ಈ ಬಾರಿ ವಿಕ್ಟೊರಿಯಾ ರಾಜ್ಯವಷ್ಟೇ ಅಲ್ಲ ಅದರ ಕೆಳಗಿನ ಟಾಸ್ಮೆನಿಯಾ ರಾಜ್ಯದ ಭಾಗಗಳಲ್ಲೂ ಪ್ರವಾಹವುಂಟಾಗಿದೆ. ಟಾಸ್ಮೆನಿಯಾವು ಕಡಿಮೆ ಜನಸಂಖ್ಯೆ, ಎಲ್ಲೆಲ್ಲೂ ಕಂಗೊಳಿಸುವ ಪುರಾತನ ಹಸಿರು ಕಾಡುಗಳಿಗೆ ಹೆಸರಾದದ್ದು. ಹಾಗಾಗಿ ಪ್ರವಾಹದ ವಿಷಯ ಇನ್ನೂ ಅಪರೂಪದ ಸಂಗತಿ ಇಲ್ಲಿ. ಹೆಚ್ಚು ಕಡಿಮೆ ದೇಶದ ಇಡೀ ಪೂರ್ವಭಾಗದಲ್ಲಿ ಮಳೆಮೋಡಗಳ ಜೊತೆ ಚಿಂತೆಮೋಡಗಳು ಕೂಡ ಕವಿದಿವೆ. ದೇಶದ ಆಚೆಕಡೆಯ ಮರುಭೂಮಿಗಳು ಬೆಂದು ಕಾದು ಅಲ್ಲಿನ ಕಾವುಮೋಡಗಳು ಮರುಭೂಮಿಯನ್ನು ದಾಟಿಬಿಟ್ಟಿವೆ. ಅವು ಈಚೆಕಡೆಯ ಸಮುದ್ರವನ್ನು ಸೇರಿಕೊಳ್ಳುವ ತಮ್ಮ ಹಿಗ್ಗಿನಲ್ಲಿ ಆಗಾಗ ಆಕಾಶದ ಹಾದಿಯಲ್ಲಿ ನಿಂತು ವಿರಮಿಸುತ್ತವೆ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ವಿಕ್ಟೋರಿಯಾ ರಾಜ್ಯದಲ್ಲಿ ಅಧಿಕ ಮಳೆ ಮತ್ತು ಪ್ರವಾಹವುಂಟಾಗಿದೆ. ಯಾವುದೊ ಸುದ್ದಿವಾಹಿನಿಯಲ್ಲಿ ಓದುವಂತೆ ಈ ವಾಕ್ಯವು ಕಾಣಬಹುದು. ಆದರೆ ಪ್ರವಾಹಪೀಡಿತ ಜನರಿಗೆ ತಮ್ಮ ನಿಜ ಜೀವನದಲ್ಲಿ ಮಳೆ ಮತ್ತು ಪ್ರವಾಹಗಳು ರುದ್ರ ಸಂಗೀತದ ಜೊತೆ ಮೇಳೈಸಿದ ನೃತ್ಯದಂತೆ ಅನುಭವವಾಗಿದ್ದರೆ ಅದೇನೂ ಸುಳ್ಳಲ್ಲ. ದೇಶದ ದಕ್ಷಿಣ-ಪೂರ್ವ ದಿಕ್ಕಿನಲ್ಲಿ ಹರಡಿರುವ ವಿಕ್ಟೋರಿಯಾ ರಾಜ್ಯದ ಜನರಿಗೆ ಮಳೆಯಿಂದ ಉಂಟಾದ ಪ್ರವಾಹವೆಂದರೆ ಅಪರೂಪದ ಸುದ್ದಿ. ಹಾಗೆ ನೋಡಿದರೆ ಈ ರಾಜ್ಯದಲ್ಲಿ ಅಷ್ಟೇನೂ ಮಳೆ ಬೀಳುವುದಿಲ್ಲ. ಆದರೆ ಬೇಕಾದಷ್ಟು ಪೊದೆಬೆಂಕಿ, ಕಾಡುಬೆಂಕಿ ಘಟನೆಗಳಿವೆ. ವಿಕ್ಟೊರಿಯಾ ರಾಜ್ಯವೆಂದರೆ ಒಣಗಿದ ಗಾಳಿ, ತೇವವಿಲ್ಲದ ವಾತಾವರಣ, ಮಳೆಯಿಲ್ಲದ ಒಣಪ್ರದೇಶ ಮತ್ತು ಪೊದೆಬೆಂಕಿಗೆ ಹೇಳಿಮಾಡಿಸಿದ ಪರಿಸರವೆಂದು ಎಲ್ಲರ ಅನಿಸಿಕೆ. ಅದು ನಿಜವಾಗಿದ್ದು ವರ್ಷ ೨೦೦೯ರ ಆದಿಯಲ್ಲಿ ಜರುಗಿದ ಪೊದೆಬೆಂಕಿಯಲ್ಲಿ ಜನರು, ಪ್ರಾಣಿಗಳು ಸತ್ತು, ಅಪಾರ ನಷ್ಟವಾಗಿ ಅದರ ಕರಾಳತೆಯನ್ನು ಜನರು ಈಗಲೂ ನೆನೆಸಿಕೊಳ್ಳುತ್ತಾರೆ.

ಆದರೆ ಈ ವಾರ ರಾಜ್ಯದ ಜನರಿಗೆ ಪ್ರಕೃತಿಯ ಮತ್ತೊಂದು ಮುಖವಾದ ಪ್ರವಾಹದ ದರ್ಶನವಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಲ್ಪ ಹೆಚ್ಚೇ ಮಳೆ ಬಿದ್ದು, ಚಳಿಯೂ ಕೂಡ ಮುಂದುವರೆದು ಇನ್ನಷ್ಟು ಬೀಳಲಿರುವ ಮಳೆಗೆ ಅಲ್ಲಿ ಎಡೆಯಿರಲಿಲ್ಲ. ಅಧಿಕ ಮಳೆ ಬಂತೇಬಂತು, ಎಲ್ಲ ನದಿಗಳು ಹರಿದು, ನೀರು ಇಂಗದೆ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ದಶಕಗಳ ಹಿಂದೆ ಈ ರೀತಿ ಪ್ರವಾಹವುಂಟಾಗಿತ್ತಂತೆ. ಅಂದರೆ ವಿಕ್ಟೊರಿಯಾ ರಾಜ್ಯದ ಈಗಿನ ತಲೆಮಾರಿನ ಎಷ್ಟೋ ಜನರಿಗೆ ಪ್ರವಾಹದ ಪರಿಚಯವೇ ಇರಲಿಲ್ಲ. ಹಾಹಾಕಾರವೆದ್ದಿರುವುದು ಸಹಜವೇ!

ವಿಕ್ಟೊರಿಯಾ ರಾಜ್ಯದ ಮುಖ್ಯಮಂತ್ರಿಗಳು ಮುಂಬರುವ ವರ್ಷಗಳಲ್ಲಿ ಮತ್ತಷ್ಟು ಪ್ರವಾಹಗಳು ಬರಲಿವೆ ಎಂದಿದ್ದಾರೆ. ಅಂದರೆ ಸಾವಿರಾರು ಜನರು ತಮ್ಮ ವಾಸಸ್ಥಳಗಳನ್ನು ಕುರಿತು ಗಂಭೀರವಾಗಿ ಆಲೋಚಿಸಬೇಕಿದೆ. ರಾಜ್ಯದ ಉತ್ತರದಲ್ಲಿರುವ ಗೋಲ್ಬೋರ್ನ್ ನದಿಯುಕ್ಕಿ, ಅದು ಮರ್ರೆ ನದಿ ಮತ್ತು ಮೇರಿಬಿರ್ನೋನ್ಗ್ ನದಿಯ ಪಾತ್ರಗಳನ್ನು ಹಿಗ್ಗಿಸಿ ನದಿ ನೀರು ಪಟ್ಟಣಗಳ ಬೀದಿಗಳಲ್ಲಿ ಹರಿದಿದೆ. ಸಹಜವಾಗಿ ಜನಜೀವನವು ಸ್ಥಗಿತವಾಗಿದೆ. ರಾಜ್ಯದ ಎರಡು ಮುಖ್ಯ ಅಣೆಕಟ್ಟುಗಳಲ್ಲಿ ಬಂಧಿಯಾದ ನೀರನ್ನು ಮುಕ್ತವಾಗಿಸಬೇಕಿದೆ. ಎಲ್ಡೋನ್ ಸರೋವರ ಪ್ರದೇಶದಲ್ಲಿ ಕೆಲಸ ಮಾಡುವ ನಮ್ಮ ಪರಿಚಯದವರೊಬ್ಬರು ಅವರ ಉದ್ಯೋಗ ಸಂಬಂಧಿತ ಕೆಲಸಕಾರ್ಯ ಬಿಟ್ಟು ಪ್ರವಾಹಬಾಧಿತರ ರಕ್ಷಣೆ ಮತ್ತು ಕ್ಷೇಮಕಾರ್ಯದಲ್ಲಿ ತೊಡಗಿದ್ದಾರೆ.

ಈ ಬಾರಿ ವಿಕ್ಟೊರಿಯಾ ರಾಜ್ಯವಷ್ಟೇ ಅಲ್ಲ ಅದರ ಕೆಳಗಿನ ಟಾಸ್ಮೆನಿಯಾ ರಾಜ್ಯದ ಭಾಗಗಳಲ್ಲೂ ಪ್ರವಾಹವುಂಟಾಗಿದೆ. ಟಾಸ್ಮೆನಿಯಾವು ಕಡಿಮೆ ಜನಸಂಖ್ಯೆ, ಎಲ್ಲೆಲ್ಲೂ ಕಂಗೊಳಿಸುವ ಪುರಾತನ ಹಸಿರು ಕಾಡುಗಳಿಗೆ ಹೆಸರಾದದ್ದು. ಹಾಗಾಗಿ ಪ್ರವಾಹದ ವಿಷಯ ಇನ್ನೂ ಅಪರೂಪದ ಸಂಗತಿ ಇಲ್ಲಿ. ಹೆಚ್ಚು ಕಡಿಮೆ ದೇಶದ ಇಡೀ ಪೂರ್ವಭಾಗದಲ್ಲಿ ಮಳೆಮೋಡಗಳ ಜೊತೆ ಚಿಂತೆಮೋಡಗಳು ಕೂಡ ಕವಿದಿವೆ. ದೇಶದ ಆಚೆಕಡೆಯ ಮರುಭೂಮಿಗಳು ಬೆಂದು ಕಾದು ಅಲ್ಲಿನ ಕಾವುಮೋಡಗಳು ಮರುಭೂಮಿಯನ್ನು ದಾಟಿಬಿಟ್ಟಿವೆ. ಅವು ಈಚೆಕಡೆಯ ಸಮುದ್ರವನ್ನು ಸೇರಿಕೊಳ್ಳುವ ತಮ್ಮ ಹಿಗ್ಗಿನಲ್ಲಿ ಆಗಾಗ ಆಕಾಶದ ಹಾದಿಯಲ್ಲಿ ನಿಂತು ವಿರಮಿಸುತ್ತವೆ. ಅಂತಹ ದಿನಗಳಲ್ಲಿ ಕಾವುಮೋಡಗಳು ತೆರೆದುಕೊಂಡು ಕೆಳಗಿನ ಭೂಮಿಯ ಮೇಲೆ ಮಳೆವೃಷ್ಟಿಯಾಗುತ್ತಿದೆ. ಅದು ಎಷ್ಟು ಕಡಿಮೆ ಅಥವಾ ಹೆಚ್ಚು ಎನ್ನುವುದು ಆಯಾ ಪ್ರದೇಶಗಳಲ್ಲಿರುವ ಜನಜೀವನವು ಹೇಳುತ್ತದೆ. ಕುತೂಹಲವೆಂದರೆ ಹೀಗೆ ಅಧಿಕ ಮಳೆ ಬೀಳುತ್ತಿದ್ದದ್ದು ಪ್ರಾದೇಶಿಕವಾಗಿ ಮಾತ್ರ. ಆದರೆ ಈ ವರ್ಷ ಇಡೀ ದೇಶವ್ಯಾಪಿ ಮಳೆ ಹಬ್ಬಿದ್ದು ಅದರಿಂದ ಆಗಿರುವ ಹಾವಳಿಗಳು ದೇಶೀಯಮಟ್ಟದ ಸುದ್ದಿ, ಸಮಸ್ಯೆಯಾಗಿದೆ. ಈ ಕಾರಣದಿಂದಲಾದರೂ ರಾಜಕೀಯ ಪಕ್ಷಗಳು ವೈಮಸ್ಯವನ್ನು ಪಕ್ಕಕ್ಕಿಟ್ಟು ಒಗ್ಗಟ್ಟಿನ ಭಾಷೆ ಮಾತನಾಡಬೇಕಿದೆ.

ಸೆಪ್ಟೆಂಬರ್ ತಿಂಗಳಿನಲ್ಲಿ ಸ್ವಲ್ಪ ಹೆಚ್ಚೇ ಮಳೆ ಬಿದ್ದು, ಚಳಿಯೂ ಕೂಡ ಮುಂದುವರೆದು ಇನ್ನಷ್ಟು ಬೀಳಲಿರುವ ಮಳೆಗೆ ಅಲ್ಲಿ ಎಡೆಯಿರಲಿಲ್ಲ. ಅಧಿಕ ಮಳೆ ಬಂತೇಬಂತು, ಎಲ್ಲ ನದಿಗಳು ಹರಿದು, ನೀರು ಇಂಗದೆ ಜನವಸತಿ ಪ್ರದೇಶಗಳಿಗೆ ನುಗ್ಗಿದೆ. ದಶಕಗಳ ಹಿಂದೆ ಈ ರೀತಿ ಪ್ರವಾಹವುಂಟಾಗಿತ್ತಂತೆ. ಅಂದರೆ ವಿಕ್ಟೊರಿಯಾ ರಾಜ್ಯದ ಈಗಿನ ತಲೆಮಾರಿನ ಎಷ್ಟೋ ಜನರಿಗೆ ಪ್ರವಾಹದ ಪರಿಚಯವೇ ಇರಲಿಲ್ಲ. ಹಾಹಾಕಾರವೆದ್ದಿರುವುದು ಸಹಜವೇ!

ವಿಕ್ಟೊರಿಯಾದ ಮಳೆ ಪ್ರವಾಹವನ್ನು ಕುರಿತು ವಿಶ್ಲೇಷಿಸಿ ಈ ವಾರ ಪರಿಸರತಜ್ಞರು, ಇತಿಹಾಸಕಾರು ಮಾತನಾಡಿದ್ದಾರೆ. ತಮ್ಮ ವಸಾಹತುಶಾಹಿ ಕಾಲದ ಹತ್ತೊಂಭತ್ತನೆ ಮತ್ತು ಸರಕಾರ ರಚನೆ ವ್ಯವಸ್ಥೆ ಜಾರಿಗೆ ಬಂದ ಇಪ್ಪತ್ತನೆ ಶತಮಾನದ ಕಾಲಘಟ್ಟಗಳಲ್ಲಿ ಬ್ರಿಟಿಷರು ಆಸ್ಟ್ರೇಲಿಯಾದಲ್ಲಿ ನಗರಗಳನ್ನು, ಪಟ್ಟಣಗಳನ್ನು ಕರಾರುವಕ್ಕಾಗಿ ಯೋಜಿಸಿ ನಿರ್ಮಿಸಿದರು. ಅಂತಹ ಯೋಜನೆಗಳಲ್ಲಿ ಅವರಿಗೆ ಮುಖ್ಯವಾದದ್ದು ತಮ್ಮ ತವರು ದೇಶ ಇಂಗ್ಲೆಂಡಿನ ಮಾದರಿ. ಅಂದರೆ ನದಿಗಳ ಸುತ್ತ ನಗರ, ಪಟ್ಟಣಗಳಿರಬೇಕು, ವ್ಯಾಪಾರ ವಾಣಿಜ್ಯ ಕಾರ್ಯಗಳಿಗೆ ಹಡಗುಗಳ ಓಡಾಡುವಿಕೆ ಸುಲಭವಾಗಿರಬೇಕು. ಇಂತಹ ಯೋಜನೆಗಳಿಗೆ ಪೂರಕವಾಗಿ ಅವರು ಅಣೆಕಟ್ಟುಗಳನ್ನು ನಿರ್ಮಿಸುವುದು, ನದಿಗಳ ಹರಿಯುವಿಕೆಯ ದಿಕ್ಕನ್ನು ಬದಲಾಯಿಸುವುದು, ಅವುಗಳ ಪಾತ್ರಗಳನ್ನು ನಿಯಂತ್ರಿಸುವುದು ಮಾಡಿದರು. ಈಗ ಹೆಚ್ಚುತ್ತಿರುವ ಪ್ರವಾಹಗಳಲ್ಲಿ ಅವರ ನದಿಗಳನ್ನು, ಪ್ರಕೃತಿಯನ್ನು ನಿಯಂತ್ರಿಸುವ ನಿರ್ಧಾರಗಳ ಮತ್ತು ಯೋಜನೆಗಳ ಪರಿಣಾಮ ಕಾಣುತ್ತಿದೆ. ಪ್ರಕೃತಿ ಮೇಲಿನ ವಿಜಯದ ಮಾನವರ ಅಹಂಕಾರದ ಬಗ್ಗೆ ಪ್ರವಾಹದಿಂದ ಈ ವರ್ಷ ವಸತಿಹೀನರಾಗಿರುವ ಆಸ್ಟ್ರೇಲಿಯನ್ ಅಬೊರಿಜಿನಲ್ ಸಮುದಾಯಗಳ ಮುಖಂಡರು ಪ್ರಸ್ತಾಪಿಸಿದ್ದಾರೆ. ಅವರ ದನಿ ದೊಡ್ಡದಾಗಬೇಕಿದೆ.

ವಿಕ್ಟೊರಿಯಾ ರಾಜ್ಯದ ಮೇಲಿರುವ ನ್ಯೂ ಸೌತ್ ವೇಲ್ಸ್ ರಾಜ್ಯ ಮತ್ತು ಅದರ ತಲೆ ಮೇಲಿರುವ ನಮ್ಮ ಕ್ವೀನ್ಸ್‌ಲ್ಯಾಂಡ್ ರಾಜ್ಯಗಳಲ್ಲಿ ಮಳೆ-ಪ್ರವಾಹಗಳು ಸಾಧಾರಣ ವಿಷಯವಾಗಿಬಿಟ್ಟಿದೆ. ಇದೆ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಉಂಟಾದ ಪ್ರವಾಹದಿಂದ ನಗರದಲ್ಲಿ ವಾಸಿಸುವ ನಮ್ಮಂತಹ ಸರ್ವೇಸಾಧಾರಣ ಮಂದಿಯ ಜೀವನದಲ್ಲೂ ಅಲ್ಲೋಲಕಲ್ಲೋಲವುಂಟಾಗಿತ್ತು. ವಾರವೆಲ್ಲ ನಿದ್ದೆಗೆಟ್ಟು ಮನೆಯೊಳಗೆ ನೀರು ನುಗ್ಗದಂತೆ ಎಚ್ಚರವಹಿಸಿ, ಅದೇನೆಲ್ಲಾ ಸರ್ಕಸ್ ಮಾಡಿದ್ದೆವು!

ಈಗಂತೂ ಇನ್ನೇನು ಬೇಸಿಗೆ ಕಾಲಿಡಲಿದೆ. ಬೇಸಿಗೆಯಲ್ಲಿ ಮಳೆ ಬೀಳುವುದು ಸಾಮಾನ್ಯ. ಆದರೆ ಕಳೆದೆರಡು ವರ್ಷಗಳಿಂದ ಲಾ ನಿನಾ ಸೈಕ್ಲೋನ್ ಚುರುಕಾಗಿದ್ದು ನಮ್ಮಲ್ಲೂ ಮಳೆ ಮತ್ತು ಪ್ರವಾಹಗಳು ಮುಂದುವರೆದಿವೆ. ಈ ಬೇಸಗೆಯಲ್ಲೂ ಕೂಡ ನಾವೆಲ್ಲಾ ಕಡುಎಚ್ಚರ ವಹಿಸಬೇಕೆಂದು ಸರಕಾರವು ಹೇಳುತ್ತಿದೆ. ಮೊನ್ನೆ ಹೇಳಿಕೆಯೊಂದರಲ್ಲಿ ನಮ್ಮ ರಾಣಿರಾಜ್ಯದ ಮುಖ್ಯಮಂತ್ರಿಗಳು ಇನ್ನೆರೆಡು ವಾರಗಳಲ್ಲಿ ರಾಜಧಾನಿಯಾಚೆ ಇರುವ ಅಣೆಕಟ್ಟಿನ ಹೆಚ್ಚುವರಿ ಬಾಗಿಲುಗಳನ್ನು ತೆರೆದು ನೀರನ್ನು ಹೊರ ಬಿಡುವುದಾಗಿ ಹೇಳಿದ್ದಾರೆ. ಆಗ ಬ್ರಿಸ್ಬೇನ್ ನದಿಯ ಆಚೆಈಚೆ ಪ್ರದೇಶಗಳಲ್ಲಿ, ಅಲ್ಲಲ್ಲಿರುವ ತೊರೆಗಳಲ್ಲಿ ನೀರಿನ ಮಟ್ಟ ಹೆಚ್ಚಲಿದೆ. ಅವುಗಳ ತೀರಗಳಲ್ಲಿ ನೆಲೆಸಿರುವ ಜನರು ಜಾಗ್ರತೆಯಿಂದಿರಬೇಕು, ಅದಕ್ಕಾಗಿ ಏನೆಲ್ಲಾ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿದೆಯೊ ಅದನ್ನೆಲ್ಲ ಮಾಡಿ, ಎಂದು ಅವರು ಎಚ್ಚರಿಸಿದ್ದಾರೆ. ಈ ಬಗೆಯ ಎಚ್ಚರ ಬಹಳ ಮುಖ್ಯ. ಏಕೆಂದರೆ ಹನ್ನೆರಡು ವರ್ಷಗಳ ಹಿಂದೆ ನಮ್ಮ ಬ್ರಿಸ್ಬೇನ್ ನಗರದ ಹೊರವಲಯಗಳಲ್ಲಿ ಅಧಿಕ ಮಳೆಯುಂಟಾಗಿ ಆಗಿನ ಸರಕಾರವು ಹೀಗೆ ಎಚ್ಚರ ಕೊಡದೆ ಇದ್ದಕ್ಕಿದ್ದಂತೆ ಅಣೆಕಟ್ಟಿನ ಬಾಗಿಲು ತೆರೆದು ಹರಿದ ನೀರು ನಗರದೊಳಗೆ, ಅಕ್ಕಪಕ್ಕದ ಪಟ್ಟಣಗಳಿಗೆ ನುಗ್ಗಿ ಅಪಾರ ತೊಂದರೆಯಾಗಿತ್ತು. ಜನರಿಗೆ ವಿಪರೀತ ಕೋಪ ಬಂದು ಅದರ ಫಲಿತಾಂಶವು ಮುಂದಿನ ಚುನಾವಣೆಯಲ್ಲಿ ಕಾಣಿಸಿ, ಆಗಿದ್ದ ಮುಖ್ಯಮಂತ್ರಿಗಳು ತಮ್ಮ ರಾಜಕೀಯ ಜೀವನಕ್ಕೆ ವಿದಾಯ ಹೇಳಿದರು.

ಸರಕಾರದ ಮುನ್ನೆಚ್ಚರಿಕೆ ಮಾತು ಕೇಳಿ ನಾವು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದೀವಿ. ಮತ್ತೊಮ್ಮೆ ಮನೆ ಸುತ್ತ ಕಂದಕ ತೊಡುತ್ತಿದ್ದೀವಿ. ಅಂಗಳದಲ್ಲಿ ಬೀಳುವ ಹೆಚ್ಚಿನ ಮಳೆ ನೀರು ಕಂದಕದಲ್ಲಿ ಹರಿದುಹೋಗುವಂತೆ ವ್ಯವಸ್ಥೆ ಮಾಡುತ್ತಿದ್ದೀವಿ. ನಾವೀಗಾಗಲೇ ಮುಂಗಡ ಹಣ ಕೊಟ್ಟು ಕಾದಿರಿಸಿರುವ ಕ್ಯಾಂಪ್ ಸೈಟ್ ನಲ್ಲಿ ಮಳೆ ಪರಿಸ್ಥಿತಿ ಹೇಗಿರುತ್ತದೋ ತಿಳಿಯದು. ನಾವು ತೆರೆದ ಪ್ರದೇಶದಲ್ಲಿ ಟೆಂಟ್ ಹೊಡೆದುಕೊಂಡು ಇರುವುದರಿಂದ ಮಳೆಗಾಳಿಗೆ ಸಿಲುಕುವುದು ಸಹಜವೆ. ಈ ಬಾರಿ ಅದು ವಿಪರೀತವಾದರೆ ಏನು ಮಾಡುವುದು, ಹೋಗುವುದೊ, ಬೇಡವೋ, ಮನೆಕಡೆ ವ್ಯವಸ್ಥೆ ಮುಖ್ಯವೋ ಏನು, ಯಾರಿಗೆ ಅದರ ಜವಾಬ್ದಾರಿ ಒಪ್ಪಿಸುವುದು ಎಂದೆಲ್ಲ ಚಿಂತಿಸಿ ಕ್ಯಾಂಪ್ ಸೈಟ್ ಆಫೀಸಿನವರಿಗೆ ಫೋನ್ ಮಾಡಿ ಮಳೆ ಬಗ್ಗೆ ವಿಚಾರಿಸಿದರೆ ‘ಅದು ನಿಮ್ಮ ನಿರ್ಧಾರಕ್ಕೆ ಬಿಟ್ಟದ್ದು, ಮಳೆ ಬರುವುದು ಇದ್ದೆ ಇದೆ, ಅದಕ್ಕಾಗಿ ನಾವು ಹೆದರಿ ಕೂರುವುದಿಲ್ಲ,’ ಎಂದರು. ಸರಿ ನಮ್ಮ ಜವಾಬ್ದಾರಿ ನಮಗೆ ಸೇರಿದ್ದು ಎಂದು ನಮ್ಮ ಮನೆ-ರಕ್ಷಣಾ ಸುರಕ್ಷತೆ ಕೆಲಸಗಳನ್ನು ಮುಂದುವರೆಸಿದ್ದೀವಿ.

ಪ್ರಕೃತಿ ಮಾಯೆ, ಆಟಗಳೆಂದರೆ ಅದೆ ಅಲ್ಲವೆ – ಒಮ್ಮೆ ಪೊದೆಬೆಂಕಿ, ಮತ್ತೊಮ್ಮೆ ಮಳೆಪ್ರವಾಹ. ಬೆಟ್ಟದಾ ತುದಿಯಲ್ಲಿ ಮನೆಮಾಡಿ ಗಾಳಿಗೆ ಅಂಜಿದರೆ ಹೇಗೆ, ನದಿ ಪಕ್ಕದಲ್ಲಿ ವಾಸ ಹೂಡಿ ಅಲೆಗೆ ಅಂಜಿದರೆ ಹೇಗೆ, ಬಯಲಿನಲ್ಲಿ ಟೆಂಟ್ ಹೊಡೆದು ಮಳೆಗೆ ಅಂಜಿದರೆ ಹೇಗೆ… ಆಟವಾಡುವುದು ಮುಖ್ಯ, ಸೋಲುಗೆಲುವು ಇದ್ದೆ ಇರುತ್ತದೆ. ನಾವು ಮಣಿದು ಪ್ರಕೃತಿಯೊಂದಿಗೆ ಒಂದಾಗಿ ಬಾಳಬೇಕು.