ನಾವು ಹೆಚ್ಚು ಹೊತ್ತು ಕಾಯಬೇಕಾಗಿರಲಿಲ್ಲ. ವೃತ್ತಾಕಾರದಲ್ಲಿ ಹರಡಿದ ಅಲೆಗಳೊಂದಿಗೆ ಸಮುದ್ರ ಕಂಪಿಸಲು ಪ್ರಾರಂಭಿಸಿತು. ಈ ವೃತ್ತದ ಮಧ್ಯದಲ್ಲಿ ಒಂದು ದ್ವೀಪ ಕಾಣಿಸಿಕೊಂಡಿತು, ಅದು ಪರ್ವತದಂತೆ, ಗೋಳಾರ್ಧದಂತೆ, ನೀರಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಭೂಗೋಳದಂತೆ ಅಥವಾ ಅದರ ಮೇಲೆ ಸ್ವಲ್ಪ ಮೇಲಕ್ಕೆ ಬೆಳೆದಿರುವಂತೆ ಕಂಡಿತು. ಇಲ್ಲ, ಆಕಾಶದಲ್ಲಿ ಉದಯಿಸುತ್ತಿರುವ ಚಂದ್ರನಂತೆ. ಅದು ಚಂದ್ರನನ್ನು ಹೋಲುವಂತಿಲ್ಲವಾದರೂ ನಾನು ಅದಕ್ಕೆ ಚಂದ್ರನೆಂದೇ ಹೇಳುತ್ತೇನೆ. ಕೆಲವು ಕ್ಷಣಗಳ ಮೊದಲು ನಾವದನ್ನು ಆಳಕ್ಕೆ ಧುಮುಕುವುದನ್ನು ನೋಡಿದ್ದೇವೆಯಾದರೂ, ಈ ಅಮಾವಾಸ್ಯೆಯು ವಿಭಿನ್ನವಾಗಿ ವಿಭಿನ್ನವಾಗಿತ್ತು.
ಆರ್. ವಿಜಯರಾಘವನ್ ಅನುವಾದಿಸಿದ ಇಟಾಲೋ ಕ್ಯಾಲ್ವೀನೋನ ಕಥೆ ‘ಚಂದಿರನ ಕುವರಿಯರು’ ನಿಮ್ಮ ಈ ಭಾನುವಾರದ ಓದಿಗೆ

 

ಗುರಾಣಿಯಂತೆ ರಕ್ಷಣಾತ್ಮಕ ಕಾರ್ಯನಿರ್ವಹಿಸುವ ಗಾಳಿಯ ಹೊದಿಕೆಯಿಂದ ಚಂದ್ರ ವಂಚಿತವಾಗಿತ್ತು. ಹಾಗಾಗಿ ಪ್ರಾರಂಭದಿಂದಲೇ ನಿರಂತರ ಉಲ್ಕಾಪಾತಕ್ಕೆ, ಸೂರ್ಯ ಕಿರಣಗಳ ವಿನಾಶಕಾರಿ ಕೊರೆವ ಕ್ರಿಯೆಗೆ ಅದು ತನ್ನನ್ನು ಒಡ್ಡಿಕೊಂಡಿತ್ತು. ಕಾರ್ನೆಲ್ ವಿಶ್ವವಿದ್ಯಾಲಯದ ಥಾಮಸ್ ಗೋಲ್ಡ್ ಪ್ರಕಾರ, ಚಂದ್ರನ ಮೇಲ್ಮೈಯಲ್ಲಿರುವ ಬಂಡೆಗಳು ಪುಡಿಯಾಗಿದ್ದು ಉಲ್ಕಾಶಿಲೆಯ ಕಣಗಳು ನಿರಂತರವಾಗಿ ಚಂದ್ರನ ಮೇಲೆ ಸುರಿದಿದ್ದರಿಂದಲೆ. ಚಿಕಾಗೊ ವಿಶ್ವವಿದ್ಯಾನಿಲಯದ ಗೆರಾರ್ಡ್ ಕ್ಯೂಪರ್ ಪ್ರಕಾರ, ಚಂದ್ರನ ಶಿಲಾಪಾಕದಿಂದ ಅನಿಲಗಳು ಹೊರಬಿದ್ದ ಕಾರಣ ಉಪಗ್ರಹವು ಪ್ಯೂಮಿಸ್ ಕಲ್ಲಿನಂತೆ ಹಗುರವಾದ, ಸರಂಧ್ರ ಸ್ಥಿತಿಯನ್ನು ಪಡೆದುಕೊಂಡಿರಬಹುದು.

ಮೈತುಂಬ ಕುಳಿಗಳೇ ತುಂಬಿದ, ನವೆದ ಚಂದ್ರ ಹಳೆಯದು ಎನ್ನುವುದನ್ನು ‘Qfwfq’ ಒಪ್ಪಿದ. ಆಕಾಶದಲ್ಲಿ ಬೆತ್ತಲೆಯಾಗಿ ಉರುಳುತ್ತಿರುವ ಅದು ಸವೆದು ಸವೆದು ಘಾಸಿಗೊಂಡ ಮೂಳೆಯಂತೆ ತನ್ನ ಮೈಮಾಂಸವನ್ನು ಇಷ್ಟಿಷ್ಟೇ ಕಳೆದುಕೊಳ್ಳುತ್ತಲಿದೆ. ಇಂತಹ ವಿಷಯ ನಡೆದಿರುವುದು ಇದೇ ಮೊದಲಲ್ಲ. ಇದಕ್ಕಿಂತಲೂ ಹಳೆಯದಾದ, ಹೆಚ್ಚು ಜರ್ಝರಿತವಾದ ಚಂದ್ರಗಳು ನನ್ನ ನೆನಪಿನಲ್ಲಿವೆ. ಈ ಚಂದ್ರಗಳನ್ನು ನಾನು ಬಹಳ ಅಂದರೆ ಬಹಳವೇ ನೋಡಿದ್ದೇನೆ: ಅವು ಹುಟ್ಟಿ ಆಕಾಶದಾದ್ಯಂತ ಗುರಿಯಿರದೆ ಹೋಗಿ ಉಲ್ಕೆಗಳ ತುಣುಕುಗಳಿಂದ ಬಡಿಸಿಕೊಂಡು ಸಾಯುತ್ತಿರುವುದನ್ನು, ಅವುಗಳ ಎಲ್ಲ ಕುಳಿಗಳೂ ಸ್ಫೋಟಗೊಳ್ಳುವುದನ್ನು, ಥಟ್ಟನೆ ಆವಿಯಾಗುವ ನೀಲಮಣಿಯ ಬಣ್ಣದ ಬೆವರಿನ ಧಾರೆ ಸುರಿಸುತ್ತಾ ಅವು ನಂತರ ಹಸಿರು ಮೋಡಗಳಿಂದ ಆವೃತವಾಗಿ ಒಣಗಿ ಒಣಸ್ಪಂಜಿನಂಥ ಚಿಪ್ಪಾಗಿ ಹೋಗುತ್ತದೆ.

ಒಂದು ಚಂದ್ರ ಸತ್ತರೆ ಭೂಮಿಯ ಮೇಲೆ ಏನಾಗುತ್ತದೆ ಎಂಬುದನ್ನು ವಿವರಿಸುವುದು ಅಷ್ಟು ಸುಲಭವಲ್ಲ. ಆದರೂ ನಾನು ನೆನಪಿರುವ ಇತ್ತೀಚಿನ ಸಂಗತಿಯನ್ನು ಉಲ್ಲೇಖಿಸುವ ಮೂಲಕ ಅದನ್ನು ವಿವರಿಸಲು ಪ್ರಯತ್ನಿಸುತ್ತೇನೆ. ವಿಕಾಸದ ಸುದೀರ್ಘ ಅವಧಿಯಲ್ಲಿ ಕ್ರಮಿಸಿ ಕ್ರಮಿಸಿ ಭೂಮಿಯು ತುಸು ಹೆಚ್ಚು ಕಡಿಮೆ ನಾವು ಈಗ ಇರುವ ಹಂತಕ್ಕೆ ತಲುಪಿದೆ. ಇದನ್ನೇ ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ಇಲ್ಲಿ ಕಾರುಗಳು ಶೂಗಳ ಅಟ್ಟೆಗಳಿಗಿಂತ ಬೇಗನೆ ಸವೆಯುತ್ತವೆ. ಕೇವಲ ಮಾನವ ಜೀವಿಗಳು ತಯಾರಿಸಿದ, ಖರೀದಿಸಿ ಮಾರಾಟ ಮಾಡಿದ ವಸ್ತುಗಳು ಮತ್ತು ನಗರಗಳು ಭೂ ಖಂಡಗಳನ್ನು ಪ್ರಕಾಶಮಾನವಾದ ಬಣ್ಣಗಳಿಂದ ಆವರಿಸಿವೆ. ಈ ನಗರಗಳು ನಮ್ಮ ನಗರಗಳು ಈಗ ಬೆಳೆಯುತ್ತಿರುವಂತೆಯೇ, ಸರಿಸುಮಾರು ಅದೇ ಸ್ಥಳಗಳಲ್ಲಿ, ಭೂ ಖಂಡಗಳ ಆಕಾರವು ಎಷ್ಟೇ ಭಿನ್ನವಾಗಿದ್ದರೂ, ಅದೇ ಬಗೆಯಲ್ಲಿ ಬೆಳೆದವು. ನಿಮ್ಮೆಲ್ಲರಿಗೂ ಪರಿಚಿತವಾಗಿರುವ ನ್ಯೂಯಾರ್ಕ್ ಅನ್ನು ಹೋಲುವ ಒಂದು ನ್ಯೂಯಾರ್ಕ್ ಸಹ ಇದೆ, ಆದರೆ ಅದುತೀರಾ ಹೊಸದು. ಅಲ್ಲಿ ಹೊಸ ಉತ್ಪನ್ನಗಳು, ಹೊಸ ಹಲ್ಲುಜ್ಜುವ ಬ್ರಷ್‌ಗಳು, ಎಲ್ಲವೂ ಹೊಸತು. ತನ್ನದೇ ಆದ ಹೊಸ ಮ್ಯಾನ್‌ ಹಟನ್‌ ನೊಂದಿಗೆ ಇನ್ನೊಂದು ನ್ಯೂಯಾರ್ಕ್ ದಟ್ಟವಾಗಿ ಗಗನಚುಂಬಿಸುವಂತೆ ಬೆಳೆದಿದೆ. ಹೊಚ್ಚಹೊಸ ಹಲ್ಲುಜ್ಜುವ ಬ್ರಷ್‌ ನ ನೈಲಾನ್ ಬಿರುಗೂದಲುಗಳಂತೆ ಆ ಗಗನಚುಂಬಿ ಕಟ್ಟಡಗಳು ಮಿಂಚುತ್ತಿವೆ.

ಈ ಜಗತ್ತಿನಲ್ಲಿ ಪ್ರತಿಯೊಂದು ವಸ್ತುವನ್ನು ತುಸುವೇ ಮುಕ್ಕಾದರೆ ಸಾಕು, ಅಥವಾ ಸ್ವಲ್ಪ ಹಳತಾದರೆ, ಸಣ್ಣನೆ ನೆಗ್ಗಾದರೆ, ಅಥವಾ ಒಂದಿಷ್ಟು ಕಲೆಯಾದರೆ ಸಾಕು ಅದನ್ನು ಎಸೆದುಬಿಡುವ, ಬದಲಿಗೆ ಹೊಸತು ಮತ್ತು ಪರಿಪೂರ್ಣ ಪರ್ಯಾಯವಾದುದನ್ನು ಕೊಂಡುತರುವ ಮನಸ್ಸು ಬೆಳೆದಿದೆ. ಇದರ ನಡುವೆ ಒಂದೇ ಒಂದು ಸುಳ್ಳು ಟಿಪ್ಪಣಿ, ಒಂದು ನೆರಳು ಕೂಡ ಇದೆ. ಅದು ಚಂದ್ರ. ಅದು ಆಕಾಶದಲ್ಲಿ ಬೆತ್ತಲೆಯಾಗಿ, ಸಮೆಯುತ್ತ, ಬೂದು ಬಣ್ಣದಲ್ಲಿ ಅಲೆಯುತ್ತಿದೆ. ಇಲ್ಲಿನ ಬದುಕಿನ ಬಗ್ಗೆ ಹೆಚ್ಚು ಹೆಚ್ಚು ಅನ್ಯಭಾವ ತಾಳಿ ವಿಮುಖವಾಗಿದೆ ಎಂದರೂ ಸರಿಯೆ, ಇದು ತಾನು ಈ ಮೊದಲು ಏನಾಗಿದ್ದೆನೆಂಬ ಒಂದು ಹ್ಯಾಂಗೊವರ್. ಅದೊಂದು ಬಗೆಯಲ್ಲಿ ಹಳೆಯ ಕಾಲದ ಹಳಹಳಿಕೆ.

“ಹುಣ್ಣಿಮೆ”, “ಅರ್ಧ ಚಂದ್ರ”, “ಕೊನೆಯ ಕಾಲು ಚಂದ್ರ” ನಂತಹ ಪ್ರಾಚೀನ ಅಭಿವ್ಯಕ್ತಿಗಳು ಇನ್ನೂ ಬಳಕೆಯಾಗುತ್ತಲೇ ಇವೆ. ಆದರೆ ಅವು ಕೇವಲ ವರ್ಣನೆಗಳು ಮಾತ್ರ. ಮೈಯೆಲ್ಲಾ ಬಿರುಕುಗಳು, ರಂಧ್ರಗಳು ಇರುವ ಆಕಾರವನ್ನು, ಅದು ನಮ್ಮ ತಲೆಯ ಮೇಲೆ ಕಲ್ಲುಮಣ್ಣುಗಳ ಮಳೆಯನ್ನು ಅಪ್ಪಳಿಸುವ ಹಾಗೆ ಸುರಿಸುತ್ತಾ, ಈಗಲೋ ಆಗಲೋ ಕೂಲಿಹೋಗುವ ಹಾಗೆ ಕಾಣಿಸುತ್ತಾ ಇರುವಾಗ ನಾವು ಹೇಗೆ ತಾನೆ ಅದನ್ನು “ಪೂರ್ಣ”ವೆಂದು ಕರೆಯಬಹುದು? ಕ್ಷೀಣಿಸುತ್ತಿರುವ ಕೃಷ್ಣಪಕ್ಷದ ಚಂದ್ರನಾಗಿದ್ದಾಗಲಂತೂ ಅದನ್ನು ಉಲ್ಲೇಖಿಸಲು ಸಹ ಬರುವುದಿಲ್ಲ! ಒಂದು ರೀತಿಯಲ್ಲಿ ಅದನ್ನು ಜಗಿದು ಜಗಿದು ಬಾಯಲ್ಲಿ ಉಳಿದ ಚೀಸ್ ಚರಟದ ಮಟ್ಟಕ್ಕೆ ಇಳಿಸಲಾಯಿತು. ನಾವು ಮರೆಯಾಗುವುದೆಂದು ನಿರೀಕ್ಷಿಸುವ ಮೊದಲೇ ಅದು, ಯಾವಾಗಲೂ, ಕಣ್ಮರೆಯಾಗುತ್ತದೆ. ಪ್ರತಿ ಅಮಾವಾಸ್ಯೆಯ ಸಮಯದಲ್ಲಿಯೂ ನಾವು ಅದು ಮತ್ತೆ ಕಾಣಿಸಿಕೊಳ್ಳುತ್ತದೆಯೇ ಎಂದು ಸಂಶಯಪಟ್ಟಿದ್ದೇವೆ (ಅದು ಸುಮ್ಮನೆ ಕಣ್ಮರೆಯಾಗುತ್ತದೆ ಎಂದು ನಾವು ಭಾವಿಸುತ್ತಿದ್ದೇವೆಯೇ?). ಅದು ಮತ್ತೆ ಕಾಣಿಸಿಕೊಂಡಾಗ, ಹಲ್ಲುಗಳನ್ನು ಕಳೆದುಕೊಂಡಿರುವ ಬಾಚಣಿಗೆಯಂತೆ ಹೆಚ್ಚು ಹೆಚ್ಚು ಕಾಣುವಾಗ, ನಾವು ನಮ್ಮ ದೃಷ್ಟಿ ತಪ್ಪಿಸಿದ್ದೇವೆ, ಒಬ್ಬಗೆಯ ನಡುಕದಲ್ಲಿ.

ಅದು ಮನಸ್ಸು ಕುಗ್ಗಿಸುವ ನೋಟವಾಗಿತ್ತು. ನಾವು ಜನಸಂದಣಿಯಲ್ಲಿಯೇ ಹೊರಟೆವು. ನಮ್ಮ ಕೈಗಳು ಕೊಂಡ ಪಾರ್ಸೆಲ್‌ ಗಳಿಂದ ತುಂಬಿದ್ದವು. ಹಗಲು-ರಾತ್ರಿ ತೆರೆದಿರುತ್ತಿದ್ದ ದೊಡ್ಡ ದೊಡ್ಡ ಡಿಪಾರ್ಟ್‌ಮೆಂಟ್ ಸ್ಟೋರ್‌ ಗಳ ಒಳಗೆ ಹೋಗುತ್ತಿದ್ದೆವು, ಅಲ್ಲಿಂದ ಹೊರಗೆ ಬರುತ್ತಿದ್ದೆವು. ಗಗನಚುಂಬಿ ಕಟ್ಟಡಗಳ ಮೇಲೆ ಎತ್ತರಕ್ಕೆ ಏರಿದ್ದ ನಿಯಾನ್ ಸೈನ್ ಗಳನ್ನು ಕಣ್ಣಲ್ಲೆ ಸ್ಕ್ಯಾನ್ ಮಾಡುವಾಗ ಅವು ಹೊಸದಾಗಿ ಮಾರುಕಟ್ಟೆಗೆ ಬಂದ ಉತ್ಪನ್ನಗಳ ವಿವರಗಳನ್ನು ನಿರಂತರವಾಗಿ ತಿಳಿಸುತ್ತಿದ್ದವು. ಹಾಗೆ ಮಾಡುವಾಗಲೇ ಥಟ್ಟನೆ ಒಂದು ವಸ್ತು ಮೇಲೆ ಸರಿಯುತ್ತಿರುವುದನ್ನು ನಾವು ಕಂಡೆವು. ಆ ಬೆರಗುಗೊಳಿಸುವ ದೀಪಗಳ ಮಧ್ಯೆ ನಿಧಾನವಾಗಿ ಚಲಿಸುವಂತೆ ಮತ್ತು ಅನಾರೋಗ್ಯದಿಂದ ಬಳಲುತ್ತಿರುವಂತೆ ಅದು ಕಾಣಿಸಿತು. ನಾವು ಖರೀದಿಸಿದ ಪ್ರತಿಯೊಂದು ಉತ್ಪನ್ನವೂ ಇದೇ ರೀತಿ ನವೆದುಹೋಗಬಹುದು, ಹಾಳಾಗಬಹುದು, ಹದಗೆಡಬಹುದು, ಮಸುಕಾಗಬಹುದು ಎಂಬುದನ್ನು ನಮ್ಮ ತಲೆಯಿಂದ ಹೊರಗೆ ಹಾಕಲು ನಮಗೆ ಸಾಧ್ಯವಾಗಲೇ ಇಲ್ಲ. ಪ್ರತಿಯೊಂದು ಹೊಸ ವಸ್ತುವನ್ನು ಖರೀದಿಸಲು ಮತ್ತು ಹುಚ್ಚರಂತೆ ಕೆಲಸ ಮಾಡಲುತೊಡಗಿ ನಾವು ನಮ್ಮ ಉತ್ಸಾಹವನ್ನು ಕಳೆದುಕೊಳ್ಳುತ್ತೇವೆ. ಇದು ಉದ್ಯಮ ಮತ್ತು ವಾಣಿಜ್ಯಕ್ಕೆ ದೊಡ್ಡ ನಷ್ಟವಾಗಿದೆ.

ಈ ಅನುತ್ಪಾದಕ ಉಪಗ್ರಹವನ್ನು ಏನು ಮಾಡಬೇಕೆಂಬುದರ ಸಮಸ್ಯೆಯನ್ನು ನಾವು ಪರಿಗಣಿಸಲು ಪ್ರಾರಂಭಿಸಿದೆವು. ಅದು ಯಾವುದೇ ಪ್ರಯೋಜನಕ್ಕೂ ಬರಲಿಲ್ಲ. ಒಂದುಮಾತಲ್ಲಿ ಆ ಕಾರ್ಯನಿಷ್ಪ್ರಯೋಜಕವಾಗಿತ್ತು. ತನ್ನ ತೂಕವನ್ನು ಅದು ಕಳೆದುಕೊಂಡ ಹಾಗೆಲ್ಲ ಅದು ತನ್ನ ಕಕ್ಷೆಯನ್ನು ಭೂಮಿಯ ಕಡೆಗೆ ತಿರುಗಿಸಲು ಪ್ರಾರಂಭಿಸಿತು. ಅದು ನಿಜವಾಗಲೂ ಎಲ್ಲಕ್ಕಿಂತ ಹೆಚ್ಚಾಗಿ ಅಪಾಯಕಾರಿಯಾಗಿ ಪರಿಣಮಿಸುತ್ತಿತ್ತು. ಭೂಮಿಗೆ ಹತ್ತಿರವಾದಾಗ ಅದು ತನ್ನ ವೇಗವನ್ನು ನಿಧಾನಗೊಳಿಸಿತು. ನಾವು ಇನ್ನು ಮುಂದೆ ಅದರ ಶುಕ್ಲಪಕ್ಷ ಕೃಷ್ಣಪಕ್ಷ, ಏಕಾದಶೀ ಮುಂತಾದಹಂತಗಳನ್ನು ಲೆಕ್ಕಹಾಕಲು ಸಾಧ್ಯವಿಲ್ಲ. ಕ್ಯಾಲೆಂಡರ್, ತಿಂಗಳುಗಳ ಲಯ ಇವೆಲ್ಲ ಕೇವಲ ಔಪಚಾರಿಕ ವಿಧಿಯಾಗಿ ಮಾರ್ಪಟ್ಟಿದ್ದವು. ಚಂದ್ರ ಪದೇ ಪದೇ ಅದೇ ಮಾಡುತ್ತ ಮುಂದೆ ಹೋಗುತ್ತಿತ್ತು. ಅದು ಕುಸಿಯಲು ಹೊರಟಂತೆ ತೋರುತ್ತಿತ್ತು.

ಚಂದ್ರನು ಕೆಳಗೆ ಬಂದ ಈ ರಾತ್ರಿಗಳಲ್ಲಿ, ಹೆಚ್ಚು ಅಸ್ಥಿರ ಮನಸ್ಸಿನ ಜನರು ವಿಲಕ್ಷಣವಾದ ಕೆಲಸಗಳನ್ನು ಮಾಡಲು ಪ್ರಾರಂಭಿಸಿದರು. ಗಗನಚುಂಬಿ ಕಟ್ಟಡದ ಪ್ಯಾರಾಪೆಟ್ಟಿನ ಅಂಚಿನ ಉದ್ದಕ್ಕೂ ನಿದ್ದೆಯಲ್ಲಿ ನಡೆವ ವ್ಯಕ್ತಿಯೊಬ್ಬ ತನ್ನ ತೋಳುಗಳನ್ನು ಚಂದ್ರನ ಕಡೆಗೆ ಚಾಚುತ್ತ ಓಡಾಡುತ್ತಿದ್ದ. ಟೈಮ್ಸ್ ಸ್ಕ್ವೇರ್ ಮಧ್ಯದಲ್ಲಿ ತೋಳವಾಗುವ ಮನುಷ್ಯ ಅಥವಾ ಮನುಷ್ಯನಾಗುವ ತೋಳ – ವೀರ್ವುಲ್ಫ್ – ಊಳಿಡುತ್ತಿತ್ತು. ಬಂದರು ಗೋದಾಮುಗಳಿಗೆ ಬೆಂಕಿ ಹಚ್ಚುವ ಪೈರೋಮೇನಿಯಾಕ್ – ಕಂಡಕಂಡದ್ದಕ್ಕೆ ಬೆಂಕಿ ಹಚ್ಚುವ ಹುಚ್ಚು ಹತ್ತಿದ ಮನುಷ್ಯನಂತೂ ಯಾವಾಗಲೂ ಇದ್ದ. ಈಗ ಇವು ಸಾಮಾನ್ಯ ಘಟನೆಗಳಾಗಿದ್ದು, ಸದಾ ಕುತೂಹಲಿಯಂತೆ ಹೊಸತನ್ನೇ ನಿರುಕಿಸುವ ಸಾಮಾನ್ಯ ಗುಂಪನ್ನು ಅದು ಹೆಚ್ಚು ಆಕರ್ಷಿಸಲಿಲ್ಲ. ಆದರೆ ಸೆಂಟ್ರಲ್ ಪಾರ್ಕ್‌ ನ ಬೆಂಚಿನ ಮೇಲೆ ಸಂಪೂರ್ಣವಾಗಿ ಬೆತ್ತಲೆಯಾಗಿ ಕುಳಿತಿದ್ದ ಹುಡುಗಿಯನ್ನು ನೋಡಿದಾಗ ಮಾತ್ರ ನಾನು ನಿಲ್ಲಬೇಕಾಯಿತು.

ನಾನು ಅವಳನ್ನು ನೋಡುವ ಮೊದಲೇ ನಿಗೂಢವಾದದ್ದು ಏನಾದರೂ ಸಂಭವಿಸಲಿದೆ ಎಂಬ ಭಾವನೆ ಅವಳಲ್ಲಿತ್ತು. ನನ್ನ ಕನ್ವರ್ಟಿಬಲ್ ಅನ್ನು ಓಡಿಸಿಕೊಂಡು ನಾನು ಸೆಂಟ್ರಲ್ ಪಾರ್ಕ್ ಮೂಲಕ ಸಾಗುತ್ತಿದ್ದಾಗ, ಮಿನುಗುವ ಬೆಳಕಿನಲ್ಲಿ ಸ್ನಾನ ಮಾಡಿದ್ದೇನೆ ಅನಿಸುತ್ತಿತ್ತು. ಅದು ಫ್ಲೋರಸೆಂಟ್ ಬಲ್ಬಿನಂತೆ ಸಂಪೂರ್ಣವಾಗಿ ಚಾಲೂ ಆಗುವ ಮೊದಲು ಪ್ರಕಾಶಮಾನವಾದ, ಮಿಟುಕಿಸುವ ಬೆಳಕಿನ ಸರಣಿಯನ್ನು ಹೊರಸೂಸುತ್ತದೆ. ನನ್ನ ಸುತ್ತಲಿನ ನೋಟವು ಚಂದ್ರನ ಕುಳಿಯಲ್ಲಿ ಮುಳುಗಿದ ಉದ್ಯಾನ ವನದಂತೆಯೇ ಇತ್ತು. ಬೆತ್ತಲೆ ಹುಡುಗಿ ಚಂದ್ರನ ತುಂಡನ್ನು ಪ್ರತಿಬಿಂಬಿಸುವ ಕೊಳದ ಪಕ್ಕದಲ್ಲಿ ಕುಳಿತಳು. ನಾನು ಬ್ರೇಕ್ ಹಾಕಿದೆ. ಒಂದು ಸೆಕೆಂಡು ನಾನು ಅವಳನ್ನು ಗುರುತಿಸಿದೆ ಎಂದು ಭಾವಿಸಿದೆನೇನೋ, ನಾನು ಕಾರಿನಿಂದ ಇಳಿದು ಅವಳ ಕಡೆಗೆ ಓಡಿಹೋದೆ. ಆದರೆ ನಂತರ ನಾನು ಹೆಪ್ಪುಗಟ್ಟಿದೆ. ಅವಳು ಯಾರೆಂದು ನನಗೆ ತಿಳಿದಿರಲಿಲ್ಲ. ಆದರೂ ತುರ್ತಾಗಿ ಅವಳಿಗೆ ಏನಾದರೂ ಮಾಡಬೇಕಾಗಿದೆ ಎಂದು ಮಾತ್ರ ನಾನು ಭಾವಿಸಿದೆ.

ಅವಳದೆನ್ನುವ ಎಲ್ಲವೂ ಬೆಂಚ್‌ ನ ಸುತ್ತಲ ಹುಲ್ಲಿನ ಮೇಲೆ ಹರಡಿಕೊಂಡಿದ್ದವು. ಅವಳ ಬಟ್ಟೆ, ಒಳ ಉಡುಪು ಮತ್ತು ಶೂ ಇಲ್ಲಿದ್ದರೆ ಅಲ್ಲಿ ಇತರೆ ವಸ್ತುಗಳು. ಅವಳ ಕಿವಿಯೋಲೆಗಳು, ಕೊರಳಹಾರ, ಕಡಗಗಳು, ಪರ್ಸ್ ಮತ್ತು ಶಾಪಿಂಗ್ ಬ್ಯಾಗ್. ಅಷ್ಟಗಲ ಚೆಲ್ಲಿದ ವಸ್ತುಗಳು. ಅಸಂಖ್ಯಾತ ಪೊಟ್ಟಣಗಳು, ಸರಕುಗಳು. ಪ್ರಾಯಶಃ ಅವಳು ಅದ್ದೂರಿ ಶಾಪಿಂಗ್ ವಿನೋದದಿಂದ ಹಿಂದಿರುಗುವಾಗ ತನ್ನನ್ನು ತಾನು ಮುಕ್ತಗೊಳಿಸಿಕೊಳ್ಳಬೇಕೆಂದು ಅರಿತು ಎಲ್ಲವನ್ನೂ ಚೆಲ್ಲಿಬಿಟ್ಟಿದ್ದಾಳೆ. ಅವು ಅವಳನ್ನು ಈ ಭೂಮಿಗೆ ಬಂಧಿಸಲ್ಪಟ್ಟಿರುವ ವಸ್ತುಗಳು ಮತ್ತು ಚಿಹ್ನೆಗಳು. ಅವಳು ಚಂದ್ರನ ಗೋಳಕ್ಕೆ ಸೇರಿಕೊಳ್ಳಲು ಕಾಯುತ್ತಿದ್ದಳು ಎಂದು ಈಗ ಊಹಿಸಲಾಗಿದೆ.

“ಏನಾಗುತ್ತಿದೆ?” ನಾನು ದಿಗ್ಭ್ರಮೆಗೊಂಡೆ, “ನಿಮಗೆ ನಾನು ಸಹಾಯಮಾಡಲೆ?”

“ಸಹಾಯ?” ಅವಳು ಕೇಳಿದಳು. ಅವಳ ಕಣ್ಣುಗಳು ಮೇಲೆ ಆಗಸದತ್ತ ನೋಡುತ್ತಿದ್ದವು. ಅವಳು ಮುಂದುವರಿದು “ಯಾರೂ ಯಾರಿಗೂ ಸಹಾಯ ಮಾಡಲು ಸಾಧ್ಯವಿಲ್ಲ. ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ” ಎಂದಳು. ಈಗಮಾತ್ರ ಅವಳು ಮಾತನಾಡುತ್ತಿರುವುದು ತನ್ನ ಬಗ್ಗೆ ಅಲ್ಲ, ಚಂದ್ರನ ಬಗ್ಗೆ ಎಂಬುದು ಸ್ಪಷ್ಟವಾಗಿತ್ತು.

ಚಂದ್ರನು ನಮ್ಮ ಮೇಲಿದ್ದ. ಒಂದು ಪೀನ ಆಕಾರವು ಉರುಳಿ ನಮ್ಮನ್ನು ಬಹುತೇಕ ಪುಡಿಮಾಡುತ್ತದೆ. ಪಾಳುಬಿದ್ದ ಮೇಲ್ಛಾವಣಿ, ಚೀಸ್ ತುರಿಯುವ ತುರಿಯೋಮಣೆಯ ತೂತುಗಳಂತಹ ರಂಧ್ರಗಳಿಂದ ಕೂಡಿದೆ. ಆ ಕ್ಷಣವೇ ಮೃಗಾಲಯದಲ್ಲಿನ ಪ್ರಾಣಿಗಳು ಕೂಗಲಾರಂಭಿಸಿದವು.

“ಇದು ಅಂತ್ಯವೇ?” ನಾನು ಯಾಂತ್ರಿಕವಾಗಿ ಕೇಳಿದೆ. ನನ್ನ ಪ್ರಶ್ನೆಯ ಅರ್ಥವೇನೆಂದು ನನಗೆ ತಿಳಿದಿರಲಿಲ್ಲ.

ಅವಳು ಉತ್ತರಿಸಿದಳು, “ಇದು ಪ್ರಾರಂಭ, ಅಥವಾ ಅಂತಹದ್ದೇ ಏನಾದರೂ ಒಂದು”. (ಅವಳು ಬಹುತೇಕ ತುಟಿ ಬಿಚ್ಚದೆಯೇ ಮಾತನಾಡಿದ್ದಳು.)
“ನಿನ್ನ ಮಾತಿನ ಅರ್ಥವೇನು? ಇದು ಅಂತ್ಯದ ಪ್ರಾರಂಭವೋ ಅಥವಾ ಇನ್ನೇನಾದರೂ ಪ್ರಾರಂಭವಾಗಿದೆಯೇ?”

ಅವಳು ಎದ್ದು ಹುಲ್ಲಿನ ಮೇಲೆ ಅಡ್ಡಲಾಗಿ ನಡೆದಳು. ಅವಳ ಉದ್ದವಾದ ತಾಮ್ರವರ್ಣದ ಕೂದಲು ಅವಳ ಹೆಗಲ ಮೇಲೆ ಇಳಿಬಿದ್ದಿತ್ತು. ಅವಳು ತುಂಬಾ ದುರ್ಬಲಳಾಗಿದ್ದಳು. ಎಷ್ಟರ ಮಟ್ಟಿಗೆ ಎಂದರೆ ಅವಳನ್ನು ರಕ್ಷಿಸುವ ಅತ್ಯವಶ್ಯಕತೆಯಿದೆ ಎಂದು ನಾನು ಭಾವಿಸಿದೆ. ಅವಳನ್ನು ರಕ್ಷಿಸುವುದಕ್ಕೆ, ಅವಳು ಬೀಳುವಂತಾದರೆ ಅವಳನ್ನು ಹಿಡಿಯಲು ಅಥವಾ ಅವಳಿಗೆ ಹಾನಿಯುಂಟುಮಾಡುವ ಯಾವುದನ್ನಾದರೂ ನಿವಾರಿಸಲು ನಾನು ಸಿದ್ಧನಾಗಿರುವಂತೆ ನನ್ನ ಕೈಗಳನ್ನು ಅವಳ ಕಡೆಗೆ ಚಾಚಿದೆ. ಆದರೆ ನನ್ನ ಕೈಗಳು ಅವಳನ್ನು ಸೋಕಲು ಸಹ ಧೈರ್ಯ ಮಾಡಲಿಲ್ಲ. ಸದಾ ಅವು ಅವಳ ಚರ್ಮದಿಂದ ಕೆಲವು ಸೆಂಟಿಮೀಟರ್ ದೂರವೇ ಉಳಿದವು. ಹೂವಿನ ತೋಟಗಳ ಹಿಂದೆ ಈ ರೀತಿಯಾಗಿ ನಾನು ಅವಳನ್ನು ಹಿಂಬಾಲಿಸುತ್ತಿರುವಾಗ ಅವಳ ಚಲನೆಗಳು ಸಹ ನನ್ನಂತೆಯೇ ಇವೆ ಎಂದು ನಾನು ಅರಿತುಕೊಂಡೆ. ಅವಳು ಕೂಡ ದುರ್ಬಲವಾದ ಯಾವುದನ್ನಾದರೂ ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಅದು ಬೀಳಬಹುದು, ಚೂರುಚೂರಾಗಬಹುದು. ಆಗ ಅದನ್ನು ರಕ್ಷಿಸುವುದು ಅಗತ್ಯವಾಗಿರುತ್ತದೆ. ಅದನ್ನು ನಿಧಾನವಾಗಿ ನೆಲೆಗೊಳ್ಳಲು ಸಾಧ್ಯವಾಗುವ ಸ್ಥಳದ ಕಡೆಗೆ ಕೊಂಡೊಯ್ಯುವುದು ಅವಳ ಇರಾದೆಯಾಗಿದ್ದಂತೆ. ಅವಳು ಸ್ಪರ್ಶಿಸಲಾಗದ್ದದು. ಅವಳು ತನ್ನ ಸನ್ನೆಗಳ ಮೂಲಕ ಮಾತ್ರ ಮಾರ್ಗದರ್ಶನ ನೀಡಬಲ್ಲಳು. ಹೌದು, ಅದು ಚಂದ್ರ.

ಚಂದ್ರ ಕಳೆದುಹೋದಂತೆ ಕಾಣುತ್ತಿತ್ತು. ತನ್ನ ಕಕ್ಷೆಯನ್ನು ತ್ಯಜಿಸಿದ ನಂತರ, ಎಲ್ಲಿಗೆ ಹೋಗಬೇಕೆಂದು ಅದಕ್ಕೆ ತಿಳಿದಿರಲಿಲ್ಲ. ಅದು ತನ್ನ ತಾನು ಒಂದು ಗಾಳಿಯಲ್ಲಿನ ತರಗೆಲೆಯಂತೆ ಸಾಗಿಸಲ್ಪಡಲು ಬಿಟ್ಟುಕೊಟ್ಟಿತ್ತು. ಕೆಲವೊಮ್ಮೆ ಇದು ಭೂಮಿಯ ಕಡೆಗೆ ಕುಸಿದು ಬೀಳುತ್ತಿರುವಂತೆ ಕಂಡುಬಂತು. ಬೇರೆ ಸಮಯದಲ್ಲಿ ಸುರುಳಿಯಾಕಾರದ ಚಲನೆಯಲ್ಲಿ ತಿರುತಿರುಗುತ್ತಾ ಇಳಿಯುತ್ತಿತ್ತು. ಇನ್ನೂ ಕೆಲವು ಬಾರಿ ಅದು ಕೇವಲ ತೇಲುತ್ತಿರುವಂತೆ ಕಾಣುತ್ತಲಿತ್ತು. ಅದು ತನ್ನ ಎತ್ತರವನ್ನು ಕಳೆದುಕೊಳ್ಳುತ್ತಿತ್ತು. ನಿಶ್ಚಿತವಾಗಿಯೂ ಹಾಗೆಯೇ. ಇನ್ನು ಒಂದು ಸೆಕೆಂಡಿನಲ್ಲಿ ಅದು ಪ್ಲಾಜಾ ಹೋಟೆಲ್‌ ಗೆ ಅಪ್ಪಳಿಸುತ್ತದೆ ಎಂದು ತೋರುತ್ತಿತ್ತು. ಆದರೆ ಅದು ಎರಡು ಗಗನಚುಂಬಿ ಕಟ್ಟಡಗಳ ನಡುವಿನ ಕಾರಿಡಾರ್‌ ಗೆ ಜಾರಿಬಿದ್ದು ಹಡ್ಸನ್‌ ನ ದಿಕ್ಕಿನಲ್ಲಿ ಕಣ್ಮರೆಯಾಯಿತು. ಸ್ವಲ್ಪ ಸಮಯದ ನಂತರ ಅದು ಮೋಡದ ಹಿಂದಿನಿಂದ ಹೊರಬಂದು ನಗರದ ಎದುರು ಭಾಗದಲ್ಲಿ, ಬಾತಿಂಗ್ ಹಾರ್ಲೆಮ್ ಮತ್ತು ಈಸ್ಟ್ರಿವರ್ ನದಿಯನ್ನು ಮಂದಬೆಳಕಿನಲ್ಲಿ ದಾಟಿ ಬೀಸುಗಾಳಿಯಲ್ಲಿ ಸಿಕ್ಕಿಹಾಕಿಕೊಂಡಂತೆ, ಬ್ರಾಂಕ್ಸ್ ಕಡೆಗೆ ಉರುಳಿತು.

“ಅದು ಅಲ್ಲಿದೆ!” ನಾನು ಕೂಗಿದೆ. “ಅಲ್ಲಿ – ಅದು ನಿಂತುಬಿಟ್ಟಿದೆ!”

“ಅದು ನಿಲ್ಲಲು ಸಾಧ್ಯವಿಲ್ಲ!” ಹುಡುಗಿ ಅಚ್ಚರಿಯಿಂದ ಕೂಗಿದಳು. ಅವಳು ಅತ್ತ ಬೆತ್ತಲೆಯಾಗಿಯೇ ಹುಲ್ಲಿನ ಮೇಲೆ ಬರಿಗಾಲಿನಲ್ಲಿಯೇ ಓಡಿಹೋದಳು.
“ಎಲ್ಲಿಗೆ ಹೋಗುತ್ತಿದ್ದೀಯ? ನೀನು ಹಾಗೆಲ್ಲ ಸುತ್ತಾಡಲು ಸಾಧ್ಯವಿಲ್ಲ! ನಿಲ್ಲು! ಹೇ, ನಾನು ನಿನ್ನೊಂದಿಗೇನೆ ಮಾತನಾಡುತ್ತಿದ್ದೇನೆ! ನಿನ್ನ ಹೆಸರು ಏನು?”
ಅವಳು ‘ಡಯಾನಾ’ ಅಥವಾ ‘ಡೀನಾ’ ಎಂದೇನೋ ಒಂದು ಹೆಸರನ್ನು ಕೂಗಿಹೇಳಿದಳು. ಅದು ಅವಳ ಪ್ರಾರ್ಥನೆಯೂ ಆಗಿರಬಹುದು. ಬಳಿಕ ಅವಳು ಕಣ್ಮರೆಯಾದಳು. ಅವಳನ್ನು ಹಿಂಬಾಲಿಸುವ ಸಲುವಾಗಿ ನಾನು ಮತ್ತೆ ನನ್ನ ಕಾರಿಗೆ ಹಾರಿ ಚಲಾಯಿಸಿದೆ; ಸೆಂಟ್ರಲ್ ಪಾರ್ಕ್‌ ಡ್ರೈವ್‌ ಗಳನ್ನು ಹುಡುಕಲು ಪ್ರಾರಂಭಿಸಿದೆ.

ನನ್ನ ಕಾರಿನ ಹೆಡ್‌ ಲೈಟ್‌ ಗಳ ಬೆಳಕು ಪೊದೆಗಳು, ಗುಡ್ಡಗಳು, ಪಿರಾಮಿಡ್ಡಿನಂತಹ ಒಬೆಲಿಸ್ಕ್‌ ಗಳನ್ನು ಬೆಳಗಿಸಿದವು. ಆದರೆ ಡಯಾನಾ ಎಂಬ ಹುಡುಗಿ ಎಲ್ಲಿಯೂ ಕಾಣಿಸಲಿಲ್ಲ. ನಾನು ತುಂಬಾ ದೂರ ಹೋಗಿಬಿಟ್ಟಿದ್ದೆ. ನಾನು ಅವಳನ್ನು ಹಿಂದೆ ಬಿಟ್ಟು ಬಂದಿರಬೇಕು. ಬಂದ ದಾರಿಯಲ್ಲಿ ಹಿಂತಿರುಗಲು ನಾನು ಕಾರು ತಿರುಗಿದೆ. ನನ್ನ ಹಿಂದೆ ಒಂದು ಧ್ವನಿ, “ಇಲ್ಲ, ಅದು ಇದೆ, ಮುಂದುವರಿಯಿರಿ!”

ನನ್ನ ಕಾರಿನ ಡಿಕ್ಕಿಯ ಮೇಲೆ ನನ್ನ ಹಿಂದೆ ಕುಳಿತದ್ದು ಅದೇ ಬೆತ್ತಲೆ ಹುಡುಗಿ. ಅವಳೇ ಚಂದ್ರನ ಕಡೆಗೆ ಕೈ ತೋರುತ್ತಾ ಮಾತಾಡಿದ್ದು.

ನಾನು ಅವಳಿಗೆ ‘ಕೆಳಗಿಳಿ’ ಎಂದು ಹೇಳಲು, ಮುಖ್ಯವಾಗಿ ಆ ಸ್ಥಿತಿಯಲ್ಲಿ ನಾನು ಅವಳೊಂದಿಗೆ ‘ನಗರದಾದ್ಯಂತ ಪ್ರಯಾಣಿಸಲು ಸಾಧ್ಯವಿಲ್ಲ’ ಎಂದು ವಿವರಿಸಲು ಬಯಸಿದ್ದೆ. ಆದರೆ ನಾನು ಅವಳ ಗಮನವನ್ನು ಬೇರೆಡೆಗೆ ತಿರುಗಿಸಲು ಧೈರ್ಯ ಮಾಡಲಿಲ್ಲ. ಅವಳು ಡ್ರೈವ್‌ ನ ಕೊನೆಯಲ್ಲಿ ಕಣ್ಮರೆಯಾಗುತ್ತ ಮತ್ತೆ ಕಾಣಿಸಿಕೊಳ್ಳುತ್ತ ಇದ್ದ ಪ್ರಕಾಶಮಾನವಾದ ಹೊಳಪನ್ನು ನೋಡುವ ಅವಕಾಶವನ್ನು ಕಳೆದುಕೊಳ್ಳುವುದಿಲ್ಲ ಎನ್ನುವುದು ನನಗೆ ಖಚಿತವಾಗಿತ್ತು. ಇನ್ನೂ ವಿಚಿತ್ರವೆಂದರೆ ಯಾವುದೇ ಸಂದರ್ಭದಲ್ಲಿಯೂ ನನ್ನ ಕಾರಿನ ಡಿಕ್ಕಿಯ ಮೇಲೆ ಕುಳಿತಿರುವ ಈ ಹೆಣ್ಣ ನೋಟವನ್ನು ದಾರಿಹೋಕರು ಯಾರೂ ಗಮನಿಸಲಿಲ್ಲ.

ಮ್ಯಾನ್‌ಹಟನ್‌ ಅನ್ನು ನಗರದ ಮುಖ್ಯಭಾಗಕ್ಕೆ ಕೂಡಿಸುವ ಸೇತುವೆಗಳ ಪೈಕಿ ಒಂದನ್ನು ನಾವು ದಾಟಿ ಈಗ ನಾವು ಮಲ್ಟಿಲೇನ್ ಹೆದ್ದಾರಿಯಲ್ಲಿ ಇತರ ಕಾರುಗಳೊಂದಿಗೆ ಹೋಗುತ್ತಿದ್ದೆವು. ನಾನು ಹೆದರಿ ನೇರವಾಗಿ ರಸ್ತೆ ನೋಡುತ್ತಿದ್ದೆ. ನಮ್ಮಿಬ್ಬರ ನೋಟ ನಮ್ಮ ಸುತ್ತಲಿನ ಕಾರುಗಳಲ್ಲಿನ ಜನರಲ್ಲಿ ಹೇಸಿಗೆಯ ನಗು ಮತ್ತು ರೂಕ್ಷ ಕಾಮೆಂಟ್‌ ಗಳನ್ನು ಪ್ರೇರೇಪಿಸುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿರಲಿಲ್ಲ. ಆದರೆ ಸೆಡಾನ್ ಒಂದು ನಮ್ಮನ್ನು ಹಿಂದಿಕ್ಕಿದಾಗ ಮಾತ್ರ ನಾನು ಆಶ್ಚರ್ಯದಿಂದ ರಸ್ತೆಯಿಂದ ಆಚೆಗೇ ಬಂದುಬಿಟ್ಟಿದ್ದೆ. ಅದರ ಛಾವಣಿಯ ಮೇಲೆ ಕವುಚಿ ಮಲಗಿದ ಬೆತ್ತಲೆ ಹುಡುಗಿ. ಅವಳ ಕೂದಲು ಗಾಳಿಯಲ್ಲಿ ಕೆದರಿ ಹೊಯ್ದಾಡುತ್ತಿತ್ತು. ಒಂದು ಸೆಕೆಂಡು. ಆ ನನ್ನ ಸಹಪ್ರಯಾಣಿಕಳು ಒಂದು ವೇಗದ ಕಾರಿನಿಂದ ಇನ್ನೊಂದಕ್ಕೆ ಜಿಗಿಯುತ್ತಿದ್ದಾಳೆ. ಆದರೆ ನನ್ನಿಂದ ಮಾಡಬಹುದಾದದ್ದು ನನ್ನ ತಲೆಯನ್ನು ಸ್ವಲ್ಪಮಟ್ಟಿಗೆ ತಿರುಗಿಸಿ, ನನ್ನ ಮೂಗಿನ ನೇರಕ್ಕೆ ದೃಷ್ಟಿ ಹರಿಸಿ ಡಯಾನಾಳ ಮೊಣಕಾಲುಗಳು ಇನ್ನೂ ಅಲ್ಲಿಯೇ ಇರುವುದನ್ನು ನೋಡುವುದು ಮಾತ್ರ. ಅವಳ ದೇಹ ಮಾತ್ರವೇ ನನ್ನ ಕಣ್ಣಮುಂದೆ ಹೊಳೆಯುತ್ತಿರಲಿಲ್ಲ.

ಈಗ ನಾನು ಎಲ್ಲೆಡೆ ಹೊಳೆಯುವ ಹುಡುಗಿಯರನ್ನೇ ಕಾಣುತ್ತಿದ್ದೆ. ವಿಚಿತ್ರವಾದ ಭಂಗಿಗಳಲ್ಲಿ ಚಾಚಿದ ಮೈಗಳು. ವೇಗದಲ್ಲಿ ಚಲಿಸುವ ಕಾರುಗಳ ರೇಡಿಯೇಟರ್‌ ಗಳು, ಬಾಗಿಲುಗಳು ಮತ್ತು ಫೆಂಡರ್‌ ಗಳಿಗೆ ಅಂಟಿಕೊಂಡಿದ್ದ ಹೆಣ್ಣುಗಳು. ಅವರ ಕೂದಲಿನ ಹೊಂಬಣ್ಣ ಅಥವಾ ಕಡುಕಪ್ಪು, ಅವರ ಬೆತ್ತಲೆ ಚರ್ಮದ ಗುಲಾಬಿ ಅಥವಾ ಗಾಢವಾದ ಮಿನುಗು ಒಂದಕ್ಕೊಂದು ಮಿಗಿಲಾಗಿದ್ದವು. ಪ್ರತಿ ಕಾರಿನಲ್ಲೂ ಒಬ್ಬರಾದರೂ ಇಂಥ ನಿಗೂಢ ಮಹಿಳಾ ಪ್ರಯಾಣಿಕರು ಇದ್ದರು. ಎಲ್ಲರೂ ಮುಂದೆ ಮುಂದೆ ನೋಡಿಕೊಂಡು ಸಾಗುತ್ತಿದ್ದರು. ತಮ್ಮ ಚಾಲಕರಿಗೆ ಚಂದ್ರನನ್ನು ಹಿಂಬಾಲಿಸುವಂತೆ ಒತ್ತಾಯಿಸುತ್ತಿದ್ದರು.

ಅಳಿವಿನಂಚಿನಲ್ಲಿರುವ ಚಂದ್ರನಿಂದ ಅವರಿಗೆ ಕರೆ ಕಳುಹಿಸಲಾಗಿತ್ತು. ನನಗೆ ಅದು ಖಚಿತವಾಗಿತ್ತು. ಅವರಲ್ಲಿ ಎಷ್ಟು ಮಂದಿ ಇದ್ದರು? ಚಂದ್ರನ ಹುಡುಗಿಯರನ್ನು ಹೊತ್ತೊಯ್ಯುವ ಹೆಚ್ಚಿನ ಕಾರುಗಳು ಪ್ರತಿ ಅಡ್ಡರಸ್ತೆ ಮತ್ತು ಜಂಕ್ಷನ್‌ ಗಳಲ್ಲಿ ಒಟ್ಟುಗೂಡುತ್ತಲಿದ್ದವು. ನಗರದ ಎಲ್ಲಾ ಭಾಗಗಳಿಂದಲೂ ಅವು ಚಂದ್ರನು ನಿಂತುಬಿಟ್ಟಿರುವಂತೆ ಕಾಣುತ್ತಿದ್ದ ಸ್ಥಳಕ್ಕೆ ಸೇರುತ್ತಿದ್ದವು. ನಗರದ ಕೊನೆ ತಲುಪಿದ ನಾವು ಆಟೋಮೊಬೈಲ್ ಸ್ಕ್ರ್ಯಾಪ್ ಯಾರ್ಡಿನ ಮುಂದೆ ನಿಂತಿದ್ದೆವು.

ಸಣ್ಣ ಸಣ್ಣ ಕಣಿವೆಗಳು, ಕಣಿವೆಯಂಚುಗಳು, ಬೆಟ್ಟಗಳು ಮತ್ತು ಗಿರಿಶಿಖರಗಳನ್ನು ಹೊಂದಿರುವ ಆ ಪ್ರದೇಶದಲ್ಲಿ ರಸ್ತೆ ಕೊನೆಯಾಗಿದೆ. ಆದರೆ ಇದು ಅಸಮವಾದ ಮೇಲ್ಮೈಯನ್ನು ಸೃಷ್ಟಿಸಿದ ಭೂಮಿಯ ಬಾಹ್ಯರೇಖೆಗಳಲ್ಲ, ಬದಲಾಗಿ, ಬಿಸಾಕಿದ ವಸ್ತುಗಳ ಪದರಗಳು. ಎಲ್ಲವೂ ಮಹಾನ್ ಗ್ರಾಹಕ ನಗರವು ಬಳಸಿ ಬಿಸಾಡಲ್ಪಟ್ಟ ವಸ್ತುಗಳು. ಇದರಿಂದಾಗಿ ಹೊಸ ಆಮಿಶಗಳನ್ನು ನಿಭಾಯಿಸುವ ಆನಂದವನ್ನು ತಕ್ಷಣವೇ ಒದಗಿಸಬಹುದು. ಈ ಹೊಲಸು ನೆರೆಹೊರೆಯಲ್ಲಿ ಅವೆಲ್ಲವೂ ಕೊನೆಗಾಣುತ್ತಿದ್ದವು.

ಅನೇಕ ವರ್ಷಗಳ ಅವಧಿಯಲ್ಲಿ, ಕೆಟ್ಟ ಫ್ರಿಡ್ಜ್‌ ಗಳ ರಾಶಿಗಳು, ಲೈಫ್ ನಿಯತಕಾಲಿಕದ ಹಳದಿಯಾಗುತ್ತಿದ್ದ ಸಂಚಿಕೆಗಳು, ಸುಟ್ಟುಹೋದ ಬಲ್ಬ್‌ ಗಳು ಅಗಾಧವಾದ ಒಡೆಯುವ-ಜಜ್ಜುವ ಅಂಗಳದಲ್ಲಿ ಸಂಗ್ರಹವಾಗಿದ್ದವು. ಚೂಪುಚೂಪಾದ, ತುಕ್ಕು ಹಿಡಿದ ಭೂಪ್ರದೇಶದ ಮೇಲೆ ಈಗ ಚಂದ್ರ ಜೋತಾಡುತ್ತಿತ್ತು. ಜಜ್ಜಿದ ಲೋಹದ ರಾಶಿಗಳು ಕಡಲ ಉಬ್ಬರದ ಅಲೆಗಳಂತೆಯೇ ಉಬ್ಬಿಕೊಂಡಿದ್ದ, ಕ್ಷೀಣಿಸಿದ ಪಾಳು ಚಂದ್ರ ಮತ್ತು ಭೂಮಿಯ ಹೊರಪದರವನ್ನು ಭಗ್ನಾವಶೇಷಗಳ ಮಿಶ್ರಣವಾಗಿ ಬೆಸುಗೆ ಹಾಕಲಾಗಿರುವುದು ಇವು ಒಂದನ್ನೊಂದು ಹೋಲುತ್ತವೆ. ಸ್ಕ್ರ್ಯಾಪ್ ಲೋಹದ ಪರ್ವತಗಳು ಒಂದು ಸರಪಣಿಯನ್ನು ರೂಪಿಸಿವೆ. ಅದು ಆಂಫಿಥಿಯೇಟರಿನಂತೆ ಸುತ್ತ ಮೇಲೆದ್ದಿದೆ. ಅದರ ಆಕಾರವು ನಿಖರವಾಗಿ ಜ್ವಾಲಾಮುಖಿಯ ಕುಳಿ ಅಥವಾ ಚಂದ್ರನ ಸಮುದ್ರದ ಆಕಾರದಲ್ಲಿತ್ತು. ಚಂದ್ರ ಈ ಜಾಗದ ಮೇಲೆ ತೂಗಾಡುತ್ತಿತ್ತು. ಈ ಗ್ರಹ ಮತ್ತು ಅದರ ಉಪಗ್ರಹ ಪರಸ್ಪರರ ಕನ್ನಡಿಯ ಚಿತ್ರಗಳಾಗಿ ಕಾರ್ಯನಿರ್ವಹಿಸುತ್ತಿದ್ದಂತೆ ಇತ್ತು.

(ಇಲ್ಲಸ್ಟ್ರೇಷನ್ ಕಲೆ: ರೂಪಶ್ರೀ ಕಲ್ಲಿಗನೂರ್)

ಹೂವಿನ ತೋಟಗಳ ಹಿಂದೆ ಈ ರೀತಿಯಾಗಿ ನಾನು ಅವಳನ್ನು ಹಿಂಬಾಲಿಸುತ್ತಿರುವಾಗ ಅವಳ ಚಲನೆಗಳು ಸಹ ನನ್ನಂತೆಯೇ ಇವೆ ಎಂದು ನಾನು ಅರಿತುಕೊಂಡೆ. ಅವಳು ಕೂಡ ದುರ್ಬಲವಾದ ಯಾವುದನ್ನಾದರೂ ರಕ್ಷಿಸಲು ಪ್ರಯತ್ನಿಸುತ್ತಿದ್ದಾಳೆ. ಅದು ಬೀಳಬಹುದು, ಚೂರುಚೂರಾಗಬಹುದು.

ಎಲ್ಲ ಕಾರ್ ಎಂಜಿನ್ನುಗಳು ಸ್ತಬ್ದವಾಗಿವೆ. ಕಾರುಗಳನ್ನು ತಮ್ಮದೇ ಆಗಿರುವ ಸ್ಮಶಾನಗಳಂತೆ ಬೇರೆ ಯಾವುದೂ ಬೆದರಿಸುವುದಿಲ್ಲ. ಡಯಾನಾ ಕೆಳಗಿಳಿದಳು. ಉಳಿದ ಎಲ್ಲಾ ಡಯಾನಾಗಳು ಅವಳನ್ನು ಹಿಂಬಾಲಿಸಿದರು. ಆದರೆ ಅವರ ಶಕ್ತಿ ಕುಂದಿಹೋಗಿರುವಂತೆ ತೋರುತ್ತಿತ್ತು. ಸ್ಕ್ರ್ಯಾಪ್ ಕಬ್ಬಿಣದ ಚೂರುಗಳ ಮಧ್ಯೆ ತಮ್ಮನ್ನು ತಾವು ಕಂಡುಕೊಂಡ ಅವರು ಅನಿಶ್ಚಿತ ಹೆಜ್ಜೆ ಹಾಕುತ್ತ ನಡೆದರು. ತಮ್ಮ ಬೆತ್ತಲೆತನ ಕುರಿತು ಅವರಿಗೆ ಥಟ್ಟನೆ ಉಂಟಾದ ಅರಿವಿನಿಂದ ಅವರು ಕಂಗೆಟ್ಟಂತಾಯಿತು. ಅವರಲ್ಲಿ ಹಲವರು ಶೀತದಿಂದ ನಡುಗುವಂತೆ ತಮ್ಮ ಸ್ತನಗಳನ್ನು ತೋಳುಗಳಿಂದ ಮುಚ್ಚಿಕೊಂಡರು. ಅವರು ಹೀಗೆ ಮಾಡುತ್ತಿದ್ದಂತೆಯೇ ಅಲ್ಲಿಂದ ಚದುರಿದರು, ಅನುಪಯುಕ್ತ ಗುಜರಿ ವಸ್ತುಗಳ ಪರ್ವತಗಳ ಮೇಲೆ ಹತ್ತಿ ಆಂಫಿಥಿಯೇಟರಿಗೆ ಇಳಿದುಹೋದರು. ಅಲ್ಲಿ ಮಧ್ಯದಲ್ಲಿ ಅವರು ತಾವು ನಿಂತೆಡೆಯೇ ಒಂದು ದೊಡ್ಡ ವೃತ್ತವನ್ನು ರಚಿಸಿಕೊಂಡಿರುವುದನ್ನು ಅರಿತುಕೊಂಡರು. ನಂತರ ಅವರೆಲ್ಲರೂ ಒಟ್ಟಿಗೆ ತಮ್ಮ ಕೈಗಳನ್ನು ಮೇಲೆತ್ತಿದರು.

ಅವರ ಆ ಸೂಚನೆಯಿಂದ ಪ್ರಭಾವಿತವಾದಂತೆ ಚಂದ್ರನಲ್ಲಿ ಚಲನೆಯುಂಟಾಯಿತು. ಕ್ಷಣಾರ್ಧದಲ್ಲಿ ಚೇತರಿಸಿಕೊಳ್ಳಲು ತನ್ನ ಶಕ್ತಿಯನ್ನು ಸಂಚಯಿಸಿಕೊಂಡು ಮತ್ತೆ ಮೇಲೇರಲು ಅದು ಉದ್ಯುಕ್ತವಾದಂತೆ ತೋರುತ್ತಿತ್ತು. ವೃತ್ತಾಕಾರದಲ್ಲಿ ನಿಂತು ತೋಳುಗಳನ್ನು ಮೇಲೆಚಾಚಿಕೊಂಡು ಮುಖ ಮತ್ತು ಸ್ತನಗಳನ್ನು ಚಂದ್ರನ ಕಡೆಗೆ ತಿರುಗಿಸಿದ ಹೆಣ್ಣುಗಳು. ಚಂದ್ರ ಅವರನ್ನು ಕೇಳಿದ್ದೇನು? ಆಕಾಶದಲ್ಲಿ ಅದಕ್ಕೆ ಅವರ ಸಹಾಯದ ಅಗತ್ಯವಿದೆಯೇ? ಈ ಪ್ರಶ್ನೆಯ ಕುರಿತು ವಿಚಾರಮಾಡಲು ನನಗೆ ಸಮಯವಿರಲಿಲ್ಲ. ಅದೇ ಕ್ಷಣದಲ್ಲಿ ಆ ಕ್ರೇನ್ ಅಲ್ಲಿಗೆ ಪ್ರವೇಶಿಸಿತು.

ಆ ಕ್ರೇನನ್ನು ಅಧಿಕಾರಿಗಳು ವಿನ್ಯಾಸಗೊಳಿಸಿ ನಿರ್ಮಿಸಿದ್ದಾರೆ. ಅವರು ಅದರ ಅನಾಗರಿಕ ಹಾಗೂ ಋಣಭಾರದ ಆಕಾಶವನ್ನು ಶುದ್ಧೀಕರಿಸಲು ನಿರ್ಧರಿಸಿದ್ದರು. ಅದೊಂದು ಬುಲ್ಡೋಜರ್. ಅದರಿಂದ ಒಂದು ರೀತಿಯಲ್ಲಿ ಏಡಿಯ ಆಕಾರದ ಪಂಜವು ಮೇಲೆದ್ದಿತು. ಅದರ ಚಕ್ರಕ್ಕೆ ಕ್ಯಾಟರ್ ಪಿಲ್ಲರಿನ ಹೊರಮೈ ಇತ್ತು. ಗಟ್ಟಿಮುಟ್ಟಾಗಿದ್ದ ಅದು ಏಡಿಯಂತೆ ಮುಂದೆ ಬಂದಿತು. ಕಾರ್ಯಾಚರಣೆಗೆ ಸಿದ್ಧಪಡಿಸಿದ ಸ್ಥಳಕ್ಕೆ ಬಂದಾಗ ಅದು ಇನ್ನಷ್ಟು ಗಟ್ಟಿಮುಟ್ಟಾಗಿ, ಒರಟಾಗಿ ಕಾಣುತ್ತಿತ್ತು. ಅದು ತನ್ನ ದೇಹವನ್ನು ಭೂಮಿಗೆ ಅಂಟಿಸಿಕೊಂಡಿತು. ಅದರ ತೋಳು ತ್ವರಿತವಾಗಿ ತಿರುಗಿತು. ಕ್ರೇನ್ ತೋಳನ್ನು ಆಕಾಶಕ್ಕೆ ಏರಿಸಿತು. ಅಷ್ಟು ಉದ್ದದ ತೋಳನ್ನು ಹೊಂದಿರುವ ಕ್ರೇನನ್ನು ಮನುಷ್ಯರು ನಿರ್ಮಿಸಬಹುದೆಂದು ಯಾರೂ ನಂಬಲಿಕ್ಕಿಲ್ಲ. ಅದರ ಬಕೆಟ್ ತೆರೆಯಿತು. ತನ್ನ ಎಲ್ಲಾ ಹಲ್ಲುಗಳನ್ನು ಬಹಿರಂಗಪಡಿಸಿತು.

ಈಗ ಏಡಿಪಂಜಕ್ಕಿಂತ ಹೆಚ್ಚಾಗಿ ಅದು ಶಾರ್ಕ್ ನ ಬಾಯಿಯನ್ನು ಹೋಲುತ್ತದೆ. ಚಂದ್ರ ಅಲ್ಲಿಯೇ ಇತ್ತು. ಅದು ತಪ್ಪಿಸಿಕೊಳ್ಳಲು ಬಯಸಿದಂತೆ ಅತ್ತಿತ್ತ ಅಲೆಯಿತು, ಆದರೆ ಕ್ರೇನ್ ಕಾಂತೀಯವಾಗಿದೆಯೆಂದು ತೋರುತ್ತಿದೆ. ನಾವು ನೋಡುತ್ತಿದ್ದಂತೆಯೇ ಚಂದ್ರ ನಿರ್ವಾತಗೊಂಡಿತು. ಅದು ಇದ್ದಂತೆಯೇ ಕ್ರೇನ್‌ ನ ದವಡೆಗಳಲ್ಲಿ ಇಳಿಯಿತು. ಒಂದು ಒಣ ಕೊಂಬೆ ಮುರಿಯುವ ಶಬ್ದ. ಕರ್…! ಒಂದೇ ಒಂದು ಕ್ಷಣ. ಚಂದ್ರನು ಹುಡಿಯಾದಂತೆ ಕುಸಿಯಿತು ಎಂದು ತೋರುತ್ತಿತ್ತು. ಆದರೆ ಅದು ಅಲ್ಲಿಯೇ ನಿಂತು ವಿಶ್ರಾಂತಿ ಪಡೆಯಿತು, ಬಕೆಟ್ಟಿನ ದವಡೆಯಲ್ಲಿ ಅದರ ಅರ್ಧಭಾಗ ಮತ್ತು ಹೊರಗೆ ಇನ್ನರ್ಧದಷ್ಟು. ಅದನ್ನು ಉದ್ದುದ್ದವಾಗಿ ಚಪ್ಪಟೆಗೊಳಿಸಲಾಗಿತ್ತು. ಬಕೆಟ್‌ ನ ಹಲ್ಲುಗಳ ನಡುವೆ ಒಂದು ರೀತಿಯ ದಪ್ಪ ಸಿಗಾರ್ ಇಟ್ಟಂತಿತ್ತು. ಕೆಳಕ್ಕೆ ಒಂದು ಚಿತಾಭಸ್ಮದ ಬಣ್ಣದ ಧೂಳಿನ ಮೋಡ ಇಳಿದುಬಂದಿತು.

ಕ್ರೇನ್ ಈಗ ಚಂದ್ರನನ್ನು ಅವನ ಕಕ್ಷೆಯಿಂದ ಹೊರಗೆ ಎಳೆಯಲು ಪ್ರಯತ್ನಿಸಿತು. ವಿಂಚ್ ಹಿಂದಕ್ಕೆ ಬರಲು ಪ್ರಾರಂಭಿಸಿತ್ತು. ಈ ಸಮಯದಲ್ಲಿ ವೈಂಡಿಂಗ್ ಮಾಡಲು ಒಂದು ದೊಡ್ಡ ಪ್ರಯತ್ನದ ಅಗತ್ಯವಿತ್ತು. ಡಯಾನಾ ಮತ್ತವಳ ಸ್ನೇಹಿತೆಯರು ಈ ಪ್ರಕ್ರಿಯೆಯ ಉದ್ದಕ್ಕೂ ತಮ್ಮ ತೋಳುಗಳನ್ನು ಮೇಲೆತ್ತಿ ನಿಶ್ಚಲರಾಗಿ ನಿಂತಿದ್ದರು. ಅದು ಶತ್ರುಗಳ ಆಕ್ರಮಣವನ್ನು ತಮ್ಮ ಸಮುದಾಯದ ಬಲದಿಂದ ನಿವಾರಿಸಬೇಕೆಂದು ಆಶಿಸುತ್ತಿದ್ದಂತಿತ್ತು. ಕರಗುತ್ತಿರುವ ಚಂದ್ರನಿಂದ ಬೂದಿ ಅವರ ಮುಖ ಮತ್ತು ಸ್ತನಗಳ ಮೇಲೆ ಮಳೆಗರೆದಂತೆ ಬೀಳಲು ಶುರುವಾದಾಗ ಮಾತ್ರ ಅವರು ಚದುರಲು ಪ್ರಾರಂಭಿಸಿದರು. ಡಯಾನಾಳ ಬಾಯಿಂದ ತೀವ್ರ ವಿಷಾದದ ತೀಕ್ಷ್ಣವಾದ ಕೂಗೊಂದು ಹೊರಬಂತು.

ಆ ಸಮಯಕ್ಕೆ ಬಂಧಿಯಾಗಿದ್ದ ಚಂದ್ರ ಉಳಿದಿದ್ದ ಅಲ್ಪಸ್ವಲ್ಪ ಬೆಳಕನ್ನೂ ಕಳೆದುಕೊಂಡಿತು: ಅದು ಆಕಾರವಿಲ್ಲದ ಕಪ್ಪು ಬಂಡೆಯಾಗಿ ಮಾರ್ಪಟ್ಟಿತು. ಅದನ್ನು ಕ್ರೇನ್ ಯಂತ್ರ ಬಕೆಟ್‌ ನ ಹಲ್ಲುಗಳಿಂದ ಹಿಡಿದಿರದಿದ್ದರೆ ಅದು ಭೂಮಿಯ ಮೇಲೆ ಅಪ್ಪಳಿಸುತ್ತಿತ್ತು. ಕೆಳಗೆ, ಕೆಲಸಗಾರರು ಕ್ರೇನ್ ನಿಧಾನವಾಗಿ ಅದರ ಹೊರೆ ಇಳಿಸುತ್ತಿದ್ದ ಜಾಗದ ಸುತ್ತಲೂ ಲೋಹದ ಬಲೆ ಸಿದ್ಧಪಡಿಸಿದ್ದರು. ಅದನ್ನು ಉದ್ದನೆಯ ಮೊಳೆಗಳಿಂದ ನೆಲಕ್ಕೆ ಬಿಗಿಸಲಾಗಿತ್ತು.

ಅದು ನೆಲದ ಮೇಲೆ ಬಂತು. ಚಂದ್ರ ಈಗ ಸಿಡುಬಿನ ಮುಖದ, ಮರಳಿನ ಬಂಡೆಯಾಗಿತ್ತು. ತುಂಬಾ ಮಂಕಾಗಿ ಅಪಾರದರ್ಶಕವಾಗಿದ್ದ ಅದು ಒಮ್ಮೆ ಆಕಾಶವನ್ನು ತನ್ನ ಹೊಳೆಯುವ ಪ್ರತಿಫಲನದಿಂದ ಬೆಳಗಿಸಿದೆ ಎಂದು ಯೋಚಿಸುವುದು ನಂಬಲಸಾಧ್ಯವಾಗಿತ್ತು. ಬಕೆಟ್ ದವಡೆ ತೆರೆಯಿತು. ಬುಲ್ಡೋಜರ್ ಅದರ ಚಕ್ರದ ಕ್ಯಾಟರ್ ಪಿಲ್ಲರ್ ಹೊರಮೈಯಲ್ಲಿ ಹಿಂದೆ ಸರಿಯಿತು. ಅದರ ಹೊರೆ ಕಳಚಿ ಹಗುರವಾಗಿದ್ದರಿಂದ ಅದು ಇದ್ದಕ್ಕಿದ್ದಂತೆ ಬಹುತೇಕ ಪಲ್ಟಿ ಹೊಡೆಯಿತು. ಕೆಲಸಗಾರರು ಬಲೆಯೊಂದಿಗೆ ಸಿದ್ಧರಾಗಿದ್ದರು: ಅವರು ಅದನ್ನು ಚಂದ್ರನ ಸುತ್ತಲೂ ಸುತ್ತಿ, ಅದನ್ನು ಬಲೆ ಮತ್ತು ನೆಲದ ನಡುವೆ ಗಾಳದಲ್ಲಿ ಕೆಡವಿದರು. ಚಂದ್ರ ತನ್ನ ಬಂಧನದಲ್ಲೇ ಹೆಣಗಾಡಿತು. ಭೂಕಂಪದಂತಹ ನಡುಕವುಂಟಾಗಿ ಖಾಲಿ ಡಬ್ಬಿಗಳ ಹಿಮಪಾತವು ಕಸದ ಪರ್ವತದಿಂದ ಕೆಳಕ್ಕೆ ಇಳಿಯಲು ಶುರುವಾಯಿತು. ನಂತರ ಎಲ್ಲವೂ ಶಾಂತವಾಯಿತು. ಈಗ ಚಂದ್ರನಿಲ್ಲದ ಆಕಾಶವು ದೊಡ್ಡ ದೀಪಗಳ ಬೆಳಕಿನ ಸ್ಫೋಟಗಳಲ್ಲಿ ಅದ್ದಿದಂತಿತ್ತು. ಆದರೆ ಕತ್ತಲೆ ಆಗಲೇ ಮರೆಯಾಗುತ್ತಿತ್ತು, ಹೇಗಾದರೂ.

ಆ ಬೆಳಗು ಕಾರುಗಳ ಸ್ಮಶಾನ ಇನ್ನೂ ಒಂದು ಧ್ವಂಸಗೊಂಡುದನ್ನು ಹಿಡಿದಿಟ್ಟುಕೊಂಡಿರುವುದನ್ನು ಎಲ್ಲರೂ ಕಂಡುಕೊಂಡರು. ಅದರ ಕೇಂದ್ರದಲ್ಲಿ ಬಿದ್ದಿದ್ದ ಚಂದ್ರನನ್ನು ಇತರ ತ್ಯಾಜ್ಯ ವಸ್ತುಗಳಿಂದ ಪ್ರತ್ಯೇಕಿಸಲಾಗುವುದಿಲ್ಲ. ಅವು ಒಂದೇ ಬಣ್ಣದ್ದಾಗಿದ್ದವು. ಅದು ಹೊಸ ಸೇರ್ಪಡೆಯಾಗಿರುವುದನ್ನು ನೀವು ಊಹಿಸಲಾಗದಷ್ಟು ಕೆಟ್ಟದ್ದನ್ನು ನೋಡಿದ್ದೀರಿ. ಗೊಣಗಾಟದ ಕ್ಷೀಣ ಸದ್ದು ಭೂಮಿಯ ಕಸದ ಕುಳಿಯ ಮೂಲಕ ಮರುಕಳಿಸಿತು: ಮುಂಜಾನೆಯ ಬೆಳಕಿನಲ್ಲಿ ನಿಧಾನವಾಗಿ ಎಚ್ಚರಗೊಳ್ಳುವ ಜೀವಿಗಳ ಸಮೂಹ ಬೆಳಕಿಗೆ ಬಂದಿತು. ಟ್ರಕ್‌ ಗಳ ಒಡಲಿಂದ ಹೊರಸುರಿದ ಶವಗಳು, ಚೂರುಚೂರಾದ ಚಕ್ರಗಳು, ಪುಡಿಮಾಡಿದ ಲೋಹದ ರಾಶಿಯ ನಡುವೆ ರೋಮಾಚ್ಛಾದಿತ ಜೀವಿಗಳು ಮುನ್ನಡೆಯುತ್ತಿದ್ದವು.

ತ್ಯಾಜ್ಯವಸ್ತುಗಳ ನಡುವೆ ಪರಿತ್ಯಜಿಸಲ್ಪಟ್ಟ ಜನರ ಸಮುದಾಯ-ಅಂಚಿನಲ್ಲಿರಿಸಿರುವ ಜನರು ಅಥವಾ ಸ್ವಇಚ್ಛೆಯಿಂದ ತ್ಯಜಿಸಲ್ಪಟ್ಟಂತೆ ಇರಬಯಸುವ ಜನರು ವಾಸಿಸುತ್ತಿದ್ದರು. ನಗರದಾದ್ಯಂತ ಓಡಿಓಡಿ ಆಯಾಸಗೊಂಡ ಜನರು ಹೊಸ ವಸ್ತುಗಳನ್ನು ಮಾರಾಟ ಮಾಡಲು ಮತ್ತು ಹೊಸದನ್ನು ಖರೀದಿಸಲು ಧಾವಂತಪಡುತ್ತಿದ್ದರು. ಅವರು ಖರೀದಿಸಿದ ವಸ್ತುಗಳು ಕ್ಷಣಗಳಲ್ಲೇ ಅವಧಿ ಮೀರಿ ಹೋಗಿರುತ್ತಿದ್ದವು. ಅವರು, ಮತ್ತೆ ಎಸೆಯಲ್ಪಟ್ಟ ವಸ್ತುಗಳೇ ಪ್ರಪಂಚದ ನಿಜವಾದ ಸಂಪತ್ತು ಎಂದು ನಿರ್ಧರಿಸಿದ ಜನರು ಚಂದ್ರನನ್ನು ಸುತ್ತುವರೆದಿದ್ದರು, ಆಂಫಿಥಿಯೇಟರಿನ ಆದ್ಯಂತ ಈ ತೆಳುವಾದ ವ್ಯಕ್ತಿಗಳು ನಿಂತಿದ್ದರು, ಕುಳಿತುಕೊಂಡಿದ್ದರು. ಅವರ ಮುಖಗಳು ಗಡ್ಡದಿಂದ ಅಥವಾ ಬಾಚಿರದ ಕೂದಲಿನಿಂದ ಆವರಿಸಲ್ಪಟ್ಟಿದ್ದವು. ಅದು ಹರಿದ ಅಥವಾ ವಿಲಕ್ಷಣವಾಗಿ ಬಟ್ಟೆ ಧರಿಸಿದ್ದ ಜನಸಮೂಹವಾಗಿತ್ತು. ಅದರ ಮಧ್ಯೆ ನನ್ನ ಬೆತ್ತಲೆ ಡಯಾನಾ ಮತ್ತು ಹಿಂದಿನ ರಾತ್ರಿಯಿಂದ ಕಂಡ ಎಲ್ಲ ಹುಡುಗಿಯರೂ ಇದ್ದರು. ಅವರು ಮುಂದೆ ಬಂದರು. ನೆಲಕ್ಕೆ ಬಿಗಿಸಿದ್ದ ಮೊಳೆಗಳಿಂದ ಬಲೆಯ ಉಕ್ಕಿನ ತಂತಿಗಳನ್ನು ಬಿಡಿಸಲು ಪ್ರಾರಂಭಿಸಿದರು.

ತಕ್ಷಣವೇ ಲಂಗರುಗಳಿಂದ ಬಿಡುಗಡೆಯಾದ ವಿಮಾನದಂತೆ ಚಂದ್ರ ಮೇಲೆದ್ದಿತು. ಹುಡುಗಿಯರ ತಲೆಯ ಮೇಲೆ ಸುಳಿದಾಡುತ್ತಾ ಸರಿದು ಪಯಣಿಗರು ತುಂಬಿದ್ದ ಗ್ರ್ಯಾಂಡ್‌ ಸ್ಟ್ಯಾಂಡ್ ಮೇಲೆ ತೂಗಲು ಶುರುಮಾಡಿತು. ಸ್ಟೀಲ್ ಬಲೆ ಅದನ್ನು ಹಿಡಿದಿತ್ತು. ಅದರ ತಂತಿಗಳನ್ನು ಡಯಾನಾ ಮತ್ತು ಅವಳ ಸ್ನೇಹಿತರು ಬಿಡಿಸುತ್ತಿದ್ದರು. ಕೆಲವೊಮ್ಮೆ ಅವುಗಳನ್ನು ಎಳೆಯುತ್ತಾ, ಕೆಲವೊಮ್ಮೆ ಹೊರಗೆ ಬಿಡುತ್ತಾ ಮಾಡಿ ಹುಡುಗಿಯರು ತಂತಿಗಳ ತುದಿಗಳನ್ನು ಹಿಡಿದು ಓಡಲು ಪ್ರಾರಂಭಿಸಿದರು. ಚಂದ್ರ ಅವರನ್ನು ಹಿಂಬಾಲಿಸಿತು.

ಚಂದ್ರ ಚಲಿಸಿದ ತಕ್ಷಣ, ಭಗ್ನಾವಶೇಷದ ಕಣಿವೆಗಳಿಂದ ಒಂದು ಬಗೆಯ ಅಲೆಗಳು ಏಳಲು ಪ್ರಾರಂಭಿಸಿದವು. ಅಕಾರ್ಡಿಯನ್‌ ಮಣೆಗಳಂತೆ ಜಜ್ಜಿದ ಹಳೆಯ ಕಾರುಗಳ ಮೃತದೇಹಗಳು ಕವಾಯತು ಮಾಡಲು ಪ್ರಾರಂಭಿಸಿದವು. ಹಾಗೆ ಮಾಡುತ್ತಲೇ ತಮ್ಮನ್ನು ಯಾವುದಕ್ಕೋ ಸಜ್ಜುಗೊಳಿಸಿಕೊಳ್ಳುತ್ತಿದ್ದವು. ಚಚ್ಚಿದ ಕ್ಯಾನ್‌ ಗಳು ಗುಡುಗಿನಂಥಾ ಸದ್ದುಮಾಡುತ್ತಾ ಉರುಳಿದವು. ಅವುಗಳನ್ನು ಯಾರಾದರೂ ಎಳೆಯುತ್ತಿರುವರೋ ಅಥವಾ ಉಳಿದ ಎಲ್ಲವೂ ಸೇರಿ ಎಳೆಯುತ್ತಿವೆಯೋ ಹೇಳಲಾಗದ ಸ್ಥಿತಿ. ಗುಜರಿಯ ರಾಶಿಯಿಂದ ರಕ್ಷಿಸಲ್ಪಟ್ಟ ಆ ಚಂದ್ರನನ್ನು ಅನುಸರಿಸಿ ಎಲ್ಲಾ ವಸ್ತುಗಳು ಮತ್ತು ಒಂದು ಮೂಲೆಯಲ್ಲಿ ಎಸೆಯಲ್ಪಟ್ಟಿದ್ದಕ್ಕಾಗಿ ಹತಾಶರಾಗಿದ್ದ ಎಲ್ಲಾ ಜನರು ಮತ್ತೆ ರಸ್ತೆಯಲ್ಲಿ ಚಲಿಸಲು ಪ್ರಾರಂಭಿಸಿದರು ಮತ್ತು ನಗರದ ಶ್ರೀಮಂತ ನೆರೆಹೊರೆಗಳ ಕಡೆಗೆ ದಾಂಗುಡಿಯಿಟ್ಟರು.

ಆ ಬೆಳಿಗ್ಗೆ ನಗರವು ಗ್ರಾಹಕರಿಗೆ ಧನ್ಯವಾದ ಅರ್ಪಿಸುವ ದಿನವನ್ನು ಆಚರಿಸುತ್ತಿತ್ತು. ಈ ಹಬ್ಬವನ್ನು ಪ್ರತಿವರ್ಷ ನವೆಂಬರ್‌ ನಲ್ಲಿ ಒಂದು ದಿನದಂದು ಆಚರಿಸಲಾಗುತ್ತಿತ್ತು. ಆ ದಿನ ಗಿರಾಕಿಗಳು ತಮ್ಮ ಪ್ರತಿಯೊಂದು ಆಸೆಯನ್ನು ದಣಿವರಿವಿಲ್ಲದೆ ತೃಪ್ತಿಪಡಿಸಿದ ಉತ್ಪಾದನಾ ಭಗವಂತನಿಗೆ ಕೃತಜ್ಞತೆಯನ್ನು ಪ್ರದರ್ಶಿಸುವರು. ಗ್ರಾಹಕರಿಗೆ ಇದಕ್ಕೆ ಅವಕಾಶ ಮಾಡಿಕೊಡಲು ಈ ಪದ್ಧತಿಯನ್ನು ಪ್ರಾರಂಭಿಸಲಾಯಿತು. ಪಟ್ಟಣದ ಅತಿದೊಡ್ಡ ಡಿಪಾರ್ಟ್ಮೆಂಟ್ ಸ್ಟೋರ್ ಪ್ರತಿವರ್ಷ ಈ ಮೆರವಣಿಗೆಯನ್ನು ಆಯೋಜಿಸುತ್ತಿತ್ತು. ಅಲಂಕಾರಿಕವಾದ ರಾಡಿ ಬಣ್ಣದ ಗೊಂಬೆಯ ಆಕಾರದಲ್ಲಿ ತಯಾರಿಸಿದ ಅಗಾಧವಾದ ಬಲೂನನ್ನು ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುತ್ತಿತ್ತು. ಅದಕ್ಕೆ ರಿಬ್ಬನ್ನುಗಳನ್ನ ಕಟ್ಟಿ ಎಳೆಯಲಾಗುತ್ತಿತ್ತು. ಮಣಿಗಳ ಹೊದಿಕೆಯ ಬಟ್ಟೆ ತೊಟ್ಟ ಬಾಲೆಯರು ಸಂಗೀತದ ಬ್ಯಾಂಡಿನ ಹಿಂದೆ ಸಾಗುತ್ತ ಆ ರಿಬ್ಬನ್ನುಗಳನ್ನು ಹಿಡಿದಿದ್ದರು. ಆ ದಿನದ ಮೆರವಣಿಗೆ ಫಿಫ್ತ್ ಅವೆನ್ಯೂದಿಂದ ಬರುತ್ತಿತ್ತು. ಬ್ಯಾಂಡಿನ ಹೆಣ್ಣು ಮೇಜೊರೆಟ್ ತನ್ನ ಕೈನ ಲಾಠಿಯನ್ನು ಗಾಳಿಯಲ್ಲಿ ತಿರುಗಿಸಿದಳು. ದೊಡ್ಡ ಡ್ರಮ್‌ ಗಳನ್ನು ಬಡಿಯಲಾಯಿತು. ತೃಪ್ತಿಕರ ಗ್ರಾಹಕರನ್ನು ಪ್ರತಿನಿಧಿಸುವ ಬಲೂನ್ ದೈತ್ಯ ಗಗನಚುಂಬಿ ಕಟ್ಟಡಗಳ ನಡುವೆ ಹಾರಿ, ವಿಧೇಯತೆಯಿಂದ ಮುಖವಾಡ ಹಾಕಿದ್ದ ಹುಡುಗಿಯರು, ಬಾಚಣಿಗೆ, ಜಡೆಗಳು, ಅಂಚುಪಟ್ಟಿಗಳು ಮುಂತಾದವನ್ನು ಆಡಿಸುತ್ತ ಅಲಂಕರಿಸಿದ ಮೋಟರ್‌ ಸೈಕಲ್‌ಗಳ ಮೇಲೆ ಸವಾರಿ ಮಾಡುತ್ತದೆ.

ಅದೇ ಸಮಯದಲ್ಲಿ ಮತ್ತೊಂದು ಮೆರವಣಿಗೆ ಮ್ಯಾನ್ಹಟನ್ ಅನ್ನು ದಾಟುತ್ತಿತ್ತು. ಚಪ್ಪಟೆಯಾದ, ಹಳಸಿದ ಚಂದ್ರ ಸಹ ಗಗನಚುಂಬಿ ಕಟ್ಟಡಗಳ ನಡುವೆ ನೌಕಾಯಾನ ಮಾಡುತ್ತ ಮುನ್ನಡೆಯುತ್ತಿತ್ತು. ಬೆತ್ತಲೆ ಹುಡುಗಿಯರು ಅದನ್ನು ಎಳೆಯುತ್ತಿದ್ದರು. ಅದರ ಹಿಂದೆ ಕ್ರಮೇಣ ಗಾತ್ರದಲ್ಲಿ ದೊಡ್ಡದಾಗುತ್ತಿದ್ದ ಜಜ್ಜಿದ ಕಾರುಗಳು ಮತ್ತು ಟ್ರಕ್‌ ಗಳ ಅಸ್ಥಿಪಂಜರಗಳು ಬರುತ್ತಿದ್ದವು. ಬೆಳಗಿನ ಜಾವದಿಂದಲೂ ಚಂದ್ರನನ್ನು ಹಿಂಬಾಲಿಸುತ್ತಿದ್ದ ಜನಸಮೂಹದ ಜೊತೆ ಸಾವಿರಾರು ಜನ ಸೇರಿಕೊಂಡರು. ಎಲ್ಲಾ ಬಣ್ಣದ ಜನ. ಇಡೀ ಕುಟುಂಬಗಳು ಎಲ್ಲ ವಯಸ್ಸಿನ ಮಕ್ಕಳೊಂದಿಗೆ. ಮೆರವಣಿಗೆ ವಿಶೇಷವಾಗಿ ಮ್ಯಾನ್ಹಟನ್ ನ ಹಾರ್ಲೆಮ್‌ ನ ಅಪಾರ ಜನಜಂಗುಳಿಯ ಕಪ್ಪುಜನರ ಮತ್ತು ಪೋರ್ಟೊರಿಕನ್ ಪ್ರದೇಶಗಳನ್ನು ದಾಟಿ ಹೋಯಿತು.

ಚಂದ್ರನ ಮೆರವಣಿಗೆ ಅತ್ತ ಇತ್ತ ಸುತ್ತುತ್ತ ಬ್ರಾಡ್‌ ವೇ ನಿಂದ ಮುಂದಕ್ಕೆ ಇನ್ನೊಂದು ಮೆರವಣಿಗೆಯೊಂದಿಗೆ ಸೇರಿಕೊಳ್ಳಲು ತ್ವರಿತವಾಗಿ, ಮೌನವಾಗಿ ಸಾಗಿತು. ಅದು ತನ್ನ ದೈತ್ಯ ಬಲೂನನ್ನು ಫಿಫ್ತ್ ಅವೆನ್ಯೂದ ಉದ್ದಕ್ಕೂ ಎಳೆಯುತ್ತಿತ್ತು.

ಮ್ಯಾಡಿಸನ್ ಸ್ಕ್ವೇರಿನಲ್ಲಿ ಎರಡೂ ಮೆರವಣಿಗೆಗಳು ಒಂದನ್ನೊಂದು ಬೆರೆತುಕೊಂಡವು. ಅಥವಾ, ಹೆಚ್ಚು ನಿಖರವಾಗಿ, ಎರಡೂ ಒಂದೇ ಮೆರವಣಿಗೆಯಾದವು. ತೃಪ್ತಿಪಡೆದ ಗ್ರಾಹಕರು ಬಹುಶಃ ಚಂದ್ರನ ಗೊರಜು ಮೇಲ್ಮೈಯೊಂದಿಗಿನ ಘರ್ಷಣೆಯಿಂದಾಗಿ ಹರಿದ ರಬ್ಬರಿನಂತೆ ಚಿಂದಿಚಿಂದಿಯಾದರು. ಮೋಟರ್ ಸೈಕಲ್ಲುಗಳ ಮೇಲೆ ಈಗ ಡಯಾನಾಗಳು ಪೂರ್ಣವಾಗಿ ಬಹುವರ್ಣದ ರಿಬ್ಬನ್‌ ಗಳೊಂದಿಗೆ ಚಂದ್ರನನ್ನು ಸೆಳೆಯುತ್ತ ಸಾಗುತ್ತಿದ್ದರು. ಬೆತ್ತಲೆ ಮಹಿಳೆಯರ ಸಂಖ್ಯೆ ಕನಿಷ್ಠ ದ್ವಿಗುಣಗೊಂಡಿದ್ದರಿಂದ, ಮಹಿಳಾ ಮೋಟರ್ ಸೈಕ್ಲಿಸ್ಟ್‌ ಗಳು ತಮ್ಮ ಸಮವಸ್ತ್ರ ಮತ್ತು ಕೆಪಿಸ್‌ ಗಳನ್ನು ಎಸೆದಿರಬೇಕು ಎನಿಸುತ್ತಿತ್ತು.

ಇಂಥ ರೂಪಾಂತರ ಹಲವು ಮೋಟರ್ ಸೈಕಲ್ ಮತ್ತು ಕಾರುಗಳನ್ನು ಮೆರವಣಿಗೆಯಲ್ಲಿ ಹಿಂದಿಕ್ಕಿದೆ. ಹಳೆಯ ಕಾರುಗಳು ಯಾವುವು, ಹೊಸದು ಯಾವುದು ಎಂದು ನಿಮಗೆ ಇನ್ನು ಮುಂದೆ ಹೇಳಲಾಗುವುದಿಲ್ಲ. ತಿರುಚಿದ ಚಕ್ರಗಳು, ತುಕ್ಕು ಹಿಡಿದ ಫೆಂಡರ್‌ ಗಳು ಇರುವ ಕಾರುಗಳು ಬಾಡಿವರ್ಕ್ ಮಾಡಿಸಿಕೊಂಡಂತೆ ಕನ್ನಡಿಯಂತೆ ಹೊಳೆಯುತ್ತಿದ್ದವು. ಎನಾಮೆಲ್ ಬಳಿದಂತೆ ಹೊಳೆಯುವ ಬಣ್ಣದಲ್ಲಿ ಫಳಫಳಿಸಿದವು.

ಮೆರವಣಿಗೆಯ ಹಿಂದೆ, ಅಂಗಡಿಯ ಕಿಟಕಿಗಳನ್ನು ಜೇಡರಬಲೆಗಳು ಮತ್ತು ಹಾವಸೆ ಮುಚ್ಚಿಬಿಟ್ಟಿದ್ದವು. ಗಗನಚುಂಬಿ ಕಟ್ಟಡಗಳ ಎಲಿವೇಟರ್‌ಗಳು ಕಿರುಗುಟ್ಟಲು, ನರಳಲು ಪ್ರಾರಂಭಿಸಿದವು. ಜಾಹೀರಾತು ಪೋಸ್ಟರ್‌ ಗಳು ಹಳದಿ ಬಣ್ಣಕ್ಕೆ ತಿರುಗಿದವು. ರೆಫ್ರಿಜರೇಟರ್‌ ಗಳಲ್ಲಿ ತುಂಬಿದ ಮೊಟ್ಟೆಗಳು ಮರಿಗಳಾಗಿ ಅವನ್ನು ಇನ್ಕ್ಯುಬೇಟರ್‌ ಗಳಂತೆ ಮಾಡಿದ್ದವು. ಟೆಲಿವಿಷನ್‌ ಗಳು ವಾತಾವರಣದಲ್ಲಿ ಬೀಸುವ ಬಿರುಗಾಳಿಗಳನ್ನು ವರದಿ ಮಾಡಿದವು. ನಗರವು ಒಂದೇ ಹೊಡೆತದಲ್ಲಿ ತನ್ನನ್ನು ತಾನೇ ನುಂಗಿತ್ತು. ಅದು ತ್ಯಜಿಸಬಹುದಾದ ನಗರವಾಗಿತ್ತು. ಈಗ ತನ್ನ ಕೊನೆಯ ಯಾನದಲ್ಲಿ ಚಂದ್ರನನ್ನು ಅನುಸರಿಸಿತು.

ಖಾಲಿ ಅನಿಲದ ಡಬ್ಬಗಳಲ್ಲಿ ಬ್ಯಾಂಡಿನ ಡ್ರಮ್ಮಿಂಗ್ ಶಬ್ದ ಮಾಡುತ್ತ ಮೆರವಣಿಗೆ ಬ್ರೂಕ್ಲಿನ್ ಸೇತುವೆಗೆ ಬಂದಿತು. ಡಯಾನಾ ತನ್ನ ಹೆಣ್ಣಿನ ಮೇಜೊರೆಟ್‌ ದಂಡವನ್ನು ಎತ್ತಿದಳು. ಅವಳ ಸ್ನೇಹಿತರು ತಮ್ಮ ರಿಬ್ಬನ್‌ ಗಳನ್ನು ಗಾಳಿಯಲ್ಲಿ ತಿರುಗಿಸಿದರು. ಚಂದ್ರ ಕೊನೆಯ ಓಟದಲ್ಲಿ ತೊಡಗಿತು. ಸೇತುವೆಯ ಬಾಗಿದ ಕಟಕಟೆ ದಾಟಿಸಮುದ್ರದ ಕಡೆಗೆ ಓಡಿತು. ಬಳಿಕ ಇಟ್ಟಿಗೆಯಂತೆ ನೀರಿಗೆ ಅಪ್ಪಳಿಸಿ ಮುಳುಗಿತು. ಸಾವಿರಾರು ಪುಟ್ಟ ಗಾಳಿ ಗುಳ್ಳೆಗಳನ್ನು ನೀರ ಮೇಲ್ಮೈಗೆ ಕಳುಹಿಸಿತು.

(ಇಟಾಲೊ ಕ್ಯಾಲ್ವಿನೊ)

ಏತನ್ಮಧ್ಯೆ, ರಿಬ್ಬನ್ನುಗಳನ್ನು ಹೋಗಲು ಬಿಡದೆ ಹುಡುಗಿಯರು ಅವುಗಳಿಗೆ ಅಂಟಿಕೊಂಡಿದ್ದರು. ಚಂದ್ರ ಅವರನ್ನು ಮೇಲಕ್ಕೆತ್ತಿ, ಪ್ಯಾರಪೆಟ್ ಮೇಲೆ ಇಳಿಸಿ ಸೇತುವೆಯಿಂದ ಹೊರಗೆ ಕಳುಹಿಸಿತ್ತು. ಅವರು ಗಾಳಿಯಲ್ಲಿನ ಕಮಾನುಗಳನ್ನು ಡೈವರ್ ಗಳಂತೆ ವಿವರಿಸಿ ನೀರಿನಲ್ಲಿ ಕಣ್ಮರೆಯಾದರು.
ನಾವು ಆಶ್ಚರ್ಯದಿಂದ ನಿಂತು ನೋಡುತ್ತಿದ್ದೆವು. ನಮ್ಮಲ್ಲಿ ಕೆಲವರು ಬ್ರೂಕ್ಲಿನ್ ಸೇತುವೆಯ ಮೇಲೆ, ಇತರರು ತೀರದಲ್ಲಿರುವ ಜೆಟ್ಟಿಗಳ ಮೇಲೆ. ಕೆಲವರಿಗೆ ನೀರಲ್ಲಿ ಧುಮುಕುವ ಹಂಬಲವಿತ್ತು. ನಾವು ಮತ್ತೆ ಮೊದಲಿನಂತೆಯೇ ಅವರನ್ನು ನೋಡುತ್ತೇವೆ, ಅವರು ಮತ್ತೆ ಕಾಣಿಸಿಕೊಳ್ಳುತ್ತಾರೆ ಎಂಬ ನಿಶ್ಚಿತತೆಯಲ್ಲಿ ನಾವು ನೋಡುತ್ತಿದ್ದೆವು.

ನಾವು ಹೆಚ್ಚು ಹೊತ್ತು ಕಾಯಬೇಕಾಗಿರಲಿಲ್ಲ. ವೃತ್ತಾಕಾರದಲ್ಲಿ ಹರಡಿದ ಅಲೆಗಳೊಂದಿಗೆ ಸಮುದ್ರ ಕಂಪಿಸಲು ಪ್ರಾರಂಭಿಸಿತು. ಈ ವೃತ್ತದ ಮಧ್ಯದಲ್ಲಿ ಒಂದು ದ್ವೀಪ ಕಾಣಿಸಿಕೊಂಡಿತು, ಅದು ಪರ್ವತದಂತೆ, ಗೋಳಾರ್ಧದಂತೆ, ನೀರಿನ ಮೇಲೆ ವಿಶ್ರಾಂತಿ ಪಡೆಯುತ್ತಿರುವ ಭೂಗೋಳದಂತೆ ಅಥವಾ ಅದರ ಮೇಲೆ ಸ್ವಲ್ಪ ಮೇಲಕ್ಕೆ ಬೆಳೆದಿರುವಂತೆ ಕಂಡಿತು. ಇಲ್ಲ, ಆಕಾಶದಲ್ಲಿ ಉದಯಿಸುತ್ತಿರುವ ಚಂದ್ರನಂತೆ. ಅದು ಚಂದ್ರನನ್ನು ಹೋಲುವಂತಿಲ್ಲವಾದರೂ ನಾನು ಅದಕ್ಕೆ ಚಂದ್ರನೆಂದೇ ಹೇಳುತ್ತೇನೆ. ಕೆಲವು ಕ್ಷಣಗಳ ಮೊದಲು ನಾವದನ್ನು ಆಳಕ್ಕೆ ಧುಮುಕುವುದನ್ನು ನೋಡಿದ್ದೇವೆಯಾದರೂ, ಈ ಅಮಾವಾಸ್ಯೆಯು ವಿಭಿನ್ನವಾಗಿ ವಿಭಿನ್ನವಾಗಿತ್ತು. ಇದು ಹಸಿರು ಬಣ್ಣದ, ಹೊಳೆಯುವ ಕಡಲಕಳೆಯ ಹಾದಿಯ ತೊಟ್ಟಿಕ್ಕುವ ಸಮುದ್ರದಿಂದ ಹೊರಹೊಮ್ಮಿತ್ತು. ಹೊಲಗಳಿಂದ ಕಾರಂಜಿಗಳಲ್ಲಿ ಹರಿಯುವ ನೀರು ಪಚ್ಚೆಯ ಹೊಳಪನ್ನು ನೀಡಿತು. ಒಂದು ಹಬೆಹಬೇ ಕಾಡು ಅದನ್ನು ಆವರಿಸಿದೆ. ಆದರೆ ಸಸ್ಯಗಳಿಂದ ಅಲ್ಲ. ಈ ಹೊದಿಕೆಯು ನವಿಲು ಗರಿಗಳಿಂದ ಮಾಡಲ್ಪಟ್ಟಿರುವಂತೆ ತೋರುತ್ತದೆ. ಅವುಗಳ ತುಂಬಾ ಕಣ್ಣುಗಳು ಮತ್ತು ಹೊಳೆಯುವ ಬಣ್ಣಗಳು.

ಆ ಗೋಳವು ಆಕಾಶಕ್ಕೆ ವೇಗವಾಗಿ ಹಿಂತಿರುಗುವ ಮೊದಲು ನಾವು ಕಷ್ಟಪಟ್ಟು ನೋಡಲು ಸಾಧ್ಯವಾದ ಭೂದೃಶ್ಯ ಇದು. ತಾಜಾತನದ ಮತ್ತು ಸೊಂಪಾಗಿರುವುದರ ಕುರಿತ ಸಾಮಾನ್ಯ ಅನಿಸಿಕೆಯಲ್ಲಿ ಹೆಚ್ಚಿನ ಸೂಕ್ಷ್ಮ ವಿವರಗಳು ಕಳೆದುಹೋಗಿವೆ. ಅದು ಮುಸ್ಸಂಜೆಯಾಗಿತ್ತು. ಬಣ್ಣಗಳ ಹೋಲಿಕೆಯು ರೋಮಾಂಚಕ ಏಕವರ್ಣಾತ್ಮಕತೆಗೆ ಸೆರೆಯಾಗುತ್ತಿತ್ತು. ಹೊಳೆಯುವ ಜಗತ್ತಿನ ಬಿಗಿಯಾದ ಮೇಲ್ಮೈಯಲ್ಲಿ ಚಂದ್ರನ ವೃತ್ತಗಳು. ಕಾಡುಗಳು ಈಗ ಕೇವಲ ಬಾಹ್ಯರೇಖೆಗಳ ಹಾಗೆ ಗೋಚರಿಸುತ್ತಿವೆ. ಆದರೆ ನಾವು ಕೆಲವು ಹ್ಯಾಮಕ್ ಗಳನ್ನು ಕೊಂಬೆಗಳಿಗೆ ನೇತುಹಾಕಿರುವುದನ್ನು ನೋಡಿದೆವು. ಅವು ಗಾಳಿಯಲ್ಲಿ ಹೊಯ್ದಾಡುತ್ತಿದ್ದವು. ಅವುಗಳಲ್ಲಿ ನಮ್ಮನ್ನು ಆ ಸ್ಥಳಕ್ಕೆ ಕರೆದೊಯ್ದ ಹುಡುಗಿಯರು ಗೂಡುಕಟ್ಟುತ್ತಿರುವುದನ್ನು ನಾನು ಗಮನಿಸಿದೆ.

ನಾನು ಕೊನೆಗೂ ಸಮಾಧಾನದಿಂದ ಇರುವ ಡಯಾನಾಳನ್ನು ಗುರುತಿಸಿದೆ. ಅವಳು ಹಕ್ಕಿಗರಿಯ ಬೀಸಣಿಗೆಯಿಂದ ಬೀಸಿಕೊಳ್ಳುತ್ತಾ ಇದ್ದಳು. ಬಹುಶಃ ನನಗೆ ಗುರುತಿಸಿದ ಸಂಕೇತವನ್ನು ಕಳುಹಿಸಿದ್ದಳು.

“ಓ ಅವರು ಅಲ್ಲಿದ್ದಾರೆ! ಅಲ್ಲಿ ಅವಳು!” ನಾನು ಕೂಗಿಕೊಂಡೆ. ನಾವೆಲ್ಲರೂ ಕೂಗಿಕೊಂಡೆವು. ಅವರನ್ನು ಮತ್ತೆ ಕಂಡುಕೊಂಡ ಸಂತೋಷ ಈಗಾಗಲೇ ಅವರನ್ನು ಶಾಶ್ವತವಾಗಿ ಕಳೆದುಕೊಂಡಿರುವ ನೋವಿನಿಂದ ತುಂಬಿತ್ತು. ಏಕೆಂದರೆ ಕತ್ತಲ ಆಕಾಶದಲ್ಲಿ ಉದಯಿಸುತ್ತಿರುವ ಚಂದ್ರನು ತನ್ನ ಸರೋವರಗಳು ಮತ್ತು ಬಯಲುಗಳ ಸೂರ್ಯನ ಪ್ರತಿಫಲನಗಳನ್ನು ಮಾತ್ರ ಕಳುಹಿಸಿದ್ದ.

ನಮ್ಮನ್ನು ಒಂದು ಬಗೆಯ ಉನ್ಮಾದ ವಶಪಡಿಸಿಕೊಂಡಿತ್ತು. ನಾವು ನಮ್ಮ ಈ ನೆಲವನ್ನು ಮರಳಿ ಪಡಕೊಂಡ ಖಂಡಗಳಲ್ಲಿ ನಗರಗಳು ಮತ್ತು ರಸ್ತೆಗಳನ್ನು ಹೂತುಹಾಕುತ್ತ, ಇದ್ದದ್ದರ ಎಲ್ಲಾ ಕುರುಹುಗಳನ್ನು ಅಳಿಸಿಹಾಕುತ್ತ, ಸವನ್ನಾಗಳು ಮತ್ತು ಕಾಡುಗಳ ಮೂಲಕ ನಾಗಾಲೋಟದಲ್ಲಿ ಓಡಲು ಆರಂಭಿಸಿದೆವು. ನಮ್ಮೆದೆಗಳನ್ನು, ನಮ್ಮ ನೀಳ ಮತ್ತು ತೆಳುವಾದ ದಂತಗಳನ್ನು ಆಕಾಶಕ್ಕೆ ಎತ್ತಿ ಹಿಂಸಾತ್ಮಕ ದುಃಖದಿಂದ ನಮ್ಮ ಒಪ್ಪಗೊಳಿಸದ ಕೂದಲನ್ನು ಅಲುಗಾಡಿಸುತ್ತ ನಾವು ಕಹಳೆಯೂದಿದೆವು. ಅದು ಯುವ ಮಹಾಗಜಗಳಾದ ನಮ್ಮೆಲ್ಲರನ್ನು ಹಿಡಿದಿಟ್ಟುಕೊಳ್ಳುತ್ತದೆ, ಅದು ಈಗ ಜೀವನ ಪ್ರಾರಂಭವಾಗುವುದೆಂದು ನಾವರಿತಾಗ ಮತ್ತು ಇನ್ನೂ ನಾವು ಬಯಸುವುದು ನಮಗೆ ಎಂದಿಗೂ ಸಿಗುವುದಿಲ್ಲ ಎಂದು ಸ್ಪಷ್ಟವಾದಾಗ.

******

(The New Yorker, February 23, 2009)ಇಟಾಲಿಯನ್ ಭಾಷೆಯಿಂದ ಮಾರ್ಟಿನ್ ಮೆಕ್ಲಾಫ್ಲಿನ್. ಇಟಾಲೊ ಕ್ಯಾಲ್ವಿನೊ ಅವರು ಸಾಯುವ ಸಮಯದಲ್ಲಿ, 1985 ರಲ್ಲಿ, ಅತಿ ಹೆಚ್ಚು ಭಾಷಾಂತರಗೊಂಡ ಸಮಕಾಲೀನ ಇಟಾಲಿಯನ್ ಬರಹಗಾರರಾಗಿದ್ದರು.)