ತನ್ನ ಅಸ್ತಿತ್ವದ ಆ ಹುಡುಕಾಟದ ದಿನಗಳಲ್ಲಿ ಅದೃಷ್ಟವೋ ಎಂಬಂತೆ ತನ್ನಂತೆ ಗಿಟಾರ್ ಹಿಡಿದು ಎಲ್ಲಿಂದ ಬಂದೆ ನಾನು ಅನ್ನೋ ಎಳೆಯನ್ನು ಹಿಡಿದು ಹುಡುಕಾಟದಲ್ಲಿದ್ದ ಅಬರಿಜಿನಲ್ ಯುವ ಹಾಡುಗಾರ್ತಿ ರೂಬಿ ಹಂಟರ್ ಅವರಿಗೆ ಸಿಕ್ಕಿಬಿಟ್ಟಳು. ಆರ್ಚಿ ಪುಟವಿಟ್ಟ ಲೋಹದಂತೆ ಪುಟಿದೆದ್ದರು. ರೂಬಿ ತಮ್ಮ ಜೀವನಕ್ಕೆ ಕೊಟ್ಟ ಭದ್ರತೆಯನ್ನು, ನಿರ್ದಿಷ್ಟ ಗುರಿಯನ್ನು ಆರ್ಚಿ ಅರ್ಥಮಾಡಿಕೊಂಡರು. ಹಾಡಿನ ಲೋಕದ ಅನುಭವಗಳನ್ನ ಸಂಭ್ರಮಿಸುತ್ತಾ, ಇಬ್ಬರೂ ಜೊತೆಯಾಗಿ ಸಾಗುತ್ತಾ, ಗತಕಾಲದ ನೋವನ್ನು ಶಮನಗೊಳಿಸುತ್ತಾ ಒಬ್ಬರಿಗೊಬ್ಬರು ಸಾಂತ್ವನ ಕೊಟ್ಟುಕೊಂಡರು. ಸಂಗೀತಲೋಕಕ್ಕೆ ಮತ್ತೊಮ್ಮೆ ಆರ್ಚಿ ದಕ್ಕಿಬಿಟ್ಟರು. ಆಸ್ಟ್ರೇಲಿಯಾ ದೇಶ ನೋಡಿದ ಮತ್ತೊಬ್ಬ ಅತ್ಯುತ್ತಮ ಅಬರಿಜಿನಲ್ ಹಾಡುಗಾರನಾಗಿ ಬೆಳೆದರು.
ಡಾ. ವಿನತೆ ಶರ್ಮ ಬರೆವ ಆಸ್ಟ್ರೇಲಿಯಾ ಅಂಕಣ

 

ಇಲ್ಲಿನ ಶಾಲಾ ಮಕ್ಕಳನ್ನು ‘ಅಬರಿಜಿನಲ್ ಸಂಗೀತದ ಬಗ್ಗೆ ಗೊತ್ತಾ?’ ಎಂದು ಕೇಳಿದರೆ ತಕ್ಷಣಕ್ಕೆ ಅವರು ಹೇಳುವುದು ‘ಓಹೋ ಗೊತ್ತು. ಅವರ didgeridoo ಮತ್ತು clapsticks ವಾದ್ಯಗಳು. Didgeridoo is awesome.’ ಸರಿ ಹಾಗಾದರೆ ವಾದ್ಯಗಳ ಪರಿಚಯವಿದೆ, ಯಾರಾದರೂ ಸಂಗೀತಗಾರರ ಹೆಸರು ಹೇಳಿ ಎಂದರೆ ಬಾಯಲ್ಲಿ ಅಷ್ಟು ಸುಲಭವಾಗಿ ಹೆಸರುಗಳು ಚಿಮ್ಮುವುದಿಲ್ಲ. ಸ್ವಲ್ಪ ಯೋಚಿಸಿ ಕೆಲ ಮಕ್ಕಳು, ‘ಹೌದು ಗೊತ್ತು, ಅವರಲ್ಲಿನ ತುಂಬಾ ಹೆಸರುವಾಸಿ ಕುರುಡು ಹಾಡುಗಾರ Yunupingu ಗೊತ್ತು,’ ಎನ್ನಬಹುದು. ಇನ್ನು ಹಾಡುಗಳ ಮಟ್ಟಿಗೆ ಹೇಳುವುದಾದರೆ ಹೆಚ್ಚಿನ ಮಕ್ಕಳಿಗೆ ಪರಿಚಯವಿರುವುದು From Little Things Big Things Grow. ಈ ಹಾಡು ಮಕ್ಕಳಿಂದ ಹಿಡಿದು ದೊಡ್ಡವರತನಕ, ಆಸ್ಟ್ರೇಲಿಯಾದ ಚಿಕ್ಕ ಪಟ್ಟಣದಿಂದ ಹಿಡಿದು ದೇಶವ್ಯಾಪಿಯಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಕೂಡ ಬಹಳ ಹೆಸರುವಾಸಿಯಾಗಿದೆ. ಅದನ್ನು ಹಾಡಿದ ಅಬರಿಜಿನಲ್ ಹಾಡುಗಾರ ಕೆವ್ ಕಾರ್ಮೊಡಿ (Kev Carmody) ಹೆಸರು ಈಗಲೂ ಅನೇಕರಿಗೆ ತಿಳಿದಿಲ್ಲ; ಆದರೆ ಅದೇ ಹಾಡನ್ನು ಕೆವ್ ಜೊತೆ ಹಾಡಿದ ಪಾಲ್ ಕೆಲ್ಲಿ ಎಲ್ಲರಿಗೂ ಗೊತ್ತು. ಆಸ್ಟ್ರೇಲಿಯಾ ದೇಶದ ಸಂಗೀತಲೋಕದಲ್ಲಿ ಕೂಡ ಕಣ್ಣುಮುಚ್ಚಾಲೆ ಆಟ ಬಲು ಜೋರಾಗಿ ನಡೆದಿದೆ.

ಬಲು ಬೇಗನೆ ಸರಿದು ಹೋದ ಮೇ ತಿಂಗಳ ಕಡೆಯ ದಿನ ಮತ್ತು ಆಗ ತಾನೇ ಕಣ್ತೆರೆದಿದ್ದ ಜೂನ್ ತಿಂಗಳ ಮೊದಲ ದಿನದಂದು Meeanjin Markets ನಡೆಯಿತು. ಬ್ರಿಸ್ಬನ್ ನಗರದ ಚಿಕ್ಕ ಹೃದಯಭಾಗಕ್ಕೆ ಇದ್ದ, ಅಬರಿಜಿನಲ್ ಜನರು ದಿನನಿತ್ಯವೂ ಉಚ್ಛರಿಸುತ್ತಿದ್ದ ಮೂಲ ಸ್ಥಳ-ಹೆಸರು Meeanjin. ಈ ಬಾರಿ ಕೆಲ ಸಂಗೀತಗಾರರು ಹಾಡುವುದನ್ನು ಕೇಳುವ ಅವಕಾಶ ಸಿಕ್ಕಿತ್ತು.

ಅವತ್ತಿನ ವಿಶೇಷ ಆಹ್ವಾನಿತರು ಶ್ರೇಷ್ಠ ಹಿರಿಯ ಸಂಗೀತಗಾರ ಅಂಕಲ್ ಆರ್ಚಿ ರೋಚ್ (Archie Roach). ನಡೆದಾಡಲು ಕಷ್ಟಪಡುತ್ತಾ ಆದರೂ ಶೋಕಿಯಾಗಿ ಸೀಟ್ ಮೇಲೆ ಕೂತು ಗಿಟಾರ್ ನುಡಿಸುತ್ತಾ, ಪ್ರತಿ ಹಾಡಿಗೂ ಆಲಾಪದಂತೆ ಒಂದು ಕಥೆ ಹೇಳುವ ಆರ್ಚಿ ನಮ್ಮೆಲ್ಲರನ್ನೂ ಮಾಂತ್ರಿಕದಂಡದಿಂದ ಹಿಡಿದಿಟ್ಟರು.

ಅಬರಿಜಿನಲ್ ಜನರು ಕತೆಗಾರರು. ತಮ್ಮ ಜೀವನವನ್ನೇ ಕಥೆಯಾಗಿಸಿಕೊಳ್ಳುತ್ತಾ, ತಾವು ನಂಬುವ ಪ್ರಕೃತಿಪ್ರಪಂಚದ ಮಹಾಕಥೆಯನ್ನು ಅರ್ಥಮಾಡಿಕೊಳ್ಳಲು ಮತ್ತಷ್ಟು ಕಥೆಗಳನ್ನು ಸೃಷ್ಟಿಸಿಕೊಂಡು ಅಲ್ಲಿರುವ, ಬಂದು ಹೋಗುವ, ಅನೇಕಾನೇಕ ಕಥೆಗಳೊಳಗೆ ಬದುಕುತ್ತಾ ಜೀವಿಸುವವರು. ಇದು ಅನಾದಿಕಾಲದಿಂದಲೂ ನಡೆಯುತ್ತಾ ಬಂದಿದೆ. ಮತ್ತೆ ಮತ್ತೆ ಕಥೆಗಳಿಗೆ ಮರಳುತ್ತಾ ತಮ್ಮ ಹಿಂದಿನ ಗತಕಾಲಕ್ಕೂ, ಇಂದಿಗೂ ತಳಕು ಹಾಕಿಕೊಂಡು ಅದೇನೋ ಆಸೆಯನ್ನಿಟ್ಟುಕೊಂಡು ಮುಂದುವರೆದ ಮಂದಿ ಇವರು. ಅವತ್ತು Archie Roach ಹಾಡಿದ ಹಾಡು-ಕಥೆಗಳು ಕೆವ್ ಕಾರ್ಮೊಡಿ ಮತ್ತು ಯುನುಪಿಂಗು ಎಂಬ ಇನ್ನಿಬ್ಬರು ಮಹಾನ್ ಅಬರಿಜಿನಲ್ ಸಂಗೀತಗಾರನ್ನು ನೆನಪಿಸಿದ್ದವು.

ಹಿತವಾದ ಚುಮುಚುಮು ಚಳಿ, ಮೋಡ ಕವಿದ ಅಂದು ಮಧ್ಯಾಹ್ನ ಅಂಕಲ್ ಆರ್ಚಿ ಬಂದರು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅವರು ವೇದಿಕೆಯ ಮೇಲೆ ಬರುವ ಮುನ್ನವೇ ಸಾಕಷ್ಟು ತಯ್ಯಾರಿ ನಡೆದಿತ್ತು. ಸಾಥ್ ಕೊಡಲು ಗಿಟಾರ್ ಹಿಡಿದುಕೊಂಡು ಬಂದ ಸ್ಯಾಲಿ ಮತ್ತು ಕೀಬೋರ್ಡ್ ನುಡಿಸುವಾತ ವೇದಿಕೆಯನ್ನು ಸಜ್ಜುಗೊಳಿಸಿದ್ದರು. ಆರ್ಚಿ ಬಂದವರೇ ಕಥೆ ಹೇಳಲು ಪ್ರಾರಂಭಿಸಿದರು. ಆ ಕಥೆಗಳು ಅವರು ಹಾಡುವ ಹಾಡುಗಳಿಗೆ ಬೆಸೆದುಕೊಂಡಿದ್ದವು. ಕಥೆಯಿಲ್ಲದಿದ್ದರೆ ಹಾಡಿನ ಆತ್ಮವೇ ಇಲ್ಲ. ಸ್ಟೋಲನ್ ಜನರೇಷನ್ (Stolen Generation) ಗೆ ಸೇರಿದ ತನ್ನಂಥಹವರು ಬೆಳೆದಿದ್ದು ಹೇಗೆ ಎಂದು ಹೇಳುತ್ತಾ ಆರ್ಚಿ ‘Took the Child Away’ ಹಾಡಿದರು. ಕೇವಲ ಮೂರು ವರ್ಷ ವಯಸ್ಸಿನ ಮಗುವನ್ನ ಅವನ ಅಪ್ಪಅಮ್ಮನಿಂದ ಬೇರ್ಪಡಿಸಿ ಇಂಗ್ಲಿಷ್ ಭಾಷೆ, ಸಂಸ್ಕೃತಿ, ಆಚಾರ ವಿಚಾರ, ಓದುಬರಹ ಕಲಿಯಲು ಮಗುವನ್ನು ಅನಾಥರ ಕ್ಯಾಂಪಿಗೆ ಹಾಕಿದ್ದರು. ಆಗಿನ ಕಾನೂನು ಅದೇ ಆಗಿತ್ತು – ಆಸ್ಟ್ರೇಲಿಯಾವನ್ನು ಆಳುತ್ತಿದ್ದ ಬಿಳಿಯರಂತೆ ಎಲ್ಲರೂ ಇರಬೇಕು, ಅಬರಿಜಿನಲ್ ಜನರು ಸಂಪೂರ್ಣವಾಗಿ ತಮ್ಮ ಅಸ್ಮಿತೆಯನ್ನು ಅಳಿಸಿಕೊಂಡು ಹೊಸಬರಾಗಿ ಬಾಳಬೇಕು. ಅದೆಷ್ಟೋ ಸಾವಿರಾರು ಮಕ್ಕಳನ್ನು ಅವರ ಕುಟುಂಬಗಳಿಂದ ಬಲವಂತವಾಗಿ ತೆಗೆದುಕೊಂಡು ಹೋಗಿ ಅಲ್ಲೆಲ್ಲೋ ಕ್ಯಾಂಪಿನಲ್ಲಿಟ್ಟು ಇಲ್ಲಾ ಅನಾಥಗೃಹಗಳಲ್ಲಿಟ್ಟು ಇಲ್ಲಾ foster family ಗೆ ಅವರನ್ನು ಒಪ್ಪಿಸಿ ಅವರನ್ನು ಬೆಳೆಸಲಾಗಿತ್ತು. ಅದುವೇ ಸ್ಟೋಲನ್ ಜನರೇಷನ್. ಹಾಗೆ ಬಲವಂತವಾಗಿ ಎಳೆದೊಯ್ದು, ಅಮ್ಮ-ಅಪ್ಪ, ಅಜ್ಜ-ಅಜ್ಜಿ, ಒಟ್ಟು ಕುಟುಂಬದಿಂದ, ತಮ್ಮ ಬಳಗದಿಂದ ಬೇರೆಯಾಗಿ ಎಲ್ಲೋ ಯಾರದೋ ಸಂಸ್ಕೃತಿಯ ಎರವಲಾಗಿ ಬೆಳೆದ ಎರಡು, ಮೂರು ಪೀಳಿಗೆಗಳ ಜನರ ಕಥೆಗಳನ್ನು ಕೇಳುತ್ತಿದ್ದರೆ ನಮ್ಮಗಳ ನೆಮ್ಮದಿ ಬದುಕು ಒಮ್ಮೆ ಭಯಂಕರ ಸ್ವಪ್ನ ಕಂಡಂತೆ ಬೆಚ್ಚಿಬೀಳುತ್ತದೆಯೇನೋ …

ಅವತ್ತಿನ ಮಧ್ಯಾಹ್ನ ಅಂಥಾ ಒಂದು ಕರುಳು ಬಳ್ಳಿ ಕಳೆದುಹೋದ ಕಥೆಯನ್ನು ಹೇಳುತ್ತಾ ತಮ್ಮದೇ ಆದ ‘Took the Children Away’ ಹಾಡನ್ನು ಆರ್ಚಿ ಹಾಡುತ್ತಿದ್ದರೆ ನೆರೆದಿದ್ದವರಲ್ಲಿ ಅದೆಷ್ಟೋ ಜನರು ಕಣ್ಣೊರೆಸಿಕೊಳ್ಳುತ್ತಿದ್ದರು. ಎರವಲು ಸಂಸ್ಕೃತಿ, ಭಾಷೆಯೊಡನೆ ಬೆಳೆದ ಜೀವಗಳು ಅದೆಷ್ಟೋ. ಅಲ್ಲಿ ತೇವವಾಗದ ಕಣ್ಣು ಒಂದೂ ಇರಲಿಲ್ಲ.

ಬಾಲಕ ಆರ್ಚಿ ಎರಡು ಸಾಕು ಕುಟುಂಬಗಳ ಜೊತೆ ಹೊಂದಿಕೊಳ್ಳದೇ, ಮೂರನೇ ಕುಟುಂಬಕ್ಕೆ ಹೋಗಿ ಸೇರಿಕೊಂಡಾಗ ಅವರ ಬಾಲ್ಯ ಮತ್ತೆ ಕಣ್ತೆರೆಯಿತು. ಅದೇನು ಪುಣ್ಯವೋ! ಆ ಕುಟುಂಬ ಸ್ಕಾಟ್ಲೆಂಡಿನಿಂದ ಬಂದು ಮೆಲ್ಬೋರ್ನ್ ನಗರದಲ್ಲಿ ನೆಲೆಸಿತ್ತು. ಅವರ ಸಾಕು ತಂದೆ (ಪಾಲಕ) ಸ್ವತಃ ಜಾನಪದೀಯ ಹಾಡುಗಾರ. ಆ ಕುಟುಂಬದಿಂದ ಪ್ರಭಾವಿತರಾಗಿ ಮತ್ತು ಆಭಾರಿಯಾಗಿ ಆರ್ಚಿ ಸಂಗೀತಲೋಕಕ್ಕೆ ಪ್ರವೇಶಿಸಿದರು. ಗಿಟಾರ್ ನುಡಿಸಲು ಕಲಿತು ಹಾಡುತ್ತಾ ಸ್ವತಃ ಹಾಡು ಬರೆಯುವುದಕ್ಕೆ ಆರಂಭಿಸಿದ ಹುಡುಗ ತನ್ನ ನಿಜವಾದ ಹುಟ್ಟು ತಾಯಿತಂದೆಯನ್ನು ಪೂರ್ತಿಯಾಗಿ ಮರೆತಿದ್ದ. ಬೇರೆಯವರು ‘ಹೇ, ನೀನು ಕಪ್ಪು ಜನಾಂಗದವನು’ ಅನ್ನುವತನಕ ಹುಡುಗನಿಗೆ ತನ್ನ ಬಣ್ಣ, ಬೇರುಗಳ ಅರಿವೇ ಇರಲಿಲ್ಲವಂತೆ. ಎಷ್ಟು ನಿಜದ ಮಾತು, ನಮ್ಮ ಪಾಡಿಗೆ ನಾವು ಸಹಜವಾಗಿದ್ದರೂ, ಎಲ್ಲರಂತೆ ನಾವು ಎಂದಿದ್ದರೂ ಕೂಡ ಬೇರೆಯವರಿಗೆ ನಮ್ಮಲ್ಲಿ ಅದೇನೋ ವ್ಯತ್ಯಾಸ ಕಂಡುಬಿಡುತ್ತದಲ್ಲ?!

ಹುಡುಗನಿಗೆ ಆಗಿನ್ನೂ ಹದಿನಾಲ್ಕು ವರ್ಷ ವಯಸ್ಸು ಅಷ್ಟೇ. ಆ ಕಾಲಘಟ್ಟದಲ್ಲಿ ಆರ್ಚಿಯ ಹುಟ್ಟು ಸೋದರಿ ತಮಗೆ ಜನ್ಮವಿತ್ತ ತಾಯಿ ತೀರಿಕೊಂಡ ಸಮಾಚಾರವನ್ನು ಹೇಳಿದಳು. ಆ ಹದಿಹರೆಯದ ಹುಡುಗನ ಪ್ರಪಂಚ ಅಲ್ಲೋಲಕಲ್ಲೋಲವಾಯಿತು. ಹುಡುಗನಿಗೆ ಸ್ಕಾಟಿಷ್ ಪಾಲಕರು ಕೊಟ್ಟಿದ್ದ ಭದ್ರತೆಯ ಬದುಕು ನೀರಮೇಲಿನ ಗುಳ್ಳೆಯಾಯಿತು. ತನ್ನ ಹುಟ್ಟಿನ ಬಗ್ಗೆ, ತನ್ನಮ್ಮನ ಬಗ್ಗೆ ಬಂದು ಅಪ್ಪಳಿಸಿದ ಸುದ್ದಿಯಿಂದ ಕದಡಿಹೋದ ಯುವಕ ಆರ್ಚಿ ಕಂಡರಿಯದ ಆಕ್ರೋಶ, ರೊಚ್ಚಿಗೆ ತನ್ನನ್ನು ಕೊಟ್ಟುಕೊಂಡು ಮನೆ ಬಿಟ್ಟು ನಡೆದ. ಮುಂದಿನ ಹದಿನಾಲ್ಕು ವರ್ಷ ಬೀದಿಪಾಲಾಗಿ, ಊರೂರು ಸುತ್ತುತ್ತಾ ಜನ್ನ ಜನರನ್ನು ಹುಡುಕಿದ. ಗೊತ್ತಿರದ ವ್ಯಸನಗಳಿಗೆ ಬಲಿಯಾದ. ತನ್ನ ಅಸ್ಮಿತೆಯೇನು ಎಂದು ಪದೇಪದೇ ಪ್ರಶ್ನಿಸಿಕೊಂಡ. ದಿಕ್ಕೆಟ್ಟು ಹರಿದುಹೋದ ಜೀವನಶೈಲಿಯಿಂದಾಗಿ ಜೈಲಿಗೂ ಹೋಗಿಬಂದ.

ಅಬರಿಜಿನಲ್ ಜನರು ಕತೆಗಾರರು. ತಮ್ಮ ಜೀವನವನ್ನೇ ಕಥೆಯಾಗಿಸಿಕೊಳ್ಳುತ್ತಾ, ತಾವು ನಂಬುವ ಪ್ರಕೃತಿಪ್ರಪಂಚದ ಮಹಾಕಥೆಯನ್ನು ಅರ್ಥಮಾಡಿಕೊಳ್ಳಲು ಮತ್ತಷ್ಟು ಕಥೆಗಳನ್ನು ಸೃಷ್ಟಿಸಿಕೊಂಡು ಅಲ್ಲಿರುವ, ಬಂದು ಹೋಗುವ, ಅನೇಕಾನೇಕ ಕಥೆಗಳೊಳಗೆ ಬದುಕುತ್ತಾ ಜೀವಿಸುವವರು.

(ಅಂಕಲ್ ಆರ್ಚಿ ಮತ್ತು ರೂಬಿ ಹಂಟರ್)

ತನ್ನ ಅಸ್ತಿತ್ವದ ಆ ಹುಡುಕಾಟದ ದಿನಗಳಲ್ಲಿ ಅದೃಷ್ಟವೋ ಎಂಬಂತೆ ತನ್ನಂತೆ ಗಿಟಾರ್ ಹಿಡಿದು ಎಲ್ಲಿಂದ ಬಂದೆ ನಾನು ಅನ್ನೋ ಎಳೆಯನ್ನು ಹಿಡಿದು ಹುಡುಕಾಟದಲ್ಲಿದ್ದ ಅಬರಿಜಿನಲ್ ಯುವ ಹಾಡುಗಾರ್ತಿ ರೂಬಿ ಹಂಟರ್ ಅವರಿಗೆ ಸಿಕ್ಕಿಬಿಟ್ಟಳು. ಆರ್ಚಿ ಪುಟವಿಟ್ಟ ಲೋಹದಂತೆ ಪುಟಿದೆದ್ದರು. ರೂಬಿ ತಮ್ಮ ಜೀವನಕ್ಕೆ ಕೊಟ್ಟ ಭದ್ರತೆಯನ್ನು, ನಿರ್ದಿಷ್ಟ ಗುರಿಯನ್ನು ಆರ್ಚಿ ಅರ್ಥಮಾಡಿಕೊಂಡರು. ಹಾಡಿನ ಲೋಕದ ಅನುಭವಗಳನ್ನ ಸಂಭ್ರಮಿಸುತ್ತಾ, ಇಬ್ಬರೂ ಜೊತೆಯಾಗಿ ಸಾಗುತ್ತಾ, ಗತಕಾಲದ ನೋವನ್ನು ಶಮನಗೊಳಿಸುತ್ತಾ ಒಬ್ಬರಿಗೊಬ್ಬರು ಸಾಂತ್ವನ ಕೊಟ್ಟುಕೊಂಡರು. ಸಂಗೀತಲೋಕಕ್ಕೆ ಮತ್ತೊಮ್ಮೆ ಆರ್ಚಿ ದಕ್ಕಿಬಿಟ್ಟರು. ಆಸ್ಟ್ರೇಲಿಯಾ ದೇಶ ನೋಡಿದ ಮತ್ತೊಬ್ಬ ಅತ್ಯುತ್ತಮ ಅಬರಿಜಿನಲ್ ಹಾಡುಗಾರನಾಗಿ ಬೆಳೆದರು. ಅವಕಾಶಗಳು ಅವರನ್ನು ಹುಡುಕಿಕೊಂಡು ಬಂದವು. ಪಾಲ್ ಕೆಲ್ಲಿ ಮತ್ತು ಆರ್ಚಿ ಪರಸ್ಪರ ಬೆಂಬಲಿಗರಾಗಿ, ಬ್ಯಾಂಡ್ ಜೊತೆ ಹಾಡುತ್ತಾ ದೇಶಗಳನ್ನು ಸುತ್ತಿದರು. ಆರ್ಚಿ ತಮ್ಮದೇ ಸ್ವಂತ ಸಂಗೀತ ಆಲ್ಬಂಗಳನ್ನ (Charcoal Lane, Jamu Dreaming, Looking for Butter Boy) ಬಿಡುಗಡೆ ಮಾಡುತ್ತಾ ಮನೆಮಾತಾದರು. Bob Dylan ರಂಥ ಸುಪ್ರಸಿದ್ಧ ಪಾಶ್ಚಾತ್ಯ ಸಂಗೀತಗಾರರೊಡನೆ ಹಾಡಿದರು. ವರ್ಷ ೨೦೦೦ ನಂತರದ ದಶಕದಲ್ಲಿ ತಮ್ಮಿಬ್ಬರ ಹಿಂದಿನ ಹಾಡುಗಳನ್ನು ಮತ್ತು ಇನ್ನಷ್ಟು ಹೊಸ ಹಾಡುಗಳನ್ನು ಸೇರಿಸಿ ರೂಬಿ ಮತ್ತು ಆರ್ಚಿ ಎರಡು ಹೊಸ ಆಲ್ಬಂಗಳನ್ನ ಬಿಡುಗಡೆ ಮಾಡಿದರು (Ruby; Journey). ರೂಬಿ ಸಾಯುವ ತನಕವೂ (೨೦೧೦ರಲ್ಲಿ) ಅವರಿಬ್ಬರೂ ಆತ್ಮಸಂಗಾತಿಗಳಾಗಿ ಬದುಕಿ ಬಾಳಿ ತಮ್ಮ ಕುಟುಂಬವನ್ನು ಬೆಳೆಸಿದರು.

ತಮ್ಮ ಬದುಕಿನ ಕಥೆಯನ್ನು ಇಷ್ಟಿಷ್ಟೇ ನಮ್ಮ ಮುಂದೆ ಬಿಚ್ಚಿಡುತ್ತಾ ಅಂದು ಆರ್ಚಿ ತನ್ನಮ್ಮನ ಬಗ್ಗೆ ಕಥೆ ಹೇಳಿದರು. ತಾನು ಮರೆತುಹೋದ, ತನಗೆ ಜನ್ಮವಿತ್ತ ಅಮ್ಮನನ್ನು, ತನ್ನವರನ್ನು ನೆನೆಯುತ್ತಾ, ತಾನು ಬೆಳೆದಿರಬಹುದಾಗಿದ್ದ ತನ್ನ ಮಿಷನ್ ಜೀವನದ ಬಗ್ಗೆ ಕನಸುಕಾಣುತ್ತಾ, ತನ್ನಿಂದ ಸೆಳೆಯಲ್ಪಟ್ಟ ತನ್ನ ಸಮುದಾಯ-ಸಮೃದ್ಧ ಬಾಲ್ಯವನ್ನು ಊಹಿಸಿಕೊಳ್ಳುತ್ತ ಆರ್ಚಿ Old Mission Road ಹಾಡನ್ನು ಹಾಡಿದರು. ಅಕ್ಕಪಕ್ಕದಲ್ಲಿ ಕೂತಿದ್ದ ಹಿರಿಯರು ಅರ್ಧ ಕಣ್ಮುಚ್ಚಿಕೊಂಡು ಅದಕ್ಕೆ ತಲೆದೂಗುತ್ತಾ ಇದ್ದದ್ದನ್ನು ನೋಡುತ್ತಾ ನೋಡುತ್ತಾ ಅವರಲ್ಲಿ ಅಡಗಿರುವ ಬಿಲಿಯನ್ ಗಟ್ಟಲೆ ಕಥೆಗಳನ್ನು ಕೇಳುವವರು ಯಾರು, ಮರೆಯಾಗುತ್ತಿದೆಯಲ್ಲಾ ಎಂದೆನಿಸಿತು. ಇಂದು ಸಮುದಾಯದ ಹಿರಿಯ ಎಂದು ಗುರುತಿಸಲ್ಪಡುವ ಆರ್ಚಿ ಅಲ್ಲಿ ಕೂತಿದ್ದ ಹಿರಿಯರಿಗೆ ನಮನ ಸಲ್ಲಿಸಿದರೇನೋ ಅನ್ನಿಸಿತು.

(ಅಂಕಲ್ ಆರ್ಚಿಯವರೊಂದಿಗೆ ಡಾ.ವಿನತೆ ಶರ್ಮಾ)

ಅಬರಿಜಿನಲ್ ಜನರ ಮಾತುಗಳಲ್ಲಿ ಅವರು ಒತ್ತಿ ಒತ್ತಿ ಹೇಳುವ Connection to Country ಸದಾ ಇರುತ್ತದೆ. ಅವರು ಸಮುದಾಯಗಳಲ್ಲಿ ಬದುಕುವ ಜನ ಎಂಬ ಮಾತು ಎಷ್ಟು ನಿಜವೋ ಅಷ್ಟೇ ಸತ್ಯವಾದದ್ದು ಮಣ್ಣಿನ ಜೊತೆ, ನೆಲದೊಡನೆ ಇರುವ ಅವರ ನಂಟು. ಅವೆರಡನ್ನು ಬಿಟ್ಟು ಒಂಟಿಯಾಗಿ, ‘ನಾನಿಂಥಹವನು/ಳು’ ಎಂದು ತಮ್ಮನ್ನು ತಾವು ಗುರುತಿಸಿಕೊಳ್ಳುವುದಿಲ್ಲ. ತಮ್ಮ ನೆಲದ ಮತ್ತು ಸಮುದಾಯದ ಬಗ್ಗೆ ಪ್ರತಿಯೊಬ್ಬರಲ್ಲೂ ಅವರದ್ದೇ ಸ್ವಂತ ಕಥೆಗಳಿರುತ್ತವೆ. ಅವುಗಳಿಂದ ಅವರ ಅಸ್ಮಿತೆ ಮತ್ತಷ್ಟು ಭದ್ರವಾಗಿ ಸದಾ ಕಾಲ ಜಾಗೃತವಾಗಿರುತ್ತದೆ. ತಾನು ಮೆಲ್ಬೋರ್ನ್ ನಗರದಲ್ಲಿ, ಸ್ಕಾಟಿಷ್ ಸಾಕು ಕುಟುಂಬದ ಜೊತೆ ಬಾಲ್ಯದ ವರ್ಷಗಳನ್ನು ಕಳೆದರೂ ನೆಲದ ಜೊತೆಗಿರುವ ಬಾಂಧವ್ಯ ಸದಾ ತನ್ನಲ್ಲಿ ಜಾಗೃತವಾಗಿತ್ತು ಎಂದು ಹೇಳುತ್ತಾ ಆರ್ಚಿ ಅದು ಎಷ್ಟಾದರೂ ಜನ್ಮ ಜನ್ಮಾಂತರದಿಂದ ಬಂದದ್ದು, ಅಲ್ಲವೇ, ಎಂದು ನಕ್ಕರು. ಅವರೇ ಬರೆದ, ಪ್ರಸಿದ್ಧವಾದ Native Born ಹಾಡನ್ನು ಹಾಡುತ್ತಾ ಭಾವುಕರಾದರು.

ತಮ್ಮ ಅಬರಿಜಿನಲ್ ಜನ ಹೋರಾಟಗಾರರು, ನೂರಾರು ವರ್ಷಗಳಿಂದ ನಡೆದು ಬಂದಿರುವ ಶೋಷಣೆ, ತುಳಿತ, ದಮನಗಳನ್ನು ಎದುರಿಸುತ್ತಾ ಬದುಕುಳಿಯುವ ಕಲೆಯನ್ನು ಅರಿತವರು. ನಾವು ಹತಾಶೆಯ ಕಂದರದಲ್ಲಿ ಬಿದ್ದು ಒದ್ದಾಡುವ ಮಂದಿ ಅಲ್ಲ. ನಾವು ಅಳುವುದಿಲ್ಲ, ಎನ್ನುತ್ತಲೇ ಅಂಕಲ್ ಆರ್ಚಿ ಅವರ ಮತ್ತೊಂದು ಹಾಡು We Won’t Cry ಹಾಡಿದರು. ಅವರು ಬರೆದಿರುವ ಬೇರೆಲ್ಲಾ ಹಾಡುಗಳಂತೆ ಇದೂ ಕೂಡ ನಮ್ಮ ಹೃದಯವನ್ನು ಭೇದಿಸಿ ಒಳನುಗ್ಗುತ್ತದೆ. ನನ್ನಂಥ ವಲಸೆಗಾರ ಭಾರತೀಯ ಮನಸ್ಸಿಗೆ ಅಯ್ಯೋ ಅನ್ಯಾಯವೇ ಎಂದು ಕೂಗುವಂತಾಗುತ್ತದೆ. ಆದರೆ ಆರ್ಚಿ ಹೇಳಿಬಿಟ್ಟಿದ್ದರು – ನಾವು ಅಳುವುದಿಲ್ಲ. ಅಂದರೆ ಸ್ವ-ನಿರ್ಣಯಕಾರರಾಗಿ (Self-Determination) ನಾವೆಲ್ಲಾ ಮುನ್ನಡೆಯಬೇಕು.

ಆರ್ಚಿ, ಕಥೆ ಹೇಳಿ, ಇನ್ನಷ್ಟು ಹೇಳಿ, ಹೇಳುತ್ತಾ ಹೋಗಿ, ನಿಲ್ಲಿಸಬೇಡಿ, ಎಂದು ಅವರನ್ನು ಕೇಳಿಕೊಳ್ಳುವ ಆಸೆಯಾಯಿತು. ಸುಮಾರು ಒಂದೂವರೆ ಗಂಟೆಯಷ್ಟು ಕಾಲ ಕಥೆ ಹೇಳುತ್ತಾ, ಹಾಡುತ್ತ ಸಾಗಿದ್ದ ಆ ಹಿರಿಯ ಸುಸ್ತಾದಂತೆ ಕಂಡರು. ತಮ್ಮ ಪ್ರಿಯ ಆತ್ಮಸಖಿ ರೂಬಿಯನ್ನು ಕಳೆದುಕೊಂಡ ವರ್ಷದಿಂದ ಹಲವಾರು ಜೀವಬಾಧಕ ರೋಗಗಳಿಗೆ ತುತ್ತಾಗಿ, ಸಾವಿನ ದವಡೆಯಿಂದ ಪಾರಾಗಿ ಬಂದಿರುವ ಆರ್ಚಿ ಹಾಡುತ್ತಲೇ ಪಯಣಿಸುತ್ತಿರುವುದು ಹೆಮ್ಮೆಯೆನಿಸಿತು.

ಜೈಲಿನಲ್ಲಿ, ಬಂಧನ ಕೇಂದ್ರಗಳಲ್ಲಿ ದಿನ ನೂಕುತ್ತಿರುವ ಅಬರಿಜಿನಲ್ ಯುವಜನತೆಯೊಡನೆ ಅವರ ಜೀವನವನ್ನು ಮಾರ್ಪಾಡು ಮಾಡುವ ಪ್ರಯತ್ನಗಳನ್ನು ಆರ್ಚಿ ಮಾಡುತ್ತಿದ್ದಾರೆ. ತಮ್ಮ ಯುವಕ ಯುವತಿಯರ ಆತ್ಮವಿಶ್ವಾಸವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅವರ ಮಾನಸಿಕ ಆರೋಗ್ಯಕ್ಕಾಗಿ ಆರ್ಚಿ ಶ್ರಮಿಸುತ್ತಿದ್ದಾರೆ. ಸಂಗೀತವೇ ಒಳ್ಳೆಯ ಔಷಧವಾಗಿ ಕೆಲಸ ಮಾಡುತ್ತದೆ, ಎಂದು ಆರ್ಚಿ ಮುಗುಳ್ನಕ್ಕರು.