಷ್ಯರಿಗೆ ಅಣತಿ ಇತ್ತ.

ಲವಾಲ್‌ನ ಮೂಲಕ, ಫ್ರೆಂಚ್ ಆರ್ಕಿಯಾಲಜಿಸ್ಟ್ ಹೆನ್ರಿ ಬ್ರೂಲ್‌ನಿಗೆ ಸಂದೇಶ ರವಾನೆಯಾಯಿತು. ಫ್ರೆಂಚ್ ಪುರಾತತ್ವ ಶಾಸ್ತ್ರಜ್ಞರು ಬಂದರು. ಗುಹೆಯೊಳಗಿನ ಚಿತ್ರಗಳನ್ನು ಕೂಲಂಕುಷವಾಗಿ ಪರಿಶೀಲಿಸಿದರು. ವೈಜ್ಞಾನಿಕ ಅಧ್ಯಯನಗಳನ್ನು ನಡೆಸಿದರು. ನಂತರದ ದಶಕಗಳಲ್ಲಿ, ಈ ಚಿತ್ರಗಳ ಬಗೆಗೆ, ಎಷ್ಟೋ ತಜ್ಞರು ಅಧ್ಯಯನ ನಡೆಸಿದ್ದಾರೆ. ಇನ್ನೂ ನಡೆಸುತ್ತಲೂ ಇದ್ದಾರೆ.

ಈ ತಜ್ಞರು ಹೇಳುವಂತೆ, ಈ ಚಿತ್ರಗಳನ್ನು ಸುಮಾರು ಹದಿನೇಳು ಸಾವಿರ ವರ್ಷಗಳ ಹಿಂದೆ ರಚಿಸಲಾಯಿತಂತೆ.
ಮಾನವರು ರಚಿಸಿದ ಅತ್ಯಂತ ಪ್ರಾಚೀನ ಕಲಾಕೃತಿಗಳ ಪಟ್ಟಿಯಲ್ಲಿ, ಲಾಸ್ಕೋ ಗುಹೆಗಳ ಕಲೆಯೂ ಸೇರಿದೆ.

ನಾಯಿಯೊಂದು, ಅಕಸ್ಮಾತ್ತಾಗಿ ಕಾಣ ತೋರಿಸಿದ ಈ ಚಿತ್ರಗಳ ಪ್ರಾಚೀನತೆ ನಮಗೆ ಇಂದು ತಿಳಿದಿದೆಯಾದರೂ, ಆ ಕಲೆಯ ಉದ್ದೇಶ ಮಾತ್ರ ಇನ್ನೂ ಮಸುಕು.

*****

ರೋಬೋ ಎಂಬ ನಾಯಿ, ಇತಿಹಾಸ-ಪೂರ್ವ ಮಾನವರ ಕಲೆಗಾರಿಕೆಯನ್ನು ಹೊರ ಹಾಕಿದ ದಶಕಗಳ ನಂತರದಲ್ಲಿ, ವಿಶ್ವದ ನಾನಾ ಭಾಗಗಳಲ್ಲಿ, ಇನ್ನೂ ಹಳೆಯ ಕಲಾಕೃತಿಗಳು ಕಂಡು ಬಂದಿವೆ. ಹತ್ತಾರು ಸಾವಿರ ವರ್ಷಗಳ ಹಿಂದೆ, ಆಧುನಿಕತೆಯ ಯಾವುದೇ ಸವಲತ್ತುಗಳೂ ಇರದ ಮಾನವರು ರಚಿಸಿದ ಈ ಚಿತ್ರಕಲೆ, ಭಾರತವೂ ಸೇರಿದಂತೆ ಹಲವಾರು ದೇಶಗಳಲ್ಲಿ ಕಾಣಸಿಗುತ್ತಿವೆ.

ಈ ಇತಿಹಾಸ-ಪೂರ್ವ ಕಲೆಯಲ್ಲಿ ಬಹುಮಟ್ಟಿಗೆ ಕಾಣುವುದು ವಿವಿಧ ಪ್ರಾಣಿಗಳ ಚಿತ್ರಗಳೇ. ಮಾನವಾಕೃತಿಗಳು ಬಹು ಅಪರೂಪ. ಆದರೆ, ಮಾನವರ ಕೈಗಳ ಚಿತ್ರಗಳು ಹಲವಾರು ಗುಹೆಗಳಲ್ಲಿ ಕಂಡು ಬರುತ್ತವೆ. ಈ ಚಿತ್ರಗಳನ್ನು ರಚಿಸಿದ ಕಲಾವಿದರು, ಏನೋ ಹೇಳುತ್ತಿದ್ದಾರೆ, ಅವರು ಹೇಳುತ್ತಿರುವುದು ಏನೆಂದು ನಮಗೆ ಅರ್ಥವಾಗದಿದ್ದರೂ ಏನೋ ಹೇಳಬೇಕೆಂಬ ಉದ್ದೇಶದಿಂದಲೇ ಅವರು ಈ ಚಿತ್ರಗಳನ್ನು ರಚಿಸಿರಬಹುದೇ? ಅಥವಾ, ಈ ಚಿತ್ರಗಳು ರಚನೆಯ ಆನಂದಕ್ಕಷ್ಟೇ ಸೃಷ್ಟಿಯಾಗಿರಬಹುದೇ?

*****

ನಾನು ಹೈ-ಸ್ಕೂಲಿನಲ್ಲಿದ್ದಾಗ, ಪ್ರತಿ ವರ್ಷ ಜೂನ್‌ನಲ್ಲಿ, ಶಾಲಾವರ್ಷದ ಆರಂಭದ ವೇಳೆಗೆ, ಶಾಲೆಯ ಹೊರ-ಒಳ ಗೋಡೆಗಳಿಗೆ ಸುಣ್ಣ-ಬಣ್ಣ ಹೊಡೆಸಿ ಸಿದ್ಧಪಡಿಸಲಾಗುತ್ತಿತ್ತು. ಎಲ್ಲ ಗೋಡೆಗಳೂ ಹೊಸ ಸುಣ್ಣದ ಬಿಳುಪಿನಿಂದ, ಮೋಡ ಕವಿದ ಆ ದಿನಗಳಲ್ಲೂ ಹೊಳೆಯುತ್ತಿದ್ದವು. ನಮ್ಮ ಶಾಲೆಯ ಸುತ್ತಲಿನ ಮೈದಾನಕ್ಕೆ ಕೆಮ್ಮಣ್ಣಿನ ಹೊರ-ಮೈ ಇತ್ತು. ಜೂನ್ ತಿಂಗಳಲ್ಲಿ, ಇನ್ನೂ ಮಳೆಯಾಗುತ್ತಿದ್ದುದ್ದರಿಂದ, ಈ ಮೈದಾನದಲ್ಲಿ ಆಟವಾಡುತ್ತಿದ್ದ ನಮ್ಮ ಶೂಗಳಿಗೆ ಈ ಒದ್ದೆ ಕೆಮ್ಮಣ್ಣು ಮೆತ್ತಿಕೊಳ್ಳುವುದು ಸಹಜವೇ ಆಗಿತ್ತು. ಹೀಗಾಗಿ, ಮಳೆಗಾಲದಲ್ಲಿ, ಶಾಲಾ ಕೊಠಡಿಯ ನೆಲ ಸಹ ಕೆಂಪೇರುತ್ತಿತ್ತು. ಕೆಂಪು ನೆಲ. ಖಾಕಿ ಬಣ್ಣದ ಡೆಸ್ಕುಗಳು. ಬಿಳಿಯ ಗೋಡೆ. ಇವು, ಒಂದು ರೀತಿಯಲ್ಲಿ, ಕೆಂಪು ಕ್ಯಾನ್‌ವಾಸ್ ಶೂ, ಖಾಕಿ ಪ್ಯಾಂಟ್, ಬಿಳಿ ಷರ್ಟ್‌ನ ನಮ್ಮ ಯೂನಿಫಾರ್ಮ್ ಅನ್ನೇ ಹೋಲುತ್ತಿದ್ದವು.

ನಾನು ಹತ್ತನೆಯ ತರಗತಿಯಲ್ಲಿದ್ದಾಗ, ಒಂದು ದಿನ, ನಾವು ಡ್ರಿಲ್-ಪೀರಿಯಡ್ ಮುಗಿಸಿ ತರಗತಿಗೆ ವಾಪಸಾದೆವು. ಮುಂದಿನ ಪೀರಿಯಡ್‌ನ ಮಾಸ್ತರರು ಇನ್ನೂ ಬಂದಿರಲಿಲ್ಲ. ಒಂದಿಷ್ಟು ಹುಡುಗರು, ತಮ್ಮ-ತಮ್ಮ ಡೆಸ್ಕ್‌ಗಳಲ್ಲಿ ಕುಳಿತುಕೊಳ್ಳುವುದನ್ನು ಬಿಟ್ಟು, ಗೋಡೆಗೆ ಒಂದು ಕಾಲನ್ನು ಒತ್ತಿ, ಒಂದೇ ಕಾಲಿನಲ್ಲಿ ನಿಂತು ಹರಟೆ ಹೊಡೆಯುತ್ತಿದ್ದರು. ಹೀಗೆ ನಿಂತಿದ್ದ, ಹುಡುಗನೊಬ್ಬನ ಶೂ ಗುರುತಿನ ಕೆಂಪು ಬಣ್ಣದ ಕಲೆ, ಆಗಷ್ಟೇ ಹೊಡೆಸಿದ್ದ ಸುಣ್ಣದ ಗೋಡೆಯ ಮೇಲೆ ಅತ್ಯಂತ ಸ್ಪಷ್ಟವಾಗಿ ಅಚ್ಚಾಗಿತ್ತು. ಇದನ್ನು ಗಮನಿಸಿದ ಕೆಲವೇ ಕ್ಷಣದಲ್ಲಿ, ಈ Perfect Artನಿಂದ ಸ್ಫೂರ್ತಿಗೊಂಡು, ಕೊಠಡಿಯಲ್ಲಿದ್ದ ಹುಡುಗರೆಲ್ಲರೂ, ನಮ್ಮ ಶೂಗಳ ಅಚ್ಚನ್ನೂ ಗೋಡೆಯ ಮೇಲೆ ರೂಪಿಸಲು ಪ್ರಾರಂಭಿಸಿದೆವು. ನಮ್ಮ ಕಲೆಗಾರಿಕೆಗೆ, ಜಾಗ ಕಡಿಮೆಯಾಗುತ್ತಿದ್ದಂತೆಯೇ, ಕೈಯಲ್ಲಿ ಶೂ ಹಿಡಿದು, ಡೆಸ್ಕ್ ಮೇಲೆ ನಿಂತು ಮೇಲು ಭಾಗದ ಗೋಡೆಯ ಮೇಲೂ ಶೂ ಮಾರ್ಕ್ ಮಾಡುವುದು ಪ್ರಾರಂಭವಾಯಿತು. ಕೆಲವೇ ನಿಮಿಷಗಳಲ್ಲೇ, ಕೊಠಡಿಯ ಚಾವಣಿಯವರೆಗೂ ವಿವಿಧ ಸೈ಼ಜ಼ುಗಳ ಶೂ ಮಾರ್ಕುಗಳು ಕಂಗೊಳಿಸುತ್ತಿದ್ದವು. (ಹೆಂಚಿನ ಚಾವಣಿಯಾಗಿದ್ದರಿಂದ ಅದು ನಮ್ಮ ಕಲೆಗಾರಿಕೆಗೆ ಗುರಿಯಾಗಲಿಲ್ಲ)

ಒಟ್ಟಿನಲ್ಲಿ, ಆ ದಿನ, ಹತ್ತನೆಯ ತರಗತಿಯ ‘ಎ’ ಸೆಕ್ಷನ್ ಕೊಠಡಿ ಯಾವುದೋ ಅತ್ಯಾಧುನಿಕ ಆರ್ಟ್ ಗ್ಯಾಲೆರಿಯ ಮಾಡರ್ನ್ ಆರ್ಟ್ ಇನ್ಸ್ಟಲೇಷನ್‌ನಂತೆ ಕಾಣುತ್ತಿತ್ತು. ನಮ್ಮ ಕಲೆಗೆ ಉದ್ದೇಶವಾಗಲೀ, ಗುರಿಯಾಗಲೀ ಇರಲಿಲ್ಲ. ಇದ್ದಿದ್ದು, ಕೇವಲ ಆ ಸೃಷ್ಟಿಯ ಆ ಕ್ಷಣದ ಆನಂದವಷ್ಟೇ.

ಆದಿಮಾನವರ ಕೆಲವೊಂದು ಕಲಾಕೃತಿಗಳನ್ನು ಕಂಡಾಗ (ಉದಾಹರಣೆಗೆ, ಅರ್ಜೆಂಟೀನಾದ ಗುಹೆಯೊಂದರಲ್ಲಿ ಕಾಣುವ ಹತ್ತು ಸಾವಿರ ವರ್ಷಗಳ ಹಿಂದಿನ ಬಹು ಮಟ್ಟಿಗೆ ಎಡಗೈಗಳಿಂದಲೇ ತುಂಬಿರುವ ಕಲೆಯನ್ನು ಗಮನಿಸಿ), ಅವರೂ ಸಹ ಹತ್ತನೆಯ ತರಗತಿಯ ಹುಡುಗರಂತೆಯೇ, ಯಾವುದೇ ಗುರಿಯಿಲ್ಲದೆ, ತಮ್ಮ ಆನಂದಕ್ಕಾಗಿಯೇ ಇವುಗಳನ್ನು ರೂಪಿಸಿರಬಹುದು ಎಂದೆನಿಸುತ್ತದೆ.

ಇತ್ತೀಚಿನ ಅಧ್ಯಯನಗಳ ಪ್ರಕಾರ, ಇಂತಹ ಗುಹಾ-ಚಿತ್ರಗಳನ್ನು ಆದಿಮಾನವರಿಗೂ ಹಿಂದಿನ Neanderthalಗಳು ಕೂಡ ರಚಿಸುತ್ತಿದ್ದರಂತೆ. ಸ್ಪೇನ್‌ನ ಮಾಲ್ಟ್ರಾವಿಯೇಸೋ ಗುಹೆಗಳಲ್ಲಿ, ಸುಮಾರು ೬೬,೦೦೦ ವರ್ಷಗಳ ಹಿಂದಿನ ಇಂತಹ ಚಿತ್ರಕಲೆ ದೊರಕಿದೆ.

*****

ತನ್ನ The Picture of Dorian Gray ಕಾದಂಬರಿಯ ಮುನ್ನುಡಿಯಲ್ಲಿ, ಆಸ್ಕರ್ ವೈಲ್ಡ್ “All art is quite useless” ಎಂದೆನ್ನುತ್ತಾನೆ. (ಕಲೆಗೆ ನಿರ್ದಿಷ್ಟ ಗುರಿಯಿರಬಾರದೆಂಬ ಅವನ ಅಭಿಪ್ರಾಯದಲ್ಲಿನ ಪ್ಯಾರಾಡಾಕ್ಸ್, ವ್ಯಂಗ್ಯಗಳ ವಿಚಾರ ಆಸಕ್ತಿಕರವಾದರೂ, ಸದ್ಯಕ್ಕೆ ಅಪ್ರಸ್ತುತ).

ವೈಲ್ಡ್‌ನ ಈ ಮಾತು, ಓದುಗನೊಬ್ಬನ ಕುತೂಹಲಕ್ಕೆ ಕಾರಣವಾಗುತ್ತದೆ. ಆ ಓದುಗ, ವೈಲ್ಡ್‌ಗೆ ಪತ್ರವೊಂದನ್ನು ಬರೆದು, ಕಲೆಯ ನಿರುಪಯುಕ್ತತೆಯ ಕುರಿತು ವಿವರಿಸುವಂತೆ ಕೇಳುತ್ತಾನೆ.

ಈ ಚಿತ್ರಗಳನ್ನು ರಚಿಸಿದ ಕಲಾವಿದರು, ಏನೋ ಹೇಳುತ್ತಿದ್ದಾರೆ, ಅವರು ಹೇಳುತ್ತಿರುವುದು ಏನೆಂದು ನಮಗೆ ಅರ್ಥವಾಗದಿದ್ದರೂ ಏನೋ ಹೇಳಬೇಕೆಂಬ ಉದ್ದೇಶದಿಂದಲೇ ಅವರು ಈ ಚಿತ್ರಗಳನ್ನು ರಚಿಸಿರಬಹುದೇ? ಅಥವಾ, ಈ ಚಿತ್ರಗಳು ರಚನೆಯ ಆನಂದಕ್ಕಷ್ಟೇ ಸೃಷ್ಟಿಯಾಗಿರಬಹುದೇ?

ಆ ಓದುಗನಿಗೆ, ಪತ್ರ ಮುಖೇನವೇ ಉತ್ತರಿಸುವ ವೈಲ್ಡ್, “Art is useless because its aim is simply to create a mood.” ಎಂದೇ ತನ್ನ ಪತ್ರವನ್ನು ಪ್ರಾರಂಭಿಸುತ್ತಾನೆ.

‘ಮೂಡ್’ ಸೃಷ್ಟಿಸುವುದಷ್ಟೇ ಕಲೆಯ ಗುರಿ ಎನ್ನುವ ವೈಲ್ಡ್‌ನ ವಾದವನ್ನು, ‘ಮೂಡ್” ನಿಂದಲೇ ಕಲೆಯ ಸೃಷ್ಟಿ ಎಂದೂ ನಾವು ವಿಸ್ತರಿಸಬಹುದು. ಉದಾಹರಣೆಗೆ, ಬೋರ್ ಹೊಡೆಸುವ ಮೀಟಿಂಗ್‌ ಒಂದರಲ್ಲಿ ಕುಳಿತು, ನೋಟ್‌ಬುಕ್ಕಿನಲ್ಲಿ ಗೀಚುವ ಡೂಡಲ್‌ಗಳ ಸೃಷ್ಟಿಯ ಹಿಂದೆ ಇನ್ನಾವ ಘನ ಉದ್ದೇಶ-ಗುರಿಗಳಿಲ್ಲ. ಹಾಗೆಯೇ, ಸ್ನಾನ ಮಾಡುತ್ತಾ ಕೇವಲ ಸ್ವಾನಂದಕ್ಕಾಗಿ ಗುನುಗುವ ಸ್ವರಗಳಿಗೂ ಅಷ್ಟೇ. ಅವೆಲ್ಲಾ ನಮ್ಮ ಭಾವ ಪ್ರಪಂಚವನ್ನು ಭೌತಿಕ ಪ್ರಪಂಚಕ್ಕೆ ಯಾವುದೇ ಉದ್ದೇಶವಿಲ್ಲದೆ ಹೊರ ಹಾಕುವ ಕ್ರಿಯೆಗಳಷ್ಟೇ.

ಅಮೆರಿಕನ್ ತತ್ವ ಶಾಸ್ತ್ರಜ್ಞ ಹ್ಯಾನ್ಸ್ ಜೋನಾಸ್ ಹೇಳುವಂತೆ, ಇಂತಹ ಕಲಾ ಸ್ವಭಾವ (Art Instinct) – ಉದ್ದೇಶ ರಹಿತವಾಗಿ ಭಾವ ಪ್ರಪಂಚವನ್ನು ಭೌತ ಪ್ರಪಂಚಕ್ಕೆ ಹೊರ ಹಾಕುವ ಕ್ರಿಯೆ – ಇರುವುದು ಕೇವಲ ಮಾನವ ಜೀವಿಗಳಲ್ಲಿ ಮಾತ್ರ. ಅವನೆನ್ನುವಂತೆ, ಉಳಿದೆಲ್ಲಾ ಜೀವಿಗಳ ಪ್ರತಿಯೊಂದು ಕ್ರಿಯೆಯ ಹಿಂದೆಯೂ Biological Evolution ರೂಪಿಸಿರುವ ಗುರಿಯೊಂದು ಇದೆ. (ಆ ಗುರಿ ಏನೆಂಬುದು ಆ ಜೀವಿಗಳಿಗೆ ತಿಳಿಯದಿರಬಹುದೆಂಬುದು ಬೇರೆಯ ಮಾತು)

ವೈಲ್ಡ್‌ನ “ಕಲೆ ನಿರುಪಯುಕ್ತ” ಎಂಬ ವಾದಕ್ಕೆ ಪುಷ್ಟಿಕೊಡುವ ಜೋನಾಸ್, ಕಲೆಯಿಂದ (ಉದಾಹರಣೆಗೆ, ನಾವು ರಚಿಸುವ ಡೂಡಲ್‌ಗಳಿಂದ) ಜೈವಿಕವಾಗಿ ಯಾವುದೇ ಪ್ರಯೋಜನವಿಲ್ಲವೆನ್ನುತ್ತಾನೆ. (ಕಲೆಯ ಸೃಷ್ಟಿಯ ನಂತರ ಅದಕ್ಕೆ ಬೆಲೆ ಬರುವುದು, ಹಣ-ಕೀರ್ತಿ ಸಂಪಾದಿಸುವುದು ಬೇರೆಯ ವಿಚಾರ)

ಯಾವುದೇ ಪ್ರಯೋಜನವಿಲ್ಲದಿದ್ದರೂ, ಕಲಾ ರಚನೆಯಲ್ಲಿ ತೊಡಗುವುದು ಮಾನವತೆಯ ವೈಶಿಷ್ಟ್ಯವೆನ್ನುವುದು ಜೋನಾಸ್ ವಾದ. ಈ ವಾದದ ಮುಂದುವರಿಕೆಯೆಂದರೆ, ಕೇವಲ ಮನುಷ್ಯರಿಗಷ್ಟೇ ಆಂತರ್ಯದ ಭಾವ ಪ್ರಪಂಚ ಇರುತ್ತದೆ ಎಂಬ ವಾದ.

ಆದರೆ, ಈ ವಾದವನ್ನು ಪೂರ್ಣವಾಗಿ ಒಪ್ಪುವುದು ಕಷ್ಟ. ಉದಾಹರಣೆಗೆ, ಮಾನವ ಕೈಗಳಿಲ್ಲದೆ ಚಿತ್ರ ರಚನೆ ಬಹುಮಟ್ಟಿಗೆ ಅಸಾಧ್ಯ. ಹಾಗೆಯೇ, ಧ್ವನಿಪೆಟ್ಟಿಗೆ (Vocal Cords) ಇಲ್ಲದೆ ಹಾಡನ್ನು ಗುನುಗುವುದಾದರೂ ಹೇಗೆ?! ಹೀಗಿರುವಾಗ, ಕೈಗಳಿಲ್ಲದ, ಧ್ವನಿಪೆಟ್ಟಿಗೆ ಇಲ್ಲದ ಮೊಸಳೆಯೊಂದು ಗಂಟೆಗಟ್ಟಲೆ ನೀರಬದಿಯಲ್ಲಿ ಅಲುಗಾಡದೆ ಬಿದ್ದಿದ್ದರೆ, ಅದು ತನ್ನ ಭಾವ ಪ್ರಪಂಚದಲ್ಲಿ ಮುಗಿಲ ಮೇಲೆ ತೇಲಾಡುತ್ತಿಲ್ಲವೆಂದು ಖಡಾಖಂಡಿತವಾಗಿ ಹೇಳುವುದು ಸಾಧ್ಯವೇ?!

(ಇಲ್ಲಿ  ‘ಬಿದ್ದಿದ್ದರೆ’ ಎಂಬ ಪದದ ಬಳಕೆಯೂ ಅಸೂಕ್ತವೇ ಎನ್ನಬಹುದು. ಮೊಸಳೆಯಂತಹ ಸರೀಸೃಪಕ್ಕೆ ಮಾನವ ಭಾಷೆಯ “ಕೂರು”,”ನಿಲ್ಲು”,”ಬಿದ್ದಿರು”ಗಳು ಅರ್ಥರಹಿತ)

*****

ಆನೆಗಳಿಗೆ ಕೈಗಳಿಲ್ಲದಿರಬಹುದು. ಆದರೆ, ಸೊಂಡಿಲು ಇದೆ. ನಾವು ಕೈಗಳಿಂದ ಮಾಡುವ ಎಷ್ಟೋ ಕಾರ್ಯಗಳನ್ನು ಆನೆಗಳು ತಮ್ಮ ಸೊಂಡಿಲ ಮೂಲಕ ಮಾಡುತ್ತವೆ. ಅವುಗಳಲ್ಲಿ ಚಿತ್ರರಚನೆಯೂ ಒಂದು. ಸರ್ಕಸ್‌ಗಳಲ್ಲಿ, ಯೂಟ್ಯೂಬ್ ವಿಡಿಯೋಗಳಲ್ಲಿ ಆನೆಗಳು ಪೇಂಟ್ ಬ್ರಶ್ ಹಿಡಿದು ಚಿತ್ರ ಬರೆಯುವುದನ್ನು ನಾವು ನೋಡಬಹುದು. ಆದರೆ, ಇದನ್ನು, ಬಹು ಮಟ್ಟಿಗೆ “ಕಲಾ ಸೃಷ್ಟಿ” ಎನ್ನಲಾಗದು. ಅದರಲ್ಲಿರುವುದು, ನಿರಂತರ ತರಬೇತಿನಿಂದ ನಿರ್ಮಿತವಾಗಿರುವ ಯಾಂತ್ರೀಕತೆ ಮಾತ್ರ. “ಇಂತಹ ಗೆರೆಗಳನ್ನೆಳೆದರೆ ಬಾಳೆಯ ಗೊನೆ ಸಿಗುತ್ತದೆ; ಇಲ್ಲದಿದ್ದರೆ, ಅಂಕುಶದಿಂದ ತಿವಿತ ಸಿಗುತ್ತದೆ ಎಂಬ ಪ್ರೋತ್ಸಾಹ-ಶಿಕ್ಷೆ”ಗಳ ಪರಿಣಾಮವಷ್ಟೇ ಅದು. ಆ ಗೆರೆಗಳಿಗೆ ನಾವು ಗುರುತಿಸಬಹುದಾದಂತಹ ಭೌತಿಕ ರೂಪವಿದ್ದರೆ, ಅದು ಆನೆಯ ಭಾವ ಪ್ರಪಂಚದಿಂದ ಮೂಡಿ ಬಂದಿರುವಂತಹುದಲ್ಲ. ಆ ಆನೆ ಸ್ವಾನಂದಕ್ಕಾಗಿ ರಚಿಸಿರುವ ಚಿತ್ರವಲ್ಲ ಅದು.

ಆದರೆ, ಆನೆಗಳು ಸ್ವ ಪ್ರೇರಣೆಯಿಂದಲೇ ಚಿತ್ರ ರಚನೆಯಲ್ಲಿ ತೊಡಗಿಕೊಂಡಿರುವ ಹಲವಾರು ಉದಾಹರಣೆಗಳೂ ಇವೆ. ಅದರಲ್ಲೂ, ಏಕಾಂಗಿತನವನ್ನು ಅನುಭವಿಸುವ ಆನೆಗಳು, ತಮ್ಮ ಬೇಸರವನ್ನು ಕಡಿಮೆ ಮಾಡಿಕೊಳ್ಳಲು – ನಾವು ಮೀಟಿಂಗುಗಳಲ್ಲಿ ಕುಳಿತು ಡೂಡಲ್ ರಚಿಸುವಂತೆ – ಏನನ್ನೋ ಗೀಚುವುದನ್ನು ಈ ಆನೆಗಳ ಮೇಲ್ವಿಚಾರಕರು ಗಮನಿಸಿದ್ದಾರೆ.

ರೂಬಿ ಒಬ್ಬಳು ಹೆಣ್ಣಾನೆ. ಅವಳಿಗೆ ಕೇವಲ ಏಳು ತಿಂಗಳಾಗಿದ್ದಾಗ, ಅವಳನ್ನು, ಥಾಯ್ಲೆಂಡಿನಲ್ಲಿದ್ದ ಅವಳ ಕುಟುಂಬದಿಂದ ಬೇರೆ ಮಾಡಿ, ಅಮೆರಿಕದ ಫೀನಿಕ್ಸ್ ನಗರದಲ್ಲಿನ ಜ಼ೂಗೆ ಸಾಗಹಾಕಲಾಯಿತು. ಮುಂದಿನ ಹಲವು ವರ್ಷಗಳ ಕಾಲ ಅವಳು ಇನ್ನೊಂದು ಆನೆಯನ್ನೇ ನೋಡಲಿಲ್ಲ. ಅವಳ ಸಂಗಾತಿಗಳೆಂದರೆ ಒಂದು ಮೇಕೆ ಮತ್ತು ಕೆಲವೊಂದು ಕೋಳಿ ಮರಿಗಳು.

ಹಲವೊಮ್ಮೆ, ಅವಳು, ಸಣ್ಣದೊಂದು ಕಡ್ಡಿಯನ್ನೋ, ಕಲ್ಲನ್ನೋ ತನ್ನ ಸೊಂಡಿಲಲ್ಲಿ ಹಿಡಿದು ನೆಲದ ಮೇಲೆ ಗೀಚುವುದನ್ನು ಆ ಮೃಗಾಲಯದ ಮೇಲ್ವಿಚಾರಕರು ನೋಡಿದರು. ಅವರು, ಅವಳಿಗೆ, ಸೊಂಡಿಲಲ್ಲಿ ಪೇಂಟ್ ಬ್ರಶ್ ಹಿಡಿದು, ಕ್ಯಾನ್‌ವಾಸ್ ಒಂದರ ಮೇಲೆ ಗೀಚುವುದನ್ನು ಕಲಿಸಿದರು. ಆ ಗೀಚುವಿಕೆಗೆ ಯಾವುದೇ ನಿರ್ಬಂಧಗಳಿರಲಿಲ್ಲ. ಹಲವಾರು ಬಣ್ಣದ ಪೇಂಟ್ ಡಬ್ಬಗಳನ್ನು ಅವಳ ಲಾಯದಲ್ಲಿ ಇಡಲಾಯಿತು. ರೂಬಿ, ತನಗೆ “ಮೂಡ್” ಬಂದಾಗ, ತನಗಿಷ್ಟಬಂದ ಬಣ್ಣ ಬಳಸಿ ಕ್ಯಾನ್‌ವಾಸ್ ಮೇಲೆ, ತನ್ನಿಷ್ಟದಂತೆ ಗೀಚುತ್ತಿದ್ದಳು.

ಅವಳು ಈ ರೀತಿ ರಚಿಸಿದ ಡೂಡಲ್‌ಗಳಲ್ಲಿ ನಾವು ಗುರುತಿಸಬಹುದಾದಂತಹ ಚಿತ್ರಗಳಿರಲಿಲ್ಲ. ಆದರೆ, ಕೊಂಚ ದಿನಗಳ ನಂತರ ಒಂದು ವಿಚಾರ ಹೊರ ಬಿತ್ತು. ರೂಬಿ ಬಳಸುತ್ತಿದ್ದ ಬಣ್ಣಗಳಿಗೂ, ಆ ದಿನ ಅವಳು ಕಂಡ ದೃಶ್ಯಗಳಿಗೂ ಒಂದು ಲಿಂಕ್ ಇತ್ತು. ಉದಾಹರಣೆಗೆ, ಅವಳನ್ನು ನೋಡಲು ಬರುತ್ತಿದ್ದ ಜನರ ಉಡುಗೆಗಳ ಬಣ್ಣಗಳ ಮೇಲೆ, ಅವಳು ಪೇಂಟ್ ಬಣ್ಣಗಳನ್ನು ಆಯ್ದುಕೊಳ್ಳುತ್ತಿದ್ದಳು. ಆ ಮೃಗಾಲಯದ ಫೈರ್-ಸೇಫ್ಟಿಯನ್ನು ಪರೀಕ್ಷಿಸಲು, ಫೈರ್ ಎಂಜಿನ್ ಒಂದರಲ್ಲಿ ಅಧಿಕಾರಿಗಳು ಇಂತಿಷ್ಟು ದಿನಕ್ಕೊಮ್ಮೆ ಎಂಬಂತೆ ನಿಯಮಿತವಾಗಿ ಬರುತ್ತಿದ್ದರು. ಕೆಂಪು, ಬಿಳಿ, ಹಳದಿ ಬಣ್ಣದ ಆ ಫೈರ್ ಎಂಜಿನ್ ಅನ್ನು ಅವಳ ಲಾಯದ ಬಳಿಯೇ ನಿಲ್ಲಿಸಲಾಗುತ್ತಿತ್ತು. ಆ ದಿನಗಳಂದು, ರೂಬಿ ಪೇಂಟ್ ಮಾಡಿದರೆ, ಅವಳ ಪೇಂಟಿಂಗ್‌ನಲ್ಲಿ ಕೆಂಪು-ಬಿಳಿ-ಹಳದಿಗಳು ಕಾಣುತ್ತಿದ್ದವು.

ಕಲಾವಿದೆಯಾಗಿ, ರೂಬಿಗಿಂತ ಹೆಸರು ಪಡೆದವಳೆಂದರೆ, ಸಿರಿ ಎಂಬ ಇನ್ನೊಬ್ಬಳು ಹೆಣ್ಣಾನೆ. ೧೯೭೨ರಲ್ಲಿ, ಅವಳಿಗೆ ಐದು ವರ್ಷವಿದ್ದಾಗ ಅವಳನ್ನು ಅಮೆರಿಕದ ಸಿರಾಕ್ಯೂಸ್ ಮೃಗಾಲಯಕ್ಕೆ ಕರೆತರಲಾಯಿತು. ಮುಂದಿನ ಹಲವು ವರ್ಷಗಳ ಕಾಲ ಅವಳು ಆ ಮೃಗಾಲಯದ ಏಕಾಂಗಿ ಆನೆ. ೧೯೮೦ರಲ್ಲಿ, ಮೃಗಾಲಯದ ಅಧಿಕಾರಿಗಳು, ಅವಳು ತನ್ನ ಸೊಂಡಿಲಲ್ಲಿ ಸಣ್ಣ ಕಲ್ಲೊಂದನ್ನು ಹಿಡಿದು ಮಣ್ಣಿನ ಮೇಲೆ ಗೀಚುವುದನ್ನು ಗಮನಿಸಿದರು. ಈ ಗೀಚುವಿಕೆ ಕೇವಲ ದಿನದ ಸಮಯದಲ್ಲಿ ಮಾತ್ರ ನಡೆಯುತ್ತಿರಲಿಲ್ಲ. ಏಕಾಂಗಿತನವನ್ನು ಅನುಭವಿಸುತ್ತಿದ್ದ ಅವಳು, ಹಲವೊಮ್ಮೆ, ರಾತ್ರಿ ಸಹ ತನ್ನ ಲಾಯದಿಂದ ಹೊರಬಂದು, ಸಣ್ಣ ಕಲ್ಲೊಂದನ್ನು ಹಿಡಿದು, ನೆಲದ ಮೇಲೆ ಗೀಚುತ್ತಿದ್ದಳು.

ಕುತೂಹಲಕರವೆಂಬಂತೆ, ಹಲವಾರು ಬಾರಿ, ಅವಳು ರಚಿಸುತ್ತಿದ್ದ ಈ ಚಿತ್ರಕ್ಕೆ ಒಂದು ನಿರ್ದಿಷ್ಟ ಆಕಾರವಿತ್ತು. ಅವಳು, ಯಾವುದೋ ಒಂದು ಚಿತ್ರವನ್ನು ಮತ್ತೆ-ಮತ್ತೆ ರಚಿಸಲು ಪ್ರಯತ್ನಪಡುತ್ತಿರುವುದು ಮೇಲ್ನೋಟಕ್ಕೇ ಗೋಚರವಾಯಿತು. ಅದನ್ನು ಗಮನಿಸಿದ ಮೇಲೆ, ಮೃಗಾಲಯದ ಅಧಿಕಾರಿಗಳು, ಅವಳಿಗೆ, ಪೇಪರ್, ಪೆನ್ಸಿಲ್, ಬ್ರಶ್, ಬಣ್ಣ ಇತ್ಯಾದಿಗಳನ್ನು ನೀಡಲಾರಂಭಿಸಿದರು. ಸಿರಿ ತನಗೆ ಬೇಕಾದಾಗ, ತನ್ನಿಷ್ಟದಂತೆ ಚಿತ್ರಗಳನ್ನು ರಚಿಸತೊಡಗಿದಳು. ಅವಳು ಹೀಗೆ ರಚಿಸಿದ ಚಿತ್ರಗಳನ್ನು ೧೯೮೫ರಲ್ಲಿ ಒಂದು ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲಾಯಿತು.

ಸಿರಿ ರಚಿಸಿರುವ ಕೆಲವೊಂದು ಚಿತ್ರಗಳಲ್ಲಿ, ನಾವು ಗುರುತಿಸಬಹುದಾದ ಕೆಲವೊಂದು ಆಕಾರಗಳು – ಉದಾಹರಣೆಗೆ ಚಿಟ್ಟೆ, ಮನುಷ್ಯ, ಪಕ್ಷಿ ಇತ್ಯಾದಿ – ಇವೆಯಾದರೂ, ಅವಕ್ಕೆ ನಾವು ಹೆಚ್ಚಿನ ಮಹತ್ವ ನೀಡಬೇಕಿಲ್ಲ.

ನಾವು ಕಾಣುವ ಪ್ರತಿಯೊಂದು ಭೌತಿಕ ವಸ್ತುವಿನ ರೂಪ-ಆಕಾರಗಳು, ನಮ್ಮ ಕಣ್ಣುಗಳಲ್ಲಿರುವ ಬೆಳಕಿನ ಸೆನ್ಸರ್‌ಗಳ ಮೂಲಕ ತಲುಪುವ ಸಿಗ್ನಲ್‌ಗಳನ್ನು ಒಟ್ಟುಗೂಡಿಸಿ ನಮ್ಮ ಮಿದುಳು ನಿರ್ಮಿಸುವ ಪ್ರತಿಕೃತಿಯಷ್ಟೇ. ಈ ಪ್ರತಿಕೃತಿಯ ನಿರ್ಮಾಣದಲ್ಲಿ, ನಮ್ಮ ಕಣ್ಣುಗಳಿಂದ ಒಳ ಹರಿಯುವ ಸಿಗ್ನಲ್‌ಗಳ ಜೊತೆಗೇ, ನಮ್ಮ ಹಿಂದಿನ ಅನುಭವಗಳು, ನೆನಪುಗಳು, ಅವುಗಳಿಂದ ಮೂಡುವ ಭಾವಗಳೂ ಕೆಲಸ ಮಾಡುತ್ತವೆ. ಹೀಗೆ ನಮ್ಮ ಮಿದುಳಿನಲ್ಲಿ ಮೂಡುವ ಪ್ರತಿಕೃತಿಯ ಆಕಾರವೇ, ಭೌತಿಕ ವಸ್ತುವಿನ ನಿಜವಾದ ಆಕಾರವೆಂದು ಹೇಳಲು ಅಸಾಧ್ಯ. ಹೀಗಾಗಿ, ಆನೆಯೊಂದರ ಕಣ್ಣು-ಮಿದುಳುಗಳ ಮೂಲಕ ಆನೆಯ ಆಂತರ್ಯದಲ್ಲಿ ರೂಪಿತವಾಗುವ ಭೌತಿಕ ಪ್ರಪಂಚದ ಪ್ರತಿಕೃತಿಯ ರೂಪ, ನಮ್ಮ ಮನದಲ್ಲಿ ಮೂಡುವ ರೂಪಕ್ಕಿಂತ ಬೇರೆಯದೇ ಇರಬಹುದು.

ಸಿರಿ ರಚಿಸಿದ ಚಿತ್ರಗಳ ಪುಸ್ತಕದ ಪ್ರಕಟಣೆಯ ನಂತರ, ಅದನ್ನು ಹೆಸರಾಂತ ಕಲಾವಿದರಿಗೆ ಮತ್ತು ವಿಜ್ಞಾನಿಗಳಿಗೆ ನೀಡಲಾಯಿತು. ಸಿರಿ ರಚಿಸಿದ ಚಿತ್ರಗಳನ್ನು ನೋಡಿದ ವಿಖ್ಯಾತ Abstract Expressionist ಚಿತ್ರಕಾರ ವಿಲೆಮ್ ಡಿ ಕೂನಿಂಗ್, ಸಿರಿಯ ಪ್ರತಿಭೆಯನ್ನು ಹೊಗಳಿದನಂತೆ. ಆದರೆ, ಆ ಚಿತ್ರಗಳು ಸಿರಿಯ ಭಾವ ಪ್ರಪಂಚದಿಂದ ಮೂಡಿದ್ದೇ? ಆನೆಗಳ ಆಂತರ್ಯದಲ್ಲೂ ಭಾವ ಪ್ರಪಂಚವಿದೆಯೇ? ಅವಳ ಈ ಸೃಷ್ಟಿ “ಕಲೆ”ಯೇ? ಆನೆಗಳಿಗೂ ಆತ್ಮವಿದೆಯೇ? ವಿಜ್ಞಾನ ಇಂತಹ ಪ್ರಶ್ನೆಗಳಿಗೆ ಖಚಿತ ಉತ್ತರ ನೀಡುವುದಿಲ್ಲ. (ಡಿ ಕೂನಿಂಗ್‌ನ ಮರಣದ ನಂತರ, ಅವನಿಗೆ ಆಲ಼್ಜೈಮರ್ ಇದ್ದುದ್ದು, ಅವನ ಸ್ಮರಣ ಶಕ್ತಿ ನಾಶವಾಗಿದ್ದುದು ಬೆಳಕಿಗೆ ಬಂತು. ಹೀಗಾಗಿ, ಅವನ ಜೀವಿತಾವಧಿಯ ಕೊನೆಯ ಕಾಲದಲ್ಲಿ ರಚಿಸಿದ ಚಿತ್ರಗಳನ್ನು “ಕಲೆ” ಎಂದು ಪರಿಗಣಿಸಬೇಕೇ ಎಂಬ ಚರ್ಚೆ ವಿಮರ್ಶಕರಲ್ಲಿ, ಪಂಡಿತರಲ್ಲಿ ಇನ್ನೂ ನಡೆಯುತ್ತಲೇ ಇದೆ.)

ಕಲಾವಿದರು ಮತ್ತು ವಿಜ್ಞಾನಿಗಳು ಏನೇ ಹೇಳಲಿ, ಸಿರಿಯ “ಕಲೆ” ಅದನ್ನು ನೋಡಿದವರಲ್ಲಿ ಕೆಲವೊಂದು ಭಾವ ಮೂಡಿಸಿದ್ದಂತೂ ಸತ್ಯ. ಅವಳ ಚಿತ್ರಕಲಾ ಪುಸ್ತಕವನ್ನು ನೋಡಿದ ಮೃಗಾಲಯದ ಮೇಲ್ವಿಚಾರಕರಲ್ಲಿ, ಅವಳ “ಕಲೆ” ಅದೆಷ್ಟು ಆಳವಾದ ಭಾವ ಮೂಡಿಸಿತೆಂದರೆ, ಅವರು ಸಸ್ಯಾಹಾರಿಗಳಾಗಿ ಬದಲಾದರು.

*****

ಕಲೆಗಾಗಿಯಷ್ಟೇ ಕಲೆ. ಅದಕ್ಕೆ, ಉದ್ದೇಶ-ಗುರಿಗಳು ಇರಬಾರದು ಎಂಬುದು ಒಂದು ವಾದವಾದರೆ, ಕಲೆಗೆ ಸಾಮಾಜಿಕ ದೃಷ್ಟಿಕೋನ, ಬದಲಾವಣೆಯ ಕಾಳಜಿ ಇರಬೇಕು ಎನ್ನುವುದು ಇನ್ನೊಂದು ವಾದ. ಆದರೆ, ಇವೆರಡು ವಾದಗಳೂ, ಕಲೆಯ ಸಾರ್ಥಕತೆ ಇರುವುದು ಅದರ ನೋಡುಗ/ಕೇಳುಗ/ಓದುಗನ ಮೂಡುವ ಭಾವದಲ್ಲಿ ಮತ್ತು ಆ ಭಾವದಿಂದ ಮೂಡುವ ಬದಲಾವಣೆಯಲ್ಲಿ ಎನ್ನುವುದನ್ನು ಒಪ್ಪುತ್ತವೆ.


ಸಿರಿಯ ಚಿತ್ರ ರಚನೆಗಳ ಹಿಂದಿನ ಆಂತರ್ಯವೇನು, ಅವಳ ಭಾವ ಪ್ರಪಂಚ ಹೇಗಿರಬಹುದು ಇವೆಲ್ಲಾ ನಮಗೆ ಅನೂಹ್ಯ ವಿಚಾರಗಳು. ಆದರೆ, ಪ್ರಾಣಿಗಳ ಜೀವನದ ಬಗೆಗೆ ಕೆಲವರ ಮನದಲ್ಲಾದರೂ, ಆಳವಾದ ಭಾವ ಮೂಡಿಸಿ, ಅವರಲ್ಲಿ ಬದಲಾವಣೆ ತಂದ ಆ ಚಿತ್ರಗಳನ್ನು “ಕಲೆ” ಎಂದು ಒಪ್ಪಬಹುದಲ್ಲವೇ?!