ನಾತಿಚರಾಮಿ

ಅವನ ಮಡಿಲಲ್ಲಿ ನಿಶ್ಚಿಂತೆಯಾಗಿ
ಮಲಗಿದ ಕ್ಷಣಗಳು ಸುಳ್ಳಾ…
ಮುಗಿದು ಹೋದವಾ…
ಮರುದಿನ ಮುಂಜಾನೆ ನಾ ಏಳಿಸಿದಾಗ
ಅವ ಏಳದೇ ಹೋದರೆ
ಈ ಭಯವನ್ನು ಹೇಗೆ ಹೆದರಿಸಿ
ಬೀದಿಗಟ್ಟಲಿ ತಿಳಿಯುತ್ತಿಲ್ಲ

ಸುರಿಸುವ ಕಣ್ಣುಗಳ ಯಾತನೆಯನ್ನು
ತಿಳಿಯುವಷ್ಟು ಸುಲಭವಾಗಿ
ಅವುಗಳ ಯಾಚನೆಯೂ
ಅರ್ಥವಾಗುತ್ತಿದ್ದರೆ ಎಷ್ಟು ಚಂದಿರುತ್ತಿತ್ತು

ಧರ್ಮೇಚ ಅರ್ಥೇಚ ಕಾಮೇಚ ಮೋಕ್ಷೇಚ
ನಾತಿಚರಾಮಿ…
ಎಷ್ಟು ರಮ್ಯ ಈ ಸಾಲುಗಳು…
ಸಣ್ಣ ನೋವನ್ನೂ ಹಂಚಿಕ್ಕೊಳ್ಳಲಾರೆವು ನಾವು

ನಿನ್ನ ದೇಹವನ್ನು ನಾನು ಸ್ವಲ್ಪ ಹೊತ್ತು
ಹೊದ್ದು ನಡೆಯುವಂತಿದ್ದಿದ್ದರೆ…
ನನ್ನ ದೇಹವನ್ನು ನಿನಗೆ ನೀಡಿ
ಸ್ವಲ್ಪ ಸುಧಾರಿಸಿಕೊ ಎನ್ನುವಂತಿದ್ದಿದ್ದರೆ…

ಇಂತಹ ಸಾಲುಗಳೆಲ್ಲ ನನಸಾಗದ
ಮನಸು ನೆಮ್ಮದಿಯಾಗಿದ್ದಾಗ ಆಶಿಸುವ
ಸುಂದರ ಕಲ್ಪನೆಗಳು…
ವ್ಯಾಕುಲ ಮನಸಿಗೆ ರಮ್ಯತೆಯಿಂದ
ಎಳ್ಳಷ್ಟೂ ಸಮಾಧಾನವಿಲ್ಲ
ತಂಪಿನಲ್ಲೂ ಇರಿದು ಕೊಲ್ಲುವ
ಸೋನೆಯಂತೆ
ಈಟಿಯಾಗಿ ಚುಚ್ಚಿ ಕೊಲ್ಲುತ್ತಿವೆ

ಕಣ್ಮುಚ್ಚಿ ಮಲಗಲೂ ಭಯ
ಅವನ ಕಿರುಬೆರಳ ಹಿಡಿದು ನಡೆದು
ಮಾತ್ರ ಅಭ್ಯಾಸವಿರುವ ನಾನು
ಅದರ ನಶ್ವರತೆಗೆ ವಿಚಲಿತಗೊಳ್ಳುತ್ತೇನೆ

ಋತುಗಳೇ ಬೇಗ ಉರುಳಿ ವಂಸಂತನನ್ನು
ಕಳುಹಿಸಿ
ನಮ್ಮ ಪ್ರೇಮದ ಕುಂಡಕ್ಕೆ
ಹೊಸ ಸಸಿಯೊಂದನ್ನು ತಂದು ನೆಟ್ಟು
ಅದು ಮತ್ತೆ ಹೊಸದಾಗಿ ಚಿಗುರಿ
ಮೈಚೆಲ್ಲಿ ಅರಳಿ ನಿಲ್ಲುವುದನ್ನು
ನೋಡುತ್ತಾ…

ಧ… ಅ… ಕಾ… ಮೋ…
ಅದೇ ರಮ್ಯತೆಯಲ್ಲಿ ಹಾಡಿಕೊಳ್ಳುತ್ತೇವೆ ಒಮ್ಮೆ
ಮುಂದೆ ನಾನೇ ಇರಲಿ
ಅವನೇ ಇರಲಿ
ಅಥವಾ ಇಬ್ಬರ ಅನುಪಸ್ಥಿತಿಯಲ್ಲಿಯೂ
ಸ್ವರಗಳು ಅಕ್ಷಯ…