ದೇಗುಲ ಸಂಕೀರ್ಣದಲ್ಲಿ ರಾಮೇಶ್ವರ ದೇವಾಲಯವಲ್ಲದೆ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ರಾಮಾಂಜನೇಯ ಹಾಗೂ ಪಾರ್ವತಿಯ ದೇಗುಲಗಳಿವೆ. ಮುಂದಿನ ಶತಮಾನಗಳಲ್ಲಿ ಪ್ರಾಂತ್ಯವನ್ನು ಆಳಿದ ವಿಜಯನಗರದ ಅರಸರೇ ಮೊದಲಾದವರ ಆಡಳಿತಾವಧಿಯಲ್ಲಿ ದೇವಾಲಯಗಳ ಜೀರ್ಣೋದ್ಧಾರ, ಹೆಚ್ಚುವರಿ ನಿರ್ಮಾಣಗಳು ನಡೆದಿವೆ. ಇದರಿಂದಾಗಿ ವಿವಿಧ ದೇಗುಲಗಳ ಕಟ್ಟಡದ ನಿರ್ಮಿತಿ ಏಕರೂಪದಲ್ಲಿ ಉಳಿದಿಲ್ಲವಾದರೂ ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಸಂಕೀರ್ಣವು ತಕ್ಕಮಟ್ಟಿಗೆ ಸುರಕ್ಷಿತವಾಗಿ ಉಳಿದುಬರಲು ಅವಕಾಶವಾಗಿದೆ. ನೊಳಂಬರ ಕಾಲದ ಶಿಲ್ಪಕಲೆಯ ಸುಂದರ ಮಾದರಿಗಳನ್ನು ಇಲ್ಲಿ ಕಾಣಬಹುದು.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತ್ತೇಳನೆಯ ಕಂತು

 

ಕನ್ನಡನಾಡಿನ ಚರಿತ್ರೆಯಲ್ಲಿ ಹೆಸರುವಾಸಿಯಾದ ಸಾಮಂತ ಅರಸುಮನೆತನಗಳ ಪೈಕಿ ನೊಳಂಬರಾಜರೂ (ಕ್ರಿ.ಶ. 750-1050) ಪ್ರಮುಖಸ್ಥಾನ ಪಡೆಯುತ್ತಾರೆ. ಈಗಿನ ಅನಂತಪುರ, ಕೋಲಾರ, ತುಮಕೂರು, ಬೆಂಗಳೂರು ಮೊದಲಾದವು ಈ ರಾಜರ ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳು. ಪಲ್ಲವರು, ಗಂಗರು, ಚಾಲುಕ್ಯರು ಮೊದಲಾದವರಿಗೆ ಅಧೀನರಾಗಿದ್ದ ನೊಳಂಬರಾಜರು ತಮ್ಮ ಆಳ್ವಿಕೆಯ ಹಿರಿಮೆಗೆ ಸಾಕ್ಷಿಯಾಗಿ ಶಾಸನಗಳನ್ನು ದಾಖಲಿಸಿರುವುದಲ್ಲದೆ ಹಲವು ದೇಗುಲಗಳನ್ನೂ ನಿರ್ಮಿಸಿದ್ದಾರೆ. ಅವುಗಳಲ್ಲೊಂದು – ಕೋಲಾರ ಜಿಲ್ಲೆಯ ಆವನಿಯಲ್ಲಿರುವ ರಾಮೇಶ್ವರ ದೇಗುಲ ಸಮೂಹ.


ಕೋಲಾರ ಜಿಲ್ಲೆಯ ಮುಳಬಾಗಲಿನಿಂದ ಹದಿನೈದು ಕಿಲೋಮೀಟರ್ ದೂರದಲ್ಲಿರುವ ಆವನಿಗೆ ಪೂರ್ವದಲ್ಲಿ ಆಹವನೀಯ (ಹೋಮಾಗ್ನಿ) ಎಂಬ ಹೆಸರಿತ್ತೆನ್ನುವುದು ಇಲ್ಲಿನ ಸ್ಥಳಪಾವಿತ್ರ್ಯಕ್ಕೆ ದ್ಯೋತಕ. ಆವನಿ ಉತ್ತರ ರಾಮಾಯಣದ ವಾಲ್ಮೀಕಿ ಆಶ್ರಮದ ನೆಲೆಯಾಗಿದ್ದು, ಇಲ್ಲೇ ಲವಕುಶರ ಜನನ, ಬಾಲ್ಯ, ತನ್ನ ಮಕ್ಕಳೊಡನೆ ರಾಮನ ಸಮಾಗಮ ಮೊದಲಾದವು ನಡೆದಿವೆಯೆಂಬ ಐತಿಹ್ಯವಿದೆ. ಆವನಿಯ ಬೆಟ್ಟದ ಬುಡದ ವಿಶಾಲವಾದ ಪ್ರಾಂಗಣದಲ್ಲಿ ನಿರ್ಮಿತವಾಗಿರುವ ಮುಖ್ಯ ದೇವಾಲಯವನ್ನು ಪ್ರಸಿದ್ಧ ನೊಳಂಬ ದೊರೆ ಮಹೇಂದ್ರನ ತಾಯಿ ದೇವಬ್ಬರಸಿಯು ನಿರ್ಮಿಸಿದಳೆಂದು ಹೇಳಲಾಗಿದೆ. ಆವನಿಯ ಶಾಸನವೊಂದರಲ್ಲಿ ಹೇಳಿದಂತೆ “ಆವನ್ಯವಸ್ಥಾನಮಂ ನಾಲ್ವತ್ತು ವರ್ಷಮನಾಳ್ದು, ಅಯಿವತ್ತು ದೇಗುಲಂಮಾಡಿ, ಪಿರಿಯವೆರಡು ಕೆರೆಯಂ ಕಟ್ಟಿದ” ತ್ರಿಭುವನ ಕರ್ತರನೆಂಬ ತಪಸ್ವಿಯ ಕಾಲ(ಹತ್ತನೆಯ ಶತಮಾನ)ದಲ್ಲಿ ಉಳಿದ ದೇಗುಲಗಳು ನಿರ್ಮಾಣವಾಗಿರಬಹುದು.

ಈ ದೇಗುಲ ಸಂಕೀರ್ಣದಲ್ಲಿ ರಾಮೇಶ್ವರ ದೇವಾಲಯವಲ್ಲದೆ, ಲಕ್ಷ್ಮಣೇಶ್ವರ, ಭರತೇಶ್ವರ, ಶತ್ರುಘ್ನೇಶ್ವರ, ರಾಮಾಂಜನೇಯ ಹಾಗೂ ಪಾರ್ವತಿಯ ದೇಗುಲಗಳಿವೆ. ಮುಂದಿನ ಶತಮಾನಗಳಲ್ಲಿ ಈ ಪ್ರಾಂತ್ಯವನ್ನು ಆಳಿದ ವಿಜಯನಗರದ ಅರಸರೇ ಮೊದಲಾದವರ ಆಡಳಿತಾವಧಿಯಲ್ಲಿ ಈ ದೇವಾಲಯಗಳ ಜೀರ್ಣೋದ್ಧಾರ, ಹೆಚ್ಚುವರಿ ನಿರ್ಮಾಣಗಳು ನಡೆದಿವೆ. ಇದರಿಂದಾಗಿ ವಿವಿಧ ದೇಗುಲಗಳ ಕಟ್ಟಡದ ನಿರ್ಮಿತಿ ಏಕರೂಪದಲ್ಲಿ ಉಳಿದಿಲ್ಲವಾದರೂ ಸಾವಿರ ವರ್ಷಗಳಿಗೂ ಹೆಚ್ಚು ಕಾಲ ಈ ಸಂಕೀರ್ಣವು ತಕ್ಕಮಟ್ಟಿಗೆ ಸುರಕ್ಷಿತವಾಗಿ ಉಳಿದುಬರಲು ಅವಕಾಶವಾಗಿದೆ. ನೊಳಂಬರ ಕಾಲದ ಶಿಲ್ಪಕಲೆಯ ಸುಂದರ ಮಾದರಿಗಳನ್ನು ಇಲ್ಲಿ ಕಾಣಬಹುದು.

ರಾಮೇಶ್ವರ ಮತ್ತು ಲಕ್ಷ್ಮಣೇಶ್ವರ ಗುಡಿಗಳಲ್ಲಿ ದೊಡ್ಡ ದೊಡ್ಡ ಶಿವಲಿಂಗಗಳಿವೆ. ಈ ದೇವಾಲಯಗಳ ಗೋಡೆಗಳ ಮೇಲೆ ಅನೇಕ ಶಿಲ್ಪಗಳಿವೆ. ವೃಷಭವಾಹನ ಶಿವ, ದುರ್ಗೆ, ಭೈರವಿ, ಮಹಿಷಮರ್ದಿನಿ ಮೊದಲಾದ ಶಿಲ್ಪಗಳು ನೊಳಂಬರ ಕಾಲದ ಶಿಲ್ಪಕಲೆಯ ಆಕರ್ಷಕ ನಿದರ್ಶನಗಳಾಗಿವೆ. ಗಜಾಸುರನನ್ನು ಸೀಳಿ ನರ್ತಿಸುತ್ತಿರುವ ಶಿವ, ಊರ್ಧ್ವಮುಖವಾಗಿ ಕಾಲನ್ನೆತ್ತಿ ನರ್ತಿಸುತ್ತಿರುವ ನಟರಾಜನ ಶಿಲ್ಪಗಳು ಇಲ್ಲಿನ ವಿಶೇಷ. ನೊಳಂಬರ ವಾಸ್ತುಶಿಲ್ಪದ ವೈಶಿಷ್ಟ್ಯವೆಂದರೆ ಜಾಲಂಧ್ರ (ಕಿಟಕಿ)ಗಳ ವಿನ್ಯಾಸ.

ಜಾಲಂದ್ರಗಳಲ್ಲಿ ವಿವಿಧ ಮೂರ್ತಿರೂಪಗಳನ್ನು ಕೆತ್ತಿರುವ ಶೈಲಿ ಗಮನಾರ್ಹ. ನೊಳಂಬ ಶೈಲಿಯ ಇನ್ನೊಂದು ವಿಶೇಷವೆಂದರೆ, ನವರಂಗದ ಮೇಲಿನ ಒಳಛಾವಣಿ(ಭುವನೇಶ್ವರಿ)ಯಲ್ಲಿ ಅಷ್ಟದಿಕ್ಪಾಲಕರಿಂದ ಸುತ್ತುವರೆಯಲ್ಪಟ್ಟ ಶಿವಪಾರ್ವತಿಯರ ಶಿಲ್ಪದ ಕೆತ್ತನೆಯನ್ನು ಲಕ್ಷ್ಮಣೇಶ್ವರ ದೇವಾಲಯದಲ್ಲಿ ಕಾಣಬಹುದು.

ಈ ಸಂಕೀರ್ಣದ ದೇವಾಲಯಗಳ ಕಂಬಗಳ ಮೇಲೆ ಕೆತ್ತಲಾಗಿರುವ ಉಬ್ಬುಶಿಲ್ಪಗಳಲ್ಲಿ ವಿವಿಧ ಭಂಗಿಗಳಲ್ಲಿ ನರ್ತಿಸುತ್ತಿರುವ ನರ್ತಕಿಯರು, ಗಣಪತಿ, ಕಾರ್ತಿಕೇಯ, ವೃಷಭಾರೂಢ ಶಿವ, ಪರವಾಸುದೇವ ವಿಷ್ಣು, ವೇಣುಗೋಪಾಲ, ಅಶ್ವಾರೂಢ ಸೈನಿಕರು ಮೊದಲಾದ ಶಿಲ್ಪಗಳು ಆಕರ್ಷಕವಾಗಿವೆ. ದೇವಾಲಯಗಳ ಹೊರಗೆ ನಂದಿಮಟಪದಲ್ಲಿರುವ ನಂದಿಗಳಲ್ಲದೆ, ಒಳಗುಡಿಯಲ್ಲೂ ನಂದಿಯ ಹಲವು ವಿಗ್ರಹಗಳಿವೆ. ಒಳಗುಡಿಯ ನವರಂಗದಲ್ಲಿ ಸಪ್ತಮಾತೃಕೆಯರು, ಚಂಡಿಕೇಶ್ವರರ ಮೂರ್ತಿಗಳಡನೆ, ಸೂರ್ಯನ ಆಕರ್ಷಕ ಶಿಲ್ಪವೊಂದನ್ನು ಕಾಣಬಹುದು. ಹದಿಮೂರನೆಯ ಶತಮಾನದ ವಿಜಯನಗರದ ಸಾಮಂತರಾಜ ಇಳವಂಜಿರಾಯನು ಈ ದೇವಾಲಯಗಳನ್ನು ಜೀರ್ಣೋದ್ಧಾರಮಾಡಿಸಿದನು. ಈತನ ವಿಗ್ರಹವೊಂದು ಲಕ್ಷ್ಮಣೇಶ್ವರ ದೇಗುಲದ ನವರಂಗದಲ್ಲಿ ಸ್ಥಾಪಿತವಾಗಿದೆ.

ಹೊಯ್ಸಳ ದೇಗುಲಗಳಿಗಿಂತ ಪ್ರಾಚೀನವಾದ ಈ ಗುಡಿಗಳು ನಾಡಿನ ಶಿಲ್ಪಕಲೆಯ ಚರಿತ್ರೆಯಲ್ಲಿ ನೊಳಂಬರು ನೀಡಿದ ಮಹತ್ವದ ಕೊಡುಗೆಗಳಾಗಿವೆ. ಪಟ್ಟದಕಲ್ಲು, ಐಹೊಳೆಗಳ ದೇವಾಲಯಸಮೂಹಗಳನ್ನು ನೆನಪಿಸುವ ಆವನಿಯ ಸಂಕೀರ್ಣವೂ ಸುತ್ತಲಿನ ಬೆಟ್ಟ, ಕಲ್ಲುಬಂಡೆಗಳ ಪರಿಸರವೂ ಎಲ್ಲಕ್ಕಿಂತ ಮುಖ್ಯವಾಗಿ ಅಲ್ಲಿನ ಪ್ರಶಾಂತತೆಯೂ ಸಂದರ್ಶಕರ ಮನಸೆಳೆಯುವುದರಲ್ಲಿ ಸಂದೇಹವಿಲ್ಲ.