ಹಾಸ್ಟೆಲ್‌ನಲ್ಲಿ ಓದುವುದಕ್ಕೆ ಬಿಎಸ್ಸಿ ಹುಡುಗರಿಗಿಂತ ಹೆಚ್ಚಿನ ಸಮಯ ವ್ಯಯಿಸುತ್ತಿದ್ದ ನಾವು, ರಾತ್ರಿ ಹಗಲೆನ್ನದೆ ಪುಸ್ತಕ ಹಿಡಿದೇ ಇರುತ್ತಿದ್ದೆವು. ಸದಾ ಕನ್ನಡಕ ಹಾಕುತ್ತ ಎಲ್ಲರಿಂದ ‘ಇಂಟಲಿಜೆಂಟ್’ ಎಂದು ಕರೆಸಿಕೊಳ್ಳುತ್ತಿದ್ದ ರಂಗನಾಥ್ ನಮ್ಮ ಓದನ್ನ ಕಂಡು ‘ನೀವು ಸೈನ್ಸ್‌ ತಗಬೇಕಾಗಿತ್ತು ಕಂಡ್ರಲ’ ಎನ್ನುತ್ತಿದ್ದ. ಓದಿ ಬಸವಳಿಯುತ್ತಿದ್ದ ನಮಗೆ ಮಧ್ಯೆ ಕರೆಂಟ್ ಹೋದರೆ ತಂಪೆನಿಸುತ್ತಿತ್ತು. ಆದರೆ ಅದನ್ನ ತೋರಗೊಡದೆ ಕರೆಂಟಿಗೆ ಶಪಿಸುವರಂತೆ ನಾಟಕವಾಡುತ್ತಿದ್ದೆವು. ಹೀಗೆ ಒಮ್ಮೆ ನಮಗೂ ಪ್ರಭನಿಗೂ ಚಾಲೆಂಜ್ ಬಿತ್ತು.
ಗುರುಪ್ರಸಾದ್ ಕಂಟಲಗೆರೆ ಬರೆಯುವ ಟ್ರಂಕು ತಟ್ಟೆ ಸರಣಿಯ ಬರಹ ಇಲ್ಲಿದೆ.

 

ಆರ್ಟ್ಸ್‌ ಓದುವವರು ಬಹುತೇಕವಾಗಿ ಇಂಗ್ಲಿಷ್ ಕಳೆದುಕೊಳ್ಳುತ್ತಿದ್ದುದು ಆಗ ಸಾಮಾನ್ಯವಾಗಿತ್ತು. ಇನ್ನೇನು ಪರೀಕ್ಷೆಗಳು ಹತ್ತಿರ ಬಂತು ಎನ್ನುವಾಗ ನಗರದ ಅಲ್ಲಲ್ಲಿ ಇಂಗ್ಲಿಷ್ ಟ್ಯೂಷನ್‌ಗಳು ಶುರುವಾಗುತ್ತಿದ್ದವು. ನಮ್ಮ ಹಾಸ್ಟೆಲ್‌ನ ಬಹುತೇಕ ಹುಡುಗರು ಟ್ಯೂಷನ್ ನೆಚ್ಚಿಕೊಂಡಿರುತ್ತಿದ್ದರು. ‘ಪಿಯುಸಿ ಹಾಸ್ಟೆಲ್‌ನಿಂದ ಸ್ವಲ್ಪವೇ ದೂರದಲ್ಲಿ ಒಬ್ಬರು ಇಂಗ್ಲಿಷ್ ಗ್ರಾಮರ್ ಹೇಳಿಕೊಡುತ್ತಾರೆ, ಬರೋರು ಬರ್ಬೌದು’ ಎಂದು ತನ್ನ ಕಪ್ಪು ಮುಖಕ್ಕೆ ಕೆಂಪು ನಾಮ ಇಕ್ಕಲು ಪ್ರಾರಂಭಿಸಿದ್ದ ನಮ್ಮ ಹಾಸ್ಟೆಲ್‌ನ ಹನುಮಂತ ಹೇಳಿದ. ಅನೇಕ ನಮ್ಮ ಗೆಳೆಯರು ಅಲ್ಲಿಗೆ ಹೋಗಿಬರಲು ರೂಢಿಸಿಕೊಂಡಿದ್ದರಿಂದ ಒಂದು ಸಂಜೆ ನಾನು ಮತ್ತು ಭಗತ್ ಕೂಡ ಹೋದೆವು. ಅದೊಂದು ಚಿಕ್ಕದಾದ ಮನೆ. ಆ ಮನೆಯ ಎನ್ಟ್ರೆನ್ಸ್‌ನಲ್ಲಿ ಚಿಕ್ಕರೂಮಿತ್ತು. ಅದಕ್ಕೆ ಬಾಗಿಲು ಇದ್ದಂತಿರಲಿಲ್ಲ ಕರ್ಟನ್ ಅಂತೂ ಸದಾ ಬಿಟ್ಟಿರುತ್ತಿತ್ತು. ಅದನ್ನು ದಾಟಿ ಮುಂದೆ ಹೋದರೆ ನಾಕಾರು ಜನ ಮಲಗಲಿಕ್ಕಾಗುವಂತ ಚಿಕ್ಕ ಹಾಲ್. ಆ ಹಾಲ್‌ನ ಗೋಡೆಯ ಒಂದು ಮಗ್ಗುಲಲ್ಲಿ ಶ್ರೀರಾಮನ ಉದ್ದನೆಯ ಫೋಟೊ ನೇತಾಡುತ್ತಿದ್ದರೆ ಇನ್ನೊಂದು ಗೋಡೆಯಲ್ಲಿ ವಾಜಪೇಯಿ ಫೋಟೊ ಮತ್ತು ಎ.ಬಿ.ವಿ.ಪಿ. ಎಂದು ಬರೆದಿದ್ದ ಬೋರ್ಡು. ಇದನ್ನು ನೋಡಿದ ತಕ್ಷಣವೇ ಭಗತ್‌ಗೂ ನನಗೂ ಈ ಇಂಗ್ಲಿಷ್ ಮೇಷ್ಟ್ರು ಹೇಳಿಕೊಡಬಹುದಾದ ಗ್ರಾಮರ್ ಯಾವುದಿರಬಹುದೆಂಬ ಸುಳಿವು ಸಿಗತೊಡಗಿತು.

ಹತ್ತಾರು ವಿದ್ಯಾರ್ಥಿಗಳಿಗೇ ಕಿಕ್ಕಿರಿದು ತುಂಬಿದ್ದ ಆ ಕೊಠಡಿಯಲ್ಲಿ ಮೊಟ್ಟ ಮೊದಲು ಯಾರಿಗೂ ಮೇಷ್ಟ್ರ ದರ್ಶನ ಆಗುತ್ತಿರಲಿಲ್ಲ. ಇಲ್ಲಿಗೆ ಕೆಲ ಹೆಣ್ಣು ಮಕ್ಕಳೂ ಬರುತ್ತಿದ್ದು ಅವರು ಹುಡುಗರಂತೆ ಗರಬಡಿದವಂತೆ ಇರದೆ ಚಾಲಾಕಿಯಾಗಿರುತ್ತಿದ್ದರು. ಮೊದಲು ಸಿಗುವ ಕರ್ಟನ್ ಬಿಟ್ಟಿರುವ ರೂಮಿನೊಳಕ್ಕೆ ಪದೆ ಪದೆ ಹೋಗಿ ಬರುತ್ತಿದ್ದ ಹುಡುಗಿಯರು ತುಂಬ ಹೊತ್ತು ಅಲ್ಲೆ ಕಳೆಯುತ್ತಿದ್ದರು. ಈ ಅವಕಾಶವಿಲ್ಲದ ಹುಡುಗರು ಸುಮ್ಮನೇ ಮೇಷ್ಟ್ರ ಆಗಮನಕ್ಕಾಗಿ ಕಾಯುತ್ತ, ರೂಮೊಳಗೆ ಹೋದ ಹುಡುಗಿಯರು ಕಿಲ ಗುಟ್ಟುವುದನ್ನ ಕೇಳಿಸಿಕೊಳ್ಳುತ್ತಿದ್ದರು. ಎಷ್ಟೋ ಹೊತ್ತಾದ ನಂತರ ಆ ರೂಮೊಳಗಿಂದಲೇ ಮೇಷ್ಟ್ರು ಹೊರ ಬರುತ್ತಿದ್ದರು. ಲುಂಗಿಯಲ್ಲಿರುತ್ತಿದ್ದ ಯುವ ಮೇಷ್ಟ್ರು ಹಣೆಗೆ ಸದಾ ನಾಮ ಇಕ್ಕೆ ಇರುತ್ತಿದ್ದರು. ಅವರು ಗ್ರಾಮರ್ ಹೇಳಿಕೊಟ್ಟದ್ದಕ್ಕಿಂತ ಮೀಸಲಾತಿ, ವಾಜಪೇಯಿ ಇವುಗಳನ್ನ ಚರ್ಚಿಸುತ್ತಿದ್ದುದೇ ಹೆಚ್ಚು. ನಾವು ಅಲ್ಲಿಗೆ ಹೋದ ಮೊದಲ ದಿನವನ್ನೆ ಕೊನೆಯದನ್ನಾಗಿಸಿಕೊಂಡೆವು.

ಪುರಾತನ ಕಾಲದಿಂದ ಹಾಸ್ಟೆಲ್ ಹುಡುಗರ ಇಂಗ್ಲಿಷ್ ಪಾಸುಮಾಡಿಸುತ್ತಿರುವ ಒಬ್ಬ ದಾತನಿದ್ದಾನೆ, ಅವನನ್ನು ಬಿಟ್ಟರೆ ಇನ್ಯಾರು ಇಂಗ್ಲಿಷ್ ಪಾಸು ಮಾಡಿಸಲು ಸಾಧ್ಯವೇ ಇಲ್ಲ ಎಂಬ ದಂತ ಕತೆಯೊಂದಿತ್ತು. ಅದನ್ನ ಆಧರಿಸಿ ನಾವೂ ಒಂದು ದಿನ ಶೆಟ್ಟಿ ಹಳ್ಳಿಗೇಟ್ ಸಮೀಪದಲ್ಲಿದ್ದ ನೃಪತುಂಗ ಹೈಸ್ಕೂಲ್ ತಲುಪಿದೆವು. ತೆಲುಗು ಚಿತ್ರನಟ ವೆಂಕಟೇಶ್ ಅಭಿಮಾನಿಯಂತೆ ಕಂಡುಬಂದ ಇಂಗ್ಲಿಷ್ ಲೆಕ್ಚರ್ ರಾಘವೇಂದ್ರ ಬೈಕ್‌ನಲ್ಲಿ ಬಂದಿಳಿದರು. ಸೆಕೆಂಡ್ ಪಿಯುಸಿಯಲ್ಲಿದ್ದ ಎಲ್ಲಾ ಪಾಠಗಳನ್ನೂ ಟಚ್ ಮಾಡದ ರಾಘವೇಂದ್ರ, ಎಸ್ಸಿ ಎಸ್ಟಿ ಮಕ್ಕಳ ತಲೆಗತ್ತಲು ಸಾಧ್ಯ ಎನ್ನಿಸುವ ಸಣ್ಣ ಗ್ರಾಮರ್ ಮಾತ್ರ ಹೇಳಿಕೊಡುತ್ತ ಮುವತ್ತು ಅಂಕಗಳಿಗೆ ಮೋಸವಿಲ್ಲದಂತೆ ತಯಾರುಗೊಳಿಸುತ್ತಿದ್ದರು. ಗಮನವಿಟ್ಟು ಪಾಠ ಕೇಳದ ಹುಡುಗರನ್ನು ಮುಲಾಜಿಲ್ಲದೆ ಎಬ್ಬಿಸಿ ಅವಾಜು ಬಿಡುತ್ತಿದ್ದರು. ಫೇಲ್ ಆಗುವ ಭೀತಿಯಲ್ಲಿರುತ್ತಿದ್ದ ನಮ್ಮ ಹುಡುಗರು ಭಯ ಭಕ್ತಿಯಿಂದ ಪಾಠ ಕೇಳುತ್ತಿದ್ದರು. ಟ್ಯೂಷನ್ ಪೂರ್ಣವಾಗಿ ಎಸ್‌ಸಿ ಎಸ್‌ಟಿ ಹುಡುಗರನ್ನೇ ಅವಲಂಭಿಸಿದ್ದು, ನಮ್ಮನ್ನು ಬಿಟ್ಟರೆ ಅವರಿಗೆ, ಅವರನ್ನು ಬಿಟ್ಟರೆ ನಮಗೆ ಗತಿಯಿಲ್ಲವೆಂಬಂತ ಹೊಂದಾಣಿಕೆ ಗುರು ಶಿಷ್ಯರ ನಡುವೆ ಬೆಳೆದಿತ್ತು. ಮಧ್ಯೆ ಮಧ್ಯೆ ಫೀಸ್ ಕೇಳದ ಅವರು ‘ನನಿಗೆ ಗೊತ್ತಿದೆ ನಮ್ಮುಡುಗ್ರೇನು ಅಂತ, ಅವ್ರಿಗೆ ಸ್ಕಾಲರ್ಶಿಪ್ ಬಂದ ತಕ್ಷಣ ತಂದು ಕೊಡ್ತಾರೆ’ ಎಂದು ಬ್ರಾಹ್ಮಣ ಜಾತಿಯ ಅವರು ನಮ್ಮ ಪರ ವಕಾಲತ್ತು ವಹಿಸುತ್ತಿದ್ದರು. ಅಂತೆಯೇ ನಮ್ಮ ಹುಡುಗರು ನಡೆದುಕೊಳ್ಳುತ್ತಿದ್ದರು.

ಹಾಸ್ಟೆಲ್‌ನಲ್ಲಿ ಓದುವುದಕ್ಕೆ ಬಿಎಸ್ಸಿ ಹುಡುಗರಿಗಿಂತ ಹೆಚ್ಚಿನ ಸಮಯ ವ್ಯಯಿಸುತ್ತಿದ್ದ ನಾವು, ರಾತ್ರಿ ಹಗಲೆನ್ನದೆ ಪುಸ್ತಕ ಹಿಡಿದೇ ಇರುತ್ತಿದ್ದೆವು. ಸದಾ ಕನ್ನಡಕ ಹಾಕುತ್ತ ಎಲ್ಲರಿಂದ ‘ಇಂಟಲಿಜೆಂಟ್’ ಎಂದು ಕರೆಸಿಕೊಳ್ಳುತ್ತಿದ್ದ ರಂಗನಾಥ್ ನಮ್ಮ ಓದನ್ನ ಕಂಡು ‘ನೀವು ಸೈನ್ಸ್‌ ತಗಬೇಕಾಗಿತ್ತು ಕಂಡ್ರಲ’ ಎನ್ನುತ್ತಿದ್ದ. ಓದಿ ಬಸವಳಿಯುತ್ತಿದ್ದ ನಮಗೆ ಮಧ್ಯೆ ಕರೆಂಟ್ ಹೋದರೆ ತಂಪೆನಿಸುತ್ತಿತ್ತು. ಆದರೆ ಅದನ್ನ ತೋರಗೊಡದೆ ಕರೆಂಟಿಗೆ ಶಪಿಸುವರಂತೆ ನಾಟಕವಾಡುತ್ತಿದ್ದೆವು. ಹೀಗೆ ಒಮ್ಮೆ ನಮಗೂ ಪ್ರಭನಿಗೂ ಚಾಲೆಂಜ್ ಬಿದ್ದು ಆತ ಇಡೀ ರಾತ್ರಿ ಒಬ್ಬೊಂಟಿಯಾಗಿ ಟೆರೇಸ್ ಮೇಲೆ ಎಚ್ಚರವಾಗಿದ್ದು ಓದಿ, ಬೆಳಗಿನ ಜಾವ ಕೆಳಗಿಳಿದು ಬಂದಿದ್ದ. ಚಾಲೆಂಜ್ ಗೆದ್ದದ್ದಕ್ಕಾಗಿ ನಮ್ಮ ಬಳಿ ಐವತ್ತು ರೂ ಹಣ ಪಡೆದಿದ್ದ.

ತೆಲುಗು ಚಿತ್ರನಟ ವೆಂಕಟೇಶ್ ಅಭಿಮಾನಿಯಂತೆ ಕಂಡುಬಂದ ಇಂಗ್ಲಿಷ್ ಲೆಕ್ಚರ್ ರಾಘವೇಂದ್ರ ಬೈಕ್‌ನಲ್ಲಿ ಬಂದಿಳಿದರು. ಸೆಕೆಂಡ್ ಪಿಯುಸಿಯಲ್ಲಿದ್ದ ಎಲ್ಲಾ ಪಾಠಗಳನ್ನೂ ಟಚ್ ಮಾಡದ ರಾಘವೇಂದ್ರ, ಎಸ್ಸಿ ಎಸ್ಟಿ ಮಕ್ಕಳ ತಲೆಗತ್ತಲು ಸಾಧ್ಯ ಎನ್ನಿಸುವ ಸಣ್ಣ ಗ್ರಾಮರ್ ಮಾತ್ರ ಹೇಳಿಕೊಡುತ್ತ ಮುವತ್ತು ಅಂಕಗಳಿಗೆ ಮೋಸವಿಲ್ಲದಂತೆ ತಯಾರುಗೊಳಿಸುತ್ತಿದ್ದರು.

ಪರೀಕ್ಷೆ ಮುಗಿದ ದಿನ

ಅಂತೂ ಪರೀಕ್ಷೆ ದಿನಗಳು ಸಮೀಪಿಸಿದವು. ಪರೀಕ್ಷೆ ಬರೆದ ನಂತರ ಪ್ರತಿದಿನ ಕಾಲೇಜಿನ ಗೇಟ್ ಬಳಿ ನಾವೆಲ್ಲ ಸಂಧಿಸುತ್ತಿದ್ದೆವು. ಇಂಗ್ಲಿಷ್ ಬರೆದು ಬಂದ ರಂಗಧಾಮಯ್ಯ, ಭಗತ್‌ನನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತ ‘ಪೇಲಾಗಿಬಿಡುತ್ತೆ’ ಎಂದು ದುಃಖಿಸುತ್ತಿದ್ದ. ಉಳಿದ ಸ್ನೇಹಿತರ ಮುಖದಲ್ಲೂ ಅಂದು ಅಷ್ಟೇನು ಗೆಲುವು ಕಾಣಿಸಲಿಲ್ಲ. ಅರ್ಥಶಾಸ್ತ್ರದ ಪರೀಕ್ಷೆ ದಿನ ನನಗೆ ಪರೀಕ್ಷೆ ಹಾಲ್‌ನಲ್ಲಿ ವಿಪರೀತ ನಿದ್ದೆ. ಎಂದೂ ಹೀಗಾಗಿರಲಿಲ್ಲ. ಚೆನ್ನಾಗಿ ಓದಿದ್ದರೂ, ಎಲ್ಲ ವಿಷಯಗಳು ಗೊತ್ತಿದ್ದರೂ ಕೆಲವೊಮ್ಮೆ ಮರೆತಂತೆ, ಬರೆಯುತ್ತಿದ್ದ ಕೈ ಯತ್ತೆತ್ತಗೋ ಹೋಗುತ್ತಿತ್ತು. ಆ ರಾತ್ರಿ ತುಂಬ ನಿದ್ದೆಗೆಟ್ಟು ಓದಿದ ಪರಿಣಾಮ ಹೀಗಾಗಿತ್ತು.

ಪರೀಕ್ಷೆಗಳೆಲ್ಲ ಮುಗಿದ ದಿನವೊಂದು ಬಂದೇ ಬಿಟ್ಟಿತು. ಪರೀಕ್ಷೆ ಮುಗಿದ ಖುಷಿ ಒಂದು ಕಡೆಯಾದರೆ, ಸ್ನೇಹಿತರೆಲ್ಲ ದೂರಾಗಬೇಕಲ್ಲ ಎಂಬ ಅಗಲಿಕೆಯ ನೋವು ಇನ್ನೊಂದು ಕಡೆ. ನಾನು ಪ್ರಭ, ಭಗತ್, ಸೂರಿ, ರಂಗಧಾಮಯ್ಯ ಎಲ್ಲ ಒಂದು ಕಡೆ ವಿಪರೀತ ದುಃಖಿತರಾಗಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಅಳುತ್ತಿದ್ದೆವು. ಸೂರಿಯಂತೂ ಬಲವಂತವಾಗಿ ನಮ್ಮನ್ನ ಸ್ಟುಡಿಯೊವೊಂದಕ್ಕೆ ಕರೆದುಕೊಂಡು ಹೋಗಿ ನಾವು ಮೂವರಿರುವ ಫೋಟೊ ತೆಗೆಸಿಕೊಂಡು ಬಂದ. ಅತ್ತು ಕರೆದು ಸಾಕಾಗಿ ಪುಸ್ತಕ, ಬಟ್ಟೆ, ಕನ್ನಡಿ, ಬೆಡ್‌ಶೀಟ್‌ಗಳನ್ನೆಲ್ಲ ಪ್ಯಾಕ್ ಮಾಡಿಕೊಂಡು ಹದಿಮೂರನೆ ರೂಮಿಗೆ ಅಂತಿಮ ವಿದಾಯ ಹೇಳಿ ಕೆಳಗಿಳಿದೆವು. ಕೆಲ ಸ್ನೇಹಿತರು ಬಸ್‌ಸ್ಟ್ಯಾಂಡ್‌ವರೆಗೆ ಬಂದು ನಮ್ಮನ್ನು ಬಸ್ ಹತ್ತಿಸಿದರು. ನಮ್ಮ ಪ್ರಯಾಣದುದ್ದಕ್ಕೂ ನಾವು ಏನನ್ನೂ ಮಾತಾಡದೆ, ಏನೋ ಕಳೆದುಕೊಂಡವರಂತೆ ಸಪ್ಪಗೆ ಇದ್ದೆವು. ಇತ್ತ ಯಾವಾಗಲೂ ಜೊತೆಯಿರುತ್ತಿದ್ದ ನಾನು ಭಗತ್ ಕೂಡ ಕೆ ಬಿ ಕ್ರಾಸ್‌ನಲ್ಲಿ ಬಸ್ಸಿಳಿದ ನಂತರ ಬೇರೆ ಬೇರೆ ಕವಲಾದೆವು. ಬ್ಯಾಡ್ರಳ್ಳಿ ಗೇಟಿನಿಂದ ನಮ್ಮೂರಿಗಿರುವ ಒಂದುವರೆ ಕಿಲೋಮೀಟರ್ರನ್ನು ನಡೆದು ತಲುಪುವುದು ಅತ್ಯಂತ ಪ್ರಯಾಸಕರವಾಗಿತ್ತು. ಅಷ್ಟೂ ದಿನ ಕೂಡಿ ಬಾಳಿದ ಸ್ನೇಹಿತರನ್ನು ಬಿಟ್ಟು ಬಂದ ನೋವು ಒಂದಾದರೆ ಎರೆಡು ವರ್ಷದ ಲಗೇಜನ್ನ ಎರೆಡು ಮೂರು ಬ್ಯಾಗುಗಳಲ್ಲಿ ತುಂಬಿಕೊಂಡು ಬಂದಿದ್ದರಿಂದ, ಭಾರ ಹೊತ್ತ ಬುಜಗಳು ನೆಲಕ್ಕೆ ತೋನುತ್ತಿದ್ದವು. ಸೂಟುಕೇಸ್‌ಅನ್ನು ಆ ಕೈನಿಂದ ಈ ಕೈಗೆ, ಈ ಕೈನಿಂದ ಆ ಕೈಗೆ ಉದ್ದಕ್ಕೂ ಭಾರ ಬದಲಾಯಿಸುತ್ತಲೇ ಹೋಗಿ ಮನೆ ತಲುಪಿದೆ.

(ಸಾಂದರ್ಭಿಕ ಚಿತ್ರ)

ಮೂಟೆ ಹೊತ್ತು ಗಳಿಸಿದ ಹಣ

ಮನೆಯಲ್ಲಿ ದಟ್ಟ ದಾರಿದ್ರ್ಯದ ಸ್ಥಿತಿ ಮುಂದುವರೆದಿತ್ತು. ಓದು ಮುಗಿಸಿ ಬಂದ ಮಗ ಎಂದು ಮೊದಮೊದಲು ಬಾಯಿಬಿಟ್ಟು ಅಪ್ಪ ಅಮ್ಮ ಏನು ಹೇಳದಿದ್ದರೂ, ನಿಧಾನಕ್ಕೆ ಮನೆಯಲ್ಲಿ ಅಕ್ಕಿಗೆ ರಾಗಿಗೆ ಪರದಾಡುತ್ತಿದ್ದುದು ಗಮನಕ್ಕೆ ಬರತೊಡಗಿತು. ಅಷ್ಟೊತ್ತಿಗಾಗಲೆ ಸೆಕೆಂಡ್ ಪಿಯುಸಿಯಲ್ಲಿ ಫಸ್ಟ್ ಕ್ಲಾಸ್ ಬಂದು ತುಮಕೂರಿನಲ್ಲೆ ಬಿ.ಎ. ಓದಲು ಸೇರಿಕೊಂಡಿದ್ದ ನಾಗರಾಜನೂ ರಜೆಯ ಮೇಲೆ ಊರಿಗೆ ಬಂದಿದ್ದ. ಮುಂದಿನ ಓದಿನ ಖರ್ಚು ನೋಡಿಕೊಳ್ಳಲು ಬ್ಯಾಡ್ರಳ್ಳಿ ಗೇಟ್‌ನಲ್ಲಿದ್ದ ಒಂದು ಫ್ಯಾಕ್ಟ್ರಿಗೆ ಕೆಲಸಕ್ಕೆ ಸೇರಿಕೊಂಡಿದ್ದ. ಹಲ್ಲುಪುಡಿ ತಯಾರಿಕೆಗೆ ಬೇಕಾಗುವ ಒಂದು ವಿಧದ ಪೌಡರ್ ತಯಾರಿಕಾ ಕಾರ್ಖಾನೆ ಅದು. ನಾನೂ ಕೋರಿದ್ದರ ಮೇರೆಗೆ, ನಾಗರಾಜ ನನಗೂ ಅಲ್ಲಿ ಕೆಲಸ ಇರುವುದನ್ನ ಖಾತ್ರಿ ಪಡಿಸಿದ. ಮಾರನೆ ಬೆಳಗಿನಿಂದಲೇ ನಾನು ಕೆಲಸಕ್ಕೆ ಹೊರಟೆ. ಹೆಣ್ಣಾಳುಗಳು ಬಾಣಲಿಯಲ್ಲಿ ಬಿಳಿ ಬಣ್ಣದ ಹೆಂಟೆಗಳನ್ನು ಹೊತ್ತು ತರುತ್ತಿದ್ದರು. ಬಾಣಳಿಯನ್ನು ಇಳಿಸಿ ಅದನ್ನು ಮಿಲ್ಲಿಗೆ ಸುರಿಯುವುದು, ಅದು ಪೌಡರ್ ಆಗಿ ಹೊರ ಬಂದಾಗ ಚೀಲವೊಡ್ಡಿ ಐವತ್ತು ಕೆ.ಜಿ.ಯಂತೆ ಬಾಯಿ ಕಟ್ಟುವುದು ನನ್ನ ಕೆಲಸ. ಅದರ ಮೇಸ್ತ್ರಿಯಾಗಿದ್ದ ಗೋಡೆಕೆರೆ ಗೇಟ್ ಕೆಂಪಣ್ಣ, ಓದಿಕೊಂಡು ಬಂದ ಹುಡುಗರು ಎಂದು ನಮ್ಮ ಮೇಲೆ ಪ್ರೀತಿ ತೋರಿಸುತ್ತಿದ್ದ. ದಿನವೊಂದಕ್ಕೆ ಐವತ್ತು ರೂನಂತೆ ವಾರಕ್ಕೆ ಮುನ್ನೂರು ರೂ ಸಿಗುತ್ತಿತ್ತು. ಬೆವರು ಸುರಿಯೇ ಕೆಲಸ ಮಾಡುತ್ತಿದ್ದರಿಂದ ಹೊಟ್ಟೆ ಚೆನ್ನಾಗಿ ಹಸಿಯುತ್ತಿತ್ತು.

ಮಧ್ಯಾಹ್ನ ಒಂದು ಮೂವತ್ತಕ್ಕೆ ಊಟ ಮಾಡಲು ಹತ್ತಿರದಲ್ಲೇ ಇದ್ದ ಊರಿಗೆ ಬರುತ್ತಿದ್ದೆ. ಕೋಮಲಕ್ಕ ಬಿಸಿ ಬಿಸಿ ಮುದ್ದೆ ಕಟ್ಟಿರುತ್ತಿತ್ತು. ಅನಾಮತ್ ಎರೆಡು ಮುದ್ದೆಯನ್ನು ಜಡಿದು ಮತ್ತೆ ಕೆಲಸಕ್ಕೆ ಹೋಗುತ್ತಿದ್ದೆ. ಮುದ್ದೆ ಕಟ್ಟುವುದು ಬಡಿಸುವುದು ಲೇಟಾದರೆ ರೇಗಿ ಬೀಳುತ್ತಿದ್ದೆ. ಮಿಲ್ಲಿನ ಕೆಲಸವಾದ್ದರಿಂದ ವಿಪರೀತ ಧೂಳು. ಮನೆಯಿಂದ ಬೇರೆ ಬಟ್ಟೆಯಲ್ಲೋಗಿ, ಅಲ್ಲೇ ಇಟ್ಟಿದ್ದ ದೂಳು ಬಟ್ಟೆಯನ್ನು ತೊಟ್ಟು ಕೆಲಸಕ್ಕಿಳಿಯುತ್ತಿದ್ದೆವು. ಒಂದು ಭಾನುವಾರದ ಸಂಜೆ ರಜೆಯ ಮೇಲಿದ್ದ ನಮ್ಮನ್ನು ಫ್ಯಾಕ್ಟರಿ ಓನರ್ ಊರಿಗೆ ಹುಡುಕಿಕೊಂಡು ಬಂದ. ‘ಲಾರಿ ಬಂದು ನಿಂತಿದೆ, ಲೋಡ್ ಮಾಡಿ ಕಳಿಸಬೇಕು, ಮೂಟೆ ಹೊರುವವರು ಯಾರು ಇಲ್ಲ, ಹೆಚ್ಚುವರಿ ಹಣ ಸಿಗುತ್ತೆ, ಬೇಗ ಹೊರಡಿ ಹೋಗೋಣ’ ಎಂದ. ಮೂಟೆ ಹೊರುವ ಕೆಲಸವನ್ನ ಎಂದೂ ಮಾಡಿರದ ನಾನು ಏನಾಗಿಬಿಡುತ್ತದೊ ಎಂದು ಹೆದರುತ್ತಲೇ ಹೋದೆ. ಕೆಂಪಣ್ಣ ಒಂದು ಮಾದರಿಯನ್ನು ತೋರಿಸುತ್ತ ಐವತ್ತು ಕೇಜಿಯ ಮೂಟೆಯನ್ನು ಬೆನ್ನಿನ ಮೇಲೆ ಹೊರಿಸಿಯೇ ಬಿಟ್ಟ. ಕಾಲುಗಳು ಬುಡ ಬುಡ ಎಂದು ಹಲಗೆಯ ಮೇಲೆ ಲಾರಿ ಹತ್ತಿಯೇ ಬಿಟ್ಟವು. ಗಂಟೆ ಗಟ್ಟಲೆ ಮೂಟೆ ಹೊತ್ತಾದ ನಂತರ ಲಾರಿ ಲೋಡ್ ಆಯಿತು. ಅಂದು ಬೋನಸ್ ದುಡ್ಡು ಸಿಕ್ಕಿತು. ಮನೆಗೆ ಬಂದು ಸ್ನಾನ ಮಾಡಿ ಮಲಗಿದೆ. ಹೀಗೆ ತಿಂಗಳಾನುಗಟ್ಟಲೆ ಕೆಲಸ ಮಾಡಿದ್ದಕ್ಕಾಗಿ ಒಂದುವರೆ ಸಾವಿರದಷ್ಟು ಹಣ ಸಿಕ್ಕಿತು.