ಭಿಕ್ಷುಕರೆಂದರೆ ಯಾಕೆ ನಮ್ಮ ಮನಸ್ಸಿಗೆ ತಂಗಳನ್ನವೇ ಬರಬೇಕು ಅಂತ ಪ್ರಶ್ನಿಸಿಕೊಂಡಿದ್ದೇನೆ. ಯಾವುದೋ ಕಾರಣ, ಅಸಹಾಯಕತೆ, ಮತ್ಯಾವುದೋ ಅನಿವಾರ್ಯತೆಯ ಪರಿಸ್ಥಿತಿಗಳು ಅವರನ್ನು ಭಿಕ್ಷೆಗೆ ಹಚ್ಚಿರಬಹುದು. ಆದರೆ ಅವರಿಗೂ ನಮ್ಮಂತೆಯೇ ಎಲ್ಲ ಸವಿಯನ್ನೂ ಸವಿಯಬೇಕೆನ್ನುವ ಆಸೆಗಳೂ ಇರುತ್ತವೆ. ಆ ಆಸೆಗಳನ್ನು, ಅಭಿಲಾಷೆಗಳನ್ನು ನಾವು ಅರ್ಥ ಮಾಡಿಕೊಂಡರೆ ಆ ಮುಗ್ಧ ಮುಖಗಳಲ್ಲಿ ಒಂದಿಷ್ಟಾದರೂ ಮಂದಹಾಸ ಮೂಡಿಸಬಹುದಲ್ಲವೇ? ದೈಹಿಕ ಸಾಮರ್ಥ್ಯವಿದ್ದೂ, ಶಕ್ತರಾಗಿದ್ದೂ ಭಿಕ್ಷೆ ಬೇಡುತ್ತಿದ್ದರೆ ಅದನ್ನು ವಿರೋಧಿಸೋಣ. ಆದರೆ ಒಂದು ಪುಟ್ಟ ಮಗು, ವಯೋವೃದ್ಧರು ಕೈಯೊಡ್ಡಿದರೆ, ಅವರಿಗೆ ನಾವು ಏನನ್ನಾದರೂ ಕೊಡಬೇಕೆನ್ನುವ ಮನಸ್ಸಾದರೆ ಸ್ವಲ್ಪವಾದರೂ ಸರಿ ಉತ್ತಮವಾದದ್ದನ್ನೇ ಕೊಡಬಹುದಲ್ಲವೆ?
ಇಸ್ಮಾಯಿಲ್‌ ತಳಕಲ್‌ ಬರೆಯುವ “ತಳಕಲ್‌ ಡೈರಿ”ಯಲ್ಲಿ ಹೊಸ ಬರಹ

ಮಾಸ್ತಾರ ಆಗಿ ನೌಕರಿಗೆ ಸೇರ್ಕೊಂಡು ಕೆಲವು ದಿನ ಆಗಿತ್ತು. ಕಂಪ್ಲಿಯಲ್ಲಿ ಬಾಡಿಗೆ ಮನೆ. ಅಲ್ಲಿಂದ ಹದಿನೇಳು ಕಿಲೋಮೀಟರ್ ದೂರ ಇದ್ದ ಗೋನಾಳ ಎನ್ನುವ ಊರು ನನ್ನ ಕರ್ಮಸ್ಥಾನ. ಕಂಪ್ಲಿ, ಗಂಗಾವತಿ ಅಂದ್ರ ಅವೆಲ್ಲ ಭತ್ತದ ಕಣಜಗಳು. ಅಲ್ಲಿಯ ರೈತರಲ್ಲಿ ಬೆರಳೆಣಿಕೆಯಷ್ಟು ರೈತರು ಮಾತ್ರ ಬೇರೆ ಬೆಳೆಗಳನ್ನು ಬೆಳೆಯುತ್ತಿದ್ದರೆ ಬಹಳಷ್ಟು ಜನ ಬೆಳೆಯುವುದು ಭತ್ತವನ್ನೆ. ಅಂದ್ರೆ ಅಲ್ಲಿಯ ಭೂಮಿಗಳೆಲ್ಲವೂ ಅನ್ನದ ಬಟ್ಟಲುಗಳೇ. ನಿಸರ್ಗದ ವೈರುಧ್ಯವೆಂದರೆ ಅಲ್ಲಿ ಕಣ್ಣೆದುರಿಗೆ ಕಾಣುವ ಅನ್ನ ಎಲ್ಲ ಹಸಿದ ಹೊಟ್ಟೆಗಳಿಗೂ ದಕ್ಕುವುದಿಲ್ಲ. ಬಂಗಾರ ಅಗೆಯುವವರ ಬದುಕು ಬಂಗಾರವಾಗದ ಹಾಗೆ ಭತ್ತ ನೆಡುವ ಕೈಗಳಿಗೆ ಅದನ್ನೆ ಉಣ್ಣುವ ಭಾಗ್ಯವಿರುವುದಿಲ್ಲ.

ನನ್ನ ಶಾಲೆಗೆ ಬರುತ್ತಿದ್ದ ಬಹಳಷ್ಟು ಮಕ್ಕಳು ಬಡತನದ ಹಿನ್ನಲೆಯುಳ್ಳವರಾಗಿದ್ದರು. ಶಾಲೆಯಲ್ಲಿಯ ಮಧ್ಯಾಹ್ನದ ಬಿಸಿ ಊಟ ಅವರನ್ನೆಲ್ಲಾ ಶಾಲೆಗೆ ಬರುವಂತೆ ಪ್ರೇರೇಪಿಸಿ ಆ ನೆಪದಲ್ಲಿ ಕಲಿಕೆಯಲ್ಲಿ ತೊಡಗುವಂತೆ ಮಾಡಿತ್ತು. ಅವರಿಗೆ ಅಕ್ಷರಗಳನ್ನು ಕಲಿಸುತ್ತಲೇ ಅವರ ಬೇಕು ಬೇಡಿಕೆಗಳು, ಮುಗ್ಧತೆ, ಸೂಕ್ಷ್ಮತೆಗಳೆಲ್ಲವೂ ಸಹಜವಾಗಿ ನನ್ನ ಗಮನಕ್ಕೆ ಬರುತ್ತಿದ್ದವು. ಅವರಿಗೆ ಹೊಟ್ಟೆ ತುಂಬಾ ಊಟ ಸಿಕ್ಕಿಬಿಟ್ಟರೆ ಆ ದಿನದ ಬದುಕು ಮುಗಿದು ಹೋಯಿತು. ನಾಳೆಯ ಬದುಕಿಗೆ ಎದುರುಗೊಳ್ಳುತ್ತಲೇ ಸಂಜೆ ಗೂಡು ಸೇರುತ್ತಿದ್ದರು. ಯಾವುದೇ ಒಂದು ಮಗುವಿಗೆ ತನ್ನದೇ ಆದ ಸೂಕ್ಷ್ಮ ಸಂವೇದನೆಗಳಿರುತ್ತವೆ. ಆ ಸಂವೇದನೆಗಳನ್ನು ಅರ್ಥ ಮಾಡಿಕೊಳ್ಳುವುದರ ಜೊತೆಗೆ ಅದಕ್ಕೆ ಸ್ಪಂದಿಸಲೂ ಬೇಕಾಗುತ್ತದೆ. ಆ ಮಗು ಯಾವ ಹಿನ್ನಲೆಯದ್ದೆ ಆಗಿರಲಿ ತಾನು ಬಯಸಿದ್ದೆಲ್ಲಾ ಸಿಗಬೇಕು, ಇತರರಂತೆ ತಾನೂ ಉತ್ತಮವಾದದ್ದನ್ನೆ ಪಡೆಯಬೇಕೆನ್ನುವ ಅಭಿಲಾಷೆ ಅವರಲ್ಲಿ ಅಪ್ರಜ್ಞಾಪೂರ್ವಕವಾಗಿಯೇ ಸೇರಿಕೊಂಡಿರುತ್ತದೆ. ಇದು ತಪ್ಪೇನೂ ಅಲ್ಲದಿದ್ದರೂ ನಾವು ಅವರ ಭೌತಿಕ ಗುಣಲಕ್ಷಣಗಳನ್ನು ನೋಡಿ ಅವರ ವ್ಯಕ್ತಿತ್ವ ಅಳೆಯುತ್ತೇವೆ. ಅವರು ನಮ್ಮ ಯೋಚನೆಯಂತೆಯೇ ಇರಬೇಕೆಂದೂ ನಿರ್ಧರಿಸಲು ಹೊರಡುತ್ತೇವೆ. ಆದರೆ ಆ ಮುಗ್ಧ ಮಗುವಿನ ಮನಸ್ಸಿನ ಒಳಗಿನ ಧ್ವನಿ ಎಂದಾದರೂ ನಮ್ಮ ಕಿವಿಗಳಿಗೆ ಬೀಳಲು ಬಿಟ್ಟಿದ್ದೇವೆಯೇ?

ಒಂದು ದಿನ ಬೆಳಿಗ್ಗೆ ಎದ್ದವನೆ ತಾಜಾ ಗಾಳಿಯನ್ನು ಸೇವಿಸಲು ಮನೆಯ ಗೇಟಿನ ಬಳಿ ನಿಂತಿದ್ದೆ. ನಮ್ಮ ಮನೆಗೆ ಹತ್ತಿಕೊಂಡೆ ಇದ್ದ ನಮ್ಮ ಮನೆಯ ಮಾಲಿಕರ ಮನೆಯ ಮುಂದೆ ಒಬ್ಬ ಪುಟ್ಟ ಹುಡುಗಿ ಬಂದು ನಿಂತಳು. ಕೊಳೆಯಾಗಿದ್ದ ಅಲ್ಲೊಂದಿಷ್ಟು ಇಲ್ಲೊಂದಿಷ್ಟು ಹರಿದಿದ್ದ ಬಟ್ಟೆ, ಎಣ್ಣೆ ಕಾಣದ ಕೆದರಿದ ಕೂದಲು, ಸಪ್ಪಗಿನ ಮುಖ ಬೆನ್ನಿಗಂಟಿದ ಹೊಟ್ಟೆ, ಇನ್ನೇನಿಲ್ಲ ಎಲ್ಲ ಬದುಕೂ ಮುಗಿದೇ ಹೋಯಿತು ಎನ್ನವ ಭಾವ ಹೊತ್ತುಕೊಂಡು ನಿಂತಿದ್ದಳು. ಅವಳು ಏನೋ ಕೂಗಿದ್ದು ಇನ್ನೂ ನಿದ್ದೆಯ ಮಂಪರಿನಲ್ಲಿದ್ದ ನನಗೆ ಸರಿಯಾಗಿ ಕೇಳಿಸಲಿಲ್ಲ. ಆದರೆ ಸ್ವಲ್ಪ ಹೊತ್ತಿಗೆ ಮನೆಯ ಯಜಮಾನಮ್ಮ ಬಟ್ಟಲೊಂದರಲ್ಲಿ ಆಹಾರವನ್ನು ತಂದು ಕೊಟ್ಟಾಗಲೇ ಅದು ಭಿಕ್ಷುಕದ ಹುಡುಗಿ ಅಂತ ಗೊತ್ತಾಗಿದ್ದು. ತಕ್ಷಣಕ್ಕೆ ನನಗೆ ನೆನಪಾಗಿದ್ದು ನನ್ನ ಶಾಲೆಯ ಮಕ್ಕಳು. ಯಾಕೆ ಈ ಹುಡುಗಿ ಆ ಮಕ್ಕಳಂತೆ ಶಾಲೆಗೆ ಬರಬಾರದು? ಅಷ್ಟೊಂದು ಬಡತನವಿದ್ದರೆ ಕನಿಷ್ಠಪಕ್ಷ ಒಂದು ಹೊತ್ತಾದರೂ ಅಲ್ಲಿ ಊಟ ಸಿಗುತ್ತದೆ. ಆ ಮೂಲಕ ಒಂದಿಷ್ಟು ಅಕ್ಷರಗಳನ್ನಾದರೂ ಅವಳು ಕಲಿಯಬಹುದಲ್ಲ ಎಂದು ಆ ಕ್ಷಣಕ್ಕೆ ಅನಿಸಿತಾದರೂ ಅವಳನ್ನೇನೂ ಕೇಳಲು ಹೋಗಲಿಲ್ಲ.

ಆ ಹುಡುಗಿ ಆ ಆಹಾರದ ಬಟ್ಟಲನ್ನು ತೆಗೆದುಕೊಂಡು ಆ ದಿನದ ಅನ್ನ ಸಿಕ್ಕಿತೆನ್ನುವ ಖುಷಿಯಿಂದ ಹೋಗುವಳೇನೋ ಎಂದುಕೊಂಡೆ. ಆದರೆ ಅವಳು ಆ ಬಟ್ಟಲಲ್ಲಿದ್ದ ಆಹಾರವನ್ನು ಮೂಸಿ ನೋಡಿ ಮುಖ ಕಿವುಚಿ ಅದು ಬೇಡವೆಂದು ಮರಳಿ ಯಜಮಾನಮ್ಮಳಿಗೆ ನೀಡಿ ಅಲ್ಲಿಂದ ಹೋಗಿಬಿಡುವುದೇ? ಪಾಪ ಆ ಯಜಮಾನಮ್ಮಳಿಗೆ ಆಶ್ಚರ್ಯವೂ, ಅವಮಾನವೂ ಆದಂತನಿಸಿ ತಮ್ಮೊಳಗೆ ಏನೋ ಗೊಣಗಿಕೊಳ್ಳತೊಡಗಿದರು. ಅನ್ನ ಬೇಡಲು ಬಂದ ಆ ಹುಡುಗಿ ಆಹಾರವನ್ನು ಮೂಸಿ ನೋಡಿ ಬೇಡವೆಂದು ಮರಳಿ ಕೊಟ್ಟಿದ್ದು ನನ್ನ ನಿದ್ದೆ ಮಂಪರನ್ನು ಒಂದೆ ಬಾರಿಗೆ ಇಳಿಸಿ ಎಚ್ಚರಗೊಳಿಸಿತು. ಆ ಹುಡುಗಿಯ ವರ್ತನೆ ಅಸಹಜವಾಗಿಯೇನೂ ನನಗೆ ಕಾಣಲಿಲ್ಲ. ಆ ಯಜಮಾನಮ್ಮಳಿಗೆ ಭಿಕ್ಷುಕದ ಹುಡುಗಿ ಅನ್ನ ತಿರಸ್ಕರಿಸಿದ್ದು ಅವಳ ಸೊಕ್ಕು ಅಂತನಿಸಿತೋ ಏನೋ. ಬೇರೆಯವರಿಗೆ ಅನ್ನದ ಮೇಲೆ ಹಾಗೆಲ್ಲ ದರ್ಪ ತೋರಿಸಬಾರದು ಅಂತಲೂ ಅನಿಸಿಬಹುದು. ಆದರೆ ಒಂದಿಷ್ಟು ತಾಜಾ ಇರುವ ಬಿಸಿ ಬಿಸಿ ಆಹಾರವನ್ನು ಆ ಹುಡುಗಿಗೆ ತಿನ್ನಬೇಕೆನಿಸರಬಹುದು. ಇಷ್ಟು ದಿನ ಹಳಸಿದ, ತಂಗಳನ್ನವನ್ನು ಉಂಡೂ ಉಂಡೂ ಅವಳ ನಾಲಿಗೆ ಸ್ವಾದವನ್ನೆ ಕಳೆದುಕೊಂಡಿರಬೇಕೇನೋ? ಅದಕ್ಕೆ ಅವಳು ಒಲ್ಲೆ ಎಂದಿರಬುಹುದೆಂದು ನಾನು ಗ್ರಹಿಸಿಕೊಂಡೆ. ಈ ಘಟನೆ ನನಗೆ ತುಂಬಾ ದಿನಗಳವರೆಗೆ ಕಾಡತೊಡಗಿತು. ಯೋಚನೆಗೆ ಹಚ್ಚಿತು.

ಹಸಿದು ಬರುವ ಭಿಕ್ಷುಕರಿಗೆ ನಾವು ಉಣ್ಣುವ ತಾಜಾ, ಬಿಸಿ ಬಿಸಿ ಆಹಾರವನ್ನೇ ಯಾಕೆ ಕೊಡಬಾರದು ಎಂದು ಬಹಳಷ್ಟು ಬಾರಿ ಯೋಚಿಸಿದ್ದೇನೆ. ಭಿಕ್ಷುಕರೆಂದರೆ ಯಾಕೆ ನಮ್ಮ ಮನಸ್ಸಿಗೆ ತಂಗಳನ್ನವೇ ಬರಬೇಕು ಅಂತ ಪ್ರಶ್ನಿಸಿಕೊಂಡಿದ್ದೇನೆ. ಯಾವುದೋ ಕಾರಣ, ಅಸಹಾಯಕತೆ, ಮತ್ಯಾವುದೋ ಅನಿವಾರ್ಯತೆಯ ಪರಿಸ್ಥಿತಿಗಳು ಅವರನ್ನು ಭಿಕ್ಷೆಗೆ ಹಚ್ಚಿರಬಹುದು. ಆದರೆ ಅವರಿಗೂ ನಮ್ಮಂತೆಯೇ ಎಲ್ಲ ಸವಿಯನ್ನೂ ಸವಿಯಬೇಕೆನ್ನುವ ಆಸೆಗಳೂ ಇರುತ್ತವೆ. ಆ ಆಸೆಗಳನ್ನು, ಅಭಿಲಾಷೆಗಳನ್ನು ನಾವು ಅರ್ಥ ಮಾಡಿಕೊಂಡರೆ ಆ ಮುಗ್ಧ ಮುಖಗಳಲ್ಲಿ ಒಂದಿಷ್ಟಾದರೂ ಮಂದಹಾಸ ಮೂಡಿಸಬಹುದಲ್ಲವೇ? ದೈಹಿಕ ಸಾಮರ್ಥ್ಯವಿದ್ದೂ, ಶಕ್ತರಾಗಿದ್ದೂ ಭಿಕ್ಷೆ ಬೇಡುತ್ತಿದ್ದರೆ ಅದನ್ನು ವಿರೋಧಿಸೋಣ. ಆದರೆ ಒಂದು ಪುಟ್ಟ ಮಗು, ವಯೋವೃದ್ಧರು ಕೈಯೊಡ್ಡಿದರೆ, ಅವರಿಗೆ ನಾವು ಏನನ್ನಾದರೂ ಕೊಡಬೇಕೆನ್ನುವ ಮನಸ್ಸಾದರೆ ಸ್ವಲ್ಪವಾದರೂ ಸರಿ ಉತ್ತಮವಾದದ್ದನ್ನೇ ಕೊಡಬಹುದಲ್ಲವೆ? ಅನ್ನವನ್ನು ಮೂಸಿ ನೋಡಿ ಇಷ್ಟವಾಗದೆ ಮರಳಿಕೊಟ್ಟು ಹೋದ ಆ ಹುಡುಗಿಯ ಒಳಗಿನ ಭಾವನೆಗಳೇನಿರಬಹುದೆಂದು ಈಗಲೂ ಯೋಚಿಸುತ್ತಿರುತ್ತೇನೆ.

ಮಕ್ಕಳನ್ನು ಭಿಕ್ಷಾಟನೆಗೆ ತಳ್ಳುವುದು ತಪ್ಪೆ. ಮಕ್ಕಳಿಗೆ ಭಿಕ್ಷೆ ಹಾಕುವುದೂ ಅವರ ಭವಿಷ್ಯದ ದೃಷ್ಟಿಯಿಂದ ಮಾರಕ. ಕುವೆಂಪುರವರೂ ಭಿಕ್ಷುಕರಿಗೆ ಭಿಕ್ಷೆ ಹಾಕಿ ಅವರನ್ನು ಪ್ರೋತ್ಸಾಹಿಸುವದು ತಪ್ಪು ಎಂದಿದ್ದಾರೆ. ಇದೆಲ್ಲವೂ ಸರಿಯಾಗಿಯೇ ಇದೆ. ಆದರೆ ಬೇರೆನನ್ನೂ ಬೇಡದೇ ಕೇವಲ ತನ್ನ ಹಸಿವು ನೀಗಿಸಲು ಬೇಡುವ ಕೈಗೆ ಒಂದಿಷ್ಟು ರುಚಿಯಾದದ್ದು ಹಾಕಬಹುದಲ್ಲವೇ? ಇಂತಹ ಲಕ್ಷಾಂತರ ಮಕ್ಕಳು ಹಸಿವಿನಿಂದ ಬಳಲುತ್ತಿದ್ದಾರೆನ್ನುವ ಮಾಹಿತಿ ನಮಗೆ ಗೊತ್ತಿಲ್ಲ ಅಂತೇನಿಲ್ಲ. ಅವರಿಗೆ ಪೌಷ್ಠಿಕವಾದ, ಉತ್ತಮ ಗುಣಮಟ್ಟದ ಆಹಾರ ನೀಡುವುದು ಮಾನವರಾದ ನಮ್ಮೆಲ್ಲರ ಕರ್ತವ್ಯವಾಗಬೇಕಲ್ಲವೇ? ಈ ವರ್ಷದ ಜಾಗತಿಕ ಹಸಿವು ಸೂಚ್ಯಾಂಕದಲ್ಲಿ 121 ದೇಶಗಳ ಪೈಕಿ ನಾವು ಆರ್ಥಿಕವಾಗಿ ದಿವಾಳಿಯೆದ್ದ ಬಡ ದೇಶಗಳಿಗಿಂತಲೂ ಕೆಳಗಿನ ಅಂದರೆ 107ನೇ ಸ್ಥಾನದಲ್ಲಿದ್ದೇವೆ. ಹಾಗೂ ಅದಕ್ಕೆ ವಿರುದ್ಧವಾಗಿ ಪ್ರಪಂಚದ ಅತ್ಯಂತ ಶ್ರೀಮಂತ ವ್ಯಕ್ತಿಗಳು ನಮ್ಮ ದೇಶದವರೇ ಇದ್ದಾರೆ. ಇಷ್ಟೊಂದು ಅಸಮತೋಲನವನ್ನು ಒಡೆದು ಹಾಕುವುದಾದರೂ ಹೇಗೆ?

ಬೇರೆಲ್ಲವನ್ನೂ ಬಿಡೋಣ. ಮಕ್ಕಳು ಬಯಸುವ ಊಟ ಅಥವಾ ತಿನ್ನುವ ತಿನಿಸುಗಳನ್ನು ಕೊಟ್ಟಾಗ ಅವು ಪಡುವ ಸಂಭ್ರಮ ಅವರ ಮುಖದಲ್ಲಿ ಮೂಡುವ ಮಂದಹಾಸದದ ಬುಗ್ಗೆಗಳು ನೀಡುವ ಖುಷಿ ಮತ್ತೆಲ್ಲಾದರೂ ಸಿಗಲು ಸಾಧ್ಯವಿಲ್ಲವೇನೋ.