“ನಿನ್ನ ಪ್ರಶ್ನೆ ಅರ್ಥವಾಗಲಿಲ್ಲ. ನನಗೆ ನನ್ನ ಗಂಡನ ಜೊತೆ ಇರುವ ಸಂಬಂಧವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ನೀನು ಪ್ರಶ್ನಿಸುತ್ತೀಯಾ? ಇಬ್ಬರು ವಯಸ್ಕರ ನಡುವೆ ಇರುವ ಸಂಬಂಧಕ್ಕೆ ಅವರ ಮಧ್ಯೆ ಪರಸ್ಪರ ಒಪ್ಪಿಗೆಯಿರುವುದು ಮುಖ್ಯವೇ ಹೊರತು, ಅದನ್ನು ಅರ್ಥಮಾಡಿಕೊಳ್ಳುವ ಗೋಜು ಮೂರನೆಯ ವ್ಯಕ್ತಿಗೆ ಯಾಕೆ. ಅಂತಹ ಸಂಬಂಧಗಳನ್ನು ಅವರು ಹೇಗೆ ತೋರಿಸಿಕೊಳ್ಳುತ್ತಾರೋ ಹಾಗೆ ನಾವು ಅವನ್ನು ನೋಡಬೇಕು, ನಮಗೆ ಬೇಕಂತೆ ಅಲ್ಲ”, ಅಂದರು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ.

 

ಸಿಡ್ನಿ ಮಹಾನಗರದಿಂದ ಎಪ್ಪತ್ತು ಕಿಲೋಮೀಟರ್ ದೂರ ದಕ್ಷಿಣದಲ್ಲಿರುವ ವೊಲೊಂಗೊಂಗ್ ಚಿಕ್ಕ ಪಟ್ಟಣ. ಕೆಲಪ್ರದೇಶಗಳಲ್ಲಿ ಮಾತ್ರ ಅಂಗಡಿ, ವ್ಯಾಪಾರ ಇತ್ಯಾದಿ ಇತ್ತು. ಮಿಕ್ಕಂತೆ ಜನವಸತಿ. ಬೆಂಗಳೂರಿನಿಂದ ಹೋಗಿ ಅಲ್ಲಿಳಿದಾಗ ಆಘಾತವಾಗಿತ್ತು! ಆದರೆ ಪಟ್ಟಣದ ಪೂರ್ವದಲ್ಲಿದ್ದ ಕರಾವಳಿ ತೀರವನ್ನು ನೋಡಿದರೆ ಎಲ್ಲರೂ ಮನಸೋಲುವುದೇ! ಹೊಸತರಲ್ಲಿ ಆಹಾರದ ಸಮಸ್ಯೆ ಕಾಡಿತ್ತು.

ನಾನು ಸಸ್ಯಾಹಾರಿ ಎಂದಾಗಲೆಲ್ಲ ಅಲ್ಲಿನ ಜನರಲ್ಲಿ ಹಲವಾರು ಪ್ರಶ್ನೆಗಳು ಏಳುತ್ತಿದ್ದವು. ಮೊದಲ ಪ್ರಶ್ನೆ ಯಾಕೆ? ಅಂತ. ಮಿಕ್ಕವು, “ಹಾಗಾದರೆ ನೀನು ಮೀನು ತಿನ್ನುತ್ತೀಯಾ?”, “ಚಿಕನ್ ತುಂಡುಗಳಿವೆ ಅಷ್ಟೇ, ಅವನ್ನ ತೆಗೆದು ಪಕ್ಕಕ್ಕಿರಿಸಿ ಈ ಫ್ರೈಡ್ ರೈಸ್ ತಿನ್ನಬಹುದು”… ಎನ್ನುವರು. ಇಲ್ಲ, ಅವೆಲ್ಲಾ ನನ್ ಕೈಯಲ್ಲಿ ಆಗಲ್ಲಾ, ಎಂದು ಹೇಳಿದರೆ ಎಷ್ಟೋ ಜನ ನಂಬುತ್ತಿರಲಿಲ್ಲ. ನನ್ನ ಮಾತು ಅವರ ಈ ಕಿವಿಯಿಂದ ಹೋಗಿ ಆಕಿವಿಯಿಂದ ಬರುತ್ತಿತ್ತು. “ನಮ್ಮಲ್ಲಿ ವೆಜೆಟೇರಿಯನ್ ಅಡುಗೆ ಮಾಡುವುದು ಎಂದರೆ ಯಾರಿಗೂ ತಿಳಿದಿಲ್ಲ. ನಮ್ಮ ಊಟದಲ್ಲಿ ಸ್ವಲ್ಪ ಸಾಲಡ್ ಅಥವಾ ಬೇಯಿಸಿದ ತರಕಾರಿಗಳನ್ನ ಸೇರಿಸಿ ತಿನ್ನುವುದಷ್ಟೇ ನಮ್ಮ ವೆಜಿಟೇರಿಯನ್ ಸೇವೆ” ಎಂದು ಸ್ನೇಹಿತರೆಲ್ಲ ನಗುವರು! ಅವರ ಸಾಲಡ್ ನೋಡಿ ನಾನು “ಸೊಪ್ಪುಸದೆ ತಿಂತಾರೆ,
ನಮ್ಮಲ್ಲಿ ಹಸು, ಎಮ್ಮೆ ಜಗಿಯೋ ಥರ” ಎಂದು ನಗಾಡುತ್ತಿದ್ದೆ. ಆದರೆ ಈಗನನಗೂ ಆ ಹಸಿರುಎಲೆ ಸಾಲಡ್ ಸವಿರುಚಿ ಚೆನ್ನೆನಿಸಿದೆ.

ಮೊತ್ತಮೊದಲ ಬಾರಿ ಸೂಪರ್ ಮಾರ್ಕೆಟ್ ನಲ್ಲಿ ಕೆಂಪು ಬಣ್ಣದ ವಿವಿಧ ಆಹಾರವಸ್ತುಗಳನ್ನ ಕಂಡಾಗ ಅದೇನದು ಎಂದು ಸ್ನೇಹಿತರನ್ನು ಕೇಳಿದ್ದೆ. ಅದು ವಿವಿಧ ರೀತಿಗಳ ಮಾಂಸಾಹಾರ ಎಂದು ಸ್ವಲ್ಪ ಪರಿಚಯವನ್ನುಮಾಡಿಕೊಟ್ಟರು. ನಾವು ಮಾಡುವ ಅಡುಗೆ ಬಹಳ ಸರಳ – ಓವನ್ ಉಪಯೋಗಿಸಿ ಮಾಂಸ, ಚಿಕನ್, ಮೀನು ಇತ್ಯಾದಿ ಒಂದನ್ನು ಬೇಯಿಸಿ ಅವಕ್ಕೆ ವಿವಿಧ ಸಾಸ್ ಗಳನ್ನ ಹಾಕಿಕೊಂಡು,  ಪಕ್ಕ ಒಂದಷ್ಟು ಚಿಪ್ಸ್ ಇಟ್ಟರೆ ಅದೇ ನಮ್ಮ ಊಟ. ಬೇಕೆಂದರೆ ಸಾಲಡ್ ಅಥವಾ ಬೇಯಿಸಿದ ತರಕಾರಿ. ಬೆಳಗಿನ ಉಪಹಾರ
ಗಡತ್ತಾಗಿರಬೇಕು; ಮಧ್ಯಾಹ್ನದ ಲಂಚ್ ಮಿತವಾಗಿ; ಸಂಜೆಯ ಊಟ ಗಮ್ಮತ್ತಿರಬೇಕು. ಇದು ನಮ್ಮ ನಿತ್ಯಕ್ರಮ. ಅಪ್ಪಟ ಭಾರತೀಯಳಾದ ನನಗೆ ಅದನ್ನ ಕೇಳಿ ದಿಗಿಲಾಗಿತ್ತು!

ಹೊರದೇಶಗಳಿಂದ ಬಂದಿದ್ದ ವಿದ್ಯಾರ್ಥಿಗಳಿಗೆ ಅವರು ಮೆಂಟರಿಂಗ್ (mentoring) ಪ್ರೋಗ್ರಾಮ್ ನಡೆಸುತ್ತಿದ್ದರು. ಆಸ್ಟ್ರೇಲಿಯನ್ನರ ಆಹಾರ  ನಾನಾ ವಿಧದ ಪಾಸ್ತಾ, ಲಸಾಂಯಾ, ಪಿಜ್ಜಾ ಮುಂತಾದವು ಇಟಲಿ ದೇಶದ ಪ್ರಭಾವವಾದರೆ, ಜಾಕೆಟ್ ಪೊಟೇಟೊ ಬ್ರಿಟಿಷರ ಕಡೆಯದ್ದು; ಅಷ್ಟಲ್ಲದೇ ಚೀನಿಯರ ವಿವಿಧ ನೂಡಲ್ಸ್, ಫ್ರೈಡ್ ರೈಸ್,  ಅಮೆರಿಕನ್ನರ ಬರ್ಗರ್, ಜಪಾನ್ ದೇಶದಿಂದ ಸೂಶಿ … ಎಲ್ಲವನ್ನೂ ಮೆಚ್ಚಿ, ಬಾಚಿಅಪ್ಪಿಕೊಂಡು, ತಿಂದು ಆನಂದಿಸಿ ಕಡೆಯಲ್ಲಿ  ನಮ್ಮ ಬಿಬಿಕ್ಯೂ (BBQ) ಗೇ ಜೈ ಅನ್ನುತ್ತಾರೆ. ಅವರಿಗೆ ನನ್ನ ಪಲ್ಯ, ಸಾಂಬಾರ್, ರಸಂ ಪರಿಚಯವನ್ನು ಮಾಡಿಸಿದಾಗ ಸಂತೋಷ,  ಆಶ್ಚರ್ಯ ಪಟ್ಟುಕೊಂಡರು. ನೋಡನೋಡುತ್ತಾ ಈಗ ಆಸ್ಟ್ರೇಲಿಯಾ ದೇಶದ ತುಂಬಾ ವೆಜಿಟೇರಿಯನಿಸಂ ಮತ್ತು ವೀಗನ್ (ಯಾವುದೇ ಪ್ರಾಣಿಯ ಅಂಶವೂ ಸೇರಿರದ ಆಹಾರಪದ್ಧತಿ) ಆಹಾರಿಗಳು ದೊಡ್ಡ ಚಳವಳಿಯನ್ನೇ ಹುಟ್ಟುಹಾಕಿದ್ದಾರೆ. ಇತ್ತೀಚೆಗೆ ಹವಾಮಾನ ವೈಪರಿತ್ಯ ಕಾರಣಕ್ಕಾಗಿ, ಪ್ರಾಣಿದಯಾ ಕಾರಣಕ್ಕಾಗಿ, ಅಲರ್ಜಿಗಳ ಕಾರಣಕ್ಕಾಗಿ ಎಂಬಂತೆ.

ನಾನು ಸಸ್ಯಾಹಾರಿ ಎಂದಾಗಲೆಲ್ಲ ಅಲ್ಲಿನ ಜನರಲ್ಲಿ ಹಲವಾರು ಪ್ರಶ್ನೆಗಳು ಏಳುತ್ತಿದ್ದವು. ಮೊದಲ ಪ್ರಶ್ನೆ ಯಾಕೆ? ಅಂತ. ಮಿಕ್ಕವು, “ಹಾಗಾದರೆ ನೀನು ಮೀನು ತಿನ್ನುತ್ತೀಯಾ?”, “ಚಿಕನ್ ತುಂಡುಗಳಿವೆ ಅಷ್ಟೇ, ಅವನ್ನ ತೆಗೆದು ಪಕ್ಕಕ್ಕಿರಿಸಿ ಈ ಫ್ರೈಡ್ ರೈಸ್ ತಿನ್ನಬಹುದು”… ಎನ್ನುವರು. ಇಲ್ಲ, ಅವೆಲ್ಲಾ ನನ್ ಕೈಯಲ್ಲಿ ಆಗಲ್ಲಾ, ಎಂದು ಹೇಳಿದರೆ ಎಷ್ಟೋ ಜನ ನಂಬುತ್ತಿರಲಿಲ್ಲ. ನನ್ನ ಮಾತು ಅವರ ಈ ಕಿವಿಯಿಂದ ಹೋಗಿ ಆಕಿವಿಯಿಂದ ಬರುತ್ತಿತ್ತು. “ನಮ್ಮಲ್ಲಿ ವೆಜೆಟೇರಿಯನ್ ಅಡುಗೆ ಮಾಡುವುದು ಎಂದರೆ ಯಾರಿಗೂ ತಿಳಿದಿಲ್ಲ. ನಮ್ಮ ಊಟದಲ್ಲಿ ಸ್ವಲ್ಪ ಸಾಲಡ್ ಅಥವಾ ಬೇಯಿಸಿದ ತರಕಾರಿಗಳನ್ನ ಸೇರಿಸಿ ತಿನ್ನುವುದಷ್ಟೇ ನಮ್ಮ ವೆಜಿಟೇರಿಯನ್ ಸೇವೆ” ಎಂದು ಸ್ನೇಹಿತರೆಲ್ಲ ನಗುವರು!

ಆಸ್ಟ್ರೇಲಿಯಾಕ್ಕೆ ಹೋದ ಆರಂಭದ ವರ್ಷಗಳಲ್ಲಿ ನನ್ನ ವೆಜಿಟೇರಿಯನ್ ಆಹಾರಕ್ರಮದ ಬಗ್ಗೆ ಏಳುತ್ತಿದ್ದ ಪ್ರಶ್ನೆಗಳಿಗೆ ಉತ್ತರ  ಹೇಳುವುದು ನನಗೆ ಕಷ್ಟವಾಗುತಿತ್ತು. ವರ್ಷಗಳು ಉರುಳಿದಂತೆ ನನ್ನ ಸಸ್ಯಾಹಾರದ ಅಭ್ಯಾಸವನ್ನು ನಾನೇ ಬೇರೆಬೇರೆ ಕೋನಗಳಿಂದ ಬಗೆದು ನೋಡಿ, ವಿಶ್ಲೇಷಿಸಿ ಒಂದು ಉತ್ತರವನ್ನು ಕಂಡುಕೊಂಡೆ. ಪ್ರಾಣಿಯ ವಾಸನೆ ಮತ್ತು ಪ್ರಾಣಿಯ ಕೊಬ್ಬು ಇತ್ಯಾದಿ ನನ್ನಆಹಾರದಲ್ಲಿ ಬಂದರೆ ಅದು ನನಗೆ ಒಂದು ತರಹದ ಅಲರ್ಜಿ ತರುತ್ತದೆ. ಇದನ್ನು ಜನ ಬೇಗ ಅರ್ಥ ಮಾಡಿಕೊಂಡುಬಿಟ್ಟರು. ಯಾಕೆಂದರೆ ಅವರಲ್ಲಿ ಎಷ್ಟೊಂದು ತರಾವರಿ ಅಲರ್ಜಿಗಳಿತ್ತು! ಅಲರ್ಜಿಗಳನ್ನು ಕಂಡುಹಿಡಿದು ಅವಕ್ಕೆ ಮದ್ದು ಮಾಡುವುದು ಬಹು ದೊಡ್ಡ ವಿಷಯ. ಆರೋಗ್ಯ, ಸಂಶೋಧನೆ, ವ್ಯಾಪಾರ ಎಂಬಂತೆ ನಾನಾ  ಕ್ಷೇತ್ರಗಳಲ್ಲಿ ಅಲರ್ಜಿಗಳಿಗೆ ಮಹತ್ವದ ಸ್ಥಾನಮಾನ ಇದೆಯೆಂಬ ವಿಷಯ ತಿಳಿದು ನನಗೆ ಬಹುಅಚ್ಚರಿಯಾಗಿತ್ತು. ಒಬ್ಬರು ನನ್ನನ್ನು ನಿನಗೆ ಶೇಂಗಾಬೀಜದ (ಪೀನಟ್, peanut) ಅಲರ್ಜಿ ಇದೆಯಾ ಎಂದು ಕೇಳಿದಾಗ ಅದೆಂಥದ್ದಪ್ಪ ಎಂದು ತಬ್ಬಿಬ್ಬಾಗಿತ್ತು. ಇಇಇಇ ಇಲ್ಲಾ ಎಂದು ಗೊಣಗಿದಾಗ ಅವರು “ಸದ್ಯ, ಇಲ್ಲಿ ಹಲವಾರು ಮಕ್ಕಳು ಆ ಅಲರ್ಜಿಯಿಂದ ಸತ್ತೇಹೋಗಿದ್ದಾರೆ. ಇಲ್ಲಿನ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಶೇಂಗಾಬೀಜ ಶಾಶ್ವತವಾಗಿ ನಿಷೇಧಿಸಲ್ಪಟ್ಟ ಆಹಾರ. ಹಾಗೆ ನೋಡಿದರೆ ಯಾವುದೇ ನಟ್ (nut) ಪದಾರ್ಥವನ್ನೂ ನಾವು ಮಕ್ಕಳ ಬಳಿ ಕೊಂಡೊಯ್ಯುವ ಹಾಗಿಲ್ಲ. ದೊಡ್ಡವರಲ್ಲೂ ಈ ಶೇಂಗಾಬೀಜದ ಅಲರ್ಜಿಯಿಂದ ಉಸಿರುಗಟ್ಟುವಿಕೆಯಂಥ ಬೇರೇ ಬೇರೆ ಕೆಟ್ಟ ಪರಿಣಾಮಗಳಿವೆ,” ಎಂದರು. ಮೊದಲು ತಬ್ಬಿಬ್ಬಾಗಿಸಿದ ಆ ವಿಷಯಕ್ಕೆ ಆಮೇಲೆ ನಿಜಕ್ಕೂ ಗಂಭೀರಳಾಗಿಬಿಟ್ಟೆ! ಆ ದಿನ ಒಳ್ಳೆಯ ತಿಳುವಳಿಕೆ ಲಭಿಸಿತ್ತು.

ಆಸ್ಟ್ರೇಲಿಯಾದಲ್ಲಿ ಹೆಚ್ಚು ಹೆಂಗಸರು ಅಡುಗೆ ಮಾಡುವುದಿಲ್ಲ ಎಂದು ತಿಳಿದಾಗ ಯಾಕೆ ಎನ್ನುವ ಪ್ರಶ್ನೆ ಕೇಳುವ ಸರದಿ ನನ್ನದಾಗಿತ್ತು! ಆ ನನ್ನ ಮೆಂಟರ್ ‘ಯಾಕೆಂದು ಗೊತ್ತಿಲ್ಲ, ಆದರೆ ನಾನು ಅಡುಗೆ ಮಾಡುತ್ತೀನಿ’, ಎಂದರು. ಯೂನಿವರ್ಸಿಟಿಯಲ್ಲಿ ಹಲವರು ಹೇಳಿದ್ದು – ನಿಜ, ನಮ್ಮಲ್ಲಿ ಹೆಂಗಸರು ಅಡುಗೆ ಮಾಡುವ ಪರಿಪಾಠ ಕಡಿಮೆ. ಆದರೂ ಜನರು ತಮ್ಮ ಮನೆಗಳಲ್ಲಿ ಅಡುಗೆ ಮಾಡ್ತಾರೆ ಎನ್ನುವ ವಿಷಯವಂತೂ ಸತ್ಯ. ಅವರ ಪಾಶ್ಯಾತ್ಯ ಅಡುಗೆ ವೈವಿಧ್ಯತೆಗಳನ್ನು ನಾನೇ ಕುತೂಹಲದಿಂದ ಕಲಿತುಕೊಂಡೆ. ನಾನು ಅಡುಗೆ ಮಾಡುವುದನ್ನ ಗಂಡಸರು ಮೆಚ್ಚುತ್ತಿದ್ದರು; ಹೆಂಗಸರು, ಅಯ್ಯೋ ಯಾಕೆ ಕಷ್ಟಪಟ್ಟು ಅಡುಗೆ ಮಾಡ್ತೀಯ ಅಂತ ಕೇಳೋರು. ನಾವು ಹಿಂದೆ ಬ್ರಿಟಿಷರೇ ಆಗಿದ್ದರೂ ಆ ಸಮಾಜದಲ್ಲಿದ್ದಂತೆ ಸಾಂಪ್ರದಾಯಿಕ ಲಿಂಗಾಧಾರಿತ  ಪಾತ್ರಗಳನ್ನ ಈಗ ಮುಂದುವರೆಸಿಲ್ಲ, ಆಸ್ಸೀ ಶೀಲಾ ಎಂದರೆ ಗಟ್ಟಿಗಿತ್ತಿ, ಅಂತ ಹೇಳೋರು. ಹೆಂಗಸರು ಬಹುತರಹದ ಹೊರಾಂಗಣದ ಕೆಲಸಗಳನ್ನು ಮಾಡುತ್ತಾರೆ. ಹೆಚ್ಚಿನ ಕುಟುಂಬಗಳಲ್ಲಿ ಹೆಂಗಸರದ್ದೇ ಮುಖ್ಯ ನಿರ್ಧಾರಕರ ಪಾತ್ರ. ನಾವು ಭಾರತದಲ್ಲಿ ಇದು ಗಂಡಸರಕೆಲಸ, ಅದು ಹೆಂಗಸರ ಕೆಲಸ ಎಂದು ಮಾಡಿಕೊಂಡಿರುವ ವಿಭಜನೆ ಇಲ್ಲಿ ಅಷ್ಟೊಂದು ಚಾಲ್ತಿಯಲ್ಲಿಲ್ಲ. ಅದನ್ನು ಕೇಳುವದು, ನೋಡುವುದು ಹಿತವಾಗಿತ್ತು.

(ವೊಲೊಂಗೊಂಗ್)

ಒಬ್ಬರು ನನ್ನನ್ನು ನಿನಗೆ ಶೇಂಗಾಬೀಜದ (ಪೀನಟ್, peanut) ಅಲರ್ಜಿ ಇದೆಯಾ ಎಂದು ಕೇಳಿದಾಗ ಅದೆಂಥದ್ದಪ್ಪ ಎಂದು ತಬ್ಬಿಬ್ಬಾಗಿತ್ತು. ಇಇಇಇ ಇಲ್ಲಾ ಎಂದು ಗೊಣಗಿದಾಗ ಅವರು “ಸದ್ಯ, ಇಲ್ಲಿ ಹಲವಾರು ಮಕ್ಕಳು ಆ ಅಲರ್ಜಿಯಿಂದ ಸತ್ತೇಹೋಗಿದ್ದಾರೆ. ಇಲ್ಲಿನ ಮಕ್ಕಳ ಪಾಲನಾ ಕೇಂದ್ರಗಳಲ್ಲಿ ಶೇಂಗಾಬೀಜ ಶಾಶ್ವತವಾಗಿ ನಿಷೇಧಿಸಲ್ಪಟ್ಟ ಆಹಾರ. ಹಾಗೆ ನೋಡಿದರೆ ಯಾವುದೇ ನಟ್ (nut) ಪದಾರ್ಥವನ್ನೂ ನಾವು ಮಕ್ಕಳ ಬಳಿ ಕೊಂಡೊಯ್ಯುವ ಹಾಗಿಲ್ಲ. ದೊಡ್ಡವರಲ್ಲೂ ಈ ಶೇಂಗಾಬೀಜದ ಅಲರ್ಜಿಯಿಂದ ಉಸಿರುಗಟ್ಟುವಿಕೆಯಂಥ ಬೇರೇ ಬೇರೆ ಕೆಟ್ಟ ಪರಿಣಾಮಗಳಿವೆ,” ಎಂದರು. ಮೊದಲು ತಬ್ಬಿಬ್ಬಾಗಿಸಿದ ಆ ವಿಷಯಕ್ಕೆ ಆಮೇಲೆ ನಿಜಕ್ಕೂ ಗಂಭೀರಳಾಗಿಬಿಟ್ಟೆ! ಆ ದಿನ ಒಳ್ಳೆಯ ತಿಳುವಳಿಕೆ ಲಭಿಸಿತ್ತು.

ಆಸ್ಟ್ರೇಲಿಯಾದಿಂದ ಮೊದಲ ಸಲ ವಾಪಸ್ ಬೆಂಗಳೂರಿಗೆ ಹೋದಾಗ ನನ್ನ ಪಿಎಚ್ ಡಿ ಅಧ್ಯಯಕ್ಕೆ ಸಂಬಂಧಪಟ್ಟ ಕೆಲಸಗಳಿದ್ದವು. ಆಗ ನನ್ನ ಕುತೂಹಲವನ್ನು ಕೆದಕಿದ ಘಟನೆ ನಡೆಯಿತು. ನಂತರ ಅದನ್ನು ನನ್ನ ಮಹಾಪ್ರಬಂಧದಲ್ಲೂ ಉಲ್ಲೇಖಿಸಿದೆ ಕೂಡ. ಬೆಂಗಳೂರಿನ ಹೊರಗೆ ತಳಸಮುದಾಯಗಳ ಜೊತೆ ಕೆಲಸ ಮಾಡುತ್ತಿದ್ದಾಗ ಪರಿಚಯದ ಒಂದು ಸರ್ಕಾರೇತರ ಸಂಸ್ಥೆ ಮಾರ್ಚ್ ತಿಂಗಳಲ್ಲಿ ಏರ್ಪಡಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಗೆ ನನ್ನನ್ನು ಕರೆದಿದ್ದರು. ಅಭಿವೃದ್ಧಿ ಹೊಂದಿದ್ದ ಹೊರದೇಶಕ್ಕೆ ಹೋಗಿ ಅಲ್ಲಿನ ಸಮಾಜವನ್ನು ನಾನು ಕಂಡಿದ್ದನ್ನು ಕುರಿತು ಮಾತನಾಡಲು ಹೇಳಿದರು. ಆ ದಿನ ಅಲ್ಲಿ ಹಳ್ಳಿಗಳಿಂದ ಬಂದಿದ್ದ ನೂರಾರು ಹೆಣ್ಣುಮಕ್ಕಳು ಇದ್ದರು. ನಾನು ಅವರನ್ನೇ ಕೇಳಿದೆ – ನಿಮಗೆ ಯಾವ್ಯಾವ ವಿಷಯ ತಿಳ್ಕೊಳ್ಳಬೇಕು ಅಂತ ಅನ್ಸಿದೆ? ಮೊಟ್ಟಮೊದಲ ಪ್ರಶ್ನೆ, ಆ ದೇಶದಲ್ಲಿ ಹೆಣ್ಮಕ್ಳು ಯಾವ್ಯಾವ ಕೆಲಸ ಮಾಡ್ತಾರೆ? ನಾನು ಕಂಡಹಾಗೆ ಹೆಣ್ಮಕ್ಳು ಜಾಸ್ತಿ ಅಡುಗೆ ಕೆಲಸ ಮಾಡಲ್ಲ, ಗಂಡಸ್ರು ಮಾಡ್ತಾರೆ ಅಂದ ಕೂಡಲೇ ಚಪ್ಪಾಳೆ! ಇನ್ನೊಂದು ಪ್ರಶ್ನೆ, ಅಲ್ಲಿನ ಹೆಣ್ಮಕ್ಳು ಯಾವ ವಯಸ್ಸಿಗೆ ಮದುವೆಯಾಗ್ತಾರೆ? ಹದಿನಾರು, ಹದಿನೆಂಟು ವರ್ಷ ವಯಸ್ಸಾದ ಮೇಲೆ ಮದುವೆ ಆಗಬೋದು, ಆದರೆ ನಮ್ಮ ಭಾರತೀಯ ಪದ್ಧತಿಯಂತೆ ಅಪ್ಪಅಮ್ಮ ನೋಡಿ ನಿಂತು ಎಲ್ಲವನ್ನೂ ಏರ್ಪಡಿಸಿ ಅವರ ಮಕ್ಕಳಿಗೆ ಮದುವೆ ಮಾಡುವ ಪರಿಪಾಠವಿಲ್ಲ, ಎಂದೆ. ತಕ್ಷಣ ಅವರಲ್ಲೇ ಒಂದಷ್ಟು ಮಾತುಕತೆಗಳಾದವು. ಒಬ್ಬಾಕೆ ಎದ್ದು ನಿಂತು ‘ಹಾಗಿದ್ರೆ ಅವ್ರು ಅದ್ಹೇಗೆ ಮದ್ವೆ ಆಗ್ತಾರೆ’, ಅಂತ ಕೇಳಿದಳು. ವಯಸ್ಸಿಗೆ ಬಂದು, ಹುಡುಗನೋ ಹುಡುಗಿಯೋ ಒಬ್ಬರಿಗೊಬ್ಬರು ಇಷ್ಟವಾದ್ರೆ ಜೊತೆಗೂಡಿ ಇರ್ತಾರೆ, ಆಗ್ಲೇಬೇಕು ಅಂದ್ರೆ ಮದ್ವೆ ಆಗ್ತಾರೆ, ಮಕ್ಕಳಾಗಿದ್ರೂ ಸರಿ, ಇಲ್ಲವಾಗಿದ್ರೂ ಸರಿ ಎಂದೆ. ನಾಚಿನೀರಾದ ಆಕೆ ಅಯ್ಯೋ ಸುಮ್ಕಿರಿ, ಇನ್ ಜಾಸ್ತಿ ಯಾಳೋಕ್ ಓಗ್ಬೇಡಿ, ಅದೆಂಥ ಜನ ಅವ್ರು, ನಾವೇ ಎಷ್ಟೋ ವಾಸಿ, ಅಂದುಬಿಟ್ಟಳು!

ಆದರೆ ಕಳೆದ ಹದಿನೈದು ವರ್ಷಗಳಲ್ಲಿ ಭಾರತದ ನಗರ ಜನಜೀವನದಲ್ಲಿ ಎಂಥೆಂಥ ಮಾರ್ಪಾಡುಗಳಾಗಿವೆ! ಈಗ ಬೆಂಗಳೂರಿನಲ್ಲಿ ಶೇರ್ಡ್ ಅಕೊಮೊಡಿಷನ್ (shared accommodation) ಪದ್ಧತಿ ತೀರಾ ಕಾಮನ್ ಎನಿಸಿದೆ. ಹೊರನೋಟಕ್ಕೆ ಇದು ಹಲವರಿಂದ ಟೀಕೆಗೆ ಒಳಗಾದರೂ ಅಂತಹ ಪದ್ಧತಿಯಲ್ಲಿ ವಾಸಿಸುವವರಿಗೆ ಹಲವಾರು ಉಪಯೋಗಗಳಿವೆ. ಸ್ವಂತ ಕುಟುಂಬ, ಬಂಧುಬಾಂಧವರನ್ನು ಬಿಟ್ಟು ಎಲ್ಲಿಂದಲೋ ಬಂದು ಉದ್ಯೋಗಕ್ಕೆಂದಲೋ, ಓದುವುದಕ್ಕಾಗಿಯೋ ನಗರಗಳಲ್ಲಿ ವಾಸಿಸುವ ಒಬ್ಬಂಟಿಗರನ್ನು ಬಾಧಿಸುವ ಆತಂಕಗಳು ಹಲವಾರು. ಸುರಕ್ಷತೆ, ಮಾತನಾಡಲು ಮತ್ತೊಬ್ಬರು ಇದ್ದಾರೆ ಎನ್ನುವ ಸಮಾಧಾನ, ದುಬಾರಿ ಬಾಡಿಗೆಯನ್ನು, ವಿದ್ಯುತ್, ಅಡುಗೆ ಅನಿಲ ಇತ್ಯಾದಿಗಳನ್ನು ಮೂರುನಾಲ್ಕು ಜನ ಹಂಚಿಕೊಳ್ಳುವುದು ಎಂಬಂತೆ ಒಳ್ಳೆಯ ಅಂಶಗಳಿರುತ್ತವೆ. ಆದರೆ ನಮ್ಮ ಜೊತೆಗಿರುವ ಆ ಇತರರು ನಮಗೆ ಅಲ್ಪಸ್ವಲ್ಪವಾದರೂ ಹೊಂದಿಕೆಯಾಗಬೇಕು! ಮೋಸವಾಗದಂತೆ ಎಚ್ಚರಿಕೆ ಇರಬೇಕು.

ವೊಲೊಂಗೊಂಗ್ ನಲ್ಲಿ ನನ್ನ ವಿದ್ಯಾರ್ಥಿಜೀವನದ ಸೆಕೆಂಡ್ ಇನ್ನಿಂಗ್ಸ್ ಆರಂಭವಾದಾಗ ನಾನೂ ಕೂಡ ಶೇರ್ಡ್ ಅಕೊಮೊಡಿಷನ್ (shared accommodation) ನಲ್ಲಿ ಜೀವನ ಶುರುಹಚ್ಚಿಕೊಂಡಿದ್ದೆ. ಜೊತೆಗಿದ್ದವರು ಒಬ್ಬ ಭಾರತೀಯ, ಮತ್ತೊಬ್ಬ ಸಿಂಗಪೂರ್ ನವನು. ನನ್ನ ಜೀವಕ್ಕೆ ಪುಕುಪುಕು, ಹೆದರಿಕೆ. ಬಾತ್ರೂಮ್, ಟಾಯ್ಲೆಟ್ ಗೆ ಹೋಗಲು ಮುಜುಗರ. ಬೆಳಗ್ಗೆ ನನ್ನ ಕೊಠಡಿ ಬಿಟ್ಟರೆ ದಿನಪೂರ್ತಿ ಯೂನಿವರ್ಸಿಟಿಯಲ್ಲೇ ಕಾಲ ಕಳೆದು, ಇಳಿಸಂಜೆ ಮನೆಗೆ ವಾಪಸ್. ಒಮ್ಮೊಮ್ಮೆ ಆ ಭಾರತೀಯ ಹುಡುಗ ತನ್ನ ಕಂಪ್ಯೂಟರ್ ಬಳಸಿ ಸಿನಿಮಾ ಹಾಡುಗಳನ್ನ ಹಾಕೋನು; ಸಿಂಗಪೂರ್ ನವನು ತಾನು ಸುತ್ತಿದ್ದ ದೇಶಗಳ ಕತೆ ಹೇಳೋನು. ಅವರಿಬ್ಬರಿಗೂ ನಾನು ಮಾಡುವ ಅಡುಗೆಯ ಘಮ ಬಲು ಇಷ್ಟ. ಇಬ್ಬರೂ ತಮ್ಮ ಅಡುಗೆಯನ್ನು, ಊಟದ ಖರ್ಚನ್ನೂ ಶೇರ್ ಮಾಡಿಕೊಳ್ಳುತ್ತಿದ್ದರು. ನನ್ನ ಚಪಾತಿ ಮಣೆ, ಲಟ್ಟಣಿಗೆಯನ್ನು ಎರವಲು ಪಡೆದು ಚಪಾತಿ ಮಾಡಿಕೊಂಡು ತಿಂದಾಗ ಇಬ್ಬರಿಗೂ ಬಲು ಖುಷಿ. ಮನೇನೋ, ರೂಮೋ ಏನ್ ಮಾಡಿದ್ದೀಯಾ ಅಂತ ಅಪ್ಪ ಕೇಳಿದಾಗ ಶೇರ್ಡ್ ಅಕೊಮೊಡಿಷನ್ ಅಂದೆ. ಹಾಗಂದ್ರೆ ಏನು ಅಂದ್ರು. ನಾವು ಮೂವರು ವಿದ್ಯಾರ್ಥಿಗಳು ಸೇರಿ ಒಂದು ಮನೆ ಮಾಡಿದ್ದೀವಿ ಅಂದಾಗ “ನಾನು ಕೂಡ ಮೈಸೂರಲ್ಲಿ ಓದ್ತಾ ಇದ್ದಾಗ ಚೇತನ ಬುಕ್ ಹೌಸ್ ನಲ್ಲಿ ಕೆಲಸ ಮಾಡ್ಕೊಂಡು ಆ ಥರ ವಠಾರದ ರೂಮ್ನಲ್ಲಿದ್ದೆ” ಅಂದ್ರು. ಆ ಕಾಲಕ್ಕೂ ಈ ಕಾಲಕ್ಕೂ ಇರುವ ಒಂದು ವ್ಯತ್ಯಾಸವೆಂದರೆ ನಗರಗಳಲ್ಲಿ ಈಗ ಗಂಡು ಹೆಣ್ಣುಗಳು ಒಂದೇ ಸೂರಿನಡಿ ಯಾವುದೇ ಸಂಬಂಧದ ಮುಲಾಜಿಲ್ಲದೇ, ಚಾರಿತ್ರ್ಯವಧೆಗೆ ಒಳಗಾಗದೇ ವಾಸಿಸಬಹುದು.

ಈಗ ಬೆಂಗಳೂರಿನಲ್ಲಿ ಶೇರ್ಡ್ ಅಕೊಮೊಡಿಷನ್ (shared accommodation) ಪದ್ಧತಿ ತೀರಾ ಕಾಮನ್ ಎನಿಸಿದೆ. ಹೊರನೋಟಕ್ಕೆ ಇದು ಹಲವರಿಂದ ಟೀಕೆಗೆ ಒಳಗಾದರೂ ಅಂತಹ ಪದ್ಧತಿಯಲ್ಲಿ ವಾಸಿಸುವವರಿಗೆ ಹಲವಾರು ಉಪಯೋಗಗಳಿವೆ. ಸ್ವಂತ ಕುಟುಂಬ, ಬಂಧುಬಾಂಧವರನ್ನು ಬಿಟ್ಟು ಎಲ್ಲಿಂದಲೋ ಬಂದು ಉದ್ಯೋಗಕ್ಕೆಂದಲೋ, ಓದುವುದಕ್ಕಾಗಿಯೋ ನಗರಗಳಲ್ಲಿ ವಾಸಿಸುವ ಒಬ್ಬಂಟಿಗರನ್ನು ಬಾಧಿಸುವ ಆತಂಕಗಳು ಹಲವಾರು. ಸುರಕ್ಷತೆ, ಮಾತನಾಡಲು ಮತ್ತೊಬ್ಬರು ಇದ್ದಾರೆ ಎನ್ನುವ ಸಮಾಧಾನ, ದುಬಾರಿ ಬಾಡಿಗೆಯನ್ನು, ವಿದ್ಯುತ್, ಅಡುಗೆ ಅನಿಲ ಇತ್ಯಾದಿಗಳನ್ನು ಮೂರುನಾಲ್ಕು ಜನ ಹಂಚಿಕೊಳ್ಳುವುದು ಎಂಬಂತೆ ಒಳ್ಳೆಯ ಅಂಶಗಳಿರುತ್ತವೆ. ಆದರೆ ನಮ್ಮ ಜೊತೆಗಿರುವ ಆ ಇತರರು ನಮಗೆ ಅಲ್ಪಸ್ವಲ್ಪವಾದರೂ ಹೊಂದಿಕೆಯಾಗಬೇಕು! ಮೋಸವಾಗದಂತೆ ಎಚ್ಚರಿಕೆ ಇರಬೇಕು.

ಮುಂದೆ ನಾನು ಇನ್ನೊಂದು ಶೇರ್ಡ್ ಅಕೊಮೊಡಿಷನ್ ಗೆ ಹೋದಾಗ ಅಲ್ಲಿದ್ದ ಇಬ್ಬರು ಹುಡುಗಿಯರಿಗೆ ಪ್ರೀತಿಪ್ರೇಮದ ಸಂಬಂಧ. ಸಮಾನತೆ, ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡಿ ಅನುಭವವಿದ್ದರೂ ಹೊರದೇಶದವಳು, ಹೇಗೆ ವರ್ತಿಸಬೇಕು ಎಂದು ಅಳುಕಾಯಿತು. ಯೂನಿವರ್ಸಿಟಿಯಲ್ಲಿ ನನ್ನ ಆಪ್ತಸ್ನೇಹಿತರಾಗಿದ್ದ ಒಬ್ಬ ಹಿರಿಯಾಕೆಯನ್ನು ಕೇಳಿದೆ. “ಹೇಗೆಂದರೆ ಏನು? ನಿನ್ನ ಪ್ರಶ್ನೆ ಅರ್ಥವಾಗಲಿಲ್ಲ. ನನಗೆ ನನ್ನ ಗಂಡನ ಜೊತೆ ಇರುವ ಸಂಬಂಧವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ನೀನು ಪ್ರಶ್ನಿಸುತ್ತೀಯಾ? ಅದರಂತೆಯೇ ಇನ್ನೊಂದು ಸಂಬಂಧ. ಇಬ್ಬರು ವಯಸ್ಕರ ನಡುವೆ ಇರುವ ಸಂಬಂಧಕ್ಕೆ ಅವರ ಮಧ್ಯೆ ಪರಸ್ಪರ ಒಪ್ಪಿಗೆಯಿರುವುದು ಮುಖ್ಯವೇ ಹೊರತು, ಅದನ್ನು ಅರ್ಥಮಾಡಿಕೊಳ್ಳುವ ಗೋಜು ಮೂರನೆಯ ವ್ಯಕ್ತಿಗೆ ಯಾಕೆ. ಅಂತಹ ಸಂಬಂಧಗಳನ್ನು ಅವರು ಹೇಗೆ ತೋರಿಸಿಕೊಳ್ಳುತ್ತಾರೋ ಹಾಗೆ ನಾವು ಅವನ್ನು ನೋಡಬೇಕು, ನಮಗೆ ಬೇಕಂತೆ ಅಲ್ಲ”, ಅಂದರು. ಆ ಸಂಭಾಷಣೆಯನ್ನು ಮತ್ತೂ ಅವರು ಹೇಳಿಕೊಟ್ಟ ಪಾಠವನ್ನು ಇಂದಿಗೂ ನಾನು ಮರೆತಿಲ್ಲ.

ಕ್ರಮೇಣ ನನ್ನ ಆಪ್ತಸ್ನೇಹಿತರ ವಲಯದಲ್ಲೇ ಇದ್ದ ಬೇರೆಬೇರೆ ಲೈಂಗಿಕ ಆಚರಣೆಗಳನ್ನು ‘ಅವರು ಹೇಗೋ ಹಾಗೆ’ ಅನ್ನುವ, ಸ್ವೀಕರಿಸುವ, ವ್ಯವಹರಿಸುವ ಅಭ್ಯಾಸವಾಯ್ತು. ಒಮ್ಮೆಯಂತೂ ಒಬ್ಬರು ‘ಹ ಹ, ಅವನು ಗೇ’ ಎಂದು ಕುಹಕವಾಡಿದಾಗ ನಾನು ‘ಹ ಹ, ನಾನು ಸ್ಟ್ರೈಟ್’ ಅಂದೆ. ಒಂದು ಕ್ಷಣ ಅವರು ವಿಚಲಿತರಾದರೂ ಮರುಕ್ಷಣ ಅಂದರು, “ನೀನು ನಿನ್ನ ಕಂಫರ್ಟ್ ಝೋನ್ನಿಂದ ಆಚೆ ಬಂದಿದೀಯ ಅನ್ಸತ್ತೆ”. ೨೦೧೭ರ ಡಿಸೆಂಬರ್ ನಲ್ಲಿ ಸಲಿಂಗ ಮದುವೆಯನ್ನ ಕಾನೂನುಬದ್ಧವಾಗಿ ಪಾರ್ಲಿಮೆಂಟ್ನಲ್ಲಿ ಅಂಗೀಕರಿಸಿ ಜಾರಿಗೆ ತಂದಾಗ ದೇಶದ ಬಹಳಷ್ಟು ಜನರು ‘ಕಡೆಗೂ ನಾವದನ್ನ ಸಾಧಿಸಿದೆವು’ ಎಂದು ಹರ್ಷಿಸಿದರು. ನನ್ನ ಇಬ್ಬರು ಸ್ನೇಹಿತರಂತೂ ಅದು ಜಾರಿಯಾದ ಘಳಿಗೆಗೆ ಕಾಯುತ್ತಿದ್ದವರಂತೆ ಅತ್ತುಬಿಟ್ಟರು. ನಮ್ಮನಮ್ಮಲ್ಲಿರುವ ವ್ಯತ್ಯಾಸಗಳನ್ನು ಪರಸ್ಪರ ಒಪ್ಪಿಕೊಳ್ಳೋದು, ಒಪ್ಪಿಕೆ (acceptance) ಎನ್ನುವುದು ಎಲ್ಲರ ಜೀವನದಲ್ಲೂ ಬೇಕು. ಮಾನವ ಸಂಬಂಧಗಳು ಗಟ್ಟಿಯಾಗುವುದು, ನೆಲೆನಿಲ್ಲುವುದು ಅಂತಹ ಒಪ್ಪಿಕೆಯಿಂದಲೇ ಅಲ್ಲವೇ ಅನ್ನಿಸುತ್ತೆ.