ಏನೇನೋ ಅನ್ನುವಂಥದ್ದು ನಾನು ಮಾಡಲಿಲ್ಲ. ನಾನೂ ಕೂಡ ಏನೇನೋ ಆಗಲಿಲ್ಲ. ಕಡಿಮೆ ಭ್ರಷ್ಟ ಅನಿಸಿಕೊಳ್ಳಲಿಕ್ಕೆ ಮೇಷ್ಟ್ರಾದೆ. ಮಕ್ಕಳಿಗೆ ಕವಿತೆ ಹೇಳಿಕೊಟ್ಟೆ. ಆದರೆ ಯಾಕೋ ನನ್ನ ಕೈಯಲ್ಲಿ ಬರೆಯಲಾಗಲೇ ಇಲ್ಲ. ನಿತ್ಯದ ಯಾಂತ್ರಿಕತೆ ನುಂಗಿಕೊಂಡುಬಿಟ್ಟಿತು. ನನಗೆ ಗೊತ್ತು. ಈ ಸುದೀರ್ಘ ಸ್ವಗತಗಳನ್ನು ಬರೆಯುವುದರ ಭಯವೆಂದರೆ ಓದುಗ ಒಂದು ಹಂತದ ನಂತರ ಕತೆಗಾರನ ಪ್ರಾಮಾಣಿಕತೆಯನ್ನು ಅನುಮಾನಿಸತೊಡಗುತ್ತಾನೆ. ನಿಜ. ಪ್ರಾಮಾಣಿಕತೆಯನ್ನು ಒಪ್ಪಿಸಲು ನಮ್ಮ ಬಳಿಯಿರುವ ಪರಿಮಾಣಗಳಾದರೂ ಏನು? ಆಣೆ ಹಾಕಬಹುದು. ನಂಬಿ ಎಂದು ಕೈ ಜೋಡಿಸಬಹುದು.
ದಾದಾಪೀರ್‌ ಜೈಮನ್‌ ಬರೆಯುವ ಜಂಕ್ಷನ್‌ ಪಾಯಿಂಟ್‌ ಅಂಕಣ

ಅರ್ಧ ನಿದ್ರೆ ಅರ್ಧ ಎಚ್ಚರ. ಗರಗರ ಸದ್ದು ಮಾಡುವ ಫ್ಯಾನು. ಕನಸಲ್ಲದ ಕನಸಲ್ಲಿ ಮತ್ತೆ ಮತ್ತೆ ಸುಳಿವ ಆ ಹೆಂಗಸು. ಆ ಹೆಂಗಸಿನ ಮುಖ ಕಾಣುತ್ತಿಲ್ಲ. ಆಕೆ ನನ್ನ ಹೆಂಡತಿಯಂತೂ ಅಲ್ಲ. ಮಗಳು ನಿವ್ವಿಯೂ ಅಲ್ಲ. ಅವಳು ತುರುಬು ಕಟ್ಟಿದ್ದಾಳೆ. ಆ ತುರುಬಿನಲ್ಲೊಂದು ಗುಲಾಬಿ ಹೂ. ಅವಳು ಮುಂದೆ ಮುಂದೆ ನಡೆಯುತ್ತಿದ್ದಾಳೆ. ನಾನು ಹಿಂದೆ ಹಿಂದೆ… ಯಾವುದೂ ಬಗೆಹರಿಯುತ್ತಿಲ್ಲ. ಯಾರೋ ನನ್ನನ್ನು ಪಿಸುದನಿಯಲ್ಲಿ ಕರೆಯುತ್ತಿದ್ದಾರೆ. ಸಂತೆಯ ಗದ್ದಲವನ್ನೆಲ್ಲ ತೂರಿಕೊಂಡು ಮುಟ್ಟುವ ಪಿಸುದನಿ. ಮೆಲ್ಲನೆ ಎದ್ದು ಕಿಟಕಿಗಳ ಕರಟನ್ನುಗಳನ್ನು ತೆರೆದು ಸುದೀರ್ಘವಾದ ಉಸಿರನ್ನು ಒಳಗೆಳೆದುಕೊಂಡೆ. ಮೈಮನಸ್ಸುಗಳೆರಡೂ ಭಾರವೆನಿಸಿದವು. ಅದೇ ಹೊತ್ತಿಗೆ ಪೇಪರಿನ ಹುಡುಗ ಸೈಕಲ್ಲು ತುಳಿಯುತ್ತಾ ಬಂದವನೇ ಹ್ಯಾಂಡಲಿಗೆ ಸಿಕ್ಕಿಸಿದ ದಿನಪತ್ರಿಕೆಯೊಂದನ್ನು ಸುರುಳಿ ಸುತ್ತಿ ಮನೆಯ ಅಂಗಳದಲ್ಲಿ ಬಿಸಾಡಿ ಟ್ರಿಣ್ ಟ್ರಿಣ್ ಸದ್ದು ಮಾಡುತ್ತಾ ಮರೆಯಾದ.

‘ಅರೆ, ಗೋಪಿ ಅದೆಷ್ಟು ಬೆಳೆದುಬಿಟ್ಟಿದ್ದಾನೆ!’ ಎನಿಸಿತು. ನಾನು ನೋಡುವುದನ್ನು ಬಿಟ್ಟು ಅದೆಷ್ಟು ದಿನಗಳಾದವು? ಆ ಯೋಚನೆಯೇ ನನ್ನನ್ನು ಅಲುಗಾಡಿಸಿತು… ಹಿಡಿದಿಟ್ಟುಕೊಂಡಿದ್ದ ಉಸಿರಿನಿಂದಾಗಿ ವೇಗವಾಗಿ ಬಡಿದುಕೊಳ್ಳುವ ಎದೆ ಗಮನಕ್ಕೆ ಬರತೊಡಗಿತು. ಕಿಟಕಿಯ ಮುಂದಿನ ರಸ್ತೆಯನ್ನು ನೋಡಿದೆ. ಆಚೆ ಬದಿಯ ಮರ, ಅದರ ಪಕ್ಕದ ಹಳದಿ ನಿಯಾನ್ ದೀಪ, ಅದು ರಸ್ತೆಯ ಮೇಲೆ ಚೆಲ್ಲಾಡಿದ್ದ ಬೆಳಕು ಇವತ್ತೇ ಇಂದೇ ಹೀಗೆ ಹೊಸತಾಗಿ ನನಗೆ ಕಾಣಿಸುತ್ತಿದೆಯೇನೋ ಎನಿಸಿತು. ಇಷ್ಟು ದಿನ ಕಾಣದ್ದು ಇಂದೇಕೆ ಹೀಗೆ? ಒಳಗಿರುವ ಭಾರ ಯಾವುದು? ನಿಮ್ಮೆಲ್ಲ ರಗಳೆಗಳನ್ನು ಮೀರಿದೊಂದು ಅವ್ಯಕ್ತವನ್ನು ನಾವು ದಕ್ಕಿಸಿಕೊಳ್ಳುತ್ತೇವೆ ಎನ್ನುವ ವಿಶ್ವಾಸವಿದ್ದ ಆ ಪೇಪರ್ ಹುಡುಗ ಲೋಕದ ಕಂತೆ ಪುರಾಣಗಳನ್ನು ಹೊಂದಿರುವ ಆ ದಿನಪತ್ರಿಕೆಯನ್ನು ಅದೆಷ್ಟು ಅಸಡಾಳವಾಗಿ ಬಿಸಾಕಿ ಹೋದ? ಈಗ ಪಿಸುದನಿಯಲ್ಲಿ ಕರೆಯುತ್ತಿರುವ ದನಿ ಯಾವುದು? ಯಾಕೆ? ಯಾವ ಲೋಕಕ್ಕೆ ನಾನು ಸಲ್ಲುತ್ತಿದ್ದೇನೆ? ನೂರು ಪ್ರಶ್ನೆಗಳು ಹೊಕ್ಕುತ್ತಿರುವಂತೆ ಉಸಿರನ್ನು ಇನ್ನೇನು ಒಳಗಡೆ ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಾಗ ನಿಧಾನಕ್ಕೆ ಉಸಿರು ಬಿಟ್ಟೆನಾದರೂ ಪೂರ್ತಿಯಾಗಿ ಉಸಿರನ್ನು ಹೊರಗೆ ಹಾಕದೆ ಮತ್ತೊಂದು ಪುಟ್ಟ ಉಚ್ವಾಸ ನಿಶ್ವಾಸದ ಮೊರೆ ಹೋದೆ.

ಇಷ್ಟು ದಿನ ನಾನು ಸಲ್ಲುತ್ತಿದ್ದ ಲೋಕದಲ್ಲಾದರೂ ಏನಿತ್ತು? ಏಳು. ಎದ್ದು ತಯಾರಾಗು. ಆಫೀಸಿಗೆ ಹೋಗು. ಅವೇ ಮುಖಗಳ ಜೊತೆಗೆ ಒಡನಾಡು. ಮತ್ತೆ ಮನೆಗೆ ಮರಳು. ಅದೇ ನಿತ್ಯದ ಯಾಂತ್ರಿಕತೆ. ಸಿಸಿಫಸನ ಬಂಡೆ ನಿಲ್ಲಿಸುವ ಕೆಲಸ. ಮತ್ತೆ ಪಿಸುದನಿ ಕೇಳಿಸಿತು. ಅದೇನು ಹೇಳುತ್ತಿತ್ತು ಸ್ಪಷ್ಟವಿರಲಿಲ್ಲ. ನನಗೇ ತಿಳಿಯದೆ ಕೈಕಾಲುಗಳೆಲ್ಲ ತಣ್ಣಗಾದವು. ಕೂಡಲೇ ಬಚ್ಚಲಿಗೆ ಹೋಗಿ ಹಲ್ಲುಜ್ಜಿ ಮುಖ ತೊಳೆದು ಅಲ್ಲಿಂದ ಹವಾಯಿ ಚಪ್ಪಲಿ ಹಾಕಿಕೊಂಡು ಕೆಳಗಿಳಿದೆ. ದಿನಪತ್ರಿಕೆಯನ್ನೆತ್ತಿ ಒಳಗೆ ಹಾಕಿ ಮನೆಗೆ ಬೀಗ ಜಡಿದುಕೊಂಡು ಗೇಟು ಹಾಕಿಕೊಂಡು ಒಂದು ಕ್ಷಣ ನಿಂತೆ. ನನ್ನ ಮುಂದೆ ನನ್ನದೇ ನೆರಳು ರಸ್ತೆಯ ಮೇಲೆ ಬಿದ್ದಿತ್ತು. ಪಕ್ಕದ ಅಂಗಡಿಯವನು ಆಗ ತಾನೇ ತನ್ನ ಅಂಗಡಿಯನ್ನು ತೆರೆದು ಅಂಗಳಕ್ಕೆ ನೀರು ಚಿಮುಕಿಸುತ್ತಿದ್ದ. ನಾನು ಅವನನ್ನು ನೋಡಿ ಮುಗುಳ್ನಕ್ಕರೂ ಅವನಿಂದ ಯಾವ ಉತ್ತರವೂ ಬರಲಿಲ್ಲ. ಇಷ್ಟು ದಿನ ಮುಖ ಗಂಟು ಹಾಕಿಕೊಂಡಿದ್ದರ ಪರಿಣಾಮವಿರಬಹುದು ಎಂದುಕೊಂಡೆ. ಇಷ್ಟು ದಿನ ಆಫೀಸಿಗೆ ಹೋಗಲು ಕೆಳಗಿಳಿದಾಗ ಬಲಕ್ಕೆ ತಿರುಗಿ ಆಮೇಲೆ ಎಡಕ್ಕೆ ತಿರುಗಿ ಐವತ್ತು ಹೆಜ್ಜೆ ಹಾಕಿ ಬಸ್ ಸ್ಟ್ಯಾಂಡ್ ಎಂಬ ಸಿಸಿಫಸನ ಬಂಡೆಗೆ ತಲುಪುತ್ತಿದ್ದೆ. ಆದರೆ ಇಂದು ಎಡಕ್ಕೆ ತಿರುಗಿಕೊಂಡೆ. ಅಲ್ಲಿಂದ ನೂರು ಹೆಜ್ಜೆ ಹಾಕಿ ಬಲಕ್ಕೆ ತಿರುಗಿ ಹೊರಟೆ. ಈ ಹಾದಿಗೆ ಬಂದೆ ತುಂಬಾ ದಿನಗಳಾದವಲ್ಲ ಎನಿಸಿತು. ಮುಂದೆ ಹೋದಂತೆ ಒಂದು ಆಟದ ಮೈದಾನ ಸಿಕ್ಕಿತು. ಅಲ್ಲಿ ಅಷ್ಟು ಹೊತ್ತಿಗೆ ಚಿಕ್ಕ ಚಿಕ್ಕ ಮಕ್ಕಳು ಫುಟ್ಬಾಲ್ ಕ್ರಿಕೆಟ್ ಆಡುತ್ತಿದ್ದರು. ಕೆಲವರು ಓಡುತ್ತಿದ್ದರು. ಈ ಆಟದ ಮೈದಾನ ಅದೆಷ್ಟು ಯೌವನವನ್ನು ಮೊಗೆ ಮೊಗೆದು ಉಣ್ಣುತ್ತದೆ ಎನಿಸಿ ಸ್ವಲ್ಪ ಹೊತ್ತು ಮಕ್ಕಳ ಆಟವನ್ನೇ ನೋಡುತ್ತಾ ನಿಂತೆ. ಸುಮಾರು ಹತ್ತು ನಿಮಿಷಗಳಾದರೂ ನಿಂತಿರಬಹುದು. ಮೈದಾನದ ಆಚೆಬದಿಯಿಂದ ಬಲದಿಂದ ಎಡಕ್ಕೆ ಬಿಳಿ ಬಣ್ಣದ ಬೆಕ್ಕೊಂದು ಹೋಗಿದ್ದು ಕಾಣಿಸಿತು. ಇನ್ನೂ ಕತ್ತಲು ಕಟ್ಟಿಕೊಂಡಿರುವಾಗ ಆಟದ ಮೈದಾನಕ್ಕೆ ಅಂಟಿಕೊಂಡಿದ್ದ ಮರದಿಂದ ಕಾಗೆಯೊಂದು ಕಾವ್ ಕಾವ್ ಎಂದು ಸದ್ದು ಹೊರಡಿಸಿತು. ಅಲ್ಲಿಂದ ಕಾಲ್ಕಿತ್ತೆ. ಆಟದ ಮೈದಾನದಿಂದ ಸ್ವಲ್ಪ ಮುಂದೆ ಹೋದಾಗ ಒಬ್ಬಳು ನನಗಿಂತ ಹತ್ತು ವರ್ಷ ದೊಡ್ಡವಳಿರಬಹುದಾದ ಮುದುಕಿ ಅವಳ ಆರು ಬಲಿಷ್ಠ ನಾಯಿಗಳನ್ನು ಕರೆದುಕೊಂಡು ನನ್ನೆದುರಿಗೆ ಬರುತ್ತಿದ್ದಳು. ಅವಳನ್ನು ಮೊದಲೆಲ್ಲೂ ಕಂಡ ನೆನಪಾಗಲಿಲ್ಲ. ಅವಳ ಕೊರಳಲ್ಲಿ ಸುಮಾರು ಹತ್ತು ಉದ್ದನೆಯ ರುದ್ರಾಕ್ಷಿಗಳನ್ನು ನೇತುಹಾಕಿಕೊಂಡಿದ್ದಳು. ಹಣೆಯಲ್ಲಿ ದೊಡ್ಡ ಕುಂಕುಮ ಇತ್ತು. ಆರು ನಾಯಿಗಳು ಪೊಗದಸ್ತಾಗಿ ಬೆಳೆದಿದ್ದವು. ಒಂಚೂರು ಮೈಮರೆತರೆ ಅವು ನನ್ನ ಮೈಮೇಲೆರಗಿ ಕಚ್ಚಿ ಕಿತ್ತು ತಿಂದುಬಿಡುತ್ತವೆ ಎನಿಸಿ ಭಯವಾಯಿತು. ಅವಳನ್ನು ಮಾಟಗಾತಿ ಎನ್ನಬಹುದಿತ್ತು. ನಾನು ನಿಜಕ್ಕೂ ಬೇರೆ ಯಾವುದೋ ಲೋಕಕ್ಕೆ ಬಂದು ಸೇರಿದ್ದೇನಾ? ಈಗ ನಾನೇ ಖುದ್ದಾಗಿ ನಡೆಯುತ್ತಿದ್ದೇನಾ? ಅಥವಾ ಯಾರೋ ನನ್ನನ್ನು ನಿಯಂತ್ರಿಸುತ್ತಿರುವರೋ? ಅಥವಾ ಇದೆಲ್ಲಾ ನನ್ನ ಭ್ರಮೆಯೋ? ತಿಳಿಯಲಿಲ್ಲವಾದರೂ ಕಾಲುಗಳು ಮುಂದೆ ಮುಂದೆ ಎಳೆದುಕೊಂಡುಹೋಗುತ್ತಿದ್ದವು.

ಹಾಗೆ ಹೋಗುತ್ತಾ ಹೋಗುತ್ತಾ ಒಂದು ಪಾರ್ಕ್ ಕಾಣಿಸಿತು. ಪಾರ್ಕಿನ ಹೆಸರು ಬರೆದ ಫಲಕ ತುಕ್ಕು ಹಿಡಿದು ಹೋಗಿ ಅದರ ಹೆಸರು ಸರಿಯಾಗಿ ಕಾಣಿಸುತ್ತಿರಲಿಲ್ಲ. ಅದರ ಹೆಸರು ಏನೇ ಇದ್ದರೂ ನನಗೇನಾದರೂ ಫರಕು ಬೀಳುತ್ತಿತ್ತೇ? ಮೊದಲೇ ಹೇಳಿದೆನಲ್ಲ! ನಾನು ನೋಡುವುದನ್ನು ಬಿಟ್ಟೆ ಬಹಳ ದಿನಗಳಾಗಿದ್ದವು. ಪಾರ್ಕ್ ಇನ್ನೂ ತೆರೆದಿರಲಿಲ್ಲ. ಅಲ್ಲಿಯೇ ಮುಂದೆ ನಿಂತುಕೊಂಡೆ. ಥಟ್ಟನೆ ನನ್ನ ದೃಷ್ಟಿ ಹತ್ತಿರದ ಕಂಬಕ್ಕೆ ಅಂಟಿಸಿದ್ದ ಅರ್ಧ ಮಾಸಿಹೋದ ‘ಕಾಣೆಯಾಗಿದ್ದಾರೆ’ ಎನ್ನುವ ತಲೆಬರಹದ ಭಿತ್ತಿಪತ್ರದ ಮೇಲೆ ಬಿತ್ತು.

‘ನಿಖಿಲ್. ೧೬ ವರ್ಷ. ೫. ೯ ಎತ್ತರ. ಹೊರಡುವಾಗ ತಿಳಿ ಹಸಿರು ಬಣ್ಣದ ಟೀ ಶರ್ಟ್ ಮತ್ತು ಕಪ್ಪು ಬಣ್ಣದ ನೈಟ್ ಪ್ಯಾಂಟ್ ಹಾಕಿರುತ್ತಾನೆ. ದಿನಾಂಕ ೫ ಜನವರಿ ೨೦೨೨ ರಂದು ಬೆಳಿಗ್ಗೆ ಐದೂವರೆಗೆ ಕಾಣೆಯಾಗಿರುತ್ತಾನೆ.’ ಎಂದು ಬರೆದಿತ್ತು. ಒಂದು ಕ್ಷಣ ಯಾಕೋ ಕಳವಳವಾಯಿತು. ನಾನೂ ಹೀಗೆ ಕಾಣೆಯಾದರೆ ಏನೆಂದು ಬರೆಯುತ್ತಾರೆ? ಅಸಲಿಗೆ ಹುಡುಕುತ್ತಾರಾ? ಮಗಳು ನಿವ್ವಿ ನಿಜಕ್ಕೂ ನನ್ನನ್ನು ಹುಡುಕಿಸುತ್ತಾಳಾ? ಖಂಡಿತಾ ಹುಡುಕುತ್ತಾಳೆ. ಹುಡುಕುತ್ತಾ ಅಲೆಯುತ್ತಾಳೆ. ಹಾಗೆ ಅಲೆಯುತ್ತಿರುವಾಗಲೇ ಯಾವುದೋ ಬಜಾರದಲ್ಲಿ ನನ್ನ ಬೆನ್ನು ಮತ್ತು ಭುಜದ ಆಕಾರವನ್ನು ನೋಡಿಯೇ ‘ಅಪ್ಪಾ! ತಪ್ಪಾಯಿತು ಮನೆಗೆ ಬಾಪ್ಪಾ.’ ಎಂದು ಕಣ್ಣಲ್ಲಿ ನೀರು ತುಂಬಿಕೊಂಡು ಕರೆಯುತ್ತಾಳೆ. ನಾನಾಗ ಕರಗಿ ಹೋಗುತ್ತೇನೆ ಎಂದೆಲ್ಲಾ ಯೋಚಿಸುತ್ತೇನೆ. ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ…
ಬರೆಸಿದರೂ ಕಾಣೆಯಾಗಿದ್ದಾರೆ ಎನ್ನುವ ಪತ್ರದಲ್ಲಿ ಏನೆಂದು ಬರೆಸುತ್ತಾಳೆ?

‘ಕಾಣೆಯಾಗಿದ್ದಾರೆ. ಅಖಿಲೇಶ್ ಪಿ. ವಯಸ್ಸು ಐವತ್ತಾರು ವರ್ಷ. ಹೊರಡುವಾಗ ಹಳದಿ ಬಣ್ಣದ ಪಟ್ಟಿಯ ಶೂ. ಬೂದು ಬಣ್ಣದ ಟೀ ಶರ್ಟ್. ಕಪ್ಪು ಬಣ್ಣದ ನೈಟ್ ಪ್ಯಾಂಟ್ ಹಾಕಿರುತ್ತಾರೆ. ಹಣೆಯ ಮೇಲೆ ಎಡಗಡೆ ಹೆಬ್ಬೆಟ್ಟಿನ ಗಾತ್ರದ ಒಂದು ಮಚ್ಚೆ ಇದೆ…’ ಎಂದು ಬರೆಸಬಹುದು ಎಂದು ಊಹಿಸಿದೆನಾದರೂ ಮರುಕ್ಷಣವೇ ಇಲ್ಲ ಇಲ್ಲ ನಿವ್ವಿ ಸತ್ಯವನ್ನೇ ಹೇಳುತ್ತಾಳೆ. ಕಾಣೆಯಾದವರ ಪತ್ರದಲ್ಲಿ ಬಹುಶಃ ‘ಅಖಿಲೇಶ್ ಪಿ. ಕಣ್ಣ ಕೆಳಗೆ ಗಾಢ ಕಪ್ಪನ್ನು ಹೊಂದಿರುವ ಕಣ್ಣ ಮಿಂಚನ್ನು ಅದ್ಯಾವುದೋ ಕಾಲದಲ್ಲೇ ಕಳೆದುಕೊಂಡಿರುವ ನಿರ್ಲಿಪ್ತ ಅಪ್ಪ.’ ಎಂದು ಬರೆಸಿದರೆ? ಭಯವಾಯಿತು. ಅದೇ ಹೊತ್ತಿಗೆ ಟ್ರಿಣ್ ಟ್ರಿಣ್ ಸದ್ದು ಮಾಡುತ್ತಾ ಹಳೆಯ ತನ್ನ ಖಾಸಾ ಸೈಕಲನ್ನೇರಿ ಒಬ್ಬ ಮುದುಕ ಬಂದ. ಬಂದವನೆ ಅವನ ರಾಜರಥವನ್ನು ತರುಬಿ ಅಲ್ಲಿಯೇ ಹತ್ತಿರದ ಕಲ್ಲುಬೆಂಚಿನ ಮೇಲವನು ವಿರಾಜಮಾನನಾದ. ಆ ಪರಿಚಿತ ಪ್ರದೇಶಕ್ಕೆ ತಾನೆ ಪ್ರಭುವೆಂಬ ಗತ್ತಿನಲ್ಲಿ ಜೇಬೊಳಗಿನ ಬೀಡಿ ತುಟಿಯಲ್ಲಿ ಕೂರಿಸಿ ಹೊತ್ತಿಸುವ ಕಿಡಿಗೆ ಜಗದ ಮುಂಜಾನೆಯ ಮೆದುಳು ಚುರುಕುಗೊಂಡಿತೇನೋ ಎನಿಸಿತು. ಹುಬ್ಬುಗಂಟು, ತಲೆಯ ಮೇಲಿನ ಕೆಂಪು ಟೊಪ್ಪಿ, ಚರ್ಮದಂತಾಗಿರುವ ಹಸಿರು ಸ್ವೆಟರು ಎಷ್ಟೋ ವರುಷಗಳ ದೋಸ್ತಿಯಂತೆ ಅಂಟಿಕೊಂಡೆ ಇವೆಯೇನೋ ಎಂಬಂತೆ ಕಂಡಿತು. ಮುದುಕ ಕತ್ತೆತ್ತಿ ಒಮ್ಮೆ ಆಕಾಶ ದಿಟ್ಟಿಸಿದ. ಮಾಗಿಯ ಚಳಿಗಾಳಿ ಮತ್ತು ಹಕ್ಕಿಗಳ ಸವಿಯುಲಿ ಚಿಲಿಪಿಲಿಗಳನ್ನೊಮ್ಮೆ ನಿರ್ಲಿಪ್ತವಾಗಿ ಗಮನಿಸಿದ. ಮರದ ಕೊಂಬೆಗಳು ಗಾಳಿಗೆ ಅಲುಗಾಡುವುದನ್ನು ಅದೇ ನಿರ್ಲಿಪ್ತತೆಯಲ್ಲಿ ದಿಟ್ಟಿಸಿದ. ಅಲ್ಲಿಂದ ಎದ್ದು ಕಣ್ಣಿಳಿಸಿ ನೆಲ ನೋಡಿ ನಡೆಯುತ್ತಾ ತನಗೆ ಮಾತ್ರ ಗೊತ್ತಿರುವ ಅಡಗುದಾಣದಿಂದ ಕಸಬರಿಗೆಯನ್ನು ಹೊರತೆಗೆದು ಸುತ್ತಲೂ ಒಮ್ಮೆ ಕಣ್ಣು ಹಾಯಿಸಿ ಪ್ರತಿಮರಗಳ ಬುಡದಲ್ಲಿ ರಾತ್ರಿಯ ಯಾವುದೋ ಘಳಿಗೆಯಲ್ಲಿ ಉದುರಿಬಿದ್ದ ಅದೆಷ್ಟೋ ಎಲೆಗಳನ್ನು ಗುಡಿಸಲು ಶುರುಮಾಡಿದ. ಗುಡಿಸುವುದು ತನ್ನ ಧರ್ಮವೆಂದುಕೊಂಡು ಅವನೇ ದಕ್ಕಿಸಿಕೊಂಡ ಒಂದು ಲಯದಲ್ಲಿ ಸರ ಸರ ಸರ ಸರ ಸರಿಸುವಾಗ ಮುದುಕನ ಕಾಲಹೆಜ್ಜೆ, ಕಸಬಾರಿಗೆ ಕಾಯಕ, ಎಲೆಗಳ ಕಳೇಬರ ಯಾತ್ರೆ ಹೊರಟು ಮುಂದಕ್ಕೆ ಮೂರು ಹೆಜ್ಜೆ ಹಾಕಿದ ಆ ಕ್ಷಣಕ್ಕೆ ಒಂದು ಎಲೆ ಮೆಲ್ಲನೆ ಬಿದ್ದಿತು. ಮುದುಕ ಒಮ್ಮೆ ಹಿಂತಿರುಗಿ ನೋಡಿದ. ಮರದ ಬುಡದಲ್ಲಿ ಧೊಪ್ ಎಂದು ಬಿದ್ದ ಆ ಎಲೆಯನ್ನು ಇನ್ನೊಂಚೂರು ಬುಡದ ಹತ್ತಿರ ಸರಿಸಿ ಬದುಕಿಕೋ ಇನ್ನೊಂದು ದಿನ ತಾಯಬುಡದಲ್ಲಿ ಎನ್ನುವಂತೆ ಮುನ್ನಡೆದ. ಸಣ್ಣಗೆ ಬೆವರು ಕಿತ್ತಿತು. ನಾನು ಇಂದಿನಿಂದ ಕಳೆದುಹೋಗಿಬಿಡುತ್ತೀನಾ? ಮತ್ತೊಮ್ಮೆ ನಿವ್ವಿಯನ್ನು ನೋಡಲು ಸಾಧ್ಯವಾಗುವುದೇ ಇಲ್ಲವಾ? ನಿವ್ವಿ ನೆನಪಾದಳು!

ಅಂದು ಸಂಜೆ ಆಫೀಸ್ ಮುಗಿಸಿ ನೇರವಾಗಿ ನಿವ್ವಿಯ ಮನೆಗೆ ಹೋದಾಗ ಅವಳು ಪ್ರೀತಿಯಿಂದ ನನಗಿಷ್ಟ ಎಂದೇ ಅವಲಕ್ಕಿ ಚಹಾ ಮಾಡಿದ್ದಳು. ಕುಡಿದು ಮೊಮ್ಮಗಳು ಕರುಣಳ ಬಳಿ ಕೊಂಚ ಹೊತ್ತು ಆಟವಾಡಿ ಇನ್ನೇನು ಮನೆಗೆ ಮರಳಬೇಕು ಎನ್ನುವಷ್ಟರಲ್ಲಿ ಕರುಣ ಎಂದಿಗೂ ಇಲ್ಲದವಳು ತಾನು ಮನೆಗೆ ಬರುತ್ತೇನೆ ಎಂದು ಹಠ ಹಿಡಿದು ಕೂತುಬಿಟ್ಟಳು. ನಾನು ನಿವ್ವಿಗೆ ಮೊದಲೇ ಹೇಳಿಬಿಟ್ಟಿದ್ದೆ.

‘ನೋಡು, ನಾ ಒಬ್ಬ ಅಪ್ಪನಾಗಿ ಎಲ್ಲಾ ಕರ್ತವ್ಯ ಮಾಡಿದೀನಿ. ಒಬ್ಬನೇ ಇರುತ್ತಾನೆ ಮುದುಕ. ಮೊಮ್ಮಗಳನ್ನು ಆಡಿಸಿ. ಸ್ವಲ್ಪ ಹೊತ್ತು ನೋಡಿಕೊಳ್ಳಿ ಇಲ್ಲೇ ಬಿಟ್ಟೋಗ್ತಿವಿ ಅನ್ನೋದನ್ನೆಲ್ಲ ಇಟ್ಕೋಳೋ ಹಾಗಿಲ್ಲ. ನನಗೆ ನನ್ನದೇ ಆದ ಕೆಲಸ ಇರ್ತವೆ.’ ಎಂದು ಕಡ್ಡಿ ಮುರಿದ ಹಾಗೆ ಹೇಳಿಬಿಟ್ಟಿದ್ದೆ. ಅದಕ್ಕೆ ಮಗಳು ಅಳಿಯನದೇನೂ ತಕರಾರು ಇಲ್ಲವಾಗಿದ್ದರು ಸಾಕಷ್ಟು ಸಲ ಮನವೊಲಿಸುವ ವ್ಯರ್ಥ ಪ್ರಯತ್ನವನ್ನೂ ಕೂಡ ಮಾಡಿದ್ದರು. ಅಂದೂ ಕೂಡ ಅದೇ ಆಸೆಯನ್ನು ಇಟ್ಟುಕೊಂಡಿದ್ದರೋ ಏನೋ ಅಳಿಯಂದಿರು ಸುಮ್ಮನೆ ನಿಂತರು. ಕರುಣ ಜಾಸ್ತಿ ಎನ್ನುವ ಮಟ್ಟಿಗೆ ರೊಳ್ಳಿ ತೆಗೆದಳು. ನಾನು ಕೋಪದಲ್ಲಿ ಒಮ್ಮೆ ಬೆನ್ನಿಗೆ ಚಟಾರ್ ಎಂದು ಬಾರಿಸಿದೆ. ಮಗು ಆಕಾಶ ಭೂಮಿ ಒಂದು ಮಾಡುವ ಹಾಗೆ ಅಳಲು ಶುರುಮಾಡಿತು. ಅಡುಗೆ ಕೋಣೆಯಿಂದ ನಿವ್ವಿ ಓಡಿ ಬಂದವಳೇ ಅವಳನ್ನು ತನ್ನೆಡೆಗೆ ಎಳೆದುಕೊಂಡು ಕಣ್ಣಲ್ಲಿ ನೀರು ತುಂಬಿಕೊಂಡೇ ‘ನಿನಿಗೆ ಏನೇನು ಬುದ್ಧಿ ಇಲ್ಲ ನೋಡಪಜಿ. ಹೀಗೆ ಹೊಡುದ್ರೆ ಮಕ್ಕಳು ಹೆದರಿಕೊಂಡುಬಿಡ್ತವೆ. ಆಮೇಲೆ ಅದರ ಪರಿಣಾಮಗಳನ್ನು ಅನುಭವಿಸೋರು ನಾವು. ನೀವು ನಿಮ್ಮನೇಲಿ ಆರಾಮವಾಗಿರ್ತೀರಿ.’ ಎಂದು ಚೂರು ಕೊಂಕನ್ನೂ ಬೆರೆಸಿ ಮುಖಕ್ಕೆ ಹೊಡೆದ ಹಾಗೆ ಅಂದುಬಿಟ್ಟಳು.

ಈಗ ಪಿಸುದನಿಯಲ್ಲಿ ಕರೆಯುತ್ತಿರುವ ದನಿ ಯಾವುದು? ಯಾಕೆ? ಯಾವ ಲೋಕಕ್ಕೆ ನಾನು ಸಲ್ಲುತ್ತಿದ್ದೇನೆ? ನೂರು ಪ್ರಶ್ನೆಗಳು ಹೊಕ್ಕುತ್ತಿರುವಂತೆ ಉಸಿರನ್ನು ಇನ್ನೇನು ಒಳಗಡೆ ಹಿಡಿದಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎನ್ನುವಾಗ ನಿಧಾನಕ್ಕೆ ಉಸಿರು ಬಿಟ್ಟೆನಾದರೂ ಪೂರ್ತಿಯಾಗಿ ಉಸಿರನ್ನು ಹೊರಗೆ ಹಾಕದೆ ಮತ್ತೊಂದು ಪುಟ್ಟ ಉಚ್ವಾಸ ನಿಶ್ವಾಸದ ಮೊರೆ ಹೋದೆ.

‘ನಾನೂ ನಿನ್ನನ್ನ ಸಾಕೀನಿ. ನಾ ಸಾಕ್ದೆ ಹೋಗಿದ್ರೆ ನೀ ಇಷ್ಟು ದೊಡ್ಡವಳಾಗ್ತಾ ಇದ್ಯಾ? ಅಸಲಿಗೆ ಎಲ್ಲಿರುತ್ತಾ ಇದ್ಯೋ ಏನೋ?!’ ಎಂದು ಅವಳ ಮಾತಿನ ಬಾಣಕ್ಕೆ ಸಮನಾದ ಬಾಣವನ್ನೇ ಬಿಟ್ಟಿದ್ದೆ. ಅದಕ್ಕವಳು ‘ಯಾರೂ ಮಾಡದ್ದೇನು ನೀವು ಮಾಡಿಲ್ಲ. ಆಮೇಲೆ ಪ್ರತಿ ಮಾತಿಗೂ ನಾನು ಸಾಕ್ದೆ ನಾನು ಸಾಕ್ದೆ ಅನ್ನೋದೇನು ಬೇಕಿಲ್ಲ ಅಪ್ಪ. ನೀನು ಸಾಕ್ದೆ ಹೋದ್ರೆ ನಾನೇನು ಸಾಯ್ತಾ ಇರ್ಲಿಲ್ಲ. ಎಲ್ಲೋ ಏನೋ ಹೇಗೋ ಬದುಕಿಕೊಳ್ತಾ ಇದ್ದೆ. ಬರಿ ಚುಚ್ಚುಮಾತೆ ನಿಂದು.’ ಎಂದು ದುಃಖಿಸಿ ದುಃಖಿಸಿ ಅಳಲು ಶುರು ಮಾಡಿದಳು. ಅದೇ ಕೋಪದಲ್ಲಿ ಕರುಣಳನ್ನು ಮತ್ತೊಂದೆರಡು ಬಾರಿಸಿದಳು. ಮೈಯೆಲ್ಲಾ ಉರಿಯುತ್ತಿದ್ದ ನಾನು ಕೈಯೆತ್ತಿ ಎದ್ದು ನಿಂತೆ. ಅಲ್ಲೇ ಪಕ್ಕದಲ್ಲಿ ನಿಂತು ಗಮನಿಸುತ್ತಿದ್ದ ಅಳಿಯ ಅವಳ ಬೆನ್ನಿಗೆ ಬಂದು ನಿಂತುಕೊಂಡರು. ಅಳಿಯಂದಿರಿಲ್ಲದಿದ್ದರೆ ನಾನು ನಿವ್ವಿಯನ್ನು ಹೊಡೆದುಬಿಡುತ್ತಿದ್ದೆನೆ? ಅಬ್ಬಾ ಸತ್ಯಕ್ಕೆ ಅದೆಷ್ಟು ಶಕ್ತಿಯಿರುತ್ತದೆ? ಅದಕ್ಕೆ ಸತ್ಯ ಹೇಳುವವರನ್ನು ಜನ ಕೊಲ್ಲುವ ಮಟ್ಟಕ್ಕೂ ಹೋಗುತ್ತಿರಬಹುದೆನಿಸಿತು. ಮೈಯೆಲ್ಲಾ ನಡುಗುತ್ತಿತ್ತು. ಹಾಗೆಯೇ ಧುಮುಗುಡುತ್ತಾ ಮನೆಯ ಹೊರಗೆ ಬಂದು ಅಲ್ಲೇ ಹೋಗುತ್ತಿದ್ದ ಆಟೋವನ್ನು ಕರೆದು ಕೂತೆ. ನಾನು ಆಟೋ ಕರೆಯಲು ಬರುವಾಗಲೇ ನಿವ್ವಿಯಿಂದ ಬಿಡಿಸಿಕೊಂಡು ‘ತಾತಾ, ಬಾ ತಾತಾ’ ಎಂದು ಮಗು ಮತ್ತೆ ‘ರೋ…’ ಎಂದು ದುಃಖಿಸಲು ಶುರುವಿಕ್ಕಿತು. ಹಿಂದಿನಿಂದ ಬಂದ ನಿವ್ವಿ ‘ಬಾರೆ, ನಿನ್ನಿಂದಲೇ ಇಷ್ಟೆಲ್ಲಾ ಆಗಿದ್ದು…’ ಎಂದು ದರದರ ಎಳೆದುಕೊಂಡು ಧಡ್ ಎಂದು ಬಾಗಿಲು ಹಾಕಿಕೊಂಡಳು. ಕಣ್ಣ ಮುಂದೆ ಆದದ್ದಕ್ಕಿಂತ ಬೆನ್ನ ಹಿಂದೆ ಸದ್ದುಗಳಾಗಿ ಘಟಿಸುವುದಕ್ಕೆ ಮಾಯದ ಗಾಯಗಳಾಗುವ ತಾಕತ್ತಿರುತ್ತದೆ.

ಎಲ್ಲಿಯೋ ಕಳೆದುಹೋಗಿದ್ದ ನನ್ನನ್ನು ಪಾರ್ಕಿನ ಒಂದು ಬೆಂಚಿನ ಮೇಲೆ ಬಾಲವನ್ನು ಎತ್ತಿ ಅಲ್ಲಾಡಿಸುತ್ತಾ ನನ್ನೆಡೆಗೇ ನೋಡುವಂತೆ ಕಾಣಿಸಿದ ಬೆಕ್ಕು ನನ್ನನ್ನು ವಾಸ್ತವಕ್ಕೆ ಕರೆತಂದಿತು. ಕಪ್ಪು ಬೆಕ್ಕು. ಬಿಳಿ ಮೀಸೆ. ಬಾಲ ತಿರುವುತ್ತಾ ಗತ್ತಿನಲ್ಲಿ ಇಡೀ ಪಾರ್ಕಿನ ತುಂಬಾ ನಡೆಯುತ್ತಿತ್ತು. ಪಾರ್ಕಿನಲ್ಲಿ ನಡೆಯುವ ಜನರು ಮುಖಕ್ಕೆ ಮಾಸ್ಕು ಹಾಕಿಕೊಂಡೆ ಅದರ ಅಸ್ತಿತ್ವವೇ ತಮಗೆ ಲೆಕ್ಕಕ್ಕಿಲ್ಲ ಎನ್ನುವಂತೆ ನಡೆಯುತ್ತಿದ್ದರು. ಅಥವಾ ಅಸಲಿಗೆ ಆ ಬೆಕ್ಕು ನನಗಷ್ಟೇ ಕಾಣುತ್ತಿತ್ತೇ? ಅಥವಾ ಮನುಷ್ಯರು ನಡೆಯುತ್ತಿರುವುದೇ ಸುಳ್ಳೇ? ನಿವ್ವಿಯೂ ಹೇಳುವಂತೆ ನನ್ನೊಳಗಿನ ಯಾವುದೋ ಒಂದು ಕಳೆದು ಹೋಗಿದ್ದು ಯಾವಾಗಿನಿಂದ? ಬಹುಶಃ ಹನ್ನೆರಡು ವರ್ಷದವನಿದ್ದಿರಬೇಕು. ಮನೆಯಲ್ಲಿ ಅಮ್ಮ ಒಂದು ಬೆಕ್ಕು ಸಾಕಿದ್ದಳು. ಹಿಂದಿನ ರಾತ್ರಿ ಧೋ ಎಂದು ಮಳೆ ಸುರಿದಿತ್ತು. ಬೆಳಿಗ್ಗೆ ಬೆಕ್ಕು ಎಲ್ಲೂ ಕಾಣಿಸುತ್ತಿರಲಿಲ್ಲ. ಕೊನೆಗೂ ನಾನೇ ಮನೆಯೆಲ್ಲಾ ಹುಡುಕಿದ ಮೇಲೆ ನಮ್ಮ ಮನೆಯ ಟೆರೇಸಿನ ಮೂಲೆಯೊಂದರಲ್ಲಿ ಕೂತಿತ್ತು. ನಾನೇ ಅಂಗೈಯಲ್ಲಿ ಗಟ್ಟಿಯಾಗಿ ಅವುಚಿ ಹಿಡಿದು ಯಾರು ಸುಮ್ಮನೆ ಮೆಟ್ಟಿಲು ಇಳಿಯುತ್ತಾರೆ ಎಂದು ಬೆಕ್ಕನ್ನು ಟೆರೇಸಿನ ಮೇಲೆ ನಿಂತುಕೊಂಡು ಚೆಂಡು ತೂರುವಂತೆ ಹಿತ್ತಲಿನ ಅಂಗಳದಲ್ಲಿ ತೂರಿದ್ದೆ. ಅದು ‘ಮ್ಯಾವ್ ಮ್ಯಾವ್’ ಎನ್ನುವ ಕ್ಷೀಣ ಸದ್ದು ಹೊರಡಿಸಿ ಮುದುಡಿಕೊಂಡಿತು. ಅದು ಮುದುಡಿಕೊಂಡ ರೀತಿ ಇನ್ನೂ ಕಣ್ಣಿಗೆ ಕಟ್ಟಿದ ಹಾಗಿದೆ. ಅದರ ನಾಲ್ಕೂ ಕಾಲುಗಳು ಮುದುಡಿದ್ದು ಬಾಡುವ ಹೂವಿನ ಪಕಳೆಗಳಂತೆ ಕಂಡಿದ್ದವು… ಅದಾದ ಮೂರೆ ದಿನಕ್ಕೆ ಆ ಬೆಕ್ಕು ಬಾಯಲ್ಲಿ ಬುರುಗು ಬಂದು ಸತ್ತು ಹೋಗಿತ್ತು.

ನಾನು ಓದುವಾಗ ಶಾಲೆಯಲ್ಲಿ ಮೇಷ್ಟ್ರು ಬಾಯಿತೆಗೆದರೆ ಬಾಯ್ಮುಚ್ಚು ಎನ್ನುತ್ತಿದ್ದರು. ಆ ಭಯ ನನ್ನನ್ನು ಹೆಚ್ಚೆಚ್ಚು ಮೌನಿಯಾಗುವಂತೆ ಮಾಡಿತು. ನಿವ್ವಿ ಹೇಳಿದ್ದು ನಿಜ. ನಮ್ಮ ಒಳಗಿನ ಭಯಗಳನ್ನು ದಾಟಿಕೊಳ್ಳುವುದು ತುಂಬಾ ಕಷ್ಟ… ಆದರೆ ನಿವ್ವಿಗಿದ್ದ ಭಯ ಯಾವುದು? ಅನಾಥಾಶ್ರಮದಿಂದ ತಂದ ಮೇಲೆ ಒಂದು ವರ್ಷದವರೆಗೂ ಸವಿತಾ ಬದುಕಿದ್ದಳು. ಇಬ್ಬರೂ ಸೇರಿಯೇ ನಿವೇದಿತಾ ಎಂದು ಪ್ರೀತಿಯಿಂದ ಹೆಸರಿಟ್ಟಿದ್ದೆವು. ಪ್ರೀತಿಯಿಂದ ನಿವ್ವಿ ಎಂದು ಕರೆಯುತ್ತಿದ್ದೆವು. ಬಡತನವಿದ್ದರೂ ಖುಷಿಗೆ ಪಾರವೇ ಇರಲಿಲ್ಲ. ನಿವ್ವಿ ಬಂದ ಒಂದು ವರ್ಷಕ್ಕೆ ಸವಿತ ಹೋಗಿಬಿಟ್ಟಳು. ಅವಳಿಗೊಂದು ಬೆಕ್ಕನ್ನು ಸಾಕಬೇಕು ಎನ್ನುವ ಆಸೆಯಿತ್ತು… ನಾನದಕ್ಕೆ ಆಸ್ಪದವೇ ಕೊಟ್ಟಿರಲಿಲ್ಲ. ಅವಳು ಒಂಟಿಯಾಗಿ ಮನೆಯ ಕಿಟಕಿಗಳ ಪಕ್ಕ ಕುಳಿತು ರಸ್ತೆಗಳನ್ನೇ ನೋಡುತ್ತಾ ಬೆಳೆದುಬಿಟ್ಟಳು! ಯಾರೂ ಮಾಡದ್ದೇನೂ ನಾನು ಮಾಡಿಲ್ಲವೆಂದು ನಿವ್ವಿ ಹೇಳುತ್ತಾಳೆ. ನಿಜವೇ ಇರಬಹುದು. ಆದರೆ ಎಲ್ಲರೂ ಒಬ್ಬ ತಂದೆಯಾಗಿ ಮಾಡುವುದನ್ನೇ ಚಾಚೂ ತಪ್ಪದೆ ಮಾಡಿದ್ದೇನೆ. ಕುಂಕಿಮರಿ ಮಾಡಿ ಪೇಟೆ ತೋರಿಸಿದ್ದೇನೆ. ಬೆಂಕಿಗೂ ಬೆಳಕಿಗೂ, ಹೊರಗಿನ ಕತ್ತಲೆಗೂ ಒಳಗಿನ ಪ್ರಾರ್ಥನೆಗೂ ವ್ಯತ್ಯಾಸ ತಿಳಿಸಿದ್ದೇನೆ, ಸತ್ಯ ಹೇಳುವ ಪ್ರಶ್ನೆ ಕೇಳುವ ಛಾತಿ ಕಲಿಸಿದ್ದೇನೆ. ಇಷ್ಟು ಸಾಕಲ್ಲವೇ?

ನಿಜವೇ! ಏನೇನೋ ಅನ್ನುವಂಥದ್ದು ನಾನು ಮಾಡಲಿಲ್ಲ. ನಾನೂ ಕೂಡ ಏನೇನೋ ಆಗಲಿಲ್ಲ. ಕಡಿಮೆ ಭ್ರಷ್ಟ ಅನಿಸಿಕೊಳ್ಳಲಿಕ್ಕೆ ಮೇಷ್ಟ್ರಾದೆ. ಮಕ್ಕಳಿಗೆ ಕವಿತೆ ಹೇಳಿಕೊಟ್ಟೆ. ಆದರೆ ಯಾಕೋ ನನ್ನ ಕೈಯಲ್ಲಿ ಬರೆಯಲಾಗಲೇ ಇಲ್ಲ. ನಿತ್ಯದ ಯಾಂತ್ರಿಕತೆ ನುಂಗಿಕೊಂಡುಬಿಟ್ಟಿತು. ನನಗೆ ಗೊತ್ತು. ಈ ಸುದೀರ್ಘ ಸ್ವಗತಗಳನ್ನು ಬರೆಯುವುದರ ಭಯವೆಂದರೆ ಓದುಗ ಒಂದು ಹಂತದ ನಂತರ ಕತೆಗಾರನ ಪ್ರಾಮಾಣಿಕತೆಯನ್ನು ಅನುಮಾನಿಸತೊಡಗುತ್ತಾನೆ. ನಿಜ. ಪ್ರಾಮಾಣಿಕತೆಯನ್ನು ಒಪ್ಪಿಸಲು ನಮ್ಮ ಬಳಿಯಿರುವ ಪರಿಮಾಣಗಳಾದರೂ ಏನು? ಆಣೆ ಹಾಕಬಹುದು. ನಂಬಿ ಎಂದು ಕೈ ಜೋಡಿಸಬಹುದು. ಅಸಲಿಗೆ ಈ ಪ್ರಾಮಾಣಿಕತೆಯೆಂದರೆ ಒಂದು ತೆಳು ಬಿಳಿ ಹಾಳೆಯ ಕೆಳಗೆ ಒಂದು ಶಾಯಿ ಬಿಂದುವನ್ನಿಟ್ಟು ನೀರಿನಲ್ಲಿ ಇಳಿಬಿಟ್ಟರೆ ಶಾಯಿಯ ಶಕ್ತ್ಯಾನುಸಾರ ಅದು ಮೇಲಕ್ಕೇರುತ್ತದಲ್ಲ! ಇದು ಹಾಗೆಯೇ!

ಅಲ್ಲಿಂದ ವಾಸ್ತವಕ್ಕೆ ಬರುವ ಹೊತ್ತಿಗೆ ಆ ಬೆಕ್ಕು ಕಾಣಲೇ ಇಲ್ಲ. ಇಡೀ ಪಾರ್ಕನ್ನು ಅದೆಷ್ಟು ಬಾರಿ ಸುತ್ತಿದರೂ ಅದರ ಸುಳಿವಿಲ್ಲ. ಗೇಟಿನ ಬಳಿ ಹೋದರೆ ಆ ಮುದುಕನ ಸೈಕಲ್ಲಿಲ್ಲ. ಕತ್ತಲು ಕಳೆದು ಬೆಳಕು ಹರಿವ ಅದ್ಯಾವುದೋ ಮಾಯಕದಲ್ಲಿ ಏನೋ ಬದಲಾಗುತ್ತದೆ ಎನಿಸಿತು. ಅಂದು ಒಂದೊಂದೇ ಹೆಜ್ಜೆಗಳನ್ನು ಭಾರದಿಂದ ಎತ್ತಿ ಹಾಕುತ್ತಾ ಮನೆ ತಲುಪುವಷ್ಟರಲ್ಲಿ ನಿವ್ವಿ ಮತ್ತು ಕರುಣಾ ಬಾಗಿಲ ಬಳಿ ನಿಂತಿದ್ದರು. ಕರುಣಾ ನನ್ನನ್ನು ನೋಡಿ ಓಡಿ ಬಂದು ತಬ್ಬಿಕೊಂಡು ‘ಸಾರಿ ತಾತಾ. ಇನ್ನೊಮ್ಮೆ ಹಠ ಮಾಡಲ್ಲ.’ ಎಂದಿತು. ನಿವ್ವಿ ಹೆಚ್ಚು ಮಾತಾಡಲಿಲ್ಲ. ಒಳಗೆ ಬಂದವಳೇ ಕಾಫಿ ಮಾಡಿಕೊಟ್ಟು ‘ಇವತ್ತು ಸೀಮಾ ಮನೆಗೆಲಸಕ್ಕೆ ಬರಲ್ಲ. ನಾನೇ ತಿಂಡಿ ಕಳಿಸ್ತೀನಿ.’ ಎಂದು ತನ್ನ ಕರ್ತವ್ಯವನ್ನು ಆಡಿ ಹೋದಳು. ಕರುಣಾ ಹೋಗುವಾಗ ಟಾಟಾ ಮಾಡಿದಳು. ನಾನೂ ಮಗಳ ಬಳಿ ಕ್ಷಮೆ ಕೇಳಬೇಕು ಅನಿಸಿತಾದರೂ ನಾಲಗೆಯವರೆಗೂ ಬಂದದ್ದು ಮಾತಾಗಲಿಲ್ಲ.


ಯಾಕೋ ಸಮಾಧಾನವಾಗಲಿಲ್ಲ. ಪಿಸುದನಿ ಈಗ ನಿಧಾನವಾಗಿ ಗಟ್ಟಿಯಾಗತೊಡಗಿದಂತೆ ಕೇಳಿಸಿತು. ಅಖಿ… ಅಖೀ! ಎಂದು ಕರೆಯುತ್ತಿರುವಂತೆ ಅನಿಸಲಾರಂಭಿಸಿತು. ಕೂಡಲೇ ಅಲ್ಲಿಂದ ಎದ್ದು ಸೀದಾ ಬಸ್ ಸ್ಟ್ಯಾಂಡಿಗೆ ಹೋದೆ. ಸುಮ್ಮನೆ ಬಸ್ಸು ಹತ್ತಿಕೊಂಡೆ. ಕೊನೆ ಸ್ಟಾಪಿನವರೆಗೂ ಟಿಕೆಟ್ ತೆಗೆದುಕೊಂಡೆ. ಬಸ್ಸು ಸ್ವಲ್ಪ ಹೊತ್ತು ಹೊರಟಿತೋ ಇಲ್ಲವೋ ನನ್ನ ಸೀಟಿನ ಮುಂದಿನ ಮೂರು ಸೀಟು ಬಿಟ್ಟು ಒಬ್ಬ ಸುಮಾರು ನನ್ನದೇ ವಯಸ್ಸಿನ ಒಬ್ಬ ಹೆಂಗಸು ಕುಳಿತುಕೊಂಡಿದ್ದಳು. ಅವಳು ತಲೆಗೆ ತುರುಬು ಕಟ್ಟಿ ಅದರ ತುದಿಯಲ್ಲೊಂದು ಸುಗಂಧರಾಜ ಹೂವನ್ನು ಮುಡಿದಿದ್ದಳು. ಕನಸ್ಸಿನಲ್ಲಿ ಕಾಣುತ್ತಿದ್ದ ಅದೇ ಮುಖ. ಎದ್ದು ಹೋಗಿ ಅವಳ ಮುಖ ನೋಡಿಬಿಡಲೇ ಎನಿಸಿದರೂ ಕಾಲುಗಳು ಮೇಲೇಳಲಿಲ್ಲ. ಬಸ್ಸು ಸಾಗುತ್ತಲೇ ಇತ್ತು. ಅಕ್ಕ ಪಕ್ಕದ ಮರಗಳು ನಮ್ಮನ್ನು ದಾಟಿಕೊಂಡು ಹಿಮ್ಮುಖ ಚಲನೆಯಲ್ಲಿದ್ದವು. ನಾವು ಈ ಸೀಮೆಯನ್ನು ದಾಟಿ ಮತ್ಯಾವ ಸೀಮೆಗೊ ಸಲ್ಲುತ್ತಿದ್ದೇವೆ ಎನಿಸತೊಡಗಿತು. ಒಮ್ಮೆ ಸುತ್ತಲೂ ನೋಡಿದರೆ ಎಲ್ಲರೂ ಇದ್ದಾರೆ ಮತ್ತೊಮ್ಮೆ ಕಣ್ಣು ಮುಚ್ಚಿ ಕಣ್ಣು ತೆಗೆದು ನೋಡಿದರೆ ಇರುವುದು ನಾನು ಮತ್ತು ಅವಳು ಮಾತ್ರ. ಬಸ್ಸು ದೂರ ದೂರ ಸಾಗಿ ಸಾಗಿ ಒಂದು ಕಡೆ ನಿಂತಿತು. ಅವಳು ಇಳಿದಳು. ನಾನೂ ಇಳಿದೆ. ಅವಳು ಪಾರ್ಕಿನ ತರದ ಗೇಟಿನ ಬಳಿ ನಡೆಯತೊಡಗಿದಳು. ನಾನವಳನ್ನು ಹಿಂಬಾಲಿಸತೊಡಗಿದೆ. ತುಂಬು ಹರಯದ ಪ್ರೇಮಿಯಂತೆ ‘ಇನ್ನೇನು ಅವಳು ಹಿಂತಿರುಗಿ ನೋಡಿಯೇ ನೋಡುತ್ತಾಳೆ…’ ಎಂದುಕೊಂಡೆ. ‘ಅವಳು ತಿರುಗಿ ನೋಡಲಿ’ ಎಂದು ಬೇಡಿಕೊಂಡೆ. ಅವಳು ನೂರು ಹೆಜ್ಜೆ ನಡೆದು ಹಿಂತಿರುಗಿ ನೋಡಿ ಮಿಯಾವ್ ಎಂದಳು. ಕಾಲ ಒಂದು ಕ್ಷಣ ನಿಂತಿತು. ನನ್ನೊಳಗೊಂದು ನಡುಕ ಹುಟ್ಟಿತು. ಮೈ ಬಿಸಿಯೇರಿತ್ತು. ಮರುಕ್ಷಣವೇ ಅಲ್ಲೇ ಎಲ್ಲೋ ಟ್ರಿಣ್ ಟ್ರಿಣ್ ಸದ್ದು ಕೇಳಿದ ಹಾಗಾಯಿತು.