ತನ್ನದೇ ಆದ ‘ಸೂರ್ಯ ಮುಳುಗದ’ ನಾಡು ಯುನೈಟೆಡ್ ಕಿಂಗ್ಡಮ್ ಸಾಮ್ರಾಜ್ಯದ ಅಧಿಪತಿಯಾಗಿದ್ದ, ಅದರ ಜೊತೆಗೆ ಐವತ್ತಾರು ಕಾಮನ್ವೆಲ್ತ್ ರಾಷ್ಟ್ರಗಳ ನಾಯಕಿಯಾಗಿದ್ದ ರಾಣಿ ಎರಡನೆ ಎಲಿಝಬೆತ್ ಕೂಡ ಹೀಗೆಯೆ ಎಪ್ಪತ್ತು ವರ್ಷಗಳ ಸುದೀರ್ಘ ಕಾಲದಲ್ಲಿ ‘ಮುಳುಗದ’ ಸೂರ್ಯನಂತೆ ರಾರಾಜಿಸುತ್ತ ಸಾಮ್ರಾಜ್ಞಿಯಾಗಿದ್ದರು. ‘ನನ್ನ ಜೀವನವನ್ನು ನಿಮ್ಮ ಸೇವೆಗಾಗಿ ಮುಡಿಪಿಟ್ಟಿದ್ದೀನಿ’ ಎನ್ನುತ್ತಾ ಸದಾಕಾಲ ತಮ್ಮ ಕಾರ್ಯಕ್ಷಮತೆ ತೋರಿದರು ಎನ್ನುವುದೀಗ ಇಡೀ ಪ್ರಪಂಚದ ಜನರಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ವಾರ ಅವರು ಕಣ್ಮರೆಯಾದರೂ ಮಕ್ಕಳಿಂದ ಹಿಡಿದು ಅತಿ ವೃದ್ಧರ ತನಕ ರಾಣಿ ಎಲಿಝಬೆತ್ ಎಲ್ಲರ ಮನಮಂದಿರವನ್ನು ಹೊಕ್ಕು ತಾವೊಬ್ಬ ದಂತಕತೆಯಾಗಿದ್ದಾರೆ.
ಡಾ. ವಿನತೆ ಶರ್ಮಾ ಬರೆಯುವ ‘ಆಸ್ಟ್ರೇಲಿಯಾ ಪತ್ರ’

ಅತ್ತ ದೂರದ ಯುನೈಟೆಡ್ ಕಿಂಗ್ಡಮ್ ನಲ್ಲಿ ರಾಜಕುವರ ಚಾರ್ಲ್ಸ್ ರಾಜ ಪಟ್ಟಕ್ಕೇರಿ, ತಮ್ಮ ಹೊಸ ಬಿರುದನ್ನು ಅಪ್ಪಿಕೊಂಡು, ಕಿಂಗ್ ಮೂರನೆ ಚಾರ್ಲ್ಸ್ ಎಂದು ಕರೆಸಿಕೊಳ್ಳುತ್ತಾ ಅಧಿಕಾರ ಸ್ವೀಕರಿಸಿದ್ದಾರೆ. ಅದಾದ ಕೂಡಲೆ ಇತ್ತ ನಮ್ಮ ಆಸ್ಟ್ರೇಲಿಯಾದಲ್ಲಿ ‘ಕಿಂಗ್ ಆಫ್ ಆಸ್ಟ್ರೇಲಿಯಾ’ ಘೋಷಣೆಯನ್ನು ಹೊರಡಿಸಿ, ಹೊಸ ರಾಜನನ್ನು ಅಂಗೀಕರಿಸಲಾಗಿದೆ. ಗಾಡ್ ಸೇವ್ ದಿ ಕಿಂಗ್ ಎನ್ನುವ ದೇಶಗೀತೆ ಜಾರಿಗೆ ಬಂದಿದೆ. ‘ಪ್ರಿನ್ಸ್ ಚಾರ್ಲ್ಸ್’ ಎನ್ನುವುದು ಎಲ್ಲರ ನಾಲಿಗೆಗೆ ಒಗ್ಗಿ ಹೋಗಿದ್ದ ಸಹಜ ಸಂಬೋಧನೆ. ಎಪ್ಪತ್ತು ವರ್ಷಗಳ ದೀರ್ಘ ಕಾಲ ದೇಶದ ಮುಖ್ಯಸ್ಥೆಯಾಗಿ ಜನಮನದಲ್ಲಿ ಅಜರಾಮರರಾಗಿದ್ದ ಅಚ್ಚುಮೆಚ್ಚಿನ ರಾಣಿ ಎಲಿಝಬೆತ್ ಅಳಿದು ಹೋದ ಈ ಹೊಸದಿನಗಳಲ್ಲಿ ಆಕೆಯ ಹಿರಿಯ ಮಗ ಚಾರ್ಲ್ಸ್ ರನ್ನು ಜನರು ತಮ್ಮ ಮನಮಂದಿರದಲ್ಲಿ ಸ್ಥಾಪಿಸಿಕೊಳ್ಳುವುದು ಸ್ವಲ್ಪ ಕಷ್ಟವೇ ಸರಿ! ಎಲ್ಲೆಲ್ಲೂ ಕ್ವೀನ್ ಇದ್ದ ಕಡೆ ಈಗ ಇದ್ದಕ್ಕಿದ್ದಂತೆ ಕಿಂಗ್ ಸ್ಥಾಪನೆಯಾಗುವುದಕ್ಕೆ ಅದೆಷ್ಟು ಮಾರ್ಪಾಡುಗಳಾಗಬೇಕಿವೆ. ಜನಜೀವನದಲ್ಲಷ್ಟೇ ಅಲ್ಲ, ದೇಶದ ಆಡಳಿತ ಮತ್ತು ಬೊಕ್ಕಸವೂ ಕೂಡ ಹೊಸ ಬದಲಾವಣೆಗಳ ದಾರಿಯಲ್ಲಿ ಸಾಗಬೇಕಿದೆ.

ಬ್ರಿಟಿಷ್ ರಾಜಮನೆತನದ ಹಾಗೂ ಆಸ್ಟ್ರೇಲಿಯ ಸರಕಾರದ ಮುಖ್ಯಸ್ಥರಾಗಿದ್ದ ರಾಣಿ ಎಲಿಝಬೆತ್ ಪ್ರತಿನಿಧಿಯಾಗಿರುವ ನಮ್ಮ ಗವರ್ನರ್ ಜನರಲ್ ‘ಕಿಂಗ್ ಆಫ್ ಆಸ್ಟ್ರೇಲಿಯಾ’ ಹೊಸ ಘೋಷಣೆಯನ್ನು ತಕ್ಷಣವೆ ಮಾನ್ಯಗೊಳಿಸಿದ್ದಾರೆ. ದೇಶದ ರಾಜಧಾನಿ ಕ್ಯಾಂಬೆರಾದಲ್ಲಿ ನಡೆದ ಸರಳ ಆಚರಣೆಯಲ್ಲಿ ಎಂದಿನಂತೆ ಸ್ಥಳೀಯ ಅಬೊರಿಜಿನಲ್ ಜನಪಂಗಡವು ತಮ್ಮ ಕುಲದ ರೀತಿರಿವಾಜಿನಂತೆ ‘ವೆಲ್ಕಮ್ ಟು ಕಂಟ್ರಿ’ ನಡೆಸಿ ಹೊಸರಾಜನನ್ನು ಸ್ವಾಗತಿಸಿದ್ದಾರೆ. ಮುಂದಿನ ಸೋಮವಾರ ನಡೆಯಲಿರುವ ಅಳಿದ ರಾಣಿಯ ಫ್ಯೂನರಲ್ ನಲ್ಲಿ ಭಾಗವಹಿಸಲು ನಮ್ಮ ಪ್ರಧಾನಮಂತ್ರಿಗಳು ಶುಕ್ರವಾರ ಸಂಜೆ ಲಂಡನ್ ತಲುಪಿದ್ದಾರೆ.

ಕಳೆದ ವಾರದ ಶುಕ್ರವಾರ ರಾಣಿ ಎಲಿಝಬೆತ್ ಇನ್ನಿಲ್ಲ ಎನ್ನುವ ಸುದ್ದಿ ಬಂದಾಗ ಆಸ್ಟ್ರೇಲಿಯಾದ ಎಲ್ಲ ರಾಜ್ಯಗಳ ರಾಜಧಾನಿಗಳಲ್ಲಿರುವ ರಾಜ್ಯಮಟ್ಟದ ಗವರ್ನರ್ ಗಳು ಸಂತಾಪಸೂಚನೆಯ ಹೇಳಿಕೆಗಳನ್ನು ಕೊಟ್ಟು ತಮ್ಮ ವಾಸಸ್ಥಳವನ್ನು ಸಾರ್ವಜನಿಕರಿಗೆ ತೆರೆದರು. ಜನರು ಹೋಗಿ ಹೂ ಗುಚ್ಛಗಳನ್ನು ಇಟ್ಟು ತಮ್ಮ ಶೋಕವನ್ನು ಹಂಚಿಕೊಂಡರು. ಆ ವಾರಾಂತ್ಯದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಮಂದಿ ನಮ್ಮ ಬ್ರಿಸ್ಬೇನ್ ನಗರದ ಗವರ್ನರ್ ಮನೆಗೆ ಹೋಗಿ ಹೂ ಗುಚ್ಛ ಸಮರ್ಪಿಸಿದರಂತೆ. ಎಲ್ಲಕ್ಕೂ ಕಳಶವಿಡುವಂತೆ, ಗೌರವಸೂಚಕವಾಗಿ ಸಿಡ್ನಿ ನಗರದ ಹೆಸರುವಾಸಿಯಾದ Opera House ನ ದಳಗಳಲ್ಲಿ ರಾಣಿ ಎಲಿಜಬೆತ್ ಚಿತ್ರವನ್ನು ಬಿಂಬಿಸಿದ್ದಾರೆ. ರೇಡಿಯೊ ಮತ್ತು ಟಿವಿ ವಾಹಿನಿಗಳಿಗೆ ಇನ್ನಿಲ್ಲದಷ್ಟು ಕೆಲಸ. ವರದಿಗಾರರು ಬ್ರಿಟನ್ನಿನಲ್ಲಿ ನಡೆಯುತ್ತಿರುವ ರಾಣಿಯ ಅವಸಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣಪುಟ್ಟ ಆಚರಣೆಗಳನ್ನು ಇಲ್ಲಿ ಎಡಬಿಡದೆ ವರದಿ ಮಾಡುತ್ತಿದ್ದಾರೆ. ಅಲ್ಲದೆ, ಅಲ್ಲಿನ ಜನರನ್ನು ಮಾತನಾಡಿಸುತ್ತ ತಮ್ಮ ಪ್ರೀತಿಯ ರಾಣಿಯ ಬಗ್ಗೆ ಜನರಲ್ಲಿದ್ದ ಆದರ, ಪ್ರೀತಿಗಳನ್ನು ಎತ್ತಿ ಹಿಡಿಯುತ್ತಿದ್ದಾರೆ. ಜೊತೆಗೆ, ರಾಣಿಯ ಫ್ಯೂನರಲ್ ಕಾರ್ಯಕ್ರಮದ ಬಗ್ಗೆ, ಅದರಲ್ಲಿ ಪಾಲ್ಗೊಳ್ಳಲಿರುವ ದೇಶವಿದೇಶಗಳ ಆಹ್ವಾನಿತರ ಬಗ್ಗೆ, ರಾಣಿಯ ನೆನಪುಗಳ ಸರಮಾಲೆಯ ಬಗ್ಗೆ ಇನ್ನಷ್ಟು ವರದಿಗಳು, ಕಾರ್ಯಕ್ರಮಗಳು.

ತನ್ನದೇ ಆದ ‘ಸೂರ್ಯ ಮುಳುಗದ’ ನಾಡು ಯುನೈಟೆಡ್ ಕಿಂಗ್ಡಮ್ ಸಾಮ್ರಾಜ್ಯದ ಅಧಿಪತಿಯಾಗಿದ್ದ, ಅದರ ಜೊತೆಗೆ ಐವತ್ತಾರು ಕಾಮನ್ವೆಲ್ತ್ ರಾಷ್ಟ್ರಗಳ ನಾಯಕಿಯಾಗಿದ್ದ ರಾಣಿ ಎರಡನೆ ಎಲಿಝಬೆತ್ ಕೂಡ ಹೀಗೆಯೆ ಎಪ್ಪತ್ತು ವರ್ಷಗಳ ಸುದೀರ್ಘ ಕಾಲದಲ್ಲಿ ‘ಮುಳುಗದ’ ಸೂರ್ಯನಂತೆ ರಾರಾಜಿಸುತ್ತ ಸಾಮ್ರಾಜ್ಞಿಯಾಗಿದ್ದರು. ‘ನನ್ನ ಜೀವನವನ್ನು ನಿಮ್ಮ ಸೇವೆಗಾಗಿ ಮುಡಿಪಿಟ್ಟಿದ್ದೀನಿ’ ಎನ್ನುತ್ತಾ ಸದಾಕಾಲ ತಮ್ಮ ಕಾರ್ಯಕ್ಷಮತೆ ತೋರಿದರು ಎನ್ನುವುದೀಗ ಇಡೀ ಪ್ರಪಂಚದ ಜನರಿಗೆ ಅತ್ಯುತ್ತಮ ಉದಾಹರಣೆಯಾಗಿದೆ. ಈ ವಾರ ಅವರು ಕಣ್ಮರೆಯಾದರೂ ಮಕ್ಕಳಿಂದ ಹಿಡಿದು ಅತಿ ವೃದ್ಧರ ತನಕ ರಾಣಿ ಎಲಿಝಬೆತ್ ಎಲ್ಲರ ಮನಮಂದಿರವನ್ನು ಹೊಕ್ಕು ತಾವೊಬ್ಬ ದಂತಕತೆಯಾಗಿದ್ದಾರೆ. ರಾಣಿಯೆಂದರೆ ಹೀಗಿರಬೇಕು ಎನ್ನುವುದಕ್ಕೆ ಸರಿಸಾಟಿಯಾದ ಉಪಮೆಯಾಗಿದ್ದಾರೆ. ಸಾವಿರಾರು ಜನರು ರಾಣಿಯ ಕೊನೆ ದರ್ಶನ, ಬೀಳ್ಕೊಡುಗೆಗಳಲ್ಲಿ ನೇರವಾಗಿ ಪಾಲ್ಗೊಂಡಿದ್ದಾರೆ. ಕೋಟ್ಯಂತರ ಜನರ ಮನಸ್ಸು ಆಕೆಗೆ ಹೇಳುವ ಕೊನೆ ವಿದಾಯದಲ್ಲಿ ಮುಳುಗಿಹೋಗಿದೆ.

ನಡೆಯುತ್ತಿರುವ ಘಟನೆಗಳು, ಆಚರಣೆಗಳು, ಮುಂದಿನ ವಾರ ನಡೆಯಲಿರುವ ಅಂತಿಮ ನಮನ ಮತ್ತು ವಿದಾಯಕ್ಕೆ ಸಜ್ಜಾಗುತ್ತಿರುವ ಬ್ರಿಟನ್. ರಾಣಿಯ ಜೀವನದ ಜೊತೆ ಅವಿಭಾಜ್ಯವಾಗಿದ್ದ ಆಕೆಯ ಸೋದರಿ, ಗಂಡ-ಮಕ್ಕಳು, ಮೊಮ್ಮಕ್ಕಳು, ರಾಣಿಯ ಜೊತೆಗಿದ್ದ ಮತ್ತವರೆಲ್ಲರ ನಂಟು ಎಲ್ಲವನ್ನೂ ಕೂಲಂಕುಷವಾಗಿ ಮತ್ತೊಮ್ಮೆ ಅವಲೋಕಿಸುತ್ತಿದ್ದಾರೆ. ಅದಕ್ಕೆ ಸಮಾನವಾಗಿ, ಸ್ವಲ್ಪವೂ ಲೋಪವಿಲ್ಲದಂತೆ ಹೊಸ ರಾಜನ ಅಧಿಕಾರ ಸ್ವೀಕಾರ, ಅವರ ಸ್ಕಾಟ್ಲೆಂಡ್, ವೇಲ್ಸ್, ಉತ್ತರ ಐರ್ಲೆಂಡ್ ಭೇಟಿ, ಇಂಗ್ಲೆಂಡಿಗೆ ಆಗಮಿಸುತ್ತಿರುವ ಅಂತಾರಾಷ್ಟ್ರೀಯ ನಾಯಕರ ಜೊತೆ ಮಾತುಕತೆ-ಹೀಗೆ ನೂರಾರು ವರದಿಗಳು! ಇವೆಲ್ಲವೂ ಅತ್ಯಂತ ಚೊಕ್ಕವಾಗಿ, ನಿರ್ದಿಷ್ಟ ಸೂಚನೆಗಳಂತೆ ಸ್ವಲ್ಪವೂ ಏರುಪೇರಿಲ್ಲದಂತೆ ನಡೆಯುತ್ತಿರುವುದು ಬಹಳ ಸೋಜಿಗ. ರಾಣಿ ಸಾವಿಗೆ ಮತ್ತು ಹೊಸ ರಾಜನ ಅಧಿಕಾರ ಸ್ವೀಕಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದರಲ್ಲೂ, ಪ್ರತಿಯೊಬ್ಬರಲ್ಲೂ ಹೆಸರುವಾಸಿಯಾದ ಬ್ರಿಟಿಷ್ ಶಿಸ್ತು ಪಾಲನೆ, ಅಚ್ಚುಕಟ್ಟುತನ ಮತ್ತು ಶ್ರದ್ಧೆ ಎದ್ದು ಕಾಣುತ್ತಿದೆ. ಅದು ನಮ್ಮ ಆಸ್ಟ್ರೇಲಿಯಾದಲ್ಲೂ ಪ್ರತಿಬಿಂಬಿಸಿದೆ.

ಆಸ್ಟ್ರೇಲಿಯಾದ ಬ್ರಿಟಿಷ್ ಮೂಲದ ಬಿಳಿಯರು ಮತ್ತು ಆ ಕಾರಣಕ್ಕಾಗಿಯೆ ಬ್ರಿಟಿಷ್ ಪ್ರಜೆಗಳೂ ಆದ ಆಸ್ಟ್ರೇಲಿಯನ್ ಸಮಾಜದ ಮುಖ್ಯವಾಹಿನಿಯ ಜನರು ಅತ್ಯಂತ ಸಹಜವಾಗಿ ಆಕೆಯನ್ನು ತಮ್ಮ ರಾಣಿಯೆಂದು ಒಪ್ಪಿಕೊಂಡು ಬಾಳಿದ್ದಾರೆ. ದೇಶಪೂರ್ತಿ ‘ಗಾಡ್ ಸೇವ್ ದ ಕ್ವೀನ್’ ದೇಶಗೀತೆ ಅನವರತವಾಗಿ ಪಾಲನೆಯಲ್ಲಿದೆ. ಇಲ್ಲಿನ ಹೆಚ್ಚಿನ ಜನರು ದೂರದ ಬ್ರಿಟನ್ನಿನ ತಮ್ಮವರ ಧ್ಯಾನದಲ್ಲಿದ್ದರೆ ಅಲ್ಲಿ ಬ್ರಿಟನ್ನಿನ ಮಂದಿ ಇಲ್ಲಿನ ಆಸ್ಟ್ರೇಲಿಯಾದಲ್ಲಿ ಅವಿಭಾಜ್ಯವಾಗಿರುವ ತಮ್ಮ ನಾಡಿನ ನಂಟನ್ನು ನೆನೆಯುವುದು ಸರ್ವೇಸಾಧಾರಣ. ಹತ್ತೊಂಭತ್ತು ಮತ್ತು ಇಪ್ಪತ್ತನೆ ಶತಮಾನಗಳಲ್ಲಿ ಎರಡೂ ದೇಶಗಳು ಭೂಗೋಳಿಕವಾಗಿ ದೂರವಿದ್ದು ಬೇರಾದರೂ ಎರಡರ ಆತ್ಮವೊಂದೆ ಎನ್ನುವಂತೆ ಬಾಳಿದ್ದು ಸುಳ್ಳಲ್ಲ. ಅಂದಿನ ರಾಜ ಅನುಮೋದಿಸಿದ್ದ ‘ವೈಟ್ ಆಸ್ಟ್ರೇಲಿಯಾ ಪಾಲಿಸಿ’ ಇಂದಿಗೂ, ಇಪ್ಪತ್ತೊಂದನೆ ಶತಮಾನದಲ್ಲೂ, ರಾಜಾರೋಷವಾಗಿ ತನ್ನ ಛಾಪು ತೋರಿಸುವುದು ಕೂಡ ಅಷ್ಟೇ ನಿಜ.

ರೇಡಿಯೊ ಮತ್ತು ಟಿವಿ ವಾಹಿನಿಗಳಿಗೆ ಇನ್ನಿಲ್ಲದಷ್ಟು ಕೆಲಸ. ವರದಿಗಾರರು ಬ್ರಿಟನ್ನಿನಲ್ಲಿ ನಡೆಯುತ್ತಿರುವ ರಾಣಿಯ ಅವಸಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಸಣ್ಣಪುಟ್ಟ ಆಚರಣೆಗಳನ್ನು ಇಲ್ಲಿ ಎಡಬಿಡದೆ ವರದಿ ಮಾಡುತ್ತಿದ್ದಾರೆ. ಅಲ್ಲದೆ, ಅಲ್ಲಿನ ಜನರನ್ನು ಮಾತನಾಡಿಸುತ್ತ ತಮ್ಮ ಪ್ರೀತಿಯ ರಾಣಿಯ ಬಗ್ಗೆ ಜನರಲ್ಲಿದ್ದ ಆದರ, ಪ್ರೀತಿಗಳನ್ನು ಎತ್ತಿ ಹಿಡಿಯುತ್ತಿದ್ದಾರೆ.

ದೇಶದ ಅತ್ಯಂತ ಮುಖ್ಯವಾದ ಭಾಗವಾಗಿದ್ದರೂ ಅಲ್ಪಸಂಖ್ಯಾತರಾದ ಆಸ್ಟ್ರೇಲಿಯನ್ ಮೂಲನಿವಾಸಿಗಳಲ್ಲಿ ರಾಣಿಯ ಬಗ್ಗೆ ಮಿಶ್ರಭಾವವಿದ್ದದ್ದು ಕಾಣಿಸುತ್ತದೆ. ಈ ವರ್ಷ ಮೇ ತಿಂಗಳಿನಲ್ಲಿ ನಡೆದ ರಾಷ್ಟ್ರೀಯ ಚುನಾವಣೆಯಲ್ಲಿ ಜಯಗಳಿಸಿದವರಲ್ಲಿ ವಲಸೆಗಾರರ, ರೆಫ್ಯೂಜಿಗಳ ಮತ್ತು ಆಸ್ಟ್ರೇಲಿಯನ್ ಮೂಲನಿವಾಸಿಗಳ ಪ್ರತಿನಿಧಿಗಳು ಹೆಚ್ಚಿದ್ದಾರೆ. ಇವರಲ್ಲಿ ಬ್ರಿಟಿಷ್ ರಾಣಿಯ ಬಗ್ಗೆ ಅಚಲ ಮತ್ತು ಸಹಜ ಭಕ್ತಿಯಿರುವುದು ಕಡಿಮೆ. ಉದಾಹರಣೆಗೆ, ಕಳೆದ ತಿಂಗಳು ಆಗಸ್ಟಿನಲ್ಲಷ್ಟೇ ದೇಶದ ಪಾರ್ಲಿಮೆಂಟಿನಲ್ಲಿ ನಡೆದ ಘಟನೆ ದೊಡ್ಡ ಸುದ್ದಿಯಾಗಿತ್ತು. ಹೊಸದಾಗಿ ಸೆನೆಟರ್ ಸ್ಥಾನಕ್ಕೆ ಚುನಾಯಿತರಾದ ಆಸ್ಟ್ರೇಲಿಯನ್ ಅಬೊರಿಜಿನಲ್ ರಾಜಕಾರಣಿ ಮಹಿಳೆಯೊಬ್ಬರು ತಾವು ಪ್ರಮಾಣವಚನ ಸ್ವೀಕರಿಸುವ ಮೊದಲು ಕೈಯೆತ್ತಿ ‘ರಾಣಿ ಎಲಿಝಬೆತ್ ಒಬ್ಬ ಕಾಲೊನೈಸರ್ (ವಸಾಹತುಶಾಹಿ)’ ಎಂದು ಘೋಷಣೆ ಕೂಗಿ ರಾಣಿಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುವುದಿಲ್ಲ ಎಂದಾಗ ಗುಲ್ಲೆದ್ದಿತ್ತು. ಅಂದಿನ ಗುಲ್ಲು ಮುಂಬರುವ ಬದಲಾವಣೆಗಳ ನಾಂದಿಯೇನೊ. ತಮ್ಮ ಅಚ್ಚುಮೆಚ್ಚಿನ ರಾಣಿ ಕಣ್ಮರೆಯಾಗಿರುವಾಗ ಇನ್ನೂ ಕೂಡ ಬ್ರಿಟಿಷ್ ರಾಜ ಆಸ್ಟ್ರೇಲಿಯದ ‘ಹೆಡ್ ಆಫ್ ಗವರ್ನಮೆಂಟ್’ ಎಂದು ಮುಂದುವರೆಯಬೇಕೆ ಎನ್ನುವ ಮಾತು ಎದ್ದಿದೆ.

ರಾಣಿ ಎಲಿಝಬೆತ್ ಆಸ್ಟ್ರೇಲಿಯಾದ ಹೃದಯಭಾಗವಾದ ಆಲಿಸ್ ಸ್ಪ್ರಿಂಗ್ ಪ್ರದೇಶಕ್ಕೆ ಮೂರು ಬಾರಿ ಭೇಟಿ ಕೊಟ್ಟಿದ್ದರಂತೆ. ಕಳೆದ ವಾರಾಂತ್ಯ ರಾಣಿಯ ಸಾವಿನ ಸುದ್ದಿ ಪ್ರಕಟವಾದ ಹೊಸತರಲ್ಲಿ, ಇಷ್ಟು ದಶಕಗಳ ತನಕ ತಮ್ಮನ್ನು ಆಳಿದ್ದ ಈಗ ಅಳಿದ ರಾಣಿಯ ಬಗ್ಗೆ ಆಲಿಸ್ ಸ್ಪ್ರಿಂಗ್ ಜನರನ್ನು ಎಸ್ ಬಿ ಎಸ್ ಟಿವಿ ವಾಹಿನಿ ಮಾತನಾಡಿಸಿತ್ತು. ಕೆಲವರು ‘ಹೌದಾ, ರಾಣಿ ಸತ್ತಳಾ, ನಮಗೆ ಗೊತ್ತೇ ಇರಲಿಲ್ಲ,’ ಎಂದರು. ಹಲವರು ‘ಅಯ್ಯೋ, ನಮ್ಮ ರಾಣಿ ಹೋದಳು, ದುಃಖವಾಗಿದೆ,’ ಎಂದು ಕಣ್ಣೀರಿಟ್ಟರು. ಇನ್ನೂ ಕೆಲವರು ‘ನಾವು ಅಬೊರಿಜಿನಲ್ ಜನರು ಎಲ್ಲರನ್ನೂ ಪ್ರೀತಿಯಿಂದ ಬರಮಾಡಿಕೊಳ್ಳುತ್ತೀವಿ. ಅದೇ ರೀತಿ ಬೀಳ್ಕೊಡುತ್ತೀವಿ. ಬೇಧಭಾವ ತೋರುವುದಿಲ್ಲ. ಆಕೆಯ ಸಾವು ಬೇಸರ ತಂದಿದೆ, ನಿಜ. ಆಕೆಯ ನಿರ್ಗಮನಕ್ಕೆ ಸಲ್ಲುವಂತ ಆಚಾರಗಳನ್ನು ನಾವು ಗೌರವವಾಗಿ ಬದ್ಧತೆಯಿಂದ ಮಾಡುತ್ತೀವಿ. ಅದು ನಮ್ಮ ಅಬೊರಿಜಿನಲ್ ಜನರ ಪದ್ಧತಿ,’ ಎಂದಿದ್ದಾರೆ. ಇವೇ ಕೆಲ ಭಾವನೆಗಳನ್ನು ನಗರಗಳಲ್ಲಿರುವ ಅಬೊರಿಜಿನಲ್ ಮಂದಿಯೂ ಹಂಚಿಕೊಂಡಿದ್ದಾರೆ.

ರಾಜಕೀಯ ನಾಯಕರಿಂದ ಹಿಡಿದು ಜನಸಾಮಾನ್ಯರ ಮನಸ್ಸಿನಲ್ಲಿ ರಾಣಿಯೆಂದರೆ ಹೀಗಿರಬೇಕು ಎನ್ನುವ ಉಪಮೆಯಾಗಿದ್ದ ಎಲಿಝಬೆತ್ ರಾಣಿ ಸಾಮ್ರಾಜ್ಞಿಯಾಗಿಯೆ ಬಾಳಿದ್ದು ನಿಜ. ಆಕೆಯ ಅಂತರಾಳದಲ್ಲಿ ಅದೆಷ್ಟೇ ಗೊಂದಲ, ಸಂಘರ್ಷಗಳಿದ್ದರೂ ತನ್ನ ರಾಜಮನೆತನದ, ತನ್ನ ಅತಿ ನಾಜೂಕಿನ ಸ್ಥಾನದ ನಿರೀಕ್ಷೆಗಳಿಗೆ ತಕ್ಕಂತೆ ಅವುಗಳ ಚೌಕಟ್ಟಿನಲ್ಲೇ ಬದುಕಿದ್ದು ಸಹಾನುಭೂತಿಯ ಜೊತೆಗೆ ಹಲವಾರು ಪ್ರಶ್ನೆಗಳನ್ನೆತ್ತುತ್ತದೆ. ಒಬ್ಬ ರಾಣಿಗೆ ಇದ್ದ ಹಲವಾರು ಅರಮನೆಗಳು, ಸಾವಿರಾರು ಎಕರೆ ಭೂಮಿ, ಸಂಪಾದನೆ, ಸೌಲಭ್ಯಗಳು, ಏಷ್ಯಾ ಮತ್ತು ಆಫ್ರಿಕಾ ಖಂಡಗಳಲ್ಲಿ ಆಕೆ ತನ್ನ ಕೆಲ ಭೇಟಿಗಳ ಸಮಯದಲ್ಲಿ ಏರ್ಪಡಿಸಿದ್ದ ಶಿಕಾರಿಗಳ ತಂಡಗಳಲ್ಲಿ ಇದ್ದದ್ದು, ಆಸ್ಟ್ರೇಲಿಯದ ಮೂಲನಿವಾಸಿಗಳ ಬಗ್ಗೆ ಇದ್ದ ಕ್ರೂರ ತಾರತಮ್ಯತೆಗಳ ಬಗ್ಗೆ ಮಾತನಾಡದಿದ್ದದ್ದು, ತನ್ನ ಬಹು ಇಷ್ಟದ ಕೆನಡಾ ದೇಶದ ಮೂಲನಿವಾಸಿಗಳ ಮಾನವ ಹಕ್ಕುಗಳ ಬಗ್ಗೆ ಗಮನಕೊಡದಿದ್ದದ್ದು, ತನ್ನ ಕಾಲದ ನಂತರ ಕಾಮನ್ವೆಲ್ತ್ ಒಕ್ಕೂಟದ ನಾಯಕತ್ವವು ತನ್ನ ಹಿರಿಯ ಮಗ ಚಾರ್ಲ್ಸ್ ರಿಗೆ ಸೇರುತ್ತದೆ ಎನ್ನುವ ಘೋಷಣೆಯೊಂದಿಗೆ ಆ ಒಕ್ಕೂಟದ ದೇಶಗಳ ಮೇಲೆ ಬ್ರಿಟಿಷ್ ರಾಜಮನೆತನಕ್ಕೆ ಇದ್ದ ಅಧಿಕಾರ ಪ್ರಾಬಲ್ಯವನ್ನು ಸಮರ್ಥಿಸಿದ್ದು-ಹೀಗೆ ಹಲವಾರು ವಿಷಯಗಳು. ರಾಜಕೀಯ ವಿಷಯಗಳಲ್ಲಿ ರಾಜಮನೆತನವು ಪ್ರವೇಶಿಸುವುದಿಲ್ಲ ಎನ್ನುವ ಕಾನೂನಿದ್ದರೂ ಒಬ್ಬ ಅರಿತ ಪ್ರಜ್ಞಾವಂತ ನಾಯಕಿಯಾಗಿ ಆಕೆ ಆಸ್ಟ್ರೇಲಿಯನ್ ಮೂಲನಿವಾಸಿಗಳ ಮಾನವಹಕ್ಕುಗಳ ವಿಷಯದಲ್ಲಿ ಬದಲಾವಣೆ ತರಬಹುದಿತ್ತು. ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಬಹುದಿತ್ತು.

ಅಂತಹ ಬದಲಾವಣೆಗಳನ್ನು ರಾಜ ಚಾರ್ಲ್ಸ್ ರಿಂದ ನಿರೀಕ್ಷಿಸಬಹುದೆ? ಪ್ರಿನ್ಸ್ ಚಾರ್ಲ್ಸ್ ಒಬ್ಬ ಖ್ಯಾತ ಪರಿಸರವಾದಿ. ಈಗ ರಾಜನಾಗಿ ಅವರು ಅದೇ ಹಾದಿಯಲ್ಲಿ ಸಾಗಿ ಬಹು ಚರ್ಚಿತವಾಗಿರುವ ಹವಾಮಾನ ಬದಲಾವಣೆ, ಗ್ಲೋಬಲ್ ವಾರ್ಮಿಂಗ್ ಬಗ್ಗೆ ಮಾತನಾಡುತ್ತಾರೆಯೇ? ಹಿಂದೆ ಮಾಡಿದ್ದಂತೆ ಈಗಲೂ ದೇಶವಿದೇಶಗಳ ಸರಕಾರಗಳ ಮನವೊಲಿಕೆಯಲ್ಲಿ ತೊಡಗುತ್ತಾರೆಯೇ? ಆಸ್ಟ್ರೇಲಿಯಾದ ಈಗಿನ ಸರಕಾರವು ಆ ಎರಡೂ ವಿಷಯಗಳಿಗೆ ಬದ್ಧವಾಗಿದೆ. ರಾಜ ಚಾರ್ಲ್ಸ್ ಖಂಡಿತವಾಗಿಯೂ ಅವುಗಳ ಪರವಾಗಿ ಮುಂದುವರೆಯುತ್ತಾರೆಂದು ನಮ್ಮ ಪ್ರಧಾನಮಂತ್ರಿ ಆಶಯ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ನೇಮಕವಾಗಿರುವ, ಚಿಕ್ಕ ವಯಸ್ಸಿನ ಪ್ರಿನ್ಸ್ ಆಫ್ ವೇಲ್ಸ್ ವಿಲಿಯಂ ಕೂಡ ಹವಾಮಾನ ಬದಲಾವಣೆ ಬಗ್ಗೆ ತಮ್ಮ ಯೋಚನೆಗಳಿಗೆ ಬೆಂಬಲ ಕೊಡುತ್ತಾರೆಂಬ ಭರವಸೆಯಿದೆ ಎಂದಿದ್ದಾರೆ. ಹೊಸ ರಾಜನೊಂದಿಗೆ ಆಸ್ಟ್ರೇಲಿಯಾದ ಭವಿಷ್ಯದ ದಿನಗಳ ಬಗ್ಗೆ ಹೊಸ ಕನಸುಗಳು ಹುಟ್ಟಿವೆ.