ಸಾವಿರಾರು ವರ್ಷಗಳನ್ನು ಎಳೆದು ತಂದು ತನ್ನ ಮೂಗಿನ ನೇರದಂತೆ ಇತಿಹಾಸದ ತುಣುಕನ್ನು ಬರೆದ ಮೆಗಾಸ್ತಾನಿಸನ ಇತಿಹಾಸದ ಆಧಾರದಿಂದ ನಾವು ಅಧ್ಯಯನ ಆರಂಭಿಸುತ್ತೇವೆಯೇ ವಿನಹಃ ಮೂಲಕ್ಕೆ ಹೋಗುವುದಿಲ್ಲ. ಸಂಸ್ಕೃತ ಭಾಷೆಯ ವ್ಯಾಕರಣ ಕೊಟ್ಟ ಪತಂಜಲಿ, ವರರುಚಿ, ಪಾಣಿನಿಯ ಮೊದಲಾದವರೆಲ್ಲ ಇದ್ದುದು ಪೂರ್ವದಲ್ಲಿ, ಆದರೆ ಅದ್ಯಾಕೋ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಸಂಸ್ಕೃತ ಕಣ್ಮರೆಯಾಗಿ ಪ್ರಾಕೃತ ಆಕ್ರಮಿಸಿದ್ದು ಅಂದರೆ ಗೋಜಲು ಗೋಜಲಿನ ಇತಿಹಾಸ ಅಂದಿನಿಂದಲೇ ಆರಂಭವಾಯಿತು ಎಂದು ಸ್ಪಷ್ಟವಾದ ಮಾಹಿತಿ ನೀಡುತ್ತದೆ ಈ ಪುಸ್ತಕ.
ಸದ್ಯೋಜಾತ ಭಟ್ಟ ಬರೆದ ‘ಮಿಹಿರಕುಲಿ’ ಪುಸ್ತಕದ ಕುರಿತು ಸ್ಮಿತಾ ರಾಘವೇಂದ್ರ ಬರಹ

 

ಈ ಪುಸ್ತಕ ಓದಿ ಕೆಳಗಿಡುವ ಹೊತ್ತಿಗೆ ಒಂದು ಶೂನ್ಯ ಭಾವ ಆವರಿಸಿಕೊಂಡಿತು. ನಾವು ಅಂಧಕಾರದಲ್ಲಿ ಮುಳುಗಿದ್ದು ಒಂದೆರಡು ವಿಷಯದಲ್ಲಿ ಅಲ್ಲ ಅನ್ನುವುದಂತೂ ಸ್ಪಷ್ಟವಾಯಿತು.

ಈ ಪುಸ್ತಕವನ್ನು ಓದಿದ ಪ್ರತಿಯೊಬ್ಬರಲ್ಲಿ ಕಾಡುವ ಭಾವ, ನಾವು ಶಾಲಾದಿನಗಳಲ್ಲಿ ಓದಿಕೊಂಡು ಇತಿಹಾಸವೆಲ್ಲ ಶುದ್ಧ ಸುಳ್ಳು. ನಮಗೆ ಅಸತ್ಯವನ್ನು ಬೋಧನೆ ಮಾಡಿದ್ದಾರೆ. ಛೇ ನಾವೆಷ್ಟು ಅಂಧಕಾರದಲ್ಲಿ ಈಗಲೂ ಮುಳುಗಿದ್ದೇವೆ ಎಂಬುದು.

ಧ್ರುವ ಸ್ತಂಭ, ಮೇರು ಸ್ತಂಭ, ವಿಷ್ಣು ಧ್ವಜ, ಯೂಪ ಸ್ತಂಭ, ಎನ್ನುವ ಅನೇಕ ಹೆಸರುಗಳಿಂದ ಕರೆಯಿಸಿ ಕೊಳ್ಳುವ, ಇದನ್ನು ಭಾರತೀಯರು, ಕ್ರಿ.ಪೂ.4-6 ಶತಮಾನದಲ್ಲಿ ಕಟ್ಟಿದ್ದರು ಎನ್ನುವ ನೂರಾರು ಐತಿಹ್ಯಗಳು ಗೋಚರಿಸುತ್ತಿದ್ದರೂ, ಗುಲಾಮಿ ಸಂತತಿಯ ಕುತುಬುದ್ದಿನ್ ಐಬಕ ಕಟ್ಟಿದ ಎಂದು ಇತಿಹಾಸ ಪುಟಗಳಲ್ಲಿ ಸೇರಿಸಿ ಈಗಲೂ ಅದನ್ನೇ ನಂಬುವ ಭೋದಿಸುವ ನಮ್ಮ ಜ್ಞಾನಕ್ಕೆ ಏನೇನ್ನಬೇಕೋ ತಿಳಿಯುತ್ತಿಲ್ಲ.

(ಸದ್ಯೋಜಾತ ಭಟ್ಟ)

ಕೇವಲ ನಾಲ್ಕು ವರ್ಷ ಆಡಳಿತ ಮಾಡಿದ ಗುಲಾಮನೊಬ್ಬ ಇಪ್ಪತ್ತೇಳು ದೇವಸ್ಥಾನಗಳನ್ನು ಒಡೆದು ಅಲ್ಲಿನ ಕಲ್ಲು, ಸ್ತಂಭಗಳನ್ನು ಉಪಯೋಗಿಸಿ ಮಸೀದಿ ಕಟ್ಟುತ್ತಾನೆ. ಆದರೆ ಉತ್ತರಾಭಿಮುಖ ದ್ವಾರದಿಂದ ಇದು ಪ್ರಾರ್ಥನೆಗೆ ಯೋಗ್ಯವಲ್ಲ ಎಂದು ಅವರೇ ಹೇಳಿಕೊಂಡರೂ, ಅದರ ವಾಸ್ತು ಹಿಂದೂ ದೇವಾಲಯವನ್ನು ಹೋಲುತ್ತಿದ್ದರೂ, ಸತ್ಯ ಈಚೆ ಬರುವುದೇ ಇಲ್ಲ.

ನಮ್ಮಂತವರಿಗೆ ಇದೊಂತರ ಅಸಹಾಯಕ ಪರಿಸ್ಥಿತಿ. ಆದರೆ ಓದಿ ಅರ್ಥ ಮಾಡಿಕೊಳ್ಳುವುದೂ ಸತ್ಯದ ಕಡೆ ನಡೆಯುವ ಒಂದು ಭಾಗವೇ.

ಈಗಿನ ನಮ್ಮ ಇತಿಹಾಸದ ಅಧ್ಯಯನಕ್ಕೂ ನಿಜವಾದ ಇತಿಹಾಸದ ಕಾಲಗಣನೆಯನ್ನು ತೆಗೆದುಕೊಂಡರೆ ಅಜಗಜಾಂತರ ವ್ಯತ್ಯಾಸ ಕಾಣುತ್ತದೆ. ಅದನ್ನು ಸ್ಪಷ್ಟವಾದ ಲೆಕ್ಕಾಚಾರದ ಮುಖಾಂತರ ಮಿಹಿರ ಕುಲಿಯಲ್ಲಿ ಲೇಖಕರು ತೋರಿಸಿಕೊಟ್ಟಿದ್ದಾರೆ.

ಸಾವಿರಾರು ವರ್ಷಗಳನ್ನು ಎಳೆದು ತಂದು ತನ್ನ ಮೂಗಿನ ನೇರದಂತೆ ಇತಿಹಾಸದ ತುಣುಕನ್ನು ಬರೆದ ಮೆಗಾಸ್ತಾನಿಸನ ಇತಿಹಾಸದ ಆಧಾರದಿಂದ ನಾವು ಅಧ್ಯಯನ ಆರಂಭಿಸುತ್ತೇವೆಯೇ ವಿನಹಃ ಮೂಲಕ್ಕೆ ಹೋಗುವುದಿಲ್ಲ. ಸಂಸ್ಕೃತ ಭಾಷೆಯ ವ್ಯಾಕರಣ ಕೊಟ್ಟ ಪತಂಜಲಿ, ವರರುಚಿ, ಪಾಣಿನಿಯ ಮೊದಲಾದವರೆಲ್ಲ ಇದ್ದುದು ಪೂರ್ವದಲ್ಲಿ, ಆದರೆ ಅದ್ಯಾಕೋ ಮಧ್ಯದಲ್ಲಿ ಇದ್ದಕ್ಕಿದ್ದಂತೆ ಸಂಸ್ಕೃತ ಕಣ್ಮರೆಯಾಗಿ ಪ್ರಾಕೃತ ಆಕ್ರಮಿಸಿದ್ದು ಅಂದರೆ ಗೋಜಲು ಗೋಜಲಿನ ಇತಿಹಾಸ ಅಂದಿನಿಂದಲೇ ಆರಂಭವಾಯಿತು ಎಂದು ಸ್ಪಷ್ಟವಾದ ಮಾಹಿತಿ ನೀಡುತ್ತದೆ ಈ ಪುಸ್ತಕ.

ದೆಹಲಿಯ ನಿರ್ಮಾಣದ ವಿಷಯದಲ್ಲಿ ಭಾಗವತದಿಂದಲೇ ಅದಕ್ಕೊಂದು ಸ್ಪಷ್ಟವಾದ ಕೊಂಡಿಯನ್ನು ತೋರಿಸಿದ್ದಾರೆ ಲೇಖಕರು. ಇದು ಉತ್ಪ್ರೇಕ್ಷೆಯಂತೂ ಖಂಡಿತ ಅಲ್ಲ. ನಾವು ಅರ್ಥಮಾಡಿಕೊಳ್ಳುವಲ್ಲಿ ಸೋತ ಪರಿಣಾಮವಷ್ಟೇ.

ಕಾಲಕಾಲಕ್ಕೆ ಇತಿಹಾಸವನ್ನು ಅಳಿಸುವ ಕೆಲಸ ನಿರ್ವಿಘ್ನವಾಗಿ ಸಾಗಿದೆ ಎನ್ನುವುದಂತೂ ಸ್ಪಷ್ಟವಾಗಿ ಗೋಚರಿಸುತ್ತದೆ. ಅದಕ್ಕೆ ತಕ್ಕಂತೆ ಸಾಕಷ್ಟು ಪುರಾವೆಗಳನ್ನು ಈ ಪುಸ್ತಕ ಒದಗಿಸುತ್ತದೆ.

ಉಜ್ಜಯನಿಯ ಪುರಾಣಕತೆಗಳಲ್ಲಿ ವಿಕ್ರಮಾದಿತ್ಯನ ಹೆಸರು ಕೇಳಿದ್ದು ಬಿಟ್ಟರೆ ಇತಿಹಾಸ ಪುಟಗಳಲ್ಲಿ ಕಂಡಿದ್ದು ಕಡಿಮೆಯೇ. ಶಾಲಿವಾಹನನನ್ನ ಶಾತವಾಹನ ಮಾಡಿದ್ದು ಇನ್ನೊಂದು ರೋಚಕ ಸತ್ಯ. “ಮಿಹಿರಕುಲಿ” ಯಲ್ಲಿ ಸಂಪೂರ್ಣವಾದ ವರಾಹಮಿಹಿರನ ವೃತ್ತಾಂತ ಇದೆ. ಜೊತೆ ಜೊತೆಗೆ ಭೋಜರಾಜ. ಸಮುದ್ರಗುಪ್ತ, ವಿಕ್ರಮಾದಿತ್ಯರ ಚರಿತ್ರೆ ಇದೆ. ಕಾಳಿದಾಸನ ಬದುಕು, ಕಾಲದ ಕುರುಹಿದೆ. ನಮಗಿನ್ನೂ ಚರಿತ್ರೆಯ ಅರಿವಿನ ಅವಶ್ಯಕತೆ ಬಾಕಿ ಇದೆ.

ಸಾಕಷ್ಟು ಸಂಶೋಧನೆಗಳು ಆಗಿಹೋದರೂ, ಆಗುತ್ತಿದ್ದರೂ, ನಾವೆಲ್ಲ ಮುಕ್ತ ಮನಸಿನಿಂದ ಒಪ್ಪಿಕೊಳ್ಳಲು ಹಿಂದೇಟು ಹಾಕುತ್ತಿರುವುದು ಇವತ್ತಿಗೂ ಸತ್ಯ. ಹಾಗೇ ಸತ್ಯದ ಮೇಲೆ ಬೆಳಕು ಚೆಲ್ಲುವುದೂ ಸುಲಭವಲ್ಲ. ಅದಕ್ಕೊಂದು ದೊಡ್ಡ ವಿರೋಧಿ ವರ್ಗವೇ ಇರುತ್ತದೆ.
ಚಲಂ ವಿತ್ತಂ ಚಲಂ ಚಿತ್ತಮ್ ಚಲೇ ಜೀವಿತ ಯವ್ವನೇ |
ಚಲಾಚಲಮಿದಂ ಸರ್ವಂ ಕೀರ್ತಿಯಸ್ಯ ಸ ಜೀವಿತಿ ||
ಎನ್ನುವ ಮಾತಿನಂತೆ ಈ ಕೃತಿ ಉಳಿಯುತ್ತದೆ, ಉಳಿಯಲಿ ಕೂಡ. ಶಾಲಿವಾಹನ ಮಣ್ಣಿನಿಂದ ಮಾಡಿದ ಗೊಂಬೆಗಳು ಮತ್ತೆ ಮತ್ತೆ ಮೇಲೆದ್ದು ಬರುತ್ತಿದ್ದವಂತೆ. ಹಾಗೇ ಸತ್ಯ ಸಕಲ ಮಾರ್ಗಗಳಿಂದ ಬರುತ್ತಿರಲಿ ಜೀವ ಪಡೆಯುತ್ತಿರಲಿ.

(ಕೃತಿ: ಮಿಹಿರಕುಲಿ, ಲೇಖಕರು : ಸದ್ಯೋಜಾತ ಭಟ್ಟ, ಪ್ರಕಾಶಕರು: ಸಮನ್ವಿತ ಪ್ರಕಾಶನ, ಬೆಲೆ -250/)