ಈ ಬಾರಿ ನಾವು ಹೂಡಿದ ‘ಅಡಿಗೆಮನೆ’ ಇದ್ದದ್ದು ಮರಗಳ ಅಂಚಿನಲ್ಲಿ. ಈ ಅಂಚಿನ ಆಚೆ ಕಡೆ ನೂರು ಮೀಟರ್ ದೂರದಲ್ಲಿ ನೀರಿಲ್ಲದೆ ಬೇಸಿಗೆಯ ಬಿಸಿಲಿಗೆ ಸೊರಗಿದ್ದ ನದಿಯಿತ್ತು. ಕಳೆದ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಸಂಭವಿಸಿದ ಅಧಿಕ ಮಳೆ-ಜಲ ಪ್ರವಾಹದಲ್ಲಿ ಈ ನದಿ ಉಕ್ಕೇರಿ ಆ ನೂರೂ ಮೀಟರ್ ದೂರವನ್ನಾಕ್ರಮಿಸಿಕೊಂಡು ಈ ಮರಗಳ ಅಂಚಿನ ತನಕ ಬಂದಿತ್ತು ಎನ್ನುವುದು ಅಲ್ಲಿ ಚೆಲ್ಲಾಡಿದ್ದ ಮರಕೊಂಬೆಗಳು, ರೆಂಬೆಗಳಿಂದ ಸ್ಪಷ್ಟವಾಗಿತ್ತು. ನಾವೇನೋ ಖುಷಿಯಿಂದಲೇ ಅಲ್ಲಿ ಅಡಿಗೆಮನೆ ಮತ್ತು ನೆಲದ ಹಾಸುಗಳನ್ನು ಸ್ಥಾಪಿಸಿದ್ದೆವು. ಒಂದೆರೆಡು ದಿನಗಳಲ್ಲಿ ಬಿದ್ದ ಮಳೆಯಿಂದ ನಮ್ಮ ಖುಷಿ ಕಡಿಮೆಯಾಯ್ತು. ನೆಲದ ಹಾಸು ಮಳೆನೀರು, ಮಣ್ಣಿನ ರಾಡಿಯಾಗಿತ್ತು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

ಆಸ್ಟ್ರೇಲಿಯಾದ ಕೆಲವೆಡೆ ಜನರು ವರ್ಷಪೂರ್ತಿ ಕ್ಯಾಂಪಿಂಗ್ ಸುಖವನ್ನು ಅನುಭವಿಸುತ್ತಾರೆ. ಇವರು ಕಟ್ಟಾ ಬದ್ಧತೆಯುಳ್ಳ ಕ್ಯಾಂಪಿಗರಾಗಿರಬಹುದು ಅಥವಾ ಬಿಸಿಲು ಹೆಚ್ಚಿರುವ ಪ್ರದೇಶಗಳಲ್ಲಿ ಸದಾ ತೆರೆದಿರುವ ಕ್ಯಾಂಪ್ ಸೈಟ್‌ಗಳ ಲಾಭ ಪಡೆಯುವವರಾಗಿರಬಹುದು. ದೇಶದಾದ್ಯಂತ ಸ್ವಲ್ಪ ದುಬಾರಿಯಾದ ಖಾಸಗಿ ಕ್ಯಾಂಪ್ ಸೈಟ್‌ಗಳಲ್ಲದೆ ಅಲ್ಪ ದರದಲ್ಲಿ ದೊರಕುವ ಸ್ಥಳೀಯ ನಗರಪಾಲಿಕೆಗಳು ಮತ್ತು ಪರಿಸರ ಇಲಾಖೆಗಳು ನಡೆಸುವ ಸಾವಿರಾರು ಕ್ಯಾಂಪ್ ಸೈಟ್‌ಗಳಿವೆ. ನಗರಗಳಲ್ಲಿ, ಪಟ್ಟಣಗಳಲ್ಲಿ, ನಿಗದಿತ ಅರಣ್ಯಪ್ರದೇಶಗಳಲ್ಲಿ ಮತ್ತು ಸಮುದ್ರ ತೀರಗಳಲ್ಲಿ, ಖಾಸಗಿ ಫಾರ್ಮ್‌ಗಳಲ್ಲಿ ಎಂಬಂತೆ ಇವು ಲಭ್ಯವಿವೆ. ಇದರ ಪ್ರಯೋಜನವನ್ನು ಪಡೆಯುವ ಜನರೂ ಕೂಡ ತರಾವರಿಯಾಗಿರುತ್ತಾರೆ.

ಪ್ರತಿಯೊಂದು ಕ್ಯಾಂಪ್ ಸೈಟ್ ಒಂದರಿಂದ ಮತ್ತೊಂದು ವಿಭಿನ್ನವಾಗಿರುತ್ತದೆ ಎನ್ನುವುದು ನನ್ನ ಸ್ವಂತ ಅನುಭವ. ಅದು ನಾವು ಕ್ಯಾಂಪ್ ಹೂಡುವ ಸ್ಥಳದಿಂದ ಹಿಡಿದು, ಕ್ಯಾಂಪಿಂಗ್ ಸಾಧನಗಳು, ಕ್ಯಾಂಪ್ ಸ್ಥಾಪಿಸಲು ಬೇಕಿರುವ ಕೆಲ ಕೌಶಲ್ಯಗಳು, ಜೊತೆಗಿರುವ ಕ್ಯಾಂಪಿಗರು, ಅವರ ದೃಷ್ಟಿಕೋನಗಳನ್ನು ಒಳಗೊಂಡಿರುತ್ತದೆ. ಇಷ್ಟೇ ಅಲ್ಲ ಇನ್ನೂ ಕೆಲವು ವಿಷಯಗಳಿವೆ. ನಾವು ಟೆಂಟ್ ಬಳಸುತ್ತೇವೊ, caravan ಅಥವಾ ಕ್ಯಾಂಪವ್ಯಾನ್ ಇರುವವರೋ, ಸಣ್ಣ ಪ್ರಮಾಣದ ಕ್ಯಾಂಪಿಗರಾಗಿದ್ದು ಕ್ಯಾಂಪ್ ಸೈಟ್‌ನಲ್ಲಿರುವ ಸೌಲಭ್ಯಗಳನ್ನು ಬಳಸುತ್ತೇವೋ ಇಲ್ಲಾ ದೊಡ್ಡದಾಗಿ ಸೆಟ್‌ಅಪ್ ಹೂಡಿಕೊಂಡು ನಮ್ಮದೇ ಆದ ಶವರ್, ಟಾಯ್ಲೆಟ್, ನೀರು ವ್ಯವಸ್ಥೆ ಮಾಡಿಕೊಳ್ಳುವವರೋ ಇದೆಲ್ಲವೂ ಸೇರಿರುತ್ತದೆ. ಅದರ ಜೊತೆಗೆ ಇತ್ತೀಚೆಗಂತೂ ದೊಡ್ಡ, ಸಣ್ಣ ಪ್ರಮಾಣದ ಕ್ಯಾಂಪಿಗರು ಸೋಲಾರ್ ಪ್ಯಾನೆಲ್‌ಗಳನ್ನೂ ಇಟ್ಟುಕೊಂಡು ತಮ್ಮದೇ ಆದ ವಿದ್ಯುಚ್ಛಕ್ತಿ ಉತ್ಪಾದನೆ ಕೂಡ ಮಾಡಿಕೊಂಡು ಪುಟಾಣಿ ಫ್ರಿಡ್ಜ್ ಇತ್ಯಾದಿಗಳನ್ನೂ ಕೊಂಡೊಯ್ಯುತ್ತಾರೆ. ಇದು ಗ್ಲಾಮ್ಪಿಂಗ್ (glamping) ಎಂದು ಕರೆಸಿಕೊಳ್ಳುತ್ತದೆ. ಸರಳವಾಗಿ ವಿದ್ಯುಚ್ಛಕ್ತಿಯಿಲ್ಲದ ಟೆಂಟ್ ಸೈಟ್ ಹಿಡಿದು ಟೆಂಟ್ ಹೊಡೆದುಕೊಂಡು ಬಿಸಿಲು-ಮಳೆಯ ಜೊತೆ ಒಂದಷ್ಟು ದಿನ ಇದ್ದುಕೊಂಡು ಬರುವುದು ನಮಗೆ ಅಭ್ಯಾಸವಾಗಿರುವ ಕ್ಯಾಂಪಿಂಗ್ ಅನುಭವ.

ಈ ಬಾರಿ ಕ್ಯಾಂಪಿಂಗ್ ಹೋದಾಗ ಮೊದಲ ಸಂಜೆ ಕ್ಯಾಂಪ್ ಸೈಟಿನಲ್ಲಿ ಟೆಂಟ್ ಸ್ಥಾಪಿಸಿದ ಕೂಡಲೇ ಮಾಡಿದ ಕೆಲಸವೆಂದರೆ ಟೀ ಮಾಡಿಕೊಂಡು ಕುಡಿದಿದ್ದು. ಹಾಗೆಂದು ನಾನೇನೂ ದಿನನಿತ್ಯವೂ ಟೀ ಕುಡಿಯುವುದಿಲ್ಲ. ಆದರೆ ಆವತ್ತು ಟೀ ಮಾಡುವುದಕ್ಕಾಗಿ ಕಾಯುತ್ತಿದ್ದೆ. ಯಾಕೆಂದರೆ ನನ್ನ ಜೊತೆಗೆ Kelly ಬಂದಿತ್ತಲ್ಲ! ಇದೇ ವರ್ಷ ಹೊಸದಾಗಿ ಕೊಂಡಿದ್ದ Kelly Kettle ಹೊರತೆಗೆದು ಒಂದೆಡೆ ಕೂರಿಸಿ ಬೆಂಕಿ ತಯಾರಿಸಿದಾಗ ಮಗನ ಕತ್ತು ಅದರ ಕಡೆ ತಿರುಗಿತು. ಕೆಲ್ಲಿ ಅಡಿಯ ಬಟ್ಟಲಿನಿಂದ ಬೆಂಕಿಯ ಕೆನ್ನಾಲಿಗೆ ಮೇಲಕ್ಕೇರಿ ಆಗೀಗ ಹೊರಗಿಣುಕುತ್ತಿತ್ತು. ತಣ್ಣೀರು ತುಂಬಿದ್ದ ಭಾಗದಿಂದ ನೀರು ಕುದಿಯುವ ಶಬ್ದ ಕೇಳಲಾರಂಭಿಸುತ್ತಿದ್ದಂತೆ ನಾನು ‘ಬಿಸಿನೀರು ರೆಡಿ’ ಎಂದೆ. ಮಗರಾಯ, ನಾನು ಬಿಸಿಬಿಸಿ ಟೀ ಮಾಡಿಕೊಂಡು ಕಾಲು ಚಾಚಿ ಕೂತು ನಮ್ಮನ್ನು ಸುತ್ತುವರೆದಿದ್ದ ಹಸಿರನ್ನು ವೀಕ್ಷಿಸಿದಾಗ ಅದೇನೋ ಸಂತೃಪ್ತಿ ಭಾವನೆ. ಆಹಾ, ನಮ್ಮ ಕ್ಯಾಂಪಿಂಗ್ ಆರಂಭವಾಯ್ತು! ಪಕ್ಕದಲ್ಲೇ ಇದ್ದ Kelly Kettle ಕಡೆಗೆ ಕಣ್ಣು ಹೊರಳಿದಾಗ ಅದರ ಬಗ್ಗೆ ಹೆಮ್ಮೆ, ಮೆಚ್ಚುಗೆ.

ಇಂಗ್ಲೆಂಡಿನಲ್ಲಿದ್ದಾಗ ಕೇಳುತ್ತಿದ್ದ ‘ಪ್ರತಿಯೊಬ್ಬ ಕ್ಯಾಂಪಿಗರ ಬಳಿ Kelly ಇರಬೇಕೆಂಬ’ ಮಾತು ನಿಜ ಎಂದು ಮತ್ತೊಮ್ಮೆ ನನಗೆ ನಾನೇ ಹೇಳಿಕೊಂಡೆ. ಕ್ಯಾಂಪ್ ಸೈಟಿನ ಒಂದಿಬ್ಬರ ಕಣ್ಣು ಕೆಲ್ಲಿಯ ಮೇಲೆ ನೆಟ್ಟಾಗ ‘ಮುದ್ದು ಪುಟಾಣಿ, ಕ್ಯಾಂಪಿಗರ ರಾಣಿ’ ಎಂದು ಹೊಸ ಹಾಡು ಕಟ್ಟಿದೆ. ಆಸ್ಟ್ರೇಲಿಯಾದಲ್ಲಿ ಹೆಸರಾಗಿರುವುದು Billy kettle, ಅಂದರೆ ಮುಚ್ಚಳವಿರುವ ಒಂದು ಬಕೆಟ್ ಮಾದರಿಯ ನೀರು ಬಿಸಿ ಮಾಡಲು ಬೆಂಕಿಯ ಮೇಲಿಡುವ ಕೆಟಲ್. ತನ್ನಡಿಯ ಬಟ್ಟಲಿನಲ್ಲೇ ಬೆಂಕಿಯಿಟ್ಟುಕೊಂಡು ಮೈಭಾಗದಲ್ಲಿ ನೀರು ಕಾಯಿಸುವ ವಿಶೇಷ ಐರಿಶ್ ಮಾದರಿಯಾದ Kelly Kettle ಇನ್ನೂ ಅಷ್ಟೊಂದು ಪರಿಚಿತವಾಗಿಲ್ಲವೆಂಬ ವಿಷಯ ನೆನಪಾಯ್ತು.

(Kelly Kettle)

ನಾನು ಇಂಗ್ಲೆಂಡಿನಲ್ಲಿ Forest Schools ಕೋರ್ಸ್ ಮಾಡುವಾಗ, ಹೊರಾಂಗಣ ಶಿಕ್ಷಣ ಮತ್ತು ಪ್ರಕೃತಿಯಾಧಾರಿತ ಕಲಿಕೆಯಲ್ಲಿ ತರಬೇತಿ ಪಡೆಯುತ್ತಿದ್ದಾಗ Kelly Kettle ಪರಿಚಯವಾಯ್ತು. ಅದನ್ನು ಎಲ್ಲಾ ಥರದ ಹವಾಮಾನದಲ್ಲಿ ಬಳಸುವುದರ ಬಗ್ಗೆ ಹೇಳಿಕೊಟ್ಟಿದ್ದರು. ಸಣ್ಣ ಕಡ್ಡಿ, ಒಣಎಲೆ, ಹುಲ್ಲು ಇತ್ಯಾದಿಗಳನ್ನು ಶೇಖರಿಸಿ ಕೆಲ್ಲಿಯ ಬುಡದ ಬಟ್ಟಲಿಗೆ ತುಂಬಿ ಕೇವಲ Flint and Steel (Firestarter) ಬಳಸಿ ಬೆಂಕಿ ತಯಾರು ಮಾಡುವುದು (ಚಿತ್ರಗಳನ್ನು ಗಮನಿಸಿ). ಈ ಬಟ್ಟಲಿನಲ್ಲಿ ಉರಿಯುವ ನೇರ ಬೆಂಕಿಯಿಂದ ಆಹಾರ ಬೇಯಿಸಿಕೊಳ್ಳುವುದು. ಬಟ್ಟಲಿನ ಮೇಲೆ ಕೂರುವ ಕೆಲ್ಲಿಯ ಮೈ ಮುಖ್ಯ ಭಾಗವು ಒಂದು ಚಿಮಿಣಿ. ಒಮ್ಮೆ ಬುಡದ ಬಟ್ಟಲಿನಲ್ಲಿ ಬೆಂಕಿ ಮಾಡಿದ ಮೇಲೆ ಅದರ ಮೇಲೆ ಕೆಲ್ಲಿಯ ಮೈಭಾಗವನ್ನು ಕೂರಿಸಿ ಚಿಮಿಣಿ ಮೂಲಕವೇ ಮೇಲಿನಿಂದ ನಾವು ಕಡ್ಡಿ, ಹುಲ್ಲು, ಎಲೆ ಇತ್ಯಾದಿಗಳನ್ನು ಹಾಕುತ್ತಾ ಬೆಂಕಿ ಉರಿಸುತ್ತಿರಬೇಕು. ಮೈಭಾಗದ ಪಾರ್ಶ್ವದಲ್ಲಿರುವ ನೀರಿನ ಭಾಗದಲ್ಲಿ ನೀರು ಕುದ್ದು ಬಿಸಿನೀರು ತಯಾರಾಗುತ್ತದೆ. ಕಠಿಣ ಪರಿಸರದಲ್ಲಿ ಕ್ಯಾಂಪ್ ಹೂಡುವವರ ಬಳಿ ಈ ರೀತಿ ಒಂದು ಸರಳವಾದ Kelly Kettle ಇದ್ದರೆ ಬಿಸಿನೀರು, ಬೆಂದ ಆಹಾರ ಎರಡೂ ಸುಲಭವಾಗಿ ದಕ್ಕುತ್ತದೆ. ಈ ಬಾರಿ ನಾವು ಬಿಸಿನೀರಿಗಾಗಿ ಮಾತ್ರ ಅದನ್ನು ಬಳಸಿದೆವು.

ಈ ಬಾರಿ ನಾವು ಹೂಡಿದ ‘ಅಡಿಗೆಮನೆ’ ಇದ್ದದ್ದು ಮರಗಳ ಅಂಚಿನಲ್ಲಿ. ಈ ಅಂಚಿನ ಆಚೆ ಕಡೆ ನೂರು ಮೀಟರ್ ದೂರದಲ್ಲಿ ನೀರಿಲ್ಲದೆ ಬೇಸಿಗೆಯ ಬಿಸಿಲಿಗೆ ಸೊರಗಿದ್ದ ನದಿಯಿತ್ತು. ಕಳೆದ ಫೆಬ್ರವರಿ-ಮಾರ್ಚ್ ತಿಂಗಳುಗಳಲ್ಲಿ ಸಂಭವಿಸಿದ ಅಧಿಕ ಮಳೆ-ಜಲ ಪ್ರವಾಹದಲ್ಲಿ ಈ ನದಿ ಉಕ್ಕೇರಿ ಆ ನೂರೂ ಮೀಟರ್ ದೂರವನ್ನಾಕ್ರಮಿಸಿಕೊಂಡು ಈ ಮರಗಳ ಅಂಚಿನ ತನಕ ಬಂದಿತ್ತು ಎನ್ನುವುದು ಅಲ್ಲಿ ಚೆಲ್ಲಾಡಿದ್ದ ಮರಕೊಂಬೆಗಳು, ರೆಂಬೆಗಳಿಂದ ಸ್ಪಷ್ಟವಾಗಿತ್ತು. ನಾವೇನೋ ಖುಷಿಯಿಂದಲೇ ಅಲ್ಲಿ ಅಡಿಗೆಮನೆ ಮತ್ತು ನೆಲದ ಹಾಸುಗಳನ್ನು ಸ್ಥಾಪಿಸಿದ್ದೆವು. ಒಂದೆರೆಡು ದಿನಗಳಲ್ಲಿ ಬಿದ್ದ ಮಳೆಯಿಂದ ನಮ್ಮ ಖುಷಿ ಕಡಿಮೆಯಾಯ್ತು. ನೆಲದ ಹಾಸು ಮಳೆನೀರು, ಮಣ್ಣಿನ ರಾಡಿಯಾಗಿತ್ತು. ಪಕ್ಕದ ಮರಗಳ ಅಂಚಿನ ರೆಂಬೆಕೊಂಬೆಗಳ ಶೇಖರಣೆಯಿಂದ (debris) ಹೊರಬಿದ್ದ ticks ಮೈಮೇಲೆ ಅಂಟಿಕೊಂಡು ನಮಗೆ ಕಾಟ ಕೊಟ್ಟವು. Bushman ಸ್ಪ್ರೇ ಉಪಯೋಗಿಸುತ್ತಾ ಮುಂದಿನ ಮೂರು ದಿನಗಳನ್ನು ದೂಡಿದೆವು. ಹೆಚ್ಚಾಗಿ ದಿನಪೂರ್ತಿ ನದಿಯಲ್ಲಿ, ಆ ಪ್ರದೇಶದ ಜಲಪಾತಗಳಲ್ಲಿ, vineyard ಮತ್ತಿತರ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿಕೊಡುವುದರಲ್ಲಿ ಸಮಯ ಕಳೆದಿದ್ದರಿಂದ ticks ಕಚ್ಚುವಿಕೆ ಕಡಿಮೆಯಾಯ್ತು. ಅಷ್ಟರಲ್ಲಿ ನಾವು ನಿರ್ಧಾರ ಮಾಡಿದಂತೆ ಕ್ಯಾಂಪಿಂಗ್ ಸಾಧನಗಳ ಅಂಗಡಿಗೆ ಹೋಗಿ gazebo ಖರೀದಿಸಿ ನಮ್ಮ ಟೆಂಟ್ ಸ್ಥಳದಲ್ಲಿದ್ದ ಹುಲ್ಲುಹಾಸಿನ ಮೇಲೆ ಅದನ್ನು ಸ್ಥಾಪಿಸಿದೆವು. ಇದರಡಿಗೆ ನಮ್ಮ ಅಡಿಗೆಮನೆ ಮತ್ತು ನೆಲಹಾಸುಗಳ ವರ್ಗಾವಣೆಯಾಯ್ತು. ಈ gazebo ಸೇರ್ಪಡೆ ನಮ್ಮ ಸರಳ ಕ್ಯಾಂಪಿಂಗ್ ಉದ್ದೇಶಕ್ಕೆ ವಿರುದ್ಧವಾಯ್ತಲ್ಲ ಎಂದು ಒಂದಷ್ಟು ಚರ್ಚೆ ನಡೆದರೂ ಕಡೆಗೆ ಅದರ ಪರವಾಗೇ ಮನಸ್ಸು ವಾಲಿತ್ತು. ಇದಕ್ಕೆ ಮುಖ್ಯ ಕಾರಣೀಭೂತರಾದ ticks ಸಮುದಾಯಕ್ಕೆ ನಮ್ಮ ರಕ್ತ ಹೀರುವ ಸದವಕಾಶ ತಪ್ಪಿಹೋಯ್ತಲ್ಲ ಎಂದು ನಿರಾಶೆಯಾಗಿರಬೇಕು.

ನಾವು ಕ್ಯಾಂಪ್ ಹೂಡಿದ ಸ್ಥಳವಿದ್ದದ್ದು ರಾಣಿರಾಜ್ಯದ ಹೆಸರುವಾಸಿಯಾದ Blackall Range ಪ್ರದೇಶದಲ್ಲಿ. ಇಲ್ಲಿ ನಾವು ನೋಡಿ ಅನುಭವಿಸಿದ ಕೆಲ ಸ್ಥಳಗಳು ಮನದಲ್ಲಿ ಉಳಿದಿವೆ. ಅವುಗಳಲ್ಲಿ ಒಂದು Obi Obi Creek (ತೊರೆ) ಯಿಂದ ಉಂಟಾಗಿರುವ ದೊಡ್ಡದೊಂದು ನೀರಿನ ಹೊಂಡ. ಇದಕ್ಕೆ ಪ್ರತ್ಯೇಕವಾದ ಹೆಸರಿಲ್ಲದಿದ್ದದ್ದು ನಮ್ಮ ಕುತೂಹಲವನ್ನು ಕೆದಕಿತ್ತು. ಸ್ಥಳೀಯ ಸೂಚನಾ ಫಲಕವು ಹೇಳುವುದು Obi Obi ತೊರೆ ನಡಿಗೆ ಎಂದು. ಆ ನಡಿಗೆಯ ದಾರಿ ಸೂಚನೆಗಳನ್ನು ಅನುಸರಿಸುತ್ತಾ ನಡೆದರೆ ವಾಹನ ನಿಲ್ದಾಣದಿಂದ ಕೇವಲ ಆರುನೂರು ಮೀಟರ್ ದೂರದ ಇಳಿಜಾರಿನಲ್ಲಿ ಈ ದೊಡ್ಡ ನೀರಿನ ಹೊಂಡ ತೆರೆದುಕೊಳ್ಳುತ್ತದೆ. ದೊಡ್ಡದೊಡ್ಡ ಬಂಡೆಗಳಿಂದ ಸುತ್ತುವರೆದ ಪಚ್ಚೆ ಹಸಿರು ಬಣ್ಣದ, ನಿರ್ಮಲ ಸೌಂದರ್ಯದ ಖನಿ ಈ ನೀರಿನ ಹೊಂಡ. ಬಂಡೆಗಳಿಂದ ನೀರು ಧುಮುಕುತ್ತಾ ಅಲ್ಲಲ್ಲಿ ಪುಟ್ಟಪುಟ್ಟ ಜಲಪಾತಗಳಿವೆ. ಹೊಂಡದ ಆಚೆಕಡೆ ಲಂಬಕೋನದಲ್ಲಿ ನೇರವಾಗಿ ನಿಂತಿರುವ ಬೆಟ್ಟದ ಚಾಚು. ಅಲ್ಲಿನ ಮೇಲ್ಮೈಯಿಂದ ಕಲ್ಲು, ಬಂಡೆಗಳ ತುಣುಕುಗಳು ಜಾರಿ ಬೀಳುವ ಸಂಭವವಿತ್ತು. ಅದರ ಅಡಿಯಲ್ಲಿ ನೈಸರ್ಗಿಕವಾಗಿ ನಿರ್ಮಿತವಾದ ಗುಹೆ. ನಾವುಗಳು ಒಂದಷ್ಟು ಸಮಯ ನೀರಿನಲ್ಲಿದ್ದು ಆನಂದಿಸುವಾಗ ಒಬ್ಬ ಯುವಕ ಈಜಿಕೊಂಡು ಹೊಂಡದ ಆಚೆಕಡೆ ಹೋಗಿ, ಲಂಬಾಕಾರದ ಬೆಟ್ಟದ ಅಂಚಿನಲ್ಲಿ ದಾರಿಮಾಡಿಕೊಂಡು ಹತ್ತುತ್ತಾ ಹೋಗಿ ಸುಮಾರು ಇನ್ನೂರಡಿ ಮೇಲೆ ತಲುಪಿದ. ಅಲ್ಲಿಂದ ಮತ್ತೂ ನಿಧಾನವಾಗಿ ಇಳಿಜಾರಿನಲ್ಲಿ ದಾರಿಮಾಡಿಕೊಂಡು ನೂರಡಿ ಎತ್ತರಕ್ಕೆ ಬಂದು ನಿಂತ. ಕೆಳಗಡೆ ನೀರಿನಲ್ಲಿದ್ದ ಅವನ ಹುಡುಗಿ ಅದನ್ನೆಲ್ಲ ವಿಡಿಯೋ ರೆಕಾರ್ಡ್ ಮಾಡುತ್ತಿದ್ದಳು. ನೀರೊಳಗಡೆ ಇದ್ದ ಬಂಡೆಗಳ ನೆನೆದು ನನಗೆ ಚಿಂತೆಯಾಯ್ತು. ಕಣ್ಣು ಮಿಟುಕಿಸದೆ ನಾವೂ ನೋಡುತ್ತಿದ್ದಂತೆ ದೇಹವನ್ನು ಸೆಟೆಸಿ ಆ ಎತ್ತರದಿಂದ ಹುಡುಗ ನೀರಿಗೆ ಹಾರಿಯೇಬಿಟ್ಟ. ಮರುಕ್ಷಣದಲ್ಲೇ ಅವನು ನೀರಿನಿಂದ ಪುಟಿದೆದ್ದಾಗ ನೆಮ್ಮದಿಯಾಯ್ತು.

ಅವನ ಸಾಹಸಕ್ಕಾಗಿ ಮೆಚ್ಚುಗೆಯೂ, ಸ್ವಲ್ಪ ಅಸೂಯೆಯೂ, ಅವನ ಸುರಕ್ಷತೆಯ ಬಗ್ಗೆ ಕಾಳಜಿಯೂ ಇತ್ತು. ಬಹುಶಃ ಹುಡುಗ ಈ ರೀತಿ ನೀರಿಗೆ ಧುಮುಕುವುದರಲ್ಲಿ ಪರಿಣಿತನಿರಬಹುದು ಎಂದೆನಿಸಿತು. ಓ ಸರ್ವಶಕ್ತಿ ಮಾತೆಯೇ, ನನ್ನ ವಯಸ್ಸನ್ನು ಹಿಂದೂಡು ತಾಯೆ. ಆದರೆ ಇದೇ ಮನಸ್ಸು ಇರಲಿ. ಮಿಂಚುಳ್ಳಿಯೊಂದು ಮೀನು ಹಿಡಿಯಲು ತಾನು ನೀರಿಗೆ ಹಾರುವ ಅಪೂರ್ವ ಶೈಲಿಯಲ್ಲಿ ಆ ಎತ್ತರದಿಂದ ನಿರ್ಭಯವಾಗಿ, ನಿರ್ಬಂಧವಿಲ್ಲದೆ ಹೊಂಡದ ನೀರಿಗೆ ಚಿಮ್ಮಿದ ಹುಡುಗನ ಆ ಕ್ಷಣದ ಆತ್ಮದಲ್ಲಿ ನನ್ನನ್ನು ವಿಲೀನ ಮಾಡು. ಇಲ್ಲವೇ, ಮುಂದೆಂದಾದರೂ ಹಾಗೆ ಹುಡುಗ ಮತ್ತೆ ಬಂಡೆಯಿಂದ ಚಿಮ್ಮುವ ಮುನ್ನ ಅವನಲ್ಲಿ ನಾನು ಪರಾಕಾಯ ಪ್ರವೇಶವಾಗುವಂತೆ ಮಾಡು. ಆಗಸವಲ್ಲದ ಭೂಮಿಯೂ ಇಲ್ಲದ ಕೇವಲ ಗಾಳಿಯಲ್ಲಿ ಯಾವುದೋ ಆಯಾಮದಲ್ಲಿ ಬರೀ ಒಂದು ದೇಹವಾಗಿ, ಮನಸ್ಸಾಗಿ, ಆತ್ಮವಾಗಿ ತೇಲಾಡುವ ಒಂದೆರೆಡು ಕ್ಷಣಗಳ ಅಲೌಕಿಕ ಅನುಭವಕ್ಕಾಗಿ ನಾ ಮತ್ತೆ ಹುಟ್ಟಿ ಬರುವಂತೆ ಮಾಡು, ತಾಯೆ.

(ಫೋಟೋಗಳು: ಲೇಖಕರವು)