…ಇದೀಗ ಎರಡು ನಿಮಿಷವಾಯಿತು !

ಅವಳು ನನ್ನ ಬಿಟ್ಟುಹೋಗಿ
ಇದೀಗ ಎರಡು ನಿಮಿಷವಾಯಿತು*

ಅವಳದೊಂದು ಕೂದಲೆಳೆಯಿದೆ
ನೀಳ ಕಪ್ಪು ಗುಂಗುರು ನನ್ನಬಳಿ

ಹೆರಳರಾಶಿಯಲಾಡಿರಬಹುದಾದ
ಬೆರಳ ಗುರುತು ಇಲ್ಲ ಅಲ್ಲುಳಿದಿಲ್ಲ
ಮುಡಿಯುತ್ತಿದ್ದ ಕೇದಗೆಯ ಕಂಪೂ

ಅವಳು ನನ್ನ ಬಿಟ್ಟುಹೋಗಿ
ಇದೀಗ ಎರಡು ನಿಮಿಷವಾಯಿತು

ನಾನೇ ಮರಳಿಸಬಹುದಾದರೆ
ಅಂಚೆಯ ಮೂಲಕ ಅವಳ ವಿಳಾಸಕೆ
ಆ ಅದೃಷ್ಟ ರೇಖೆಯನು….

ಈಗ ಏನೂ ಮಾಡಲಾಗದು
ಒಂದು ಅಸಂಗತ ಅನುಭವ
ನರೆತ ಕೂದಲಿಗೆ ಹೊಂದಿಕೆಯಾಗದು

ಗಾಲಿಬನ ಗಝಲುಗಳ ನಡುವೆ
ಬಚ್ಚಿಟ್ಟಿರಬಹುದಾದ ಆ ಕೇಶ
ನನಗೆ ನವಿಲು ಗರಿಯಂತೆ

ನಾನೇನಾದರೂ ಬರೆಯಲು ಅಥವಾ
ಓದಲು ಹೋದಾಗ ಅಥವಾ
ಯಾವಾಗಲಾದರೊಮ್ಮೆ
ಗರಿಗೆದರಿ ಹೆರುತ್ತದೆ ನನಗೋಸ್ಕರ
ಒಂದು ದಿವ್ಯ ಏಕಾಂತವನು

ಬೆರಳಿಟ್ಟರೆ ಬಸಿರಾಗುವ
ಆ ನೀಳ ಕಪ್ಪು ಗುಂಗುರು ಗುಂಗುರು
ಮುಂಗುರುಳು

ಅವಳು ನನ್ನ ಬಿಟ್ಟುಹೋಗಿ
ಎರಡು ನಿಮಿಷವಾಯಿತು
ಅಥವಾ ಎರಡು ಯುಗ..?

ಗೊತ್ತಿಲ್ಲ

ಜ್ಯೋತಿರ್ವರ್ಷಗಳಾಚೆ
ಕತ್ತಲ ಮೂಲೆಯಲ್ಲೆಲ್ಲೋ
ತೊಳಲಾಡುತ್ತಿರುವ
ಗ್ರಹ ತಾರೆ ನಿಹಾರಿಕೆಗಳ
ಬಣ್ಣ ಬೆಳಕು ಹೃದಯ ಬಡಿತ

ಕ್ಷಣಮಾತ್ರದಲಿ ಅಳೆದು ಬಿಸಾಡುವ
ಈ ಬುದ್ಧಿವಂತ
ತನ್ನ ಪ್ರೀತಿಯ ಮುಂಗುರುಳಿನ
ಅಂತರವ ಅಳೆಯಲಾರ!

*ಕವಿತೆಯ ಮೊದಲೆರೆಡು ಸಾಲುಗಳು ಶ್ರೀಲಂಕಾದ ತಮಿಳು ಕವಿತೆಯ ಸಾಲುಗಳು

 

ಆರಿಫ್ ರಾಜಾ ಹೊಸ ತಲೆಮಾರಿನ ಪ್ರಮುಖ ಕವಿ.
‘ಜಂಗಮ ಫಕೀರನ ಜೋಳಿಗೆ’ ಇವರ ಪ್ರಸಿದ್ಧ ಕವನ ಸಂಕಲನ.
ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಅರಕೇರಾ ಇವರ ಊರು.
(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)