೧. ನಿಷ್ಣಾತ ವೇಷಗಳಲ್ಲಿ…

ಅವನ ಮುಖೇಡಿತನ
ಬದಲಿಸುವ ವಿವಿಧ ನಿಷ್ಣಾತ
ವೇಷಗಳಲ್ಲಿ
ನಿತ್ಯ ಅರಳುವ ದುರ್ಗಂಧ
ಬಿಡುಗಡೆ ಹೊಂದುತ್ತದೆ
ಅದೊಂದು ವಿರಾಮ
ಗಳಿಗೆಯೊಳಗೆ…

ಅವಳು ನಗುತ್ತಾಳೆ
ತೊಟ್ಟಿನಲ್ಲಿ ತುಂಬಿಕೊಂಡ
ದುಂಡು ಮಲ್ಲಿಗೆ ಬಿರಿದಂತೆ….
ಇದೊಂದು ಪೂರ್ವನಿಯೋಜಿತ
ಘಟಿಸುತ್ತದೆಂದು
ಕಾದವಳಂತೆ….

ಹೂವನ್ನು ಹರಿದ
ಅವನ ಒರಟು ಅಂಗೈಯ
ರೇಖೆಗಳು
ಭವಿಷ್ಯವನ್ನು ನಾಲಗೆಯವರೆಗೆ
ತಂದುಕೊಂಡು
ರಾತ್ರಿಯ ನಕ್ಷತ್ರಗಳಂತೆ
ನಾಲಿಗೆಯ ಮೇಲೆ
ಮಚ್ಚೆಗಳಾಗಿ ರೂಪಾಂತರ
ಹೊಂದಿವೆ

ಮತ್ತವಳು ಹಠಕ್ಕೆ ಬಿದ್ದವಳಂತೆ
ಎಣಿಸುತ್ತಿದ್ದಾಳೆ….
ಅವನ ನಗು ಉದುರಿಸಿದ
ಒಂದೊಂದೇ
ಮಚ್ಚೆಗಳನ್ನು….

೨ .ಇಷ್ಟೆಲ್ಲ ಅರುಹಿಕೊಳ್ಳುವಾಗ

ಈ ದೈನೇಸಿ ರಾತ್ರಿಗಳಲ್ಲಿ
ಫ್ಯಾನುಗಳು ಉಸಿರುಗಟ್ಟಿ
ತಿರುಗುತ್ತವೆ…

ಇದೆಲ್ಲ ಶುರುವಾದದ್ದು
ಕತ್ತಿನಲ್ಲಿ ಬಿಗಿಯುತ್ತಿರುವ ದಾರ
ಮತ್ತದರದೆರೆಡು ಇರಿಯುವ
ಕೋಡುಗಳಿಂದ….

ಹೆಡೆ ತೆಗೆದು ಬುಸುಗುಟ್ಟಬಹುದಾದ
ಮಿಡಿನಾಗರವೊಂದು
ತಣ್ಣಗೆ ಮಲಗಿದೆ…..
ಶ್ವಾಸವೊಂದು ಮೆತ್ತಗೆ ಸದ್ದಾಗದಂತೆ
ದೇಹದೊಳಗೆ ನುಸುಳುತ್ತಿದೆ
ನಕ್ಷತ್ರಗಳು ಉಲ್ಕೆಗಳೊಂದಿಗೆ
ಶಾಮೀಲಾಗಿವೆ….
ಏಕಾಕ್ಷೀ ರಕ್ಕಸನಂತೆ
ಇರುಳ ಆಕಾಶ
ಹೊಂಚುತ್ತಿದೆ…..

ರಾತ್ರಿ ಗೋಡೆಗಳ
ಕೇಳುಬಾಕತನದಿಂದಾಗಿ
ಕೋಣೆಯೊಳಗೆ ಬಯಲ ಜಾತ್ರೆ….
ಗದ್ದಲದ ಗೌಜಿನಲ್ಲಿ
ನನ್ನ ಧ್ವನಿ ಉಡುಗುತ್ತಿದೆ
ನೀ ಕೂಗಿದ್ದು ಕೇಳುತ್ತಿಲ್ಲ….

ಸಧ್ಯ ಇಷ್ಟೆಲ್ಲ
ಅರುಹಿಕೊಳ್ಳುವಾಗ
ಮಿಡಿನಾಗರಕ್ಕಿನ್ನು
ಎಚ್ಚರವಾಗಿಲ್ಲ….

ಆಶಾ ಜಗದೀಶ್ ಗೌರಿಬಿದನೂರಿನಲ್ಲಿ ಶಿಕ್ಷಕಿಯಾಕಿ ಕೆಲಸ ಮಾಡುತ್ತಿದ್ದಾರೆ. ಕತೆ, ಕವಿತೆ, ಪ್ರಬಂಧ ರಚನೆಗಳಲ್ಲಿ ಆಸಕ್ತಿ. ಸಂಗೀತ ಮತ್ತು ಚಿತ್ರಕಲೆ ಇವರ ಹವ್ಯಾಸ.