(ಕವಿ: ಕಂಬನ್)

ಅಡವಿಯಲ್ಲಿ ಸೀತಾರಾಮರು: ಕಂಬನ್

ನೋಡು ನನ್ನೊಲವೇ ನೀ ನಿನ್ನ ಕಂಗಳಿಂದ.
ತುಂಬಿದರಿವಿನ ಅದೆಷ್ಟು ಬೆಳಕು ನೆರಳು,
ತುಪ್ಪ ಸವರಿದ ಹೊಳೆವ ಈಟಿಯಷ್ಷುದ್ದ:
ನಿನ್ನ ನಡಿಗೆಯ ಸೊಬಗ ಬಗೆಯುತ್ತ
ನಿನ್ನ ಸೌಮ್ಯ ಕಣ್ನೋಟವನ್ನನುಸರಿಸಿ
ಹರಿಣ ಮಯೂರಗಳು ಸಮೀಪಿಸುತ್ತಿವೆ.
ನಿಶ್ಚಿತವಾಗಿಯೂ ನೀನೇ ಅವು.
ಈ ವನದೇವತೆಯರಿಗಿಂತ ನೀ ಮಧುರ:
ಹೂಗಳಿಂದ ದಟ್ಟಪರಿಮಳದ ಪರಾಗವನು ಹೊತ್ತು
ಗಾಳಿ ಹೇಗೆ ಬೀಸುತ್ತಲಿದೆ ನೋಡು
ದುಂಡುದುಂಡು ಕಲ್ಲುಗಳಂತಿರುವ
ಒಲವಿನ ಹೊನ್ನಬೊಟ್ಟುಗಳುಳ್ಳ
ನಿನ್ನ ಸ್ತನಗಳ ಮೇಲೆ
ಅವುಗಳ ಮೇಲೆ ಮುತ್ತುಗಳ ಹಾರ
ಅಲಂಕರಿಸುತ್ತ
ನೋಡು: ಮರಗಳು ನಮ್ಮ ಹಾದಿಗೆ ಹೂವ
ಚಿಮುಕಿಸುತ್ತಿವೆ, ಏಕೆನ್ನು!
ನಿನ್ನ ಪಾದಗಳು ಬಿಸಿಲ ತಾಪವ
ತಾಳಲಾರವು ಎಂದು ಅವು ಅಂಜುತ್ತವೆ, ಅಳುಕುತ್ತವೆ
ಪರಿಮಳದ ಹೂಗೊಂಚಲುಗಳ
ಹೊತ್ತ ಕೊಂಬೆಗಳು ನಡುಗುತ್ತವೆ ಬಾಗಿ
ಅವೋ ನಿನ್ನ ಸೊಂಟದ ಹಾಗೆ, ತೆಳ್ಳಗೆ
ಗಳಿಗೆಬಟ್ಟಲ ನಡುವಿ‌ನಂತೆ,
ಒರೆಯಿಂದ ಹಿರಿದ ಕತ್ತಿಗಳಂತೆ
ತೀಕ್ಷ್ಣವಾಗಿರುವ ನಿನ್ನ ಕಣ್ಣುಗಳಿಂದ ನೋಡು
ಎಲೆಮೊಗ್ಗಿನಲಿ ಬಚ್ಚಿಟ್ಟುಕೊಂಡಿರುವ
ಜೇನುದುಂಬಿಗಳು ನಿನ್ನ ಕಾಲ್ಗಳ ಮೇಲೆ
ಆಭರಣಗಳಾಗಿರಲುಬಹುದು.
ಮಳೆಮೋಡಗಳ ನೋಡು. ನಿನ್ನ ಹೆರಳಿನಹಾಗೆ,
ಕತ್ತಲೆಯ ಬಗೆ ಕಪ್ಪು, ಸುಳ್ಳಿನಂತಹ ಕಪ್ಪು.
ಕೋಮಲ ಎಳೆಬಿದಿರಿನ ಪೊದೆಗಳ ನೋಡು
ನಿನ್ನ ನಳಿದೋಳುಗಳಂತೆ.
ಕುಸುಮರಾಶಿಗೆ ಹೊರೆಯಾದ ಕವಲುಗಳು.
ಮೇಲೆ ಇಲ್ಲಿಲ್ಲಿ ಕೂತ ಪಕ್ಷಿಗಳು
ಬಣ್ಣದುಂಬಿ ಹೊಳೆವ ತಂಪಾದ ಬಳ್ಳಿಗಳು,
ಮಚ್ಚೆಬೊಟ್ಟಿಲ್ಲದಂತೆ ಪರಿಪೂರ್ಣ.
ಜಿಂಕೆಗಳ, ನವಿಲುಗಳ, ಕೋಗಿಲೆಯ ಹಿಂಡುಗಳು
ನೆರೆದು ಹೂಮಾಲೆಗಳ ಕೋದಂತೆ
ಈ ಅಡವಿಯನು ನೋಡು: ವರ್ಣಮಯ ಪರದೆ
ನಿಗಿನಿಗಿಸುವ ಬೆಂಕಿಯಂತೆ ಪ್ರಕಾಶಮಾನ.

ಕಂಬನ್ 697,707,708, 709, 710
ಹನುಮನಿಗೆ ಸೀತೆಯ ಕುರಿತು ರಾಮನ ವಿವರಣೆ, ಹನುಮ ಅವಳನ್ನು ಹುಡುಕುತ್ತಾ ಹೊರಡುವ ಮೊದಲು ನೀಡಿದ ಅಂತಿಮ ಸೂಚನೆಗಳು :

ಕೆಂದಾವರೆಯ ದಳಗಳು ಬಿಳಿಚಿಕೊಂಡಿರುವುದಿದೆ,
ಚಂದ್ರನಲ್ಲಿ ಕಲೆಗಳಿವೆ
ಸಣ್ಣದೊಂದು ದೋಷವೂ ಇಲ್ಲದ ರೂಪವೆಲ್ಲಿದೆ?
ಆಕೆಯ ಸುಂದರ ಕಟೆದ ದೇಹದಲ್ಲಿ
ಯಾವ ಅಪರಿಪೂರ್ಣತೆಯನ್ನೂ ನೀ ಕಾಣಲಾರೆ
ಮಹಾನ್ ಬ್ರಹ್ಮ ಕೊಳಲನ್ನು ಮಾಡಿದ
ವೀಣೆ, ಗಿಳಿ, ಕೋಗಿಲೆಗಳ, ಮಕ್ಕಳ ತೊದಲುನುಡಿಯಲ್ಲಿ
ಬಳಿಕ ಅವನವಳ ಇನಿದನಿಯಲಿ ಸಕಲ ಮಾಧುರ್ಯವನು ತುಂಬಿದ
ಆದರೆ ಅವಳ ಮಾತು ಸ್ವರಗಳಿಂಪುಗಳಿಗೆ ಸಮಾನವಾಗಿ
ಏನನ್ನೂ ಸೃಷ್ಟಿಸದಾದ
ಎಂದಿಗಾದರೂ ಅವನು ಗೆಲ್ಲಬಹುದೇ?
ಈಗಲೂ
ಭೂಮಿ ಗಗನಗಳು ಒಟ್ಟಾದರೂ ಅವಳ ಸಮಾನವಿರುವುದನ್ನು
ಹುಡುಕಲಾದೀತೇ
ರುಚಿಯಲ್ಲಿ ಅಮೃತಕ್ಕೆ ಎಣೆ ಯಾವುದು?
ಅವಳ ಮಾತಿನ ಮಾಧುರ್ಯಕೆ ಸಾಟಿಯಿಹುದೇ?
ಮಧುವಿನ ಅಮೃತಗಳ ಕುರಿತು ಚಿಂತಿಸುವಿರಿ
ಅವೆಂದಿಗಾದರೂ ಕಿವಿಗಳ ದಾಹವನ್ನು ತಣಿಸಬಲ್ಲವೆ? … ‘
ನೆನಪಿಸವಳಿಗೆ ಹನುಮ…
ನಮ್ಮ ಕಂಗಳು ಅದೆ ಮೊದಲು ಕಲೆತಾಗ
ಮಿಥಿಲಾನಗರಿಗೆ ನಾನು ಅಪರಿಚಿತನಿದ್ದೆ,
ನಿಂತಿದ್ದಳವಳು ಕಪೋತ ಪಕ್ಷಿಗಳ ಗೂಡಿನ ಬದಿಗೆ
ಕುಸುಮಿತ ಲತಾಹಂದರದ ಅಡಿಗೆ

ಅವಳಿಗೆ ಮತ್ತೆ ನೆನಪಿಸು ಹನುಮ
ಎಳೆಮಿಂಚಿನಂತೆ ನಾನವಳ ರೂಪವನೆಂತು ಕಂಡೆ,
ಅದೇನು ಗಾಂಭೀರ್ಯ, ಅದೆಂಥ ಚೆಲುವು
ಜನಕನರಮನೆಯ ಸಭಾಂಗಣದಿ
ಅವಳ ಹಿರಿಸಂಕಲ್ಪವನು ನಾನು ಮರೆತವನಲ್ಲ,
ಶಿವಧನುವು ಎರಡಾಗಿ ಮುರಿದಾಗ,
ಅವಳ ಮಿಥಿಲೆಯ ವಾಸವನು ಕೊನೆಗಾಣಿಸಿದವನನ್ನ
ಪೂಜ್ಯ ಕೌಶಿಕನೊಡನೆ ಅವಳು ನೋಡಿದ್ದಳು.
ಮೊದಲು ಕಂಡಿರದ ವನಗಳಿಗೆ ನನ್ನನನುಸರಿಸ ಹೊರಟವಳಿಗೆ
ನಾನು ಹೇಳಿದ್ದೆ, ‘ಓ ಸೀತಾ, ನೀನು ಸಂತಸದ ಚಿಲುಮೆ
ಈವರೆಗೆ ನನಗೆ: ಆದರೆ ಈಗ ನೀನಾಗುವೆಯೆನ್ನ ಅಸಂಖ್ಯಾತ
ದುಃಖಗಳ ಮೂಲ, ನಿನ್ನ ಈ ಆಸೆಯಿಂದ.
ಅವಳುತ್ತರಿಸಿದಳು ಕಣ್ಣೀರುದುಂಬಿ,
‘ನೀನು ನಿನ್ನಧಿಕಾರವನು ತೊರೆದು ವನವಾಸಕೆ ಹೊರಟಾಗ
ಓ ನನ್ನೊಲವೇ, ಎಲ್ಲವೂ ಸಮ್ಮತವಾಗಿದೆ ನಿನಗೆ
ನನ್ನ ಹೊರತುಪಡಿಸಿ?

ಕೊನೆಗೊಮ್ಮೆ ಹೇಳು ಹನುಮ
ನಾವು ಅವಧ ಪುರದ್ವಾರವನು ಹಾದು ಹೊರಹೋದಾಗ
ಅವಳೆನ್ನ ತಡೆದು ನಿಲ್ಲಿಸಿ ಕೇಳಿದ್ದು, ‘ಎಲ್ಲಿರುವುದು
ಮೇರೆಯಿಲ್ಲದ ಕಾಡು? ನಾವಲ್ಲಿಗೆ ತಲುಪಿರುವೆವೇ?

ಕಂಬನ್, ಕಂಬರಾಮಾಯಣದಿಂದ
ರಾವಣ ಸೀತೆಯನ್ನು ಕೊಂಡೊಯ್ದಿದ್ದಾನೆಂದು ತಿಳಿದ ರಾಮ:

ರಕ್ತವೊಮ್ಮೆಗೇ ನುಗ್ಗಿತ್ತು ಕಣ್ಣಿಗೆ
ವಿರಳವಾಯಿತು ರಾಮನ ಮಾತು
ಅವನ ಉಸಿರಿನಲಿ ಬಿರುಗಾಳಿ
ಸಿಟ್ಟು ನೆಲೆಸಿತವನ ಪೌರುಷದ ಹುಬ್ಬಿನ ಮೇಲೆ
ಭೂ ವ್ಯೋಮಗಳು ಕಂಪಿಸಿದವಮಿತ ಭೀತಿಯಲಿ
ತಾರೆಗಳು ಕಕ್ಷೆಯ ತೊರೆದೋಡಿದವು !
ಅವನ ಹಠಾತ್ ಕೋಪವು ಸೋಕದಂತೆ ಏಳೇಳು
ಲೋಕಗಳು ಕುಳಿತವು ಕವುಚಿ, ಸೋಂಕಿದೊಡೆ
ಸಿಡಿವ ಭಯದಿಂದ; ಒಂದು ನಗೆಯೇ ಅರ್ಥೈಸಿದರೆ
ಭೀಕರ ವಿನಾಶವೆಂದಿರಲು, ಅವನು ಖಗವನುದ್ದೇಶಿಸಿ ನುಡಿದ:
‘ವಿಶ್ವವ ನೋಡದರ ಸ್ಥಿರ ಅಕ್ಷದಲಿ, ತನ್ನ ಪಾಡಿಗೆ ತಾನು ಚಲಿಸುತ್ತಿದೆ
ಸುರರು ಶಿಲೆಯಂತೆ ನಿಂತು ನೋಡುತ್ತಿರುವಾಗಲೇ
ರಕ್ಕಸನೋರ್ವ ಅಸಹಾಯಕ ನಾರಿಯನೊಯ್ಯುತ್ತಾನೆ,
ಅವಳ ರಕ್ಷಣೆಗೆ ಸೆಣಸಿ ನೀ ಹೀಗೆ ಕ್ಷತಿಗೊಂಡಿದ್ದೀಯೆಲಾ!
ಅವೆಲ್ಲವನು ನಾನೊಮ್ಮೆಲೇ ಭಂಗಪಡಿಸುವೆನು.
ನಕ್ಷತ್ರಗಳು ಚದುರಿ ಪತನವಾಗಿ ಹೋಗುವವು!
ಸೂರ್ಯ ಸಿಡಿಯುವನು!
ಸುಡುವ ಗೋಳಗಳ ಬಿಸಿಬೆಳಕಿಂದ ಸಗ್ಗದಮಿತ
ಅವಕಾಶ ಸೊಕ್ಕುವುದು!
ಜಲ ವಾಯು ಅಗ್ನಿ ಜೀವಸಂಕುಲ ಸಕಲ
ಚರಾಚರಗಳು ಅತಿಬೇಗನೆ ಕರಗುವವು
ತಮ್ಮ ಭ್ರೂಣದ ಪರಮಾಣುಗಳಾಗಿ!
ಬಳಿಕವೆನ್ನ ಕೋಪವು ಸಗ್ಗದ ಸುರರುಗಳತ್ತ
ನೀನು ನೋಡುವೆ ಪರಿಭ್ರಮಿಸುವ ವಿಶ್ವವು
ಅದರಾಚಿನದೆಲ್ಲವೂ ಒಡೆದುಹೋಗುವವು
ತೊರೆಯೊಂದರಲ್ಲಿ ಜನಿಸಿದ ನೀರಗುಳ್ಳೆಯಂತೆ.

ಲಂಕೆಯಲ್ಲಿ ಸೀತೆಯನ್ನು ಪತ್ತೆ ಮಾಡದಿರುವ ಬಗ್ಗೆ ಹನುಮನ ದುಃಖ:

‘ಅಯ್ಯೋ, ಆ ರತ್ನವಿಲ್ಲಿಲ್ಲ, ಈ ಬೃಹತ್ ದುರ್ಗದಲ್ಲಿಲ್ಲ
ಅವಳು ತನ್ನ ಸೌಂದರ್ಯವನ್ನವನಿಗೆ ಕೊಡುವುದಿಲ್ಲವೆಂದು
ಬಗೆದ ದುರುಳನವ ಅವಳನ್ನು ಕೊಂದನೆ?
ಕೋಪೋದ್ರಿಕ್ತನಾಗಿ ಅವಳನ್ನು ತಿಂದನೇ?
ಮತ್ತೊಂದು ಜಗದಲ್ಲಿ ಸೆರೆಯಲ್ಲಿಟ್ಟುಕೊಂಡಿರುವನೆ?
ಎಂತು ಯೋಚಿಸಬೇಕೆಂದು ನಾ ತಿಳಿಯೆನಲ್ಲ
ಅವಳನ್ನೆಲ್ಲಿ ಹುಡುಕಬೇಕೆಂದು ಅರಿವಾಗದಲ್ಲಾ? … ‘

(7) ಅವನು ಅವಳನ್ನು ಹೇಗೆ ಕಂಡುಹಿಡಿದ:

ಅವಳು
ಅಲ್ಲಿ ಕರಿದೊಗಲ ರಕ್ಕಸಿಯರ ನಡುವೆ
ಕಾರ್ಮೋಡದ ಹೃದಯದಲಿ
ಮಿಂಚಿದ ಮಿಂಚಿನಂತೆ ಕುಳಿತಿರುವಳು
ಅವನು
ಕೌಸ್ತುಭದ ಬೆಳಕಿಗೆ ಬೆಳಗಿ ಏಕಾಂಗಿ ನಗುವ
ಸೂರ್ಯ-ಕಾಂತಿಯ ಕುಸುಮವನು ನೋಡಿದನು
ರಾಮನೆದೆಯ ಮೇಲೆ ಹೊಳೆದದ್ಭುತ
ಸೂರ್ಯಸ್ವರೂಪಿ ರತ್ನವನು ಕಂಡನು.

‌ತಮಿಳು ಮೂಲ: ಕಂಬನ್