ಆ ಸುದ್ದಿ ಓದಿ ಎರಡು ಮೂರು ದಿನವಾಗಿರಲಿಲ್ಲ, ಮನೆ ಕೆಲಸಕ್ಕೆ ಬರುವ ಗಂಗೆ ಒಂದು ಬೆಳಗ್ಗೆ ಅತ್ತೆ ಹತ್ತಿರ ಕೊಡವ ಭಾಷೆಯಲ್ಲಿ ಗಂಭೀರವಾಗಿ ಏನನ್ನೋ ಮಾತನಾಡುತ್ತಿದ್ದರು. “ರಾತ್ರಿ ಎಲ್ಲ ನಿದ್ದೆಯೇ ಇಲ್ಲ ಅಕ್ಕಯ್ಯಾ… ಹೀಗೇ ಇವು ಬರ್ತಾ ಹೋದ್ರೆ, ಎಂತ ಮಾಡೋದು ನಾವು? ಗಾಬರಿಯಾಯ್ತದೆ. ಬೆಳಗ್ಗೆ ಬೆಳಗ್ಗೆ ಬೇಗ ಕೆಲಸಕ್ಕೆ ಬಾ ಅಂತಾರೆ. ಒಂದೊಂದ್‌ ಸಲಾ ಕೆಲ್ಸಾ ಮುಗ್ಸಿ ಮನೇಗ್‌ ಹೋಗೋದು ಲೇಟಾಯ್ತದೆ. ರಾತ್ರಿ ಒಬ್ಬರೇ ಸಿಕ್ರೆ ಬಿಡ್ತಾವ..? ತುಳ್ದು ಜಜ್ಜಿ ಹಾಕ್ತವೆ…”
ರೂಪಶ್ರೀ ಕಲ್ಲಿಗನೂರ್‌ ಬರೆದ ಲೇಖನ

 

ಈಗ ಒಂದು ಅಥವಾ ಎರಡು ವರ್ಷದ ಹಿಂದಿನ ಕತೆಯಿರಬೇಕು. ಅದು ಕೇರಳದಲ್ಲಿ ನಡೆದ ಘಟನೆ ಅನ್ನುವ ನೆನಪು. ಕಾಡಿನಲ್ಲಿ ವಾಸಿಸುತ್ತಿದ್ದ ಮಧು ಎನ್ನುವ ಹುಡುಗ, ಆವತ್ತು ಯಾವ ಕಾರಣಕ್ಕಾಗಿ ಕಾಡಿನಿಂದ ಹೊರಬಂದಿದ್ದನೋ. ಅವನ ಸಮುದಾಯದ ಜನರಿನ್ನೂ ಸಾರಿಗೆ ವ್ಯವಸ್ಥೆಯ ಯಾವೊಂದೂ ಸೌಲಭ್ಯವನ್ನು ಬಳಸಿಕೊಳ್ಳುವ ಜನಗಳಲ್ಲ ಎಂದು ಕಾಣುತ್ತೆ. ನಡೆದೂ ನಡೆದೂ ಹೈರಾಣಾಗಿರಬೇಕು. ರಸ್ತೆ ಬದಿಯಲ್ಲಿ ಕಂಡ ಒಂದು ಪೆಟ್ಟಿ ಅಂಗಡಿಯಲ್ಲಿಟ್ಟಿದ್ದ ಬನ್‌ ಅವನ ಕಣ್ಣಿಗೆ ಬಿದ್ದಿದೆ. (ಅದೂ ಅವನಿಗೆ ತಿನ್ನುವ ಒಂದು ತಿಂಡಿಯ ಹಾಗೆ ಕಾಣಿಸಿದ್ದಿರಬಹುದು ಅಷ್ಟೇ. ಕಾಡಿನಲ್ಲಿ ಸಕಲ ಸಂಪತ್ತಿರುವಾಗ ಬನ್ನಿನ ಕೆಲಸವಾದರೂ ಏನು ಅಲ್ಲಿ!) ಸೀದಾ ಹೋಗಿ ಗಾಜಿನ ಡಬ್ಬಿಗೆ ಕೈ ಹಾಕಿ ತಿಂದಿದ್ದಾನೆ. ಅಷ್ಟೇ. ಅಲ್ಲೆಲ್ಲೋ ಪಕ್ಕದಲ್ಲಿ ಹರಟೆ ಕೊಚ್ಚುವುದಕ್ಕೆ ಹೋಗಿದ್ದ ಆ ಅಂಗಡಿಯ ಮಾಲೀಕ, ಮಧು ತನ್ನ ಅಂಗಡಿಯಲ್ಲಿಟ್ಟಿದ ಬನ್‌ ಅನ್ನು ಹೇಳದೇ ಕೇಳದೇ, ದುಡ್ಡು ಕೊಟ್ಟು ಖರೀದಿಸದೇ ತಿನ್ನುತ್ತಿರುವುದನ್ನು ಕಂಡು ಬೊಬ್ಬೆ ಹೊಡೆದು ಜನರನ್ನು ಸೇರಿಸಿ “ಕಳ್ಳ… ಕಳ್ಳ…” ಎಂದು ಕಿರುಚಾಡಿದ್ದಾನೆ. ನಮ್ಮ ಜನ ಗೊತ್ತಲ್ಲ. ಯಾರಾದ್ರೂ ಬಿದ್ದು ಪೆಟ್ಟು ಮಾಡಿಕೊಂಡರೆ ಹನಿ ನೀರು ಕೊಡಬೇಕು ಅಂತ ಮನಸ್ಸು ಮಾಡದಿದ್ದರೂ, ಯಾರಿಗೋ ‘ಹೊಡಿಬಡಿʼ ಮಾಡಲು ಬೇಕಾದಾಗ ಮಾತ್ರ ನೂರು ಜನ ಹಾಜರಿರುತ್ತಾರೆ. ಅದೇ ಅವತ್ತು ನಡೆದದ್ದು ಅಲ್ಲಿ. ಪೆಟ್ಟಿ ಅಂಗಡಿಯ ಮಾಲೀಕ ಬೊಬ್ಬೆಯಿಟ್ಟದ್ದೇ, ತನ್ನ ಪಾಡಿಗೆ ಇದ್ದ  ಮಧುವನ್ನು ಹಿಂದೂಮುಂದೂ ವಿಚಾರಿಸದೇ, ಕಳ್ಳನೆಂದು ಭಾವಿಸಿ ಆಳಿಗೊಂದು ಪೆಟ್ಟು ಕೊಡಲು ಆರಂಭಿಸಿದ್ದಾರೆ. ಅಷ್ಟೇ. ಸ್ವಲ್ಪ ಹೊತ್ತಿನಲ್ಲಿ ಆ ಹುಡುಗ ಒಂದು ಬನ್‌ ಕದ್ದದ್ದಕ್ಕಾಗಿ ಹೊಡೆತ ತಿಂದು ಸತ್ತು ಬಿದ್ದಿದ್ದ!

ಆ ಘಟನೆ ನೆನಪಾದರೆ ಇವತ್ತಿಗೂ ಮನಸ್ಸೆಲ್ಲ ಕಹಿಯಾಗತ್ತೆ. ಇಲ್ಲಿ ಆನೆ ಕದ್ದವರು ರಾಜಾರೋಷವಾಗಿ ಓಡಾಡಿಕೊಂಡಿದ್ದರೆ, ಅಡಿಕೆ ಕದ್ದವನು ಸಿಕ್ಕಿಬಿದ್ದು ಒದೆ ತಿನ್ನುತ್ತಾನೆ. ಇದೊಂದು ಪುಟ್ಟದಾದರೂ ಆದ್ರ ಉದಾಹರಣೆ. ಮನುಷ್ಯ ತನ್ನ ವಿಸ್ತಾರವನ್ನ ತನ್ನಿಷ್ಟಕ್ಕೆ ಎಲ್ಲಿ ಬೇಕೆಂದರಲ್ಲಿ, ಹೇಗೆ ಬೇಕೆಂದರೆ ಹಾಗೆ ಹಿಗ್ಗಿಸಿಕೊಳ್ಳುತ್ತಿರುವುದರ ದುಷ್ಪರಿಣಾಮದ ದ್ಯೋತಕ. ತಮ್ಮ ಸೌಖ್ಯಕ್ಕಾಗಿ ಊರು-ಕೇರಿ ಮಾಡಿಕೊಂಡರೆ ಮುಗೀತಲ್ಲ… ಊಹೂಂ… ಕಾಡಿನಲ್ಲೂ ಒಂದು ಮನೆಯೂ, ರೆಸಾರ್ಟೂ ಇರಬೇಕು ಇವರಿಗೆ. ಅಲ್ಲಿ ಹೋಗಿ ಕಡಿದು ಗುಡ್ಡೆ ಹಾಕುವುದೂ ಅಷ್ಟರಲ್ಲೇ ಇದೆ. ಕುಡಿದು ತಿನ್ನಲೊಂದು ‘ಕಾಮ್‌ ಪ್ಲೇಸ್‌ʼ ಬೇಕೆ ಹೊರತು, ಬೇರೆ ಯಾವ ಘನಂದಾರಿ ಉದ್ದೇಶಕ್ಕೂ ಅಲ್ಲ.

ಹತ್ತು ಹಲವು ವರ್ಷಗಳಿಂದ ಕೊಡಗಿನಲ್ಲಿ, ಅಲ್ಲಿಗೆ ಹುಲಿ ಬಂತೂ, ಇಲ್ಲಿಗೆ ಆನೆ ಬಂತೂ.. ಅನ್ನುವ ಸುದ್ದಿಗಳನ್ನು ಕೇಳಿದ್ದೆ/ ಪತ್ರಿಕೆಗಳಲ್ಲಿ ಓದಿದ್ದೆ. ಆಗೆಲ್ಲ ಪತ್ರಿಕೆಗಳನ್ನು ಓದುವಾಗ ಕೊಡಗಿನ ಹೆಸರನ್ನು ಕಂಡರೆ ಇಂಥದ್ದೇ ಸುದ್ದಿಯಿರಬೇಕು ಎಂದು ಎನಿಸುವಷ್ಟು ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷದ ಸುದ್ದಿಗಳು ಕಾಣುತ್ತಿದ್ದವಾದರೂ ಅದು ಕಡಿಮೆಯೇ. ಆದರೆ ಇತ್ತೀಚೆಗೆ ಅಂಥ ಸುದ್ದಿಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಾಣುತ್ತಿದೆ.

(ಮಧು)

ಹಿಂದೆಲ್ಲ ಜನಸಂಖ್ಯೆಯೂ ಕಡಿಮೆಯಿತ್ತು, ಮತ್ತು ಜನರ ಆಸೆಗಳ ಪಟ್ಟಿ ಈಗಿನಷ್ಟು ಇರಲಿಲ್ಲ ಅಂತನ್ನಿಸುತ್ತೆ. ನಾವು ಓದಿ/ಕೇಳಿ ತಿಳಿದ ಪ್ರಕಾರ, ಅಂದಂದಿಗೆ ಆಗುವಷ್ಟು ದುಡಿದು ತಿಂದು, ಸುಖನಿದ್ರೆಗೆ ಜಾರುತ್ತಿದ್ದ ಕಾಲದಲ್ಲಿ ಇಂಥ ಸಂಘರ್ಷಗಳ ಸಂಖ್ಯೆಯೂ ಕಡಿಮೆಯಿತ್ತು. ಆದರೀಗ ಜನಸಂಖ್ಯಾಸ್ಪೋಟವಾಗಿದೆ. ಅವರೆಲ್ಲರ ಆಸೆಗಳೂ ದಿನದಿಂದ ಸ್ಪೋಟವಾಗುತ್ತಿದೆ. ಉದಾಹರಣೆಗೆ ಮಂಗಳೂರಿನಲ್ಲಿ ಸಮುದ್ರದ ಪಕ್ಕದಲ್ಲಿರುವವರು ನಿತ್ಯವೂ ಮೀನು ತಿನ್ನುವುದರಲ್ಲಿ ಏನೂ ತಪ್ಪಿಲ್ಲ. ಆದರೆ ಬೆಂಗಳೂರಿನಲ್ಲಿ ಕುಳಿತ ಸಾವಿರಾರು ಜನಕ್ಕೆ ನಿತ್ಯವೂ ಬಗೆಬಗೆಯ ಮೀನುಗಳು ಬೇಕೆಂದರೆ ತರುವುದಾದರೂ ಎಲ್ಲಿಂದ? ಈಗಾಗಲೇ ಸಮುದ್ರದಲ್ಲಿರುವ ಮುಕ್ಕಾಲುಭಾಗ ಮೀನುಗಳನ್ನು ನಾವು ತಿಂದು ತೇಗಿದ್ದೇವೆಂದು ಹೇಳಿದರೆ, ಅರ್ಥಮಾಡಿಕೊಳ್ಳುವವರಾದರೂ ಯಾರು?

ಈ ತೀರದ ಆಸೆಯ ಹುಚ್ಚಿಗೆ ಬಿದ್ದೇ ಕಾಡಿನಲ್ಲಿರುವ ಜನರನ್ನು ಒಕ್ಕಲೆಬ್ಬಿಸಿ, ಬೀದಿಗೆ ತಂದು ನಿಲ್ಲಿಸುತ್ತಿದ್ದಾರೆ. ಅವರೆಲ್ಲ ಎಷ್ಟೋ ವರ್ಷಗಳಿಂದ ನೆಮ್ಮದಿಯಾಗಿ ಕಾಡಿನಲ್ಲಿ ವಾಸವಾಗಿರುವವರು. ಅಲ್ಲೇ ಬೆಳೆದ ಗೆಡ್ಡೆ-ಗೆಣಸನ್ನು, ಬೇಕಾದಾಗ ಬೇಟೆಯಾಡಿ ಮಾಂಸವನ್ನು ತಿಂದುಕೊಂಡು, ನಾಗರೀಕತೆಯ ಸೋಂಕನ್ನು ತಗಲಿಸಿಕೊಳ್ಳದೇ ನೆಮ್ಮದಿಯಾಗಿ ಬದುಕುತ್ತಿದ್ದಾರೆ. ಅವರಿಗೆ ನಾವು ಬಳಸುತ್ತಿರುವ ಸಾಮಾಜಿಕ ಸೌಲಭ್ಯದ ಯಾವ ಅವಶ್ಯಕತೆಯೂ ಇಲ್ಲ. ಸಾವಿರಾರು ಗಿಡ ಮೂಲಿಕೆಗಳ ಔಷಧೀಯ ಗುಣವುಳ್ಳ ಗಿಡಗಂಟೆಗಳ, ನಾರು-ಬೇರುಗಳ ಮಾಹಿತಿ ಅವರಲ್ಲಿದೆ. ಇದ್ದದ್ದರಲ್ಲಿ ಚಂದವಾಗಿ ಬದುಕುವ ತಾಕತ್ತಿದೆ. ಇಷ್ಟಾದ್ದಾಗ್ಯೂ ಅವರನ್ನು ನಮ್ಮ ಗೊಂದಲಮಯ ನಾಗರೀಕತೆಗೆ ಎಳೆದುತಂದು, ರಸ್ತೆಯ ಪಕ್ಕ ಟೆಂಟು ಹಾಕಿ ಕೂರಿಸಿಬಿಡುವುದು ಎಂಥಾ ಅನ್ಯಾಯ?

ಅವರ ಜ್ಞಾನ ಭಂಡಾರದಲ್ಲಿರುವ ಮಾಹಿತಿಗಳು ಅತ್ಯಮೂಲ್ಯ. ಅವುಗಳನ್ನು ಕಲೆಹಾಕಿ, ತಲೆತಲಾಂತರಕ್ಕೆ ದಾಟಿಸುವಂಥ ಕೆಲಸಗಳನ್ನು ಮಾಡಬೇಕು. ಅದನ್ನು ಬಿಟ್ಟು ‘ನೀವೂ ನಾಗರೀಕರಾಗಿ…. ಕಾಡು ಬಿಟ್ಟು ಹೊರಗೆ ಬನ್ನಿ…ʼ ಅಂತ ಕೂಗುವುದರಲ್ಲಿ ಅರ್ಥ ಕಾಣುತ್ತಿಲ್ಲ. ಕಲಿತ ವಿಷಯದಲ್ಲೇ ಕೆಲಸ ಮಾಡುತ್ತಿರುವವರ ಸಂಖ್ಯೆ ಕಡಿಮೆಯೇ. ಓದಿದ್ದೇ ಒಂದು ಕೆಲಸ ಮಾಡುತ್ತಿರುವುದೇ ಇನ್ನೊಂದು ಅನ್ನುವವರ ಸಂಖ್ಯೆಯೇ ಹೆಚ್ಚು. ಅದರಲ್ಲೂ ಐಟಿಗಳಲ್ಲಿ ಅನುಭವಿಸುವ ಮಾನಸಿಕ ಒತ್ತಡಗಳಿಂದ ಬೇಸತ್ತು ಲಕ್ಷಲಕ್ಷ ಸಂಬಳ ಬಿಟ್ಟು, ಕೃಷಿಗೆ, ಹಳ್ಳಿಗೆ ಮರಳುವವರನ್ನು ಕಂಡೇ ಅರ್ಥಮಾಡಿಕೊಳ್ಳಬೇಕು, ಬದುಕಿಗೆ ನಿಜಕ್ಕೂ ಯಾವುದು ಮುಖ್ಯ ಅಂತ.

ಹೀಗೆ ಪರಿಸರದ ವಿರುದ್ಧ ನಡೆಯಲು ಹೋಗಿಯೇ ಮನುಷ್ಯ ಮತ್ತು ಪ್ರಾಣಿಗಳ ನಡುವೆ ತಿಕ್ಕಾಟ ಆರಂಭವಾಗಿರೋದು. ಈಗ ಹದಿನೈದು ದಿನಗಳ ಹಿಂದೆ ಇಲ್ಲಿ ಕೊಡಗಿನಲ್ಲಿ ಯಾವುದೋ ಹಳ್ಳಿಯಲ್ಲಿ, ಕಾಲೇಜಿಗೆ ಹೋಗುತ್ತಿದ್ದ ಹುಡುಗಿಯೊಬ್ಬಳು, ತೋಟದ ದಾರಿಯಲ್ಲಿ ಬರುತ್ತಿರುವಾಗ, ಎಲ್ಲಿಂದಲೋ ಚಂಗನೆ ಹಾರಿದ ಹುಲಿಯನ್ನು ಕಂಡು, ಹೌಹಾರಿ ಕಿರುಚಿ ಪ್ರಜ್ಞೆ ತಪ್ಪಿ ಬಿದ್ದುಬಿಟ್ಟಳಂತೆ. ಆ ಸುದ್ದಿ ಕೊಡಗಿನ ‘ಶಕ್ತಿʼ ಪತ್ರಿಕೆಯಲ್ಲಿ ಪೂರಾ ಒಂದು ಪುಟದಷ್ಟು ತುಂಬಿಕೊಂಡಿತ್ತು ಎಂದರೆ ಯೋಚನೆ ಮಾಡಿ.

ಅವರಿಗೆ ನಾವು ಬಳಸುತ್ತಿರುವ ಸಾಮಾಜಿಕ ಸೌಲಭ್ಯದ ಯಾವ ಅವಶ್ಯಕತೆಯೂ ಇಲ್ಲ. ಸಾವಿರಾರು ಗಿಡ ಮೂಲಿಕೆಗಳ ಔಷಧೀಯ ಗುಣವುಳ್ಳ ಗಿಡಗಂಟೆಗಳ, ನಾರು-ಬೇರುಗಳ ಮಾಹಿತಿ ಅವರಲ್ಲಿದೆ. ಇದ್ದದ್ದರಲ್ಲಿ ಚಂದವಾಗಿ ಬದುಕುವ ತಾಕತ್ತಿದೆ.

ಆ ಸುದ್ದಿ ಓದಿ ಎರಡು ಮೂರು ದಿನವಾಗಿರಲಿಲ್ಲ, ಮನೆ ಕೆಲಸಕ್ಕೆ ಬರುವ ಗಂಗೆ ಒಂದು ಬೆಳಗ್ಗೆ ಅತ್ತೆ ಹತ್ತಿರ ಕೊಡವ ಭಾಷೆಯಲ್ಲಿ ಗಂಭೀರವಾಗಿ ಏನನ್ನೋ ಮಾತನಾಡುತ್ತಿದ್ದರು. “ರಾತ್ರಿ ಎಲ್ಲ ನಿದ್ದೆಯೇ ಇಲ್ಲ ಅಕ್ಕಯ್ಯಾ… ಹೀಗೇ ಇವು ಬರ್ತಾ ಹೋದ್ರೆ, ಎಂತ ಮಾಡೋದು ನಾವು? ಗಾಬರಿಯಾಯ್ತದೆ. ಬೆಳಗ್ಗೆ ಬೆಳಗ್ಗೆ ಬೇಗ ಕೆಲಸಕ್ಕೆ ಬಾ ಅಂತಾರೆ. ಒಂದೊಂದ್‌ ಸಲಾ ಕೆಲ್ಸಾ ಮುಗ್ಸಿ ಮನೇಗ್‌ ಹೋಗೋದು ಲೇಟಾಯ್ತದೆ. ರಾತ್ರಿ ಒಬ್ಬರೇ ಸಿಕ್ರೆ ಬಿಡ್ತಾವ..? ತುಳ್ದು ಜಜ್ಜಿ ಹಾಕ್ತವೆ…” ಅಂತ ರಾತ್ರಿ ಅವರ ಮನೆಯ ಹತ್ತಿರ ಆನೆಗಳು ಓಡಾಡಿದ್ದ ಸುದ್ದಿಯನ್ನು ಹೇಳುತ್ತಿದ್ದರು.

ನಾವು ಮನೆಮಂದಿಯೆಲ್ಲ, “ಅಯ್ಯೋ ಹೌದ… ಒಬ್ರೆ ಸಿಕ್ರೆ ಅಷ್ಟೇ ಗತಿ… ಚ್… ಚ್..” ಅಂತೆಲ್ಲ ಕೆಲಸದ ಗಡಿಬಿಡಿಯಲ್ಲೂ ಅವಳ ಕತೆಗೆ ಕಿವಿಗೊಟ್ಟಿದ್ವಿ.

ಅವಳು ಬರುವುದಕ್ಕೂ ಮುನ್ನ, ನನ್ನ ನಾದಿನಿ “ರಾತ್ರಿ ತೋಟದಲ್ಲಿ ಏನೋ ಸೌಂಡ್‌ ಆಗ್ತಿತ್ತು, ಸುಮಾರು ಹೊತ್ತು ಇತ್ತು. ಕಾಡ್‌ ಹಂದಿ ಬಂದಿದ್ದಿರ್ಬೇಕು…” ಅಂತ ನಮ್ಮ ಮುಂದೆ ಅಂದಿದ್ದಳು. ಗಂಗೆ ಹೇಳುತ್ತಿದ್ದ ಕತೆ ಕೇಳುತ್ತಿದ್ದ ನಮ್ಮತ್ತೆಗೂ, ವಿಪಿನ್‌ ಗೂ ಒಮ್ಮೆಲೇ ನನ್ನ ನಾದಿನಿ ಹೇಳಿದ್ದು ನೆನಪಾಗಿ, ಪಟ್‌ ಅಂತ ತೋಟಕ್ಕೆ ನುಗ್ಗಿದವರು ವಾಪಾಸ್ಸು ಬರೋಕೆ ಸುಮಾರು ಹತ್ತು ನಿಮಿಷಗಳು ಹಿಡಿದಿತ್ತು. ಮನೆಗೆ ಬಂದವರ ಕಣ್ಣು ಬಾಯಿಯೆಲ್ಲ ಇಷ್ಟಗಲ..

ಹಾಗೆ ಬಂದವರಲ್ಲಿ ಅತ್ತೆ “ನೆನ್ನೆ ತೋಟಕ್ಕೆ ಬಂದದ್ದು ಕಾಡ್ಹಂದಿ ಅಲ್ಲ.. ಆನೆ… ನಮ್ಮ ಬಾಳೆಗಿಡ ಎಲ್ಲ ತಿಂದು ಹೋಗಿದೆ, ಪಕ್ಕದ ತೋಟಕ್ಕೂ ಹೋಗಿತ್ತಂತೆ” ಅಂತ ಏದುಸಿರು ಬಿಟ್ಟುಕೊಂಡು ಹೇಳಿದಾಗ ಎಲ್ಲರ ಎದೆ ಒಮ್ಮೆ ಧಸಕ್ಕೆಂದಿತ್ತು! ಆಟದ ಮೈದಾನವಾಗಿದ್ದ ಈ ಜಾಗದಲ್ಲಿ ಮನೆ ಕಟ್ಟಿಸಿದ ಹದಿನೆಂಟು ವರ್ಷದಲ್ಲಿ ಇದು ಮೊಟ್ಟ ಮೊದಲನೇ ಅನುಭವವಂತೆ ನಮ್ಮ ತೋಟಕ್ಕೆ ಆನೆ ನುಗ್ಗಿದ್ದು. ನಮ್ಮ ಮದುವೆಗೂ ಮುನ್ನ, ಹಾಗೆ ಈ ಮನೆಯ ತೋಟದ ಬೇಲಿಗುಂಟ ಆನೆ, ಹುಲಿ ನಡೆದುಕೊಂಡು ಹೋಗುತ್ತವೆ ಅಂತ ಹೇಳಿದ್ದನ್ನ ಕೇಳಿದ್ದೆ (ಕೇಳಿ ಭಯವಾದ್ರೂ ಅದನ್ನ ಮುಖದಲ್ಲೂ ಮಾತಲ್ಲೂ ತೋರಿಸಿರ್ಲಿಲ್ಲ ಅನ್ನೋದು ಬೇರೆ ಮಾತು) ಸುಮ್ಮನೇ ನಡೆದುಕೊಂಡು ಹೋಗಿ ಇಡೀ ಊರಿನ ಮರಗಳನ್ನ ಲೆಕ್ಕ ಹಾಕುವಷ್ಟೇ ಕಡಿಮೆ ಹಸಿರಿರುವ ನಾಡಿನಿಂದ ಬಂದ, ಕುಂತರೂ ನಿಂತರೂ, ಎಲ್ಲೇ ಅವಿತುಕೊಂಡರೂ ಊರ ತುಂಬ ಜನಗಳೇ ತುಂಬಿರುವ ಬೆಂಗಳೂರಿನಲ್ಲಿ ಬೆಳೆದ ನನಗೆ ಹಾಗೆ ಕಾಡಿನಿಂದ ಅಪರೂಪದ ಅತಿಥಿಗಳು ನಮ್ಮ ತೋಟದ ಬೇಲಿಗೆ ಮೈಯುಜ್ಜಿಕೊಂಡು ಹೋಗುತ್ತವೆ ಅನ್ನುವ ವಿಷಯವೇ ಅಜೀರ್ಣವಾಗಿರುವಾಗ, ಮೊನ್ನೆ ನಡೆದ ಈ ಘಟನೆಯಂತೂ ಮೈ ಜುಂ ಎನ್ನುವಂತೆ ಮಾಡಿತ್ತು. ಆದರೂ ಕುತೂಹಲಕ್ಕೆ ಒಮ್ಮೆ ಧೈರ್ಯ ಮಾಡಿ ತೋಟದಲ್ಲಿ ಓಡಾಡಿಕೊಂಡು ಬಂದೆ. ಇರೋ ಏಳೆಂಟು ಬಾಳೆ ಗಿಡದಲ್ಲಿ ಎಳೆಯ ಎರಡನ್ನು ಬಿಟ್ಟು ಉಳಿದೆಲ್ಲ ಗಿಡಗಳನ್ನೂ ಆನೆ ತಿಂದು ಹಾಕಿತ್ತು. ಅಷ್ಟು ನೋಡಿ ಪರಿಶೀಲಿಸುವ ಹೊತ್ತಿಗೆ ಹಿಂದೆ ಅತ್ತೆಯೂ ಬಂದು ನಿಂತು ಅತ್ತಿತ್ತ ನೋಡುತ್ತಿದ್ದರು.

ಇಬ್ಬರಿಗೂ ಆನೆ ಎಲ್ಲಿಂದ ನಮ್ಮ ತೋಟಕ್ಕೆ ಎಂಟ್ರಿ ಕೊಟ್ಟಿದ್ದಿರಬಹುದು, ಮತ್ತೆ ಯಾವ ಕಡೆಯಿಂದ ವಾಪಾಸ್ಸು ಹೋಗಿದ್ದಿರಬಹುದೆಂಬ ಕುತೂಹಲ. ಹಾಗಾಗಿ ತೋಟದ ಸುತ್ತಮುತ್ತೆಲ್ಲ ಹಾಕಲಾಗಿದ್ದ ಬೇಲಿಯನ್ನ ನೋಡಿಬಂದೆವು. ಹಿಂಭಾಗದಲ್ಲಿ ಒಂದು ಕಡೆ ತಂತಿ ಬೇಲಿ ಚೂರು ಒತ್ತಿದ್ದು ಬಿಟ್ಟರೆ ಮತ್ಯಾವ ಸುಳಿವೂ ಸಿಗಲಿಲ್ಲ. ನಾವಿಬ್ಬರೂ ಅಲ್ಲಲ್ಲಿ ಗಿಡಗಂಟೆಗಳೆಲ್ಲ ಮುರಿದು, ತೋಟದಲ್ಲಿ ಅಲ್ಲೋಲ ಕಲ್ಲೋಲ ಉಂಟಾದ ಚಿತ್ರಣವನ್ನು ನೀರಿಕ್ಷಿಸುತ್ತ ಹೋದರೆ, ಅದೆಂಥಾ ನಿರಾಸೆ ನಮಗೆ? ಒಂದೆರೆಡು ಕಡೆ ಪೈನಾಪಲ್‌ ಗಿಡದ ಎಲೆಗಳು ಬಾಗಿದ್ದವು, ಮತ್ತೆರೆಡೇ ಎರಡು ಕಡೆ ಆನೆ ಕಾಲಿನ ಗುರುತು ಸಿಕ್ಕವೇ ಹೊರತು, ಅಂಥ ದೈತ್ಯಪ್ರಾಣಿ ಬಂದುಹೋಗಿದ್ದರ ಯಾವು ಸುಳಿವೂ ಸರಿಯಾಗಿ ಸಿಗಲಿಲ್ಲ. ಹಾಗಾಗಿ ಇಬ್ಬರಿಗೂ ಒಳಗೊಳಗೆ ಅದರ ಜಾಣತನಕ್ಕೆ, ಹಾಗೂ ಕದ್ದು ತಿಂದು ಹೋಗುವ ಅದರ ಕೌಶಲ್ಯಕ್ಕೆ ಅಬ್ಬಾ ಎನ್ನಿಸಿತ್ತು.

ಅದೆಲ್ಲ ನಡೆದು ಮಧ್ಯಾಹ್ನದ ಹೊತ್ತಿಗೆ ಬಂದ ಸುದ್ದಿ ಕೇಳಿಯಂತೂ ಎಲ್ಲರೂ ಬೊಬ್ಬೆ ಹೊಡೆಯುವುದೊಂದು ಬಾಕಿ. ನಮ್ಮ ತೋಟಕ್ಕೆ ಬಂದು ಹೋದದ್ದು ಒಂದಾನೆಯಲ್ಲ, ಮೂರು ಆನೆಗಳಂತೆ! ಮನೆಯಲ್ಲಿ ಬಾಣಂತಿ ಮತ್ತೂ ಮಗು ಇರುವ ಈ ಸಮಯದಲ್ಲಿ ಆನೆಗಳು ಬಂದು ಹೋದ ಸುದ್ದಿಗೆ ಎರಡು ದಿನ ಯಾರಿಗೂ ಸರಿಯಾಗಿ ನಿದ್ದೆ ಬಂದಿರಲಿಲ್ಲ.

ಒಂಟಿ ಸಲಗಗಳನ್ನು ಬಿಟ್ಟರೆ ಆನೆಗಳು ಓಡಾಡುವುದು ಒಟ್ಟೊಟ್ಟಿಗೇ. ಗುಂಪಿನಲ್ಲಿ ಓಡಾಡುತ್ತ, ಒಟ್ಟಿಗೇ ತೋಟಗಳನ್ನು ಕೊಳ್ಳೆಹೊಡೆದು, ಬೇಕಾದ್ದನ್ನು ತಿಂದುಂಡು ಮಜವಾಗಿ ತಮ್ಮ ಪಾಡಿಗೆ ತಾವು ಕಾಡು ಸೇರುತ್ತವೆ. ಕಾಡಿನಲ್ಲಿ ಸಿಗದೇ ಇದ್ದದ್ದಕ್ಕೆ ತಾನೇ ಅವೂ ನಾಡಿಗೆ ಬರೋದು? ನಾವುಗಳು ಕಾಡುಗಳನ್ನು ಇಂಚಿಂಚೂ ಆವರಿಸಿಕೊಳ್ಳೋದಲ್ಲದೇ, ನಮ್ಮ ಬಾಯಿಚಪಲಕ್ಕೆ ಕಣಿಲೆಯಲ್ಲು ತಿಂದುಮುಗಿಸಿದರೆ ಅದಕ್ಕೆ ತಿನ್ನಲು ಬಿದಿರು ಸಿಕ್ಕುವುದಾದರೂ ಹೇಗೆ? ಹಾಗಿದ್ದಾಗ ಅದು ತನ್ನ ಹಸಿವು ನೀಗಿಕೊಳ್ಳಲು ಆಹಾರ ಅರಸಿಕೊಂಡು ಬರದೇ ಇರಲು ಹೇಗೆ ಸಾಧ್ಯ? ಅದರದ್ದೇ ಜಾಗಗಳಲ್ಲಿ ಅಲ್ಲವಾ ನಾವೀಗ ತೋಟ ಮನೆ ಅಂತ ಮಾಡಿಕೊಂಡು ಕುಂತಿರುವುದು? ದಾರಿ ಮಧ್ಯದಲ್ಲಿ ನಾವು ಸಿಕ್ಕರೆ ಅದಾದರೂ ಏನು ಮಾಡಬಹುದು. ಸುಮ್ಮನೇ ಬಿಟ್ಟರೆ ಅದೂ ತನ್ನ ಪಾಡಿಗೆ ತಾನು ಹೋಗಬಹುದು. ಆದರೆ ಮನುಷ್ಯ ಅಷ್ಟು ಸಭ್ಯ ಪ್ರಾಣಿಯಲ್ಲವಲ್ಲ. ಪಟಾಕಿ ಹಚ್ಚಿ, ಕೂಗಾಡಿ ಅದರ ದಿಕ್ಕುಗೆಡಿಸಲು ಯತ್ನಿಸಿದಾಗಲೇ ಅವು ಹೆದರಿಕೊಂಡು ಮನುಷ್ಯನ ಮೇಲೆ ದಾಳಿ ಮಾಡುತ್ತವೆಯೆ ಹೊರತು, ಬೇರಾವ ಕಾರಣದಿಂದಲ್ಲ.

ಮನುಷ್ಯ ದಿನನಿತ್ಯ ಹೊಸ ಆಸೆ, ಹೊಸ ಕನಸು, ಹೊಸ ಗೊಂದಲ, ಹೊಸ ಸಮಸ್ಯೆಗಳ ಸುಳಿಗೆ ಸಿಲುಕಿ ನರಳುತ್ತಾನೆ. ಆದರೆ ಪ್ರಾಣಿಗಳ ಜೀವನಶೈಲಿ ಹಾಗಲ್ಲ. ಅವಕ್ಕೆ ಸದಾ ಅಡಚಣೆಯಿಲ್ಲದ ದಿನಚರಿಗಳಲ್ಲಿ ತಮ್ಮ ಪಾಡಿಗೆ ಆರಾಮವಾಗಿರುವುದೇ ಇಷ್ಟ. ವರ್ತಮಾನದಲ್ಲಷ್ಟೇ ಅವುಗಳ ಬದುಕು. ಹಾಗಾಗಿ ಅವುಗಳ ಜೀವನ ನಮ್ಮಂತೆ ಗೋಜಲುಗೋಜಲುವಾದದ್ದಲ್ಲ. ಸರಳಾತಿಸರಳವಾದದ್ದು. ಅದಕ್ಕೇ ತಡೆಯೊಡ್ಡುತ್ತಿರುವ ಮನುಷ್ಯನ ಬುದ್ದಿಮತ್ತೆಗೆ ಏನೆನ್ನಬೇಕು?