ಮಕ್ಕಳು ಈಗಲ್ಲದೆ ಮತ್ಯಾವಾಗ ತಂಟೆ ಮಾಡಬೇಕು? ಇನ್ನೆಂದು ಮನಸೋ ಇಚ್ಚೆ ತಿಂದು ಕುಡಿದು ಖುಷಿಪಡಬೇಕು? ಎಂದು ಅಪ್ಪನಿಗೆ ಎದುರಾಡುತ್ತಿದ್ದ ಅವಳಿಗೆ ನಮ್ಮ ಬಾಲ್ಯ ಅವಳ ಬಾಲ್ಯದ ಕಿಟಕಿಯಾಗಿತ್ತು. ಮಕ್ಕಳನ್ನು ಓದಿಸುವ, ಬೆಳೆಸುವ, ಜವಾಬ್ದಾರಿಯಲ್ಲಿ ಮುಳುಗಿಹೋದ ಆಕೆ ಬಿಡುವು ಮಾಡಿಕೊಂಡು ಹೊಲಿಯುತ್ತಿದ್ದ ಬಟ್ಟೆ, ಹಾಕುತ್ತಿದ್ದ ರಂಗೋಲಿ, ಕಸೂತಿ, ಓದುತ್ತಿದ್ದ ಪುಸ್ತಕಗಳು ದಿನಕಳೆದಂತೆ ಕಡಿಮೆಯಾಯಿತು. ಸ್ವಂತಕ್ಕೆ ಸಮಯ ಕೊಟ್ಟುಕೊಳ್ಳಲಾಗದ ಸಾದಾ ಗೃಹಿಣಿಯಾಗಿ ಹಲವು ಕಾಲ ಕಳೆದಳು. ಈಗ ಅರವತ್ತು ದಾಟಿದ ಮೇಲೆ ಮತ್ತೆ ಒಂದೊಂದೇ ಆಸಕ್ತಿಗಳನ್ನು ಗಳಿಸಿಕೊಳ್ಳುತ್ತಾ ಬಿಡುವಿಲ್ಲದ ದಿನಚರಿಯೊಂದನ್ನು ರೂಢಿಸಿಕೊಂಡಿದ್ದಾಳೆ.
 ಎಸ್. ನಾಗಶ್ರೀ ಅಜಯ್‌ ಬರೆಯುವ ಲೋಕ ಏಕಾಂತ ಅಂಕಣ

“ಇನ್ನೊಂದು ಸಲ ಜೇಡಿಮಣ್ಣು ಅನ್ಕೊಂಡು ಸಿಕ್ಕ ಹಿಕ್ಕೆಪಿಕ್ಕೆ ಎಲ್ಲಾ ತಂದು ಮನೆಯಲ್ಲಿ ತುಂಬಿದರೆ, ಮುಲಾಜಿಲ್ಲದೆ ನಿನ್ನ ಕಪ್ಪೆಚಿಪ್ಪು, ಕಾಗೆಬಂಗಾರ, ಬಾಟಲಿ ಮುಚ್ಚುಳದ ಹಡಪನೂ ಸೇರಿಸಿ ತಿಪ್ಪೆಗೆ ಸುರಿದು ಬರ್ತೀನಿ. ಸಂಜೆಯಿಂದ ರಾತ್ರಿವರೆಗೂ ಮಣ್ಣುಮರಳಲ್ಲಿ ಬಿದ್ದು ಒದ್ದಾಡೋದು…ಮನೆತುಂಬಾ ಕಸ ತಂದು ತಂದು ಗುಡ್ಡೆ ಹಾಕೋದು. ಯಾರಾದರೂ ನೆಂಟರು ಮನೆಗೆ ಬಂದರೆ, ಈಯಮ್ಮ ಮನೆ ಇಟ್ಟಿರೋ ಚೆಂದ ನೋಡು ಅಂತ ಆಡ್ಕೊಂಡು ನಗ್ತಾರೆ. ಬೆಳಿಗ್ಗಿಂದ ರಾತ್ರಿವರೆಗೂ ಗುಡಿಸು, ಸಾರಿಸು, ನಿಮ್ಮ ಬಟ್ಟೆ ಒಗಿ ಇಷ್ಟೇ ಕೆಲಸ ಮಾಡ್ಕೊಂಡು ಇರಬೇಕಾ ನಾನು? ಸ್ವಲ್ಪನಾದರೂ ಬುದ್ಧಿ ಕಲಿಯಬೇಕು ಮಕ್ಕಳು.” ಸುಮಾರು ಇದೇ ಸಾಹಿತ್ಯ ಬೇರೆ ಬೇರೆ ಸಂಗೀತ ಸಂಯೋಜನೆಗಳಲ್ಲಿ ನಮ್ಮ ಹಾಗೂ ನಮ್ಮ ಸ್ನೇಹಿತರ ಮನೆಗಳಲ್ಲಿ ಪ್ರತಿದಿನ ಪ್ರಸಾರವಾಗುತ್ತಿತ್ತು.

ಅಮ್ಮನ ಬೈಗುಳ, ಅಪ್ಪನ ಏಟನ್ನು ಗಂಭೀರವಾಗಿ ತೆಗೆದುಕೊಳ್ಳುವಷ್ಟು ವಿಚಾರವಂತ, ಸೂಕ್ಷ್ಮ ಮಕ್ಕಳಾಗಿರಲಿಲ್ಲ ನಾವು. ಮೈಸೂರಿನ ಅಲ್ಲೊಂದು ಇಲ್ಲೆರಡು ಮನೆಗಳಿದ್ದ ಏರಿಯಾದ ಕಪಿಸೈನ್ಯ ನಮ್ಮದಾಗಿತ್ತು. ಎಲ್ಲಾ ರಸ್ತೆಗಳಲ್ಲೂ ಒಂದಲ್ಲ ಒಂದು ಮನೆಕಟ್ಟುವ ಕಾಮಗಾರಿ ನಡೆಯುತ್ತಿತ್ತು. ಅಲ್ಲಿನ ಮರಳುಗುಡ್ಡೆಯೇ ನಮ್ಮ ಆಟದ ಮೈದಾನ. ಕಪ್ಪೆಚಿಪ್ಪು, ಶಂಖ ಸಂಗ್ರಹ, ಕಪ್ಪೆಗೂಡು ಕಟ್ಟೋದು, ಸುತ್ತಲಿನ ಮನೆಯವರು ಬೆಳೆಸಿದ ಗಿಡದ ಹೂವು, ಮೊಗ್ಗು, ಹೀಚು ಒಂದೂ ಬಿಡದೆ ಕಿತ್ತು ಗಿಡ ಬೋಳಿಸಿ ಬರಿದು ಮಾಡಿ ತಂದು ಕಪ್ಪೆಗೂಡನ್ನು ಸಿಂಗರಿಸುವುದು, ದೆವ್ವದ ಕಥೆಗಳನ್ನು ಗುಟ್ಟಾಗಿ ಶ್ರವಣ-ವಾಚನ-ಅಧ್ಯಯನ ಮಾಡುವುದು, ರಾತ್ರಿ ಹೆದರಿ ಹಾಸಿಗೆಯಲ್ಲಿ ಮಳೆ ತರಿಸುವುದು ಇವೇ ಮೊದಲಾದ ಕಾರ್ಯಚಟುವಟಿಕೆಗಳಲ್ಲಿ ವ್ಯಸ್ತರಾದ ನಮಗೆ ಅಮ್ಮನ ಬೈಗುಳ ಜೋಗುಳದ ಹಾಗೆ ಕೇಳಿಸಿರಬಹುದು. ಆದರೂ ಕೆಲವೊಮ್ಮೆ ಗ್ರಹಗತಿ ಕೆಟ್ಟಾಗ ಇದ್ದಕ್ಕಿದ್ದಂತೆ ನಮ್ಮ ಆಸ್ತಿಪಾಸ್ತಿಗೆ ಅಪಾರ ಹಾನಿ ಸಂಭವಿಸುತ್ತಿತ್ತು. ಬಿರುಬಿಸಿಲನ್ನೂ ಲೆಕ್ಕಿಸದೆ ಊರೆಲ್ಲಾ ಅಲೆದು ತಂದು ಬಚ್ಚಿಟ್ಟ ಕಾಗೆಬಂಗಾರ, ಮರಳುಗುಡ್ಡೆಯಲ್ಲಿ ಕೆದಕಿ ತಂದ ಕಪ್ಪೆಚಿಪ್ಪು, ಶಂಖ, ಕೆಂಪು ಮಣಿಬೀಜ, ಗೋಲಿಗಳು ಎಲ್ಲವನ್ನೂ ದೀಪಾವಳಿ, ಯುಗಾದಿ, ಸಂಕ್ರಾಂತಿ, ಶ್ರಾವಣ ಮಾಸದ ನೆಪದಲ್ಲಿ ತಿಪ್ಪೆಗೆಸೆದು ಬಂದ ದಿನ ಭೋರೆಂದು ಅತ್ತು ರಂಪ ಮಾಡಿದರೂ, ಆಯಾ ಹಬ್ಬದ ಗಮ್ಮತ್ತಿನ ಮುಂದೆ ಮಸುಕಾಗಿ ಮರೆತು ಹೋಗುತ್ತಿತ್ತು.

ಬಿಸಿಲು, ಮಳೆ ಲೆಕ್ಕಿಸದೆ, ಕತ್ತಲಾದರೂ ಮನೆ ಸೇರದೆ, ಅಪ್ಪಿತಪ್ಪಿ ಮನೆಗೆ ಬಂದಿದ್ದರೂ ಕರೆಂಟು ಹೋದ ಕೂಡಲೇ ದಬಕ್ಕೆಂದು ಪುಸ್ತಕ ಮುಚ್ಚಿ ಮೋಟುಗೋಡೆಯ ಮೇಲೆ ಕೂತು ಕಾಲಾಡಿಸುತ್ತಾ ಮೀಟಿಂಗು ಮಾಡಲು ನಮಗಿದ್ದ ಆಸಕ್ತಿ ಕಡಿಮೆಯದ್ದಲ್ಲ. ಆಯಾ ಕಾಲದ ಸೊಗಸನ್ನು ಸವಿಯಲು ಹಲವು ಮಾರ್ಗಗಳನ್ನು ಕಂಡುಕೊಂಡಿದ್ದೆವು. ಆಟಗಳು ಕೂಡ ಋತುಧರ್ಮಕ್ಕೆ ಅನುಸಾರ ಕುಂಟೆಬಿಲ್ಲೆ, ಬಿಸ್ಕೆಟ್ ಆಟ, ಶಟಲ್‌ಕಾಕ್, ಚೌಕಾಬಾರ, ಸೈಕಲ್ ರೇಸ್, ಕಣ್ಣಾಮುಚ್ಚಾಲೆ ಹೀಗೆ ಬದಲಾಗುತ್ತಿತ್ತು.

ಬಾಲ್ಯದ ನೆನಪುಗಳ ತೆಕ್ಕೆಗೆ ಬಿದ್ದರೆ ಸಂತೋಷದ್ದೇ ಸಿಂಹಪಾಲು. ಗೆಳೆಯರಿಲ್ಲ, ಮೈದಾನವಿಲ್ಲ, ಅಪ್ಪ ಅಮ್ಮನ ಬೆಚ್ಚನೆ ಮಡಿಲಿಲ್ಲ, ಆಹಾರದಲ್ಲಿ ಸತ್ವವಿಲ್ಲ, ಜೀವನಶೈಲಿ ಸರಿಯಾಗಿಲ್ಲ, ಹೆಣ್ಣುಮಕ್ಕಳನ್ನು ಸ್ವತಂತ್ರವಾಗಿ ಆಡಲು ಬಿಡಲು ಧೈರ್ಯವಿಲ್ಲ ಎಂಬ ‘ಇಲ್ಲ’ಗಳ ಕಾಲ ಅದಲ್ಲ. ಇಂದಿಗೆ ಹೋಲಿಸಿದರೆ ನಮಗೆ ಸಿಕ್ಕ ಆಸರೆ, ಒತ್ತಾಸೆಗಳು ಅಮೂಲ್ಯವೆನಿಸುವುದು. ಇಂದಿನ ಪೋಷಕರ ಹೋರಾಟಗಳೇ ಬೇರೆ. ಅಂದಿನ ನಮ್ಮ ತಂದೆ-ತಾಯಿಗಳ ಸವಾಲುಗಳೇ ಭಿನ್ನ. ಹೆಚ್ಚಿನವರಿಗೆ ಸ್ವಂತದ್ದೊಂದು ಮನೆ, ಮಕ್ಕಳ ವಿದ್ಯಾಭ್ಯಾಸ, ತಂದೆತಾಯಿಗಳ ಜವಾಬ್ದಾರಿಯನ್ನು ಆರಕ್ಕೇರದ ಮೂರಕ್ಕಿಳಿಯದ ಸಂಪಾದನೆಯೊಳಗೆ ಪೂರೈಸುವುದು ಮುಖ್ಯವಿತ್ತು. ಮದುವೆಯ ಕಳೆ ಮಾಸುವುದರೊಳಗೆ ಬಸಿರು, ಬಾಣಂತನದ ಚಕ್ರ ಪ್ರಾರಂಭವಾಗಿ ಗಂಡ-ಮನೆ-ಮಕ್ಕಳನ್ನು ನಿರ್ವಹಿಸುವ ಒತ್ತಡದಲ್ಲಿ ತಮ್ಮ ಆಸೆ, ಆಕಾಂಕ್ಷೆ, ಪ್ರತಿಭೆಯನ್ನು ಮರೆತುಹೋದ ತಲೆಮಾರು ಅವರದ್ದು. ಎರಡೇ ಜೊತೆ ಬಟ್ಟೆ, ಜೇಡಿಮಣ್ಣಿನಿಂದ, ಕಾರ್ಕ್ ಕಾಯಿಂದ ಮಾಡುತ್ತಿದ್ದ ಆಟಿಕೆ, ಹಸು ಎಮ್ಮೆ ಕಟ್ಟಿದ ಮನೆಯ ಹಾಲು-ಮೊಸರು ಸಮೃದ್ಧಿ, ಬೆಂಗಳೂರಿನ ಕೆಂಪಾಂಬುಧಿ, ಗಂಧದ ಕೋಟಿ ಕೆರೆ, ದಿನಂಪ್ರತಿ ಅರವತ್ತು ಜನರ ಅಡುಗೆಗಾಗಿ ಸದಾ ಉರಿಯುತ್ತಿದ್ದ ಸೌದೆ ಒಲೆ, ತಾತನ ವಾತ್ಸಲ್ಯ, ಬಾಣಂತಿಗೆಂದೇ ಮೀಸಲಿದ್ದ ಕೋಣೆ, ಗೊಂಬೆಗಳ ಬದಲು ಸದಾ ತೊಡೆಯ ಮೇಲೆ ನಲಿಯುತ್ತಿದ್ದ ಹಸುಗೂಸುಗಳು, ಸಂಗೀತ-ಹೊಲಿಗೆ ಕಲಿಸುತ್ತಿದ್ದ ಚಿಕ್ಕಮ್ಮ, ಅತ್ತೆಯರು… ಹೀಗೆ ಮನಸ್ಸು ಎಳೆದಾಗ ಅಮ್ಮ ಅವಳ ಬಾಲ್ಯವನ್ನು ನಮ್ಮ ಮುಂದೆ ಹರವುತ್ತಿದ್ದಳು.

ಆದರೂ ಕೆಲವೊಮ್ಮೆ ಗ್ರಹಗತಿ ಕೆಟ್ಟಾಗ ಇದ್ದಕ್ಕಿದ್ದಂತೆ ನಮ್ಮ ಆಸ್ತಿಪಾಸ್ತಿಗೆ ಅಪಾರ ಹಾನಿ ಸಂಭವಿಸುತ್ತಿತ್ತು. ಬಿರುಬಿಸಿಲನ್ನೂ ಲೆಕ್ಕಿಸದೆ ಊರೆಲ್ಲಾ ಅಲೆದು ತಂದು ಬಚ್ಚಿಟ್ಟ ಕಾಗೆಬಂಗಾರ, ಮರಳುಗುಡ್ಡೆಯಲ್ಲಿ ಕೆದಕಿ ತಂದ ಕಪ್ಪೆಚಿಪ್ಪು, ಶಂಖ, ಕೆಂಪು ಮಣಿಬೀಜ, ಗೋಲಿಗಳು ಎಲ್ಲವನ್ನೂ ದೀಪಾವಳಿ, ಯುಗಾದಿ, ಸಂಕ್ರಾಂತಿ, ಶ್ರಾವಣ ಮಾಸದ ನೆಪದಲ್ಲಿ ತಿಪ್ಪೆಗೆಸೆದು ಬಂದ ದಿನ ಭೋರೆಂದು ಅತ್ತು ರಂಪ ಮಾಡಿದರೂ, ಆಯಾ ಹಬ್ಬದ ಗಮ್ಮತ್ತಿನ ಮುಂದೆ ಮಸುಕಾಗಿ ಮರೆತು ಹೋಗುತ್ತಿತ್ತು.

ಮಕ್ಕಳು ಈಗಲ್ಲದೆ ಮತ್ಯಾವಾಗ ತಂಟೆ ಮಾಡಬೇಕು? ಇನ್ನೆಂದು ಮನಸೋ ಇಚ್ಚೆ ತಿಂದು ಕುಡಿದು ಖುಷಿಪಡಬೇಕು? ಎಂದು ಅಪ್ಪನಿಗೆ ಎದುರಾಡುತ್ತಿದ್ದ ಅವಳಿಗೆ ನಮ್ಮ ಬಾಲ್ಯ ಅವಳ ಬಾಲ್ಯದ ಕಿಟಕಿಯಾಗಿತ್ತು. ಮಕ್ಕಳನ್ನು ಓದಿಸುವ, ಬೆಳೆಸುವ, ಜವಾಬ್ದಾರಿಯಲ್ಲಿ ಮುಳುಗಿಹೋದ ಆಕೆ ಬಿಡುವು ಮಾಡಿಕೊಂಡು ಹೊಲಿಯುತ್ತಿದ್ದ ಬಟ್ಟೆ, ಹಾಕುತ್ತಿದ್ದ ರಂಗೋಲಿ, ಕಸೂತಿ, ಓದುತ್ತಿದ್ದ ಪುಸ್ತಕಗಳು ದಿನಕಳೆದಂತೆ ಕಡಿಮೆಯಾಯಿತು. ಸ್ವಂತಕ್ಕೆ ಸಮಯ ಕೊಟ್ಟುಕೊಳ್ಳಲಾಗದ ಸಾದಾ ಗೃಹಿಣಿಯಾಗಿ ಹಲವು ಕಾಲ ಕಳೆದಳು. ಈಗ ಅರವತ್ತು ದಾಟಿದ ಮೇಲೆ ಮತ್ತೆ ಒಂದೊಂದೇ ಆಸಕ್ತಿಗಳನ್ನು ಗಳಿಸಿಕೊಳ್ಳುತ್ತಾ ಮನೆಯ ಮುಂದೆ ಹೂಗಿಡಗಳ ರಾಶಿ, ಬೀದಿನಾಯಿಗಳ ದೇಖರೇಖಿ, ಪ್ರವಾಸ, ಹೊಸರುಚಿ, ಅಧ್ಯಾತ್ಮ, ಧ್ಯಾನ ಎಂದು ಬಿಡುವಿಲ್ಲದ ದಿನಚರಿಯೊಂದನ್ನು ರೂಢಿಸಿಕೊಂಡಿದ್ದಾಳೆ.

ಆದರೆ ಅಮ್ಮ ಅಂದಿದ್ದ ಜಾಗದಲ್ಲಿ ಇಂದು ನಮ್ಮ ತಲೆಮಾರಿದೆ. ಓದು, ಉದ್ಯೋಗ, ಮದುವೆ, ಮಕ್ಕಳು ವಿಷಯವಾಗಿ ಯಾರೂ ನಮ್ಮ ಬಾಲಕ್ಕೆ ಬೆಂಕಿ ಹಚ್ಚಿ ಓಡಿಸದಿದ್ದರೂ, ಮುಂಚಿಗಿಂತ ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವ ಅವಕಾಶಗಳು ಹೆಚ್ಚಿದ್ದೂ ನಮ್ಮದಷ್ಟೇ ಆದ ಸವಾಲುಗಳೊಂದಿಗೆ ಸೆಣೆಸುತ್ತಿರುವುದು ಸುಳ್ಳಲ್ಲ. ಇತ್ತ ಉದ್ಯೋಗವನ್ನೂ ಬಿಡಲಾಗದೆ, ಅತ್ತ ಪೂರ್ತಿ ಸಮಯ ಮನೆಗೂ ಮೀಸಲಿಡಲಾಗದ ಪರದಾಟ. ನಿಮ್ಮ ಟೂತ್‌ಪೇಸ್ಟಿನಲ್ಲಿ ಉಪ್ಪಿದೆಯೆ? ಮೆಣಸಿದೆಯೇ? ನೀವು ತಿನ್ನುವ ಆಹಾರ ವಿಷಮುಕ್ತವಾಗಿದೆಯೇ? ನಿಮ್ಮ ಸಂಬಂಧ ಮೊದಲಿನಂತಿಲ್ಲವೇ? ನಿಮ್ಮ ಮಕ್ಕಳು ಡ್ರಗ್ ಅಡಿಕ್ಟ್ ಆಗಿರಬಹುದು ಹುಷಾರ್… ಅಡುಗೆಎಣ್ಣೆಯಲ್ಲಿದೆ ಕ್ಯಾನ್ಸರ್ ತರುವ ವಿಷಕಾರಕಗಳು. ಸಾವಯವ ಅಕ್ಕಿ ತಿನ್ನಿ. ಆರೋಗ್ಯದಿಂದಿರಿ. ನೋನಿ ಕುಡಿಯಿರಿ. ಹೀಗೆ ಎಲ್ಲಿ ಹೋದರೂ ಅದು ಮಾಡಿ. ಇದು ಬೇಡಿ ಎನ್ನುವ ಮಾಹಿತಿ, ಪ್ರಶ್ನೆಗಳು ಕಾಡಿಸುತ್ತವೆ.

ಈ ಮಧ್ಯೆ ಮಕ್ಕಳನ್ನು ಬೆಳೆಸುತ್ತಿರುವ ರೀತಿ ಸರಿಯಿಲ್ಲ. ಗಂಡನಿಗೆ ಕೈತುಂಬಾ ಸಂಬಳವಿದ್ದೂ ಇವಳೇಕೆ ಡ್ಯಾನ್ಸ್ ಕ್ಲಾಸ್ ಮಾಡಬೇಕು? ಮಕ್ಕಳಿಗೆ ತಲೆಗೆ ನೀರು ಹಾಕಲು ಆಳು ಬರ್ತಾಳೆ ನೋಡು… ಪ್ರತಿದಿನದ ಅಡುಗೆಗೂ ಅಡುಗೆಯವರನ್ನಿಟ್ಟಿದಾಳೆ ಸೊಂಬೇರಿ.. ಮಕ್ಕಳನ್ನು ಅಪ್ಪ ಅಮ್ಮನಿಗೆ ಗಂಟುಹಾಕಿ ಇವರಿಬ್ಬರೆ ಊರು ಸುತ್ತೋಕೆ ಹೋಗಿದ್ರಂತೆ. ಸೋಷಿಯಲ್ ಮೀಡಿಯಾದಲ್ಲಿ ಪ್ರತಿಹಬ್ಬಕ್ಕೂ ಅವಳ ಫೋಟೋ ತೆಗೆದು ಹಾಕುತ್ತಾಳೆ ವಯ್ಯಾರಗಿತ್ತಿ. ಮುವ್ವತ್ತಾಯ್ತು ಇನ್ನೂ ಹುಡುಗುಬುದ್ಧಿ… ಈ ತರಹದ ಕುಟುಕು ಮಾತುಗಳು ಎಲ್ಲೆಲ್ಲಿಂದಲೋ ಅಪ್ಪಳಿಸುತ್ತವೆ. ಕಾಲ ಕೆಟ್ಟೋಯ್ತು ಎಂಬ ಮಾತು ಶಾಶ್ವತ. ಆದರೆ ಪ್ರತಿಯೊಬ್ಬರೂ ಅವರದ್ದೇ ರೀತಿಯಲ್ಲಿ ಮನೆಯನ್ನು, ಮನಸ್ಸನ್ನು ಚೆಂದವಾಗಿಟ್ಟುಕೊಳ್ಳಲು ಹೋರಾಡುತ್ತಿರುತ್ತಾರೆ ಎನ್ನುವುದನ್ನು ಕುಟುಕುವೀರರು ಅರಿಯುವುದೇ ಇಲ್ಲ. ಮಕ್ಕಳ ಒಳಿತು, ಸಾರ್ಥಕ ದಾಂಪತ್ಯ, ಉದ್ಯೋಗ, ಹಣ, ಹೆಸರು, ಆಸ್ತಿಯನ್ನು ಪ್ರಾಮಾಣಿಕವಾಗಿ ಬಯಸುವಾಗ ಈ ಅಡ್ಡಮಾತುಗಳನ್ನು ನಿರ್ಲಕ್ಷಿಸುವುದೇ ದೊಡ್ಡ ಕೆಲಸವಾಗುತ್ತದೆ. ಎಲ್ಲರ ಬದುಕನ್ನೂ ತೂಗುತಕ್ಕಡಿಯಲ್ಲಿಟ್ಟು ಇವರಿಷ್ಟೇ ಎಂದು ಹಣೆಪಟ್ಟಿ ಹಚ್ಚುವುದೆಷ್ಟರ ಮಾತು? ಆದರೆ ಅರ್ಥ ಮಾಡಿಕೊಳ್ಳಲು, ಅಂತಃಕರಣ ತೋರಲು, ಕಾಲದೊಂದಿಗೆ ಹೆಜ್ಜೆ ಹಾಕುವುದು ಅವಶ್ಯ.

ಈ ದೀಪಾವಳಿಯಂದು ಸಣ್ಣಮಾತು, ಕೊಂಕುಬುದ್ಧಿಯನ್ನು ಸುಟ್ಟು, ಶುದ್ಧ ಅಂತಃಕರಣದ ಹಣತೆ ಬೆಳಗೋಣ. ಅಂದಿನ ಕಾಲವನ್ನೂ ಇಂದಿನ ಕಾಲವನ್ನೂ ಹೋಲಿಸಿ ಹಲುಬುವುದನ್ನು ಬಿಟ್ಟು, ಇಂದಿನ ಸಂಭ್ರಮವನ್ನು ಮನದುಂಬಿಕೊಳ್ಳೋಣ. ಬೇರೆಯವರ ಮಾತು ಬಿಡಿ. ನಾವಾದರೂ ಒಳ್ಳೆಯ ಮಾತು, ಪ್ರೀತಿ, ಖುಷಿಯನ್ನು ಹಂಚುವ. ನಮ್ಮ ಸಣ್ಣ ಸಣ್ಣ ಒಳ್ಳೆಯ ಕೆಲಸಗಳಿಗೂ ಕಾಲವನ್ನು ಪ್ರಭಾವಿಸುವ ಶಕ್ತಿಯಿದೆ ಎನ್ನುವ ನಂಬಿಕೆ ಬಲವಾಗಲಿ. ಬದುಕು ಬೆಳಕಾಗಲಿ.